ವಿಷಯದ ವಿವರಗಳಿಗೆ ದಾಟಿರಿ

ಜನವರಿ 25, 2015

7

ಶಿಕ್ಷಕನ ಕಾಳಜಿಯೋ? ಬೌದ್ದಿಕ ಸಂವಾದಗಳ ಹನನವೋ?

‍ನಿಲುಮೆ ಮೂಲಕ

­freedomofspeech-ಡಾ.ಎ. ಷಣ್ಮುಖ, ಕುವೆಂಪು ವಿಶ್ವವಿದ್ಯಾನಿಲಯ

ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರರಾದ ‘ದಿನೇಶ್ ಅಮೀನ್ ಮಟ್ಟು’ ರವರು ಫೇಸ್ ಬುಕ್ ನಲ್ಲಿ ಅವರ ಲೇಖನವೊಂದಕ್ಕೆ ಪ್ರತಿಕ್ರಿಯಿಸುತ್ತಾ ಕೆಲುವ ಹುಡುಗರು ಬಳಸಿದ ಪದಪುಂಜಗಳಿಗಾಗಿ ಕಾನೂನು ಕ್ರಮಕ್ಕೆ ಮುಂದಾಗಿದ್ದಾರೆ. ಆ ಹುಡುಗರು ಬಳಸಿದ ಪದಪುಂಜಗಳು ಸಭ್ಯತೆಯ ಎಲ್ಲೆ ಮೀರಿತ್ತು. ಓರ್ವ ಬರಹಗಾರನ ಘನತೆಗೆ ಚ್ಯುತಿ ತರುವಂತಹ ಭಾಷೆಯಲ್ಲಿತ್ತು ಕೂಡ. ಈ ರೀತಿಯ ಪರಿಸ್ಥಿತಿ ಇದೊಂದೇ ಪ್ರಸಂಗಕ್ಕೆ ಸಂಬಂದಿಸಿದ್ದಲ್ಲ! ಸಾಮಾಜಿಕ ತಾಣಗಳನ್ನು ಒಮ್ಮೆ ಕಣ್ಣಾಡಿಸಿದರೆ ಅಲ್ಲಿ ಎಗ್ಗಿಲ್ಲದೆ ಹೀನಾಮಾನವಾಗಿ ಬೈಗುಳದ ಪದಗಳನ್ನೇ ಸಾಮಾನ್ಯವೆಂಬಂತೆ ಬಳಸುತ್ತಾ ಸಭ್ಯ ಮತ್ತು ಗೌರವಾನ್ವಿತ ಬರಹಗಾರರು ಅಸಹ್ಯಪಡುವಂತ ಭಾಷೆಗಳೇ ತುಂಬಿರುವುದನ್ನು ಸರ್ವೇ ಸಾಮಾನ್ಯವೆಂಬಂತೆ ಕಾಣಬಹುದು. ಈ ಕುರಿತು ಹಲವು ಬರಹಗಾರರು ಅದೇ ಸಾಮಾಜಿಕ ತಾಣಗಳಲ್ಲಿ ಆತಂಕ ವ್ಯಕ್ತಪಡಿಸುತ್ತಿರುವಂತದ್ದನ್ನೂ ಕಾಣಬಹುದು. ಇಂತಹ ಸನ್ನಿವೇಶದಲ್ಲಿ ದಿನೇಶ್ ಅಮೀನ್ ಮಟ್ಟುರವರ ಈ ನಡೆ ಇದಕ್ಕೆಲ್ಲಾ ಕಡಿವಾಣ ಹಾಕುವ ಒಂದು ದಿಟ್ಟ ಹೆಜ್ಜೆ ಎಂದು ಯೋಚಿಸುವುದು ಸಕಾರಣವಾಗಿಯೇ ಇದೆ. ಒಂದೊಮ್ಮೆ ದಿನೇಶ್ ಅಮೀನ್ ಮಟ್ಟುರವರ ಈ ಕ್ರಮದ ಹಿಂದೆ ಇದೇ ಕಾಳಜಿಯೇ ಇದ್ದಂತ ಪಕ್ಷದಲ್ಲಿ ಆರೋಗ್ಯಪೂರ್ಣ ಬೌದ್ದಿಕ ಚರ್ಚೆಯ ವಾತಾವರಣವನ್ನು ಬಯಸುವ ಯಾರೇ ಆದರೂ ಈ ನಡೆಯನ್ನು ಮುಕ್ತಮನಸ್ಸಿನಿಂದ ಬೆಂಬಲಿಸಲಿಕ್ಕೇಬೇಕು.

ಆದರೆ ವಾಸ್ತವ ಇದಕ್ಕೆ ವಿರುದ್ದವಾಗಿದೆ. ಅಂದರೆ ದಿನೇಶ್ ಅಮೀನ್ ಮಟ್ಟುರವರ ಈ ನಡೆಗೆ ದೊಡ್ಡಸಂಖ್ಯೆಯಲ್ಲಿ ಬೆಂಬಲ ನಿರೀಕ್ಷಿಸಬೇಕಾದ ಈ ಪ್ರಸಂಗದಲ್ಲಿ ಅವರ ಈ ನಡೆಯ ವಿರುದ್ದ ಚಳುವಳಿಯೋಪಾದಿಯಲ್ಲಿ ಪ್ರತಿಭಟನೆ ವ್ಯಕ್ತವಾಗುತ್ತಿದೆ. ಸಾಮಾಜಿಕ ತಾಣಗಳಲ್ಲಿ ಅಸಭ್ಯ ಭಾಷಾ ಪ್ರಯೋಗದ ಬಗ್ಗೆ ಆತಂಕವನ್ನು ವ್ಯಕ್ತಪಡಿಸುತ್ತಿದ್ದವರಾದರೂ ದಿನೇಶರನ್ನು ಬೆಂಬಲಿಸ ಬೇಕಿತ್ತು! ಆದರೆ ಅವರಲ್ಲೂ ಕೆಲವರು ಇವರ ನಡೆಯನ್ನು ವಿರೋಧಿಸುತ್ತಿದ್ದಾರೆ ಮತ್ತು ಹಲವರು ಮೌನಕ್ಕೆ ಶರಣಾಗಿದ್ದಾರೆ ಇದು ಸೋಜಿಗದ ಸಂಗತಿ. ಹಾಗಿದ್ದರೆ ಇವರ ನಡೆಯನ್ನು ವಿರೋದಿಸುತ್ತಿರುವವರು ಸಾಮಾಜಿಕ ಜಾಲತಾಣಗಳಲ್ಲಿ ಅಸಭ್ಯ ಭಾಷಾ ಪ್ರಯೋಗಗಳನ್ನು ಬೆಂಬಲಿಸುತ್ತಿದ್ದಾರೆಯೇ? ಎಂದೂ ಸಹ ಯೋಚಿಸಬೇಕಾದ ಸಂಗತಿಯಾಗುತ್ತದೆ. ಈ ಸೂಜಿಗದ ಸ್ಥಿತಿಯನ್ನು ಅರ್ಥಮಾಡಿಕೊಳ್ಳಬೇಕೆಂದರೆ ಅಮೀನ್ ಮಟ್ಟುರವರ ಈ ನಡೆಗೆ ಕಾರಣವಾದ ಇಡೀ ಘಟನೆಯನ್ನು ಒಮ್ಮೆ ಅವಲೋಕಿಸಬೇಕು.

ಸುಮಾರು ಮೂರು ವರ್ಷಗಳ ಹಿಂದೆ ವಿವೇಕಾನಂದರ ಬಗ್ಗೆ ದಿನೇಶ್ ಅಮೀನ್ ಮಟ್ಟುರವರು ಪತ್ರಿಕೆಯೊಂದಕ್ಕೆ ಅಂಕಣಕಾರರಾಗಿದ್ದಾಗ ಲೇಖನವೊಂದನ್ನು ಬರೆದಿದ್ದರು. ಅದರಲ್ಲಿ ವಿವೇಕಾನಂದರ ಜೀವನದ ವಾಸ್ತವಗಳು ಎನ್ನುವುದಕ್ಕೆ ಸಂಬಂದಿಸಿದಂತೆ ದಿನೇಶರ ವಿಚಾರಗಳನ್ನು ಖಂಡಿಸಿ ಆಗ ವ್ಯಾಪಕವಾದ ಟೀಕೆಗಳು ಸಹ ವ್ಯಕ್ತವಾಗಿತ್ತು. ಇತ್ತೀಚೆಗೆ ವಿವೇಕಾನಂದರ ಜಯಂತಿಯ ಸಂಧರ್ಬದಲ್ಲಿ ಅದೇ ಲೇಖನವನ್ನು ದಿನೇಶರ ಅಭಿಮಾನಿಗಳಲ್ಲೊಬ್ಬರು ಪೇಸ್ ಬುಕ್ಕಿನಲ್ಲಿ ಶೇರ್ ಮಾಡಿದ್ದರು. ಆಗ ಅದನ್ನು ಓದಿದವರೊಬ್ಬರು ಅದೇ ಲೇಖನವನ್ನು ಫೇಸ್ ಬುಕ್ಕಿನ ಒಂದು ಚರ್ಚಾಗುಂಪಾದ ‘ನಿಲುಮೆ’ ವೇದಿಕೆಯಲ್ಲಿ ಶೇರ್ ಮಾಡಿ ಲೇಖನದಲ್ಲಿ ವಿವೇಕಾನಂದ ಕುರಿತ ದಿನೇಶರ ವಿವರಣೆಗಳ ಬಗ್ಗೆ ಅಸಮಧಾನ ವ್ಯಕ್ತಪಡಿಸಿದ್ದಾರೆ. ತಾಣದಲ್ಲಿ ಈ ಲೇಖನವನ್ನು ಶೇರ್ ಮಾಡಿ ಚರ್ಚೆಯಾಗುತ್ತಿದ್ದಾಗ ಆ ಚರ್ಚೆಯಲ್ಲಿ ಸಾಕ್ಷಿಯಾಗಿ ಭಾಗವಹಿಸಿದ್ದ ಓರ್ವ ಬರಹಗಾರರೇ ಈ ವಿಧ್ಯಮಾನದ ಬಗ್ಗೆ ಹೀಗೆ ಹೇಳಿಕೊಂಡಿದ್ದಾರೆ: “ನಿಲುಮೆಯಲ್ಲಿ ನಮ್ಮ ಸರ್ಕಾರದ ಮಾಧ್ಯಮ ಸಲಹೆಗಾರರು, ಈ ಹಿಂದೆ ಬರೆದ ವಿವೇಕಾನಂದರ ಬಗೆಗಿನ ಲೇಖನದ ಬಗ್ಗೆ ಬೈದುಕೊಳ್ಳುತ್ತಿದ್ದರು ನಾನು ಆ ಸಮಯದಲ್ಲಿ ಆನ್ಲೈನ್ ಇದ್ದ ಕಾರಣ, ತಕ್ಷಣವೇ ಅವರಿಗೆ ಪದಬಳಕೆಯ ಬಗ್ಗೆ ಗಮನ ನೀಡಿ ಎಂದೆ. ನಂತರವೂ ಒಂದೆರಡು ಬಾರಿ ಎಚ್ವರಿಸಿದೆ. ಅಷ್ಟರಲ್ಲಿ ನಿಲುಮೆಯ ನಿರ್ವಾಹಕರಾದ ರಾಕೇಶ್ ಶೆಟ್ಟಿ ಕೂಡ ಬಂದು ಕಮೆಂಟ್ಸ್ ಡಿಲೀಟ್ ಮಾಡಿ ಎಲ್ಲರನ್ನೂ ಎಚ್ಚರಿಸಿದರು. ಇದೆಲ್ಲಾ ನಡೆದದ್ದು ಕೇವಲ ಅರ್ಧ ಘಂಟೆ / ಒಂದು ಘಂಟೆಯ ಅವಧಿಯೊಳಗೆ!”

ಈ ಘಟನೆಯಿಂದ ಸಿಟ್ಟಿಗೆದ್ದ ದಿನೇಶರು ಅವಾಚ್ಯವಾಗಿ ನಿಂದಿಸುತ್ತಿದ್ದವರಿಗೆ ತಕ್ಷಣ ಕ್ಷಮೆಕೋರಬೇಕು ಇಲ್ಲವಾದರೆ ಕಠಿಣಕ್ರಮ ಕೈಗೊಳ್ಳಬೇಕಾಗುತ್ತದೆ ಎನ್ನುವ ರೀತಿಯ ಎಚ್ಚರಿಕೆ ನೀಡಿದ್ದಾರೆ. ಈ ಎಚ್ಚರಿಕೆಯಿಂದ ವಿಚಲಿತರಾದ ಆ ಲೇಖನವನ್ನು ಶೇರ್ ಮಾಡಿದ ಮತ್ತು ಆ ಲೇಖನಕ್ಕೆ ಪ್ರತಿಕ್ರಿಯೆಯಲ್ಲಿ ನಿಂದನಾತ್ಮಕ ಭಾಷೆ ಬಳಸಿದ ಇಬ್ಬರೂ ಹುಡುಗರು ದಿನೇಶರ ವಾಲ್ ಗೇ ಬಂದು ತಮ್ಮದು ತಪ್ಪಾಯಿತೆಂದು ಕ್ಷಮೆ ಕೋರಿದ್ದಾರೆ. ಅಲ್ಲಿಗೆ ದಿನೇಶರು ಅವರಿಗೆ ಸ್ವಲ್ಪ ಬುದ್ದಿಮಾತು ಹೇಳಿ ಕೈಬಿಡಬಹುದಿತ್ತು. ಒಂದಮ್ಮೆ ಅವರು ಕ್ಷಮೆ ಕೇಳಿದರೂ ಸಹ ಸಾಮಾಜಿಕ ತಾಣದಲ್ಲಿ ಈ ರೀತಿಯ ಅಸಭ್ಯ ಮಾತುಗಳನ್ನು ಬಳಸಿದರೆ ಅದು ಅಕ್ಷಮ್ಯ, ಹಾಗಾಗಿ ಇದಕ್ಕೆಲ್ಲಾ ಕಡಿವಾಣ ತೊಡಿಸುವ ಕಾಳಜಿಯಿಂದ ಅಂತವರ ವಿರುದ್ದ ಸೂಕ್ತ ಕಾನೂನು ಕ್ರಮ ಜರುಗಿಸುವುದೇ ಸರಿಯಾದ ಮಾರ್ಗವೆಂದು ಅವರು ಭಾವಿಸಿ ಅಂತವರ ವಿರುದ್ದ ದೂರು ನೀಡುವ ಕ್ರಮಕ್ಕೆ ಮುಂದಾಗಿದ್ದರೆ ಅದನ್ನೂ ಅವರ ಕಾಳಜಿಗಾಗಿ ಗೌರವಿಸಬಹುದಿತ್ತು.

ಆದರೆ ದೂರಿನಲ್ಲಿ ಹೆಸರಿಸಿದ ಹೆಸರುಗಳು ಮತ್ತು ಉಲ್ಲೇಖಿಸಿದ ವಿಚಾರಗಳು ಅವರ ಕಾಳಜಿಯ ಬಗ್ಗೆಯೇ ಸಂಶಯಿಸುವಂತೆ ಮಾಡಿದೆ. ಏಕೆಂದರೆ, ಅವರನ್ನು ನಿಂದಿಸಿದವರನ್ನು ಮಾತ್ರ ಗುರಿಯಾಗಿಸಿಕೊಂಡು ಅವರು ತಮ್ಮ ದೂರನ್ನು ನೀಡಲಿಲ್ಲ. ಬದಲಿಗೆ, ನಿಂದಿಸಿದವರ ಜೊತೆಗೆ ಆ ಲೇಖನವನ್ನು ಶೇರ್ ಮಾಡಿದ ಪೇಸ್ ಬುಕ್ ಚರ್ಚಾತಾಣವಾದ ‘ನಿಲುಮೆ’ಯ ನಿರ್ವಾಹಕರ ಮೇಲೂ ದೂರನ್ನು ನೀಡಿದ್ದಾರೆ. ಹಾಗೆಯೇ ಆ ತಾಣದಲ್ಲಿ ಹಿಂದಿನಿಂದಲೂ ತನ್ನ ಮತ್ತು ತಮ್ಮ ಸರ್ಕಾರದ ವಿರುದ್ದ ಆಕ್ಷೇಪಾರ್ಹ ಟೀಕೆಗಳೇ ತುಂಬಿವೆ ಎನ್ನುವ ರೀತಿಯಲ್ಲಿ ಉಲ್ಲೇಖಿಸಿ ಅವುಗಳ ಬಗೆಗೂ ಸೂಕ್ತಕ್ರಮ ತೆಗೆದುಕೊಳ್ಳಬೇಕೆಂದು ದೂರಿನಲ್ಲಿ ಒತ್ತಾಯಿಸಿದ್ದಾರೆ. ಇದು ಮೇಲ್ನೋಟಕ್ಕೇ ತಮ್ಮ ಲೇಖನಕ್ಕೆ ಅಸಭ್ಯ ಪದಗಳಿಂದ ನಿಂದಿಸಿದವರ ನೆಪವನ್ನಿಟ್ಟುಕೊಂಡು ತಮ್ಮ ಮತ್ತು ಸರ್ಕಾರದ ನೀತಿ ನಿಲುವುಗಳ ವಿರುದ್ದ ಟೀಕೆ ಮಾಡುತ್ತಿರುವ ಒಂದು ಸಾಮಾಜಿಕ ಚರ್ಚಾ ತಾಣವನ್ನೇ ಗುರಿಯಾಗಿರಿಸಿಕೊಂಡು ಕಾನೂನಿಕ ಕ್ರಮಕ್ಕೆ ಮುಂದಾಗುತ್ತಿರುವುದು ಸ್ಪಷ್ಟವಾಗುತ್ತದೆ.

ಒಂದೊಮ್ಮೆ ದಿನೇಶ್ ಅಮೀನ್ ಮಟ್ಟುರವರು ಅವರನ್ನು ತೇಜೋವಧೆ ಮಾಡಿದವರನ್ನು ಗುರಿಯಾಗಿಸಿಕೊಂಡು ಕ್ರಮಕೈಗೊಳ್ಳಲು ಮುಂದಾಗಿದ್ದರೆ, ಸಾಮಾಜಿಕ ಜಾಲತಾಣಗಳಲ್ಲಿನ ಕಲುಷಿತ ಭಾಷೆಯ ಬಗ್ಗೆ ಸಾಕಷ್ಟು ರೋಸಿಹೋಗಿದ್ದ ಪ್ರಜ್ಞಾವಂತರೆಲ್ಲರೂ ದಿನೇಶರಿಗೆ ಬೆಂಬಲವಾಗಿರುತ್ತಿದ್ದರು. ಆದರೆ ಅವರು ಈ ಸಂಧರ್ಭವನ್ನು ‘ನಿಲುಮೆ’ಯ ತಾಣವನ್ನೇ ನಿರ್ಬಂದಿಸುವ ಅಸ್ತ್ರವಾಗಿ ಪ್ರಯೋಗಿಸುತ್ತಿರುವುದು ಅವರ ವಿರುದ್ದ ದೊಡ್ಡಮಟ್ಟದ ಪ್ರತಿಭಟನೆ ಹುಟ್ಟಿಕೊಳ್ಳಲು ಕಾರಣವಾಗಿದೆ.

ಈ ಸಂಧರ್ಭದಲ್ಲಿ ದಿನೇಶರು ಈ ದೂರಿನ ಹಿಂದಿನ ತಮ್ಮ ಕಾಳಜಿಯನ್ನು ವ್ಯಕ್ತಪಡಿಸುತ್ತಾ ಓರ್ವ ಶಿಕ್ಷನ ರೀತಿಯಲ್ಲಿ ದಾರಿತಪ್ಪುತ್ತಿರುವ ಯುವಕರಿಗೆ ತಿದ್ದಿಕೊಳ್ಳಲು ಈ ಕ್ರಮಕೈಗೊಂಡಿರುವುದಾಗಿ ಹೇಳಿಕೊಂಡಿದ್ದಾರೆ. ಹಾಗಿದ್ದರೆ ಈ ಯುವಕರು ಸಾಮಾಜಿಕ ಜಾಲತಾಣಗಳಲ್ಲಿ ಗಹನವಾದ ಬೌದ್ದಿಕ ವಿಚಾರಗಳ ಕುರಿತೂ ಸಹ ಈ ರೀತಿಯ ಅಸಭ್ಯ ಭಾಷೆಗಳಲ್ಲಿ ಏಕೆ ಪ್ರತಿಕ್ರಿಯಿಸುತ್ತಾರೆ? ಅವರುಗಳಿಗೆ ಈ ರೀತಿಯ ಪದಗಳನ್ನು ಬಳಸಲು ಪ್ರೇರಣೆ ಎಲ್ಲಿಂದ ಬರುತ್ತಿದೆ? ಎನ್ನುವುದನ್ನೂ ಅವಲೋಕಿಸಿಕೊಳ್ಳಬೇಕಿದೆ. ಯುವಕರ ದಾರಿತಪ್ಪಿದ ಈ ರೀತಿಯ ಧೋರಣೆಗೆ ಪ್ರೇರಣೆಯು ಕೆಲವು ಬೌದ್ದಿಕ ಚರ್ಚೆಯ ಮಾದರಿಗಳಿಂದಲೇ ಬರುತ್ತಿದೆ ಎನ್ನುವ ಕುರಿತು ಓರ್ವ ವಿದ್ವಾಂಸರು ಗಮನಸೆಳೆಯುತ್ತಾರೆ.

ಇಂದು ‘ತಲೆ ಹಿಡುಕ’, ‘ಮುಠ್ಠಾಳ’, ‘ಮುಖಕ್ಕೆ ಉಗಿಯಿರಿ’ ‘ಆ್ಯಸಿಡ್ ಹಾಕಿ’ ..ಇತ್ಯಾದಿ ಪದಗಳನ್ನು ಎಗ್ಗಿಲ್ಲದೆ ಸಾಮಾಜಿಕ ಜಾಲತಾಣಗಳ ಬೌದ್ಧಿಕ ಚರ್ಚೆಯಲ್ಲಿ ಬಳಸತೊಡಗಿದ್ದಾರೆ. ಈ ಪರಿಭಾಷೆಗಳು ಸಾಮಾನ್ಯವೆಂಬಂತೆ ಇಂದಿನ ಯುವಕರು ಬಳಸಲು ಕಾರಣ ಇಂದು ಬೌದ್ದಿಕ ಚರ್ಚೆಯಲ್ಲಿ ಎದರಾಳಿಯ ವಾದಗಳನ್ನು ಟೀಕಿಸುವ/ವಿಮರ್ಶಿಸುವ ಸಹಜ ಮಾದರಿಯೇ ಎಂಬಂತೆ ಅವರು ಕಲಿಯುತ್ತಿರಬೇಕು. ಆ ಕಲಿಕೆ ಅವರಿಗೆ ಎಲ್ಲಿಂದ ಬರುತ್ತಿದೆ ಎನ್ನುವುದನ್ನು ತಿಳಿಯಲು ಒಂದು ನಿದರ್ಶನವನ್ನು ನೋಡೋಣ!

ಇತ್ತೀಚೆಗೆ ನಾಡಿನ ಪತ್ರಿಕೆಯೊಂದರಲ್ಲಿ ಒಂದು ಬೌದ್ದಿಕ ಚರ್ಚೆಯ ಸರಣಿ ಪ್ರಕಟವಾಯಿತು. ಅದರಲ್ಲಿ ಒಂದು ಪಕ್ಷದವರ ವಾದದ ಟೀಕೆಗಳೆಂಬಂತೆ ಪ್ರಖ್ಯಾತ ಚಿಂತಕರು ಬರೆದ ಲೇಖನಗಳಲ್ಲಿ ಬಳಕೆಯಾದ ಪದಪುಂಜಗಳೆಂದರೆ: “ಮನುಧರ್ಮಶಾಸ್ತ್ರದ ಹೆಣದೊಳಗಿನಿಂದ ಉತ್ಪತ್ತಿಯಾದ ಹೆಣದೊಳಗಿನ ಹುಳುಗಳಂತಾಡುತ್ತಿರುವ ಈ ಗ್ಯಾಂಗ್ ಅನ್ನು ಯಾರು ಕಾಪಾಡಬೇಕೋ ತಿಳಿಯದಾಗಿದೆ”. “ಚತುರ ಚೋರರ ಸಂಚಿನ ಜಾಲ”, “ಮರೆಮೋಸದ ಕಳ್ಳರು” “ಇವರ ಚಲನಚಲನಗಳ ಮೇಲೆ ಕಣ್ಣಿಡಬೇಕಾಗಿದೆ” “ಶಾಹೀ ಕುಬುದ್ಧಿ ತಂತ್ರ” “ನವಗೋಸುಂಬೆ ವೈದಿಕಶಾಹಿ” “ಮಲದೇವತಾ ಅರ್ಚಕರು” … ಇತ್ಯಾಧಿ ಪದಪುಂಜಗಳು ಒಂದು ವಿಚಾರದ ಕುರಿತು ಸಂಶೋಶೋದನ ತಂಡವು ಮಂಡಿಸಿದ ವಾದವನ್ನು ವಿಮರ್ಶಿಸಲು ನಾಡಿನ ಪ್ರಖಾತ ಚಿಂತಕರ ಲೇಖನದಲ್ಲೇ ಮೂಡಿಬಂದವು. ಇಂತಹ ವಿಮರ್ಶೆಯ ಮಾದರಿಯನ್ನೇ ಬೌದ್ದಿಕ ಟೀಕೆಗಳ ಆದರ್ಶಗಳೆಂದು ಓದಿ ಬೆಳೆಯುತ್ತಿರುವ ಯುವಕರಿಂದ ಅವರ ಪ್ರತಿಕ್ರಿಯೆಗಳಲ್ಲಿ ಇನ್ನೆಂತಹ ಸಭ್ಯ ವಿಮರ್ಶೆ/ಟೀಕೆಗಳನ್ನು ನಿರೀಕ್ಷಿಸಲು ಸಾಧ್ಯ?

ಈ ಹಿನ್ನೆಲೆಯಲ್ಲಿ ನಿಲುಮೆ ತಾಣದಲ್ಲಿ ದಿನೇಶ್ ಅಮೀನ್ ಮಟ್ಟು ರವರು ಪ್ರತಿನಿಧಿಸುತ್ತಿರುವ ವಾದಗಳನ್ನು ಪ್ರಶ್ನಿಸುತ್ತಿರುವ, ಟೀಕಿಸುತ್ತಿರುವ ಯುವಕರ ಭಾಷೆಯ ಅಸಭ್ಯತೆಯನ್ನು ಕಟೆಕಟೆಗೆ ಎಳೆಯುವುದಿದ್ದರೆ ಅವರಿಗೆ ಪ್ರೇರಣೆಯಾಗಿರುವ ಈ ಬೌದ್ದಿಕ ಚರ್ಚೆ ಮತ್ತ ವಿಮರ್ಶೆಯ ಮಾದರಿಯನ್ನೂ ಕಟಕಟೆಗೆ ಎಳೆಯಲೇಬೇಕಲ್ಲವೇ?

ದಿನೇಶ್ ಅಮೀನ್ ಮಟ್ಟೂರವರ ದೂರಿನ ಉದ್ದೇಶವಾಗಲೀ ಕಾಳಜಿಯಾಗಲೀ ಈ ನೆಲೆಯಲ್ಲಿಲ್ಲ. ಬದಲಿಗೆ ಈ ಪ್ರಕರಣದ ಘಟನೆಗಳಲ್ಲಿ ನಮಗೆ ಖಾತರಿಯಾಗುವಂತೆ ತಮ್ಮ ವಿರುದ್ದದ ವಾದಗಳನ್ನು ಮತ್ತು ಆ ವಾದಗಳಿಗೆ ವೇದಿಕೆಯನ್ನೊದಗಿಸುವ ಸಾಮಾಜಿಕ ತಾಣವೊಂದನ್ನು ಹತ್ತಿಕ್ಕುವ ಧೋರಣೆಯ ಭಾಗವಾಗಿಯೇ ಅವರ ನಡೆ ಇರುವುದು ಖಚಿವಾಗುತ್ತದೆ. ಇದು ನಮ್ಮ ನಡುವೆ ಬೌದ್ದಿಕ ಸಂವಾದಗಳನ್ನೇ ಇಲ್ಲವಾಗಿಸುವ ನಡೆಯಂತೆಯೇ ಕಾಣುತ್ತಿದೆ. ಇದು ಪ್ರಜ್ಞಾವಂತರೆಲ್ಲರೂ ಆತಂಕಪಡಲೇ ಬೇಕಾದ ವಿಚಾರವಾಗಿದೆ.

Read more from ಲೇಖನಗಳು
7 ಟಿಪ್ಪಣಿಗಳು Post a comment
 1. ani
  ಜನ 25 2015

  ಷಣ್ಮುಖ ಅವರೆ ನಿಮ್ಮ ಬರಹ ಸಕಾಲಿಕವಾಗಿದೆ. ಮತ್ತು ಚಿಂತನೆಗೆ ಹಚ್ಚುವಂತಿದೆ. ಇಲ್ಲಿ ನೀವು ಮರೆತಿರುವಿರೋ ಅಥವಾ ನಿಮ್ಮ ಪ್ರಕರಣಕ್ಕೆ ಸಂಬಂಧವಿಲ್ಲದವರನ್ನು ಏಕೆ ಎಳೆದು ತರಬೇಕೆಂದು ಸುಮ್ಮನೇ ಬಿಟ್ತಿದ್ದೀರೋ ನನಗೆ ತಿಳಿದಿಲ್ಲ. ಅದೇನೆಂದರೆ ನಮ್ಮ ಯುವಕರಿಗೆ ಅಸಭ್ಯ ಭಾಷೆಗಳನ್ನು ಎಗ್ಗಿಲ್ಲದೇ ಬಳಸಲು ರೂಢಿ ಮಾಡಿಸಿದವರೆ ಲಂಕೇಶರು. ನಂತರ ಅವರ ಗರಡಿಯಲ್ಲೇ ದೊಡ್ಡವರಾದ ಈಗ ಬೇರೊಂದು ಪತ್ರಿಕೆ ನಡೆಸುತ್ತಿರುವ ಬೆಳಗೆರೆ ಅವರು. ಇವರಿಂದಲೇ ಅಕ್ಷರಸ್ತರು ಹಾಳಾಗುತ್ತಿದ್ದಾರೆ. ಇವರೇ ಮೊದಲು ಚಡ್ಡಿ ಲಾಡಿ ಹಾಗೆ ಹೀಗೆ ಅಸಭ್ಯತೆ ಬೆಳೆಸಿದವರು. ಹಾಗೆ ಅಸಭ್ಯ ಪದ ಬಳಕೆಗಾಗಿ ನಮ್ಮ ಆಂಜನೇಯನನ್ನು ಶಿಕ್ಷಿಸುವದಕ್ಕೂ ಮೊದಲು ಈ ಇಬ್ಬರನ್ನೂ ಶಿಕ್ಷಿಸಬೇಕಾಗುತ್ತದೆ. ಒಬ್ಬರು ಮೇಲೆ ಹೋದರೂ ಇನ್ನೊಬ್ಬರಿದ್ದಾರೆ. ಇರಲಿ, ಆಂಜನೇಯ ಅಂಥ ಭಾಷೆ ಕಲಿತದ್ದೇ ಇಂಥ ಪತ್ರಿಕೆ ಓದಿದ್ದರಿಂದ . ಅವರೊಬ್ಬರೇ ಅಲ್ಲ. ಸಾಮಾಜಿಕ ಜಾಲ ತಾಣದಲ್ಲಿ ಎಗ್ಗಿಲ್ಲದೇ ನಡೆಯುವ ನಿಂದನೆಗಳೆಲ್ಲವೂ ಖಂಡಿತವಾಗಿಯೂ ಇವರ ಕೊಡುಗೆಗಳೇ . ಇನ್ನು ಚಲನಚಿತ್ರಗಳೂ ಕಾರಣವಾಗಿವೆ. ಅಲ್ಲಿಯೂ ಈಗ ತುಂಬಾ ಅಸಭ್ಯ ಭಾಷೆ ಬಳಸಲಾಗುತ್ತದೆ. ಮಟ್ತು ಅವರು ಇವರಿಗೆಲ್ಲಾ ಮಟ್ಟ ಹಾಕಲೆಂದು ನಾನು ಹಾರೈಸುವೆ. ನಂತರ ಆಂಜನೇಯ ಸುದ್ದಿಗೆ ಬರಲಿ.

  ಉತ್ತರ
 2. ಜನ 25 2015

  right…

  ಉತ್ತರ
 3. Ganapathi Magalu
  ಜನ 26 2015

  ಮಾನ್ರೇ ನಿಮ್ಮ ಅಭಿಪ್ರಾಯಕ್ಕೆ ಧನ್ಯವಾದಗಳು. ಆದರೆ ನನ್ನ್ನ ಅಭಿಪ್ರಾಯವೆಂದರೆ, ಬಹಳ ಬಳಸಲು ಯೋಗ್ಯವಲ್ಲದ ಭಾಷೆಯ, ಪದಪ್ರಯೋಗಗಳು ಆಗುತ್ತಿರುವುದು ಕೇವಲ ಅಂತರ್ಜಾಲದಲ್ಲಿ ಮಾತ್ರವಲ್ಲ. ಅಸಹಿಷ್ಣುತೆ ಸಹ ಕೇವಲ ಇಲ್ಲಿ ಮಾತ್ರ ವ್ಯಕ್ತವಾಗುತ್ತಿಲ್ಲ. ಬದುಕಿನ ಎಲ್ಲಾ ಕಡೆ ಆಗುತ್ತಿರುವುದರ ಒಂದು ತುಣುಕು ಇಲ್ಲಿ ಕಾಣಿಸುತ್ತಿದೆ. ಅಭಿಪ್ರಾಯ ಬೇಧವನ್ನು ಒಪ್ಪಲು ಸಾಧ್ಯವೇ ಇಲ್ಲ ಎನ್ನುವುದನ್ನು ಎಲ್ಲಾ ಕಡೆ ಕೂಗು, ನಿಂದೆ, ಗಲಾಟೆ, ಅವಮಾನ ಮಾಡುವುದು, ಭಯ ಹುಟ್ಟಿಸುವುದು ಮುಂತಾದ ಮಾರ್ಗಗಳನ್ನು ಬಳಸಿ ಮಾಡಲಾಗುತ್ತಿದೆ.
  ಒಪ್ಪದೇ ಇರುವ ವಿಷಯಗಳನ್ನು ತಿಳಿಸುವುದೇ ಪ್ರಜಾಪ್ರಭುತ್ವದ ತಳಹದಿ. ಆದರೆ ಯಾವಾಗ ನಾವು ಬಹುತ್ವವನ್ನು ಬಿಟ್ಟು ಏಕತ್ವ ಕಡೆ ಸಾಗುತ್ತೇವೋ ಆಗ ಈ ಎಲ್ಲಾ ವಿಧಾನಗಳು ಅಭಿಪ್ರಾಯ ಭೇಧಗಳನ್ನು ಹತ್ತಿಕ್ಕಲು ಬಳಸಬೇಕಾಗುತ್ತದೆ. ನಮ್ಮ ಕುಟುಂಬ, ಶಿಕ್ಷಣ, ಕೆಲಸ, ಮಾಧ್ಯಮಗಳಲ್ಲಿ ಬಳಸಾಗುವ ಭಾಷೆ ಎಂತಹದ್ದು? ಆ ಬಗ್ಗೆ ಆಲೋಚಿಸಿದರೆ ಉತ್ತಮ.
  ಬಹಳ ಸಮಯ ಹಳ್ಳಿಯಲ್ಲಿ ಕಳೆಯುವ ನಾನು ಬೆಂಗಳೂರು ನಗರಕ್ಕೆ ಹೋದಾಗ ಬಸ್ನ ಕಂಡೆಕ್ಟರ್ ನಿಧಾನ ಮಾತನಾಡಿದ್ದು ನಾನು ನೋಡಿಯೇ ಇಲ್ಲ. ಬಹಳ ಬಾರಿ ನಾನೂ ಯಾಕೆ ಸ್ವಾಮಿ ಕೂಗಾಡುತ್ತೀರಿ, ನಿಧಾನ ಹೇಳಿ ಕೇಳಿಸುತ್ತದೆ ಅಂದಾಗ ನನ್ನನ್ನು ಅವರೆಲ್ಲಾ ಮೈಲಿಗೆಯ ದೃಷ್ಟಿಯಲ್ಲಿ ಕಂಡಿದಿದ್ದೆ. ನಾನು ಮಾತನಾಡುವಾಗ ಮೊಬೈಲ್ ನಲ್ಲಿ ಮುಳುಗಿದ್ದ ಬೀದಿ ಬದಿ ವ್ಯಾಪಾರಿ ಬೇಕಾದರೆ ಕೊಳ್ಳಿ ಇಲ್ಲ ಅಂದರೆ ರೈಟ್ ಹೇಳಿ ಅಂದರು! ಇದೇ ರೀತಿ ಶಾಲಾ ಕಾಲೇಜುಗಳಲ್ಲಿ ಎದುರಿಗೆ ಅತಿಯಾದ ಗೌರವ ನೀಡುವ ಹಿರಿಯರಿಗೆ ಹಿಂದುಗಡೆ ಅವರ ಬಗ್ಗೆ ಮಾತನಾಡುವಾಗ ಬಳಸುವ ಭಾಷೆ? ಅದೇ ರೀತಿ ಪೋಲೀಸ್, ನ್ಯಾಯಾಲಯ, ಮಂತ್ರಿ ಮಹೋದಯರಿಂದ ಹಿಡಿದು ಮನೆಗೆ ಬರು ಹಿರಿಯರು ಅಥವಾ ನಮಗೆ ಕಿರಿಕಿರಿ ಉಂಟು ಮಾಡುತ್ತಾರೆನ್ನುವ ಜನರ ಬಗ್ಗೆ ನಾವೆಲ್ಲಾ ಆಡಿಕೊಳ್ಳುವ ಭಾಷೆಯ ಬಗ್ಗೆ ಸಹ ಗಮನ ಹರಿಸುವುದು ಒಳಿತು.
  ನಾನು ಈ ಬಗ್ಗೆ ಮಾತನಾಡುತ್ತಿರುವವರ ಗಮನ ಸೆಳೆದಾಗ, ’ಅಯ್ಯೋ ಈ ಜನದ ಬಗ್ಗೆ ನಿಮಗೆ ಗೊತ್ತಿಲ್ಲ’ ’ಅಯ್ಯೋ ನೀವು ಇನ್ನೂ ಬಹಳ ಹಿಂದಿನ ಕಾಲದಲ್ಲಿ ಇದ್ದೀರಿ’ ’ನೀವೇನು ರಾಮ ರಾಜ್ಯದಲ್ಲಿ ಇದ್ದೇನೆ ಅಂದುಕೊಂಡಿದ್ದೀರಾ?’ ’ನಿಮಗೆ ಇದೆಲ್ಲಾ ಗೊತ್ತಾಗಲ್ಲ ಬಿಡಿ ಪಾಪ!’ ಎಂದು ನನ್ನನ್ನು ಅಬ್ಬೆಪಾರಿ, ಮುಗ್ಧ, ಸದ್ಯದ ಸ್ಥಿತಿಯನ್ನು ಅರಿಯದವ ಎನ್ನುವ ಹಣೆಪಟ್ಟಿ ಕಟ್ಟಿ ಕೂರಿಸುವ ಪ್ರಯತ್ನ ನಡೆದಿದೆ. ಇದೆಲ್ಲಾ ಗೊತ್ತಿದ್ದು ನನ್ನ ಪ್ರಯತ್ನ ಸಾಗಿದೆ. ಇದು ಸಧ್ಯಕ್ಕಂತೂ ಏಕಾಂಗಿ ಹೋರಾಟ. ಹಾಗಾಗಿ ಯಾವುದೇ ಒಂದು ಕಡೆ ಇದು ಇದೆ ಎಂದರೆ ಪರಿಹಾರ ಕಷ್ಟ ಸಾಧ್ಯ. ಇಲ್ಲೂ ಇದೆ ಅದನ್ನಾದರೂ ಚೊಕ್ಕ ಮಾಡುವ ಅಂತ ನಿಮ್ಮಂಥವರು ಮುಂದೆ ಬಂದಿರುವುದು ಶ್ಲಾಘನೀಯ.ನಿಮ್ಮ ಹಾಗೆ ಬದುಕಿನ ಬೇರೆ ಬೇರೆ ಅನುಭವ ಪರಿಣಿತಿ ಇರುವವರು ಗಮನಿಸಿ ಪ್ರತಿಕ್ರಿಯಿದರೆ, ಇಂತಹ ಪರಿಸ್ಥಿತಿಯನ್ನು, ಗಮನಿಸುವವರ,ಪ್ರತಿಕ್ರಿಯಿಸುವವರ, ತಿದ್ದುವವರ ಸಂಖ್ಯೆ ಹೆಚ್ಚಾದೀತು. ಹಾಗೆ ಆಗಲಿ ಎಂಬುದು ನನ್ನ ಆಶಯ

  ಉತ್ತರ
 4. ಅಸುರ
  ಜನ 26 2015

  ಸಾಮಾಜಿಕ ಜಾಲತಾಣಗಳಲ್ಲಿ ನಡೆಯುವ ಚರ್ಚೆಗಳೆಲ್ಲವೂ ಶಿಷ್ಟತೆ, ಸಂಸ್ಕೃತಿಯಿಂದ ಕೂಡಿರಬೇಕು, ಸಭ್ಯತೆಯ ಎಲ್ಲೆಯನ್ನು ಮೀರಬಾರದು ಎಂಬುದನ್ನು ಅಪೇಕ್ಷಿಸುವುದು ದೇವಸ್ಥಾನದ ಗರ್ಭಗುಡಿಯಲ್ಲಿ ಶುಭ್ರ ವಸ್ತ್ರ, ಮಡಿಯಲ್ಲಿಯೇ ಇರಬೇಕೆನ್ನುವ ಆಶಯದಂತಿದೆ. ಇಂದಿನ ಸಾಮಾಜಿಕ ಜಾಲತಾಣಗಳು ಅಕ್ಷರಶಃ ಅರಳೀಕಟ್ಟೆಯ ಹರಟೆ ತಾಣದಂತೆ ಎಲ್ಲಾ ವರ್ಗದ ಜನರೂ ತಮ್ಮ ಅಭಿಪ್ರಾಯ ವ್ಯಕ್ತಪಡಿಸಬಹುದಾದ ಮುಕ್ತ ವೇದಿಕೆ. ಇಲ್ಲಿ ಭಾಗವಹಿಸುವ ಎಲ್ಲರೂ ಚರ್ಚೆಯ ಪ್ರೌಢಿಮೆ, ಪ್ರಾಜ್ಞತೆಯನ್ನು ಹೊಂದಿರಬೇಕೆಂದು ನಿರೀಕ್ಷಿಸುವುದು ಬೌದ್ಧಿಕ ಉದ್ಧಟತನ ಎನಿಸುವುದಿಲ್ಲವೇ? ಗೂಢ ಪದಪುಂಜಗಳಲ್ಲಿ ಅಸಹ್ಯ ಅಸಭ್ಯ ಭಾಷೆ, ಭಾವನೆಗಳನ್ನು ಅಡಗಿಸಿ ಕೇಳುಗರಿಗೆ ಉಣಬಡಿಸುವುದು ಸಹ್ಯ ಎನ್ನುವುದಾದಲ್ಲಿ ಇಂತಹ ಪ್ರೌಢಿಮೆ ಇಲ್ಲದ, ಇದ್ದರೂ ಈ ಮಾರ್ಗ ಅನುಸರಿಸಲೊಪ್ಪದ ವರ್ಗ ಸುಲಭ ಸರಳ ಮಾರ್ಗದಿಂದ ತನ್ನ ಅಭಿಪ್ರಾಯಗಳನ್ನು ವ್ಯಕ್ತ ಪಡಿಸುವುದನ್ನು ವಿರೋಧಿಸುವುದು ಸರ್ವ ಸ್ವತಂತ್ರ ಸಾಮಾಜಿಕ ಮಾಧ್ಯಮಕ್ಕೆ ಸರಿಹೋಗಲಾರದು. ಅಂದ ಮಾತ್ರಕ್ಕೆ ಅಲ್ಲಿನ ವೇದಿಕೆಗಳಲ್ಲಿ ಏನು ಬೇಕಾದರೂ ಅಂದು ಇತರರನ್ನು ಹೀಗಳೆಯುವುದನ್ನೇ ಕಾಯಕ ಮಾಡಿಕೊಳ್ಳುವುದನ್ನು ಸಮರ್ಥಿಸಲಾಗದು. ತಮ್ಮ ಬಗ್ಗೆ ಬರುವ ವಿರೋಧವನ್ನು ಹತ್ತಿಕ್ಕುವ ಭರದಲ್ಲಿ ವಿರೋಧಿಗಳನ್ನೇ ಹಣಿಯುವ ಯತ್ನಗಳನ್ನು ವಿರೋಧಿಸೋಣ. ಆರೋಗ್ಯಕರ ಚರ್ಚೆಗಳು ಶಿಷ್ಟಾಚಾರದ ಪರಿಧಿಯೊಳಗೇ ಇರುವಂತೆ “ಸಭ್ಯ” ಮಾದರಿಯಲ್ಲಿಯೇ ಪ್ರಯತ್ನಿಸೋಣ.

  ಉತ್ತರ
 5. ಜನ 27 2015

  ನಿಲುಮೆಯ ಮೇಲೆ ನಡೆದಿರುವ ಈ ಆಕ್ರಮಣ ನಿಜಕ್ಕೂ ದುರದೃಷ್ಟಕರ.
  ಅಗ್ನಿಪರೀಕ್ಷೆಯಿಂದ ಹೊರಬಂದ ಚಿನ್ನಕ್ಕೆ ಮತ್ತಷ್ಟು ಮೆರಗು ಬರುವಂತೆ, ನಿಲುಮೆಯ ಕೀರ್ತಿಯೂ ಈ ಘಟನೆಯ ನಂತರ ಮತ್ತಷ್ಟು ಮೇಲಕ್ಕೇರುವುದರಲ್ಲಿ ಸಂದೇಹವಿಲ್ಲ.
  ಸತ್ಯವನ್ನು ಎತ್ತಿ ಹಿಡಿಯುವ ಮತ್ತು ಉದ್ದೇಶಶುದ್ಧಿಯುಳ್ಳ ವ್ಯಕ್ತಿಗಳ ಕೆಲಸವನ್ನು ರಾಜ್ಯಶಕ್ತಿ ಹತ್ತಿಕ್ಕಲಾರದು.
  ಜನಶಕ್ತಿಯೆದುರು ರಾಜ್ಯಶಕ್ತಿ ತಲೆವಾಗಲೇಬೇಕು.

  ಉತ್ತರ
 6. ಷಣ್ಮುಖ
  ಜನ 27 2015

  ನಿಮ್ಮೆಲ್ಲರ ಅಭಿಪ್ರಾಯಗಳಿಗೆ ಧನ್ಯವಾದಗಳು. Ani ಯವರು ಉಲ್ಲೇಖಿಸಿದ ವಿಚಾರ ಗಮನಾರ್ಹವೇ ಆಗಿದೆ. ಚರ್ಚೆಗಳಲ್ಲಿ ತೀರಾ ಕೆಳಮಟ್ಟದ ಅಸಭ್ಯ ಭಾಷೆಗಳ ಬಳಕೆ ಎಂತವರಿಗೂ ಇರಿಸುಮುರಿಸನ್ನುಂಟು ಮಾಡುತ್ತದೆ ಮತ್ತು ಅಂತಹ ಕೀಳುಮಟ್ಟದ ಭಾಷಾ ಬಳಕೆ ಯಾವುದೇ ಆರೋಗ್ಯಕಾರಿ ಸಂವಾದಕ್ಕೆ ಒಳ್ಳೆಯದಲ್ಲ ಮತ್ತು ಅಂತವುಗಳನ್ನು ಖಂಡಿಸಲೇ ಬೇಕು ನಿಜ! ಆದರೆ, ಕಳೆದ ಕೆಲವು ದಶಕಗಳಿಂದ ಕನ್ನಡ ಬೌದ್ದಿಕ ಮತ್ತು ಪರ್ತಿಕಾ ಮಾಧ್ಯಮ ಜಗತ್ತನ್ನು ಗಮನಿಸುತ್ತಾ ಬರುತ್ತಿರುವವರಿಗೆ ಒಂದು ವಿಚಾರ ಸ್ಪಷ್ಟವಾಗುತ್ತದೆ. ಪ್ರತಿವಾದಿಗಳನ್ನು ಅಥವಾ ಸಮಾಜದಲ್ಲಿ ಅಸ್ತಿತ್ವದಲ್ಲಿರುವ ಜನಸಮುದಾಯಗಳನ್ನು ಅಸಭ್ಯ ಶಭ್ದಗಳ ಬಳಕೆಯ ಮೂಲ; ನಿಂದನೆ ಮಾಡುವುದು ವಿಮರ್ಶೆಯ ಒಂದು ಸಿದ್ದಮಾದರಿಯೇ ಆಗಿದೆ. ಹಾಗೆ ಬರೆಯುವವರನ್ನು ಮಾತನಾಡುವವರನ್ನೇ ಕಟುಮಿರ್ಮಶಕರು, ನಿಷ್ಟುರ ಸತ್ಯಗಳ ಪ್ರತಿಪಾದಕರು ಎನ್ನುವಂತೆ ಬಿಂಭಿಸುತ್ತಾ ಬರಲಾಗಿದ್ದು ಅವರುಗಳ ಈ ರೀತಿಯ ಭಾಷಾ ಪ್ರಯೋಗಗಳನ್ನು “ಸಾಕ್ಷಿ ಫ್ರಜ್ಞೆಯ’ ಚಾಟು ಬೀಸುವಿಕೆ; ಜಡ್ಡುಗಟ್ಟಿದ ಜಡಜಗತ್ತನ್ನು ಬಡಿದೆಬ್ಬಿಸಿ ತೀಕ್ಷಣ ನುಡಿಗಳು ಮುಂತಾಗಿ ಹಾಡಿಹೊಗಳಿ ಮೆರೆಯುತ್ತಲೇ ಬರಲಾಗಿದೆ. ಅಂದ್ರೆ, ಈ ರೀತಿಯ ಭಾಷಾ ಬಳಕೆ ಈ ಚಿಂತನಾ ಜಗತ್ತಿಗೆ ವರ್ಜ್ಯವಲ್ಲ ಮಾತ್ರವಲ್ಲ ಅದು ಸಾಕ್ಷಿಪ್ರಜ್ಞೆಗಳ ಅಸ್ತಿತ್ವದ ಸಂಕೇತವಾಗಿಯೂ ಬಿಂಬಿತವಾಗುತ್ತಾ ಬಂದಿದೆ.

  .ಹಾಗಿದ್ದರೆ ಅದೇ ಚಿಂತನಾ ವಲಯವನ್ನು ಪ್ರತಿನಿಧಿಸುತ್ತಿರುವ ಮಟ್ಟೂರಂತವರ ಆಕ್ಷೇಪಣೆಯಾದರೂ ಏನು? ಅವರ ಆಕ್ಷಪಣೆ ಎರಡು ರೀತಿಯಲ್ಲಿರುವ ಸಾಧ್ಯತೆ ಇದೆ.

  1. ವೈಯುಕ್ತಿವಾಗಿ ನಿಂಧನಾತ್ಮಕ ಭಾಷಾಬಳಕೆ ತೇಜೋವಧೆ ಮತ್ತು ಅವಮಾನಕಾರಿ ಹಾಗಾಗಿ ಆಕ್ಷೇಪಾರ್ಹ ವೆಂದಿರಬಹುದು. ಆದರೆ ಲಂಕೇಶರಿಂದ ಹಿಡಿದು ಇಂದಿನ ಬಹುತೇಕ ಕನ್ನಡದ ಟ್ಯಾಬಲಾಯ್ಡ್ ಪತ್ರಿಕೆಗಳು ರಾಜಕಾರಣಿ, ಅಧಿಕಾರಿ, ಸಿನಿಮಾ ಮಂದಿ, ಉಧ್ಯಮಪತಿಗಳಿಂದ ಹಿಡಿದು ಸಾಮನ್ಯ ವ್ಯಕ್ತಿಗಳವರಎಗೂ ವೈಯುಕ್ತಿಕ ಹೆಸರಿನಿಂದಲೇ ಅವಹೇಳನಕಾರಿ ಭಾಷೆಗಳನ್ನು ಬರಲಾಗಿದೆ. ಹಾಗೆಯೇ, ಬೌದ್ದಿಕ ಚರ್ಚೆಯಲ್ಲೂ ಒಂದು ವರ್ಗದ ಚಿಂತಕ ಅಥವಾ ಆವರ್ಗದ ಹಿತಾಸಕ್ತಿಯ ಕಾರಣದಿಂದಲಲೇ ಬರೆಯುವಂತಹ ಬರಹಗಾರ/ಚಿಂತಕ ಎಂದು ಹಣೆಪಟ್ಟಿ ಹಚ್ಚಿ ವೈಯುಕ್ತಿಕ ನಿಂದನಾ ಭಾಷೆಗಳನ್ನು ಸಹಜವೆನ್ನುವಂತೆ ಬಳಸಲಾಗಿದೆ. ಕೆಲವೇ ವರ್ಷಗಳ ಹಿಂದೆ ‘ದೇಶ-ಕಾಲ’ ವಿಶೆಟೆಟಷ ಸಂಚಿಕೆಯ ಲೇಖನಗಳ ಹಿನ್ನೆಡಲೆಯನ್ನಿಟ್ಟುಕೊಂಡು ಆ ಲೇಖಕರ ಮೇಲೆ ಬಳಸಿದ ಭಾಷೆ ಒಂದು ಮಾದರಿಯೇ ಆಗಿ ಮುಂದುವರಿಯುತ್ತಿರುವುದನ್ನು ಕಾಣಬಹುದು. ಅಂದರೆ ವೈಯುಕ್ತಿಕ ನಿಂಧನೆ ಆಕ್ಷೇಪಾರ್ಹ ನಿಲುವೂ ಸಹ ಇವರಿಗೆ ಸರಿಯಲ್ಲ.

  2. ಹಾಗಿದ್ರೆ, ಎರಡನೆ ಕಾರಣ ಈ ರೀತಿಯ ಭಾಷೆಗಳನ್ನು ಯಾರು ಅಥವಾ ಎಂತಹ ಚಿಂತನೆಗಳನ್ನು ಪ್ರತಿನಿಧಿಸುವವರು ಬಳಸುತ್ತಿದ್ದಾರೆ ಎನ್ನುವುದರ ಮೇಲೆ ಅವು ಆಕ್ಷೇಪಾರ್ಹವೋ ಇಲ್ಲವೇ ಸ್ವೀಕಾರ್ಹವೋ ಅನ್ನುವುದು ತೀರ್ಮಾನವಾಗುತ್ತದೆ. ಮೇಲೆ ತೋರಿಸಿರುವ ನಿಂಧನಾ ಭಾಷೆಗಳನ್ನು ಬಳಸಿರುವರು ಸಾಮಾನ್ಯವಾಗಿ ಪ್ರಗತಿಪರ ಭೌದ್ದಿಕ ವಲಯವನ್ನು ಪ್ರತಿನಿಧಿಸುವರು ಇಲ್ಲವೇ ಬೆಂಬಲಿಸುವವರು. ಇವರು ಬರಹ ಭಾಷಣಗಳಲ್ಲಿನ ನಿಂಧನಾತ್ಮಕ ಭಾಷೆಗಳು ಶೋಷಕ ಸಮಾಜ/ಸಮುದಾಯ/ವರ್ಗ/ವ್ಯವಸ್ಥೆ/ಅಧಿಕಾರ/ವ್ಯಕ್ತಿಗಳ ವಿರುದ್ದದ ಕ್ರಾಂತಿಕಾರಿ ಸಾತ್ವಿಕ ಆಕ್ರೋಶದ ನೆಲೆಯಿಂದ ಹುಟ್ಟಿವೆ. ಅದು ಸಹಜ ಮತ್ತು ತೀವ್ರಗಾಮೀ ಪ್ರತಿಭಟನೆಯ ಸಂಕೇತವಾಗಿ ಅನಿವಾರ್ಯ! ಈ ಆದರ್ಶದ ನೆಲೆಯಲ್ಲಿ ಬರೀ ನಿಂದನೆ ಮಾತ್ರವಲ್ಲ “ಇಕ್ರಲಾ, ಒದಿರ್ಲಾ” ಅಂದರೂ ಅವು ಕ್ರಾಂತಿಕಹಳೆ, ವ್ಯವಸ್ಥೆಯ ವಿರುದ್ಧದ ಆಕ್ರೋಶ, ಸಾಕ್ಷೀಪ್ರಜ್ಞೆಯ ಸಾತ್ವಿಕ ಸಿಟ್ಟು, ಕಟುಟೀಕೆ ಅಷ್ಟೆ! ಹಾಗೆ ಮಾಡದೆ ಜಡ್ಡುಗಟ್ಟಿದ ವ್ಯವಸ್ಥೆ ಬದಲಾವಣೆಗೆ ತೆರೆಯದು.

  ಹಾಗಿದ್ರೆ ಯಾರು ಇದೇ ರೀತಿಯ ನಿಂಧನಾ ಭಾಷೆಯ ಬಳಕೆ ನಿಶಿದ್ದ? ಮೇಲಿನ ಸಾಕ್ಷಿಪ್ರಜ್ಞೆಗಳನ್ನು ಯಾವ ವರ್ಗ/ಜನಸಮುದಾಯ/ಚಿಂತನೆಗಳು ವಿರೋಧಿಸುತ್ತಿವೆಯೋ ಪ್ರಶ್ನಿಸುತ್ತಿವೆಯೋ ಅದನ್ನು ಪ್ರತಿನಿಧಿಸುವ ವ್ಯಕ್ತಿಗಳು ಈ ರೀತಿಯ ನಿಂಧನಾ ಭಾಷೆಬಳಕೆ ನಿಷಿಧ್ಧ! ಏಕೆಂದರೆ ಅವರು ಶೋಷಕ ವ್ಯವಸ್ಥೆಯ ಸಮರ್ಥಕರು ಮತ್ತು, ಆ ಕಾರಣಕ್ಕಾಗಿ ಶೋಷಕರೂ ಸಹ! ಇಂತವರು ಬಳಸುವ ಸಹಜ ಪದಪುಂಜಗಳಲಿರಲಿ ಅತ್ಯಂತ ಶಿಷ್ಟಪರಿಭಾಷೆಗಳೇ ಕಣ್ಕಟ್ಟು ಮಾಡಿ ಶೋಷಣೆ ಮಾಡುವ ಮಾರೆಮೋಸ! ಅಂತದ್ದರಲ್ಲಿ ಅವರುಗಳು ನಿಂಧನಾ ಭಾಷೆಯ ಬಳಸುವುದೆಂದರೆ ಶೋಷಕರು ಶೋಷಿತರ ಮೇಲೆ ಮಾಡುವ ಧಮನ, ಅವಮಾನ, ಮತ್ತು ಹಿಂಸೆಯ ಸಂಕೇತ! ಹೀಗಿರುವಾಗ ಅದು ನಿಷಿಧ್ಧ ಮತ್ತು ಆಕ್ಷೇಪಾರ್ಹ! ಆದರೆ ಈ ಶೋಷಕರ ಮರೆಮೋಸದ ಅತ್ಯಂತ ಶಿಷ್ಟ ಮಾತು/ಬರಹಗಳನ್ನೂ ಹೀಯಾಳಿಸಿ ನಿಂದಿಸುವುದು ಪವಿತ್ರತೆಯ ಮುಖವಾಡ ಶೋಷಕ ವಿಚಾರಗಳ ಅಪವೀತ್ರೀಕರಣ! ಅದು ಶೊಷಕರ ಮೋಸದ ಮಾತುಗಳಿಗೆ ಶೊಷಣೆಗೆ ಒಳಗಾಗುವವರು ನಂಬಿ ಮೋಸಹೋಗದಂತೆ ತಡೆಯಲು ಅನಿವಾರ್ಯ ಅಗತ್ಯ! ಸಮರ್ಥನೀಯ! ಅದು ಮಾನವೀಯ ಕಾಳಜಿಯ ಧ್ಯೋತಕ!

  ಹಾಗಾಗಿ, ಪ್ರಗತಿಪರರ ನಿಂಧನೆ ಸಹಜ! ಆದರೆ ಅವರನ್ನು ವಿರೋಧಿಸುವವರ ನಿಂಧನೆ ನಿಷಿದ್ಧ!

  ಉತ್ತರ
 7. ಸಹ ಚಿಂತಕ
  ಫೆಬ್ರ 3 2015

  ಭಾರತದಲ್ಲಿ ಮಾನನಷ್ಟ ಮೊಕದ್ದಮೆಯನ್ನು ಸಿವಿಲ್ ಮತ್ತು ಕ್ರಿಮಿನಲ್ ಲಾ ಎರಡರ ಅಡಿಯಲ್ಲೂ ಹಾಕಬಹುದು. (ಇದು ಭಾರತದಲ್ಲಿ ಮಾತ್ರ ಸಾಧ್ಯ. ಬೇರೆ ದೇಶಗಳಲ್ಲಿ ಇದೊಂದು ಸಿವಿಲ್ ಕಾನೂನಿನ ವಿಚಾರ ಮಾತ್ರ.) ಮಾನನಷ್ಟ ಮೊಕದ್ದಮೆಗೆ ಸೇರಿದ ಕ್ರಿಮಿನಲ್ ಕಾನೂನು ಮಾತ್ರ Indian Penal Code (section 499)ರಲ್ಲಿ ಶಾಸನದ ರೂಪದಲ್ಲಿ ನಮೂದಿಸಲಾಗಿದೆ. ಸಿವಿಲ್ ಕಾನೂನಿನಲ್ಲಿ ಇದು ಕೇವಲ judge-made lawಗಳ ಮೇಲೆ ಅವಲಂಬಿಸಿರುತ್ತದೆ.

  ಈ ಹಿನ್ನಲೆಯಲ್ಲಿ ಆಮೀನರಿಗೆ ಒಂದು ಪ್ರಶ್ನೆ: ಒಬ್ಬ ಶಿಕ್ಷಕನಾಗಿ ನೊಂದು ಈ ಕೇಸು ಹಾಕುತ್ತಿದ್ದ ಪಕ್ಷದಲ್ಲಿ ಅವರು ಮಾನನಷ್ಟ ಮೊಕದ್ದಮೆಯನ್ನು ಸಿವಿಲ್ ಕಾನೂನಿನಡಿ ಹಾಕಬಹುದಿತ್ತು. ಆದರೆ ಅವರು ಇದನ್ನು ಕ್ರಿಮಿನಲ್ ಕಾನೂನಿನ ಅಡಿ ಹಾಕಿದ್ದು ಯಾಕೆ?
  ಏಕೆಂದರೆ, ಭಾರತೀಯ ಕಾನೂನು ಪ್ರಕ್ರಿಯೆಯಲ್ಲಿ, ಸಾಮಾನ್ಯವಾಗಿ ಒಂದು ಕ್ರಿಮಿನಲ್ ಮೊಕದ್ದಮೆ ಹೂಡಿದ ನಂತರ
  ಮ್ಯಾಜಿಸ್ಟ್ರೇಟ್ ನ್ಯಾಯಾಲಯದಿಂದ ಸಮನ್ಸ್ ಹೊರಡುತ್ತದೆ/ಹೊರಡಿಸಬಹುದು. ಇದು ಎದುರಾಳಿಯನ್ನು ಹಣ ಮತ್ತು ಅಧಿಕಾರದ ಬಲಪ್ರಯೋಗ ಮಾಡಿ ನಿಯಂತ್ರಿಸಲು ಭಾರತದಲ್ಲಿ ಬಳಸಲಾಗುವ ಸಾಮಾನ್ಯ ಉಪಾಯ.

  ಇದು ನಮ್ಮ ಶಿಕ್ಷಕರ ಒಳ ಮರ್ಮ.

  ಉತ್ತರ

ನಿಮ್ಮ ಅನಿಸಿಕೆ...

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Note: HTML is allowed. Your email address will never be published.

Subscribe to comments