ವಿಷಯದ ವಿವರಗಳಿಗೆ ದಾಟಿರಿ

ಮಾರ್ಚ್ 6, 2015

ವೈಕುಂಠದಲ್ಲಿ ಕೋಲಾ(ಕ್ಲೋನಾ)ಹಲ-ವಿಡಂಬನಾ ಕಥೆ – ಭಾಗ ೨

‍ನಿಲುಮೆ ಮೂಲಕ

– ಸುದರ್ಶನ್ ರಾವ್

dantavillada_kathegalu_nilumeವೈಕುಂಠದಲ್ಲಿ ಕೋಲಾ(ಕ್ಲೋನಾ)ಹಲ-ವಿಡಂಬನಾ ಕಥೆ – ಭಾಗ ೧

ನಾರದರಿಗೆ ಆಶ್ಚರ್ಯ…ಸಂಬಂಧದಲ್ಲಿ ನಾನು ಕಿರಿಯ, ಬ್ರಹ್ಮನ ಮಗನಾದ ನಾನು ಇವನಿಗೆ ಮೊಮ್ಮಗನಾಗಬೇಕು. ಯಾವಾಗಲೂ ನೀನು, ತಾನು ಎಂದು ಏಕವಚನದಲ್ಲಿ ಕರೆಯುತ್ತಿದ್ದ ಇವತ್ತು ನೀವು, ನಿಮಗೆ ಎಂಬ ಬಹುವಚನ ಪ್ರಯೋಗ ಮಾಡುತ್ತಿದ್ದಾನಲ್ಲ!, ತಲೆ ಬಿಸಿ ಆಗಿರಲೇ ಬೇಕು ಎಂದು ಅವರಿಗೆ ಗೊತ್ತಾಯಿತು.

ಕಬ್ಬಿಣ ಕಾದಿರುವಾಗಲೇ ಬಡಿಯಬೇಕೆಂದು ತಮ್ಮ ಎಂದಿನ ಧಾಟಿಯಲ್ಲಿ ಹೇಳಿದರು, “ಹೇ ಭಗವಂತಾ, ಬ್ರಹ್ಮಾಂಡವೇ, ಆ ದೇವನಾಡುವ ಬೊಂಬೆಯಾಟವಯ್ಯ, ಅಂಬುಜ ನಾಭನ, ಅಂತ್ಯವಿಲ್ಲದಾತನ ತುಂಬು ಮಾಯವಯ್ಯಾ… ಈ ಲೀಲೆಯು …ಎಂದು ನಾನು ನಿನ್ನನ್ನು ಯಾವತ್ತಿನಿಂದಲೂ, ಅದೆಷ್ಟು ಬಾರಿ ಸ್ತುತಿಸಿಲ್ಲ. ಈಗ ನೋಡಿದರೆ ಭೂಮಿಯಲ್ಲಿ ಬೇರೆಯೇ ಆಟ ನಡೆದಿದೆ. ಅಲ್ಲಿ, ಆ ಭೂಮಿಯಲ್ಲಿ, ನೀನು ಸೂತ್ರ ಕಟ್ಟಿರದ, ನಿನ್ನ ರಾಗದಾ ಭೋಗದಾ ಉರುಳಲ್ಲಿ ಸಿಕ್ಕಿರದ ಅದೆಷ್ಟೋ ಬೊಂಬೆಗಳು ಅವತರಿಸಿರುವುದನ್ನು ನಾನು ಕಣ್ಣಾರೆ ಕಂಡಿದ್ದೇನೆ.ಅವು ಇವರೆಲ್ಲರ ಕಾರ್ಯವಿಧಾನಕ್ಕೆ ಕೊಡಲಿ ಪೆಟ್ಟು ಕೊಡುತ್ತಿರುವುದೂ ನೋಡಿದ್ದೇನೆ. ಇದು ಹೀಗೇ ಮುಂದುವರಿದರೆ ನನ್ನ ಈ ಹಾಡಿಗೆ ಅರ್ಥವಿಲ್ಲದೆ ಹೋಗುತ್ತದೆ. ಅದರ ಸಾಹಿತ್ಯ ಬದಲಾಯಿಸಬೇಕಾಗುವುದು. ನಾನು ಕೇವಲ ಸುದ್ದಿಗಾರನಷ್ಟೇ. ನನಗೆ ಕಾರ್ಯಕಾರಣ ಸಂಬಂಧ ತಿಳಿಯದು. ಆದರೂ ಇದು ಮಾನವರು ಕಲಿತುಕೊಂಡಿರುವ ವೈದ್ಯವಿಜ್ಞ್ನಾನದ ಕರಾಮತ್ತೆಂದು ತೋರುತ್ತಿದೆ. ಯಾವುದಕ್ಕೂ ಅಶ್ವಿನೀ ದೇವತೆಗಳನ್ನು ಕರೆಸಿ ನೋಡು” ಎಂದರು. ಯಾವತ್ತಿನಂತೆ ಅಪೂರ್ಣ ಸಲಹೆ ನೀಡಿ ಮತ್ತಷ್ಟು ಮಜಾ ಪಡೆಯುವ ನಾರದರ ಬುದ್ಧಿ ಅಲ್ಲೂ ಸುಮ್ಮನಿರಲಿಲ್ಲ,. ಈ ನಾರದ ನನ್ನ ಪಾರಮ್ಯವನ್ನೇ ಪ್ರಶ್ನಿಸಬಲ್ಲ ಸನ್ನಿವೇಶದ ಮಾತಾನಾಡುತ್ತಿದ್ದಾನಲ್ಲ. ಇದೇನಿರಬಹುದು. ಸ್ವಲ್ಪ ಮೈಮರೆತಿದ್ದಕ್ಕೆ ಏನೇನೋ ನಡೆದು ಹೋಗಿದೆ ಎಂದು ಕಿರೀಟ ತೆಗೆದು, ತಲೆ ಕೆರೆದುಕೊಂಡು ಅಶ್ವಿನೀದೇವತೆಗಳನ್ನು ಕರೆಸಿದ.

ಅವರುಗಳಿಬ್ಬರೂ ಬಂದರು. ಈ ನಡುವೆ ಕೆಲಸವಿಲ್ಲದ್ದಕ್ಕೋ ಏನೋ ಒಂದು ರೀತಿಯ ಆಲಸ್ಯ ಅವರ ಮುಖದಲ್ಲಿ ಮನೆ ಮಾಡಿತ್ತು. ದೇಹವೂ ಸ್ವಲ್ಪ ಸ್ಥೂಲವಾದ್ದು ಮುರಾರಿಯ ಗಮನಕ್ಕೆ ಬಾರದಿರಲಿಲ್ಲ. “ಏನ್ರೀ ಸಮಾಚಾರ. ಏನಾಗ್ತಿದೆ ಅಲ್ಲಿ, ಅ ಭೂಲೋಕದಲ್ಲಿ” ಎಂದು  ಕೇಳಿದ.

ಅವರು ” ದೇವಾಧಿದೇವಾ, ಮಾನವರು ಬಹಳವಾಗಿ ಮುಂದುವರಿದಿದ್ದಾರೆ. ಬಗೆ ಬಗೆಯ ಔಷಧಿಗಳನ್ನೂ, ಶಸ್ತ್ರಚಿಕಿತ್ಸಾ ವಿಧಾನಗಳನ್ನೂ ಕಂಡುಹಿಡಿದುಕೊಂಡಿದ್ದಾರೆ. ಬಹಳಷ್ಟು ಖಾಯಿಲೆಗಳಿಗೆ ಮದ್ದು ಸಿಕ್ಕಿರುವುದರ ಪರಿಣಾಮ, ಮಕ್ಕಳಿಗೆ ಖಾಯಿಲೆಯಾದಾಗ ತಾಯಂದಿರು ನಮ್ಮನ್ನು ನೆನೆಯುವುದೇ ಇಲ್ಲ. ’ಎನ್ನ ಬಿನ್ನಪ ಕೇಳೊ ಧನ್ವಂತ್ರಿ ದಯಮಾಡೊ’ ಎಂಬಿತ್ಯಾದಿ ಹಾಡುಗಳು ಅವರ ನೆನಪಿನಲ್ಲೇ ಇಲ್ಲ. ಅವರುಗಳು ಕರೆಯುತ್ತಿಲ್ಲವಾಗಿ ನಾವು ಆಕಡೆ ತಲೆ ಹಾಕದೆ ವರ್ಷಗಳೆ ಉರುಳಿಹೋದವು. ’ಬರೆಯದೆ ಓದುವನ, ಕರೆಯದೇ ಹೊಗುವನ ಬರಿಗಾಲಿನೋಲ್ ತಿರುಗುವನ ಹಿಡಿದು’ ಎಂಬ ವಚನವೇ ಇದೆಯಲ್ಲ. ನಾವಾದರೂ ಏನು ಮಾಡಬಹುದು. ಎಲ್ಲ ನಿನ್ನ ನಿಯಾಮಕವೇ ಇರಬಹುದೆಂದು ನಾವು ಸುಮ್ಮನಿದ್ದೆವು’” ಎಂದು ಹೇಳಿ ತಮ್ಮ ಬೆನ್ನ ಮೇಲಿನ ಭಾರ ಇಳಿಸಿಕೊಂಡರು.!

ಈಗ ಬಂದಿರುವ ಹೊಸ ಸಮಸ್ಯೆಯನ್ನು ಅವರಿಗೆ ವಿವರಿಸಿ,ಈಗಿಂದೀಗಲೇ ಭೂಮಿಗೆ ತೆರಳಿ ಮಾನವರೂಪದಲ್ಲಿದ್ದು,ಅವರ ಎಲ್ಲ ಕಾರ್ಯಕಲಾಪಗಳನ್ನೂ, ಈ ಎಲ್ಲ ಅಯೋಮಯವಾಗಿರುವ ಪರಿಸ್ಥಿತಿಯ ಕಾರ್ಯಕಾರಣ ಸಂಬಂಧಗಳನ್ನೂ ಕೂಲಂಕುಷವಾಗಿ ವಿಶ್ಲೇಷಿಸಿ ತಂದು ತನಗೆ ಕರಾರುವಾಕ್ ವರದಿ ಒಪ್ಪಿಸಬೇಕೆಂದು ಆಜ್ಞಾಪಿಸಿ ಕಳಿಸಿದ. ಹಿಂದೆ ಸಂಜೀವಿನಿ ವಿದ್ಯೆ ಕಲಿಯಲೆಂದು ದೈತ್ಯ ಗುರು ಶುಕ್ರಾಚಾರ್ಯನ ಬಳಿಗೆ ಹೋದ ದೇವಗುರು ಬೃಹಸ್ಪತಿಯ ಮಗ ಕಚ ಅಲ್ಲಿ ದೇವಯಾನಿಯ ಪ್ರೇಮಪಾಶದಲ್ಲಿ ಸಿಕ್ಕು , ಪ್ರೇಮ ನಿಭಾಯಿಸದೆ ಅವಳಿಂದ ದೂರವಾಗಿ, ಮತ್ತೆ ಶಾಪಕ್ಕೆ ತುತ್ತಾಗಿ ಕೈಗೆ ಬಂದದ್ದು ಬಾಯಿಗೆ ಬರದಂತೆ ಆದಹಾಗೆ ಮಾಡಿಕೊಳ್ಳಬಾರದೆಂದೂ, ಹೆಣ್ಣು ಹೊನ್ನುಗಳ ಜೇನಿನ ಜೇಡರಬಲೆಯನ್ನು ನೇಯುವುದರಲ್ಲಿ ಮನುಷ್ಯರು ದಾನವರನ್ನೂ ಮೀರಿಸುವವರಾಗಿದ್ದಾರೆಂದೂ, ಯಾವ ಅವಘಡದಲ್ಲೂ ಸಿಲುಕದಂತೆ ಜಾಗ್ರತೆಯಿಂದ ಜಾಗರೂಕರಾಗಿ ನಿಭಾಯಿಸಿಕೊಂಡು ಬರಬೇಕೆಂಬ ಎಚ್ಚರಿಕೆಯನ್ನು ಕೊಡೊವುದನ್ನು ಮರೆಯಲಿಲ್ಲ.

ಅಶ್ವಿನೀ ದೇವತೆಗಳು ಅವಳಿ -ಜವಳಿ ವಿಜ್ಞ್ನಾನಿಗಳ ರೂಪದಲ್ಲಿ ಇಳೆಗಿಳಿದು ಜೀವ ವಿಜ್ಞ್ನಾನ ಪ್ರಯೋಗಶಾಲೆಯೊಂದರಲ್ಲಿ ತಮ್ಮ ಅಪ್ರತಿಮ ಪ್ರತಿಭೆ ಪ್ರದರ್ಶಿಸಿ ಕೆಲಸಕ್ಕೆ ಸೇರಿದರು. ದಕ್ಷತೆಯಿಂದ ಕಾರ್ಯ ನಿರ್ವಹಿಸಿ ಎಲ್ಲ ಒಳಮರ್ಮ ತಿಳಿದು ದಿಗ್ಭ್ರಮೆಗೊಂಡರು. ಬ್ರಹ್ಮನನ್ನು ಹೊರತು ಪಡಿಸಿದರೆ ಈ ಪ್ರಪಂಚದ ಸೃಷ್ಟಿಗೆ ಕೈಹಾಕಿದವನು ವಿಶ್ವಾಮಿತ್ರ ಮಾತ್ರನಾಗಿದ್ದ. ಅವನನ್ನು ಆ ಕೆಲಸದಿಂದ ವಿಮುಖಗೊಳಿಸಿದ ಇಂದ್ರ ತನ್ನ ಸ್ವರ್ಗಾಧಿಪತ್ಯವನ್ನು ಅನನ್ಯವಾಗಿ ಉಳಿಸಿಕೊಂಡಿದ್ದ. ಈಗ ನೋಡಿದರೆ ಒಬ್ಬಿಬ್ಬರಲ್ಲ ಎಷ್ಟೋ ಜನಗಳು ತಾವೇ ವಿಶ್ವಾಮಿತ್ರರಾಗುವ ಹವಣಿಕೆಯಲ್ಲಿದ್ದಾರೆ.! ನೇರವಾಗಿ ವೈಕುಂಠಕ್ಕೆ ನಡೆದರು.

ವಿಷ್ಣು ಲಗುಬಗೆಯಿಂದ ಬರಮಾಡಿಕೊಂಡ. ಆದಿಶೇಷ, ತನ್ನ ಬಾಲವನ್ನು ಎಳೆದು ಅವರಿಬ್ಬರಿಗೂ ಕುಳಿತುಕೊಳ್ಳಲು ಆಸನವನ್ನಾಗಿ ಮಾಡಿಕೊಟ್ಟ. ಅವರು ಕುಳಿತು ಸುಧಾರಿಸಿಕೊಂದು ಹೇಳತೊಡಗಿದರು, “ದೇವಾಧಿದೇವಾ.. ನೀನೇಕೆ ಇಷ್ಟುದಿನ ಈ ಮನುಷ್ಯರಿಗೆ ಲಂಗು ಲಗಾಮಿಲ್ಲದೆ ಬಿಟ್ಟುಬಿಟ್ಟೆ? “ಎಂದು ಕೇಳಿದರು

ವಿಷ್ಣುವಿನ ಕೋಪ ನೆತ್ತಿಗೇರಿತು. “ಎಲ್ಲಾ ನಾನೇ ಮಾಡಿದರೆ ನಿಮಗೆಲ್ಲ ದೇವತೆಗಳ ಸ್ಥಾನ ಯಾಕೆ ಕೊಡಬೇಕ್ರಯ್ಯಾ? ನನ್ನನ್ನೇ ದೂಷಿಸುತ್ತೀರಲ್ಲ. ನೀವುಗಳು ಎಚ್ಚರಿಕೆಯಿಂದ ಗಸ್ತು ತಿರುಗಿ ವಿಷಯ ಸಂಗ್ರಹಿಸಿ ನನಗೆ ತಂದರಲ್ಲವೇ ನಾನು ಅದಕ್ಕೆ ತಕ್ಕಂತೆ ಸೂಕ್ತ ನಿರ್ಧಾರಗಳನ್ನು ತೆಗೆದುಕೊಳ್ಳುವುದು. ಸಾವಿರಾರು ವರ್ಷಗಳಿಂದ ನಿಮ್ಮಗಳ ಸುಳಿವೇ ಇಲ್ಲ.ಭೂಲೋಕದ ದೇವಸ್ಥಾನಗಳಲ್ಲಿ ಪೂಜೆ ಪುನಸ್ಕಾರಗಳು ಭರದಿಂದ ನಡೆದು, ನನ್ನ ಹುಂಡಿಗಳು ತುಂಬುತ್ತಿರುವುದರಿಂದ ನಾನೂ ಧರ್ಮ ಇರಬಹುದೆಂದು ಸುಮ್ಮನೆ ದೀರ್ಘ ವಿಶ್ರಾಂತಿಯಲ್ಲಿದ್ದೆ. ಸರಿ ಈಗ ನೀವು ತಿಳಿದುಬಂದ ವಿಷಯವೇನು ಅದನ್ನು ಮೊದಲು ಹೇಳಿ ” ಎಂದ.

ಅಶ್ವಿನಿಗಳು ಗಂಟಲು ಸರಿ ಮಾಡಿಕೊಂಡು ಹೇಳಲುಪಕ್ರಮಿಸಿದರು. “ದೇವಾ ಎಲ್ಲಿಂದ ಹೇಗೆ ಶುರು ಮಾಡಬೇಕೆಂದು ತೋರುತ್ತಿಲ್ಲ. ಸರಿ ಇಲ್ಲಿ ಕೇಳು, ಈ ಎಲ್ಲ ಅವಾಂತರದ ಮೂಲ ಮನುಷ್ಯರು ವಿಶ್ವಾಮಿತ್ರರಂತೆ ವಿಶ್ವ ಸೃಷ್ಟಿಯ ಸಾಹಸಕ್ಕೆ ಕೈಹಾಕುತ್ತಿರುವುದೇ ಆಗಿದೆ. ಇರುವ ಪ್ರಾಣಿ ಪಕ್ಷಿಗಳನ್ನು ಕೊಂದುಹಾಕುತ್ತಿದ್ದಾರೆ. ಭೂದೇವಿ ಹೇಳಿದಂತೆ ಹಣ ಐಷಾರಾಮಕ್ಕಾಗಿ ಏನೆಲ್ಲವನ್ನೂ ಮಾಡುತ್ತಿದ್ದಾರೆ. ತಾವಿದ್ದಲ್ಲಿಯೇ ಸ್ವರ್ಗ ಸೃಷ್ಟಿಯ ಹವಣಿಕೆಯಲ್ಲಿದ್ದಾರೆ. ಸತ್ತು ಹೇಳ ಹೆಸರಿಲ್ಲದಂತೆ ನಶಿಸಿ ಹೋಗಿರುವ ಜೀವಿಗಳನ್ನೂ ಭೂ ಗರ್ಭದಿಂದ ಹೊರಗೆಳೆದು ಅವುಗಳ ಪಳೆಯುಳಿಕೆಗಳಿಂದಲೇ ಮರುಸೃಷ್ಟಿಸುವ ದುಸ್ಸಾಹಸಕ್ಕೆ ಕೈಹಾಕಿದ್ದಾರೆ. ಇದೆಲ್ಲಕ್ಕೂ ಕಳಶಪ್ರಾಯವೆಂಬಂತೆ ರಕ್ತಾಬೀಜಾಸುರನ ತೆರದಲ್ಲಿ ತಾವೇ ಅಭಿವೃದ್ಧಿ ಪಡಿಸಿಕೊಂಡಿರುವ ತಾಂತ್ರಿಕ ಕೌಶಲ್ಯಗಳನ್ನು ಉಪಯೋಗಿಸಿಕೊಂಡು ಜೀವಕೋಶಾಸುರರಾಗಿ ಮೆರೆಯಲು ಹೊರಟಿದ್ದಾರೆ. ಬ್ರಹ್ಮದೇವರ ವರವೋ,ಇಲ್ಲಾ ಶಂಕರನ ಅನುಗ್ರಹವೋ ತಿಳಿಯದು. ಅವರ ಈ ಕಾರ್ಯ ನೋಡಿದರೆ ನಮಗೇಕೋ ಅನುಮಾನ. ಈ ಎಲ್ಲಾ ಬ್ರಹ್ಮ ರುದ್ರಾದಿ ದೇವಾನುದೇವತೆಗಳ ಪರಿಪಾಟಲುಗಳಷ್ಟೂ ಮನುಷ್ಯರ ಈ ಕ್ರಿಯೆಯಿಂದಲೇ ಉದ್ಭವವಾಗಿರುವುದು. ಅವರನ್ನು ಹುಲುಮಾನವರೆಂದಾಗಲೀ, ನರಜಂತುಗಳೆಂದಾಗಲೀ ಕರೆಯುವುದು ಕಷ್ಟಕರವಾಗುವುದು ನೋಡು” ಎಂದಂದು ನಿಲ್ಲಿಸಿದರು.

ವಿಷ್ಣುವು ತಲೆದೂಗುತ್ತಾ,, ಅವರು ಈ ದುಸ್ಸಹಸಕ್ಕೆ ಕೈಹಾಕಿದ್ದ್ದಾದರೂ ಹೇಗೆ, ಅವರಿಗೆ ಈ ಉಪಾಯಗಲೆಲ್ಲ ಹೇಗೆ ಹೊಳೆಯಿತು,ಅವರು ಇವುಗಳನ್ನು ಸಾಧಿಸುತ್ತಿರುವ ವಿಧಿ ವಿಧಾನಗಳೇನು ವಿವರಿಸುವಂಥವನಾಗು ಎಂದು ಅಪ್ಪಣೆ ಕೊಡಿಸಿದನು.

“ಅನಿರುದ್ಧನೇ, ನಾವು ಈಗ ಹೇಳುವುದನ್ನು ಕೇಳಿ, ಯಾವುದೋ ಕಪೋಲ ಕಲ್ಪಿತ ಕಥೆ ಹೇಳುತ್ತಿದ್ದೇವೆಂದು ನಮ್ಮನ್ನು ದೂರಬೇಡ. ಊಹಿಸಲಸದಳ ರೀತಿಯಲ್ಲಿ ಅವರು ಕಾರ್ಯ ಪ್ರವೃತ್ತರಾಗಿದ್ದಾರೆ. ವಿಶ್ವಾಮಿತ್ರನಾದರೋ ತನ್ನ ತಪೋ ಬಲದಿಂದ ವರವನ್ನು ಪಡೆದಿದ್ದ. ಅವನು ಕಲಿತ ವಿದ್ಯೆ ಅವನಿಗಷ್ಟೆ ಸೀಮಿತವಾಗಿತ್ತು. ಇಲ್ಲಿ ಹಾಗಲ್ಲ.ಒಮ್ಮೆ ಕರಗತವಾದರೆ ಹಲವರು ಅದನ್ನು ಕಲಿಯಬಹುದಾಗಿದೆ.ಅವರ ಈ ಎಲ್ಲ ಕೈಂಕರ್ಯಕ್ಕೆ ತ್ರಿಮೂರ್ತಿಗಳಾದ ನೀವು ಹಾಗೂ ನಿಮ್ಮ ಪತ್ನಿಯರೇ ಪ್ರೇರಣೆಯಂತೆ. ಅವರಿಗೆ ಈ ಎಲ್ಲ ಯೋಚನೆಗಳೂ ಪುರಾಣಗಳ ಮುಲಕವೇ ಬಂದವಂತೆ. ಅವರು ನಡೆಸುತ್ತಿರುವ ಈ ಕ್ರಿಯೆಗೆ ತದ್ರೂಪುತಳಿ ಸೃಷ್ಟಿಯೆಂದು ಕರೆಯಬಹುದು- ಅಂದರೆ, ರಕ್ತಬೀಜಾಸುರನ ಪ್ರತಿ ಹನಿ ರಕ್ತಕ್ಕೂ ಅವನಂತೆಯೇ ಇದ್ದ ರಾಕ್ಷಸ ಹುಟ್ಟುವಂತೆ, ಈ ಮಾನವರು ತಮ್ಮ ದೇಹದ ಜೀವಕೋಶವೊಂದನ್ನು ತೆಗೆದು ಅದನ್ನು ಸಂಸ್ಕರಿಸಿ, ಅದರಿಂದ ತಮ್ಮಂತೆಯೇ ಇರಬಲ್ಲ ಜೀವಿಯೊಂದರ ಸೃಷ್ಟಿಮಾಡಲು ಕೈಹಾಕುತ್ತಿರುವುದೇ ಇವೆಲ್ಲಾ ಅವಗಢಗಳಿಗೆ ಕಾರಣ. ಇದಕ್ಕೆ ಅವರು ಠೀವಿಯಿಂದ ”ಕ್ಲೋನಿಂಗ್” ಎಂದು ಕರೆಯುತ್ತಿದ್ದಾರೆ. ನಿನ್ನ ನಾಭಿಯಿಂದ, ಅಂದರೆ ಅಗಾಧ ಸಾಧ್ಯತೆಗಳಿರಬಲ್ಲ ಜೀವಕೋಶಗಳನ್ನು ಹೊಂದಿರುವ ಹೊಕ್ಕುಳುಬಳ್ಳಿಯಿಂದ ಬ್ರಹ್ಮ ಹುಟ್ಟಿದ್ದೂ, ಪಾರ್ವತಿಯ ಮೈ ಮಣ್ಣಿನಿಂದ ಗಣೇಶ ಹುಟ್ಟಿದ್ದೂ, ವಿಶ್ವಾಮಿತ್ರಸೃಷ್ಟಿಯ ಸಾಧ್ಯತೆಯ ಕಥೆಯೂ, ರಕ್ತ ಬೀಜನ ಕಥೆಯೂ ಅವರಿಗೆ ಸ್ಫೂರ್ತಿಯಂತೆ. ಇದೇ ಕಾರಣಕ್ಕೆ ಬ್ರಹ್ಮನ ಲೆಕ್ಕಕ್ಕೆ ಸಿಗದ, ಯಮಧರ್ಮನ ಪಾಶಕ್ಕೆ ಮಣಿಯದ, ಚಿತ್ರಗುಪ್ತನ ಕರ್ಮಾವಳಿಯ ತಾಳ ಮೇಳ ತಪ್ಪಿಸುತ್ತಿರುವ, ಭೂ ಸಂಪತ್ತಿನ ನಾಶಕ್ಕೂ, ಭೂ ದೇವಿಯ ಕ್ಲೇಶಕ್ಕೂ ಕಾರಣವಾದ ಜೀವಿಗಳ ಸೃಷ್ಟಿಯು ಭೂ ಲೋಕದಲ್ಲಿ ಆಗುತ್ತಿದೆ. ಇದರಲ್ಲಿ ಮನುಜಮಾತ್ರರು ಪೂರ್ತಿ ಸಫಲರಾಗಿದ್ದರೆ ಎಂದಲ್ಲ. ಇದು ಇನ್ನೂ ನಿಧಾನವಾಗಿ ವಿಕಾಸಗೊಳ್ಳುತ್ತಿರುವ ತಂತ್ರ. ಹಾಗಾಗಿ ಅಲ್ಲಲ್ಲಿ ನಿಯಂತ್ರಣಕ್ಕೆ ಸಿಗದೆ ಕೆಲವು ಪೂರ್ತಿ ಸರಿಯಾಗಿ, ಕೆಲವು ಕುರೂಪಿಗಳಾಗಿ, ಕೆಲವು ವಿಕಾರಗಳಿಂದ ಕೂಡಿದವರಾಗಿ, ಹೇಗೋ-ಹೇಗೋ ಇರುವಂಥವರಾಗಿ, ಯಾವ ಯಾವುದೂ ಖಾಯಿಲೆ ಕಸಾಲೆಗಳಿಂದ ನರಳುತ್ತಿರುವವರಾಗಿ , ಕೆಲವು ದೀರ್ಘಾಯುಗಳಾಗಿ, ಕೆಲವು ಅಲ್ಪಾಯುಗಳಾಗಿ,ವಿವಿಧತೆ ವೈಶಿಷ್ಟ್ಯಗಳಿಂದ ಕೂಡಿದ ಜೀವಿಗಳೆಲ್ಲ ಉದಯವಾಗಿವೆ. ಈ ಜೀವಿಗಳೆಲ್ಲ ಬ್ರಹ್ಮನ ಕೈಯಿಂದ ಬಂದವರಲ್ಲವಾದ್ದರಿಂದ ಅವರುಗಳ ಲೆಕ್ಖಾಚಾರ ಬೇರೆಯೆ ಇದೆ. ಹೀಗಾಗಿ ತಲ್ಲಣ ಉಂಟಾಗಿದೆ” ಎಂದರು.

“ಅಲ್ರಯ್ಯಾ ಹೀಗೆ ತದ್ರೂಪು ತಳಿ ಸೃಷ್ಟಿ ಅನ್ನುತ್ತೀರಾ.. ಆದರೂ ಹೀಗೆ ವಿಚಿತ್ರ ರೂಪ ಗುಣಗಳು, ಅವರ ಆಯುರಾರೋಗ್ಯಗಳಲ್ಲಿ ಅಸಮತೋಲನವೂ ಇರುವುದೂ ಏತಕ್ಕೆ.ಅವರ ಲೆಕ್ಖ ಇವರಿಗೇಕೆ ಸಿಗುತ್ತಿಲ್ಲ?’” ವಿಷ್ಣು ಕೇಳಿದ.

” ಇಲ್ಲಿ ಕೇಳು ಮಾಧವ,. ಈಗ ಒಬ್ಬ ನಲವತ್ತು ವಯಸ್ಸಿನ ಗಂಡಸು ಇದ್ದಾನೆಂದಿಟ್ಟುಕೋ. ಅವನು ತನ್ನಂಥದೇ ಜೀವಿಯನ್ನು ಹುಟ್ಟುಹಾಕಲು ಹೆಣ್ಣೊಂದನ್ನು ಅರಸಿ ಹೋಗಬೇಕಾದ್ದಿಲ್ಲ. ತನ್ನ ದೇಹದ ಜೀವಕೋಶವೊಂದನ್ನು ತೆಗೆದು, ಅದನ್ನು ಪ್ರಯೋಗಶಾಲೆಗೆ ಒಯ್ದು ಅದರಿಂದ ತನ್ನಂತೆಯೇ ಇರುವ ಜೀವಿಯೊಂದನ್ನು ಪಡೆಯಬಲ್ಲ. ಇವನಂತೆಯೇ ಜೀವತಂತುಗಳನ್ನು ಹೊಂದಿರುವ ಹೊಸ ಜೀವಿಯನ್ನು ಇವನ ಮಗ ಎನ್ನುವೆಯೋ? ಅಥವಾ, ತಮ್ಮ ಎನ್ನುವೆಯೋ? ಮಗ ಎನ್ನುವುದಾದರೆ ಅದರ ಅಮ್ಮ ಯಾರು? ತಮ್ಮ ಎನ್ನುವುದಾದರೆ, ಮೊದಲ ವ್ಯಕ್ತಿಯ ಅಮ್ಮ ಇವನಿಗೆ ಅಮ್ಮ ನಾಗುವಳೋ ಇಲ್ಲಾ ಅಜ್ಜಿಯಾಗುವಳೋ? ಇವರಪ್ಪ ಅವನಿಗೇನಾಗಬೇಕು. ಹೀಗೆ ಒಂದು ಹೆಣ್ಣು ಕೂಡಾ ಗಂಡಿನ ಹಂಗಿಲ್ಲದೆ ಮಗುವನ್ನು ತನ್ನ ದೇಹದಿಂದಲೇ ಪಡೆಯಬಹುದು. ಈ ರೀತಿ ಹುಟ್ಟಿದ ಜೀವಿಗೆ ಸೋದರಿಕೆ, ಎಲ್ಲಿಂದ ಬರಬೇಕು? ಈ ರೀತಿಯ ಜಿಜ್ಞಾಸೆಗಳು ಏಳುವುದರಿಂದ ಕುಟುಂಬದ ವ್ಯವಸ್ಥೆ ಬುಡಮೇಲಾಗುತ್ತದೆ. ’ಹಿರಿಯ ನಾಗನ ನಂಜು ಕಿರಿಯ ನಾಗನ ಪಾಲು ತಂದೆ ಮಾಡಿದ ಪಾಪ ಕುಲದ ಪಾಲು’ ಎಂಬ ಗಾದೆಗೆ ಅರ್ಥ ಸಡಿಲವಾಗುತ್ತಿದೆ. ವೇದ ಸುಳ್ಳಾದರೂ ಗಾದೆ ಸುಳ್ಳಾಗದು ಎಂಬ ನಾಣ್ಣುಡಿ ಅರ್ಥ ಕಳೆದುಕೊಳ್ಳುತ್ತಿದೆ. ಅದೂ ಅಲ್ಲದೆ ಗಂಡು ಹೆಣ್ಣುಗಳ ಭಾವಪೂರ್ಣ ಮಿಲನದ ಪರಾಕಾಷ್ಠೆಯಲ್ಲಿ ಕೈಗೂಡಬೇಕಾಗಿದ್ದ ಈ ಜೀವ ಸೃಷ್ಟಿಯ ಪ್ರಕ್ರಿಯೆ ಕಾಮನೆ ಭಾವನೆಗಳಿಲ್ಲದ ನಿರ್ಜೀವ ಪ್ರಯೋಗಶಾಲೆಯಲ್ಲಿ ಆಗುತ್ತಿದೆ. ಹೀಗೆ ಬಂದ ಜೀವಿಗಳಲ್ಲಿ ಸ್ಥಾಪನೆಯಾಗಲು ಆತ್ಮಗಳು ಒಪ್ಪುತ್ತಿಲ್ಲ. ಸನಾತನಿಗಲಾದ ಅವು, ಇಂಥಾ ಜೀವಿಗಳು ತಮ್ಮ ಕಾರ್ಯಕ್ಷೇತ್ರವಲ್ಲ ಎಂದು ಹೋಗಲು ವಿರೋಧಿಸುತ್ತಿವೆ. ಹಾಗೂ ಹೋದಂಥ ಆತ್ಮಗಳು ಸಂಪೂರ್ಣ ಭ್ರಮಾಧೀನವಾಗುತ್ತಿವೆ. ಆತ್ಮವೇ ಇರದ ಜೀವಿಗಳಲ್ಲಿ ಇನ್ನು ಆತ್ಮಸಾಕ್ಷಿ ಎಲ್ಲಿಂದ ಬಂದೀತು? ಮಾತೃ ವಾತ್ಸಲ್ಯ ಇಲ್ಲದ ತಂದೆಯ ಮಾರ್ಗದರ್ಶನ ಪಡೆಯದ ಜೀವಿಗಳು ಪ್ರಯೋಗಶಾಲೆಯಲ್ಲಿ ಹುಟ್ಟುತ್ತಿರುವುದರಿಂದ ಇವು ’ಬೇವಾರ್ಸಿ’ ಜೀವಗಳಾಗಿ ಕೇವಲ ಐಹಿಕ ಸುಖಕ್ಕಷ್ಟೆ ತಮ್ಮ ಅನುಭವ ಸೀಮಿತಗೊಳಿಸಿಕೊಂಡುಬಿಟ್ಟಿವೆ.ಇದರಿಂದ ಭೂದೇವಿಯ ಕಷ್ಟ ನೂರ್ಮಡಿಗೊಂಡಿದೆ” ಎಂದರು.

“ಇವನಮ್ಮ ಅವನಿಗೇನಾಗಬೇಕು, ಇದರಪ್ಪ ಅದಕ್ಕೇನಾಗಬೇಕು? .. ನನ್ನ ತಲೆ ತಿರುಗುತ್ತಿದೆ. ಇದೊಳ್ಳೆ ತಾಯಿ-ಮಗಳನ್ನು ಮದುವೆಯಾದ ಮಗ -ಅಪ್ಪನ ಬೇತಾಳದ ಕಥೆಯಂತಿದೆಯಲ್ರಯ್ಯಾ? ಸರಿ ಈ ಜೀವ ವೈಚಿತ್ರ್ಯದ ಕಾರಣವಾದರೂ ಏನು?” ವಿಷ್ಣು ಕೇಳಿದ.

“ಅದೋ ಹೇಳಲು ಮರೆತಿದ್ದೆವು. ಈ ನಲವತ್ತು ವಯಸ್ಸಿನ ಮನುಶ್ಯನ ಜೀವಕೋಶಕ್ಕೂ ಅಷ್ಟೇ ವಯಸ್ಸಲ್ಲವೇ. ಅದನ್ನು ದೇಹದಿಂದ ತೆಗೆದು ಸಂಸ್ಕರಿಸುವಾಗ ಏನು ಬದಲಾವಣೆಗಳಾಗುವುದೋ ಅದು ಯಾರಿಗೂ ತಿಳಿದಿಲ್ಲ- ಸ್ವತಃ ಮಾನವರಿಗೂ.ಅದರ ನಿಯಂತ್ರಣ ಸಧ್ಯಕ್ಕೆ ಯಾರ ಕೈಲೂ ಇಲ್ಲ.ಹೀಗಾಗಿ ಅ ಹೊಸ ಜೀವಿಯ ಆಯಸ್ಸು ನಲತ್ವತ್ತೋ, ಐವತ್ತೋ, ಇಲ್ಲ ಯಾವುದೋ ಋಣಾತ್ಮಕ ಸಂಖ್ಯೆಯಿಂದಲೂ ಶುರುವಾಗಬಹುದು. ಇದೆಲ್ಲವೂ ಜೀವಿಯ ಜೀವಿತಾವಧಿಯನ್ನು ನಿರ್ದೇಶಿಸುವ ಜೀವತಂತುವಿನಲ್ಲಿ ಅಂದರೆ ಜೀನ್ಸ್ ಗಳಲ್ಲಿ ಆಗಬಹುದಾದ ಬದಲಾವಣೆಗಳು. ಹೀಗೆ ಗೊತ್ತು ಗುರಿ ಇಲ್ಲದ ಜೀವಿಗಳು ಯಾವಾಗಲೆಂದರೆ ಅವಾಗ ಸಾಯುವುದರಿಂದ ಯಮದೂತರ ಕೆಲಸ ಹೆಚ್ಚಾಗಿರುವುದು. ಭಯ ಭಕ್ತಿಯ ಚೌಕಟ್ಟಿಲ್ಲದೆ ಆತ್ಮರಹಿತವಾದ ಈ ಜೀವಿಗಳ ಸೂಕ್ಷ್ಮ ಸ್ವರೂಪಗಳು ಇವರನ್ನು ಆಟ ಆಡಿಸುವವು. ಅದೇ ರೀತಿ, ಸಂಸ್ಕರಣ ಪ್ರಕ್ರಿಯೆಯಲ್ಲಿ ವರ್ಣತಂತುಗಳಲ್ಲಿ ಅಂದರೆ ಕ್ರೋಮೊಸೋಮ್ ಗಳಲ್ಲಿ ಏರುಪೇರಾದರೆ ವಿಚಿತ್ರ ಸ್ವರೂಪದ ಜೀವಿಗಳು ಹುಟ್ಟುವವು. ಹೇ, ತ್ರಿವಿಕ್ರಮ, ಉಪೇಂದ್ರ, ಇಲ್ಲಿ ಕೇಳು, ಆ ನರಜಂತುಗಳು ಈ ಬೇಡದ ನ್ಯೂನತೆಗಳನ್ನು,ಬದಲಾವಣೆಗಳನ್ನು ನಿಯಂತ್ರಿಸುವಲ್ಲಿ ಯಶಸ್ವಿಯಾದರೋ, ಯೋಚಿಸಲೂ ನಮ್ಮ ಎದೆ ನಡುಗುತ್ತಿದೆ. ಆಗತಾನೆ ಹುಟ್ಟಿದ ಮಗುವಿನಿಂದ ಹಿಡಿದು, ಆಗಲೋ ಈಗಲೋ ಎನ್ನುವಂತಿರುವ ವೃದ್ಧರ ಜೀವಕೋಶಗಳನ್ನೂ ಹೆಕ್ಕಿ ತೆಗೆದು ತದ್ರೂಪು ತಳಿ ಸೃಷ್ಟಿಸಿ ನಿನ್ನನ್ನೇ ತಿಂದಾರು.” ಎಂದು ಹೇಳಿ ನಿಲ್ಲಿಸಿದರು.

ವಿಷ್ಣುವಿಗೆ ಎಲ್ಲವೂ ಅರ್ಥವಾಯಿತು. ಅಷ್ಟರಲ್ಲಿ ಕೈಲಾಸವಾಸಿಯಾದ ಈಶ್ವರ ಪಾರ್ವತಿಯೊಡನೆ ಅಲ್ಲಿಗೆ ಬಂದ ಅವನೂ ಆತಂಕಗೊಂಡಿದ್ದು ಎಲ್ಲರಿಗೂ ತಿಳಿಯಿತು. ಅವನೂ ಪಾರ್ವತಿಯೂ ಆದರ್ಶ ದಾಂಪತ್ಯಕ್ಕೆ ಮೂರ್ತರೂಪ ಕೊಟ್ಟ ದೇವಾಧಿದೇವತೆಗಳು. ಅವರು ಕೂಡಾ ಜಗಳವಾಡಿ ಮುನಿಸಿಕೊಂಡದ್ದು ಮೇಲುನೋಟಕ್ಕೇ ಕಂಡುಬಂತು. ವಿಷ್ಣು ಅವರನ್ನು ಬರಮಾಡಿಕೊಂಡು, ಇದುವರೆಗೂ ಆದ ಕಥೆ ಹೇಳಿ, ಬಂದ ಕಾರಣವೇನೆಂದು ಕೇಳಿದ.

ಪರಮೇಶ್ವರನು ಸಿಟ್ಟಿನಿಂದಲೇ ಹೇಳತೊಡಗಿದ. “ನೋಡು ವಿಷ್ಣು, ಸ್ಮಶಾನವಾಸಿಯಾದ ನನಗೆ,ನಿಜ ರೂಪದಲ್ಲಿ ಪೂಜೆ ಪುನಸ್ಕಾರಗಳಿಲ್ಲದೆ ಕೇವಲ ಲಿಂಗರೂಪದಲ್ಲಿ ಮಾತ್ರವೇ ಪೂಜೆ ಎನ್ನುವುದು ನಿನಗೆ ಗೊತ್ತೇ ಇದೆ. ಈಗ ಭೂಮಿಯಲ್ಲಿ ನಡೆಯುತ್ತಿರುವ ಬೆಳವಣಿಗೆಗಳು ಪರಂಪರಾಗತವಾಗಿ , ಎಲ್ಲ ಜೀವಿಗಳಲ್ಲೂ ಅಂತರ್ಗತವಾಗಿ ಬಂದಿರುವ ಸಂತಾನೋತ್ಪತ್ತಿಯ ನಿಯಮಗಳನ್ನು, ಪೀಳಿಗೆಯನ್ನು ಉಳಿಸಿ ಬೆಳೆಸುವ ಪ್ರಕ್ರಿಯೆಯನ್ನು ಗಾಳಿಗೆ ತೂರುತ್ತಿವೆ. ಗಂಡಾಗಲೀ, ಹೆಣ್ಣಾಗಲೀ, ಇನ್ನೊಂದು ಲಿಂಗದ ಸಂಪರ್ಕವಿಲ್ಲದೆ ಮಕ್ಕಳನ್ನು ಪಡೆಯುವುದು ಸಾಧ್ಯವಾಗಿದೆ. ಹೀಗಿದ್ದಾಗ ಪ್ರೀತಿ, ಪ್ರೇಮ, ಪ್ರಣಯ,ಮಮತೆ, ವಾತ್ಸಲ್ಯ,ತ್ಯಾಗ, -ಈ ಎಲ್ಲ ತಂತುಗಳಿಂದಾಗುತ್ತಿರುವ ಜೀವಸೃಷ್ಟಿ ನಶಿಸಿ,ಕೇವಲ ನಿರ್ಜೀವಕ್ರಿಯೆಯಿಂದ ಜನಿಸಿದ ಜೀವಿಗಳೇ ಜಗದಾದ್ಯಂತ ತುಂಬಿಹೋಗುವ ದಿನ ದೂರವಿಲ್ಲ. ಈ ಪಾಠಕ್ಕೆ ಪೀಠಿಕೆ ಹಾಕಿದ ಪಾರ್ವತಿಯನ್ನು ನಾನು ದೂಷಿಸಿದ್ದಕ್ಕೆ, ನಾನು ಕೊಡುತ್ತಿರುವ ಕಾರಣ ನಿಜವಾಗಿದ್ದಾಗ್ಯೂ ನನ್ನಮೇಲೆ ಸಿಟ್ಟಾಗಿದ್ದಾಳೆ. ಭೂಮಿಯ ಮೇಲಿನ ಗಂಡಂದಿರು ಕಾರಣವಿಲ್ಲದೆ ಸಿಟ್ಟಾಗುವ ಹೆಂಡಿರನ್ನು ಅದು ಹೇಗೆ ನಿಭಾಯಿಸುವರೋ ನನಗೆ ಇವತ್ತು ಅವರ ಕಷ್ಟ ಅರ್ಥವಾಯ್ತು. ಅದಿರಲಿ, ತ್ರಿಮೂರ್ತಿಗಳಲ್ಲಿ ಬ್ರಹ್ಮನಿಗೆ ಈಗಾಗಲೇ ಭೂಮಿಯ ಮೇಲೆ ಪೂಜೆಯಿಲ್ಲ. ಇನ್ನು ಯೋನಿ-ಲಿಂಗದ ಆಕಾರದಲ್ಲಿ ಪೂಜಿಸಲ್ಪಡುತ್ತಿರುವ ನನಗೂ ಅದೇ ಗತಿ ಎಂದು ಕಾಣುತ್ತದೆ” ಎಂದ.

ವಿಷ್ಣುವಿಗೆ ಪರಿಸ್ಥಿತಿಯ ಗಂಭೀರತೆ ಸಂಪೂರ್ಣವಾಗಿ ಅರಿವಿಗೆ ಬಂತು. ಪರಿಹಾರ ತುರ್ತಾಗಿ ಹುಡುಕಬೇಕಾಗಿತ್ತು. ಅವನ ಮುಂದಿದ್ದ ಆಯ್ಕೆಗಳನ್ನು ಅವಲೋಕಿಸತೊಡಗಿದ. ಒಂದು ಮಾನವರಿಗೆ ತಾವೇ ಕಂಡುಹಿಡಿದ ಈ ಸೃಷ್ಟಿಕಾರ್ಯವನ್ನು ಒಳ್ಳೆಯ ಉದ್ದೇಶಗಳಿಗೆ ಬಳಸುವಂಥ ಸದ್ಬುದ್ಧಿ ಕೊಡುವುದೋ, ಇಲ್ಲವೇ ಅವನ ಬೆರಳಿನಿಂದ ಅವನ ಕಣ್ಣನ್ನೇ ತಿವಿಸಿಬಿಡುವುದೋ, ಮೋಹಿನಿಯಂತೆ ಹೋಗಿ ಭಸ್ಮಾಸುರನನ್ನು ಸುಟ್ಟ್ಂತೆ ಸುಡುವುದೋ, ತಾನೇ ಈ ಕೆಲಸ ಮಾಡುವುದೋ ಇಲ್ಲಾ ಬೇರೆ ಯಾರನ್ನಾದರೂ ಕಳಿಸುವುದೋ, ಅಥವಾ ಇದೊಂದು ಹೊಸದೇ ರೀತಿಯ ಸಮಸ್ಯೆಯಾದ್ದರಿಂದ ಇದಕ್ಕೆ’ ಔಟ್ ಆಫ ದ ಬಾಕ್ಸ್ ’ ಯೋಚನೆಯಿಂದ ಹೊಸದೇ ಪರಿಹಾರ ಹುಡುಕಬೇಕೋ ಎಂದು ಚಿಂತೆಯಲ್ಲಿ ಮುಳುಗಿದವನನ್ನು ಕಂಡು ತಮ್ಮ ಭಾರವನ್ನು ವರ್ಗಾಯಿಸಿದ ಇತರ ದೇವತೆಗಳು ಹಗುರಾಗಿ ಹೊರನಡೆಯುವಲ್ಲಿ ’ಸಂಭವಾಮಿ ಯುಗೇ ಯುಗೇ’ ಎಂಬ ಉದ್ಘೋಷ ಅವರೆಲ್ಲರ ಕಿವಿಯಲ್ಲೂ ಮೊಳಗಿದಂತಾಯ್ತು.

ನಿಮ್ಮ ಅನಿಸಿಕೆ...

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Note: HTML is allowed. Your email address will never be published.

Subscribe to comments