ವಿಷಯದ ವಿವರಗಳಿಗೆ ದಾಟಿರಿ

ಮಾರ್ಚ್ 12, 2015

3

ದ್ವೇಷ ಬಿತ್ತಿದ ಲೇಖಕರು

‍ನಿಲುಮೆ ಮೂಲಕ

– ಸುದರ್ಶನ ಗುರುರಾಜ ರಾವ್

Agni Bhairappaಇತ್ತೀಚೆಗೆ ’ಅಗ್ನಿ’ ಎಂಬ ಸಂಸ್ಕೃತ ಪದದ ಹೆಸರುಳ್ಳ ಟ್ಯಾಬ್ಲಾಯ್ಡ್ ಮಾದರಿಯ ಪತ್ರಿಕೆಯೊಂದು ೧೯/೦೨ ರ ಸಂಚಿಕೆಯಲ್ಲಿ ಡಾ.ಎಸ್.ಎಲ್.ಭೈರಪ್ಪನವರ ಚಿತ್ರವೊಂದನ್ನು ಮುಖಪುಟದಲ್ಲಿಯೇ ಅಚ್ಚಿಸಿ ’”ದ್ವೇಷ ಬಿತ್ತುವ ಲೇಖಕ” ಎಂಬ ಶೀರ್ಷಿಕೆಯೊಂದಿಗೆ  ಪೂರ್ಣ ಸಂಚಿಕೆಯನ್ನೇ ಭೈರಪ್ಪನವರನ್ನು ನಿಂದಿಸಲು ಮೀಸಲಾಗಿಟ್ಟಿತು. ಆಶ್ಚರ್ಯವೆಂದರೆ ಆ ಪತ್ರಿಕೆಯ ಪ್ರತಿಗಳು ಚೆನ್ನಾಗಿ ಖಾಲಿಯಾಗಿದ್ದು, ಅದರ ನಿರ್ವಾಹಕರಿಗೆ ಸಂತೋಷ ತಂದಿತು.ಶ್ರವಣಬೆಳಗೊಳದ ಕನ್ನಡ ಮೇಳದಲ್ಲಿ ವೇದಿಕೆಯನ್ನು ಚರ್ಚೆಗೆ ವಿನಿಯೋಗಿಸದೆ ದುರ್ಬಳಕೆ ಮಾಡಿಕೊಂಡು, ಭೈರಪ್ಪನವರ ಮೇಲೆ ವಿನಾಕಾರಣ (ಅವರ ಪ್ರಕಾರ ಸಕಾರಣವೇ ಆಗಿದ್ದರೂ,ವಿಷಯಾಂತರ ಮಾಡಿದ್ದರಿಂದ ಅದೊಂದು ವಿನಾಕಾರಣ ಬೊಗಳೆ) ಹರಿಹಾಯ್ದು, ಬೊಬ್ಬಿರಿದು,ಎಗರಾಡಿ ತಮ್ಮ ನಾಲಿಗೆ ತುರಿಯನ್ನು ತೀರಿಸಿಕೊಂಡಿದ್ದ ಘನಂದಾರಿಗಳು ತಮ್ಮ ಕೈತುರಿಕೆಯನ್ನೂ ತೀರಿಸಿಕೊಳ್ಳಲು ’ಅಗ್ನಿ ’ ಪತ್ರಿಕೆಯ ಮೊರೆಹೋದರು. ಭೈರಪ್ಪ ದ್ವೇಷವನ್ನು ಅಕ್ಷರಗಳ ಬೀಜರೂಪದಲ್ಲಿ ಬಿತ್ತಲು ಡಾಕ್ಟರೇಟು ಪಡೆದ ಹಲವಾರು ಲೇಖಕರ ಜೊತೆಗೆ, ಯಾವರೇಟೂ ಇಲ್ಲದ ಇನ್ನು ಕೆಲವರು ಸೇರಿ ಇಡೀ ಸಂಚಿಕೆಯನ್ನು ಸಂಪನ್ನಗೊಳಿಸಿದರು. ಸಮಾನತೆಯ ಪ್ರತಿಪಾದಕರಾದ ಇವರುಗಳು ತಮ್ಮ ಅನಿಸಿಕೆಗಳನ್ನು ಬಿತ್ತರಿಸುವಲ್ಲಿ ತೋರಿದ ಮುಚ್ಚಟೆಯನ್ನು ವಿಭಿನ್ನ ಅಭಿಪ್ರಾಯವಿರುವ ಒಬ್ಬನೇ ಒಬ್ಬ ಲೇಖಕನನ್ನು ಆರೋಗ್ಯಕರ ಚರ್ಚೆಗೆ ಅಹ್ವಾನಿಸಲಿಲ್ಲ ಎಂಬುದು ಇವರ ಇಬ್ಬಂದಿ, ಎಡಬಿಡಂಗಿ,ಹಾಗೂ ಅಷಾಢಭೂತಿ ತನಕ್ಕೆ ಹಿಡಿದ ಕನ್ನಡಿಯಾಗಿದ್ದು ವಿಪರ್ಯಾಸ.

ಮೊದಲ ಲೇಖನ – “ಕೇಡಿನ ಕಿಡಿಯನ್ನು ಕಾಪಿಟ್ಟುಕೊಂಡ ಲೇಖಕ”- ದಲ್ಲಿ ಘೋಷಿಸಿದಂತೆ ಅಕ್ಷರವನ್ನು (ಅಷ್ಟೇಕೆ, ಇಡೀ ಸಂಚಿಕೆಯನ್ನು) ಒಂದು ಗುಂಪಿನ ಜನರು ಒಬ್ಬ ಸೃಜನಶೀಲ ಲೇಖಕನ ನಿಂದನೆಗೆ, ತಮ್ಮ ದ್ವೇಷ, ಹತಾಷೆ, ಅಸೂಯೆಗಳನ್ನು ಪ್ರಕಟಪಡಿಸಲು ಬಳಸಿದರೆ, ಅದನ್ನು ಪ್ರಶ್ನಿಸುವ ಹಕ್ಕು ಓದುಗನಿಗೆ ಇದೆ ಎಂಬ ಧೋರಣೆಯಿಂದಲೇ ಈ ಲೇಖನ ಸರಣಿಯನ್ನು ಬರೆಯುತ್ತಿದ್ದೇನೆ.ಒಬ್ಬ ಲೇಖಕ, ತಾನು ನಂಬಿದ ತತ್ವ ಆದರ್ಶಗಳನ್ನು ಆಧರಿಸಿ ಸಾಹಿತ್ಯ ರಚಿಸಿದರೆ ಮತ್ತು ಅದು ಯಶಸ್ವಿಯಾಗಿ ಜನಪ್ರಿಯವಾದರೆ ಅದರಲ್ಲೇನು ತಪ್ಪು? ಈ ಚಿಂತನೆಯ ಹಂತಕರ ಮನೋಭೂಮಿಕೆಗೆ ಅನುಸಾರವಾಗಿ ಬರೆಯಬೇಕೆಂಬ ನಿಯಮವೇನೂ ಇಲ್ಲವಲ್ಲ.ಅದಕ್ಕೆ ಸರಿಸಾಟಿಯಾದ ಸಾಹಿತ್ಯ ರಚನೆ ಈ ವಿಭಿನ್ನ ದೃಷ್ಟಿಕೋನದ ದ್ರಷ್ಟಾರರು ಏಕೆ ರಚಿಸಲು ಸಾಧ್ಯವಾಗದೆ ಹೆಣಗುತ್ತಿದ್ದಾರೆಂಬ ಪ್ರಶ್ನೆಯ ಮೂಲಕ ಮೊದಲನೆಯ  ”ಕೇಡಿನ ಕಿಡಿಯನ್ನು ಕಾಪಿಟ್ಟುಕೊಂಡ ಲೇಖಕ”   ಎಂಬ ಶೀರ್ಷಿಕೆ ಕೊಟ್ಟು ಬರೆದ ಲೇಖನದ ಮೂಲಕ ನನ್ನ ಪ್ರತಿಕ್ರಿಯೆಗಳನ್ನು ದಾಖಲಿಸುತ್ತಿದ್ದೇನೆ. ತಮ್ಮ ಕೆನ್ನಾಲಗೆಯ ಹುನ್ನಾರಿಕರು ತಮ್ಮ ಪುಸ್ತಕಗಳನ್ನೆಷ್ಟು ಮಾರಿಕೊಂಡಿದ್ದಾರೋ ನನಗೆ ತಿಳಿಯದು;ಆದರೆ ಭೈರಪ್ಪನವರ ದೂಷಣೆಯಿಂದ “ಅಗ್ನಿ”ಯ ವ್ಯಾಪಾರ ಲಾಭಕಂಡಿದ್ದಂತೂ ನಿಜ. ಶ್ರೀಹರಿಯನ್ನು ನಿಂದಿಸುತ್ತಲೇ ಕೈವಲ್ಯ ಪಡೆದ ಹಿರಣ್ಯ ಕಶ್ಯಪುವಿನಂತೆ!!.

“ಕೇಡಿನ ಕಿಡಿಯನ್ನು ಕಾಪಿಟ್ಟುಕೊಂಡ ಲೇಖಕ” ಎಂದೆನ್ನುತ್ತಾ  “ಸೇಡಿನ ಕಿಡಿಯನ್ನು ಉಗುಳಿದ ಲೇಖಕಿ”.ಈ ಲೇಖನ, ಅಲ್ಲಮನ ವಚನದೊಂದಿಗೆ ಪ್ರಾರಂಭ!

”ಅಜ್ನಾನವೆಂಬ ತೊಟ್ಟಿಲೊಳಗೆ ಜ್ಞಾನವೆಂಬ ಶಿಶುವ ಮಲಗಿಸಿ
ಸಕಲ ವೇದ ಶಾಸ್ತ್ರಗಳ ನೇಣು ಬಿಗಿದು ತೂಗಿ ಜೋಗುಳವಾಡುತ್ತಿದ್ದಾಳೆ ಭ್ರಾಂತಿಯೆಂಬ ತಾಯಿ
ತೊಟ್ಟಿಲು ಮುರಿದು,ನೇಣು ಹರಿದು ಜೋಗುಳ ನಿಂದಲ್ಲದೆ ಗುಹೇಶ್ವರನೆಂಬ ಲಿಂಗ ಕಾಣಬಾರದು”
ಎಂಬ ಉಲ್ಲೇಖ ಕೊಟ್ಟು ಅದಕ್ಕೊಂದು ಅಧಿಕೃತೆಯನ್ನು ಕೊಡುವ ಉದ್ದೇಶ ಲೇಖಕರದ್ದು. ಆದರೆ, ಅದೇ ದ್ವೇಷ ರೋಷಗಳ ನೇಣಿನ ಹಗ್ಗ ಬಿಗಿದು ಜೀಕುತ್ತಿರುವ ಅವರಿಗೆ ನನ್ನ ವಚನವೊಂದು ಭ್ರಾಂತಿಬಿಡಿಸಬಹುದೆಂದು ನನ್ನ ಲೇಖನಕ್ಕೂ ಒಂದು ಸ್ವರಚಿತ ವಚನ ಅಳವಡಿಸಿದೆ.

“ದ್ವೇಷವೆಂಬ ತೊಟ್ಟಿಲೊಳಗೆ ಲೇಖನವೆಂಬ ಶಿಶುವ ಮಲಗಿಸಿ,ಪೂರ್ವಾಗ್ರಹವೆಂಬ ನೇಣಿನ ಹಗ್ಗ ಬಿಗಿದು
ಸಕಲ ದೌರ್ಭಾಗ್ಯಕ್ಕೂ, ಓದದೆ ವೇದಗಳನ್ನು ದೂರುತ್ತಾ,
ಪರಂಪರೆಯನರಿಯದೆ ದಳ್ಳುರಿಯನೂದುತ್ತಾ ಸುಧಾರಕರಂತೆ ಸೋಗುಹಾಕಿ ಬೇಳೆ ಬೇಯಿಸಿಕೊಂಡಲ್ಲದೆ
ಬರೆದು ಬದುಕಲಾಗದವರು ಜರೆದು ಬದುಕುವ ಕಲೆಯ ಕಲಿತು ಆಡಿರ್ದ ನಾಟಕವ ಬೆರಗಿನಲೆ ನೋಡಾ ಕನ್ನಡ ಶಿಶು”

ಅಲ್ಲಮನ  ಉದ್ಧರಿಸಿ ಬರೆದ ಲೇಖನವನ್ನು ಓದುತ್ತಾ ಹೋದರೆ, ಎಲ್ಲ ಕಡೆ ಅದೇ ಹಳೆಯ ರಾಗವಾದ ವೇದ, ವೈದಿಕರು, ಶೋಷಣೆ, ಸ್ವಾರ್ಥ , ಮಹಿಳಾ ಹಕ್ಕು, ಮುಸ್ಲಿಂ ವಿರೋಧಿ, ಕೋಮುವಾದಿ, ಇತ್ಯಾದಿ,ಇತ್ಯಾದಿಗಳು ಪುಂಖಾನುಪುಂಖವಾಗಿ ಬಂದು  ಹೋಗುತ್ತವೆ. ಭೈರಪ್ಪನವರನ್ನು ಏಕಮುಖಿ ಮನಸ್ಥಿತಿಯ ಲೇಖಕ ಎಂದು ದೂರುವ ಲೇಖಕಿ ಮತ್ತವರ ಪಟಾಲಂ ಕೆಲವು ಸಂಗತಿಗಳನ್ನೂ, ವಾಸ್ತವ ಸತ್ಯಗಳನ್ನೂ ಉದ್ದೇಶಪೂರ್ವಕವಾಗಿ ಉಪೇಕ್ಷಿಸಿ ತಮ್ಮ ವಾದ ಸಮರ್ಥನೆಗೆ ಬಳಸಿಕೊಂಡಿರುವುದು ಶೋಚನೀಯ.ಎಲ್ಲಾ ಬಗೆಯ ಪರಿಸ್ಥಿತಿಗಳಿಗೆ ಕನಿಷ್ಠ ಎರಡು ಮುಖಗಳು ಇರುತ್ತವೆ. ಅವುಗಳನ್ನು ಪರಾಮರ್ಶಿಸಿ ಮುನ್ನಡೆಯಬೇಕೆಂಬ ಮೂಲಭೂತ ,ಸಾರ್ವಕಾಲಿಕ ಸತ್ಯವನ್ನು ಕಡೆಗಣಿಸಿ ತಮ್ಮ ಸಿಧ್ಧಾಂತಕ್ಕೆ ಹೊಂದುವ ವಿಷಯದ   ಅಲ್ಪ-(ಅರೆ)ಅನಾವರಣ ಮಾಡಿ ಅದನ್ನೇ ಸತ್ಯವೆಂಬು ಬಿಂಬಿಸ ಹೊರಟ ಇವರ ಹುನ್ನಾರ ಉಳಿದವರಿಗೆ ತಿಳಿಯದೆಂದೋ ಅಥವಾ ಪರಸ್ಪರ ಬೆನ್ನು ತಟ್ಟಿ ಕೆರೆದುಕೊಳ್ಳುವ ವ್ಯವಸ್ಥೆಯಲ್ಲಿ ಇದನ್ನು ಪ್ರಶ್ನಿಸುವ ಪ್ರಮೇಯ ಬಾರದೆಂದೋ ಇವರು ಭಾವಿಸಿದಂತಿದೆ.

ಜೀವಪರ ಸಾಹಿತ್ಯ ರಚನೆಗೆ ಕರೆ ಕೊಡುವ ಇವರುಗಳು ಜೀವನ ಅಥವಾ ಸಮಾಜ, ನಂಬಿಕೆ,ಭಾವನೆ,ವಿವಿಧ ಅವಷ್ಯಕತೆಗಳ ಭಿನ್ನತೆ ಮೇಳೈಸಿದ ತಾಕಲಾಟಗಳ, ಹಂದರ ಅಥವಾ ಘಟಕ ಎಂಬ ಸತ್ಯವನ್ನು ಅರಿಯದಿರುವುದು ಒಂದು ದೊಡ್ಡ ವಿಪರ್ಯಾಸ. ಮನಸ್ಸೆಂಬ ಅಜ್ಞಾನದ ತೊಟ್ಟಿಲಲ್ಲಿ ಲೇಖನವೆಂಬ ಶಿಶುವನ್ನು ಮಲಗಿಸಿ,ಪೂರ್ವಾಗ್ರಹಗಳೆಂಬ ನೇಣಿನ ಹಗ್ಗ ಬಿಗಿದು ಬರೆದಂಥ ಉದಾಹರಣೆಯಾಗಿದೆ. ಅದನ್ನು ಒಂದೊಂದಾಗಿ ನೋಡೋಣ.

ಭೈರಪ್ಪನವರ ಕೇಡಿನ ಕಿಡಿ ಅವರ ಕ್ರಿಶ್ಚಿಯನ್ ವಿರೋಧಿ ಕೃತಿಯಾದ ಧರ್ಮಶ್ರೀಯಲ್ಲೇ ಗೋಚರ ಎನ್ನುವ ಲೇಖಕಿ, ಅ ವಿರೋಧಿ ಭಾವ ಬಂದುದರ ಮೂಲವೇನೆಂದು ಹುಡುಕುವ ,ಅದನ್ನು ಈ ಚೌಕಟ್ಟಿಗೆ ತಂದು ನೋಡುವಲ್ಲಿ ಸೋಲುತ್ತಾರೆ. ಇದು ಉದ್ದೇಶಪೂರ್ವಕವಾದ ಉಪೇಕ್ಷೆ. ಮತಾಂತರಕ್ಕಾಗಿ ಈ ಮಿಶನರಿಗಳು ಯಾವ ಮಟ್ಟಕ್ಕೂ ಇಳಿಯುವ ಸತ್ಯವನ್ನು ಮರೆಮಾಚುವುದು ಜೀವಪರ ನಡವಳಿಕೆಯೇ? ಶತಮಾನಗಳಿಂದ ಹಿಂದೂ ಧರ್ಮದ ಮೇಲೆ ಅವ್ಯಾಹತ ಆಕ್ರಮಣ ನಡೆಸಿದ ಈ ಮಿಶನರಿಗಳು ಮಾಡಿದ್ದೆಲ್ಲಾ ಸರಿಯೆಂಬ ಕುರುಡು ನಂಬಿಕೆಗೆ ಜೋತುಬಿದ್ದುದಾದರೂ ಹೇಗೆ.ಧರ್ಮ ಮನುಷ್ಯನ ಮನಸ್ಸನ್ನು ಗಾಢವಾಗಿ ಪ್ರಭಾವಿಸುವ ಸಂಗತಿಯೆಂಬ ಸತ್ಯ ಈ ಲೇಖಕಿಯವರವರಿಗೇಕೆ ತಿಳಿಯಲಿಲ್ಲ?. ಅವರುಗಳ, ಸೇವೆಯ ಸೋಗಿನಲ್ಲಿ ನಡೆಸುವ ಧರ್ಮಪರಿವರ್ತನೆಯ ಪ್ರಕ್ರಿಯೆಯ ಪ್ರಾಮಾಣಿಕತೆಯನ್ನೇಕೆ ಪ್ರಶ್ನಿಸುವಲ್ಲಿ ಹಿಂದೆ ಬೀಳುತ್ತಾರೆ?

ಸರಿ, ಮಾನವೀಯ ಮೌಲ್ಯಗಳ ನಡುವೆ ಧರ್ಮಕ್ಕೆ ಸ್ಥಾನವಿಲ್ಲ ಎಂದೇ  ತಿಳಿದರೂ, ಇತರ ಮತಗಳು ಹಿಂದೂಗಳ ಮೇಲೇಕೆ ಆಕ್ರಮಣಮಾಡಬೇಕು ಹಾಗೂ ಅದನ್ನು ನಾವು ಏಕೆ ತಾಳಿಕೊಳ್ಳಬೇಕು ಎಂಬ ಪ್ರಶ್ನೆಗೆ ಇವರಲ್ಲಿ ಉತ್ತರವಿದೆಯೇ? ತಾನು ಧರ್ಮಕ್ಕೆ ಜೋತುಬೀಳದಿದ್ದರೇನಂತೆ, ಅದನ್ನು ನಂಬುವ ಮನಸ್ಸುಗಳನ್ನು ಗೌರವಿಸುವ ಕನಿಷ್ಟ ಸೌಜನ್ಯ ಇವರಿಗೇಕೆ ಇಲ್ಲ. ಮಿಶನರಿಗಳು ಶತಮಾನಗಳಿಂದ ನಡೆಸುತ್ತಾ ಬರುತ್ತಿರುವ ಸುಳ್ಳು ಪ್ರಚಾರ, ಮಿಥ್ಯಾ ಇತಿಹಾಸ, ಅವ್ಯವಹಾರ, ದೇಶದ್ರೋಹಿ ಕೆಲಸಗಳು ಇವರ ಮೂಗಿಗೆ ವಾಸನೆಯನ್ನೇಕೆ ಹೊಡೆಸುವುದಿಲ್ಲ? ಬಹುಸಂಖ್ಯಾತ ಪರಿವರ್ತಿತ ಕ್ರಿಶ್ಚಿಯನ್ನರೇ ತುಂಬಿರುವ ನಾಗಾಲ್ಯಾಂಡ್.ತ್ರಿಪುರಾ, ಅರುಣಾಚಲ ಪ್ರದೇಶಗಳಲ್ಲಿ ಈ ಚರ್ಚು, ಮಿಶನರಿಗಳು ಶಾಮೀಲಾಗಿ ಹಿಂದೂ ಜನಗಳ ಒಕ್ಕಲೆಬ್ಬಿಸುತ್ತಿರುವ,ಅವರ ಮೇಲೆ ನಡೆಸುತ್ತಿರುವ ದೌರ್ಜನ್ಯದ ಅರಿವಿಲ್ಲದಂತೆ ಜಾಣಕುರುಡು ಪ್ರದರ್ಶಿಸುವುದೇಕೆ ಎಂಬ ಪ್ರಶ್ನೆಗೆ ಉತ್ತರವಿದೆಯೇ? ಮಾನಸಿಕವಾಗಿ ತಯಾರಿ ಇಲ್ಲದ ಕುಟುಂಬವೊಂದು ತುರ್ತು ಅವಶ್ಯಕತೆಗಳ ಸಲುವಾಗಿ ಧರ್ಮಪರಿವರ್ತನೆ ಮಾಡಿಕೊಳ್ಳಬೇಕಾಗಿ ಬರಬೇಕಾದ ಪರಿಸ್ಥಿತಿಯಲ್ಲಿ ಅವರುಗಳ ತಾಕಲಾಟ ಮಾನವೀಯ ಸಮಸ್ಯೆ ಅಲ್ಲವೇ? ಅದು ಸಾರ್ವಕಾಲಿಕ ಸಮಸ್ಯೆ ಅಲ್ಲವೇ? ಅಂತಹ ಜನಗಳು ನಮ್ಮಲ್ಲಿ ಇಲ್ಲವೇ?ಇದ್ದರೆ ಅವರು ಮನುಷ್ಯರಲ್ಲವೇ? ಇಂತಹ ಪ್ರಶ್ನೆಗಳನ್ನು ಕೇಳುತ್ತಾ ಬೆಳೆಯುವ ಭೈರಪ್ಪನವರ ಕಾದಂಬರಿಗಳು ಸರ್ವಕಾಲಕ್ಕೂ ಸಲ್ಲುತ್ತವೆ. ಜಾಣಕುರುಡರ ಬರಹಗಳು ಬುಟ್ಟಿ ಸೇರುತ್ತವೆ!!

ಗೋಮುಖ ವ್ಯಾಘ್ರ ಮಿಶನರಿಗಳ ಪ್ರಾಮಾಣಿಕತೆಯನ್ನು ಪ್ರಶ್ನಿಸಿದ, ಧರ್ಮಶ್ರೀಯನ್ನು ಕೋಮುವಾದಿ ಎಂದು ಜರೆಯುವ ಈ ಜನಗಳು, ತಾವೂ ಗೋಮುಖ ವ್ಯಾಘ್ರ ಎಂದು ಅನಾವರಣಗೊಳಿಸಿಕೊಂಡದ್ದಲ್ಲದೇ ಕಂತೆಗೆ ತಕ್ಕ ಬೊಂತೆ ಎಂಬ ಗಾದೆಯನ್ನು ಪ್ರತಿನಿಧಿಸುತ್ತವೆ.

ಇನ್ನು ಅವರಣದಲ್ಲಿ ಸುಳ್ಳುಗಳ ಸರಮಾಲೆಯನ್ನೇ ಹೆಣೆದು ಮುಸ್ಲಿಂ ವಿರೋಧಿ ಎಂಬ ಬಿರುದು ಪಡೆದರು ಎಂಬುದು ಲೇಖಕಿಯವರ ಅಂಬೋಣ.ಭೈರಪ್ಪನವರು ತಮ್ಮ ಈ ಅಪರೂಪದ ಕಾದಂಬರಿಯಲ್ಲಿ ಸುಮಾರು ಪುಟಗಳಷ್ಟು ರೆಫ಼ೆರೆನ್ಸ್ ಕೊಟ್ಟು ಓದಿಕೊಳ್ಳಿ ನಂತರ ಪ್ರಶ್ನಿಸಿ ಎಂದು ಹೇಳಿದ್ದಾರೆ. ಅದರೆ ಈ ಪ್ರಗತಿಪರರು ಅದನ್ನು ಓದುವ ದುಸ್ಸಾಹಸಕ್ಕೆ ಕೈಹಾಕದೆ ಕೇವಲ ಕಾದಂಬರಿಯ ವಸ್ತುವಿಷಯವನ್ನು ಪರಿಗಣಿಸಿ ಅದನ್ನು ಸತ್ಯಾಸತ್ಯತೆಯನ್ನು ಒರೆಗೆ ಹಚ್ಚದೆ ತಮ್ಮ ಪೂರ್ವಾಗ್ರಹ ತುಂಬಿದ ಕಣ್ಣುಗಳಿಂದ, ಮನಸ್ಸುಗಳಿಂದ ಅವಲೋಕಿಸಿ ಫ಼ರ್ಮಾನು ಹೊರಡಿಸುತ್ತಾರೆ- ಅದು ಕೋಮುವಾದೀ ಪುಸ್ತಕ- ಎಂಬುದಾಗಿ.

ಇವರ ಜ್ಞಾನವೆಲ್ಲವೂ (ಇರುವಷ್ಟು) ನೆಹರೂ ಮತ್ತವರ ಪಟಾಲಂ ಬರೆಯಿಸಿದ ಎಡಪಂಥೀಯ, ಸುಳ್ಳು ಸರಮಾಲೆಗಳಿಂದ ಆವೃತವಾದ ಇತಿಹಾಸದ ಪುಸ್ತಕಗಳಿಂದ ಬಂದಿದ್ದು ಎಂಬುದನ್ನು ಅಲ್ಲಗಳೆಯುವ ಧಾರ್ಢ್ಯತೆ ಇಲ್ಲ ಎಂದುಕೊಳ್ಳುತ್ತೇನೆ.ಮಜುಂದಾರ್ ಅವರು ಬರೆದ ಸತ್ಯಕ್ಕೆ ಸಮೀಪವಾದ ಇತಿಹಾಸವನ್ನು ಒಪ್ಪಿಕೊಳ್ಳದೆ ತಮ್ಮದೇ ಮೂಗಿನ ನೇರಕ್ಕೆ ಬರೆಸಿದ  ಮಿಥ್ಯವನ್ನೇ ಸತ್ಯವೆಂದರಿದು ಇತರರ ಮುಖಕ್ಕೆ ಮಸಿಬಳಿಯುವ ಮೂರ್ಖತನಕ್ಕೆ ಏನೆಂದು ಹೇಳಬೇಕು? ಕಳೆದ ಶತಮಾನದಲ್ಲಿ ಆದ ಸಂಶೋಧನೆಗಳಿಂದ ಈ ಪಟಾಲಂ ಬರೆದ ಕಥೆಗಳು ಸುಳ್ಳೆಂದು ಸಾಬೀತಾಗುತ್ತಿದ್ದರೂ, ಬೇರುಸತ್ತ ಮರದ ಬಿಳಿಲಿಗೆ ಜೋತುಹಾಕಿಕೊಂಡು ಜನರ, ಸಮಾಜದ ಭಾವನೆಗಳ ಮೇಲೆ ಜೋಕಾಲಿಯಾಡುವ ಇವರ ಕುಚೇಷ್ಟೆ, ಇಬ್ಬಂದಿತನ,ಅವಕಾಶವಾದೀ ಧೋರಣೆಯನ್ನು ಅನಾವರಣಗೊಳಿಸಿ ಬರೆದ ಕಾದಂಬರಿ ಇವರಿಗೆ ಕೋಮುವಾದಿಯಾದದ್ದು ಹೇಗೆ.ಇವರು ಕಣ್ಣಾಮುಚ್ಹಾಲೆ ಆಡುವ ಚಿನ್ನಾಟವನ್ನು ಆವರಣ ಎಂದು ಹೆಸರಿಸಿದ್ದು ನೂರಕ್ಕೆ ನೂರು ಸಮಂಜಸ ಎಂಬುದು ಮತ್ತೆ ಮತ್ತೆ ಸಾಬೀತಾಗಿದೆ.

ಇಂದು ಭಾರತದಲ್ಲಿ ಮುಸ್ಲಿಮರಿಗೆ ಇರುವ ಸ್ವಾತಂತ್ರ,ಸ್ವೇಚ್ಛೆ, ಅವರದ್ದೇ ದೇಶಗಳಲ್ಲೂ ಇಲ್ಲ. ಆದರೆ ಅವರುಗಳು ಬಹುಸಂಖ್ಯಾತರಾಗಿರುವ ನೆಲೆಗಳಲ್ಲಿ ಹಿಂದೂಗಳ ಪರಿಸ್ಥಿತಿಯನ್ನು ಇವರು ಗಮನಿಸಿದ್ದಾರೆಯೆ? ಹಾಗಿದ್ದಲ್ಲಿ ಅವರಿಗೆ ಕೋಮುವಾದಿಗಳೆಂದು ಕರೆಯುವ ದಮ್ಮಿದೆಯೇ? ಸತ್ಯದ ಸರದಾರರಾದ ಇವರು, ಮಾನವೀಯ ಸಾಹಿತ್ಯದ ಪ್ರವರ್ತಕರಾದ ಇವರುಗಳು ಆ ಕಹಿಸತ್ಯವನ್ನು ಅರಿಯದಂತೆ ನಟಿಸುವುದೇಕೆ. ಪಾಕಿಸ್ತಾನದಲ್ಲಿ, ಬಾಂಗ್ಲಾದೇಶದಲ್ಲಿ, ಅಷ್ಟೇಕೆ, ನಮ್ಮದೇ ಕಾಶ್ಮೀರದಲ್ಲಿ ಅವರು ನಡೆಸಿದ ನಿರಂತರ ಆಕ್ರಮಣಕ್ಕೆ ಇವರಲ್ಲಿ ಸಮಜಾಯಿಷಿ ಇದೆಯೇ? ಹಾಗೆಂದು ಬಹುಸಂಖ್ಯಾತ ಹಿಂದುಗಳು ಮುಸ್ಲಿಮರನ್ನು ಎಲ್ಲಿ ಸದೆಬಡೆದಿದ್ದಾರೆ? ಅವರ ಜೊತೆಗೆ ಬಾಳ್ವೆ ಮಾಡುತ್ತಿಲ್ಲವೇ. ಆದರೆ, ನಮ್ಮ ಹಕ್ಕುಗಳನ್ನು, ನಮ್ಮ ಅಸ್ಮಿತೆಯನ್ನು, ಅಸ್ತಿತ್ವವನ್ನು ಉಳಿಸಿಕೊಳ್ಳಲು ಕೊರಳೆತ್ತುವುದೇ ಕೋಮುವಾದ ಹೇಗಾಗುತ್ತದೆ. ಒಂದು ವರ್ಗಕ್ಕೆ ಇಲ್ಲದ ನಿಬಂಧನೆಗಳು ಹಿಂದೂಗಳಿಗೆ ಏಕೆ. ಹಾಗೆಂದು ವೈಯಕ್ತಿಕ ನೆಲೆಯಲ್ಲಿ ದ್ವೇಷ ಸಾಧಿಸಿ ಎಂದೇನೂ ಆವರಣ ಹೇಳುವುದಿಲ್ಲ. ಮಾನವತೆ ಮೆರೆಯ ಬೇಕಾದ್ದು ಮನುಷ್ಯನ ಧರ್ಮ ಸರಿ; ಆದರೆ ಎಲ್ಲ ಮನುಷ್ಯರೂ ಇದರಲ್ಲಿ ತಮ್ಮ ಧರ್ಮವನ್ನು ಮೀರಿ ನಿಲ್ಲಬೇಕಾದು ಅತ್ಯವಶ್ಯಕ. ತೋಳ ತಿನ್ನಲು ಬಂದಾಗ ಮುಳ್ಳುಹಂದಿ ತನ್ನ ಮುಳ್ಳುಗಳನ್ನು ನಿಗುರಿಸಿ ನಿಲ್ಲುತ್ತದೆ. ತಿನ್ನುವುದು ತೋಳನ ಧರ್ಮವೆಂದು ಅದೇನೂ ಶಿರಬಾಗಿ ಅರ್ಪಿಸಿಕೊಳುವುದಿಲ್ಲವಲ್ಲ!!

ಅವಕಾಶವಾದಿಗಳಾಗಿ ಸತ್ಯದ ಗುತ್ತಿಗೆ ಹಿಡಿದಂತೆ ಮಾತನಾಡುವುದು ಆಶಾಢಭೂತಿತನವಾಗುತ್ತದೆ.ಹಿಂದೂ ಮುಸ್ಲಿಂ ಗಲಭೆಗಳಾದಾಗ ಮಾನವೀಯತೆ ಮೆರೆದ ಉದಾಹರಣೆಗಳಿವೆ. ಅದನ್ನು ನೆನೆಸಬೇಕು. ಹಾಗೆಯೇ ನರಮೇಧ ನಡೆಸಿದ ಉದಾಹರಣೆಗಳೂ ಸಾಕಷ್ಟಿವೆ.ಅದನ್ನು ಗುಡಿಸಿ ಇಲ್ಲವೆಂದು ನಟಿಸುವ ಬದಲು ಎರಡೂ ಮುಖಗಳು ಇದೆ ಎಂಬ ಸತ್ಯವನ್ನು ಸಾರುವುದೇ ಆವರಣದ ವಸ್ತುವಾದ್ದರಿಂದ ಅದು ಇಂದಿಗೂ ತನ್ನ ಜನಪ್ರಿಯತೆ ಉಳಿಸಿಕೊಂಡಿದೆ. ಹಿಂದೂಗಳ ಮೇಲೆ ನಡೆದ ಸತತ ದಾಳಿಯೂ ಸತ್ಯವೇ. ಭವ್ಯ ಪರಂಪರೆಯ ಜೊತೆಗೆ ಭೀಕರ ಸತ್ಯಗಳನ್ನೂ ಅರಿತರೆ ಮನೋಭಾವನೆಯಲ್ಲಿ ನಿಜವಾದ ಬದಲಾವಣೆ ಮೂಡಬಹುದು. ವೈದಿಕರು ನಡೆಸಿದರೆನ್ನಲಾದ ಶೋಷಣೆಯ ವಿರುದ್ಧ ಗಂಟಲು ಹರಿದುಕೊಳ್ಳುವ ಇವರುಗಳು ಮುಸಲ್ಮಾನರು ನಡೆಸಿದ ಅತ್ಯಾಚಾರಗಳನ್ನು ಪ್ರಶ್ನಿಸಿದ ಮಾತ್ರಕ್ಕೆ ಕೋಮುವಾದಿ ಹಣೆಪಟ್ಟಿ ಕಟ್ಟುವ ಸಾಹಸಕ್ಕೆ ಮುಂದಾಗುವ ಹಿಂದಿನ ಮನೋಭಾವನೆ ಯಾವ ಮಾನವೀಯ ಮುಖ ಎಂದು ತಿಳಿಹೇಳಬಲ್ಲರೇ? ಸತ್ಯದ ಸಾಕ್ಷಾತ್ಕಾರದ ಮೂಲಕ ಪ್ರಯತ್ನಿಸುವುದು ಮಾನವೀಯ ಕಳಕಳಿ ಇರುವ ಲೇಖಕನ ಸಾಕ್ಷಿಪ್ರಜ್ಞೆ ಆಗಬೇಕು;ಅದಿಲ್ಲದಿದ್ದಲ್ಲಿ ಅವಕಾಶವಾದೀತನವಾಗುವ ಕಠೋರಸತ್ಯ ಈ ಲೇಖನದಲ್ಲಿ ಜಗಜ್ಜಾಹೀರಾಗಿದೆ.

ನಮ್ಮ ಸಮಾಜದಲ್ಲಿನ ಸಕಲ ಅವ್ಯವಸ್ಥೆಗೂ ವೇದಗಳನ್ನು, ವೈದಿಕರನ್ನು ಹೊಣೆಯಾಗಿಸುವ ಇವರುಗಳು ಸಮಾಜವಿಜ್ಞಾನದ ಅಭ್ಯಾಸದಿಂದ ಕಲಿತದ್ದೇನು ಎನ್ನುವ ಬೃಹತ್ ಪ್ರಶ್ನೆ ನನಗಿದೆ. ವೃತ್ತಿಯಲ್ಲಿ ವೈದ್ಯನಾದ ನನಗೆ ಇರುವಷ್ಟು ಸಾಮಾನ್ಯ ಜ್ಞಾನ ಕೂಡಾ ಇಲ್ಲದ ಇವರು ಡಾಕ್ಟ್ರೇಟುಗಳನ್ನು ಪಡೆದಿದ್ದು ಹೇಗೆ ಎಂಬುದು ಸೋಜಿಗದ ಸಂಗತಿ.ವೇದ ಉಪನಿಷತ್ತುಗಳನ್ನು, ಇತ್ತೀಚೆಗೆ ಚರ್ಚೆಯಲ್ಲಿರುವ ಭಗವದ್ಗಿತೆಯನ್ನು ಎಷ್ಟುಮಟ್ಟಿಗೆ ಓದಿ ಅವುಗಳನ್ನು ದೂರುತ್ತಾರೆ ಎಂಬುದು ನನಗೆ ತಿಳಿಯದು. ಬರೀ ಅವರಿವರು ಹೇಳಿದ ಮಾತುಗಳನ್ನು ಕೇಳಿ ಅದರ ಗಿಣಿ ಪಾಠ ಒಪ್ಪಿಸುತ್ತಿರಬಹುದಾದ ಸಾಧ್ಯತೆಗಳೂ ಇಲ್ಲದಿಲ್ಲ.ಅದಿರಲಿ.

ಸಾಮಾಜಿಕ ಕ್ರಾಂತಿ ಎಲ್ಲಾ ದೇಶ ಕಾಲಗಳಲ್ಲಿ ವಿವಿಧ ಕಾರಣಗಳಿಂದಾಗಿ ಕಾಲ ಕಾಲಕ್ಕೆ ಆಗಿದೆ. ಧರ್ಮವನ್ನೇ ಧಿಕ್ಕರಿಸಿ ಕೇವಲ ಮಾನವಾಶ್ಯಕತೆಗಳ ಬುನಾದಿಯ ಮೇಲೆ ಕಟ್ಟಿದ ಸಮಾಜವಾದಿ ಸರಕಾರಗಳು, ಅದರ ಹೆಸರಲ್ಲಿ ನಡೆದ ಕಗ್ಗೊಲೆಗಳು, ಮುಂದೆ ಅವು ತಂದೊಡ್ಡಿದ ಸಮಸ್ಯೆಗಳು, ಅವುಗಳ ನಡುವಿನಲ್ಲಿ ಉತ್ಪತ್ತಿಯಾದ ಹೊಸ ಶ್ರೇಣಿಗಳು ಈ ಸತ್ಯಾನ್ವೇಷಕರಿಗೆ ಕಾಣುವುದಿಲ್ಲವೇನೋ? ಇಂದಿಗೂ ಅಲ್ಲಿ ತಾರತಮ್ಯ ಶೋಷಣೆ ತುಂಬಿ ತುಳುಕುತ್ತಿದೆ. ಬದಲಾವಣೆಯ ಹರಿಕಾರರಾದ ಬಸವಣ್ಣನ ಅನುಯಾಯಿಗಳಲ್ಲಿ ಭಿನ್ನತೆ ತುಂಬಿದೆ.ಮೀಸಲಾತಿ ಪಡೆದು ಮುಖ್ಯ ಹರಿವಿಗೆ ಬಂದ ದಲಿತ ವರ್ಗಗಳಲ್ಲಿ ಮೇಲು ಕೀಳುಗಳು ಸೃಷ್ಟಿಯಾಗಿವೆ. ಭ್ರಾತೃತ್ವ ಬೋಧಿಸುವ ಶಾಂತಿ ಮತ ಇಸ್ಲಾಂ ನ ಒಳಪಂಗಡಗಳಲ್ಲಿ ಕಿತ್ತಾಟ ಮಿತಿಮೀರಿರುವುದು ಕಣ್ಣಮುಂದಿದೆ. ಶಾಂತಿ ಪ್ರೀತಿಗಳ ಬೋಧಕ ಏಸುವಿನ ಮತಾನುಯಾಯಿಗಳು ಜಗದಾದ್ಯಂತ ನಡೆಸಿದ ದಬ್ಬಾಳಿಕೆ, ಗುಲಾಮಶಾಹೀ ವಹಿವಾಟು, ಅದಕ್ಕಾಗಿ ಮಾಡಿದ ಧಾರ್ಮಿಕ ತಿರುಚಿವಿಕೆ, ಧರ್ಮದ ಹೆಸರಲ್ಲಿ ಮೂಲನಿವಾಸಿಗಳ ಮಾರಣಹೋಮ,ಸಂಪತ್ತಿನ ಲೂಟಿ ಇತ್ಯಾದಿ ನಮ್ಮ ಕಣ್ಣಮುಂದಿಲ್ಲವೇ? ಇವೆಲ್ಲವೂ ತೋರಿಸುವುದು ಮಾನವನ ಸ್ವಾರ್ಥಪರ ಮನೋಭಾವನೆ. ಸುಖದ ಅರಸುವಿಕೆಯಲ್ಲಿ ಇತರರನ್ನು ಶೋಷಿಸುವ ಮನೋಧರ್ಮ. ಇದು ಸತ್ಯ. ಇದನ್ನು ಅರಿತು, ಅದನ್ನು ಬಳಸಿಕೊಂಡೇ ಆದಷ್ಟು ಸಮಾನತೆಯಿರುವ ವ್ಯವಸ್ಥೆಯನ್ನು ಕಟ್ಟಬೇಕಾದ್ದು ಜೀವಪರ ಕಾಳಜಿ ಇರುವವರ ಕೆಲಸವಾಗಬೇಕು. ಇತರ ಧರ್ಮೀಯರು ಅಲ್ಲಲ್ಲಿ ತೋರಿದ ಮಾನವೀಯ ಮುಖಗಳನ್ನು ದೊಡ್ಡದಾಗಿ ಬಿಂಬಿಸುವ ಈ ಪ್ರಭೃತಿಗಳಿಗೆ ವೈದಿಕರಲ್ಲಿ ಸುಧಾರಕರಿರುವ ಉದಾಹರಣೆಗಳೇಕೆ ಸಿಗುವುದಿಲ್ಲ? ವೇದಗಳಲ್ಲಿ ಸರ್ವರೂಪಗಳಿಗೂ ಉಪಯೋಗವಾಗುವ ವಿಷಯಗಳಿಲ್ಲವೇ, ಮನುಸ್ಮೃತಿಯಲ್ಲಿ ಪ್ರಸ್ತುತವಾಗುವ ಹಲವಾರು ವಿಚಾರಗಳಿಲ್ಲವೇ? ಯಾವುದನ್ನೂ ಸಾರಾಸಗಟಾಗಿ ಟೀಕಿಸುವ ಮನೋಭಾವನೆಯೇ ಅಹಂಕಾರದ ಮೂಲ. ತೆರೆದ ಮನಸ್ಸಿಲ್ಲದ ಇವರು ಜೀವಪರರು ಎಂದು ಬೀಗುವುದೇಕೆ? ಪಕ್ಷಪಾತೀ ಧೋರಣೆಯವರು ಜೀವಪರರಾಗುವುದಾದರೂ ಹೇಗೆ?

ಮೋದಿಯವರು ರೈತ ವಿರೋಧೀ, ದಲಿತ ವಿರೋಧೀ, ಶ್ರಮಿಕ ವಿರೋಧೀ ನಾಯಕರೆಂದು ಫ಼ರ್ಮಾನು ಹೊರಡಿಸಿ ಘೋಷಿಸಿದ ಲೇಖಕಿ, ಭೂಮಿಯನ್ನು ವಶಕ್ಕೆ ತೆಗೆದುಕೊಳ್ಳುವ ಕಾನೂನಿನಿಂದ ಆಗಬಹುದಾದ ಶೋಷಣೆಯ ವಿರುದ್ಧ ಭಯಭೀತರಾಗಿದ್ದಾರೆ. ಸುಗೀವಾಜ್ಞೆಗಳನ್ನು ಹೊರಡಿಸಿ ಸರ್ವಾಧಿಕಾರಿ ಮನೋಭಾವನೆ ತೋರಿದರೆಂದು ವಿಹ್ವಲಗೊಂಡಿದ್ದಾರೆ. ಅದರ ಹಿಂದಿನ ಆಶಯಗಳನ್ನು ಅರಿಯುವ ಮನಸ್ಸಾಗಲೀ,ಆಸಕ್ತಿಯಾಗಲೀ ಇವರಿಗಿಲ್ಲ;ಏಕೆಂದರೆ ಕಾರಣವನ್ನು ಅರಸಿ ಹೊರಟರೆ ತಾವು ನಂಬಿದ ಸತ್ಯಕ್ಕೆ ವಿರುದ್ಧವಾದ ವಿಚಾರ ಗೋಚರವಾಗುವ ಭಯ. ಅದರೆ, ಅದರ ವಿವರಣೆ ಇಲ್ಲಿದೆ:

ದೇಶವನ್ನು ಬೇಗನೆ ಅಭಿವೃದ್ಧಿಪಥದಲ್ಲಿ ಸಾಗಿಸಬೇಕೆಂಬುದು ಜನತೆಯ ಬಯಕೆ, ದೀನ ದಲಿತರ ಉದ್ಧಾರ ಆಗಬೇಕೆಂದು ಜೀವಪರರ ಆಶಾಭಾವ. ಅದಕ್ಕಾಗಿ ಯೋಜನೆಗಳ ಅನುಷ್ಠಾನ ಆಗಬೇಕು. ಅದು ಲೋಕ-ರಾಜ್ಯ ಸಭೆಗಳಲ್ಲಿ ಚರ್ಚಿತವಾಗಬೇಕು. ಆದರೆ ಪ್ರಗತಿಪರ ಪಕ್ಷಗಳು ಮಸೂದೆಗಳನ್ನು ಚರ್ಚಿಸದೆ ಧಾಂಧಲೆ ಹಾಕಿದ್ದು ಈ ಬುದ್ಢಿಜೀವಿಗಳ ಬುದ್ಢಿಗೆ ಏಕೆ ಹೊಳೆಯದಾಯ್ತು? ಅವರ ಅರಾಜಕೀಯ ನಡವಳಿಕೆ ಲೇಖಕಿಯವರ ಜಾಣಕುರುಡಿಗೆ ಕಾಣಿಸದೇ ಹೋದದ್ದು ವಿಪರ್ಯಾಸ.

ಇನ್ನು ಭೈರಪ್ಪನವರ ಜನಪ್ರಿಯತೆ, ಅವರ ಪುಸ್ತಕಗಳ ದಾಖಲೆ ಮಾರಾಟವನ್ನು ಪ್ರಶ್ನಿಸುವ ಧಾಟಿಯಲ್ಲಿ ಲೇಖನ ಮುಕ್ತಾಯವಾಗುತ್ತದೆ. ಅವರ ಜನಪ್ರಿಯತೆಯೆಲ್ಲವೂ ಪಟಾಲಂ ಪತ್ರಿಕೆಗಳ ಹುನ್ನಾರವಂತೆ!  ತಿನ್ನಲಾಗದ ದ್ರಾಕ್ಷಿ ಮತ್ತು ನರಿಯ ಕಥೆ ನೆನಪಾಯ್ತು.

ಸಮಾನತೆ ಎಂಬುದು ವಾಸ್ತವತೆಯ ಅರಿವಿಲ್ಲದವರ ಹಗಲು ಕನಸು. ವೈವಿಧ್ಯತೆ ಪ್ರಕೃತಿಯ ಧರ್ಮ.ಆ ವೈವಿಧ್ಯತೆ ಇದೆ , ಅದು ಅವರವರ ಮನೋಧರ್ಮಕ್ಕೆ ಅನುಗುಣವಾಗಿ ಪ್ರಕಟಗೊಳ್ಳಬೇಕು, ಅದರ ಫಲಾಫಲಗಳನ್ನು ಕರ್ಮದ ( ಕಾರ್ಯ ತತ್ಪರತೆಯ ಮೂಲಕ) ಪಡೆಯಬೇಕು ಎಂಬುದು ವೇದಗಳ, ಸಾಮಾಜಿಕ ಸ್ತರ ವ್ಯವಸ್ಥೆಯ ಮೂಲ ಆಶಯ. ಅದು ಕಾಲಾಂತರದಲ್ಲಿ ಶೋಷಣೆಯಾಗಿ ಬದಲಾಗಿದ್ದು, ಇಂದಿಗೂ ವಿವಿಧ ರೂಪಾಂತರಗಳಲ್ಲಿ ಜಗದಾದ್ಯಂತ ಪ್ರಕಟಗೊಳ್ಳುತ್ತಿರುವುದು ಮನುಷ್ಯನ ಪ್ರಾಣಿಸಹಜ ಮನೋಭಾವದಿಂದಲೇ ಹೊರತು ವೇದಗಳ ತಪ್ಪಲ್ಲ. ಬಹುಸಂಸ್ಕೃತಿಯ ಸಮಾಜಗಳು ಭಿನ್ನತೆಯನ್ನು ಗುರುತಿಸಿ ಗೌರವಿಸುತ್ತಲೇ ಸತ್ಯದ ಸಂಪೂರ್ಣಾರಿವಿನ ಭದ್ರ ಬುನಾದಿಯ ಮೇಲೆ ಬೆಳೆಯಬೇಕು;ಅದು ಸಧೃಢ ಸಮಾಜದ ಲಕ್ಷಣ.ಅದನ್ನು ಅರಿಯದೆ ಆವರಣ ( ಮುಚ್ಚುಮರೆ- ತಾರತಮ್ಯದ) ದ ಮರಳ ರಾಶಿಯ ಮೇಲೆ ನಿಲ್ಲಿಸಿದ ”ಇಮಾರತು”  ಕಟ್ಟಿದರೆ  ಯಾಮಾರಿದಾಗ ಕುಸಿಯುವುದು ತಪ್ಪದು.

ಚಿತ್ರಕೃಪೆ : ಅಗ್ನಿ ವಾರಪತ್ರಿಕೆ

Read more from ಲೇಖನಗಳು
3 ಟಿಪ್ಪಣಿಗಳು Post a comment
 1. Rajkumar V.Kulkarni
  ಮಾರ್ಚ್ 12 2015

  ಸಾಹಿತ್ಯ ಕ್ಷೇತ್ರ ರಾಜಕಾರಣದ ಸ್ವರೂಪ ಪಡೆಯುತ್ತಿರುವುದು ನಿಜಕ್ಕೂ ಆತಂಕದ ಸಂಗತಿ. ಸಾಹಿತ್ಯ ಕ್ಷೇತ್ರದಲ್ಲಿ ಕೆಲವು ಲೇಖಕರು ತಮ್ಮದೇ ಪಟಾಲಂನ್ನು ಕಟ್ಟಿಕೊಂಡು ತಮಗಾಗದವರನ್ನು ದ್ವೇಷಿಸುವುದು ಮತ್ತು ಅರ್ಹತೆ ಇಲ್ಲದಿದ್ದರೂ ತಮ್ಮ ಗುಂಪಿನವರನ್ನು ಹೊಗಳುವುದು ಇಂಥ ನಿರಪಯುಕ್ತ ಕೆಲಸದಲ್ಲಿ ತೊಡಗಿಸಿಕೊಂಡು ಬರವಣಿಗೆಯಿಂದ ವಿಮುಖರಾಗುತ್ತಿರುವರು. ಇನ್ನು ಭೈರಪ್ಪನವರ ವಿಷಯಕ್ಕೆ ಬಂದರೆ ಕೇಲವು ಬುದ್ದಿಜೀವಿಗಳೆಂದು ತಮ್ಮನ್ನು ತಾವು ಕರೆದುಕೊಳ್ಳುವವರು ಭೈರಪ್ಪನವರ ತೆಜೋವಧೆಯೇ ತಮ್ಮ ಬದುಕಿನ ಪರಮ ಗುರಿ ಎನ್ನುವಂತೆ ಬದುಕುತ್ತಿರುವರು. ಭೈರಪ್ಪನವರು ಸ್ತ್ರೀ ದ್ವೇಷಿಯಾಗಿದ್ದರೆ ಅವರ ಕಾದಂಬರಿಗಳಲ್ಲಿ ಲಕ್ಷ್ಮಿ, ಉತ್ತರಾ, ಮಧುಮಿತ, ಸಾವಿತ್ರಿಯಂಥ ಮಹಾನ್ ಪಾತ್ರಗಳು ಸೃಷ್ಠಿಯಾಗುತ್ತಿರಲಿಲ್ಲ. ಜೊತೆಗೆ ಭೈರಪ್ಪನವರು ಇತಿಹಾಸವನ್ನು ಆಧಾರವಾಗಿಟ್ಟುಕೊಂಡು ಅನ್ಯಧರ್ಮೀಯರಿಂದ ಭಾರತಕ್ಕಾದ ಅನ್ಯಾಯವನ್ನು ಸಾಹಿತ್ಯದ ಮೂಲಕ ಜನರಿಗೆ ತಲುಪಿಸುವ ಕೆಲಸ ಮಾಡಿದ ಕನ್ನಡದ ಅನನ್ಯ ಬರಹಗಾರ. ಆವರಣ ಕಾದಂಬರಿಯನ್ನು ಓದುವ ವೇಳೆ ಯಾವ ರಾಗದ್ವೇಷಕ್ಕೂ ಒಳಗಾಗದೆ ಓದುವಂತೆ ಅವರು ಓದುಗರಲ್ಲಿ ಮನವಿ ಮಾಡುತ್ತಾರೆ ಮತ್ತು ಹಿಂದಿನವರು ಮಾಡಿದ ತಪ್ಪಿಗೆ ಇಂದಿನವರನ್ನು ದ್ವೇಷಿಸುವುದು ಸಲ್ಲದು ಎನ್ನುವ ಅಭಿಪ್ರಾಯ ಅವರದು. ಇದು ಸಮಾಜದ ಕುರಿತು ಲೇಖಕನಿಗಿರುವ ಬದ್ಧತೆಗೆ ಸಾಕ್ಷಿ. ದ್ವೇಷಿಸಲೂ ಒಂದು ಕಾರಣ ಬೇಕು ಕಾರಣವಿಲ್ಲದೆ ದ್ವೇಷಿಸುವುದು ಅದು ಅನಾರೋಗ್ಯಕರ ಲಕ್ಷಣ.

  ಉತ್ತರ
 2. ಮಾರ್ಚ್ 13 2015

  good article

  ಉತ್ತರ
 3. simha sn
  ಮಾರ್ಚ್ 16 2015

  ಬೊಗಳುವವರು ಬೊಗಳುತ್ತಿರಲಿ ಬಿಡಿ !

  ಉತ್ತರ

ನಿಮ್ಮ ಅನಿಸಿಕೆ...

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Note: HTML is allowed. Your email address will never be published.

Subscribe to comments