ಭಾರತೀಯ ಸಂಸ್ಕೃತಿಯನ್ನು ವಿರೂಪಗೊಳಿಸುವ ಪಾಶ್ಚಾತ್ಯ ಚಿಂತನಾ ಮಾರ್ಗಗಳು
– ಶಿವಕುಮಾರ ಮತ್ತು ಡಂಕಿನ್ ಝಳಕಿ
ದಿನೇಶ್ ಅಮೀನ್ ಮಟ್ಟು ಅವರು ಪ್ರತಿಷ್ಠಿತ ಪತ್ರಿಕೆಯೊಂದಕ್ಕೆ ೨೦೧೨ರಲ್ಲಿ ಬರೆದ ವಿವೇಕಾನಂದರ ಕುರಿತ ಲೇಖನ ಬಹಳಷ್ಟು ಚರ್ಚೆಯನ್ನು ಹುಟ್ಟುಹಾಕಿದೆ. ಈ ಲೇಖನದ ವಿರುದ್ಧ ಎದ್ದ ದನಿಗಳ ಕುರಿತು ತಮ್ಮ ಸಮರ್ಥನೆಯನ್ನು ಹೊಸೆಯುತ್ತಾ, ತಮ್ಮ ಫೇಸ್ಬುಕ್ ಪುಟದಲ್ಲಿ, ತಮ್ಮ ಲೇಖನ ಐತಿಹಾಸಿಕವಾಗಿ ಸರಿಯಾಗಿದೆ ಮತ್ತು ತಾವು ವಿವೇಕಾನಂದರ ಬಗ್ಗೆ ಪ್ರಕಟವಾಗಿರುವ ಸುಮಾರು 200 ಪುಸ್ತಕಗಳನ್ನು ಓದಿದ್ದಾಗಿ ಹೇಳಿಕೊಳ್ಳುತ್ತಾರೆ. ಅವರ ಪರವಾಗಿ ವಾದಿಸುತ್ತ ಮತ್ತೊಬ್ಬರು, ‘ರೋಗಿಷ್ಟ’ ಎನ್ನುವುದು ಬೈಗುಳವೇ ಅಲ್ಲ, ‘ಕಡಿಮೆ ಅಂಕ ಗಳಿಸುವವ’ ಎಂಬುದು ‘ಅವಮಾನದ’ ವಿಷಯವಲ್ಲ ಎಂದು ಹೇಳ ತೊಡಗಿದ್ದಾರೆ. ಈ ಹೊತ್ತಿನಲ್ಲಿ ಕೆಲವು ವಿಚಾರಗಳನ್ನು ಮತ್ತೊಮ್ಮೆ ಚರ್ಚೆಗೆತ್ತಿಕೊಳ್ಳುವುದು ಈ ಪುಟ್ಟ ಲೇಖನದ ಉದ್ದೇಶ.
ಮಟ್ಟುರವರ ವಿವೇಕಾನಂದರ ಕುರಿತ ಲೇಖನದ ಈ ಸಾಲುಗಳನ್ನು ನೋಡಿ: “ಸ್ವಾಮಿ ವಿವೇಕಾನಂದರು ದಡ್ಡ ವಿದ್ಯಾರ್ಥಿಯಾಗಿದ್ದರು. … ಹುಟ್ಟಿನಿಂದಲೇ ರೋಗಿಷ್ಠರಾಗಿದ್ದ ಅವರು ಸಾಯುವ ಹೊತ್ತಿಗೆ ಒಂದೆರಡಲ್ಲ, ಮೂವತ್ತೊಂದು ರೋಗಗಳಿಂದ ಬಳಲಿ ಹೋಗಿದ್ದರು. ಎಲ್ಲ ಬಂಗಾಳಿಗಳಂತೆ ಅವರೊಬ್ಬ ಮಹಾ ತಿಂಡಿಪೋತರಾಗಿದ್ದರು. ಜೀವನದ ಕೊನೆಯ ದಿನದವರೆಗೂ ಅವರು ಮಾಂಸಾಹಾರಿ ಆಗಿದ್ದರು. … ವ್ಯಸನಿಯಂತೆ ಸಿಗರೇಟ್-ಹುಕ್ಕಾ ಸೇದುವ ಧೂಮಪಾನಿಯಾಗಿದ್ದರು. … ತೀವ್ರ ತಲೆನೋವಿನಿಂದ ಹಿಡಿದು ಹೃದಯದ ಕಾಯಿಲೆವರೆಗೆ … ಮಲಬದ್ಧತೆ, ಭೇದಿ, ನರದೌರ್ಬಲ್ಯ, ಮಂಡಿನೋವು, ಕಾಲುಬಾವು ಎಲ್ಲವೂ ಅವರನ್ನು ಕಾಡುತ್ತಿತ್ತು. … ಈ ಎಲ್ಲ ರೋಗಗಳ ನಡುವೆಯೂ ಅವರ ನಾಲಗೆಯ ಚಪಲ ಮಾತ್ರ ಕಡಿಮೆಯಾಗಿರಲಿಲ್ಲ. … (ವಿವೇಕಾನಂದ) ಮಾತ್ರ ಮಾಂಸದ ಅಡುಗೆಯನ್ನು ಬಗೆಬಗೆಯಲ್ಲಿ ಮಾಡುತ್ತಿದ್ದ…. ಕುಟುಂಬದ ಕಷ್ಟಗಳನ್ನು ತಾಯಿಯ ಹೆಗಲ ಮೇಲೆ ಹಾಕಿ ವಿವೇಕಾನಂದರು ಸಂಸಾರ ತೊರೆದು ಸನ್ಯಾಸಿಯಾಗುತ್ತಾರೆ.” ಇವು ಲೇಖನದ ವಾದದ ಕೆಲವೊಂದು ಝಲಕ್ ಅಷ್ಟೇ.
ಮೂರು ವರ್ಷಗಳ ತನಕ ಜಾಲತಾಣದಲ್ಲಿ ವಿವೇಕಾನಂದರ ‘ಮನುಷ್ಯತ್ವದ ಮುಖ’ ಪರಿಚಯಿಸುವ ‘ಬೌದ್ಧಿಕ’ ಲೇಖನ ಎಂಬ ಸೋಗಿನಡಿಯಲ್ಲಿ ಹರಿದಾಡಿದ ಈ ಲೇಖನದಲ್ಲಿ, ಗಮನಿಸಿ ನೋಡಿ, ಎಲ್ಲೂ ನಿಂದನೆಯ ಪದಗಳನ್ನು, ಬೈಗುಳಗಳನ್ನು ಬಳಸಿಲ್ಲ. ಆದರೂ ಈ ಲೇಖನ, ವಿವೇಕಾನಂದರನ್ನು ತಮ್ಮ ಗುರು, ದೈವ, ಮಾರ್ಗದರ್ಶಿ ಎಂದುಕೊಳ್ಳುವ ಜನರಿಗೆ ಅತೀವ ನೋವುಂಟು ಮಾಡಿದ್ದು ನಿಜ. ಇಂಥವರಲ್ಲಿ ಕೆಲವರು ಆ ಲೇಖಕರ ವ್ಯಕ್ತಿ ನಿಂದನೆಯಲ್ಲಿ ತೊಡಗಿದ್ದೂ ಸಹ ನಿಜ. ಆ ಲೇಖಕರು ಇಂಥ ವ್ಯಕ್ತಿಗಳ ಮೇಲೆ (ಒಂದಷ್ಟು ಅಮಾಯಕರ ಮೇಲೂ) ಮಾನಹಾನಿ ಮೊಕದ್ದಮೆಯನ್ನು ಹಾಕಿ, ತಾನು ನಿಂದನೆ ಮಾಡಿಲ್ಲ, ಹಾಗೆಯೇ ತನ್ನ ಕುರಿತು ಯಾರಾದರು ನಿಂದನೆಯನ್ನು ಮಾಡಿದರೆ ತಾನು ಅದನ್ನು ಸಹಿಸುವುದಿಲ್ಲ ಎಂದು ವಾದಿಸಿದ್ದು ನಾವೆಲ್ಲಾ ಕೇಳಿದ್ದೇವೆ. ಹಲವು ಮಂದಿ ಈ ವಾದವನ್ನು ಸರಿ ಎಂದೂ ಒಪ್ಪಿಕೊಳ್ಳುತ್ತಾರೆ. ಇಂದಿನ ವೈಚಾರಿಕತೆಯನ್ನು, ಸಮಾಜವಿಜ್ಞಾನಗಳ ತರ್ಕವನ್ನು ಒಪ್ಪಿಕೊಳ್ಳುವ ಮನಸ್ಸಿಗೆ ಈ ಘಟನೆಯಲ್ಲಿ ಎಲ್ಲವೂ ಸರಿಯಾಗಿಯೇ ಕಾಣಿಸುತ್ತದೆ. ಆದರೆ ಈ ಘಟನೆಯ ಸ್ವರೂಪವನ್ನು ಒಂದಷ್ಟು ಬಗೆದು ನೋಡಿದರೆ ಇಲ್ಲೊಂದು ಅತೀವ ಅಸಂಬದ್ಧ ತರ್ಕವಿರುವುದು ಗೋಚರಿಸತೊಡಗುತ್ತದೆ.
ದೇವತೆಗಳ ಮತ್ತು ಗುರುಹಿರಿಯರ ಅವಹೇಳನ
ಭಾರತೀಯರ ದೇವತೆಗಳು ಮತ್ತು ಗುರುಹಿರಿಯರನ್ನು ವೈಚಾರಿಕತೆಯ ಹೆಸರಿನಲ್ಲಿ ಅವಹೇಳನ ಮಾಡುವುದು ಇಂದು ನೆನ್ನೆಯ ವಿಚಾರವಲ್ಲ. ಅದು ಭಾರತ ಕಂಡ ಎರಡು ವಸಾಹತುಶಾಹಿಗಳಷ್ಟೇ ಹಳೆಯದು. ಉದಾಹರಣೆಯಾಗಿ, 1719ರಲ್ಲಿ ಪ್ರಕಟಗೊಂಡ “Thirty Four Conferences between the Danish Missionaries and the Malabarian Bramans…” ಎಂಬ ಕೃತಿಯ “Conference IX” ಭಾಗದಲ್ಲಿ, ಅದರ ಲೇಖಕ ಬಾರ್ತಲೋಮಯಾಸ್ ಜೀಗನ್ಬಾಲ್ಗ್ ಎಂಬ ಮಿಷನರಿಯು, ಮಲಬಾರಿನ ಸ್ಥಳೀಯರೊಂದಿಗೆ ನಡೆಸುವ ಈ ಚರ್ಚೆಯನ್ನು ಗಮನಿಸಿ. (ಈ ಕೃತಿಯಲ್ಲಿ ಇಂಥ ಹಲವಾರು ಚರ್ಚೆಗಳಿವೆ.) “ನೀವು ನಿಮ್ಮ ವೈಚಾರಿಕತೆಯನ್ನೇ ಪರಿಶೀಲಿಸಿ ನೋಡಿದರೆ ನಿಮಗೆ ತಿಳಿಯುತ್ತದೆ, ನೀವು ದೇವರು ಎಂದು ಪೂಜಿಸುತ್ತಿರುವುದು ನಿಮ್ಮ ಪ್ರತಿಷ್ಠೆ ಮತ್ತು ಸುಳ್ಳುಗಳನ್ನು. ಇಲ್ಲವೆಂದರೆ ಯೋಚಾನಾ ಶಕ್ತಿಯುಳ್ಳ ಒಬ್ಬ ವ್ಯಕ್ತಿ ಹೇಗೆ ತಾನೇ ಒಂದು ಮರದ ತುಂಡು ಅಥವಾ ಅದಕ್ಕಿಂತಲೂ ಅಶ್ಲೀಲ ವಸ್ತುವನ್ನು ತೆಗೆದುಕೊಂಡು, ಅದಕ್ಕೆ ಹಂದಿಯ, ಕೊಳಕಿನ, ಆಮೆಯ, ಕುದುರೆಯ ಅಥವಾ ಇನ್ನಾವುದೋ ನಾಕು ತಲೆ, ಎಂಟು ಕೈ, ಮೂರು ಕಣ್ಣುಗಳುಳ್ಳ ಕ್ಷುದ್ರ ರೂಪವನ್ನು ಕೊಟ್ಟು, ಅದನ್ನು ದೇವರು ಎಂದು ಆರಾಧಿಸಬಲ್ಲ? ಹೇಗೆ ತಾನೆ, ಕೊಲ್ಲುವ, ವ್ಯಭಿಚಾರ ಮಾಡುವ, ಮದುವೆಯಾಗಿ ಮಕ್ಕಳಿರುವ, ಕದಿಯುವ ವ್ಯಕ್ತಿಯನ್ನು ದೇವರು ಎಂದು ಆರಾಧಿಸಬಲ್ಲ? … ಉದಾಹರಣೆಗೆ ನಿಮ್ಮ ದೇವರು ವಿಷ್ಣುವನ್ನೇ ತೆಗೆದು ಕೊಳ್ಳಿ. ಈತನಿಗೆ ಹಲವು ಹೆಣ್ಣಿನ ಸಹವಾಸ. ಈಶ್ವರನ ಜೊತೆಗೆ ಇಂಥ ಸಂಬಂಧವನ್ನು ಇಟ್ಟುಕೊಳ್ಳಲು ಈತ ತಾನೇ ಹೆಣ್ಣಿನ ರೂಪ ಧರಿಸುತ್ತಾನೆ.” (ಪುಟ 104-105). ಹೀಗೆ ಮುಂದುವರಿಯುತ್ತದೆ ಈತನ ವೈಚಾರಿಕ ಚಿಂತನೆ.
ಸಿಟ್ಟುಗೊಂಡ, ನೊಂದ ಮಲಬಾರಿನ ಸ್ಥಳೀಯರು ಈ ವಾದಗಳ ವಿರುದ್ಧ ಧ್ವನಿ ಎತ್ತಿದಾಗಲೆಲ್ಲ ಜೀಗನ್ಬಾಲ್ಗನ ಉತ್ತರ ಸಿದ್ಧವಾಗಿರುತ್ತಿತ್ತು: “ನಿಮ್ಮ ವ್ಯಕ್ತಿತ್ವದ ಕುರಿತು ಅವಹೇಳನ ಮಾಡುವುದು, ಅಥವಾ ನಿಮ್ಮ ರಿಲಿಜನ್ನಿನಲ್ಲಿರುವ ಒಳ್ಳೆಯ ವಿಚಾರಗಳನ್ನು ತೆಗಳುವುದು ನನ್ನ ಉದ್ದೇಶವಲ್ಲ. I reasonably condemn your gross ignorance, and your false worship. … (ನಾನು ನಿಮ್ಮ ಅತ್ಯಂತ ಮೂರ್ಖತನವನ್ನು, ಮತ್ತು ಕಲ್ಲು ಮರಗಳಿಗೆ ಮಾಡುವ ಸುಳ್ಳು ಪೂಜೆಯನ್ನು ವೈಚಾರಿಕವಾಗಿ ಖಂಡಿಸುತ್ತೇನೆ.) ಮತ್ತು ಇದನ್ನು ನಾನು ನನ್ನ ಕರ್ತವ್ಯ ಮತ್ತು ನಿಮ್ಮ ಮೇಲಿನ loving-kindness (ಪ್ರೀತಿಪೂರ್ವಕ ದಯೆ) ಎಂದುಕೊಂಡಿದ್ದೇನೆ.” (ಪುಟ 107)
ಹದಿನಾಲ್ಕು, ಹದಿನೈದನೇ ಶತಮಾನದಿಂದಲೂ ಪಾಶ್ಚಿಮಾತ್ಯರು ಭಾರತದ ದೇವತೆಗಳು, ಗುರುಗಳು, ಸಂಪ್ರದಾಯ, ಪುರಾಣ-ಕಥೆಗಳನ್ನು ನಿರಂತರವಾಗಿ ಈ ರೀತಿಯ ವಿಮರ್ಶೆಗೆ ಒಳಪಡಿಸುತ್ತಾ ಬಂದಿದ್ದಾರೆ. ತಮ್ಮ ರಿಲಿಜನ್ನಿನ ಕನ್ನಡಕದಿಂದ ನೋಡಿದಾಗಲೆಲ್ಲಾ ಇವರಿಗೆ ಭಾರತೀಯರ ಆಚರಣೆಗಳು ಶುಷ್ಕ ಮೂಢನಂಬಿಕೆ, ಅವೈಚಾರಿಕತೆಯ ಕೊಂಪೆಯಂತೇ ಕಾಣಿಸಿದ್ದು. ಎಸ್.ಏನ್. ಬಾಲಗಂಗಾಧರರು ತೋರಿಸಿಕೊಡುವಂತೆ, ಮುಂದೆ ಈ ಚಿಂತನೆಗಳೇ ಸಮಾಜವಿಜ್ಞಾನಗಳಾಗಿ ರೂಪಗೊಂಡಿದ್ದು. ಇಂದು ಸಮಾಜವಿಜ್ಞಾನ, ಇತಿಹಾಸ ಇತ್ಯಾದಿಗಳ ಹೆಸರಿನಲ್ಲಿ ಈ ಅವಹೇಳನ ನಿರಂತರವಾಗಿ ನಡೆಯುತ್ತಿದೆ. ಮಟ್ಟುರವರ ವಿವೇಕಾನಂದರ ಕುರಿತ ಲೇಖನ ಒಂದು ಸಣ್ಣ ಉದಾಹರಣೆಯಷ್ಟೆ.
ಇಂಥ ಅವಹೇಳನಗಳು ಯಾವ ಕಾರಣಕ್ಕಾಗಿ ತಪ್ಪು? ವೈಚಾರಿಕತೆಯ ಹೆಸರಿನಲ್ಲಿ ಇವು ಹೇಗೆ ಒಂದು ಸಂಸ್ಕೃತಿಗೆ ಸೇರಿದ ಜನರ ಅನುಭವಗಳನ್ನು ವಿರೂಪಗೊಳಿಸುತ್ತವೆ? ಮುಂತಾದ ವಿಚಾರಗಳ ಕುರಿತು ಸ್ಪಷ್ಟವಾಗಿ ವಿಚಾರ ಮಂಡಿಸಲು ಕ್ರಿಶ್ಚಿಯನ್ ರಿಲಿಜನ್ ಮತ್ತು ಅಲ್ಲಿನ ಸಂಸ್ಕೃತಿಯನ್ನು ಆಳವಾಗಿ ಅರ್ಥಮಾಡಿಕೊಳ್ಳದ ಹೊರತು ಬೇರೆ ದಾರಿಯೇ ಇಲ್ಲ. ಆದರೆ ತಮ್ಮ ಅನುಭವಗಳು ವಿರೂಪಗೊಳ್ಳುತ್ತಿರುವಾಗ, ತಮ್ಮ ಸಂಪ್ರದಾಯ, ಗುರುಹಿರಿಯರ ಅವಮಾನವಾಗುತ್ತಿರುವಾಗ ಜನರಿಗೆ ನೋವಾಗುವುದು, ತಮ್ಮದೇನನ್ನೋ ಕಳೆದುಕೊಂಡಂತೆ ಅನಿಸುವುದು ಸಹಜ. ಇಂಥ ಪರಿಸ್ಥಿಯಲ್ಲಿ ಜನರೇನು ಮಾಡಿಯಾರು?
ಜೀಗನ್ಬಾಲ್ಗನ ಆ ಕೃತಿಯಲ್ಲಿ ಕಾಣುವಂತೆ, ಇಂಥ ಸಂದರ್ಭದಲ್ಲಿ ಶತಶತಮಾನಗಳಿಂದ ಭಾರತೀಯರು ಮಾಡಿದ್ದು ಒಂದೇ: ಅವಮಾನವನ್ನು ಅನುಭವಿಸುತ್ತಾ, ನೋವನ್ನು ಸಹಿಸಿಕೊಂಡು ತಣ್ಣಗೆ ಕೂರುವುದು. ಆಗೀಗ ಬಿಸಿರಕ್ತದ ಒಂದಷ್ಟು ಮಂದಿ ಪಾಶ್ಚಾತ್ಯರ ಆ ಅಸಂಬದ್ಧ ಚಿತ್ರಣದ ವಿರುದ್ಧ ಅವರನ್ನು ನಿಂದಿಸುವುದನ್ನೂ ನಾವು ನೋಡಬಹುದು. ಇಂತಹ ಪ್ರತಿಕ್ರಿಯೆಗಳು ಬಂದಾಗಲೆಲ್ಲಾ, ಯುರೋಪಿನ ಬುದ್ಧಿಜೀವಿಗಳು ಇಡೀಯ ಭಾರತೀಯರ ಕುರಿತು, ಇವರಿಗೆ ವಾದ ಮಾಡುವ ಯೋಗ್ಯತೆಯೇ ಇಲ್ಲ, ಇವರಿಗೆ ತರ್ಕ ಮತ್ತು ಚರ್ಚೆಯ ಕುರಿತು ಸ್ವಲ್ಪವೂ ಗೌರವವಿಲ್ಲ ಎಂಬುದಾಗಿ ಟೀಕಿಸಿದ್ದನ್ನು ನಾವು ನೋಡಬಹುದು. ಉದಾಹರಣೆಗಳಿಗೆ ನಾವು ಜೀಗನ್ಬಾಲ್ಗನ ಕಾಲಕ್ಕೆ ಹೋಗುವುದೂ ಬೇಡ. ವೆಂಡಿ ಡಾನಿಗರ್ ಅವರ ಕೃತಿಯ ಸುತ್ತ ನಡೆದ ವಿವಾದ ಮತ್ತು ಚರ್ಚೆಯನ್ನು ಗಮನಿಸಿ.
ಆದರೆ, ಈಗ ಪರಿಸ್ಥಿತಿ ಕೊಂಚ ಬದಲಾಗುತ್ತಿದೆ. ತಮ್ಮ ಸಂಪ್ರದಾಯ, ಗುರುಹಿರಿಯರ ಕುರಿತು ಅವಹೇಳನಗಳು ನಡೆದಾಗ, ತಮ್ಮ ಅನುಭವವನ್ನು ವಿರೂಪಗೊಳಿಸುವವರ ವಿರುದ್ಧ ವೈಯುಕ್ತಿಕ ನಿಂದನೆಗಿಳಿಯುವ ಜನರ ಗುಂಪು ಹೆಚ್ಚುತ್ತಿದೆ. ಇದಕ್ಕೆ ಹಲವು ಕಾರಣಗಳಿವೆ: ಆಧುನಿಕ ಶಿಕ್ಷಣ, ಸುಲಭದಲ್ಲಿ ಕೈಗೆಟಕುವ ಮಾಧ್ಯಮಗಳು, ಹೆಚ್ಚುತ್ತಿರುವ ವೈಚಾರಿಕತೆಯ ಹೆಸರಿನಲ್ಲಿ ನಡೆಯುತ್ತಿರುವ ಅವಹೇಳನಗಳು ಇತ್ಯಾದಿ. ಇದೊಂದು ತಪ್ಪು ಮತ್ತು ಅಹಿತಕರಕರ ಬೆಳವಣಿಗೆ ಎಂಬುದು ನಿಜ. ಆದರೆ ಇದಕ್ಕೆ ಹೊಣೆ ಯಾರು ಎಂಬುದನ್ನು ನಾವು ವಿಚಾರಿಸಬೇಕು. 21ನೇ ಶತಮಾನದಲ್ಲೂ ಸಹ, ಶತಮಾನಗಳ ಹಿಂದಿನ ಪಾಶ್ಚಾತ್ಯ ಚಿಂತನೆಯನ್ನೇ ‘ವೈಚಾರಿಕತೆ’ಯ, ಸಂಶೋಧನೆಯ ಹೆಸರಿನಲ್ಲಿ ಚಿಂತಕರು ಮುಂದುವರೆಸಿಕೊಂಡು ಬಂದಿರುವುದು ಇದಕ್ಕೆ ಮೊದಲ ಮತ್ತು ಎಲ್ಲಕ್ಕಿಂತಲೂ ದೊಡ್ಡ ಕಾರಣ. ಅಂದರೆ, ಪ್ರಗತಿಪರತೆ ಮತ್ತು ವೈಚಾರಿಕತೆಯ ಹೆಸರಿನಲ್ಲಿ ಭಾರತೀಯರ ಅನುಭವಗಳನ್ನು ವಿರೂಪಗೊಳಿಸುತ್ತಿರುವ ಇಂಡಾಲಜಿ ಪಂಡಿತೆ ವೆಂಡಿ ಡೋನಿಗರ್ ಅಂಥವರಿಂದ ಹಿಡಿದು, ಭಾರತೀಯರೇ ಆದ ತಾಪಿ ಧರ್ಮರಾವ್, ಯೋಗಿಶ್ ಮಾಸ್ಟರ್ ಹಾಗೂ ನಮ್ಮ ಅಮೀನ್ ಮಟ್ಟೂರರವರೂ ಇಂಥ ತಪ್ಪು ಮತ್ತು ಅಹಿತಕರಕರ ಬೆಳವಣಿಗೆಯೊಂದಕ್ಕೆ ನೇರ ಹೊಣೆಗಾರರು.
ಪರಿಹಾರದತ್ತ ಒಂದು ನೋಟ
ಮಟ್ಟುರವರು ಅಂದುಕೊಂಡಂತೆ ಅವರ ವಿವೇಕಾನಂದರ ಲೇಖನದಲ್ಲಿರುವುದು ‘ಸತ್ಯಾಸತ್ಯತೆಯ’ ಸಮಸ್ಯೆಯಲ್ಲ. ಅವರು “ವರ್ಷಗಳ ಕಾಲ ಕಷ್ಟಪಟ್ಟು ನಡೆಸಿದ ಸಂಶೋಧನೆಯ ಫಲ” ಎಂದು ಅವರ ವಾದಕ್ಕೆ ಇನ್ನು ಎಷ್ಟು ಐತಿಹಾಸಿಕ ಆಧಾರಗಳನ್ನು ಕೊಟ್ಟರೂ ಅವರ ಲೇಖನದ ವಿಲಕ್ಷಣತೆ ಮಾಸುವುದಿಲ್ಲ. ಏಕೆಂದರೆ ವೈಜ್ಞಾನಿಕ ಮತ್ತು ಐತಿಹಾಸಿಕ ವಾದದ ಹೆಸರಿನಲ್ಲಿ ಅದು ಇಡೀ ಹಿಂದೂ ಸಮುದಾಯದ ಅನುಭವವನ್ನೇ ವಿರೂಪಗೊಳಿಸುತ್ತದೆ.
ಇಡೀ ಭಾರತೀಯರ ಅನುಭವವನ್ನೇ ವಿರೂಪಗೊಳಿಸುವ ಇಂಥ ಚಿಂತನೆಗಳು ನಮ್ಮ ಇಂದಿನ ಯುವವರ್ಗದ ಹತಾಶೆಗೆ, ಆತಂಕ, ಕೋಪಕ್ಕೆ ಕಾರಣವಾಗುತ್ತಿದೆ. ತಮ್ಮ ಸಂಪ್ರದಾಯ, ದೇವತೆಗಳ ಅವಹೇಳನವನ್ನು ಈ ವರ್ಗ ಸಹಿಸಿಕೊಂಡು ಕೂರಲು ಇಂದು ಸಿದ್ಧರಿಲ್ಲ. ಇವರಲ್ಲಿ ಮನೆಮಾಡುತ್ತಿರುವ ಈ ಅವಮಾನ, ಆತಂಕಗಳು, ನಿಂದನಾತ್ಮಕವಾದ ವೈಯಕ್ತಿಕ ದಾಳಿಗಿಳಿಯುವ, ಕೃತಿಗಳನ್ನು ನಿಷೇಧಮಾಡಲು ಒತ್ತಾಯಿಸುವ, ದೈಹಿಕ ದಾಳಿಗಿಳಿಯುವ… ಮುಂತಾದ ಅಹಿತಕರಕರ ರೀತಿಗಳಲ್ಲಿ ಹೊರಬರುತ್ತಿರುವುದನ್ನು ನಾವಿಂದು ನೋಡುತ್ತಿದ್ದೇವೆ. ಈ ಆತಂಕಕಾರಿ ಬೆಳವಣಿಗೆಗೆ ನಮ್ಮಲ್ಲಿ ಪರಿಹಾರಗಳಿಲ್ಲವೇ?
ಇದೆ. ಆದರೆ ಇಂಥ ಅಹಿತಕರಕರ ಬೆಳವಣಿಗೆಯನ್ನು ಒಂದು ಸಂಶೋಧನಾ ಕೇಂದ್ರವನ್ನು ಮುಚ್ಚಿಸಿ, ಒಂದಷ್ಟು ಜನರ ಮೇಲೆ ಮೊಕದ್ದಮೆ ಹೂಡಿ, ಫೇಸ್ಬುಕ್ ತುಂಬಾ ಐತಿಹಾಸಿಕ ದಾಖಲೆಗಳನ್ನು ತೂಗುಹಾಕಿಕೊಂಡು ನಿಯಂತ್ರಿಸಲು ಬರುವುದಿಲ್ಲವೆಂಬುದನ್ನು ನಾವು ಮನಗಾಣ ಬೇಕು. ಭಾರತೀಯರ ಅನುಭವಗಳನ್ನು ವಿರೂಪಗೊಳಿಸುವ ಅಸಂಬದ್ಧ ಲೇಖನಗಳು ಪ್ರಕಟವಾದಾಗಲೆಲ್ಲಾ ಬೌದ್ಧಿಕವರ್ಗ ಅದನ್ನು ಶಿಸ್ತುಬದ್ಧ ಸಂಶೋಧನೆಯ ಮೂಲಕ ವಿಶ್ಲೇಷಿಸಿ ಪ್ರಶ್ನಿಸಬೇಕು. ಇಂಥ ಸಂಶೋಧನೆ ಇಂದಿನ ಶಿಕ್ಷಣದ ಮೂಲಕ ಎಲ್ಲರಿಗೂ ದೊರೆಯುವಂತಾಗಬೇಕು. ಇಂಥ ಶಿಕ್ಷಣದ ಕೊರತೆಯು ಇಂದು ಹೆಚ್ಚುತ್ತಿರುವ ವೈಯುಕ್ತಿಕ ನಿಂದನೆಗೆ ಎರಡನೇ ಕಾರಣ. ಒಟ್ಟಿನಲ್ಲಿ ಸಾಂಸ್ಕೃತಿಕ ವಿರೂಪಗಳನ್ನು ಸೃಷ್ಟಿಸುವ ಪಾಶ್ಚಾತ್ಯ ಸೆಕ್ಯುಲರ್ ಚೌಕಟ್ಟಿನ ಪ್ರಭಾವದಿಂದ ಮುಕ್ತವಾಗಿ, ಭಾರತೀಯ ಸಂಸ್ಕೃತಿಯ ಕುರಿತು, ನಮ್ಮ ಅನುಭವಗಳ ಕುರಿತು ನಾವು ಇಂದು ಗಂಭೀರ ಸಂಶೋಧನೆಯಲ್ಲಿ ತೊಡಗಬೇಕು.
ನಾವಿಂದು ಒಂದು ಅಪಾಯಕಾರಿ ಸ್ಥಿತಿಯ, ಅಹಿತಕರ ಬೆಳವಣಿಗೆಯ ಆರಂಭದಲ್ಲಿ ನಿಂತಿದ್ದೇವೆ ಎಂಬುದನ್ನು ನಾವು ಮತ್ತೆ ಮತ್ತೆ ನೆನಪಿಸಿಕೊಳ್ಳಬೇಕು. ಇದನ್ನು ಅರಿತು, ಇದಕ್ಕೆ ತಕ್ಕನಾದ ಪರಿಹಾರ ಕಂಡುಕೊಳ್ಳಲು ಇಂದಿನ ಬೌದ್ಧಿಕವರ್ಗ ಸಿದ್ಧವಾಗಿದೆಯೇ? ಇಲ್ಲವಾದರೆ ಸಮಾಜದಲ್ಲಿ ಹೆಚ್ಚುತ್ತಿರುವ, ಇನ್ನೂ ಹೆಚ್ಚಲಿರುವ ಅಸಮಾಧಾನ, ಸಮಸ್ಯೆಗಳಿಗೆ ಇಂದಿನ ಚಿಂತಕರು, ಸಮಾಜ ವಿಜ್ಞಾನಿಗಳೇ ನೇರ ಹೊಣೆಗಾರರಾಗುತ್ತಾರೆ.
Bartholomaeus Ziegenbalg (1719) ಬರೆದ Thirty Four Conferences between the Danish Missionaries and the Malabarian Bramans (or Heathen Priests) in the East Indies, Concerning the Truth of the Christian Religion : Together with Some Letters Written by the Heathens to the Said Missionaries (ಅನು. J. Thomas Philipps, London: H. Clements) ಪುಸ್ತಕ ಇಲ್ಲಿ ಲಭ್ಯವಿದೆ: http://www.archive.org/details/thirtyfourconfer00zieg
ಸಣ್ಣ ಪುಟ್ಟ ನಿಂದನೆಗಳನ್ನು ದೇವರ ಕುರಿತಾಗಿ ಭಾರತೀಯ ಸಮಾಜ ಮೊದಲಿಂದಲೂ ಸಹಿಸುತ್ತಲೇ ಬಂದಿದೆ. ಆದರೆ ಇಂದು ಈ ನಿಂದನೆ ಅತಿಯಾದಾಗ ಮಾತ್ರ ನಮ್ಮ ಯುವ ಜನತೆ ಪ್ರತಿಕ್ರೀಯೆ ತೋರಿಸುತ್ತಿದೆ. ಇದಕ್ಕೆ ಹೊಣೆ ಪ್ರಗತಿಪರರೆಂಬ ಸೋಗಿನಲ್ಲಿರುವ ಬುದ್ಧಿಜೀವಿ ವರ್ಗವೇ ಇದಕ್ಕೆ ಮುಖ್ಯ ಕಾರಣವಾಗಿದ್ದಾರೆ. ಇವರು ಒಂದು ಧರ್ಮದಲ್ಲಿನ ಹುಳುಕುಗಳನ್ನು ಎತ್ತಿ ಎತ್ತಿ ಆಡಿ ಆಡಿ ತೋರಿಸುತ್ತಾ ಇನ್ನು ಕೆಲವು ಧರ್ಮೀಯರಲ್ಲಿನ ಹುಳುಕುಗಳನ್ನು ಬೇಕೆಂತಲೇ ಕಂಡೂ ಕಾಣದಂತೆ ವರ್ತಿಸುವದು ಕೂಡ ನಮ್ಮ ಯುವಕರಿಗೆ ಕೆರಳಲು ಆಸ್ಪದ ನೀಡುತ್ತಿದೆ. ಎಷ್ಟೂಂತ ಮನುಷ್ಯ ಸಹಿಸಿಕೊಳ್ಳುತ್ತಾನೆ? ಒಂದಿಲ್ಲಾ ಒಂದು ದಿನ ನಮ್ಮ ಭಾವಗಳೂ ಸ್ಫೋಟ ವಾಗಬೇಕಲ್ಲವೆ? ಅವು ಈ ರೀತಿ ಸ್ಪೋಟ ಆಗುತ್ತಿವೆ. ಇದಕ್ಕಾರು ಹೊಣೆ ?? ಆ ಪ್ರಗತಿ ಪರ ಸೋಗಿನವರೇ ಉತ್ತರಿಸಬೇಕಾಗಿದೆ. ಹಾಗೆಂದು ನಾನು ವೈಯುಕ್ತಿಕ ನಿಂದನೆಯನ್ನು ಸಮರ್ಥಿಸುತ್ತಿಲ್ಲ. ಇಂದಿನ ಯುವಕರೂ ಕೂಡ ತೀವ್ರ ಕೆರಳದೇ ವಸ್ತುನಿಷ್ಟವಾಗಿ ಸಂಶೋಧನಾತ್ಮಕವಾಗಿ ವಿಷಯಕ್ಕೆ ಸಂಬಂಧಿಸಿದಂತೆ ಮಾತನ್ನಾಡಬೇಕೆ ವಿನಃ ವಿವಾದಗಳನ್ನು ಎಳೆದುಕೊಳ್ಳಲು ಹೊಲಸು ಪದಗಳ ಮೊರೆ ಹೋಗಬಾರದು. ಈ ಹಿಂದೆ ನಾನು ಫೇಸ್ ಬುಕ್ಕಿನಲ್ಲೂ ಈ ವಿಷಯ ಪ್ರಸ್ತಾಪ ಮಾಡಿದ್ದೆ. ವಿಷಯವನ್ನು ಸರಿಯಾಗಿ ತಿಳಿದುಕೊಳ್ಳದೇ ಒಬ್ಬ ನನಗೂ ಹೊಲಸು ಮಾತುಗಳಿಂದ ನಿಂದಿಸಿದ. ಇಂಥ ಬುದ್ಧಿ ಯುವಕರಲ್ಲಿ ಬೆಳೆಯದೇ ವಿಷಯನಿಷ್ಟವಾಗಿ ಚರ್ಚೆ ಮಾಡಿದರೆ ಎಲ್ಲರಿಗೂ ಲಾಭ. ಇರಲಿ ಇನ್ನೊಮ್ಮೆ ನಾನು ಪ್ರಸ್ತಾಪಿಸುತ್ತೇನೆ ಭಾರತೀಯರಷ್ಟು ಮುಕ್ತ ಮನಸ್ಸಿನವರು ಬೇರೆ ಧರ್ಮದಲ್ಲಿ ಇಲ್ಲ. ಉದಾಹರಣೆಗೆ ಸಂಸ್ಕೃತ ಸುಭಾಷಿತಗಳಲ್ಲೂ ದೇವರನ್ನು ಹಾಸ್ಯ ಮಾಡಿದ್ದಾರೆ. ”ನಿಸ್ಸಾರವಾದ ಈ ಜಗತ್ತಿನಲ್ಲಿ ಸಾರಯುತವಾದದ್ದೇನಾದರೂ ಇದ್ದರೆ ಅದು ಹೆಣ್ಣು ಕೊಟ್ಟ ಮಾವನ ಮನೆ ಮಾತ್ರ. ಅದಕ್ಕೇ ನಮ್ಮ ಶಿವ ಮತ್ತು ವಿಷ್ಣು ಮಾವನ ಮನೆಯಲ್ಲಿ ಝಾಂಡ ಊರಿದ್ದಾರೆ” ಹೀಗೆ . ಇನ್ನೂ ಅನೇಕ ಉದಾಹರಣೆಗಳಿವೆ. ನಮ್ಮ ಪುರಂದರದಾಸರು ನಿಂದಾಸ್ತುತಿ ಸಹ ಬರೆದಿದ್ದಾರೆ. ” ನಿನ್ನ ದಾಸ ನಿಜ ದಾಸ ಹನುಮಗ ದುಡಿಸಿಕೊಂಡಿ ಕೆಲಸಾಗು ತನಕ ಮುಂದ ಹಚ್ಚಿದಿ ಗ್ರಾಮದ ಕಾವುಲಕ, ಎಷ್ಟು ಹೇಳಲಿ ನಿನ್ನ ಖೊಟ್ಟಿ ಗುಣವ ಒಟ್ಟಿಗಿ ನೀ ದಯಾ ಇಲ್ಲದಂವಾ” ಹೀಗೆ ಮುಂದುವರಿಯುತ್ತದೆ ಈ ಪದ್ಯ. ”ಯಾತಕೊಲಿದೆಯಮ್ಮ ಲಕುಮಿ”, ”ಆರು ಬದುಕಿದರಯ್ಯ ಹರಿ ನಿನ್ನ ನಂಬಿ” ಇತ್ಯಾದಿಗಳು . ಈ ಕವನಗಳನ್ನು ಬರೆದಾಗ ಪುರಂದರ ದಾಸರ ಮೇಲೆ ಯಾರೂ ವೈಯುಕ್ತಿಕ ನಿಂದನೆ ದಾಳಿ ಮಾಡಿದ್ದು ಕಂಡು ಬಂದಿಲ್ಲ. ಹಾಗೇನೇ ಅವರು ಧರ್ಮದ ಹೆಸರಿನಲ್ಲಿ ಆಚರಣೆಗಳಲ್ಲಿರುವ ಕಂದಾಚಾರಗಳನ್ನೂ ಮಡಿಯ ಆಚರಣೆಯನ್ನೂ ಟೀಕಿಸಿದ್ದಾರೆ. ಒಲ್ಲೆನೆ ವೈದಿಕ ಗಂಡನಾ ಎಂಬುದರಲ್ಲಿ ನವಿರಾದ ಹಾಸ್ಯದಲ್ಲಿ ಟೀಕೆ ಇದೆ. ಪುರಂದರರಷ್ಟೇ ಅಲ್ಲದೇ ಕನಕರೂ ಕೆಲವು ಆಚರಣೆಗಳನ್ನು ಟೀಕಿಸಿದ್ದಾರೆ. ಆದರೂ ಇವರಿಗೆ ಯಾವ ಹಲ್ಲೆಗಳಾಗಿಲ್ಲ. ಇನ್ನು ಆಧುನಿಕ ಕಾಲದಲ್ಲಿ ಕುವೆಂಪು ಬೀಚಿ, ಕೈಲಾಸಂ ಮುಂತಾದವರೂ ಕೂಡ ದೇವರನ್ನೂ ಆಚರಣೆಗಳನ್ನೂ ಹಾಸ್ಯ ಮಾಡಿದ್ದಾರೆ. ಆದರೆ ಆವಾಗ ಇದ್ದ ಸಹಿಷ್ಣುತೆ ಈಗೆಲ್ಲಿ ಹೋಯಿತೆಂದರೆ ಆಗ ಟೀಕೆ ಮಿತಿಯಲ್ಲಿತ್ತು. ಈಗ ಅತಿಯಾಗಿದೆ. ಮತ್ತು ವೇಗವಾಗಿ ಬಹುಜನಕ್ಕೆ ಅವು ತಿಳಿಯುವಂತಾಗಿದೆ. ಇಂದಿನ ಯುವಕರ ಪ್ರಶ್ನೆ ಎಂದರೆ (ನನ್ನನ್ನೂ ಸೇರಿಸಿ) ಎಲ್ಲಾ ಧರ್ಮದಲ್ಲೂ ಕೂಡ ಕಂದಾಚಾರಗಳು ನಂಬಿಕೆಗಳು ಇವೆ. ಆದರೆ ಭಾರತದ ಹಾಗೂ ಯುರೋಪಿನ ಬುದ್ಧಿ ಜೀವಿಗಳೆಂದು ಕರೆದುಕೊಳ್ಳುವವರಿಗೆ ಕೇವಲ ಭಾರತೀಯ ಆಚರಣೆಗಳು ಮತ್ತು ವ್ಯಕ್ತಿಗಳು ಮಾತ್ರ ಯಾಕೆ ಕಾಣುತ್ತಾರೆ?? ಭಾರತೀಯರು ಸಹನೆಯಿಂದ ಇರುವದನ್ನೇ ಎಲ್ಲರೂ ತಮ್ಮ ಲಾಭವಾಗಿ ಮಾರ್ಪಡಿಸಿಕೊಳ್ಳುತ್ತಿದ್ದಾರೆಯೇ?? ನಾವು ಸುಮ್ಮನಿದ್ದಷ್ಟೂ ಇವರ ಆಟೋಪಾ ಹೆಚ್ಚುತ್ತಲೆ ಹೋಗುತ್ತಿದೆಯೇ?? ಇದು ನಮ್ಮೆಲ್ಲರ ಪ್ರಶ್ನೆಯಾಗಿದೆ. ಈ ಪ್ರಶ್ನೆಯೇ ನಮ್ಮ ಯುವಕರನ್ನು (ಬಿಸಿರಕ್ತದ) ಕೆರಳಿಸುತ್ತಿದೆ. ಇದೇ ವೈಯುಕ್ತಿಕ ನಿಂದನೆಯಾಗಿದೆ. ನೆನಪಿರಲಿ ಸ್ಪ್ರಿಂಗನ್ನು ಅದುಮಿದಷ್ಟೂ ಪುಟಿಯುತ್ತದೆ ಯಾರೇನು ಮಾಡಲು ಸಾಧ್ಯ. ನಾವು ಮಾಡಿದ್ದನ್ನು ನಾವು ಅನುಭವಿಸುತ್ತಿದ್ದೇವೆ.
ಭಾರತೀಯತೆಯ ಕುರಿತ ಥಿಯಾಲಜಿ ಪಂಡಿತರ ತಿಳಿವಳಿಕೆ ತಳಹದಿಯಿಲ್ಲದ್ದು ಹಾಗು ಪೂರ್ವಗ್ರಹ ಪೀಡಿತವಾದುದು ಎಂಬ ಸಿದ್ಧಾಂತವೇನೋ ಸರಿಯೇ. ಅದನ್ನು ಇಂದಿನ ಥಿಯಾಲಜಿ ಪಂಡಿತರೂ ಒಪ್ಪುವರು. ಆದರೆ ದಿನೇಶ್ ಅಮೀನ್ ಮಟ್ಟು ಅವರ ಲೇಖನವನ್ನು ಅದೇ ಸಿದ್ಧಾಂತದ ಮುಂದುವರಿಕೆ ಎಂದು ವ್ಯಾಖ್ಯಾನಿಸುವುದೂ ಮತ್ತೊಂದು ಪೂರ್ವಗ್ರಹದ ತಿಳಿವಳಿಕೆಯೇ ಆಗಿದೆ ಎನಿಸುತ್ತದೆ. ಹಿಂದಿನ ಗುರುಹಿರಿಯರ ನಿಲುವುಗಳ ಖಂಡನೆ, ಜನಸಾಮಾನ್ಯರ ನಂಬಿಕೆಗಳ ಅವಹೇಳನ ಇತ್ಯಾದಿಗಳಿಗೆ ನಿದರ್ಶನಗಳು ಭಾರತೀಯ ಪರಂಪರೆಯಲ್ಲೂ ಸಮೃದ್ಧವಾಗಿಯೇ ಸಿಗುತ್ತವೆ. ಬುದ್ಧ, ಮಹಾವೀರ, ಆದಿಶಂಕರ ಮೊದಲಾದವರು ತಮ್ಮ ಕಾಲದಲ್ಲಿ ಪ್ರಚಲಿತವಿದ್ದ ಸಮಸ್ತ ನಂಬಿಕೆ, ಸಿದ್ಧಾಂತಗಳನ್ನು ಟೀಕಿಸಿದ್ದು, ಬಸವಾದಿ ಶರಣರು ಹಾಗು ಅವರ ಕಾಲದ ಸಂಪ್ರದಾಯಗಳ ನಡುವೆ ನಡೆದ ತಿಕ್ಕಾಟಗಳು, ಮಧ್ವಮತ-ಶಾಂಕರಮತಗಳ ನಡುವಣ ವ್ಯಕ್ತಿಗತ ನಿಂದನೆಯ ಮಟ್ಟದ ವಾದ ಪ್ರತಿವಾದ, ಶ್ರೀರಾಮಾನುಜರಿಗೆ ತಮಿಳು ನಾಡಿನ ಶೈವ ಪ್ರಭುತ್ವ ನೀಡಿದ ಕಾಟ, ಮಧ್ಯಯುಗದ ಭಕ್ತಿಚಳವಳಿಯ ಬಗ್ಗೆ ಬಹುತೇಕ ವೈದಿಕ ಸಂಪ್ರದಾಯಗಳು ಬೆಳೆಸಿಕೊಂಡಿದ್ದ ತಿರಸ್ಕಾರ ಮತ್ತು ಅಸಹನೆ ಹೀಗೆ ಆರೋಪ-ಪ್ರತ್ಯಾರೋಪ, ಟೀಕೆ-ಪ್ರತಿಟೀಕೆಗಳ ಒಂದು ಸುದೀರ್ಘ ಪರಂಪರೆ ನಮ್ಮಲ್ಲೇ ಶತಶತಮಾನಗಳಿಂದಲೂ ನಡೆದು ಬಂದಿದೆ. ಇಂಥದೇ ಪ್ರೇರಣೆ ದಿನೇಶ್ ಅಮೀನ್ ಮಟ್ಟು, ಯೋಗೀಶ್ ಮಾಸ್ಟರ್ ಮೊದಲಾದ ಪ್ರಗತಿಪರರ ಚಿಂತನೆಗಳ ಹಿನ್ನೆಲೆಯಲ್ಲೂ ಕೆಲಸ ಮಾಡುತ್ತಿರಬಹುದಲ್ಲವೇ? ದಿನೇಶ್, ಯೋಗೀಶ್ ಮುಂತಾದವರ ಬರವಣಿಗೆ ಸುತ್ಯರ್ಹವೂ ಅಲ್ಲ ಹಾಗೆಯೇ ಅವರ ವಿರುದ್ಧ ಕೆಲವು ಯುವಕರು ನಡೆಸಿರುವ ವಾಗ್ದಾಳಿಗಳು ಸಮರ್ಥನೀಯವೂ ಅಲ್ಲ. ನೀವು ಉಲ್ಲೇಖಿಸುವ ಆಧುನಿಕಪೂರ್ವ ಯುಗದ ಬಹುತೇಕ ಕೃತಿಗಳನ್ನು ಇಂದಿನ ಥಿಯಾಲಜಿ ಪಂಡಿತರುಗಳೇ ಅಲಕ್ಷಿಸಿ ಕೈಬಿಟ್ಟಿದ್ದಾರೆ, ಈ ಇನ್ನೂರು ವರ್ಷಗಳ ಅವಧಿಯಲ್ಲಿ ಥಿಯಾಲಜಿ ಚಿಂತನೆಗಳಲ್ಲಿ ಸಾಕಷ್ಟು ಸುಧಾರಣೆಗಳಾಗಿವೆ. ಅಲ್ಲದೆ ಆ ತರಹದ ಕೃತಿಗಳು ಇಂದಿನ ಪ್ರಗತಿಪರರೆನಿಸಿಕೊಂಡ ಚಿಂತಕರಿಗೂ ಅಪರಿಚಿತವಾಗಿರುವಾಗ, ಅವರ ಮೇಲೆ ಪ್ರಭಾವಶೂನ್ಯವಾಗಿರುವಾಗ ಅದನ್ನು ಯಾರಾದರೂ ಏಕೆ ಗಂಭೀರವಾಗಿ ಪರಿಗಣಿಸಬೇಕು? ವಸಾಹತುಶಾಹಿಗಳ ದಬ್ಬಾಳಿಕೆ ದೌರ್ಜನ್ಯಗಳೇ ನಮ್ಮ ನಡುವಿನ ಎಲ್ಲ ವೈಚಾರಿಕ ಅನಿಷ್ಟಗಳಿಗೂ ಮೂಲಕಾರಣ ಎಂಬ ಶಿಸ್ತುಬದ್ಧ ಆಲೋಚನೆ ಅಕಾಡೆಮಿಕ್ ಮಾನದಂಡಗಳ ಮಟ್ಟಿಗೆ ಯಶಸ್ವಿಯೆನಿಸಬಹುದಾದರೂ ನಮ್ಮ ನಡುವಿನ ಸಮಸ್ಯೆಗಳಿಗೆ ಆ ಬಗೆಯ ಆಲೋಚನೆಗಳು ಕೆಲವು ಸಲ ಅಪರಿಹಾರ್ಯವಾಗಿ ಪರಿಣಮಿಸುವುದೂ ಉಂಟು. ಎಲ್ಲಕ್ಕಿಂತ ಮಿಗಿಲಾಗಿ ದಿನೇಶ್, ಯೋಗೀಶ್ ತರಹದ ಚಿಂತಕರ ಹುಟ್ಟಿಗೆ ನಮ್ಮ ಪರಂಪರೆ ಎಷ್ಟರ ಮಟ್ಟಿನ ಕೊಡುಗೆ ನೀಡಿವೆ ಎಂಬ ಆತ್ಮವಿಮರ್ಶೆಯ ನೆಲೆಯಿಂದ ವಿವೇಚನೆಯನ್ನು ಪ್ರಾರಂಭಿಸುವುದು ಅರ್ಥಪೂರ್ಣವೆನಿಸುತ್ತದೆ. ನಮ್ಮ ಪರಂಪರೆಯಲ್ಲೇ ದೋಷಗಳು ಸೇರಿರುವಾಗ ಪರಕೀಯರ ಪ್ರಭಾವವನ್ನು ಹೊಣೆ ಮಾಡುವುದು ಎಷ್ಟರ ಮಟ್ಟಿಗೆ ಸರಿ?
(೧) ನಿಂದನಾ ಸ್ತುತಿಗು, ದೇವರುಗಳ ಕುರಿತ ಲಘು ಹಾಸ್ಯಕ್ಕೂ ಹಾಗು ಅಮೀನರು ಮಾಡುವ ಅವಹೇಳನಕ್ಕೂ ದೊಡ್ಡ ವ್ಯತ್ಯಾಸವಿದೆ. ಮಾತಿನಲ್ಲಿ ವ್ಯಕ್ತಪಡಿಸಿದಾಗ, ಆ ಮಾತುಗಳನ್ನು ತನ್ನ ಸನ್ನಿವೇಶದಿಂದ ತೆಗೆದು ಹೊರಗಿಟ್ಟಾಗ ಇವೆರಡರ ನಡುವೆ ವ್ಯತ್ಯಾಸ ಮಾಡುವುದು ಕಷ್ಟ ಇರಬಹುದು. ಆದರೆ ವ್ಯತ್ಯಾಸವೇ ಇಲ್ಲವೆಂಬುದು ತಪ್ಪು ತಿಳುವಳಿಕೆ. ಆದ್ದರಿಂದ ಪುರಂದರ ದಾಸರ ಒಂದು ಸಾಲನ್ನು ತೆಗೆದುಕೊಂಡು, ಅಮೀನರೂ ಹಾಗೆ ಹೇಳುತ್ತಿದ್ದಾರೆ ಎಂದು ಹೇಳಬೇಡಿ.
ನಿಂದನಾ ಸ್ತುತಿಯಲ್ಲಿ ಗುರುಹಿರಿಯರನ್ನು ಅವಮಾನ ಮಾಡುವುದನ್ನು ನಾನು ನೋಡಿಲ್ಲ. (ನಿಮಗೆ ಗೊತ್ತಿದ್ದರೆ ತಿಳಿಸಿ.) ಅಲ್ಲಿ ನಡೆಯುವುದು ಭಕ್ತನೋರ್ವ ತನ್ನ ನಿಚ್ಚಿನ ದೇವರನ್ನು ನಿಂದಿಸುವುದು. ಅಮೀನರು ಮಾಡುತ್ತಿರುವುದು ಅದಲ್ಲ. ಅವರು ನಿತ್ಯ ವಿವೇಕ ಭಜನೆ ಮಾಡುವ ಭಕ್ತರಲ್ಲ.
ಮಧ್ವಾಚಾರ್ಯರು ಶಂಕರರನ್ನು ತೆಗಳಿ ಬರೆದದ್ದು ಎಂದು ಹೇಳುವ ಸರ್ವದರ್ಶನ ಸಂಗ್ರಹ ಎನ್ನುವ ಕೃತಿಯಿದೆ. ಹಾಗೆಯೇ ವಚನಗಳಲ್ಲಿ ಅನ್ಯದೆವರನ್ನು ಪೂಜಿಸುವವರನ್ನು, ಜೈನರನ್ನು ಬಹಳ ಕಠಿಣವಾಗಿ ಟೀಕಿಸುತ್ತಾರೆ. ಇಂಥ ಹಲವು ಉದಾಹರಣೆಗಳಿವೆ. ಇದು ಒಂದು ಸಂಪ್ರದಾಯದವರು ಇನ್ನೊಂದು ಸಂಪ್ರದಾಯವನ್ನು ಟೀಕಿಸುವ ಪರಿ. ಅಂತೆಯೇ, ಆ ಸಂಪ್ರದಾಯದವರು ಪರಸ್ಪರ ಹೇಳಿಕೊಳ್ಳುವ ನೂರಾರು ಒಳ್ಳೆಯ ವಿಚಾರಗಳೂ ಇವೆ. ಅಮೀನರು ಮಾಡುತ್ತಿರುವುದು, ಪಾಶ್ಚಾತ್ಯ ಬರಹಗಾರರು ಮಾಡಿದ್ದು ಇದೂ ಅಲ್ಲ.
(೨) ಒಂದು ನಿಂದನಾ ಸ್ತುತಿ, ಒಂದು ಹಾಸ್ಯ ಬರಹ, ಜೋಕು ಇತ್ಯಾದಿಗಳು ಸ್ತುತಿಯಾಗಿ, ಹಾಸ್ಯವಾಗಿ ಬಂದು ಹಾಗೆಯೇ ಉಳಿದುಕೊಳ್ಳುತ್ತವೆ. ಅವು ಒಬ್ಬ ಗುರುವಿನ, ದೇವರ ‘ಮನುಷ್ಯ ಮುಖವನ್ನು’ ಪರಿಚಯಿಸುತ್ತಿರುವ, ವೈಜ್ಞಾನಿಕ/ಐತಿಹಾಸಿಕ/ಸತ್ಯವಾದ ಲೇಖನದ ಸೋಗಿನಲ್ಲಿ ಬರುವುದಿಲ್ಲ. ಪಾಶ್ಚಾತ್ಯ ಬರಹಗಾರರು ಮಾಡಿದ್ದು, ಅಮೀನರು ಮಾಡುತ್ತಿರುವುದು ಇದನ್ನು. ಇದು ಸಂಶೋಧನೆಯ, ವೈಚಾರಿಕತೆಯ ಹೆಸರಿನಲ್ಲಿ ಒಂದು ಸಮುದಾಯದ ಜನರ ಅನುಭವಗಳನ್ನು ವಿರೂಪಗೊಳಿಸುವ ಕೆಲಸ.
ಯೋಚಿಸಿ ನೋಡಿ… ಭಕ್ತಿಯಿಂದ ತನ್ನ ತಾಯಿಯನ್ನು ಪೂಜಿಸುವ ಪುರುಷರನ್ನು ನಾವು ನೋಡಿದ್ದೇವೆ. ಅಂಥ ಒಬ್ಬ ವ್ಯಕ್ತಿಯ ತಾಯಿಯ ದೈಹಿಕ ಕಾಯಿಲೆಗಳ, ಆಕೆಯ ದೇಹದ ಪರಿಸ್ಥಿತಿಯ ಉದ್ದ ಪಟ್ಟಿ ಮಾಡಿ, ಪ್ರಜಾವಾಣಿಯಲ್ಲಿ ಪ್ರಕಟಿಸಿ, ಇದರಿಂದ ಆ ಹೆಣ್ಣಿನ `ಮನುಷ್ಯ ಮುಖ’ ನಮಗೆ ಕಾಣಿಸಿದೆ ಮತ್ತು ಅವರ ಕುರಿತು ನಮ್ಮಲ್ಲಿ ಈಗ ಇನ್ನಷ್ಟು ಗೌರವ-ಅಭಿಮಾನ ಹುಟ್ಟಿದೆ ಎಂದರೆ ಹೀಗಿರುತ್ತದೆ? ನೂರಾರು ಕಾಯಿಲೆಗಳನ್ನು ಹೊಂದಿದ್ದ, ಆ ಧಡೂತಿ ಹೆಣ್ಣನ್ನು “ದೇವರುಗಳಾಗಿ ಮಾಡಿ ಪೂಜೆ-ಭಜನೆಗಳಲ್ಲಿ ಮುಳುಗಿ” ಬಿಟ್ಟಿದ್ದಾನೆ ಎಂದು ಭಕ್ತಿಯಿಂದ ತನ್ನ ತಾಯಿಯನ್ನು ಪೂಜಿಸುವ ಆ ಪುರುಷನನ್ನು ತೆಗಳಿದರೆ ಹೇಗಿರುತ್ತದೆ? ಸಂಶೋಧನೆಯ, ವೈಚಾರಿಕತೆಯ ಹೆಸರಿನಲ್ಲಿ ಪಾಶ್ಚಾತ್ಯ ಬರಹಗಾರರು ಮಾಡಿದ್ದು, ಅಮೀನರು ಮಾಡುತ್ತಿರುವುದು ಇದನ್ನು.
ನಮ್ಮ ಪ್ರಾಚೀನ ಗ್ರಂಥಗಳು, ಬುದ್ಧ ಹಾಗೂ ವಚನಕಾರರು ಬ್ರಾಹ್ಮಣರನ್ನು ಟೀಕಿಸುವಾಗ ನಿಜವಾದ ಬ್ರಾಹ್ಮಣ ಯಾರು ಎಂಬ ಜಿಜ್ಞಾಸೆ ಅದರ ಹಿಂದೆ ಇದೆ. ಅದೇ ರೀತಿಯಲ್ಲಿ ನಮ್ಮ ಆಚಾರ್ಯರುಗಳು, ದಾಸರು ಇವರೆಲ್ಲ ಸಾಂಪ್ರದಾಯಿಕ ಆಚರಣೆಗಳನ್ನು ಟೀಕಿಸುವಾಗ ನಿಜವಾದ ಅಧ್ಯಾತ್ಮ ಸಾಧನೆ ಯಾವುದು ಎಂಬ ನಿಷ್ಕರ್ಷೆ ಅದರ ಹಿಂದೆ ಇದೆ. ಪರಮಾತ್ಮನನ್ನು ಅರಿಯುವ ಮೂಲ ಉದ್ದೇಶ ಇದೆ. ಅಂದರೆ ಇವರೆಲ್ಲರೂ ಮೋಕ್ಷಕ್ಕೆ ತಾವು ಟೀಕಿಸುವ ಆಚರಣೆಗಳಿಗಿಂತಲೂ ಉತ್ಕೃಷ್ಟವಾದ ಮಾರ್ಗವನ್ನು ಬೋಧಿಸಲು ಇಂಥ ಟೀಕೆಗಳನ್ನು ತರುತ್ತಿದ್ದಾರೆ. ಅಂದರೆ ಇವರ ಟೀಕೆಗಳನ್ನು ಸೂಚನೆಯಾಗಿ ಇಟ್ಟುಕೊಂಡು ಒಬ್ಬನು ಮೋಕ್ಷಮಾರ್ಗವನ್ನು ಅರಸುವ ಸಾಧ್ಯತೆಯಿದೆ.
ಅಮಿನಮಟ್ಟು, ಯೋಗೇಶ್ ಮಾಸ್ಟರ್ ಇವರ ಮಾರ್ಗ ಯಾವುದು? ಪರಮಾತ್ಮ ಸಾಯುಜ್ಯವೆ? ಶೂನ್ಯ ಸಂಪಾದನೆಯೆ? ಇವರು ಪಕ್ಕಾ ಕ್ರೈಸ್ತ ಥಿಯಾಲಜಿಯ ಧೋರಣೆಗಳನ್ನು ತಮಗೆ ಗೊತ್ತಿಲ್ಲದಂತೇ ತಮ್ಮದನ್ನಾಗಿ ಮಾಡಿಕೊಂಡಿದ್ದಾರೆ. ನಮ್ಮ ಪುರಾಣ ಘಟನೆಗಳನ್ನು, ಪಾತ್ರಗಳ ನ್ನು ಪಾಶ್ಚಾತ್ಯ ಹಿಸ್ಟರಿ, ಸೈಕಾಲಜಿ , ಅಂತ್ರಪಾಲಜಿ ಗಳನ್ನಾಗಿ ಪರಿವರ್ತಿಸುವುದೇ ಅವುಗಳಿಗೆ ಮಾಡಬಹುದಾದ ದೊಡ್ಡ ಉಪಕಾರ ಎಂದು ಭಾವಿಸುವುದು, ಅವುಗಳನ್ನು ಪ್ರೊಟೆಸ್ಟಾಂಟ್ ಇತಿಹಾಸವನ್ನಾಗಿ ಬದಲಾಯಿಸಿ ಅದರಿಂದ ಬ್ರಾಹ್ಮಣ ಜಾತಿಗಳ ಹುನ್ನಾರಗಳನ್ನು ಕಲ್ಪಿಸುವುದು, ಆರ್ಯ ದ್ರಾವಿಡ ಎಂಬ ಕಲ್ಪಿತ ಜನಾಂಗಗಳ ಪಾಶ್ಚಾತ್ಯರ ಕಟ್ಟುಕಥೆಯೇ ಭಾರತದ ಚರಿತ್ರೆಯ ಸಾರ ಎಂದು ನಂಬಿರುವುದು, ಭಾರತೀಯ ಸಮಾಜ, ಸಂಸ್ಕೃತಿ ಹಾಗೂ ಗ್ರಂಥಗಳು ಮೂಲತಃ ಸುಳ್ಳು ಹಾಗೂ ಅನೈತಿಕ ಎಂದು ಭಾವಿಸುವುದು, ಪ್ರೊಟೆಸ್ಟಾಂಟ್ ಕಥೆಗೆ ಒಗ್ಗದ ಭಾರತೀಯ ವಿಚಾರಗಳನ್ನು ತಿರಸ್ಕರಿಸುವುದು, ಇವೆಲ್ಲ ಏನು ಸೂಚಿಸುತ್ತವೆ? ಇವರು ಕೂಡ ಒಂದು ಉತ್ಕೃಷ್ಟ ಮಾರ್ಗದ ಕುರಿತೇ ಮಾತನಾಡುತ್ತಿದ್ದಾರೆ. ಆದರೆ ಆ ಮಾರ್ಗವು ಸೆಕ್ಯುಲರೀಕರಿಸಿದ ಪ್ರೊಟೆಸ್ಟಾಂಟ್ ಕ್ರಿಶ್ಚಿಯಾನಿಟಿ ಅಷ್ಟೆ. ಇವರು ಭಾರತೀಯ ಸಂಸ್ಕೃತಿಯ ಕುರಿತು ನಡೆಸುವ ಟೀಕೆಗಳು ಭಾರತೀಯರು ಹೀದನ್ನರು, ಇವರ ರಿಲಿಜನ್ನು ಸುಳ್ಳು ಎಂಬ ಧೋರಣೆಯನ್ನು ಹೊಂದಿದ ಪಾಶ್ಚಾತ್ಯ ಮೂಲದಿಂದ ಬರುತ್ತವೆ. ಹಾಗಾಗಿ ಇಂಥ ಟೀಕೆಗಳನ್ನು ಇಟ್ಟುಕೊಂಡವನು ಹೆಚ್ಚೆಂದರೆ ಅಂತಿಮವಾಗಿ ಭಾರತೀಯ ಸಂಸ್ಕೃತಿಯ ಬಗೆಗೆ ಜಿಗುಪ್ಸೆ ಹುಟ್ಟಿ ಕ್ರಿಶ್ಚಯಾನಿಟಿಗೋ, ಇಸ್ಲಾಮಿಗೋ ಮತಾಂತರವಾಗಬಹುದು.
ಭಾರತೀಯ ಸಂಸ್ಕೃತಿಯ ದೃಷ್ಟಿಯಿಂದ ನೋಡಿದರೆ ಒಂದು ಬಗೆಯ ಟೀಕೆಗಳಿಂದ ನಮ್ಮ ಗುರಿಯ ಕುರಿತ ಅಜ್ಞಾನವು ಕಳೆಯುತ್ತ ಹೋಗುತ್ತದೆ. ಮತ್ತೊಂದು ಬಗೆಯ ಟೀಕೆಗಳಿಂದ ಅದು ವಾಸಿಯಾಗದಷ್ಟು ಜಾಸ್ತಿಯಾಗುತ್ತದೆ.
ಡಂಕಿನ್,
ನೀವೂ ಸಕ್ರಿಯವಾಗಿ ಭಾಗಿಯಗುತ್ತಿರುವ ಈ ಇಡೀ ದಿನೇಶ್-ವಿವೇಕಾನಂದ ಪ್ರಕರಣದ ನಿಮ್ಮ ನಿರೂಪಣೆಯು ‘ನಿಂದನೆ’ ಮತ್ತು ‘ಅವಹೇಳನೆ’ ಎರಡೂ ಬೇರೆ ಬೇರೆ ಪದಗಳು ಎಂಬ ಪೊಳ್ಳು ಗ್ರಹಿಕೆ/ವಾದದ ಮೇಲೆ ನಿಂತಿದೆ. ನಿಮ್ಮ ಪ್ರಕಾರವೇ ದಿನೇಶರು ‘ನಿಂದನೆ’ ಮಾಡಿಲ್ಲ ಅಂತಾದರೆ ‘ಅವಹೇಳನೆ’ ಮಾಡಿಲ್ಲ ಅಂತ ನೀವೇ ಒಪ್ಪಿಕೊಂಡಂತೆ. ಹಾಗಲ್ಲದೇ ‘ಅವಹೇಳನೆ’ ಮಾಡಿದ್ದಾರೆ ಅಂದರೆ ‘ನಿಂದನೆ’ ಮಾಡಿದ್ದಾರೆ ಅಂತಲೇ ಭಾವಿಸುವುದಾಗುತ್ತೆ.
ಎಷ್ಟು ಯೋಚಿಸಿ ಹ್ಯಾಗೆ ನೋಡಿದರೂ “ತಾಯಿಯನ್ನು ಪೂಜಿಸುವ ಪುರುಷರನ್ನು ನೋಡಿದ್ದೇವೆ…” ಅಂತ ಅಂದಿರುವ ಪ್ಯಾರ ಪೂರ ಅತ್ಯುತ್ಪ್ರೇಕ್ಷಿತ, ಬಾಲಿಷ, ಸಂಭಂಧವಿಲ್ಲದ ಮಾತುಗಳೇ ಧ್ವನಿಸಿವೆ ಅಂತ ಅನಿಸೋದು. (ಹಾಗೂ ಅದರಲ್ಲಿ ಸ್ವಲ್ಪ ಮಟ್ಟಿಗೆ ಪುರುಷ-ಅಹಮಿಕೆಯ ಧ್ವನಿ ಕೂಡ ಕಾಣುತ್ತೆ: ಇಲ್ಲಿ ‘ತಾಯಿ’ಯನ್ನು ‘ಪೂಜಿಸುವ’ವರ ಯಾದಿಯಲ್ಲಿ ‘ಪುರುಷರು’ ಮಾತ್ರ ಅದು ಹ್ಯಾಗೆ ಉಲ್ಲೇಖನಾರ್ಹವಾಗುಳಿದಿದ್ದು? ಮೂಲಭೂತವಾಗಿ ಅಲ್ಲಿ ‘ಪುರುಷರು’-‘ಮಹಿಳೆಯರು’ ಅನ್ನುವ ಬೇಧಭಾವ ಯಾಕೆ ಬಂತು? ‘ಮಕ್ಕಳು’ ಅನ್ನಬಹುದಿತ್ತಲ್ಲ?)
ತಾಯಿಯ ವಿಷಯದಲ್ಲೇ ಆಗಲೀ – ಇನ್ನು ಯಾವ ವಾಸ್ತವದ ವ್ಯಕ್ತಿಯ ವಿಷಯದಲ್ಲೇ ಆಗಲೀ, ಮೂಢರು ಇಲ್ಲವೇ ಒಳ ಉದ್ದೇಶಗಳುಳ್ಳ ಪೊಲಿಟಿಕಲ್ ಮೈಂಡೆಡ್ ವ್ಯಕ್ತಿಗಳು ಮಾತ್ರ ಇಲ್ಲದ ಸಲ್ಲದ ವಿಷಯ/ಗುಣಗಳನ್ನು ಆರೋಪಿಸಿ ತನ್ಮೂಲಕ ‘ಪೂಜೆ’ಯಲ್ಲಿ ತೊಡಗುತ್ತಾರೆ. ವಾಸ್ತವದಲ್ಲಿ ಬದುಕುವವರು ತಮ್ಮ ಸುತ್ತಲಿನ ವ್ಯಕ್ತಿಗಳನ್ನು ಆಯಾ ವ್ಯಕ್ತಿಗಳ ಗುಣ-ದೋಷಗಳೆಲ್ಲದರ ಸಹಿತವೇ ಸ್ವೀಕರಿಸಿರುತ್ತಾರೆ, ಪ್ರೀತಿಸುತ್ತಿರುತ್ತಾರೆ. ಸ್ವಂತ ತಾಯಿಯನ್ನು ಪ್ರೀತಿಸಲು ಆಕೆಯಲ್ಲಿ ಇಲ್ಲದ ಗುಣಗಳನ್ನ್ನು ಆರೋಪಿಸುವ ಅಗತ್ಯ ಇದುವರೆಗೂ ಯಾರಿಗೂ ಬಂದಿರಲಾರದು. ವಿಮರ್ಶಾರಹಿತ ಅಂಧ-ಸ್ವೀಕರಣವು ವಾಸ್ತವದಲ್ಲಿ ಭಾರತೀಯರಿಗೆ ಹೊರತಾದದ್ದು.
ಯಾವುದೇ ದೊಡ್ಡ ‘ಚಿಂತನೆ’ಯೇನೂ ಇರದೇ ಬರಿದಾಗಿ ಸತ್ಯವಾದ ಮಾಹಿತಿಗಳನ್ನು ಮಾತ್ರ ಹೊಂದಿರುವ ಒಂದು ಸಣ್ಣ ಲೇಖನವನ್ನ “ಇಡೀ ಭಾರತೀಯರ ಅನುಭವವನ್ನೇ ವಿರೂಪಗೊಳಿಸುವ ಇಂಥ ಚಿಂತನೆಗಳು” ಅಂತ ದೋಡ್ಡದಾಗಿ ಸಧ್ಯದಲ್ಲಿ ನೀವೊಬ್ಬರು ಮಾತ್ರವೇ ವ್ಯಾಖ್ಯಾನಿಸುತ್ತಿರುವುದು. ವಿವೇಕಾನಂದ ಎನ್ನುವುದು ಒಂದು ‘ಭಾರತೀಯ ಅನುಭವ’ವಾ ಅಥವಾ ‘ವಾಸ್ತವದಲ್ಲಿ ಬದುಕಿದ ಓರ್ವ ವ್ಯಕ್ತಿ’ಯಾ? ಅವರ ಸುತ್ತ ಹಾಗೆ ಮಿಥ್ಯಕಟ್ಟುವ ಅಗತ್ಯವಾದರೂ ಏನು?
‘ಸ್ವಾಮಿ ವಿವೇಕಾನಂದ’ ಎನ್ನುವವರೇನು ಕಾಲ್ಪನಿಕ/ಪೌರಾಣಿಕ ವ್ಯಕ್ತಿಯಲ್ಲ. ಹಾಗೊಬ್ಬರು ವ್ಯಕ್ತಿ ನಿಜಕ್ಕೂ ಈ ನೆಲದಲ್ಲಿ ಬದುಕಿದ್ದರು ಎಂಬುದನ್ನು ಯಾರೂ ಸಂದೇಹಿಸಿದ್ದಿಲ್ಲ. ಅವರನ್ನು ಅತಿಮಾನುಷ ಶಕ್ತಿಗಳಿದ್ದ ವ್ಯಕ್ತಿ ಅಂತ ಪರಿಭಾವಿಸಿ ಅವರ ಹಾದಿಯಲ್ಲಿ ಹೋಗಲು ಮನುಷ್ಯರಿಗ್ಯಾರಿಗೂ ಸಾಧ್ಯವಿಲ್ಲ ಅಂತ ನಿಶ್ಚಯಿಸಿ ಸುಖಾ ಸುಮ್ಮನೆ ದೈವತ್ವಕ್ಕೇರಿಸಿ ಕೂರಿಸೋದರಿಂದ ಅವರ ಆಶಯಗಳಿಗೇ ಧಕ್ಕೆಯಾಗುತ್ತೆ. ಇದೂ ವರೆಗೆ ಯಾರೂ ಅವರನ್ನು ಹಾಗೆ ಅತಿಮಾನುಷ/ದೇವರಅವತಾರ ಎಂಬಂತೆ ಏನೂ ಬಿಂಬಿಸಿದ್ದಿಲ್ಲ.
ಬಹುತೇಕ ಇತರ ಮನುಷ್ಯರಂತೆಯೇ ವಿವೇಕಾನಂದರಿಗೂ ವೈಯಕ್ತಿಕ ಮತ್ತು ಸಾಮಾಜಿಕ ಮಿತಿಗಳಿದ್ದವು. ಸ್ವಯಂ ವಿವೇಕಾನಂದರೇ ಅವುಗಳನ್ನೇನು ಮುಚ್ಚಿಟ್ಟು ತಮ್ಮನ್ನು ಇನ್ನೇನೋ ಎಂಬಂತೆ ಬಿಂಬಿಸಿಕೊಳ್ಳಲು ಯತ್ನಿಸಿದ ಉದಾಹರಣೆಗಳಿಲ್ಲ. ಆ ಎಲ್ಲ ಮಿತಿಗಳಿದ್ದಾಗಿಯೂ ಕೂಡಾ, ತಮ್ಮ ಇಚ್ಛಾಶಕ್ತಿಯೊಂದರಿಂದಲೇ ಅವರು ಅಸಾಮಾನ್ಯ ಸಾಧಕರಾದರು. ಆದ್ದರಿಂದ ನಾವೂ ಕೂಡಾ ಆ ಹಾದಿಯಲ್ಲಿ ನಡೆಯಲು ನಮ್ಮೆಲ್ಲ ಕೊರತೆ-ಮಿತಿಗಳ ನಡುವೆ ಕೂಡ ಪ್ರಯತ್ನಿಸುತ್ತಿರಬೇಕು ಎಂಬುದು ಮಾತ್ರ ದಿನೇಶರ ಲೇಖನದ ಸಾರ. ಆ ಲೇಖನವನ್ನ ಸಾವಕಾಶವಾಗಿ ಓದಿದವರಿಗೆಲ್ಲ ಅದು ಸುವೇದ್ಯ. ಅದನ್ನು ವಿವೇಕಾನಂದರ ನಿಂದನೆ ಅಂತ ಬಿಂಬಿಸೋದರಲ್ಲಿ ಏನೇನೂ ಅರ್ಥವಿಲ್ಲದ ರಾಜಕೀಯ ಮಾತ್ರ ಕಾಣಿಸುತ್ತೆ.
ಅದೇನೇ ಆದರೂ ಈ ದಿನೇಶರ ಲೇಖನವನ್ನ ಇನ್ನೇನೋ ಬಾದರಾಯಣ ಕಥೆ-ವಾದಗಳಿಗೆಲ್ಲಾ ಥಳುಕುಹಾಕಿ “ಭಾರತೀಯ ಸಂಸ್ಕೃತಿಯನ್ನು ವಿರೂಪಗೊಳಿಸುವ ಪಾಶ್ಚಾತ್ಯ ಚಿಂತನಾ ಮಾರ್ಗಗಳು” ಅಂತೆಲ್ಲಾ ದೊಡ್ಡ ದೊಡ್ಡ ಪದಪುಂಜಗಳಲ್ಲಿ ವ್ಯಾಖ್ಯಾನಿಸತೊಡಗುವ ಕಳಪೆ ಕೆಲಸವನ್ನ ರೀಸರ್ಚ್ ಮೆಥಡಾಲಜಿಯ ಮಾತುಗಳನ್ನ ಆಡುವವರಿಂದ ನಾನು ನಿರೀಕ್ಷಿಸಿರಲಿಲ್ಲ. ವ್ಯಂಗ್ಯವೆಂದರೆ ಒಂದು ಹಂತದಲ್ಲಿ ನಿಮ್ಮ ಮತ್ತು ನಿಮ್ಮ ತಂಡದವರ ವಾದಗಳು ಈ ತರಹದ ಪರಿಕಲ್ಪನೆಗಳನ್ನ ಮಾಡುವುದರ ವಿರುದ್ಧವೇ ಇದ್ದಿದ್ದಲ್ಲವೇ?
ಇಷ್ಟು ಹೇಳಿದ ಮಾತ್ರಕ್ಕೇ ನಾನೇನು ದಿನೇಶರ “ಫೇಸ್ಬುಕ್ ಗ್ರೂಪ್ ಒಂದರ ನಿರ್ವಾಹಕರನ್ನ್ನು ಜೈಲಿಗೆ ಅಟ್ಟುವ” ಯತ್ನವನ್ನೇನೂ ಬೆಂಬಲಿಸುವೆ ಅಂತ ತಿಳಿಯಬಾರದು. ಅವರು ಅನ್-ಲೈನ್ ಫೇಸ್ಬುಕ್ ಗ್ರೂಪ್ ಮಾಡರೇಟರನ ಕೆಲಸ-ಪರಿಸ್ಥಿತಿಯನ್ನು ಆಫ್-ಲೈನ್ ಪತ್ರಿಕಾಸಂಪಾದಕರ ಕೆಲಸ-ಪರಿಸ್ಥಿತಿಯೊಂದಿಗೆ ಸಮೀಕರಿಸಿರುವುದನ್ನ ಒಪ್ಪಲು ಸಾಧ್ಯವಿಲ್ಲ. ಅದನ್ನ ಯಾವ ಕಾನೂನು ಅನುಮೋದಿಸುತ್ತೋ ನನಗೆ ತಿಳಿಯದು. ಕಾನೂನಿನಲ್ಲಿ ಹಾಗೊಂದಂಶ ಇರುವುದಾದರೆ ಯುಟ್ಯೂಬ್ ಮುಖ್ಯಸ್ಥ-ನಿರ್ವಾಹಕ ಸರ್ವರೂ ಇಷ್ಟು ಹೊತ್ತಿಗಾಗಲೇ ಭಾರತದ ಜೈಲುಗಳಲ್ಲಿ ಕೊಳೆಯುತ್ತಿರಬೇಕಿತ್ತಲ್ಲವೇ..
(೧) ದಿನೇಶರು ‘ನಿಂದನೆ’ ಮಾಡಿಲ್ಲ ಎಂದು ನಾನು ಹೇಳಿಲ್ಲ. ಬೈಗುಳಗಳನ್ನು ಬಳಸಿಲ್ಲ ಎಂದೆ. ಬೈಗುಳಗಳನ್ನು ಬಳಸದೆಯೂ ‘ಅವಹೇಳನೆ’ ಮಾಡಬಹುದು ಎಂಬುದನ್ನು ನಾನು ತೋರಿಸಕೊಡುವ ಅವಶ್ಯಕತೆ ಇಲ್ಲ ಎಂದು ಕೊಂಡಿದ್ದೇನೆ. ದಿನೇಶರು ಮಾಡುತ್ತಿರುವುದು ಅದನ್ನು.
(೨) ನನ್ನ ಉದಾಹರಣೆ ನಿಮಗೆ ಅರ್ಥವಾಗಲಿಲ್ಲ ಎಂದರೆ ತೊಂದರೆಯಿಲ್ಲ. ಬೇರೆ ಉದಾಹರಣೆ ತೆಗೆದುಕೊಂಡು ಯೋಚಿಸಿ. ಅದು ಬಿಟ್ಟು ವಾದಕ್ಕೆ ಸಂಬಂಧವಿರದ ಮಾತನ್ನು ತರುತ್ತಿದ್ದೀರಿ: “‘ಪುರುಷರು’ ಮಾತ್ರ ಅದು ಹ್ಯಾಗೆ ಉಲ್ಲೇಖನಾರ್ಹವಾಗುಳಿದಿದ್ದು? ಮೂಲಭೂತವಾಗಿ ಅಲ್ಲಿ ‘ಪುರುಷರು’-‘ಮಹಿಳೆಯರು’ ಅನ್ನುವ ಬೇಧಭಾವ ಯಾಕೆ ಬಂತು? ‘ಮಕ್ಕಳು’ ಅನ್ನಬಹುದಿತ್ತಲ್ಲ?”
(೩) ವಾಸ್ತವದಲ್ಲಿ ಬದುಕುವುದು ಹೇಗೆ, ಪ್ರೀತಿಸುವುದು ಹೇಗೆ, ಇತ್ಯಾದಿ ವಿಚಾರಗಳ ಕುರಿತು ಭಾಷಣ ಕೊಟ್ಟಿದ್ದೀರ. ಆದರೆ ಇಲ್ಲಿ ಇರುವ ಪ್ರಶ್ನೆ ಬೇರೆ. ಒಬ್ಬ ವ್ಯಕ್ತಿ ಬದುಕುತ್ತಿರುವ ರೀತಿಯನ್ನು ಪ್ರಶ್ನಿಸಲು ನಮಗೆ ಯಾವ ಹಕ್ಕಿದೆ? ಒಬ್ಬ ವ್ಯಕ್ತಿ, ಮತ್ತೊಬ್ಬ ವ್ಯಕ್ತಿಯನ್ನು ದೇವ-ಸಮಾನ ಎಂದು ಪೂಜಿಸಿದರೆ, ಪ್ರಶ್ನಿಸಲು ನಾವು ಯಾರು? ಅದು ಆತನ ಜೀವನ, ಆತನ ಅನುಭವ. ಇದರಿಂದ ಸಮಾಜಕ್ಕೆ ತೊಂದರೆಯಾಗುತ್ತಿದ್ದರೆ ಅದನ್ನು ಪ್ರಶ್ನಿಸಬಹುದು. ಇಲ್ಲವಾದರೆ ಅಲ್ಲಿ ಮೂಗು ತೋರಿಸಲು ನಮಗೆ ಅಧಿಕಾರ ಕೊಡುವವರು ಯಾರು?
ಓರ್ವ ವ್ಯಕ್ತಿಯ “ಸುತ್ತ ಹಾಗೆ ಮಿಥ್ಯಕಟ್ಟುವ ಅಗತ್ಯವಾದರೂ ಏನು?” ಎಂದು ಕೇಳಲು ನಿಮಗೆ ಯಾವ ಹಕ್ಕು ಇದೆ?
ಇಂದು ವೈಚಾರಿಕತೆಯ ಹೆಸರಿನಲ್ಲಿ ನಾವು ಮಾಡುತ್ತಿರುವುದು ಇದನ್ನೇ: ಇನ್ನೊಬ್ಬರ ಬದುಕುವ ರೀತಿಯಲ್ಲಿ, ಅವರು ಕಟ್ಟುಕೊಳ್ಳುವ ಅನುಭವದ ಜಗತ್ತಿನಲ್ಲಿ ಮೂಗು ತೋರಿಸುವುದು. ವೈಚಾರಿಕತೆ ಅನ್ನುವುದು ಮೂಗುತೂರಿಸಲು ನಮಗೆ ನಾವೇ ಕೊಟ್ಟುಕೊಳ್ಳುವ licenceಆಗಿ ಬಿಟ್ಟಿದೆ.
(೪) ಭಾರತದಲ್ಲಿ ಹೀಗೆ ವಿವೇಕಾನಂದರನ್ನು ಗುರು, ದೈವಸಮಾನ ಎಂದು ನೋಡಿ ಬದುಕವ ಮಂದಿ ಬಹಳವಿದ್ದಾರೆ. ಅವರು ಹೀಗೆ ಬದುಕುವುದರಿಂದ ಇತರರಿಗೆ ಹೇಗೆ ಮತ್ತು ಯಾವಾಗ ಅನ್ಯಾಯವಾಗಿದೆ ಎಂದು ತೋರಿಸಿಕೊಡದ ಹೊರತು, ಅವರ ಬದುಕುವ ರೀತಿಯನ್ನು ವಿಮರ್ಶಿಸಲು ಬಾರದು.
ದಿನೇಶರ “ಸತ್ಯವಾದ ಮಾಹಿತಿಗಳನ್ನು ಮಾತ್ರ ಹೊಂದಿರುವ ಒಂದು ಸಣ್ಣ ಲೇಖನ” ಇಂಥ ಇಡೀ ಭಾರತೀಯರ ಜೀವನವನ್ನೇ ವಿನಾಕಾರಣ ವಿಮರ್ಶಿಸಿ, ಅವರ ಅನುಭವವನ್ನೇ ವಿರೂಪಗೊಳಿಸುತ್ತದೆ.
ಇದನ್ನು ನಾನು ಮಾತ್ರವೇ ವ್ಯಾಖ್ಯಾನಿಸುತ್ತಿರಬಹುದು. ಅಂದ ಮಾತ್ರಕ್ಕೆ ಅದು ಸುಳ್ಳಾಗುವುದಿಲ್ಲ. ವಾದ ಮಂಡಿಸಲು ಜನ ಬೆಂಬಲ ಬೇಡ.
(೫) ಒಬ್ಬ ವ್ಯಕ್ತಿಯನ್ನು ದೈವತ್ವಕ್ಕೇರಿಸುವದರಿಂದ ತೊಂದರೆ ಇದೆ ಎಂದು ನಿಮಗೆ ಅನಿಸಿದರೆ, ದೈವತ್ವಕ್ಕೇರಿಸುವ ಆ ವಿದ್ಯಮಾನದ ಕುರಿತು ಬರೆಯಿರಿ. ಅಲ್ಲಿ ಅಂಥ ಬೇರೆ ಬೇರೆ ಉದಾಹರಣೆಗಳನ್ನು ಕೊಡಿ. ಬಸವಣ್ಣ, ಅಂಬೇಡ್ಕರ್ ಮುಂತಾದವರೆಲ್ಲರ ಉದಾಹರಣೆ ಕೊಡಿ. ಆಗ ನಿಮಗೆ ನಿಜವಾಗಿಯೂ ಒಂದು ಅಹಿತ ವಿದ್ಯಮಾನದ ಕುರಿತು ಕಾಳಜಿ ಇದೆ ಎಂದು ತಿಳಿಯುತ್ತದೆ. ದಿನೇಶ ಇದನ್ನು ಮಾಡಿಲ್ಲ. ಒಂದು ವರ್ಗವನ್ನು ಮಾತ್ರ ಅವರು ಟಾರ್ಗೆಟ್ ಮಾಡುವುದರ ಹಿಂದಿನ ಉದ್ದೇಶವೇನು?
(೬) ಒಂದು ಪರಿಕಲ್ಪನೆಯ ಹಿಂದುಮುಂದು ತಿಳಿಯದೆ ಅದನ್ನು ಬಳಸುವುದರ ವಿರುದ್ಧ ನಾವು ದನಿ ಎತ್ತಿದ್ದು ನಿಜ. ಪರಿಕಲ್ಪನೆಗಳನ್ನು ತಿಳಿದು, ಅರ್ಥಿಸಿಕೊಂಡು ಬಳಸುವುದು ಸಂಶೋಧನೆ ಮಾಡುವ ಒಂದು ವಿಧಾನ. ಅನುಭವ ಅನ್ನುವ ಪದ, ಅದನ್ನು ವಿರೂಪಗೊಳಿಸುವ ವಿಚಾರ ನಿಮಗೆ ಅರ್ಥವಾಗಲಿಲ್ಲ ಎಂದ ಮಾತ್ರಕ್ಕೆ ಅದು ಬಳಸಬಾರದ ಪರಿಕಲ್ಪನೆ ಆಗಲಿಲ್ಲ.
೧) ನೀವು ದಿನೇಶರು ಮಾಡುತ್ತಿರುವುದು ವಿವೇಕಾನಂದರ ಅವಹೇಳನ ಅನ್ನುತ್ತೀರಿ. ನಿಮ್ಮ ಸಹಲೇಖಕರೋ, ” ಮಟ್ಟೂರರ ಲೇಖನವು ವಿವೇಕಾನಂದರ ನಿಂದನೆಯಾಗಿ ವಿವೇಕಾನಂದರನ್ನು ಆರಾಧಿಸುವವರಿಗೆ ಕಂಡಿರುವುದು ಫ್ಯಾಕ್ಟ್. ಆ ಫ್ಯಾಕ್ಟ್ ಅನ್ನೇ ಲೇಖನದಲ್ಲಿ ವಿವರಿಸಲು ಯತ್ನಿಸಲಾಗಿದೆ.” ಅನ್ನುತ್ತಾರೆ. ಒಟ್ಟಾರೆಯಾಗಿ ಈ ಲೇಖನದ ನಿಲುವು ಏನು ಅನ್ನುವುದು ಇದರ ಲೇಖಕರಿಗೇ ಸ್ಪಷ್ಟವಿಲ್ಲ, ಅಷ್ಟೇ.
ನನ್ನ (ಹಾಗೂ arguably ಬರಹ-ಅಂತರ್ಜಾಲ-ನಿಘಂಟಿನ ಪ್ರಕಾರ ಕೂಡ) ನಿಂದನೆಯೂ ಒಂದೇ, ಅವಹೇಳನೆಯೂ ಒಂದೇ.
ವಿವೇಕಾನಂದರು ಮಿಷನ್-ಸಾಹಿತ್ಯವನ್ನೋದಿ ರೂಪಿತಗೊಂಡ ನಿಮ್ಮ ಕಲ್ಪನೆಗಳ ಪ್ರಕಾರದ ದಷ್ಟಪುಷ್ಟವಿದ್ದ ಆರೋಗ್ಯವಂತ ‘ideal’ ವ್ಯಕ್ತಿಯಲ್ಲ, ಅವರೂ ರೋಗ ಪೀಡಿತರಿದ್ದ ಓರ್ವ ಸಾಮಾನ್ಯ ‘real’ ವ್ಯಕ್ತಿ ಅಂತ ನಿಜವನ್ನೇ ತಿಳಿಸಿದರೆ ವಿವೇಕಾನಂದರ ಅವಹೇಳನವೋ? ಅದರಲ್ಲಿಯೂ “ಹಾಗಿದ್ದಾಗಿಯೂ ಅವರ ವಿಚಾರಗಳು-ಕಾರ್ಯಗಳು ಆರೋಗ್ಯಕರವಿದ್ದವು” ಎಂಬರ್ಥದ ಸಾಲೂ ಅಲ್ಲೇ ಇರುವಾಗ? ತನ್ಮೂಲಕ ವಿವೇಕಾನಂದರ ಕಾರ್ಯ ಅನುಸರಣ ಯೋಗ್ಯವೆನ್ನುವ ತೀರ್ಮಾನಕ್ಕೆ ಅದೇ ಲೇಖನ ತಲುಪಿರುವಾಗ?
ಹಾಗಾದರೆ ನಿಮ್ಮಪ್ರಕಾರ ವಿವೇಕಾನಂದರ ‘ದೈಹಿಕ’ ವಾಸ್ತವವು ವಿವೇಕಾನಂದರಿಗೇ ಅವಮಾನಕರವಂತಲೇ? ಅದನ್ನು ಮುಚ್ಚಿಹಾಕುವ ಅಗತ್ಯವಿದೆಯಂತಲೇ? ಅಪ್ರಿಯ ಸತ್ಯವೇ?
ಅಂದಹಾಗೆ ನಮ್ಮ ನೆಚ್ಚಿನ, ನಮ್ಮ ಮುಂದಿನ ಪೀಳಿಗೆಯ ಆದರ್ಶವಾಗಬೇಕಾದ ವಿವೇಕಾನಂದರನ್ನು ಹಾಗೆ ಹೈಜಾಕ್ ಮಾಡುವ ಹಕ್ಕನ್ನು ನಿಮ್ಮಿಂದ ‘ಭಾರತೀಯರು’ ಅಂತ ಕರೆಯಲ್ಪಡುತ್ತಿರುವ ಈ ಕೆಲವು ಮಂದಿಗೆ ಕೊಟ್ಟವರು ಯಾರು? ವಿವೇಕಾನಂದರಾಗಲಿ, ‘ಭಾರತೀಯತೆ’ಯಾಗಲಿ ಏನು ಅವರ ಸ್ವಂತ ಅಸ್ತಿಯೇ? ಹೋಗಲಿ, “ಭಾರತೀಯವೆನ್ನುವ ಒಂದು ಸಂಸ್ಕೃತಿ ಇದೆಯೇ?”
Grow up!
* ಮಟ್ಟೂರರ ಲೇಖನವು ವಿವೇಕಾನಂದರ ನಿಂದನೆಯಾಗಿ ವಿವೇಕಾನಂದರನ್ನು ಆರಾಧಿಸುವವರಿಗೆ ಕಂಡಿರುವುದು ಫ್ಯಾಕ್ಟ್. ಆ ಫ್ಯಾಕ್ಟ್ ಅನ್ನೇ ಲೇಖನದಲ್ಲಿ ವಿವರಿಸಲು ಯತ್ನಿಸಲಾಗಿದೆ. ಹೌದು. ಇದು ಲೇಖನದ ವಸ್ತು. ಆದ್ದರಿಂದ ನಿಮ್ಮ ಉಳಿದ ಪ್ರಶ್ನೆಗಳಿಗೆ ಉತ್ತರಿಸುವ ಅವಶ್ಯಕತೆ ಇಲ್ಲ. ಅಂದರೆ, “ಹಾಗಾದರೆ ನಿಮ್ಮಪ್ರಕಾರ ವಿವೇಕಾನಂದರ ‘ದೈಹಿಕ’ ವಾಸ್ತವವು ವಿವೇಕಾನಂದರಿಗೇ ಅವಮಾನಕರವಂತಲೇ? ಅದನ್ನು ಮುಚ್ಚಿಹಾಕುವ ಅಗತ್ಯವಿದೆಯಂತಲೇ? ಅಪ್ರಿಯ ಸತ್ಯವೇ?” ಈ ಪ್ರಶ್ನೆಗಳು ಇಲ್ಲಿ ಏಳುವುದಿಲ್ಲ.
ದಿನೇಶರು ಮಾಡುತ್ತಿರುವುದು ವಿವೇಕಾನಂದರ ಅವಹೇಳನ ಎಂದು ನಮಗೂ ಅನಿಸಿದೆ ನಿಜ. ಆದರೆ ಇದು ಲೇಖನದ ವಸ್ತುವಲ್ಲ. ಇದರ ಕುರಿತು ಮತ್ತೊಮ್ಮೆ ಬರೆಯುತ್ತೇವೆ.
ಅಷ್ಟಕ್ಕೂ, ‘ಅವಮಾನ’ ಆಗಿದೆ ಎಂದು ಅನಿಸುವುದು ಒಂದು ವಿಚಾರ. ಮತ್ತು ಅದು ಹೇಗೆ ಮತ್ತು ಏಕೆ ಅವಮಾನ ಎಂದು ಸಮರ್ಥಿಸಿಕೊಳ್ಳುವುದು ಮತ್ತೊಂದು ವಿಚಾರ. ಎರಡನೆಯದರ ಕುರಿತು ಮಾತನಾಡುವುದು ಸುಲಭದ ಕೆಲಸವಲ್ಲ. ಅಂದ ಮಾತ್ರಕ್ಕೆ ಅವಮಾನವೇ ಆಗಿಲ್ಲ ಎಂದು ಹೇಳಲು ಬರುವುದೂ ಇಲ್ಲ.
ಲೇಖನದಲ್ಲಿ ನಾವು ಇದರ ಕುರಿತೂ ಹೇಳಿದ್ದೇವೆ: “ಇಂಥ ಅವಹೇಳನಗಳು ಯಾವ ಕಾರಣಕ್ಕಾಗಿ ತಪ್ಪು? ವೈಚಾರಿಕತೆಯ ಹೆಸರಿನಲ್ಲಿ ಇವು ಹೇಗೆ ಒಂದು ಸಂಸ್ಕೃತಿಗೆ ಸೇರಿದ ಜನರ ಅನುಭವಗಳನ್ನು ವಿರೂಪಗೊಳಿಸುತ್ತವೆ? ಮುಂತಾದ ವಿಚಾರಗಳ ಕುರಿತು ಸ್ಪಷ್ಟವಾಗಿ ವಿಚಾರ ಮಂಡಿಸಲು ಕ್ರಿಶ್ಚಿಯನ್ ರಿಲಿಜನ್ ಮತ್ತು ಅಲ್ಲಿನ ಸಂಸ್ಕೃತಿಯನ್ನು ಆಳವಾಗಿ ಅರ್ಥಮಾಡಿಕೊಳ್ಳದ ಹೊರತು ಬೇರೆ ದಾರಿಯೇ ಇಲ್ಲ. ಆದರೆ ತಮ್ಮ ಅನುಭವಗಳು ವಿರೂಪಗೊಳ್ಳುತ್ತಿರುವಾಗ, ತಮ್ಮ ಸಂಪ್ರದಾಯ, ಗುರುಹಿರಿಯರ ಅವಮಾನವಾಗುತ್ತಿರುವಾಗ ಜನರಿಗೆ ನೋವಾಗುವುದು, ತಮ್ಮದೇನನ್ನೋ ಕಳೆದುಕೊಂಡಂತೆ ಅನಿಸುವುದು ಸಹಜ. ಇಂಥ ಪರಿಸ್ಥಿಯಲ್ಲಿ ಜನರೇನು ಮಾಡಿಯಾರು?”
* “ಅಂದಹಾಗೆ ನಮ್ಮ ನೆಚ್ಚಿನ, ನಮ್ಮ ಮುಂದಿನ ಪೀಳಿಗೆಯ ಆದರ್ಶವಾಗಬೇಕಾದ ವಿವೇಕಾನಂದರನ್ನು ಹಾಗೆ ಹೈಜಾಕ್ ಮಾಡುವ ಹಕ್ಕನ್ನು ನಿಮ್ಮಿಂದ ‘ಭಾರತೀಯರು’ ಅಂತ ಕರೆಯಲ್ಪಡುತ್ತಿರುವ ಈ ಕೆಲವು ಮಂದಿಗೆ ಕೊಟ್ಟವರು ಯಾರು? ವಿವೇಕಾನಂದರಾಗಲಿ, ‘ಭಾರತೀಯತೆ’ಯಾಗಲಿ ಏನು ಅವರ ಸ್ವಂತ ಅಸ್ತಿಯೇ? ಹೋಗಲಿ, “ಭಾರತೀಯವೆನ್ನುವ ಒಂದು ಸಂಸ್ಕೃತಿ ಇದೆಯೇ?”
Grow up!” ಇದು ಆಪಾದನೆ. ನಾವು ಹೈಜಾಕ್ ಇತ್ಯಾದಿ ಮಾಡುತ್ತಿಲ್ಲ. ಕೆಲವರಿಗೆ ದಿನೇಶರ ಲೇಖನ ನೋವುಂಟುಮಾಡಿರುವ ವಿಚಾರದ ಒಂದು ಮಗ್ಗಲನ್ನು ಪರಿಶೀಲಿಸುತ್ತಿದ್ದೇವೆ. ಇಲ್ಲ ನಮ್ಮ ವಿಶ್ಲೇಷಣೆ ಸರಿ ಇದೆ, ಇಲ್ಲ ತಪ್ಪು. ಅಷ್ಟೇ.
>>”…ಆದರೆ ಇದು ಲೇಖನದ ವಸ್ತುವಲ್ಲ…”
ಆ ಎರಡೂ ವಸ್ತು/ಉದ್ದೇಶಗಳು ನಿಮ್ಮ ಲೇಖನ-ಕಮೆಂಟುಗಳ ಉದ್ದಕ್ಕೂ ಅನಾವಶ್ಯಕವಾಗಿ ಮಿಶ್ರಿತಗೊಂಡಿರುವುದರಿಂದ ನೀವು ಹೇಳುವುದನ್ನ ಅರ್ಥೈಸುವಲ್ಲಿ ನಮಗೆ ಗೋಜಲುಗಳು ಆಗುತ್ತಿವೆ. ನಿಮ್ಮ ಇಲ್ಲಿನ ಅಭಿಪ್ರಾಯಗಳನ್ನ ಸ್ವಚ್ಛವಾಗಿ ಸಂವಹಿಸುವ ಹೊಸ ಲೇಖನವೊಂದನ್ನ ನೀಡಲು ಪ್ರಯತ್ನಿಸುವಂತೆ ನಿಮಗೆ ನಮ್ಮ ಸಲಹೆ.
>>”…ಕೆಲವರಿಗೆ ದಿನೇಶರ ಲೇಖನ ನೋವುಂಟುಮಾಡಿರುವ ವಿಚಾರದ ಒಂದು ಮಗ್ಗಲನ್ನು ಪರಿಶೀಲಿಸುತ್ತಿದ್ದೇವೆ. ಇಲ್ಲ ನಮ್ಮ ವಿಶ್ಲೇಷಣೆ ಸರಿ ಇದೆ, ಇಲ್ಲ ತಪ್ಪು. ಅಷ್ಟೇ.”
ನನ್ನ ಅಭಿಪ್ರಾಯದಲ್ಲಿ ನಿಮ್ಮ ವಿಶ್ಲೇಷಣೆ ಬಹುತೇಕ ತಪ್ಪುಗಳಿಂದಲೇ ಕೂಡಿದೆ. ಅದರ ಒಂದು ಉದಾಹರಣೆಗೆ, ನಿಮ್ಮ ವಾದದೊಂದು ಅಂಶ:
>>”…ವೈಚಾರಿಕತೆಯ ಹೆಸರಿನಲ್ಲಿ ಇವು ಹೇಗೆ ಒಂದು ಸಂಸ್ಕೃತಿ ಸೇರಿದ ಜನರ ಅನುಭವಗಳನ್ನು ವಿರೂಪಗೊಳಿಸುತ್ತವೆ?..”<<
ಅನ್ನುವುದು. ಇದು ಒಂದು ಆರೋಪದ ವಾಕ್ಯ. ಇದರ ಆಧಾರಕಕ್ಷೆ ಇರಬೇಕಾದದ್ದು "*ಒಂದು ಸಂಸ್ಕೃತಿ*ಗೆ ಸೇರಿದ ಜನರು" ('ಕೆಲವು' ಜನರೋ? ಅಥಾವಾ 'ಎಲ್ಲಾ ಜನರು' ಅನ್ನುವಿರೋ?), "ಅನುಭವ", "*ವಿರೂಪ*ಗೊಳಿಸುವುದು" ಅನ್ನುವ ಪ್ರಕಲ್ಪನೆಗಳಲ್ಲಿ. ಅಧಾರಕಕ್ಷೆಯೇ ಸಮಸ್ಯಾತ್ಮಕವಿದ್ದಲ್ಲಿ ಆರೋಪ ನಿರರ್ಥಕವಾಗುತ್ತೆ. ಅದಕ್ಕೆ *ಸಂಬಂಧಿಸಿದಂತೆಯೇ* ಇದ್ದುದು ನಮ್ಮ 'ಆಕ್ಷೇಪಣೆ': 'ಭಾರತೀಯ'ಅನ್ನಬಹುದಾದ *ಒಂದು ಸಂಸ್ಕೃತಿ* (ಒಂದೇ ಒಂದು, ಏಕಸೂತ್ರದ, ಕಟ್ಟುನಿಟ್ಟಾದ, ಕಾಲಾತೀತವಾಗಿ ಜಡವಾದ / single, monolithic, rigid, static ಏಕರೂಪದ ಸಂಸ್ಕೃತಿ) ಇಲ್ಲ. ಭಾರತವೆನ್ನುವ ನೆಲದಲ್ಲಿರುವುದು ಯಾವತ್ತೂ ಬಹುರೂಪೀ ಬಹುಸಂಸ್ಕೃತಿ. ಆ ಬಹುಸಂಸ್ಕೃತಿ (ಅರ್ಥಾತ್ ಅದರಲ್ಲಿನ ಬಹುತೇಕ ಉಪಸಂಸ್ಕೃತಿಗಳು – ತಮ್ಮ ಈಗಿನ ರೂಪದಲ್ಲಿ ಕೂಡ) ಯಾವತ್ತೂ ಬದಲಾವಣೆಗಳಿಗೆ ತೆರದುಕೊಂಡಿದುದು: ಇಂದು ಕಂಡಂತೆ ನಾಳೆ ಕಾಣದು. ಈ ಬದಲಾವಣೆಗಳಿಗೆ ಯಾವತ್ತೂ ಕಾರಣವಾಗುತ್ತಲಿರುವ ಹಲವು ಅಂಶಗಳಲ್ಲಿ ಇಲ್ಲಿನ ಜನರ 'ವೈಚಾರಿಕತೆ'ಯೂ ಒಂದು. ಹಾಗೆ 'ವೈಚಾರಿಕತೆ'ಯನ್ನಾಗಲೀ ವಿಚಾರಪರ ಜನರನ್ನಾಗಲೀ ಭಾರತೀಯರೂಪಕ್ಕೆ ಸಲ್ಲದ್ದು/ಹೊರತಾದದ್ದು ಎನ್ನಲಾಗಲೀ, ಅಭಾರತೀಯವೆನ್ನಲಾಗಲೀ ಬಾರದು. ಹಾಗಾಗಿ ವಿಮರ್ಶೆ-ಪರಿಷ್ಕರಣೆಗಳನ್ನ 'ವಿರೂಪಗೊಳಿಸುವುದು' ಅಂತ ಕರೆದು ಬಹಿಷ್ಕರಿಸುವುದು ಮಹಾನದಿಯೊಂದರ ಒಟ್ಟೂ ಚಲನೆಯನ್ನೇ ನಿರ್ಬಂಧಿಸುವಂತಹಾ ಬಹುದೊಡ್ಡ ಪ್ರಮಾದವಾಗುತ್ತದೆ. ಅದಲ್ಲದೇ, ಈಗಾಗಲೇ ಹೇಳಿದಂತೆ, 'ಅನುಭವ' ಅನ್ನುವ ಪದವನ್ನ ಅದರ ರೂಢಾರ್ಥದಲ್ಲಿ (experience,ಇಂದ್ರಿಯಗಳಿಂದ ಪಡೆದುಕೊಂಡ ಜ್ಞಾನ) ಬಳಸದೇ, ಅದಕ್ಕೆ ವ್ಯತಿರಿಕ್ತವಾಗಿ ಸರಿಸುಮಾರಾಗಿ 'ಶ್ರದ್ಧೆ/ನಂಬಿಕೆ' ಅನ್ನುವ ಅರ್ಥದಲ್ಲಿ ಬಳಸಿದ್ದು ಇನ್ನಷ್ಟು ಗೋಜಲಿಗೆ ಕಾರಣವಾಗಿದೆ.
ಸಾಕು ನಿಲ್ಲಿಸಿ ನಿಮ್ಮಿಬ್ಬರ ಅಹಂಕಾರ ಲೇಪಿತ ಒಣ ಪಾಂಡಿತ್ಯ ಪ್ರದರ್ಶನವನ್ನು! ನಿಮ್ಮ ಜಟಾಪಟಿಯಿಂದ ಯಾವ ನಿಜವಾದ ಸಮಸ್ಯೆಯೂ ಬಗೆಹರಿಯುವುದಿಲ್ಲ.
ನಮ್ಮ ಲೇಖನಕ್ಕೆ ಒಂದು ತಾರ್ಕಿಕ ರಚನೆ ಇದೆ. premise 1–>premise 2=conclusion. ಈ ರಚನೆಯನ್ನು ಬಿಟ್ಟು, ಅದರ ಒಂದೊಂದೇ ಸಾಲನ್ನು ತೆಗೆದು ಕೊಂಡು ಏನು ಬೇಕಾದರೂ ಹೇಳಬಹುದು. ಅದಕ್ಕೆ ಕಾಮೆಂಟಿನಲ್ಲಿ ಬರುವ ಒಂದೊಂದು ಸಾಲನ್ನು ಸೇರಿಸಿಕೊಂಡರೆ, ಕತ್ತೆಗೆ ಮೂರು ಕೊಡು ಎಂದೂ ತೋರಿಸಬಹುದು. ಇದು ಚರ್ಚೆಯಲ್ಲ. ಲೇಖನದ ಮೂಲ ವಿಚಾರಕ್ಕೆ ಮತ್ತು ಮುಖ್ಯ ವಾದಕ್ಕೆ ನಿಮ್ಮ ಪ್ರತಿಕ್ರಿಯೆ ಇದ್ದರೆ ತಿಳಿಸಿ.
ಉಳಿದ ಗೊಂದಲಗಳನ್ನು ತೋರಿಸಿಕೊಟ್ಟಿದ್ದಕ್ಕೆ ಧನ್ಯವಾದಗಳು.
ನಿಮ್ಮಲ್ಲಿ ಹೇಳಲು ಉಪಯುಕ್ತ ವಿಚಾರವೇನಾದರು ಇದ್ದಾಗ ಮತ್ತೆ ಚರ್ಚೆ ಮಾಡೋಣ.
೨) ಬೇರೆ ಯಾವ ಉದಾಹರಣೆ? ಸಂಪೂರ್ಣವಾಗಿ ಇದೊಂದೇ ಉದಾಹರಣೆಯ ಮೂಲಕ ಥೀಸಿಸ್ಸೊಂದನ್ನು ನಿರೂಪಿಸಲು ಯತ್ನಿಸಿದ್ದೀರಿ; ಅದರ ವೈಫಲ್ಯವನ್ನು ಒಪ್ಪಿಕೊಳ್ಳಿ.
“…ಮೂಲಭೂತವಾಗಿ ಅಲ್ಲಿ ‘ಪುರುಷರು’-‘ಮಹಿಳೆಯರು’ ಅನ್ನುವ ಬೇಧಭಾವ ಯಾಕೆ ಬಂತು?….”
ವಾದವೊಂದರಲ್ಲಿ ವಾದಿಯೊಬ್ಬ ತಪ್ಪೊಂದನ್ನು ವಾದದ ಮುಖ್ಯವಿಷಯಕ್ಕೆ ನೇರವಾಗಿ ಸಂಬಂಧಿಸಿಲ್ಲದಂತೆ ಮಾಡಿದರೂ ತಪ್ಪು ತಪ್ಪೇ. ನಿಮ್ಮ ಒಟ್ಟೂ ವಾದಮಾದರಿಯನ್ನೇ ಅನುಸರಿಸಿ ಇಲ್ಲೂ ಕೂಡಾ “ಡಂಕಿನ್ನರ ಬಲಪಂಥೀಯ ಒಲವು”, “ಡಂಕಿನ್ನರ ಮೇಲ್-ಚಾವನಿಸಂ” “ಡಂಕಿನ್ನರ ಫ್ಯಾಸಿಸಂ”.. ಅಂತೆಲ್ಲಾ ಕೋರಿಲೇಶನ್ನುಗಳನ್ನು ಎಳೆಯಬಹುದು. ಕೆಟಗರಿಗಳನ್ನು ಮಾಡಬಹುದು, ನಿಮ್ಮನ್ನು ಅವುಗಳಲ್ಲಿ ತುರುಕಬಹುದು.
ಉದಾಹರಣೆಯ ಮೂಲಕ ಥೀಸಿಸ್ ಅನ್ನು ನಿರೂಪಿಸಲು ಬರುವುದಿಲ್ಲ. ಥೀಸಿಸ್ ಅರ್ಥವಾಗಲಿ ಎಂದು ಉದಾಹರಣೆ ಬಳಸುವುದು. ಉದಾಹರಣೆ ಕೆಲಸ ಮಾಡಲಿಲ್ಲ ಎಂದರೆ ಥೀಸಿಸ್ ವೈಫಲ್ಯವಾಗುವುದಿಲ್ಲ. ಅಷ್ಟಕ್ಕೂ ನಾನು ಕೊಟ್ಟ ಉದಾಹರಣೆ ನಿಮ್ಮ ಪಾಲಿಗೆ ಕೆಲಸ ಮಾಡಿಲ್ಲ ಅಷ್ಟೇ.
ನನ್ನ ವಾದದ ಶೈಲಿಯಲ್ಲಿಯ ತಪ್ಪು (ಒಂದುವೇಳೆ ಅದು ತಪ್ಪಾಗಿದ್ದರೂ) ನನ್ನ ವಾದದ ತಪ್ಪಲ್ಲ. ನನ್ನ ವಾದದ ಶೈಲಿಯಲ್ಲಿಯ ತಪ್ಪುಗಳನ್ನೂ ತೋರಿಸಿಕೊಟ್ಟಿದ್ದಕ್ಕೆ ಧನ್ಯವಾದಗಳು. ಚರ್ಚೆ ಮುಂದುವರೆಯಲಿ, ಇದನ್ನು ಬಿಟ್ಟು.
೩) ನೀವು ಬ(ಕೊ)ರೆದದ್ದು ಎಲ್ಲ ಥೀಸಿಸ್ಸು; ಅದರಲ್ಲಿನ ತಪ್ಪುಗಳನ್ನು ತೋರಿಸಿ ನಾನು ಬರೆದದ್ದು ಮಾತ್ರ ಭಾಷಣ.. ಅಲ್ಲವೇ? ಏನೋ ಒಂದು; ಹ್ಯಾಗಾದರೂ ಕರೆದುಕೊಳ್ಳಿ.
>”ಒಬ್ಬ ವ್ಯಕ್ತಿ, ಮತ್ತೊಬ್ಬ ವ್ಯಕ್ತಿಯನ್ನು ದೇವ-ಸಮಾನ ಎಂದು ಪೂಜಿಸಿದರೆ, ಪ್ರಶ್ನಿಸಲು ನಾವು ಯಾರು? ಅದು ಆತನ ಜೀವನ, ಆತನ ಅನುಭವ.”
ಅನುಭವ ಅನ್ನುವ ಪದವನ್ನ ಆ ಥರಹ ನಿರ್ವಾಚಿಸುತ್ತಿರುವುದು ನೀವು ಮಾತ್ರ. ಇಲ್ಲದ ಅರ್ಥವನ್ನು, ಸಲ್ಲದ ವಿದ್ಯಮಾನವನ್ನು ‘ಅನುಭವ’ ಎಂಬ ಪದಕ್ಕೆ ಈಗಾಗಲೇ ಇರುವ ಅರ್ಥಗಳಿಗೆ ತಗುಲುಹಾಕಿ ತನ್ಮೂಲಕ ತಪ್ಪನ್ನ ಸರಿ ಅಂತ ಸಾಧಿಸಲು ಯತ್ನಿಸುತ್ತಿದ್ದೀರಿ, ಅಷ್ಟೇ.
>”ಇದರಿಂದ ಸಮಾಜಕ್ಕೆ ತೊಂದರೆಯಾಗುತ್ತಿದ್ದರೆ ಅದನ್ನು ಪ್ರಶ್ನಿಸಬಹುದು. ಇಲ್ಲವಾದರೆ ಅಲ್ಲಿ ಮೂಗು ತೋರಿಸಲು ನಮಗೆ ಅಧಿಕಾರ ಕೊಡುವವರು ಯಾರು?”
ಇದರ ಕೆಳಗೆ ಶಿವಕುಮಾರರಿಗೆ ಕೊಟ್ಟ ಪ್ರತಿಕ್ರಿಯೆಯಲ್ಲಿ ಬಹುತೇಕ ನೀವು ಇಲ್ಲಿ ಮಾಡುತ್ತಿರುವ ಥರಹದ ವಾದದ ‘grossover’ಗಳ ಬಗ್ಗೆಯೇ ಹೇಳಿದ್ದೇನೆ. ಇಲ್ಲಿ ಅದನ್ನು ಸ್ಥೂಲವಾಗಿಡುತ್ತೇನೆ.
ಮೊದಲನೇಯದಾಗಿ ನನ್ನ ಮುಂಚಿನ ಕಾಮೆಂಟುಗಳಲ್ಲೇ ಅದರಿಂದಾಗುವ ತೊಂದರೆಗಳತ್ತ ಬೊಟ್ಟು ಮಾಡಿದ್ದೇನೆ. ಇದರಿಂದ ಅಂಧವಿಶ್ವಾಸಗಳ ವಿರುದ್ಧವಿದ್ದ ವಿವೇಕಾನಂದರ ಆಶಯಗಳಿಗೇ ಧಕ್ಕೆಯಾಗುತ್ತದೆ. ಬಹುತೇಕ ನಮ್ಮ ಎಲ್ಲ ಕ್ರಿಯೆಗಳೂ ಆಚರಣೆಗಳೂ ಸಮಾಜದಿಂದ ಒಂದಿಲ್ಲೊಂದು ರೀತಿಯಲ್ಲಿ ಪ್ರಭಾವಿತವಾಗಿರುತ್ತವೆ; ಅದೇ ಸಮಾಜವನ್ನು ಹಲವು ರೀತಿಗಳಲ್ಲಿ ಪ್ರಭಾವಿಸುತ್ತಿರುತ್ತವೆ ಕೂಡ. ಹಾಗೆ ಯಾರೂ ತನ್ನಷ್ಟಕ್ಕೆ ತಾನೇ ವ್ಯಕ್ಟಿಪೂಜೆಯೊಂದರಲ್ಲಿ ತೊಡಗಿರುವುದು ನಡೆಯದ ವಿದ್ಯಮಾನ. ಒಬ್ಬೊಬ್ಬರೂ ಇತರರಿಂದ ಕಲಿಯುತ್ತಿರುತ್ತಾರೆ, ಇತರರಿಗೆ ಹಬ್ಬಿಸುತ್ತಿರುತ್ತಾರೆ. ಹಾಗೆ, ನಾನು ಮತ್ತೆ ನನ್ನವರೆಲ್ಲ ಬದುಕುವ-ಬದುಕಬೇಕಾದ ಸಮಾಜದಲ್ಲಿ ಏನು ವಿದ್ಯಮಾನವಿದೆಯೋ ಅದರ ಬಗ್ಗೆ ಪ್ರಶ್ನೆ-ವಿಮರ್ಶೆ ಮಾಡುವುದು ನನ್ನ ಆಜನ್ಮಸಿದ್ಧ ಹಕ್ಕು.
ಹಾಗಿದ್ದಾಗಿಯೂ ಈ ಪೂಜೆಗಳಲ್ಲಿ ನಿಮಗೆ ತೊಂದರೆಯಿಲ್ಲ ಅಂತಾದರೆ ನಾಳೆಯಿಂದ ನಾನು ನಿಮ್ಮಲ್ಲಿಗೆ ಬಂದು ನಿಮ್ಮನ್ನು ಪೀಠವೊಂದರ ಮೇಲೆ ಕಟ್ಟಿಹಾಕಿ ಕಲ್ಲು ದೇವರು ಅಂತ ನಿಮ್ಮ ಪೂಜಾರಧನೆಗಳನ್ನ ಶುರು ಮಾಡುವೆ, ಹುಷಾರು!
>”ಇಂದು ವೈಚಾರಿಕತೆಯ ಹೆಸರಿನಲ್ಲಿ ನಾವು ಮಾಡುತ್ತಿರುವುದು ಇದನ್ನೇ: ಇನ್ನೊಬ್ಬರ ಬದುಕುವ ರೀತಿಯಲ್ಲಿ, ಅವರು ಕಟ್ಟುಕೊಳ್ಳುವ ಅನುಭವದ ಜಗತ್ತಿನಲ್ಲಿ ಮೂಗು ತೋರಿಸುವುದು.”
ಸ್ವಾತಂತ್ರ್ಯ ಮತ್ತು ಸ್ವೇಚ್ಛಾಚಾರದ ನಡುವಣ ಗೆರೆ ಎಲ್ಲಿ-ಏನು ಅನ್ನುವುದು ಎಂದೂ ಮುಗಿಯದ ಹಳೆಯ ಚರ್ಚೆಯೇ. ಯಾವ ಸಮಾಜದಲ್ಲಿ ಬದುಕುತ್ತಿರುವ ಯಾವ ವ್ಯಕ್ತಿಗೂ ತನಗೆ ಸಿಕ್ಕಸಿಕ್ಕಂತೆ ಬದುಕುವ ಅವಕಾಶ ಇಂದೂಇಲ್ಲ – ಹಿಂದೆ ಇರಲೂ ಇಲ್ಲ. ಈ ನಿಜವನ್ನು ಮರೆಮಾಚಬಾರದು.
* ಅನುಭವ ಪದದ ಕುರಿತು ಬರೆದಿದ್ದೇನೆ ಈಗಾಗಲೇ ಗಮನಿಸಿ.
*grossover ಅಂದರೆ?
* “ಇದರಿಂದ ಅಂಧವಿಶ್ವಾಸಗಳ ವಿರುದ್ಧವಿದ್ದ ವಿವೇಕಾನಂದರ ಆಶಯಗಳಿಗೇ ಧಕ್ಕೆಯಾಗುತ್ತದೆ. ಬಹುತೇಕ ನಮ್ಮ ಎಲ್ಲ ಕ್ರಿಯೆಗಳೂ ಆಚರಣೆಗಳೂ ಸಮಾಜದಿಂದ ಒಂದಿಲ್ಲೊಂದು ರೀತಿಯಲ್ಲಿ ಪ್ರಭಾವಿತವಾಗಿರುತ್ತವೆ; ಅದೇ ಸಮಾಜವನ್ನು ಹಲವು ರೀತಿಗಳಲ್ಲಿ ಪ್ರಭಾವಿಸುತ್ತಿರುತ್ತವೆ ಕೂಡ. ಹಾಗೆ ಯಾರೂ ತನ್ನಷ್ಟಕ್ಕೆ ತಾನೇ ವ್ಯಕ್ಟಿಪೂಜೆಯೊಂದರಲ್ಲಿ ತೊಡಗಿರುವುದು ನಡೆಯದ ವಿದ್ಯಮಾನ. ಒಬ್ಬೊಬ್ಬರೂ ಇತರರಿಂದ ಕಲಿಯುತ್ತಿರುತ್ತಾರೆ, ಇತರರಿಗೆ ಹಬ್ಬಿಸುತ್ತಿರುತ್ತಾರೆ. ಹಾಗೆ, ನಾನು ಮತ್ತೆ ನನ್ನವರೆಲ್ಲ ಬದುಕುವ-ಬದುಕಬೇಕಾದ ಸಮಾಜದಲ್ಲಿ ಏನು ವಿದ್ಯಮಾನವಿದೆಯೋ ಅದರ ಬಗ್ಗೆ ಪ್ರಶ್ನೆ-ವಿಮರ್ಶೆ ಮಾಡುವುದು ನನ್ನ ಆಜನ್ಮಸಿದ್ಧ ಹಕ್ಕು.
ಹಾಗಿದ್ದಾಗಿಯೂ ಈ ಪೂಜೆಗಳಲ್ಲಿ ನಿಮಗೆ ತೊಂದರೆಯಿಲ್ಲ ಅಂತಾದರೆ ನಾಳೆಯಿಂದ ನಾನು ನಿಮ್ಮಲ್ಲಿಗೆ ಬಂದು ನಿಮ್ಮನ್ನು ಪೀಠವೊಂದರ ಮೇಲೆ ಕಟ್ಟಿಹಾಕಿ ಕಲ್ಲು ದೇವರು ಅಂತ ನಿಮ್ಮ ಪೂಜಾರಧನೆಗಳನ್ನ ಶುರು ಮಾಡುವೆ, ಹುಷಾರು!”
ಪ್ರಶ್ನೆ ಮಾಡಿ. ಹಾಗೆ ನಾವೂ ಮಾಡುತ್ತಿದ್ದೇವೆ. ಇಲ್ಲಿರುವ ಚರ್ಚೆ ಬೇರೆಯದ್ದು. ದಿನೇಶ್ ಲೇಖನ ಕೆಲವರಿಗೆ ನೋವುಂಟುಮಾಡಿದೆ. ಈ ವಿದ್ಯಮಾನಕ್ಕೆ ತುಂಬಾ ಹಳೇಯ ಇತಿಹಾಸವಿದೆ. ಚರ್ಚೆ ಎಲ್ಲೆಲ್ಲಿಗೋ ಹೋಗುತ್ತಿದೆ. ನೀವು ಬರೆಯುವ ಚರ್ಚೆಗೆ ಸಂಬಂಧವಿರದ ವಿಚಾರಗಳ ಕುರಿತು ಚರ್ಚೆಯಲ್ಲಿ ನನಗೆ ಯಾವುದೇ ಆಸಕ್ತಿ ಇಲ್ಲ.
೪) ನಿಮ್ಮ ವಾದದ ಪ್ರಕಾರವೇ “ವಾದ ಮಂಡಿಸಲು ಜನ ಬೆಂಬಲ” ಬೇಕು ಅಂತಾಗಿದೆ. ಇಲ್ಲವಾದರೆ ವಾದವೊಂದು “ಜನರ ಅನುಭವಗಳನ್ನ ವಿರೂಪಗೊಳಿಸುವಂತಿದೆ; ಆದ್ದರಿಂದ ಅದು ತಪ್ಪು” ಅಂತ ವಾದಿಸಲು ಹೊರಡಬಾರದು ನೋಡಿ!
ಯಾವುದೂ ವಿನಾಕಾರಣವಲ್ಲ. ಅಜೆಂಡಾಗಳು ಪೂಜಕರಿಗೂ ಇರುತ್ತವೆ, ವಿಮರ್ಶಕರಿಗೂ ಇರುತ್ತವೆ. ಕುರುಡಾದ ವ್ಯಕ್ತಿಪೂಜೆಗಳಲ್ಲಿನ ಸಮಸ್ಯೆಗಳನ್ನ ಈಗಾಗಲೇ ಇತರ ಕಾಮೆಂಟುಗಳಲ್ಲಿ ವಿವರಿಸಿದ್ದೇನೆ. ಈಗ ಇಲ್ಲಿ ಇನ್ನೂ ವಿವರಿಸಿ ಹೇಳುವ ಅಗತ್ಯವಿರಲಾರದು ಅಂತ ಭಾವಿಸುವೆ.
ನನಗೆ ಅರ್ಥವಾಗಲಿಲ್ಲ. ಇದು ಒಂದಷ್ಟು ಅಸಹನೆ ಮತ್ತು ಚರ್ಚೆಗೆ ಸಂಬಂಧವಿರದ ವಿಚಾರಗಳು
೫) A categorical mistake within a category is, after all, a mistake only! ನಮಗನ್ನಿಸುವುದು ನೀವು ಇಲ್ಲಿ ‘ಟಾರ್ಗೆಟ್ ಮಾಡುತಿದ್ದಾರೆ! ಟಾರ್ಗೆಟ್ ಮಾಡುತಿದ್ದಾರೆ!!’ ಅಂತ ಹುಯಿಲೆಬ್ಬಿಸುತ್ತಾ ದಿನೇಶರನ್ನು ಟಾರ್ಗೆಟ್ ಮಾಡುತ್ತಿದ್ದೀರ, ತನ್ಮೂಲಕ “ನಿಲುಮೆ”ಗೋ ಮತ್ತಿನ್ಯಾವ್ಯಾವುದಕ್ಕೋ ಸ್ಕೋಪ್-ಮೈಲೇಜ್ ದೊರಕಿಸಿಕೊಳ್ಳುತಿದ್ದೀರ, ಅಷ್ಟೇ.
“A categorical mistake within a category is, after all, a mistake only!” ಇದು semantic nonsense. ನೀವು ಕನ್ನಡದಲ್ಲೇ ಬರೆದರೆ ಉತ್ತಮ. ಉಳಿದದ್ದು ನಿಮ್ಮ ಆಪಾದನೆ.
೫) ನೀವು ಪರಿಕಲ್ಪನೆಯೊಂದನ್ನ ಟಂಕಿಸಿ ಬಳಸಿದರೆ “ಅರ್ಥೈಸಿ ಬಳಸಿದ್ದು, ಸಂಶೋಧನಾ-ವಿಧಾನಾತ್ಮಕ”, ಮಾನವಿಕ ವಿಷಯಗಳಲ್ಲಿನ ನಿಮ್ಮ ಸಹೋದ್ಯೋಗಿಗಳು ಬಳಸಿದರೆ “ಹಿಂದುಮುಂದು ತಿಳಿಯದೆ ಬಳಸುವುದು”, ಅಲ್ಲವೇ?
ಉದಾಹರಣೆಗಳು ವ್ಯಾಖ್ಯಾನಗಳಾಗಲಾರವು. ಹೊಸದಾಗಿ ಪರಿಕಲ್ಪನೆಯನ್ನು ಮಾಡಿದ್ದರೆ ಅದಕ್ಕೆ ಹೊಸ ಹೆಸರಿಡುವ ಶಿಸ್ತು ಇರಬೇಕಲ್ಲವೇ? ಬಳಸುವ ಮುನ್ನ ಹೊಸದಾಗಿ ಹೊಸೆದಿರುವ ಪರಿಕಲ್ಪನೆಗಳನ್ನು ವ್ಯಾಖ್ಯಾನಿಸುವ ನಿಯತ್ತು ತೋರಬೇಕಲ್ಲವೇ? ಹಳೆಯ, ಬೇರೆಬೇರೆ ಅರ್ಥವಿರುವ ಪದಗಳಿಗೆ ನಿಮ್ಮ ಹೊಸ ಐಡಿಯಾಲಜಿಗಳನ್ನ ಥಳುಕುಹಾಕುವುದು ಅಪ್ರಾಮಾಣಿಕವಲ್ಲವೇ?
ಅನುಭವದ ಕುರಿತು ಈಗಾಗಲೇ ವಿವರಿಸಿದ್ದೇನೆ. ಉಳಿದದ್ದು ನಿಮ್ಮ ಅದೇ ಹಳೇಯ ಆಪಾದನೆ ಮತ್ತು ಆಕ್ಷೇಪಣೆ.
“…ವಿವೇಕಾನಂದರ ನಿಂದನೆ ಅಂತ ಬಿಂಬಿಸೋದರಲ್ಲಿ ಏನೇನೂ ಅರ್ಥವಿಲ್ಲದ ರಾಜಕೀಯ ಮಾತ್ರ ಕಾಣಿಸುತ್ತೆ”.
ಈ ಮೂಲಕ ತಾವು ಏನನ್ನು ಹೇಳುತ್ತಿದ್ದೀರಿ, ಮಟ್ಟೂರರ ಲೇಖನದಲ್ಲಿನ ವಿಚಾರಗಳು ವಿವೇಕಾನಂದರನ್ನು ಗುರುಗಳಂತೆ ಆರಾಧಿಸುವವರ ಅನುಭವಗಳನ್ನು ಅಲ್ಲಗಳೆದಿಲ್ಲ ಎಂಬುದನ್ನು ಹೇಳುತ್ತಿದ್ದೀರಾ? ಹಾಗೊಮ್ಮೆ ಹೇಳಿದ್ದರೆ ಅದು ಸತ್ಯಕ್ಕೆ ದೂರವಾದ ಹೇಳಿಕೆ ಮತ್ತು ಅದನ್ನು ಮರೆಮಾಚುತ್ತದೆಯಷ್ಟೇ. ಏಕೆಂದರೆ, ಹಾಗೆ ಆರಾಧಿಸುವವರು ಇದ್ದಾರೆ. ಈ ಆಧಾರವೇ ಅವರ ಲೇಖನವು ಅಂತಹ ಭಾರತೀಯರ ಅನುಭವವನ್ನು ವಿರೂಪಗೊಳಿಸುತ್ತದೆ ಎಂಬುದನ್ನು ತೋರಿಸುತ್ತದೆ.
ಇನ್ನು ಲೇಖನದ ಆಶಯಕ್ಕೆ ಸಂಬಂಧಿಸಿದಂತೆ, ಮಟ್ಟೂರರ ಲೇಖನವು ವಿವೇಕಾನಂದರ ನಿಂದನೆ ಎಂದು ಬಿಂಬಿಸುವುದು ಲೇಖನದ ಆಶಯವಂತೂ ಅಲ್ಲ. ಮಟ್ಟೂರರ ಲೇಖನವು ವಿವೇಕಾನಂದರ ನಿಂದನೆಯಾಗಿ ವಿವೇಕಾನಂದರನ್ನು ಆರಾಧಿಸುವವರಿಗೆ ಕಂಡಿರುವುದು ಫ್ಯಾಕ್ಟ್. ಆ ಫ್ಯಾಕ್ಟ್ ಅನ್ನೇ ಲೇಖನದಲ್ಲಿ ವಿವರಿಸಲು ಯತ್ನಿಸಲಾಗಿದೆ. ಸರಳವಾಗಿಡುವುದಾದರೆ, ವಿವೇಕಾನಂದರನ್ನು ಆರಾಧಿಸುವವರ ಅನುಭವವು ನಿರಾಕಣೆಯಾದಾಗ ಅದು ನಿಂದನೆಯಾಗಿ ಕಾಣುತ್ತದೆ. ಮಟ್ಟೂರರ ಲೇಖನದಲ್ಲಿ ವಿವೇಕಾನಂದರ ವಿಚಾರಗಳ ವಿಮರ್ಶೆಗೆ ಬದಲಾಗಿ ಅವರ ವೈಯುಕ್ತಿಕ ವಿಚಾರಗಳ ಮೇಲೆಯೇ ಪೂರ್ಣ ಗಮನ ನೀಡಲಾಗಿದೆ. ಆದರೆ, ವಿವೇಕಾನಂದರ ವೈಯುಕ್ತಿಕ ಸಂಗತಿಗಳು ಅವರನ್ನು ಆರಾಧಿಸುವ ಜನರಿಗೆ ಮುಖ್ಯವಾಗಿರುವುದಿಲ್ಲ.
ಒಂದು ಸಣ್ಣ ಲೇಖನ ಭಾರತೀಯರ ಅನುಭವವನ್ನು ವಿರೂಪಗೊಳಿಸುವುದಿಲ್ಲ ಎನ್ನಲು ಏನಾದರು ಮಾನದಂಡಗಳಿವೆಯೇ? ಎಷ್ಟು ಪುಟಗಳ ಲೇಖನ ಇರಬೇಕು? ಹೀಗೆ ಸಣ್ಣ ಲೇಖನ ಎನ್ನುವ ಕಾರಣಕ್ಕೆ ಅದನ್ನು ಮಾಫಿಮಾಡಬೇಕೆ? ಹಾಗೆನ್ನುವುದು ಅಸಮಂಜಸವಷ್ಟೇ.
“…ಹಾಗೆ ಆರಾಧಿಸುವವರು ಇದ್ದಾರೆ. ಈ ಆಧಾರವೇ ಅವರ ಲೇಖನವು ಅಂತಹ ಭಾರತೀಯರ ಅನುಭವವನ್ನು ವಿರೂಪಗೊಳಿಸುತ್ತದೆ ಎಂಬುದನ್ನು ತೋರಿಸುತ್ತದೆ.”
ಇಲ್ಲಿ ‘ಅನುಭವ’ ಎನ್ನುವುದರ ಮತ್ತು ಅದನ್ನು “ವಿರೂಪಗೊಳಿಸುವುದು” ಎನ್ನುವುದರ ನಿಮ್ಮ ವ್ಯಾಖ್ಯಾನ(definition)ವೇನು?
ಆರಾಧಕರು ದಾವೂದಇಬ್ರಾಹಿಮನಿಗೂ, ಓಸಾಮನಿಗೂ, ಇಂಕ್ವಿಶನ್ನಿಗೂ, ಉಮೇಶರೆಡ್ಡಿಗೂ, ದಂಡೂಪಾಳ್ಯದ ಹಂತಕರಿಗೂ, ಫ್ಯಾಸಿಸಮ್ಮಿಗೂ, ಹಿಂಸಾವಾದಕ್ಕೂ, ಓವೈಸಿಗೂ, ನಕ್ಸಲರಿಗೂ ಇತ್ಯಾದಿ ಎಲ್ಲ ತರಹದ ಕೆಟಗರಿಗಳಿಗೂ ಎಲ್ಲ ಕಾಲಕ್ಕೂ ಎಲ್ಲ ಕಡೆಗಳಲ್ಲೂ ಇರುವುದು ಸಾಮಾನ್ಯ. ನಿಮ್ಮ ಪ್ರಕಾರದ ‘ಅನುಭವ’ ಅನ್ನುವ ಪದದ ಅಡಿಯಲ್ಲಿ ಅವರು ಮಾಡಿದ್ದೆಲ್ಲವೂ ಪ್ರಶ್ನಾತೀತವಾಗಿ ಹುಟ್ಟಾ ಸರಿಯಿದ್ದಂತಾಗುತ್ತದಷ್ಟೇ. ಅಂತಹ ಮಂದಿಯ “ಅನುಭವ”ವನ್ನೂ “ವಿರೂಪ”ಗೊಳಿಸುವ ಯತ್ನವನ್ನು ನಿಮ್ಮಿಂದ ‘ಪ್ರಗತಿಪರ’ರು ಅಂತ ಬೈಸಿಕೊಳ್ಳುತ್ತಿರುವ ಮಂದಿ ಮಾಡುತಿದ್ದರೆ ಅದೂ ತಪ್ಪಾ? ಇಲ್ಲವಾ? ‘ಹಕ್ಕಿ’ನ ಪ್ರಶ್ನೆ ಅಲ್ಲಿ ಪ್ರಸ್ತುತವಿಲ್ಲವಾ? ಹ್ಯಾಗೆ? ಯಾವುದೋ ಒಂದು ಕೆಟಗರಿಗೆ ಪ್ರಶ್ನಾತೀತವಾಗಿ ಸಿಕ್ಕ ಸಿಕ್ಕಂತೆ (ಹೌದು, ಇಲ್ಲ್ಲಿ ಬಳಕೆಯಾಗಬೇಕಾದ ಪದ ‘ಸಿಕ್ಕಸಿಕ್ಕಂತೆ’ ಎನ್ನುವುದೇ, ಯೋಚಿಸಿ ನೋಡಿ..) ‘ಅನುಭವ’ ವನ್ನು ಹೊಂದುವ ಅಧಿಕಾರವನ್ನ ದಯಪಾಲಿಸಲು ನೀವು ಯಾರು?
“ಭಾರತೀಯರು” ಯಾರ್ಯಾರು? ಅವರ ‘ಅನುಭವ’ವೇನು ಸ್ವಯಂಭುವೇ, ಕಾಲಾತೀತವೇ?
‘ಅನುಭವ’ ಎನ್ನುವುದು ಏನೂ ಸ್ವಯಂಭುವಲ್ಲ, ಅದೂ ಕೂಡಾ ಸಮಾಜದ, ಕೆಟಗರಿಗಳ, ಅಜೆಂಡಾಗಳ ಒಂದು ನಿರ್ಮಿತಿಯೇ. ಆ ಸಮಾಜ-ಕೆಟಗರಿ-ಅಜೆಂಡಾಗಳಾದರೋ ತಿರುಗಾ ಮನುಷ್ಯರಿಂದಲೇ ನಿರ್ಮಿತಗೊಳ್ಳುತ್ತಿರುವವು.. ಪ್ರಶ್ನಿಸುವ ಹಕ್ಕು, ಖಂಡಿಸುವ ಹಕ್ಕು, ಪರಿಷ್ಕರಿಸುವ ಹಕ್ಕು ಪ್ರತಿಯೊಬ್ಬರಿಗೂ ಆಜನ್ಮಸಿದ್ಧವಾಗಿರುವುದು ಹಾಗೆ.
>”ವಿವೇಕಾನಂದರನ್ನು ಆರಾಧಿಸುವವರ ಅನುಭವವು ನಿರಾಕಣೆಯಾದಾಗ ಅದು ನಿಂದನೆಯಾಗಿ ಕಾಣುತ್ತದೆ”
>”ಮಟ್ಟೂರರ ಲೇಖನದಲ್ಲಿ ವಿವೇಕಾನಂದರ ವಿಚಾರಗಳ ವಿಮರ್ಶೆಗೆ ಬದಲಾಗಿ ಅವರ ವೈಯುಕ್ತಿಕ ವಿಚಾರಗಳ ಮೇಲೆಯೇ ಪೂರ್ಣ ಗಮನ ನೀಡಲಾಗಿದೆ.”
>”ಆದರೆ, ವಿವೇಕಾನಂದರ ವೈಯುಕ್ತಿಕ ಸಂಗತಿಗಳು ಅವರನ್ನು ಆರಾಧಿಸುವ ಜನರಿಗೆ ಮುಖ್ಯವಾಗಿರುವುದಿಲ್ಲ.”
>”ಮಟ್ಟೂರರ ಲೇಖನವು ವಿವೇಕಾನಂದರ ನಿಂದನೆಯಾಗಿ ವಿವೇಕಾನಂದರನ್ನು ಆರಾಧಿಸುವವರಿಗೆ ಕಂಡಿರುವುದು ಫ್ಯಾಕ್ಟ್”
ಪರಸ್ಪರ ನಿರಾಕರಣದಲ್ಲಿ ತೊಡಗಿರುವ ಈ ಮೇಲಿನ ನಾಲ್ಕೂ ಹೇಳಿಕೆಗಳು ಒಟ್ಟಿಗೇ ಸತ್ಯವಾಗಿರುವುದು ಯಾವ ಪ್ರಕಾರದ ವಿಶ್ವದಲ್ಲಿ ಸಾಧ್ಯವೋ ತಿಳಿಯದು!
“ಒಂದು ಸಣ್ಣ ಲೇಖನ ಭಾರತೀಯರ ಅನುಭವವನ್ನು ವಿರೂಪಗೊಳಿಸುವುದಿಲ್ಲ ಎನ್ನಲು ಏನಾದರು ಮಾನದಂಡಗಳಿವೆಯೇ? ಎಷ್ಟು ಪುಟಗಳ ಲೇಖನ ಇರಬೇಕು?…”
ಬರೆದದ್ದನ್ನ ಸರಿಯಾಗಿ ಓದಿದರೆ ಲೇಖನದಲ್ಲಿರುವ ಪದಗಳ ಸಂಖ್ಯೆಯ ಕಾರಣಕ್ಕೆ ಲೇಖನವನ್ನು ಸಣ್ಣಂದೆಂದು ಕರೆದಿಲ್ಲ ಅನ್ನುವುದು ತಿಳಿದೀತು. ಇಡೀ ಭಾರತೀಯರ ಅನುಭವವನ್ನು ವಿರೂಪಗೊಳಿಸುವಷ್ಟರ ಮಟ್ಟಿನ ದೊಡ್ಡ ವಿಚಾರಗಳೇನೂ ಅದರಲ್ಲಿ ಇಲ್ಲ ಅಂತಲಷ್ಟೇ ಹೇಳಿದ್ದು.
(1) ದಿನೇಶರು ಮಾಡುತ್ತಿರುವುದು ‘ವಿವೇಕಾನಂದರ ಅವಹೇಳನ’ ಎನ್ನುವುದರಲ್ಲಿ ಅಥವಾ ಅದನ್ನು ‘ವಿವೇಕಾನಂದರ ನಿಂದನೆ’ ಎನ್ನುವುದರಲ್ಲಿ ಗೊಂದಲ ಏನು? ನನಗೆ ಇನ್ನೂ ತಿಳಿಯುತ್ತಿಲ್ಲ.
(2) ‘ವಿವೇಕಾನಂದರು ರೋಗ ಪೀಡಿತರಿದ್ದ’ ವ್ಯಕ್ತಿ ಎನುವುದರಲ್ಲಿ ಅವರ ಅವಹೇಳನ ಎಲ್ಲಿ ಬಂತು ಎನ್ನುವ ಪ್ರಶ್ನೆ. ‘ವಿವೇಕಾನಂದರು ರೋಗ ಪೀಡಿತರಿದ್ದ’ ವ್ಯಕ್ತಿ ಎನ್ನುವುದು ಬಹಳಷ್ಟು ಜನರಿಗೆ ವಿವೇಕಾನಂದರ ಅವಹೇಳನದಂತೆ ಕಂಡಿದ್ದು, ಅದರಿಂದ ಅವರು ನೊಂದದ್ದು, ಕೆರಳಿದ್ದು ನನ್ನ ಪ್ರಕಾರ ಒಂದು ಫ್ಯಾಕ್ಟ್. ನೀವು ಇದನ್ನು ಇಲ್ಲ ಎಂದರೆ, ಈ ಚರ್ಚೆ ಇಲ್ಲಿಗೆ ನಿಲ್ಲಬಹುದು. ನಮ್ಮ ಪ್ರಕಾರ ಅದು ಒಂದು ನಿಜಾಂಶವಾದ್ದರಿಂದ ನಾವು ಇಂಥ ಅವಹೇಳನದ ಇತಿಹಾಸವನ್ನು ಮತ್ತು ನಾವು ಕಂಡುಕೊಳ್ಳಬಹುದಾದ ಪರಿಹಾರವನ್ನು ಲೇಖನದಲ್ಲಿ ಚರ್ಚಿಸಿದ್ದೇವೆ. ಇದು ಹೇಗೆ ಅವಹೇಳನ ಅನ್ನುವ ನಿಮ್ಮ ಪ್ರಶ್ನೆಗೆ ನನ್ನ ಲೇಖನದಲ್ಲಿ ಉತ್ತರವಿಲ್ಲ. ನೀವು ಆ ಪ್ರಶ್ನೆಯನ್ನು ಎತ್ತಿರುವುದು ಈಗ. ಇಂದೊಂದು ಒಳ್ಳೆಯ ಪ್ರಶ್ನೆಯಾದರೂ ಅದನ್ನು ನೀವು ಒಂದು ಆಕ್ಷೇಪಣೆಯಾಗಿ ಎತ್ತುತ್ತೀರಿ. ನಿಮ್ಮ ಪ್ರತಿಕ್ರಿಯ ಉದ್ದಕ್ಕೂ ಇದೇ ಆಕ್ಷೇಪಣೆಯ ದ್ವನಿ ಇದೆ ಎಂಬುದು ನಿಮ್ಮ ಗಮನಕ್ಕೆ ಬಂದಿರಬಹುದು ಎಂದುಕೊಂಡಿದ್ದೇನೆ. ಚರ್ಚೆ ಬಿಟ್ಟು ಆಕ್ಷೇಪಣೆಗೆ ಇಳಿದರೆ, ನಾನು ಚರ್ಚೆಯಲ್ಲಿ ಭಾಗಿಯಾಗುವುದಿಲ್ಲ.
(3) “ಸಂಪೂರ್ಣವಾಗಿ ಇದೊಂದೇ ಉದಾಹರಣೆಯ ಮೂಲಕ ಥೀಸಿಸ್ಸೊಂದನ್ನು ನಿರೂಪಿಸಲು ಯತ್ನಿಸಿದ್ದೀರಿ; ಅದರ ವೈಫಲ್ಯವನ್ನು ಒಪ್ಪಿಕೊಳ್ಳಿ.”
ಉದಾಹರಣೆಯ ಮೂಲಕ ಥೀಸಿಸ್ ಅನ್ನು ನಿರೂಪಿಸಲು ಬರುವುದಿಲ್ಲ. ಥೀಸಿಸ್ ಅರ್ಥವಾಗಲಿ ಎಂದು ಉದಾಹರಣೆ ಬಳಸುವುದು. ಉದಾಹರಣೆ ಕೆಲಸ ಮಾಡಲಿಲ್ಲ ಎಂದರೆ ಥೀಸಿಸ್ ವೈಫಲ್ಯವಾಗುವುದಿಲ್ಲ. ಅಷ್ಟಕ್ಕೂ ನಾನು ಕೊಟ್ಟ ಉದಾಹರಣೆ ನಿಮ್ಮ ಪಾಲಿಗೆ ಕೆಲಸ ಮಾಡಿಲ್ಲ ಅಷ್ಟೇ.
ಆದರೂ ನಾನು ಕಾಮೆಂಟ್ ನಲ್ಲಿ ಕೊಟ್ಟ ಉದಾಹರಣೆಯ ಕುರಿತು ನೀವು ಹೇಳಿದ ಮಾತನ್ನು ಮತ್ತೊಮ್ಮೆ ಪರಿಶೀಲಿಸೋಣ: “ಎಷ್ಟು ಯೋಚಿಸಿ ಹ್ಯಾಗೆ ನೋಡಿದರೂ “ತಾಯಿಯನ್ನು ಪೂಜಿಸುವ ಪುರುಷರನ್ನು ನೋಡಿದ್ದೇವೆ…” ಅಂತ ಅಂದಿರುವ ಪ್ಯಾರ ಪೂರ ಅತ್ಯುತ್ಪ್ರೇಕ್ಷಿತ, ಬಾಲಿಷ, ಸಂಭಂಧವಿಲ್ಲದ ಮಾತುಗಳೇ ಧ್ವನಿಸಿವೆ ಅಂತ ಅನಿಸೋದು. (ಹಾಗೂ ಅದರಲ್ಲಿ ಸ್ವಲ್ಪ ಮಟ್ಟಿಗೆ ಪುರುಷ-ಅಹಮಿಕೆಯ ಧ್ವನಿ ಕೂಡ ಕಾಣುತ್ತೆ: ಇಲ್ಲಿ ‘ತಾಯಿ’ಯನ್ನು ‘ಪೂಜಿಸುವ’ವರ ಯಾದಿಯಲ್ಲಿ ‘ಪುರುಷರು’ ಮಾತ್ರ ಅದು ಹ್ಯಾಗೆ ಉಲ್ಲೇಖನಾರ್ಹವಾಗುಳಿದಿದ್ದು? ಮೂಲಭೂತವಾಗಿ ಅಲ್ಲಿ ‘ಪುರುಷರು’-‘ಮಹಿಳೆಯರು’ ಅನ್ನುವ ಬೇಧಭಾವ ಯಾಕೆ ಬಂತು? ‘ಮಕ್ಕಳು’ ಅನ್ನಬಹುದಿತ್ತಲ್ಲ?)”
ನನ್ನ ಉದಾಹರಣೆ “ಅತ್ಯುತ್ಪ್ರೇಕ್ಷಿತ, ಬಾಲಿಷ, ಸಂಭಂಧವಿಲ್ಲದ” ಮಾತು ಹೇಗೆ ಎಂಬುದನ್ನು ನೀವು ತಿಳಿಸಿಲ್ಲ. ಒಂದೇ ಸಾಲಿನಲ್ಲಿ ಆ ನಿರ್ಣಯಕ್ಕೆ ಬರುತ್ತೀರಿ. ಎರಡನೇ ಸಾಲಿನಲ್ಲಿ “ಅದರಲ್ಲಿ ಸ್ವಲ್ಪ ಮಟ್ಟಿಗೆ ಪುರುಷ-ಅಹಮಿಕೆಯ ಧ್ವನಿ ಕೂಡ ಕಾಣುತ್ತೆ” ಎನ್ನುವ ಹೊಸ ನಿರ್ಣಯಕ್ಕೆ ಬರುತ್ತೀರಿ. ಆದ್ದರಿಂದ ಇವು ಕೇವಲ ಆಕ್ಷೇಪಣೆಯಾಗಿ ಉಳಿದುಕೊಳ್ಳುತ್ತವೆ. ಇಂಥ ಆಕ್ಷೇಪಣೆಗಳಿಂದ ಚರ್ಚೆ ನಡೆಯುವುದಿಲ್ಲ. ಜಗಳ ಮಾಡಬಹುದು. ಅನಂತರ ಎರಡು ಪ್ರಶ್ನೆಗಳನ್ನು ಕೇಳುತ್ತೀರಿ. ಆ ರೀತಿಯ ‘ಇದು ಯಾಕೆ’ ಎನ್ನುವ ಪ್ರಶ್ನೆಗಳನ್ನು ನಾನು ಏನು ಬರೆದರೂ ಅದರ ಮೇಲೆ ಎತ್ತಬಹುದು. ನಾನು ಮಕ್ಕಳು ಎಂದಿದ್ದರೆ, ನೀವು “‘ಪುರುಷ’ ಅನ್ನಬಹುದಿತ್ತಲ್ಲ?” ಎಂದು ಪ್ರಶ್ನೆ ಕೇಳಬಹುದು. ಎಲ್ಲರನ್ನೂ ಸಮಾಧಾನ ಮಾಡಲು ನಾನು ಲೇಖನ ಬರೆಯಬೇಕಾದರೆ ನನ್ನ ಸಾಲು ಹೀಗೆ ಇರಬೇಕಾಗುತ್ತದೆ: …ಪುರುಷ/ಮಹಿಳೆ/ಮಕ್ಕಳು/ಹಿರಿಯರು/ರಾಜಕಾರಣಿಗಳು/ಐಸ್ಕ್ರೀಂ ತಿನ್ನುವವರು/ಹಿಜಿಡಾಗಳು ಇತ್ಯಾದಿ ಇತ್ಯಾದಿ… ನೀವು ಸೂಚಿಸುತ್ತಿರುವುದು ಇದನ್ನೇ? ಹೀಗೆ ಬರೆದರೆ ಒಂದು ಲೇಖನದ readabilityಯ ಕಥೆ ಏನಾಗುತ್ತದೆ? ಯಾರು ಹೀಗೆ ಬರೆಯುತ್ತಾರೆ? (ಇದು ಪೋಸ್ಟ್-ಮಾಡ್ರನ್ಇಸಂ ಕಳಿಸಿಕೊಟ್ಟ ಕೆಟ್ಟ ಚಾಳಿ ಅಲ್ಲವೇ)
(4) “ನೀವು ಬ(ಕೊ)ರೆದದ್ದು ಎಲ್ಲ ಥೀಸಿಸ್ಸು; ಅದರಲ್ಲಿನ ತಪ್ಪುಗಳನ್ನು ತೋರಿಸಿ ನಾನು ಬರೆದದ್ದು ಮಾತ್ರ ಭಾಷಣ.. ಅಲ್ಲವೇ?” ಅಲ್ಲ. ಲೇಖನದ ವಾದಕ್ಕೆ ಸಂಬಂಧವಿರದ ವಿಚಾರಗಳ ಕುರಿತು ಮಾರಲ್ ವಿಚಾರಗಳನ್ನು ಹೇಳಿದ್ದೀರಲ್ಲ ಅದು ಭಾಷಣ. “ಅನುಭವ ಅನ್ನುವ ಪದವನ್ನ ಆ ಥರಹ ನಿರ್ವಾಚಿಸುತ್ತಿರುವುದು ನೀವು ಮಾತ್ರ” ಎನ್ನುತ್ತೀರಿ. ಇರಬಹುದು. ಆದರೆ ಅದು ಆಕ್ಷೇಪಣೆಯ ವಿಚಾರ ಹೇಗಾಯಿತು?
ನಿಮ್ಮ ಮುಂದಿನ ಪ್ಯಾರಾಗಳಲ್ಲಿ ನೀವು ಸಾಧಿಸಿ ತೋರಿಸಬೇಕಾದ ಹಲವು ವಿಚಾರಗಳಿವೆ. ಹಾಗೆ ಮಾಡದೆ ಬರಿಯ ಪದಗಳನ್ನು ಹೆಣೆದರೆ ಚರ್ಚೆ ಯಾಗುವುದಿಲ್ಲ. ಉದಾ: ವಿವೇಕಾನಂದರು “ಅಂಧವಿಶ್ವಾಸಗಳ” ವಿರುದ್ಧ ಇದ್ದರು ಎಂಬುದನ್ನು ತೋರಿಸಿ. ಅದಕ್ಕೂ ಮೊದಲು “ಅಂಧವಿಶ್ವಾಸ” ಎಂದರೆ ಏನು? ಯಾವಾಗ ಒಂದು ವಿಶ್ವಾಸ ಅಂಧವಾಗುತ್ತದೆ?
ಯಾರೋ ಒಬ್ಬರು ಮರವನ್ನೂ, ವಿವೇಕಾನಂದರ ಫೋಟೋವನ್ನೂ ಪೂಜಿಸಿದರೆ ಸಮಾಜಕ್ಕೆ ಮತ್ತು ನಿಮಗೆ ಯಾವರೀತಿಯಲ್ಲಿಯ, ಮತ್ತು ಯಾವ ತೊಂದರೆ ಯಾಗುತ್ತದೆ ಎಂದು ಮೊದಲು ನೀವು ತೋರಿಸಿಕೊಡದ ಹೊರತು “ಅದರ ಬಗ್ಗೆ ಪ್ರಶ್ನೆ-ವಿಮರ್ಶೆ ಮಾಡುವುದು ನನ್ನ ಆಜನ್ಮಸಿದ್ಧ ಹಕ್ಕು” ಎಂದು ಹೊರಡಲು ಬರುವುದಿಲ್ಲ. “ಕುರುಡಾದ ವ್ಯಕ್ತಿಪೂಜೆಗಳಲ್ಲಿನ ಸಮಸ್ಯೆಗಳನ್ನ” ಎರಡು ಸಾಲಿನಲ್ಲಿ ‘ಇತರ ಕಾಮೆಂಟುಗಳಲ್ಲಿ’ ವಿವರಿಸಲು ಬರುವುದಿಲ್ಲ. ಇಲ್ಲವೆಂದರೆ ಎರಡು ಸಾಲಿನ ಕಾಮೆಂಟುಗಳನ್ನು ಬರೆದು ಜಗಿತ್ತಿನಲ್ಲಿರುವ ಯಾವುದೇ ವಿಚಾರವನ್ನು ತಪ್ಪು ಎಂದು ತೋರಿಸಬಹುದು. ಒಪ್ಪುತ್ತೀರಾ?
(5) “A categorical mistake within a category is, after all, a mistake only!” ನನಗೆ ಈ ಮಾತು ಅರ್ಥವಾಗಿಲ್ಲ. Categorical mistake ಮತ್ತು category mistake ಎರಡೂ ಬೇರೆ ಬೇರೆ. ಒಂದು ಪರಿಕಲ್ಪನೆಯನ್ನು ನಾನು ಬಳಸುವುದರಿಂದ ತೊಂದರೆ ಏನಾಗಿದೆ ಎಂದು ತಿಳಿಸಿ. ಮುಂದಿನ ಚರ್ಚೆ ಆಮೇಲೆ ಮಾಡೋಣ.
(6) ನಾವು ನಮ್ಮ ತಂಡದಲ್ಲಿ ಬರೆಯಲು ಆರಂಭಿಸಿ ಒಂದು ದಶಕ ಕಳೆದಿದೆ. ಆ ಬರಹಗಳಲ್ಲಿ ನಾವು ‘ಅನುಭವ’ ಎಂದರೇನು ಎಂದು ಹೇಳಿಯೂ ಆಗಿದೆ. ಪ್ರತಿ ಲೇಖನಕ್ಕೂ ಒಂದು ಪದಕೋಶವನ್ನು ತಗಲಿಸುವುದು ಕಷ್ಟ.
ಒಂದೇ ಮಾತಿನಲ್ಲಿ ಹೇಳುವುದಾದರೆ, ಒಬ್ಬನ ‘ಅನುಭವ’ ಎನ್ನುವುದು ಆತನ/ಆಕೆಯ ಬದುಕುವ ರೀತಿ. ಭವಗಳಿಗೆ ಅನುವಾಗಿ ಬದುಕುವ ರೀತಿ (ಅನು-ಭವ). ನಾನು ಈ ಪದಗಳನ್ನು ಬಳಸಿದ್ದಾಗ್ಯೂ, ಇಲ್ಲಿ ಹೇಳುತ್ತಿರುವ ವಿಚಾರವನ್ನು ಲೇಖನದಲ್ಲಿ ವಿವರಿಸಿ ಸ್ಪಷ್ಟಪಡಿಸಿದ್ದೆ. ನೀವು ಓದಲಿಲ್ಲ, ಇಲ್ಲ ಓದಿದರೂ ಅರ್ಥವಾಗಲಿಲ್ಲ. ಇನ್ನೊಮ್ಮೆ ಹೇಳುತ್ತೇನೆ: ಕೆಲವರಿಗೆ ವಿವೇಕಾನಂದರು ಗುರು ಸಮಾನರು. ಅವರು ಹಾಗೆ ನಂಬಿ ನಡೆಯುವುದು ಅವರು ಬದುಕುವ ರೀತಿ. ಅದು ಅವರ ಅನುಭವ. ಅವರು ಹೀಗೆ ಬದುಕುವುದನ್ನು ವಿಮರ್ಶೆ ಮಾಡಲು/ಪ್ರಶ್ನಿಸಲು ಒಬ್ಬರಿಗೆ ಬಹಳ ಮಹತ್ತರವಾದ ಕಾರಣ ಇರಬೇಕು. (ಎರಡು ಸಾಲಿನ ಒಂದು ಕಾಮೆಂಟ್ ಅಲ್ಲ.) ಇಲ್ಲದೆ ಹೋದರೆ, ನಾವು ಮಾಡುವ (ಅವರು ಬದುಕುವ ರೀತಿಯ) ವಿಮರ್ಶೆ ಅವರ ಅನುಭವವನ್ನು ‘ತಪ್ಪು’, ಮೂರ್ಖತನದಿಂದ ಕೂಡಿದ್ದು ಎಂದು ತೋರಿಸಿದ ಹಾಗೆ. ಇದನ್ನೇ ‘ಅನುಭವವನ್ನು ವಿರೂಪಗೊಳಿಸುವುದು’ ಎಂದಿದ್ದು ನಾವು. ದಿನೇಶ್ ಮಾಡಿದ್ದು ಇದನ್ನು.
ಡಂಕಿನ್ನರೇ,
ನೀವು ನೀವು ಇಲ್ಲಿ ಪ್ರತಿಕ್ರಿಯಿಸಲು ಬಳಸುತ್ತಿರುವ ವಿಧಾನ ಬಹಳ ರಸವತ್ತಾಗಿದೆ:
ಚರ್ಚಿಸಲು ವಾದಿಗಳಿಗೆ ಅನುಕೂಲವಾಗಲಿ ಎಂದೇ ಹೆಚ್ಚಿನ ಕಾಳಜಿ ತೆಗೆದುಕೊಂಡು ಪ್ರತ್ಯೇಕ-ಪ್ರತ್ಯೇಕವಾಗಿ ವಿವರಿಸಿದ್ದು ಇರುವ ಹತ್ತು ಕಮೆಂಟುಗಳನ್ನ ಸಾರಸಗಟಾಗಿ ಒಂದು ಸಾಲಿನಲ್ಲಿ “ಆಕ್ಷೇಪಣೆಯ ಧ್ವನಿ” ಅಂತ ತಿಪ್ಪೆ ಸಾರಿಸುವುದು.. ಯಾವ್ಯಾವುದೋ ನಂಬರಿನಲ್ಲಿ ಯಾವ್ಯಾವುದೋ ಪ್ರತಿಕ್ರಿಯೆ ನೀಡುವುದು.. ವಿವರಿಸಿದ್ದನ್ನ ವಿವರಿಸಿಲ್ಲ ಎನ್ನುವುದು.. ಹೇಳಿರದಿದ್ದನ್ನ ಹೇಳಿದ್ದೀರಿ ಅನ್ನುವುದು.. ಹೀಗೆ ಉಳಿದವರನ್ನೆಲ್ಲ ಹಾದಿತಪ್ಪಿಸಲು ಧೂಳು ಎಬ್ಬಿಸುವುದು.. ಇದೆಲ್ಲ ತಮ್ಮ ಹುಳುಕುಗಳ ಸಂಪೂರ್ಣ ಅರಿವಿರುವವರು ನುಣುಚಿಕೊಳ್ಳಲು ಯಾವಾಗಿನಿಂದಲೂ ಬಳಸುತ್ತಾ ಬಂದಿರುವ “ಜಾಣಗುರುಡು”, “over-shouting” ಎಂಬಿತ್ಯಾದಿಯಾಗಿರುವ ಹಳೆಯದೊಂದು ಕೆಟಗರಿಯ ಸಾಮಾನ್ಯ ಅಸ್ತ್ರಗಳೇ – ಬೆಕ್ಕು ಕಣ್ಮುಚ್ಚಿಕೊಂಡು ಹಾಲು ಕುಡಿದು ಬೀಗುವಂತಹಾ ಹಳಸಲು ವಿದ್ಯಮಾನವಿದು. ಸಂಶೋಧಕರೆಂದು ಕರೆದುಕೊಳ್ಳುವ ನಿಮ್ಮ ಈ ಅಪ್ರಾಮಾಣಿಕ ವರ್ತನೆ ನಿಮಗೆ ಶೋಭೆ ತರುವುದಿಲ್ಲ.
ಆನ್ಲೈನ್ ಫೊರಂಗಳಲ್ಲಿ ಈ ಥರ ಅಪ್ರಮಾಣಿಕವಾಗಿ ಜಾರಿಕೊಳ್ಲುವುದನ್ನ, ಅನಾವಶ್ಯಕವಾಗಿ ಕಣ್`ಫ್ಯೂಸ್ ಮಾಡುವುದನ್ನ ತಪ್ಪಿಸಲಿಕ್ಕೆ ಅಂತಲೇ ಪ್ರತೀ ಕಮೆಂಟಿಗೂ ಪ್ರತ್ಯೇಕವಾಗಿ ಅದರದ್ದೇ ಆದ ಥ್ರೆಡ್ನಲ್ಲಿ ಪ್ರತಿಕ್ರಿಯೆಮಾಡುವ ಸವಲತ್ತನ್ನ ಇಡಲಾಗಿರುತ್ತೆ.
ನಾನು ನೀಡಿದ ಪ್ರತಿಕ್ರಿಯೆಗಳಿಗೆ ನಿಮ್ಮ ಬಳಿ ಪ್ರತಿ-ಪ್ರತಿಕ್ರಿಯೆಗಳು ಇರುವುದೇ ಹೌದಾದಲ್ಲಿ ಯಾಕೆ ಪ್ರತೀ ಕಮೆಂಟಿಗೂ ಪ್ರಾಮಾಣಿಕವಾಗಿ ಪ್ರತ್ಯೇಕ ಪ್ರತ್ಯೇಕವಾಗಿ ಅಲ್ಲೇ ಅದರ ಥ್ರೆಡ್ ನಲ್ಲೇ ಪಾಯಿಂಟ್-ಟು-ಪಾಯಿಂಟ್ ಪ್ರತಿ-ಪ್ರತಿಕ್ರಿಯಿಸಿ ವಿವರಿಸಬಾರದು? ಹಾಗೆ ಮಾಡಿ, ಆವಾಗ ನಾನೂ ಆಯಾಯಾ ಥ್ರೆಡ್ಗಳಲ್ಲೇ ಪ್ರತಿಕ್ರಿಯೆ ನೀಡುವುದನ್ನ ಮುಂದುವರಿಸುತ್ತೇನೆ. ಆವಾಗ ‘ಚರ್ಚೆ’ ನಡೆಯಲು ಸಾಧ್ಯವಾಗುತ್ತದೆ. ನಿಮಗೆ ಅಂತಹಾ ಪ್ರಾಮಾಣಿಕತೆಯಲ್ಲಿ ಆಸಕ್ತಿಯಿಲ್ಲವಾದ್ದಲ್ಲಿ ಬಿಟ್ಟುಬಿಡೋಣ: “ಕೊನೇ ಮಾತನ್ನ ಹೇಳುವ ಅವಕಾಶ ಉಂಟುಮಾಡಿಕೊಂಡ ಮಾತ್ರಕ್ಕೇ ಒಬ್ಬರು ಹೇಳಿದ್ದೆಲ್ಲ ಸತ್ಯವಾಯಿತು” ಅಂತ ತಪ್ಪು ತಿಳಿದು ಬಿಡುವಷ್ಟು ಮುಗ್ಧರು ನಿಲುಮೆಯ ಓದುಗರಲ್ಲ ಅನ್ನುವ ನಂಬಿಕೆಯಲ್ಲಿ ಪ್ರತಿಕ್ರಿಯಿಸುವುದನ್ನ ನಾನು ಇಲ್ಲಿಗೇ ಮೊಟಕು ಮಾಡುತ್ತೇನೆ.
ವಿವೇಕ್. ನನ್ನ ವಿವರಣೆಗೆ ನಿಮ್ಮಲ್ಲಿ ಪ್ರತಿಕ್ರಿಯೆ ಇಲ್ಲ ಎಂದು ತಿಳಿಯಿತು. ಆದ್ದರಿಂದ ವೆಬ್ ಪೇಜ್ ನಲ್ಲಿ ಕಾಮೆಂಟ್ಟ್ಗೆ ಹೇಗೆ ಪ್ರತಿಕ್ರಿಯಿಸಿಬೇಕು ಎನ್ನುವುದರ ಕುರಿತು ಮತ್ತು ಇಂಥ ಸಂಬಂಧ ಇರದ ಇತರ ವಿಚಾರಗಳ ಕುರಿತು ಮತ್ತೊಂದು ಉದ್ದದ ನೈತಿಕ ಭಾಷಣ ಕೊಟ್ಟಿದ್ದೀರಿ. ಜೊತೆಗೆ ಮತ್ತಷ್ಟು ಬೈಗುಳಗಳು (ಉದಾ: ‘ಅಪ್ರಾಮಾಣಿಕ ವರ್ತನೆ’). ಒಂದು ಸಣ್ಣ ಸಲಹೆ. ಮುಂದಿನ ಬಾರಿ, ಯಾವುದಾದರೂ ಪ್ರಾಮಾಣಿಕ ಚಿಂತಕರ ಲೇಖನವನ್ನು ಹುಡುಕಿ ಅದಕ್ಕೆ ಪ್ರತಿಕ್ರಿಯೆ ಕೊಡಿ. ಹೇಗಿದ್ದರೂ “ತಪ್ಪು ತಿಳಿದು ಬಿಡುವಷ್ಟು ಮುಗ್ಧರು ನಿಲುಮೆಯ ಓದುಗರಲ್ಲ” ಅಂದಮೇಲೆ ಸರಿ-ತಪ್ಪು ಅವರೇ ನಿರ್ಧರಿಸಲಿ ಬಿಡಿ.
ನನ್ನ ಕಾಮೆಂಟುಗಳಿಗೆ ನೀವು ಅರೆಬರೆಯಾಗಿ ನೀಡಿರುವ ಪ್ರತಿಕ್ರಿಯೆಗಳಲ್ಲೂ ನನಗೆ ಒಪ್ಪಿಗೆಯಾಗದ್ದು ಹಲವಿವೆ. ಅವುಗಳನ್ನೆಲ್ಲಾ ಬೊಟ್ಟುಮಾಡಿ ತೋರಿಸುವ ಮಾರುತ್ತರಗಳು ಎಲ್ಲ ಸಾಧ್ಯ ಇವೆ. ಅದಕ್ಕೆಲ್ಲಾ ಮೊದಲು ನೀವು ಸರಿಯಾಗಿ ನನ್ನ ಎಲ್ಲಾ ಕಂಮೆಂಟುಗಳಿಗೂ (ನಾನು ನಿಮ್ಮ ಸಹಲೇಖಕರಿಗೆ ಬರೆದಿರುವ ಕಮೆಂಟುಗಳನ್ನೂ ಸೇರಿಸಿ) ಉತ್ತರಿಸುವ ಜವಾಬ್ದಾರಿತನ ತೋರಬೇಕು, ಅಷ್ಟೇ. ನನ್ನ ಮಾರುತ್ತರಗಳು ವಿವರಣೆಗಳು ಪ್ರತಿಕ್ರಿಯೆಗಳು ಎಲ್ಲಾ ಅದಾದ ಮೇಲೆ. ಇಲ್ಲವಾದಲ್ಲಿ ನಾನು ಮಾಡ್ಯೂಲ್ ಮಾಡ್ಯೂಲ್ಗಳಾಗಿ ವಿಭಜಿಸಿಕೊಂಡು ವಿವರಿಸಿದ್ದನ್ನೇ ಮತ್ತೆ ಮತ್ತೆ ಎಷ್ಟು ಸಲ ಹೇಳಿದರೂ, ಅವುಗಳನ್ನು ಉಲ್ಲೇಖಿಸುವ ಮಾತ್ರದ ಗೋಜಿಗೂ ಹೋಗದೇ ‘ವಿವರಿಸಿಲ್ಲ’, ‘ಭಾಷಣ’, ‘ಆಕ್ಷೇಪಣೇಯ ಧ್ವನಿ’ ಎನ್ನುತ್ತ ನೀವು ಜಾರಿಕೊಳ್ಳುತ್ತ ಇರುತ್ತೀರಿ ಅಷ್ಟೇ.
ನಿಮ್ಮ ಚರ್ಚಿಸುವ ರೀತಿನೀತಿಗೆ ಒಂದು ಉದಾಹರಣೆ:
ನಿಮ್ಮ ಪ್ರತಿಕ್ರಿಯೆಯ ಎರಡನೇ ರೌಂಡಿನಲ್ಲಿ ನೀವು ಆರೋಪಿಸಿದ್ದೀರಿ:
>>”ನನ್ನ ಉದಾಹರಣೆ “ಅತ್ಯುತ್ಪ್ರೇಕ್ಷಿತ, ಬಾಲಿಷ, ಸಂಭಂಧವಿಲ್ಲದ” ಮಾತು ಹೇಗೆ ಎಂಬುದನ್ನು ನೀವು ತಿಳಿಸಿಲ್ಲ. ಒಂದೇ ಸಾಲಿನಲ್ಲಿ ಆ ನಿರ್ಣಯಕ್ಕೆ ಬರುತ್ತೀರಿ.”
ಅಂತ. ಹೀಗೆ ನನ್ನನ್ನು ಎಲ್ಲಿಂದ ಉಲ್ಲೇಖಿಸಿದ್ದೀರೋ ಅಲ್ಲೇ ಮುಂದಿನ ಪ್ಯಾರಾದಲ್ಲಿ ನಾನು ನನ್ನ ಮಾತನ್ನ ಸಮರ್ಥಿಸಿಕೊಂಡಿರುತ್ತೇನೆ. ಅದನ್ನು ನೀವು ಈ ರೌಂಡಿನಲ್ಲಿ ಉಲ್ಲೇಖಿಸಿರುವುದಿಲ್ಲ. ಮೊದಲ ರೌಂಡಿನಲ್ಲಿ ಅದೇ ಸಮರ್ಥನೆಯ ಪ್ಯಾರವನ್ನ ‘ಭಾಷಣ’ ಅಂತ ಒಂದು ಸಾಲಿನಲ್ಲಿ ತಳ್ಳಿಹಾಕಿರುತ್ತೀರಿ. (ನಿಮ್ಮದೇ ‘ವಿಧಾನ’ದಲ್ಲಿ ಅದನ್ನ ಆಕ್ಷೇಪಿಸುವುದಾದರೆ, “ಅದು ಹ್ಯಾಗೆ ‘ಭಾಷಣ’ವಾಯಿತು, ನಿಮ್ಮ ಇಡೀ ಲೇಖನವೇ ಹ್ಯಾಗೆ ಬರೀ ಒಂದು ಕಟ್ಟೆ ಪುರಾಣವಲ್ಲ.. ಎಂಬಿತ್ಯಾದಿಗಳನ್ನ ನೀವು ಸಾಧಿಸಿ ತೋರಿಸುವುದು ಯಾವತ್ತು ಬಾಕಿ ಇದೆ” – ಅನ್ನಬಹುದು.)
ಇನ್ನೊಂದು ಉದಾಹರಣೆಯಲ್ಲಿ “ಮಕ್ಕಳು” ಎನ್ನುವ ಜನರಲ್ ಕೆಟಗರಿ ಏಕಮಾತ್ರವಾಗಿ ಬಳಕೆಯಾಗಬೇಕಾದ ಜಾಗದಲ್ಲಿ “ಪುರುಷ” ಎನ್ನುವ ಒಂದು ಪರ್ಟಿಕ್ಯುಲರ್ ಕೆಟಗರಿ ಯಾಕೆ/ಹ್ಯಾಗೆ ಬಂತು ಅನ್ನುವ ಪ್ರಶ್ನೆಗೆ ನಿಮ್ಮಲ್ಲಿ ಉತ್ತರವಿರುವುದಿಲ್ಲ. ಬದಲಾಗಿ ಜನರಲ್ ಕ್ಯಾಟಗರಿ ಯಾವುದು, ಆ ಜನರಲ್ ಕ್ಯಾಟಗರಿಯ ಸಬ್-ಕ್ಯಾಟೆಗರಿ ಯಾವ್ಯಾವುದು ಎನ್ನುವ ಪ್ರಾಥಮಿಕ ಜ್ಣಾನ ಕೂಡ ಇಲ್ಲದ ಮಳ್ಳರಂತೆ ಪ್ಯಾರಗಟ್ಟಲೇ ‘ಲೇಖನದ readabilityಯ ಕಥೆ’ ಕೊಚ್ಚುತ್ತೀರಿ.
ಈ ಉದಾಹರಣೆಗಳಲ್ಲಿರುವ ನನ್ನ ಕಮೆಂಟನ್ನ ಹೀಗೆ ನೀವು ಇನ್ನೂ ಯಾವ್ಯಾವ ಸುತ್ತಿನಲ್ಲಿ ಎಲ್ಲೆಲ್ಲೋ ಮತ್ತೆ ಮತ್ತೆ ಹ್ಯಾಗೆ ಹ್ಯಾಗೋ ಉಧ್ಧರಿಸಿ ಮತ್ತೆ ಯಾವ ಯಾವ ಹೊಸ ತೀರ್ಪುಗಳನ್ನ ಕೊಡುತ್ತಿರುತ್ತೀರೋ ಏನೋ, ನಿಮಗೇ ತಿಳಿದಂತೆ ಕಾಣದು. ಆ ಅನಾವಶ್ಯಕ ಗೊಂದಲಗಳನ್ನು ಅವಾಯ್ಡ್ ಮಾಡಲಿಕ್ಕ್ಕಾಗಿ ಆಯಾ ಥ್ರೆಡ್ಗಳಲ್ಲಿಯೇ ಪ್ರತಿಕ್ರಿಯೆ ನೀಡಬೇಕಾದ ಪರಿಪಾಟದ ಕಡೆ ಬೊಟ್ಟು ಮಾಡಿದ್ದು.
ಹೀಗೆ ನನಗೆ ನೀವು ಬರೆದಿದ್ದರಲ್ಲಿ ಕಂಡ ಎಲ್ಲ ಮಿಸ್ಟೇಕುಗಳನ್ನ ಚಾಚೂ ತಪ್ಪದೇ ಲಿಸ್ಟು ಮಾಡಿ ಕೊಡುವೆ. ಯಾಕಂದರೆ ನೀವು ಆರೋಪಿಸಿರುವಂತೆ ನನಗೆ ನಿಮ್ಮನ್ನು, ಅದರಲ್ಲೂ ನಿಮ್ಮ ಹಿಂದುತ್ವವನ್ನು ‘ತಿದ್ದುವುದರಲ್ಲಿ’ ವಿಪರೀತ ಆಸಕ್ತಿಯಿದೆ. ನಿಮ್ಮ ಈ ಅಪ್ಪಟ ಹಿತೈಶಿಯಿಂದ ಈ ಉಪಕಾರಗಳು ನಿಮಗಾಗ ಬ್ಯಾಡವೇ! ಅದಕ್ಕಾಗಿ ನೀವು ಮಾಡಬೇಕಾಗಿರುವುದು ಕೇವಲ “ಪ್ರತೀ ಕಮೆಂಟಿಗೂ ಚಾಚೂ ತಪ್ಪದೇ ಕ್ರಮವಾಗಿ ಪ್ರತಿಕ್ರಿಯಿಸುವುದು” ಅಷ್ಟೇ.
(೧) “ಚರ್ಚಿಸಲು ವಾದಿಗಳಿಗೆ ಅನುಕೂಲವಾಗಲಿ ಎಂದೇ ಹೆಚ್ಚಿನ ಕಾಳಜಿ ತೆಗೆದುಕೊಂಡು ಪ್ರತ್ಯೇಕ-ಪ್ರತ್ಯೇಕವಾಗಿ ವಿವರಿಸಿದ್ದು ಇರುವ ಹತ್ತು ಕಮೆಂಟುಗಳನ್ನ ಸಾರಸಗಟಾಗಿ ಒಂದು ಸಾಲಿನಲ್ಲಿ “ಆಕ್ಷೇಪಣೆಯ ಧ್ವನಿ” ಅಂತ ತಿಪ್ಪೆ ಸಾರಿಸುವುದು..”
ಮತ್ತೊಮ್ಮೆ ನನ್ನ ಪ್ರತಿಕ್ರಿಯೆನ್ನು ನೋಡಿ. ನಾನು ನೀವು ಬರೆದದ್ದೆಲ್ಲವನ್ನೂ ‘ಆಕ್ಷೇಪಣೆ’ ಎಂದು ಕರೆದಿಲ್ಲ. ನೀವು ಬರೆಯುವ ರೀತಿಯಲ್ಲಿ ‘ಆಕ್ಷೇಪಣೆಯ ದ್ವನಿ’ ಇದೆ ಎಂದೆ. ಏಕೆಂದರೆ, ಇದು ಹೀಗೆ ಅಥವಾ ಹೀಗಲ್ಲ ಎಂದು ಚರ್ಚಿಸುವ ಬದಲು, ನೀವು ಮತ್ತೆ ಮತ್ತೆ ನನ್ನಲ್ಲಿರುವ ಯಾವುದೋ ಹುಳುಕನ್ನು ತೆಗೆದು ತೋರಿಸುತ್ತಿದ್ದೀರಿ, ನನ್ನ ಯಾವುದೊ ಹಿಡನ್ ಅಜೆಂಡಾವನ್ನು ಬಯಲು ಮಾಡುತ್ತಿದ್ದೀರಿ ಎನ್ನುವ ಧೋರಣೆಯಲ್ಲೇ ಬರೆಯುತ್ತೀರಿ. ಒಂದೆರಡು ನಿಮ್ಮ ಸಾಲುಗಳನ್ನು ನೋಡಿ: “ವ್ಯಾಖ್ಯಾನಿಸುವ ನಿಯತ್ತು ತೋರಬೇಕಲ್ಲವೇ”; “ನಿಮ್ಮ ಹೊಸ ಐಡಿಯಾಲಜಿಗಳನ್ನ ಥಳುಕುಹಾಕುವುದು ಅಪ್ರಾಮಾಣಿಕವಲ್ಲವೇ?” ಈ ಕೊಂಕಿನ ಮಾತು, ಈ ಧೋರಣೆ ಏಕಾಗಿ? (ಇದನ್ನು ನಾನು “ಆಕ್ಷೇಪಣೆಯ ಧ್ವನಿ” ಎಂದು ಕರೆದದ್ದು.)
ಈ ಧೋರಣೆ ಏಕೆ ಗೊತ್ತಾ… ನಾನು ಮಾಡುತ್ತಿರುವುದು ಹಿಂದುತ್ವಾ ಎನ್ನುವ ಅನೈತಿಕತೆಯ ಸಮರ್ಥನೆ ಎಂಬ ನೋವು ನಿಮಗೆ. ಇಂಥಾ ನೋವಿನಿಂದ ನೀವು ಇಲ್ಲಿ ಬಂದು ಬರೆಯುತ್ತಿದ್ದೀರಿ. ಜಗತ್ತಿಗೆ ನನ್ನ ನಿಜ ಬಣ್ಣ ಬಯಲು ಮಾಡುವ ಆಸೆ ನಿಮಗೆ.
(೨) “ಯಾವ್ಯಾವುದೋ ನಂಬರಿನಲ್ಲಿ ಯಾವ್ಯಾವುದೋ ಪ್ರತಿಕ್ರಿಯೆ ನೀಡುವುದು…”
ಯಾಕೆ ಗೊತ್ತಾ. ನೀವು ಒಂದೇ ವಿಚಾರಗಳನ್ನು ಬೇರೆ ಬೇರೆ ಕಡೆ ಬರೆದಿದ್ದೀರ. ಅದಕ್ಕೆ ಒಂದೇ ಕಡೆ ಉತ್ತರಿಸುವುದು ನನ್ನ ಗುರಿ. ಕೆಲವೊಮ್ಮೆ ನಿಮ್ಮ ಕೊಂಕು ಕೈ ಮೀರಿ ಹೋಗಿದೆ. ಅದಕ್ಕೆ ನಾನು ಪ್ರತಿಕ್ರಿಯೆ ಕೊಟ್ಟಿಲ್ಲ. ನೀವು ಕೆಲವೊಮ್ಮೆ ನಂಬರ್ ಹಾಕದೆ ಕಾಮೆಂಟ್ ಬರೆದಿದ್ದೀರ…
ಅವೆಲ್ಲಾ ಹೋಗಲಿ ಬಿಡಿ. ನನಗೆ ಸರಿಯಾಗಿ ಒಂದೇ ಕಡೆ ಬರೆಯಲು ಬಂದಿಲ್ಲ ಎಂದಿಟ್ಟುಕೊಳ್ಳೋಣ. ಇದಕ್ಕೆ ಹೀಗೆ “ಅಪ್ರಾಮಾಣಿಕ ವರ್ತನೆ ನಿಮಗೆ ಶೋಭೆ ತರುವುದಿಲ್ಲ” ಎಂದು ಬರೆದು ಚರ್ಚೆಯನ್ನು ಬಿಟ್ಟು ಹೋಗುವುದು ಯಾವ ಪ್ರಾಮಾಣಿಕತೆಯ ಪರಿ?
(೩) “ವಿವರಿಸಿದ್ದನ್ನ ವಿವರಿಸಿಲ್ಲ ಎನ್ನುವುದು.. ಹೇಳಿರದಿದ್ದನ್ನ ಹೇಳಿದ್ದೀರಿ ಅನ್ನುವುದು..” ಚರ್ಚೆಯಲ್ಲಿ ಯಾರಾದರೂ ಹೀಗೆ ಮಾಡಿದರೆ ಮೊದಲು ಅದನ್ನು ತೋರಿಸಿಕೊಡ ಬೇಕು. ಅದನ್ನು ಬಿಟ್ಟು ನೀವು ಒಂದೇ ಉಸಿರಿನಲ್ಲಿ ಮನಸೋಇಚ್ಚೆ ಬೈದಿದ್ದೀರ: “ಹೀಗೆ ಉಳಿದವರನ್ನೆಲ್ಲ ಹಾದಿತಪ್ಪಿಸಲು ಧೂಳು ಎಬ್ಬಿಸುವುದು.. ಇದೆಲ್ಲ ತಮ್ಮ ಹುಳುಕುಗಳ ಸಂಪೂರ್ಣ ಅರಿವಿರುವವರು ನುಣುಚಿಕೊಳ್ಳಲು ಯಾವಾಗಿನಿಂದಲೂ ಬಳಸುತ್ತಾ ಬಂದಿರುವ “ಜಾಣಗುರುಡು”, “over-shouting” ಎಂಬಿತ್ಯಾದಿಯಾಗಿರುವ ಹಳೆಯದೊಂದು ಕೆಟಗರಿಯ ಸಾಮಾನ್ಯ ಅಸ್ತ್ರಗಳೇ – ಬೆಕ್ಕು ಕಣ್ಮುಚ್ಚಿಕೊಂಡು ಹಾಲು ಕುಡಿದು ಬೀಗುವಂತಹಾ ಹಳಸಲು ವಿದ್ಯಮಾನವಿದು. ಸಂಶೋಧಕರೆಂದು ಕರೆದುಕೊಳ್ಳುವ ನಿಮ್ಮ ಈ ಅಪ್ರಾಮಾಣಿಕ ವರ್ತನೆ ನಿಮಗೆ ಶೋಭೆ ತರುವುದಿಲ್ಲ.”
(೪) “ಆನ್ಲೈನ್ ಫೊರಂಗಳಲ್ಲಿ ಈ ಥರ ಅಪ್ರಮಾಣಿಕವಾಗಿ ಜಾರಿಕೊಳ್ಲುವುದನ್ನ, ಅನಾವಶ್ಯಕವಾಗಿ ಕಣ್`ಫ್ಯೂಸ್ ಮಾಡುವುದನ್ನ ತಪ್ಪಿಸಲಿಕ್ಕೆ ಅಂತಲೇ ಪ್ರತೀ ಕಮೆಂಟಿಗೂ ಪ್ರತ್ಯೇಕವಾಗಿ ಅದರದ್ದೇ ಆದ ಥ್ರೆಡ್ನಲ್ಲಿ ಪ್ರತಿಕ್ರಿಯೆಮಾಡುವ ಸವಲತ್ತನ್ನ ಇಡಲಾಗಿರುತ್ತೆ.
ನಾನು ನೀಡಿದ ಪ್ರತಿಕ್ರಿಯೆಗಳಿಗೆ ನಿಮ್ಮ ಬಳಿ ಪ್ರತಿ-ಪ್ರತಿಕ್ರಿಯೆಗಳು ಇರುವುದೇ ಹೌದಾದಲ್ಲಿ ಯಾಕೆ ಪ್ರತೀ ಕಮೆಂಟಿಗೂ ಪ್ರಾಮಾಣಿಕವಾಗಿ ಪ್ರತ್ಯೇಕ ಪ್ರತ್ಯೇಕವಾಗಿ ಅಲ್ಲೇ ಅದರ ಥ್ರೆಡ್ ನಲ್ಲೇ ಪಾಯಿಂಟ್-ಟು-ಪಾಯಿಂಟ್ ಪ್ರತಿ-ಪ್ರತಿಕ್ರಿಯಿಸಿ ವಿವರಿಸಬಾರದು? ಹಾಗೆ ಮಾಡಿ, ಆವಾಗ ನಾನೂ ಆಯಾಯಾ ಥ್ರೆಡ್ಗಳಲ್ಲೇ ಪ್ರತಿಕ್ರಿಯೆ ನೀಡುವುದನ್ನ ಮುಂದುವರಿಸುತ್ತೇನೆ.”
ನಾವು ಪ್ರತಿಕ್ರಿಯೆ ಹೇಗೆ ಕೊಟ್ಟರೆ ಸರಿ ಎನ್ನುವುದರ ಕುರಿತು ನಿಲುಮೆ ಹೇಳುವುದಿಲ್ಲ. ಈ ಕುರಿತು ನಾವಿಬ್ಬರೂ ಒಂದು ನಿರ್ಣಯಕ್ಕೆ ಬಂದವರೂ ಅಲ್ಲ. ಅಂದಮೇಲೆ, ಪ್ರತಿಕ್ರಿಯೆ ಕೊಡುವುದು ನಮ್ಮ ನಮ್ಮ ಶೈಲಿಗೆ ಸಂಬಂಧಿಸಿದ ವಿಚಾರ. ನಿಮಗೆ ನಿಮ್ಮ ಶೈಲಿಯೇ ಸರಿ ಎನಿಸಿದರೆ ಅದನ್ನೇ ಬಳಸೋಣ ಎಂದು ಆಹ್ವಾನಿಸುವುದು ಒಂದು ದಾರಿ. ನೀವು ಅದನ್ನು ಮಾಡಿದ್ದೀರಾ? ಇಲ್ಲ. ಅದೆಲ್ಲಾ ಬಿಟ್ಟು ಒಮ್ಮೆಲೆ, ನನ್ನ ಮೇಲೆ ಇಲ್ಲದ ಆಪಾದನೆಗಳನ್ನು ಮಾಡುತ್ತೀರಾ: ಕಣ್`ಫ್ಯೂಸ್ ಮಾಡುವುದು; ಅಪ್ರಮಾಣಿಕತೆ; ಜಾರಿಕೊಳ್ಳುವುದು; ನಿಮಗೆ ಅಂತಹಾ ಪ್ರಾಮಾಣಿಕತೆಯಲ್ಲಿ ಆಸಕ್ತಿಯಿಲ್ಲ….
(೫) ಇಷ್ಟು ಸಾಲಲಿಲ್ಲ ಎಂದು ನಿಮ್ಮ ಕಡೆಯ potshot ಕೊಡುವ ಪ್ರಯತ್ನ: ““ಕೊನೇ ಮಾತನ್ನ ಹೇಳುವ ಅವಕಾಶ ಉಂಟುಮಾಡಿಕೊಂಡ ಮಾತ್ರಕ್ಕೇ ಒಬ್ಬರು ಹೇಳಿದ್ದೆಲ್ಲ ಸತ್ಯವಾಯಿತು” ಅಂತ ತಪ್ಪು ತಿಳಿದು ಬಿಡುವಷ್ಟು ಮುಗ್ಧರು ನಿಲುಮೆಯ ಓದುಗರಲ್ಲ ಅನ್ನುವ ನಂಬಿಕೆಯಲ್ಲಿ ಪ್ರತಿಕ್ರಿಯಿಸುವುದನ್ನ ನಾನು ಇಲ್ಲಿಗೇ ಮೊಟಕು ಮಾಡುತ್ತೇನೆ.”
ನಿಮ್ಮ ಇಷ್ಟುದ್ದದ ಪ್ರತಿಕ್ರಿಯಲ್ಲಿ ನನ್ನ ಹಿಂದಿನ ಪ್ರತಿಕ್ರಿಯೆಗೆ ಯಾವ ಉತ್ತರವೂ ಇಲ್ಲ. ಇದು ನಿಮ್ಮ ಚರ್ಚೆಯ ಮಾದರಿ. ನಾನು ಚರ್ಚೆಯನ್ನು ಬಿಟ್ಟು ಹೋಗುತ್ತಿಲ್ಲ. ನೀವು ಮತ್ತೊಮ್ಮೆ, ಮತ್ತೊಂದು ಹೆಸರಿನಲ್ಲಿ ಬರುವತನಕ ಸಂತೋಷ ಆನಂದ-ದಿಂದ ಕಾಯುತ್ತಿರುತ್ತೇನೆ.
“…ನಿಮ್ಮ ಇಷ್ಟುದ್ದದ ಪ್ರತಿಕ್ರಿಯಲ್ಲಿ ನನ್ನ ಹಿಂದಿನ ಪ್ರತಿಕ್ರಿಯೆಗೆ ಯಾವ ಉತ್ತರವೂ ಇಲ್ಲ. ಇದು ನಿಮ್ಮ ಚರ್ಚೆಯ ಮಾದರಿ….”
ಸ್ವಾಮಿ, ಮೊದಲು ನನ್ನ ಎರಡನೇ ಸುತ್ತಿನ ಹತ್ತೂ ಪ್ರತಿಕ್ರಿಯೆಗಳಿಗೆ ಉತ್ತರಿಸಿ. ಆಮೇಲೆ ನಾನು ನಿಮ್ಮ ಎರಡನೇ ಸುತ್ತಿನ ಅರೆಬರೆ ಪ್ರತಿಕ್ರಿಯೆಗಳಿಗೂ ಅದರಲ್ಲಿನ ಎಲ್ಲ ಹೊಸ ಹೊಸ ಹೇಳಿಕೆ-ಆರೋಪಗಳಿಗೂ ನನ್ನ ಉತ್ತರ ಏನು ಅನ್ನುವುದನ್ನ ತಿಳಿಸುತ್ತೇನೆ.
ಇದು ಪ್ರತಿಷ್ಠೆಯ ಸಮರವಲ್ಲವಾದ್ದರಿಂದ, ನಿಮಗೆ ಇಷ್ಟವಾದ ಮಾದರಿಯಲ್ಲೇ ಆಯಾ ಕಾಮೆಂಟಿಗೆ ಅಲ್ಲೇ ಉತ್ತರಿಸುತ್ತೇನೆ. ಆದರೆ, ನೆನಪಿರಲಿ, ೪/೫ ಕಾಮೆಂಟ್ ಬರುವಷ್ಟರಲ್ಲಿ ಕಾಮೆಂಟ್ ಕಾಣಿಸಿಕೊಳ್ಳುವ ಸ್ಥಳ ಸಣ್ಣದಾಗುತ್ತಾ ಹೋಗಿ, ನನ್ನ ಪುಟ್ಟ ಲ್ಯಾಪ್ಟಾಪ್ ನಲ್ಲಿ ಅದನ್ನು ಓದುವುದು/ಬರೆಯುವುದು ದುಸ್ತರವಾಗುತ್ತದೆ.
ನೀವು ಹೇಳಿದಂತೆ ಆಯಾ ಕಾಮೆಂಟ್ ಗಳಿಗೆ ಅಲ್ಲಲ್ಲೇ ಉತ್ತರಿಸಲು ಪ್ರಯತ್ನಿಸಿದೆ. ಆದರೆ ಪ್ರತಿಕ್ರಿಯೆಗಳು ನೂರೆಂಟು ಕಡೆ ಚೆಲ್ಲಾಪಿಲ್ಲಿಯಾಗಿ ಅವು ಕೈಗೆಟಕುವುದೇ ಇಲ್ಲ. ಆದ್ದರಿಂದ ಮುಂದಿನ ಬಾರಿ ನಾನು ನನ್ನ ಹಳೆಯ ಶೈಲಿಯಲ್ಲೇ ಉತ್ತರಿಸುತ್ತೇನೆ. ಅದು ಅತ್ಯಂತ ಅಪ್ರಾಮಾಣಿಕ ವಿಚಾರ ಎಂದು ನಿಮಗೆ ಅನಿಸಿದರೂ ಸಹ…