ಅಸಹಾಯಕತೆಯೇ ಹೊರತು ಸಾಮಾಜಿಕ ಕಳಕಳಿಯೇನಲ್ಲ..
ಸಾಮಾಜಿಕ ಜಾಲತಾಣಗಳಲ್ಲಿ ಅವಾಚ್ಯ ಶಬ್ಧಗಳ ಬಳಕೆಯ ಕುರಿತು ಇತ್ತೀಚೆಗೆ ದೊಡ್ಡ ಚರ್ಚೆಯೇ ನಡೆಯುತ್ತಿದೆ. ಸರ್ವೋಚ್ಚ ನ್ಯಾಯಾಲಯ ಸಹ ಈ ನಿಟ್ಟಿನಲ್ಲಿ ಹೊಸ ತೀರ್ಪುಗಳನ್ನು ನೀಡುತ್ತಿದೆ. ಇತ್ತೀಚೆಗೆ ನಿಲುಮೆ ಎಂಬ ಫೇಸ್ಬುಕ್ ಗುಂಪಿನ ವಿರುದ್ಧ ದಿನೇಶ್ ಅಮಿನ್ ಮಟ್ಟು ಅವರು ದೂರು ದಾಖಲಿಸಿದ್ದರು. ಆ ದೂರು ನೀಡುವ ಹಿಂದೆ ದೊಡ್ಡ ಸಾಮಾಜಿಕ ಕಳಕಳಿ ಇದೆ ಎಂದು ಅವರು ಹಲವು ಕಡೆ ಹೇಳಿಕೊಂಡಿದ್ದಾರೆ. ಆದರೆ ಸ್ವಲ್ಪ ಸೂಕ್ಷ್ಮವಾಗಿ ಗಮನಹರಿಸಿದರೆ ಸಾಕು ಅವರ ಸಾಮಾಜಿಕ ಕಳಕಳಿಯ ಪೊರೆ ಕಳಚಿ, ಅವರ ಅಸಹಾಯಕತೆಯ ಅನಾವರಣ ಆಗುತ್ತದೆ. ಮೊದಲೇ ಸ್ಪಷ್ಟ ಪಡಿಸಬೇಕಿರುವ ಅಂಶವೆಂದರೆ, ಅಸಭ್ಯ ಭಾಷೆ ಬಳಕೆಯನ್ನು ಪ್ರೋತ್ಸಾಹಿಸುವ ಪ್ರಯತ್ನ ಈ ಲೇಖನದ್ದಲ್ಲ. ಬದಲಾಗಿ ಅದರ ನೆಪದಲ್ಲಿ, ಸಮಾಜ ವಿರೋಧಿ ಕ್ರಿಯೆ ನಡೆಯುತ್ತಿದೆ ಎಂಬುದನ್ನು ಸೂಚಿಸುವುದು.
ಈ ದೂರು ಸಾಮಾಜಿಕ ಕಾಳಜಿಯ ಭಾಗವೇ ಆಗಿದ್ದರೆ, ಅವಾಚ್ಯ ಶಬ್ಧಗಳನ್ನು ಬಳಸಿದವರ ವಿರುದ್ಧ ದೂರು ನೀಡುತ್ತಿದ್ದರು. 19000ದಷ್ಟು ಅಧಿಕ ಓದುಗ ಬಳಗದ ಎಲ್ಲಾ ಕಾಮೆಂಟುಗಳಿಗೂ ನಿರ್ವಾಹಕರೇ ಕಾರಣರಾಗುತ್ತಾರೆ ಎನ್ನುವುದಾದರೆ, ರಾಜ್ಯದಲ್ಲಾಗುವ ಎಲ್ಲಾ ಅತ್ಯಾಚಾರ, ಅನಾಚಾರಗಳಿಗೂ ಮುಖ್ಯಮಂತ್ರಿಗಳೇ ಹೊಣೆಗಾರರಾಗುತ್ತಾರೆಯೇ? ಅವರ ವಿರುದ್ಧ ಕೇಸು ದಾಖಲಿಸಲು ಸಾಧ್ಯವೇ? ಇಲ್ಲ ಎಂಬುದು ಎಲ್ಲರ ತರ್ಕ. ಅದಿರಲಿ ಸ್ವತಃ ಅಮೀನ್ ಮಟ್ಟು ಅವರೇ ಮಧ್ಯಮ ವರ್ಗದ ಮತದಾರರನ್ನು ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದಾರೆ.ಹಾಗೆ ನಿಂದಿಸಿರುವುದನ್ನು ಸುವರ್ಣ ವಾಹಿನಿಯ ಲೈವ್ ಚರ್ಚೆಯಲ್ಲಿ ಸಮರ್ಥಿಸಿಕೊಂಡಿದ್ದಾರೆ ಕೂಡ! ಅಲ್ಲದೇ ಬೇರೆಯವರನ್ನು/ಎದುರಾಳಿ ಚಿಂತಕರನ್ನು ವಾಚಾಮಗೋಚರವಾಗಿ ನಿಂದಿಸಿದ ಹಲವು ಲೇಖನಗಳನ್ನು ಸಾಮಾಜಿಕ ಜಾಲತಾಣದ ಅವರ ಗೋಡೆಯ ಮೇಲೆ ಹಂಚಿಕೊಂಡಿದ್ದಾರೆ. ಹಾಗೆಂದು ಯಾರೋ ಬರೆದ ಲೇಖನವನ್ನು ಹಂಚಿಕೊಂಡ ಕಾರಣಕ್ಕೆ ಇವರ ವಿರುದ್ಧ ಕೇಸು ದಾಖಲಿಸಲಾಗುತ್ತದೆಯೇ? ಈ ಸಂದರ್ಭದಲ್ಲೆಲ್ಲಾ ಮಾಯವಾಗಿದ್ದ ಸಾಮಾಜಿಕ ಹೊಣೆಗಾರಿಕೆ ಈಗ ದಿಢೀರನೇ ಬರಲು ಕಾರಣ ಏನು? ಯಾರೋ ಓರ್ವ ಸದಸ್ಯನ ಪ್ರತಿಕ್ರಿಯೆಗೆ ‘ನಿಲುಮೆ’ ಎಂಬ ಬೃಹತ್ ಓದುಗ ಗುಂಪನ್ನೇ ಮುಚ್ಚಿಸಬೇಕೆಂಬ ತರ್ಕ ಯಾಕೆ ಮುಖ್ಯವೆನಿಸಿತು?
ಈಗ ನಿಲುಮೆಯ ನಿರ್ವಾಹಕ ರಾಕೇಶ್ ಶೆಟ್ಟಿಯವರ ಮೇಲೆ ಕೇಸು ದಾಖಲಿಸಿರುವುದು ಮತ್ತು ಮಟ್ಟು ಅವರು ಟೀವಿ ಚರ್ಚೆಯಲ್ಲಿ “ನಿಲುಮೆ ಗುಂಪನ್ನು ಮುಚ್ಚಿ ಬಿಡಿ” ಎನ್ನುತ್ತಿರುವುದಕ್ಕೆ ಬೇರೆಯದೇ ಕಾರಣವಿದೆ. ಅದೇನೆಂದರೆ, ಅವರಿಗೆ ಮತ್ತು ಅವರು ಪ್ರತಿನಿಧಿಸುತ್ತಿರುವ ಬುದ್ಧಿ ಜೀವಿಗಳ ಗುಂಪಿಗೆ, ಈ ಯುವಕರು ನಿಲುಮೆ ಬ್ಲಾಗ್ ವೇದಿಕೆಯಲ್ಲಿ ಕೇಳುತ್ತಿರುವ ತರ್ಕವದ್ಧವಾದ ಬೌದ್ಧಿಕ ಪ್ರಶ್ನೆಗಳು! ತಮ್ಮ ಬೌದ್ದಿಕ ನಿಲುವಿನ ಬುಡವನ್ನೇ ಅಲ್ಲಾಡಿಸುವಂತ ಈ ಹೊಸಪ್ರಶ್ನೆಗಳಿಗೆ ಈ ಒಂದು ಬೌದ್ದಿಕ ವರ್ಗ ಬೆದರಿದೆ. ಹಾಗಾಗಿ ಅಂತಹ ಪ್ರಶ್ನೆಗಳನ್ನು ಎದುರಿಸುವದನ್ನು ತಪ್ಪಿಸಿಕೊಳ್ಳಲು ಆ ತಾಣದ ನಿರ್ವಾಹಕರನ್ನು ಒಂದನೇ ಅಪರಾಧಿಯಾಗಿಸಿ ನೀಡಿರುವ ದೂರು ಇದುವರೆಗೂ ಈರಿತಿಯ ಪ್ರಶ್ನೆಗಳನ್ನೇ ಉತ್ತರಿಸಲಾಗದ ಅಸಾಯಕತೆಯೇ ಹೊರತೂ ಸಾಮಾಜಿಕ ಕಾಳಜಿ ಎನ್ನುವುದೆಲ್ಲ ಮುಖವಾಡವಷ್ಟೇ. ಅಂದರೆ, ನಿಲುಮೆಯನ್ನು ಬ್ಲಾಗ್ ರೂಪದಲ್ಲಿ, ಫೇಸ್ಬುಕ್ ರೂಪದಲ್ಲಿ ಬೌದ್ಧಿಕವಾಗಿ ಎದುರಿಸಲಾಗಲಿಲ್ಲ. ಈ ವರ್ಷ ನಿಲುಮೆ ಪ್ರಕಾಶನ ಶುರುವಾಗಲಿದೆ ಎಂಬ ಸುದ್ದಿ ಹೊರಬಿದ್ದ ತಕ್ಷಣ ದಿಗಿಲುಬಿದ್ದವರು ಶತಾಯಗತಾಯ ಮುಚ್ಚಿಸಲು ಹೊರಟುನಿಂತಿದ್ದಾರೆ. ಇದು ಈ ಜನರಗಳ ಬೌದ್ಧಿಕ ದಾರಿದ್ರ್ಯದ ಧೋತಕವಲ್ಲವೇ?
ಈ ಪ್ರಶ್ನೆಗೆ ಉತ್ತರ ಕಂಡುಕೊಳ್ಳಲು ಸ್ವಲ್ಪ ಹಿಂದಿನ ಘಟನೆಗಳನ್ನು ಮೆಲುಕುಹಾಕುವುದು ಅವಶ್ಯಕ. ಮೊದಲಿನಿಂದಲೂ ಎಡ-ಬಲ ಎರಡೂ ಪಂಥದ ವಾದಗಳಿಗೆ ಮುಕ್ತವೇದಿಕೆಯಾಗಿದ್ದ ನಿಲುಮೆ ಬ್ಲಾಗ್ ಆಗಾಗ್ಗೆ ತನ್ನಲ್ಲಿ ಬರುವ ಲೇಖನಗಳಿಂದ ಜನಪ್ರಿಯ ವಾದಗಳು, ಸಿದ್ಧಾಂತಗಳನ್ನು ಪ್ರಶ್ನಿಸುತ್ತಲೇ ಬಂದಿತ್ತು. ಒಂದು ವರ್ಷದ ಹಿಂದೆ ಪ್ರಮುಖ ಕನ್ನಡ ದಿನ ಪತ್ರಿಕೆಯೊಂದರಲ್ಲಿ ವಚನ ಸಾಹಿತ್ಯದ ಕುರಿತು ಗಂಭೀರ ಚರ್ಚೆಯನ್ನು ಕೈಗೊಳ್ಳಲಾಗಿತ್ತು. ಆಗ ಪ್ರಗತಿಪರ ಚಿಂತಕರು ಚರ್ಚೆಯನ್ನು ಏಕಮುಖವಾಗಿ ನಡೆಸುವಲ್ಲಿ ಯಶಸ್ವಿಯಾಗಿದ್ದರು. ಅಂದರೆ ಸಿ.ಎಸ್.ಎಲ್.ಸಿ. (ಸ್ಥಳೀಯ ಸಂಸ್ಕೃತಿಗಳ ಅಧ್ಯಯನ ಕೇಂದ್ರ)ಯ ವಾದವನ್ನು ಪ್ರಕಟಿಸಲು ಸರಿಯಾಗಿ ಅವಕಾಶ ಕಲ್ಪಿಸದೇ, ಪ್ರೊ.ಬಾಲು ಗುಂಪನ್ನು ನಿಂದಿಸುವ ಲೇಖನಗಳನ್ನು ಪ್ರಕಟಿಸಿದ್ದರು. ಮಾತ್ರವಲ್ಲ ಕರ್ನಾಟಕದ ಬೌದ್ಧಿಕ ವಲಯದಲ್ಲಿ ಪ್ರಭಾವಿಯಾಗಿದ್ದ, ಈ ಸಂಶೋಧನಾ ಕೇಂದ್ರವನ್ನು ಸರ್ಕಾರದ ಉಸ್ತುವಾರಿಯಲ್ಲಿಯೇ ಮುಚ್ಚಿಸಲಾಯಿತು. ಅಂತಹ ಸಂದರ್ಭದಲ್ಲಿ ‘ನಿಲುಮೆ’ ಎಂಬ ಬ್ಲಾಗ್ ಸಿ.ಎಸ್.ಎಲ್.ಸಿ ವಾದವನ್ನು ಮಂಡಿಸಲು ಅವಕಾಶ ಕಲ್ಪಿಸಿತು. ಅಷ್ಟಕ್ಕೇ ನಿಲ್ಲದೆ, ಸಂಶೋಧನಾ ಕೇಂದ್ರವನ್ನು ಮುಚ್ಚಿಸಿದ ಸರ್ಕಾರದ ಕ್ರಮವನ್ನು ಅಲ್ಲಿ ಟೀಕಿಸಲಾಯಿತು, ಹಾಗೂ ಬಾಲಗಂಗಾಧರರ ಸಂಶೋಧನೆಯ ಹಿನ್ನೆಲೆಯಲ್ಲಿ ಪ್ರಗತಿಪರರ ನಿಲುವುಗಳನ್ನು ಪ್ರಶ್ನಿಸುವ ಹಲವಾರು ಲೇಖನಗಳನ್ನು ಪ್ರಕಟಿಸಲಾಯಿತು. ಅಂದರೆ ಸೀಮಿತ ಓದುಗ ಬಳಗವನ್ನು ಹೊಂದಿದ್ದ ಬಾಲುರ ವಿಚಾರಗಳಿಗೆ ದೊಡ್ಡ ಓದುಗ ಬಳಗವನ್ನು ರೂಪಿಸಿತು. ಹಾಗೆಯೇ ನಿಲುಮೆಯ ಜನಪ್ರಿಯತೆಯೂ ಹೆಚ್ಚುತ್ತಾ ಹೋಯಿತು. ಇದರಿಂದ ಕೇಂದ್ರವನ್ನು ಮುಚ್ಚಿಸಿದರೂ ಸಹ ಕೇಂದ್ರದ ವಾದಗಳನ್ನು ಮುಚ್ಚಿಸಲು ಅವರಿಗೆ ಸಾಧ್ಯವಾಗಲಿಲ್ಲ! ಆಗಿನಿಂದಲೂ ಇದು ‘ಪ್ರಗತಿಪರ’ ಎಂಬ ಹಣೆಪಟ್ಟಿಯನ್ನು ಹೊತ್ತವರ ಕೆಂಗಣ್ಣಿಗೆ ಗುರಿಯಾಗಿತ್ತಲೇ ಬಂದಿದೆ.
ಇಂತಹ ಸಂದರ್ಭದಲ್ಲಿ ಪ್ರಗತಿಪರರ ಮುಂದಿರುವುದು ಈ ಮುಂದಿನ ಎರಡು ಮಾರ್ಗಗಳು:
೧. ನಿಲುಮಿಗರ/ಸಿ.ಎಸ್.ಎಲ್.ಸಿಯ ಪ್ರಶ್ನೆಗಳಿಗೆ ಬೌದ್ಧಿಕವಾಗಿ ಉತ್ತರಿಸುವುದು.
೨. ಸಿ.ಎಸ್.ಎಲ್.ಸಿಯಂತಹ ‘ಮುಚ್ಚಿದ’ ಸಂಶೋಧನಾ ಕೇಂದ್ರದ ನಿಲುವುಗಳಿಗೆ ಧ್ವನಿಯಾದ ನಿಲುಮೆ ಬ್ಲಾಗ್ಅನ್ನು ಮುಚ್ಚಿಸುವುದು.
ಮೊದಲನೆಯದನ್ನು ಮಾಡಲು ತುಂಬಾ ಶ್ರಮ ಪಡಬೇಕಿದೆ, ಸದ್ಯಕ್ಕೆ ಅದು ಅಸಾಧ್ಯ ಕೂಡ. ಏಕೆಂದರೆ ಅವರಲ್ಲಿ ಸದ್ಯಕ್ಕಿರುವ ಬೌದ್ಧಿಕ ಪರಿಕರಗಳು ಸಾಕಾಗುವುದಿಲ್ಲ. ಆದರೆ ಎರಡನೆಯದು ಸುಲಭ ಎಂದು ಭಾವಿಸಿದಂತಿದೆ. ಏಕೆಂದರೆ ಸರ್ಕಾರವು ಅವರದೇ ಕೈಲಿದೆ, ಅಧಿಕಾರವನ್ನು ಬಳಸಿ ಏನನ್ನು ಬೇಕಾದರೂ ಮಾಡಬಹುದೆಂಬ ಧೋರಣೆ. ಹಾಗಾಗಿ ನಿಲುಮೆಯನ್ನು ಮುಚ್ಚಿಸುವುದೇ ಸುಲಭ ಎಂದು ಭಾವಿಸಿದರು. ಈ ಸಂದರ್ಭಕ್ಕಾಗಿ ಕಾದು ಕುಳಿತಿದ್ದವರು, ಅವಾಚ್ಯ ಶಬ್ಧದ ಪ್ರತಿಕ್ರಿಯೆಯನ್ನು ಕೆಲವೇ ಕ್ಷಣಗಳಲ್ಲಿ ತೆಗೆಸಿಹಾಕಿದ ನಿಲುಮೆಯ ನಿರ್ವಾಹಕರ ನಿರ್ವಹಣೆಯನ್ನು ಮೆಚ್ಚುವ ಬದಲಿಗೆ ಅವರ ಮೇಲೆ ಕ್ರಿಮಿನಲ್ ಕೇಸ್ ಹಾಕಿ ತಮ್ಮ ಕಾರ್ಯ ಸಾಧನೆಗೆ ಮುಂದಾದರು.
‘ನಿಲುಮೆ’ ಗುಂಪನ್ನೇ ಗುರಿಯಾಗಿಸಿದ ಅವರ ನಿಲುವು ಸಾಮಾಜಿಕ ಕಳಕಳಿಯೂ ಅಲ್ಲ, ಪತ್ರಕರ್ತನ ಹೊಣೆಗಾರಿಕೆಯೂ ಅಲ್ಲ. ಬದಲಿಗೆ ಬೌದ್ಧಿಕವಾಗಿ ಎದುರಿಸಲಾಗದೆ, ತಮ್ಮ ಅಸಹಾಯಕತೆಯನ್ನು ಈ ರೀತಿ ಹೊರಹಾಕಿದ್ದಾರೆ. ಇದು ಕನ್ನಡದ ಸಂದರ್ಭದಲ್ಲಿ ಬೌದ್ಧಿಕ ದಿವಾಳಿತನವೇ ಹೊರತು ಇನ್ನೇನೂ ಅಲ್ಲ. ನಿಜವಾದ ಸಾಮಾಜಿಕ ಕಾಳಜಿ ಇರುವುದೇ ಆದರೆ ಮುಕ್ತವಾದ ಬೌದ್ಧಿಕ ಚರ್ಚೆಗೆ ಅವಕಾಶ ಮಾಡಿಕೊಡುವುದು.ಆ ಮೂಲಕ ಜ್ಞಾನದ ಬೆಳವಣಿಗೆಗೆ ತಮ್ಮ ಕಾಣಿಕೆಯನ್ನು ಸಲ್ಲಿಸುವುದು. ಇಂತಹ ವಿಚಾರಗಳ ಸಂದರ್ಭದಲ್ಲಿ ಜ್ಞಾನಮಾರ್ಗದ ಮೂಲಕ ಎದುರಾಳಿಗಳನ್ನು ಎದುರಿಸುವ ಪ್ರಯತ್ನ ಮಾಡಬೇಕೆ ಹೊರತು, ರಾಜಕೀಯ ಅಧಿಕಾರ ಬಳಕೆ ಉತ್ತಮ ಬೆಳವಣಿಗೆಯಂತೂ ಅಲ್ಲ. ಹಿರಿಯ ಚಿಂತಕರುಗಳು ಇಂತಹ ವಾಮ ಮಾರ್ಗವನ್ನು ಹಾಕಿಕೊಡುವುದರ ಅಪಾಯವನ್ನು ಅರಿಯಬೇಕಿದೆ. ಹಾಗಾಗಿ ಇದು ಸಮಾಜ ವಿರೋಧಿ ಕೆಲಸವೇ ಆಗಿದೆ. ಹೀಗಾಗಿ ಸಾಮಾಜಿಕ ಹೊಣೆಗಾರಿಕೆಯ ಹೆಸರಿನಲ್ಲಿ ತಮ್ಮ ವಾಮಮಾರ್ಗದ ಚಟುವಟಿಕೆಗಳನ್ನು ಸಮರ್ಥಿಸುವ ಪರಿಯನ್ನು ಇನ್ನಾದರೂ ಬಿಡಬೇಕಿದೆ.ಅದು ಅವರು ಸಮಾಜಕ್ಕೆ ನೀಡುವ ಬಹುಮುಖ್ಯ ಕೊಡುಗೆಯಾಗುತ್ತದೆ.
ಎಲ್ಲವನ್ನೂ ಸಿ ಎಸ್ ಎಲ್ ಸಿ ಪತನದೊಂದಿಗೆ ತಳುಕು ಹಾಕುವುದು ಸರಿಯಲ್ಲ. ಅಮೀನ್ ಮಟ್ಟು ಕಮೆಂಟು ಹಗರಣಕ್ಕೂ ಸಿ ಎಸ್ ಎಲ್ ಸಿಯ ಬಗ್ಗೆ ಪ್ರಗತಿಪರರು ತೋರಿದ ನೈತಿಕ ವಿರೋಧಕ್ಕೂ ಸಂಬಂಧವಿಲ್ಲ. ಸಿ ಎಸ್ ಎಲ್ ಸಿಯ ಪತನಕ್ಕೆ ಬಾಲು ಹಾಗೂ ಅವರ ಗುಂಪಿನ ಸಂಶೋಧಕರ ಬೌದ್ಧಿಕ ಅಹಂಕಾರವೇ ಮುಖ್ಯ ಕಾರಣ. ಚೆನ್ನಿ ಸರ್ ಅವರು obscene ಅಂತ ಕರೆದದ್ದು ಇವರುಗಳ ಬೌದ್ಧಿಕ ಅಹಂ ಅನ್ನೇ ಎನ್ನುವುದನ್ನು ಈ ಸಂದರ್ಭದಲ್ಲಿ ಸ್ಮರಿಸಬಹುದಾಗಿದೆ.
ಇದು ಬೌದ್ಧಿಕ ದಿವಾಳಿತನವೇ ಹೊರತು ಇನ್ನೇನೂ ಅಲ್ಲ.
ನಮ್ಮ ಪ್ರೀತಿಯ ಶ್ರೀ ರಾಕೇಶ್ ಶೆಟ್ಟಿಯವರ ಮೇಲೆ ಮತ್ತು ನಿಲುಮೆ ಬ್ಲಾಗ್ ಮೇಲೆ ಈಗ ಕಾರ್ಮೋಡ ಕವಿದಿದೆ. ಆದ್ದರಿಂದ ನಿಲುಮೆ ಫೇಸ್ ಬುಕ್ ಅನ್ನು ಸಾಧ್ಯವಾದರೆ ತಕ್ಷಣ ನಿಲ್ಲಿಸುವುದು ನಿಲುಮೆ ಬ್ಲಾಗ್ ನ ದೃಷ್ಟಿಯಿಂದ ಉತ್ತಮ ಎಂದು ನನ್ನ ಅಭಿಪ್ರಾಯ. ಏಕೆಂದರೆ ಈಗ ನಿಲುಮೆ ಬ್ಲಾಗ್ ನಲ್ಲಿ ಪ್ರತಿಕ್ರಿಯೆಗಳಿಗೆ moderation ಅಳವಡಿಸಲಾಗಿದೆ. ಇದರಿಂದ ಹಿಂದಿನಂತೆ ಚರ್ಚೆಯ ದಾರಿ ತಪ್ಪಿಸುವ ಮತ್ತು ಅಸಭ್ಯ ಭಾಷೆಯ ಪ್ರತಿಕ್ರಿಯೆಗಳಿಗೆ ಜಾಗವಿಲ್ಲ. ಆದರೆ ಫೇಸ್ ಬುಕ್ ನಲ್ಲಿ ಯಾರೋ ಮಾಡಿದ ತಪ್ಪಿಗೆ ನಿಲುಮೆ ಬ್ಲಾಗ್ ನಿರ್ವಾಹಕರು ಹೊಣೆಯಾಗುವುದು ಯಾವ ನ್ಯಾಯ? ನಮ್ಮ ನಮ್ಮ ಮೇಲ್ inboxಗೆ ನಿಲುಮೆಯ ಲೇಖನಗಳು ಬರುವ ಅವಕಾಶ ಇರುವಾಗ ಫೇಸ್ ಬುಕ್ ಗೆ ಹೋಗಿ ಅಲ್ಲಿ ಪ್ರತಿಕ್ರಿಯಿಸುವ ಅಗತ್ಯವೇನಿಲ್ಲ ಎಂದು ನನ್ನ ಅನಿಸಿಕೆ. ಓದುಗರು ತಮ್ಮ ಪ್ರತಿಕ್ರಿಯೆಯನ್ನು ನಿಲುಮೆ ಬ್ಲಾಗ್ ನಲ್ಲೇ ವ್ಯಕ್ತಪಡಿಸಲಿ. ಅದರ ಮೇಲೆ moderationನ ಹಿಡಿತವಂತೂ ಇರುತ್ತದೆ. ಲೇಖನದ ವಿಷಯಕ್ಕೆ ಸಂಬಂಧಪಡದ ನೂರಾರು ಪ್ರತಿಕ್ರಿಯೆಗಳಿಗಿಂತ ಚರ್ಚೆಗೆ ಪೂರಕವಾದ ಹತ್ತಿಪ್ಪತ್ತು ಪ್ರತಿಕ್ರಿಯೆಗಳು ಮೇಲಲ್ಲವೇ? ಇದನ್ನು ಸೋಲು, ಶರಣಾಗತಿ ಎಂದು ಬೇಸರಪಟ್ಟುಕೊಳ್ಳುವುದು ಸರಿಯಲ್ಲ. ಏಕೆಂದರೆ ಸಮುದ್ರದಲ್ಲಿ ಬಿರುಗಾಳಿ, ಪ್ರವಾಹ ಬಂದಾಗ ಅದು ಇಳಿಯುವ ತನಕ ಕಾಯುವುದು ಉತ್ತಮವಲ್ಲವೇ?
ಪ್ರತಿ ಬಾರಿಯೂ ಹಿಂದೂ ಧರ್ಮವೇ ವಿಮರ್ಶೆಗೊಳಬೇಕೆ ?
ಹೌದು ನಮ್ಮ ಸನಾತನ ಧರ್ಮದ ತಿರುಳು ಇನ್ನೂ ಪ್ರಸ್ತುತತೆಯಲ್ಲಿದೆ ಎನ್ನಲು ಕಾರಣ, ಶತ ಶತಮಾನಗಳಿಂದ ವಿಮರ್ಶೆಗೆ, ಕಟು , ತೀಕ್ಷ್ಣ ಅಭಿಪ್ರಾಯಗಳಿಗೆ ತೆರೆದುಕೊಂಡಿರುವದು. ಈ ವಿಮರ್ಶಾ ಬಾಗಿಲು ಎಂದೋ ಮುಚ್ಚಿದ್ದರೆ ಇಂದು ನಾವೆಲ್ಲಾ ಯೋಚಿಸಲು ಹಿಂದೂ ಧರ್ಮ, ಸನಾತನ ಧರ್ಮ ಎಂಬಂತಹ ಸನ್ನಿಧಾನವೇ ಇರುತ್ತಿರಲಿಲ್ಲ. ಈ ಇರದಿರುವಿಕೆಯ ಸಾಧ್ಯವಾಗಿಸಲು ಈ ನಾಲ್ಕು ದಶಮಾನಗಳ ಬಲಪಂಥೀಯ ಬುದ್ಧಿಜೀವಿಗಳು ಹರಸಾಹಸ ಮಾಡುತ್ತಿದ್ದಾರೆ. ಹಿಂದೂ ಧರ್ಮವನ್ನು ಜಗತ್ತಿನಲ್ಲಿರುವ ಇತರೆ ಧರ್ಮ ( ಮತ ) ಗಳೊಂದಿಗೆ ಹೋಲಿಕೆ ಮಾಡುತ್ತ , ಅವುಗಳು ಅನುಸರಿಸಿಕೊಂಡುಬಂದಿರುವ ದೊಡ್ಡಿಬಾಗಿಲು ಮುಚ್ಚುವ ರೀತಿ – ನೀತಿ ಗಳನ್ನು ನಾವೂ ಕೈಗೊಳ್ಳಬೇಕೆಂಬ ಹಠ ಸಾಧನೆಯತ್ತ ಹೆಜ್ಜೆ ಇಟ್ಟಿದ್ದಾರೆ. ಈ ಬುದ್ಧಿಜೀವಿಗಳ ನಿಲುವು ಪ್ರತ್ಯಕ್ಷವಾಗಿ , ಸಂಪೂರ್ಣವಾಗಿ ಸಾಕಾರಗೊಂಡ ದಿನ ಹಿಂದೂ ಧರ್ಮದ ಕೊನೆಯ ದಿನಗಳು ಎನಿಸಲ್ಪಡುವವು ಎಂದರ್ಥ.
ಹಿಂದೂ ಧರ್ಮ ಗಂಗಾ ನದಿಯಿದ್ದಂತೆ . ಅದರ ಆಳ ಅಗಲ ಅರಿಯುವದು ಹಿಮಾಲಯದ ತಳಭಾಗದಲ್ಲಿ ನಿಂತು ಹಿಮಾಲಯವನ್ನು ಅರಿಯಲು ಪ್ರಯತ್ನಿಸಿದಂತೆ. ಗಂಗಾ ನದಿ ಹರಿಯುವ ದಾರಿಯನ್ನು ನದಿಯೇ ನಿರ್ಧರಿಸುವಂತೆ ಹಿಂದೂ ಧರ್ಮವೂ ಕಾಲ ಕಾಲಕ್ಕೆ ಬದಲಾವಣೆಗಳನ್ನು ತನ್ನಲ್ಲಿ ಅಳವಡಿಸಿಕೊಳ್ಳುತ್ತ ಸನಾತನ ಎಂಬ ಬಿರುದು ಧರಿಸಿ ಸಾಗಿ ಬಂದಿದೆ. ಇಂದಿನ ಬಲಪಂಥೀಯ ಬುದ್ಧಿಜೀವಿಗಳು ಬೊಬ್ಬೆಯಿಡುವ ರಕ್ಷಣೆ ಹಿಂದೂ ಧರ್ಮದ ಉಳಿವಿಗೆ ಬೇಕೆನಿಸುವದಿಲ್ಲ. ಪರೋಕ್ಷವಾಗಿ ಹಾನಿಯನ್ನು ಮಾಡಬಹುದೇ ವಿನಃ ಇವರ ಮನಸ್ಥಿತಿಗೆ ಧರ್ಮವನ್ನಂತೂ ಬದಲಾಯಿಸುವದು ಅಸಾಧ್ಯ.