ವಿಷಯದ ವಿವರಗಳಿಗೆ ದಾಟಿರಿ

ಫೆಬ್ರವರಿ 3, 2015

3

ದಿನೇಶ್ ಅಮಿನ್ ಮಟ್ಟು ಅವರಿಗೊಂದು ಬಹಿರಂಗ ಪತ್ರ

‍ನಿಲುಮೆ ಮೂಲಕ

– ಡಾ.ಟಿ.ಎನ್ ವಾಸುದೇವ ಮೂರ್ತಿ

Amin Mattuನಿಂದಂತಿ ತುಣ್ಹೀಮಾಸೀನಙï ನಿಂದಂತಿ ಬಹುಭಾಣೀನಙï |

ಮಿತಭಾಣಿನಂ ಪಿ ನಿಂದಂತಿ ನತ್ಥಿ ಲೋಕೇ ಅನಿಂದಿತೋ ||

(ಧಮ್ಮಪದ, ಕೋಧವಗ್ಗ 227)

(ಲೋಕದ ಜನ ಸುಮ್ಮನಿರುವವರನ್ನೂ ನಿಂದಿಸುವರು, ಹೆಚ್ಚು ಮಾತನಾಡುವವರನ್ನೂ ನಿಂದಿಸುವರು, ಮಿತಭಾಷಿಗಳನ್ನೂ ನಿಂದಿಸುವರು ಲೋಕದ ಜನರಿಂದ ನಿಂದನೆಗೆ ಒಳಗಾಗದವರೇ ಇಲ್ಲ)

ಮುಖವಿಲ್ಲದವರ ನಿಂದನೆಯ ಮಾತುಗಳಿಂದ ವಿಚಲಿತರಾಗಿರುವ ದಿನೇಶ್ ಅಮಿನ್ ಮಟ್ಟು ಅವರು ‘ನಿಲುಮೆ’ ಜಾಲತಾಣದ ಮೇಲೆ ದೂರು ನೀಡಿರುವುದಲ್ಲದೆ ಅದನ್ನು ಮುಚ್ಚಿಸಲು ಮುಂದಾಗಿರುವುದು ದುರದೃಷ್ಟಕರ. ಅವರ ಈ ಅಸಹನೆ ‘ಸಂತೆಯೊಳಗೆ ಮನೆಯ ಮಾಡಿ ಶಬ್ದಕ್ಕೆ ನಾಚಿದರೆಂತಯ್ಯ’ ಎಂಬ ಅಕ್ಕನ ಮಾತುಗಳನ್ನು ನೆನಪಿಸುತ್ತದೆ.

ದಿನೇಶ್ ಅಮೀನ್ ಮಟ್ಟು “ಪತ್ರಿಕೋದ್ಯಮವು ಜಾಹಿರಾತಿನ ಹಂಗಿಗೊಳಗಾಗಿರುವುದರಿಂದ ಫೇಸ್‍ಬುಕ್‍ನಂತಹ ಸಾಮಾಜಿಕ ಜಾಲತಾಣಗಳು ಭರವಸೆಯ ಅಭಿವ್ಯಕ್ತಿ ಮಾಧ್ಯಮವಾಗಬಲ್ಲದು” ಎಂಬ ಆಶಾವಾದ ವ್ಯಕ್ತಪಡಿಸುತ್ತಾರೆ.

ಆದರೆ ಸಾಮಾಜಿಕ ಜಾಲತಾಣ ವೃತ್ತಿಪರ ಪತ್ರಿಕೋದ್ಯಮಕ್ಕೆ ಪರ್ಯಾಯವಾಗಬಲ್ಲದೇ ಎಂಬ ಪ್ರಶ್ನೆ ಇನ್ನೂ ಬಗೆಹರಿಯದೆ ಅದೊಂದು ಚರ್ಚೆಯ ವಿಷಯವಾಗಿದೆ. ಸದ್ಯಕ್ಕೆ ಮುಖವಿಲ್ಲದವರಿಂದ ತಮಗಾದ ತೇಜೋವಧೆಯನ್ನು ಮರೆಮಾಚಿ, ತಾವು ನೀಡಿರುವ ಪೊಲೀಸ್ ದೂರಿನ ಸಮರ್ಥನೆಗೆ ಒಂದು ಗುರಾಣಿಯಂತೆ ಅವರು ಸದರಿ ಅಭಿಪ್ರಾಯವನ್ನು ಪ್ರಚಾರ ಮಾಡಿಕೊಂಡಿರುವಂತೆ ಮೇಲ್ನೋಟಕ್ಕೆ ಭಾಸವಾಗುತ್ತದೆ. ಅಷ್ಟಕ್ಕೂ ಅದೇನೂ ತೇಜೋವಧೆಯಲ್ಲ, ವಿವೇಕಾನಂದರ ಕುರಿತು ಅವರು ಬರೆದದ್ದು ಅನ್ಯ ಲೇಖಕನೊಬ್ಬನ ಅನುವಾದಿತ ಸಾಲುಗಳೇ ವಿನಾ ಅದೇನೂ ಅವರ ವ್ಯಕ್ತಿಗತ ಅಭಿಪ್ರಾಯವಲ್ಲ ಎಂಬ ಅರಿವಿರದ ಓದುಗರು ಮಾಡುವ ಬುಡವಿರದ ಆರೋಪಗಳನ್ನು ತೇಜೋವಧೆ ಎಂದೇಕೆ ಭಾವಿಸಬೇಕು? “ಒಂದು ಜಾಲತಾಣವನ್ನು ವಾಮಮಾರ್ಗದಿಂದಲೇ ಹೊಸಕಬಲ್ಲೆನಾದರೂ ನೇರವಾಗಿಯೇ ಅದರ ವಿರುದ್ಧ ಧ್ವನಿಯೆತ್ತಿದ್ದೇನೆ” ಎಂಬರ್ಥದ ಅವರ ಮಾತುಗಳಲ್ಲಿ ಅವರ ಪ್ರಾಮಾಣಿಕತೆ ಮತ್ತು ಸಾಚಾತನ ವಾಚ್ಯವಾಗಿ ಪ್ರದರ್ಶಿತವಾಗುತ್ತಿದ್ದರೂ ಆ ಮಾತುಗಳ ಹಿಂದೆ ಕ್ರೌರ್ಯವೇ ಇಣುಕುತ್ತಿರುವಂತೆ ಕಾಣಿಸುತ್ತದೆ. ಪತ್ರಿಕೋದ್ಯಮದ ವಿದ್ಯಾರ್ಥಿಗಳಿಗೆ “ನಿನ್ನ ಅಭಿಪ್ರಾಯದೊಂದಿಗೆ ನನ್ನ ಸಹಮತವಿಲ್ಲದಿದ್ದರೂ ನಿನ್ನ ಅಭಿಪ್ರಾಯವನ್ನು ಹತ್ತಿಕ್ಕುವ ಶಕ್ತಿಗಳ ವಿರುದ್ಧ ಪ್ರಾಣವನ್ನೇ ಪಣವಿತ್ತು ಹೋರಾಡುತ್ತೇನೆ” ಎಂಬ ವೋಲ್ಟೈರ್‍ನ ಮಾತುಗಳನ್ನು ಕಲಿಸುವ ಹಿರಿಯರು ಇಂತಹ ಕಠಿಣಕ್ರಮಕ್ಕೆ ಮುಂದಾಗುವಂತೆ ಪ್ರೇರೇಪಿಸಿರುವ ಬೆಳವಣಿಗೆಗಳನ್ನು ಕಂಡು ದಿಗಿಲಾಗುತ್ತದೆ.

ನಿಂದಕರ ಪರಂಪರೆ ಎಂಬುದು ಇತ್ತೀಚೆಗೆ, ಈ ಮಾಹಿತಿ ತಂತ್ರಜ್ಞಾನ ಯುಗದಲ್ಲಷ್ಟೇ, ಪ್ರಾರಂಭವಾಗಿದೆ ಎಂದು ದಿನೇಶ್ ಅಮೀನ್ ಮಟ್ಟು ಅವರು ಭಾವಿಸಿದಂತಿದೆ. ಈ ಪರಂಪರೆಗೆ ಗೌತಮ ಬುದ್ಧನಷ್ಟೇ ಪ್ರಾಚೀನವಾದ ಇತಿಹಾಸವಿದೆ ಎಂಬುದನ್ನು ಅವರು ಬಹುಶಃ ಮರೆತಿರಬಹುದು. ಬುದ್ಧನೂ ನಿಂದಕರ ಅವಹೇಳನಕ್ಕೆ ಗುರಿಯಾಗಿದ್ದನೆನಿಸುತ್ತದೆ. ಹಾಗಲ್ಲದೆ ಅವನು ಮೇಲಿನ (ಧಮ್ಮಪದದ) ಮಾತುಗಳನ್ನು ಆಡುತ್ತಿರಲಿಲ್ಲ. ಬರೀ ನಿಂದನೆಯಷ್ಟೇ ಅಲ್ಲ, ಅವನ ಮೇಲೆ ಕಲ್ಲು ತೂರಾಟ ನಡೆಸಿದ, ವಿಷಪ್ರಾಶನಕ್ಕೆ ಪ್ರಯತ್ನಿಸಿದ ಉದಾಹರಣೆಗಳು ಬುದ್ಧ ಚರಿತೆಗಳಲ್ಲಿ ಸಿಗುತ್ತವೆ. ಹಾಗೆಯೇ ಮಹಾವೀರನನ್ನೂ ನಮ್ಮ ಜನ ನಿಂದಿಸಿದ್ದರು, ಅವನ ಮೇಲೆ ದೈಹಿಕವಾಗಿ ಹಲ್ಲೆ, ಆಕ್ರಮಣಗಳನ್ನು ನಡೆಸಿದ್ದರು. ಅಷ್ಟು ಹಿಂದೆ ಏಕೆ ಹೋಗಬೇಕು, ನಮ್ಮ ಕಾಲದಲ್ಲೂ (ಫೇಸ್ ಬುಕ್, ಗೂಗಲ್ ಇತ್ಯಾದಿಗಳು ಇರದಿದ್ದ ದಿನಗಳಲ್ಲಿ) ಇಂತಹ ಪುಂಡರು ಪಿ. ಲಂಕೇಶರಂತಹ ಪ್ರತಿಭಾವಂತ ಪತ್ರಿಕೋದ್ಯಮಿಯ ಮೇಲೂ ತೀವ್ರವಾದ ವಾಗ್ದಾಳಿ ನಡೆಸಿದ್ದರು, ಅವರ ಕಚೇರಿಗೆ ಹಲವು ಸಲ ನುಗ್ಗಿ ಅವರ ಮೇಲೆ ಪ್ರಾಣಾಂತಿಕವಾಗಿ ಹಲ್ಲೆ ನಡೆಸಿದ್ದರು. ಆದರೆ ನಮಗೆ ತಿಳಿದಂತೆ ಲಂಕೇಶ್ ಮೇಷ್ಟರು ಅಂತಹ ಪುಂಡ ಪೋಕರಿಗಳಿಗೆ ಪಾಠ ಕಲಿಸುವ ಶಿಕ್ಷಕನೆಂದು ಹೇಳಿಕೊಂಡು ಕಾನೂನಿನ ನೆರವು ಅಥವಾ ಪ್ರಭಾವವನ್ನು ಎಂದೂ ಬಳಸಿಕೊಳ್ಳಲಿಲ್ಲ ಅಥವಾ ಬುದ್ಧ ತನ್ನನ್ನು ನಿಂದಿಸಿದವರ ವಿರುದ್ಧ ಅಂದಿನ ಪ್ರಭುತ್ವದ ಬಳಿ ದೂರು ಅಹವಾಲುಗಳನ್ನು ತೆಗೆದುಕೊಂಡು ಹೋಗಲಿಲ್ಲ. ಹಾಗೆ ನೋಡಿದರೆ ಅಜಾತಶತ್ರು, ಪ್ರಸೇನಜಿತ ಮೊದಲಾದ ಅಂದಿನ ಶಕ್ತಿಶಾಲೀ ದೊರೆಗಳು ಬುದ್ಧನ ಮಾತುಗಳನ್ನು ಶಿರಸಾವಹಿಸಿ ಪಾಲಿಸಬಲ್ಲ ಅವನ ಶಿಷ್ಯರುಗಳಾಗಿದ್ದರು.

“ನಾವು ಬದುಕುತ್ತಿರುವ ಸಮಾಜದಲ್ಲಿ ಬರೀ ಮನುಷ್ಯರಷ್ಟೇ ಅಲ್ಲ ಮನುಷ್ಯ ರೂಪ ತೊಟ್ಟ ಮೃಗಗಳೂ ವಾಸಿಸುತ್ತಿವೆ” ಎಂಬ ಫ್ರೆಡರಿಕ್ ನೀಷೆಯ (ದಸ್ ಸ್ಪೋಕ್ ಝರತುಷ್ಟ್ರ ಭಾಗ 2) ಮಾತುಗಳನ್ನು ಸಾಮಾಜಿಕ ಜೀವನ ನಡೆಸುವ ಬುದ್ಧಿಜೀವಿಗಳು ಎಂದಿಗೂ ಮರೆಯಬಾರದು. ಅಂತಹ ಮೃಗಗಳನ್ನು ಮನುಷ್ಯರನ್ನಾಗಿ ಪರಿವರ್ತಿಸಲೆಂದೇ ಅಲ್ಲವೇ ನಮ್ಮ ಬುದ್ಧಿಜೀವಿಗಳು ಸಾರ್ವಜನಿಕ ಜೀವನಕ್ಕೆ ಪಾದಾರ್ಪಣೆ ಮಾಡಿರುವುದು? ನಮ್ಮ ನಡುವಿನ ಸಮಸ್ತ ಸಾರ್ವಜನಿಕರೂ ಮನುಷ್ಯ ಸಂವೇದನೆಯುಳ್ಳ ಸಹೃದಯರೇ ಆಗಿದ್ದರೆ ಅವರಿಗೆ ಸಾರ್ವಜನಿಕ ಬದುಕಿನ ಉಪದ್ವ್ಯಾಪವಾದರೂ ಏಕೆ? ಖಾಸಗಿಯಾಗಿ ಇದ್ದುಬಿಡಬಹುದಲ್ಲ! ಆದರೆ ಲಂಕೇಶರಂಥವರಿಗೆ ಹಾಗೆ ಇರಲು ಸಾಧ್ಯವಾಗದೇ ತಮ್ಮ ಟೀಕೆ ಟಿಪ್ಪಣಿಗಳಲ್ಲಿ “ಸುಮ್ಮನೆ ಖಾಸಗಿಯಾಗಿ ಇದ್ದುಬಿಡಬೇಕು” ಎಂದು ಪದೇ ಪದೇ ಕನವರಿಸುತ್ತಿದ್ದರು.

ಈ ಒಟ್ಟು ಪ್ರಸಂಗವನ್ನು ಅವಲೋಕಿಸಿದರೆ “ಜಟ್ಟಿ ಚಲ್ಲಣ ತೊಟ್ಟು ಅಖಾಡಕ್ಕಿಳಿದರೆ ನಾವು ಅವನೊಂದಿಗೆ ಕುಸ್ತಿ ಮಾಡಬಹುದು, ಹಾಗಲ್ಲದೆ ಅವನು ತನ್ನ ಚೆಲ್ಲಣವನ್ನೂ ಬಿಚ್ಚಿ ಬರೀ ಬೆತ್ತಲೆಯಾಗಿ ನಮ್ಮ ಮುಂದೆ ನಿಂತರೆ ಮಾನವಂತನಾದವರು ಅಖಾಡದಿಂದ ಹಿಂದಕ್ಕೆ ಸರಿಯುತ್ತಾರೆ” ಎಂಬ ಕುವೆಂಪು ಅವರ ಮಾತುಗಳು ನೆನಪಾಗುತ್ತದೆ. ಈ ಹಿಂದೆ ದೇವನೂರು ಮಹಾದೇವ ಅವರೂ ಸಾಮಾಜಿಕ ಜಾಲತಾಣಗಳಲ್ಲಿ ಇದೇ ತರಹದ ವಾಗ್ದಾಳಿ ಅನುಭವಿಸಿದ್ದರು. ಆಗ ದೇವನೂರರು “ನನ್ನನ್ನು ಟೀಕಿಸುವವರ ಹೆಸರು, ಚಹರೆ, ವಿಳಾಸ, ಇತ್ಯಾದಿಗಳಿದ್ದರೆ ನಾನು ಅವರೊಡನೆ ವಾಗ್ವಾದ ಮುಂದುವರಿಸಬಲ್ಲೆ, ಆದರೆ ಗುಂಪಿನ ಮಧ್ಯದಿಂದ ಕಲ್ಲೆಸೆಯುವಂತೆ ಅನಾಮಿಕ ಕಾಮೆಂಟುದಾರರು ವರ್ತಿಸುವುದಾದರೆ ನಾನಂತೂ ಇದರಲ್ಲಿ ಪಾಲ್ಗೊಳ್ಳಲಾರೆ” ಎನ್ನುತ್ತಾ ಹಿಂದೆ ಸರಿದಿದ್ದರೇ ವಿನಾ ಎಲ್ಲ ಜಾಲತಾಣಗಳೂ ತಾನು ಸೂಚಿಸಿದ ಮಾನದಂಡಗಳಿಗೆ ಅನುಗುಣವಾಗಿಯೇ ನಡೆಯಬೇಕು ಎಂಬ ಹಟಮಾರಿತನವನ್ನಾಗಲಿ ಅಥವಾ ಅದನ್ನು ಮುಚ್ಚಿಬಿಡಬೇಕು ಎಂಬ ಧೂರ್ತತನವನ್ನಾಗಲಿ ತೋರಿಸಲಿಲ್ಲ. ಮೊನ್ನೆಯಷ್ಟೇ ತಮಿಳು ಲೇಖಕ ಪೆರುಮಾಳ್ ಮುರುಗನ್, ಹಾಗೆಯೇ ನಮ್ಮ ಕವಯಿತ್ರಿ ಚೇತನಾ ತೀರ್ಥಹಳ್ಳಿ, ಮೊದಲಾವರೂ ಇಂತಹ ತುರುಚೆ ಹುಟ್ಟಿಸುವ ಕಾಮೆಂಟುಗಳ ದಾಳಿಗೆ ಬೇಸತ್ತು ಇದೇ ರೀತಿ ಹಿಂದೆ ಸರಿದಿದ್ದರು.

ಪೆರುಮಾಳ್ ಮುರುಗನ್‍ರಂತೂ ಸಾಹಿತ್ಯ ಲೋಕಕ್ಕೇ ಕೊನೆಯ ನಮಸ್ಕಾರ ಹೇಳಿರುವುದು ನಮ್ಮ ಸಂಸ್ಕøತಿ ಚಿಂತನೆಗೆ ತುಂಬಲಾರದ ನಷ್ಟವಾಗಿದೆ. ಅವರ ಈ ತೀರ್ಮಾನ ಅವರ ನೂರು ಬರವಣಿಗೆಗಿಂತಲೂ ಹೆಚ್ಚಿನ ಸಂಚಲನ ಉಂಟು ಮಾಡಲಿದೆ. ಕಂದಾಚಾರದವರು ತಮ್ಮಿಂದಾದ ಅಚಾತುರ್ಯವನ್ನು ಮನಗಾಣುವಂತಹ ಅವಕಾಶವನ್ನು ಇಂದಲ್ಲ ನಾಳೆ ಆ ಸಂಚಲನ ಸೃಷ್ಟಿಸಲಿದೆ. (ಇದು ಬೇರೆಯದೇ ಚರ್ಚೆಯಾದ ಕಾರಣ ಇಲ್ಲಿ ಅದನ್ನು ವಿಸ್ತರಿಸುವುದು ಅನುಚಿತ)

ಸಾಮಾಜಿಕ ಜಾಲತಾಣದಲ್ಲಿ ನಡೆಯುವ ಕಾಮೆಂಟು ಪ್ರತಿಕಾಮೆಂಟುಗಳಿಗೆ ಕಿಲುಬು ಕಾಸಿನ ಬೆಲೆಯನ್ನೂ ನೀಡಲಾಗುವುದಿಲ್ಲ ಎಂದು ಸರ್ವೋಚ್ಚ ನ್ಯಾಯಾಲಯವೇ ತೀರ್ಪು ನೀಡಿದ ಮೇಲೆ ದಿನೇಶ್ ಅವರು ತಮ್ಮ ಅಪೇಕ್ಷೆ, ಮಾನದಂಡಗಳಿಗೆ ಅನುಗುಣವಾಗಿಯೇ ಕಾಮೆಂಟು ಪ್ರತಿ ಕಾಮೆಂಟುಗಳು ನಡೆಯಬೇಕು ಎಂದು ಬಯಸಿದರೆ ಅದನ್ನು ಮೊಂಡುತನವೆನ್ನದೇ ಬೇರೆ ಮತ್ತಾವ ಸೌಮ್ಯವಾದ ಪದವನ್ನು ಬಳಸುವುದು? ಇನ್ನೂ ಸೌಮ್ಯವಾದ ಪದವೇನಾದರೂ ಅದನ್ನು ಅವರೇ ಸೂಚಿಸಬೇಕು.

ವ್ಯಕ್ತಿಗತ ನಿಂದನೆ, ಅವಹೇಳನಗಳು ಲೋಕದ ಜನರನ್ನು ಸತ್ಯಾಸತ್ಯತೆಯ ಕಡೆಗೆ ಮುಖ ಮಾಡಲು ಪ್ರೇರೇಪಿಸುವುದೇ ವಿನಾ ಅದರಿಂದ ಸತ್ಯಕ್ಕೆ ಹಾನಿಯಾಗದು, ಹೆಚ್ಚೆಂದರೆ ನಮ್ಮ ಅಹಮಿಕೆಗೆ ತಾತ್ಕಾಲಿಕವಾಗಿ ತೇಜೋವಧೆಯಾಗಬಹುದು. ಅಹಮಿಕೆ ಎಂಬುದೇ ಒಂದು ಹುಸಿ ಎಂದು ಅರಿತುದರಿಂದಲೇ ಬುದ್ಧ ಅಥವಾ ಗಾಂಧಿ ಇಂತಹ ಲೋಕ ನಿಂದನೆಗೆ ತಲೆಕೆಡಿಸಿಕೊಳ್ಳದೆ ಅಬಾಧಿತವಾಗಿ ಸಾಮಾಜಿಕ ಜೀವನ ನಡೆಸುತ್ತ ಕೊನೆತನಕ ಕ್ರಿಯಾಶೀಲರಾಗಿ ಉಳಿದಿದ್ದರು. ಇಂದು ಅವರುಗಳನ್ನು ಆದರ್ಶಪ್ರಾಯವೆಂದು ಭಾವಿಸುವ ನಮ್ಮ ಸಾಮಾಜಿಕ ಚಿಂತಕರು ಅಂತಹುದೊಂದು ಅಹಂಶೂನ್ಯತೆಯನ್ನು ಮೊದಲು ಸಿದ್ಧಿಸಿಕೊಂಡು ಬಳಿಕ ಸಾರ್ವಜನಿಕ ಬದುಕಿನಲ್ಲಿ ತಮ್ಮನ್ನು ಕ್ರಿಯಾಶೀಲವಾಗಿ ತೊಡಗಿಸಿಕೊಳ್ಳಬೇಕಾಗುತ್ತದೆ. ಹಾಗಾದಾಗ ಮಾತ್ರ ಸಮಾಜಕ್ಕೆ ಅಂಥವರಿಂದ ಅರ್ಥಪೂರ್ಣವಾದ ಕೊಡುಗೆಗಳು ಸಿಗಬಲ್ಲವು.

CSLC ಮುಚ್ಚಿಸಿದ ಅಹಮಿಕೆ, ಪಾಳೇಗಾರಿಕೆಗಳೇ ಮತ್ತೆ ಮರುಕಳಿಸಿದಲ್ಲಿ ಪ್ರಗತಿಪರರಿಗೆ ಹತ್ತಿರುವ ಕಳಂಕಗಳ ಪಟ್ಟಿಗೆ ಮತ್ತೊಂದು ಸೇರ್ಪಡೆಯಾಗುತ್ತದೆ. ಪ್ರಗತಿಪರರೆನಿಸಿಕೊಂಡವರು ಜ್ಞಾನದ ಹುಡುಕಾಟಕ್ಕೆ ಬೆಳಕು ತೋರಿಸಬೇಕೇ ವಿನಾ ಆ ಹುಡುಕಾಟವನ್ನೇ ಹತ್ತಿಕ್ಕಬಾರದು. ಒಂದು ವೇಳೆ ಆ ಹುಡುಕಾಟ ಬರೀ ಲೊಳಲೊಟ್ಟೆ ಎಂಬ ಅವರ ತೀರ್ಮಾನವೇ ನಿಜವಾದಲ್ಲಿ ಆ ಹುಡುಕಾಟ ತಾನಾಗೇ ಬಿದ್ದುಹೋಗುತ್ತದೆ, ಯಾರೂ ಅದನ್ನು ಪ್ರಯತ್ನ ಪಟ್ಟು ಬೀಳಿಸಬೇಕಾದ ಅವಶ್ಯಕತೆಯಿಲ್ಲ .

ಚಿತ್ರಕೃಪೆ : ಮಟ್ಟು ಅವರ ಫೇಸ್ಬುಕ್ ಪ್ರೊಫೈಲ್

3 ಟಿಪ್ಪಣಿಗಳು Post a comment
 1. simha s n
  ಫೆಬ್ರ 3 2015

  ಈ ಮಟ್ಟು ಯಾರು ಎನ್ನುವುದು ನಮಗೆ ಈ ವರೆಗೆ ತಿಳಿದಿರಲಿಲ್ಲ . ಕ್ಷುದ್ರರನ್ನೆಲ್ಲ ಬುದ್ಧನಿಗೆ ಹೋಲಿಸಿ ಎತ್ತರಿಸುವುದೇಕೆ !

  ಉತ್ತರ
 2. kavinagaraj
  ಫೆಬ್ರ 3 2015

  ಮುಖ ಸ್ವಭಾವವನ್ನು ಬಿಂಬಿಸುತ್ತದೆ ಅನ್ನತ್ತಾರೆ. ಮಟ್ಟು ಭಾವಚಿತ್ರದಲ್ಲಿ ಕ್ರೌರ್ಯ ಎದ್ದು ಕಾಣುತ್ತಿದೆ!

  ಉತ್ತರ
 3. ಫೆಬ್ರ 3 2015

  ಪ್ರಗತಿಪರರೆನಿಸಿಕೊಂಡವರು ಜ್ಞಾನದ ಹುಡುಕಾಟಕ್ಕೆ ಬೆಳಕು ತೋರಿಸಬೇಕೇ ವಿನಾ ಆ ಹುಡುಕಾಟವನ್ನೇ ಹತ್ತಿಕ್ಕಬಾರದು

  ಉತ್ತರ

ನಿಮ್ಮ ಅನಿಸಿಕೆ...

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Note: HTML is allowed. Your email address will never be published.

Subscribe to comments