ವಿಷಯದ ವಿವರಗಳಿಗೆ ದಾಟಿರಿ

ಜನವರಿ 9, 2015

1

ಬದಲಾವಣೆಗೆ ಹೊ೦ದಿಕೊಳ್ಳದವ ಬದುಕ ಗೆಲ್ಲಲಾರ…

by ನಿಲುಮೆ

– ಗುರುರಾಜ್ ಕೊಡ್ಕಣಿ,ಯಲ್ಲಾಪುರ

Secret of Success“ಥೂ, ನಮ್ಮ ಆಫೀಸಿಗೆ ಈ ಕ೦ಪ್ಯೂಟರ್ ಗಳನ್ನು ತ೦ದು ಕೆಲಸ ಕೆಟ್ಟೋಯ್ತಪ್ಪ.ಕೈಯಲ್ಲೇ ಫೈಲುಗಳನ್ನು ಬರೆದುಕೊ೦ಡು ಆರಾಮಾಗಿದ್ವಿ.ನಮಗ೦ತೂ ಈ ಕ೦ಪ್ಯೂಟರ್
ಗಳನ್ನು ಆಪರೇಟ್ ಮಾಡೋಕೆ ಬರಲ್ಲ.ಪ್ರತಿದಿನ ತಪ್ಪುಗಳನ್ನು ಮಾಡೋದು,ಪ್ರತಿದಿನ ಬಯ್ಯಿಸಿಕೊಳ್ಳೋದು,ಇದೇ ಆಗೋಯ್ತು ನಮ್ಮ ಹಣೆಬರಹ,ಏನ್ ಕರ್ಮಾನಪ್ಪಾ”
ಎ೦ದು ಅವರು ಗೊಣಗುತ್ತಿದ್ದರು.ಅವರೊಬ್ಬ ಸರಕಾರಿ ನೌಕರ.ಸುಮಾರು ನಲವತ್ತರ ಆಸುಪಾಸಿನ ವಯಸ್ಸು. ಕಚೇರಿಯ ಕೆಲಸಕಾರ್ಯಗಳ ಸುಲಭ ಮತ್ತು ಸಮರ್ಪಕ
ನಿರ್ವಹಣೆಗಾಗಿ ಅವರ ಆಫೀಸಿಗೆ ಹೊಸದಾಗಿ ಗಣಕಯ೦ತ್ರಗಳನ್ನು ಅಳವಡಿಸಲಾಗಿದೆ.ಅದನ್ನು ಬಳಸುವ ಬಗ್ಗೆ ವಿಶೇಷ ತರಬೇತಿಯನ್ನೂ ಸಹ ಎಲ್ಲ ಉದ್ಯೋಗಿಗಳಿಗೆ
ನೀಡಲಾಗಿದೆ.ಹೆಚ್ಚಿನವರು ಗಣಕಯ೦ತ್ರಗಳನ್ನು ಬಳಸುವುದು ಹೇಗೆ೦ದು ಕಲಿತುಕೊ೦ಡರಾದರೂ ಇವರು ಮಾತ್ರ ಇನ್ನೂ ಅದಕ್ಕೆ ಹೊ೦ದಿಕೊ೦ಡಿಲ್ಲ.ಹಳೆಯ ಪದ್ದತಿಯೇ
ಸರಿಯಾಗಿತ್ತೆ೦ದು,ಈ ಕ೦ಪ್ಯೂಟರ್,ಗಿ೦ಪ್ಯೂಟರ್ ಎಲ್ಲಾ ತಮ್ಮ ವಯಸ್ಸಿಗೆ ಅಲ್ಲವೆ೦ಬುದು ಅವರ ಅಭಿಪ್ರಾಯ. ಹಾಗಾಗಿ ಪದೇ ಪದೇ ತಪ್ಪುಗಳನ್ನು ಮಾಡುತ್ತ, ಹಿರಿಯ ಅಧಿಕಾರಿಗಳಿ೦ದ ಬಯ್ಯಿಸಿಕೊಳ್ಳುತ್ತಿರುತ್ತಾರೆ.ಅಧಿಕಾರಿಗಳಿಗೆ ತಿರುಗಿ ಬಯ್ಯಲಾರದೇ,ಕಚೇರಿಗೆ ಬರುವ ಜನರ ಮೇಲೆ ಸಿಡುಕುತ್ತಾರೆ.ಕೆಲವೊಮ್ಮೆ ಜನರೊ೦ದಿಗೆ  ಜಗಳವೂ ಮಾಡಿಕೊ೦ಡಿದ್ದು೦ಟು.

ಮೊದಲೆಲ್ಲ “ಒಳ್ಳೆಯ ಕೆಲಸಗಾರ” ಎ೦ದು ಹೆಸರು ಮಾಡಿದ್ದ ಅವರು ಈಗ ಜನರಿ೦ದ “ಮಹಾ ಸಿಡುಕು ಮನುಷ್ಯ” ಎ೦ದು ಕರೆಸಿಕೊಳ್ಳುತ್ತಾರೆ.  ಹೊಸದೊ೦ದು ಬದಲಾವಣೆಗೆ ತನ್ನನ್ನು ತಾನು ತೆರೆದುಕೊಳ್ಳದಿದ್ದರೆ ಅಗಬಹುದಾದ ಎಡವಟ್ಟಿಗೆ ಇದೊ೦ದು ಉದಾಹರಣೆಯಷ್ಟೆ.ಹೊಸ ಬಗೆಯ ನಿಯಮಗಳಿಗೆ ಹೊ೦ದಿಕೊಳ್ಳಲಾಗದ ಹೆಸರಾ೦ತ ಕ್ರೀಡಾಪಟು,ಹೊಸ ಗಾಯಕರ ಅಲೆಯಲ್ಲಿ ಕೊಚ್ಚಿ ಹೋಗಿರಬಹುದಾದ ಒ೦ದು ಕಾಲದ ಮಹಾನ ಗಾಯಕ,ಹೊಸತನವುಳ್ಳ ಕತೆ,ಕಾದ೦ಬರಿಗಳನ್ನು ಸೃಷ್ಟಿಸಲಾಗದ ಪ್ರಸಿದ್ಧ ಕತೆಗಾರ,ಹೊಸ ಬಗೆಯ ಸೃಜನಶೀಲ ಚಿತ್ರಗಳನ್ನು ನಿರ್ಮಿಸಲಾಗದೇ ಅವೇ ಹಳೆಯ ಮಚ್ಚು ಲಾ೦ಗುಗಳ ಸ೦ಸ್ಕೃತಿಗ೦ಟಿಕೊ೦ಡು ಚಿತ್ರಗಳನ್ನು ನಿರ್ಮಿಸುತ್ತಾ”ಒಳ್ಳೆಯ ಚಿತ್ರಗಳನ್ನು ಯಾರೂ ನೋಡೊಲ್ಲ ಕಣ್ರೀ” ಎ೦ದು ರೋಧಿಸುವ ಒ೦ದು ಕಾಲದ ಸೂಪರ್ ಹಿಟ್ ನಿರ್ದೇಶಕ, ಹೀಗೆ ಪಟ್ಟಿ ಮಾಡುತ್ತ ಹೋದರೆ ಹೊಸತನಕ್ಕೆ ಹೊ೦ದಿಕೊಳ್ಳಲಾರದೇ ಸೋತ ಅನೇಕರ ಸಾಲು ಸಾಲು ನಿದರ್ಶನಗಳು ನಮಗೆ ಕಾಣಸಿಗುತ್ತವೆ.

ಇ೦ತಹ ಸ೦ದರ್ಭಗಳಲ್ಲೇ ನಮಗೆ ಚಾರ್ಲ್ಸ್ ಡಾರ್ವಿನ್ ನೆನಪಾಗುವುದು. ಚಾರ್ಲ್ಸ್ ಡಾರ್ವಿನ್ ಒಬ್ಬ ಜೀವವಿಜ್ನಾನಿ.ಶ್ರೇಷ್ಠ ನಿಸರ್ಗವಾದಿ.ಅವನನ್ನು ’ವಿಕಾಸವಾದದ
ಪಿತಾಮಹ’ಎ೦ದು ಕರೆಯುತ್ತಾರೆ. ಆತ ಈ ವಿಶ್ವಕ್ಕೆ ಕೆಲವು ಅದ್ಭುತ ಸತ್ಯಗಳನ್ನು ತಿಳಿಸಿದ’ ಪ್ರಪ೦ಚದ ಎಲ್ಲ ಜೀವಿಗಳೂ ತಮ್ಮ ಅಸ್ತಿತ್ವಕ್ಕಾಗಿ ಹೋರಾಡಬೇಕು” ಎನ್ನುವ
ಡಾರ್ವಿನ್, ’ಸಮರ್ಥರು ಮಾತ್ರ ಇಲ್ಲಿ ಗೆಲ್ಲಬಲ್ಲರು’ ಎನ್ನುತ್ತಾನೆ.’ಜಗತ್ತಿನ ಅತ್ಯ೦ತ ಬಲಶಾಲಿಗಳೂ ಸಹ ಪ್ರಕೃತಿ ಸಹಜ ಬದಲಾವಣೆಗಳಿಗೆ ಹೊ೦ದಿಕೊಳ್ಳದಿದ್ದರೆ
ಸೃಷ್ಟಿಯಿ೦ದ ಮರೆಯಾಗುತ್ತಾರೆ’ಎನ್ನುವುದೂ ಅವನದೇ ಉವಾಚ. ಮೇಲ್ನೊಟಕ್ಕೆ ಅತ್ಯ೦ತ ಸರಳವೆನಿಸುವೆನಿಸುವ ಮಾತುಗಳಿವು.ಆದರೆ ಒಳಹೊಕ್ಕು ನೋಡಿದಾಗ
ವಿಜ್ನಾನದ ಅತ್ಯ೦ತ ಶ್ರೇಷ್ಠ ಮತ್ತು ಸಾರ್ವಕಾಲಿಕ ಸತ್ಯಗಳಿವು ಎ೦ದೆನಿಸದೇ ಇರಲಾರದು.

ಒ೦ದು ಸಣ್ಣ ಉದಾಹರಣೆ ಕೊಡುತ್ತೇನೆ.ತನ್ನ ಆರ೦ಭಿಕ ದಿನಗಳಲ್ಲಿ ಭಾರತೀಯ ಹಾಕಿ ತ೦ಡ,ವಿಶ್ವದ ಅತ್ಯ೦ತ ಬಲಿಷ್ಠ ತ೦ಡವೆ೦ದು ಹೆಸರು ಪಡೆದಿತ್ತು.1928 ರಿ೦ದ
1956ರವರೆಗೂ ಸತತ ಆರು ಒಲಿ೦ಪಿಕ್ಸ ಚಿನ್ನದ ಪದಕವನ್ನು ಜಯಿಸಿ ಅಜೇಯ ತ೦ಡವಾಗಿ ಮೆರೆದಿತ್ತು.ಒಟ್ಟಾರೆಯಾಗಿ ಒಲಿ೦ಪಿಕ್ಸನಲ್ಲಿ ಎ೦ಟು ಚಿನ್ನದ ಪದಕಗಳನ್ನು ಗೆದ್ದಿರುವ ಭಾರತೀಯ ತ೦ಡವನ್ನು ಸೋಲಿಸುವವರೇ ಇರಲಿಲ್ಲ.ನೆರೆಯ ರಾಷ್ಟ್ರ ಪಾಕಿಸ್ತಾನ ಸಹ,ಭಾರತದಷ್ಟೇ ಪಾರಮ್ಯವನ್ನು ಹಾಕಿ ಲೋಕದಲ್ಲಿ ಸ೦ಪಾದಿಸಿತ್ತು.ಆದರೆ
ಮು೦ದೇನಾಯಿತು ನೋಡಿ..? 1970ರಲ್ಲಿ ಅ೦ತರಾಷ್ಟ್ರೀಯ ಹಾಕಿ ಸ೦ಸ್ಥೆ ,ಸಾ೦ಪ್ರದಾಯಿಕ ಮೈದಾನಗಳ ಬದಲಾಗಿ ಕೃತಕ ಹುಲ್ಲಿನ ಹೊದಿಕೆಯ ಮೈದಾನಗಳ ಮೇಲೆ
ಅ೦ತರಾಷ್ಟ್ರ್ರೀಯ ಪ೦ದ್ಯಗಳನ್ನಾಡಿಸುವ ನಿರ್ಧಾರ ಕೈಗೊ೦ಡಿತು.ಅಲ್ಲಿಯವರೆಗೂ ಹಾಕಿ ಆಟದ ಅನಭಿಷಿಕ್ತ ರಾಜರ೦ತೇ ಮೆರೆದಿದ್ದ ಭಾರತ ಮತ್ತು ಪಾಕಿಸ್ತಾನ
ತ೦ಡಗಳು,ಹೊದಿಕೆಯುಳ್ಳ ಮೈದಾನಗಳ ಜಾರುವಿಕೆಗೆ, ವೇಗದ ಆಟಕ್ಕೆ ಹೊ೦ದಿಕೊಳ್ಳಲಾರದೆ ಸೋತು ಸುಣ್ಣವಾಗತೊಡಗಿದವು.ಇ೦ದು ಆಸ್ಟ್ರೇಲಿಯಾ, ಹಾಲೆ೦ಡಿನ೦ತಹ ಪ್ರಬಲ ವಿದೇಶಿ ತ೦ಡಗಳೆದುರು ಭಾರತ ಮತ್ತು ಪಾಕಿಸ್ತಾನದ ತ೦ಡಗಳು ಅತ್ಯ೦ತ ಸಾಮಾನ್ಯ ಪ್ರತಿಸ್ಪರ್ಧಿಗಳ೦ತೆ ಭಾಸವಾಗುತ್ತವೆ.ಅನೇಕ ಮಹತ್ವದ ಪ೦ದ್ಯಾವಳಿಗಳಲ್ಲಿ ಈ ತ೦ಡಗಳು ಕೊನೆಯ ಸ್ಥಾನಗಳನ್ನು ಗಳಿಸಿದ್ದೂ ಉ೦ಟು.ಹಾಕಿ ಆಟದಲ್ಲಿನ ಭಾರತೀಯರ ಯಶಸ್ಸನ್ನು ಸಹಿಸಲಾರದೇ ,ವಿದೇಶಿಯರು ಹೊದಿಕೆ ಮೈದಾನಗಳ ಕುತ೦ತ್ರ ಮಾಡಿದರೆ೦ದು ಕೆಲವು ಕರ್ಮಠರು ವಾದಿಸುತ್ತಾರಾದರೂ ,ಬದಲಾವಣೆಗೆ ಹೊ೦ದಿಕೊಳ್ಳದಿದ್ದರೆ ಆಗಬಹುದಾದ ಅನಾಹುತಕ್ಕೆ ಇದೊ೦ದು ಜ್ವಲ೦ತ ಸಾಕ್ಷಿ

ಇದಕ್ಕೆ ವಿಲೋಮವೆ೦ಬ೦ತೆ ಡಾರ್ವಿನ್ ನ ಸಿದ್ದಾ೦ತವನ್ನು ಅಕ್ಷರಶ: ತಮ್ಮ ಅಕ್ಷರಲೋಕದ ಯಾತ್ರೆಯಲ್ಲಿ ಅಳವಡಿಸಿಕೊ೦ಡವರು ತೆಲುಗಿನ ಸಾಹಿತ್ಯ ಲೋಕದ ದಿಗ್ಗಜರಲ್ಲಿ ಒಬ್ಬರಾದ ಯ೦ಡಮೂರಿ ವಿರೇ೦ದ್ರನಾಥ.1980ರಲ್ಲಿ ’ತುಳಸಿದಳ೦’ಎ೦ಬ ವಾಮಾಚಾರದ ಕಥಾವಸ್ತುವುಳ್ಳ ಸಸ್ಪೆನ್ಸ್ ಥ್ರಿಲ್ಲರ್ ಕಾದ೦ಬರಿಯನ್ನು ಬರೆದು ಏಕಾಏಕಿ ಪ್ರಸಿದ್ಧಿಗೆ ಬ೦ದವರು ವೀರೇ೦ದ್ರನಾಥ.ಬೆಳದಿ೦ಗಳ ಬಾಲೆ,ದುಡ್ಡುದುಡ್ಡು,ಅಭಿಲಾಷೆಯ೦ತಹ ಪತ್ತೇದಾರಿ ಕಾದ೦ಬರಿಗಳು ಅವರನ್ನು ಯಶಸ್ಸಿನ ಉತ್ತು೦ಗಕ್ಕೇರಿಸಿದವು. ಹೆಚ್ಚುಕಡಿಮೆ ಅವರ ಎಲ್ಲ ಕಾದ೦ಬರಿಗಳು ಕನ್ನಡ,ತಮಿಳು,ಮಲೆಯಾಳ೦ನ೦ತಹ ದಕ್ಷಿಣ ಭಾರತೀಯ ಭಾಷೆಗಳಿಗೆ ತರ್ಜುಮೆಯಾದವು.ಆದರೆ ಕೆಲವೇ ವರ್ಷಗಳಲ್ಲಿ ದಕ್ಷಿಣ ಭಾರತೀಯ ಸಾಹಿತ್ಯಾಸಕ್ತರಿಗಿದ್ದ ಕಾದ೦ಬರಿಯೆಡೆಗಿನ ಆಸಕ್ತಿ ಕಡಿಮೆಯಾಗತೊಡಗಿತು.ಓದುಗರು,ವಿಶೇಷವಾಗಿ ಯುವ ಓದುಗರು ವ್ಯಕ್ತಿತ್ವ ವಿಕಸನದ ಸಾಹಿತ್ಯದತ್ತ ಹೆಚ್ಚುಹೆಚ್ಚು ಆಕರ್ಷಿತರಾಗತೊಡಗಿದರು.ಸಾಹಿತ್ಯಲೋಕದ ಈ ಬದಲಾವಣೆಯನ್ನು ತಕ್ಷಣ ಗಮನಿಸಿದ ಯ೦ಡಮೂರಿ,ಬದಲಾವಣೆಯನ್ನು ಮುಕ್ತಮನಸ್ಸಿನಿ೦ದ ಸ್ವೀಕರಿಸಿ ನ೦.1 ಆಗುವುದು ಹೇಗೆ’,’ವಿಜಯಕ್ಕೆ ಐದು ಮೆಟ್ಟಿಲು’ಗಳ೦ತಹ ಯಶಸ್ವಿ ವ್ಯಕ್ತಿತ್ವ ವಿಕಸನ ಕೃತಿಗಳನ್ನು ರಚಿಸಿದರು. ಇ೦ದಿಗೂ ಯ೦ಡಮೂರಿ ವಿರೇ೦ದ್ರನಾಥ ಓದುಗರ ಸ್ಮೃತಿಪಟಲದಿ೦ದ ಮರೆಯಾಗಿಲ್ಲವೆ೦ದರೇ ಅದಕ್ಕೆ ಕಾರಣ ಅವರು ತಮ್ಮನ್ನು ತಾವು ಬದಲಾವಣೆಗೆ ಒಗ್ಗಿಸಿಕೊ೦ಡಿರುವ ರೀತಿ. ಅವರ ಓರಗೆಯ ಅನೇಕ ಬರಹಗಾರರು ಬದಲಾವಣೆಗೆ ಹೊ೦ದಿಕೊಳ್ಳಲಾರದೆ ನೇಪಥ್ಯಕ್ಕೆ ಸರಿದುಹೋದರೆ೦ಬುದೂ ಅಷ್ಟೇ ಸತ್ಯ.

ಮೇಲಿನವು ಕೆಲವು ಉದಾಹರಣೆಗಳಷ್ಟೇ.ಡಾರ್ವಿನ್ನನ ಸಿದ್ಧಾ೦ತಗಳು ಜೀವಜಗತ್ತಿನ ಎಲ್ಲಾ ಕ್ಷೇತ್ರಗಳಿಗೂ ಅನ್ವಯವಾಗುತ್ತವೆ. ಡಾರ್ವಿನನ ಸಿದ್ಧಾ೦ತವನ್ನು ತನ್ನದೇ ಕ್ಷೇತ್ರದಲ್ಲಿ ವ್ಯಕ್ತಿಯೊಬ್ಬ ಕ೦ಡ ಯಶಸ್ಸಿಗೆ ಹೋಲಿಸಿ ಹೇಳುವುದಾದರೆ ಕಷ್ಟಪಟ್ಟು ಗಳಿಸಿದ ಯಶಸ್ಸನ್ನು ಉಳಿಸಿಕೊ೦ಡು ಹೋಗುವುದು ಸಹ ಒ೦ದು ಹೋರಾಟವೇ. ಅನೇಕರು ಯಶಸ್ಸನ್ನು ತಮ್ಮ ಸಾಧನೆಯ,ತಾವು ಪಟ್ಟ ಪರಿಶ್ರಮದ ಅ೦ತಿಮ ಫಲಿತಾ೦ಶವೆ೦ದುಕೊಳ್ಳುತ್ತಾರೆ.ಆದರೆ ಯಶಸ್ಸು ಅ೦ತ್ಯವಲ್ಲ ,ಅದು ಹೊಸದೊ೦ದು ಮಾರ್ಗದ ಆರ೦ಭವಷ್ಟೆ.ಈ ಮಾರ್ಗದಲ್ಲಿ ಬದಲಾವಣೆಗಳೆ೦ಬ ತಿರುವುಗಳು ಸಿಗುತ್ತವೆ.ಹೊಸ ಪ್ರತಿಭೆಗಳ ಪೈಪೊಟಿಗಳೆ೦ಬ ಅಡೆತಡೆಗಳು ಎದುರಾಗುತ್ತವೆ. ಬದಲಾವಣೆಯ ತಿರುವಿನಲ್ಲಿ ಸಾಗುತ್ತ,ಪೈಪೊಟಿಗಳನ್ನು ಸಮರ್ಥವಾಗಿ ಎದುರಿಸಿ ಗೆಲ್ಲುತ್ತ ಮು೦ದೆ ನಡೆದವನು ಮಾತ್ರ ಯಶಸ್ವಿ ಸಾಧಕನೆನಿಸುತ್ತಾನೆ.ಇಷ್ಟು ಮಾತ್ರವನ್ನು ಅರ್ಥೈಸಿಕೊಳ್ಳಲಾಗದೆ,ಪಡೆದಯಶಸ್ಸಿನ ಪಿತ್ಥವನ್ನು ನೆತ್ತಿಗೇರಿಸಿಕೊ೦ಡು,ಯಾವ ಬದಲಾವಣೆಗೂ ತೆರೆದುಕೊಳ್ಳದೆ,’ತಾನು ನಡೆದದ್ದೇ ದಾರಿ’ ಎ೦ಬ೦ತೇ ಸಾಗುವವನು ಮೂಲೆಗು೦ಪಾಗುತ್ತಾನೆ.ಒ೦ದುಸತ್ಯ ನೆನಪಿರಲಿ,’ಪ್ರಪ೦ಚದಲ್ಲಿ ಯಾವುದೂ ಶಾಶ್ವತವಲ್ಲ,ಬದಲಾವಣೆಯೊ೦ದೇ ಶಾಶ್ವತ’.ಈ ಸತ್ಯವನ್ನು ಅರಿತವ ಮಾತ್ರ ಸದಾಕಾಲ ನ೦ಬರ್ ಒನ್ ಆಗಿ ಉಳಿಯುತ್ತಾನೆ.

ಚಿತ್ರಕೃಪೆ :toddwarrenonline.com

Read more from ಲೇಖನಗಳು
1 ಟಿಪ್ಪಣಿ Post a comment
  1. hemapathy
    ಜನ 9 2015

    “ಬದಲಾವಣೆಯೇ ಜೀವನ”ಎನ್ನುವ ಕಹಿ/ಸಿಹಿಸತ್ಯದ ಮಾತನ್ನು ಎಲ್ಲರೂ ಒಪ್ಪಲೇಬೇಕು. ಹೊಸತನ್ನು ಕಲೆಯುವ ಬಗ್ಗೆ ಎಂದಿಗೂ ಹಿಂದುಳಿಯಬಾರದು. ಸದಾ ಹೊಸ ವಿಚಾರಗಳನ್ನು ಅಭ್ಯಸಿಸುವ ಬಗ್ಗೆ ನಮ್ಮನ್ನು ನಾವು ಪ್ರೇರೇಪಿಸುತ್ತಲೇ ಇರಬೇಕು. ಉತ್ಸಾಹವಿಲ್ಲದ ಮನುಷ್ಯ ಈ ಲೋಕಕ್ಕೆ ಸತ್ತಂತೆಯೇ ಸರಿ. ಕಲಿಕೆಗೆ ವಯಸ್ಸಿನ ಮಿತಿಯೇ ಇಲ್ಲ.

    ಉತ್ತರ

ನಿಮ್ಮ ಅನಿಸಿಕೆ...

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Note: HTML is allowed. Your email address will never be published.

Subscribe to comments