ದಹಿಸಬೇಕಾಗಿರುವುದು ಧರ್ಮಗ್ರಂಥವನ್ನಲ್ಲ ಸಂಕುಚಿತ ಮನಸ್ಸಿನ ತ್ಯಾಜ್ಯವನ್ನು!
– ಸಂದೇಶ್.ಎಚ್.ನಾಯ್ಕ್ ಹಕ್ಲಾಡಿ,ಕುಂದಾಪುರ
ಯಾವ ದೇಶ ತನ್ನ ಸಂಸ್ಕೃತಿ,ಸಂಸ್ಕಾರ, ಆಚಾರ, ವಿಚಾರಗಳಂತಹ ಮೇರು ಮೌಲ್ಯಗಳ ಮೂಲಕ ಜಗತ್ತಿನ ಜನಮಾನಸದಲ್ಲಿ ವೈಶಿಷ್ಟ್ಯಪೂರ್ಣ ಹೆಗ್ಗಳಿಕೆಗೆ ಭಾಜನವಾಗಿದೆಯೋ ಅದೇ ದೇಶದಲ್ಲಿನ ಬಹುಪಾಲು ನಾಗರೀಕರ ಮನಸ್ಸಿನಲ್ಲಿ ಶಾಂತಿ, ಸಮಾಧಾನ, ನೆಮ್ಮದಿ ಹಾಗೂ ಆಹ್ಲಾದತೆಗಳನ್ನು ಪಸರಿಸುವ ಧರ್ಮ, ಧಾರ್ಮಿಕತೆಯ ಅಂಶಗಳೆಂದರೆ ಕೆಲವು ವಿಚಾರವಾಧಿಗಳು ಹಾಗೂ ಪ್ರಗತಿಪರರಿಗೆ ಅದೇಕೋ ಕಡು ದ್ವೇಷ. ದೇವರು, ಆರಾಧನೆ, ಪೂಜೆ, ಪುನಸ್ಕಾರ, ಧರ್ಮಗ್ರಂಥಗಳೆಂಬ ಶಬ್ಧಗಳು ಅಂತಹವರ ಕಿವಿಗೆ ಬೀಳುತ್ತಲೇ ಕಾದ ಕಬ್ಬಿಣವನ್ನು ಕಿವಿಗೆ ಸುರಿದಂತೆ ವರ್ತಿಸಲಾರಂಭಿಸುತ್ತಾರೆ. ತಮ್ಮ ವೈಚಾರಿಕ ಹೊಳಹುಗಳಷ್ಟೇ ಸಾರ್ವಕಾಲಿಕವೆಂಬ ತಪ್ಪುಗ್ರಹಿಕೆಯನ್ನೇ ಸದಾ ಸಮಾಜದ ಮೇಲೆ ಹೇರುವ ಹಾಗೂ ಇನ್ನುಳಿದವೆಲ್ಲವೂ ದೋಷಪೂರಿತ, ಅಪಾಯಕಾರಿಯೆಂಬಂತೆ ಬಿಂಬಿಸುವ ನಿರಂತರ ಪ್ರಯತ್ನದಲ್ಲಿ ತೊಡಗಿರುವವರು ಕಟ್ಟುವುದಕ್ಕಿಂತಲೂ ಕೆಡವುದು, ಒಡೆಯುವುದು ಹಾಗೂ ಬೀದಿಗೆ ಬೀಳಿಸಿ ವಿಕೃತ ಖುಷಿ ಪಡುವುದರಲ್ಲೇ ತಮ್ಮ ಉದ್ಧೇಶ ಈಡೇರಿಸಿಕೊಳ್ಳಬಲ್ಲೆವೆಂಬ ಅನಾರೋಗ್ಯಕರ ಮನಸ್ಥಿತಿಯೊಂದನ್ನು ಬೆಳೆಸಿಕೊಂಡಿದ್ದಾರೆ ಹಾಗೂ ಅದನ್ನು ಒತ್ತಾಯಪೂರ್ವಕವಾಗಿ ಸಮಾಜದ ಮೇಲೆ ಹೇರುವ ವಿಫಲ ಯತ್ನದಲ್ಲಿ ತೊಡಗಿಸಿಕೊಂಡಿದ್ದಾರೆ. ಅದರ ಒಂದು ಭಾಗವೇ ‘ಭಗವದ್ಗೀತೆ’ಗೆ ಬೆಂಕಿ ಇಡಲು ಮುಂದಾಗಿರುವ ಆಕ್ರಮಣಕಾರಿ ಮನೋಪ್ರವೃತ್ತಿಯ ದುರಹಂಕಾರಿ ವರ್ತನೆ.
ಸಿಕ್ಕ ವೇದಿಕೆಯ ಘನತೆ ಗಾಂಭೀರ್ಯತೆಗೆ ನ್ಯಾಯ ಒದಗಿಸದೆ ತಮ್ಮ ವೈಯಕ್ತಿಕ ಅಸ್ತಿತ್ವ ಹಾಗೂ ವೈಚಾರಿಕ ಧೋರಣೆಯ ಚಲಾವಣೆಯನ್ನು ಕಾಯ್ದುಕೊಳ್ಳಲೋಸುಗ ಸಮಾಜೋದ್ಧಾರದ ಸೋಗು ತೊಟ್ಟು ಸದಾ ಅನ್ಯರ ಭಾವನೆಗಳನ್ನು ಅಪಮಾನಿಸುತ್ತಾ ಇಲ್ಲ ಸಲ್ಲದ ಹೇಳಿಕೆಗಳನ್ನು ನೀಡುವವರ ವರ್ತನೆಯಲ್ಲಿ ಢಾಳಾಗಿ ಗೋಚರಿಸುವುದು ವಿವೇಕ ಹಾಗೂ ವಿವೇಚನೆಗಳ ಕೊರತೆ. ಈ ಅಪಭ್ರಂಶ ವರ್ತನೆಯನ್ನು ಅನುಮೋದಿಸುವ, ಬೆಂಬಲಿಸುವ ಸಣ್ಣ ಹಿಂಬಾಲಕರ ಗುಂಪು ವೇದಿಕೆ ಮುಂದಿದ್ದರಂತೂ ಮುಗಿದೇ ಹೋಯಿತು. ಅವರ ಮಾತು, ಕೃತಿಗಳ ಮೇಲಿನ ಸ್ಥಿಮಿತವನ್ನೇ ಕಳೆದುಕೊಳ್ಳುತ್ತಾರೆ. ಆ ಮೂಲಕ ತಮ್ಮಲ್ಲಡಗಿರುವ ಅಸಹಿಷ್ಣುತೆ, ಸಂಕುಚಿತತೆಗಳನ್ನು ಮತ್ತೆ ಮತ್ತೆ ಜಾಹೀರುಗೊಳಿಸುತ್ತಾರೆ.
ತಮಗೆ ಅಪಥ್ಯವೆನಿಸಿದ ಮಾತ್ರಕ್ಕೆ ಅದರ ಅಸ್ತಿತ್ವವೇ ಇರಬಾರದೆಂಬ ಧೋರಣೆ ಎಷ್ಟು ಸರಿ? ಮತ್ತು ಆ ಧೋರಣೆಯ ಈಡೇರಿಕೆಗಾಗಿ ಕೊಳ್ಳಿಯಿಡುವ, ಭಗ್ನಗೊಳಿಸಲು ಕರೆ ನೀಡುವ ಮೂಲಕ ವಿಧ್ವಂಸಕ ವರ್ತನೆ ತೋರುವುದು ಇನ್ನಷ್ಟು ಆಂತಕಕಾರಿ. ಇಂಥ ದ್ವೇಷ ಕಾರುವವರೇ ಇನ್ನಾವುದೋ ವೇದಿಕೆಯಲ್ಲಿ ಬುದ್ಧ, ಬಸವ, ಗಾಂಧಿ, ಅಂಬೇಡ್ಕರ್ರ ಮಾತುಗಳನ್ನು, ಅವರು ಸಮಾಜಕ್ಕೆ ಸಾರಿರುವ ಸಂದೇಶಗಳನ್ನು ಉಲ್ಲೇಖಿಸುತ್ತಾ ಶಾಂತಿ, ಸೌಹಾರ್ದತೆ, ಸಹಬಾಳ್ವೆ, ಸಹಿಷ್ಣುತೆ ಹಾಗೂ ಅಹಿಂಸೆಗಳ ಬಗ್ಗೆ ತಾಸುಗಟ್ಟಲೇ ಭಾಷಣ ಬಿಗಿಯುವುದು ವಿಪರ್ಯಾಸವಲ್ಲವೇ? ವೇದಿಕೆಯ ಮೇಲೆ ತಮ್ಮ ವಾಕ್ಪಟುತ್ವ ಪ್ರದರ್ಶಿಸಿ ಚಪ್ಪಾಳೆ ಗಿಟ್ಟಿಸಿಕೊಂಡ ಮಾತ್ರಕ್ಕೆ ಸಮಾಜದ ಏಳ್ಗೆಗೆ ಮಹಾನ್ ಕೊಡುಗೆ ನೀಡಿದಂತಾಗುವುದಿಲ್ಲ. ಹೀಗೆ ಭಾಷಣ ಬಿಗಿಯುವ ವಿವಿಧ ಮುಂದಾಳುಗಳ ಪೈಕಿ ಜನರ ನೈಜ ಆತಂಕ, ಅಗತ್ಯ ಹಾಗೂ ಆಶೋತ್ತರಗಳನ್ನು ಅರಿತು ಅದಕ್ಕೆ ಸ್ಪಂದಿಸುವ ನಿಟ್ಟಿನ ಚಿಕಿತ್ಸಕ ಮನೋಭಾವ ಉಳ್ಳವರು ಬೆರಳೆಣಿಕೆಯವರು ಮಾತ್ರ.
ಬಹುಜನರ ಶ್ರದ್ಧೆ, ಭಕ್ತಿ ಮತ್ತು ಗೌರವಕ್ಕೆ ಪಾತ್ರವಾಗಿರುವ ‘ಭಗವದ್ಗೀತೆ’ಗೆ ಬೆಂಕಿ ಹಚ್ಚುತ್ತೇನೆಂಬ ಹುಂಬತನ ಮೆರೆದವರು ಆ ಮೂಲಕ ಸಾಮಾಜಿಕ ವ್ಯವಸ್ಥೆಯ ಸಮತೋಲನ ಹಾಗೂ ಸಂಕೀರ್ಣತೆಯ ಸಾದರಾಂಶಗಳಿಗೆ ಕೊಳ್ಳಿಯಿಡಲು ಮುಂದಾಗಿದ್ದಾರೆ. ಆಸಕ್ತಿ ಅಥವಾ ಅಗತ್ಯ ಬೌದ್ಧಿಕ ಮುಕ್ತತೆಯ ಪ್ರಾಂಜಲ ಮನಃಸ್ಥಿತಿಯ ಕೊರತೆಯ ಕಾರಣಕ್ಕೆ ಗೀತೆಯ ಅಂತಃಸತ್ವವನ್ನು ಅರಿತು ಅದರ ಘನತೆಯ ಮೌಲ್ಯವನ್ನು ಕಂಡುಕೊಳ್ಳಲಾಗದಿದ್ದರೆ ಬಿಟ್ಟು ಬಿಡಿ. ಅಷ್ಟಕ್ಕೂ ಗೀತೆಯನ್ನು ಸದಾ ನಿಮ್ಮ ಮುಂದಿಟ್ಟುಕೊಂಡು ದಿನಕ್ಕೆ ನಾಲ್ಕು ಬಾರಿ ನಮಸ್ಕರಿಸಿ ಅದನ್ನು ಪಠಿಸುವಂತೆ ಯಾರೂ ನಿಮ್ಮನ್ನು ಒತ್ತಾಯಿಸುತ್ತಿಲ್ಲವಲ್ಲ! ಅದು ಅವರವರ ಆಯ್ಕೆ. ಪ್ರತಿಯೊಬ್ಬ ಪ್ರಜೆಗೂ ತನ್ನದೇ ಆದ ಧಾರ್ಮಿಕತೆಯನ್ನು ಆಚರಿಸುವ ಮತ್ತು ಅಳವಡಿಸಿಕೊಳ್ಳುವ ಹಕ್ಕು ಸಂವಿಧಾನ ದತ್ತವಾಗಿ ದಕ್ಕಿರುವಂತಹದ್ದು. ಹಾಗಾದ ಮೇಲೆ ಅನಾವಶ್ಯಕವಾಗಿ ಗೀತೆಯ ಬಗ್ಗೆ ದ್ವೇಷ ಕಾರುವ ದರ್ದೇಕೆ?
ಒಂದು ಧರ್ಮ ಗ್ರಂಥವನ್ನು ಸಹಿಸಿಕೊಳ್ಳಲಾಗದವರಿಗೆ ಇತರರ ಭಿನ್ನ ವಿಭಿನ್ನ ನೆಲೆಗಟ್ಟಿನ ಅಭಿಪ್ರಾಯಗಳನ್ನು ಅವುಗಳ ಮಹತ್ವಕ್ಕೆ ತಕ್ಕಂತೆ ಪುರಸ್ಕರಿಸುವ ವೈಶಾಲ್ಯತೆಯಾಗಲೀ ಹಾಗೂ ಸಾಮಾಜಿಕ ವ್ಯವಸ್ಥೆಯ ಸಮತೋಲನಕ್ಕೆ ಅಗತ್ಯವಿರುವ ಪಕ್ವತೆಯಾಗಲೀ ಇರಲು ಸಾಧ್ಯವೇ? ಭಗವದ್ಗೀತೆಯ ಮಾತು ಹಾಗಿರಲಿ ಸ್ವಾಮೀ, ಯಾವ ಪುಸ್ತಕವೇ ಆದರೂ ಅದನ್ನು ವಿದ್ಯೆಯ ಅಧಿದೇವತೆ ಸರಸ್ವತಿ ಮಾತೆಯ ಪ್ರತಿರೂಪವೆಂದೇ ಪರಿಗಣಿಸುವ ಜನರು ಅಕ್ಷರವುಳ್ಳ ಕಾಗದದ ಚೂರನ್ನೂ ಬೆಂಕಿಗೆಸೆಯಲು ಹಿಂಜರಿಯುತ್ತಾರೆ ಅಂತಹದ್ದರಲ್ಲಿ ಗೀತೆಗೆ ಬೆಂಕಿ ಹಚ್ಚಬೇಕೆಂದು ಹೇಳುತ್ತಿರುವಿರಲ್ಲ ಅದರಲ್ಲೆ ಗೊತ್ತಾಗುತ್ತದೆ ಸಮಾಜದ ಜೊತೆ ನೀವೆಷ್ಟು ಕನೆಕ್ಟ್ ಆಗಿದ್ದೀರೆಂದು!
ಮಾರ್ಗದರ್ಶನದ ಹೆಸರಲ್ಲಿ ಸಮಾಜವನ್ನು ತಪ್ಪುದಾರಿಗೆಳೆಯುವ ನೀವುಗಳು ನಿಜಕ್ಕೂ ಆತಂಕಕಾರಿ! ಹೊರತು ಧರ್ಮಗ್ರಂಥಗಳಲ್ಲ.
ಸದಾ ವೈಷಮ್ಯ, ತಾರತಮ್ಯ, ಸಂಘರ್ಷ, ಕಲಹ, ಕಿತ್ತಾಟಗಳೆಂಬ ಋಣಾತ್ಮಕ ಅಂಶಗಳೊಂದಿಗೆ ಭಗವದ್ಗೀತೆಯನ್ನು ತಳುಕು ಹಾಕಿ ಅದರ ಮಹತ್ವವನ್ನು ಮಣ್ಣುಪಾಲಾಗಿಸಲು ತರಹೇವಾರಿ ಪ್ರಯತ್ನಕ್ಕಿಳಿಯುವವರು ಒಮ್ಮೆ ಸಾವಧಾನ ತಂದುಕೊಂಡು ಗೀತೆಯ ದೆಸೆಯಿಂದ ಉಂಟಾಗಿರುವುದೆಂದು ಉದಾಹರಿಸಬಲ್ಲ ಒಂದಷ್ಟು ಹಿಂಸೆ, ಪ್ರಾಣಹಾನಿ, ಜಾತಿ-ಮತಾಧಾರಿತ ವೈಷಮ್ಯಗಳನ್ನು ಹಬ್ಬಿದ ಘಟನೆಗಳ ನಿದರ್ಶನ ನೀಡಿ ನೋಡೋಣ.. ಈ ಬಗ್ಗೆ ಯಾವ್ಯಾವುದೋ ಅಸಂಬದ್ಧ ವ್ಯಾಖ್ಯಾನ, ಯಾವುದಕ್ಕೂ ತಾಳೆಯಾಗದ ಸವಕಲು ಹೋಲಿಕೆಗಳಷ್ಟೇ ನಿಮ್ಮ ಜೋಳಿಗೆಯಲ್ಲಿರಲು ಸಾಧ್ಯ. ಇದನ್ನೇ ಸಿಕ್ಕ ಸಿಕ್ಕಲ್ಲಿ ಪ್ರಯೋಗಿಸಿ ಅರ್ಥಹೀನ ಹೀಗಳಿಕೆಗೆ ಮುಂದಾಗುವುದು ಅವರ ಸಣ್ಣತನವನ್ನು ತೋರಿಸುತ್ತದೆಯಷ್ಟೇ.
ಭಗವದ್ಗೀತೆಯನ್ನು ರಾಷ್ಟ್ರೀಯ ಗ್ರಂಥವಾಗಿಸುವ ಬಗ್ಗೆ ಆಕ್ಷೇಪ, ಅಪಸ್ವರಗಳಿದ್ದರೆ ವಿಷಯಾಧಾರಿತ ಚರ್ಚೆಗೆ ಮುಂದಾಗಲಿ, ಸಾಧಕ ಬಾಧಕಗಳ ಅರ್ಥಪೂರ್ಣ ವಿಶ್ಲೇಷಣೆಯಾಗಲಿ ಅದರೊಂದಿಗೆ ಸಮಾಜಕ್ಕೆ ಉಪಯುಕ್ತ ಸಂದೇಶಗಳು ರವಾನೆಯಾಗುತ್ತದೆ. ಅದನ್ನು ಯಾರೂ ವಿರೋಧಿಸರು. ರಚನಾತ್ಮಕ ಟೀಕೆ ಟಿಪ್ಪಣಿಗಳ ಸಂಪನ್ಮೂಲದ ಕೊರತೆಯಿಂದ ಬಳಲುತ್ತಿರುವವರು ಜನರ ಗಮನ ಸೆಳೆಯುವ ಉದ್ದೇಶದಿಂದಲೇ ಹೀಗೆ ಗೀತೆಯ ಬಗ್ಗೆ ಕ್ಷುಲ್ಲಕವಾಗಿ ಮಾತನಾಡುವ ಮೂಲಕ ಪ್ರಚಾರ ಗಿಟ್ಟಿಸಿಕೊಳ್ಳಲು ಮುಂದಾಗಿರುವುದು ವಿಷಾದನೀಯ.
ಸಾಮಾಜಿಕ ಸಮಾನತೆಯನ್ನು ಶಾಶ್ವತವಾಗಿ ಪ್ರತಿಷ್ಠಾಪಿಸಲು ಗೀತೆಯ ದಹನವೇ ಪರಿಹಾರವೇನೋ ಎಂಬಂತೆ ಬಿಂಬಿಸಿ ಪೌರುಷ ಮೆರೆಯಲು ಮುಂದಾದವರು ಒಮ್ಮೆ, ನಿಜಕ್ಕೂ ಸಮಾನತೆಯನ್ನು ಬಯಸುತ್ತಾ ದುಸ್ತರ ಜೀವನ ಮುನ್ನಡೆಸುತ್ತಿರುವ ಸಮಾಜದ ತಳಮಟ್ಟದ ಮುಗ್ಧ ಜನರ ಬವಣೆಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಎಷ್ಟು ಉತ್ಪಾದಕ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದಾರೆಂಬ ಆತ್ಮ ವಿಮರ್ಶೆ ಮಾಡಿಕೊಳ್ಳಲಿ. ಆಗ ಅನುಭವಕ್ಕೆ ಬರುತ್ತದೆ ಸಮಾಜದ ಶ್ರೇಯಸ್ಸು ಅಡಗಿರುವುದು ಗೀತೆಯ ದಹನದಲ್ಲೋ ಅಥವಾ ನಮ್ಮ ಮನಸ್ಸು, ಯೋಚನಾ ಶೈಲಿ ಹಾಗೂ ಧೋರಣೆಯ ಅಣು ಅಣುವಿನಲ್ಲಿ ತುಂಬಿ ತುಳುಕಾಡುತ್ತಿರುವ ಕೊಳೆಯ ತ್ಯಾಜ್ಯಗಳನ್ನು ಭಸ್ಮಗೊಳಿಸುವುದರಲ್ಲೋ ಎನ್ನುವುದು.
ಎಲ್ಲೋ ಸಾಮಾಜಿಕ ಮಾಧ್ಯಮದ ಪುಟವೊಂದರಲ್ಲಿ ಓದಿದ ನೆನಪು.. ‘ಕಟ್ಟುವ ಕುಶಲತೆ ಇಲ್ಲದವರು ಎಂದಿಗೂ ಕೆಡವಲು ಮುಂದಾಗಬಾರದು’ ಏಕೆಂದರೆ ಕೆಡಹುವ ಹುಮ್ಮಸ್ಸಿನಲಿ ಭಗ್ನಾವಶೇಷಗಳೇ ತಲೆಮೇಲೆ ಬಿದ್ದು ಭಂಜನೆಗಿಳಿದವರಿಗೇ ಗಂಭೀರ ಹಾನಿಯಾಗುವ ಸಾಧ್ಯತೆಯಿರುತ್ತದೆ. ಕಟ್ಟುವ ಕೌಶಲ್ಯ ಗಳಿಸಿಕೊಂಡವರು ಮಾತ್ರವೇ ಹಾನಿಯಾಗದಂತೆ ಕೆಡಹುವ ಪರಿಣತಿಯನ್ನೂ ಹೊಂದಿರಬಲ್ಲರಂತೆ!
ಈ ಪುಸ್ತಕಗಳನ್ನು ದಹಿಸುವ ಸಂಸ್ಕೃತಿ ಆರಂಭವಾಗಿದ್ದೇ, ಡಾ|| ಅಂಬೇಡ್ಕರ್ ರವರಿಂದ ಎಂದು ಹೇಳಿದರೆ ತಪ್ಪಾಗಲಾರದು. ಅವರು ಮನುಸ್ಮೃತಿಯ ದಹನವನ್ನು ಆಚರಿಸಿದರು, ಈಗಲೂ ವರ್ಷಕೊಮ್ಮೆ ಅಲ್ಲಿ ಇಲ್ಲಿ ಮನುಸ್ಮೃತಿಯ ದಹನವಾಗುತ್ತಿರುತ್ತದೆ. ಈ ನಿಟ್ಟಿನಲ್ಲಿ ಈಗ ಗೀತೆಯ ಸರದಿ, ಮಹಾತ್ಮಗಾಂಧಿಯವರಿರೆ ಅಚ್ಚು ಮೆಚ್ಚಿನ ಆದ್ಯಾತ್ಮ ಗ್ರಂಥ ಗೀತೆಯೇ ಆಗಿತ್ತು. Geetha, my mother ಎಂಬ ಪುಸ್ತಕವನ್ನು ಬರೆದರು. ಸುಪ್ರಸಿದ್ದ ಗಾಂಧೀ ವಾದಿಗಳೆಲ್ಲರೂ ಗೀತೆಯ ಭಕ್ತರೇ ಅಗಿರುವುದು ವಿಶೇಷ.
ಗೀತೆಯನ್ನು ಸುಡಲು ಬಯಸುವವರು ನಾಳೆ ಗಾಂಧೀ ವಿಚಾರಗಳನ್ನು ಸುಡಲು ಉಪಕ್ರಮಿಸಿದರೂ ಆಶ್ಚರ್ಯವಿಲ್ಲ. ಗಾಂಧೀಜಿ ಯವರು ಒಬ್ಬ ಅಸಾಮಾಜಿಕ ಚಿಂತನೆಯನ್ನು ಪೋಷಿಸಿದರು ಎಂದು ಹೇಳುವ ಕಾಲ ಬಂದರೂ ಹೆಚ್ಚಿಲ್ಲ.
ಕೆಲವು ವರ್ಷಗಳ ಹಿಂದೆ ಅಪಘಾನಿಸ್ಥಾನದಲ್ಲಿ ತಾಲಿಬಾನ್ ಗಳು ಬುದ್ಧನ ಪ್ರತಿಮೆಯನ್ನು ಭಂಗಗೊಳಿಸಿದರು. ಇದಕ್ಕೂ ಶತಮಾನಗಳ ಹಿಂದೆ ಭಕ್ತಿಯಾರ್ ಖಿಲ್ಜಿ, ನಲಂದ ವಿಶ್ವವಿದ್ಯಾಲಯವನ್ನು ಸುಟ್ಟು ಹಾಕಿದ. ಮುಸ್ಲಿಂ ಆಳ್ವಿಕೆಯಲ್ಲಿ ಹಿಂದೂ ದೇವಸ್ಥಾನಗಳನ್ನು ಕೆಡವಲಾಯಿತು. ಇಂತಹ ಮಾನಸಿಕತೆಯನ್ನು ಇಂದು ಗೀತೆಯನ್ನು ದಹಿಸಬೇಕೆಂದು ಹೇಳುವವರು ಪ್ರದರ್ಶಿಸುತ್ತಿದ್ದಾರೆ, ಆಶ್ಚರ್ಯವೆಂದರೆ ಇವರೆಲ್ಲರೂ ಸಾಹಿತಿಗಳು ಎಂದು ತಮ್ಮನ್ನು ಕರೆಸಿಕೊಳ್ಳಲು ಬಯಸುತ್ತಾರೆ.
ಒಮ್ಮೆ ನೆಹರೂ ರವರು ಲೋಕಸಭೆಯಲ್ಲಿ ಎಸ್.ಪಿ. ಮುಖರ್ಜಿಯವರ ಜನಸಂಘವನ್ನು ಕುರಿತು, I will crush you ಎಂದಾಗ ಶ್ಯಾಮ ಪ್ರಸಾದ ಮುಖರ್ಜಿಯವರು ಅದಕ್ಕೆ ತಿರುಗೇಟು ನೀಡಿ I will crush your crushing mentality ಎಂದು ಗುಡುಗಿದರು. ಈಗ ನೆಹರೂ ಮತ್ತು ಅವರ ಪಾರ್ಟಿ ಯಾವ ಸ್ಥಿತಿಯನ್ನು ಮುಟ್ಟಿದೆ ಎಂಬುದು ಎಲ್ಲರಿಗೂ ಗೊತ್ತು.
ಗೀತೆಯಲ್ಲಿ ತಪ್ಪಿದ್ದರೆ ಅದನ್ನು ತೋರಿಸಿ, ವೈಚಾರಿಕ ಸಂಘರ್ಷಕ್ಕೆ ಇಳಿಯಬೇಕಾದ್ದು ಸಹಜ, ನ್ಯಾಯ ಮತ್ತು ಸಂಸ್ಕೃತಿ. ಸ್ವಾಮಿ ದಯಾನಂದರು ತಮ್ಮ ಅಮೋಘ ಕ್ರಾಂತಿ ಗ್ರಂಥ ಸತ್ಯಾರ್ಥ ಪ್ರಕಾಶದಲ್ಲಿ ಹಿಂದೂಗಳು ಅಚರಿಸುವ ಅನೇಕ ಅಚರಣೆಗಳನ್ನು ಬಹು ತೀರ್ವವಾಗಿ ಖಂಡಿಸಿದ್ದಾರೆ. ಇಸ್ಲಾಂ ಮತ್ತು ಬೈಬಲ್ ನ್ನು ಸಹ ವಿಮರ್ಶಿಸಿದ್ದಾರೆ, ಈ ಪುಸ್ತಕಕ್ಕೆ ಇನ್ನಿಲ್ಲದ ವಿರೋಧ ಬಂದಿದೆ. ಆದರೆ ದಯಾನಂದರು ಎಲ್ಲಿಯೂ ತಮ್ಮ ವಿರೋಧಿಗಳ ಪುಸ್ತಕಗಳನ್ನು ಸುಡಲು ಹೇಳಲಿಲ್ಲ.
ವೈಚಾರಿಕತೆ ಬೇಕು ಅದು ಬೈಗಳ ಭಾಷೆಯಾಗಬಾರದು. ಇಂದು ಮತೀಯ ಗ್ರಂಥಗಳನ್ನು ಸುಡಲು ಮುಂದಾಗಿರುವ ಚಂಪಾ, ಮಾಲಗತ್ತಿ, ಅಗ್ನಿ ಶ್ರೀಧರ್ ಮುಂತಾದವರಿಗೆ ವೈಚಾರಿಕ ಸಹಿಷ್ಣುತೆಯನ್ನು ಬೆಳಸಿಕೊಳ್ಳುವ ಮನೋಭಾವ ಇಲ್ಲದಿರುವುದು ದುರ್ಬಾರ್ಗ್ಯ. ಒಂದು ವೇಳೆ ಇವರು ಗೀತೆ ಮುಂತಾದ ಪುಸ್ತಕವನ್ನು ಸುಟ್ಟರೆ, ಮತೀಯ ದ್ವೇಷವನ್ನು ಕೆರಳಿಸಿದ ಆಪಾದನೆ ಮೇಲೆ ಕಂಬಿ ಎಣಿಸಬೇಕಾಗಿ ಬರುವ ಸಾಧ್ಯತೆ ಇದೆ ಎಂಬುದನ್ನು ಇಲ್ಲಿ ತಿಳಿಸಬಯಸುತ್ತೇನೆ.
ಗಾಂಧೀಜಿಗೆ ಮತ್ತು ಅವರನ್ನು ಹತ್ಯೆ ಮಾಡಿದವರಿಗೆ -ಇಬ್ಬರಿಗೂ ಗೀತೆ ಅತ್ಯಂತ ಪವಿತ್ರ,ಪ್ರೀತಿಪಾತ್ರ !ಎಂಥಾ ವಿಪರ್ಯಾಸ !
ಗಾಂಧೀಜಿಗೆ ಗೀತೆ ಪವಿತ್ರ,ಅದು ಗೊತ್ತಿದೆ,ಅದರೆ ಅವರನ್ನು ಹತ್ಯೆ ಮಾಡಿದವರಿಗೆ ಸಹ ಪವಿತ್ರ . ಯಾರ ಬಗ್ಗೆ ಹೇಳಿದ್ದು ಗೊತ್ತಾಗಲಿಲ್ಲ ತಿಳಿಸಿ