ವಿಷಯದ ವಿವರಗಳಿಗೆ ದಾಟಿರಿ

ಫೆಬ್ರವರಿ 9, 2015

ಪ್ರಸ್ಥಾನ: ಕಲ್ಕತ್ತಾದಿಂದ ಬರ್ಲಿನ್ನಿನ ವರೆಗೆ; ದಾಸ್ಯದಿಂದ ಮುಕ್ತಿಯವರೆಗೆ

‍ನಿಲುಮೆ ಮೂಲಕ

– ಎಸ್.ಎನ್.ಭಾಸ್ಕರ್‍

NSC-Bose-Airಕಲ್ಕತ್ತಾ ನಗರದ ಎಲ್ಗಿನ್ ರಸ್ತೆಯ ಮನೆಯೊಂದರಲ್ಲಿನ ಪ್ರತ್ಯೇಕ ಕೋಣೆ. ದಿನಾಂಕ ೧೬ ನೇ ಜನವರಿ, ಇಸವಿ ೧೯೪೧.

“ರಾಷ್ಟ್ರಂ ಧಾರಯತಾಂ ಧ್ರೃವಂ”

“ರಾಷ್ಟ್ರಂ ಅಶ್ವಮೇಧಃ”

ಇದು ಸಂಕಲ್ಪ. ಈ ಧೀರ ಸಂಕಲ್ಪ ಮನೆಮಾಡಿದ್ದ ಆ ವ್ಯಕ್ತಿ ಪದ್ಮಾಸನ ಹಾಕಿ ಕುಳಿತಿದ್ದಾರೆ. ಎಡಗೈನಲ್ಲಿ ಜಪಮಾಲೆ ಮನದಲ್ಲಿ ಪ್ರಣವಮಂತ್ರ. ಮುಚ್ಚಿದ ಕಣ್ಗಳ ಹಿಂದೆ ಅದೆಂತಹ ಉಜ್ವಲ ಭವಿತವ್ಯದ ನೋಟವಿತ್ತೋ..! ಅರಿಯಬಲ್ಲವರು ತಾನೇ ಯಾರಿದ್ದರು ?

ಮಂದಸ್ಮಿತ ಅಂತರ್ಮುಖಿಯಾದ ಮುಖಾರವಿಂದದ ನೆರಳಿನಲ್ಲಿ ಸ್ಪಷ್ಟ ನಿಲುವು ಅಪ್ರಯತ್ನಪೂರ್ವಕವಾಗಿ ನಳನಳಿಸುತಲಿತ್ತು. ಆಳವಾದ ಧ್ಯಾನ. ಜಪಮಾಲೆಯನ್ನು ಹಿಡಿದಿದ್ದ ಕೈ ಬೆರಳುಗಳನ್ನು ಹೊರತು ಪಡಿಸಿ ಇಡೀ ದೇಹ ನಿರ್ಲಿಪ್ತ. ಮನದಲ್ಲಿ ಜ್ವಾಲಾಮುಖಿಯೇ ಇದ್ದರೂ, ಹಿಮಾಲಯದ ಪರ್ವತದಂತೆ ಶಾಂತಸ್ಮಿತ. ಮುಂಜಾನೆಯ ಮೊಗ್ಗರಳುವಂತೆ ನಿಧಾನವಾಗಿ ಕಣ್ಣಗಳನ್ನು ತೆರೆಯುತ್ತಾರೆ. ಎದುರಿಗೆ ಗೋಡೆಯ ಮೇಲೆ ಸ್ವಾಮಿ ವಿವೇಕಾನಂದರ ಭಾವಚಿತ್ರ ಅದರ ಎಡಗಡೆಗೆ ರಾಮಕೃಷ್ಣ ಪರಮಹಂಸರು, ಬಲಗಡೆಗೆ ಮಹರ್ಷಿ ಅರವಿಂದರು. ತನ್ನೆರಡೂ ಕೈಗಳನ್ನೂ ಕಟ್ಟಿ ನಸುನಗುತ್ತಾ ನಿಂತಿದ್ದ ವಿವೇಕಾನಂದರ ಭಾವಚಿತ್ರವನ್ನೇ ನೋಡುತ್ತಾ ನಿಶ್ಚಲರಾಗಿ ಕುಳಿತೇ ಇದ್ದರು. ಅದೆಂತಹ ದಿವ್ಯ ಚೈತನ್ಯ, ದೇದೀಪ್ಯಮಾನವಾದ ಪ್ರಾಂಜ್ವಲ ಕಣ್ಗಳಲ್ಲಿ ಹೊಳೆಯುತ್ತಿದ್ದ ಅಚಲ ವಿಶ್ವಾಸ. ನೋಡುತ್ತಿದ್ದರೇ ಆ ಕಣ್ಗಳೆಂಬ ಸಾಗರದಲ್ಲಿ ಮುಳುಗೇ ಹೋಗುತ್ತೇವೆ. ಸೂಜಿಗಲ್ಲಿಗೆ ಸೆಳೆಯಲ್ಪಡುವ ಕಬ್ಬಿಣದ ಚೂರುಗಳಂತೆ ಸೆಳೆದು ಬಂಧಿಯಾಗುತ್ತೇವೆ. ಎಂತಹ ಆಕರ್ಷಣೀಯ ವ್ಯಕ್ತಿತ್ವ…!! ಕಣ್ತುಂಬಿ ಬಂತು ಮೂಡಿದ ಹನಿಗಳು ಧಳ ಧಳನೇ ಇಳಿಯತೊಡಗಿದವು ನೋಟ ಮಾತ್ರ ನಿಶ್ಚಲ..ನಿರ್ಲಿಪ್ತ. ರೋಮ ರೋಮಗಳಲ್ಲೂ ವಿದ್ಯುತ್ ಸಂಚಾರ. ಅವರ ನಿರ್ಧಾರ ಸಂಪೂರ್ಣವಾಗಿತ್ತು. ರೂಪುರೇಷೆಗಳು ಸಿದ್ದವಾಗಿದ್ದವು. ಇಟ್ಟ ಹೆಜ್ಜೆ ಹಿಂತೆಗೆದ ನಿದರ್ಶನ ಜಾಯಮಾನದಲ್ಲೇ ಇಲ್ಲವಲ್ಲ. “ರಾಷ್ಟ್ರಂ ಧಾರಯತಾಂ ದ್ರೃವಂ: ರಾಷ್ಟ್ರಂ ಅಶ್ವಮೇಧಃ:”.

“ಸುಭಾಷ್..ಸುಭಾಷ್… ತಿಂಡಿ ಇರಿಸಿದೆ” ಕೋಣೆಗಿದ್ದ ಕಿಟಕಿಯ ಬಳಿ ಆಹಾರವನ್ನಿರಿಸಿದ ಒಬ್ಬ ವ್ಯಕ್ತಿ ಮರುಕ್ಷಣವೇ ಅಲ್ಲಿಂದ ಹೊರಟಿದ್ದರು. ಸುಭಾಷರು ತಾನಿದ್ದ ಆ ಕೋಣೆಯಿಂದ ಹೊರಬಂದು ಒಂದು ತಿಂಗಳೇ ಕಳೆದಿತ್ತು. ಊಟ ಆಹಾರಾಧಿಗಳನ್ನು ಆ ಕಿಟಕಿಯ ಮೂಲಕವೇ ಸರಬರಾಜು ಮಾಡಲಾಗುತ್ತಿತ್ತು. ದಿವ್ಯ ಏಕಾಂತ. ಅನಂತ ಮೌನ. ಅವರ ಈ ಏಕಾಂತದ ವ್ರತ ಅಂದಿಗೆ ಮುಗಿದಿತ್ತು. ತಮ್ಮ ಸಂಕಲ್ಪ ಯಾತ್ರೆಯ ಮೊದಲ ಹೆಜ್ಜೆಗೆ ಭೂಮಿಕೆ ಸಿದ್ದವಾಗಿತ್ತು. ನಿಶ್ಚಯ ಎಂದಿನಂತೆ ಸ್ಥಿರ, ದೃಢ. ಮನೆಯ ಆ ಕೋಣೆಗೆ ಹೊಂದಿಕೊಂಡಿದ್ದ ದೊಡ್ಡ ಹಾಲಿನಲ್ಲಿ ಎತ್ತರದ ಹಿಡಿಯ ಖುರ್ಚಿಯ ಮೇಲೆ ಶರಚ್ಚಂದ್ರ ಭೋಸರು ದಿನಪತ್ರಿಕೆಯನ್ನು ಓದುತ್ತಾ ಕುಳಿತಿದ್ದರು. ಅದೇ ಹಾಲಿನ ಮೂಲೆಯೊಂದರಲ್ಲಿ ಇರಿಸಲಾಗಿದ್ದ ರೇಡಿಯೋವನ್ನು ಟ್ಯೂನ್ ಮಾಡುತ್ತಾ ಇದ್ದವನು ಇವರ ಕಿರಿಯ ಮಗ ಸುಮಾರು ೨೦ ವರ್ಷ ವಯಸ್ಸಿನ ಶಿಶಿರಕುಮಾರ ಭೋಸ್. ಕರ್‍ರ್‌…. ಎಂದು ಶಬ್ದಮಾಡುತ್ತಾ ಆ ಕೋಣೆಯ ಬಾಗಿಲು ತೆರೆದುಕೊಂಡಿತು. ಶಬ್ದ ಕಿವಿಯ ಮೇಲೆ ಬೀಳುತ್ತಲೇ ಅಲ್ಲಿದ್ದ ಇಬ್ಬರೂ ಕೋಣೆಯೆಡೆಗೆ ತಮ್ಮ ನೋಟವನ್ನು ನೆಟ್ಟರು. ಗಡ್ಡಧಾರಿ ಸುಭಾಷರು ತಮ್ಮ ಬಲಗಾಲನ್ನು ಹೊರಗಿಡುತ್ತಾ ಹಾಲಿಗೆ ಬಂದರು. ಕೆಲ ಕ್ಷಣ ಮೌನ. ಇವರನ್ನು ನೋಡುತ್ತಲೇ ಎದ್ದು ನಿಂತ ಶರಚ್ಚಂದ್ರರು ಪಕ್ಕದಲ್ಲಿ ಹೋಗಿ ಕುಳಿತರು. ಸುಭಾಷರು ಬಂದು ಶರಚ್ಚಂದ್ರ ಕುಳಿತಿದ್ದ ಖುರ್ಚಿಯ ಮೇಲೆ ಆಸೀನರಾದರು. ಎಲ್ಲರೆಡೆಗೂ ಒಮ್ಮ ನೋಡಿ ಮುಗುಳ್ನಕ್ಕು “ ಬನ್ನಿ ಊಟ ಮಾಡೋಣ” ಎಂದರು. ಅಂದು ಎಲ್ಲಾ ಕುಟುಂಬ ಸದಸ್ಯರೊಡನೆ ರಾತ್ರಿಯ ಊಟ ಮುಗಿಸಿದರು. ಊಟ ಮಾಡಿದ ನಂತರ ಅದೇ ಖುರ್ಚಿಯ ಮೇಲೆ ಕುಳಿತಿದ್ದ ಸುಭಾಷರ ಬಳಿಗೆ ಬಂದ ಅಣ್ಣ ಶರಚ್ಚಂದ್ರರು ತಮ್ಮ ಬಳಿ ಇನ್ನೂ ಒಡೆಯದ ಟಪಾಲೊಂದನ್ನು ಹಿಡಿದುಕೊಂಡಿದ್ದರು. ಸುಭಾಷರ ಪಕ್ಕದಲ್ಲಿ ಬಂದು ಕುಳಿತು “ಇಂದು ಸಂಜೆ ಪತ್ರ ತಲುಪಿತು” ಎನ್ನುತ್ತಾ ಪತ್ರವನ್ನು ಬೋಸರ ಕೈಗಿತ್ತರು. ಲಕೋಟೆಯನ್ನು ಬೋಸರೇ ಒಡೆದರು.

ಸಧ್ಯಕ್ಕೆ ನಿಮ್ಮ ಆರೋಗ್ಯದೆಡೆಗೆ ನಿಮ್ಮ ನಿಗಾ ಇರಲಿ. ರಾಷ್ಟ್ರವನ್ನು ದಾಸ್ಯ ಮುಕ್ತಗೊಳಿಸುವ ನಿಟ್ಟಿನಲ್ಲಿ ನಮ್ಮಿಬ್ಬರಲ್ಲೂ ಮೂಲಬೂತವಾದ ಅಭಿಪ್ರಾಯ ಬೇದವಿದೆ. ನಮ್ಮಲ್ಲಿ ಯಾರಾದರೊಬ್ಬರು ಪರಿವರ್ತಿತರಾಗದೇ ಒಟ್ಟಾಗಿ ಮುಂದಡಿ ಇಡಲು ಸಾಧ್ಯವಿಲ್ಲ. ಅಲ್ಲಿಯವರೆಗೂ ನಮ್ಮ ನಮ್ಮ ಪ್ರತ್ಯೇಕ ದಾರಿಗಳಲ್ಲಿ ನಾವು ಮುಂದುವರೆಯುವುದು ಮೇಲು.”

ಎಂ.ಕೆ.ಗಾಂಧಿ.

ತಮ್ಮ ಅಸಹಕಾರವೆಂಬ ಅಸ್ತ್ರವನ್ನು ಗಾಂಧೀಜಿ ಪ್ರಯೋಗಿಸಿದ್ದರು. ಬ್ರಿಟೀಷರ ವಿರುದ್ದವಲ್ಲ, ಬದಲಿಗೆ ಸುಭಾಷರ ವಿರುದ್ದ. “ನಿಮ್ಮ ದಾರಿ ನಿಮ್ಮದು” ಎಂಬ ಧಾಟಿಯಲ್ಲಿದ್ದ ಆ ಪತ್ರದ ಒಕ್ಕಣೆ ಸುಭಾಷರಿಗೆ ಅನಿರೀಕ್ಷಿತವಾದುದ್ದೇನೂ ಆಗಿರಲಿಲ್ಲ. ನಿರೀಕ್ಷಿತವೇ. ಆದರೂ ಕೊನೆಯ ಪ್ರಯತ್ನವಾಗಿ ತೀವ್ರ ಸ್ವರೂಪದ ಆಂದೋಲನಕ್ಕೆ ಕರೆ ನೀಡಿದಲ್ಲಿ ನಾವೂ ಸಹಾ ಜೊತೆಗೂಡುತ್ತೇವೆ ಎನ್ನುತ್ತಾ ಪತ್ರ ಬರೆದಿದ್ದರು. ಇದು ಗಾಂಧೀಜಿಯವರೆಡೆಗೆ ಸುಭಾಷರಗಿದ್ದ ಗೌರವವನ್ನೇ ಸೂಚಿಸುತ್ತಿತ್ತು. ನಕಾರಾತ್ಮಕ ಪ್ರತಿಕ್ರಿಯೆಯನ್ನು ಕಂಡು ಸುಭಾಷರು ತಮ್ಮ ಸಹೋದರ ಶರಚ್ಚಂದ್ರರೆಡೆಗೆ ನೋಡಿ ಮುಗುಳ್ನಕ್ಕರು. ಸೆಳೆಯುತ್ತಿದ್ದ ಇವರ ನೋಟದ ಅಂತರಾದೊಳಕ್ಕೆ ಇಣುಕ ತೊಡಗಿದ್ದರು ಶರಚ್ಚಂದ್ರರು. ಅಬ್ಬ ಅದೆಂತಹ ದೃಢ ಚಿತ್ತದ ಅನಂತ ಸಾಗರ. “ಶಿಶಿರ ಕುಮಾರ್‍ ಸ್ವಲ್ಪ ನನ್ನ ಕೋಣೆಗೆ ಬಾ” ಎನ್ನುತ್ತಾ ಎದ್ದು ನಿಂತು ತನ್ನ ಕೋಣೆಯೊಳಗೆ ಹೋದ ಭೋಸರನ್ನೇ ನೋಡುತ್ತಾ ತೆರೆದ ಕಣ್ಣಗಳನ್ನು ತೆರೆದು ನಿಶ್ವಲಲಾಗಿ ನಿಂತರು.

ಸುಮಾರು ಒಂದು ಗಂಟೆಯ ನಂತರ ಕೋಣೆಯಿಂದ ಬಂದ ಶಿಶಿರಕುಮಾರ ಮೊದಲೇ ನಿಶ್ಚಯಿಸಿದಂತೆ ಮನೆಯಿಂದ ಹೊರಗೆ ಬಂದ. ಮಂಜು ಮುಸುಕಿದ ರಾತ್ರಿಯಲ್ಲಿ ದಿಟ್ಟ ಹೆಜ್ಜೆಗೆಳನ್ನು ಹಾಕುತ್ತಾ ನಡೆಯುತ್ತಾ ಮರೆಯಾದ. ತಮ್ಮ ಕೋಣೆಯ ಕಿಟಕಿಯಿಂದ ಹೊರಗೆ ದೃಷ್ಟಿ ನೆಟ್ಟಿದ್ದರು ಸುಭಾಷರು. ಗಾಢ ಕತ್ತಲು ತುಂಬಿದ್ದ ರಾತ್ರಿ. ಆಗಸದಲ್ಲಿ ತಾರೆಗಳು ಸ್ವಚ್ಚಂದವಾಗಿ ಫಲ ಫಳನೇ ಹೊಳೆಯುತ್ತಿತ್ತು. ಮನದಾಳವನ್ನು ಅರಿತಂತೆ, ಕೋಟಿ ಕೋಟಿಯಿದ್ದ ಇಡೀ ತಾರಾಲೋಕವು ಇವರ ಮನಸ್ಸಿನ ನಿಶ್ಚಯವನ್ನು ಮತ್ತಷ್ಟು ದೃಢಪಡಿಸುತ್ತಿದ್ದವು. ದೂರದ ಅಂಚಿನಲ್ಲಿ ತಾರೆಯೊಂದು ಸರ್‍ರನೇ ಜಾರಿ ಬಿದ್ದು ಅದೃಶ್ಯವಾಯಿತು, ಇವರ ಮನದಾಳದ ಬಯಕೆ ಏನೆಂಬುದು ಹೇಳುವ ಅಗತ್ಯವಿಲ್ಲ ಅಲ್ಲವೇ..!!

ಮದ್ಯರಾತ್ರಿ ೧ ಗಂಟೆಯ ಸಮಯ, ತಮ್ಮ ಕೋಣೆಯ ನಿಲುಗನ್ನಡಿಯ ಮುಂದೆ ಬೋಸರು ನಿಂತಿದ್ದಾರೆ. ಪಠಾಣ ಮುಸ್ಲಿಂ ಶೈಲಿಯ ಧಿರಿಸು, ಕಾಲರ್‍ ಇಲ್ಲದ ಕಂದು ಬಣ್ಣದ ಉದ್ದನೆಯ ನಿಲುವಂಗಿ, ಅಗಲವಾಗಿದ್ದ ಪೈಜಾಮ, ತಲೆಗೆ ಪಠಾಣರು ಧರಿಸುವಂತಹ ಕಪ್ಪು ಬಣ್ಣದ ಟೊಪ್ಪಿಗೆ (ಫೆಜ್ ಕ್ಯಾಪ್), ಹೆಚ್ಚು ಕಡಿಮೆ ಕುತ್ತಿಗೆಯನ್ನು ಮುಚ್ಚುತ್ತಿದ್ದ ಗಡ್ಡ. ಶುದ್ದ ಪಠಾಣ ಮುಸ್ಲಿಂ ಪೋಷಾಕಿನ ವೇಷದಲ್ಲಿ ತಯಾರಾಗಿದ್ದರು ಬೋಸರು. ಈ ರೀತಿಯ ವೇಷಧಾರಣೆಯ ಸಲಹೆಯನ್ನು ಇತ್ತಿದ್ದು ಬೋಸರ ಆಪ್ತ ಫಾರ್‍‌ವರ್ಡ್ ಬ್ಲಾಕ್ ನಾಯಕರೂ ಆಗಿದ್ದ ಮಿಯಾನ್ ಅಕ್ಮರ್‍ ಷಾ. ಬೋಸರು ನಿಶ್ಚಯಿಸಿದ್ದ ಪ್ರಸ್ಥಾನ ಅಷ್ಟು ಸುಲಭದ ಕೆಲಸವಂತೂ ಆಗಿರಲಿಲ್ಲ. ಬ್ರಿಟಿಷ್ ಭಾರತದ ಕೇಂದ್ರ ಗುಪ್ತಚರ ಸಂಸ್ಥೆ ಸುಭಾಷರ ಮೇಲೆ ತನ್ನ ಹದ್ದಿನ ಕಣ್ಣನೇ ಇಟ್ಟಿತ್ತು. ಬಂಗಾಲದ ಸಿ.ಐ.ಡಿ ಅಧಿಕಾರಿಗಳನ್ನು ಎತ್ತಂಗಡಿ ಮಾಡಿ ಆ ಜಾಗಕ್ಕೆ ಪಂಜಾಬಿನ ಸಿ.ಐ.ಡಿ ಅಧಿಕಾರಿಗಳನ್ನು ನೇಮಿಸಲಾಗಿತ್ತು. ಬೋಸರ ಮನೆಯಲ್ಲಿ ಏಜೆಂಟ್‌ಗಳನ್ನು ಇರಿಸಲಾಗಿತ್ತು, ಗುಪ್ತ ಮಾಹಿತಿಯನ್ನು ಬೋಸರ ಬಂದುವರ್ಗದಿಂದಲೂ ಸಂಗ್ರಹಿಸಲಾಗುತ್ತಿತ್ತು. ಮೂವತ್ತರ ದಶಕದಲ್ಲಿ ಪಾಶ್ಚಿಮಾತ್ಯ ದೇಶದಲ್ಲಿ ಇದ್ದಾಗಲೂ ಇವರ ಮೇಲೆ ಗೂಡಚರ್ಯೆಯನ್ನು ಬ್ರಿಟೀಷ್ ಸರ್ಕಾರ ನಡೆಸುತ್ತಿತ್ತು. ಮಾಹಿತಿಯ ಪ್ರಕಾರ ಸುಮಾರು ೧೨ ಜನ ಏಜೆಂಟರು ಇವರ ಪ್ರತೀ ನಡೆಯನ್ನೂ ಗಮನಿಸುತ್ತಾ ಪ್ರತೀ ಮಾಹಿತಿಯನ್ನು ಸರ್ಕಾರದ ವಿಶೇಷ ಘಟಕಕ್ಕೆ ರವಾನಿಸುತ್ತಿದ್ದರು. ಇಷ್ಟೆಲ್ಲಾ ಸರ್ಪಗಾವಲಿನ ನಡುವೆಯೂ ಸುಭಾಷರು ನಿಶ್ಚಯ ಮಾಡಿಯಾಗಿತ್ತು. ಭೇಟೆ ಮಾಡಲು ತೀರ್ಮಾನಿಸಿದ ಸಿಂಹ ತನ್ನ ದೃಷ್ಠಿಯನ್ನು ಭೇಟೆಯ ಮೇಲೆ ಏಕಾಗ್ರಗೊಳಿಸುವಂತೆ, ದಾಸ್ಯ ಮುಕ್ತ ಸ್ವತಂತ್ರ ಭಾರತದತ್ತ ಬೋಸರ ಅಚಲ ದೃಷ್ಟಿ ನೆಟ್ಟಿತ್ತು. ಗೋಡೆಗೆ ಹಾಕಲಾಗಿದ್ದ ವಿವೇಕಾನಂದರ ಚಿತ್ತಪಠವನ್ನು ನೋಡುತ್ತಾ ನಿಂತರು.

ಕ್ರಿ.ಶ ೧೮೫೭ ರ ಪ್ರಥಮ ಸ್ವಾತಂತ್ರ ಸಂಗ್ರಾಮದಿಂಲೂ ಗಣನೆಗೆ ತೆಗೆದುಕೊಂಡರೆ ಸ್ವಾತಂತ್ರ ಹೋರಾಟ ಚಳುವಳಿ ಪ್ರಾರಂಭವಾಗಿ ಅಂದಿಗೆ ಎಂಟು ದಶಕಗಳೇ ಕಳೆದಿದ್ದವು. ೧೯೧೨ ರಲ್ಲಿ ಗಾಂಧೀಜಿಯವರ ಆಗಮನದಿಂದ ಈ ಚಳುವಳಿ ತಿರುವನ್ನು ಪಡೆದಿತ್ತು. ಸ್ವತಂತ್ರ ಚಳುವಳಿಯನ್ನು, ಸ್ವತಂತ್ರದ ಆಕಾಂಕ್ಷೆಯನ್ನು, ಭಾರತ ದೇಶದ ಮೂಲೆ ಮೂಲೆಗೆ, ಎಲ್ಲಾ ವರ್ಗದ ಜನಸಮಾನ್ಯರವರೆಗೂ ತಲುಪಿಸಿದ ಹೆಗ್ಗಳಿಕೆ ಗಾಂಧೀಜಿಯವರದ್ದೇ. ಈ ನಿಟ್ಟಿನಲ್ಲಿ ಬೋಸರಿಗೂ ಗಾಂಧೀಜಿಯವರ ಮೇಲೆ ಅಪಾರವಾದ ಗೌರವಾಧರಗಳೇ ಇದ್ದವು. ಆದರೆ ಗಾಂಧೀಜಿಯವರ ಅಸ್ಪಷ್ಟ ನಿಲುವುಗಳು, ಗೊಂದಲಗಳು, ಸಕ್ರಿಯಾತ್ಮಕ ಹೋರಾಟದ ಕೊರತೆ ಇವರ ಗಮನಕ್ಕೆ ಬಂದಿದ್ದವು. ಹೋರಾಟದ ಬಗ್ಗೆ ಸ್ಪಷ್ಠವಾದ ಕಲ್ಪನೆ, ಯೋಜನೆ, ರೂಪುರೇಷೆಗಳು ಗಾಂಧೀಜಿಯವರಲ್ಲಿ ಇರಲಿಲ್ಲ. ಬೇಕು ಎನಿಸಿದಾಗ ಚಳುವಳಿ, ಬೇಡವಾದಾಗ ಹಿಂಪಡೆತ, ಒಮ್ಮೆ ಅಸಹಕಾರ ಮತ್ತೊಮ್ಮೆ ಉಪವಾಸ. ಜಲಿಯನ್ ವಾಲಾಬಾಗ್ ಘಟನೆಯ ಸಮಯದಲ್ಲಿ, ಚೌರಿಚೌರಾ ಘಟನೆಯ ಸಮಯದಲ್ಲಿ, ೧೯೩೧ ರಲ್ಲಿ ಭಗತ್ ಸಿಂಗ್, ಸುಖ್ ದೇವ್ ಮತ್ತು ರಾಜ್‌ಗುರು ರವರನ್ನು ಗಲ್ಲಿಗೇರಿಸಿದಾಗಲೂ ಸಹಾ ಗಾಂಧೀಜಿಯವರ ಅಸ್ಪಷ್ಟತೆಯ, ಗೊಂದಲದ ನಿರ್ಧಾರಗಳನ್ನೇ ತೆಗೆದುಕೊಂಡರಲ್ಲ.

ಬ್ರಿಟೀಷರ ದಾಸ್ಯಕ್ಕೆ ಒಗ್ಗುವ, ಕೊಸರಾಟದ ಚೌಕಾಶಿ ವ್ಯವಹಾರ ಭಾರತದ ವಿಮೋಚನೆಗೆ ಸಹಕರಿಸುವುದಿಲ್ಲ ಎಂಬುದನ್ನು ಬೋಸರು ಮನಗಂಡಿದ್ದರು. ೧೯೪೨ ಮಾಡಿದ ಭಾಷಣದಲ್ಲಿ ಹೀಗೆ ಹೇಳುತ್ತಾರೆ “ಇಂಗ್ಲಿಷರು ಈಗ ಸತ್ತ ಹಾವಿನಂತಾಗಿದ್ದಾರೆ, ಆದರೆ ಜನ ಆ ಸತ್ತ ಹಾವಿಗೂ ಹೆದರುತ್ತಿದ್ದಾರೆ! ಅವರೇ ಕಾಲ್ತೆಗೆಯುತ್ತಿರುವಾಗ ಅವರನ್ನು “ಬಿಟ್ಟುಹೋಗಿ” ಎಂದು ಅಂಗಲಾಚಿ ಪ್ರಾರ್ಥಿಸುವುದರಲ್ಲಿ ಯಾವ ಅರ್ಥವಿದೆ. ಅವರಿಂದ ಸ್ವಾತಂತ್ರವನ್ನು ಕಾಣಿಕೆ ಎಂದು ಪಡೆಯುವುದು ಹೀನಾಯ. ಇತರರಿಂದ ಹಾಗೆ ಪಡೆದುಕೊಂಡ, ಪ್ರಾರ್ಥಿಸಿ ಪಡೆದ ಸ್ವಾತಂತ್ರ ಬಹುಕಾಲ ಉಳಿಯುವುದೂ ಇಲ್ಲ. ಸ್ವಾತಂತ್ಯ್ರ ಎಂಬುದು ಇತರರ ಬಿಕ್ಷೆ/ಕಾಣಿಕೆ ಅಲ್ಲ. ಅದು ಪಡೆದುದು, ಸ್ವ-ಸಂಪಾದಿತ” ಎರಡನೇ ಜಾಗತಿಕ ಯುದ್ದದ ಕಾಲಘಟ್ಟದಲ್ಲಿ ಬ್ರಿಟೀಷರ ಶತ್ರುಗಳಾಗಿದ್ದ ಜರ್ಮನಿ ಮತ್ತು ಜಪಾನ್‌ಗಳ ನೆರವಿಂದ ಭಾರತವನ್ನು ವಿಮೋಚನೆ ಮಾಡುವ ಯೋಜನೆ ಸುಭಾಷರದ್ದಾಗಿತ್ತು. ಈ ನಿಟ್ಟಿನ ಮೊದಲ ಹಂತವೇ ಬ್ರಿಟೀಷ್ ಸರ್ಕಾರದ ಕಣ್ತಪ್ಪಿಸಿ ಭಾರತದಿಂದ ಹೊರಟು ಸುಮಾರು ೮೦೦೦ ಕಿ.ಮೀ ಆಚೆಯ ಬರ್ಲಿನ್ ತಲುಪುವುದು. ಈ ಮಹಾ ಪ್ರಸ್ಥಾನದ ಮೊದಲಹೆಜ್ಜೆ ಇಡುವ ಕೆಲವೇ ಕ್ಷಣಗಳ ಮುನ್ನ ವಿವೇಕಾನಂದ ಭಾವಚಿತ್ರದ ಮುಂದೆ ನಿಂತಿದ್ದಾರೆ ಸುಭಾಷರು. ಮನದಲ್ಲಿ ವಾಣಿ ಪ್ರತಿದ್ವನಿಸುತ್ತಿದೆ “ಏಳು..ಎದ್ದೇಳು…ಗುರಿ ಮುಟ್ಟುವವರೆಗೂ ನಿಲ್ಲದಿರು..”

ಜನವರಿಯ ನೀರವ ರಾತ್ರಿಯ ಚಳಿಗೆ ಇಡೀ ಕಲ್ಕತ್ತೆ ನಗರವೇ ಮುದುರಿಕೊಂಡು ಮಲಗಿತ್ತು. ಮೊದಲೇ ನಿರ್ಧರಿಸಿದಂತೆ ಮದ್ಯರಾತ್ರಿ ೦೧:೩೦ ಕ್ಕೆ ಸರಿಯಾಗಿ ಮನೆಯ ಮಹಡಿ ಮೇಲಿನಿಂದ ಸಂಜ್ಞೆ ಬರುತ್ತದೆ. ಇದಕ್ಕಾಗಿ ಕಾಯುತ್ತಿದ್ದ ಮುಸ್ಲಿಂ ಧಿರಿಸಿನಲ್ಲಿ ಮಹಮದ್ ಜಿಯಾಉದ್ದೀನ್ ಆಗಿ ಅವತರಿಸಿದ್ದ ಬೋಸರು ತಮ್ಮ ಅಣ್ಣನ ಮಗ ಶಿಶಿರಕುಮಾರ ಬೋಸ್‌ನೊಡನೆ ಮನೆಯ ಹಿಂಬಾಗದ ಮೆಟ್ಟಿಲುಗಳನ್ನು ಇಳಿದು ಮುಂಭಾಗಕ್ಕೆ ಬರುತ್ತಾರೆ. ಇವರೀರ್ವರಲ್ಲದೇ ಮತ್ತೊಬ್ಬ ಇವರ ಸಂಬಂಧಿಕ ಅರಬಿಂದೋ ಸಹಾ ಇವರಿಗೆ ಯೋಜನೆಯ ಪ್ರಕಾರ ನೆರವಾಗುತ್ತಾನೆ. ಈತ ಹೊರಗೆ ಬಂದ ಮುಂಭಾಗದ ಗೇಟನ್ನು ತೆರೆಯುತ್ತಲೇ ಶಿಶಿರಬೋಸ್ ಮೊದಲೇ ತಯಾರಾಗಿ ಇಟ್ಟಿದ್ದ ಜರ್ಮನ್ ಮಾಡಲ್ ವಾಂಡರರ್‍ ಕಾರನ್ನು ಸ್ಟಾರ್ಟ್ ಮಾಡುತ್ತಾರೆ. ಬೋಸರು ಹಿಂಬಾಗದಲ್ಲಿ ಕುಳಿತಿರುತ್ತಾರೆ. ನಿಧಾನವಾಗಿ ಗೇಟಿನಿಂದ ಹೊರಬಂದ ಕಾರು ರಸ್ತೆಗಿಳಿದು ಧೂಳೆಬ್ಬಿಸುತ್ತಾ ಮಂಜಿನಲ್ಲಿ ಮರೆಯಾಗುತ್ತದೆ. ತಾವು ಹುಟ್ಟಿ ಬೆಳೆದ ಸ್ವಗೃಹವನ್ನು ಈ ರೀತಿಯಾಗಿ ತೊರೆದು ಹೋದ ಬೋಸರು ಮತ್ತೆಂದೂ ತಮ್ಮ ಮನೆಗೆ ಬರದಾಗದೇ ಇದ್ದದ್ದು ಮಾತ್ರ ವಿಪರ್ಯಾಸ. ವಿಧಿ ನಿಯಮವೆಂದು ವಿಧಿಯನ್ನು ಶಪಿಸುವುದು ಹೇಡಿಗಳ, ಮರುಳರ ಸಂಸ್ಕಾರವಾಗುತ್ತದೆ. ಸತ್ಯವನ್ನು ಎತ್ತಿಹಿಡಿಯುವ, ಸತ್ಯದ ಪರವಾಗಿ ನಿಲ್ಲುವ ಕಾರ್ಯ ವೀರರದ್ದಾಗುತ್ತದೆ.

ಕಾವಲಿಗಿದ್ದ ಸ್ಥಳೀಯ ಪೊಲೀಸರು, ನಿಗಾ ಇಟ್ಟಿದ್ದ ಗುಪ್ತಚರ, ಸಿ.ಐ.ಡಿ ಏಜೆಂಟರು ಇವರೆಲ್ಲರ ಕಣ್ಣ್ತಪ್ಪಿಸಿಕೊಂಡು ಕೊಲ್ಕತ್ತಾ ನಗರವನ್ನು ದಾಟುವುದು ನಿಜಕ್ಕೂ ಸವಾಲಾದ ಸಂಗತಿಯೇ ಆಗಿತ್ತು. ಸರಳ ದಾರಿಯಾದ ದಕ್ಷಿಣೇಶ್ವರದ ವಿಲ್ಲಿಂಗ್‌ಡನ್ ಸೇತುವೆ ಮೂಲಕ ಹೋಗದೇ ಬಳಸು ದಾರಿಯಾದ ಹೌರಾ ಸೇತುವೆಯ ಮೂಲಕ ತೆರಳುತ್ತಾರೆ. ಗ್ರಾಂಡ್ ಟ್ರಂಕ್ ಹೈವೇ ಮೂಲಕ ದುರ್ಗಾಪುರದ ದುರ್ಗಮ ಹಾದಿಯಲ್ಲಿ ಕಾರು ಚಲಿಸುತ್ತಲಿತ್ತು. ಕಿಟಿಕಿಯಾಚೆಗೆ ಬೋಸರು ದೃಷ್ಟಿ ಹಾಯಿಸುತ್ತಾರೆ. ತುಂಬು ಬಿಂದುಗೆಯಿಂದ ಹಾಲನ್ನು ಭುವಿಯ ಮೇಲೆ ಸುರಿದಂತೆ, ಪೂರ್ಣಚಂದಿರ ಧರೆಗೆ ಬೆಳದಿಂಗಳನ್ನು ಚೆಲ್ಲಿದ್ದ. ಎಲ್ಲೆಲ್ಲೂ ಹಾಲು ಬೆಳದಿಂಗಳು. ಹಾದಿಯಲ್ಲಿ ಮಲ್ಲಿಗೆ ಹೂವಿನ ಹಾಸನ್ನು ಹಾಸಿದಂತೆ, ಆದರೆ ಭರತ ದೇಶಕ್ಕೆ ಹಿಡಿದಿರುವ ಗ್ರಹಣದಿಂದ ವಿಮೋಚನೆಯ ದಾರಿಯನ್ನು ತೋರಿಸಬೇಕಿದೆ, ಸ್ವಾತಂತ್ಯ್ರವೆಂಬ ಬೆಳದಿಂಗಳನ್ನು ಭಾರತೀಯರ ಮನದಂಗಳದಲ್ಲಿ ಚೆಲ್ಲಬೇಕಿದೆ. ಅದಕ್ಕೂ ಮುನ್ನ ಆವರಿಸಿರುವ ಧಟ್ಟ ಕಾರ್ಮೋಡಗಳನ್ನು ಕರಗಿಸಬೇಕಿದೆ. ನನ್ನ ಗಮ್ಯವೊಂದೇ ದಾಸ್ಯದಿಂದ ಮುಕ್ತಿ. ದೇಶದ ಭವಿತವ್ಯವನ್ನು ಚಿಂತಿಸುತ್ತಲೇ ಇದೇ ಹಾದಿಯಲ್ಲಿ ಸುಮಾರು ೨೭೭ ಕಿ.ಮೀ ಗಳು ಸಾಗಿ ಬೋಸರು ಧನ್‌ಬಾದ್ ಅನ್ನು ತಲಪುತ್ತಾರೆ.

ಶರಚ್ಚಂದ್ರ ಬೋಸರ ಹಿರಿಯ ಮಗ ಕಲ್ಲಿದ್ದಲು ಕಂಪನಿಯ ನಿರ್ದೇಶಕರಾಗಿದ್ದ ಅಶೋಕನಾಥ ರವರು ವಾಸವಿದ್ದುದು ಧನ್‌ಬಾದ್‌ನಲ್ಲಿಯೇ. ಮನೆಯಲ್ಲಿ ಪರಿಚಾರಕರು, ಸ್ನೇಹಿತರು, ಇತರರು ಇದ್ದೇ ಇರುತ್ತಿದ್ದುದರಿಂದ ಸುಭಾಷರು ಒಬ್ಬ ವಿಮಾ ಕಂಪನಿಯ ನಿರೀಕ್ಷಕರಾಗಿ ತಾನು ಮೊಹಮ್ಮದ್ ಜಿಯಾಉದ್ದೀನ್ ಎಂದು ಎಲ್ಲರ ಎದುರು ಅಶೋಕನಾಥರಿಗೆ ಪರಿಚಯ ಮಾಡಿಕೊಳ್ಳುತ್ತಾರೆ. ವಿಮಾ ಯೋಜನೆಯ ಸಲುವಾಗಿ ತಮ್ಮ ಬಳಿ ಮಾತನಾಡುವುದಿದೆ ಎಂದು ಜಿಯಾಉದ್ದೀನ್ ಹೇಳಿದಾಗ ತಮಗೆ ಈಗ ತುರ್ತು ಕೆಲಸವಿರುವುದರಿಂದಲೂ ತಮ್ಮ ಮನೆಯಲ್ಲಿಯೇ ಇರಬೇಕೆಂದು ತಿಳಿಸಿ ಅಶೋಕನಾಥರು ಹೊರಡುತ್ತಾರೆ. ಕೆಲಸ ಸಮಯದ ನಂತರ ಶಿಶಿರಕುಮಾರ್‍ ಬೋಸ್ ಸಹಾ ಬಂದು ಕೂಡುತ್ತಾರೆ. ಸಂಜೆಯ ಊಟದ ನಂತರ ಎಲ್ಲರ ಜೊತೆಗೂ ಮಾತನಾಡಿ ಜಿಯಾಉದ್ದೀನ್ ಅಲ್ಲಿಂದ ಕಾಲುನಡಿಗೆಯಲ್ಲಿ ಒಬ್ಬರೇ ಹೊರಡುತ್ತಾರೆ. ಕೆಲ ಸಮಯದ ನಂತರ ಕಾರಿನಲ್ಲಿ ಬಂದ ಅಶೋಕ ನಾಥರು, ಇವರ ಪತ್ನಿ ಹಾಗೂ ಶಿಶಿರ ಕುಮಾರ್‍ ಬೋಸ್ ರವರು ಜಿಯಾಉದ್ದೀನ್ ರವರನ್ನು ಕಾರಿನಲ್ಲಿ ಹತ್ತಿಸಿಕೊಂಡು ಹೊರಡುತ್ತಾರೆ. ಎಲ್ಲರೂ ಧನ್‌ಬಾದ್ ನಿಂದ ಸುಮಾರು ೩೮ ಕಿ.ಮೀ ದೂರದಲ್ಲಿದ್ದ ಗೊಹೊಮಾ ತಲುಪುತ್ತಾರೆ. ಗೊಹೋಮಾ ದಿಂದ ದೆಹಲಿ-ಕಾಲ್ಕಾ ಮೈಲ್ ರೈಲಿನ ಮೂಲಕ ದೆಹಲಿಯ ಬಳಿ ಇಳಿದು ಅಲ್ಲಿಂದ ಪೇಷಾವರಗೆ, ನಂತರ ಕಾಬೂಲ್ ಗೆ ಅಲ್ಲಿನಿಂದ ಮಾಸ್ಕೋ ಹಾಗೂ ಮಾಸ್ಕೋವಿನಿಂದ ಬರ್ಲಿನಿಗೆ ತೆರಳುವ ಯೋಜನೆಯನ್ನು ಬೋಸರು ಹಂಚಿಕೊಳ್ಳುತ್ತಾರೆ. ರೈಲ್ವೆ ನಿಲ್ದಾಣದಲ್ಲಿ ಜಿಯಾಉದ್ದೀನ್ ನಿಂತಿರುತ್ತಾರೆ. ದೂರದ ಮರೆಯಲ್ಲಿ ಉಳಿದವರು ನಿಂತು ರೈಲನ್ನೇ ನಿರೀಕ್ಷಿಸುತ್ತಿರುತ್ತಾರೆ. ಅದರಂತೆಯೇ ಉಜ್ವಲ ದೀಪವನ್ನು ಹೊತ್ತ ರೈಲು ಗಾಡಿ ಹೊಗೆ ಉಗುಳುತ್ತಾ, ಎಲ್ಲಾ ಶಬ್ದಗಳನ್ನೂ ನುಂಗುವಂತ ಶಬ್ದವನ್ನು ಹೊರಸೂಸುತ್ತಾ ಆಗಮಿಸುತ್ತದೆ. ಕ್ಷಣದಲ್ಲಿ ರೈಲು ಹತ್ತಿ ಒಳ ಸೇರುತ್ತಾರೆ ಬೋಸರು. ಕೆಲವೇ ಸಮಯದಲ್ಲಿ ರೈಲು ಸಿಳ್ಳೆ ಹಾಕುತ್ತಾ ಸಾಗುತ್ತದೆ. ಅಶೋಕ ನಾಥರು, ಇವರ ಪತ್ನಿ, ಹಾಗೂ ಶಿಶಿರ ಕುಮಾರ್‍ ಬೋಸರು ಕದಲದೇ ನಿಶ್ಚಲರಾಗಿ ನಿಂತು ವೇಗ ಪಡೆಯುತ್ತಾ ಸಾಗುತ್ತಿದ್ದ ರೈಲಿನೆಡೆ ನೋಡುತ್ತಾ ನಿಲ್ಲುತ್ತಾರೆ. ಇದು ಅವರು ಬೋಸರಿಗೆ ಸಲ್ಲಿಸಿದ ಅಂತಿಮ ವಿದಾಯವಾಗುತ್ತದೆ ಎಂಬ ಕಲ್ಪನೆ ಆಗ ಅವರಿಗಾದರೂ ಎಲ್ಲಿತ್ತು..?

ಸುಮಾರು ೧೦೦೦ ಕಿ.ಮೀ ಗೂ ಹೆಚ್ಚಿನ ದೂರವನ್ನು ಕ್ರಮಿಸಿ ದೆಹಲಿಗೆ ಅಲ್ಲಿಂದ ಪೇಷಾವರಕ್ಕೆ ಬೋಸರು ಜನವರಿ ೧೯ ರಂದು ಬಂದು ತಲುಪುತ್ತಾರೆ. ಪುರ್ವಯೋಜನೆಯ ಅನ್ವಯ ಫಾರ್‍ವರ್ಡ್ ಬ್ಲಾಕಿನ ವಾಯುವ್ಯ ಪ್ರಾಂಥ್ಯದ ಮುಖ್ಯಸ್ಥ ಭಗತ್ ರಾಮ್ ರವರು ಬೋಸರನ್ನು ಬಂದು ಕೂಡುತ್ತಾರೆ. ಜನವರಿ ೨೬ ರಂದು ಅಲ್ಲಿಂದ ಪ್ರಯಾಣ ಬೆಳೆಸಿ ಬೋಸರು ಜಿಯಾಉದ್ದೀನ್ ಆಗಿಯೂ ಭಗತ್ ರಾಮ್ ರವರು ’ರಹಮತ್ ಖಾನ್’ ರಾಗಿಯೂ ಒಬ್ಬ ಸಹಾಯಕ ಒಬ್ಬ ಮಾರ್ಗದರ್ಶಿಯೊಡನೆ ಕಾರಿನಲ್ಲಿ ಕಾಬೂಲಿನತ್ತ ಸಾಗುತ್ತಾರೆ. ಅಪರಿಚಿತ ದುರ್ಗಮ ಪರ್ವತ ಪ್ರದೇಶಗಳಲ್ಲಿ ಕಾಲ್ನಡಿಗೆಯಲ್ಲಿಯೇ ಸಾಗಬೇಕಾಗಿರುತ್ತದೆ. ಮಾರ್ಗದಲ್ಲಿ ಕೇಳಿದವರಿಗೆ ನನ್ನ ದೊಡ್ಡಪ್ಪ ಜಿಯಾವುದ್ದೀನ್ ಖಾಯಿಲೆ ಇದ್ದಾರೆ ಅಲ್ಲದೇ ಮೂಗರೂ ಆಗಿದ್ದಾರೆ ಇವರಿಗೆ ಆಪ್ಘಾನಿಸ್ಥಾನದ ’ಅಡ್ಡಾಷರೀಫ್’ ದೇವಾಲಯಕ್ಕೆ ಕರೆದುಕೊಂಡು ಹೋಗುತ್ತಿದ್ದೇವೆ ಎಂದು ’ರಹಮತ್ ಖಾನ್’ (ಭಗತ್ ರಾಮ್) ಹೇಳುತ್ತಾರೆ. ಒಬ್ಬ ಮೂಗನಾಗಿ ಬೋಸರು ಹೆಜ್ಜೆಯಿಡುತ್ತಾ ಸಾಗುತ್ತಾರೆ. ಸೂಕ್ಷ್ಮ ಆರೋಗ್ಯ ಸುಭಾಷರದ್ದಾಗಿತ್ತು. ಅಂತಹ ಪರಿಸ್ಥತಿಯಲ್ಲಿಯೂ ಹಲವಾರು ಬೆಟ್ಟ-ಗುಡ್ಡ ಗಳನ್ನು ಕಾಲ್ನಡಿಗೆಯಲ್ಲಿಯೇ ಹತ್ತುತ್ತಾ ಇಳಿಯುತ್ತಾ ಸಾಗಿ ಆಫ್ಗಾನಿಸ್ಥಾನದ ಗಡಿಯನ್ನು ದಾಟಿ ಜನವರಿ ೩೧ ರಂದು ಕಾಬೂಲನ್ನು ತಲಪುತ್ತಾರೆ. ಇವರ ಸಂಕಲ್ಪ ಶಕ್ತಿ ಅಪ್ರತಿಮವಾದದ್ದು.

ಕಾಬೂಲಿನಲ್ಲಿ ಬಂದ ನಂತರ ಹಲವು ಸಮಸ್ಯೆಗಳು ಎದುರಾಗುತ್ತವೆ. ಆಫ್ಘನ್ ಸರ್ಕಾರದ ಕಣ್ಣಿಗೇನಾದರೂ ಬಿದ್ದರೆ ಮರುಕ್ಷಣವೇ ಬೋಸರನ್ನು ಬ್ರಿಟಿಷ್ ಸರ್ಕಾರಕ್ಕೆ ಒಪ್ಪಿಸುವ ಭೀತಿಯಿತ್ತು. ಅದೇ ಸಮಯದಲ್ಲೇ ಅಲ್ಲಿನ ಗೂಡಚರ್ಯರೂ ಇವರ ಮೇಲೆ ಸಂಶಯಾಸ್ಪದವಾಗಿ ನೋಡತೊಡಗಿದ್ದರು. ಅತ್ತ ರಷ್ಯಾದಿಂದಾಗಲೀ, ಜರ್ಮನಿಯಿಂದಾಗಲೀ ಯಾವುದೇ ಸಕಾರಾತ್ಮಕವಾದ ಪ್ರತಿಕ್ರಿಯೆ ಬರದೇ ಸುಭಾಷರು ನಿಜಕ್ಕೂ ಪರಿತಪಿಸತೊಡಗಿದ್ದರು. ಹರಸಾಹಸ ಪಟ್ಟು ಜರ್ಮನಿಯ ಧೂತಾವಾಸದ ಅಧಿಕಾರಿಯನ್ನು ಭೇಟಿ ಮಾಡಿ ವಿಷಯವನ್ನು ತಿಳಿಸಿದರು. ಆದರೂ ಬೇಗನೇ ನಿರೀಕ್ಷಿಸಿದ ಯಶ ದೊರೆಯುವಂತೆ ಕಾಣಲಿಲ್ಲ. ಕಾಬೂಲಿನಲ್ಲಿದ್ದ ಇಟಲಿಯ ಸರ್ಕಾರದ ಪ್ರತಿನಿಧಿ ಆಲ್ಬರ್ಟೋ ಖರೋನಿಯನ್ನು ಬೋಸರು ಭೇಟಿ ಮಾಡುತ್ತಾರೆ. ಇದಾದ ಬಳಿಕ ಇಟಲಿ ಮತ್ತು ಜರ್ಮನಿ ಬಹಳವಾಗಿ ಚರ್ಚಿಸಿದ ನಂತರ ಕೊನೆಗೂ ಹಸಿರು ನಿಶಾನೆ ನೀಡುತ್ತಾರೆ. ಇಟಲಿಯ ಧೂತಾವಾಸದ ಗುಮಾಸ್ತ ಆರ್‍ಲೆಂಡೋ ಮೊಟ್ಸೋಟ್ಟಾ ಎಂಬ ಹೆಸರಿನಲ್ಲಿ ಬೋಸರು ಇಟಲಿಯ ರಹದಾರಿ ಪತ್ರದೊಡನೆ ಮಾರ್ಚ್ ೨೦ ರಂದು ರೈಲಿನಲ್ಲಿ ರಷ್ಯಾದ ಮಾಸ್ಕೋಗೆ ತೆರಳುತ್ತಾರೆ. ಅಲ್ಲಿಂದ ಸುಭಾಷರನ್ನು ಜರ್ಮನಿಗೆ ಒಯ್ಯಲು ವಿಮಾನ ಸಿದ್ದವಾಗಿ ನಿಂತಿತ್ತು. ತೀವ್ರ ಸಂಕಷ್ಟದ, ಅನಿಶ್ಚಿತತೆಯ ಆ ದಿನಗಳಲ್ಲಿಯೂ ಬೋಸರು ಮಾನಸಿಕವಾಗಿ ದೃಢವಾಗಿಯೇ ಇದ್ದರು. ಆ ಸಮಯದ ಭಾರತದ ಯಾವುದೇ ನಾಯಕನೂ ಚಿಂತಿಸಲೂ ಸಹಾ ಸಾಧ್ಯವಿರದ ಸಾಹಸವನ್ನು ಬೋಸರು ಸಾಧಿಸಿದ್ದರು. ಅಂತಿಮವಾಗಿ ಏಪ್ರಿಲ್ ೩ ರಂದು ಬರ್ಲಿನ್ ತಲುಪಿದರು.

ಫೆಬ್ರವರಿ ಮಾಹೆಯ ೧೯ ನೇ ದಿನ ಇಸವಿ ೧೯೪೨. ಭಾರತದ ಪಶ್ಚಿಮ ಬಂಗಾಲದ ಕಲ್ಕತ್ತಾ ನಗರದ ಬಡಾವಣೆಯೊಂದರ ಮದ್ಯಮ ವರ್ಗದ ಮನೆ. ಮನೆಯಲ್ಲಿದ್ದ ಯುವಕನೊಬ್ಬ ದಿನಪತ್ರಿಕೆ ಓದುವುದರಲ್ಲಿ ತಲ್ಲೀನನಾಗಿದ್ದ. ಗಾಂಧಿಜಿಯವರ ಕರೆ ದಿನಪತ್ರಿಕೆಯಲ್ಲಿ ದೊಡ್ಡ ದೊಡ್ಡ ಸಾಲುಗಳಲ್ಲಿ ಬಿತ್ತರವಾಗಿತ್ತು “ಬ್ರಿಟೀಷರೇ ಭಾರತ ಬಿಟ್ಟು ತೊಲಗಿ” ಮತ್ತೊಮ್ಮೆ ಪ್ರಾರಂಭವಾಗಿತ್ತು ಸತ್ತ ಹಾವಿನೊಡನೆ ಕೊಸರಾಟದ ಚೌಕಾಸಿ. ಅಸಹನೆಯಿಂದ ಎದ್ದವನೇ ದಿನಪತ್ರಿಕೆಯನ್ನು ಚೂರು ಚೂರುಗಳಾಗಿ ಹರಿದು ಬಿಸಾಡಿ ರೇಡಿಯೋವನ್ನು ಟ್ಯೂನ್ ಮಾಡುತ್ತಾ ಕುಳಿತ ಎಂದೋ ಕೇಳಿದಂತಿದ್ದ ವ್ಯಕ್ತಿಯ ಭಾಷಣ ಇದ್ದಂತೆ ಅನ್ನಿಸಿ ದ್ವನಿ ನಿಖರವಾಗುವಂತೆ ನಿಧಾನವಾಗಿ ಟ್ಯೂನ್ ಮಾಡಿದ. ರೇಡಿಯೋದಲ್ಲಿ ದ್ವನಿ ನಿಖರವಾಗಿತ್ತು, ಭಾಷೆ ಸ್ಪಷ್ಟವಾಗಿತ್ತು, ಭಾವ ನೈಜವಾಗಿತ್ತು. ದ್ವನಿಯನ್ನು ಗುರುತಿಸುತ್ತಲೇ ರೋಮ ರೋಮಗಳೂ ಸೆಟೆದು ನಿಂತವು….

“ಅಜಾದ್ ಹಿಂದ್ ರೇಡಿಯೋದಿಂದ ನಾನು ಸುಭಾಷ್ ಚಂದ್ರ ಬೋಸ್ ಮಾತನಾಡುತ್ತಿದ್ದೇನೆ. ..ಕಳೆದ ಒಂದು ವರ್ಷದಿಂದ ಜಗತ್ತಿನ ವಿದ್ಯಮಾನಗಳನ್ನು ಮೌನವಾಗಿ ನಾನು ಗಮನಿಸುತ್ತಿದ್ದೆ. ನಾನು ಮಾತನಾಡಲು ಸಮಯ ಈಗ ಪ್ರಾಪ್ತವಾಗಿದೆ. ಬ್ರಿಟಿಷ್ ದಮನಶಾಹಿಯಿಂದ ಸಿಂಗಾಪುರ ದೇಶ ಕಳಚಿಕೊಂಡಿದ್ದು ಸಾಮ್ರಾಜ್ಯಶಾಹಿಯ ಅಂತ್ಯವನ್ನೂ ಭಾರತದ ಚರಿತ್ರೆಯ ಹೊಸ ಯುಗದ ಉಷಃಕಾಲವನ್ನೂ ಸಂಕೇತಿಸುತ್ತದೆ. ಭಾರತ ಸ್ವತಂತ್ರಗೊಳ್ಳುವವರೆಗೆ ಬ್ರಿಟೀಷ್ ಸಾಮ್ರಾಜ್ಯದ ವಿರುದ್ದ ನಾನು ಹೋರಾಟ ಮುಂದುವರೆಸುವೆ ಎಂದು ಭರವಸೆ ಕೊಡುತ್ತೇನೆ… ಜೈ ಹಿಂದ್..”

ಭಾವಪರವಶನಾಗಿ ಎದ್ದು ನಿಂತ ಯುವಕನ ಕಣ್ಗಳಲ್ಲಿ ಉಜ್ವಲವಾದ ಆಷಾ ಕಿರಣಗಳು ಫಳ ಫಳನೆ ಮಿನುಗುತ್ತಿದ್ದವು.

ಆದರೆ ಇದೇ ಭಾಷಣವನ್ನು ಕೇಳಿದ ನಂತರ ಅಲಹಾಬಾದ್ನ ಆ ಬಂಗಲೆಯಲ್ಲಿ ಅಸಹನೆ ಮನೆ ಮಾಡಿತ್ತು. ಶತ-ಪಥ ತುಳಿಯುತ್ತಿದ್ದ ಆ ಜೀವ ಕಿಸೆಯಿಂದ ತೆಗೆದ ಸೆಗರೇಟನ್ನು ಹೀರುತ್ತಾ ಧೂರ್ತಸಂಚಿನ ಬಲೆಯನ್ನು ಹೆಣೆಯಲು ಪ್ರಾರಂಭಿಸಿತ್ತು.

ನಿಮ್ಮ ಅನಿಸಿಕೆ...

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Note: HTML is allowed. Your email address will never be published.

Subscribe to comments