ವಿಷಯದ ವಿವರಗಳಿಗೆ ದಾಟಿರಿ

ಜನವರಿ 11, 2015

ನಿಜ಼ಾಮ ಗ್ರೇಟ್ ಸೆಕ್ಯುಲರ್ ಆಗಿದ್ದರೆ, ಆಪರೇಷನ್ ಪೋಲೊ ನಡೆದದ್ದು ಸುಳ್ಳೇ?

‍ನಿಲುಮೆ ಮೂಲಕ

– ಪ್ರವೀಣ್ ಪಟವರ್ಧನ್

Nizam and Sardarಕೆಲ ದಿನಗಳ ಹಿಂದಷ್ಟೇ ತೆಲಂಗಾಣ ರಾಜ್ಯದ ಮುಖ್ಯಮಂತ್ರಿ ಕೆ. ಚಂದ್ರಶೇಖರ್ ರಾವ್ ನಿಜ಼ಾಮನನ್ನು ಕೊಂಡಾಡಿದ್ದಾರೆ. ನಿಜ಼ಾಮ ಒಂದೊಳ್ಳೆಯ ರಾಜ್ಯಭಾರ ಮಾಡಿದವನೆಂದೂ, ಅವನಿಂದ ಹಲವಾರು ಕಲ್ಯಾಣಕರ ಕಾರ್ಯಗಳು ನಡೆದಿವೆ ಎಂದೂ, ಜೊತೆಗೆ ಆತ ದೇಶಭಕ್ತ, ಜಾತ್ಯಾತೀತ ರಾಜನಾಗಿದ್ದನೆಂದೂ ಕೆಸಿಆರ್ ನಿಜ಼ಾಮನನ್ನು ಬಣ್ಣಿಸಿದ್ದಾರೆ. ಅಷ್ಟೇ ಅಲ್ಲದೆ ಒಂದು ಹೆಜ್ಜೆ ಮುಂದೆ ನಡೆದು ಇದುವರೆಗಿನ ಆಂಧ್ರ ಸರಕಾರಗಳು ನಿಜ಼ಾಮನನ್ನು ತುಚ್ಛವಾಗಿ ಕಂಡಿದ್ದವು, ಆ ಅಕ್ಷಮ್ಯ ಅಪರಾಧವನ್ನು ಇವರ ಸರ್ಕಾರ ಖಂಡಿಸುತ್ತದೆ ಹಾಗೂ ಆ ತಪ್ಪು ಮರುಕಳಿಸದಂತೆ ನೋಡಿಕೊಳ್ಳುತ್ತದೆ ಎಂದೂ ಕೆಸಿಆರ್ ತಿಳಿಸಿದ್ದಾರೆ. ನಿಜ಼ಾಮನ ಆಳ್ವಿಕೆಯಲ್ಲಿ ಕೆಲ ತಪ್ಪುಗಳು ಗತಿಸಿರಬಹುದು. ಆದರೆ ತಪ್ಪುಗಳು ಎಲ್ಲಾ ರಾಜರುಗಳ ರಾಜ್ಯಭಾರದಲ್ಲೂ ನಡೆದಿವೆಯೆಂದು ಸಮಝಾಯಿಷಿಯೂ ನೀಡುತ್ತಾರೆ. ಈ ಘಟನೆ ನಡೆಯುವ ಕೆಲ ವಾರಗಳ ಹಿಂದೆ ನಮ್ಮ ದೇಶದ ಮಾಧ್ಯಮಗಳಲ್ಲಿ ಗಾಂಧಿಜೀಯ ಹತ್ಯೆಗೈದ ಗೋಡ್ಸೆ ಒಬ್ಬ ದೇಶಭಕ್ತ ಎಂದು ಆಡಿದ ಮಾತನ್ನು ಆಧರಿಸಿಯೇ ಚರ್ಚೆಗಳು ಮುಗಿಲು ಮುಟ್ಟಿದ್ದ ಪರಿಯ ಕಂಡು ನಿಜ಼ಾಮನ ಬಗ್ಗೆಯೂ ಡಿಬೇಟ್ ಸರಣಿಗಳು ನಡೆಯುತ್ತವೆ ಎಂದು ಕಾದದ್ದೇ ಬಂತು. ಆದರೆ  ಕೆಸಿಆರ್ ರ ಹೇಳಿಕೆ, ವಿಷಯ, ವರದಿ ಅಥವಾ ಆ ಬಗೆಗಿನ ಜಿಜ್ಞಾಸೆ, ಮುಖ್ಯ ವಾಹಿನಿಯ ಚರ್ಚೆಗೆ ಒಳಪಟ್ಟಿದ್ದನ್ನು ಕಂಡಿರಾ? ಊಹೂಂ. ಅರ್ನಬ್ ಗೋಸ್ವಾಮಿ, ರಾಜದೀಪ ಸರದೇಸಾಯಿ, ಕರಣ್ ಥಾಪರ್, ಬರ್ಖಾ ದತ್ತ ಇತ್ಯಾದಿಯಾಗಿ ಯಾರೂ ಏಕೆ ಚರ್ಚೆಗೆ ಈ ವಿಷಯ ತೆಗೆದುಕೊಳ್ಳಲಿಲ್ಲ? ಅದೇನು ಟಿ.ಆರ್.ಪಿ ಸಂಬಂಧಿತ ನಿರಾಕರಣೆಯೋ ಅಥವಾ ಒಂದು ಕೋಮಿನ ಸುತ್ತದ ಕಥೆಯನ್ನು ಕೆದಕುವ ರಗಳೆ ಏಕೆಂದು ಸುಮ್ಮನಾದರೋ ಗೊತ್ತಿಲ್ಲ. ಟಿವಿ ಮಾಧ್ಯಮದಲ್ಲಿನ ವಾರ್ತೆಗಳಲ್ಲಿ ಕೆಸಿಆರ್ ವಿರುದ್ಧದ ಹೇಳಿಕೆಗಳು ಪ್ರತಿಪಕ್ಷದಿಂದ ಬಂದರೂ ನಿಜ಼ಾಮನ ಕುರಿತಾಗಿ ಮಾತನಾಡಿದ್ದು ಕಾಣಲಿಲ್ಲ ಅಥವಾ ತೋರಿಸಲಿಲ್ಲ. ಸಾಮಾನ್ಯವಾಗಿ ಟ್ವಿಟರ್ ನಲ್ಲಿಯಾದರೂ ನಡೆಯುವ ಚರ್ಚೆ ಈ ಬಾರಿ ನಡೆಯಲಿಲ್ಲ. ತತ್ಸಂಬಂಧದ ೫೦ ಟ್ವೀಟ್ ಗಳಲ್ಲಿ, ಶೇಖಡ ೯೫ ರಷ್ಟು ಕೆಸಿಆರ್ ನ ಮಾತನ್ನು ಒಪ್ಪಿರದಿದ್ದರೂ ವಿಷಯ “Trending” ಆಗಲೇ ಇಲ್ಲ. ಹಾಗಾದರೆ ನಿಜವಾಗಿಯೂ ನಿಜ಼ಾಮನು ಆ ಮಟ್ಟದ ದೇಶಭಕ್ತನೇ, ಜಾತ್ಯಾತೀತ ರಾಜನೇ; ಒಮ್ಮೆ ಬೂಧಿ ಮುಚ್ಚಿದ ಕೆಂಡವನ್ನು ಕೆದಕೋಣ.

ಹದಿನೆಂಟನೆಯ ಶತಮಾನದ ಆದಿ ಭಾಗದಲ್ಲಿ, ಮೊಘಲ್ ದೊರೆ ಔರಂಗಜ಼ೇಬ್ ನಿಧನ ಹೊಂದಿದ. ಅದಕ್ಕೂ ಮುನ್ನವೇ ದಕ್ಷಿಣ ಭಾರತದ ಹಿಡಿತವನ್ನು ಕಳೆದುಕೊಳ್ಳುತ್ತಲೂ ಇದ್ದ. ಇದು ಮರಾಠರು ಪ್ರಬಲರಾಗುತ್ತಿದ್ದ ಕಾಲ. ಅಸಲಿಗೆ ಹೈದರಾಬಾದ್ನಲ್ಲಿ ಆಸಫ್ ಜ಼ಾ ಸಂಸ್ಥಾನ ಪ್ರಾರಂಭವಾದದ್ದೇ ಆಗಿನಿಂದ. ಇಂದಿನ ಉಸ್ಬೇಕಿಸ್ತಾನ್ ದೇಶದ ಸಮರಖಂಡದಿಂದ ಬಂದವರೇ “ನಿಜ಼ಾಮ”ರಾದವರು. ಮೊಘಲರ ಕೈ ಕೆಳಗಿನ ಕೆಲಸಕ್ಕೆಂದು ಸಮರಖಂಡದಿಂದ ಸಾಕಷ್ಟು ಜನ ಬಂದಿದ್ದರು. ಹೈದೆರಾಬಾದಿನಲ್ಲಿ ಮೊಘಲರಿಂದ ನಿಯುಕ್ತಿಗೊಂಡ ವೈಸ್‍ರಾಯ್ ತಾನು ಸ್ವತಂತ್ರ್ಯ ಎಂದು ಹೇಳಿಕೊಳ್ಳಲು ಪ್ರಾರಂಭಿಸಿದ್ದ. ಖಮರ್ ಉದ್ದಿನ್ ಖಾನ್ ನಿಂದ ಹಿಡಿದು ಒಸ್ಮಾನ್ ಅಲಿ ಖಾನ್‍ರ ವರೆಗೆ ೭ ಜನ ನಿಜ಼ಾಮರು ಹೈದರಾಬಾದ್ ಪ್ರಾಂತವನ್ನು ಆಳಿದ್ದಾರೆ. ಈ ಏಳನೆಯ ನಿಜ಼ಾಮ ಬಹಳ ಸ್ಥಿತಿವಂತನಾಗಿದ್ದ. ಹಾಗೂ ಕೆಸಿಆರ್ ರ ಹೇಳಿಕೆ ಈ ನಿಜ಼ಾಮನ ಕುರಿತಾದದ್ದೇ. ಜಾನ್ ಜ಼ುಬ್ರಜ಼ೂಕಿ ಎಂಬ ಲೇಖಕರು ತಮ್ಮ ಪುಸ್ತಕ “The last Nizam” ದಲ್ಲಿ ಸಾಕಷ್ಟು ವಿಷಯಗಳನ್ನು ತಿಳಿಸಿಕೊಡುತ್ತಾರೆ. ಅವರ ಪ್ರಕಾರ ನಿಜ಼ಾಮ್ ಉಸ್ಮಾನ್ ಅಲಿ ಖಾನ್ ವಿಶ್ವದ ಅತಿ ಶ್ರೀಮಂತ ರಾಜನಾಗಿದ್ದ. ಮಹಾ ಯುದ್ಧ ೧, ೨ ರಲ್ಲಿ ಬ್ರಿಟಿಷರ ಜೊತೆ ನಿಂತಿದ್ದ ಹಾಗೂ ಬ್ರಿಟಿಷರಿಗೆ ಧನ ಸಹಾಯ ಮಾಡಿದ್ದ, ಅಗತ್ಯ ಬಿದ್ದಾಗ ಸೇನೆಯನ್ನೂ ಬ್ರಿಟಿಷರ ಪರವಾಗಿ ಸಜ್ಜುಗೊಳಿಸಿಕೊಡುತ್ತಿದ್ದ. ಅಮೇರಿಕದ ನ್ಯೂ ಯಾರ್ಕ್ ಟೈಮ್ಸ್, ಮಾರ್ಚ್ ೧೯೧೫ ರಲ್ಲಿ ನಿಜ಼ಾಮ ಬ್ರಿಟಿಷರಿಗೆ ೨೦ ಲಕ್ಷ ಯು.ಎಸ್ ಡಾಲರ್ ಮೌಲ್ಯದ ಚಿನ್ನವನ್ನು ನೀಡಿದ್ದ ಎಂದು ವರದಿ ಮಾಡಿದೆ. (ಆ ಕಾಲದಲ್ಲಿ ಯು ಎಸ್ ಡಾಲರ್ ಭಾರತದ ರುಪಾಯಿಯಷ್ಟೇ ಮೌಲ್ಯವಿತ್ತು ಎಂದು ಗಮನಿಸಿ) ಆದ ಕಾರಣದಿಂದಲೇ ಬ್ರಿಟಿಷರು ನಿಜ಼ಾಮನಿಗೆ ಸಾಕಷ್ಟು ಮರ್ಯಾದೆಯನ್ನು ಕೊಡುತ್ತಿದ್ದರು. ಭಾರತದಲ್ಲಿನ ರಾಜರುಗಳನ್ನು, ಬ್ರಿಟಿಷ್ ಅಧಿಕಾರಿಗಳು HH (His Highness) ಎಂದು ಸಂಬೋಧಿಸುತ್ತಿದ್ದರೆ, ನಿಜ಼ಾಮನನ್ನು HEH (His Exalted Highness) ಎಂದು ಸಂಬೋಧಿಸುತ್ತಿದ್ದರು. ದೇಶಕ್ಕೆ ಸ್ವಾತಂತ್ರ್ಯ ಸಿಗುವ ಆಸುಪಾಸಿನಲ್ಲಿ ಇವನ ವೈಯುಕ್ತಿಕ ಆಸ್ತಿ ೧೫೦ ಕೋಟಿ ರೂಪಾಯಿಗಳು. ಅದರಲ್ಲಿ ೩೫ ಕೋಟಿಯಷ್ಟು ಹಣದ ರೂಪದಲ್ಲಿ ಉಳಿದದ್ದು ಮುತ್ತು, ರತ್ನ, ವಜ್ರ-ವೈಡೂರ್ಯ, ಬಂಗಾರ ರೂಪದಲ್ಲಿ. ಇಂಥ ಸಿರಿವಂಥ ನಿಜ಼ಾಮನ ಆಸ್ತಿಯು ಹೆನ್ರಿ ಫೋರ್ಡ್ ಹಾಗೂ ಅವನ ಮಕ್ಕಳ ಒಟ್ಟು ಆಸ್ಥಿಯ ದುಪ್ಪಟ್ಟಿಗಿಂತಲೂ ತುಸು ಹೆಚ್ಚೇ ಇತ್ತು. ಮತ್ತೆ ಕೆಲವರು ಅಭಿಪ್ರಾಯಪಟ್ಟು ಪ್ರಾಯಶಃ ಈ ಆಸ್ತಿಯು ಎಷ್ಟಿತ್ತೆಂದು ನಿಖರವಾಗಿ ಹೇಳಬಲ್ಲವರು ಕೇವಲ ನಿಜ಼ಾಮನಷ್ಟೇ ಎಂದಿದ್ದಾರೆ. ಕಿಂಗ್ ಕೋಠಿ ಅರಮನೆಯಲ್ಲಿ ನೆಲೆಸಿದ್ದ ನಿಜ಼ಾಮ್ ಉಸ್ಮಾನ್ ಅಲಿ ಖಾನ್, ತನ್ನ ಪೂರ್ವಜರಿದ್ದ ಚೌಮಹಲ್ ಅರಮನೆಯಲ್ಲಿ ನೆಲೆಸಲಿಲ್ಲ.  ಇನ್ನು ಕಿಂಗ್ ಕೋಠಿಯ ತಿಜೋರಿಯನ್ನು ವರ್ಣಿಸುತ್ತ ಅದು ೧೨೦ ಅಡಿ ಉದ್ದ, ೪೦ ಅಡಿ ಅಗಲದ್ದು ಎಂದು ಹೇಳುವ ದಾಖಲೆಗಳಿವೆ. ಹಲವಾರು ಲೇಖಕರು ಅದರ ಬಗ್ಗೆ ಬರೆದೂ ಇದ್ದಾರೆ.

ಇನ್ನು ನಿಜ಼ಾಮ ಮಾಡಿರುವ ದಾನ ಕಾರ್ಯಗಳು ಸ್ಮರಿಸುವಂತಹದ್ದು. ಭಾರತ ರತ್ನ ಮದನ ಮೋಹನ ಮಾಲವೀಯರ ಕನಸಿನ ಕೂಸಾದ ಬೆನಾರಸ್ ಹಿಂದೂ ಯೂನಿವರ್ಸಿಟಿಗೆ ಹಣ ನೀಡಿದ್ದ ಎಂದೂ ಹೇಳಲಾಗಿದೆ. ಅದರ ಹಿಂದೊಂದು ಕಥೆಯೂ ಇದೆ. ಕಥೆಯ ಸತ್ಯಾಸತ್ಯತೆ ಬಗ್ಗೆ ಸಂಪೂರ್ಣವಾದ ಮಾಹಿತಿ ಇಲ್ಲದಿದ್ದರೂ, ಈ ಕಥೆ ಚಾಲ್ತಿಯಲ್ಲಿದೆ. ನಮಗೆಲ್ಲಾ ತಿಳಿದಿರುವ ಹಾಗೆ ಮದನ್ ಮೋಹನ್ ಮಾಲವೀಯ ಅತ್ಯದ್ಭುತ ಸಂಘಟಕ. ಹಣವನ್ನು ಒಟ್ಟುಗೂಡಿಸುವಲ್ಲಿ ಎತ್ತಿದ ಕೈ. ಒಮ್ಮೆ ಮಾಲವೀಯರು ನಿಜ಼ಾಮ ಉಸ್ಮಾನ್ ಅಲಿಯ ಬಳಿ ಬಂದು ಹಿಂದೂಗಳಿಗಾಗಿಯೇ ಒಂದು ವಿಶ್ವವಿದ್ಯಾಲಯ ತೆರೆಯುವ ದೃಷ್ಟಿಯಿಂದ ಹಣ ಸಂಗ್ರಹಿಸುತ್ತಿದ್ದೇನೆಂದು ಹೇಳಿದಾಗ ಉದ್ರಿಕ್ತಗೊಂಡ ನಿಜ಼ಾಮ ತನ್ನ ಚಪ್ಪಲಿಯನ್ನು  ಮಾಲವೀಯರತ್ತ ಎಸೆದನಂತೆ. ಇದೇ ನನ್ನ ಕೊಡುಗೆ ಎನ್ನುವಂತೆ. ಮಾಲವೀಯರು ಚಪ್ಪಲಿಯನ್ನು ಸ್ವೀಕರಿಸಿ, ಹೊರಕ್ಕೆ ಒಯ್ದು ಮಾರುಕಟ್ಟೆಯಲ್ಲಿ ಹರಾಜಿಗೆ ಇಟ್ಟು ಹಣ ಮಾಡಿಕೊಳ್ಳೋಣವೆನ್ನುವಷ್ಟರಲ್ಲಿ, ಆ ಚಪ್ಪಲಿಯನ್ನು ಯಾರೋ ಇಟ್ಟುಕೊಳ್ಳುವುದು ತನ್ನ ಘನತೆಗೆ ಸರಿಹೊಂದುವುದಿಲ್ಲವೆಂದು ನಿಜ಼ಾಮನು ಚಪ್ಪಲಿಯನ್ನು ಮರುಪಡೆದು ಸುಮಾರು ಹತ್ತು ಲಕ್ಷ ರೂಪಾಯಿಗಳನ್ನು ವಿಶ್ವವಿದ್ಯಾಲಯದ ನಿರ್ಮಾಣಕ್ಕೆ  ನೀಡಿದ ಎನ್ನುವ ಕಥೆ ಇದೆ. ಅದಲ್ಲದೇ ತಿರುಪತಿಗೆ, ಭದ್ರಾಚಲಂ ದೇವಸ್ಥಾನಕ್ಕೆ, ಶ್ರೀ ರಾಮಬಾಗ್ ದೇವಸ್ಥಾನಕ್ಕೆ, ಯಾದ್ಗೀರ್‍ ಗುಟ್ಟ ದೇವಸ್ಥಾನಕ್ಕೆ ಸಾಕಷ್ಟು ಧನ ಸಹಾಯ ಮಾಡಿದ್ದಾಗಿ ಹಲವರು ಹೇಳುತ್ತಾರೆ. ಇವಷ್ಟೇ ಅಲ್ಲದೇ ರಸ್ತೆ ಕಾಮಗಾರಿ, ರೈಲ್ವೇ, ಆಣೆಕಟ್ಟುಗಳು, ನಿಜ಼ಾಮ್‍ಸಾಗರ್ ಜಲಾಶಯ, ನಿಲೋಫ಼ರ್ ಆಸ್ಪತ್ರೆ, ಕ್ಯಾನ್ಸರ್ ಆಸ್ಪತ್ರೆ ……… ಕೊನೆಗೆ ಹೈದರಾಬಾದ್ ಭಾರತಕ್ಕೆ ಒಗ್ಗೂಡಿ ಆಂಧ್ರ ಪ್ರದೇಶ ರಾಜ್ಯವಾದಾಗ, ಅಲ್ಲಿನ ವಿಧಾನ ಸಭೆಗೆ ಹೊಸತೊಂದು ಕಟ್ಟಡ ಕಟ್ಟುವ ಅವಶ್ಯಕತೆಯೂ ಇರಲಿಲ್ಲವಂತೆ. ಕಾರಣ ಅಲ್ಲಿ ನಿಜ಼ಾಮರ ಟೌನ್ ಹಾಲ್ ಇತ್ತು, ಹಾಗೂ ಅದನ್ನೇ ವಿಧಾನಸಭೆಯಾಗಿ ಬಳಸಿಕೊಂಡರು; ಕಿಂಗ್ ಕೋಠಿಯ ಒಂದು ಭಾಗವನ್ನು ಸರ್ಕಾರಿ ಆಸ್ಪತ್ರೆಯಾಗಿ ಈಗಲೂ ಬಳಸುತ್ತಿದ್ದಾರೆ.

ಈಗ ಸ್ವಲ್ಪ ನಿಜ಼ಾಮನ ಆಳ್ವಿಕೆಯಲ್ಲಿ ನಡೆದ ದುಷ್ಕೃತ್ಯಗಳು, ಅರಾಜಕತೆ, ಹಿಂದೂ ಮುಸ್ಲಿಮ್ ಪಕ್ಷಪಾತ… ಹೀಗೆ ಆಗ ನಡೆಯುತ್ತಿದ್ದ ಹತ್ತು ಹಲವು ವಿಷಯಗಳತ್ತ ಗಮನ ಕೊಡೋಣ.
ಭಾರತ ಬ್ರಿಟಿಷರಿಂದ ಸ್ವಾತಂತ್ರ್ಯ ಗಳಿಸುವ ಮುನ್ನ ನಡೆದ ಪ್ರಮುಖ ಘಟನೆಗಳನ್ನು ಕೆಲವೇ ದೇಶಭಕ್ತ ಸಂಘಟನೆಗಳು, ಪುಸ್ತಕ-ಪ್ರಕಾಶನಗಳು ಮಾತ್ರ ನೆನಪಿಸಿಕೊಳ್ಳುತ್ತವೆ, ಉಳಿದವರು ಆ ಸತ್ಯವನ್ನು ಹೇಳದೇ ಅನುಕೂಲಸಿಂಧುವಿಗೆ ಒಪ್ಪಿಗೆಯಾಗುವ ಹಾಗೆ ತಿರುಚುತ್ತಾರೆ. ಅಸಲಿಗೆ ಆದದ್ದೇನೆಂದರೆ, ಲಾರ್ಡ್ ಮೌಂಟ್‍ಬ್ಯಾಟನ್ ವೈಸ್‍ರಾಯ್ ಆಗಿದ್ದ ಸಂದರ್ಭದಲ್ಲಿ, ಭಾರತಕ್ಕೆ ಸ್ವಾತಂತ್ರ್ಯ ನೀಡುವ ಮೊದಲು, ಪಾಕಿಸ್ತಾನವನ್ನು ರಚಿಸಿದ ನಂತರ, ಅದರನ್ವಯ ನಮ್ಮ ಅಖಂಡ ಭಾರತದ ಒಂದು ಭಾಗವನ್ನು ಪಶ್ಚಿಮ ಪಾಕಿಸ್ತಾನ ಎಂದು ಕರೆದು; ಹಿಂದೊಮ್ಮೆ ಬಂಗಾಳವನ್ನು ವಿಭಜಿಸುವ ಹುನ್ನಾರ ವ್ಯರ್ಥವಾದ ಬಂಗಾಳದ ಭಾಗವನ್ನು ಪೂರ್ವ ಪಾಕಿಸ್ತಾನವೆಂದು ನಾಮಕರಣ ಮಾಡಿದ ಬಳಿಕ, ಭಾರತವನ್ನು ಹೊಸತಾಗಿ ರಚಿಸಿದ. ಆ ಸಂದರ್ಭದಲ್ಲಿ ಭಾರತದಲ್ಲಿ ನೂರಾರು ಸಂಸ್ಥಾನಗಳಿದ್ದವು. ಅವೆಲ್ಲವನ್ನೂ ಒಗ್ಗೂಡಿಸುವ ಕೆಲಸವು ಅಷ್ಟು ಸುಲಭದ್ದಾಗಿರಲಿಲ್ಲ. ಕಾರಣ ಎಲ್ಲಾ ರಾಜರುಗಳು ತಮ್ಮ ಸಂಸ್ಥಾನ ಸ್ವತಂತ್ರ ಎಂದು ಸ್ವ-ಘೋಷಣೆಯಲ್ಲಿ ತೊಡಗಿದ್ದವು. ಇದನ್ನು ಮುಂಚಿತವಾಗಿಯೇ ಯೋಚಿಸಿ ಅದಕ್ಕೊಂದು ಪರ್ಯಾಯ ವ್ಯವಸ್ಥೆಯನ್ನು ಲಾರ್ಡ್ ಮೌಂಟ್‍ಬ್ಯಾಟನ್ ಸಿದ್ಧಪಡಿಸಿದ್ದ. ಅದನ್ನೇ ಭಾರತ ಸರಕಾರ ಕಾಯಿದೆ (Government of India Act, 1935) ಎಂದು ಕರೆದದ್ದು. ಅದರನ್ವಯ, ಸಂಸ್ಥಾನಗಳು ಒಂದೇ ಭಾರತಕ್ಕೆ ಇಲ್ಲಾ ಪಾಕಿಸ್ತಾನಕ್ಕೆ ಸೇರಬೇಕು, ಹಾಗೂ ಯಾವ ಸಂಸ್ಥಾನವೂ ಸ್ವತಂತ್ರ್ಯವಾಗಿ ಇರುವಂತಿಲ್ಲ ಎಂದು ಷರಾ ಬರೆದಾಗಿತ್ತು ಕಾಯಿದೆಯಲ್ಲಿ. ಆ ಸಂಸ್ಥಾನದ ಭೂಪ್ರದೇಶದ ಸರಹದ್ದು ಭಾರತಕ್ಕೋ, ಪಾಕಿಸ್ತಾನಕ್ಕೋ ಮುಂದುವರೆಯಲೇಬೇಕು (Continuity of land border) ಎಂಬ ಒಂದು ಬಲವಾದ ಕಾನೂನು ಸಹ ಇತ್ತು. ಭಾರತದ ಸ್ವಾತಂತ್ಯವಾಗುವವರೆಗೂ ಈ ಸಂಸ್ಥಾನಗಳು ಏಕಾಧಿಪತ್ಯ (suzerainty) ವ್ಯವಸ್ಥೆಯಲ್ಲಿ ಬ್ರಿಟಿಷರ ಅಡಿಯಾಳುಗಳಾಗಿದ್ದರೂ ಭಾರತ/ಪಾಕಿಸ್ತಾನದ ರಚನೆಯ ಆನಂತರ ಕಡ್ಡಾಯವಾಗಿ ಭಾರತಕ್ಕೆ ಇಲ್ಲವೇ ಪಾಕಿಸ್ತಾನಕ್ಕೆ ಸೇರಬೇಕಿತ್ತು. ಏಕಾಧಿಪತ್ಯವು ರಾಜರುಗಳಿಗೆ ಒಂದು ರೀತಿಯ ಸಮಾಧಾನ- ತೃಪ್ತಿ ನೀಡಿತ್ತಾದರೂ ಹೊಸತಾಗಿ ಬಂದ ಕಾನೂನು ಇರುಸುಮುರುಸನ್ನು ತಂದಿದ್ದು ಸುಳ್ಳಲ್ಲ. ಕೆಲವರು ಸಹರ್ಷದಿಂದ ಭಾರತಕ್ಕೆ ಒಗ್ಗೂಡಿದರೆ ಮತ್ತೆ ಕೆಲವರು ಕ್ಯಾತೆ ತೆಗೆದರು. ಹಾಗೆ ಭಾರತಕ್ಕೆ ವಿಲೀನರಾಗುವ ರಾಜರುಗಳಿಗೆ ಪ್ರಿವಿ ಪರ್ಸ್ /ರಾಜಧನ ಸಿಗುತ್ತಿತ್ತು.

ಇಲ್ಲಿ ಎರಡು ಸಂಗತಿಗಳನ್ನು ನೆನಪಿಸಿಕೊಳ್ಳಲೇಬೇಕು.
v     ಪಶ್ಚಿಮದಲ್ಲಿ, ಬಲೂಚಿಸ್ತಾನದ ನವಾಬ ಭಾರತದೊಂದಿಗೆ ವಿಲೀನನಾಗುತ್ತೇನೆಂದು ತನ್ನ ಇಂಗಿತ ವ್ಯಕ್ತಪಡಿಸಿದ್ದ. ಆದರೆ ಅಂದಿನ ಗೃಹ ಮಂತ್ರಿ, ಉಪ- ಪ್ರಧಾನ ಮಂತ್ರಿಗಳಾಗಿದ್ದ ಸರ್ದಾರ್ ವಲ್ಲಭಭಾಯಿ ಪಟೇಲರು ಆ ಪ್ರಸ್ತಾಪವನ್ನು ಒಪ್ಪಲಿಲ್ಲ. ಕಾರಣ ಬಲೂಚಿಸ್ತಾನ್ ಪ್ರಾಂತವು ಭಾರತದ ಭೂಪ್ರದೇಶದ ಜೊತೆ ತನ್ನ ಗಡಿ ಹಂಚಿಕೊಳ್ಳುತ್ತಿರಲಿಲ್ಲ. ಅದು ನ್ಯಾಯಸಮ್ಮತವಾಗಿ ಪಾಕಿಸ್ತಾನಕ್ಕೆ ಸೇರಬೇಕಿತ್ತು ಎಂಬುದು ಅವರ ವಾದವಾಗಿತ್ತು. ಕೊನೆಗೆ ಬಲೂಚಿಸ್ತಾನ್ ಪಾಕಿಸ್ತಾನದ ಭಾಗವಾಯ್ತು.
v     ಇನ್ನು ದಕ್ಷಿಣದಲ್ಲಿ ಹೈದರಾಬಾದ್ ನ ನಿಜಾಮ ತಾನು ವಿಲಯನ ಹೊಂದುವುದಾದರೆ ಪಾಕಿಸ್ತಾನದ ಜೊತೆಯೇ; ಇಲ್ಲದಿದ್ದರೆ ಸ್ವತಂತ್ರ ಸಂಸ್ಥಾನವಾಗಿ ಉಳಿಯುತ್ತೇನೆಂದು ಬೊಬ್ಬೆ ಇಡಲು ಆರಂಭಿಸಿದ. ಪಾಕಿಸ್ತಾನಕ್ಕೆ ಸೇರುವ ಯಾವ ಹಕ್ಕೂ, ಕಾನೂನೂ ಅವನಲ್ಲಿರಲಿಲ್ಲ. ಇವನ ಹಟಕ್ಕೆ ಮಣಿಯದೇ, ಜಾಣನಿಗೆ ಮಾತಿನ ಪೆಟ್ಟು ಕೋಣನಿಗೆ ದೊಣ್ಣೆಯ ಪೆಟ್ಟು ಎಂದು ಅರ್ಥೈಸಿಕೊಂಡ ಪಟೇಲರು, ಸೆಪ್ಟೆಂಬರ್ ೧೯೪೮ರಲ್ಲಿ ಆಪರೇಷನ್ ಪೋಲೋ ನಡೆಸಿಯೇ ಹೈದೆರಾಬಾದನ್ನು ಭಾರತಕ್ಕೆ ವಿಲಯನ ಮಾಡಿಸಬೇಕಾಯಿತು. ಈ ವಿಲಯನದ ಪೂರ್ವದಲ್ಲಿ ನಿಜ಼ಾಮನ ಅಟಾಟೋಪವನ್ನು ಕಂಡು, ರೋಸಿಹೋಗಿದ್ದ ಸರ್ದಾರ್ ಪಟೇಲರು ಹೈದರಾಬಾದನ್ನು “ಭಾರತದ ಹೊಟ್ಟೆಯೊಳಗಿನ ಕ್ಯಾನ್ಸರ್” ಎಂದು ಬಣ್ಣಿಸಿದ್ದರು. ಹೈದರಾಬಾದ್ ಭಾರತದ ಭೂಪಟದ ಮಧ್ಯದಲ್ಲಿಯೇ ಇತ್ತು. ಜೊತೆಗೆ ಇದರ ಸುತ್ತ ಇದ್ದ ಇತರೆ ಪ್ರಾಂತಗಳು ಯಾವ ಉಪದ್ರವವನ್ನೂ ಮಾಡದೇ ಭಾರತಕ್ಕೆ ವಿಲೀನವಾಗಿದ್ದವು.

ಈ ಸಂದರ್ಭದಲ್ಲಿಯೇ ಸರ್ದಾರ್ ಪಟೇಲರು, ಕನ್ನಯ್ಯಲಾಲ್ ಮನೆಕ್‍ಲಾಲ್ ಮುನ್ಷಿ (ಕೆ ಎಂ ಮುನ್ಷಿ, ಭಾರತೀಯ ವಿದ್ಯಾ ಭವನದ ಸ್ಥಾಪಕ) ಎಂಬ ಅಪ್ಪಟ ಗಾಂಧಿವಾದಿಯನ್ನು ಸಂಪರ್ಕಿಸಿ, ಅವರನ್ನು ಹೈದರಾಬಾದಿನ ಏಜೆಂಟ್ ಆಗಿರೆಂದು ಮನ ಒಲಿಸಿ ಅವರ ಸಹಾಯವನ್ನು ಪಡೆದರು. ಏಜೆಂಟ್ ಆಫ್ ಹದೆರಾಬಾದ್ ನ ಕೆಲಸ ರಕ್ಷಣಾ, ಸಂಪರ್ಕ, ಇನ್ನಿತರ ವಿಷಯವಾಗಿ ದೆಹಲಿಯ ಜೊತೆ ನಿಕಟ ಸಂಪರ್ಕದಲ್ಲಿರುವುದು. ಮುನ್ಷಿ ಇದೊಂದು ದೇಶದ ಕೆಲಸವಾದ್ದರಿಂದ, ಸಂಬಳವನ್ನು ಪಡೆಯೊಲ್ಲವೆಂದು ನಿರ್ಧರಿಸಿ ಹೈದರಾಬಾದ್ ಗೆ ಬಂದಿಳಿದು ದೆಹಲಿಯ ಸರಕಾರ,ಹೈದರಾಬಾದಿನ ನಡುವೆ ಸಂಬಂಧ ಸೇತುವಾಗಿ ಇದ್ದರು. ಅಲ್ಲಿನ ದಿನ ನಿತ್ಯದ ಚಟುವಟಿಕೆಗಳ ಬಗ್ಗೆ, ನಿಜ಼ಾಮನ ಬಗ್ಗೆ ಅವನ ದೌರ್ಬಲ್ಯ, ಲಾಲಸೆ, ಅರಾಜಕತೆ ಬಗ್ಗೆ, ಕೊನೆಗೆ ಅವೆಲ್ಲವೂ ಮಣ್ಣಾದ ಬಗ್ಗೆ ಒಂದು ಪುಸ್ತಕವನ್ನು ಬರೆದಿದ್ದಾರೆ. ಅದರ ಹೆಸರು “The End of an Era” ಎಂದು. ಮುನ್ಷಿಯವರು ಹೇಳುವ ಹಾಗೆ, ನಿಜ಼ಾಮನು ಮೂಲತಃ ಅಧಿಕಾರ ಹಾಗೂ ಹಣದ ದೌರ್ಬಲ್ಯವಿದ್ದವನು, ಹಾಗೂ ತಾನೇ ಬೆಳೆಸಿದ್ದ ತನ್ನ ಮಂತ್ರಿಗಳು / ಅಧಿಕಾರಿಗಳು / ಮೂಲಭೂತವಾದಿ ಮುಸ್ಲಿಮ್ ಸಂಘಟನೆಗಳನ್ನು ಬಹುವಾಗಿ ನಂಬಿಕೊಂಡಿದ್ದವನು. ಉದಾಹರಣೆಗೆ ರಜ಼ಾಕರು, ಮಜ್ಲಿಸ್ ಏ ಇತ್ತಿಹಾದ್ ಉಲ್ ಮುಸ್ಸುಲ್ಮೀನ್, ದೀನ್ದಾರ್ ಅಂಜುಮನ್ ಸಂಘಟನೆಗಳು. ಹಿಂದೂಗಳ ಇಸ್ಲಾಮೀಕರಣ, ಮಾತಾಂತರ ಆಗಲು ಒಪ್ಪದಿದ್ದರೆ ಹಿಂದೂಗಳ ಕಗ್ಗೊಲೆ, ಇವೆಲ್ಲವನ್ನೂ ವ್ಯವಸ್ಥಿತವಾಗಿ ನಡೆಸುತ್ತಿದ್ದ ಈ ಸಂಘಟನೆಗಳು ಅಲ್ಲಿನ ನಿಜ಼ಾಮನ ಆಳ್ವಿಕೆಯಲ್ಲೇ ರಾಜಾರೋಷವಾಗಿ ನಡೆಸುತ್ತಿದ್ದರೂ ಅದನ್ನು ತಡೆಯದೇ ರಾಜಧರ್ಮ ಪಾಲಿಸದೇ ತನ್ನ ಮೂಲ ಆಸಕ್ತಿಗಳಾದ ಹಣ ಒಗ್ಗೂಡುವಿಕೆಯಲ್ಲಿ ತೊಡಗಿದ್ದವನನ್ನು ಏನೆನ್ನಬೇಕು? ಜೊತೆಗೆ ಹೈದರಾಬಾದಿನ ಪ್ರಾಂತಗಳಲ್ಲಿ ಪ್ರಚಲಿತ ಭಾಷೆಗಳು ಬಹುಸಂಖ್ಯಾತರ ತೆಲುಗು, ಮರಾಠಿ, ಕನ್ನಡ. ಈ ಮೂರೂ ಭಾಷೆಗಳನ್ನು ಕಡೆಗಣಿಸಿ ಉರ್ದುವಿನಲ್ಲಿ ಮಾತ್ರ ಶಿಕ್ಷಣ ಒದಗಿಸಬೇಕೆಂದು ಕಾನೂನು ತಂದವನು ಇವನೇ. ಒಂದು ಕಾಲದಲ್ಲಿ ಹದರಾಬಾದಿನಲ್ಲಿ, ೮ ಹಿಂದುಗಳಿಗೆ ಒಂದು ಮುಸ್ಲಿಮ್ ಶಿಶು ಪಡೆಯುತ್ತಿದ್ದ ಶಿಕ್ಷಣದ ಪ್ರಮಾಣ, ಉರ್ದು ಮಾಧ್ಯಮದಿಂದ ಕ್ರಮೇಣ ೨ ಹಿಂದುಗಳಿಗೆ ಒಂದು ಮುಸ್ಲಿಮ್ ಶಿಶು ಶಿಕ್ಷಣ ಪಡೆಯುವಂತಾಯಿತು. ಈ ವಿಷಯವಾಗಿ ಸಾಕಷ್ಟು ಬಾರಿ ಬಹುಸಂಖ್ಯಾತರು ಪರಿಪರಿಯಾಗಿ ಕೇಳಿಕೊಂಡಿದ್ದರೂ ನಿಜ಼ಾಮ ಯಾವುದಕ್ಕೂ ತನ್ನ ಗಮನಹರಿಸಲೇ ಇಲ್ಲ.೧೯೩೯ ರಲ್ಲಿ ಉಸ್ಮಾನಿಯಾ ಯೂನಿವರ್ಸಿಟಿಯನ್ನು ಪ್ರಾರಂಭ ಮಾಡಿದ್ದು ಅಲಿಘರ್ ಮುಸ್ಲಿಮ್ ಯೂನಿವರ್ಸಿಟಿಯ ಸಂಪ್ರದಾಯದ ಮೇಲೆಯೇ. ಆ ವಿಷದ ಮನಸ್ಸಿನಿಂದಲೇ. ಮುನ್ಷಿ ಮತ್ತೊಂದು ವಿಚಾರವನ್ನು ತಿಳಿಸುತ್ತಾರೆ. ನಿಜ಼ಾಮನು ಜಿಪುಣನೂ ಆಗಿದ್ದ, ಹಾಗೂ ನಜರ್‍ ಗೆ (ತನ್ನನ್ನು ನೋಡಲು ಬರುವವರಿಗೆ) ಅಶ್ರಾಫಿಯನ್ನು ವಿಧಿಸುತ್ತಿದ್ದ. ಅಶ್ರಾಫಿ ಎಂದರೆ ಚಿನ್ನದ ನೆನಪಿನಕಾಣಿಕೆಯನ್ನು ರಾಜನಿಗೆ ಕೊಡುವುದು ಎಂದು. ಶ್ರೀಮಂತ, ಬಡವ, ದೀನ ದುರ್ಬಲರನ್ನು ಲೆಕ್ಕಿಸದೆ ನಜ಼ರ್ ಗಾಗಿ ಅಶ್ರಾಫಿ ಕಡ್ಡಾಯವಾಗಿತ್ತು.  ಹುಟ್ಟುಹಬ್ಬ, ವಿಶೇಷ ದಿನಗಳಲ್ಲಿ  ಅಶ್ರಾಫಿ ಯನ್ನು ಕೊಡಲು ಬರುವವರು ಹೆಚ್ಚಗೇ ಇರುತ್ತಿದ್ದರು. ಇನ್ನು ಒಮ್ಮೆ ಯೋಚಿಸಿ ಇಷ್ಟೆಲ್ಲಾ ಆದ ಮೇಲೆ ತಾನು ಸಾಹುಕಾರನಾಗದೇ ಮತ್ತೇನಾಗುತ್ತಾನೆಂದು? ಅಲ್ಲದೇ ಭಾರತದ ಜೊತೆ ವಿಲೀನವಾಗಲೇಬೇಕೆಂಬ ಪರಿಸ್ಥಿತಿ ಎದುರಾಗುತ್ತಿದ್ದಂತೆ ತಾನು ಎಲ್ಲರ ಹೆಸರಲ್ಲೂ ನ್ಯಾಸನಿಧಿ ಮಾಡಿಟ್ಟದ್ದರ ಬಗ್ಗೆಯೂ ಉಲ್ಲೇಖಗಳಿವೆ. ತನಗಿದ್ದ ಇಬ್ಬರೂ ಮಕ್ಕಳು ಲೋಲುಭಿಗಳಾದ್ದರಿಂದ, ತನ್ನ ಮೊಮ್ಮೊಗ, ಸೊಸೆ, ಹೆಂಡತಿ, ಯಾರೇ ಆದರೂ ಸರಿಯೇ ಒಟ್ಟಿನಲ್ಲಿ ಹಣ ತನ್ನ ಕುಟುಂಬದಲ್ಲೇ ಹರಿದಾಡಿಕೊಳ್ಳುವಂತೆ ಮಾಡಿದವನು ಈ ನಿಜ಼ಾಮನೇ.

ಕಾಸಿಂ ರಜ಼್ವಿ (kasim razvi) ಮೀರ್ ಲಾಯಿಕ್ ಅಲಿ ಎಂಬುವವರು ನಿಜ಼ಾಮನ ಸುತ್ತ ಇದ್ದುಕೊಂಡು ತಮಗೆ ಬೇಕಾದ್ದನ್ನು ಸಾಧಿಸಿಕೊಳ್ಳುತ್ತಿದ್ದರು. ಕಾಸಿಂ ರಜ಼್ವಿ ಅಲಿಘರ್ ಮುಸ್ಲಿಮ್ ಯೂನಿವರ್ಸಿಟಿಯ ಕುಡಿ. ಇದೇ ಅಲಿಘರ್ ಯೂನಿವರ್ಸಿಟಿ ಮುಸ್ಲಿಮ್ ಲೀಗ್‍, ಪಾಕಿಸ್ತಾನವನ್ನು ಹುಟ್ಟುಹಾಕಿದ್ದು ಎಂದು ಮರೆಯ ಬೇಡಿ. ರಿಜ಼್ವಿ ಅಪ್ರತಿಮ ಮಾತುಗಾರನೂ ಆಗಿದ್ದ. ಇನ್ನು ಲಾಯಕ್ ಅಲಿ, ಕಾಸಿಂ ರಜ಼್ವಿಯ ಆಪ್ತ, ಹೈದರಾಬಾದಿನ ಪ್ರಧಾನ ಮಂತ್ರಿಯೂ ಆಗಿದ್ದ. ರಜ಼್ವಿ ಮಜ್ಲಿಸ್ ಏ ಇತ್ತಿಹಾದ್ ಉಲ್ ಮುಸ್ಸುಲ್ಮೀನ್ ನ ನಾಯಕನೂ ಕೂಡ ಆಗಿದ್ದ. ರಜ಼್ವಿ ರಜ಼ಾಕರನ್ನು ಸಜ್ಜುಗೊಳಿಸಿ ಬಹುಸಂಖ್ಯಾತ ಹಿಂದುಗಳನ್ನು ಹಿಂಸಿಸಿ ಕೄರ ವರ್ತನೆ ತೋರುತ್ತಿದ್ದವನು. ದಕ್ಷಿಣದಲ್ಲಿ ಇಸ್ಲಾಮ್ ರಾಷ್ಟ್ರದ ಕೂಗನ್ನು ತರುತ್ತೇವೆ, ಉತ್ತರ ಭಾರತದ ಮುಸ್ಲಿಮರು ಭಾಗಿಯಾಗಿ ಎಂದು ಘಂಟಾಘೋಷವಾಗಿ ಆಹ್ವಾನ ನೀಡುತ್ತಾ ರಜ಼ಾಕರ ಸೈನ್ಯ  ಹಿಂದೂಗಳಲ್ಲಿ ನಡುಕ ಹುಟ್ಟಿಸುತ್ತಿತ್ತು. ಕೆಲವೊಮ್ಮೆ ರಜ಼ಾಕರು ಬ್ರಾಹ್ಮಣರ ವೇಷದಲ್ಲಿ ಅಮಾಯಕ ಮುಸ್ಲಿಮರನ್ನು ಕೆರಳಿಸಿ, ಇನ್ನಷ್ಟು ಹಿಂದು- ಮುಸ್ಲಿಮ್ ಜಗಳ ಹೊಡೆದಾಟಕ್ಕೆ ನಾಂದಿ ಹಾಡುತ್ತಿದ್ದರು. ಉಸ್ಮಾನಿಯಾ ಯೂನಿವರ್ಸಿಟಿಯಲ್ಲಿ ಹಿಂದೂ ಹಬ್ಬಗಳನ್ನು ಆಚರಿಸುವಂತಿಲ್ಲ, ಹಿಂದೂಗಳು ಯಾರೂ ತಮ್ಮ ಸಂಪ್ರದಾಯದ ಉಡುಗೆ ತೊಡುವಂತಿಲ್ಲ, ಹೀಗೆ ಒಂದೇ ಎರಡೇ, ಹಿಂದೂಗಳನ್ನು ಅತಿ ಹೀನಾಯವಾಗಿ ನೋಡುವಂತೆ ವಿವೇಚನೆಯುಳ್ಳ ಸಾಧು ಸ್ವಭಾವದ ಮುಸ್ಲಿಮರಿಗೆ ವಿಷ ಬೀಜ ಬಿತ್ತುತ್ತಿದ್ದುದು ರಜ಼್ವಿ ಹಾಗೂ ಅವನ ಸಂಘಟನೆ. ಅಲ್ಲದೇ ರಜ಼ಾಕರಿಗೆ ಆ ಪ್ರಾಂತದಲ್ಲಿ ಎಲ್ಲ ಸೌಕರ್ಯಗಳೂ ಉಚಿತವಾಗಿ, ಹೇರಳವಾಗಿ ದೊರೆಯುತ್ತಿತ್ತು. ಅದನ್ನು ಪ್ರಶ್ನಿಸುವ ಧೈರ್ಯ ಯಾರೂ ತೋರುತ್ತಿರಲಿಲ್ಲ. ಇನ್ನು ದೀನ್‍ದಾರ್ ಅಂಜುಮನ್ ಸಂಘವು ಹಿಂದೂಗಳನ್ನು ಓಲೈಸಿ ಚೆನ್ನಬಸವೇಶ್ವರನೇ ತಾನು ಎಂದು ಸಂಘಟನೆಯ ನಾಯಕ ಸಿದ್ದಿಕ್ ಹುಸೇನ್ ಹೇಳಿಕೊಂಡು ತಿರುಗುತ್ತಾ, ಲಿಂಗಾಯತರ ಮತಾಂತರವನ್ನು ಅವ್ಯಾಹತವಾಗಿ ನಡೆಸಿದ. ಸತತ ಪ್ರಯತ್ನದ ನಂತರ ದೀನ್ದಾರ್ ಅಂಜುಮನ್ ಸಂಘಟನೆಯನ್ನು ನಿಷೇಧಿಸಲಾಯಿತು. ಲಾಯಿಕ್ ಅಲಿಯನ್ನು, ಕಾಸಿಂ ರಜ಼್ವಿಯನ್ನು, ಗೃಹ ಬಂಧನದಲ್ಲಿಡಲಾಗಿತ್ತು. ಲಾಯಿಕ್ ಅಲಿ ಭಾರತ ಬಿಟ್ಟು ಪಾಕಿಸ್ತಾನ ಸೇರುತ್ತಾನೆಂದ ಮೇಲೆಯೇ ಅವನನ್ನು ಬಿಡುಗಡೆಗೊಳಿಸಿದ್ದು.  ಈ ಎರಡೂ ಮುಸ್ಲಿಮ್ ಪರ ದನಿ ಎತ್ತುತ್ತಿದ್ದುದು ಮುಸ್ಲಿಮರ ಉದ್ಧಾರಕ್ಕಂತೂ ಅಲ್ಲ. ತಾವು ಪ್ರತಿಜ್ಞೆಯಿತ್ತ, “ಬಂಗಾಳದ ಅಲೆಗಳು ನಿಜ಼ಾಮನ ಕಾಲು ತೊಳೆಯುವವರೆಗೂ ನಾವು ಸುಮ್ಮನಾಗುವುದಿಲ್ಲ” ಎಂಬುದನ್ನು ಸಾಕಾರಗೊಳಿಸಲೆಂದೇ; ಭಾರತಕ್ಕೆ ಎಂದೂ ಹೈದರಾಬಾದನ್ನು ಸೇರಿಸಬಾರದು ಎಂಬ ರಚ್ಚಿನಿಂದಲೇ. ಸದಾಕಾಲ ತಾವು ಮೊಹಮ್ಮದ್ ಘಸ್ನಿ, ಬಾಬರರ ವಂಶಸ್ಥರು ಹಾಗಾಗಿ ಆಸಫ಼್ ಜಾಹಿ ಬಾವುಟವನ್ನು ಕೆಂಪು ಕೋಟೆಯ ಮೇಲೆ ಹಾರಿಸುತ್ತೇವೆ ಎಂದು ಭಾರತದ ಸ್ವಾತಂತ್ರ್ಯದ ನಂತರವೂ ಹೇಳುತ್ತಿದ್ದರೆಂದರೆ ಅವರೆಷ್ಟು ಮತಾಂಧರಿದ್ದಿರಬಹುದು. (ಲಾಯಿಕ ಅಲಿ, ರಜ಼್ವಿ ಯ ಬಳಿಕ ಮಜ್ಲಿಸ್ ಏ ಇತ್ತಿಹಾದ್ ಉಲ್ ಮುಸ್ಸುಲ್ಮೀನ್ ಅಬ್ದುಲ್ ವಾಹಿದ್ ಒವೈಸಿಯ ನೇತೃತ್ವದಲ್ಲಿ ನಡೆಯಿತು ನಂತರ ಅವರ ಮಗ ಸುಲ್ತನ್ ಸಲಹುದ್ದಿನ್ ಒವೈಸಿ ತದನಂತರ ಇಂದಿನ ಶಾಸಕ, ಸಂಸದ ಸಹೋದರರಾದ ಅಕ್ಬರುದ್ದಿನ್, ಅಸಾದುದ್ದಿನ್ ಒವೈಸಿ ಪಾಲಾಗಿದೆ. ಇಷ್ಟು ಹೇಳಿದರೆ ಸಾಕೇನೋ ಇಂದಿನ ಒವೈಸಿಗಳ ಹೇಳಿಕೆಗಳು ಯಾವ ದೃಷ್ಟಿಕೋನ ಹೊಂದಿದೆ ಎಂದು ತಿಳಿದಿಕೊಳ್ಳಲು.)

ಪಾಕಿಸ್ತಾನದ ಜನಕ ಮೊಹಮ್ಮದ್ ಅಲಿ ಜಿನ್ನಾ, ನಿಜ಼ಾಮ್ ಉಸ್ಮಾನ್ ಅಲಿ ಖಾನ್ ಜೊತೆ ಸೌಹಾರ್ದ ಸಂಬಂಧವನ್ನು ಹೊಂದಿದ್ದನು. ಹೈದರಾಬಾದ್ ಭಾರತಕ್ಕೆ ಸೇರಿಕೊಳ್ಳುವುದೊಂದೇ ದಾರಿ ಎಂಬ ವಾತಾವರಣ ಸೃಷ್ಟಿಯಾದಾಗ, ನಿಜ಼ಾಮನು ಜಿನ್ನಾನಿಗೆ ಅಭಯ ಹಸ್ತವನ್ನು ಯಾಚಿಸಿದ್ದ. ಜಿನ್ನಾ ಸಹ ನ್ಯಾಯದ ದಾರಿ ಹಿಡಿಯದೇ, ಭಾರತದ ವಿರುದ್ಧವೇ ನಿಜ಼ಾಮನನ್ನು ಎತ್ತಿಕಟ್ಟುತ್ತಿದ್ದ. ಭಾರತ ಎಂದಾದರೂ ಬಲವಂತದ ಹೇರಿಕೆಯಿಂದ ಹೈದರಬಾದನ್ನು ತಮ್ಮದಾಗಿಸಲು ಮುಂದಾದರೆ ತಾನು ಕಾಶ್ಮೀರದಲ್ಲಿ ಸಲ್ಲದ ಚಟುವಟಿಕೆ ನಡೆಸಿ ದೆಹಲಿಯವರ ಗಮನವನ್ನು ಹೈದರಾಬಾದಿನಿಂದ ಹೊರ ತೆಗೆಸುತ್ತೇನೆಂದು ಭಾಷೆಯನ್ನೂ ಕೊಟ್ಟಿದ್ದ. ಆದರೆ ದೈವ ನ್ಯಾಯದ ಕಡೆಯೇ ಇತ್ತು. ಜಿನ್ನಾ ಅನಾರೋಗ್ಯದಿಂದ ತೀರಿಕೊಂಡ. ನಿಜ಼ಾಮನಿಗೆ ಸಹಾಯ ಮಾಡುವ ಮತ್ತೊಂದು ಕೈ ಇಲ್ಲದಾಯಿತು.

ನಿಜ಼ಾಮ ಭಾರತಕ್ಕೆ ಸೇರದೇ ಸ್ವತಂತ್ರ್ಯವಾಗಿ ಉಳಿದುಕೊಳ್ಳುವುದಕ್ಕೆ, ಯುಕ್ತಿ ಬಳಸಿಯಾಗಿತ್ತು. ಶಕ್ತಿ ಬಳಸಿಯಾಗಿತ್ತು. ಪ್ರಭಾವ, ಶಿಫಾರಸ್ಸುಗಳು ಕೈಕೊಟ್ಟಿದ್ದವು. ಇನ್ನು ಉಳಿದದ್ದು ತನ್ನ ದುಡ್ಡಿನ ತಾಕತ್ತು. ಮೇಲಿನ ಎಲ್ಲಾ ಕಾರ್ಯತಂತ್ರಗಳು ವಿಫಲವಾಗತೊಡಗಿದಾಗ, ನಿಜ಼ಾಮ್ ತನ್ನ ಕಡೆಯ ದಾಳವನ್ನು ನಡೆಸಿದ. ಅದುವೇ ತನ್ನೆಲ್ಲಾ ಸಂಪತ್ತನ್ನು ಹೈದರಾಬಾದಿನಿಂದ ಹೊರಕ್ಕೆ ತೆಗೆದುಕೊಂಡು ಹೋಗಿ, ತಾನು ಈಜಿಪ್ಟ್ ನ ಫರೂಕ್ ನ ಅರಮನೆಲ್ಲಿ ನೆಲೆಸುವುದೆಂದು. ಆ ವಿಷಯವಾಗಿ ಕಾಟನ್ ಸಿಡ್ನಿ ಎಂಬ ಅಂತಾರಾಷ್ಟ್ರೀಯ ಕಳ್ಳನ ಜೊತೆ ನಿರತ ಸಂಪರ್ಕ ಹೊಂದತೊಡಗಿದ್ದನು. ಕಾಟನ್ ಸಿಡ್ನಿ ಮಹಾಯುದ್ಧದ ಕಾಲದಲ್ಲಿ ವಿಮಾನಯಾನ ಮಾಡುತ್ತಿದ್ದವನು. ಆ ಅನಿರ್ಬಂಧತೆಯಿಂದಲೇ ಹೈದರಾಭಾದಿನಿಂದ ದೂರದ ನಾಡಿನಲ್ಲಿ ಕಚ್ಚಾ ವಿಮಾನ ನಿಲ್ದಾಣವನ್ನು ನಿರ್ಮಿಸಿಕೊಂಡು ನಿಜ಼ಾಮನನ್ನು ಭೇಟಿಯಾಗುತ್ತಿದ್ದನು. ರಾತ್ರಿ ಯಾವಾಗಲೋ ಬರುತ್ತಿದ್ದ ಕಾರಣ ಭಾರತಕ್ಕೆ ಈ ವಿಷಯ ಗೊತ್ತಾದದ್ದು ತಡವಾಗಿಯೇ. ಈ ರೀತಿ ಬರುತ್ತಿದ್ದ ಕಾಟನ್ ಸಿಡ್ನಿ ತನಗೆ ಸಿಗಬೇಕಿದ್ದ ಕೋಟಿಗಟ್ಟಲೆ ಹಣಕ್ಕೆ ೫೦೦ ಟನ್ ನಷ್ಟು ಮಶೀನ ಗನ್, ಗ್ರೆನೇಡ್, ಬಾಂಬ್ ಗಳನ್ನು ಪೂರೈಸುವುದಾಗಿ ಒಪ್ಪಿಕೊಂಡಿದ್ದನು. ಹಾಗೆಯೇ ಸರಬರಾಜು ಮಾಡಿದ್ದನು ಎನ್ನಲಾಗಿದೆ. ಸೆಪ್ಟೆಂಬರ್ ೧೩, ೧೯೪೮ ರಂದು  ಪೋಲೀಸ್ ತುಕಡಿಗಳು ಹೈದರಾಬಾದ್‍ಗೆ ಬರಲು ಆಗಮಿಸಿದವು. ಕೇವಲ ಮೂರು ದಿನಗಳ ಕ್ಷಿಪ್ರ ಕಾರ್ಯಾಚರಣೆಯಿಂದಾಗಿ, ಸೆಪ್ಟೆಂಬರ್ ೧೭ ೧೯೪೮ ರಂದು ಪೋಲೀಸ್ ಕಾರ್ಯಾಚರಣೆ / ಆಪರೇಷನ್ ಪೋಲೋ ನಡೆಯುವ ಸ್ವಲ್ಪ ಹೊತ್ತಿನ ಮುಂಚೆ ನಿಜ಼ಾಮ ಕಿಂಗ್ ಕೋಠಿಯಲ್ಲಿ ದಿನದ ನಮಾಜ಼ು ಮುಗಿಸಿ ಕಾಟನ್ ಸಿಡ್ನಿ ಸಹಾಯದಿಂದ ಇಜಿಪ್ಟ್ ಗೆ ಹಾರಿಹೋಗುವ ಯೋಜನೆಯಲ್ಲಿದ್ದ. ಅದೇ ಸಮಯವೇ ಭಾರತದ ಪೋಲೀಸರು ಇಡಿಯ ಹೈದರಾಬಾದ್ ಅನ್ನು ಸುತ್ತುವರೆದಾಗ ನಿಜ಼ಾಮ್ ಉಸ್ಮಾನ್ ಅಲಿ ಖಾನ್ ಭಾರತಕ್ಕೆ ಶರಣಾಗಬೇಕಾಯ್ತು. ಹೈದರಾಬಾದ್ ಭಾರತದ ಭಾಗವಾಯ್ತು. ನಿಜ಼ಾಮನಿಗೆ ರಾಜ ಬಹದ್ದೂರ್ ಎಂಬ ಗೌರವ ಸ್ಥಾನವನ್ನು ದೆಹಲಿಯ ಸರ್ಕಾರ ಕೊಟ್ಟು ಮರ್ಯಾದೆಯಿಂದ ನೋಡಿಕೊಂಡಿತು.

ಇಷ್ಟೆಲ್ಲವೂ ಹೇಳಿದ ಮೇಲೆ ನಿಜ಼ಾಮ ನಿಸ್ಸಂಶಯವಾಗಿ ತನ್ನ ರಾಜಧರ್ಮವನ್ನು ಪಾಲಿಸಲಿಲ್ಲ ಎಂಬ ತೀರ್ಮಾನಕ್ಕೆ ಬರಬಹುದಲ್ಲವೇ? ತಾನು ಕಟ್ಟಿದ ಸಾಮ್ರಾಜ್ಯ, ತಾನು ಕೂಡಿಟ್ಟ ಹಣ, ತಾನು ಕಟ್ಟಿಸಿದ ಆಣೆಕಟ್ಟು, ಇಮಾರತ್ತುಗಳು ಇವ್ಯಾವುವೂ ತನ್ನ ಕಣ್ಣ ಮುಂದೆ ನಡೆದ ಹೇಯ ಕೃತ್ಯಗಳನ್ನು ಮರೆಸಿಬಿಡುವಷ್ಟು ಸಾಧನೆಗಳಲ್ಲ. ಸರ್ವಕಾಲಕ್ಕೂ ತಾನು ದೇಶಕ್ಕೆ ಎಸಗಿದ ದ್ರೋಹ, ತನ್ನ ದೇಶವಾಸಿಗಳನ್ನು ಅನ್ಯಾಯದ ದಾರಿಯಲ್ಲಿ ನಡೆಸಿಕೊಂಡದ್ದು, ಆ ತಪ್ಪುಗಳನ್ನು ಸರಿಪಡಿಸದೇ ಇಸ್ಲಾಮೀಕರಣದ ಮೂಲ ಗುರಿ ಇರಿಸಿಕೊಂಡಿದ್ದು ಜನರು ಸ್ಮೃತಿಪಟಲದದಿಂದ ಮರೆತರೂ ಇತಿಹಾಸವನ್ನೇ ಅಳಿಸಿಹಾಕಲು ಆಗುವುದಿಲ್ಲ. ನಮ್ಮ ಶಾಲೆಗಳಲ್ಲಿನ ಸಮಾಜ ವಿಜ್ಞಾನ ಪುಸ್ತಕಗಳಲ್ಲಿ “ಧರ್ಮ ಸಹಿಷ್ಣು” (tolerance towards all religions) ಹಾಗೂ “ಜಾತ್ಯತೀತತೆ” (Secularism) ಎಂಬ ಪದಗಳನ್ನು ಇತಿಹಾಸ(History) ಹಾಗೂ ಸಮಾಜ(Civics) ಪಾಠಗಳಲ್ಲಿ ಬಳಸಲಾಗುತ್ತಿತ್ತು ಎಂದರೆ ನೀವು ನೆನಪಿಸಿಕೊಳ್ಳುತ್ತೀರಲ್ಲವೇ? ಉದಾಹರಣೆಗೆ, ಕೃಷ್ಣದೇವರಾಯ ಧರ್ಮ ಸಹಿಷ್ಣು ರಾಜನಾಗಿದ್ದ ಎಂದರೆ ಕೃಷ್ಣದೇವರಾಯ ತನ್ನ ಆಸ್ಥಾನದಲ್ಲಿ ಎಲ್ಲರಿಗೂ (ಹಿಂದೂ, ಮುಸಲ್ಮಾನ, ಬುದ್ಧ, ಜೈನ..) ಒಂದೇ ನ್ಯಾಯವ್ಯವಸ್ಥೆ ಕಲ್ಪಿಸಿದ್ದ. ತನ್ನ ಧರ್ಮ ಸಹಿಷ್ಣುತೆಯನ್ನು ಪ್ರದರ್ಶಿಸಲು ತಾನು ಕಟ್ಟಿಸಿದ ದೇವಸ್ಥಾನದಲ್ಲಿ ಹಿಂದೂ ಹಾಗೂ ಇಸ್ಲಾಮ್ ವಾಸ್ತುಶಿಲ್ಪವನ್ನು ಅನುಸರಿಸುತ್ತಿದ್ದ; (ಇದನ್ನು ಇಂದಿಗೂ ಹಂಪಿಯ ಕೆಲ ದೇವಾಲಯಗಳನ್ನು ನೋಡಿದರೆ ತಿಳಿಯುತ್ತದೆ). ಇನ್ನು ಜಾತ್ಯತೀತತೆ  ’ಸಮಾಜ’ದಲ್ಲಿ ಮನುಷ್ಯರನ್ನು ವಿವಿಧ ಜಾತಿಗಳಾಗಿ ವಿಂಗಡಿಸದೇ ಎಲ್ಲರೂ ಭಾರತೀಯರು ಎಂಬ ಭಾವ ಮೂಡಿಸಿಕೊಳ್ಳಬೇಕು ಎಂದು  ತಿಳಿಸಿಕೊಡುತ್ತಿತ್ತು. ಆದರೆ ಇಂದಿನ ರಾಜಕೀಯ ವ್ಯವಸ್ಥೆಯಲ್ಲಿ ಸಹಿಷ್ಣು ಪದ ಮಾಯವಾಗಿದೆ. ಅಲ್ಲಿ ಉಳಿದುಕೊಂಡು ರಾರಾಜಿಸುತ್ತಿರುವ ತತ್ವವೇ ಜಾತ್ಯತೀತತೆ. ಇಲ್ಲಿ ಜಾತ್ಯತೀತತೆಯ ವಿರುದ್ಧವಾಗಿ ವಾದ ಮಂಡಿಸಲು ಮುಂದಾಗುತ್ತಿಲ್ಲ; ಆದರೆ “ಹುಸಿ ಜಾತ್ಯಾತೀತತೆಯೇ” (pseudo secularism) ನೈಜ ಎಂದುಕೊಳ್ಳುವವರ ವಿರುದ್ಧ ಅಸಹಾಯಕತೆಯನ್ನು ತೋರ್ಪಡಿಸದೆಯೇ ಇರಲೂ ಆಗುತ್ತಿಲ್ಲ. ಆಂಗ್ಲದಲ್ಲಿ “calling spade a spade”  ಎಂಬ ಗಾದೆಯ ಅನ್ವಯ ತಪ್ಪನ್ನು ತಪ್ಪು ಎಂದು ಕರೆದರೆ ಯಾರೂ ಏಕೆ ಬೇಸರಿಸಿಕೊಂಡಾರು. ಕೆಸಿಆರ್ ಅಥವಾ ಇನ್ನಾವುದೇ ನಾಯಕರು ರಾಜಕೀಯಕ್ಕೆ ಮತವನ್ನು ಬೆರೆಸಿ ಓಲೈಕೆಯ ರಾಜಕಾರಣ ನಿಲ್ಲಿಸಿದರೆ ದೇಶಕ್ಕೆ ಒಳಿತಾದೀತು. ರಾಜಕೀಯದಲ್ಲಿ ಜಾತ್ಯಾತೀತ, ಕೋಮುವಾದ ಎಂಬ ಪದಗಳ ಬಳಕೆ ಈಗಲಂತೂ ಅತಿಯಾಗಿ ಹೋಗಿದೆ. ಈ ಪದಗಳ ಅರ್ಥ, ವ್ಯಾಪ್ತಿ ಅರಿಯದೇ ಬಣಕ್ಕೆ ಬಣವನ್ನೇ, ಸಂಘಟನೆಯನ್ನೇ ಈ ರೀತಿಯಾಗಿ ವಿಭಜಿಸಿ ಸುಳ್ಳನ್ನು ಗಟ್ಟಿಯಾಗೆ ಹೇಳುತ್ತೇವಾದರಿಂದ ನಿಲ್ಲುತ್ತದೆಂದು ತಿಳಿದರೆ ಅದು ತಮಗೆ ತಾವೇ ಮಾಡಿಕೊಳ್ಳುವ ಮೋಸವಾಗಿ ಪರಿಣಮಿಸಬಹುದು. ಇತಿಹಾಸವನ್ನು ಚೆನ್ನಾಗಿ ಅರಿತುಕೊಂಡು ಆತ್ಮ ಸಾಕ್ಷಿಗೆ ನೇರವಾಗಿ ನಡೆದುಕೊಂಡರೆ ಸಾಗುವ ಪಥ ಧರ್ಮದ ಎಡೆಗೆ ಸಾಗೀತು. ಏಕೆಂದರೆ ಧರ್ಮ, ಸತ್ಯ ಸಾಯುವುದಿಲ್ಲ. ಸುಳ್ಳು, ಅಧರ್ಮ ನಿಲ್ಲುವುದಿಲ್ಲ.

ನಿಮ್ಮ ಅನಿಸಿಕೆ...

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Note: HTML is allowed. Your email address will never be published.

Subscribe to comments