ವಿಷಯದ ವಿವರಗಳಿಗೆ ದಾಟಿರಿ

ಫೆಬ್ರವರಿ 26, 2015

3

ಭಾರತದ ಭವಿಷ್ಯ ಮತ್ತು ನಮ್ಮ ಪಾತ್ರ

‍ನಿಲುಮೆ ಮೂಲಕ

– ಡಾ. ಸಂತೋಷ್ ಕುಮಾರ್ ಪಿ.ಕೆ

ಚಕ್ರವರ್ತಿ ಸೂಲಿಬೆಲೆಇತ್ತೀಚೆಗೆ ಆಳ್ವಾಸ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ಶ್ರೀ.ಚಕ್ರವರ್ತಿ ಸೂಲಿಬೆಲೆಯವರ ಭಾಷಣವನ್ನು ಆಯೋಜಿಸಲಾಗಿತ್ತು. ಇದು ಅವರ ಭಾಷಣವನ್ನು ಬರಹ ರೂಪಕ್ಕೆ ಇಳಿಸುವ ಪ್ರಯತ್ನ ಮಾತ್ರ. ಒಂದು ಚಿಕ್ಕ ಗುಂಪಿಗೆ ಅವರು ನೀಡಿದ ಸ್ಪೂರ್ತಿದಾಯಕ ಮಾತುಗಳು ಉಳಿದವರಿಗೂ ದೊರಕಲಿ ಎಂಬುದು ಈ ಬರಹದ ಆಶಯವಾಗಿದೆ. ಭಾರತದ ಭವಿಷ್ಯದ ಸ್ವರೂಪವೇನು? ಹಾಗೂ ಅದರಲ್ಲಿ ಯುವಕರ ಪಾತ್ರವೇನು ಎಂಬ ಪ್ರಶ್ನೆಗಳು ಇಂದು ನಮ್ಮನ್ನು ಕಾಡಲು ಪ್ರಾರಂಭಿಸಿವೆ. ಇದಕ್ಕೆ ಉತ್ತರ ಹುಡುಕುವ ಮುನ್ನ ಭಾರತದ ಭೂತ ಮತ್ತು ವರ್ತಮಾನವನ್ನು ಅರ್ಥೈಸಿಕೊಳ್ಳಬೇಕಾಗಿದೆ.

ಇಂದು ಭಾರತವನ್ನು ನೋಡುವ ಸಾಮಾನ್ಯವಾದ ಒಂದು ಕ್ರಮವಿದೆ, ಅದೆಂದರೆ ಭಾರತ ಎಂಬುದು ಕೊಳಕಾದ ದೇಶ, ಹಿಂದುಳಿದ ಮತ್ತು ಮುಂದುವರೆಯುತ್ತಿರುವ ದೇಶ, ಆಧುನೀಕತೆಯ ಬೆನ್ನುಹತ್ತಿ ಇತ್ತೀಚೆಗಷ್ಟೆ ಕಣ್ಣು ಬಿಡುತ್ತಿರುವ ನಾಡು, ಭ್ರಷ್ಟಾಚಾರ, ದೌರ್ಜನ್ಯ ಇನ್ನೂ ಮುಂತಾದ ನಕಾರಾತ್ಮಕ ಅಂಶಗಳನ್ನೇ ಮುಂಚೂಣಿಯಲ್ಲಿಟ್ಟುಕೊಂಡು ಸದಾ ಭಾರತವನ್ನು ತೆಗಳುವ ವಿಧಾನವನ್ನು ರೂಢಿಸಿಕೊಂಡಿದ್ದೇವೆ. ಹೀಗೆ ತೆಗಳುವುದಕ್ಕೆ ಶತಮಾನಗಳಷ್ಟು ಹಳೆಯದಾದ ಇತಿಹಾಸವೂ ಇದೆ. ಭಾರತದ ಮೇಲೆ ಎರಡು ರೀತಿಯ ದಾಳಿಗಳು ವಿದೇಶಿಗರಿಂದ ನಡೆದಿವೆ. ಬ್ರಿಟೀಷರ ಆಕ್ರಮಣ ಪ್ರಾರಂಭವಾಗುವ ತನಕ ನಡೆದಿದ್ದೆಲ್ಲವೂ ದೈಹಿಕ ಆಕ್ರಮಣಗಳು, ಅಂದರೆ ಪ್ರದೇಶಗಳನ್ನು, ರಾಜರನ್ನು ಗೆಲ್ಲುವಂತಹ, ಸಂಪತ್ತನ್ನು ಲೂಟಿ ಮಾಡುವ ಚಟುವಟಿಕೆಗಳಲ್ಲಿ ಕೊನೆಯಾಗುತ್ತಿದ್ದವು. ಆದರೆ ಬ್ರಿಟೀಷರಿಂದ ಪ್ರಾರಂಭವಾದ ಭಾರತದ ಮೇಲಿನ ಆಕ್ರಮಣ ಅತ್ಯಂತ ದುರಂತಮಯವಾದುದ್ದಾಗಿದೆ.

ಬ್ರಿಟೀಷರು ಕೇವಲ ರಾಜರನ್ನು ಸೋಲಿಸಿ ಪ್ರದೇಶಗಳನ್ನು ಗೆಲ್ಲುವ ತವಕವನ್ನು ಮಾತ್ರ ಹೊಂದಿರಲಿಲ್ಲ, ಬದಲಿಗೆ ಮೊದಲು ಅವರು ಭಾರತವನ್ನು ಅಧ್ಯಯನ ಮಾಡುವ ಕಾರ್ಯದಿಂದ ಪ್ರಾರಂಭಿಸಿದರು. ಏಕೆಂದರೆ ಭಾರತೀಯರನ್ನು ಆಳಬೇಕಾದರೆ ಅವರನ್ನು ಅವರ ಸಂಪ್ರದಾಯಗಳಿಂದ ದೂರಮಾಡಬೇಕಾಗುತ್ತದೆ, ಹಾಗಾಗಿ ಇಡಿಯ ಹಿಂದೂಸ್ಥಾನವನ್ನು ಬ್ರಿಟನ್ ನನ್ನಾಗಿ ಪರಿವರ್ತಿಸುವ ಕಾರ್ಯದಲ್ಲಿ ಬಹಳ ಉತ್ಸುಕರಾಗಿದ್ದರು. ಭಾರತದ ವಿದ್ಯಾಭ್ಯಾಸಕ್ಕೆ ರೂಪುರೇಷೆ ನೀಡಿದ ಮೆಕಾಲೆ ತನ್ನ ತಂದೆಗೆ ಒಂದು ಪತ್ರ ಬರೆಯುವಾಗ ಭಾರತೀಯರ ಕುರಿತು ಅವನು ಹೇಳುವ ಸಂಗತಿಯನ್ನು ನಾವು ಗಮನಿಸಬೇಕು. ಕಪ್ಪು ವರ್ಣದ ಭಾರತೀಯರನ್ನು ಇಂಗ್ಲೀಷರನ್ನಾಗಿ ಪರಿವರ್ತಿಸುವ ಹಾಗೂ ತಮ್ಮತನದಿಂದ ನಮ್ಮತನಕ್ಕೆ ಬದಲಾಗುವ ಕಾಲ ದೂರವಿಲ್ಲ, ಅದಕ್ಕೆ ಅಗತ್ಯವಿರುವ ಬುನಾದಿಯನ್ನು ಶೈಕ್ಷಣಿಕ ಕ್ಷೇತ್ರದ ಮೂಲಕ ಈಗಾಗಲೆ ಹಾಕಿದ್ದೇನೆ ಎಂದು ಮೆಕಾಲೆ ಬರೆದಿದ್ದ. ಇದರ ಅರ್ಥ, ಅವರು ಭಾರತೀಯರನ್ನು ಅರ್ಥೈಸಿಕೊಂಡ ವಿಧಾನ ಹಾಗೂ ತಪ್ಪುದಾರಿಗೆ ಎಳೆದ ಪರಿಯು ಭಾರತವನ್ನು ದಿಕ್ಕೆಡಿಸುವಂತೆ ಮಾಡಿತು.

ಭಾರತೀಯರನ್ನು ತಮ್ಮ ಸಂಪ್ರದಾಯದಿಂದ ದೂರ ಮಾಡುವುದು ಎಂದರೆ ಏನು? ತಮ್ಮ ಸಂಪ್ರದಾಯ ಸರಿಯಿಲ್ಲ, ತಮ್ಮದು ಕೀಳು ಸಂಸ್ಕೃತಿ ಎಂಬಿತ್ಯಾದಿ ಭಾವನೆಗಳನ್ನು ಬಿತ್ತುವ ಮೂಲಕ ತಮ್ಮ ಸಂಸ್ಕೃತಿಯನ್ನು ಹೀಗಳೆದು ಅವರಿಗೆ ದಾಸ್ಯರಾಗುವ ಮತ್ತು ಅವರದ್ದೇ ಶ್ರೇಷ್ಟ ಎಂದು ಭ್ರಮಿಸುವ ಒಂದು ಕ್ರಿಯೆಯಾಗಿದೆ. ಇದು ಬ್ರಿಟೀಷರ ಸಮಯದಲ್ಲಿ ಹುಟ್ಟಿದಾದರೂ ಸಹ ಅದರ ಎಳೆ ಇಂದಿಗೂ ನಮ್ಮ ಹಲವಾರು ಸಮಾಜ ಹೋರಾಟಗಾರರಲ್ಲಿ ಕಾಣಬಹುದಾಗಿದೆ. ಭಾರತವೆಂದರೆ ಬರಿಯ ತೊಂದರೆಗಳ ದೇಶ ಎಂದು ಭಾಷಣದಲ್ಲಿ ಮತ್ತು ಬರಹದಲ್ಲಿ ಪ್ರಾರಂಭಿಸುವುದೇ ಕೆಲವಾರು ಜನರ ರೂಢಿಯಾಗಿಬಿಟ್ಟಿದೆ. ಅದಕ್ಕೆ ಇಂಬು ನೀಡುವಂತೆ ಹಲವಾರು ಉದಾಹರಣೆಗಳನ್ನು ಅವರ ವ್ಯಾಖ್ಯಾನಗಳಿಗೆ ಒಗ್ಗಿಸುವ ಮೂಲಕ ಸತ್ಯವನ್ನೇ ನುಡಿಯುತ್ತಿರುವಂತೆ ನಟಿಸುತ್ತಾರೆ. ಆದರೆ ಅದುವೇ ಭಾರತದ ನಿಜವಾದ ಚಿತ್ರಣವೇ, ಹಾಗಿದ್ದರೆ ಇಷ್ಟು ಶತಮಾನಗಳ ಕಾಲ ನಮ್ಮ ದೇಶ, ಸಂಸ್ಕೃತಿ ತೊಂದರೆಗಳಿಂದಲೇ ಬಂದಿದ್ದರೆ, ಅದು ಹೇಗೆ ಉಳಿಯುತ್ತಿತ್ತು? ಎಂಬ ಪ್ರಶ್ನೆಗೆ ಅವರು ಉತ್ತರ ನೀಡುವುದಿಲ್ಲ. ಇದು ಇಂದು ಭಾರತದ ಕುರಿತು ಋಣಾತ್ಮಕವಾಗಿ ಮಾತನಾಡುವ ಶೈಲಿಯನ್ನು ಪಾಶ್ಚಾತ್ಯರಿಂದ ಅನಾಮತ್ತಾಗಿ ಕಲಿತುಕೊಂಡಿದ್ದೇವೆ. ಹಾಗಾದರೆ ಭಾರತಕ್ಕೆ ಯಾವ ಸಾಮಥ್ರ್ಯವೂ ಇಲ್ಲವೆ? ಖಂಡಿತ ಇದೆ, ಅದುವೇ ಭಾರತದ ಭವಿಷ್ಯವನ್ನು ನಿರ್ಧರಿಸುವ ಶಕ್ತಿಯಾಗಿದೆ.

ಇಂದು ಜಾಗತಿಕ ಮಟ್ಟದಲ್ಲಿ ಎಲ್ಲಾ ರಾಷ್ಟ್ರಗಳೂ ಅಮೇರಿಕಾವನ್ನು ದೊಡ್ಡಣ್ಣ ಎಂದೇ ಭಾವಿಸುತ್ತವೆ. ಆರ್ಥಿಕವಾಗಿ ಮುಂದುವರೆಯುವ ಮೂಲಕ ಹಾಗೂ ಜಾಗತಿಕ ವಿದ್ಯಮಾನಗಳನ್ನು ತನ್ನ ಸುಪರ್ದಿಯಲ್ಲಿ ಇಟ್ಟುಕೊಳ್ಳುವ ಮೂಲಕ ಎಲ್ಲರಿಗಿಂತ ಬಲಿಷ್ಠ ಎಂಬ ಭಾವನೆಯನ್ನು ಜಗತ್ತಿನಾದ್ಯಂತ ಅದು ಪಸರಿಸಿದೆ. ಆದರೆ, ಅದು ದೊಡ್ಡಣ್ಣವಾಗಬಹುದೇ ಹೊರತು ಎಲ್ಲಾ ರಾಷ್ಟ್ರಗಳಿಗೂ ಗುರುವಾಗುವ ಯಾವ ಸಾಧ್ಯತೆಯೂ ಇಲ್ಲ. ಭಾರತ ಆ ಸ್ಥಾನವನ್ನು ತುಂಬಲು ಸಶಕ್ತವಾಗಿದೆ ಎಂದರೆ ತಪ್ಪಾಗಲಾರದು. ಭಾರತದ ಶಕ್ತಿ ಇರುವುದು ಆಧ್ಯಾತ್ಮದಲ್ಲಿ.

ಇಂದು ಜಗತ್ತಿಗೆ ಬೇಕಿರುವುದು ಆಧ್ಯಾತ್ಮದ ಬಲ. ಯುವಪೀಳಿಗೆ, ಹಲವಾರು ಜನಾಂಗಗಳು ದುಃಖದಿಂದ ಹೊರಬಂದು ಮಾನಸಿಕ ಸ್ಥೈರ್ಯವನ್ನು ಪಡೆಯಬೇಕಾದರೆ ಆಧ್ಯಾತ್ಮವೇ ಅತ್ಯಂತಿಕ. ಇದನ್ನು ಸ್ವಾಮಿ ವಿವೇಕಾನಂದರು ತಮ್ಮ ಜೀವಿತ ಅವಧಿಯಲ್ಲಿ ದೇಶವಿದೇಶಗಳಲ್ಲಿ ಒತ್ತಿ ಹೇಳುತ್ತಿದ್ದರು. ಇದುವರೆಗೆ ಭಾರತದಲ್ಲಿ ಮನುಷ್ಯರ ನಡುವೆ ಶಾಂತಿ ಸಹಕಾರ ಏನಾದರೂ ಗುರುತಿಸಬಹುದೆ ಎಂದಾದರೆ ಅದಕ್ಕೆ ಮೂಲ ಪ್ರೇರಣೆ ಮತ್ತು ಕಾರಣ ಆಧ್ಯಾತ್ಮದ ಸಂಪತ್ತೇ ಆಗಿದೆ. ಆದ್ದರಿಂದ ಪ್ರಧಾನ ಮಂತ್ರಿಯವರು ಯೋಗದಿನವನ್ನು ಆಚರಿಸಬೇಕು ಎಂದು ನಿರ್ಧರಿಸಿದಾಗ ಜಗತ್ತಿನ 170ಕ್ಕೂ ಅಧಿಕ ರಾಷ್ಟ್ರಗಳಿಂದ ಅಭೂತಪೂರ್ವ ಸ್ವಾಗತದೊಂದಿಗೆ ಮನ್ನಣೆ ಮಾಡಿದವು. ಜಗತ್ತಿನ ರಾಷ್ಟ್ರಗಳು ಯೋಗ ದಿನವನ್ನು ಆಚರಿಸಲು ಒಪ್ಪಿಕೊಂಡದ್ದು ಮೋದಿಯವರು ಹೇಳಿದ ಒಂದು ಕಾರಣಕ್ಕೆ ಮಾತ್ರವಲ್ಲ, ಬದಲಿಗೆ ಇಂದು ರಾಷ್ಟ್ರಗಳಿಗೆ ಆಧ್ಯಾತ್ಮದ ಹಸಿವು ಹೆಚ್ಚಾಗುತ್ತಿದೆ, ಅದಕ್ಕೆ ಸರಿಯಾಗಿ ಎಂಬಂತೆ ಪ್ರಧಾನಿಯವರೂ ಸಹ ಸರಿಯಾದ ಸಮಯದಲ್ಲೇ ಅದನ್ನು ಜಗತ್ತಿನ ಮುಂದೆ ಬಿಂಬಿಸುತ್ತಿದ್ದಾರೆ.

ಐತಿಹಾಸಿಕವಾಗಿ ಭಾರತದ ಕೊಡುಗೆ ಏನೇ ಇದ್ದಿರಬಹುದು, ಇಂದಿಗೆ ಅತ್ಯಂತ ಅಗತ್ಯವಿರುವ ಸಂಗತಿ ಮತ್ತು ಭಾರತ ಭರವಸೆಯಿಂದ ನೀಡಬಹುದಾದ ಕೊಡುಗೆ ಎಂದರೆ ಅದು ಆಧ್ಯಾತ್ಮ. ಇವೆಲ್ಲಾ ವಿಷಯಗಳು ಭಾರತವನ್ನು ಹೊಸಕಣ್ಣಿನಿಂದ ನೋಡಲು ಇರುವ ಸಂಗತಿಗಳಾಗಿವೆ. ಭಾರತವನ್ನು ಬೆಳಗುವ ಕಾರ್ಯ ಕೇವಲ ಯಾವುದೋ ಒಬ್ಬ ವ್ಯಕ್ತಿಯಿಂದ ಸಾಧ್ಯವಿಲ್ಲ. ಅದಕ್ಕೆ ನಾವೂ ಸಹ ಕೈಜೋಡಿಸಿದರೆ ಭಾರತಕ್ಕೆ ನಿಜವಾಗಿಯೂ ಒಳ್ಳೆಯ ಭವಿಷ್ಯವಿದೆ. ಯುವಕರೆ, ನಮ್ಮ ಭವಿಷ್ಯದ ಮೇಲೆಯೇ ಭಾರತದ ಭವಿಷ್ಯ ಅವಲಂಬಿತವಾಗಿದೆ. ಸ್ವಚ್ಚ ಭಾರತದಂತಹ ಕಾರ್ಯಕ್ರಮಗಳು ಜರುಗಲು ಆದರೆ ನನ್ನಿಂದ ಗಲೀಜಾಗುವುದಿಲ್ಲ ಎಂಬ ಸಂಕಲ್ಪವನ್ನು ಎಲ್ಲರೂ ಹೊಂದಿದರೆ ಸ್ವಚ್ಚ ಭಾರತದಂತಹ ಕಾರ್ಯಕ್ರಮಗಳ ಅಗತ್ಯವೇ ಬರುವುದಿಲ್ಲ. ಆದ್ದರಿಂದ ನಾವು ಮಾಡುವ ಯಾವ ಕಾರ್ಯಗಳು ದೇಶದ ಘನತೆಯನ್ನು ಹೆಚ್ಚಿಸಬಲ್ಲವು, ಹಾಗೂ ಘನತೆಯನ್ನು ಕುಗ್ಗಿಸಬಲ್ಲವು ಎಂಬುದನ್ನು ಆಲೋಚಿಸಿ ಮುಂದಿನ ಹೆಜ್ಜೆಯನ್ನು ನಾವು ಇಡಬೇಕಾಗಿದೆ.

ಕಳೆದ ಕೆಲವಾರು ತಿಂಗಳಿನಿಂದ ಭಾರತದತ್ತ ಇಡೀ ಜಗತ್ತು ಕಾತುರದಿಂದ ಎದಿರು ನೋಡುತ್ತಿದೆ. ಇದುವರೆಗೂ ಭಾರತದ ಕುರಿತು ಇರದಿದ್ದ ಆಸಕ್ತಿ ತೀರ ಇಷ್ಟರ ಮಟ್ಟಿಗೆ ಹೆಚ್ಚಾಗಲು ಕಾರಣವೇನು? ಎಂಬುದನ್ನು ನಾವು ಆಲೋಚಿಸಬೇಕಾಗಿದೆ. ಅದೇ ಭೂಪಟ, ಅದೇ ಜನರು, ಅಲ್ಪ ಸ್ವಲ್ಪ ಏರು ಪೇರುಗಳಿಂದ ಕೂಡಿದ ಅದೇ ಆರ್ಥಿಕ ವ್ಯವಸ್ಥೆ, ಅದೇ ಹಳೇಯ ಸಾಮಾಜಿ ವ್ಯವಸ್ಥೆ ಇನ್ನೂ ಮುಂತಾವೂ ಕಳೆದ 10 ವರ್ಷಗಳಲ್ಲಿ ಸಂಪೂರ್ಣವಾಗಿಯೇನೂ ಬದಲಾಗಿಲ್ಲ. ಆದರೆ ಕಳೆದ 68 ವರ್ಷಗಳಿಂದ ಜಗತ್ತಿನ ಬೇರೆ ರಾಷ್ಟ್ರಗಳು ಭಾರತವನ್ನು ನೋಡುತ್ತಿದ್ದುದಕ್ಕೂ ಇಂದು ನೋಡುತ್ತಿರುವುದಕ್ಕೂ ಸಕಾರಾತ್ಮಕ ವ್ಯತ್ಯಾಸವಿದೆ. ಇಂತಹ ಬದಲಾವಣೆಗೆ ಬಹುಮುಖ್ಯ ಕಾರಣವೆಂದರೆ, ಇದುವರೆಗೂ ಭಾರತವನ್ನು ಅಂತರಾಷ್ಟ್ರೀಯ ಮಟ್ಟದಲ್ಲಿ ಚಿತ್ರಿಸುತ್ತಿದ್ದ ವಿಧಾನಕ್ಕೂ ಈಗಿನ ಪ್ರಧಾನಿಗಳು ಚಿತ್ರಿಸುವ ವಿಧಾನಕ್ಕೂ ಅಜಗಜಾಂತರ ವ್ಯತ್ಯಾಸವಿದೆ. ಭಾರತದ ದೌರ್ಬಲ್ಯವನ್ನೇ ಪ್ರಧಾನವಾಗಿ ಈ ಹಿಂದೆ ಚಿತ್ರಿಸಿ ಅವು ಭಾರತೀಯರನ್ನು ಮಾನಸಿಕವಾಗಿ ಕುಗ್ಗಿಸಿಬಿಟ್ಟಿದ್ದವು, ಆದರೆ ಈಗ ಭಾರತವನ್ನು ನೋಡುವ ವಿಧಾನವು ಬದಲಾಗಿದೆ. ಅದೇ ಭಾರತ ಆದರೆ ನೋಡುತ್ತಿರುವುದು ಹೊಸ ಕಣ್ಣುಗಳಿಂದ ಮಾತ್ರ. ಆದ್ದರಿಂದ ಭಾರತದ ಭವಿಷ್ಯವನ್ನು ನಿರ್ಧರಿಸುವಲ್ಲಿ ಆಧ್ಯಾತ್ಮ ಒಂದು ವಿಷಯವಾದರೆ, ಭಾರತದ ಶಕ್ತಿಯನ್ನು ಹೊಸರೀತಿಯಲ್ಲಿ ನೋಡುವುದು ಮತ್ತೊಂದು ವಿಷಯವಾಗಿದೆ.ಇವೆರಡೂ ಪೂರಕವಾಗಿ ನಿಂತರೆ ಭವ್ಯಭಾರತದ ನಿರ್ಮಾಣವು ತುಂಬಾ ದೂರ ಉಳಿಯುವುದಿಲ್ಲ.

3 ಟಿಪ್ಪಣಿಗಳು Post a comment
 1. ಫೆಬ್ರ 27 2015

  ಮನುಷ್ಯರನ್ನು ಮೇಲು ಕೀಳುಗಳೆಂದು ವರ್ಗೀಕರಿಸುವ ಪದ್ದತಿಗೆ ಭಾರತವೂ ಹೊರತಾಗಿರಲಿಲ್ಲ. ಆದರೂ ಭಾರತೀಯರಲ್ಲಿರುವ ಬಹುತ್ವದ ಕುರಿತಾದ ಸಹಿಷ್ಣುತಾಭಾವ ಭಾರತೀಯರನ್ನು ಗುರು ಸ್ಥಾನಕ್ಕೆ ಏರಿಸಬಲ್ಲದು

  ಉತ್ತರ
 2. Nagshetty Shetkar
  ಫೆಬ್ರ 27 2015

  “ಕಳೆದ ಕೆಲವಾರು ತಿಂಗಳಿನಿಂದ ಭಾರತದತ್ತ ಇಡೀ ಜಗತ್ತು ಕಾತುರದಿಂದ ಎದಿರು ನೋಡುತ್ತಿದೆ”

  that’s because secularism is under deep threat. religious freedom of minorities is curtailed by the right wing regime.

  ಉತ್ತರ
 3. Pramod
  ಮಾರ್ಚ್ 5 2015

  Very well said one -Nashetty sir,proud to be an Indian!

  ಉತ್ತರ

ನಿಮ್ಮ ಅನಿಸಿಕೆ...

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Note: HTML is allowed. Your email address will never be published.

Subscribe to comments