ವಿಷಯದ ವಿವರಗಳಿಗೆ ದಾಟಿರಿ

ಫೆಬ್ರವರಿ 10, 2015

ಪುಟ್ಟ ‘ಬೇಬಿ’ಯೊಳಗೆ ಎಷ್ಟೆಲ್ಲ ಕಥೆಗಳು…

‍ನಿಲುಮೆ ಮೂಲಕ

– ಚಕ್ರವರ್ತಿ ಸೂಲಿಬೆಲೆ

ಬೇಬಿ‘ಬೇಬಿ’ ಚಿತ್ರ ಎರಡು ವಾರದಲ್ಲಿ ಹೆಚ್ಚುಕಡಿಮೆ ನೂ ರುಕೋಟಿ.ಕಾಲ್ಪನಿಕ ಕಥಾಹಂದರದ, ಹಿಂದೂದ್ವೇಷಿ ಹಣೆಪಟ್ಟಿಹೊತ್ತ ಪೀಕೆಗೆ ಸಿಕ್ಕ ಪ್ರಚಾರದ ಶೇಕಡಾ ಹತ್ತರಷ್ಟೂ ದೊರೆಯದ ಬೇಬಿಯ ಗೆಲುವು ಖುಷಿ ನೀಡುವಂತದ್ದೇ ಸರಿ. ಕೊನೆಯ ಕ್ಷಣದವರೆಗೂ ತುದಿಗಾಲಲ್ಲಿ ನಿಲ್ಲುವಂತೆ ಮಾಡಿ ಭಾರತದ ಗೂಢಚಾರ ವ್ಯವಸ್ಥೆ, ಪೋಲೀಸರ ಬಗ್ಗೆ ಹೆಮ್ಮೆ ಮೂಡುವಂತೆ ಮಾಡುವ ಬೇಬಿ ನಿಜಕ್ಕೂ ವಿಶೇಷ ಚಿತ್ರ.

ಬೇಬಿ ಗುಪ್ತ ಕಾರ್ಯಾಚರಣೆಗೆಂದು ರೂಪುಗೊಂಡ ಪುಟ್ಟ ಪೋಲಿಸ್‌ಪಡೆ. ಭಯೋತ್ಪಾದಕರನ್ನು ಮಟ್ಟಹಾಕಲು ಕಟಿಬದ್ಧವಾದ ಈ ಪಡೆ ಟರ್ಕಿಯಲ್ಲಿ ಕಾರ್ಯಾಚರಣೆ ಮಾಡುವುದರೊಂದಿಗೆ ಸಿನಿಮಾ ಶುರು. ಅಲ್ಲಿಂದಾಚೆಗೆ ನೇಪಾಳ, ಪಾಕಿಸ್ತಾನ ಕೊನೆಗೆ ಸೌದಿ ಅರೇಬಿಯಾದಲ್ಲಿ ಭಿನ್ನಭಿನ್ನ ಕಾರ್ಯಾಚರಣೆಗಳು. ನೀರಜ್ ಪಾಂಡೆಯ ಚಿತ್ರಕಥೆ, ನಿರ್ದೇಶನ ಅದೆಷ್ಟು ಬಿಗಿಯಾಗಿದೆಯೆಂದರೆ ಪ್ರಾಣ ಕುತ್ತಿಗೆಗೆ ಬಂದು ಸಿಕ್ಕಿಹಾಕಿಕೊಂಡುಬಿಡುತ್ತದೆ.

ಭಾರತೀಯ ಪೊಲೀಸರನ್ನು ಗಲಾಟೆ ಮುಗಿದಮೇಲೆ ಬರುವ ಅಬ್ಬೇಪಾರಿಗಳಂತೆ ಸಿನಿಮಾದಲ್ಲಿ ಇಷ್ಟುದಿನ ತೋರಿಸಲಾಗುತ್ತಿತ್ತು. ಮೊದಲಬಾರಿಗೆ ಅಮೆರಿಕನ್ ಸಿನಿಮಾಗಳಿಗೆ ಸರಿಸಾಟಿಯಾಗಿ ನಿಲ್ಲುವ ಅತ್ಯಂತ ನಿರ್ಭಾವುಕ ಸಿನಿಮಾ ಇದು. ಇಡಿಯ ಚಿತ್ರದಲ್ಲಿ ಒಂದೇ ಹಾಡು, ಭರಪೂರ ಸಾಹಸ. ಥಿಯೇಟರ್‌ನಿಂದ ಹೊರಬರುವಾಗ ಮಗುವೊಂದು ಅಪ್ಪನ ಬಳಿ ಇಂತಹ ಪೊಲೀಸ್ ಆಗಬೇಕೆಂದರೆ ಏನು ಮಾಡಬೇಕಪ್ಪ? ಎಂದು ಕೇಳುತ್ತಿತ್ತು. ಅಷ್ಟರಮಟ್ಟಿಗೆ ಸಿನಿಮಾ ಸಾರ್ಥಕ.

ಈ ಸಿನಿಮಾ ನೋಡುತ್ತಿರುವಾಗ ನನ್ನೊಳಗೆ ಹತ್ತಾರು ಸಿನಿಮಾ ಓಡುತ್ತಿತ್ತು. ಕಳೆದ ಡಿಸೆಂಬರ್ ೧೬ಕ್ಕೆ ಪೇಷಾವರದ ಶಾಲೆಯೊಂದರಲ್ಲಿ ತೆಹರೀಶ್-ಎ-ತಾಲಿಬಾನ್ ತಂಡ ದಾಳಿಗೈದು ಮಕ್ಕಳನ್ನು ಹತ್ಯೆಗೈದದ್ದು ನೆನಪಿದೆಯಲ್ಲ, ಅವತ್ತು ಪರ್ವೆಜ್ ಮುಶರಫ್‌ರಿಂದ ಹಿಡಿದು ಸರ್ತಾಜ್ ಅಜೀಜ್‌ರ ವರೆಗೆ ಪ್ರತಿಯೊಬ್ಬರೂ ಈ ಕೃತ್ಯದ ಹಿಂದೆ ಭಾರತದ ಕೈವಾಡ ಇದೆ ಎಂದು ಕೂಗಾಡಿದ್ದರು. ೧೯೭೧ರ ಡಿಸೆಂಬರ್ ೧೬ರ ನಂತರ ೨೦೧೪ರ ಡಿಸೆಂಬರ್ ೧೬ ಎಂಬ ಅನೇಕ ಟ್ವೀಟ್‌ಗಳು ಹರಿದಾಡಿದ್ದವು. ಮೊದಲನೆಯದು ಬಾಂಗ್ಲಾ ವಿಮೋಚನೆಯ ದಿವಸ ನೆನಪಿರಬೇಕಲ್ಲ!

ಪಾಕಿಸ್ತಾನ ಈ ಹಿಂದೆಯೂ ಅನೇಕ ಬಾರಿ ಹೀಗೆ ಆರೋಪಮಾಡಿದೆ. ಬಲೂಚಿಸ್ತಾನದ ಜನರಿಗೆ ಕುಮ್ಮಕ್ಕುಕೊಟ್ಟು ತಮ್ಮನ್ನು ಅಸ್ಥಿರಗೊಳಿಸಲೆತ್ನಿಸುತ್ತಿದೆ ಎಂದು ಕೂಗಾಡಿದೆ. ಅತ್ತ ಆಫ್ಘಾನಿಸ್ತಾನದಲ್ಲಿ ಅಮೆರಿಕಾದೊಂದಿಗೆ ಕೈಜೋಡಿಸಿ ಪಾಕಿನೊಳಕ್ಕೆ ಭಯೋತ್ಪಾದಕರನ್ನು ತಳ್ಳುತ್ತಿದೆ ಎಂದು ಹಲುಬುತ್ತಿದೆ.

ಮೊದಲೆಲ್ಲ ಹೀಗೆ ಹೇಳುವಾಗ ನಮ್ಮ ಪೊಲೀಸರ ಜಾಣ್ಮೆ, ಸಾಹಸ ಇಷ್ಟೆಲ್ಲ ಇದೆಯೇ? ಎಂಬ ಅನುಮಾನ ಕಾಡುತ್ತಿತ್ತು. ಬೇಬಿ ಇದಕ್ಕೆಲ್ಲ ಉತ್ತರಕೊಡುತ್ತದೆ. ಭಾರತದ ’ರಾ’ ಎಷ್ಟು ಚುರುಕಾಗಿದೆ ಎಂಬುದರ ಬಗ್ಗೆ ಹೆಮ್ಮೆಮೂಡುವಂತೆ ಮಾಡುತ್ತದೆ. ಅಮೆರಿಕಾದ ಪೊಲೀಸರ ಬುದ್ಧಿವಂತಿಕೆ ಜಗತ್ತನ್ನು ವ್ಯಾಪಿಸಿದ್ದು ಸಿನಿಮಾ ಮೂಲಕವೇ. ಮೆನ್ ಇನ್ ಬ್ಲ್ಯಾಕ್ ತರದ ಸಿನಿಮಾಗಳು ಅನ್ಯಗ್ರಹ ಜೀವಿಗಳನ್ನು ರಕ್ಷಿಸುವಲ್ಲಿ ಅವರ ಹೋರಾಟದ ಮಾದರಿ ಸಾಮಾನ್ಯ ಜನರಲ್ಲಂತೂ ಆತ್ಮವಿಶ್ವಾಸ ಜಾಗೃತಗೊಳಿಸಿತು; ಇಡಿಯ ವಿಶ್ವದರಕ್ಷಣೆಗೆ ಅಮೆರಿಕಾದ ಬುದ್ಧಿವಂತಿಕೆ ಸಾಕು ಎಂಬುದನ್ನು ಜಗತ್ತಿಗೇ ನಂಬಿಸಿಬಿಟ್ಟಿತು. ನಮಗೆ ಇಂತಹ ಸಾಹಸಕ್ಕೆ ಕೈಹಾಕಲು ಇಷ್ಟು ವರ್ಷ ಬೇಕಾಯ್ತು.

ಇಷ್ಟಕ್ಕೂ ಭಾರತದಲ್ಲಿ ಭಯೋತ್ಪಾದನೆಗೆ ಕಾರಣ ಪಾಕಿಸ್ತಾನವೇ ಎನ್ನುವುದರಲ್ಲಿ ಲವಲೇಶವೂ ಅನುಮಾನ ಉಳಿದಿಲ್ಲ. ೧೯೬೫ರಲ್ಲಿ ಭಾರತದೊಂದಿಗೆ ಯುದ್ಧದಲ್ಲಿ ಸೋಲುಂಡನಂತರ ಪಾಕೀ ಅಧ್ಯಕ್ಷ ಅಯೂಬ್‌ಖಾನ್ ತಲೆ ಕೆಡಿಸಿಕೊಂಡಿದ್ದ. ಆಗ ಚೀನಾದ ಅಧ್ಯಕ್ಷರು ಭಾರತದೊಂದಿಗೆ ದೀರ್ಘ ಕದನದಲ್ಲಿ ನಿರತರಾಗುವಂತೆ ಸಲಹೆ ಕೊಟ್ಟರು. ಹಾಗೆ ನೋಡಿದರೆ ಅಲ್ಲಿನ ಸೈನ್ಯಕ್ಕೆ ಇದು ಹೊಚ್ಚ ಹೊಸ ಕದನ. ಜನಸಾಮಾನ್ಯರನ್ನು ಯುದ್ಧಕ್ಕೆ ಬಳಸಿ ಭಾರತವನ್ನು ಮಟ್ಟ ಹಾಕಬೇಕಿತ್ತು. ಈ ಕಾಳಗಕ್ಕೆ ಕಾಶ್ಮೀರವೇ ಸೂಕ್ತವಾದ ಪ್ರದೇಶವಾಯ್ತು. ಚೀನಾದ ಎಲ್ಲ ಸಹಕಾರ ಪಡೆದುಕೊಂಡ ಪಾಕಿಸ್ತಾನ ಭಾರತವನ್ನು ಮಟ್ಟಹಾಕುವ ಪ್ರಯತ್ನ ವಿಸ್ತಾರಗೊಳಿಸಿದ್ದು ಅನಂತರವೇ. ಅದು ಪಾಕಿಸ್ತಾನದ ಪಾಲಿಗೆ ಟರ್ನಿಂಗ್ ಪಾಯಿಂಟ್. ಅದರ ಅಭಿವೃದ್ಧಿಯ ಏಕಮಾತ್ರ ಹೆದ್ದಾರಿ ಭಾರತದ ಅವನತಿ ಎಂದು ಚೀನಾ ಹೇಳಿಕೊಟ್ಟಪಾಠ ಅದು ಒಪ್ಪಿಕೊಂಡುಬಿಟ್ಟಿತ್ತು. ಜಿಹಾದಿನಿಂದ ಉನ್ಮತ್ತರನ್ನು ತರಬೇತಿಗೊಳಿಸಿ ಭಾರತಕ್ಕೆ ತಳ್ಳಿ ಭಾರತದಲ್ಲಿ ಅಶಾಂತಿಹಬ್ಬಿಸಿ ಮಂಡಿಯೂರುವಂತೆ ಮಾಡುವುದು ಅದರ ಗುರಿಯಾಗಿತ್ತು. ಅವರ ಈ ಇಚ್ಛೆಗೆ ತಡೆಗೋಡೆಯಾಗಿದ್ದುದು ಇಲ್ಲಿನ ಮುಸಲ್ಮಾನರೇ ಹೌದು. ಪಾಕಿಸ್ತಾನದ ಐವತ್ತುವರ್ಷಗಳ ನಿರಂತರ ಪ್ರವಾಹಕ್ಕೆ ಭಾರತ ಇಂದಿಗೂ ಬಲಾಢ್ಯವಾಗಿ ನಿಂತಿದೆಯೆಂದರೆ ಭಾರತೀಯ ಮುಸಲ್ಮಾನರೊಳಗೆ ಹರಿಯುತ್ತಿರುವ ಹಿಂದೂ ರಕ್ತವೇ.

ಕೆಲವುದಿನಗಳ ಹಿಂದಿನ ಘಟನೆ ಮೆಲುಕು ಹಾಕಿಕೊಳ್ಳಿ. ಬರಾಕ್ ಒಬಾಮಾ ಭಾರತಕ್ಕೆ ಬರುವಮುನ್ನ ಶ್ವೇತಭವನ ಪಾಕಿಸ್ತಾನಕ್ಕೊಂದು ಎಚ್ಚರಿಕೆ ಕೊಟ್ಟಿತ್ತು. ಮುಂದಿನ ಮೂರು ದಿನಗಳಕಾಲ ಭಾರತದಲ್ಲಿ ಯಾವ ಭಯೋತ್ಪಾದಕ ಚಟುವಟಿಕೆಗಳೂ ನಡೆಯಬಾರದೆಂದಿತ್ತು. ಇಲ್ಲಿರುವ ಪಾಕಿಸ್ತಾನದ ಬಾಡಿಗೆ ಗೂಂಡಾಗಳಿಗೆ ಒಡೆಯನ ಅಪ್ಪಣೆಬಂತು. ಅವರೆಲ್ಲ ಸಣ್ಣದೊಂದು ಅವಘಡವೂ ಆಗದಂತೆ ನೋಡಿಕೊಂಡರು. ಒಂದು ಕ್ಷಣ ಯೋಚಿಸಿ.. ನಮ್ಮ ಅನೇಕ ಹಳ್ಳಿಗಳು, ತಾಲೂಕುಗಳು, ಜಿಲ್ಲೆಗಳು ಮುಸಲ್ಮಾನರಿಂದ ತುಂಬಿತುಳುಕುತ್ತಿವೆ. ಅವರು ಮನಸ್ಸು ಮಾಡಿದ್ದರೆ ಬೆಂಗಳೂರು-ಚೆನ್ನೈ-ಮುಂಬೈ-ಅಹಮದಾಬಾದ್-ಹೈದರಾಬಾದ್‌ಗಳಲ್ಲಿ ಬಾಂಬ್ ಸ್ಫೋಟಗೊಳ್ಳುವಂತೆ ಮಾಡುವುದು ಅಸಾಧ್ಯವಾಗಿರಲಿಲ್ಲ. ನಮ್ಮ ತುಷ್ಟೀಕರಣದ ರಾಜಕಾರಣ ಎಷ್ಟು ಮಿತಿಮೀರಿದೆಯೆಂದರೆ ಹಾಗೆಮಾಡಿ ಅವರು ಬಚಾವಾಗಿಯೂ ಬಿಡುತ್ತಿದ್ದರು. ಹಾಗೇಕೆ ಆಗಲಿಲ್ಲವೆಂದರೆ ಪಾಕಿಸ್ತಾನದ ಬಾಡಿಗೆ ಗೂಂಡಾಗಳು ಹಾಗಾಗಬಾರದೆಂದು ನಿಶ್ಚಯಿಸಿದ್ದರು. ಅಂದರೆ ಒಂದಂತೂ ಖಾತ್ರಿಯಾಯ್ತು, ರಿಮೋಟ್‌ಕಂಟ್ರೋಲ್ ಪಾಕಿಸ್ತಾನದಲ್ಲಿದೆ. ಅದರ ಬಟನ್ ಒತ್ತುವವನ ಕೈ-ತಲೆ ಕಡಿದರೆ ಭಾರತ ಸಹಜವಾಗಿ ಶಾಂತವಾಗಿಬಿಡುತ್ತದೆ.

ಮೌಲಾನ ಮಸೂದ್‌ನನ್ನು ಹಿಡಿದು ಬಡಿದು ಯಮಪುರಿಗಟ್ಟುವ ತಾಕತ್ತು ಇದೆಯಾ? ಇದೆ ಎನ್ನುತ್ತದೆ ’ಬೇಬಿ’. ಮೌಲಾನಾನನ್ನು ಅತೀವ ಸಾಹಸದಿಂದ ಹಿಡಿದು, ಗಡ್ಡಬೋಳಿಸಿ, ಬಡಿದು ಬಾಯ್ಬಿಡಿಸಿ ಕೊನೆಗೆ ಕಾಶ್ಮೀರದಲ್ಲಿ ಎನ್‌ಕೌಂಟರ್‌ಮಾಡಿ ಬಿಸಾಡುವ ಕಲ್ಪನೆಯೇ ರೋಚಕ. ಥಿಯೇಟರ್‌ನಲ್ಲಿ ಕುಳಿತ ಪ್ರತಿ ಪ್ರೇಕ್ಷಕನೂ ದಾವೂದ್ ಇಬ್ರಾಹಿಂಗಾಗಿ ಇಷ್ಟೇ ಹಪಹಪಿಸುತ್ತಾನೆ.

’ಬೇಬಿ’, ಮುಸಲ್ಮಾನರ ಮನಸ್ಥಿತಿಯನ್ನು ಮನೋಜ್ಞವಾಗಿ ಚಿತ್ರಿಸಿದೆ. ಅಲ್ಲಾ-ಹೋ-ಅಕ್ಬರ್ ಎನ್ನುತ್ತಾ ಭಯೋತ್ಪಾದಕರು ಜಿಹಾದಿಗೆ ಹೊರಟಿದ್ದರೆನ್ನುವ ಕಾರಣಕ್ಕಾಗಿಯೇ ಪ್ರತಿಭಟಿಸಿ ವಿಶ್ವರೂಪಂನ ವಿರುದ್ಧ ರಂಪಾಟಮಾಡಿದ್ದ ಮುಸಲ್ಮಾನರು ’ಬೇಬಿ’ ಯ ವಿರುದ್ಧ ಸುಮ್ಮನಿರುವುದು ಅಚ್ಚರಿ. ಮೌಲಾನಾ ಆಡುತ್ತಿದ್ದ ಮಾತುಗಳನ್ನು ಕೇಳುತ್ತಿದ್ದರೆ, ಪಾಕಿಸ್ತಾನದ ನೈಜಚಿತ್ರಣ, ಜಿಹಾದಿನ ಉನ್ಮತ್ತತೆ ಅನಾವರಣಗೊಳ್ಳುತ್ತದೆ. ’ಬೇಬಿ’ಗೆ ಗಲಾಟೆ ನಡೆದಿಲ್ಲವೆಂದರೆ ಒಂದೋ ಮುಸಲ್ಮಾನ ಬದಲಾಗಿದ್ದಾನೆ, ಅಥವಾ ಕೇಂದ್ರದಲ್ಲಿರುವ ಸರಕಾರ ಬದಲಾಗಿದೆ!!

ಬಿಡಿ, ಆಗುತ್ತಿರುವುದೆಲ್ಲಾ ಒಳ್ಳೆಯ ಬೆಳವಣಿಗೆಯೇ. ಬರಾಕ್ ಒಬಾಮಾ ಮತ್ತು ನರೇಂದ್ರ ಮೋದಿಯವರು ಇಲ್ಲಿ ಯುಗಳ ಗೀತೆ ಹಾಡುವುದನ್ನು ಸಹಿಸಿಕೊಳ್ಳಲಾಗದೇ ಚೀನಾ ಪಾಕಿಸ್ತಾನದ ಮಂತ್ರಿಯೊಬ್ಬರನ್ನು ಕರೆಸಿಕೊಂಡು ಕೈಕುಲುಕಿ, ನನ್ನಸಾರ್ವಕಾಲಿಕ ಮಿತ್ರಎಂದು ಬೆನ್ ತಟ್ಟಿದ್ದು ಹೊಟ್ಟೆಯುರಿಗೇ! ಅದಾದಮೇಲೆ ಭಾರತದ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಚೀನಾಕ್ಕೆ ಹೋದರಲ್ಲಾ; ಆಗ ಚೀನಾದ ಅಧ್ಯಕ್ಷ ಹ್ಯೂಷಿ ತಮ್ಮ ಎಲ್ಲ ನಿರ್ಭಂಧಗಳನ್ನೂ ಮುರಿದು ಆಕೆಯನ್ನು ಭೇಟಿಮಾಡಿದರು. ಭಾರತ-ಚೀನಾ ಜೊತೆಯಾಗಿರುವುದರ ಅವಶ್ಯಕತೆಯನ್ನು ಒತ್ತಿಹೇಳಿದರು. ಅಲ್ಲಿಗೆ ಪಾಕಿಸ್ತಾನ ಸತ್ತುಹೋಗಿತ್ತು. ಭಾರತದ ವಿದೇಶಾಂಗ ನೀತಿ ಗೆದ್ದಿತ್ತು. ಭಾರತ-ಅಮೆರಿಕಾ-ಚೀನಾದೇಶಗಳು ಒಟ್ಟಾದರೆ ಭಯೋತ್ಪಾದನೆ ಮಟ್ಟಹಾಕುವುದು ಸುಲಭ ಎಂಬರ್ಥದ ಮಾತುಗಳನ್ನು ಸುಬ್ರಮಣಿಯನ್ ಸ್ವಾಮಿ ಹೇಳಿದ್ದರ ಹಿಂದೆ ನೂರು ವ್ಯಾಖ್ಯೆಗಳಿವೆ.

ಭಾರತದ ಮುಸಲ್ಮಾನರ ಮನಸ್ಥಿತಿ ಈಗ ಬದಲಾಗಲೇಬೇಕಿದೆ. ಈಹಾದಿನ ಹೆಸರಲ್ಲಿ ರಕ್ತದ ಓಕುಳಿಯಾಡುತ್ತಿರುವವರು ಈ ಕೃತ್ಯ ಮಾಡುತ್ತಿರುವುದು ಇಸ್ಲಾಮಿನ ರಕ್ಷಣೆಗಾಗೇ ಎಂದು ಹೇಳುತ್ತಾರೆಲ್ಲ, ವಾಸ್ತವ ಹಾಗಿಲ್ಲ. ಈ ನೆಪದಲ್ಲಿ ಇವರಿಗೆ ಮಿಲಿಯನ್‌ಗಟ್ಟಲೆ ಹಣ ಹರಿದು ಬರುತ್ತದೆ. ಅಧಿಕಾರದ ಹಪಾಹಪಿತನ ಅವರನ್ನು ಯಾವ ಹಂತಕ್ಕಿಳಿಸಿದೆಯೆಂದರೆ, ತಮ್ಮವರು – ಬೇರೆಯವರು ಎಂಬ ಬೇಧವೇ ಇರದಾಗಿದೆ. ಓವೈಸಿ, ಐಸಿಸ್ ಉಗ್ರರನ್ನು ವಿರೋಧಿಸಿರುವ ಹಿಂದೆಯೂ ಇದೇ ಚಿಂತನೆ ಇದೆ. ಶಿಯಾ – ಸುನ್ನಿಗಳಿಬ್ಬರ ಕದನದಲ್ಲಿ ನಿಜವಾದ ಇಸ್ಲಾಮ್ ಸತ್ತುಹೋಗಿದೆ. ಕ್ರೂರ ಮುಖದ ಇಸ್ಲಾಮ್‌ಗೆ ನಿಜವಾದ ಶಾಂತಿಯ ಸರ್ಶನ ಮಾಡಿಸಬಲ್ಲವರು ಭಾರತೀಯ ಮುಸಲ್ಮಾನರು ಮಾತ್ರ.

ನರೇಂದ್ರ ಮೋದಿ ಇದನ್ನು ಚೆನ್ನಾಗಿ ಅರಿತಿದ್ದಾರೆ. ಹೀಗಾಗಿಯೇ ತುಷ್ಟೀಕರಣದ ಹಾದಿ ಬಿಟ್ಟು ಶಿಕ್ಷಣದ ಮಾರ್ಗ ಹಿಡಿದಿದ್ದಾರೆ. ಪಾಕಿಸ್ತಾನದೆದುರಿಗೆ ಚೀನಾ ಅಮೆರಿಕಾಗಳನ್ನು ಒಲಿಸುವ ಮಾರ್ಗ ಬಿಟ್ಟು ೫೬ ಇಂಚಿನ ಎದೆ ತೋರಿ ನಿಂತಿದ್ದಾರೆ.

ನಾವೀಗ ಚೀನಾದ ಜೊತೆ ಸತ್ಸಂಬಂಧ ಇಟ್ಟುಕೊಂಡೇ ಅರುಣಾಚಲದಲ್ಲಿ ಮೂರು ಕಡೆ ವಿಮಾನ ನಿಲ್ದಾಣಗಳನ್ನು ನಿರ್ಮಿಸುತ್ತಿದ್ದೇವೆ. ಗೆಳೆತನ ಸಮಾನರ ನಡುವೆಯೇ ಹೊರತು, ಶಕ್ತಿಶಾಲಿ ಮತ್ತು ಹೇಡಿಯೊಬ್ಬನ ನಡುವೆ ಅಲ್ಲ. ಭಾರತ ಈಗ ಶಕ್ತಿಶಾಲಿಯಾಗುತ್ತಿದೆ. ಈಗ ಇಲ್ಲಿನ ಮುಸಲ್ಮಾನರಿಗೆ ಒಂದೇ ದಾರಿ. ಶಕ್ತಿಶಾಲಿಯೊಂದಿಗೆ ಬೆರೆತು ತಾವೂ ಶಕ್ತಿಶಾಲಿಯಾಗೋದು, ಅಷ್ಟೇ!

ಹ್ಞಾ! ವಿಷಯ ಎಲ್ಲಿಗೋ ಹೋಯ್ತು ’ಬೇಬಿ’ ನೋಡುತ್ತಾ ಕುಳಿತಾಗ ಅನೇಕ ಘಟನೆಗಳ ಹಿಂದಿನ ಕಾರಣ ಅನಾವರಣಗೊಂಡಿತ್ತು. ಒಮ್ಮೆ ನೀವೂ ನೋಡಿಬಿಡಿ

ಚಿತ್ರಕೃಪೆ : ರೆಡಿಫ಼್.ಕಾಂ

ನಿಮ್ಮ ಅನಿಸಿಕೆ...

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Note: HTML is allowed. Your email address will never be published.

Subscribe to comments