ವಿಷಯದ ವಿವರಗಳಿಗೆ ದಾಟಿರಿ

ಜನವರಿ 6, 2015

2

ಪ್ರತೀ ಬಾರಿಯೂ ಹಿಂದೂ ಧರ್ಮವೇ ವಿಮರ್ಷೆಗೊಳಪಡಬೇಕೇ?

‍ನಿಲುಮೆ ಮೂಲಕ

– ಲಕ್ಷ್ಮೀಶ ಜೆ.ಹೆಗಡೆ

Ganeshaಪೇಷಾವರದಲ್ಲಿ ಇಸ್ಲಾಮಿಕ್ ಮೂಲಭೂತವಾದಿ ಭಯೋತ್ಪಾದಕರು ಶಾಲೆಯ ಮೇಲೆ ದಾಳಿ ನಡೆಸಿ ಅಮಾಯಕ ಮಕ್ಕಳ ಮಾರಣ ಹೋಮ ನಡೆಸಿದಾಗ ನಮ್ಮಲ್ಲಿನ ಕೆಲವು ವಿಚಾರವಾದಿಗಳಿಗೆ ಅನ್ನಿಸಿದ್ದು ಧರ್ಮಗ್ರಂಥಗಳ   ನಿಷ್ಕರ್ಷೆಯಾಗಬೇಕೆಂದು.ಅದರಲ್ಲೂ ವಿಶೇಷವಾಗಿ ‘ಹಿಂಸೆಗೆ ಪ್ರಚೋದನೆ’ ಕೊಡುವ ಭಗವದ್ಗೀತೆಯ ವಿಮರ್ಷೆಯಂತೂ ಆಗಲೇಬೇಕು.ಆಗ ಮಾತ್ರ ಜಗತ್ತು ಶಾಂತಿಯ ದಿನಗಳನ್ನು ನಿರೀಕ್ಷಿಸಬಹುದು.ಜಗತ್ತಿನ ಶಾಂತಿಗೆ ಭಂಗ ತರಲು ಪ್ರಮುಖ ಕಾರಣವಾಗಿರುವುದು ಇಸ್ಲಾಮಿಕ್ ಭಯೋತ್ಪಾದನೆ ಎಂಬುದು ಎಲ್ಲರಿಗೂ ಗೊತ್ತಿದ್ದರೂ ಪ್ರಾಮಾಣಿಕವಾಗಿ ವಿಮರ್ಷೆಗೊಳಪಡಬೇಕಾಗಿರುವುದು ಭಗವದ್ಗೀತೆಯಂತೆ.ಅದೇ ಸಮಯದಲ್ಲಿ ಭಗವದ್ಗೀತೆಯನ್ನು ರಾಷ್ಟ್ರೀಯ ಗ್ರಂಥವನ್ನಾಗಿಸುವ ಕುರಿತೂ ಚರ್ಚೆ ನಡೆಯುತ್ತಿರುವುದರಿಂದ ಅವರ ಮಾತುಗಳು ಸಾಂಧರ್ಬಿಕವೋ, ಕಾಕತಾಳೀಯವೋ ಎಂಬುದನ್ನು ಅವರುಗಳೇ ಹೇಳಬೇಕು.

ಭಗವದ್ಗೀತೆಯನ್ನು ರಾಷ್ಟ್ರೀಯ ಗ್ರಂಥವನ್ನಾಗಿ ಘೋಷಿಸಕೂಡದು ಎಂದಾದರೆ ಬೇರೆ ಯಾವ ಗ್ರಂಥವಾಗಬೇಕೆಂದು ಕೇಳಿದರೆ ನಮಗೆ ನಮ್ಮ ಸಂವಿಧಾನವೇ ಸಾಕು ಎನ್ನುತ್ತಾರೆ.ಸಂವಿಧಾನ ಎಂದಿಗೂ ಧಾರ್ಮಿಕ ಗ್ರಂಥವಾಗಲಾರದು. ಅದು ಎಲ್ಲ ಧರ್ಮಗಳನ್ನೂ ಮೀರಿದ್ದು.ಅದನ್ನು ಎಲ್ಲರೂ ಗೌರವಿಸಲೇಬೇಕು.ಜಗತ್ತಿನ ಇತರ ಅನೇಕ ರಾಷ್ಟ್ರಗಳೂ ತಮ್ಮದೇ ಆದ ಸಂವಿಧಾನವನ್ನು ಹೊಂದಿವೆ ಮತ್ತು ಅದನ್ನು ಗೌರವಿಸುತ್ತವೆ ಕೂಡಾ.ಆದರೆ ಆ ಇತರ ರಾಷ್ಟ್ರಗಳು ತಮ್ಮದೇ ಆದ ಧಾರ್ಮಿಕ ಮೌಲ್ಯ,ಧರ್ಮಗ್ರಂಥಗಳನ್ನು ಘೋಷಿಸಿ,ಪೋಷಿಸುತ್ತಿರುವಾಗ ಜಗತ್ತಿನ ಅತೀ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರವಾದ ಭಾರತಕ್ಕೆ ಅದರದ್ದೇ ಆದ ಧಾರ್ಮಿಕ ಮೌಲ್ಯ,ರಾಷ್ಟ್ರೀಯ ಗ್ರಂಥ ಇರಬೇಡವೇ?ಅದು ಈ ದೇಶದ ಬಹುಸಂಖ್ಯಾತ ಹಿಂದೂಗಳ ಭಗವದ್ಗೀತೆಯಾದರೆ ಇತರ ಧರ್ಮಗಳ ಅಸ್ತಿತ್ವಕ್ಕೇನಾದರೂ ಧಕ್ಕೆ ಬರುತ್ತದೆಯೇ?ರಾಷ್ಟ್ರೀಯ ಗ್ರಂಥವಾಗಿ ಘೋಷಣೆಯಾದ ಕೂಡಲೇ ಕಡ್ಡಾಯವಾಗಿ ಎಲ್ಲರೂ ಭಗವದ್ಗೀತೆಯನ್ನು ಪಠಣ ಮಾಡಬೇಕು ಎಂಬ ಕಾನೂನನ್ನು ಭಾರತದಂಥ ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ಜಾರಿಗೆ ತರಲು ಸಾಧ್ಯವೇ?ಇದನ್ನು ಅರ್ಥಮಾಡಿಕೊಳ್ಳದ ಕೆಲವರು ಭಗವದ್ಗೀತೆ,ಹಿಂದೂ ಧರ್ಮ,ಸನಾತನ ಧರ್ಮ ವಿಮರ್ಷೆಗೊಳಗಾಗಬೇಕೆಂದು ಕೂಗುತ್ತಿದ್ದಾರೆ.

‘ಘರ್ ವಾಪಸಿ’ ಕಾರ್ಯಕ್ರಮದ ಬಗ್ಗೆ ಸಂಸತ್ತಿನಲ್ಲೂ ಜೋರು ಚರ್ಚೆ ನಡೆಯಿತು.ಮತಾಂತರ ನಿಷೇಧ ಕಾನೂನು ಜಾರಿಯಾಗಬೇಕೆಂದು ಒತ್ತಾಯಿಸಿದಾಗ ಜೋರು ಗದ್ದಲವೆಬ್ಬಿಸಿ ವಿರೋಧಿಸಿದವರೇ ಇಂದು ಸಂಸತ್ತಿನಲ್ಲಿ ಕೆಲವೇ ಸಂಖ್ಯೆಯಲ್ಲಿದ್ದರೂ ‘ಘರ್ ವಾಪಸಿ’ ವಿರುದ್ಧ ಕೂಗಾಡುತ್ತಿದ್ದಾರೆ.ಸಂಸತ್ ನ ಹೊರಗೂ ಬಹಳ ಜೋರಾಗಿಯೇ ಮರುಮತಾಂತರದ ವಿರುದ್ಧ ಕೂಗುಗಳು ಕೇಳಿ ಬಂದವು.ರೇಷನ್ ಕಾರ್ಡ್,ಹಿಡಿ ಅಕ್ಕಿಯ ಆಮಿಷವೊಡ್ಡಿ ಹಿಂದೂ ಧರ್ಮಕ್ಕೆ ಬಲವಂತದಿಂದ ಮತಾಂತರ ಮಾಡಿದರೆಂದು ಹಲವರು ಅವಲತ್ತುಕೊಳ್ಳುತ್ತಿದ್ದಾರೆ.ಹಾಗೆ ಬಲವಂತದಿಂದ ಮತಾಂತರಿಸಿ ತನ್ನ ಅನುಯಾಯಿಗಳ ಸಂಖ್ಯೆಯನ್ನು ಹೆಚ್ಚಿಸಿಕೊಳ್ಳಬೇಕಾದ ದುಸ್ಥಿತಿ,ಅನಿವಾರ್ಯತೆ ಹಿಂದೂ ಧರ್ಮಕ್ಕೆ ಸೃಷ್ಟಿಯಾಯಿತೇ ಎಂದು ವ್ಯಂಗ್ಯದಿಂದ ಕೇಳುತ್ತಿದ್ದಾರೆ.ಹಿಂದೂ ಧರ್ಮ ತನ್ನ ಪ್ರಸ್ತುತ ಸ್ಥಿತಿಗತಿಯ ಕುರಿತು ಆತ್ಮಾವಲೋಕನ ಮಾಡಿಕೊಳ್ಳುವುದೊಳಿತು ಎಂದು ಸಲಹೆ ನೀಡುತ್ತಿದ್ದಾರೆ.ಮುಸ್ಲಿಮರಾಗಿದ್ದವರು ತಮ್ಮ ಮಾತೃಧರ್ಮವಾದ ಹಿಂದೂಧರ್ಮಕ್ಕೆ ‘ಘರ್ ವಾಪಸಿ’ ಕಾರ್ಯಕ್ರಮದ ಮೂಲಕ ಮರಳಿ ಬಂದರೆಂದು ಮಾಧ್ಯಮಗಳಲ್ಲಿ ವರದಿಯಾಗಿದೆ.ನೆನಪಿರಲಿ ‘ಘರ್ ವಾಪಸಿ’ ಕಾರ್ಯಕ್ರಮದ ವಿರುದ್ಧ ಮುಸ್ಲಿಂ ಸಂಘಟನೆಗಳಾಗಲೀ,ಇಸ್ಲಾಮಿಕ್ ಮೂಲಭೂತವಾದಿಗಳಾಗಲೀ ಅಷ್ಟು ಜೋರಾಗಿ ಪ್ರತಿಭಟಿಸಿಲ್ಲ.ಗಲಾಟೆ ಮಾಡುತ್ತಿರುವವರು ಹಿಂದೂಧರ್ಮವನ್ನು ವಿಮರ್ಷೆಗೊಳಪಡಿಸಬೇಕೆನ್ನುತ್ತಿರುವ ಹಿಂದೂಗಳು.

ಹಾಗಾದರೆ ನೂರಾರು ವರ್ಷಗಳಿಂದ ಕೋಟ್ಯಂತರ ಹಿಂದೂಗಳು ಬೇರೆ ಧರ್ಮಕ್ಕೆ ಮತಾಂತರಗೊಳ್ಳುತ್ತಲೇ ಇದ್ದಾರಲ್ಲ ಎಂದು ಕೇಳಿದರೆ ‘ಅಸ್ಪೃಶ್ಯತೆ’ ‘ಜಾತಿ ಪದ್ಧತಿ’ ಎಂಬ ಹಿಂದೂ ಧರ್ಮದ ಕಳಂಕದಿಂದ ಬೇಸತ್ತು ಅವರು ಬೇರೆ ಧರ್ಮಗಳಿಗೆ ಮತಾಂತರಗೊಂಡರು.ಕೆಲವರು ಆಮಿಷಗಳಿಗೆ ಬಲಿಯಾಗಿ ಮತಾಂತರವಾಗಿರಲೂಬಹುದು.ಆದರೆ ಜಾತಿಪದ್ಧತಿ,ಅಸ್ಪೃಶ್ಯತೆಗಳು ಹಿಂದೂಧರ್ಮದ ಹಲವರ ಅಸ್ತಿತ್ವಕ್ಕೆ ಧಕ್ಕೆ ತಂದಿದ್ದರಿಂದ ಒಳ್ಳೆಯ ‘ಸಾಮಾಜಿಕ ಸ್ಥಾನಮಾನ’ ಪಡೆಯಲು ಅವರು ಬೇರೆ ಧರ್ಮಕ್ಕೆ ಮತಾಂತರಗೊಂಡರು.ಹಾಗಾಗಿ ಅಸ್ಪೃಶ್ಯತೆ,ಜಾತಿ ಪದ್ಧತಿಯ ಕುರಿತು ಹಿಂದೂಧರ್ಮದ ಅಧ್ವರ್ಯುಗಳು ಚಿಂತಿಸಿ ಹಿಂದೂಧರ್ಮವನ್ನು ವಿಮರ್ಷೆಗೊಳಪಡಿಸಬೇಕು ಎಂದು ‘ಘರ್ ವಾಪಸಿ’ ವಿರುದ್ಧ ಗಲಾಟೆ ಮಾಡುತ್ತಿರುವ ವಿಚಾರವಾದಿಗಳು ವಾದಿಸುತ್ತಿದ್ದಾರೆ.ಹಿಂದೂಗಳು ಬೇರೆ ಧರ್ಮಕ್ಕೆ ಮತಾಂತರವಾದರೂ ಹಿಂದೂ ಧರ್ಮವೇ ಚಿಂತನೆಗೊಳಪಡಬೇಕಂತೆ.ಬೇರೆ ಧರ್ಮದವರು ಹಿಂದೂವಾಗಿ ಮತಾಂತರಗೊಂಡರೂ ಹಿಂದೂ ಧರ್ಮವೇ ವಿಮರ್ಷೆಗೊಳಪಡಬೇಕಂತೆ!ಇದು ಯಾವ ಥರದ ವಾದವೋ

ಈ ದೇಶದ,ಜಗತ್ತಿನ ಹಲವು ಬರಹಗಾರರಿಗೆ,ಸಾಹಿತಿಗಳಿಗೆ,ಚಲನಚಿತ್ರ ನಿರ್ದೇಶಕರಿಗೆ,ವಿಚಾರವಾದಿಗಳಿಗೆ,ಪವಾಡ ಬಯಲು ತಜ್ಞರಿಗೆ,ಪ್ರಸಿದ್ಧ ಇತಿಹಾಸ ತಜ್ಞರಿಗೆ,ಭಾಷಣಕಾರರಿಗೆ ಮತ್ತು ದಿನನಿತ್ಯ ಹತ್ತು ಹಲವು ಉದಾಹರಣೆ ಕೊಡುವವರಿಗೂ ಹಿಂದೂಧರ್ಮ ಅದರ ಸಂಸ್ಕೃತಿ,ಆಚಾರ ವಿಚಾರಗಳು ಸುಲಭದ ವಸ್ತುವಾಗಿ ಹಲವು ವರ್ಷಗಳಿಂದ ಲಭ್ಯವಾಗುತ್ತಿದೆ.ಇತ್ತೀಚೆಗೆ ಬಿಡುಗಡೆಯಾದ ‘ಪಿಕೆ’ ಚಿತ್ರವೂ ಇದಕ್ಕೆ ಹೊರತಲ್ಲ.ಎಲ್ಲ ಕಾಲದಲ್ಲಿಯೂ ಅವರು ಹೇಳುವುದು ಒಂದನ್ನೇ,ಹಿಂದೂ ಧರ್ಮದಲ್ಲಿ ಹೇಳಿರುವುದನ್ನು ಕುರುಡಾಗಿ ನಂಬಬಾರದು.ವಿಮರ್ಷೆಗೊಳಪಡಿಸಬೇಕು.ಬಹುಶ: ಇದು ಹಿಂದೂ ಧರ್ಮದ ಹಿರಿಮೆಯೂ ಇರಬಹುದೇನೋ.ತನ್ನ ಅಗಾಧ ಮತ್ತು ವಿಶಾಲವಾದ ವಿಚಾರಗಳು,ಪದ್ಧತಿಗಳಿಂದಾಗಿ ಅದು ಒಬ್ಬಬ್ಬರಿಗೆ ಒಂದು ರೀತಿ ಕಂಡಿತು.ಆ ಕಾರಣದಿಂದಲೇ ರಾಮಾಯಣ ಹಲವರಿಗೆ ಹಲವು ರೀತಿಯಲ್ಲಿ ಕಂಡು ಬೇರೆ ಬೇರೆ ರಾಮಾಯಣಗಳು ಹಲವು ಭಾಷೆಗಳಲ್ಲಿ ಸೃಷ್ಟಿಯಾಗಿ ಸಾಹಿತ್ಯ ಲೋಕಕ್ಕೆ ಬಹುದೊಡ್ಡ ಕೊಡುಗೆ ನೀಡಿದವು.ಹಿಂದೂ ಧರ್ಮವು ವಿಮರ್ಷೆಗೊಳಪಟ್ಟಷ್ಟು ಜಗತ್ತಿನ ಬೇರೆ ಧರ್ಮಗಳು ಅಷ್ಟಾಗಿ ವಿಮರ್ಷೆಗೊಳಗಾಗಲಿಲ್ಲ.

ಸ್ವಾಮಿ ವಿವೇಕಾನಂದರ ಮಾತಿನಂತೆ ಯಾವ ರಾಷ್ಟ್ರ ಬೇರಾವ ದೇಶದ ಮೇಲೂ ತಾನೇ ದಂಡೆತ್ತಿ ಹೋಗಿ ಯುದ್ಧ ಮಾಡಿಲ್ಲವೋ ಅಂಥ ಏಕೈಕ ರಾಷ್ಟ್ರ ಭಾರತ.ಹಾಗೆಯೇ ಯಾವ ಧರ್ಮ ತನ್ನ ಅನುಯಾಯಿಗಳ ಸಂಖ್ಯೆ ಹೆಚ್ಚು ಮಾಡಿಕೊಳ್ಳಬೇಕು ಎಂಬ ಏಕೈಕ ಕಾರಣದಿಂದ ಇತರ ಧರ್ಮೀಯರನ್ನು ತನ್ನೆಡೆಗೆ ಸೆಳೆದಿಲ್ಲವೋ ಅಂಥ ಏಕೈಕ ಧರ್ಮ ಹಿಂದೂ ಧರ್ಮ.ಅಂಥ ವಿಶಾಲ ಧರ್ಮವನ್ನು ವಿಮರ್ಷೆಗೊಳಪಡಿಸಿದಷ್ಟೂ ಅದರ ಅಂತ:ಸ್ಸತ್ವ ಹೆಚ್ಚಾಗುತ್ತದೆಯೇ ವಿನ: ಅದರ ಹಿರಿಮೆಯೇನೂ ಕಡಿಯಾಗುವುದಿಲ್ಲ.ಅಷ್ಟಕ್ಕೂ ಕೆಲವರು ಹೇಳುತ್ತಿರುವ ‘ಅಸ್ಪೃಶ್ಯತೆ’ ‘ಜಾತಿ ಪದ್ಧತಿ’ಗಳಿಂದಾಗಿ ಒಬ್ಬ ಮನುಷ್ಯ ಬದುಕಲೇ ಸಾಧ್ಯವಾಗದ ಪರಿಸ್ಥಿತಿ ಭಾರತದಲ್ಲಿ ಇನ್ನೂ ಇದೆಯೇ?ಇಂದು ವೈದ್ಯನೊಬ್ಬ ಇವರ So called ‘ಅಸ್ಪೃಶ್ಯ’ನಾಗಿದ್ದರೆ ಆತನ ಬಳಿಗೆ ರೋಗಿಗಳು ಹೋಗದೇ ಇರುತ್ತಾರೆಯೇ?ಹೋಟೆಲ್ ಗಳಲ್ಲಿ ಆಹಾರ ಸೇವಿಸುವ ಕೋಟ್ಯಂತರ ಮಂದಿ ಯಾರು ಅಸ್ಪೃಶ್ಯ ಎಂದು ನೋಡಿಯೇ ಹೊಟ್ಟೆ ತುಂಬಿಸಿಕೊಳುತ್ತಾರೆಯೇ?ಅಂಥ ಸೋ ಕಾಲ್ಡ್ ಅಸ್ಪೃಶ್ಯರಿಗೆ ಸಂವಿಧಾನ ಮತ್ತು ಸರ್ಕಾರಗಳು ಹಲವು ಸವಲತ್ತುಗಳನ್ನು ಕೊಟ್ಟಿಲ್ಲವೇ?ಅದನ್ನೆಲ್ಲಾ ಪಡೆದುಕೊಂಡು ಪ್ರಸಿದ್ಧ ವ್ಯಕ್ತಿಗಳಾಗಿ ದೇಶಕ್ಕೆ,ವಿಶ್ವಕ್ಕೆ ಕೊಡುಗೆ ನೀಡಿದವರು ಎಷ್ಟು ಮಂದಿಯಿಲ್ಲ?

ಇನ್ನು ಹಿಂದೂ ಧರ್ಮದ ಮತ್ತೊಂದು ಕಳಂಕ ಎಂದು ಇವರು ಕರೆಯುವ ಜಾತಿ ಪದ್ಧತಿಯ ಬಗ್ಗೆ ಹೇಳುವುದಾದರೆ ಆ ಜಾತಿ ಪದ್ಧತಿಯೇ ಇಂದು ನಶಿಸಿ ಹೋಗುತ್ತಿದೆ.ಇದು ಶಿಕ್ಷಣ ನಮ್ಮ ದೇಶದಲ್ಲಿ ಮಾಡಿರುವ, ಈಗಲೂ ಮಾಡುತ್ತಿರುವ ಬಹುದೊಡ್ಡ ಕ್ರಾಂತಿ.ಉನ್ನತ ಶಿಕ್ಷಣ ಪಡೆದವರಾರೂ ಜಾತಿಯ ಹೆಸರು ಹೇಳಿಕೊಂಡು ಲಾಭ ಮಾಡಿಕೊಳ್ಳುವ ಮನಸ್ಥಿತಿ ಹೊಂದಿಲ್ಲ.ಸರ್ಕಾರದ ಸವಲತ್ತುಗಳನ್ನು ಪಡೆಯಲು ಅದೊಂದು ಮಾನದಂಡ ಎನ್ನುವುದನ್ನು ಬಿಟ್ಟರೆ ಈ ಇಪ್ಪತ್ತೊಂದನೆ ಶತಮಾನದಲ್ಲಿ ಜಾತಿ ಪದ್ಧತಿ ಒಂದು ಬಹುದೊಡ್ಡ ಸಮಸ್ಯೆಯಾಗಿ ಜನರ ಬದುಕನ್ನೇ ದುರ್ಲಭ ಮಾಡಿಲ್ಲ.ಹಾಗಾಗಿ ಜಾತಿ ಪದ್ಧತಿ ಎಂಬ ಅನಿಷ್ಟದಿಂದಲೇ ಹಲವರು ಹಿಂದೂ ಧರ್ಮದಿಂದ ಬೇರೆ ಧರ್ಮಕ್ಕೆ ಮತಾಂತರವಾದರು,ಹಾಗಾಗಿ ಹಿಂದೂ ಧರ್ಮವನ್ನು ವಿಮರ್ಷೆಗೊಳಪಡಿಸಬೇಕು ಎನ್ನುವವರ ಮಾತಿಗೆ ಅಷ್ಟಾಗಿ ಬೆಲೆ ಉಳಿದಿಲ್ಲ.

ಜೀವನಕ್ಕಾಗಿ ಧರ್ಮವಿದೆಯೇ ಹೊರತು ಧರ್ಮಕ್ಕಾಗಿಯೇ ಜೀವನವಲ್ಲ.ಯಾವುದೋ ಒಂದು ಧರ್ಮದಿಂದ ಆ ಧರ್ಮದ ಜನರ,ಒಂದು ದೇಶದ ಅಸ್ತಿತ್ವಕ್ಕೆ ತೊಂದರೆಯುಂಟಾದರೆ ಅದನ್ನು ವಿಮರ್ಷೆಗೊಳಪಡಿಸಲೇಬೇಕು.ಆದರೆ ಯಾವತ್ತಿಗೂ ಜೀವವಿರೋಧಿಯಾಗಲಾರದ,ಸ್ವ ಇಚ್ಛೆಯಿಂದ ತನ್ನನ್ನು ತೊರೆಯುವವರಿಗೆ ಮತ್ತು ತನ್ನೊಳಗೆ ಬರುವವರಿಗೆ ಯಾವುದೇ ನಿರ್ಬಂಧ ಹೇರದ ಹಿಂದೂ ಧರ್ಮ ಮತ್ತು ಶಾಂತಿಯಿಂದ,ನ್ಯಾಯಯುತವಾಗಿ ಬಾಳಲು ಬೇಕಾದ ಮಾನವೀಯ ಮೌಲ್ಯಗಳನ್ನು ಕಲಿಸುವ ಭಗವದ್ಗೀತೆಯೇ ಏಕೆ ಪದೇ ಪದೇ ವಿಮರ್ಷೆಗೊಳಗಾಗಬೇಕು?

ಇತಿಹಾಸವನ್ನು ನೋಡುವುದಾದರೆ ರಾಜಾಶ್ರಯವಿಲ್ಲದ ಅನೇಕ ಧರ್ಮಗಳು ನಶಿಸಿ ಹೋಗಿವೆ.ಜಗತ್ತಿನ ಹಲವು ರಾಷ್ಟ್ರಗಳು ತಮ್ಮಲ್ಲಿ ಒಂದೊಂದೇ ಧರ್ಮಗಳಿಗೆ ರಾಜಾಶ್ರಯ ನೀಡಿ ಪೋಷಿಸುತ್ತಿರುವಾಗ ಎಲ್ಲ ಧರ್ಮಗಳನ್ನೂ ಸಮಾನವಾಗಿ ಕಾಣುವ ಭಾರತದಲ್ಲಿ ಹಿಂದೂ ಧರ್ಮವೇ ಪ್ರತೀ ಬಾರಿಯೂ ವಿಮರ್ಷೆಗೊಳಗಾಗಬೇಕೆಂದು ಅನೇಕರು ಆಗ್ರಹಿಸುವುದು ತೀರಾ ವಿಪರ್ಯಾಸ.

ಚಿತ್ರಕೃಪೆ :wall.alphacoders.com

2 ಟಿಪ್ಪಣಿಗಳು Post a comment
  1. ಜನ 6 2015

    ಮಾನ್ಯರೇ, ಒಳ್ಳೆಯ ಲೇಖನ. ಒಳ್ಳೆಯ ಮಾಹಿತಿ ಕೂಡ. ಎಲ್ಲರೂ ಯೋಚಿಸುವಂತಹ ವಿಷಯ. ನಮ್ಮ ದೇಶದಲ್ಲಿ ಏನು ಮಾಡಿದರೂ ಕೇಳುವವರು ಇಲ್ಲವಾಗಿದೆ. ನಮ್ಮ ಧರ್ಮವನ್ನು ಹಾಳುಮಾಡಲು ನಮ್ಮವರೇ ಕಾರಣಕರ್ತರಾಗಿದ್ದಾರೆ.ಇದಕ್ಕಾಗಿ ಯಾರು ಹೋರಾಡುವವರು ಇಲ್ಲದಂತಾಗಿದೆ. ನಾವು ಬಹುಸಂಖ್ಯಾತರು ಏನು ಆಗುವುದಿಲ್ಲ ಎನ್ನುತ್ತಿದ್ದಾರೆ. ಹಿಂಸೆ ನಮಗೆ ಬೇಡ ನಿಜ. ಆದರೆ ನಮ್ಮ ಧರ್ಮ ಉಳಿಯಬೇದವೇ?

    ಉತ್ತರ
  2. ಜನ 23 2015

    PLS SOMEONE Write about the difference between Dharma/ matha

    ಉತ್ತರ

ನಿಮ್ಮ ಅನಿಸಿಕೆ...

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Note: HTML is allowed. Your email address will never be published.

Subscribe to comments