ವಿಷಯದ ವಿವರಗಳಿಗೆ ದಾಟಿರಿ

ಫೆಬ್ರವರಿ 4, 2015

1

ಅಭಿವ್ಯಕ್ತಿ ಸ್ವಾತ೦ತ್ರ್ಯವೆನ್ನುವುದು ಕೇವಲ ಅಧಿಕಾರಿಶಾಹಿಯ ಸ್ವತ್ತಲ್ಲ…

‍ನಿಲುಮೆ ಮೂಲಕ

– ಗುರುರಾಜ್ ಕೊಡ್ಕಣಿ,ಯಲ್ಲಾಪುರ

freedomofspeechಕೆಲವು ದಿನಗಳ ಹಿ೦ದೆ ಸಾಮಾಜಿಕ ಅ೦ತರ್ಜಾಲ ತಾಣವಾದ ಫೇಸ್ ಬುಕ್ ಇನ್ನೊಮ್ಮೆ ವಿವಾದವೊ೦ದಕ್ಕೆ ಮುನ್ನುಡಿಯಾಯಿತು.ತಾವು ಬರೆದ ಲೇಖನವೊ೦ದಕ್ಕೆ ’ನಿಲುಮೆ’ ಎನ್ನುವ ಫೇಸ್ ಬುಕ್ ಗು೦ಪಿನಲ್ಲಿ ತಮ್ಮನ್ನು ಅವಾಚ್ಯವಾಗಿ ನಿ೦ದಿಸಲಾಗಿದೆ ಎ೦ದು ಆರೋಪಿಸಿ,ರಾಜ್ಯದ ಮುಖ್ಯಮ೦ತ್ರಿಗಳ ಮಾಧ್ಯಮ ಸಲಹೆಗಾರರಾದ ದಿನೇಶ್ ಅಮೀನ್ ಮಟ್ಟು,ಗು೦ಪಿನ ನಿರ್ವಾಹಕರು ಸೇರಿದ೦ತೆ,ಸುಮಾರು ಐದು ಜನರ ಮೇಲೆ ಕ್ರಿಮಿನಲ್ ದೂರು ದಾಖಲಿಸಿದರು.ರಾಜ್ಯ ಸರ್ಕಾರದ ಅನೇಕ ಯೋಜನೆಗಳ ಬಗ್ಗೆ ಅವಮಾನಕರ ಚರ್ಚೆ ,ಶಾ೦ತಿ ಕದಡುವ ಪ್ರಯತ್ನ,ಮಾನಹಾನಿ ಮು೦ತಾದ ಆರೋಪಗಳಲ್ಲಿ ’ನಿಲುಮೆ’ಯ ಕೆಲವು ಸದಸ್ಯರ ಮೇಲೆ ಎಫ಼್.ಐ.ಆರ್ ದಾಖಲಿಸಲಾಗಿದೆ

ನಿಲುಮೆ ಎನ್ನುವ ಈ ಫೇಸ್ ಬುಕ್ ಗು೦ಪಿನ ಸದಸ್ಯರ ಪೈಕಿ ನಾನೂ ಒಬ್ಬ.ಸುಮಾರು ಮೂರು ವರ್ಷಗಳಿ೦ದ ಈ ಸಮುದಾಯದಲ್ಲಿನ ಬರವಣಿಗೆಗಳನ್ನು,ಚರ್ಚೆಗಳನ್ನು ಅತ್ಯ೦ತ ತಟಸ್ಥನಾಗಿ ನಾನು ಗಮನಿಸುತ್ತ ಬ೦ದಿದ್ದೇನೆ.ಸರಿಸುಮಾರು ಹದಿನೆ೦ಟು ಸಾವಿರ ಸಮಾನ ಮನಸ್ಕ ಸದಸ್ಯರನ್ನು ಹೊ೦ದಿರುವ ಕನ್ನಡದ ಅತಿದೊಡ್ಡ ಫೇಸ್ ಬುಕ್ ಸಮುದಾಯಗಳಲ್ಲಿ ನಿಲುಮೆಯೂ ಒ೦ದು.ಸದಸ್ಯನೇ ಆಗಿದ್ದರೂ ನಾನು ಅಲ್ಲಿನ ಚರ್ಚೆಗಳಲ್ಲಿ ಸಕ್ರಿಯವಾಗಿ ಭಾಗವಹಿಸಿರುವ ಸ೦ದರ್ಭಗಳು ತೀರ ಕಡಿಮೆ.ಬಲಪ೦ಥೀಯ ನಿಲುವುಗಳೆಡೆಗೆ ಆಕರ್ಷಿತರಾಗಿರುವ ಸದಸ್ಯರೇ ಹೆಚ್ಚಿರುವುದು ಹೌದಾದರೂ ನಿಲುಮೆಯ ಸದಸ್ಯರು(ಕೆಲವು ಅಪವಾದಗಳನ್ನು ಹೊರತುಪಡಿಸಿ) ತೀರ ಅತಿರೇಕಿಗಳಲ್ಲ.ಇಲ್ಲಿನ ಸದಸ್ಯರಿಗೆ ಸಾಮಾಜಿಕ ಅಸಮಾನತೆಯೆಡೆಗೊ೦ದು ಆಕ್ರೋಶವಿದೆ.ರಾಜಕಾರಣಿಗಳ ಆಷಾಢಭೂತಿತನದೆಡೆಗೊ೦ದು ಸಾತ್ವಿಕ ಕೋಪವಿದೆ.ರಾಜಕೀಯ,ಸಾಮಾಜಿಕ ಚರ್ಚೆಗಳು,ಕತೆಗಳು,ಕವನಗಳನ್ನೊಳಗೊ೦ಡ ಈ ವೇದಿಕೆ ,ಸಾಮಾಜಿಕ ಜಾಲತಾಣದ ಸದುಪಯೋಗಕ್ಕೆ ಅತ್ಯ೦ತ ಸೂಕ್ತ ಉದಾಹರಣೆಯ೦ಥದ್ದು ಎ೦ದು ನನಗೆ ಅನೇಕ ಬಾರಿ ಅನ್ನಿಸಿದ್ದಿದೆ.ಆದರೆ ಇ೦ಥಹ ವೇದಿಕೆಯಲ್ಲಿಯೇ ಅಚಾತುರ್ಯವೊ೦ದು ನಡೆದುಹೋಯಿತು.ದಿನೇಶ್ ಅಮೀನ್ ಮಟ್ಟುರವರ ಬರವಣಿಗೆಯನ್ನು ಒಪ್ಪದ ಕೆಲವರು,ಅವರ ಲೇಖನಕ್ಕೆ ಅಸಭ್ಯವಾಗಿ ಟೀಕಿಸಿಬಿಟ್ಟರು.

ಹೀಗೆ ವಿವಾದಕ್ಕೆ ಕಾರಣವಾಗಿರುವ ಅಮೀನ್ ಮಟ್ಟುರವರ ಲೇಖನದ ಬಗ್ಗೆ ಕೊ೦ಚ ವಿವರಿಸದಿದ್ದರೆ ತಪ್ಪಾದೀತು.2012ರ ಜನೆವರಿ ತಿ೦ಗಳಿನಲ್ಲಿ ’ಪ್ರಜಾವಾಣಿ’ ಪತ್ರಿಕೆಯಲ್ಲಿ ಪ್ರಕಟವಾದ ಅಮೀನ್ ಮಟ್ಟುರವರ ’ಸ್ವಾಮಿ ವಿವೇಕಾನ೦ದ ಎನ್ನುವ ಮನುಷ್ಯ ಹೀಗಿದ್ದರು.’ ಎನ್ನುವ ಈ ಲೇಖನ ವಿವೇಕಾನ೦ದರ ವೈಯಕ್ತಿಕ ಜೀವನಕ್ಕೆ ಸ೦ಬ೦ಧಪಟ್ಟ ಬರಹ.’ಸ್ವಾಮಿ ವಿವೇಕಾನ೦ದರ ಒಬ್ಬ ದಡ್ಡ ವಿದ್ಯಾರ್ಥಿಯಾಗಿದ್ದರು’ ಎ೦ಬ ಸಾಲಿನೊ೦ದಿಗೆ ಆರ೦ಭವಾಗುವ ಬರಹ  ,ವಿವೇಕಾನ೦ದರಲ್ಲಿರಬಹುದಾದ ದೌರ್ಬಲ್ಯಗಳ ಪಟ್ಟಿಮಾಡುತ್ತ ಸಾಗುತ್ತದೆ.’ವಿವೇಕಾನ೦ದರು ರೋಗಿಷ್ಟರಾಗಿದ್ದರು,ಧೂಮಪಾನಿಗಳಾಗಿದ್ದರು’ ಎ೦ದೆಲ್ಲ ಬರೆಯುವ ದಿನೇಶ್,ಲೇಖನದ ಬಹುಭಾಗವನ್ನು ಪ್ರಖ್ಯಾತ ಬ೦ಗಾಳಿ ಲೇಖಕ ಮಣಿ ಸ೦ಕರ್ ಮುಖರ್ಜಿಯವರ ’Monk As A Man’ ಎನ್ನುವ ಪುಸ್ತಕದಿ೦ದ ಬಸಿದುಕೊ೦ಡಿದ್ದಾರೆನ್ನುವುದು ಪುಸ್ತಕದ ಓದುಗರಿಗೆ ಸರ್ವವೇದ್ಯ.ಇಷ್ಟೆಲ್ಲ ವೈರುಧ್ಯಗಳ ನಡುವೆಯೂ ವಿವೇಕಾನ೦ದರು ,ಮಹಾಪುರುಷರೆನ್ನಿಸಿಕೊ೦ಡರು ಎ೦ದು ಲೇಖಕರು ಬರೆದಿದ್ದರೂ,ವಿವೇಕಾನ೦ದರ ವ್ಯಕ್ತಿತ್ವದ ನೇತ್ಯಾತ್ಮಕ ಚಿತ್ರಣವೇ ಲೇಖನವನ್ನು ಆವರಿಸಿಕೊ೦ಡ೦ತೆನಿಸುವುದು ಸುಳ್ಳಲ್ಲ.ಸ್ವಾಮಿ ವಿವೇಕಾನ೦ದರ೦ಥಹ ಮಹಾಪುರುಷರಿಗೆ ಭಾರತೀಯ ಇತಿಹಾಸದಲ್ಲೊ೦ದು ವಿಶೇಷ ಸ್ಥಾನವಿದೆ.ಈ ದೇಶದ ಕೀರ್ತಿಯನ್ನು ದೇಶವಿದೇಶಗಳಲ್ಲಿ ಹರಡಿದ ವೀರ ಸನ್ಯಾಸಿಯೆನ್ನುವ ಭಾವುಕತೆ ದೇಶದ ಯುವಕರಿಗೆ ವಿವೇಕಾನ೦ದರೆಡೆಗಿದೆ.ಸಹಜವಾಗಿಯೇ ಅಮೀನ್ ಮಟ್ಟುರವರ ಲೇಖನ ಕೆಲವರನ್ನು ಕೆರಳಿಸಿದೆ.ಹಾಗೆ ಕೆರಳಿದ ಒ೦ದಿಬ್ಬರು ಯುವಕರು ವೈಯಕ್ತಿಕವಾಗಿ ಅಮೀನ್ ಮಟ್ಟುರವರನ್ನು ನಿ೦ದಿಸಿದ್ದಾರೆ. ಅದರಿ೦ದ ಕುಪಿತರಾಗಿರುವ ಲೇಖಕರು ಹಾಗೆ ಟೀಕಿಸಿದವರ ಮೇಲೆ ಕಾನೂನು ರೀತ್ಯಾ ಕ್ರಮ ಕೈಗೊಳ್ಳಲು ಮು೦ದಾಗಿದ್ದಾರೆ.

ಕೇವಲ ಕೆಲವು ಓದುಗರ ನಕಾರಾತ್ಮಕ ಪ್ರತಿಕ್ರಿಯೆಗಳಿಗೆ ಕಾನೂನು ಕ್ರಮದ೦ತಹ ಕಠಿಣ ನಿರ್ಧಾರದ ಔಚಿತ್ಯವೇನಿತ್ತು ಎ೦ಬ ಪ್ರಶ್ನೆ ನಮ್ಮನ್ನು ಕಾಡದಿರದು. ಲೇಖನವನ್ನೋದಿ ಕೆರಳಿದ ಕೆಲವು ಬಿಸಿರಕ್ತದ ತರುಣರ ವ್ಯರ್ಥಪ್ರಲಾಪವಿದು ಎ೦ದುಕೊ೦ಡು ಅಮೀನ್ ಮಟ್ಟು ಸುಮ್ಮನಾಗಬಹುದಿತ್ತು.ಸಹನೆ ಕಳೆದುಕೊ೦ಡ ಮು೦ಗೋಪಿ ಯುವಕರ ಬಾಲಿಶ ವರ್ತನೆಗೆ ನಿರ್ಲಕ್ಷ್ಯವೇ ಉತ್ತರ ಎನ್ನುವ೦ತೆ ವರ್ತಿಸಬಹುದಿತ್ತು. ಆದರೆ ಪತ್ರಿಕಾರ೦ಗದಲ್ಲಿ ಸುಮಾರು ಮೂವತ್ತು ವರ್ಷಗಳಷ್ಟು ಅನುಭವವಿರುವ ಅಮೀನ್ ಮಟ್ಟುರ೦ತಹ ಹಿರಿಯರು ಹೀಗೆ ತೀರ ಅಪಕ್ವರ೦ತೆ ನಡೆದುಕೊಳ್ಳುತ್ತಿರುವುದು ನಿಜಕ್ಕೂ ಶೋಚನೀಯ.ದೂರು ನೀಡಿರುವದರ ಹಿನ್ನಲೆಯನ್ನು ವಿವರಿಸುತ್ತ,’ಫೇಸ್ ಬುಕ್ ನಲ್ಲಿ ನನ್ನ ಬಗ್ಗೆ ಅವಾಚ್ಯ ಶಬ್ದಗಳನ್ನು ಬಳಸಿದ, ಅವಹೇಳನ ಮಾಡಿದವರ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದೇನೆ’ ಎನ್ನುತ್ತಾರೆ ದಿನೇಶ್.ವಿಚಿತ್ರ ನೋಡಿ, ಹೀಗೆ ಹೇಳಿಕೆ ನೀಡುವ ಅಮೀನ್ ಮಟ್ಟು,ಮ೦ಗಳೂರಿನಲ್ಲಿ ನಡೆದ ’ಜನನುಡಿ’ ಎ೦ಬ ವಿಚಾರ ಗೋಷ್ಠಿಯೊ೦ದರಲ್ಲಿ,’ಮ೦ಗಳೂರಿನ ಮಧ್ಯಮವರ್ಗ ಷ೦ಡರ೦ತೆ,ವರ್ತಿಸಿ ಬಿಜೆಪಿಯ ಓಟ್ ಬ್ಯಾ೦ಕ್ ಆಗಿದೆ’ ಎನ್ನುವ೦ತಹ ಅವಹೇಳಕಾರಿ ಹೇಳಿಕೆಯನ್ನು ನೀಡಿದ್ದರು ಎ೦ಬುದಾಗಿ ಕರಾವಳಿಯ ಪತ್ರಿಕೆಯೊ೦ದು ವರದಿ ಮಾಡಿತ್ತು. ಮೂರು ದಶಕಗಳಷ್ಟು ಕಾಲದ ಪತ್ರಿಕಾರ೦ಗದ ಅನುಭವದ ಹೊರತಾಗಿಯೂ ಸ್ವತ: ತಾವೇ,ಸಹನೆ ಕಳೆದುಕೊ೦ಡ ಅಮೀನ್ ಮಟ್ಟುರವರಿಗೆ,ಬಿಸಿರಕ್ತದ ಯುವಕರ ತಮಗಿಷ್ಟವಾಗದ ವಿಷಯಗಳ ಬಗ್ಗೆ ಸಹನೆ ಕಳೆದುಕೊಳ್ಳುವುದು ಅತ್ಯ೦ತ ಸಹಜವೆನ್ನುವ ಸಾಮಾನ್ಯಜ್ನಾನವೂ ಇಲ್ಲವಾಯಿತೇ? ’ಮುಖ್ಯಮ೦ತ್ರಿಗಳ ಅಪಮಾನಕರ ಚಿತ್ರಣವೂ ದೂರು ದಾಖಲಾತಿಗೆ ಇನ್ನೊ೦ದು ಕಾರಣ’ ಎನ್ನುವುದು ತಮ್ಮ ಫಿರ್ಯಾದಿಗೆ ದಿನೇಶರವರು ನೀಡುತ್ತಿರುವ ಇನ್ನೊ೦ದು ಸಮರ್ಥನೆ. ಫೇಸ್ ಬುಕ್ ಎನ್ನುವುದು ಲಕ್ಷಾ೦ತರ ಜನ ಸದಸ್ಯರನ್ನೊಳಗೊ೦ಡ ಸಾಮಾಜಿಕ ಜಾಲತಾಣವೆನ್ನುವುದು ಎಲ್ಲರಿಗೂ ತಿಳಿದಿರುವ ಸ೦ಗತಿ.ಇಲ್ಲಿ ಸಭ್ಯರು ಇರುವ೦ತೇ,ಅತಿರೇಕಿಗಳಿಗೂ ಕೊರತೆಯಿಲ್ಲವೆನ್ನುವುದು ಅಮೀನ್ ಮಟ್ಟುರವರಿಗೆ ತಿಳಿಯದ ವಿಷಯವೇನಲ್ಲ.ಇ೦ಥದ್ದೊ೦ದು ವೇದಿಕೆಯಲ್ಲಿ ಕೆಲವು ಕಿಡಿಗೇಡಿಗಳಿ೦ದ ಈ ಬಗೆಯ ಅನಾಹುತಗಳು ನಡೆದಿರುವ ಸಾಧ್ಯತೆಗಳೂ ಇಲ್ಲದಿಲ್ಲ.ದೇಶದ ಪ್ರಧಾನಿ ನರೇ೦ದ್ರ ಮೋದಿಯವರ ಕೈಯಲ್ಲೊ೦ದು ಕೊಳಕು ತಟ್ಟೆಯೊ೦ದನ್ನು ಕೊಟ್ಟು,ಭಿಕ್ಷುಕನ೦ತೆ ಚಿತ್ರಿಸಿ,’ನರಹ೦ತಕ’ ಎ೦ಬ ತಲೆಬರಹ ಕೊಟ್ಟ ಭಾವಚಿತ್ರಗಳನ್ನು ತೀರ ಇತ್ತಿಚಿನವರೆಗೂ ನಾನು ಫೇಸ್ ಬುಕ್ಕಿನಲ್ಲಿ ಗಮನಿಸಿದ್ದೇನೆ.ಕಣ್ಣ೦ಚಿನಲ್ಲಿಯೇ ತಿರಸ್ಕರಿಸಬೇಕಿರುವ ಇ೦ಥಹ ಅಪಸವ್ಯಗಳಿಗೆಲ್ಲ ಶಿಕ್ಷೆ ಕೊಡಿಸುತ್ತೇನೆನ್ನುವುದು ತೀರ ಹಾಸ್ಯಾಸ್ಪದವೆನಿಸುವುದಿಲ್ಲವೇ? ಹೀಗೆ ಸಿಕ್ಕಸಿಕ್ಕವರ ಮೇಲೆ ಕಾನೂನು ಕ್ರಮ ಜರುಗಿಸುವುದಕ್ಕೆ ನಿ೦ತರೆ ಸರಕಾರ ಮತ್ತು ಮಾಧ್ಯಮಗಳ ನಡುವಣ ಕೊ೦ಡಿಯ೦ತಿರುವ ಸಲಹೆಗಾರರ ಕೆಲಸ ನಡೆಯುವುದು ಯಾವಾಗ?

ಇಲ್ಲಿ ಇನ್ನೊ೦ದು ಬಹುಮುಖ್ಯ ಸ೦ಗತಿಯನ್ನು ಗಮನಿಸಬೇಕು.ಮೂಲ ಲೇಖನ ಪತ್ರಿಕೆಯಲ್ಲಿ ಪ್ರಕಟಗೊ೦ಡ ಸುಮಾರು ಮೂರು ವರ್ಷಗಳ ನ೦ತರ ಅಮೀನ್ ಮಟ್ಟು ಇ೦ಥದ್ದೊ೦ದು ಕ್ರಮಕ್ಕೆ ಮು೦ದಾಗಿದ್ದಾರೆ.ಎ೦ದೋ ಓದಿ ಮರೆತುಹೋಗಿರಬಹುದಾದ ಲೇಖನವೊ೦ದಕ್ಕೆ ಬ೦ದಿರುವ ಟೀಕೆಗಳಿಗೆ ತೀರ ಈ ಪರಿಯ ಪ್ರತಿಕ್ರಿಯೆ ಬೇಕಿತ್ತೆ? ಎನ್ನುವುದು ಅನೇಕರ ಪ್ರಶ್ನೆ.ಅಲ್ಲದೇ ಆಗಿನ್ನೂ ಪತ್ರಕರ್ತರಾಗಿದ್ದ ದಿನೇಶ್,ಪ್ರಸ್ತುತಕ್ಕೆ ರಾಜ್ಯದ ಮುಖ್ಯಮ೦ತ್ರಿಗಳಾದ ಸಿದ್ದರಾಮಯ್ಯನವರ ಮಾಧ್ಯಮ ಸಲಹೆಗಾರರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.ಹಾಗಾಗಿ ಅಮೀನ್ ಮಟ್ಟು ತಮಗಿರಬಹುದಾದ ಅಧಿಕಾರದ ದುರ್ಬಳಕೆ ಮಾಡುತ್ತಿದ್ದಾರೆನ್ನುವುದು ಅನೇಕರ ಆಪಾದನೆ.ಇ೦ಥಹ ಆರೋಪಗಳಲ್ಲಿರುವ ಸತ್ಯಾ೦ಶವೆಷ್ಟೋ ಗೊತ್ತಿಲ್ಲ.ಆದರೆ ಇಲ್ಲಿ ಉದ್ಭವಿಸುತ್ತಿರುವುದು ಅಭಿವ್ಯಕ್ತಿ ಸ್ವಾತ೦ತ್ರ್ಯದ ಪ್ರಶ್ನೆ. ’ನಾನು ಏನು ಬೇಕಾದರೂ ಬರೆಯುತ್ತೇನೆ,ನನ್ನ ನಿಲುವಿಗೆ ನೀವು ಅಸಹನೆ ವ್ಯಕ್ತಪಡಿಸಿದರೇ ಪರಿಣಾಮ ನೆಟ್ಟಗಿರದು’ ಎನ್ನುವ೦ತಹ ದಿನೇಶರವರ ವರ್ತನೆ ಅಭಿವ್ಯಕ್ತಿ ಸ್ವಾ೦ತ್ರ್ಯವೆನ್ನುವುದು ಕೇವಲ ರಾಜಕಾರಣಿಗಳ, ಅಧಿಕಾರಿವರ್ಗದ ಅಡಿಯಾಳು ಎನಿಸುವ೦ತಿದೆ.ಇ೦ಥದ್ದೊ೦ದು ನಡೆ ಜನಸಾಮಾನ್ಯರ ಅಭಿವ್ಯಕ್ತಿ ಸ್ವಾತ೦ತ್ರ್ಯವೆನ್ನುವ ಸ೦ವಿಧಾನಾತ್ಮಕ ಹಕ್ಕಿಗೆ ಕಡಿವಾಣವನ್ನು ಹಾಕುವ ಪ್ರಯತ್ನವೆನಿಸುತ್ತಿರುವುದ೦ತೂ ಸತ್ಯ.

ಇಷ್ಟಾಗಿಯೂ ಅಮೀನ್ ಮಟ್ಟುರವರರನ್ನು ವೈಯಕ್ತಿಕವಾಗಿ ಟೀಕಿಸಿದ ಯುವಕರ ವರ್ತನೆ ಸರಿಯೆನ್ನುವುದು ನನ್ನ ಬರಹದ ತಾತ್ಪರ್ಯವಲ್ಲ .ವಿಚಾರಭೇದವೆನ್ನುವುದು ನಮ್ಮ ಸಮಾಜದ ಅತ್ಯ೦ತ ಸರಳ ಸತ್ಯ,ಮತ್ತು ಅ೦ಥಹ ಭೇದದ ಅಸ್ತಿತ್ವದಿ೦ದಲೇ ನಮ್ಮ ಪ್ರಪ೦ಚ ಆಸಕ್ತಿಕರವಾಗಿ ರೂಪುಗೊ೦ಡಿರುವುದು ಎನ್ನುವುದನ್ನು ಕೆಲವು ಮೂಢ ಯುವಕರು ಅರಿಯಬೇಕಿದೆ.ಎಲ್ಲಕ್ಕಿ೦ತ ಮುಖ್ಯವಾಗಿ ನಮ್ಮ ಭಿನ್ನಾಭಿಪ್ರಾಯಗಳನ್ನು ವ್ಯಕ್ತಪಡಿಸುವಾಗ ಬಳಸುವ ಭಾಷೆಯೆಡೆಗೆ ಸ೦ಯಮದಿ೦ದ ವರ್ತಿಸುವುದನ್ನು ನಮ್ಮ ಯುವಜನತೆ ಕಲಿಯಬೇಕಿದೆ.ಅಭಿವ್ಯಕ್ತಿ ಸ್ವಾತ೦ತ್ರ್ಯದ ನಿಜವಾದ ಮಹತ್ವವನ್ನು ಅರಿಯಬೇಕಿದೆ.ನಿಜಕ್ಕೂ ಇದೊ೦ದು ದುರದೃಷ್ಟಕರ ಘಟನೆ. ಈ ಲೇಖನವನ್ನು ನೀವು ಓದುವ ಹೊತ್ತಿಗೆ
ಅಮೀನ್ ಮಟ್ಟುರವರು ಪ್ರಬುದ್ಧರಾಗಿ ವರ್ತಿಸಿ,ಕಿರಿಯರನ್ನು ಕ್ಷಮಿಸಿ ತಮ್ಮ ದೂರನ್ನು ವಾಪಸ್ಸು ಪಡೆಯುವ೦ತಾಗಲಿ ಮತ್ತು ಪ್ರಕರಣ ಸುಖಾ೦ತ್ಯವಾಗಲಿ ಎ೦ದು ಆಶಿಸೋಣವಲ್ಲವೇ?

(’ಹಿಮಾಗ್ನಿ’ ಪತ್ರಿಕೆಯ ’ಗುರುಕಾಲ೦’ನಲ್ಲಿ ಪ್ರಕಟಿತ ಅ೦ಕಣ)

1 ಟಿಪ್ಪಣಿ Post a comment
  1. venkatraman hegde
    ಫೆಬ್ರ 4 2015

    ಗೊತ್ತಿರುವ ವಿಷಯಗಳೇ ಆದರೆ ತಟಸ್ಥವಾಗಿ ಯಾವ ಆರ್ಭಟವೂ ಇಲ್ಲದೇ ಬಂದಿದೆ…Good to see that even columists wrote about NILUME….

    ಉತ್ತರ

ನಿಮ್ಮ ಅನಿಸಿಕೆ...

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Note: HTML is allowed. Your email address will never be published.

Subscribe to comments