ವಿಷಯದ ವಿವರಗಳಿಗೆ ದಾಟಿರಿ

ಫೆಬ್ರವರಿ 13, 2015

22

ದಿ ಲಾಸ್ಟ್ ಲೆಕ್ಚರ್: ಆತ ಸಾವಿನ ಸಾಂಗತ್ಯದಲ್ಲಿ ಬದುಕನ್ನು ಪ್ರೀತಿಸಿದ

‍ನಿಲುಮೆ ಮೂಲಕ

– ರಾಜಕುಮಾರ.ವ್ಹಿ.ಕುಲಕರ್ಣಿ, ಗ್ರಂಥಪಾಲಕರು

ಎಸ್.ನಿಜಲಿಂಗಪ್ಪ ವೈದ್ಯಕೀಯ ಮಹಾವಿದ್ಯಾಲಯ, ಬಾಗಲಕೋಟ

ದಿ ಲಾಸ್ಟ್ ಲೆಕ್ಚರ್ಸಾವಿನ ಬಗ್ಗೆ ಮಾತನಾಡುವುದು ಸುಲಭ. ಸಾವು ಹೀಗೆ ಬರಬಹುದೋ ಹಾಗೆ ಬರಬಹುದೋ ಎಂದು ಕಲ್ಪಿಸಿಕೊಳ್ಳುವುದೂ ಸುಲಭ. ಸಾವು ಹೀಗೇ ಬರಲಿ ಎಂದು ಆಸೆ ಪಡುವುದೂ ಸುಲಭ. ತುಂಬು ಆರೋಗ್ಯವಂತನೊಬ್ಬ ಸಾವಿನ ಬಗ್ಗೆ, ಆ ಕ್ಷಣದ ತಲ್ಲಣದ ಬಗ್ಗೆ, ಸಾವಿನ ಅನಿವಾರ್ಯತೆಯ ಬಗ್ಗೆ ಭಾಷಣ ಹೊಡೆಯುವುದು, ಪ್ರಬಂಧ ಬರೆಯುವುದು ಇನ್ನೂ ಸುಲಭ. ಆದರೆ ಸಾವೆಂಬುದು ಕಣ್ಮುಂದೆಯೇ ಗಿರಿಗಿಟ್ಲೆ ತಿರುಗುತ್ತಿದೆ ಮುಂದಿನ ಕೆಲವೇ ದಿನಗಳಲ್ಲಿ ನನ್ನ ಬದುಕೇ ಮುಗಿದು ಹೋಗಲಿದೆ ಎಂದು ಗೊತ್ತಾದಾಗ ನಗು ನಗುತ್ತಲೆ ಬದುಕು ಸುಂದರ, ಸಂತೋಷದಿಂದ ಇರಿ ಎಂದು ಹೇಳುವುದಿದೆಯಲ್ಲ ಅದು ಕಷ್ಟ ಕಷ್ಟ ದಿ ಲಾಸ್ಟ್ ಲೆಕ್ಚರ್ ಕೃತಿಯ ಮುನ್ನುಡಿಯಲ್ಲಿ ಶ್ರೀ ವಿಶ್ವೇಶ್ವರ ಭಟ್ ಹೇಳಿದ ಮಾತಿದು.

ಹೌದು.ಸಾವು ಮನುಷ್ಯನ ಕೊನೆಯ ಸೋಲು. ಮನುಷ್ಯ ಜೀವನದಲ್ಲಿ ಯಾವ ಸೋಲಿಗೂ ಎದೆಗುಂದದಿದ್ದರೂ ಸಾವಿನಂಥ ಸೋಲಿಗೆ ಅಧೀರನಾಗುವುದು ಸತ್ಯ. ಆದರೆ ಅವನೊಬ್ಬನಿದ್ದ ಅವನು ಸಾವಿನಂಥ ಸಾವಿಗೇ ಸವಾಲೊಡ್ಡಿ ನಿಂತ. ಸಾವು ಬಂದು ಬದುಕನ್ನು ಕಬಳಿಸಲು ಹೊಂಚು ಹಾಕಿ ಕುಳಿತಿದೆ ಎಂದು ಗೊತ್ತಾದಾಗಲೂ ಆತ ಎದೆಗುಂದಲಿಲ್ಲ. ಇನ್ನು ನೀನು ಬದುಕಿರುವುದು ಕೆಲವೇ ದಿನಗಳು ಎನ್ನುವ ಸತ್ಯ ಬಂದು ತಟ್ಟಿದಾಗಲೂ ಆತ ಅಂಜಲಿಲ್ಲ ಬದುಕಿನಲ್ಲಿ ಉತ್ಸಾಹ ಕಳೆದುಕೊಳ್ಳಲಿಲ್ಲ. ಸಾಯುತ್ತೇನೆ ಎಂದು ಗೊತ್ತಾದ ಮೇಲೆ ಹೆಚ್ಚು ಹೆಚ್ಚು ಕ್ರಿಯಾಶೀಲನಾದ. ಹೆಂಡತಿ, ಮಕ್ಕಳು ಮತ್ತು ವೃತ್ತಿಯನ್ನು ಅಪಾರವಾಗಿ ಪ್ರೀತಿಸಿದ. ಇಂಥದ್ದೊಂದು ಕ್ರಿಯಾಶೀಲ ಬದುಕಿಗೆ ತನ್ನನ್ನು ಅಣಿಗೊಳಿಸಿದ ಆ ಸಾವಿಗೇ ಆತ ಕೃತಜ್ಞತೆ ಸಲ್ಲಿಸಿದ. ಒಂದರ್ಥದಲ್ಲಿ ಆತ ಸಾವಿನ ಸಾಂಗತ್ಯದಲ್ಲೂ ಬದುಕನ್ನು ಪ್ರೀತಿಸಿದ. ಸಾವಿನಲ್ಲೂ ಬೇರೆಯವರ ಬದುಕಿಗೆ ಮಾದರಿಯಾದ. ಆತನೇ `ದಿ ಲಾಸ್ಟ್ ಲೆಕ್ಚರ್ ಕೃತಿಯ ನಾಯಕ ಮತ್ತು ಲೇಖಕ ರ್ಯಾಂಡಿ ಪಾಶ್.

ಯಾರು ಈ ರ್ಯಾಂಡಿ ಪಾಶ್ ?                   

ಈ ರ್ಯಾಂಡಿ ಪಾಶ್ ಅಮೇರಿಕಾ ದೇಶದವನು. ಕಾರ್ನಿಗಿ ಮೆಲಿನ್ ವಿಶ್ವವಿದ್ಯಾಲಯದಲ್ಲಿ ಕಂಪ್ಯೂಟರ್ ಸೈನ್ಸ್ ಪ್ರೊಫೆಸರ್ ಆಗಿ ಬಹು ದೊಡ್ಡ ಹೆಸರು ಗಳಿಸಿದವನು. ವೃತ್ತಿಯಿಂದ ಉಪನ್ಯಾಸಕನಾದರೂ ಅವನು ಮಾಡಿದ ಸಾಧನೆಗಳು ಅನೇಕ. ಅಡೋಬ್, ಗೂಗಲ್, ವಾಲ್ಟ್ ಡಿಸ್ನಿಯಂಥ ಪ್ರತಿಷ್ಠಿತ ಸಂಸ್ಥೆಗಳಲ್ಲಿ ಕೆಲಸ ಮಾಡಿದ. ಪಿಹೆಚ್‍ಡಿ ಅಭ್ಯಸಿಸಿ ಡಾಕ್ಟರೇಟ್ ಪಡೆದವ ನಂತರ ಗಗನಯಾತ್ರಿಯಾದ. ಅನಂತರ ವಿಜ್ಞಾನಿಯಾದ. ಅಷ್ಟಕ್ಕೆ ತೃಪ್ತನಾಗದೆ ಪೋಲಿಸ್ ಅಧಿಕಾರಿಯಾದ. ಕೊನೆಗೆ ಉಪನ್ಯಾಸಕನಾದ. ಹೀಗೆ ಬದುಕಿನಲ್ಲಿ ಅನೇಕ ಕನಸುಗಳನ್ನು ಕಂಡು ಅವುಗಳನ್ನು ನನಸಾಗಿಸಿಕೊಂಡ.

ರ್ಯಾಂಡಿ ಪಾಶ್ ವೃತ್ತಿಯಿಂದ ಕಂಪ್ಯೂಟರ್ ವಿಜ್ಞಾನಿ. ಕಾರ್ನಿಗಿ ಮೆಲಿನ್ ವಿಶ್ವವಿದ್ಯಾಲಯದಲ್ಲಿ ದೊಡ್ಡ ಸಂಬಳದ ಉದ್ಯೋಗವಿತ್ತು. ವಿದ್ಯಾರ್ಥಿಗಳ ಸಮೂಹದಲ್ಲಿ ಮತ್ತು ಸಮಾಜದಲ್ಲಿ ಆತನಿಗೆ ಒಳ್ಳೆಯ ಹೆಸರಿತ್ತು. ಅಪ್ಸರೆಯಂಥ ಹೆಂಡತಿ ಮತ್ತು ಮುದ್ದಾದ ಮಕ್ಕಳ ಸುಖಿ ಮತ್ತು ಸುಂದರ ಕುಟುಂಬ ಅವನದು. ಶ್ರೀಮಂತಿಕೆಗೆ ಬರವಿರಲಿಲ್ಲ. ಬದುಕಿನ ಬಹುಪಾಲು ಸಮಯವನ್ನು ರ್ಯಾಂಡಿ ಪಾಶ್ ಅಧ್ಯಯನ, ಸಂಶೋಧನೆ, ನೌಕರಿಯ ಹುಡುಕಾಟ ಹೀಗೆ ಬೇರೆ ಬೇರೆ ಕನಸುಗಳಿಗಾಗಿ ವಿನಿಯೋಗಿಸಿಕೊಂಡ. ಬದುಕಿನಲ್ಲಿ ಆತ ಬಯಸಿದ್ದೆಲ್ಲವನ್ನು ಸಾಧಿಸಿದ. ಹೆಸರು ಹಣ ಅವನನ್ನು ಹುಡುಕಿಕೊಂಡು ಬಂದವು. ಇನ್ನು ಹೆಂಡತಿ ಮಕ್ಕಳೊಂದಿಗೆ ನೆಮ್ಮದಿಯಾಗಿ ಬದುಕೋಣ ಎಂದು ನಿರ್ಧರಿಸುವ ಹೊತ್ತಿಗೆ ಕ್ಯಾನ್ಸರ್ ಎಂಬ ಹೆಮ್ಮಾರಿ ರ್ಯಾಂಡಿಯ ಬದುಕನ್ನು ಆಕ್ರಮಿಸಿಕೊಂಡಿತು.

2006 ರಲ್ಲಿ ಹೊಟ್ಟೆಯ ಮೇಲ್ಭಾಗದಲ್ಲಿ ಕಾಣಿಸಿಕೊಂಡ ಸಣ್ಣ ನೋವಿನಿಂದ ರ್ಯಾಂಡಿ ಪಾಶ್‍ನ ವೈದ್ಯಕೀಯ ಚಿಕಿತ್ಸೆ ಪ್ರಾರಂಭವಾಯಿತು. ನಂತರ ಅದು ಕಾಮಾಲೆಗೆ ತಿರುಗಿತು. ರ್ಯಾಂಡಿಗೆ ಹೆಪಟೈಟಿಸ್ ತಗುಲಿರಬಹುದೆಂದು ವೈದ್ಯರು ಭಾವಿಸಿದ್ದರು. ಆದರೆ ಸಿ.ಟಿ ಸ್ಕ್ಯಾನ್ ವರದಿಗಳು ವಾಸ್ತವಾಂಶವನ್ನು ತೆರೆದಿಟ್ಟವು. ರ್ಯಾಂಡಿ ಪಾಶ್ ಜಠರದ ಕ್ಯಾನ್ಸರ್‍ನಿಂದ ಬಳಲುತ್ತಿದ್ದ. ಕ್ಯಾನ್ಸರ್ ಎಂಬ ಭಯಾನಕ ರೋಗದ ಹೆಸರು ಒಂದು ಕ್ಷಣ ರ್ಯಾಂಡಿಯನ್ನು ಅಧೀರನನ್ನಾಗಿಸಿತು. ಹೆಂಡತಿ ಮಕ್ಕಳ ನೆನಪಾಗಿ ಆತನ ಕಣ್ತುಂಬಿ ಬಂದವು. ತಾನಿಲ್ಲದ ಅವರ ಬದುಕನ್ನು ನೆನಪಿಸಿಕೊಂಡು ಬೆಚ್ಚಿ ಬಿದ್ದ. ಆದರೆ ಇದೆಲ್ಲ ಕ್ಷಣ ಮಾತ್ರ. ತಕ್ಷಣ ಅಂಥದ್ದೊಂದು ಆಘಾತದಿಂದ ಚೇತರಿಸಿಕೊಂಡ ರ್ಯಾಂಡಿ ಹೆಂಡತಿಗೆ ತನ್ನ ಸಾವಿನ ಕುರಿತು ಮನವರಿಕೆ ಮಾಡಿಕೊಟ್ಟ. ತಾನಿಲ್ಲದೆ ಅವರು ಬದುಕಲು ಸಾಧ್ಯವಾಗುವಂಥ ವಾತಾವರಣವನ್ನು ಸೃಷ್ಠಿಸಿದ. ತಾನು ಬದುಕುವುದು ಕೆಲವೇ ದಿನಗಳು ಎಂದು ಗೊತ್ತಾಗುತ್ತಿದ್ದಂತೆ ಹೆಂಡತಿ ಮತ್ತು ಮಕ್ಕಳೊಡನೆ ಹೆಚ್ಚು ಹೆಚ್ಚು ಸಮಯ ಕಳೆಯಲು ನಿರ್ಧರಿಸಿದ. ಮಕ್ಕಳೊಡನೆ ಕಳೆದ ಪ್ರತಿಯೊಂದು ಸಂತಸದ ಕ್ಷಣವನ್ನು ಚಿತ್ರೀಕರಿಸಿ ಅವರು ದೊಡ್ಡವರಾದಾಗ ನೋಡಲು ಕೊಡುವಂತೆ ಹೆಂಡತಿಗೆ ಹೇಳಿದ. ರ್ಯಾಂಡಿ ಪಾಶ್‍ನ ಮಾನಸಿಕ ಧೃಡತೆ ನಿಜಕ್ಕೂ ಅಚ್ಚರಿಯ ವಿಷಯ. ಸಾವಿನ ಮನೆಯ ಕದ ತಟ್ಟುತ್ತಿರುವ ವ್ಯಕ್ತಿ ಬದುಕನ್ನು ಪ್ರೀತಿಸುವುದಿದೆಯಲ್ಲ ಅದು ಸಾಮಾನ್ಯರಿಂದ ಸಾಧ್ಯವಿಲ್ಲದ ಸಂಗತಿ. ಸಾವು ತನಗೆ ಬದುಕನ್ನು ಅರ್ಥ ಮಾಡಿಕೊಳ್ಳಲು ಅವಕಾಶ ಕಲ್ಪಿಸಿತು ಎಂದು ಆತ ಕ್ಯಾನ್ಸರ್‍ಗೆ ಕೃತಜ್ಞತೆ ಸಲ್ಲಿಸಿದ.

ನನ್ನ ಮರಣಾನಂತರ ಹೆಂಡತಿ ಮತ್ತು ಮಕ್ಕಳು ಯಾವ ರೀತಿ ಜೀವನ ನಡೆಸಬೇಕು ಎಂಬುದರ ಬಗ್ಗೆ ನಾವು ಸಾಕಷ್ಟು ಚರ್ಚೆ ಮಾಡಿದ್ದೇವೆ. ಈ ವಿಚಾರದಲ್ಲಿ ನಾನು ಅದೃಷ್ಟವಂತನೆಂದೇ ಹೇಳಬೇಕು. ಕಾರಣ ಕ್ಯಾನ್ಸರ್ ರೋಗ ಹೆಂಡತಿ ಮತ್ತು ಮಕ್ಕಳ ಮುಂದಿನ ಭವಿಷ್ಯವನ್ನು ನಿರ್ಧರಿಸಿ ಅದಕ್ಕೆ ಬೇಕಾದ ಎಲ್ಲ ಸಿದ್ಧತೆಗಳನ್ನು ಮಾಡಿಕೊಳ್ಳಲು ಸಾಕಷ್ಟು ಸಮಯ ನೀಡಿತ್ತು. ನಾನು ಹೃದಯಾಘಾತದಿಂದ ಅಥವಾ ಕಾರು ಅಪಘಾತದಿಂದ ಸತ್ತು ಹೋಗಿದ್ದರೆ ಈ ತೆರನಾದ ಅವಕಾಶ ಖಂಡಿತ ಸಿಗುತ್ತಿರಲಿಲ್ಲ. ಆದ್ದರಿಂದ ನಾನು ಕ್ಯಾನ್ಸರ್‍ಗೆ ಋಣಿಯಾಗಿದ್ದೇನೆ ಹೀಗೆ ರ್ಯಾಂಡಿ ಪಾಶ್ ಸಾವಿನ ಕುರಿತು ಮಾರ್ಮಿಕವಾಗಿ ಮಾತನಾಡಿದ್ದಾನೆ.

ವಿಶ್ವದ ಪ್ರತಿಷ್ಠಿತ ವಿಶ್ವವಿದ್ಯಾಲಯಗಳು ಅಲ್ಲಿನ ಉಪನ್ಯಾಸಕರಿಗೆ `ಅಂತಿಮ ಉಪನ್ಯಾಸ ನೀಡುವ ಅವಕಾಶವನ್ನು ಕಲ್ಪಿಸಿಕೊಡುತ್ತವೆ. ಜೊತೆಗೆ ಯಾವುದಾದರೊಂದು ಕ್ಷೇತ್ರದಲ್ಲಿ ಹೆಸರು ಮಾಡಿದ ವ್ಯಕ್ತಿ ಸಾವಿಗೆ ಹತ್ತಿರವಾಗುತ್ತಿದ್ದಾನೆ ಎಂದು ಗೊತ್ತಾದಾಗ ಆತ ಸಾಯುವ ಮೊದಲು ಸಮಾನ ಮನಸ್ಕರ ಮುಂದೆ ನಿಂತು ಮಾತನಾಡಲು ಅವಕಾಶ ನೀಡುತ್ತವೆ. ಇಂಥದ್ದೊಂದು ಅವಕಾಶ ಅಮೆರಿಕದ ವಿಶ್ವವಿದ್ಯಾಲಯಗಳಲ್ಲೂ ಇದೆ. ಹೇಳಿ ಕೇಳಿ ರ್ಯಾಂಡ್ ಪಾಶ್ ಒಬ್ಬ ಅದ್ಭುತ ಪ್ರತಿಭೆಯ ಉಪನ್ಯಾಸಕ. ಸಮಾಜದಲ್ಲಿ ಗೌರವ ಮನ್ನಣೆಗಳಿಗೆ ಪಾತ್ರನಾದ ವ್ಯಕ್ತಿ. ಇಂಥ ವ್ಯಕ್ತಿ ಕ್ಯಾನ್ಸರ್ ರೋಗಕ್ಕೆ ಬಲಿಯಾಗಿ ಸಾವಿಗೆ ಹತ್ತಿರವಾಗುತ್ತಿರುವನು ಎಂದು ಗೊತ್ತಾದ ತಕ್ಷಣ ಅಮೆರಿಕದ ಕಾರ್ನಿಗಿ ಮೆಲಿನ್ ವಿಶ್ವವಿದ್ಯಾಲಯ ರ್ಯಾಂಡಿ ಪಾಶ್‍ನನ್ನು ಅಂತಿಮ ಉಪನ್ಯಾಸ ನೀಡಲು ಆಹ್ವಾನಿಸಿತು.

ಈ ಆಹ್ವಾನ ಬಂದಾಗ ರ್ಯಾಂಡಿ ಪಾಶ್ ಸಂಭ್ರಮದಿಂದ ಹೇಳಿದ `ನಾನೊಬ್ಬ ಉಪನ್ಯಾಸಕ. ಆದ್ದರಿಂದ ಸಾಯುವುದಕ್ಕಿಂತ ಮೊದಲು ಬದುಕಿನ ಕುರಿತು ಉಪನ್ಯಾಸ ನೀಡಿ ಸಾಯೋಕೆ ಇಷ್ಟಪಡ್ತೀನಿ. ನಿಗದಿ ಪಡಿಸಿದ ದಿನದಂದು ರ್ಯಾಂಡಿ ಪಾಶ್ ವಿಶ್ವವಿದ್ಯಾಲಯದ ಶಿಕ್ಷಕರು ಮತ್ತು ವಿದ್ಯಾರ್ಥಿಗಳನ್ನುದ್ದೇಶಿಸಿ ಉಪನ್ಯಾಸ ನೀಡಿದ. ಉಪನ್ಯಾಸದಲ್ಲಿ ತಾನು ಬಾಲ್ಯದಲ್ಲಿ ಕಂಡ ಕನಸುಗಳು ಮತ್ತು ಅವುಗಳನ್ನು ನನಸಾಗಿಸಿಕೊಳ್ಳಲು ಮಾಡಿದ ಪ್ರಯತ್ನಗಳನ್ನು ವಿವರಿಸಿದ. ಬದುಕನ್ನು ಪ್ರೀತಿಸುವುದು ಹೇಗೆಂದು ಹೇಳಿಕೊಟ್ಟ. ಆ ದಿನ ರ್ಯಾಂಡಿ ಪಾಶ್ ನೀಡಿದ ಅದ್ಭುತ ಉಪನ್ಯಾಸ ಪುಸ್ತಕದ ರೂಪದಲ್ಲಿ ಪ್ರಪಂಚದಾದ್ಯಂತ ಲಕ್ಷಾಂತರ ಜನರ ಕೈ ಸೇರಿತು. ಓದುಗರ ಸಮೂಹದಲ್ಲಿ ತೀವೃ ಸಂಚಲನವನ್ನುಂಟು ಮಾಡಿದ ಆ ಕೃತಿಯ ಹೆಸರು `ದಿ ಲಾಸ್ಟ್ ಲೆಕ್ಚರ್ ಎಂದು.

 ‘ದಿ ಲಾಸ್ಟ್ ಲೆಕ್ಚರ್’ ಒಂದು ಜೀವನ ಪಯಣ

ರ್ಯಾಂಡಿ ಪಾಶ್ ಕುರಿತು ಅದಾಗಲೇ ಸ್ವಲ್ಪ ಪತ್ರಿಕೆಗಳಲ್ಲಿ ಮತ್ತು ಇಂಟರ್‍ನೆಟ್‍ನಲ್ಲಿ ಓದಿದ್ದೆ. ಆದರೆ ಆತನನ್ನು ಇಡೀಯಾಗಿ ಓದಲು ಸಾಧ್ಯವಾಗಿರಲಿಲ್ಲ. ರ್ಯಾಂಡಿ ಪಾಶ್‍ನ `ದಿ ಲಾಸ್ಟ್ ಲೆಕ್ಚರ್ ಕೃತಿಯ ಕನ್ನಡನುವಾದ ಮಾರುಕಟ್ಟೆಯಲ್ಲಿ ಲಭ್ಯವಿದೆ ಎಂದು ಗೊತ್ತಾದಾಗ ಆತನನ್ನು ಓದಬೇಕೆನ್ನುವ ಆಸೆ ಮತ್ತೆ ಚಿಗುರೊಡೆಯಿತು. ಬಾಗಲಕೋಟ ಮತ್ತು ಗುಲಬರ್ಗಾದ ಎಲ್ಲ ಪುಸ್ತಕ ಮಳಿಗೆಗಳನ್ನು ತಡಕಾಡಿದರೂ ಪುಸ್ತಕ ದೊರೆಯಲಿಲ್ಲ. ಕೊನೆಗೆ ಬಿಜಾಪೂರದ ಬಸ್ ನಿಲ್ದಾಣದಲ್ಲಿನ ಪುಸ್ತಕ ಅಂಗಡಿಯಲ್ಲಿ ಲಭ್ಯವಿದೆ ಎಂದು ತಿಳಿದಾಗ ಅಲ್ಲಿನ ಸ್ನೇಹಿತರನ್ನು ಕಾಡಿ ಬೇಡಿ ಪುಸ್ತಕ ತರಿಸಿದ್ದಾಯಿತು. ರ್ಯಾಂಡಿ ಪಾಶ್‍ನ ಬದುಕಿನ ಯಶೋಗಾಥೆಯ ಆ ಹೊತ್ತಿಗೆ ಕೈ ಸೇರಿದಾಗ ಮೈ ಮನಗಳಲ್ಲಿ ಒಂದು ರೀತಿಯ ರೋಮಾಂಚನ. ಸಾಮಾನ್ಯವಾಗಿ ಉತ್ತಮ ಕೃತಿಯೊಂದನ್ನು ನಿಶ್ಯಬ್ಧ ವಾತಾವರಣದಲ್ಲಿ ಕುಳಿತು ಓದುವ ಅಭ್ಯಾಸವಿರುವುದರಿಂದ `ದಿ ಲಾಸ್ಟ್ ಲೆಕ್ಚರ್ ಓದಿಗಾಗಿ ಕೈಗೆತ್ತಿಕೊಂಡಾಗ ರಾತ್ರಿ ಹನ್ನೆರಡರ ಸಮಯ. ಆ ನಿರವ ರಾತ್ರಿಯಲ್ಲಿ ರ್ಯಾಂಡಿ ಪಾಶ್‍ನದೇ ಸಾಮ್ರಾಜ್ಯ. ಅದ್ಭುತ ವ್ಯಕ್ತಿತ್ವದ ವರ್ಣರಂಜಿತ ಬದುಕು ಕಣ್ಣೆದುರು ಹೊದ್ದುಕೊಂಡು ಮಲಗಿದ ಅನುಭವ. ಪ್ರತಿ ಪುಟದ ಪ್ರತಿ ಸಾಲನ್ನು ಮತ್ತೆ ಮತ್ತೆ ಓದ ಬೇಕೆನ್ನುವಷ್ಟು ಆಸಕ್ತಿ. ಹೋರಾಟ, ಯಶಸ್ಸು, ಸಾಧನೆಗಳು, ಕನಸುಗಳು, ನವಿರಾದ ಹಾಸ್ಯ, ಸಂತೋಷ, ಕಣ್ಣುಗಳನ್ನು ಒದ್ದೆಯಾಗಿಸುವ ದು:ಖ ಇದೆಲ್ಲವನ್ನೂ ಘನೀಕರಿಸಿಕೊಂಡ ರ್ಯಾಂಡಿಯ ವ್ಯಕ್ತಿತ್ವ ಪುಸ್ತಕದ ಪ್ರತಿ ಪುಟದಲ್ಲೂ ತನ್ನ ಛಾಪು ಮೂಡಿಸಿತ್ತು. ಪುಸ್ತಕದ ಕೊನೆಯ ಪುಟದ ಕೊನೆಯ ಸಾಲು ಓದಿ ಮುಗಿಸಿದಾಗ ಗಡಿಯಾರದ ಮುಳ್ಳು ಬೆಳಗಿನ ಮೂರು ಗಂಟೆ ತೋರಿಸುತ್ತಿತ್ತು. ರ್ಯಾಂಡಿಯ ಬದುಕಿನ ಸಾಧನೆಗಳು ಸ್ಪೂರ್ತಿ ನೀಡಿದರೆ ಆತನ ಬದುಕು ಅಂತ್ಯ ಕಂಡ ರೀತಿಯಾಗಿ ಮನಸ್ಸು ರೋಧಿಸುತ್ತಿತ್ತು. ಪುಸ್ತಕ ಓದಿದ ಅನೇಕ ದಿನಗಳ ನಂತರವೂ ರ್ಯಾಂಡಿ ಪಾಶ್ ಮನಸ್ಸನ್ನು ಆಕ್ರಮಿಸಿಕೊಂಡಿದ್ದ.

`ದಿ ಲಾಸ್ಟ್ ಲೆಕ್ಚರ್ ಮೂಲ ಕೃತಿಯನ್ನು ಕನ್ನಡಕ್ಕೆ ಅನುವಾದಿಸಿದವರು ಎಸ್.ಉಮೇಶ. ಮೈಸೂರಿನ ಪ್ರತಿಷ್ಠಿತ ಮಾಹಿತಿ ತಂತ್ರಜ್ಞಾನ ಸಂಸ್ಥೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಎಸ್.ಉಮೇಶ ಅತ್ಯಂತ ಸರಳವಾಗಿ ರ್ಯಾಂಡಿಯ ಬದುಕನ್ನು ಕನ್ನಡದಲ್ಲಿ ಕಟ್ಟಿ ಕೊಟ್ಟಿದ್ದಾರೆ. ಒಬ್ಬ ಪರಿಣಿತ ಬರಹಗಾರನ ಶೈಲಿಯಲ್ಲಿ ಎಲ್ಲೂ ಬೋರಾಗದಂತೆ ಕಂಪ್ಯೂಟರ್ ವಿಜ್ಞಾನಿಯ ಬದುಕಿನ ಯಶೋಗಾಥೆಯನ್ನು ಅಕ್ಷರಗಳಲ್ಲಿ ಸೆರೆ ಹಿಡಿದಿರುವ ಅನುವಾದಕರ ಕಾರ್ಯ ಶ್ಲಾಘನೀಯ. ಪುಸ್ತಕದ ಮುನ್ನುಡಿಯಲ್ಲಿ ಶ್ರೀ ವಿಶ್ವೇಶ್ವರ ಭಟ್‍ರು ಹೇಳಿರುವಂತೆ `ಪುಸ್ತಕ ಓದುತ್ತ ಓದುತ್ತ ಒಮ್ಮೊಮ್ಮೆ ತುಂಬ ಖುಷಿಯಾಗಿ ನಗು ಬರುತ್ತದೆ. ಒಮ್ಮೊಮ್ಮೆ ಅಚ್ಚರಿಯೊಂದು ಕೈ ಹಿಡಿದು ಮೈ ಮರೆತು ಜೊತೆಯಾಗುತ್ತದೆ. ಹಲವು ಸಂದರ್ಭಗಳಲ್ಲಂತೂ ದು:ಖ ಒತ್ತರಿಸಿಕೊಂಡು ಬಂದು ಕಂಬನಿ ಕಪಾಲಕ್ಕಿಳಿಯುತ್ತದೆ.

228 ಪುಟಗಳ ಈ ಪುಸ್ತಕದಲ್ಲಿ ಒಟ್ಟು 61 ಅಧ್ಯಾಯಗಳಿವೆ. ಪ್ರತಿಯೊಂದು ಅಧ್ಯಾಯದಲ್ಲಿ ರ್ಯಾಂಡಿ ಪಾಶ್‍ನದೆ ಮಾತುಗಳಿವೆ. ಆರಂಭದ ಅಧ್ಯಾಯಗಳಲ್ಲಿ ರ್ಯಾಂಡಿ ತನ್ನನ್ನು ತಾನು ಉಪನ್ಯಾಸಕ್ಕೆ ತಯ್ಯಾರು ಮಾಡಿಕೊಂಡ ಬಗೆಯನ್ನು ವಿವರಿಸಿರುವನು. ಉಪನ್ಯಾಸಕ್ಕಾಗಿ ವಿಷಯದ ಆಯ್ಕೆಯಲ್ಲಿನ ದ್ವಂದ್ವ, ವಿಷಯದ ಹುಡುಕಾಟ, ತನ್ನ ರೋಗದ ಕುರಿತು ಚರ್ಚಿಸದಿರಲು ನಿರ್ಧಾರ ಹೀಗೆ ಹತ್ತು ಹಲವು ವಿಚಾರಗಳು ಆತನ ಮನಸ್ಸಿನಲ್ಲಿ ಸುಳಿದಿರುವುದನ್ನು ಕುರಿತು ಮಾತನಾಡಿರುವನು.

ನಂತರದ ಕೆಲವು ಅಧ್ಯಾಯಗಳು ರ್ಯಾಂಡಿಯ ಬಾಲ್ಯದ ಕನಸುಗಳಿಗೆ ಮೀಸಲಾಗಿವೆ. ರ್ಯಾಂಡಿ ಪಾಶ್ ಬಾಲ್ಯದಲ್ಲಿ ಕಂಡ ಕನಸುಗಳು, ಪೋಷಕರ ಬೆಂಬಲ, ಕನಸುಗಳನ್ನು ಸಾಕಾರಗೊಳಿಸಿಕೊಂಡ ರೀತಿಯನ್ನು ಮನೋಜ್ಞನವಾಗಿ ಚಿತ್ರಿಸಲಾಗಿದೆ. ರ್ಯಾಂಡಿ ಒಂದು ಹುಡುಗಿಯನ್ನು ಪ್ರೀತಿಸಿದ್ದು, ಪ್ರಾರಂಭದಲ್ಲಿ ಆಕೆಯಿಂದ ನಿರಾಕರಣೆ, ರ್ಯಾಂಡಿಯ ಹತಾಶ ಸ್ಥಿತಿ ಮನಸ್ಸಿಗೆ ಗಾಢವಾಗಿ ತಟ್ಟುತ್ತದೆ. ಸೋಲೊಪ್ಪಿಕೊಳ್ಳದ ರ್ಯಾಂಡಿ ತನ್ನ ಹುಡುಗಿಯನ್ನು ಮೆಚ್ಚಿಸಿ ಮದುವೆಯಾಗುವುದರೊಂದಿಗೆ ಆತನ ಬದುಕು ಸುಖಾಂತ್ಯ ಕಾಣುವುದು ಓದುಗರಿಗೆ ಹರ್ಷ ನೀಡುತ್ತದೆ.

ಪುಸ್ತಕದ ಐದನೇ ಭಾಗದಲ್ಲಿ ರ್ಯಾಂಡಿ ಪಾಶ್ ಬದುಕನ್ನು ಸ್ಮರಣೀಯಗೊಳಿಸಿಕೊಳ್ಳುವುದು ಹೇಗೆಂದು ವಿವರಿಸಿರುವನು. ಇದು ಪುಸ್ತಕದ ಅತ್ಯಂತ ಮುಖ್ಯ ಭಾಗ. ಇಲ್ಲಿ ರ್ಯಾಂಡಿಯ ಉಪದೇಶ ಮತ್ತು ಸಲಹೆಗಳಿವೆ. ನಾವು ಸತ್ತನಂತರವೂ ನಮ್ಮ ಬದುಕು ಬೇರೆಯವರಿಗೆ ಮಾದರಿಯಾಗಿರಲಿ ಎನ್ನುವ ಕಿವಿ ಮಾತುಗಳಿವೆ. ದೂರು ಹೇಳ ಬೇಡಿ, ಪ್ರತಿಯೊಬ್ಬರಲ್ಲಿ ಒಳ್ಳೆಯದನ್ನೆ ಗುರುತಿಸಿ, ಕೃತಜ್ಞತಾ ಮನೋಭಾವ, ನಿಜವನ್ನೆ ಹೇಳಿ, ಜೀವನ ರಂಗುರಂಗಾಗಿರಲಿ ಪ್ರತಿಯೊಂದು ಅಧ್ಯಾಯ ಪುಟಕ್ಕಿಟ್ಟ ಬಂಗಾರ. ಮತ್ತೆ ಮತ್ತೆ ಮೆಲುಕು ಹಾಕುವಂತೆ ಇಲ್ಲಿ ರ್ಯಾಂಡಿಯ ಮಾತುಗಳಿವೆ. ಜೀವನದ ಸಣ್ಣ ಸಣ್ಣ ಸಂಗತಿಗಳಿಗೂ ಮಹತ್ವ ನೀಡಬೇಕೆನ್ನುವ ಅರ್ಥಪೂರ್ಣ ಹಿತನುಡಿಗಳಿವೆ. ಇಂಥ ಉಪದೇಶ ಮತ್ತು ಸಲಹೆಗಳಿಂದಲೇ ರ್ಯಾಂಡಿ ಪಾಶ್‍ನ ಬದುಕು ನಮಗೆ ಸಂತನೊಬ್ಬನ ಬದುಕಿನಂತೆ ಗೋಚರಿಸುತ್ತದೆ. ಈ ಕಾರಣದಿಂದಲೇ ರ್ಯಾಂಡಿ ನಮಗೆ ಮತ್ತಷ್ಟು ಆಪ್ತನಾಗುತ್ತಾನೆ.

ಪುಸ್ತಕದ ಕೊನೆಯ ಭಾಗ ಮನಸ್ಸನ್ನು ಭಾರವಾಗಿಸುತ್ತದೆ. ಏಕೆಂದರೆ ಈ ಭಾಗ ಕಂಪ್ಯೂಟರ್ ವಿಜ್ಞಾನಿಯ ವೈಯಕ್ತಿಕ ಬದುಕಿಗೆ ಮೀಸಲಾಗಿದೆ. ಇಲ್ಲಿ ರ್ಯಾಂಡಿಯ ಯಾವುದೇ ಉಪದೇಶಗಳಿಲ್ಲ.ಮಡದಿ ಮತ್ತು ಮಕ್ಕಳೊಂದಿಗಿನ ಆತನ ಭಾವನಾತ್ಮಕ ಸಂಬಂಧ ಕಣ್ಣನ್ನು ತೇವಗೊಳಿಸಿದರೆ ಕೊನೆಯ ಮಗುವಿಗೆ ನನ್ನೊಂದಿಗಿನ ಯಾವ ನೆನಪೂ ಉಳಿಯಲಾರದು ಎನ್ನುವ ರ್ಯಾಂಡಿಯ ಅಸಹಾಯಕತೆ ಹೃದಯವನ್ನು ಕಲಕುತ್ತದೆ. ಮೂವರು ಎಳೆಯ ಮಕ್ಕಳ ಆರೈಕೆ ಮಾಡಲು ತಾಯಿ ನಿರಂತರ ಶ್ರಮ ಪಡಬೇಕಾಗುತ್ತದೆ ಎಂದು ಪತ್ನಿಗಾಗಿ ಪರಿತಪಿಸುವ ರ್ಯಾಂಡಿಯಲ್ಲಿ ಒಬ್ಬ ಪ್ರೇಮಮಯಿ ಪತಿ ಕಾಣಿಸುತ್ತಾನೆ. `ರ್ಯಾಂಡಿ ದಯವಿಟ್ಟು ನೀನು ಸಾಯಬೇಡ ಎಂದು ದು:ಖಿಸುವ ಪತ್ನಿಯನ್ನು ಬಿಗಿದಪ್ಪಿ ಗಳಗಳನೆ ಅತ್ತು ಬಿಡುವ ಪಾಶ್ ಆ ಕ್ಷಣ ಸಾಮಾನ್ಯರಲ್ಲಿ ಸಾಮಾನ್ಯನಂತೆ ಕಾಣಿಸುವನು.

ಉಪನ್ಯಾಸದ ಕೊನೆಯಲ್ಲಿನ ಆತನ ವಿನಮೃತಾ ಭಾವ ಮತ್ತು ಅಹಂಕಾರವಿಲ್ಲದ ಗುಣದಿಂದ ರ್ಯಾಂಡಿ ಮತ್ತಷ್ಟು ಮೆಚ್ಚುಗೆಗೆ ಪಾತ್ರನಾಗುತ್ತಾನೆ. ಆತ ಹೇಳುತ್ತಾನೆ `ನನ್ನ ಈ ಉಪನ್ಯಾಸ ನಿಮಗಾಗಿ ಅಲ್ಲ. ಅದು ನನ್ನ ಮಕ್ಕಳಿಗಾಗಿ ಇಲ್ಲಿ ರ್ಯಾಂಡಿ ಮತ್ತೆ ಗೆಲುವು ಸಾಧಿಸುತ್ತಾನೆ.

ಕೊನೆಯ ಮಾತು

      ಪುಸ್ತಕವೊಂದನ್ನು ಓದಿದ ನಂತರ ಅದು ಅನೇಕ ದಿನಗಳವರೆಗೆ ಓದುಗನ ಮನಸ್ಸನ್ನು ಕಾಡಬೇಕು. ಅಂಥದ್ದೊಂದು ಗುಣ ರ್ಯಾಂಡಿ ಪಾಶ್‍ನ `ದಿ ಲಾಸ್ಟ್ ಲೆಕ್ಚರ್ ಕೃತಿಯಲ್ಲಿದೆ. ಇದೊಂದು ಉತ್ತಮ ಸಂಗ್ರಹಯೋಗ್ಯ ಪುಸ್ತಕವೂ ಹೌದು. ಏಕೆಂದರೆ ಈ ಪುಸ್ತಕದಲ್ಲಿನ ರ್ಯಾಂಡಿ ಪಾಶ್‍ನ ಉಪದೇಶಗಳು ಒಂದು ವಯೋಮಾನದವರಿಗಾಗಿ ಅಥವಾ ಒಂದು ಪೀಳಿಗೆಗಾಗಿ ಮಾತ್ರವಲ್ಲ. ಎಲ್ಲ ವಯೋಮಾನದವರಿಗಾಗಿ, ಅನೇಕ ಪೀಳಿಗೆಗಳವರೆಗೆ ಕಾಯ್ದಿರಿಸಬೇಕಾದ ಪುಸ್ತಕವಿದು. ಕೈಗೆಟುಕುವ ಬೆಲೆಯ ಈ ಪುಸ್ತಕವನ್ನು ದಯವಿಟ್ಟು ಖರೀದಿಸಿ ಓದಿ. ನಮ್ಮ ಈ ಕಾರ್ಯ ಆ ಅದ್ಭುತ ಚೇತನಕ್ಕೆ ನಾವು ಸಲ್ಲಿಸುವ ಶೃದ್ಧಾಂಜಲಿಯಾಗಲಿ.

ಚಿತ್ರಕೃಪೆ : Disney Educational Productions

22 ಟಿಪ್ಪಣಿಗಳು Post a comment
 1. ಫೆಬ್ರ 13 2015

  ಒಳ್ಳೆಯ ಬರಹ. ಸಾವಿನ ಮೊದಲಿನ ಬದುಕನ್ನು ಸಾರ್ಥಕಗೊಳಿಸಲು ಪ್ರೇರೇಪಿಸುವಂತಿದೆ.

  ಉತ್ತರ
  • vasant
   ಫೆಬ್ರ 20 2015

   ಲೇಖನ ಉತ್ತಮವಾಗಿದೆ ಜೊತೆಗೆ ಬರವಣಿಗೆಯ ಶೈಲಿ ಓದುಗನಿಗೆ ಇಷ್ಟವಾಗುವಂತಿದೆ ಲೇಖಕರಿಗೆ ಅಭಿನಂದನೆಗಳು

   ಉತ್ತರ
 2. Nagshetty Shetkar
  ಫೆಬ್ರ 13 2015

  “ಸಾವಿನ ಸಾಂಗತ್ಯ”!!! ಇಂತಹ ಹಾಸ್ಯಾಸ್ಪದ ಪದಪುಂಜಗಳ ಪ್ರಯೋಗ ಮಾಡದೆ ಸರಳವಾಗಿ ಆದರೆ ಮನ ಮುಟ್ಟುವಂತೆ ನಮ್ಮ ದರ್ಗಾ ಸರ್ ಅವರ ತರಹ ಬರೆಯಲು ಕಲಿತುಕೊಳ್ಳಿ. ಬ್ಲಾಗ್ ಬರಹಗಳು ಹೈಸ್ಕೂಲ್ ಪ್ರಬಂಧಗಳ ಮಟ್ಟಕ್ಕಿಂತ ಕೆಳಗೆ ಇಳಿಯಕೂಡದು.

  ಉತ್ತರ
 3. Nagshetty Shetkar
  ಫೆಬ್ರ 13 2015

  “ರ್ಯಾಂಡಿ”!!! ಇದು ಕನ್ನಡವೋ ಅಥವಾ ಕನ್ನಡ ಲಿಪಿ ಬಳಸಿ ಬರೆಯಲ್ಪಡುತ್ತಿರುವ ಅನ್ಯಲೋಕದ ಭಾಷೆಯೋ?!! ಕನ್ನಡ ವ್ಯಾಕರಣದ ಕನಿಷ್ಠ ಜ್ಞಾನವಾದರೂ ನಿಲುಮೆಯ ಬರಹಗಾರರಿಗೆ ಇರಬೇಡವೇ!!

  ಉತ್ತರ
  • Nagshetty Shetkar
   ಫೆಬ್ರ 13 2015

   “ವಿನಮೃತಾ ಭಾವ”!! ಇದು ಯಾವ ಭಾವ?

   ಉತ್ತರ
  • Rajkumar V.Kulkarni
   ಫೆಬ್ರ 13 2015

   ಓದುಗ ಮಿತ್ರ ರ್ಯಾಂಡಿ ಎಂದು ಮುದ್ರಣವಾಗಿರುವುದಕ್ಕೆ ನಿಲುಮೆ ತಂಡ ಜವಾಬ್ದಾರಿ.

   ಉತ್ತರ
  • ಫೆಬ್ರ 13 2015

   ನಾಗಶೆಟ್ಟಿ ಶೆಟ್ಕರ್ ರವರೇ, ರ್+ಯ್+ಆ ಎನ್ನುವುದು ರ್ಯಾ ಎಂದಾಗಿ ರ್ಯಾಂಡಿ ರೂಪ ಬರುವುದು ಯುನಿಕೋಡ್ ನಲ್ಲಿ ನುಸುಳಿದ ದೋಷ. ನಿಮ್ಮ ದರ್ಗಾ ಸರ್ ಅವರಿಗೆ ಹೇಳಿ ಈ ದೋಷವನ್ನು ಆದಷ್ಟು ಬೇಗ ನಿವಾರಿಸಲು ನಿಮ್ಮಿಂದ ಸಾಧ್ಯವೇ ?

   ಉತ್ತರ
   • Nagshetty Shetkar
    ಫೆಬ್ರ 13 2015

    ರ್ಯಾಂಡಿ ಅಂತ ಬರೆದು ಹಾಸ್ಯಾಸ್ಪದರಾಗುವ ಬದಲು ರಾಂಡಿ ಅಂತ ಬರೆಯಬಹುದಲ್ಲ. ಕನ್ನದಲ್ಲಿ ರ ಗೆ ಯಾ ವತ್ತು ಕೊಡುವ ಸಂಪ್ರಾದಯವಿಲ್ಲ.

    ಉತ್ತರ
    • Nagshetty Shetkar
     ಫೆಬ್ರ 13 2015

     ಕನ್ನದಲ್ಲಿ –> ಕನ್ನಡದಲ್ಲಿ

     ಉತ್ತರ
    • Shivakumar
     ಫೆಬ್ರ 14 2015

     ಗೆಳೆಯ ಅದು ವತ್ತು ಅಲ್ಲ ಒತ್ತು

     ಉತ್ತರ
    • ಫೆಬ್ರ 14 2015

     ಯೂನಿಕೋಡ್ ನಲ್ಲಿ ಕನ್ನಡ ಬರೆಯುವಾಗ ಉಂಟಾಗುತ್ತಿರುವ ತಪ್ಪದು. ಅದನ್ನೇ ನುಡಿಯ ಏಕಭಾಷೆಯಲ್ಲಿ ಬರೆದಾಗ ಸರಿಯಾಗಿ ಬರುತ್ತದೆ. ಸಂಬಂಧಿಸಿದವರು ಲಿಪಿಯ ಈ ತಪ್ಪನ್ನು ಸರಿಪಡಿಸಬೇಕು. ಇದು ಬರೆದವರಿಂದಾದ ತಪ್ಪಲ್ಲ ಶೇಟ್ಕರ್ ರವರೇ.

     ಉತ್ತರ
     • Nagshetty Shetkar
      ಫೆಬ್ರ 14 2015

      ನಿಮ್ಮನ್ನು ಯಾರು ರ್ಯಾಂಡಿ ಅಂತ ಬರೆಯಲು ಹೇಳಿದರು? ರಾಂಡಿ ಅಂತ ಬರೆಯಬಹುದಲ್ಲ.

      ಉತ್ತರ
 4. ಫೆಬ್ರ 14 2015

  ಗುಲಗ಼ಂಜಿಯ ಕಪ್ಪು ಅದಕ್ಕೆ ಕಾಣಿಸದು. ಬೇರೆಯವರನ್ನು ಕುರಿತು ಕುಚೇಷ್ಟೆಗೇನೂ ಕಮ್ಮಿಯಿಲ್ಲ.

  ಉತ್ತರ
  • Shivakumar
   ಫೆಬ್ರ 14 2015

   ಸುದರ್ಶನ್ ಅವರೆ ನಾಗಶೆಟ್ಟಿ ಕುರಿತು ನೀವು ಹೇಳಿದ ಮಾತು ಸರಿಯಾಗಿದೆ

   ಉತ್ತರ
  • Nagshetty Shetkar
   ಫೆಬ್ರ 14 2015

   ನೀವು ನಿಲುಮೆಯ ಸೈಬರ್ ಪಡೆಯವರು ಇದೇ ರೀತಿ ತಲೆ ಹರಟೆ ಮಾಡುತ್ತಲೇ ಬಂದಿದ್ದರಿಂದಲೇ ರಾಕೇಶ್ ಶೆಟ್ಟಿ ಅವರು ಮಟ್ಟು ವಿಷಯದಲ್ಲಿ ತೊಂದರೆಗೆ ಸಿಕ್ಕಿಕೊಂಡದ್ದು. ಭಾಷೆಯ ಬಳಕೆಯನ್ನು ಲಘುವಾಗಿ ಗಣಿಸಬೇಡಿ.

   ಉತ್ತರ
   • Shivakumar
    ಫೆಬ್ರ 16 2015

    ಗಣಿಸಬೇಡಿ ಅಲ್ಲ ಅದು ಪರಿಗಣಿಸಬೇಡಿ

    ಉತ್ತರ
    • Nagshetty Shetkar
     ಫೆಬ್ರ 16 2015

     You should write sslc Kannada paper again.

     ಉತ್ತರ
 5. ಫೆಬ್ರ 17 2015
 6. ಬಹಳ ಚೆನ್ನಾಗಿ ಬರೆದಿದ್ದೀರಿ

  ಉತ್ತರ
 7. ಜೂನ್ 15 2018

  ಅತ್ಯುತ್ತಮವಾದ ಕೃತಿ ಪರಿಚಯ…
  ಧನ್ಯವಾದಗಳು ಸರ್. ..🙏🙏

  ಉತ್ತರ

ನಿಮ್ಮ ಅನಿಸಿಕೆ...

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Note: HTML is allowed. Your email address will never be published.

Subscribe to comments