ವಿಷಯದ ವಿವರಗಳಿಗೆ ದಾಟಿರಿ

ಮಾರ್ಚ್ 3, 2015

35

ನಮ್ಮದು ಜ್ಞಾನ ಮಾರ್ಗ.ನಿಮ್ಮ ಮಾರ್ಗ ಯಾವುದು ಬುದ್ಧಿಜೀವಿಗಳೇ?

‍ರಾಕೇಶ್ ಶೆಟ್ಟಿ ಮೂಲಕ

– ರಾಕೇಶ್ ಶೆಟ್ಟಿ

ಬುದ್ಧಿಜೀವಿ/ಸೆಕ್ಯುಲರ್/ಪ್ರಗತಿಪರರಿಗೆ ನಮಸ್ಕಾರ,

 

ವೈಚಾರಿಕ ಅಸ್ಪೃಷ್ಯತೆಇತ್ತೀಚಿನ ದಿನಗಳಲ್ಲಿ ರಾಜ್ಯದಲ್ಲಿ ನಡೆದಿರುವ,ನಡೆಯುತ್ತಿರುವ ಬೌದ್ಧಿಕ ಫ್ಯಾಸಿಸಂನ ವಿರುದ್ಧ ನೀವೆಲ್ಲರೂ ಜನವರಿ ೩೦ನೇ ತಾರೀಖು ಬೆಂಗಳೂರಿನಲ್ಲಿ ಮೆರವಣಿಗೆ ಮತ್ತು ಬಹಿರಂಗ ಸಭೆಯೊಂದನ್ನು ಮಾಡಿದ್ದೀರಿ.ಆ ಸಭೆಯ ಕರಪತ್ರದ ಕೆಲವು ಸಾಲುಗಳ ಮೂಲಕ ನನ್ನ ಈ ಬಹಿರಂಗ ಪತ್ರವನ್ನು ಪ್ರಾರಂಭಿಸುತಿದ್ದೇನೆ.

“ತಾತ್ವಿಕವಾದ ಭಿನ್ನಾಭಿಪ್ರಾಯಗಳ ಹೊರತಾಗಿಯೂ ಪರಸ್ಪರ ಗೌರವದಿಂದ ನಡೆದುಕೊಳ್ಳುವ ಸಂಸ್ಕೃತಿ ಕರ್ನಾಟಕದಲ್ಲಿತ್ತು. ಚಾರ್ವಾಕರಿಗೆ ಕೂಡ ನಮ್ಮ ಚರ್ಚೆಯ ಚಾವಡಿಯಲ್ಲಿ ಒಂದಿಷ್ಟು ಜಾಗವಿತ್ತು.ಆದರೆ ಈಗ ಇದ್ದಕ್ಕಿದ್ದ ಹಾಗೆ ಸಾಹಿತಿಗಳು, ಚಿಂತಕರು,ಬುದ್ಧಿಜೀವಿಗಳು,ಪತ್ರಕರ್ತರು ಹೋರಾಟಗಾರರಲ್ಲಿ ಒಬ್ಬೊಬ್ಬರನ್ನೇ ಆಯ್ದು ಹಂಗಿಸಿ,ನಿಂದಿಸಿ,ಅಪಹಾಸ್ಯ ಮಾಡಿ, ಸುಳ್ಳು ಆರೋಪಗಳ ಮೂಲಕ ಅವರ ಚಾರಿತ್ರ್ಯ ಹನನ ಮಾಡಲಾಗುತ್ತಿದೆ.ಇದು ಸತ್ಯ,ನ್ಯಾಯ ಮತ್ತು ನಿಜವಾದ ಧರ್ಮದ ಪರ ಮಾತನಾಡುವವರ ನೈತಿಕ ಸ್ಥೈರ್ಯ ಕುಸಿದುಹೋಗುವಂತೆ ಮಾಡುವ ಹುನ್ನಾರ.ಈ ಕುಟಿಲ ಉದ್ದೇಶಕ್ಕಾಗಿ ಮಾಧ್ಯಮಗಳನ್ನು ಕೂಡ ಬಳಸಿಕೊಳ್ಳಲಾಗುತ್ತಿದೆ. ಜನವಿರೋಧಿ ನಿಲುವು ಹೊಂದಿರುವ ಹಿಡಿಯಷ್ಟಿರುವ ವ್ಯಕ್ತಿಗಳು ತಮ್ಮ ಅಭಿಪ್ರಾಯವನ್ನೇ ಸಾರ್ವಜನಿಕ ಅಭಿಪ್ರಾಯವೆಂದು ಬಿಂಬಿಸಲು ಹೊರಟಿದ್ದಾರೆ.ಇದನ್ನೇ ಬಳಸಿಕೊಂಡು ಮಾಧ್ಯಮಗಳು ತಮ್ಮ ತೀರ್ಮಾನಗಳನ್ನು “ಜನಭಿಪ್ರಾಯ”ದ ಹೆಸರಲ್ಲಿ ಸಮರ್ಥಿಸಿಕೊಳ್ಳುವ ಪ್ರಯತ್ನ ಮಾಡುತ್ತಿವೆ…”

ಹೌದೇ? ನಿಜವಾಗಿಯೂ ಕರ್ನಾಟಕದಲ್ಲಿ ನಮ್ಮ ಸೆಕ್ಯುಲರ್ ‘ಆಪ್ತ ಮಿತ್ರ’ರು ಹೇಳುತ್ತಿರುವಂತೆ ಬೌದ್ಧಿಕವಾಗಿ ಉಸಿರು ಕಟ್ಟಿಸುವ ವಾತವರಣ ನಿರ್ಮಾಣವಾಗಿದೆಯೇ? ಅವರ ಆತಂಕ ಸಕಾರಣವೇ? ಹೌದು ಎನ್ನುವುದು ನನ್ನ ಅಭಿಪ್ರಾಯ.ರಾಜ್ಯದಲ್ಲಿ ನಡೆದ “ಬೌದ್ಧಿಕ ಫ್ಯಾಸಿಸಂ”ನ ಘಟನೆಗಳ ಉದಾಹರಣೆಗಳನ್ನು ನಿಮ್ಮ ಮುಂದೆ ಇಡುತ್ತಿದ್ದೇನೆ.

ಮೊದಲನೆಯ ಉದಾಹರಣೆ :ಬೆಲ್ಜಿಯಂನ ಗೆಂಟ್ ವಿವಿಯ ಸಹಭಾಗಿತ್ವದಲ್ಲಿ ಶಿವಮೊಗ್ಗದ ಕುವೆಂಪು ವಿವಿಯಲ್ಲಿ ಪ್ರೊ.ಎಸ್ ಎನ್ ಬಾಲಗಂಗಾಧರ ಅವರ ನೇತೃತ್ವದಲ್ಲಿ ಭಾರತೀಯ ಸಮಾಜ ಮತ್ತು ಸ್ಥಳಿಯ ಸಂಸ್ಕೃತಿಗಳ ಬಗ್ಗೆ ಅಧ್ಯಯನ ನಡೆಸುತ್ತಿದ್ದ “ಸ್ಥಳಿಯ ಸಂಸ್ಕೃತಿಗಳ ಅಧ್ಯಯನ ಕೇಂದ್ರ(CSLC)”ವನ್ನು ಮುಚ್ಚಿಸಲಾಯಿತು.ಕಾರಣ ಆ ಸಂಸ್ಥೆ ಪಟ್ಟಭದ್ರ ಹಿತಾಸಕ್ತಿಗಳಿಗೆ ಮಣಿಯದೇ ತನ್ನ ಸಂಶೋಧನೆಯ ವಿಷಯಗಳನ್ನು ಮಂಡಿಸಿದ್ದು.

ಮೇಲಿನ ಸಾಲುಗಳಲ್ಲಿ ಉಲ್ಲೇಖಿಸಲಾಗಿರುವಂತೆ “ಜನವಿರೋಧಿ ನಿಲುವು ಹೊಂದಿರುವ ಹಿಡಿಯಷ್ಟಿರುವ ವ್ಯಕ್ತಿಗಳು ತಮ್ಮ ಅಭಿಪ್ರಾಯವನ್ನೇ ಸಾರ್ವಜನಿಕ ಅಭಿಪ್ರಾಯವೆಂದು ಬಿಂಬಿಸಿ”,ಅಧಿಕಾರದ ಜೊತೆಗೆ ಅವರಿಗಿರುವ ಸ್ನೇಹವನ್ನು ಬಳಸಿಕೊಂಡು ಈ ಕೆಲಸವನ್ನು (ಪುರೋಹಿತಶಾಹಿಗಳಂತೆ?) ಮಾಡಿ ಮುಗಿಸಿದರು.ಹ್ಮ್,ಅಂದ ಹಾಗೆ ಹಿಡಿಯಷ್ಟಿರುವ ಈ ಜನರು,ತಮ್ಮ ಕುಟಿಲ ಉದ್ದೇಶಕ್ಕಾಗಿ ಮಾಧ್ಯಮಗಳನ್ನು ಕೂಡ ಬಳಸಿಕೊಂಡರು.ಮೊದಲಿಗೆ ಮಾಧ್ಯಮದವರ ಮೇಲೆ ಪ್ರಭಾವ ಬೀರಿ ಸಿ.ಎಸ್.ಎಲ್.ಸಿ ಯವರ ವಾದಕ್ಕೆ ಜಾಗವನ್ನೇ ಕೊಡಲಿಲ್ಲ.ಆದರೂ ಇವರ ಸಿಟ್ಟು ತೀರಲಿಲ್ಲ.ಜನರ ಬಳಿಗೆ ಸಿ.ಎಸ್.ಎಲ್.ಸಿ ಸಂಶೋಧಕರ ವಿಷಯಗಳು ಯಾವುದೇ ರೀತಿಯಲ್ಲೂ ತಲುಪಲೇಬಾರದು ಎಂಬ ದುರುದ್ದೇಶದಿಂದ (ಪ್ರಗತಿಪರ ನೀತಿ?) ಇನ್ನೊಂದು ಪತ್ರಿಕೆಯೊಂದರಲ್ಲಿ ಪ್ರಕಟವಾಗುತಿದ್ದ ಅಂಕಣವನ್ನೂ ಮತ್ತದೇ “ಹಿಡಿಯಷ್ಟು ಜನ” ನಿಲ್ಲಿಸಿದರು!

ಎರಡನೆಯ ಉದಾಹರಣೆ : ತಮ್ಮ ವಿರುದ್ಧ ನಿಲ್ಲುವ ಯಾವುದೇ ಗುಂಪು,ವ್ಯಕ್ತಿಗಳನ್ನು “ಒಬ್ಬೊಬ್ಬರನ್ನೇ ಆಯ್ದು ಹಂಗಿಸಿ,ನಿಂದಿಸಿ,ಅಪಹಾಸ್ಯ ಮಾಡಿ,ಸುಳ್ಳು ಆರೋಪಗಳ ಮೂಲಕ ಅವರ ಚಾರಿತ್ರ್ಯ ಹನನ ಮಾಡಿ,ಅವರು ಸತ್ಯ,ನ್ಯಾಯ ಮತ್ತು ನಿಜವಾದ ಧರ್ಮದ ಪರ ಮಾತನಾಡದಂತೆ ಮಾಡಿ ಅವರ ನೈತಿಕ ಸ್ಥೈರ್ಯ ಕುಸಿದುಹೋಗುವಂತೆ ಮಾಡುವುದು ಫ್ಯಾಸಿಸ್ಟ್ ಶಕ್ತಿಗಳು ಮೊದಲಿನಿಂದ ಅನುಸರಿಸಿಕೊಂಡು ಬಂದ ವಿಧಾನ.ಅದೇ ವಿಧಾನ ಮೊನ್ನೆ ಮೊನ್ನೆಯಷ್ಟೇ ನಮ್ಮ ಕರ್ನಾಟಕದಲ್ಲಿ ನಡೆದು ಹೋಗಿದೆ.ಅವರ ಹುನ್ನಾರಕ್ಕೆ ಬಲಿಯಾಗಿದ್ದು “ನಿಲುಮೆ” ಎಂಬ ಗುಂಪು ಹಾಗೂ ಅದರ ಸಂಸ್ಥಾಪಕ ನಿರ್ವಾಹಕ “ರಾಕೇಶ್ ಶೆಟ್ಟಿ”.ಅದೂ ಕ್ರಿಮಿನಲ್ ಪ್ರಕರಣವನ್ನು ದಾಖಲಿಸುವ ಮಟ್ಟಿಗೆ! ಹೇಗಿದೆ ನೋಡಿ.ಈ ನಾಡಿನ ಕಲೆ,ಸಂಸ್ಕೃತಿಯ ಮೇಲಿನ ಪ್ರೀತಿಗಾಗಿ ವೆಬ್ಸೈಟ್ ಮತ್ತು ಗುಂಪೊಂದಕ್ಕೆ ತಮ್ಮ ಜೀವನದ ಸಮಯ,ಹಣವನ್ನೆಲ್ಲ ಇಟ್ಟು ಕೆಲಸ ಮಾಡಿದ ಯುವಕರಿಗೆ ಕ್ರಿಮಿನಲ್ ಎನಿಸಿಕೊಳ್ಳುವ ಗೌರವ.

ಪ್ರಚಲಿತ ಬೌದ್ಧಿಕ ವಿಚಾರಗಳ ಬೇರುಗಳನ್ನು ತಮ್ಮ ತರ್ಕಬದ್ಧಪ್ರಶ್ನೆಗಳಿಂದ ಈ ಗುಂಪಿನ ಯುವಕರು ನಿಲುಮೆ ವೆಬ್ ತಾಣದಲ್ಲಿ,ಫೇಸ್ಬುಕ್ಕಿನ ಗುಂಪಿನಲ್ಲಿ ಪ್ರಶ್ನಿಸಲಾರಂಭಿಸಿದ್ದನ್ನು ಅರಗಿಸಿಕಂಡು ಅವರನ್ನೆದುರಿಸುವ ಬೌದ್ಧಿಕತೆ ಇರದವರು ಅವರನ್ನು “ವಾಮ ಮಾರ್ಗ”ದ ಮೂಲಕ ಹಣಿಯಲು ಹೊರಟುನಿಂತಿದ್ದಾರೆ.ನಿಲುಮೆಯ ಮೇಲೆ ಕೆಂಡಕಾರಲು ಇನ್ನೂ ಒಂದು ಮುಖ್ಯಕಾರಣವೆಂದರೆ,ಈ ಗುಂಪು “ಹಿಡಿಯಷ್ಟಿರುವ ಜನ”ರಿಗೆ ಸೊಪ್ಪು ಹಾಕದೇ ” CSLC ಸಮಾಜ ವಿಜ್ಞಾನ ಸಂಶೋಧನಾ ಕೇಂದ್ರ”ದವರ ಬೆಂಬಲಕ್ಕೆ ನಿಂತಿದ್ದು ಮತ್ತು ಈಗ ಅವರ ಸಂಶೋಧನಾ ಬರಹಗಳನ್ನು “ನಿಲುಮೆ ಪ್ರಕಾಶನ”ದ ಮೂಲಕ ತರಲು ಹೊರಟಿರುವುದು.ಈಗ ಈ “ಹಿಡಿಯಷ್ಟಿರುವ ಜನ”ರ ಬೇಡಿಕೆಕಿಯೇನೆಂದರೆ “ನಿಲುಮೆ” ಗುಂಪನ್ನು ಮುಚ್ಚಬೇಕು! ತಮ್ಮ ತಾಳಕ್ಕೆ ತಕ್ಕಂತೆ ಕುಣಿಯದವರ ಕಾಲು ಕತ್ತರಿಸಿ ಮೂಲೆ ಸೇರಿಸುವಂತ ಪ್ರಗತಿಪರ ನಿಲುವು!?

“ನಿಲುಮೆ”ಗೆ ಆದ ಅನ್ಯಾಯದ ಬಗ್ಗೆ ಬರೆದಿದ್ದಕ್ಕೆ ಕನ್ನಡಪ್ರಭ ಮತ್ತು ಸುವರ್ಣ ನ್ಯೂಸ್ ಚಾನೆಲ್ಲಿನ ವಿಶ್ವೇಶ್ವರ ಭಟ್ಟರ ಮೇಲೂ ಹರಿಹಾಯುತ್ತಾರೆ ಈ ಹಿಡಿಯಷ್ಟು ಜನ.ಓಹ್! ಅದೇ ಅಲ್ಲವೇ ನಿಮ್ಮ ಕರಪತ್ರದಲ್ಲಿರುವ “ಮಾಧ್ಯಮಗಳನ್ನು ಬಳಸಿಕೊಳ್ಳುವುದು”.ನಿಮ್ಮ ಜೊತೆ ನಿಂತರೆ ಅದು ಕನ್ನಡಪ್ರಭ ಇಲ್ಲದಿದ್ದರೆ ವೈದಿಕಪ್ರಭ.ಅಬ್ಬಾ! ಎಂತ ಅಸಹನೆ ಮಾರ್ರೆ ನಿಮಗೆ? ಈ ಅಸಹನೆಯೇ ಸೆಕ್ಯುಲರಿಸಂನ ಮೂಲ ಮಂತ್ರವೇ? ಹಾಗಿದ್ದ ಮೇಲೆ “Tolerance” ಎಂಬ ಪದವನ್ನು ಬಳಸಿ ಅದರರ್ಥವನ್ನು ಕೆಡಿಸುವುದನ್ನು ನೀವುಗಳು ಬಿಡಬೇಕಲ್ಲವೇ?

ಮೂರನೆಯ ಉದಾಹರಣೆ : “ನಮ್ಮ ವಿವಿಗಳಲ್ಲಿ ಜ್ಞಾನ ಉತ್ಪಾದನೆಯಾಗುತ್ತಿಲ್ಲ.ಕೆಲವು ಜನರನ್ನು ಅವರು ಕೆಲಸ ಮಾಡುತ್ತಾರೆ ಎನ್ನಲಾಗುವ ವಿವಿಗಳಿಗೆ ಹುಡುಕಿಕೊಂಡು ಹೋಗಿ ’ಅವರೆಲ್ಲಿ?’ ಎಂದು ಕೇಳಿದರೆ,’ನಾಮ ಫಲಕ’ ತೋರಿಸಿ ನೋಡಿ ಅಲ್ಲಿ ಎನ್ನುವಷ್ಟು ಪರಿಸ್ಥಿತಿ ಕೆಟ್ಟಿದೆ” ಎನ್ನುವ ಆರೋಪವೊಂದು ನಮ್ಮ ವಿವಿಗಳ ಕಾರ್ಯವಿಧಾನದ ಮೇಲಿದೆ.ಇಂತ ಸಂದರ್ಭದಲ್ಲಿ “ವಿವಿ”ಯೊಂದಕ್ಕೆ ಸುಮಾರು ೬೦ ಲಕ್ಷ ಮೌಲ್ಯದ ಪ್ರಾಜೆಕ್ಟ್ ಒಂದು ಸಿಗುತ್ತದೆ.ಆದರೆ, ಆ ಪ್ರಾಜೆಕ್ಟನ್ನು ಶುರು ಮಾಡಲಿಕ್ಕೆ ಈ “ಹಿಡಿಯಷ್ಟು ಜನ” ಬಿಡುವುದಿಲ್ಲ.ಅವರು ಮತ್ತೆ ತಮ್ಮ ಪ್ರಭಾವ ಬೀರಿ ವಿದ್ಯಾರ್ಥಿಗಳ ಶಿಕ್ಷಣಕ್ಕೆ ಅಡ್ಡಗಾಲಾಕುತ್ತಾರೆ.,ಈ ರಾಜ್ಯದಲ್ಲಿ ಇರುವುದು ಒಂದೇ ವಿವಿಯೇನು ಅಲ್ಲವಲ್ಲ ಎಂದು,CSLC ತಂಡದವರು ರಾಜ್ಯದ ಬೇರೆ ಮೂರು ವಿವಿಗಳಿಗೆ ಪ್ರಸ್ತಾವನೆ ನೀಡುತ್ತಾರೆ.ಒಂದು ವಿವಿಯಲ್ಲಿ ಇನ್ನೇನು MoUಗೆ ಸಹಿ ಬೀಳಬೇಕು ಅಷ್ಟರಲ್ಲಿ “ಹಿಡಿಯಷ್ಟು ಜನ”ರ ಆಗಮನವಾಗುತ್ತದೆ.ಮುಂದೆ ಆ ಪ್ರಸ್ತಾವನೆಯೇ ನಿಂತು ಹೋಯಿತು ಎನ್ನುವುದನ್ನು ನಾನೇನು ಬಿಡಿಸಿ ಹೇಳಬೇಕಿಲ್ಲ ಎಂದುಕೊಳ್ಳುತ್ತೇನೆ.ಇನ್ನುಳಿದ ಎರಡು ವಿವಿಗಳ ಕತೆಯೂ ಅದೇ.ಮೊದಲಿಗೆ ಅವರು ಪ್ರಾಜೆಕ್ಟ್ ತೆಗೆದುಕೊಳ್ಳಲು ಒಪ್ಪುತ್ತಾರೆ,ಅವರು ಒಪ್ಪಿದ ಸುದ್ದಿ ಈ “ಹಿಡಿಯಷ್ಟು ಜನ”ರಿಗೆ ತಲುಪಿದ ಕೂಡಲೇ ಅವರು ಅದಕ್ಕೆ ಅಡ್ಡಗಾಲಾಕಿ ಮತ್ತೊಮ್ಮೆ ವಿದ್ಯಾರ್ಥಿಗಳನ್ನು ಜ್ಞಾನದಿಂದ ವಂಚಿತರನ್ನಾಗಿಸುತ್ತಾರೆ!

ಇವು ನಮ್ಮ ಸೆಕ್ಯುಲರ್ “ಆಪ್ತ ಮಿತ್ರ”ರ ಆತಂಕ ಸಕಾರಣವೆನ್ನಲು ಕೆಲವು ಉದಾಹರಣೆಗಳು.ಅಂದ ಹಾಗೆ ನನ್ನ ಉದಾಹರಣೆಯಲ್ಲಿ ಬರುವ “ಹಿಡಿಯಷ್ಟು ಜನ” ಯಾರು? ಅವರು “ಬಲಪಂಥೀಯರು,ಕೋಮುವಾದಿಗಳು”ಇತ್ಯಾದಿಗಳೆಂದು ಕರೆಸಿಕೊಳ್ಳುವ ಗುಂಪಿನವರಲ್ಲ.ಹಾಗಿದ್ದ ಮೇಲೆ ಉಳಿದ ಗುಂಪು “ಎಡಪಂಥೀಯರು/ಸೆಕ್ಯುಲರ್/ಪ್ರಗತಿಪರರು/ಬುದ್ಧಿಜೀವಿ” ಗಳದ್ದಲ್ಲವೇ?

‘ವಿಶ್ವವಿದ್ಯಾಲಯಗಳಲ್ಲಿನ ಯಜಮಾನಿಕೆ ಸಂಸ್ಕೃತಿ,ಆಧಾರ ಬದ್ಧತೆಯ ಹಾಗೂ ಜನತಾಂತ್ರಿಕ ಮೌಲ್ಯಗಳ ಕೊರತೆಯಿಂದಾಗಿ ಅಲ್ಲಿ ನಡೆಯುವ ಸಂಶೋಧನೆಗಳ ಗುಣಮಟ್ಟದಲ್ಲಿ ಕುಸಿತವನ್ನು ಕಾಣುತ್ತಿದ್ದೇವೆ’ ಎಂದು ಕುವೆಂಪು ವಿ.ವಿ. ಇಂಗ್ಲಿಷ್ ಪ್ರಾಧ್ಯಾಪಕ ಹಾಗೂ ವಿಮರ್ಶಕ ಪ್ರೊ.ರಾಜೇಂದ್ರ ಚೆನ್ನಿ ಕಾಲೇಜಿನ ವಿಚಾರ ಸಂಕಿರಣವೊಂದರಲ್ಲಿ ಅಭಿಪ್ರಾಯಪಟ್ಟಿದ್ದರು (ಪ್ರ.ವಾ ವರದಿ). ಬಹುಷಃ ಪ್ರೊ.ಚೆನ್ನಿಯವರ ಭಾಷಣದ ಆತಂಕಕ್ಕೆ ಪೂರಕವಾಗಿರುವ ಮೇಲಿನ ಉದಾಹರಣೆಗಳ ಬಗ್ಗೆ ಅವರಿಗೆ ಮಾಹಿತಿ ಇದೆಯೋ ಇಲ್ಲವೋ ತಿಳಿದಿಲ್ಲ.ಬುದ್ಧಿಜೀವಿಯಾಗಿರುವ ಅವರು,ತಮ್ಮ ಭಾಷಣದ ಆಶಯಕ್ಕೆ ಬದ್ಧರಾಗುವುದಾದರೆ,ಅವರದೇ ವಿವಿಯಲ್ಲಿ ನಡೆದಿರುವ ಈ ’ಬೌದ್ಧಿಕ ಫ್ಯಾಸಿಸಂ’ನ ವಿರುದ್ಧ ದನಿಯೆತ್ತಬೇಕು ಎನ್ನುವುದು ಈ ಲೇಖನ ಓದಿದ ಜನಸಾಮಾನ್ಯರಿಗೆ ಬಹುಷಃ ಅನ್ನಿಸಬಹುದು.ಚೆನ್ನಿಯವರು ಅದಕ್ಕೆ ಪೂರಕವಾಗಿ ನಡೆದುಕೊಳ್ಳುತ್ತಾರೆ ಎನ್ನುವ ಆಶಯ ನನ್ನದು.ಇಲ್ಲವಾದರೆ ಜನರಿಗೆ ರಾಜಕೀಯದ ಮಂದಿಗಳಿಗೂ ಬುದ್ಧಿಜೀವಿಗಳಿಗೂ ಅಂತ ವ್ಯತ್ಯಾಸವೇನಿಲ್ಲ ಅನ್ನಿಸಲೂಬಹುದು.ಈ ಜನ ಮೈಕಿನ ಮುಂದೆ ನಿಂತು ಮಾತನಾಡುವುದಕ್ಕೂ,ನಡೆದುಕೊಳ್ಳುವುದಕ್ಕೂ ಅಜಗಜಾಂತರ ಎಂದು ಜನಸಾಮಾನ್ಯರಿಗೆ ಅನಿಸುವುದು ಸಹಜವೇ.

‘ಆವರಣ ಎಂಬ ವಿ-ಕೃತಿ’ ಪುಸ್ತಕದಲ್ಲಿ ಕೆ.ಮರುಳಸಿದ್ದಪ್ಪನವರು ಹೀಗೆ ಬರೆಯುತ್ತಾರೆ “ಸುಳ್ಳಿಗೆ ಗಂಟಲು ದೊಡ್ಡದಾಗಿದ್ದರೆ,ಸತ್ಯವು ಹಿಂಜರಿಕೆಯಿಂದ,ಮೆಲುದನಿಯಲ್ಲಿ,ಅಭಿವ್ಯಕ್ತಿ ಪಡೆಯುತ್ತದೆ…” (ಪುಟ ೨).ಅವರ ಮಾತು ನಿಜವಲ್ಲವೇ? ಒಂದು ಕಡೆ ನಿಂತು ಅನ್ಯಾಯವಾಗುತ್ತಿದೆ ಎಂದು ಜೋರಾಗಿ ಸದ್ದುಮಾಡಿ, ಧರಣಿ, ಪ್ರತಿಭಟನೆ,ಬಹಿರಂಗ ಸಭೆ ಮಾಡಿ ಅಲವತ್ತುಕೊಳ್ಳುವುದು.ಇನ್ನೊಂದು ಕಡೆ ತಾವುಗಳೇ ಆ ಅನ್ಯಾಯ ಮಾಡುವುದು. ಸೆಕ್ಯುಲರಿಸಂ ಅಂದರೇ ಇದೇ ಏನು?

ಬಾಯಿ ತೆರೆದರೆ “ವೈಚಾರಿಕತೆ,ವೈಜ್ಞಾನಿಕತೆ,ಅಭಿವ್ಯಕ್ತಿ ಸ್ವಾತಂತ್ರ್ಯ,ಪ್ರಜಾಪ್ರಭುತ್ವ,ಮೌಲ್ಯ,ಇತ್ಯಾದಿಗಳು” ಎಂದು ಭಾಷಣ ಬಿಗಿಯುತ್ತೀರಲ್ಲಾ, ನಿಮ್ಮ ಐಡಿಯಾಲಜಿಗಳನ್ನು ಪ್ರಶ್ನಿಸುವವರ ಬಾಯಿ ಮುಚ್ಛಿಸುವುದೇ ನಿಮ್ಮ ಅಭಿವ್ಯಕ್ತಿ ಸ್ವಾತಂತ್ರ್ಯ, ಪ್ರಜಾಪ್ರಭುತ್ವ,ಮೌಲ್ಯ ಇತ್ಯಾದಿಗಳೇ ಬುದ್ಧಿಜೀವಿಗಳೇ?

“ನಿಲುಮೆ” ಫೇಸ್ಬುಕ್ ಗುಂಪಿನ ಮೇಲೆ ಮುಗಿಬಿದ್ದಿರುವ ಸೆಕ್ಯುಲರ್ ಗ್ಯಾಂಗ್,ಸಾರ್ವಜನಿಕ ತಾಣಗಳಲ್ಲಿ ‘ಅಶ್ಲೀಲ ಪದ ಪ್ರಯೋಗ”ವನ್ನು ಪ್ರಶ್ನಿಸುತ್ತಿದೆ.ಆದರೆ,ಇಂತ ಪದಪ್ರಯೋಗಗಳನ್ನು ಟ್ಯಾಬೋಲಾಯ್ಡ್ ಪತ್ರಿಕೆಗಳ ಮೂಲಕ,ಭಾಷಣ,ಬರಹಗಳ ಮೂಲಕ ಸಾರ್ವಜನಿಕವಾಗಿ ಜಾರಿಗೆ ತಂದವರು ಯಾರು ಎಂಬುದನ್ನು ನಿಮ್ಮನ್ನು ನೀವೆ ಪ್ರಶ್ನಿಸಿಕೊಳ್ಳಿ ಬುದ್ಧಿಜೀವಿಗಳೆ.ಆತ್ಮಸಾಕ್ಷಿಯಿರುವ ಜನರಿಗೆ ತಟ್ಟನೇ ಉತ್ತರ ದೊರಕೀತು.ಸಾರ್ವಜನಿಕವಾಗಿ “ಚಡ್ಡಿ,ಷಂಡ,ದೇಶಭಕ್ತ ಸೂ ಮಕ್ಕಳು,… ” ಇತ್ಯಾದಿಗಳನ್ನು ಬಳಸುವಾಗ ನಿಮ್ಮ ಸಾಮಾಜಿಕ ಜವಬ್ದಾರಿ ಎಲ್ಲಿ ಅಡಗಿತ್ತು? ನಿಮ್ಮ ಸಾರ್ವನಿಕ ಚರ್ಚೆ,ರೀತಿ-ನೀತಿಗಳನ್ನು ನೋಡಿಕೊಂಡು ಬೆಳೆದಿರುವ ಯುವವರ್ಗವೊಂದು ಸಾರ್ವಜನಿಕ ಚರ್ಚೆಯಲ್ಲಿ ನಿಮ್ಮದೇ ಭಾಷೆಯನ್ನು ಬಳಸಿದಾಗ ಕಸಿವಿಸಿ ಮಾಡಿಕೊಳ್ಳುವ ನೈತಿಕತೆಯನ್ನಾದರೂ ನೀವು ಉಳಿಸಿಕೊಂಡಿದ್ದೀರಾ?

ಅಷ್ಟಕ್ಕೂ ನೀವುಗಳೆಂದದಾರೂ ವಸ್ತುನಿಷ್ಟ “ಚರ್ಚೆ”ಯಲ್ಲಿ ತೊಡಗಿಕೊಂಡಿದ್ದು ಉಂಟೇ? ನಿಮಗೆ ವಿರುದ್ಧವಾದ ಎಲ್ಲರೂ ನಿಮಗೆ “ಸಂಘ ಪರಿವಾರ”ದವರಂತೆಯೇ ಕಾಣುತ್ತಾರೆ.ವಿಷಯದ ಬಗ್ಗೆ ಚರ್ಚೆಯನ್ನು ಬಿಟ್ಟು ಸಂಘ ಪರಿವಾರದೊಂದಿಗೆ ಆ ವ್ಯಕ್ತಿಗೆ ಇರುವ ಸಂಬಂಧದ ಬಗ್ಗೆ ಸಂಶೋಧನೆ ಮಾಡಿ,ಅದನ್ನೇ ವಾದವೇನೋ ಎಂಬಂತೆ ಬಳಸಿಕೊಳ್ಳುತ್ತೀರಿ.ಅಷ್ಟಕ್ಕೂ ಒಬ್ಬ ವ್ಯಕ್ತಿ ಸಂಘ ಪರಿವಾರದವನೋ ಅಥವಾ ಅಲ್ಲವೋ ಎನ್ನುವುದು ಒಂದು ವಿಷಯದ ಚರ್ಚೆಗೆ ಹೇಗೆ ಮಾನದಂಡವಾಗುತ್ತದೆ? ಒಂದು ವೇಳೆ ಸಂಘ ಪರಿವಾರದವನೇ ಆಗಿದ್ದರೂ ಅವನು ಹೇಳುವ ವಿಷಯಗಳು ಪ್ರಾಮುಖ್ಯತೆಯನ್ನು ಕಳೆದುಕೊಳ್ಳುತ್ತವೆಯೇ? ಇದ್ಯಾವ ಸೀಮೆಯ ಬೌದ್ಧಿಕತೆ/ವೈಚಾರಿಕತೆ? ನೀವುಗಳು ಸದಾಕಾಲ ಹೀಗೆ ಸಂಘ ಪರಿವಾರದ ಜಪಮಾಡಿದರೆ,”ನಿಮ್ಮ ಚಿಂತನೆಯ ಅಸ್ತಿತ್ವವಿರುವುದೇ ಸಂಘ ಪರಿವಾರ ವಿರೋಧಿ ಧೋರಣೆಯಲ್ಲಿ” ಎಂದು ಜನರಿಗೆ ಅನ್ನಿಸುವುದಿಲ್ಲವೇ?

ಬಹುಷಃ ಈ ಪರಿಯ ನಕರಾತ್ಮಕ ಧೋರಣೆ ಕೇವಲ ಭಾರತದ ವೈಚಾರಿಕ ವಲಯದಲ್ಲಿಯೇ ಹೆಚ್ಚು.ಪಾಶ್ಚಿಮಾತ್ಯ ವೈಚಾರಿಕ ಜಗತ್ತು ಈ ರೀತಿ ವರ್ತಿಸುವುದಿಲ್ಲ.ಯಹೂದಿ/ಕ್ರಿಶ್ಚಿಯನ್ ಇತ್ಯಾದಿ ರಿಲಿಜನ್ ಗಳೊಂದಿಗೆ ಗುರುತಿಸಿಕೊಂಡ ಸಂಘಟನೆಗಳು ಆಯೋಜಿಸುವ ಕಾರ್ಯಕ್ರಮದಲ್ಲೂ ಅಲ್ಲಿನ ಬುದ್ಧಿಜೀವಿಗಳು,ವಿಜ್ಞಾನಿಗಳೂ ಭಾಗವಹಿಸುತ್ತಾರೆ.ಹಾಗೆ ಭಾಗವಹಿಸುವವರೆಲ್ಲರೂ ಆಯೋಜಕರ ನಿಲುವನ್ನು ಸಂಪೂರ್ಣ ಒಪ್ಪುವವರೇ ಏನೂ ಆಗಿರುವುದಿಲ್ಲ.ಆದರೆ, ಅಲ್ಯಾರು ನಿಮ್ಮ ಹಾಗೇ ಕಾರ್ಯಕ್ರಮಗಳಲ್ಲಿ ಭಾಗವಹಿಸಿದವರನ್ನು ’ಬ್ರಾಂಡ್’ ಮಾಡಿ ’ವೈಚಾರಿಕ ಅಸ್ಪೃಶ್ಯತೆ’ ಪ್ರದರ್ಶಿಸುವುದಿಲ್ಲ.ಅಷ್ಟೇ ಏಕೆ ಮುಸ್ಲಿಂ ಬುದ್ಧಿಜೀವಿಗಳ ಜಗತ್ತಿನಲ್ಲೂ ನಮ್ಮಂತೆ ನಡೆಯುವುದಿಲ್ಲ.ಆದರೆ ನೀವುಗಳು ಮಾತ್ರ ಈ ರೀತಿ ವರ್ತಿಸುವುದೇಕೆ? ಒಂದು ಕಡೇ ಸಾಮಾಜಿಕ ಅಸ್ಪೃಷ್ಯತೆ,ಬಹಿಷ್ಕಾರಗಳ ಬಗ್ಗೆ ಮಾತನಾಡುವ ನೀವುಗಳೇ,ನಿಮಗಾಗದ ವಿಚಾರ ಮಂಡಿಸುವವರನ್ನು ವೈಚಾರಿಕ ಅಸ್ಪೃಶ್ಯರಂತೆ ನೋಡುತ್ತೀರಿ.ಇನ್ನು ಆನ್ಲೈನ್ ತಾಣಗಳಲ್ಲಿ ಪ್ರಶ್ನೆಗಳನ್ನು ಎದುರಿಸಲಾಗದವರು ’ಬ್ಲಾಕ್’ ಮಾಡುವ ಮೂಲಕ ಹೈ-ಟೆಕ್ ಬಹಿಷ್ಕಾರವನ್ನು ಹಾಕುತ್ತೀರಿ.ನೆನಪಿಡಿ.ಚರ್ಚೆಯೊಂದೇ ಸ್ವಸ್ಥ ಸಮಾಜದಲ್ಲಿ ಭಿನ್ನಾಭಿಪ್ರಾಯಗಳನ್ನು ಬಗೆಹರಿಸಿಕೊಂಡು ಸೌಹಾರ್ದಯುತವಾಗಿ ಬದುಕಲಿಕ್ಕಿರುವ ದಾರಿ.ಇನ್ನಾದರೂ ಇವೆಲ್ಲವನ್ನು ಬಿಟ್ಟು ಬೌದ್ಧಿಕ ಚರ್ಚೆಗೆ ಬನ್ನಿ ಬುದ್ಧಿಜೀವಿಗಳೇ.

ಬೌದ್ಧಿಕ ಚರ್ಚೆಗೆ ಬನ್ನಿ ಬುದ್ಧಿಜೀವಿಗಳೇ

“I do not agree with what you have to say, but I’ll defend to the death your right to say it.” ಎನ್ನುತ್ತಾನೆ ಫ್ರೆಂಚ್ ಫಿಲಾಸಫರ್ ವೊಲ್ಟೈರ್.ಆದರೆ ಇವತ್ತು ಕರ್ನಾಟಕದಲ್ಲಿ ಅಂತ ಸ್ಥಿತಿ ಇದ್ದಂತೆ ಕಾಣಿಸುತ್ತಿಲ್ಲ.

ಪ್ರಖ್ಯಾತ ಫಿಲಾಸಫರ್ ಸರ್.ಕಾರ್ಲ್ ಪೊಪ್ಪರ್ ಹೀಗೆ ಹೇಳುತ್ತಾರೆ “ಭಿನ್ನ ನಂಬಿಕೆಗಳ (ರಿಲಿಜನ್ ಆಧಾರಿತ,ಸಾಮಾಜಿಕ,ಸಾಂಸ್ಕೃತಿಕ,ವೈಚಾರಿಕ..ಇತ್ಯಾದಿ) ಜನರು ಒಂದು ಸಮಾಜದಲ್ಲಿ ಸೌಹಾರ್ದಯುತವಾಗಿ ಬದುಕಲಿಕ್ಕೆ ಅವರಿಗಿರುವುದು ಎರಡೇ ದಾರಿಗಳು.ಒಂದು : ಅವರು ಒಬ್ಬರನ್ನೊಬ್ಬರು ಕೊಂದುಕೊಂಡು,ಒಂದೇ ನಂಬಿಕೆಯವರು ಮಾತ್ರ ಉಳಿದುಕೊಳ್ಳುವಂತೆ ನೋಡಿಕೊಳ್ಳುವುದು; ಎರಡು – ಪರಸ್ಪರ ಕುಳಿತು,ಚರ್ಚಿಸಿ ಪರಿಹಾರ ಮಾರ್ಗವನ್ನು ಕಂಡುಕೊಳ್ಳುವುದು”.ಹಾಗಿದ್ದರೆ ನೀವುಗಳು ಬಯಸುವ ಮಾರ್ಗ ಯಾವುದು ಬುದ್ಧಿಜೀವಿಗಳೇ? ಮೊದಲನೆಯ ’ವಿದ್ವಂಸಕ ಮಾರ್ಗ’ವನ್ನೇ ಅಥವಾ ಎರಡನೇ ’ರಚನಾತ್ಮಕ ಮಾರ್ಗ’ವನ್ನೇ? ನಿಮ್ಮ ಉತ್ತರ ರಚನಾತ್ಮಕ ಎನ್ನುವುದಾದರೇ ಮೇಲೆ ನೀಡಲಾಗಿರುವ ಉದಾಹರಣೆಗಳು “ವಿದ್ವಂಸಕ ಮಾರ್ಗ”ದ್ದಾಗಿವೆ.ಅದನ್ನು ಬದಲಿಸಿಕೊಳ್ಳಬೇಕಾದ ಅಗತ್ಯವಿದೆ.ಇತ್ತೀಚೆಗೆ ನಿಮ್ಮ ಬ್ಯಾನರ್ರುಗಳಲ್ಲಿ ಸ್ವಾಮಿ ವಿವೇಕಾನಂದರು ಕಾಣಿಸುತಿದ್ದಾರೆ.ನಿಮ್ಮಲ್ಲಿ ಹಲವರಿಗೆ ಅವರ ಮೇಲೆ ಪ್ರೀತಿ ಉಕ್ಕಿದೆ.ವಿವೇಕಾನಂದರು ಸದಾಕಾಲ ಬೋಧಿಸಿದ್ದು ಮತ್ತು ಬಯಸಿದ್ದು “ರಚನಾತ್ಮಕ ಸಮಾಜ”(Constructive Society) ವನ್ನೇ ಹೊರತು ವಿದ್ವಂಸಕ ಹಾದಿಯನ್ನಲ್ಲ.ನಿಮ್ಮ ಹಾದಿ ರಚನಾತ್ಮಕವಾಗಿಲ್ಲವಾದರೆ ವಿವೇಕಾನಂದರನ್ನು ಬ್ಯಾನರಿನಲ್ಲಿ ಹಿಡಿದಡಬಹುದೇ ಹೊರತು ಭಾವನೆಗಳಿಂದಲ್ಲ.ಇನ್ನು ನೀವು ಯಾವ “ಬಸವ,ಬುದ್ಧ,ಗಾಂಧಿ”ಯವರನ್ನು ಗುತ್ತಿಗೆ ಪಡೆದಂತೆ ವರ್ತಿಸುತ್ತೀರಲ್ಲಾ ಖುದ್ದು ಅವರು ಎಂದೆಂದಿಗೂ “ಶಾಂತಿ ಹಾಗೂ ಜ್ಞಾನ” ಮಾರ್ಗದಲ್ಲೇ ಬದುಕಿದವರು ಮತ್ತು ಅದನ್ನೇ ಬೋಧಿಸಿದವರು.ಹಾಗಿದ್ದ ಮೇಲೆ ನಿಮ್ಮ ನಿಜವಾದ ಸ್ಪೂರ್ತಿ ಯಾರು? ಜನರಿಗೆ “ಮಾವೋ,ಮುಸಲೋನಿ.ಸ್ಟಾಲಿನ್” ಇತ್ಯಾದಿಗಳಿರಬಹುದು ಎನಿಸಿದರೇ ಆಶ್ಚರ್ಯವೇನಿಲ್ಲ.

ಬೌದ್ಧಿಕ ಚರ್ಚೆಯೊಂದು ನಡೆಯಬೇಕಾದ ಬಗೆ ಹೇಗೆ?

ಬೌದ್ಧಿಕ ಚರ್ಚೆಯೊಂದು ನಡೆಯುವುದಕ್ಕೂ ಮೊದಲು,ಚರ್ಚೆಗೆ ಪೂರಕವಾದ ವಾತವರಣವೂ ಇರಬೇಕಾಗುತ್ತದೆ ಮತ್ತು ಮುಖ್ಯವಾಗಿ ಚರ್ಚೆಯ ಮನಸ್ಥಿತಿ ಇರಬೇಕಾಗುತ್ತದೆ.ಎರಡು ಬದಿಯವರು ಚರ್ಚೆಯ ಮೂಲಕ ಭಿನ್ನಾಭಿಪ್ರಾಯಗಳನ್ನು ಬಗೆಹರಿಸಿಕೊಳ್ಳುವ ಮನಸ್ಸು ಮಾಡಬೇಕಾಗುತ್ತದೆ.ಹಾಗೇ ಮನಸ್ಸು ಮಾಡಿದಾಗಲಷ್ಟೇ ಚರ್ಚೆಯೊಂದು ಸಾಧ್ಯ.ಇನ್ನು ಬೌದ್ಧಿಕ/ವೈಚಾರಿಕ ಚರ್ಚೆಯೊಂದು ಹೇಗೆ ನಡೆಯಬೇಕು ಎನ್ನುವುದರ ಬಗ್ಗೆ ‘Pragma-dialectical’ ಎನ್ನುವ ಥಿಯರಿಯೊಂದನ್ನು ಬೆಳೆಸಿದ ‘ವಾನ್ ಎಮೆರೆನ್’ ಮತ್ತಿತ್ತರು ಚರ್ಚೆಯ ನಿಯಮಗಳನ್ನು “Ten Commandments”ಎನ್ನುತ್ತಾರೆ.ಅವುಗಳನ್ನು ಹೀಗೆ ವಿವರಿಸಬಹುದು(ಕನ್ನಡಾನುವಾದ : ಪ್ರೊ.ಷಣ್ಮುಖ):

ನಿಯಮ (1): ನಿಲುವುಗಳ ಬಗ್ಗೆ ಮತ್ತು ನಿಲುವಿನ ಹಿಂದಿನ ಕಾರಣಗಳ ಬಗ್ಗೆ ಅನುಮಾನ ಪಡಲಿಕ್ಕೆ ಎರಡೂ ಬದಿಯವರು ಮುಕ್ತವಾಗಿರಬೇಕು. (Parties may not prevent each other from advancing standpoints or from casting doubts on standpoints.)

ನಿಯಮ (2): ವಿಷಯದ ಬಗ್ಗೆ ತಮ್ಮ “ನಿಲುವು” ಮುಂದಿಡುವ ವ್ಯಕ್ತಿ,ಎದುರಾಳಿ ಬಯಸಿದರೆ ಅದನ್ನು ಸಮರ್ಥಿಸಿಕೊಳ್ಳಲು ಶಕ್ತನಾಗಿರಬೇಕು.(A party that advances a standpoint is obliged to defend it if asked by other party to do so.)

ನಿಯಮ (3):ಎದುರಾಳಿಯ ನಿಲುವೊಂದನ್ನು ಅಲ್ಲಗಳೆಯುವಾಗ ಆ ನಿಲುವಿಗೇ ಪೂರಕವಾಗಿರಬಹುದಾದ ಇನ್ನೊಂದು ನಿಲುವಿನ ಬಗ್ಗೆಯೂ ಪ್ರಶ್ನೆಯೆತ್ತಬೇಕು.(A party’s attack on a standpoint must relate to the standpoint that has indeed been advanced by the other party.)

ನಿಯಮ (4): ತನ್ನ ನಿಲುವುಗಳನ್ನು ಸಮರ್ಥಿಸಿಕೊಳ್ಳಲು ಬಯಸುವವರು ಅದನ್ನು ತರ್ಕಬದ್ಧವಾಗಿಯೇ ಮಾಡಬೇಕು.(A party may defend a standpoint only by advancing argumentation relating to that standpoint.)

ನಿಯಮ (5): ಎದುರಾಳಿಯಿಂದ  ಪ್ರಮೇಯವೊಂದು ವಿವರಿಸಲ್ಪಡದೆ ಬಿಡಲಾಗಿದೆ ಎನ್ನುವ ಕಾರಣಕ್ಕೆ ತನ್ನ ಪ್ರಮೇಯ ಅರ್ಥವು ಅಂತರ್ಗತವಾಗಿದೆಯೆಂದು ವಿವರಿಸದೆ ಬಿಟ್ಟಿರುವುದನ್ನು ಅಥವಾ ತಪ್ಪಾಗಿ ವಾದಮಂಡಿಸಿರುವುದನ್ನು ನಿರಾಕರಿಸುವಂತಿಲ್ಲ.(A party may not disown a premise that has been left implicit by that party or falsely present something s a premise that has been left unexpressed by the other party.)

ನಿಯಮ (6) : ಒಂದು ಪ್ರಮೇಯ/ವಾದವನ್ನು  ಸ್ವೀಕೃತ ನಿಲುವೆಂದು ತಪ್ಪಾಗಿ ಮಂಡಿಸುವುದಾಗಲಿ ಅಥವಾ ಒಂದು ಸ್ವೀಕೃತವೆಂದು ಒಪ್ಪಿರುವ ಪ್ರಮೇಯ/ವಾದವನ್ನು  ಮಂಡಿಸುವುದಕ್ಕೆ ನಿರಾಕರಿಸುವುದಾಗಲೀ ಮಾಡುವಂತಿಲ್ಲ.(A party may not falsely present a premise as an accepted starting point nor deny a premise representing an accepted starting point.)

ನಿಯಮ (7) : ಒಂದು ನಿಲುವಿನ ಸಮರ್ಥನೆಯು ಸೂಕ್ತವಾದ ಚರ್ಚಾ ವಿಧಾನವನ್ನು ಸರಿಯಾಗಿ ಅನ್ವಯಿಸಿದ ಮಾದರಿಯನ್ನು ಒಳಗೊಳ್ಳದಿದ್ದ ಪಕ್ಷದಲ್ಲಿ ತನ್ನ ನಿಲುವು ತೀರ್ಮಾನಕಾರಕವಾಗಿ ಸಮರ್ಥಿಸಲಾಗಿದೆ ಎಂದು ಪರಿಗಣಿಸುವಂತಿಲ್ಲ.(A party may not regard a standpoint as conclusively defend if the defense doesn’t takes place by means of an appropriate argumentation scheme that is correctly applied.)

ನಿಯಮ (8) : ತನ್ನ ವಾದಮಂಡನೆಯಲ್ಲಿ ಒಂದು ಅಥವಾ ಹಲವು ಅಪ್ರಕಟಿತ ಪ್ರಮೇಯಗಳನ್ನು/ವಾದಗಳನ್ನು ಸ್ಪಷ್ಟವಾಗಿ ಮಂಡಿಸುವ ಮೂಲಕ ತಾರ್ಕಿಕವಾಗಿ ಸಮಂಜಸವಾದ ಅಥವಾ ತಾರ್ಕಿಕವಾಗಿ ಸಮಂಜಸವಾಗಿಸಬಹುದಾದ ವಾದಗಳನ್ನು ಮಾತ್ರ ಬಳಸಬಹುದು.(A party may not only use arguments in its argumentation that are logically valid or capable of bring validated by making explicit one or more unexpressed premises.)

ನಿಯಮ (9) :  ಒಂದು ನಿಲುವಿನ ಸಮರ್ಥನೆಯಲ್ಲಿ ವಿಫಲವಾದರೆ ಅದು ಆ ನಿಲುವನ್ನು ಮುಂದಿಟ್ಟವರೆ ಹಿಂಪಡೆಯವಲ್ಲಿ ಪರ್ಯಾವಸನಗೊಳ್ಳಬೇಕು ಮತ್ತು ಒಂದು ನಿಲುವಿಗೆ ತೀರ್ಮಾನಕಾರಕ ಸಮರ್ಥನೆಯನ್ನು ಒದಗಿಸಿದ್ದಲ್ಲಿ ಆ ನಿಲುವಿನ ಕುರಿತ ಇತರರು ವ್ಯಕ್ತಪಡಿಸಿದ ಸಂದೇಹಗಳನ್ನು ಹಿಂಪಡೆಯವಲ್ಲಿ ಪರ್ಯಾವಸಾನಗೊಳ್ಳಬೇಕು.(A failed defense of standpoint may result in the party that put forward the standpoint retracting it and conclusive defense of the standpoint must result in the other party retracting its doubt about the standpoint.)

ನಿಯಮ (10) : ಅಗತ್ಯವಿರುವಷ್ಟು ಸ್ಪಷ್ಟವಿರದ ಅಥವಾ ಗೊಂದಲಮೂಡಿಸವಷ್ಟು ಅಸ್ಪಷ್ಟವಾಗಿರುವ ವಾದರೂಪಣೆಗಳನ್ನು ಬಳಸಬಾರದು ಮತ್ತು ಎದುರಾಳಿಯ ವಾದರೂಪಣೆಗಳನ್ನು ಸಾಧ್ಯವಿದ್ದಷ್ಟು ಎಚ್ಚರಿಕೆಯಿಂದ ಮತ್ತು ನಿಖರವಾಗಿ ಅರ್ಥನಿರೂಪಣೆ ಮಾಡಬೇಕು.(A party may not use formulations that are insufficiently clear or confusingly ambiguous and a party must interpret the other party’s formulations as carefully and accurately as possible.)

ನೀವುಗಳು ನಿಜವಾದ ’ಬುದ್ಧಿಜೀವಿಗಳು,ಚಿಂತಕರು’ ಮತ್ತು ನೀವುಗಳೇ ಪದೇ ಪದೇ ಪ್ರತಿಪಾದಿಸುವ “ವೈಚಾರಿಕತೆ,ವೈಜ್ಞಾನಿಕತೆ,ಅಭಿವ್ಯಕ್ತಿ ಸ್ವಾತಂತ್ರ್ಯ, ಪ್ರಜಾಪ್ರಭುತ್ವ, ಮೌಲ್ಯ, ಇತ್ಯಾದಿಗಳು” ನಿಮ್ಮ ರಾಜಕೀಯ ಅಜೆಂಡಾಗಳಾಗಿರದೆ ನಿಮ್ಮ ನೈಜ ಕಳಕಳಿಗಳೇ ಆಗಿದ್ದರೆ ನೀವುಗಳು ಭಿನ್ನ ಅಭಿಪ್ರಾಯಗಳನ್ನು ಗೌರವಿಸಿ ಅದನ್ನು ವೈಚಾರಿಕವಾಗಿಯೇ ವಿರೋಧಿಸಬೇಕಾಗುತ್ತದೆ. ಈ ನಾಡಿನ ಯುವಕರು ಸೂಕ್ಷ್ಮವಾಗಿ ನಿಮ್ಮನ್ನು ಗಮನಿಸುತಿದ್ದಾರೆ ಎನ್ನುವುದನ್ನು ಮರೆಯಬೇಡಿ.ಬೌದ್ಧಿಕ ಚರ್ಚೆಗೆ ಇಳಿಯದೇ ಬರಿ ವಾಮ ಮಾರ್ಗಗಳನ್ನೇ ಅನುಸರಿಸಿದರೆ ಅವರು ನಿಮ್ಮನ್ನು ದೂರತಳ್ಳುವ ದಿನಗಳು ಬಹಳ ದೂರವೇನಿಲ್ಲ.

ಬಯ್ಯುವುದನ್ನೇ ಬೌದ್ಧಿಕತೆ,ವೈಚಾರಿಕ ವಿರೋಧಿಗಳ ಬಾಯಿ ಮುಚ್ಛಿಸುವುದೇ ‘ವೈಚಾರಿಕತೆ’ ಎಂದು ಕೊಂಡಿರುವವರು ನೆನಪಿಡಲಿ.ಇಂದು “ಹಿಡಿಯಷ್ಟು ಜನ” ಪುರೋಹಿತಶಾಹಿ ಧೋರಣೆಯ ಮೂಲಕ ಸರ್ಕಾರ,ಅಧಿಕಾರಶಾಹಿ ಮತ್ತು ಮಾಧ್ಯಮಗಳ ಮೇಲೆ ಪ್ರಭಾವ ಬೀರುವ ಮೂಲಕ ‘ಸತ್ಯ’ವನ್ನು ಮುಚ್ಛಿಡಲು ಸಾಧ್ಯವಿಲ್ಲ.ನಮ್ಮಂತ ಜನಸಾಮಾನ್ಯರ ದನಿಗಳು ಈಗ ‘ಸೋಷಿಯಲ್ ಮೀಡಿಯಾ’ಗಳ ಮೂಲಕ ಕೇಳಿಸುತ್ತದೆ.ಫ್ಯಾಸಿಸಂನ ಕರಾಳ ಮುಖಗಳ ನೈಜ ದರ್ಶನವನ್ನು ನಾವು ಅಲ್ಲಿಯೇ ಬಯಲಿಗೆಳಯಲ್ಲೆವು.

ನೀವು ಒಪ್ಪಿ-ಬಿಡಿ.ಆದರೆ ಸಾಮಾಜಿಕ ಜಾಲತಾಣಗಳ ಮೂಲಕವೇ ಈ ನಾಡಿನಲ್ಲಿ ಸಾಂಸ್ಕೃತಿಕ,ಬೌದ್ಧಿಕ ಚಳುವಳಿಯೊಂದು ಸದ್ದಿಲ್ಲದೇ ಶುರುವಾಗಿದೆ.ಆ ಚಳುವಳಿಯನ್ನು ಬೌದ್ಧಿಕವಾಗಿ ಎದುರಿಸಲು ಪ್ರಯತ್ನಿಸಿ.ಅದನ್ನು ಬಿಟ್ಟು ಕ್ರಿಮಿನಲ್ ಕೇಸು ದಾಖಲಿಸುವ,ಬೆದರಿಸುವ,ಗುಂಪುಗಳನ್ನು,ಸಂಶೋಧನಾ ಕೇಂದ್ರಗಳನ್ನು ಮುಚ್ಚಿಸುವಂತ ಕೆಲಸಗಳಿಗೆಲ್ಲ ಬೆದರುವುದೂ ಇಲ್ಲ.ಈ ಚಳುವಳಿ ಬಲಿದಾನವನ್ನು ಬಯಸುವುದಾದರೇ ಸರಿಯೇ ನಾವಂತೂ ಹಿಂದೆ ಸರಿಯುವುದಿಲ್ಲ.ನಿಮ್ಮ ಮುಂದೆಯಿರುವ ರಚನಾತ್ಮಕ ವಿರೋಧ ಮಾರ್ಗವೆಂದರೆ ಬೌದ್ಧಿಕ ಚರ್ಚೆಯೊಂದೇ!

’ಥಾಟ್ಸ್ ಆನ್ ಪಾಕಿಸ್ತಾನ್’ ಪುಸ್ತಕದಲ್ಲಿ,ಡಾ.ಬಿ.ಆರ್ ಅಂಬೇಡ್ಕರ್ “ಹೆಚ್ಚು ಅರಿವು,ಓ ದೇವರೇ,ಹೆಚ್ಚು ಅರಿವು! ಇಲ್ಲದಿದ್ದರೆ ನಾವು ಹಾಳಾಗಿ ಹೋಗುತ್ತೇವೆ.ಈ ಸುಂದರ ಉದ್ಯಾನವನ್ನು ನಾವು (ಅರಿವಿನಿಂದ) ಸಂಪೂರ್ಣವಾಗಿ ಗೆಲ್ಲಬಹುದು” ಎನ್ನುತ್ತಾರೆ.ಅವರು ಪ್ರತಿಪಾದಿಸಿದ ಅರಿವು “ಜ್ಞಾನ ಮಾರ್ಗ”ದಿಂದ ದಕ್ಕುತ್ತದೆಯೇ ಹೊರತು “ವಿದ್ವಂಸಕ ಮಾರ್ಗ”ದಿಂದಲ್ಲ.

ಹ್ಮ್.ಅಂದ ಹಾಗೇ ನಮ್ಮದು “ಜ್ಞಾನ ಮಾರ್ಗ”. ನಿಮ್ಮ ಮಾರ್ಗ ಯಾವುದು ಬುದ್ಧಿಜೀವಿಗಳೇ?

References: Reconceptualizing India Studies – S.N Balagangadhara (Oxford Publications)

35 ಟಿಪ್ಪಣಿಗಳು Post a comment
  1. Shripad
    ಮಾರ್ಚ್ 3 2015

    ಒಂದು ಗಾದೆ ಇದೆ: ಅಂತರಗಟ್ಟಮ್ಮನ ಜಾತ್ರೆಗೆ ಅಂತಂಥವ್ರೇ ಹೋದ್ರು ಅಂತ. ಈ ಬು(ಸು)ದ್ಧಿ ಜೀವಿಗಳ ಸಭೆ/ಹೋರಾಟಕ್ಕೆ ಬರುವವರೆಲ್ಲ ಅಂತಂಥವರೇ. ಎಷ್ಟು ಹೇಳಿದರೂ ಕೇಳಿದರೂ ಅಷ್ಟೇ. “…ಮುಂದೆ ಕಿನ್ನರಿ ಬಾರಿಸಿದಂತೆ”!

    ಉತ್ತರ
  2. Nagshetty Shetkar
    ಮಾರ್ಚ್ 3 2015

    ನೀವು ಪಟ್ಟಿ ಮಾಡಿರುವ ದಶಾಂಶಗಳಿಗಿಂತ ಮುಖ್ಯವಾದ ಎರಡು ಅಂಶಗಳಿವೆ:

    ೧. ವಾದವು ಜೀವಪರವಾಗಿರತಕ್ಕದ್ದು.
    ೨. ವಾದವು ಸಮಾನತೆಯನ್ನು ಎತ್ತಿಹಿಡಿಯತಕ್ಕದ್ದು.

    ಇವೆರಡು ಇಲ್ಲದ ವಾದ ಬೌದ್ಧಿಕ ವಿಕೃತಿಯಲ್ಲದೆ ಮತ್ತೇನಲ್ಲ.

    ಉತ್ತರ
    • Shripad
      ಮಾರ್ಚ್ 3 2015

      ತಮ್ಮ ಮಾತು/ಮತ ಬಿಟ್ಟರೆ ಬೇರೆಲ್ಲೂ ಮಾನವತೆ ಇಲ್ಲ, ಸಮಾನತೆ ಇಲ್ಲ ಎಂದು ತಿಳಿಯುವುದನ್ನು ಬಿಡತಕ್ಕದ್ದು!

      ಉತ್ತರ
    • Nagshetty Shetkar
      ಮಾರ್ಚ್ 3 2015

      ದರ್ಗಾ ಸರ್ ಅವರೊಡನೆ ನಿಲುಮೆಯ ಹಲವರು ಅವಧಿಯಲ್ಲಿ ವಾದ ಮಾಡಿದರು. ಅವರಲ್ಲಿ ಎಷ್ಟು ಜನ ರಾಕೇಶ್ ಶೆಟ್ಟಿಯ ಹತ್ತು ನಿಯಮಗಳನ್ನು ಪಾಲಿಸಿದರು ಅಂತ ಹೇಳಿ ನೋಡೋಣ! ಸ್ವತಃ ರಾಕೇಶ್ ಈ ನಿಯಮಗಳ ಪಾಲನೆ ಮಾಡಿಲ್ಲ!

      ಉತ್ತರ
      • Shripad
        ಮಾರ್ಚ್ 3 2015

        ಇದ್ಯಾವುದು ಅವಧಿ ದರ್ಗಾ? ಸಂಬಂಧವಿಲ್ಲದ ವ್ಯಕ್ತಿ/ವಿಷಯಗಳನ್ನು ಹೊರಗಿಡತಕ್ಕದ್ದು. ಯಾವುದು ಎಲ್ಲಿ ಅನಗತ್ಯವೋ ಅದು ಕಸ ಎಂದು ಕೈಲಾಸಂ ಹೇಳಿದ್ದನ್ನು ನೆನಪಿಡತಕ್ಕದ್ದು.

        ಉತ್ತರ
      • WITIAN
        ಮಾರ್ಚ್ 3 2015

        ಓಹೋ, ಈಗ ಅರ್ಥವಾಯಿತು! ನಾಶೆಶೇ ಆವರಿಗೆ ಪಾಪ ಇಂಗ್ಲಿಷ್ ಬರುವುದಿಲ್ಲ ಅಂದುಕೊಂಡಿದ್ದೆ, ಅವರಿಗೆ ಕನ್ನಡವೂ ಬರುವುದಿಲ್ಲ. ಅವರು ಪದೇ ಪದೇ ‘ಅವಧಿ’ಯಲ್ಲಿ ಅಂತ ಬರೆದದ್ದು ನೋಡಿ ನಾನೂ ಅಂತರ್ಜಾಲದಲ್ಲಿ ಹುಡುಕಿದ್ದೇ ಹುಡುಕಿದ್ದು ನಡೆದರೂ ನನಗೆ ಏನೂ ಸಿಗಲಿಲ್ಲ. ಸ್ವಲ್ಪ ನಿಧಾನವಾಗಿ ಅರ್ಥವಾಯಿತು..ಅವರು ‘ಹಲವರು ಅವಧಿಯಲ್ಲಿ ವಾದ ಮಾಡಿದರು’ ಎನ್ನುವುದನ್ನು ‘ಹಲವರು “ಸರದಿ”ಯಲ್ಲಿ ವಾದ ಮಾಡಿದರು’ ಎಂದು ಅರ್ಥೈಸಿಕೊಂಡಾಗ ಸಕಲವೂ ವೇದ್ಯವಾಯಿತು. ಧನ್ಯವಾದಗಳು ನಾಶೆಶೇ..! ತಮ್ಮ ಅಮೋಘ ಕನ್ನಡ ಪ್ರಯೋಗ ಅಲ್ಲಮ ಪ್ರಭುಗಳ, ಬಸವಣ್ಣನವರ, ಅಥವಾ ಅಕ್ಕ ಮಹಾದೇವಿಯ ವಚನಗಳಲ್ಲಿ ಖಂಡಿತ ಇಲ್ಲ (ಬಹುಶಃ ದರ್ಗಾ ಸರ್ ಅವರೂ ಬಳಸಿರಲಿಕ್ಕಿಲ್ಲ!).

        ಉತ್ತರ
        • Nagshetty Shetkar
          ಮಾರ್ಚ್ 4 2015
          • ಮಾರ್ಚ್ 6 2015

            Sudarshana
            (moderation preview) 7 mins ago
            ‘ಹರವು’ಅವರ ಚಿಂತನೆಯ ಹರವು ಸಂಕುಚಿತವಾಗಿ, ಸಾಹಿತ್ಯದ ಅರಿವು ಕಿರಿದಾಗಿ ಎತ್ತಿದ ಪ್ರಶ್ನೆಗಳು ಅಪ್ರಬುದ್ಧವಾಗಿವೆ.
            ಒಂದು ಪಾತ್ರವನ್ನು ಬಿಂಬಿಸುವಾಗ ಆ ಪಾತ್ರದ ಮನಸ್ಥಿತಿಯ, ಆಲೋಚನಾ ಲಹರಿಯ ಆಯಾಮಗಳನ್ನು ಪ್ರತನಿಧಿಸುವುದು ಕಥೆಯಾರನ್ನು ಕೆಲಸ. ಆ ಪಾತ್ರದ ಮನಸ್ಸಿನಲ್ಲಿ ಬರಬಹುದಾದ ಯೋಚನೆಗಳು ಸಂದೇಹಗಳನ್ನು. ಆಗಿದ್ದ ಸಾಮಾಮಾಜಿಕ,ರಾಜಕೀಯ,ಧಾರ್ಮಿಕ ನಂಬಿಕೆ, ವ್ಯವಸ್ಥೆ ಹಾಗು ವಿಚಾರಗಳ ಹಿನ್ನೆಲೆಯಲ್ಲಿ ಕಟ್ಟಿ ಕೊಟ್ಟಿರಇಱ್ತಾರೆ. ಇದನ್ನೆಲ್ಲ ಇಂದಿನ ವ್ಯವಸ್ಥೆಯ,ತಮ್ಮ ಪೂರ್ವಾಗ್ರಹದ ಮಸೂರದ ಮೂಲಕ ನೋಡುತ್ತಾ ಪ್ರಶ್ನಿಸುವ ವಿಧಾನ ಹಾಗೂ ಕೇಳಿರುವ ಪ್ರಶನೆಗಳು ಎಷ್ಟು ಸಮಂಜಸ ಎನ್ನುವುದು ಯೋಚಿಸಬೇಕಾದ ವಿಷಯ.
            ಮೇಲು ಕೀಳು,ಇಷ್ಟ ಅನಿಷ್ಟ. ಭಾವಗಳು ಮನಸ್ಸಿನ ಸಮಾಜದ ಸಾರ್ವಕಾಲಿಕ ಭಾಗಗಳು.ಅದು ಸರಿಯೋ ತಪ್ಪೋ ಎನ್ನುವುದು ಬೇರೆ ವಿಷಯ.
            ಜಿಂಕೆಯನ್ನು ಕಂಡಾಗ ಮುದಗೊಳ್ಳುವ ಮನಸ್ಸು ಕಜ್ಜಿಹತ್ತಿದ ನಾಯಿ ಕಂಡಾಗ ಮುದುಡುವುದೂ ಸತ್ಯವೇ
            ಭೈರಪ್ಪನವರ ಕಾದಂಬರಿಗಳು ಸಾರ್ವಕಾಲಿಕ ಆಗುವುದು ಅದಕ್ಕಾಗಿ.
            ಹೆಣ್ಣು ಕೂಡಾ ಒಳ್ಳೆಯ ಕೆಟ್ಟ ಗುಣಗಗಳ ಪ್ರತಿನಿಧಿಯೇ.ಒಂದು ಕಾದಂಬರಿಯ ಪಾತ್ರವನ್ನು ಕೆಟ್ಟದಾಗಿ ಚಿತ್ರಿಸಿದ ಮಾತ್ರಕ್ಕೆ ಅದೇ ಅವರ ನಿಲುವು ಎಂದು ಫರ್ಮಾನು ಹೊರಡಿಸಿ ಗೊಂಗಡಿ ಬಜಾಯಿಸುವ ಮೌಢ್ಯವನ್ನು ಏನೆಂದು ವ್ಯಾಖ್ಯಾನಿಸುವುದು?
            ಭೈರಪ್ಪನವರನ್ು ನಿಂದಿಸಿಯಾದರೂ ಪ್ರಚಾರ ಪಡೆಯಬಹುದು ಎಂಬುದು ಇಂದಿನ ಫ್ಯಾಷನ್. ಹರಿ ನಿಂದೆ ಮಾಡುತ್ತಲೇ ಕೈವಲ್ಯವನ್ನು ಪಡೆದ ಹಿರಣ್ಯಕಶಿಪು ಥರ.

            ಉತ್ತರ
      • WITIAN
        ಮಾರ್ಚ್ 3 2015

        ದರ್ಗಾ ಸರ್ ಅವರ ಮಠದ ಗಿಂಡಿಮಾಣಿಗಳೇ, ಸ್ವಲ್ಪ ಲೇಖನವನ್ನು ‘ಕಣ್ಣುಬಿಟ್ಟು’ ಓದಿ. ಆ ನಿಯಮಗಳು ರಾಕೇಶ್ ಶೆಟ್ಟಿಯವರದ್ದಲ್ಲ, ಬದಲಿಗೆ ‘pragma-dialectical’ (ತಮ್ಮ ಇಂಗ್ಲಿಷ್ ಸಹಜವಾಗಿ ಇದಕ್ಕಿಂತ ‘ಉತ್ತಮ’ದರ್ಜೆಯದಾದ್ದರಿಂದ ಕನ್ನಡ ಲಿಪಿಯಲ್ಲೂ ಬರೆದುಬಿಡುತ್ತೇನೆ; ‘ಪ್ರಾಗ್ಮಾ-ಡಯಾಲೆಕ್ಟಿಕಲ್’ ಅಂತ ಓದಿಕೊಳ್ಳಬೇಕು) ಎನ್ನುವ ಥಿಯರಿಯನ್ನು ಬೆಳೆಸಿದ Van Emerson (ವಾನ್-ಎಮರ್ಸನ್ ಎಂದು ಓದಿಕೊಳ್ಳಿ, ದಯವಿಟ್ಟು) ಎಂಬ ಚಿಂತಕನದ್ದು.

        ಉತ್ತರ
      • Mratyunjaya
        ಮಾರ್ಚ್ 4 2015

        ನಾಗಶೆಟ್ಟಿ ನೀವೊಮ್ಮೆ ಹತ್ತನೇ ಕ್ಲಾಸಿನ ಪರೀಕ್ಷೆಗೆ ಕುಳಿತುಕೊಳ್ಳುವುದು ಕನ್ನಡ ಭಾಷೆಯ ಬೆಳವಣಿಗೆ ಮತ್ತದರ ಉಳಿವಿನ ದೃಷ್ಟಿಯಿಂದ ಅಗತ್ಯವಾಗಿದೆ

        ಉತ್ತರ
    • WITIAN
      ಮಾರ್ಚ್ 3 2015

      ನಾನು ಜೀವಪರ, ಆದ್ದರಿಂದ ಧಾನ್ಯದ ಗೋದಾಮಿನಲ್ಲಿ ಹೆಗ್ಗಣಗಳನ್ನು ಉಳಿಸುತ್ತೇನೆ. ನಾನು ಜೀವಪರ, ಆದ್ದರಿಂದ ಮನುಷ್ಯರ ವಸತಿಯಲ್ಲಿ ನುಗ್ಗಿದ ಹಾವನ್ನು, ಚೇಳುಗಳನ್ನು ಸಂರಕ್ಷಿಸುತ್ತೇನೆ. ನಾನು ಜೀವಪರ, ಆದ್ದರಿಂದ ಹಾವಿಗೆ ನಾನು ಮಾಡಿಟ್ಟ ಅನ್ನವನ್ನು ತಿನ್ನಲು ಕಲಿಸಿಕೊಡುತ್ತೇನೆ, ಬದಲಿಗೆ ಇಲಿ, ಹೆಗ್ಗಣಗಳನ್ನು ಹಿಡಿಯದೆ ಇರಲು ಹೇಳುತ್ತೇನೆ. ನಾನು ಸಮಾನತೆಯನ್ನು ಪ್ರತಿಪಾದಿಸುತ್ತೇನೆ. ಆದ್ದರಿಂದ ಆನೆಗೂ ಆಡಿಗೂ ಸಮಾನ ಪ್ರಮಾಣದಲ್ಲಿ ಊಟ ಹಾಕುತ್ತೇನೆ. ಆನೆ ಹೆಚ್ಚು ಆಹಾರ ಕೇಳಿದರೆ “ಹುಶ್! ನಾಶೆಶೇ ಅವರಿಗೆ ಹೇಳಿಬಿಡುತ್ತೇನೆ, ನೋಡು, ಮತ್ತೆ ಅವರು ದರ್ಗಾ ಸರ್ ಅವರನ್ನು ಕರೆದುಕೊಂಡು ಬಂದು ಅವರಿಂದ ಸಮಾನತೆಯ ಬಗ್ಗೆ ಭಾಷಣ ಮಾಡಿಸುತ್ತಾರೆ” ಎಂದು ಹೆದರಿಸುತ್ತೇನೆ. ಬೆದರಿದ ಆನೆ ಸುಮ್ಮನಾಗುತ್ತದೆ.

      ಉತ್ತರ
  3. ಮಾರ್ಚ್ 3 2015

    ಕುಚೇಷ್ಟೆಯನ್ನು ಬಿಡತಕ್ಕದ್ದು ಹಾಗೂ ಜೀವಪರ ಎಂಬುದನ್ನು ಪದೇ ಪದೇ ಬಜಾಯಿಸುವುದರ ಬದಲು ತಮ್ಮ ಅನುಭವ ಹಾಗೂ ಅರಿವ್ವಿನಲ್ಲಿ ಜೀವರಪರ ಎಂಬುದರ ವ್ಯಖ್ಯಾನವನ್ನು ಮಾಡತಕ್ಕದ್ದು.
    ತಮಗೆ ಅದರ ಅರಿವಿಲ್ಲ ಹಾಗ್ಗೂ ಸ್ಪಷ್ಟತೆ ಇಲ್ಲವೆಮ್ದು ನಮಗೆ ಗೊತ್ತಿದೆ. ಇದಕ್ಕೆ ಉತ್ತರಿದಸದೇ ಇರುವ ಜಾಣ್ಮೆಯನ್ನು ತೋರುವಿರೆಮ್ದು ತಿಳಿದಿದೆ ಆದರೂ ಈ ಸವಾಲನ್ನು ಸ್ವೀಕರಿಸತಕ್ಕದ್ದು.

    ಉತ್ತರ
  4. ಎಂ ಎ ಶ್ರೀರಂಗ
    ಮಾರ್ಚ್ 3 2015

    ೧. ತಮ್ಮ ವಾದವೇ ಸರಿ ಎಂದು ಹಠ ಹಿಡಿಯುವುದನ್ನು ಬಿಡತಕ್ಕದ್ದು. .
    ೨. ಬೇರೊಬ್ಬರು ಹೇಳುವುದನ್ನೂ ಕೇಳುವ ಅಭ್ಯಾಸ ಮಾಡಿಕೊಳ್ಳುವುದು.
    ೩. ಕರ್ನಾಟಕ ಮತ್ತು ಭಾರತದ ಜನಜೀವನ,ಸ್ಥಿತಿಗಳು,ಸಾಹಿತ್ಯ ಇತ್ಯಾದಿ ಹನ್ನೆರಡನೇ ಶತಮಾನದಲ್ಲೇ ಇನ್ನೂ ನಿಂತಿದೆ ಎಂದು ಭಾವಿಸುವುದನ್ನು ಬಿಡತಕ್ಕದ್ದು.
    ೪. ಹತ್ತು ಶತಮಾನಗಳಷ್ಟು ಹಿಂದೆ ಹೇಳಿದ್ದೇ ಈಗಲೂ ಸತ್ಯ,ಅಚಲ; ಕಸ್ತೂರಿ ಮಾತ್ರೆಯೇ ಎಲ್ಲ ರೋಗಗಳಿಗೂ ಮದ್ದು ಎಂಬ ಮೊಂಡು ವಾದವನ್ನು ಬಿಡತಕ್ಕದ್ದು. ಮರಕ್ಕೆ ಮರ ದೊಡ್ಡದಾಗಿರುತ್ತದೆ. ಹೀಗಾಗಿ ಯಾವಾಗಲೂ ಒಬ್ಬರನ್ನೇ quote ಮಾಡುತ್ತಾ ಅವರು ಹೇಳಿದ್ದೇ ಸರಿ ಎಂದು ದಿನಾ ಹಾಲಿರ್ಕ್ಸ್, ಬೋರ್ನ್ ವಿಟಾ ರೀತಿ ಅವರು ಹೇಳಿದ್ದನ್ನೇ ‘ಪ್ರಸಾದ’ ಎಂದು ಸ್ವೀಕರಿಸಿ ಕಣ್ಣಿಗೊತ್ತಿಕೊಂಡು ಕುಡಿಯುತ್ತಾ ಇರಬಾರದು.
    ಈ ಪಟ್ಟಿಗೆ ಇನ್ನೂ ಏನಾದರೂ ಇದ್ದರೆ ಸೇರಿಸುವವರು ಸೇರಿಸಬಹುದು. ಇಂಥ ಮನೋಭಾವವೇ ಜೀವನಮುಖಿ ಮತ್ತು ಸಮಾನತೆ.

    ಉತ್ತರ
    • shripad
      ಮಾರ್ಚ್ 4 2015

      ಶ್ರೀರಂಗ ಅವರೇ ಇಂಥ ಮಾತುಗಳನ್ನು ಸಂಬಂಧಿಸಿದವರಿಗೆ ಎಚ್ಚರಿಸಲು ಆಗಾಗ ಹೇಳತಕ್ಕದ್ದು.

      ಉತ್ತರ
  5. WITIAN
    ಮಾರ್ಚ್ 3 2015

    ನಾಶೆಶೇ ಅವರು ದರ್ಗಾ ಸರ್ ಅವರ ಮಠದ ಗಿಂಡಿಮಾಣಿ! ನಿಲುಮಿಗರೇ, ನಿಮಗೆ ಜ್ಞಾನ ಮಾರ್ಗ ಬೇಕು, ಆದರೆ ನಾಶೆಶೇ ಅವರು ತಮ್ಮ ಗಿಂಡಿಮಾಣಿತನದಲ್ಲೇ ಇರಲು ಬಯಸುತ್ತಾರೆ! ಯಾವುದೇ ಮಾರ್ಗಗಳು ಅವರನ್ನು ದರ್ಗಾ ಸರ್ ಅವರಿಂದ ದೂರ ಒಯ್ಯುತ್ತವೆ. ಅದು ಅವರಿಗೆ ಬೇಡ. ಆದ್ದರಿಂದ ಪ್ರತಿಚರ್ಚೆಯಲ್ಲೂ ಅವರು ತಮ್ಮ ಅಗಾಧ ಅಜ್ಞಾನವನ್ನು, ದರ್ಗಾ ಸರ್ ಅವರ್ ಮೇಲಿನ ಪ್ರೇಮಾಭಿಮಾನಗಳನ್ನು ವ್ಯಕ್ತಪಡಿಸಿದರೆ ಅದಕ್ಕೆ ಕೋಪಿಸಿಕೊಳ್ಳಬೇಡಿ.

    ಉತ್ತರ
  6. Pramod
    ಮಾರ್ಚ್ 5 2015

    ಬೌದ್ಧಿಕ ಫ್ಯಾಸಿಸಂನ್ನು ಎಲ್ಲಿಯೋ ಹುಡುಕಬೇಕಾಗಿಲ್ಲ !ನೀವೆಲ್ಲಾ ಸೇರಿ ಓರ್ವ Nagshetty Shetkar ರನ್ನು ಹದ್ದು ಕುಕ್ಕುವ ಹಾಗೆ ಕುಕ್ಕುತೀರಿ ,ಅವರ ವಿದ್ಯಾಭ್ಯಾಸದ ಬಗ್ಗೆ ,ಅವರ ನಿಲುವಿನ ಬಗ್ಗೆ ಮತ್ತು ಅವರ ಪಾಂಡಿತ್ಯದ ಬಗ್ಗೆ ಗೇಲಿ ಮಾಡಿ ಅವರ ಸದ್ದಡಿಗಿಸುವ ಈ ತಂತ್ರವೇ ಬೌದ್ದಿಕ ಫ್ಯಾಸಿಸಂ! ಅವರ ಸಾತ್ವಿಕ ದ್ಯೆರ್ಯಕ್ಕೆ ನನ್ನದೊಂದು ಸಲಾಂ !

    ಉತ್ತರ
    • WITIAN
      ಮಾರ್ಚ್ 5 2015

      ಓರಣವಾಗಿ ಜೋಡಿಸಿಟ್ಟ ಪಿಂಗಾಣಿ ಅಂಗಡಿಯೊಳಗೆ ಗೂಳಿ ನುಗ್ಗಿದರೆ ಹೇಗಿರುತ್ತದೆ? ತಾಳ-ಲಯ ಬದ್ಧವಾದ ಸಂಗೀತ ಕಛೇರಿಯ ಮಧ್ಯೆ ಕತ್ತೆ ಕೂಗಿದರೆ ಹೇಗಿರುತ್ತದೆ? ಪ್ರತಿಕ್ರಿಯೆಗಳ ಈ ಪುಟದಲ್ಲಿ ಯಾರೊಬ್ಬರೂ ತಮ್ಮ ತಮ್ಮ ವಿದ್ಯಾರ್ಹತೆಯನ್ನಾಗಲೀ, ತಮ್ಮ ‘ಆಳ’ವಾದ ಸಂಶೋಧನಾ ಹಿನ್ನೆಲೆಯನ್ನಾಗಲೀ ಪ್ರತಿಪಾದಿಸಿ ಅದಕ್ಕೆ ಮರ್ಯಾದೆ ಕೊಡಿ ಎಂದು ಕೇಳುತ್ತಿಲ್ಲ. ಬದಲಿಗೆ ಜವಾಬ್ದಾರಿಯುತವಾದ, ಸತ್ವಯುತವಾದ ಮತ್ತು ಆಧಾರ ಸಹಿತವಾದ ಅಂಶಗಳ ಮಂಡನೆ, ಮತ್ತು ರಚನಾತ್ಮಕ ಟೀಕೆಗಳ ಅಭಿವ್ಯಕ್ತಿಯನ್ನು ಚಿಕ್ಕ, ಚೊಕ್ಕ ಶಬ್ದಗಳಲ್ಲಿ ಮಾಡಲು ಇರುವ ಅವಕಾಶ ಎಂದು ನಾನು ನಂಬಿದ್ದೇನೆ. ಇಂಥ ಪ್ರತಿಕ್ರಿಯೆ ತಮ್ಮ ಪ್ರೀತಿಪಾತ್ರರಾದ ಶ್ರೀಯುತ ನಾಶೆಶೇ ಅವರಿಂದ ಒಮ್ಮೆಯೂ ಬಂದಿಲ್ಲ ಎಂದು ವಿಷಾದದಿಂದ ಹೇಳಬೇಕಾಗುತ್ತದೆ. ಆದ್ದರಿಂದ ‘ಜಾಣನಿಗೆ ಮಾತಿನ ಪೆಟ್ಟು, ಕತ್ತೆಗೆ ಲತ್ತೆ ಪೆಟ್ಟು’..

      ಉತ್ತರ
    • shripad
      ಮಾರ್ಚ್ 5 2015

      ಹೌದು. ನನ್ನದೂ. ಆದರೆ… “ತಕ್ಕದ್ದು” ಎಂಬ ಪ್ರತ್ಯಯ ಪ್ರಯೋಗ ನಾನು ಹೇಳುವವನು, ನೀವೆಲ್ಲರೂ ಕೇಳಬೇಕಾದವರು ಎನ್ನುವ ಪ್ರಭು ಸಂಹಿತೆಯ ಧೋರಣೆಯನ್ನು ಸೂಚಿಸುತ್ತದೆ. ಅಥವಾ ಅಂಕಣವೊಂದರಲ್ಲಿ “ಬುದ್ಧಿ”ಯವರೊಬ್ಬರು ಬರೆದುಕೊಳ್ಳುವಂತೆ ‘ನಾವು ನೋಡಿದೆವು’ ‘ನಮಗೆ ಹೇಳಿದರು’ ‘ನಾವು ಕಂಡೆವು’ ಎಂದು ತಮ್ಮನ್ನೇ ಕುರಿತ ಬಹುವಚನ ಪ್ರಯೋಗಕ್ಕೆ ಸಮಾನವಾದ “ಬುದ್ಧಿಶಾಹಿ”ಗೆ ಸಂಬಂಧಿಸಿದ್ದು. ನಾವು ಮಾನವತೆ, ಸರ್ವಸಮಾನತೆಯನ್ನು ಮಾತಲ್ಲೇ ಹೇಳುವ ಶರಣರು! ಇಂದಿನ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ “ಮಾಡತಕ್ಕದ್ದು” “ಹೇಳತಕ್ಕದ್ದು” ಇತ್ಯಾದಿ ಸರಿಯಲ್ಲ ಎಂಬುದು “ಮಧ್ಯಮವರ್ಗದ” ನನ್ನಂಥವರ ಅಭಿಪ್ರಾಯವಾದ್ದರಿಂದ “ತಕ್ಕದ್ದು” ಪ್ರಯೋಗವನ್ನು “ಬಿಡತಕ್ಕದ್ದು” ಎಂದಷ್ಟೇ ಮಹಾಶಯರಲ್ಲಿ ಕೇಳಿಕೊಂಡಿದ್ದು. ಅಷ್ಟು ಬಿಟ್ಟರೆ ಮಾನ್ಯರ ಬಗ್ಗೆ “ಅಪಾರ ಪ್ರೀತಿ-ಗೌರವ ಇತ್ಯಾದಿಗಳಿವೆ. ಚಿಂತಿಸುವ ಅಗತ್ಯವಿಲ್ಲ.

      ಉತ್ತರ
    • Nagshetty Shetkar
      ಮಾರ್ಚ್ 5 2015

      +1
      What they preach to the progressive thinkers they won’t follow themselves ever. Total hypocrites.

      ಉತ್ತರ
      • WITIAN
        ಮಾರ್ಚ್ 5 2015

        ನಿಮ್ಮ ಈ ಪ್ರವೃತ್ತಿಯನ್ನೇ ಕುರಿತಾದ ಲೇಖನ ಇದು. ನೀವು ಹಿಡಿದ ಮಾರ್ಗವನ್ನೇ ಈ ಲೇಖನ ಬೊಟ್ಟು ತೋರಿಸಿ ಹೇಳುತ್ತಿದೆ. ಮತ್ತದೇ ಆತ್ಮರತಿ! ತಮ್ಮ ಕಮೆಂಟಿಗೆ ತಾವೇ ೧+ ಒತ್ತಿಕೊಳ್ಳುತ್ತಾರಲ್ಲಾ, ಈ ಜನ!

        ಉತ್ತರ
        • Nagshetty Shetkar
          ಮಾರ್ಚ್ 6 2015

          +1 was for Pramod, you didn’t see it? Or… Don’t be a fool get some education.

          ಉತ್ತರ
          • WITIAN
            ಮಾರ್ಚ್ 7 2015

            ಓಹೋ.. ಪ್ರಮೋದ್ ರಿಗೆ ತಾವು ೧+ ಅಂಕ ಕೊಟ್ಟಿದ್ದಾ? ತಪ್ಪಾಯಿತು ನಾಶೆಶೇ ರವರೆ! ಯಾಕೆ ಸ್ವತಃ ಅಂಕ ಹಾಕಿಕೊಂಡು ಸಾಕಾಯ್ತಾ? ಅಂದಹಾಗೆ education ಎಂದರೆ ಏನು ಸರ್? ಮೇಲೊಂದು ಪ್ರತಿಕ್ರಿಯೆಯಲ್ಲಿ ಮೃತ್ಯುಂಜಯ ಎನ್ನುವವರು ತಮಗೆ ಸೊಗಸಾದ ಸಲಹೆ ಕೊಟ್ಟಿದ್ದಾರೆ. ತಮ್ಮ ಪ್ರತಿಕ್ರಿಯೆಯ ಮಟ್ಟ, ಮತ್ತು ತಮ್ಮ ಕನ್ನಡ/ ಆಂಗ್ಲ ಭಾಷಾಜ್ಞಾನವನ್ನು ಕಂಡೇ ಹೇಳಿದ್ದಾರೆ ಎಂದುಕೊಂಡಿದ್ದೇನೆ. ಕೇವಲ ಅಂಗ್ರೇಜಿಯಲ್ಲಿ ಬರೆಯುವುದಷ್ಟೇ ಅಲ್ಲ..punctuation ಗೂ ಗಮನ ಕೊಡುವುದನ್ನು ಕಲಿಯಲು ಹೆಚ್ಚೇನೂ ಅಲ್ಲ ಕೇವಲ ಹತ್ತನೆ ತರಗತಿ ಓದಲು ಹೇಳುತ್ತಿದ್ದಾರೆ, ಅದನ್ನು ದಯವಿಟ್ಟು ಪಾಲಿಸಿ.

            ಉತ್ತರ
          • Shripad
            ಮಾರ್ಚ್ 7 2015

            @ ಶೆಟ್ಕರ್: ಮೊದಲು ಕನ್ನಡ ನೆಟ್ಟಗಿರತಕ್ಕದ್ದು. ಸುಖಾ ಸುಮ್ಮನೇ ಇಂಗ್ಲಿಷ್ ವ್ಯಾಮೋಹ ಬಿಡತಕ್ಕದ್ದು. ವ್ಯಾಮೋಹ ಇದ್ದರೂ ಅದು ಸರಿಯಾಗಿರತಕ್ಕದ್ದು. “you didn’t see it?” ಅನ್ನುವುದು ಯಾವ ಸೀಮೆ ಪ್ರಯೋಗ ಹೇಳತಕ್ಕದ್ದು.

            ಉತ್ತರ
            • Nagshetty Shetkar
              ಮಾರ್ಚ್ 8 2015

              ನಿನ್ನೆ ಶನಿವಾರ ವಿಜಯವಾಣಿ ಪತ್ರಿಕೆಯಲ್ಲಿ ನಾಡಿನ ಹಿರಿಯ ಕವಿ ಹಾಗೂ ಚಿಂತಕ ದರ್ಗಾ ಸರ್ ಅವರ ಒಂದು ವಿಚಾರಪೂರ್ಣ ಲೇಖನವು ಮೂಡಿ ಬಂದಿದೆ. ನಾಡಿನಾದ್ಯಂತ ವಿಜಯವಾಣಿ ಪತ್ರಿಕೆಯ ಓದುಗರು ಸದರಿ ಲೇಖನವನ್ನು ಓದಿ ಮೆಚ್ಚಿಕೊಂಡಿದ್ದಾರೆ.

              ಉತ್ತರ
            • Nagshetty Shetkar
              ಮಾರ್ಚ್ 8 2015

              “you didn’t see it?” ಅನ್ನುವುದು ಯಾವ ಸೀಮೆ ಪ್ರಯೋಗ ಹೇಳತಕ್ಕದ್ದು.

              ಭಟ್ಟರೇ, ನಿಮ್ಮ ಹಾಗೂ ಇತರ ನವವೈದಿಕರ ಹಾಗೆ ನಾನು ಆಂಗ್ಲ ಮಾಧ್ಯಮ ಶಾಲೆಯಲ್ಲಿ ಕಲಿತವನಲ್ಲ.

              ಉತ್ತರ
              • WITIAN
                ಮಾರ್ಚ್ 8 2015

                ಶ್ರೀಪಾದರೇ, ನಾಶೆಶೇ ನಿಮ್ಮ ಹಾಗೂ ಇತರ ನವವೈದಿಕರ ಹಾಗೆ ಆಂಗ್ಲಮಾಧ್ಯಮ ಶಾಲೆಯಲ್ಲಿ ಕಲಿತವರಲ್ಲ, ಅವರು ದರ್ಗಾ ಸರ್ ಅವರ ‘ಅರಿವು ಮರೆಸುವ’ ಶಾಲೆಯಲ್ಲಿ ಕಲಿತವರು. ಆದ್ದರಿಂದ ಅವರ ಕನ್ನಡ ಮತ್ತು ಇಂಗ್ಲಿಷ್ ಎರಡೂ ಕುಲಗೆಟ್ಟಿವೆ!

                ಉತ್ತರ
                • Nagshetty Shetkar
                  ಮಾರ್ಚ್ 8 2015

                  ನೀವು ಪದೇ ಪದೇ ಬಳಸುತ್ತಿರುವ ‘ಕುಲಗೆಟ್ಟಿದೆ’ ಎಂಬ ಪದವು ಜಾತೀಯತೆಯನ್ನು ಸಾರುತ್ತಿದೆ. ದಯವಿಟ್ಟು ಜಾತ್ಯತೀತರಾಗಿ ಹಾಗೂ ಜಾತೀಯತೆಯನ್ನು ರೀ-ಇನ್ಫೋರ್ಸ್ ಮಾಡುವ ಪದಗಳ ಬಳಕೆಯನ್ನು ನಿಲ್ಲಿಸಿ. @ರಾಕೇಶ್ ಶೆಟ್ಟಿ:ಇನ್ನಾದರೂ ನೀವು ಜಾತಿವಾದಿ ಕಾಮೆಂಟುಗಳ ಬಗ್ಗೆ ಬಿಗಿ ಆಗತಕ್ಕದ್ದು.

                  ಉತ್ತರ
                  • WITIAN
                    ಮಾರ್ಚ್ 8 2015

                    ಭ್ರಷ್ಟಗೊಂಡಿವೆ ಎನ್ನಲೆ? ಬಹುಶಃ ಅದು ನಿಮಗೆ ಹೆಚ್ಚು ಆಪ್ತವಾಗಬಹುದು…

                    ಉತ್ತರ
                    • WITIAN
                      ಮಾರ್ಚ್ 8 2015

                      ಅಕಟಕಟಾ ವಿಧಿಯೇ..ರೀ-ಇನ್ಫೋರ್ಸ್ ಎನ್ನುವುದಕ್ಕೆ ಕನ್ನಡಪದ ಹೊಳೆಯಲಿಲ್ಲವೇ ನಾಶೆಶೇ ಅವರಿಗೆ! ಅದಕ್ಕಾಗಿ ಕಂಗ್ಲಿಷಿನಲ್ಲೇ ಬರೆಯಬೇಕಾಯ್ತೇ? ನಾನು ಹೇಳಿಕೊಡುವುದಿಲ್ಲ..ನನಗಾಗಲೇ ನಾಶೆಶೇ ಮೈಸೂರು ವಿಶ್ವವಿದ್ಯಾಲಯ ಪ್ರಸಾರಾಂಗದ.. ಅಲ್ಲ್ಲಲ್ಲ…ದರ್ಗಾ ಸರ್ ಅರಿವು ಮರೆಸುವ ‘ಮದರಸ’ದ ಇಂಗ್ಲಿಷ್-ಕನ್ನಡ ನಿಘಂಟಿನ ಪುಟಗಳನ್ನು ಪರಪರನೆ ತೆರೆಯುವುದು ಕೇಳುತ್ತಿದೆ!

                    • Nagshetty Shetkar
                      ಮಾರ್ಚ್ 9 2015

                      ರಾಕೇಶ್ ಶೆಟ್ಟಿ ಅವರೇ, ಅದ್ಯಾವುದೋ ಪಾಶ್ಚಿಮಾತ್ಯ ಚಿಂತಕನ ದಶ ತತ್ವಗಳನ್ನು ಎಲ್ಲಾ ವಾದಗಳೂ ಅನುಸರಿಸತಕ್ಕದ್ದು ಅಂತ ಇತ್ತೀಚಿಗೆ ಅಲವತ್ತುಕೊಂಡಿದ್ದೀರಿ. [ಬೌದ್ಧಿಕ ದಾಸ್ಯದಲ್ಲಿ ಭಾರತ ಎಂಬ ವಿಷಯದ ಸಂದರ್ಭದಲ್ಲಿ ನಿಮಗೆ ಪಾಶ್ಚಿಮಾತ್ಯ ಚಿಂತಕರ ದಶ ತತ್ವಗಳೇ ಬೇಕಾದುದು ನಿಮ್ಮ ಬೌದ್ಧಿಕ ದಾಸ್ಯವನ್ನು ಬಿಂಬಿಸಿದೆ.] ಆದರೆ ಇಲ್ಲಿ ನಿಮ್ಮ ಬಾಲು ರಾವ್ ಮಠದ ಗಿಂಡಿಮಾಣಿಗಳೇ ಆ ತತ್ವಗಳನ್ನು ಪಾಲಿಸುತ್ತಿಲ್ಲ! ಮೊದಲು ನಿಮ್ಮ ಮನೆಯನ್ನು ಸರಿಪಡಿಸಿ, ಆಮೇಲೆ ದರ್ಗಾ ಸರ್ ಅವರ ಟೀಕೆ ಮಾಡಿ. ಓಕೆನಾ?

              • shripad
                ಮಾರ್ಚ್ 8 2015

                ‘ಅರಿವು ಮರೆಸುವ’ ಅಲ್ಲ, ಅದು “ಅರಿವು-ಮರೆವು” ಶಾಲೆ ಇರಬೇಕು?
                @ ಶೆಟ್ಕರ್ : ನನಗೆ ಯಾಕೆ ನವ ವೈದಿಕ ಪಟ್ಟಕಟ್ಟುತ್ತೀರಿ? ನಿಮ್ಮ ಭ್ರಮೆ-ನಾನು ಪೂರ್ವವೈದಿಕ! ನಮ್ಮ ಕನ್ನಡ ಸಾಲದೇ ನಿಮ್ಮ ಅಭಿವ್ಯಕ್ತಿ ಮಾಡುವ ಶಕ್ತಿಗೆ? ನವ ಶಿಕ್ಷಿತರ, ವಸಾಹತುಶಾಹಿಗಳ ಇಂಗ್ಲಿಷ್ ಹೆಚ್ಚುಗಾರಿಕೆಯ ಕೆಟ್ಟಭ್ರಮೆ ನಿಮಗಿದೆ. ಅದಕ್ಕೇ ನೆಟ್ಟಗಿಲ್ಲದಿದ್ದರೂ ಸರಿ, ಅದನ್ನೇ ಬಳಸುತ್ತೀರಿ ಅಲ್ವಾ? ಅಷ್ಟು ಬರೆದು ಏನು ಸಾಧಿಸಿದ್ರಿ?

                ಉತ್ತರ
                • Nagshetty Shetkar
                  ಮಾರ್ಚ್ 9 2015

                  ಇಷ್ಟೆಲ್ಲಾ ಹಾರಾಡುವ ಬದಲು ನೀವು ವೈದಿಕರು ಮೊಬೈಲ್ ಫೋನುಗಳಲ್ಲಿ ಕನ್ನಡ ತಂತ್ರಾಂಶವನ್ನು ಅಳವಡಿಸಿ. ಕನ್ನಡ ತಂತ್ರಾಂಶವಿಲ್ಲದ ಮೊಬೈಲು ಫೋನುಗಳಿಂದ ಕನ್ನಡದಲ್ಲೇ ಪ್ರತಿಕ್ರಿಯಿಸತಕ್ಕದ್ದು ಎಂದು ಗಲಾಟೆ ಮಾಡುವುದು ಮೊಂಡು ಹಠವಲ್ಲವೇ?

                  ಉತ್ತರ
              • shripad
                ಮಾರ್ಚ್ 8 2015

                @ ಶೆಟ್ಕರ್: ಎಲ್ಲ ವಿಷಯ ಗೊತ್ತಿರುವ ಪ್ರಗತಿಪರರಂತೆ ಹುಚ್ಚುಚ್ಚಾಗಿ ಮಾತಾಡಬೇಡಿ. ಏಳರ ತನಕ ನಮ್ಮೂರ ಏಕೋಪಾಧ್ಯಾಯ ಕನ್ನಡ ಸರ್ಕಾರಿ ಶಾಲೆ, ಅನಂತರ ಜೆ ಎಸ್ ಎಸ್ ಶಾಲೆ-ಸರ್ಕಾರಿ ಪಿಯು, ಸರ್ಕಾರಿ ಕಾಲೇಜು ಪದವಿ, ಸರ್ಕಾರಿ ವಿವಿ ಸ್ನಾತಕೋತ್ತರ ಪದವಿ, ಪಿಎಚ್.ಡಿ, ಡಿ. ಲಿಟ್…ನನ್ನ ಎಲ್ಲ ಕಲಿಕೆಯೂ ಕನ್ನಡದಲ್ಲೇ ಆದುದು, ಇಂಗ್ಲಿಷ್ ಕೂಡ! ತಿಳ್ಕಳಿ.

                ಉತ್ತರ
                • Nagshetty Shetkar
                  ಮಾರ್ಚ್ 9 2015

                  ನೀವು ಅನೇಕ ಡಿಗ್ರಿ ಪಡೆದಿರಬಹುದು, ಅವೆಲ್ಲಾ ಹೊಟ್ಟೆಪಾಡಿಗೆ. ಜೀವಪರವಾದ ಎಲ್ಲವನ್ನೂ ಬಲಪಂಥೀಯ ನೆಲೆಯಲ್ಲಿ ಖಂಡಿಸುವ ನಿಮ್ಮಿಂದ ಕನ್ನಡ ನಾಡು ಉದ್ಧಾರವಾಗಿಲ್ಲ. ನಾಡಿನ ಶೋಷಿತರ ಧ್ವನಿ ಆಗದ ನಿಮ್ಮ ಭಾಷೆ ಹಾಗೂ ಅಭಿವ್ಯಕ್ತಿ ಬಗ್ಗೆ ಗರ್ವ ಏತಕ್ಕೆ?

                  ಉತ್ತರ
                  • shripad
                    ಮಾರ್ಚ್ 9 2015

                    ವೈಯಕ್ತಿಕ ವಿಷಯ ಹಾಗಿರಲಿ. ನನ್ನ ಬಗ್ಗೆ ಏನೂ ಗೊತ್ತಿಲ್ಲದೇ ಷರಾ ಬರೆದಿದ್ದು ಯಾವ ಕರ್ಮಕ್ಕೆ? ಯಾವುದರ ಬಗ್ಗೂ ಸ್ಪಷ್ಟ ಅರಿವಿಲ್ಲದೇ ಒಟ್ಟಾರೆ ಷರಾ ಬರೆಯುವ ತಮ್ಮಿಂದ ಅದೇನು ಘನಕಾರ್ಯ ಸಿದ್ಧಿಯಾಗಿದೆಯೋ? ಕನ್ನಡಕ್ಕಂತೂ ಆಗಿದ್ದಷ್ಟರಲ್ಲೇ ಇದೆ. ಒಂದಂತೂ ನಿಜ. ನಿಮ್ಮ ಗುರುಗಳು ತಮ್ಮಪಾಡಿಗೆ ತಾವೇನೋ ಮಾಡಿಕೊಂಡಿದ್ದಾರೆ. ವೃಥಾ ಎಲ್ಲೆಡೆಯೂ ಅವರನ್ನು ಎಳೆದು ಒಂದಿಷ್ಟು ಚಾಲ್ತಿಯಲ್ಲಿ ಇರುವಂತೆ ಮಾಡುತ್ತಿದ್ದೀರಿ ಅಷ್ಟೆ.

                    ಉತ್ತರ

ನಿಮ್ಮದೊಂದು ಉತ್ತರ Shripad ಗಾಗಿ ಪ್ರತ್ಯುತ್ತರವನ್ನು ರದ್ದುಮಾಡಿ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Note: HTML is allowed. Your email address will never be published.

Subscribe to comments