ಈ ಸಾವು ನ್ಯಾಯವೇ?
– ರಾಕೇಶ್ ಶೆಟ್ಟಿ
ಲ್ಯಾಂಡ್ ಮಾಫಿಯಾ,ಸ್ಯಾಂಡ್ ಮಾಫಿಯಾಗಳ ವಿರುದ್ಧ ಸಮರ ಸಾರಿ,ತನ್ನ ದಕ್ಷತೆಯ ಕಾರಣದಿಂದಲೇ ಕೋಲಾರ ಜಿಲ್ಲಾಧಿಕಾರಿ ಸ್ಥಾನದಿಂದ ಎತ್ತಂಗಡಿ ಮಾಡಿಸಲ್ಪಟ್ಟಿದ್ದ ದಕ್ಷ ಯುವ ಅಧಿಕಾರಿ ಡಿ.ಕೆ ರವಿಯಂತವರು ಆತ್ಮಹತ್ಯೆ ಮಾಡಿಕೊಳ್ಳಲು ಸಾಧ್ಯವೇ? ನನಗಂತೂ ನಂಬಲಾಗುತ್ತಿಲ್ಲ.ನಿನ್ನೆ ಅವರ ಮರಣದ ಸುದ್ದಿ ತಿಳಿದಾಗಿನಿಂದ ಮನಸ್ಸು ಖಿನ್ನವಾಗಿದೆ.ಸತ್ಯ,ನ್ಯಾಯಕ್ಕಾಗಿ ಹೋರಾಡುವವರು ಹೀಗೆ ದುರಂತ ಅಂತ್ಯ ಕಾಣುತ್ತಾರೆಯೇ? ಅಂತವರ ಕುಟುಂಬದವರಿಗೆ ನೋವು ಕಟ್ಟಿಟ್ಟ ಬುತ್ತಿಯೇ?
ಕೋಲಾರದಿಂದ ರವಿಯವರನ್ನು ವರ್ಗಾವಣೆ ಮಾಡಿದಾಗ ಇಡೀ ಜಿಲ್ಲೆಯೇ ಬಂದ್ ಆಗಿತ್ತು.ಒಂದಿಡಿ ಜಿಲ್ಲೆಯ ಜನರ ಜೊತೆ ಅಧಿಕಾರಿಯೊಬ್ಬ ಬಾಂಧವ್ಯ ಈ ಮಟ್ಟಿಗಿರುವುದು ಇತ್ತೀಚಿನ ದಿನಗಳಲ್ಲಿ ಅಪರೂಪವೇ ಸರಿ.ಕೋಲಾರದಿಂದ ಎತ್ತಂಗಡಿಯಾಗಿ ಬಂದ ಮೇಲಾದರೂ ಈ ಮನುಷ್ಯ ತಣ್ಣಗಾಗುತ್ತಾರೆ ಎಂದುಕೊಂಡಿದ್ದವರಿಗೆ,ರವಿಯವರು ವಾಣಿಜ್ಯ ತೆರಿಗೆ ಇಲಾಖೆಯ ಹೆಚ್ಚುವರಿ ಆಯುಕ್ತ ಹುದ್ದೆ ವಹಿಸಿಕೊಂಡ ಮೇಲೆ ನಡೆಸಿದ ದಾಳಿಗಳು ಮತ್ತೆ ನಿದ್ದೆಗೆಡಿಸಿದ್ದವೇನೋ! ಐದೂವರೆ ತಿಂಗಳ ಹಿಂದೆ ತೆರಿಗೆ ಇಲಾಖೆಗೆ ಬಂದ ರವಿಯವರು ಈ ಕಡಿಮೆ ಅವಧಿಯಲ್ಲಿ ದೊಡ್ಡ ದೊಡ್ಡ ಬಿಲ್ಡರ್ ಗಳ ತೆರಿಗೆ ವಂಚನೆಯನ್ನು ಬಯಲಿಗೆಳೆದಿದ್ದರು.ವೃತ್ತಿಯಲ್ಲಿ ಖಡಕ್ ಆಗಿದ್ದ ರವಿಯವರು ಜನರೊಂದಿಗೆ ಸಾಮಾನ್ಯರಂತೆ ಬೆರೆಯುತಿದ್ದವರು.
ಇಂತಹ ನಿಷ್ಠ ಯುವ IAS ಅಧಿಕಾರಿಯೊಬ್ಬರಿಗೆ ರಕ್ಷಣೆಯಿಲ್ಲದಾಯಿತೇ? ಉತ್ತರ ಭಾರತದಲ್ಲಿ ಕೇಳಿ ಬರುತ್ತಿದ್ದಂತ ಸುದ್ದಿಗಳು ಈಗ ನಮ್ಮ ಕರ್ನಾಟಕ ರಾಜ್ಯದಲ್ಲೂ ಕೇಳಿ ಬರುತ್ತಿರುವುದು ಆತಂಕಕಾರಿ.ಭ್ರಷ್ಟಚಾರದ ವಿರುದ್ಧ ಬಳ್ಳಾರಿಯವರೆಗೆ ಪಾದಯಾತ್ರೆ ನಡೆಸಿ ಅಧಿಕಾರಕ್ಕೆ ಬಂದು ಕುಳಿತ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಉತ್ತರಿಸಬೇಕಿದೆ.ಪ್ರಕರಣವನ್ನು ಸಿಬಿಐ ತನಿಖೆಗೆ ಒಳಪಡಿಸಿ ಸತ್ಯವನ್ನು ಜನತೆಯ ಮುಂದಿಟ್ಟು ರವಿಯವರ ಕುಟುಂಬಕ್ಕೆ ನ್ಯಾಯ ಒದಗಿಸಬೇಕು.
ನ್ಯಾಯ? ಎಲ್ಲಿಯ ನ್ಯಾಯ? ಯಾರಿಗೆ ನ್ಯಾಯ?ಯಾರು ಮಾಡಬೇಕಾದ ನ್ಯಾಯ? ನಾಲ್ಕು ದಿನದ ನಂತರ ಯಾರೊ ಒಬ್ಬ ಅಮಾಯಕ”ಸರ್ ನಾನೇ ಕೊಲೆ ಮಾಡಿದ್ದು” ಅಂತ ಹೇಳುತ್ತಾನೆ. ಆಡಳಿತ ನ್ಯಾಯಾಲಯಕ್ಕೆ ಹಾಜರಿಪಡಿಸುತ್ತೆ.ನ್ಯಾಯಾಲಯವು ಸಾಕ್ಷಿಗಳ ಆಧಾರದಿಂದ ತೀರ್ಪು ನೀಡುತ್ತದೆ. ಅಷ್ಟರಲ್ಲಿ ಜನ ಎಲ್ಲ ಮರೆಯುತ್ತಾರೆ. ಐದು ವರ್ಷದ ನಂತರ ಕೈದಿಯ ಒಳ್ಳೆಯ ನಡತೆಗಾಗಿ ಗಾಂಧೀಜಿ ಜಯಂತಿಯಂದು ಮುಖ್ಯಮಂತ್ರಿಗಳೆ ಬಿಡುಗಡೆ ಮಾಡುತ್ತಾರೆ. ಅಲ್ಲಿಗೆ ಅನ್ಯಾಯ ನ್ಯಾಯ ಸಮ್ಮತವಾಗಿಯೇ ನಡೆದ ಹೋಗುತ್ತದೆ. ಆ ಕಾಲ ಇತ್ತು. ವ್ಯಕ್ತಿಗಿಂತಲು ಸಮಷ್ಟಿ ಬಲಿಷ್ಟವಾಗಿತ್ತು. ಇವತ್ತು ಸಮಷ್ಟಿ ಗಿಂತ ವ್ಯಕ್ತಿ ಬಹಳ ಬಲಿಷ್ಟ. ಕಾಸು ಚಲ್ಲಿ ಏನೆಲ್ಲ ಕೊಂಡು ಕೊಳ್ಳುವಾಗ, ವ್ಯವಸ್ಥೆ ಎಲ್ಲಾ ಕಡೆಯಿಂದಲೂ ಕೊಳೆತು ಗ್ಯಾಂಗ್ರಿನ ಆಗಿರುವಾಗ ಯಾರು ಸರಿ ಪಡಿಸಬೇಕು? ತಪ್ಪು ಮಾಡಿದರೆ ಶಿಕ್ಷೆ ಆಗುತ್ತದೆ ಎಂದರೆ ಮಾಡುವವನಿಗೆ ಭಯ ಬರುತ್ತೆ. ಶಿಕ್ಷೆ ಕೊಡುವ ನ್ಯಾಯಾಲಯವು ಬಲಿಷ್ಟ ವಾದರೆ ಎನೊ ಸ್ವಲ್ಪು ಆಶಾ ಕಿರಣ ಮೂಡೀತು.