ವಿಷಯದ ವಿವರಗಳಿಗೆ ದಾಟಿರಿ

ಫೆಬ್ರವರಿ 5, 2015

9

ಬೌದ್ದಿಕ ಚರ್ಚೆ ಮತ್ತು ಪ್ರಗತಿಪರರ ಅಸಹನೆ

‍ನಿಲುಮೆ ಮೂಲಕ

– ಎಂ. ಎಸ್. ಚೈತ್ರ

ನಿರ್ದೇಶಕರು, “ಆರೋಹಿ” ಸಂಶೋಧನಾ ಸಂಸ್ಥೆ, ಬೆಂಗಳೂರು

freedomofspeechಸಾಮಾಜಿಕ ಜಾಲತಾಣ ಮತ್ತು ಮಟ್ಟು ಪ್ರಕರಣ

ಕರ್ನಾಟಕದ ಮಾನ್ಯ ಮುಖ್ಯ ಮಂತ್ರಿಗಳ ಮಾಧ್ಯಮ ಸಲಹೆಗಾರರಾದ ದಿನೇಶ್ ಅಮೀನ್ ಮಟ್ಟುರವರು, ಸಾಮಾಜಿಕ ಜಾಲತಾಣವೊಂದರಲ್ಲಿ ತಮ್ಮನ್ನು ಟೀಕಿಸಿದ ಕೆಲವರ ಮೇಲೆ ಪೊಲೀಸರಿಗೆ ದೂರು ನೀಡಿದ್ದು, ವಿಶೇಷವಾಗಿ ನಿಲುಮೆ ಗುಂಪಿನ ನಿರ್ವಾಹಕರಾದ ರಾಕೇಶ್ ಶೆಟ್ಟರನ್ನು ಅದಕ್ಕೆ ಜವಾಬ್ದಾರರೆಂದು ದೂರಿನಲ್ಲಿ ಸೇರಿಸಿದ್ದಾರೆ. ಈ ಕುರಿತು ಇತ್ತೀಚೆಗೆ ನಮ್ಮ ರಾಜ್ಯದಾದ್ಯಂತ ಬಿಸಿ ಚರ್ಚೆ ನಡೆಯುತ್ತಿದೆ. ಇದರ ಪರ ಮತ್ತು ವಿರೋಧವಾಗಿ ಅನೇಕರು ತಮ್ಮ ವಾದಗಳನ್ನು ಮಂಡಿಸುತ್ತಿದ್ದಾರೆ. ಈ ಕುರಿತ ವಿಷ್ಲೇಷಣೆಯಲ್ಲಿ ತೊಡಗಿರುವವರು ತಮಗರಿವಿಲ್ಲದೆಯೆ ಅನೇಕ ದ್ವಂದಗಳಲ್ಲಿ ಸಿಕ್ಕಿಬಿದ್ದಿದ್ದಾರೆ. ಉದಾಹರಣೆಗೆ ಪ್ರಜಾವಾಣಿಯಲ್ಲಿ “ಅಭಿವ್ಯಕ್ತಿಯ ಪಾವಿತ್ರ್ಯಕ್ಕೆ ಹಿಂಸಾರಸಿಕತೆಯ ಮಸಿ” ಎಂಬ ಲೇಖನವನ್ನು ನಾವು ಗಮನಿಸೋಣ. (ದಿನಾಂಕ 2 ಫೆಬ್ರವರಿ 2015 ಇಸ್ಮಾಯಿಲ್ ಅವರ ಅಂಕಣ ಬರಹ; ಇದು ಪ್ರಜಾವಾಣಿಯ ವೆಬ್ ತಾಣದಲ್ಲೂ ಲಭ್ಯ). ತಮ್ಮ ಲೇಖನದ ಪ್ರಾರಂಭದಲ್ಲಿ ಲೇಖಕರು ಇಂಟರ್‍ನೆಟ್ ಜಗತ್ತು ಮತ್ತು ಇತರ ಪತ್ರಿಕಾ ಮಾಧ್ಯಮಗಳ ಕುರಿತು ಈ ರೀತಿ ಹೇಳುತ್ತಾರೆ:

“`ಸಮೂಹ ಮಾಧ್ಯಮ’ ಎಂಬುದರ ವ್ಯಾಖ್ಯೆಯನ್ನೇ ಇಂಟರ್‍ನೆಟ್ ಬದಲಾಯಿಸಿಬಿಟ್ಟಿದೆ. ನಿರ್ದಿಷ್ಟ ಸಂಪಾದಕ, ಪ್ರಕಾಶಕ, ಮುದ್ರಕ ಅಥವಾ ಪ್ರಸಾರಕನಿರುವ ಹಳೆಯ ಮಾಧ್ಯಮಗಳ ಸ್ವರೂಪಕ್ಕೂ ಇಂಟರ್‍ನೆಟ್ ಸಾಧ್ಯಮಾಡಿರುವ ಸಮೂಹ ಮಾಧ್ಯಮದ ಸ್ವರೂಪಕ್ಕೂ ಪರಸ್ಪರ ಹೋಲಿಕೆ ಸಾಧ್ಯವಿಲ್ಲ.”

ಅಂದರೆ ಯಾವ ಮಾನದಂಡಗಳಿಂದ ನಾವು ಪ್ರಿಂಟ್ ಅಥವಾ ಎಲೆಕ್ಟ್ರಾನಿಕ್ ಮಾಧ್ಯಮಗಳನ್ನು ಅಳೆಯುತ್ತೇವೆಯೊ ಅದೇ ಮಾನದಂಡಗಳಿಂದ ಇಂಟರ್‍ನೆಟ್‍ನಿಂದ ಹುಟ್ಟಿದ ಸಾಮಾಜಿಕ ಜಾಲತಾಣಗಳನ್ನು ನೋಡಲು ಸಾಧ್ಯವಿಲ್ಲ ಎಂಬ ಸ್ಪಷ್ಟವಾದ ತೀರ್ಮಾನಕ್ಕೆ ಲೇಖಕರು ಬರುತ್ತಾರೆ. ಇದನ್ನು ಎಲ್ಲರೂ ಒಪ್ಪುತ್ತಾರೆನ್ನಬಹುದು. ಸ್ವಲ್ಪ ಮುಂದುವರೆದ ಅವರು ಹೀಗೆ ಹೇಳುತ್ತಾರೆ:

“ಈ ಗುಂಪಿನ ಗೋಡೆಯ (Wall) ಮೇಲೆ ಪ್ರಕಟವಾಗುವ ಬರಹಗಳಿಗೆ ಈ ನಿರ್ವಾಹಕರು ಜವಾಬ್ದಾರರೇ? ತಾಂತ್ರಿಕವಾಗಿ ಹಾಗೂ ತಾತ್ವಿಕವಾಗಿ ಅವರ ಮೇಲೆ ಜವಾಬ್ದಾರಿ ಇದೆ. ಕೇವಲ ಆಸಕ್ತಿಯ ಕಾರಣಕ್ಕಾಗಿ ಸಾರ್ವಜನಿಕ ಗುಂಪೊಂದನ್ನು ರೂಪಿಸುವಾತ ಅದರಲ್ಲಿರುವ ಸಾವಿರಾರು ಸಂಖ್ಯೆಯ ಸದಸ್ಯರ ಚಟುವಟಿಕೆಗಳ ಮೇಲೆ ಕಣ್ಣಿಡಲು ಸಾಧ್ಯವೇ ಎಂಬ ಪ್ರಶ್ನೆಯನ್ನು ಹಲವರು ಕೇಳುತ್ತಾರೆ. ಹಾಗೆ ನೋಡಿದರೆ ನೂರಾರು ಸಂಖ್ಯೆಯ ವರದಿಗಾರರು, ಅಷ್ಟೇ ಸಂಖ್ಯೆಯ ಉಪ ಸಂಪಾದಕರು ಇತ್ಯಾದಿಗಳನ್ನು ಹೊಂದಿರುವ ಪತ್ರಿಕಾ ಸಂಸ್ಥೆಯೊಂದರ ಸಮಸ್ಯೆಯೂ ಇದುವೇ ತಾನೆ. ಓದುಗರ ಪತ್ರ ವಿಭಾಗದಲ್ಲಿ ನಿಂದನಾತ್ಮಕ ಪತ್ರವೊಂದು ಪ್ರಕಟವಾದರೆ ಅದಕ್ಕೂ ಸಂಪಾದಕ, ಪ್ರಕಾಶಕ, ಮುದ್ರಕ ಎಲ್ಲರೂ ಜವಾಬ್ದಾರರಾಗುತ್ತಾರಲ್ಲವೇ? ಇದೇ ತರ್ಕವನ್ನು ಸಾಮಾಜಿಕ ಜಾಲತಾಣಕ್ಕೂ ಅನ್ವಯಿಸಬೇಕಲ್ಲವೇ ಎಂಬ ಪ್ರಶ್ನೆಯೂ ಇಲ್ಲಿದೆ.”

ಈ ಹೇಳಿಕೆಯನ್ನೊಮ್ಮೆ ಗಂಭೀರವಾಗಿ ಪರಿಶೀಲಿಸಲು ಪ್ರಯತ್ನಿಸೋಣ. ತಮ್ಮ ಗೋಡೆಗಳ ಮೇಲೆ ಬರೆದದ್ದಕ್ಕೆ ನಿರ್ವಾಹಕರೇ ತಾಂತ್ರಿಕ ಮತ್ತು ತಾತ್ವಿಕವಾಗಿ ಜವಾಬ್ದಾರರಾಗುತ್ತಾರೆ ಎಂಬುದು ಲೇಖಕರ ಸ್ಪಷ್ಟ ಅಭಿಪ್ರಾಯ. ಮೊದಲಿಗೆ ಈ ತಾಂತ್ರಿಕ ಜವಾಬ್ದಾರಿ ಏನೆಂದು ಗುರುತಿಸಲು ಪ್ರಯತ್ನಿಸೋಣ. ಉದಾಹರಣೆಗೆ ತಮ್ಮ ಗೋಡೆಯ ಮೇಲೆ ಬರೆಯುವವರಿಗೆ ಎಚ್ಚರಿಕೆ ಕೊಡುವುದು ಮತ್ತು ಅದನ್ನು ತೆಗೆದು ಹಾಕುವ ಅಥವಾ ಬ್ಲಾಕ್ ಮಾಡುವ ಅಧಿಕಾರ ನಿರ್ವಾಹಕರಿಗೆ ಇರುವುದನ್ನು ತಾಂತ್ರಿಕ ಜವಾಬ್ದಾರಿ ಎಂದು ಒಪ್ಪಿಕೊಳ್ಳಬಹುದು. ಈಗ ಮಟ್ಟು ಮತ್ತು ರಾಕೇಶ್ ಶೆಟ್ಟರ ವಿವಾದವನ್ನು ತೆಗೆದುಕೊಳ್ಳೋಣ. ನಿಲುಮೆಯ ಗುಂಪಿನಲ್ಲಿ ಮಟ್ಟು ಅವರ ವಿರುದ್ಧ ಬರೆದ ಹೇಳಿಕೆಯನ್ನು ರಾಕೇಶ್ ಶೆಟ್ಟರು ಬರೆದದ್ದಲ್ಲ. ಎರಡನೆಯದಾಗಿ ಆ ಗುಂಪಿನ ಮುಖಪುಟದಲ್ಲೇ ಆ ಗುಂಪಿನ ಸದಸ್ಯರುಗಳು ಹೇಗೆ ವ್ಯವಹರಿಸಬೇಕು ಎಂಬುದನ್ನು ವಿವರಿಸಲಾಗಿದೆ ಜೊತೆಗೆ ಮಟ್ಟುರವರ ಪ್ರಕರಣವಲ್ಲದೆ, ಯಾವಾಗಲಾದರೂ ನಿರ್ವಾಹಕರಿಗೆ ನಿಲುಮೆ ಗುಂಪಿನಲ್ಲಿ ಬಂದ ಹೇಳಿಕೆಗಳು ಅಷ್ಟು ಸಮಂಜಸವಾದವುಗಳಲ್ಲ ಎಂಬುದನ್ನು ಗಮನಕ್ಕೆ ತಂದ ತಕ್ಷಣ ಅವುಗಳನ್ನು ತೆಗೆದು ಹಾಕಲಾಗುತ್ತದೆ ಇಲ್ಲವೆ ಸಂಬಂಧಿಸಿದವರಿಗೆ ಅದನ್ನು ಸರಿಪಡಿಸಿಕೊಳ್ಳಲು ಎಚ್ಚರಿಕೆ ನೀಡಲಾಗುತ್ತದೆ. ಮೇಲೆ ತಿಳಿಸಿದ್ದು ತಾಂತ್ರಿಕ ಜವಾಬ್ದಾರಿ ಎಂದು ಹೇಳಿದಲ್ಲಿ ಅದನ್ನು ನಿಲುಮೆಯ ನಿರ್ವಾಹಕರು ನಿರ್ವಹಿಸಿದ್ದಾರೆ.

ಇದೇ ಸಂದರ್ಭದಲ್ಲಿ ಮಟ್ಟುರವರ ಗೋಡೆಯ ಮೇಲೂ ನಿಲುಮಿಗರ ವಿರುದ್ಧ ಅತ್ಯಂತ ಅಸಭ್ಯ ಪದಗಳನ್ನು ಬಳಸಲಾಗಿತ್ತು. ಮಟ್ಟು ಅವರ ಪ್ರಕಾರ ರಾಕೇಶ್ ಶೆಟ್ಟಿಯವರು ನಿಲುಮೆಯ ನಿರ್ವಾಹಕರಾದ್ದರಿಂದ ಅವರು ಕೂಡಾ ಈ ಹೇಳಿಕೆಗಳಿಗೆ ಕುಮ್ಮಕ್ಕು ನೀಡುತ್ತಿದ್ದಾರೆಂದು ಅರ್ಥ. ಹಾಗಾದರೆ ಅದೇ ತರ್ಕವನ್ನು ಬಳಸಿದರೆ ಸ್ವತಃ ಮಟ್ಟುರವರ ಗೋಡೆಯ ಮೇಲೆ ಬರೆದ ಕಾಮೆಂಟ್ ಗಳಿಗೆ ಮಟ್ಟು ಜವಾಬ್ದಾರರಲ್ಲವೆ? ಮಟ್ಟುರವರ ವಿರುದ್ಧ ಬರೆದರೆ ಅವಾಚ್ಯ ಮತ್ತು ಮತ್ತೊಬ್ಬರ ವಿರುದ್ಧ ಬರೆದರೆ ಅದು ವಾಚ್ಯವೆ? ಈ ರೀತಿಯ ಎಲ್ಲ ಪ್ರಶ್ನೆಗಳಿಗೂ ಅವರು ಉತ್ತರಿಸುವುದೇ ಇಲ್ಲ.

ಮತ್ತೊಮ್ಮೆ ನಾವು ಇಸ್ಮಾಯಿಲ್ ರವರ ಹೇಳಿಕೆಗೆ ಹಿಂತಿರುಗೋಣ. ಹೇಗೆ ಪ್ರಿಂಟ್ ಮತ್ತು ಎಲೆಕ್ಟ್ರಾನಿಕ್ ಮಾಧ್ಯಮಗಳಲ್ಲಿ ತಮ್ಮ ಪತ್ರಿಕೆ ಅಥವಾ ಚಾನೆಲ್‍ಗಳಲ್ಲಿ ಪ್ರಕಟವಾದ ವಿಷಯಗಳಿಗೆ ಸಂಪಾದಕ, ಮುದ್ರಕ ಮತ್ತು ಮಾಲಿಕರು ಜವಾಬ್ದಾರಿಯೋ ಹಾಗೆಯೇ ಸಾಮಾಜಿಕ ತಾಣಗಳಲ್ಲೂ ಇರಬೇಕಲ್ಲವೆ ಎಂಬುದು. ಬಹುಶಃ ಇಸ್ಮಾಯಿಲ್‍ವರು ಇದನ್ನೇ ತಾತ್ವಿಕ ಜವಾಬ್ದಾರಿ ಎಂದು ಕರೆಯುತ್ತಿದ್ದಾರೆ ಅನಿಸುತ್ತಿದೆ. ಇಲ್ಲಿ ನಿರ್ದಿಷ್ಟವಾಗಿ ಯಾವುದು ತಾತ್ವಿಕ ಜವಾಬ್ದಾರಿ ಎಂಬುದನ್ನು ಲೇಖಕರು ವಿವರಿಸುವುದಿಲ್ಲವಾದ್ದರಿಂದ ಅದು ಏನು ಎಂಬುದು ಅರ್ಥವಾಗುವುದಿಲ್ಲ. ಆದರೆ, ನಿಶ್ಚಿತವಾಗಿ ಈ ಹೇಳಿಕೆ ದೇಶದ ಕಾನೂನಿಗೆ ಸಂಬಂಧಿಸಿದೆ ಎಂದು ಅರ್ಥೈಸಲು ಯಾವುದೇ ಸಮಸ್ಯೆಯಿಲ್ಲ. ಈ ಅರ್ಥದಲ್ಲಿ ನೋಡಿದಾಗ ನಮ್ಮ ದೇಶದಲ್ಲಿ ಪತ್ರಿಕೆಯೊಂದನ್ನು ಪ್ರಾರಂಭಿಸಲು ಕಾನೂನುಗಳಿವೆ. ಆ ಕಾನೂನಿನ ಅನ್ವಯ ಮೇಲೆ ತಿಳಿಸಿದ ಎಲ್ಲರೂ ಜವಾಬ್ದಾರರಾಗುತ್ತಾರೆ. ಆದರೆ ಸಾಮಾಜಿಕ ಜಾಲತಾಣ ಆರಂಭಿಸಲು ಅಂಥ ನಿಯಮಗಳು ಇಲ್ಲದಿರುವ ಕಾರಣ ಗುಂಪಿನ ನಿರ್ವಾಹಕರು ಕಾನೂನಿನ ಚೌಕಟ್ಟಿನ ಅಡಿಯಲ್ಲಿ ಜವಾಬ್ದಾರರಾಗುವುದಿಲ್ಲ. ಹೀಗಾಗಿ ಅಂಕಣಕಾರರೇ ಸರಿಯಾಗಿ ಗುರುತಿಸಿರುವಂತೆ

“ನಿರ್ದಿಷ್ಟ ಸಂಪಾದಕ, ಪ್ರಕಾಶಕ, ಮುದ್ರಕ ಅಥವಾ ಪ್ರಸಾರಕನಿರುವ ಹಳೆಯ ಮಾಧ್ಯಮಗಳ ಸ್ವರೂಪಕ್ಕೂ ಇಂಟರ್‍ನೆಟ್ ಸಾಧ್ಯಮಾಡಿರುವ ಸಮೂಹ ಮಾಧ್ಯಮದ ಸ್ವರೂಪಕ್ಕೂ ಪರಸ್ಪರ ಹೋಲಿಕೆ ಸಾಧ್ಯವಿಲ್ಲ.”

ಇನ್ನೂ ಒಂದು ಸಂಗತಿಯನ್ನು ಇಲ್ಲಿ ಗಮನಿಸಲೇಬೇಕಾಗುತ್ತದೆ. ಅದೇನೆಂದರೆ ಅತ್ಯಂತ ವಿಶ್ವಾಸಾರ್ಹ ಮುದ್ರಣ ಮಾಧ್ಯಮದಲ್ಲಿಯೂ ಪ್ರಕಟಣೆಗೆ ಸಂಬಂಧಿಸಿ ಅನೇಕಾನೇಕ ತಪ್ಪುಗಳು ಘಟಿಸಿವೆ, ಘಟಿಸುತ್ತಲೇ ಇರುತ್ತವೆ. ಹೀಗಾಗಿ ಅವು ತಪ್ಪು ಎನಿಸಿದಾಗ ತಿದ್ದುಪಡಿಯನ್ನು ಪ್ರಕಟಿಸುತ್ತವೆ. ಮುದ್ರಣ ಮುಂದುವರೆಯುತ್ತದೆ. ತಪ್ಪು ಪ್ರಕಟಿಸಿದ ಯಾವ ಪತ್ರಿಕೆಯನ್ನೂ ಯಾರೂ ಮುಚ್ಚಿಸುವ ಯತ್ನ ಮಾಡಿಲ್ಲ, ಅವು ಈ ಕಾರಣಕ್ಕೆ ಮುಚ್ಚಿಯೂ ಇಲ್ಲ. ಹೀಗೇನಾದರೂ ಮಾಡುತ್ತ ಹೋಗಿದ್ದರೆ ಯಾವ ಮಾಧ್ಯಮವೂ ಉಳಿಯುತ್ತಿರಲಿಲ್ಲ! ವಾಸ್ತವ ಹೀಗಿರುವಾಗ ಮುದ್ರಣ ಮಾಧ್ಯಮಕ್ಕೆ ಅನ್ವಯಿಸುವ “ತಿದ್ದುಪಡಿಯ” ಅವಕಾಶವನ್ನಾದರೂ ಎಲೆಕ್ಟ್ರಾನಿಕ್ ಮಾಧ್ಯಮಕ್ಕೆ ಅಂಕಣಕಾರರು ನೀಡಬಹುದಾಗಿತ್ತಲ್ಲ? ಹೀಗೆ ಮಾಡದೇ ತಪ್ಪು ಮಾಡಿದ್ದೀರಿ ಮಾಧ್ಯಮವನ್ನೇ ಮುಚ್ಚಿಬಿಡಿ ಎನ್ನುವುದು ಅತ್ಯಂತ ಮೌಲ್ಯಯುತವೆಂದು ಗುರುತಿಸುವ ಅಭಿವ್ಯಕ್ತಿ ಸ್ವಾತಂತ್ರ್ಯದ ಹರಣವಾಗದೇ?

ಈ ವಿಷಯದಲ್ಲಿ ಇಸ್ಮಾಯಿಲ್‍ರವರು ನೇರವಾಗಿ ಅಮೀನ್ ಮಟ್ಟು ಮತ್ತು ರಾಕೇಶ್ ಶೆಟ್ಟರ ಪ್ರಕರಣದ ಕುರಿತು ಪ್ರತಿಕ್ರಿಯಿಸುತ್ತಿಲ್ಲವಾದರೂ ಕರ್ನಾಟಕದಲ್ಲಿ ಇಂದು ಇರುವ ಸಾಂದರ್ಭಿಕ ಚರ್ಚೆಗಳ ಕಾರಣ ಅವರು ಈ ವಿಷಯವನ್ನೇ ಚರ್ಚಿಸುತ್ತಿದ್ದಾರೆ ಅಂದುಕೊಳ್ಳುವುದು ಸಕಾರಣವಾಗಿಯೇ ಇದೆ. ಅದಲ್ಲದೆ ಅವರು ನೇರವಾಗಿ ಯಾವುದೇ ಗುಂಪಿನ ವಾದವನ್ನು ಸಮ್ಮತಿಸದಿದ್ದರೂ ಯಾರ ಪರವಾಗಿ ಅವರು ತೀರ್ಮಾನ ತೆಗೆದುಕೊಳ್ಳಲು ಹೊರಟಿದ್ದಾರೆ ಎಂಬುದೂ ಸ್ಪಷ್ಟವಾಗಿ ಕಾಣುತ್ತಿದೆ. ಒಟ್ಟಾರೆ ಈ ಸಂದರ್ಭದಲ್ಲಿ ಪ್ರಗತಿಪರ ಚಿಂತನೆ ಮಾಡುವವರ ಮೌನ ಮತ್ತು ದಿನೇಶ್ ಮಟ್ಟುರವ ಅಸಹಿಷ್ಣುತೆಯನ್ನು ಬೌದ್ಧಿಕವಾಗಿ ವಿವರಿಸುವುದು ಹೇಗೆ ಎಂಬ ಪ್ರಶ್ನೆ ನಮ್ಮನ್ನು ಕಾಡತೊಡಗುತ್ತದೆ.

ಮಟ್ಟು ಪ್ರಕರಣ ಮತ್ತು ನಮ್ಮ ಚಿಂತಕರ ನಿಲುವುಗಳು:

ಈ ಪ್ರಕರಣದ ಕುರಿತು ಹೀಗೆ ಚರ್ಚೆಯಲ್ಲಿ ತೊಡಗಿರುವಾಗ ನಮ್ಮ ಅನೇಕ ಪತ್ರಿಕೋದ್ಯಮದ ಮಿತ್ರರು, ಇಂದು ಸಾಮಾಜಿಕ ಜಾಲತಾಣಗಳಲ್ಲಿ ವೈಯಕ್ತಿಕ ನಿಂದನೆ ಮತ್ತು ಅವಾಚ್ಯ ಶಬ್ದಗಳ ಪ್ರಯೋಗ ಅತಿಯಾಗಿ ಬಳಕೆ ಆಗುತ್ತಿದ್ದು ಅದರ ನಿಯಂತ್ರಣದ ಅಗತ್ಯ ಖಂಡಿತವಾಗಿಯೂ ಇದೆ ಮತ್ತು ಅದೇ ಕಾರಣಕ್ಕಾಗಿ ಮಟ್ಟುರವರ ಈ ಕ್ರಮ ಸರಿಯಾಗಿಯೇ ಇದೆ ಎಂದು ವಾದಿಸುತ್ತಿದ್ದಾರೆ. ಆದರೆ ಇಂಥ ಕ್ರಮ ನಮ್ಮ ಮುಂದಿರುವ ಸಮಸ್ಯೆಗಳನ್ನು ಹೇಗೆ ಪರಿಹರಿಸುತ್ತದೆ ಎಂಬ ಬಗ್ಗೆ ಯಾರ ಬಳಿಯೂ ಸರಿಯಾದ ಉತ್ತರವಿಲ್ಲ. ಮೊದಲಿಗೆ ಅವಾಚ್ಯ ಶಬ್ದ ಪ್ರಯೋಗ ಮತ್ತು ವೈಯಕ್ತಿಕ ನಿಂದನೆಯನ್ನು ಖಂಡಿಸುವುದರ ಕುರಿತು ಎಲ್ಲರಿಗೂ ಸಹಮತವಿದೆ. ಆದರೆ ಸದರಿ ಪ್ರಕರಣದಲ್ಲಿ ಯಾರೋ ಅವಾಚ್ಯ ಶಬ್ದಗಳನ್ನು ಬಳಸಿದರೆ ಅದಕ್ಕೆ ನಿಲುಮೆಯ ನಿರ್ವಾಹಕರು ಹೇಗೆ ಜವಾಬ್ದಾರರಾಗುತ್ತಾರೆ? ಈಗಾಗಲೆ ಗಮನಿಸಿದಂತೆ ಇದು ಕಾನೂನಿನ ಸಮಸ್ಯೆಯಲ್ಲ ಎಂದ ಮೇಲೆ, ನಮ್ಮ ಅನೇಕ ಮಿತ್ರರು ಇದು ನೈತಿಕ ಸಮಸ್ಯೆ ಎಂದು ವಾದಿಸತೊಡಗುತ್ತಾರೆ. ಅವರ ವಾದಗಳಿಂದ ಇದು ಯಾವ ರೀತಿಯ ನೈತಿಕ ಸಮಸ್ಯೆ ಎಂದು ತಿಳಿಯುವುದಿಲ್ಲವಾದರೂ, ಒಂದೊಮ್ಮೆ ಅದನ್ನು ಒಪ್ಪಿಕೊಂಡರೆ, ಯಾರೋ ನಮ್ಮ ಗುಂಪಿನಲ್ಲಿ ಅಸಂಬದ್ಧವಾಗಿ ಮಾತನಾಡಿದರೆ ಅದಕ್ಕೆ ಗುಂಪಿನ ನಾಯಕ ಹೇಗೆ ಜವಾಬ್ದಾರನಾಗುತ್ತಾನೆ ಎಂದು ವಿವರಿಸಬೇಕಾಗುತ್ತದೆ. ಉದಾಹರಣೆಗೆ ವಿಧಾನ ಸೌಧದಲ್ಲಿ ಮೊಬೈಲ್ ಫೋನಿನಲ್ಲಿ ನೀಲಿಚಿತ್ರ ವೀಕ್ಷಣೆ ಮಾಡಿದ್ದಕ್ಕಾಗಿ ಸಭಾಧ್ಯಕ್ಷರನ್ನೋ ಅಥವಾ ಆ ಶಾಸಕರ ಪಕ್ಷವನ್ನೋ ಜವಾಬ್ದಾರರನ್ನಾಗಿಸಲು ಸಾಧ್ಯವೆ? ಅಥವಾ ಸರಕಾರವೊಂದರ ಮಂತ್ರಿಗಳು ಭ್ರಷ್ಟರಾದರೆ ಅದರ ಮುಖ್ಯಮಂತ್ರಿ ಅಥವಾ ಪ್ರಧಾನ ಮಂತ್ರಿಯನ್ನು ಹೊಣೆಗಾರರನ್ನಾಗಿ ಮಾಡಲು ಸಾಧ್ಯವೆ? ಇತ್ಯಾದಿ ಪ್ರಶ್ನೆಗಳನ್ನು ನಾವು ತಾರ್ಕಿಕವಾಗಿ ಕೇಳಿಕೊಳ್ಳಬೇಕಾಗುತ್ತದೆ.

ಆದರೆ ಈ ಪ್ರಕರಣದಲ್ಲಿ, ಮಟ್ಟುರವರು ಸುದ್ದಿವಾಹಿನಿಯೊಂದರಲ್ಲ್ಲಿ ವಾದಿಸಿದಂತೆ ನಿಮ್ಮ ಗುಂಪನ್ನು ನಿಮಗೆ ನಿಯಂತ್ರಿಸಲು ಸಾಧ್ಯವಿಲ್ಲ ಎನ್ನುವುದಾದರೆ ನೀವು ನಿಲುಮೆಯನ್ನೇ ಮುಚ್ಚಿ ಎನ್ನುವುದನ್ನು ಒಪ್ಪಿಕೊಳ್ಳುವುದಾದರೆ ನಾವು ಇನ್ನು ಮುಂದೆ ಸಾಮಾಜಿಕ ಜಾಲ ತಾಣಗಳಲ್ಲಿ ಭಾಗವಹಿಸುವಂತೆಯೇ ಇಲ್ಲ. ಇಷ್ಟಕ್ಕೂ ಸ್ವತಃ ಮಟ್ಟುರವರು ತಮ್ಮ ಗೋಡೆಯ ಮೇಲೆ ಬರುವ ಕಮೆಂಟುಗಳನ್ನು ನಿಯಂತ್ರಿಸಲಾಗುತ್ತಿಲ್ಲ. ಇದನ್ನೇ ಮುಂದುವರೆಸಿ ಹೇಳುವುದಾದರೆ ಫೇಸ್ ಬುಕ್ ಮಾಲೀಕನಾದ ಜುಕರ್ಬಗ್ರ್ನ ಮೇಲೆ ನಾವು ದೇಶವಿರೋಧಿ, ಭಯೋತ್ಪಾದಕ ನಿಗ್ರಹ ಕಾಯ್ದೆ ಇತ್ಯಾದಿ ಇನ್ನೂ ಏನು ಬೇಕಾದರೂ ದೂರುಗಳನ್ನು ನೀಡಬೇಕಾಗುತ್ತದೆ! ಇಷ್ಟೆಲ್ಲ ವಾದಿಸುವ ನಮ್ಮ ಪತ್ರಕರ್ತ ಮಿತ್ರರು ಒಮ್ಮೆ ಕನ್ನಡದ ಪೀತ ಪತ್ರಿಕೆಗಳ ಕಡೆಗೆ ಗಮನ ಹರಿಸಿದರೆ, ಅನಿಯಂತ್ರಿತವಾಗಿರುವ ಈ ಸಾಮಾಜಿಕ ಜಾಲತಾಣಗಳು ಇಂಥ ಬರಹ ಕಲಿತದ್ದು ನಿಯಂತ್ರಿತ ಮತ್ತು ಸಭ್ಯ ಮಾಧ್ಯಮ ಎಂದು ಯಾವುದನ್ನು ಇವರು ಕರೆಯುತ್ತಾರೋ ಅಂಥ ಮುದ್ರಣ ಮಾಧ್ಯಮದಿಂದಲೇ ಎಂದು ತಿಳಿಯುತ್ತದೆ. ಹಾಗಾಗಿ ಸಾಮಾಜಿಕ ಜಾಲತಾಣಗಳಲ್ಲಿ ಕಂಡುಬರುತ್ತಿರುವ ಇಂಥ ಬರವಣಿಗೆ ಹೊಸದೇನೂ ಅಲ್ಲ. ವ್ಯತ್ಯಾಸ ಇಷ್ಟೇ, ಅಲ್ಲಿ ಕೆಲವರು ಮಾತ್ರ ತಮ್ಮ ವಿಷಯಗಳನ್ನು ಮಂಡಿಸಿದರೆ, ಇಲ್ಲಿ ಎಲ್ಲರಿಗೂ ಸಮಾನ ಅವಕಾಶವಿದೆ.

ಇನ್ನೂ ಮುಂದುವರೆದು, ಈ ಮೇಲ್ಕಂಡ ಚರ್ಚೆಯಲ್ಲಿ ಇದು ಕೇವಲ ಮಟ್ಟುರವರ ವೈಯಕ್ತಿಕ ಸೈಕಲಾಜಿಕಲ್ ನಡವಳಿಕೆಯೆಂದೂ ಅದನ್ನು ಗಂಭೀರವಾಗಿ ತೆಗೆದುಕೊಳ್ಳುವ ಅವಶ್ಯಕತೆ ಇಲ್ಲವೆಂದೂ ಕೆಲವರು ಕಿವಿಮಾತು ಹೇಳಿದ್ದುಂಟು. ಇದನ್ನು ನಾವು ಗಂಭೀರವಾಗಿ ಪರಿಗಣಿಸಿದ್ದೇ ಆದರೆ ನಮ್ಮ ಸುತ್ತಮುತ್ತಲಿನ ಜಗತ್ತಿನಲ್ಲಿ ಉಳಿದ ಚರ್ಚೆಗಳು ಬಹಳ ಸಹ್ಯವಾಗಿರುತ್ತವೆ ಎಂದು ಒಪ್ಪಬೇಕಾಗುತ್ತದೆ. ಆದರೆ ಕಳೆದ ನಾಲ್ಕೈದು ದಶಕಗಳ ನಮ್ಮ ಚರ್ಚೆಯನ್ನು ಒಮ್ಮೆ ಸುತ್ತು ಹಾಕಿದರೆ ಇದು ಸತ್ಯ ಎನಿಸುವುದಿಲ್ಲ.

ಬೌದ್ಧಿಕ ಸಂವಾದ, ಹಿಂಸೆ ಮತ್ತು ಅಸಹಿಷ್ಣುತೆ:

ಕನ್ನಡದಲ್ಲಿ ಗಂಭೀರವಾಗಿ ಚರ್ಚಿಸುವ ಒಂದು ಅದ್ಭುತ ಪರಂಪರೆ ಇದೆಯೆಂದೂ ಅದು ನಮ್ಮ ಸಮಾಜವನ್ನು ಸರಿದಾರಿಗೆ ತರಲು ಬೇಕಾದ ಆಕರ ಎಂದೂ ನಮ್ಮ ಚಿಂತಕರು ವಾದಿಸುತ್ತಾರೆ. ಈ ಚರ್ಚೆಗಳನ್ನು ಗಮನಿಸಿದರೆ ಅವರು ಬಳಸುವ ಭಾಷೆಯ ಪರಿಚಯವಾಗುತ್ತದೆ. ಅಂಥ ಕೆಲವು ಸ್ಯಾಂಪಲ್ ಇಲ್ಲಿವೆ: “ಬ್ರಾಹ್ಮಣರು ಮನುಷ್ಯರಾಗಬೇಕು”, “ರಾಮಾಯಣ, ಮಹಾಭಾರತವನ್ನು ಓದಿದರೆ ಅತ್ಯಾಚಾರಿಗಳ ಸಂಖ್ಯೆ ಜಾಸ್ತಿಯಾಗುತ್ತದೆ”, “ಮನುಧರ್ಮಶಾಸ್ತ್ರದ ಹೆಣದೊಳಗಿನಿಂದ ಉತ್ಪತ್ತಿಯಾದ ಹೆಣದೊಳಗಿನ ಹುಳುಗಳಂತಾಡುತ್ತಿರುವ ಈ ಗ್ಯಾಂಗ್ ಅನ್ನು ಯಾರು ಕಾಪಾಡಬೇಕೋ ತಿಳಿಯದಾಗಿದೆ”. “ಚತುರ ಚೋರರ ಸಂಚಿನ ಜಾಲ”,”ಮರೆಮೋಸದ ಕಳ್ಳರು”,”ಇವರ ಚಲನಚಲನಗಳ ಮೇಲೆ ಕಣ್ಣಿಡಬೇಕಾಗಿದೆ”,”ಶಾಹೀ ಕುಬುದ್ಧಿ ತಂತ್ರ”,”ನವಗೋಸುಂಬೆ ವೈದಿಕಶಾಹಿ”,”ಮಲದೇವತಾ ಅರ್ಚಕರು”, “ದೇಶಭಕ್ತ ಸೂಳೆಮಕ್ಕಳು” ಇತ್ಯಾದಿ ಇತ್ಯಾದಿ.

ಈ ಪದ ಪುಂಜಗಳು ಬಳಕೆಯಾದ ಸಂದರ್ಭದಲ್ಲಿ ಅಲ್ಲಿ ತಮ್ಮ ಎದುರಾಳಿಗಳು ಏನನ್ನು ವಾದಿಸುತ್ತಿದ್ದಾರೆ ಎಂಬುದರ ಕುರಿತಾಗಿ ಏನಾದರೂ ಚರ್ಚೆಯಾಗಿದೆಯೆ? ಎಂಬ ಪ್ರಶ್ನೆಗಳಿಗೆ ಉತ್ತರ ದೊರಕುವುದು ಸ್ವಲ್ಪ ಕಷ್ಟವೇ. ಉದಾಹರಣೆಗೆ ಇತ್ತೀಚೆಗೆ ಕನ್ನಡದ ನಿಯತಕಾಲಿಕವೊಂದು ಬ್ರಾಹ್ಮಣೀಕರಣವಾಗಿದೆ ಎಂಬ ಸುದೀರ್ಘ ಚರ್ಚೆ ನಡೆದು, ಆ ನಿಯತಕಾಲಿಕದ ಪರ ಇರುವ ಎಲ್ಲರೂ ಮಾನವತಾವಾದದ ವಿರೋಧಿಗಳು ಎಂದು ಆರೋಪ ಮಾಡಲಾಯ್ತು. ಆ ನಿಯತಕಾಲಿಕವನ್ನು ಈ ಚರ್ಚೆಯ ನಂತರ ಅವರು ಪ್ರಕಟಿಸುವುದನ್ನೇ ನಿಲ್ಲಿಸಿದರು. ಒಟ್ಟಿನಲ್ಲಿ ಯಾರಾದರೂ ಈ ಪ್ರಗತಿಶೀಲರ ವಿಚಾರವನ್ನು ಪ್ರಶ್ನೆ ಮಾಡಿದರೆ ಸಾಕು ಅವರ ಜೀವನ ಅತ್ಯಂತ ಹೀನಾಯ ಸ್ಥಿತಿ ತಲುಪುವುದರಲ್ಲಿ ಅನುಮಾನವೇ ಇಲ್ಲ. ಈ ರೀತಿಯ ಬೈಗುಳದ ಪರಂಪರೆಯನ್ನು ಮಾನವತಾವಾದವೆಂದೂ ಅದರ ವಿರೋಧವನ್ನು ಕೋಮುವಾದ, ಪುರೋಹಿತ ಶಾಹಿ, ಹುನ್ನಾರ ಇತ್ಯಾದಿಗಳಿಂದ ಗುರುತಿಸುವುದು ಸರ್ವೇ ಸಾಮಾನ್ಯ. ಈ ಚರ್ಚೆಗಳನ್ನು ಪ್ರಾರಂಭಿಸಿದವರನ್ನು ನಮ್ಮಲ್ಲಿ ಇಂದು ಮೇಧಾವಿಗಳೆಂದು ಗುರುತಿಸಲಾಗುತ್ತದೆ. ಇಂಥ ಮೇಧಾವಿಗಳು ಕೂಡಾ ತಾವೇ ಪ್ರಾರಂಭಿಸಿದ ವಿಮರ್ಶಾ ಮಾದರಿಗಳಿಗೆ ಸ್ವತಃ ಬಲಿಪಶುಗಳಾಗುತ್ತಿರುವುದು ಅಪರೂಪದ ಸಂಗತಿಯೇನಲ್ಲ. ಈ ರೀತಿಯ ಆಪಾದನೆಗಳಿಗೆ ಆಶಿಶ್ ನಂದಿಯಂಥ ಹಿರಿಯ ಚಿಂತಕರೂ ಬಲಿಯಾಗಿರುವುದು ವಿಪರ್ಯಾಸವಷ್ಟೆ.

ಒಟ್ಟಾರೆಯಾಗಿ ಇದು ನಮ್ಮ ಬುದ್ಧಿಜೀವಿಗಳ ಅಸಹಿಷ್ಣುತೆಗೆ ಹಿಡಿದ ಕೈಗನ್ನಡಿಯಾಗಿದೆ. ಈ ಚರ್ಚೆಗಳಿಂದ ಹೇಗೆ ಗಂಭೀರ ಸಂಶೋಧನೆಯೊಂದು ಬಲಿಯಾಗುತ್ತದೆ ಎನ್ನುವುದಕ್ಕೆ ಉದಾಹರಣೆಯಾಗಿ ಬೆಲ್ಜಿಯಂನ ತತ್ವಶಾಸ್ತ್ರ ಪ್ರಾಧ್ಯಾಪಕರಾದ ಪ್ರೊ. ಎಸ್. ಎನ್. ಬಾಲಗಂಗಾಧರ ಮತ್ತವರ ಸಂಶೋಧನೆಯ ತಂಡದವರನ್ನು ಗುರುತಿಸಬಹುದು. ಕನ್ನಡದ ಪ್ರಗತಿಶೀಲರಿಗೆ ಬಾಲಗಂಗಾಧರರ ಬೌದ್ಧಿಕ ಪ್ರಶ್ನೆಗಳು ಕಸಿವಿಸಿಯನ್ನು ಉಂಟುಮಾಡಿದವು. ಕೂಡಲೆ ನಮ್ಮ ನಾಡಿನ ಪ್ರಖ್ಯಾತ ವಿದ್ವಾಂಸರು ಅವರನ್ನು ಬೌದ್ಧಿಕವಾಗಿ ಎದುರಿಸದೆ ಸಾರ್ವಜನಿಕವಾಗಿ ಅವರು “ಹಿಂದುತ್ವವಾದಿ”, ಕೋಮುವಾದಿ, ಚಡ್ಡಿ ಇತ್ಯಾದಿಯಾಗಿ ವಾಚಾಮಗೋಚರ ತೆಗಳುತ್ತ ಅವರು ನಮ್ಮ ನಾಡಿನ ವಿರುದ್ಧ ಪಿತೂರಿ ಮಾಡತೊಡಗಿದ್ದಾರೆ, ವಿದೇಶಿ ಹಣದ ಆಮಿಷದಿಂದ ಇಲ್ಲಿಯ ಅಮಾಯಕರನ್ನು ದಾರಿ ತಪ್ಪಿಸುತ್ತಿದ್ದಾರೆ ಎಂದು ಆರೋಪಿಸಿದರು.

ಕನ್ನಡದ ಪ್ರಖರ ಚಿಂತಕರು ಬಾಲಗಂಗಾಧರ ಅವರ ಸಂಶೋಧನೆಗಳು ವಿಕೃತಿ, ವ್ಯಭಿಚಾರ ಎನ್ನುತ್ತ, ಕರ್ನಾಟಕದಲ್ಲಿ ಪ್ರಗತಿಪರ ಮುಖ್ಯಮಂತ್ರಿಯ ನೇತೃತ್ವದಲ್ಲಿ ಸರಕಾರ ಅಧಿಕಾರಕ್ಕೆ ಬಂದ ತಕ್ಷಣ ಕುವೆಂಪು ವಿ.ವಿಯಲ್ಲಿನ ಅವರ ಸಂಶೋಧನ ಕೇಂದ್ರವನ್ನು ಹೇಗೆ ಮುಚ್ಚಿಸಿದರು ಎಂಬುದು ನಾಡಿನಾದ್ಯಂತ ಎಲ್ಲರಿಗೂ ತಿಳಿದ ವಿಷಯ. ಇಷ್ಟು ಸಾಲದು ಎಂಬಂತೆ ಕರ್ನಾಟಕದ ಅನೇಕ ವಿಶ್ವವಿದ್ಯಾನಿಲಯಗಳು ಅವರೊಂದಿಗಿನ ಅಧಿಕೃತ ಒಪ್ಪಂದವನ್ನು “ಕಾಣದ ಕೈಗಳ” ಒತ್ತಡದಿಂದ ಮುರಿದವು. ಕರ್ನಾಟಕದ ದಿನಪತ್ರಿಕೆಯೊಂದರಲ್ಲಿ ಪ್ರಕಟವಾಗುತ್ತಿದ್ದ ಅವರ ಅಂಕಣವನ್ನು ನಮ್ಮ ಹಿರಿಯ ಬುದ್ಧಿಜೀವಿಗಳ ಗುಂಪೊಂದು ಆ ಪತ್ರಿಕೆಯ ಮಾಲೀಕರ ಮೇಲೆ ಒತ್ತಡಹೇರಿ ನಿಲ್ಲಿಸುವಂತೆ ಮಾಡುವಲ್ಲಿ ಸಫಲರಾದರು. ಇಷ್ಟೆಲ್ಲ ಪ್ರಯತ್ನಗಳ ನಡುವೆಯೂ, ನಿಲುಮೆಯೆಂಬ ಬ್ಲಾಗಿನಲ್ಲಿ ಬಾಲು ಮತ್ತವರ ತಂಡದವರಿಗೆ ಅವರ ಸಂಶೋಧನೆಯನ್ನು ಚರ್ಚಿಸಲು ಅವಕಾಶ ನೀಡಿದ ಅಪರಾಧಕ್ಕಾಗಿ ಇಂದು ನಿಲುಮೆಯ ರಾಕೇಶ ಶೆಟ್ಟರು ಬಲಿಪಶುವಾಗಿದ್ದಾರೆ. ಈ ಕಾರಣಕ್ಕಾಗಿಯೇ ನಮ್ಮ ಸಮಾಜದ ಪ್ರಗತಿಪರ ಚಿಂತಕರಿಗೆ ಹಾಗೂ ದಿನಬೆಳಗಾದರೆ ಅಭಿವ್ಯಕ್ತಿ ಸ್ವಾತಂತ್ರ್ಯದ ರಕ್ಷಣೆಯ ಭಜನೆ ಮಾಡುವವರಿಗೆ, ಈ ಪ್ರಕರಣದಲ್ಲಿ ಏನನ್ನೂ ಹೇಳಲು ಸಾಧ್ಯವಾಗದೇ ಮೌನ ತಾಳುವ ಅನಿವಾರ್ಯ ಸ್ಥಿತಿ ನಿರ್ಮಾಣವಾಗಿದೆ! ಇದಕ್ಕೆ ಏನಾದರೂ ಪ್ರತಿಕ್ರಿಯೆ ನೀಡಲೇಬೇಕಾದ ಸಂದರ್ಭ ಬಂದಾಗ ಅಡ್ಡಗೋಡೆಯ ಮೇಲೆ ದೀಪವಿಟ್ಟಂತೆ ಮಾತನಾಡಿ ಮುಗಿಸುತ್ತಾರೆ. ಪ್ರಗತಿಪರರು, ಸೆಕ್ಯುಲರ್, ಲಿಬರಲ್ ಇತ್ಯಾದಿ ಬೇರೆ ಬೇರೆ ಅಡ್ಡಪಟ್ಟಿಯಿಂದ ಪರಿಚಿತರಾದ ನಮ್ಮ ಹಿರಿಯ ಬುದ್ಧಿಜೀವಿಗಳ ಸಮುದಾಯದ ವರ್ತನೆಯನ್ನು ವಿವರಿಸುವ ಯಾವುದಾದರೂ ಮಾರ್ಗಗಳಿವೆಯೆ?

ಐಡಿಯಾಲಜಿ, ಪಶ್ಚಿಮದ ಚಿಂತನೆಯ ಕ್ರಮ ಮತ್ತು ಪ್ರಗತಿಪರರ ಹಿಂಸೆಯ ವರ್ತನೆ:

ಒಟ್ಟಾರೆಯಾಗಿ ನಮ್ಮಲ್ಲಿ ಪ್ರಗತಿಪರರೆಂದು ಕರೆದುಕೊಳ್ಳುವ ಬುದ್ಧಿಜೀವಿಗಳು ಬೇರೆಯವರು ತಮ್ಮನ್ನು ಪ್ರಶ್ನಿಸಿದರೆ ಸಿಡಿದೇಳುವುದಲ್ಲದೆ ಅಂಥವರ ವಿರುದ್ಧ ಮುಗಿಬಿದ್ದು ಅವರು ಮತ್ತೊಮ್ಮೆ ಪ್ರಶ್ನೆಗಳನ್ನೇ ಕೇಳದಂತೆ ಮಾಡುತ್ತಾರೆಕೆ ಎಂಬುದು ಒಗಟಾಗಿ ಬಿಡುತ್ತದೆ. ಪ್ರಗತಿಪರರ ಇಂಥ ನಡವಳಿಕೆಗಳಿಗೆಸೈಕಲಾಜಿಕಲ್ ಆದ ವಿವರಣೆಗಳನ್ನು ಕೊಡಲು ಪ್ರಯತ್ನಿಸಿದರೆ, ಅದು ಕೇವಲ ಒಬ್ಬ ವ್ಯಕ್ತಿಯನ್ನು ಕುರಿತ ವಿವರಣೆಯಾಗುತ್ತದೆ. ಹೀಗಾಗಿ ಸೈಕಲಾಜಿಕಲ್ ವಿವರಣೆಗಳು ನಮ್ಮ ಪ್ರಗತಿಪರ ಸಮುದಾಯದ ನಡವಳಿಕೆಗಳನ್ನು ವಿವರಿಸಲು ಅಸಮರ್ಪಕ. ಹಾಗಾದರೆ ಪ್ರಗತಿಪರರ ಪ್ರತಿಕ್ರಿಯೆಗಳನ್ನು ವಿವರಿಸುವ ಪರ್ಯಾಯ ಸಾಧ್ಯತೆಗಳೇನಾದರೂ ನಮಗೆ ದೊರೆಯುತ್ತವೆಯೆ?

ಈ ರೀತಿಯ ಪ್ರಯತ್ನವನ್ನು ನಾವು ಯಾವುದು ಪ್ರಗತಿಪರ ಬುದ್ದಿಜೀವಿಗಳ ಬೌದ್ದಿಕ ಚಟುವಟಿಕೆಗಳ ಅತ್ಯಂತ ಮೂಲಭೂತವಾದ ಅಂಶ ಎಂಬುದನ್ನು ಗುರುತಿಸಿಕೊಳ್ಳುವ ಮೂಲಕ ಮಾಡಬಹುದು. ಈ ರೀತಿಯ ಒಂದು ಸಣ್ಣ ಪರಿಶೋಧನೆಯನನು ಮಾಡಿದಾಗ ನಮ್ಮ ಪ್ರಗತಿಶೀಲ ಬುದ್ದಿಜೀವಿಗಳ ವೈಚಾರಿಕತೆ ಕೆಲವು ಐಡಿಯಾಲಜಿಗಳನ್ನು ಆಧರಿಸಿ ಇರುತ್ತದೆ ಎಂದು ಎಲ್ಲರಿಗೂ ಸಾಧಾರಣವಾಗಿ ಗೋಚರವಾಗುತ್ತದೆ. ನಮ್ಮ ಸುತ್ತಮುತ್ತಲಿನ ಎಲ್ಲ ಬೌದ್ಧಿಕ ಚರ್ಚೆಯಲ್ಲಿ ಪಾಲ್ಗೊಳ್ಳುವ ವ್ಯಕ್ತಿಯೊಬ್ಬ ಯಾವ ಐಡಿಯಾಲಜಿಯ ಹಿನ್ನಲೆಯಿಂದ ಚರ್ಚಿಸುತ್ತಿದ್ದಾನೆ ಎಂಬುದು ಅತ್ಯಂತ ಮುಖ್ಯ ಎಂದು ನಮ್ಮ ಬುದ್ಧಿಜೀವಿಗಳು ವಾದಿಸುತ್ತಾರೆ. ಅದರಲ್ಲೂ ಇಡೀ ಸಂಶೋಧನೆಯೇ ಐಡಿಯಾಲಜಿಯ ಆಧಾರಿತವಾಗಿ ಇರಬೇಕು ಎಂದೂ ಹೇಳುತ್ತಾರೆ. ಒಟ್ಟಾರೆಯಾಗಿ ನಮ್ಮ ಸುತ್ತಮುತ್ತಲಿನ ಬೌದ್ಧಿಕ ಜಗತ್ತು ಐಡಿಯಾಲಜಿಯ ಕೇಂದ್ರಿತವಾಗಿಯೇ ನಡೆಯುತ್ತದೆ. ಹಾಗಾದರೆ ನಾವು ಈ ಐಡಿಯಾಲಜಿಯೇ ನಮ್ಮ ಪ್ರಗತಿಪರರ ಅಸಹಿಷ್ಣುತೆ ಮತ್ತು ಅದರಿಂದ ಉತ್ಪತ್ತಿಯಾಗುವ ಹಿಂಸೆಗೆ ಕಾರಣ ಎಂದು ವಾದಿಸಲು ಸಾಧ್ಯವೆ? ಬಹುಶಃ ಸಾಧ್ಯ.

ಐಡಿಯಾಲಜಿಯು ಮೂಲಭೂತವಾಗಿ ಎರಡು ಭಿನ್ನ ರೀತಿಯ ಸಮಸ್ಯೆಗಳನ್ನು ಹುಟ್ಟಿಹಾಕುತ್ತದೆ. ಮೊದಲನೆಯದಾಗಿ ಐಡಿಯಾಲಜಿ ಒಂದು ವೈಜ್ಞಾನಿಕ ಸಿದ್ಧಾಂತಕ್ಕಿಂತ ಭಿನ್ನವಾದ ರೂಪವನ್ನು ಹೊಂದಿದೆ. ಯಾವುದೇ ವೈಜ್ಞಾನಿಕ ಸಿದ್ಧಾಂತವೊದನ್ನು ನಿರಾಕರಿಸುವ ಸಾಧ್ಯತೆ ಅದರೊಳಗಿನ ಒಂದು ಅಂತರ್ಗತ ಅಂಶವಾಗಿದ್ದರೆ ಅದೊಂದು ವೈಜ್ಞಾನಿಕ ಸಿದ್ಧಾಂತವಾಗುತ್ತದೆ. ಸಮಾಜವಿಜ್ಞಾನಗಳ ವಲಯದಲ್ಲಿ ಈಗಾಗಲೇ ವಿದ್ವಾಂಸರು ಒಪ್ಪಿಕೊಂಡಿರುವ ಸಂಶೋಧನೆಯ ವಿಧಾನಗಳನ್ನು ಅನುಸರಿಸಿ ಆ ವಾದವನ್ನು ಪುರಸ್ಕರಿಸುವ ಅಥವಾ ಅಲ್ಲಗಳೆಯುವ ಸಾಧ್ಯತೆ ಇಲ್ಲದಿದ್ದರೆ ಅದು ವೈಜ್ಞಾನಿಕ ಸಿದ್ಧಾಂತ ಎನಿಸಿಕೊಳ್ಳುವುದಿಲ್ಲ. ಐಡಿಯಾಲಜಿಯಲ್ಲಿ ಅಂತಹ ಸಾಧ್ಯತೆಗಳೇ ಇರುವುದಿಲ್ಲ. ಇಲ್ಲಿ ನಂಬಿಕೆ ಹಾಗೂ ಯಾವುದನ್ನು ನಾವು ನಂಬಿದ್ದೇವೆಯೋ ಅದರ ಬಗೆಗಿನ ಬದ್ಧತೆ ಬಹಳ ಮುಖ್ಯವಾಗುತ್ತದೆ. ಐಡಿಯಾಲಜಿಗಳಿಗೆ ಈ ಸ್ವರೂಪ ಪ್ರಾಪ್ತವಾಗಿರುವುದು ಅವುಗಳ ಆರಂಭದ ಮೂಲವಾಗಿರುವ ಯೂರೋಪಿನ ಜ್ಞಾನಪುನರಜ್ಜೀವನ ಮತ್ತು ಜ್ಞಾನೋದಯ ಕಾಲದಲ್ಲಿ ಆದ ಬೆಳವಣಿಗೆಗಳಿಂದ. ಆಗ ರಿಲಿಜನ್ನಿನ ವಿಚಾರಗಳ ಹಿಡಿತದಿಂದ ಬಿಡಿಸಿಕೊಳ್ಳುವ ಪ್ರಕ್ರಿಯೆಯಲ್ಲಿ ಅಲ್ಲಿನ ಬೌದ್ದಿಕವಲಯ ರಿಲಿಜನ್ನಿನ ವಿಚಾರಗಳ ಜಾಗದಲ್ಲಿ ವೈಚಾಕರಿಕವೆನ್ನುವ ಸೆಕ್ಯುಲರ್ ವಿಚಾರಗಳನ್ನು ತರುವ ಪ್ರಯತ್ನ ಮಾಡಿತು.

ಈ ಪ್ರಯತ್ನದಲ್ಲಿ ರಿಲಿಜನ್ನಿನ ಸಾಂಸ್ಕೃತಿಕ ಹಿನ್ನೆಲೆಯ ಅವರ ಬೌದ್ದಿಕ ಚಿಂತನೆಯಲ್ಲಿ ರಿಲಿಜನ್ನಿನದೇ ಲೋಕಧೃಷ್ಟಿ ಮತ್ತು ಅದರ ವಿಚಾರಗಳೇ ಸೆಕ್ಯಲರೀಕರಣ ಗೊಂಡವು. ಹಾಗಾಗಿ ಈ ಸೆಕ್ಯಲರ್ ವಿಚಾರಗಳನ್ನು ಒಳಗೊಂಡ ಐಡಿಯಾಲಜಿಗಳ ಮೇಲಿನ ನಂಬಿಕೆ ಮತ್ತು ವಾಗ್ವಾದಗಳ ಚೌಕಟ್ಟಿಗೆ ರಿಲಿಜನ್ನಿನ ಗುಣವೇ ಪ್ರಾಪ್ತವಾಯಿತು. ಪರಿಣಾಮವಾಗಿ ರಿಲಿಜನ್ನುಗಳಿಗೆ ಹೇಗೆ ಅವುಗಳು ಪ್ರತಿಪಾದಿಸುವ ‘ಸತ್ಯ’ಗಳ ಕುರಿತು ಅನುಯಾಯಿಗಳ ಫೇತ್ ಮತ್ತು ಬದ್ದತೆ ಮುಖ್ಯವೋ ಅದೇ ರೀತಿಯಲ್ಲಿ ‘ಐಡಿಯಾಲಜಿಗಳಿಗೂ ಅವು ಮುಖ್ಯವಾದವು. ಅಂದರೆ, ಐಡಿಯಾಲಜಿಗಳೆಂದರೆ ಸೆಕ್ಯುಲರೀಕೃತ ರಿಲಿಜನ್ನುಗಳೇ ಆಗಿವೆ. ಪ್ರತಿವಾದಿಗಳ ವಿಚಾರಗಳು ಮತ್ತು ವಾದಗಳ ಕುರಿತ ಇಂದಿನ ಬುದ್ದಿಜೀವಿಗಳ ಅಸಹಿಷ್ಣುತೆಯನ್ನು ರಿಲಿಜನ್ನುಗಳ ಅಸಹಿಷ್ಣತೆಯ ಮಾದರಿಯನ್ನೇ ಹೋಲುತ್ತಿರುವುದು ಮತ್ತು ರಿಲಿಜನ್ನುಗಳಂತೆಯೇ ತಮ್ಮ ವೈರಿಗಳನ್ನು ಇಲ್ಲವಾಗಿಸುವ ಧೊರಣೆಗಳನ್ನು ಈ ಬೌದ್ದಿಕವಲಯ ಪ್ರದರ್ಶಿಸುತ್ತಿರುವುದನ್ನು ಈ ‘ಐಡಿಯಾಲಜಿ’ಗಳ ಗುಣವಿಶೇಷಕ್ಕೆ ಉದಾಹರಣೆಯಾಗಿವೆ.

ಹಾಗಾಗಿ ಐಡಿಯಾಲಜಿ ಆಧರಿತ ಯಾವುದೇ ಚರ್ಚೆಗಳು ಒಂದು ಸಂವಾದವನ್ನು ಹುಟ್ಟು ಹಾಕಲು ಸಾಧ್ಯವಿಲ್ಲ. ಯಾಕೆಂದರೆ ಸಂವಾದಗಳಲ್ಲಿ ನಮ್ಮ ಐಡಿಯಾಲಜಿಯ ನಂಬಿಕಗಳು ಪ್ರಶ್ನೆಗೊಳಪಡುತ್ತವೆ. ಹಾಗೆ ಪ್ರಶ್ನಿಸುವುದು ಐಡಿಯಾಲಜಿಕಲ್ ಆಗಿ ವ್ಯವಹರಿಸುವುದರ ವಿರುದ್ಧವಾಗಿರುತ್ತದೆ. ಎರಡನೆಯದಾಗಿ ನಮ್ಮ ಸುತ್ತ ಮುತ್ತಲಿನ ಐಡಿಯಾಲಜಿಕಲ್ ಚರ್ಚೆಗಳು ಮೂಲಭೂತವಾಗಿ ಯಾವುದನ್ನು ಪಶ್ಚಿಮದ ಜಗತ್ತು ತಮ್ಮ ಅನುಭವದಿಂದ ಅನ್ಯ ಸಂಸ್ಕೃತಿಗಳ ಕುರಿತಾಗಿ ವಿವರಣೆ ಎಂದು ನೀಡಿದೆಯೊ ಅದನ್ನು ವಾಸ್ತವ ಮತ್ತು ನಮ್ಮ ಅನುಭವ ಎಂದು ಕುರುಡಾಗಿ ನಂಬುವಂತೆ ಮಾಡುತ್ತದೆ. ಉದಾಹರಣೆಗೆ ಐಡೆಂಟಿಟಿ, ಜಾತಿವ್ಯವಸ್ಥೆ, ಸೆಕ್ಯುಲರಿಸಂ, ಕೋಮುವಾದ, ಲಿಬರಲಿಸಂ ಇತ್ಯಾದಿ. ಈಗಾಗಲೇ ಬಾಲಗಂಗಾಧರ ಮತ್ತು ಇತರ ಅನೇಕರ ಸಂಶೋಧನೆಗಳು ಈ ರೀತಿಯ ಪರಿಕಲ್ಪನೆಗಳು ನಮ್ಮ ಅನುಭವ ಪ್ರಪಂಚದ ಭಾಗವಲ್ಲ ಮತ್ತು ಅವುಗಳನ್ನು ಬಳಸುವುದರಿಂದ ನಾವು ಯಾವ ವಿದ್ಯಮಾನದ ಕುರಿತು ಚರ್ಚೆ ಮಾಡುತ್ತಿದ್ದೇವೆ ಎಂಬುದು ಅರ್ಥವಾಗುವುದಿಲ್ಲ ಎಂಬುದನ್ನು ತೋರಿಸಿಕೊಟ್ಟಿದ್ದಾರೆ. ಹಾಗಾಗಿ ಐಡಿಯಾಲಜಿ ಮತ್ತು ಅದರ ಹಿಂದಿರುವ ಪಶ್ಚಿಮದ ಗ್ರಹಿಕೆಯ ಚೌಕಟ್ಟು ನಮ್ಮನ್ನು ಯಾವುದೇ ಆರೋಗ್ಯಕರ ಚರ್ಚೆಯಯಲ್ಲಿ ತೊಡಗಲು ಅಡ್ಡಿ ಮಾಡುತ್ತವೆ ಅನ್ನಬಹುದು. ಹಾಗಾಗಿ ಇಂದು ಮಟ್ಟು ಮತ್ತು ಪ್ರಗತಿಪರ ಬುದ್ಧಿಜೀವಿಗಳು ತಾವು ಹೇಳಿದ್ದು ಮಾತ್ರವೇ ಸತ್ಯ ಎಂದು ವಾದಿಸುವುದು ಮತ್ತು ಅದನ್ನು ಪ್ರಶ್ನಿಸುವವರ ವಿರುದ್ಧ ತೋರಿಸುತ್ತಿರುವ ಅಸಹನೆ ಮತ್ತು ಹಿಂಸಾತ್ಮಕ ವರ್ತನೆಗಳು ಬಹುಶಃ ಅವರ ಐಡಿಯಾಲಜಿಕಲ್ ಬದ್ಧತೆ ಮತ್ತು ಅದರ ಹಿಂದಿರುವ ಪಶ್ಚಿಮದ ಗ್ರಹಿಕೆಯ ಚೌಕಟ್ಟಿನ ಕೊಡುಗೆಯಾಗಿರಬಹುದಂದು ವಾದಿಸಬಹುದು. ಈ ವಾದವು ಸರಿಯಾದ ಪಕ್ಷದಲ್ಲಿ ನಾವು ಹೊಸ ಬೌದ್ಧಿಕ ಚರ್ಚೆಗೆ ತೊಡಗಬಹುದಾದ ಸಾಧ್ಯತೆಯನ್ನು ಈ ವಿಶ್ಲೇಷಣೆ ತೆರೆಯಬಹುದು.

9 ಟಿಪ್ಪಣಿಗಳು Post a comment
 1. ಫೆಬ್ರ 5 2015

  ಇದು ನಮ್ಮ ಬುದ್ಧಿಜೀವಿಗಳ ಅಸಹಿಷ್ಣುತೆಗೆ ಹಿಡಿದ ಕೈಗನ್ನಡಿಯಾಗಿದೆ

  ಉತ್ತರ
 2. ಫೆಬ್ರ 5 2015

  ವಿಚಾರಪೂರ್ಣ ಬರಹ. ಮಟ್ಟುವಿನ ಅಟ್ಟಹಾಸದ ಹಿಂದಿನ ಕೆಟ್ಟ ಹುಳುಗಳ ಹುಟ್ಟನ್ನು ಎತ್ತಿ ತೋರಿಸುವ ದಿಟ್ಟ ಲೇಖನ. ಈ ಚಿಂತಕರೆಂದು ಕರೆದುಕೊಳ್ಳುವ ಸೌಹಾರ್ದತೆಯ ಹಂತಕರ ವಿಚಾರಧಾರೆಯ ಮೂಲವನ್ನು ಅನಾವರಣಗೊಳಿಸುವ ಉತ್ತಮ ಲೇಖನ.

  ಉತ್ತರ
 3. ಹರೀಶ್
  ಫೆಬ್ರ 6 2015

  ವೈಚಾರಿಕ ಲೇಖನ

  ಉತ್ತರ
 4. ಫೆಬ್ರ 6 2015

  if the group is open than admin will have no or less control on posts and making admin responsible for bad abusive posts is purely personal vendetta but glad it started a wider debate on freedom of speech in karnataka especially under congress rule

  ಉತ್ತರ
 5. ಫೆಬ್ರ 6 2015

  and admin can only moderate and in this case it looks like admin did take action and he has done his dutie

  ಉತ್ತರ
 6. Shripad
  ಫೆಬ್ರ 6 2015

  ಇಂಥ ತಾರ್ಕಿಕ ಆಯಾಮವನ್ನು ಚರ್ಚಿಸಲು ನಮಗೆ ಸಮಯವಿಲ್ಲ ಎಂದು ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಗುತ್ತಿಗೆ ಪಡೆದವರು ಹೇಳಬಹುದು! ನಿಜಕ್ಕೂ ನೀವೆತ್ತಿರುವ ಪ್ರಶ್ನೆಗಳು ಚರ್ಚಾರ್ಹ.

  ಉತ್ತರ
 7. Shripad
  ಫೆಬ್ರ 6 2015

  ಈ ಐಡಿಯಾಲಜಿ ಬಹಳ ಅಪಾಯಕಾರಿ. ಮಾಧ್ಯಮ ಮಾತ್ರವಲ್ಲ, ಅದು ಸಾಹಿತ್ಯಕ್ಕೂ ಪಾರ್ಥೇನಿಯಂನಂತೆ ಆವರಿಸಿದೆ. ಈ ಕುರಿತು ಜೂನ್ ೦೯, ೨೦೧೪ರಂದು ನಿಲುಮೆಯಲ್ಲಿ “ಐಡಿಯಾಲಜಿಯ ಅಪಾಯಗಳು” ಎಂಬ ಲೇಖನವನ್ನೇ ಬರೆದಿದ್ದೆ!

  ಉತ್ತರ
 8. simha sn
  ಫೆಬ್ರ 8 2015

  well said madam. each and every point is appreciable !

  ಉತ್ತರ
  • shripad
   ಫೆಬ್ರ 8 2015

   This chaitra is not Madam, it is Sir!

   ಉತ್ತರ

ನಿಮ್ಮ ಅನಿಸಿಕೆ...

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Note: HTML is allowed. Your email address will never be published.

Subscribe to comments