ವಿಷಯದ ವಿವರಗಳಿಗೆ ದಾಟಿರಿ

ಜನವರಿ 12, 2015

1

ನವಯುಗಾಚಾರ್ಯ ಸ್ವಾಮಿ ವಿವೇಕಾನಂದ

‍ನಿಲುಮೆ ಮೂಲಕ

– ಎಸ್.ಎನ್.ಭಾಸ್ಕರ್‍, ಬಂಗಾರಪೇಟೆ

Swami Vivekanandaಮರುದಿನ ಪೂರ್ವ ದಿಗಂತದಿಂದ ಉದಯಿಸುವ ನೇಸರ ಅಂಧಕಾರವನ್ನು ಕೊಲ್ಲಿ ಬೆಳಕನ್ನು ಪಸರಿಸುವಂತೆ, ತನ್ನ ಜನ್ಮ ಭೂಮಿಯ, ಸನಾತನ ಹಿಂದೂ ಧರ್ಮದ ಸಂಸ್ಕೃತಿ ಪರಂಪರೆಯ, ಆಳ-ಅಗಾಧತೆಯ, ವೇದಾಂತ ದರ್ಶನದ ಪ್ರಖರವಾದ ಬೆಳಕಿನ ಅನುಭೂತಿ ಇಡೀ ಅಮೇರಿಕಕ್ಕೆ ಅಲ್ಲ ಇಡೀ ವಿಶ್ವಕ್ಕೇ ಹಬ್ಬಬೇಕಿದೆ. ಮಾತೃಭೂಮಿಯ ಬಗ್ಗೆ ಅಪಾರವಾದ ಕರುಣಾಭರಿತ ರಾಷ್ಟ್ರಪ್ರೇಮವನ್ನು, ಗುರುವಾಣಿಯನ್ನು, ತನ್ನ ದೃಢ ಸಂಕಲ್ಪವನ್ನು ಮನದಲ್ಲಿ ಹೊತ್ತ ಮಹಾ ಸನ್ಯಾಸಿ, ಅಪ್ರತಿಮ ರಾಷ್ಟ್ರಪ್ರೇಮಿ, ಯೋಗಾಚಾರ್ಯ ಶ್ರೀ ಸ್ವಾಮಿ ವಿವೇಕಾನಂದರು ೧೮೯೩ ನೇ ಸೆಪ್ಟೆಂಬರ್‍ ೧೦ ರಂದು ಅಮೇರಿಕದ ಚಿಕಾಗೋ ರೈಲ್ವೆ ನಿಲ್ದಾಣದಲ್ಲಿ ಇಳಿಯುತ್ತಾರೆ.ಮುಂದಿನ ದಿನವೇ ನಡೆಯಲಿದ್ದ ವಿಶ್ವ ಧರ್ಮ ಸಮ್ಮೇಳನದಲ್ಲಿ ಸನಾತನ ಹಿಂದೂ ಧರ್ಮದ ಪ್ರತಿನಿಧಿಯಾಗಿ ಭಾಗವಹಿಸಲು. ಇಷ್ಟಕ್ಕೂ, ಆಗಾಗಲೇ ಕತ್ತಲು ವ್ಯಾಪಿಸಿದ್ದ ರಾತ್ರಿಯಂದು ಚಿಕಾಗೋ ರೈಲ್ವೇ ನಿಲ್ದಾಣದಲ್ಲಿ ಇಳಿದ ವಿವೇಕಾನಂದರ ಸ್ಥಿತಿಯಾದರೂ ಹೇಗಿತ್ತು ಎಂದು ಕೊಂಡಿರಿ?

ತಮ್ಮ ಬಳಿಯಲ್ಲಿದ್ದ ಹಣವೆಲ್ಲವೂ ವ್ಯಯವಾಗಿ ಕಿಲುಬು ಕಾಸೂ ಸಹಾ ಇರಲಿಲ್ಲ. ಹಿಂದಿನ ದಿನ ಪರಿಚಯಸ್ಥರೊಬ್ಬರು ನೀಡಿದ್ದ ಚಿಕಾಗೋವಿನ ಅವರ ಗೆಳೆಯರ ವಿಳಾಸ ಬರೆದಿಟ್ಟುಕೊಂಡಿದ್ದ ಚೀಟಿ ಸಹಾ ಅಕಸ್ಮಾತಾಗಿ ಕಳೆದುಹೋಗಿತ್ತು. ಕಾವಿಯ ನಿಲುವಂಗಿ, ರುಮಾಲು ಧರಿಸಿದ್ದ ಸ್ವಾಮಿಗಳಿಗೆ ಅಲ್ಲಿನ ಚಳಿಯ ರುಧ್ರತೆ ಚುಚ್ಚತೊಡಗಿತ್ತು. ಹೆಚ್ಚಾಗಿ ಜರ್ಮನ್ನರೇ ವಾಸವಿದ್ದ ಚಿಕಾಗೋವಿನಲ್ಲಿ ಭಾಷೆಯು ಅಂತಹ ಸಹಾಯಕ್ಕೆ ಬರಲಿಲ್ಲ. ಇವರ ವೇಷಧಾರಣೆಯನ್ನು ನೋಡಿ ಕೆಲವರು ನಗತೊಡಗದರೆ, ಮತ್ತೆ ಕೆಲವರು ಅನುಮಾನದಿಂದ ನೋಡತೊಡಗಿದರು. ದಿನವೆಲ್ಲವೂ ಏನನ್ನೂ ಸೇವಿಸದೇ ಇದ್ದ ಕಾರಣ ಹಸಿವಿನಿಂದ ಬಳಲಿದ್ದರು. ಮನದಲ್ಲಿ ಮತ್ತೊಮ್ಮೆ ತಮ್ಮ ಗುರುವರ್ಯರನ್ನು ನೆನೆದು ಅಲ್ಲೇ ನಿಲ್ದಾಣದಲ್ಲಿ ಬಿದ್ದಿದ್ದ ಒಂದು ದೊಡ್ಡ ಪೆಟ್ಟಿಗೆಯೊಳಗೆ ಹೋಗಿ ಮಲಗಿಬಿಟ್ಟರು. ಕತ್ತಲಿನೊಡನೆ ರಮಿಸುತ್ತಾ ಅಸಹನೀಯವಾದ ಚಳಿ ಸುತ್ತಲೂ ವ್ಯಾಪಿಸಿತ್ತು, ಊಟವಿಲ್ಲದೇ ಹೊಟ್ಟೆಯಲ್ಲಿ ಹಸಿವಿನ ಸಂಕಟ, ಬೆಳಗಾದರೇ ಸನಾತನ ಧರ್ಮದ ಪ್ರತಿನಿಧಿಯಾಗಿ ತಾನು ಪಾಲ್ಗೊಳ್ಳಬೇಕಾದ ವಿಶ್ವ ಧರ್ಮ ಸಮ್ಮೇಳನ. ಕುವೆಂಪು ಬರೆಯುತ್ತಾರೆ “ನಾಳೆಯೆಂದರೆ ಅವರ ಹರಿಕಂಠ ಗರ್ಜನೆಯಿಂದ ಸಮಸ್ತ ಅಮೇರಿಕಾ ದೇಶವೇ ಎಚ್ಚರಗೊಳ್ಳಬೇಕು. ಇಂದಾದರೋ ಗತಿಯಿಲ್ಲದೇ ಪೆಟ್ಟಿಗೆಯಲ್ಲಿ ಮಲಗಿದ್ದಾರೆ. ಈಶ್ವರೇಚ್ಚೆ!”.

ಹೇಗೋ ಆ ರಾತ್ರಿಯನ್ನು ಆ ಪೆಟ್ಟಿಗೆಯಲ್ಲೇ ಕಳೆದ ವಿವೇಕಾನಂದರು ಮರುದಿನ ಬೆಳಕು ಚೆಲ್ಲುತ್ತಿದ್ದಂತೆ ರೈಲ್ವೇ ನಿಲ್ದಾಣದಿಂದ ಹೊರಬಂದು ನಗರದ ಮುಖ್ಯ ಬೀದಿಯಲ್ಲಿ ನಡೆಯುತ್ತಾ ಹೋದರು. ಹಸಿವಿನ ಬಾಯಿಗೆ ಏನಾದರೂ ಹಾಕಲು, ಅಕ್ಷರಶಃ ಅಂಗಡಿಗಳ, ಮನೆಗಳ ಬಾಗಿಲು ಬಾಗಿಲಿಗೆ ತೆರಳಿ ಬಿಕ್ಷೆ ಬೇಡತೊಡಗಿದರು. ಅವರ ಮೈಮೇಲಿದ್ದ ಈಗಾಗಲೇ ಕೊಳಕಾಗಿದ್ದ ಕಾವಿ ಬಟ್ಟೆ, ರುಮಾಲುಗಳನ್ನು ಕಂಡ ಕೆಲವರು ಅನುಮಾನದಿಂದ ನೋಡಿ ಬೈದು ಕಳುಹಿಸಿದರು, ಮತ್ತೆ ಕೆಲವರು ಬಲಪ್ರಯೋಗ ಮಾಡಿ ಬೈದು ನೂಕಿದರು, ಅಟ್ಟಿದರು. ಸಂತನಾಗಲೀ, ಸಂನ್ಯಾನಿಯಾಗಲೀ, ಬಿಕ್ಷುಕನಾಗಲೀ ಬಿಕ್ಷಾಟನೆ ಅಲ್ಲಿಯ ಕಾನೂನಿಗೆ ವಿರುದ್ದವಲ್ಲವೇ. ಬಳಲಿಕೆಯಿಂದ ಇನ್ನು ಒಂದು ಹೆಜ್ಜೆ ಸಹಾ ಇಡಲಾಗದೇ ಅಲ್ಲಿಯೇ ರಸ್ತೆಯ ಬದಿಯಲ್ಲಿ ಕುಳಿತರು. ಮನದಲ್ಲಿ ಗುರುವರೇರ್ಯರನ್ನು ನೆನೆಯುತ್ತಾ, ಎಂದಿಗೂ ಬತ್ತದ ಭರವಸೆಯ ನೆರಳಲ್ಲಿ ಪದ್ಮಾಸನ ಹಾಕಿ ಕುಳಿತುಬಿಟ್ಟರು.

ಇದೇ ಸಮಯದಲ್ಲಿ ಭಾರತದ ಸಾಮಾಜಿಕ ಪರಿಸ್ಥಿತಿಯಾದರೂ ಹೇಗಿತ್ತು..? ಈಸ್ಟ್ ಇಂಡಿಯಾ ಕಂಪನಿಯ ಹೆಸರಿನಲ್ಲಿ ವ್ಯಾಪರಕ್ಕಾಗಿ ಬಂದ ಆಂಗ್ಲರು ಭಾರತದಲ್ಲಿ ರಾಜಕೀಯವಾಗಿ ತಳವೂರತೊಡಗಿದ್ದರು. ೧೮೫೭ ರ ಪ್ರಥಮ ಸ್ವಾತಂತ್ಯ್ರ ಸಂಗ್ರಾಮದ ನಂತರ ಪೂರ್ಣ ಭಾರತ ಇಂಗ್ಲೆಂಡ್ ರಾಣಿಯ ಆಡಳಿತದ ಅಂಕೆಗೆ ಒಳಪಡುತ್ತದೆ. ಆಗಲೇ ಹಿಂಡು ಹಿಂಡಾಗಿ ಒಂದು ಕೈಯಲ್ಲಿ ಬೈಬಲ್ ಮತ್ತೊಂದು ಕೈಯಲ್ಲಿ ರಿಜಿಸ್ಟರ್‍‌ಅನ್ನು ಹಿಡಿದುಕೊಂಡು ಚರ್ಚಿನ ಪಾದ್ರಿಗಳು ಭಾರತಕ್ಕೆ ಬರುತ್ತಾರೆ. ಅವರ ಮತಕ್ಕೆ ಸೇರುವವರ ಪಟ್ಟಿ ಬೆಳೆಯಬೇಕು..ರಿಜಿಸ್ಟರಿನಲ್ಲಿ ಸಂಖ್ಯೆಗಳು ಏರಬೇಕು. ಏಕಮಾತ್ರ ಉದ್ದೇಶ. ಈ ಉದ್ದೇಶದ ಸಾಧನೆಗೆ ಯಾವುದೇ ರೀತಿಯ ದೂರ್ತ ಮಾರ್ಗವನ್ನು ಅನುಸರಿಸಿಯಾದರೂ ಸರಿಯೇ ಸಂಖ್ಯೆ ಏರಬೇಕು. ಇಂತಹ ಮನ್ವಂತರದ ಘಟ್ಟದಲ್ಲಿ ಭಾರತೀಯ ಜನ ತಮ್ಮ ಪ್ರಾಚ್ಯ ಸಂಸ್ಕೃತಿಯ ಹಾಗೂ ಆಂಗ್ಲರ ನೂತನ ಜೀವನಶೈಲಿಯ ನಡುವೆ ಸಿಲುಕಿ ದ್ವಂದ್ವಗಳಿಗೆ ಒಳಗಾಗುತ್ತಾರೆ. ಅದರಲ್ಲಿಯೂ ಹೆಚ್ಚಾಗಿ ಅಂದಿನ ಯುವಜನತೆ. ಹಿಂದೂ ಸಮಾಜದ ನಂಬಿಕೆಗಳೆಡೆಗೆ, ಆಚರಣೆಗಳೆಡೆಗೆ ಒಂದು ತಾತ್ಸಾರದ ಮನೋಭಾವವನ್ನು ಬಹುತೇಕರು ತಾಳತೊಡಗುತ್ತಾರೆ. ಚತುವರ್ಣಗಳು, ಮೇಲು-ಕೀಳು, ಮೂಡ ನಂಬಿಕೆಗಳು, ಪುರೋಹಿತಶಾಹಿ ವ್ಯವಸ್ಥೆ, ಸತೀ ಪದ್ದತಿ, ಬಾಲ್ಯ ವಿವಾಹ ಇಂತಹ ಅನೇಕ ಅಸ್ತ್ರಗಳು ಆಂಗ್ಲ ಪಾದ್ರಿಯ ಬತ್ತಳಿಕೆಯಲ್ಲಿ ಬಂದು ಕೂರುತ್ತವೆ. ಧರ್ಮ ಪ್ರಚಾರಕ್ಕೆ, ಮತಾಂತರಕ್ಕೆ ಹೇರಳವಾದ ಧನಸಹಾಯ ಪಶ್ಚಿಮ ಮುಖೇತ ನಿರಂತರವಾಗಿ ಬಂದು ಇಳಿಯುತ್ತದೆ. ದೀನ ದಲಿತರ ಉದ್ದಾರಕ್ಕಲ್ಲ, ಕೇವಲ ತಮ್ಮ ಮತ ಪ್ರಚಾರಕ್ಕೆ ಮಾತ್ರ ಈ ಧನವಿನಿಯೋಗವನ್ನು ಹೇರಳವಾಗಿ ಮಾಡತೊಡಗುತ್ತಾರೆ. ವಿದ್ಯಾಸಂಸ್ಥೆಗಳು, ಆಸ್ಪತ್ರೆಗಳು, ಅನಾಥ ಶರಣಾಲಯಗಳು ಇತ್ಯಾದಿಗಳನ್ನು ಮತಾಂತರವೆಂಬ ಅಡಿಪಾಯದ ಮೇಲೆ ನಿರ್ಮಿಸುತ್ತಾರೆ. ಪಾಶ್ಚಾತ್ಯ ನವ ನಾಗರೀಕತೆಯ ಮಳೆಯು ಭಾರತೀಯ ಸನಾತನ ಸಂಸ್ಕೃತಿಯ ಧರೆಯ ಮೇಲೆ ಸುರಿಯ ತೊಡಗಿದ್ದ ಆ ಸಮಯದಲ್ಲಿ ಸನಾತನ ಪರಂಪರೆಯ ಶಂಖನಾದವನ್ನು ವಿಶ್ವದಾದ್ಯಂತ ಮೊಳಗಿಸಲು ಕಡಲುದಾಟಿ ಅದೇ ಪಾಶ್ಚಾತ್ಯ ಭೋಗ ಭೂಮಿಯ ಮೇಲೆ ತಮ್ಮ ಹೆಜ್ಜೆಯನ್ನು ಇಟ್ಟಿರುತ್ತಾರೆ ಸ್ವಾಮಿ ವಿವೇಕಾನಂದರು.

ದೀಪದಿಂದ ದೀಪವನ್ನು ಬೆಳಗುವಂತೆ, ತಮ್ಮ ಮೆಚ್ಚಿನ ಶಿಷ್ಯನಾಗಿ ತಮ್ಮದೇ ಗರಡಿಯಲ್ಲಿ ಪಳಗಿದ ನರೇಂದ್ರನಾಥನಿಗೆ ಶ್ರೀ ರಾಮಕೃಷ್ಣ ಪರಮಹಂಸರು ತಮ್ಮ ಆದ್ಯಾತ್ಮ ಸಾಧನೆಯ ಸಮಸ್ತವನ್ನು ಧಾರೆ ಎರೆದೇ ಐಹಿಕ ಜಗತ್ತಿನಿಂದ ಹೊರಟಿರುತ್ತಾರೆ. ತಾವು ನಂದುವ ಮುನ್ನ ಸ್ವಾಮಿ ವಿವೇಕಾನಂದರ ಜ್ಞಾನದೀವಿಗೆಯನ್ನು ಬೆಳಗಿ ಅಸ್ತಮಿಸಿರುತ್ತಾರೆ. ಜನ್ಮತಃ ಆದ್ಯಾತ್ಮಿಕ ಭಾವವನ್ನು ತನ್ನೊಡನೇ ಉಳಿಸಿಕೊಂಡು ಬಂದಿದ್ದ ನರೇಂದ್ರನಾಥ ಶ್ರೀ ರಾಮಕೃಷ್ಣ ಪರಮಹಂಸರ ಶಿಷ್ಯನಾಗಿ ಪೂರ್ಣತ್ವವನ್ನು ಪಡೆದಿರುತ್ತಾರೆ. ಗುರು ಮತ್ತು ಶಿಷ್ಯರ ಸಂಬಂಧ ಅವಿನಾಭವವಾದುದು. ಒಬ್ಬರ ಜೀವನ ಚರಿತ್ರೆಯನ್ನು ಸಂಪೂರ್ಣವಾಗಿ ಮನನ ಮಾಡದೇ ಮತ್ತೊಬ್ಬರ ಜೀವನ ಚರಿತ್ರೆ ಪೂರ್ಣವಾಗುವುದಿಲ್ಲ. ಒಬ್ಬರಿಲ್ಲದೇ ಮತ್ತೊಬ್ಬರು ಅಪೂರ್ಣರೇ. ಗುರುವನ್ನು ಅರಿಯದೇ ಶಿಷ್ಯನನ್ನು ತಿಳಿಯಲು ಸಾಧ್ಯವಿಲ್ಲ. ಶಿಷ್ಯನನ್ನು ಅರಿಯದೇ ಗುರುವನ್ನು ತಿಳಿಯಲು ಸಾಧ್ಯವಿಲ್ಲ. ತನ್ನ ತಂದೆ-ತಾಯಿಯ ಬಳಿ ಸಲುಗೆಯಿಂದ, ಕೀಟಲೆಯಿಂದ ಇರುವ ಮಗುವಂತೆ ಎಷ್ಟೇ ಪ್ರೌಢಿಮೆ, ಗಾಂಭೀರ್ಯ ಮನದಲ್ಲಿ ಮನೆ ಮಾಡಿದ್ದರೂ, ಆದ್ಯಾತ್ಮದೆಡೆ ನರೇಂದ್ರನಾಥರು ಆಗಾಗ್ಗ ವಿಮುಖರಾಗುತ್ತಿದ್ದರು. ಪರಮಹಂಸರಿಗೆ ಪ್ರಶ್ನೆಗಳ ಮೇಲೆ ಪ್ರಶ್ನೆಗಳನ್ನು ಹಾಕುತ್ತಲೇ ಇದ್ದರು. ಗುರುಗಳು ಅಸ್ತಮಿಸಿದ ನಂತರ ಇಡೀ ಸನಾತನ ಪರಂಪರೆಯ ರಥದ ಸಾರಥ್ಯವನ್ನು ವಿವೇಕಾನಂದರು ವಹಿಸುತ್ತಾರೆ. ಇವರ ಜ್ಞಾನ ದೀವಿಗೆ ಮತ್ತಷ್ಟು ಪ್ರಖರವಾಗಿ ಬೆಳಗತೊಡಗುತ್ತದೆ. ತಮಗೆ ಜನ್ಮಮುಖೇನ ಒಲಿದು ಬಂದಿದ್ದ ವಿವೇಕ, ಜ್ಞಾನಗಳ, ಬುದ್ದಿಶಕ್ತಿಯ ಭಧ್ರ ಬುನಾಧಿಯಿಂದ. ಪ್ರಾಚ್ಯ ಶಾಸ್ತ್ರಗಳಾದ ವೇದಾಂತ, ಉಪನಿಷತ್ತುಗಳು, ಗೀತೆಯ ಅಧ್ಯಯನದಿಂದ, ಇವುಗಳ ಯತಾರ್ಥವಾದ ಸೂಕ್ತ ತಿಳುವಳಿಕೆಯ ಮೇಧಾಶಕ್ತಿಯಿಂದ ಇಷ್ಟು ಮಾತ್ರವಲ್ಲದೇ ಪಾಶ್ಚಿಮಾತ್ಯ ಶಿಕ್ಷಣದಿಂದಲೂ ಸಹಾ ಉನ್ನತ ಮಟ್ಟದ ಜ್ಞಾನವನ್ನು ಪಡೆದು ಮಹಾ ಆಚಾರ್ಯರಾಗಿದ್ದರು. ಈ ಹಿನ್ನೆಲೆಗಳೊಂದಿಗೆ ಪೂಜ್ಯ ಮಹಾ ಸಾಧು ಶ್ರೀ ರಾಮಕೃಷ್ಣ ಪರಮಹಂಸರ ಗುರು ಸನ್ನಿದಿಯಲ್ಲಿ ಮಹಾ ಜ್ಞಾನ ವೃಕ್ಷವಾಗಿ ಮೈದುಂಬಿ ಬೆಳೆದಿದ್ದರು. ಆತ್ಮ ಸಾಕ್ಷಾತ್ಕಾರವನ್ನು ಪಡೆದು ಆದ್ಯಾತ್ಮಿಕ ಅನುಭೂತಿಯನ್ನು ಸಿದ್ದಿಸಿ ಕೊಂಡು ದ್ರಷ್ಟಾರರೆನೆಸಿದ್ದರು. ಬರೀ ಕಾಲ್ನಡಿಗೆಯಲ್ಲಿ ಪರಿವ್ರಾಜಕ ಮಹಾ ಸನ್ಯಾಸಿಯಾಗಿ ಹಿಮಾಲಯದಿಂದ ಕನ್ಯಾಕುಮಾರಿಯವರೆಗೂ ಭರತ ದೇಶದ ಮೂಲೆ ಮೂಲೆಗಳಲ್ಲಿ ಸಂಚರಿಸಿ ಪ್ರತ್ಯಕ್ಷ ಅಧ್ಯಯನವನ್ನು ಪೂರೈಸಿದ್ದರು.

ಹುಟ್ಟಿನಿಂದಲೂ ವಿವಾಹ, ಸಂಸಾರಗಳೆಡೆಗೇ ಮಹಾ ವಿರಾಗಿಯಾಗಿಯೇ ಇದ್ದ ವಿವೇಕಾನಂದರು ಸಂನ್ಯಾಸಕ್ಕೆ ಹೊಸ ಭಾಷ್ಯವನ್ನೇ ಬರೆದರು, ದೇಶಭಕ್ತಿಯನ್ನು ತನ್ನ ಉಸಿರಾಗಿ ಇವರು ಸ್ವೀಕರಿಸಿದರು. ಕೇವಲ ವೈಯಕ್ತಿಕ ಮುಕ್ತಿಯೆಡೆಗೆ ತುಡಿಯದೇ ಸಮಾಧಿ ಸುಖವನ್ನು ಮೂಲೆಗೊತ್ತು ದೇಶದ, ಧರ್ಮದ ಉದ್ದಾರಕ್ಕಾಗಿ ತಪಸ್ಸನ್ನೇ ಗೈದರು. ಸನ್ಯಾಸಿಯಾದರೂ ದೇಶದ ದೌರ್ಭಲ್ಯವನ್ನು ದಾರಿದ್ರವನ್ನು ನಿವಾರಿಸುವ ತಮ್ಮ ಕರ್ಮಜೀವನವನ್ನು ಮುಂದುವರೆಸಿದರು. “ಆತ್ಮ ಸ್ವಭಾವತಃ ವಿಕಾಸವಾಗಲು ಯತ್ನಿಸುತ್ತಿರುವುದು; ಬಾಹ್ಯ ಪ್ರಕೃತಿ ಅದನ್ನು ಕೆಳಗೊತ್ತುವುದು. ಈ ಜಡ ಚೇತನಗಳ ಹೋರಾಟದ ವ್ಯಾಪರವೇ ಜೀವನ”. ಎಂಬುದಾಗಿ ಮಾನವ ಜೀವನವನ್ನು ಅರ್ಥಗರ್ಬಿತವಾಗಿ ವ್ಯಾಖ್ಯಾನಿಸುತ್ತಾರೆ. ವಿವೇಕಾನಂದರು ಮಹೋನ್ನತವಾದ ವೇದಾಂತ ಜ್ಞಾನವನ್ನು ಹೊಂದಿದ್ದರು. ಮೂಲ ಸನಾತನ ಹಿಂದೂ ಧರ್ಮದ ಬಗ್ಗೆ ಇನ್ನಿಲ್ಲದ ಪ್ರೀತಿ, ಒಲವು ಇದ್ದಂತೆಯೂ ಅಜ್ಞಾನದಿಂದ ಮೂಡಿದ್ದ ಅದರಲ್ಲಿನ ಹುಳುಕುಗಳನ್ನೂ ಚೆನ್ನಾಗಿ ಅರಿತಿದ್ದರು. “ಭರತಖಂಡದ ಬಾಳಿನಲ್ಲಿ ಧರ್ಮಕ್ರಾಂತಿಯಾಗದೇ ಉಳಿದ ಸುಧಾರಣೆ ಆಗುವುದಿಲ್ಲ. ದೇಶದಲ್ಲಿ ರಾಜಕೀಯ ಸಮತೆಯ ಬೀಜವನ್ನು ಬಿತ್ತಬೇಕಾದರೆ ಮೊದಲು ಧರ್ಮನದಿಯ ನೀರನ್ನು ಅದರ ಮೇಲೆ ಹೊನಲಾಗಿ ಹರಿಸಬೇಕು. ಆದ್ದರಿಂದ ಉಪನಿ಼ಷತ್ತಾದಿಗಳಲ್ಲಿರುವ ಮಹಾಧ್ಬುತ ಸತ್ಯಗಳನ್ನು ಗ್ರಂಥಗಳಿಂದಲೂ ಮಠಗಳಿಂದಲೂ ಹಿಸುಗಿ ಹಿಂಡಿ ಹೊರಗೆಳೆದು ಎಲ್ಲೆಲ್ಲಿಯೂ ಬಿತ್ತಿ ದೇಶದ ಮೇಲೆ ಬೆಂಕಿಯ ಹೊಳೆ ಹರಿಯುವಂತೆ ಮಾಡಬೇಕು ಧರ್ಮ ಬೋಧೆ ನಿರಂತರವಾಗಿ ನಡೆಯಬೇಕು. ಧರ್ಮವೇ ಜಗತ್ತಿಗೆ ಭರತಖಂಡವು ನೀಡುವ ನಿಜವಾದ ಕಾಣಿಕೆ. ನಮಗೆ ಬೇಕು ವೀರ ಧರ್ಮ; ವೀರ ನಿರ್ಮಾಣಕ ಧರ್ಮ ಉಪನಿಷತ್ತಿನ ಸತ್ಯಗಳು ನಿಮ್ಮ ಮುಂದಿವೆ ಅವುಗಳನ್ನು ಅನುಷ್ಟಾನ ಮಾಡಿ” ಈ ರೀತಿ ಕರೆ ಇತ್ತ ವಿವೇಕಾನಂದರಿಗೆ ಧರ್ಮದ ಹುಳುಕುಗಳನ್ನು ಹೊರತೆಗೆದು ನೈಜ ಅರ್ಥವನ್ನು ಎಲ್ಲರಲ್ಲೂ ಮೂಡಿಸುವ ಸಂಕಲ್ಪ ಬಹುವಾಗಿ ಮನೆ ಮಾಡಿತ್ತು. ಸರ್ವ ಧರ್ಮ ಸಮನ್ವಯವೇ ಸನಾತನ ಧರ್ಮದ ಸಾರ ಎಂಬುದನ್ನು ವಿಶ್ವದಾದ್ಯಂತ ಪ್ರಚುರಪಡಿಸಿದ ಯೋಗಿವರೇರ್ಯರು ತಮ್ಮ ಅಸಂಖ್ಯ ಉಪನಾಸ್ಯಗಳಲ್ಲಿ, ಪ್ರವಚನಗಳಲ್ಲಿ ವೇದಾಂತ ದರ್ಶನವನ್ನು ಎದೆ ಮುಟ್ಟುವಂತೆ ವಿವರಿಸಿದ್ದಾರೆ.

ಇಸವಿ ೧೯೮೩ ಸೆಪ್ಟೆಂಬರ್‍ ೧೧ ನೇ ದಿನ ಇದೇ ದಿನವೇ ಆಯೋಜಿಸಲಾಗಿತ್ತು ವಿಶ್ವ ಧರ್ಮ ಸಮ್ಮೇಳನ. ಇನ್ನೇನು ಕೆಲವೇ ಗಂಟೆಗಳಿರಬಹುದು ಸಮ್ಮೇಳನ ಆರಂಭವಾಗಲು. ಅಮೇರಿಕಾದ ಚಿಕಾಗೋ ನಗರದ ಮುಖ್ಯ ಬೀದಿಯ ಯಾವುದೋ ಒಂದು ಬದಿಯಲ್ಲಿ ಹಸಿವಿನಿಂದ ಕುಸಿದು ಕುಳಿತಿದ್ದಾರೆ ನಮ್ಮ ಸನಾತನ ಹಿಂದೂ ಧರ್ಮದ ಪ್ರತಿನಿಧಿ ಸ್ವಾಮಿ ವಿವೇಕಾನಂದರು. ಹಿಂದಿನ ದಿನದಿಂದಲೂ ಏನನ್ನೂ ಸೇವಿಸಿಲ್ಲ, ನಿದ್ರೆಯಿರದೇ ರೈಲ್ವೆ ನಿಲ್ದಾಣದ ಪೆಟ್ಟಿಗೆಯೊಂದರಲ್ಲಿ ಕಳೆದ ಅಸಹನೀಯ ರಾತ್ರಿ. ಬಿಕ್ಷೆ ಬೇಡಿದರೂ ಹುಟ್ಟದ ಆಹಾರ. ಮುಂದೆ ನಡೆಯಲಾರದಂತಹ ನಿಶ್ಯಕ್ತಿ. ಇಷ್ಟಾದರೂ ಮನದಲ್ಲಿ ಮನೆ ಮಾಡಿದ್ದ ವೀರ ಸಂಕಲ್ಲದ ಜ್ಯೋತಿ ಎಂದಿಗಿಂತಲೂ ಪ್ರಖರವಾಗಿ ಬೆಳಗುತ್ತಿತ್ತು. ಆತ್ಮೋತ್ಸಾಹ ನಿರಂತರವಾಗಿ ಆ ಜ್ಯೋತಿಗೆ ಎಣ್ಣೆಯನ್ನು ಎರೆಯುತ್ತಿತ್ತು. ಇವರ ಆತ್ಮಬಲ, ಆತ್ಮ ಸಂಯಮ, ಅತಿಶಯವಾದದ್ದು. ತಮ್ಮ ಗುರುವರ್ಯರನ್ನು ಮನದಲ್ಲೇ ನೆನೆಯುತ್ತಾ ಅರೆಕಣ್ಗಳ ದೃಷ್ಟಿಯಲ್ಲಿ ಕುಳಿತಿದ್ದರು. ಗುರು ಅನುಗ್ರಹವೋ, ದೈವ ಸಂಕಲ್ಪವೋ ಕುಳಿತಿದ್ದ ಸ್ವಾಮಿಗಳ ಬಳಿಗೆ ಆಗಮಿಸಿದ ಮಹಿಳೆಯೊಬ್ಬರು ತಾನಾಗಿಯೇ ಪ್ರಶ್ನಿಸುತ್ತಾಳೆ “ಮಹಾಶಯರೇ, ತಾವು ಧರ್ಮ ಮಹಾ ಸಭೆಗೆ ಬಂದ ಪ್ರತಿನಿಧಿಯೇನು?” ಸ್ವಾಮಿಗಳಿಂದ ಎಲ್ಲಾ ವಿಷಯನ್ನು ತಿಳಿದು, ತನ್ನ ಮನೆಗೆ ಕರೆದುಕೊಂಡು ಹೋಗಿ ಆದರ ಆತಿಥ್ಯಗಳನ್ನು ನೀಡಿ ತಾನೇ ಧರ್ಮಸಭೆಗೆ ಕರೆದುಕೊಂಡು ಬರುತ್ತಾಳೆ. ವಿಧಿ ಸಂಕಲ್ಪದ ಪಾಲನೆಯಲ್ಲಿ ಈ ಮಹಿಳೆಯದೂ ಒಂದು ಅಳಿಲುಸೇವೆ.

ಮುಂದೆ ನಡೆದದ್ದು ಇಡೀ ಭರತ ದೇಶದ ಇತಿಹಾಸದಲ್ಲಿ, ಸನಾತನ ಹಿಂದೂ ಧರ್ಮದ ಪರಂಪರೆಯಲ್ಲಿ ಸುವರ್ಣ ಅಕ್ಷರಗಳಿಂದ ಬರೆದಿಡಬೇಕಾದ ಮಹಾ ಕಾಲ. ಸಮ್ಮೇಳನದ ವೇದಿಕೆಯ ಮೇಲೆ ಸ್ವಾಮೀಜಿಗಳು ಆಸೀನರಾಗಿದ್ದರು. ಮನೋಹರವಾದ ಸೂಜಿಗಲ್ಲಿನಂತೆ ಸೆಳೆಯುವ ದೇಹರಚನೆಯ, ಅನಂತ ಜ್ಞಾನವನ್ನು ಸೂಸುವ ಹೊಳಪಿನ ಕಣ್ಗಳನ್ನು ಹೊತ್ತ ಸ್ವಾಮೀಜಿಯವರು ಒಂದೇ ನೋಟಕ್ಕೆ ಎಂಥವರನ್ನೂ ಸೆಳೆಯುತ್ತಿದ್ದರು. ಆಯೋಜಕರು ಹಲವು ಬಾರಿ ಮಾತನಾಡುವಂತೆ ಕರೆದರು. “ಸ್ವಲ್ಪ ತಡೆಯಿರಿ; ಉಳಿದವರದ್ದಾಗಲೀ” ಎಂದರು. ಕಡೆಗೆ ಅವರ ಸರದಿ ಬಂದಾಗ ಎದ್ದು ನಿಂತರು. ತಮ್ಮ ಗುರುದೇವನನ್ನು ಸ್ಮರಿಸಿ ಕ್ಷಣಕಾಲ ಕಣ್ಘಳನ್ನು ಮುಚ್ಚಿದರು, ಯಾವುದೋ ದಿವ್ಯಶಕ್ತಿ ಅವರ ದೇಹದ ರಕ್ತದಲ್ಲಿ ಆವಾಹನೆಯಾಗಿ ಸಂಚರಿಸತೊಡಗಿತು. ಇಡೀ ಸಮ್ಮೇಳನದ ಸಭೆಯ ಜನರನ್ನು ಕುರಿತು “ಅಮೇರಿಕಾ ದೇಶದ ಭಾತೃ ಭಗಿನಿಯರೇ” (“Sisters and brothers of America”) ಎಂದು ಸಂಭೋದಿಸಿದರು. ಸಿಂಹಧ್ವನಿ, ಕಂಚಿನಕಂಠ ಇವರಿಂದ ಉಚ್ಚಾರವಾದ ಈ ಸಾಲುಗಳು ಇಡೀ ಸಭೆಯ ಎಂಟೂ ದಿಕ್ಕುಗಳಿಂದ ಪ್ರತಿದ್ವನಿಸಿ ನೇರ ಜನರ ಮನಸುಗಳಿಗೆ ಲಗ್ಗೆ ಇಟ್ಟಿತು. ಮರು ಕ್ಷಣವೇ ಹೊಮ್ಮಿತಲ್ಲಾ ಕರತಾಡನ ಸುತ್ತಲಿನ ಎಂಟೂ ದಿಕ್ಕುಗಳಿಗೂ ಮುಟ್ಟಿ ಮುಗಿಲಿನತ್ತ ಪ್ರತಿದ್ವನಿಸಿತ್ತು. ನಿರಂತರ ಎರಡು ನಿಮಿಷಗಳ ಕರತಾಡನ ವಿವೇಕಾನಂದರ ಉತ್ಸಾಹವನ್ನು ನೂರ್ಮಡಿಗೊಳಿಸಿತ್ತು. ಅಮೇರಿಕದ ಸಮಸ್ತ ಜನತೆಯನ್ನು ಉದ್ದೇಶಿಸಿ “ಭಾತೃ ಭಗಿನಿಯರೇ” ಎಂದು ಸಂಬೋಧಿಸಿದ್ದು ಅಲ್ಲಿದ್ದ ಎಲ್ಲರ ಹೃದಯವನ್ನೂ ಗೆದ್ದಿತ್ತು. ಅಲ್ಲಿಯವರೆಗೂ ಮಾತನಾಡಿದ್ದ ಸಮಸ್ತರೂ ತಮ್ಮಮತವೇ ಶ್ರೇಷ್ಟ, ನಮ್ಮ ಮತದ ಸಿದ್ದಾಂತಗಳೇ ಸತ್ಯ ಎಂಬರೀತಿ ಮಾತನಾಡಿದ್ದರು. ವಿವೇಕಾನಂದರು ಹಿಂದೂ ಧರ್ಮದ ಸಾರವಾದ “ಸರ್ವ ಧರ್ಮ ಸಮನ್ವಯ” ದ ಸಿದ್ದಾಂತವನ್ನು ಉಲ್ಲೇಖಿಸಿ ಭಾಷಣ ಮಾಡತೊಡಗಿದರು. ಸನಾತನ ವೇದಾಂತಗಳ ನೀತಿ ಸಾರವನ್ನು ಪ್ರಸರಿಸಿದರು. ಆತ್ಮ-ಪರಮಾತ್ಮಗಳ, ಬ್ರಹ್ಮ ಸಾಕ್ಷಾತ್ಕಾರದ, ವೇದಾಂತ ದರ್ಷನವನ ಬಗ್ಗೆ ಸುಧೀರ್ಘವಾದ ಉಪನ್ಯಾಸ ನೀಡಿದರು. ಇವರ ವಾಗ್ಮೀಯತೆಗೆ, ಜ್ಞಾನಸಾಗರಕ್ಕೆ, ಅವರು ವಿವರಿಸಿದ ಹಿಂದೂ ಧರ್ಮದ ಸುಸಂಸ್ಕೃತವಾದ ಪರಂಪರೆಯ ಬಗ್ಗೆ ಇಡೀ ಅಮೇರಿಕೆಗೆ ಅಮೇರಿಕೆಯೇ ಬೆರಗುಗೊಂಡಿತು. ಅವರ ಭಾಷಣವನ್ನು ಉಲ್ಲೇಖಿಸಿ ಸ್ಥಳೀಯ ಪತ್ರಿಕೆ ಈ ರೀತಿ ಬರೆಯುತ್ತದೆ “ಸರ್ವಧರ್ಮ ಸಮ್ಮೇಳನದಲ್ಲಿ ವಿವೇಕಾನಂದರೇ ಶ್ರೇಷ್ಟತಮ ವ್ಯಕ್ತಿ, ಅವರ ಭಾಷಣವನ್ನು ಕೇಳಿದ ಮೇಲೆ ಇಂತಹ ಸುಸಂಸ್ಕೃತ ಜನಾಂಗಕ್ಕೆ ನಾವು ಧರ್ಮ ಪ್ರಚಾರಕರನ್ನು ಕಳುಹಿಸುವುದು ಶುದ್ದ ಮೂರ್ಖತನವೆಂದೇ ಭಾವಿಸುತ್ತೇವೆ.”

ವಿವೇಕಾನಂದರ ಈ ಐತಿಹಾಸಿಕ ಭಾಷಣಕ್ಕೂ ಮುನ್ನ ಭಾರತೀಯರೆಡೆಗೆ ಒಂದು ತಾತ್ಸಾರದ ಮನೋಭಾವನೆ ಪಾಶ್ಚಾತ್ಯರಲ್ಲಿತ್ತು. ಹಿಂದೂ ಧರ್ಮವೆಂದರೆ ಅಜ್ಞಾನಿಗಳ, ಮೌಡ್ಯರ, ಮಾಟ-ಮಂತ್ರ ಮಾಡುವವರ ಧರ್ಮ ಎಂಬ ತಪ್ಪು ತಿಳುವಳಿಕೆ ಬಹುಪಾಲು ಜನರಲ್ಲಿ ಮನೆ ಮಾಡಿತ್ತು. ಇಲ್ಲಿದ್ದ ಕೆಲವು ಆಚರಣೆಗಳ, ನಂಬಿಕೆಗಳ, ಆಧಾರದ ಮೇಲೆಯೇ ಇಡೀ ಭಾರತೀಯ ಸಂಸ್ಕೃತಿಯನ್ನು ತುಚ್ಚವಾಗಿ ಕಾಣುವ ಪರಿಪಾಠ ಸಾರ್ವತ್ರಿಕವಾಗಿತ್ತು. ಇಂತಹ ಮನೋಭಾವನೆಗೆ ಅಲ್ಲಿನ ಪಾದ್ರಿಗಳು ನೀರೆರೆಯುತ್ತಿದ್ದರು. ಪ್ರಸಿದ್ದ ವಿಶ್ವ ಧರ್ಮ ಸಮ್ಮೇಳನದ ನಂತರವೂ ನಿರಂತರವಾಗಿ ಅಂದರೆ ೧೮೯೬ ರ ವರೆಗೂ ಸತತವಾಗಿ ನಾಲ್ಕು ವರ್ಷಗಳ ಕಾಲ ವಿವೇಕಾನಂದರು ಅಮೇರಿಕಾದಲ್ಲಿ ಹಾಗೂ ಯೂರೊಫಿನಾಧ್ಯಂತ ವಿಶ್ರಾಂತಿ ಇಲ್ಲದೇ ಹಿಂದೂ ಧರ್ಮದ ಜ್ಯೋತಿಯನ್ನು ನಿರಂತರವಾಗಿ ಬೆಳಗತೊಡಗಿದರು. ಅಸಂಖ್ಯ ಶಿಷ್ಯರನ್ನು ಸಂಪಾದಿಸಿದರು. ಅನೇಕರಿಗೆ ಸಂನ್ಯಾಸ ಧೀಕ್ಷೆ ತೊಡಿಸಿದರು. ಅವರು ಪುನಃ ಮಾತೃಭೂಮಿಗೆ ಕಾಲಿಟ್ಟಿದ್ದು ೧೮೯೭ ರಲ್ಲಿ. ಚಿಕಾಗೋ ಧರ್ಮ ಸಮ್ಮೇಳನದಲ್ಲಿ ಹಾಜರಿದ್ದು ಪ್ರತ್ಯಕ್ಷವಾಗಿ ಕಂಡ ಅನಿಬೆಸೆಂಟ್ ರವರು ಈ ರೀತಿ ಹೇಳಿದ್ದಾರೆ “ಗರ್ವಿಷ್ಠ ಪಾಶ್ಚಾತ್ಯ ದೇಶಗಳಿಗೆ ಭಾರತಮಾತೆ ತನ್ನ ಯೋಗ್ಯತಮ ಪುತ್ರನನ್ನೇ ದೂತನನ್ನಾಗಿ ಕಳುಹಿಸಿ ಗೌರವಾನ್ವಿತೆಯಾದಳು. ಆಶಿಷ್ಠನೂ, ದೃಡಿಷ್ಠನೂ, ಬಲಿಷ್ಟನೂ, ಮೇಧಾವಿಯೂ ಆದ ಆತನು ಎಲ್ಲರನ್ನೂ ಮೀರಿ ಗಂಡರಗಂಡನಾಗಿ ಮುಂದೆ ನಿಂತು ತನ್ನ ಕೆಲಸವನ್ನು ಸಾಧಿಸಿದನು.” ನಿಮಗೆ ನೆನಪಿರಲಿ ಚಿಕಾಗೋ ಸರ್ವ ಧಮ್ಮ ಸಮ್ಮೇಳನದಲ್ಲಿ ಭಾಗವಹಿಸಿದ್ದ ಸ್ವಾಮಿ ವಿವೇಕಾನಂದರಿಗೆ ಕೇವಲ ೩೦ ವರ್ಷವಿದ್ದಿತು ವಯಸ್ಸು. ಅಸಾಮಾನ್ಯ ವ್ಯಕ್ತಿತ್ವ ಅವರದ್ದು.

ಯೂರೋಪಿನಿಂದ ಸಿಲೋನಿಗೆ ಬಂದ ವಿವೇಕಾನಂದರಿಗೆ ಅಲ್ಲಿ ಭವ್ಯವಾದ ಸ್ವಾಗತ ದೊರೆಯುತ್ತದೆ. ಕುದುರೆಯ ಗಾಡಿಯಲ್ಲಿ ಕೂರಿಸಿ ಅಲ್ಲಿನ ಯುವಕರು ತಾವೇ ಸ್ವತಃ ಗಾಡಿಯನ್ನು ಎಳೆಯುತ್ತಾ ಬೀದಿ ಬೀದಿಗಳಲ್ಲಿ ಮೆರವಣಿಗೆ ಮಾಡುತ್ತಾರೆ. ಅಲ್ಲಿ ಕೆಲದಿನಗಳು ಕಳೆದು ತಮ್ಮ ಜನ್ಮಭೂಮಿ ಭಾರತ ಮಾತೆಯ ಮಡಿಲಿಗೆ ಬರುತ್ತಾರೆ. ಮೊದಲಿಗೆ ಮದ್ರಾಸಿಗೆ ಬಂದಿಳಿದ ಅವರಿಗೆ ಭರತ ಮಾತೆ ತಮ್ಮ ಹೆಮ್ಮೆಯ ಪುತ್ರನಿಗೆ ಅಭೂತಪೂರ್ವ ಸ್ವಾಗತ ನೀಡುತ್ತಾಳೆ. ಇವರ ಆಗಮನದ ಕ್ಷಣವನ್ನು ಕಣ್ತುಂಬಿಕೊಳ್ಳಲು ಸಹಸ್ರಾರು ಸಂಖ್ಯೆಯಲ್ಲಿ ಸೇರಿದ್ದ ಜನ ಇವರು ಆಗಮಿಸುತ್ತಿದ್ದಂತೆಯೇ ಘೋಷಣೆಗಳನ್ನು ಕೂಗುತ್ತಾರೆ. ಕುದುರೆ ಗಾಡಿಯಲ್ಲಿ ಕುಳಿತ ಕೆಲವೇ ನಿಮಿಷಗಳಲ್ಲಿ ಕುದುರೆಯ ನಗಗಳನ್ನು ತೆಗೆದು ಯುವಕರೇ ಗಾಡಿಯನ್ನು ಎಳೆಯುತ್ತಾ ಸಾಗುತ್ತಾರೆ. ಎಲ್ಲೆಲ್ಲೂ ಪುಷ್ಪ ವೃಷ್ಠಿ. ಧನ್ಯ ಭಾರತ ಮಾತೆಯೇ ನೀ ಧನ್ಯ.

ಜನವರಿ ತಿಂಗಳ ೧೨ ರಂದು ಹಿಂದೂ ಧರ್ಮದ ಆಗಸದಲ್ಲಿ ದೃವತಾರೆಯೊಂದು ಮೂಡಿರುವಂತಹ ದಿನ. ಈ ಸುದಿನದ ಸಂದರ್ಭದಲ್ಲಿ ಇಡೀ ವಿಶ್ವಮಾನ್ಯರಾದ ಶ್ರೀ ಸ್ವಾಮಿ ವಿವೇಕಾನಂದರನ್ನು ಸ್ಮರಿಸುವುದು ಎಲ್ಲ ಭಾರತೀಯರ ಆದ್ಯ ಕರ್ತವ್ಯವಾಗಬೇಕಿದೆ. ಇಂದಿನ ಯುಗದ ಪ್ರಸ್ತುತ ಸನ್ನಿವೇಶದಲ್ಲಿ ಮತ್ತೊಮ್ಮೆ ಇಂತಹ ಮಹಾ ಪುರುಷರ ಜನನ ಕನಸು ಮಾತ್ರ. ತಾವು ಮಹಾ ಸಮಾಧಿಯಾದ ೧೯೦೨ ನೇ ವರ್ಷದ ಜುಲೈ ೪ ನೇ ದಿನವನ್ನು ಸ್ವಾಮಿಗಳು ಮೊದಲೇ ನಿರ್ಧರಿಸಿದ್ದರು. ಅದೇ ದಿನ ನೀಲಾಕಾಶವನ್ನು ದಿಟ್ಟಿಸುತ್ತಾ ಈ ರೀತಿ ಹೇಳುತ್ತಾರೆ “ಇನ್ನೊಬ್ಬ ವಿವೇಕಾನಂದನು ಇದ್ದಿದ್ದರೆ, ಅವನಿಗೆ ತಿಳಿಯುತ್ತಿತ್ತು, ಈ ವಿವೇಕಾನಂದನು ಏನು ಮಾಡಿದ್ದಾನೆ ಎಂದು ! ಆದರೆ ಕಾಲಾಂತರದಲ್ಲಿ ವಿವೇಕಾನಂದರು ಇನ್ನೆಷ್ಟು ಜನ ಹುಟ್ಟುವರು !!” ಅವರಿಗೂ ತಿಳಿದಿತ್ತು. ಮತ್ತೊಬ್ಬ ವಿವೇಕಾನಂದ ಹುಟ್ಟುವುದು ಕನಸೇ ಸರಿ ಅದೂ ಇಂದಿಗೂ ನಿಜವೇ ಆಗಿದೆ. ಇಂದಾದರೋ ವೇದಾಂತ ಜ್ಞಾನದ ನೈಜ ಅರಿವು ಕಿಂಚಿತ್ತೂ ಇಲ್ಲದ ಡೋಂಗಿ ಸಾಧುಗಳು, ಬಾಬಾಗಳು ರಾರಾಜಿಸುತ್ತಾರೆ. ಬೆಳಗಾದರೇ ಕುತ್ತಿಗೆಯಿಂದ ಹೊಕ್ಕಳ ವರೆಗೂ ರುದ್ರಾಕ್ಷಿ ಮಾಲೆಗಳನ್ನು ಧರಿಸಿ, ಉದ್ದುದ್ದ ವಿಭೂತಿ ಬಳೆದುಕೊಂಡು ಪ್ರಖ್ಯಾತರಾಗುತ್ತಿದ್ದಾರೆ. ಇವರು ಬಡಬಡಿಸುವ ಅರ್ಥಹೀನ ಮಾತುಗಳನ್ನು ಜನ ಬಾಯಿಬಿಟ್ಟು ಕೇಳುತ್ತಾ ಕೂತಿದ್ದಾರೆ. ರಾತ್ರೋ ರಾತ್ರಿ ಸ್ವಯಂಘೋಷಿತ ದೇವಮಾನವರು ತಲೆ ಎತ್ತುತ್ತಿದ್ದಾರೆ. ಬೆರಗಾಗುವ ರೀತಿ ಇವರ ಶಿಷ್ಯರ, ಭಕ್ತರ ಸಂಖ್ಯೆ ಬೆಳೆಯುತ್ತದೆ. ನೋಡ ನೋಡುತ್ತಿದ್ದಂತೆ ಈ ದೇವಮಾನವರನ್ನು ಕೇಂದ್ರವಾಗಿರಿಸಿಕೊಂಡ ದೇವಾಲಯಗಳು, ಆಶ್ರಮಗಳು, ಪೀಠಗಳು, ಸ್ಥಾಪಿತವಾಗುತ್ತದೆ. ಅಜ್ಞಾನದಿಂದ ಕುರುಡಾಗಿ ಇವರನ್ನು ಅನುಸರಿಸುವ, ಆರಾಧಿಸುವ ಭಕ್ತ ಸಮೂಹವೇ ರಚಿತವಾಗುತ್ತದೆ. ಇಂತಹ ಕುರುಡು ಭಕ್ತರ ಅಜ್ಞಾನವನ್ಮೇ ಆಧಾರವಾಗಿಸಿಕೊಂಡು ಪೊಳ್ಳು ಆದ್ಯಾತ್ಮಿಕತೆಯನ್ನೇ ಏಣಿಯಾಗಿಸಿಕೊಂಡು ಸಾಮಾಜಿಕವಾಗಿ ಪ್ರಭಾವಶಾಲಿಯಾಗಿ ಉನ್ನತ ಮಟ್ಟವನ್ನು ಆ ದೇವಮಾನವ ತಲುಪುತ್ತಾನೆ. ಕಾವಿ ಬಟ್ಟೆಯ ಶ್ರೇಷ್ಟತೆಗೆ ಇಂತಹವರಿಂದ ಅಪಚಾರವೇ ಆಗುತ್ತಿದೆ. ಎಷ್ಟೇ ಘಸ್ನಿ ಘೋರಿಗಳ ದಾಳಿಗಳಿಗಾಗಲೀ, ಕ್ರೈಸ್ತ ಪಾದ್ರಿಗಳ ಧೂರ್ತತೆಗಳಾಗಲೀ ಕಾಲಾಂತರದಲ್ಲಿ ಒದಗಿ ಬಂದ ಅನೇಕ ಆಪತ್ತುಗಳ ಸಮಯದಲ್ಲಿ ಧರ್ಮೊದ್ದಾರಕ್ಕಾಗಿ ಭಾರತ ಮಾತೆ ಮಹಾ ಪುರುಷರಿಗೆ ಜನ್ಮವಿತ್ತಿದ್ದಾಳೆ ಇಂತಹ ಎಷ್ಟೆಷ್ಟೋ ಆಪತ್ತುಗಳನ್ನು ಸಂಕಷ್ಟಗಳನ್ನು ಮೀರಿ ಧರ್ಮ ನಿಂತಿದೆ. ಪ್ರಸ್ತುತ ಸನ್ನವೇಶದಲ್ಲಿ ಜನರಿಗೆ ನೈಜ ವೇದಾಂತದ ಅರಿವು, ಉಪನಿಷತ್ತುಗಳ ಸಾರದ ಮಳೆಗರೆಯಬೇಕಿದೆ. ಇನ್ಯಾರೋ ಇಂತಹ ಡೋಂಗಿ ಬಾಬಗಳ, ಠಕ್ಕ ಸ್ವಾಮೀಜಿಗಳ, ದೇವಮಾನವರನ್ನು ಉಲ್ಲೇಖಿಸುತ್ತಾ ಇಡೀ ಧರ್ಮವನ್ನು ಅವಹೇಳನ ಮಾಡುವ ಅವಕಾಶವನ್ನು ನಾವೇ ಅಲ್ಲವೇ ಒದಗಿಸುತ್ತಿರುವುದು.. ಅವಹೇಳನ ಮಾಡುವವರ ದುರುದ್ದೇಶಗಳು ಈಡೇರುವುದಂತೂ ಸಾಧ್ಯವಿಲ್ಲ. ಆದರೂ ಇಂತಹವರ ವಿರುದ್ದ ಸುಮ್ಮನೇ ಕೂಗಾಡಿ, ಕಾದಾಡುವ ಬದಲಿಗೆ ನಮ್ಮದೇ ಜನರಿಗೆ ಸನಾತದ ಧರ್ಮದ ಸಾರದ ಅರಿವು ಬಿತ್ತುವ ಕಾರ್ಯವಾಗಬೇಕಿದೆ. ಧರ್ಮವೆಂಬ ಸುಂದರ ಸರೋವರದಲ್ಲಿ ಕಟ್ಟಿರುವ ಮೌಡ್ಯ, ಅಜ್ಞಾನವೆಂಬ ಪಾಚಿಯನ್ನು ನಿರ್ಮೂಲನ ಮಾಡಬೇಕಿದೆ.

ಇಂದು ಗೀತೆಯ, ವೇದಾಂತದ, ಉಪನಿಷತ್ತುಗಳ ಸಮರ್ಪಕವಾದ ಅರಿವಿನ ಕೊರತೆಯಿಂದ ಬಹುಪಾಲು ಜನ ಮತ್ತೊಮ್ಮೆ ಇನ್ನಿಲ್ಲದ ಮೌಡ್ಯಗಳಿಗೆ ಒಳಗಾಗುತ್ತಿದ್ದಾರೆ. ವೇದಾಂತ ಉಪನಿಷತ್ತುಗಳಲ್ಲಿ ವಿಗ್ರಹಾರಾಧನೆಯ ಉಲ್ಲೇಖ ಎಲ್ಲಿಯೂ ಇಲ್ಲ. ಭಕ್ತಿಮಾರ್ಗದ ಮೂಲಕ ಆದ್ಯಾತ್ಮಿಕ ಸಾಕ್ಷಾತ್ಕಾರಕ್ಕೆ ಒಂದು ಮಾದ್ಯಮವಾಗಿ ಕಾಲ ಕ್ರಮೇಣ ವಿಗ್ರಹಾರಾದನೆ ಪ್ರಚಲಿತಕ್ಕೆ ಬಂತು. ಕ್ರಮೇಣ ಆತ್ಮ ಸಾಕ್ಷಾತ್ಕಾರ, ಪರಮಾತ್ಮ ಸಾಕ್ಷಾತ್ಕಾರಗಳು ಮರೆಯಾಗಿ ಕೇವಲ ವಿಗ್ರಹಾರಾದನೆಯೇ ಮುಖ್ಯ ವೇದಿಕೆಗೆ ಬಂತು, ಈಗಂತೂ ನಾವು ನೋಡುತ್ತಿರುವ ದೇವ ಮಾನವರ ಆರಾಧನೆಗಳು ನಿಜಕ್ಕೂ ವಿಪರ್ಯಾಸವೇ ಅಗಿದೆ. ಇದಲ್ಲದೇ ಮತ್ತೂ ಕೆಲವರು ಪ್ರಗತಿಪರರು ಎಂಬ ಮುಖವಾಡವನ್ನು ಧರಿಸಿಕೊಂಡು ನಮ್ಮದು ಎಂಬ ಎಲ್ಲವನ್ನೂ ಕಡೆಗಣಿಸುತ್ತಾ ಭಾರತೀಯ ಸಂಸ್ಕೃತಿ ಪರಂಪರೆಯ ಬಗ್ಗೆ ಅಭಿಮಾನ ಶೂನ್ಯರಾಗಿ ಅಜ್ಞಾನದಿಂದ ಮನಬಂದಂತೆ ಬಡಬಡಿಸುವ ಸೋಗಲಾಡಿತನಕ್ಕೆ ಶರಣಾಗುತ್ತಿದ್ದಾರೆ. ಒಮ್ಮೆ ಶ್ರೀ ರಾಮಕೃಷ್ಣ ಜಯಂತಿಯ ದಿನದಂದು ಸ್ವಾಮೀ ವಿವೇಕಾನಂದರೆ ಸ್ವತಃ ಬ್ರಾಹ್ಮಣ ಜಾತಿಯಲ್ಲಿ ಹುಟ್ಟಿದವರಲ್ಲದ ತಮ್ಮ ಶಿಷ್ಯರಿಗೆ, ಭಕ್ತರಿಗೆ ಯಜ್ಞೋಪವೀತವನ್ನು ದಾನ ಮಾಡಿ ಗಾಯಿತ್ರಿ ಮಂತ್ರೋಪದೇಷವನ್ನು ಮಾಡುತ್ತಾರೆ. ಮಾನವರೆಲ್ಲರೂ ದೇವರ ಮಕ್ಕಳು. ಎಲ್ಲರಲ್ಲಿಯೂ ನಾರಾಯಣನಿದ್ದಾನೆ. ಎಂದು ಸಾರುತ್ತಾರೆ. ದ್ವಿಜರಲ್ಲದವರನ್ನು ದ್ವಿಜರನ್ನಾಗಿ ಮಾಡಿ ಮೇಲೆತ್ತುವುದು ಅಚಾರ್ಯ ವರ್ಗದವರ ಕರ್ತವ್ಯ ಎನ್ನುತ್ತಾರೆ. ಹೀಗಾಗದಿದ್ದಲ್ಲಿ ಸ್ವಲ್ಪ ಕಾಲದಲ್ಲಿಯೇ ಶೂದ್ರ ಶಕ್ತಿ ಯುಗವನ್ನಾಳುವುದು, ತತ್ವಬದ್ದವಾಗಿ ಶೂದ್ರ ಶಕ್ತಿಗಿಂತಲೂ ಬ್ರಾಹ್ಮಣಶಕ್ತಿ ಮೇಲಾದುದು ಎಂದು ನುಡಿಯುತ್ತಾರೆ. ಸೂಕ್ತ ವಿದ್ಯೆ, ಪಾಂಡಿತ್ಯ, ಅರಿವಿನಿಂದ ಎಲ್ಲರೂ ದ್ವಿಜ ಮಟ್ಟಕ್ಕೆ ಮುಟ್ಟಬೇಕೆಂಬುದು ಇವರ ಆಶಯವಾಗಿತ್ತು. ಆದರೆ ಇಂತಹ ಮಹಾ ಗುರುಗಳ ಕೊರತೆಯಿಂದ ಇಂದಿನ ಹಿಂದೂ ಸಮಾಜ ದಿಕ್ಕುಗಾಣದೇ ಕಂಡ ಕಂಡ ದಿಕ್ಕಿನತ್ತ ಮುಖಮಾಡುತ್ತಿದೆ. ದಿಕ್ಕು ತಪ್ಪಿಸುವವರ ಜಾಲಕ್ಕೆ ಒಳಗಾಗುತ್ತಲಿದೆ. ಎಷ್ಟಾದರೂ ಕಲಿಯುಗದ ನಿಯಮವಲ್ಲವೇ ಧರ್ಮ ಒಂಟಿಕಾಲಿನಲ್ಲಿ ನಿಂತಿದೆ.

ಪ್ರಯತ್ನ ಪಟ್ಟಲ್ಲಿ ಒಂದು ಇಡೀ ಜನಾಂಗ ಅಥವಾ ಸಂಸ್ಥೆಯೊಂದು ಶತಮಾನದಲ್ಲಿ ಸಾಧಿಸಬಹುದಾದ ಅಪಾರವಾದ ಸಾಧನೆಯನ್ನು ತಾವು ಬದುಕಿದ್ದ ಕೇವಲ ೩೯ ವರ್ಷಗಳಲ್ಲಿ ಸ್ವಾಮಿ ವಿವೇಕಾನಂದರು ಸಾಧಿಸಿದರು. ಇಡೀ ಮನುಕುಲದ ಇತಿಹಾಸದಲ್ಲಿ ಭಾರತಾಂಬೆಯ ಹೆಮ್ಮೆಯ, ಧೀರ ಪುತ್ರನಾಗಿ, ವೀರ ಸನ್ಯಾಸಿಯಾಗಿ ಚಿರಸ್ಥಾಯಿಯಾಗಿ ಉಳಿದರು.

1 ಟಿಪ್ಪಣಿ Post a comment
 1. ರಾಜೇಶ್
  ಜೂನ್ 2 2016

  ಅಮೇರಿಕದ ಚಿಕಾಗೋ ದಲ್ಲಿ ವಿಶ್ವ ಧರ್ಮ ಸಮ್ಮೇಳನ ಆಯೋಜಿಸಿದ್ದು ೧೮೯೩ ನೇ ಸೆಪ್ಟೆಂಬರ್ ೧೧, ಸರಿಯಾಗಿದೆ. ಆದರೆ ೭ ನೇ ಪ್ಯಾರಾದಲ್ಲಿ ೧೯೮೩ ಎ೦ದಾಗಿದೆ ದಯವಿಟ್ಟು ತಿದ್ದುಪಡಿ ಮಾಡಿದರೆ ಒಳ್ಳೆಯದು.

  ಧನ್ಯವಾದಗಳು.
  ರಾಜೇಶ್.

  ಉತ್ತರ

ನಿಮ್ಮ ಅನಿಸಿಕೆ...

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Note: HTML is allowed. Your email address will never be published.

Subscribe to comments