ನಿಲುಮೆ ಪ್ರಕಾಶನದ ಪುಸ್ತಕ ಬಿಡುಗಡೆ ಮತ್ತು ನಿಲುಮೆ ಫೌಂಡೇಶನ್ ನ ಉದ್ಘಾಟನಾ ಸಮಾರಂಭದ ವರದಿ
– ಹರೀಶ್ ಆತ್ರೇಯ,ಹರ್ಷಿತ್ ಜೋಸೆಫ್
ನಿಲುಮೆ ಪ್ರಕಾಶನದಿಂದ ದಿನಾಂಕ ೧ ಮಾರ್ಚ್ ೨೦೧೫ ರಂದು ಬೌದ್ಧಿಕ ದಾಸ್ಯದಲ್ಲಿ ಭಾರತ ಎಂಬ ಪುಸ್ತಕವು ಬೆಂಗಳೂರಿನ ಮಿಥಿಕ್ ಸೊಸೈಟಿಯಲ್ಲಿ ಬಿಡುಗಡೆಯಾಯಿತು. ಕಳೆದ ಐದು ವರ್ಷಗಳಿಂದ ಸತತವಾಗಿ ಬೌದ್ಧಿಕ ವಿಚಾರಗಳನ್ನು ಮಂಡಿಸುತ್ತಿದ್ದ ನಿಲುಮೆ ಬ್ಲಾಗ್ ಈಗ ಪ್ರಕಾಶನ ಸಂಸ್ಥೆಯ ಹೆಸರಿನಲ್ಲಿ ನಿಲುಮೆ ಫೌಂಡೇಶನ್ ಆಗಿ ಹೊರಹೊಮ್ಮಿದೆ, ಪುಸ್ತಕ ಬಿಡುಗಡೆಯ ಸಮಾರಂಭದಲ್ಲಿಯೇ ನಿಲುಮೆ ಫೌಂಡೇಶನ್ನಿನ ಉದ್ಘಾಟನೆಯಾಯಿತು.
ಬ್ರಿಟಿಷರ ಕೆಳಗೆ ದಾಸರಾಗಿ ಬಾಳಿದ (?) ಭಾರತೀಯರ ಚರಿತ್ರೆ (?) ನಮಗೆ ಗೊತ್ತಿದೆ. ರಾಜಕೀಯವಾಗಿ ನಮ್ಮನ್ನು ಆಳಿದುದು ಹೌದಾದರೂ ಬೌದ್ಧಿಕವಾಗಿ ನಾವು ಅವರಿಂದ ಆಳಿಸಿಕೊಳ್ಳಬೇಕಾದ ಸ್ಥಿತಿಗೆ ತಲುಪಿದ್ದು ಶೋಚನೀಯ. ಅವರಿಂದ ಭೌತಿಕವಾಗಿ ಆಳಿಸಿಕೊಳ್ಳುವ ಕಾಲಘಟ್ಟವನ್ನು ವಸಾಹತುಶಾಹಿ ಕಾಲವೆಂದು ಕರೆಯುವುದಾದರೆ, ಈಗಲೂ ಅವರ ಬೌದ್ಧಿಕ ಚಿಂತನೆಗಳ, ಆಲೋಚನಾ ಕ್ರಮಗಳ ರೂಪದಲ್ಲಿ ಅವರಿಂದ ಬೌದ್ಧಿಕವಾಗಿ ಆಳಿಸಿಕೊಳ್ಳುತ್ತಿದ್ದೇವೆ ಎನ್ನುವುದೂ ಸತ್ಯ. ಇವೆಲ್ಲದರಿಂದ ಹೊರಬರಬೇಕಾದರೆ ನಮ್ಮ ಸಂಸ್ಕೃತಿಯ , ಆಚರಣೆಗಳ ಅರಿವು ನಮಗೆ ಬೇಕಾಗುತ್ತದೆ. ಸತ್ಯವನ್ನು ತಿಳಿಯುವ ಮತ್ತು ತಿಳಿಸುವ ಹೊಣೆ ನಮ್ಮದಾಗಿರುತ್ತದೆ. ಇವೆಲ್ಲವನ್ನೂ ಪ್ರಚುರಪಡಿಸಲು ನಮಗೊಂದು ದಾರಿ,ಕ್ರಮ ಮತ್ತು ಮಾರ್ಗದರ್ಶನದ ಅವಶ್ಯಕತೆಯಿದೆ. ಹತ್ತು ಹಲವು ಪುಸ್ತಕಗಳು ನಮ್ಮ ಕಣ್ಣಿಗೆ ಕಾಣಬಹುದು ಮತ್ತು ನಾವು ಓದಬಹುದು ಆದರೆ ದುರದೃಷ್ಟವಶಾತ್ ಅವೆಲ್ಲವೂ ಪಾಶ್ಚಾತ್ಯದ ಕಂಗಳಿಂದ ಕಂಡ ದೃಶ್ಯಗಳಾಗಿವೆ. ಅವರು ಚಿಂತನ ಕ್ರಮವನ್ನು ಅಳವಡಿಸಿಕೊಂಡು ಲೇಖಿಸಿದ ಮಹಾ ಪ್ರಬಂಧಗಳು ನಮ್ಮ ಸಂಸ್ಕೃತಿಯ ಮೂಲವನ್ನು ಅರಿಯುವ ಪ್ರಯತ್ನವನ್ನು ಮಾಡಿಯಾವೇ? ಇದು ಪ್ರಶ್ನೆಯಾಗಿ ಉಳಿಯುತ್ತಿರುವ ಹಂತದಲ್ಲಿ ಪ್ರೊ|| ಬಾಲಗಂಗಾಧರ್ ಅವರ ಲೇಖನಗಳು ಮತ್ತು ಕ್ರಮ ಹೆಚ್ಚು ಮೌಲ್ಯಯುತವೂ ಮತ್ತು ಸರಿಯಾದ ಮಾರ್ಗವೂ ಆಗಿರುವುದು ನಿಜಕ್ಕೂ ಸಂತಸದ ಸಂಗತಿ. ಆಲೋಚನಾ ಕ್ರಮಕ್ಕೆ ಹೊಸದೊಂದು ಹೊಳಹನ್ನು ತಂದುಕೊಟ್ಟವರು ಪ್ರೊ ಬಾಲು ರವರು.
ಪ್ರೊ ಬಾಲುರವರ The Heathen in his blindness ಎಂಬ ಸಂಶೋಧನಾ ಗ್ರಂಥವನ್ನು ಆಧರಿಸಿ ಪ್ರೊ ರಾಜಾರಾಮ್ ಹೆಗಡೆಯವರು ನಿರೂಪಿಸಿದ ’ಬೌದ್ಧಿಕ ದಾಸ್ಯದಲ್ಲಿ ಭಾರತ’ ಮೇಲಿನ ಪ್ರಶ್ನೆಗಳಿಗೆ ಉತ್ತರವನ್ನು ಕೊಡುತ್ತವೆ. ಬಾಲುರವರ ವಿಚಾರಗಳನ್ನೊಳಗೊಂಡ , ಪ್ರೊ ರಾಜಾರಾಮ್ ಹೆಗಡೆಯವರ ಬೌದ್ಧಿಕ ದಾಸ್ಯದಲ್ಲಿ ಭಾರತ ಪುಸ್ತಕವು ನಿಲುಮೆ ಪ್ರಕಾಶನದ ಚೊಚ್ಚಲ ಪುಸ್ತಕವಾಗಿದೆ.ಕಾರ್ಯಕ್ರಮದಲ್ಲಿ ನಮ್ಮೊಂದಿಗೆ ಪ್ರೊ ಎಸ್ ಎನ್ ಬಾಲಗಂಗಾಧರ್, ಪ್ರಾಧ್ಯಾಪಕರು,ಘೆಂಟ್ ವಿವಿ. ಬೆಲ್ಜಿಯಂ, ಶತಾವಧಾನಿ ಡಾ|| ರಾ.ಗಣೇಶ್ – ಬಹುಶ್ರುತ ವಿದ್ವಾಂಸರು, ಪ್ರೊ.ಪ್ರಧಾನ್ ಗುರುದತ್ – ಸಂದರ್ಶಕ ಪ್ರಾಧ್ಯಾಪಕರು,ನಾಲ್ವಡಿ ಕೃಷ್ಣರಾಜ ಒಡೆಯರ್ ಪೀಠ, ಮೈಸೊರು ವಿವಿ,ಪ್ರೊ.ರಾಜಾರಾಮ ಹೆಗಡೆ ಕುವೆಂಪು ವಿವಿ ಉಪಸ್ಥಿತರಿದ್ದರು.ಗಣ್ಯರು ದೀಪಬೆಳಗಿಸುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಶ್ರೀಮತಿ.ಅಶ್ವಿನಿ ದೇಸಾಯಿಯವರ ನಿರೂಪಣೆಯ ಸೂತ್ರದಲ್ಲಿ ಮುಂದುವರೆದ ಕಾರ್ಯಕ್ರಮವು ಶ್ರೀಮತಿ. ಉಷಾ ಐನಕೈರವರ ಪ್ರಾರ್ಥನಾಗೀತೆ,ಶ್ರೀ.ರಮಾನಂದ ಐನಕೈ ರವರ ಸ್ವಾಗತ ಭಾಷಣಗಳನ್ನೊಳಗೊಂಡಿತ್ತು. ರಮಾನಂದ ಐನಕೈ ರವರು, “ಈ ಕಾರ್ಯಕ್ರಮವು, ಆಂದೋಲನವೊಂದಕ್ಕೆ ಮುನ್ನುಡಿ” ಎಂದು ನುಡಿದರು. ಇದಾದನಂತರ, ಶ್ರೀ. ರಾಕೇಶ್ ಶೆಟ್ಟಿಯವರು, ನಿಲುಮೆ ಫೌಂಡೇಶನ್ ನ ವಿಚಾರ ಹಾಗು ಉದ್ದೇಶಗಳ ಸ್ಥೂಲ ಪರಿಚಯ ಮಾಡಿಕೊಟ್ಟರು. ತರುವಾಯ, ನಿಲುಮೆ ಪ್ರಕಾಶನದ ಚೊಚ್ಚಲ ಪುಸ್ತಕ “ಬೌದ್ಧಿಕ ದಾಸ್ಯದಲ್ಲಿ ಭಾರತ”ದ ಬಿಡುಗಡೆಯನ್ನು ಪ್ರೊ. ಪ್ರಧಾನ ಗುರುದತ್ ರವರು ನೆರವೇರಿಸಿಕೊಟ್ಟರು. ಪುಸ್ತಕ ಬಿಡುಗಡೆಯ ನಂತರ ಗಣ್ಯರು ತಮ್ಮ ಅಭಿಪ್ರಾಯಗಳನ್ನು ಮಂಡಿಸಿದರು.
ಶ್ರೀ ಗಣೇಶ್: ’ಸೆಕ್ಯುಲರಿಸಂ ಎಂಬ ಪಾಶ್ಚಾತ್ಯ ಕಲ್ಪನೆಯ ಅವತಾರವಾದ ಜಾತ್ಯಾತೀತತೆಯೆಂಬ ಹುಸಿಕರುಣೆಯ ನೀತಿಯನ್ನು ಅಲ್ಲಗಳೆಯುತ್ತಾ, ಶ್ರೀ ಬಾಲಗಂಗಾಧರ್ ಅವರ ನಿಲುವನ್ನು ಹೀಗೆ ಸಮರ್ಥಿಸುತ್ತಾರೆ, ಅವರದೇ ಕ್ರಮದಲ್ಲಿ (ಪಾಶ್ಚಾತ್ಯ)ಅವರ ಸಿದ್ದಾಂತವೆಂಬ ಹುಸಿತನವನ್ನು ಬಯಲುಮಾಡುತ್ತಿರುವ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ಭಾರತದ ಸಂಸ್ಕೃತಿಯನ್ನು ಅದರ ಮೂಲದೊಡನೆ ಪ್ರಚುರಪಡಿಸುವತ್ತ ಮಾಡುತ್ತಿರುವ ಸಾಧನೆ ಅನುಪಮವಾದದ್ದು, ಆರ್ಯ ದ್ರಾವಿಡ ಸಿದ್ಧಾಂತವನ್ನು ಹುಟ್ಟು ಹಾಕಿ ನಮ್ಮ ನಮ್ಮಲ್ಲೇ ವಿಷಬೀಜವನ್ನು ಬಿತ್ತಿದವರು ಬ್ರಿಟೀಷ್ ವಿದ್ವಾಂಸರು, ಅದನ್ನೇ ಆಧಾರವಾಗಿಟ್ಟುಕೊಂಡು ತಮ್ಮ ಬೇಳೆ ಬೇಯಿಸಿಕೊಳ್ಳುತ್ತಿರುವವರು ಈ ಸೆಕ್ಯುಲರ್ಗಳು. ಟುಪ್ಪು ಸುಲ್ತಾನನ ಮತಾಂಧತೆಯನ್ನು ಸಾಧಾರವಾಗಿ ನಿರೂಪಿಸಿದರೂ ಅವನನ್ನು ಧರ್ಮಸಹಿಷ್ಣು ಎನ್ನುವ ಮೌಢ್ಯ, ಮತ್ತು ಅವನ ಪಕ್ಕ ಅಂಬೇಡ್ಕರರನ್ನು ಕೂರಿಸುವ ಹಾಸ್ಯಾಸ್ಪದ ನೀತಿ ಇವೆಲ್ಲವೂ ಸೆಕ್ಯುಲರ್ ಗಳ ಅಪ್ರಬುದ್ಧತೆಯನ್ನು ತೋರಿಸುತ್ತವೆ. ಅಂಬೇಡ್ಕರರನ್ನು ಸರಿಯಾಗಿ ಓದಿಕೊಂಡವರಿಗೆ ಅವರ ನಿಲುವುಗಳು ಮತ್ತು ಜಾತಿಯೆಡೆಗಿನ ಅವರ ಸಿದ್ಧಾಂತಗಳ ಅನಾವರಣವಾಗುತ್ತದೆ, ಅಂಬೇಡ್ಕರರೇಕೆ ಬೌಧ್ದ ಧಮ್ಮವನ್ನು ಸ್ವೀಕರಿಸಿದರು ಎಂಬುದನ್ನು ಅವರ ಪತ್ರಗಳ ಲೇಖನಗಳ ಮೂಲಕ ಅವರೇ ಹೇಳಿದ್ದಾರೆ ಇಷ್ಟಾಗಿಯೂ ಇವರುಗಳು ಮೇಲ್ಪದರದ ಜ್ಞಾನದಿಂದ ಅವೆಲ್ಲವನ್ನೂ ಮರೆಮಾಚಿ ತಮ್ಮ ಜಾಣ್ಮೆಯನ್ನು ಮೆರೆಯುತ್ತಾರೆ. ಸನಾತನ ಪದ್ಧತಿಯ ಭಾಗವಾಗ ಬೌದ್ಧ ಜೈನ ಮತ್ತಿತರ ಪದ್ದತಿಗಳು ವಲಸೆ ಬಂದ ಶಾಸಕರ ಹಾಗೆ, ಅವುಗಳೇ ಮತ್ತೆ ಹೊಸದೊಂದು ಪಕ್ಷವನ್ನು ಸ್ಥಾಪಿಸಿದರೆ ಅವಕ್ಕೆ ಬೇರುಗಳು ಮೂಲದಿಂದ ಬೇರ್ಪಟ್ಟಿರುವುದಿಲ್ಲ.
ಕಲೆ ಮತ್ತು ಕಲಾವಿದ ಇವರುಗಳ ಸ್ವಾತಂತ್ರ್ಯ ಬಗ್ಗೆ- ಕಲೆಯನ್ನು ಬಹಿಷ್ಕರಿಸಲಾಗದು ಆದರೆ ಕಲಾವಿದನನ್ನು ಬಹಿಷ್ಕರಿಸಬಹುದು. ಕಲೆಯಲ್ಲಿ ಸ್ವತಂತ್ರ್ಯವಿದೆ ಆದರೆ ಅದನ್ನೇ ಕಲಾವಿದ ತನ್ನ ಪೂರ್ವಾಗ್ರಹಪೀಡನೆಯಿಂದ ಅಥವಾ ಕುಚೋದ್ಯಮಾಡುವುದಕ್ಕಾಗಿಯೇ ಬಳಸಿಕೊಂಡರೆ ಅದು ತಪ್ಪಾಗುವ ಅಥವಾ ವ್ಯತಿರಿಕ್ತ ಪರಿಣಾಮವನ್ನು ಬೀರಿವುದೇ ಹೆಚ್ಚು. ಕಲೆಗೆ ಸ್ವಾತಂತ್ರ್ಯವಿದೆ ಕಲಾವಿದನಿಗೂ ಇದೆ ಆದರೆ ಕಲಾವಿದನು ತನ್ನ ಸ್ವಾರ್ಥಕ್ಕಾಗಿ ಬಳಸಿಕೊಳ್ಳುವುದು ತಪ್ಪು. ಪ್ರಸ್ತುತ ಸೆಕ್ಯುಲರಿಷ್ಟರು ಎಂದು ಹೇಳಿಕೊಳ್ಳುವ ಬುದ್ದಿ ಜೀವಿಗಳು ಆಳವಾದ ಅಧ್ಯಯನವಿಲ್ಲದೆ ಸುಡುವುದು ಹರಿಯುವುದರ ಬಗ್ಗೆ ಮಾತನಾಡುತ್ತಾರೆ, ಭಗವದ್ಗೀತೆಯ ಆಳವನ್ನು ಅರಿಯದೆ ಅದನ್ನು ಸುಡುವುದು ಪ್ರಗತಿಪ್ರರತೆಯ ಲಕ್ಷಣವೇ ಎನ್ನುತ್ತಾ, ಭಗವದ್ಗೀತೆಯಲ್ಲಿ ಯಾವ ಅಧ್ಯಾಯವನ್ನು ತೆಗೆದು ಹಾಕಬೇಕು ಅಥವಾ ಸರಿಕಾಣದ್ದು ಯಾವುದು ಅದರ ಕುರಿತು ಚರ್ಚಿಸುವುದು ಬಿಟ್ಟು ಇಡೀ ಪುಸ್ತಕವನ್ನು ಸುಡುವುದು ಬಾಲಿಶ ಪ್ರವೃತ್ತಿ. ಭಗವದ್ಗೀತೆ ಜ್ಞಾನದ ನಿಧಿ ಅದನ್ನು ಹುಡುಕಿ ತೆಗೆಯಬೇಕು’ ಎಂದರು
ಪ್ರೊ ಪ್ರಧಾನ್ ಗುರುದತ್ತ: ಬಾಲಗಂಗಾಧರರವರ “Heathen in his Blindness” ಕೃತಿಯು ಪ್ರೌಢಮಟ್ಟದ್ದು ಅದನ್ನು ಅರ್ಥೈಸಿಕೊಳ್ಳುವುದು ಕಷ್ಟಸಾಧ್ಯ, ಅದನ್ನು ಸರಳ ಮಾಡುವ ಕೆಲಸವನ್ನು ಬೌದ್ಧಿಕ ದಾಸ್ಯದಲ್ಲಿ ಭಾರತ ಪುಸ್ತಕವು ಮಾಡುತ್ತಿದೆ. ಪಾಶ್ಚಾತ್ಯಕ ಕಲ್ಪನೆಯ ಮತ್ತು ಥಿಯಾಲಜಿಯ ಚೌಕಟ್ಟಿನಡಿಯಲ್ಲಿ ಹಿಂದೂ ಪದ್ದತಿಯನ್ನು ಅರ್ಥೈಸಿಕೊಳ್ಳುವುದು ಎಷ್ಟು ಅಪಾಯಕಾರಿ ಎಂಬುದಕ್ಕೆ ಕೆಲವು ಉದಾಹರಣೆಗಳನ್ನು ಈ ಪುಸ್ತಕದಲ್ಲಿ ಕೊಟ್ಟಿದೆ. ಹಿಂದೂ ಪದ್ದತಿಯ ಪದಗಳಾದ ಆತ್ಮಕ್ಕೆ Soul ಎಂತಲೂ, ಧರ್ಮಕ್ಕೆ Religion, ವೇದಗಳಿಗೆ Sacred Scripts, ಪಾಪಕ್ಕೆ Sin, ತತ್ವಕ್ಕೆ Doctrine, ನರಕಕ್ಕೆ Hell , ಶಾಸ್ತ್ರಕ್ಕೆ Law ಹೀಗೆ ತಮ್ಮದೇ ಚೌಕಟ್ಟನ್ನು ಹಿಂದೂ ಪದ್ದತಿಗೆ ಹೇರಿ ಅದನ್ನು ನಮ್ಮೆಡೆಗೆ ತೂರಿಬಿಟ್ಟ ಪಾಶ್ಚಾತ್ಯರು , ಹಿಂದೂ ಪದ್ದತಿಯನ್ನು ಅದರ ಮೂಲ ನೆಲೆಯಲ್ಲಿ ಅರಿಯಲು ಪ್ರಯತ್ನಿಸಲೇ ಇಲ್ಲ, ಈಗಿನ ಸೆಕ್ಯುಲರ್ ಗಳು ಅದೇ ಮಾತುಗಳನ್ನು ತಮ್ಮವೆಂದು ಹೇಳಿಕೊಳ್ಳುವುದು ಹಾಸ್ಯಾಸ್ಪದ. ನಾವೂ ಕೂಡ ಅವರ ಮಾತುಗಳನ್ನು ಸತ್ಯೆವೆಂದು ನಂಬುವ ಮಟ್ಟಿಗೆ ನಮ್ಮ ಬೌದ್ಧಿಕ ಪ್ರಜ್ಞೆಯ ಮೇಲೆ ಅವರ ಥಿಯಾಲಜಿಯನ್ನು ಸ್ಥಾಪಿಸಿದ್ದು ಅಚ್ಚರಿಯ ಅಂಶವೇನಲ್ಲ, ಕಾರಣ ನಾವು ಎಲ್ಲದಕ್ಕೂ ತೆರೆದುಕೊಳ್ಳುವುದೇ ಗುಣ ಹೊಂದಿದವರು, ಇದಕ್ಕೆ ಉದಾಹರಣೆಯೆಂದರೆ ಮಾಕ್ಸ್ ಮುಲ್ಲರನನ್ನು ನಾವು ಮೋಕ್ಷಮುಲ್ಲರ ಎಂದು ಪರಿವರ್ತಿಸಿದ್ದು, ಆದರೆ ಅದೇ ಮಾಕ್ಸ್ ಮುಲ್ಲರ್ ತನ್ನ ಹೆಂಡತಿಗೆ ಬರೆದ ಪತ್ರದಲ್ಲಿ ತಾನೇಕೆ ಈ ಅನುವಾದವನ್ನು ಕೈಗೊಂಡೆ ಎಂದು ಹೇಳುತ್ತಾ, ಧರ್ಮ ಪ್ರಚಾರಕ್ಕಾಗಿ ನಾನು ಈ ಅನುವಾದವನ್ನು ಕೈಗೊಂಡೆ ಎನ್ನುತ್ತಾನೆ, ಅಲ್ಲಿಗೆ ಅವರು ನೆಟ್ಟ ಬಿತ್ತಿದ ಬೀಜಗಳು ಅವರ ನೆಲದಿಂದ ತಂದ ಮಣ್ಣಿನ ಮತ್ತು ಅಲ್ಲಿ ಉತ್ಪಾದಿಸಿದ ಬೀಜಗಳೇ ಹೊರತು ಇದೇ ಮಣ್ಣಿನ ಆಳದಲ್ಲಿದ್ದ ಬೇರುಗಳಲ್ಲಿನ ಸತ್ವವನ್ನು ಹೀರಿ ಬೆಳೆದ ಗಿಡದ ಬೀಜಗಳಲ್ಲ.
ಪಾಶ್ಚಾತ್ಯರ ಕಲ್ಪನೆಯ/ಕ್ರಮದ ಮೂಸೆಯಲ್ಲಿ ಮೂಡಿಬಂದ ಹಿಂದೂಯಿಸಂ ಮತ್ತು ಅದೇ ಕ್ರಮದಲ್ಲಿ ಬೆಳೆದ ಇತಿಹಾಸವು ಅನೇಕ ಸುಳ್ಳುಗಳ ಕಂತೆಯಾಗಿದೆ. ಭಾರತದ ಇತಿಹಾಸಕಾರರು ತಮ್ಮ ಸೆಕ್ಯುಲರ್ ಧೋರಣೆಯಿಂದ ಅಥವಾ ಯಾವುದೊ ಸ್ವಾರ್ಥಸಾಧನೆಯ ದುರುದ್ದೇಶದಿಂದ ಸತ್ಯವನ್ನು ಮರೆಮಾಚಿ ಅಸತ್ಯವನ್ನೇ ವೈಭವೀಕರಿಸಿರುವುದಕ್ಕೆ ಸಾಕ್ಷಿಯಾಗಿ ಟಿಪ್ಪುವಿನ ಕತೆ, ಔರಂಗಾಜೇಬನ ಕತೆಯಿದೆ. ಇವೆಲ್ಲವನ್ನೂ ಸಾಧಾರವಾಗಿ ನಿರೂಪಿಸಿದರೂ ಒಪ್ಪಿಕೊಳ್ಲದ ಕುತ್ಸಿತ ಬುದ್ದಿಯವರು ವಿಶ್ವವಿದ್ಯಾಲಯದಲ್ಲಿರುವುದು ಶೋಚನೀಯ ಎಂದರು.
ಪ್ರೊ. ರಾಜಾರಾಮ ಹೆಗಡೆ: ಬಿಡುಗಡೆಯಾದ ತಮ್ಮ ಪುಸ್ತಕದ ಕುರಿತು ಮಾತನಾಡುತ್ತಾ ಹೆಗಡೆಯವರು ಪಾಶ್ಚಾತ್ಯರು ಕೊಟ್ಟ ಚಿತ್ರಣವನ್ನೇ ಸತ್ಯವೆಂದು ನಂಬಿ ಈಗಲೂ ಅದನ್ನೇ ಪ್ರಚಾರ ಮಾಡುತ್ತಿದ್ದೇವೆ, ಸೆಕ್ಯುಲರಿಸಂ ಭಾಗವಾದ ಅರ್ಥವಾಗದಿರುವಿಕೆ ನಮಗೀಗ ಮುಖ್ಯವಾಗಿಬಿಟ್ಟಿದೆ, ಯಾವುದು ಅರ್ಥವಾಗದ್ದೊ ಅದು ವಿದ್ವತ್ತು ಎನಿಸಿಬಿಟ್ಟಿದೆ, ಪಾಶ್ಚಾತ್ಯರು ಕಟ್ಟಿಕೊಟ್ಟ ಸೆಕ್ಯುಲರ್ ಎಂಬ ಚೌಕಟ್ಟಿನಲ್ಲಿ ಬರುವ ಅನೇಕ ವಿಷಯಗಳು ಬರೆದವನಿಗೂ ಅರ್ಥವಾಗಿರುವುದಿಲ್ಲ ಮತ್ತು ಓದಿದವನಿಗೂ ಅಥವಾಗಿರುವುದಿಲ್ಲ. , ಬರೆದವನು ತನ್ನದಲ್ಲದ ಕ್ರಮದಲ್ಲಿ ಅಭ್ಯಸಿಸಿ ಬರೆದಿರುತ್ತಾನೆ ಒದಿದವನು ಯಾವುದನ್ನು ಅರಗಿಸಿಕೊಳ್ಳಬೇಕೆಂಬ ಗೊಂದಲದಲ್ಲಿರುತ್ತಾನೆ. ಸೆಕ್ಯುಲರ್ ಅಡಿಯಲ್ಲಿ ಬರುವ ಅನರ್ಥ ಅನುವಾದಗಳನ್ನು ಉದಾಹರಣೆಯಾಗಿ ತೆಗೆದುಕೊಳ್ಳೋಣ, ಧರ್ಮ ಎಂದರೆ ನಮ್ಮಲ್ಲಿ ಕರ್ತವ್ಯ ಒಳ್ಳೆಯದು ಎಂದಾದರೆ ರಾಜಕೀಯದಲ್ಲಿ ಧರ್ಮವನ್ನು ಬೆರೆಸಬಾರದು ಎನ್ನುವ ಮಾತಿಗೆಲ್ಲಿ ಅರ್ಥವಿದೆ? ಇತ್ತೀಚೆಗೆ ಎಲ್ಲ ವೇದಿಕೆಯಲ್ಲಿ ಸೆಕ್ಯುಲರ್ ಗಳು ಅಥವಾ ಬುದ್ದಿವಂತರು ಇದನ್ನು ಹೇಳುತ್ತಿರುತ್ತಾರೆ ರಾಜಕೀಯದಲ್ಲಿ ಧರ್ಮವನ್ನು ಬೆರೆಸಬಾರದು’, ಇದು ಪಾಶ್ಚಾತ್ಯರ ಮಾತಾದ Religion should be separated with politics ಎಂಬುದರ ತುರ್ಜಿಮೆಯಷ್ಟೆ, ಅಲ್ಲಿಗೆ ಧರ್ಮ ಎಂಬುದನ್ನು ಹೇಗೆ ಅರ್ಥೈಸಿಕೊಳ್ಳಬೇಕು ಎಂಬ ಗೊಂದಲದಲ್ಲಿ ಪ್ರಜ್ಞಾವಂತ ಬೀಳುತ್ತಾನೆ, ಬಿಡುಗಡೆಯಾದ ಪುಸ್ತಕವು ಬಾಲಗಂಗಾಧರ ಅವರ ವಿಚಾರಗಳಿವೆ ಪ್ರವೇಶಿಕೆಯಾಗಿದೆ, ನಾವುಗಳು ಅವರ ವಿಚಾರಗಳನ್ನು ಮುಂದಿನ ಪುಸ್ತಕಗಳಲ್ಲಿ ಅಥವಾ ಅವರ ಮೂಲ ಪುಸ್ತಕಗಳಲ್ಲಿ ಕಾಣಬಹುದು, ಅವರ ವಿಚಾರಗಳನ್ನು ಬೌದ್ಧಿಕ ಚಳುವಳಿಯನ್ನಾಗಿಸಬೇಕಾಗಿದೆ ಎಂದರು.
ಪ್ರೊ ಬಾಲು: ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ ಯುವಕರು ಸತ್ಯವನ್ನು ತಿಳಿಯುವ ಸಂಶೋಧಿಸುವ ಕ್ರಮವನ್ನು ಅಭ್ಯಸಿಸಬೇಕಾಗಿದೆ. ಭಾತದಲ್ಲಿ, Renaissance ನಡಿಯುವ ಇನ್ನಾವ ಸಂದೇಹವೋ ನನಗಿಲ್ಲ. ಅದನ್ನು ನೆರೆವೇರಿಸುವವರು ನೀವು” ಎಂದು, ಸಭಾಂಗಣದಲ್ಲಿ ನೆರೆದಿದ್ದ ಯುವಕರನ್ನುದ್ದೇಶಿಸಿ ಹೇಳಿದರು.
ಗಣ್ಯರ ಮಾತುಗಳು ಮುಗಿದ ತರುವಾಯ ಶ್ರೀ ಸಂದೀಪ್ ಶೆಟ್ಟಿಯವರು ಆಗಮಿಸಿದ್ದ ಎಲ್ಲ ದಿಗ್ಗಜರಿಗೂ ವಂದನಾರ್ಪಣೆ ಸಲ್ಲಿಸಿದರು.
ನಿಲುಮಿಗರ ಕನಸಿನ ದಿನ ನನಸಾಗಿದ್ದು ಈ ಪುಸ್ತಕ ಬಿಡುಗಡೆಯಲ್ಲಿ, ಎಲ್ಲ ನಿಲುಮಿಗರೂ ರುಚಿಯಾದ ಭೋಜನದ ತರುವಾಯ ನಿಲುಮೆಯ ಮುಂದಿನ ಕಾರ್ಯಕ್ರಮಗಳ ಬಗ್ಗೆ ಚರ್ಚಿಸಿದರು, ಅನೇಕ ಸಲಹೆಗಳು ನಿಲುವುಗಳು ನಿಲುಮೆಯ ಮುಂದೆ ಬಂದವು, ಇವೆಲ್ಲವನ್ನೂ ಹೊತ್ತು ನಿಲುಮಿಗರು ಮುಂದಿನ ತತ್ವನಿಲುಮೆಯ ದಿನಕ್ಕೆ ಕಾಯುತ್ತಾ ಹೊರಟರು.
It was a good programme.
ಕಾರ್ಯಕ್ರಮ ಬಹಳ ಚೆನ್ನಾಗಿ ಆಯ್ತು. ಪುಸ್ತಕವೂ ಸುಂದರವಾಗಿದೆ, ಬಹಳ ವಸ್ತುನಿಷ್ಟವಾಗಿದೆ. ಮುಂದಿನ ಭಾಗಗಳಿಗಾಗಿ ಕಾಯುತ್ತೇವೆ.
ತುಂಬಾ ಇಷ್ಟಪಟ್ಟು ಬಂದಿದ್ದಕ್ಕೂ ಸಾರ್ಥಕತೆಯ ಅನುಭವ… ತುಂಬಾ ಸುಂದರವಾದ ಕಾರ್ಯಕ್ರಮ… ಪುಸ್ತಕ ಬಹಳ ಉತ್ತಮವಾಗಿದೆ….
ನಿಲುಮೆ ಪ್ರಕಾಶನ ಕನ್ನಡ ಪುಸ್ತಕ ಲೋಕದ ಒಂದು ಅತ್ಯುತ್ತಮ ಪ್ರಯತ್ನ. ಸ್ಥಾಪಿತ ಹುಸಿ ಬೌದ್ಧಿಕ ಹಿತಾಸಕ್ತಿಗಳಿಗೆ ವಿಬಿನ್ನವಾಗಿ ಯೋಚಿಸುವ ಈ ನಿಮ್ಮ ಪ್ರಯತ್ನ ಎಲ್ಲ ರೀತಿಯಿಂದ ಯಶಸ್ವಿಯಾಗಲಿ. ಈ ನಾಡಿನ ಹೆಮ್ಮೆಯ ಚಿಂತಕ ಬಾಲು ರವರ ಬರಹಗಳು ಹೆಚ್ಚು ಹೆಚ್ಚು ಎಲ್ಲ ಕನ್ನಡ ಜನತೆಗೆ ತಲುಪಲಿ. ಬಾಲುರವರ ಕ್ಲಿಷ್ಟ ಹಾಗು ಗಂಭೀರ ಚಿಂತನೆಯನ್ನು ಕನ್ನಡಕ್ಕೆ ಕೊಟ್ಟ ರಾಜಾರಾಂ ಹೆಗಡೆ ಅವರಿಗೆ ಅಭಿನಂದನೆಗಳು.