ಈ ಸಾವು ನಿಮ್ಮಲ್ಲಿ ವಿಷಾದ ಹುಟ್ಟಿಸಬೇಕಿತ್ತು
– ರೋಹಿತ್ ಚಕ್ರತೀರ್ಥ
ಬಹಳ ಹಿಂದೆ ಓದಿದ ಸಾಲು ಅದು. ಒಬ್ಬಳು ಹೆಣ್ಣಿನ ಹತ್ಯೆಯಾಗಿದೆ. ಅದನ್ನು ಯಾರ್ಯಾರು ಯಾವ್ಯಾವ ಬಗೆಯಲ್ಲಿ ಬಳಸಿಕೊಳ್ಳಬಹುದು ಎನ್ನುವ ಬಗ್ಗೆ ಒಬ್ಬೊಬ್ಬರೂ ತಮ್ಮ ಮೂಗಿನ ನೇರಕ್ಕೆ ಸಲಹೆಗಳನ್ನು ಕೊಡುತ್ತಾ ಹೋಗುತ್ತಾರೆ. ಅವೆಲ್ಲ ಮಾತುಗಳು ನಿಂತ ಮೇಲೆ ರಾಜ್ಯದ ಮುಖ್ಯಮಂತ್ರಿ – ಇಷ್ಟೆಲ್ಲಾ ಹೇಳಿದಿರಿ, ಆದರೆ ಆಕೆಯ ಸಾವು ನಮ್ಮೊಳಗೆ ವಿಷಾದ ಹುಟ್ಟಿಸಬೇಕಾಗಿತ್ತು ಅಂತ ನಿಮಗ್ಯಾರಿಗೂ ಅನ್ನಿಸಲೇ ಇಲ್ಲವಲ್ಲ – ಎಂದು ಮರುಗುತ್ತಾನೆ. ಅವಸ್ಥೆ ಕಾದಂಬರಿಯಲ್ಲಿ ಬರುವ ಆ ಭಾಗವನ್ನು ಓದುವಾಗ ನನಗೇ ತಿಳಿಯದಂತೆ ಕಣ್ಣೀರಾಗಿಬಿಟ್ಟಿದ್ದೆ. ಹೌದಲ್ಲ, ಒಂದು ಸಾವು ನಮ್ಮನ್ನು ಕಾಡಬೇಕು; ನಮ್ಮ ಅಂತರಾತ್ಮವನ್ನು ಕಲಕಬೇಕು; ಸುತ್ತ ಗವ್ವೆನ್ನುವ ಕತ್ತಲೆ ಮುತ್ತಿದಾಗ ಒಂಟಿ ನಿಂತ ಮೇಣದಬತ್ತಿ ಸದ್ದಿಲ್ಲದೆ ಕರಗಿಹೋದಂತೆ ನಾವೂ ನಿಂತಲ್ಲೇ ಕಲ್ಲಾಗಬೇಕು, ಕರಗಬೇಕು.
ನೆಹರು ಒಂದು ಯುಗಕ್ಕೆ ಮಹಾ ಆದರ್ಶವಾಗಿದ್ದರು. ಅವರು ಸತ್ತಾಗ ಪಾವೆಂ ಒಂದು ಪದ್ಯ ಬರೆದರು:
ನೆಹರು ಸತ್ತರು
ನೆಹರು ಸತ್ತರು
ಅವರು ಅತ್ತರು
ಇವರು ಅತ್ತರು
ನಾನು ಅಳಲಿಲ್ಲ
ಧಕ್ಕೆಗೊಳಲಿಲ್ಲ;
ಬರೇ
ನನ್ನ ಒಳಗಿಂದ
ಏನೋ ಒಂದಿಷ್ಟು
ಹೊರಟು ಹೋದಂತೆ
ಅನಿಸತೊಡಗಿತ್ತು.
ಆ ನಿಮಿಷದಿಂದ
ನಾ ಮೊದಲಿಗಿಂತ
ಕಡಿಮೆ ಧೀರ
ಕಡಿಮೆ ಉದಾರ.
ನೆಹರೂ ಬಗ್ಗೆ ನಮ್ಮ ನಿಲುವುಗಳೇನೇ ಇರಬಹುದು, ಆದರೆ ಅವರನ್ನೇ ದೊಡ್ಡ ಆದರ್ಶವೆಂದು ನಂಬಿದ್ದ ದೇಶಭಕ್ತ ಜನತೆಗೆ ನೆಹರೂ ಸತ್ತಾಗ ಆದ ಆಘಾತದ ಒಂದು ಪಲುಕು ಇದು. ಇದು ನಾವು ಪ್ರೀತಿಸಿದ ಯಾರೇ ಸತ್ತಾಗಲೂ ನಮಗಾಗಬಹುದಾದ, (ನಾವೆಲ್ಲ ಮನುಷ್ಯರಾದ್ದರಿಂದ) ಆಗಲೇ ಬೇಕಾದ ಆಘಾತ ಎಂದು ಅರ್ಥ ಮಾಡಿಕೊಳ್ಳಬಹುದು. ವಿಜ್ಞಾನಿ ರಾಮನ್ ಸತ್ತಾಗ ಮೂಲತಃ ವಿಜ್ಞಾನದ ವಿದ್ಯಾರ್ಥಿಯೂ ಪ್ರಾಧ್ಯಾಪಕರೂ ಆಗಿದ್ದ ಕವಿ ನಿಸಾರ್ ಅಹಮದರಿಗೆ ಸಂಕಟವಾಯಿತು. ಬೆಳಬೆಳಗ್ಗೆ ಬಂದು ಅಪ್ಪಳಿಸಿದ ಆ ಸಾವಿನ ಸುದ್ದಿಯಿಂದ ಹೊರಬರಲು ಅವರು ಮನೆ ಬಿಟ್ಟು ಹೊರಟರು. ಆಗ ಅವರಿಗೆ ಇಡೀ ಸಮಾಜ, ಈ ಸಾವಿನಿಂದ ಯಾವೊಂದು ಬಗೆಯಲ್ಲೂ ಪ್ರಭಾವಕ್ಕೊಳಗಾಗದೆ ತನ್ನ ಪಾಡಿಗೆ ತಾನು ವ್ಯವಹರಿಸುತ್ತಿದೆಯಲ್ಲಾ ಎನ್ನಿಸಿ ಸಂಕಟ ಮತ್ತಷ್ಟು ಉಲ್ಭಣವಾಯಿತು! ನಿಜ, ಸಾವು ತರುವ ಸಂಕಟ ಒಂದು ಬಗೆಯದ್ದಾದರೆ, ಅದು ನಮ್ಮಂತೆ ಇನ್ನೊಬ್ಬನಿಗೆ ಯಾವ ತಳಮಳವನ್ನೂ ಹುಟ್ಟಿಸಲಿಲ್ಲ ಎಂದು ಕಾಡುವ ಬೇಗುದಿಯೇ ದೊಡ್ಡದು ಕೆಲವು ಸಲ.
ಕರ್ನಾಟಕದಲ್ಲಿ ಇನ್ನೊಂದು ಜೀವ ಸಾವಿಗೆ ಶರಣಾಗಿದೆ. ಐಎಎಸ್ ಅಧಿಕಾರಿಯಾಗಿ, ಖಡಕ್ ವ್ಯಕ್ತಿತ್ವ ಎಂದು ಎಲ್ಲರಿಂದ ಹೊಗಳಿಸಿಕೊಂಡಿದ್ದ ಒಬ್ಬ ನಿಷ್ಠಾವಂತ, ಪ್ರಾಮಾಣಿಕ ಮನುಷ್ಯ ತನ್ನ ಮನೆಯಲ್ಲಿ ಫ್ಯಾನಿಗೆ ನೇಣು ಬಿಗಿದುಕೊಂಡಿದ್ದ ಸ್ಥಿತಿಯಲ್ಲಿ ಪತ್ತೆಯಾದರು. ಈ ಡಿ.ಕೆ.ರವಿಯವರ ಬಗ್ಗೆ ನಾನು ಹಿಂದೆ ಹೆಚ್ಚೇನೂ ಓದಿಕೊಂಡಿದ್ದವನಲ್ಲ. ಅವರು ಮಾಡಿದ್ದ ಕೆಲಸಗಳ ಬಗ್ಗೆಯೂ ನನಗೆ ಹೆಚ್ಚು ಗೊತ್ತಿರಲಿಲ್ಲ. ಕಾಡಿನ ನಡುವೆ ಉರಿಯುವ ಬೆಂಕಿ- ಅದೆಷ್ಟೇ ಪ್ರಖರವಾಗಿದ್ದರೂ ಹೊರಗಿನ ಜನಕ್ಕೆ ಗೊತ್ತಾಗುವುದಿಲ್ಲವಲ್ಲ; ಅದೇ ಬೆಂಕಿ ಕಾಳ್ಗಿಚ್ಚಾಗಿ ಹರಡತೊಡಗಿದ ಮೇಲೆ ಊರವರಿಗೂ ಅದರ ಬಿಸಿ ತಟ್ಟುತ್ತದೆ. ಹಾಗೆ, ಅವರು ತೀರಿಕೊಂಡ ಮೇಲೆ ಅಲೆಅಲೆಯಾಗಿ ಬರತೊಡಗಿದ ವರದಿಗಳಿಂದ ನಮಗೆ ಗೊತ್ತಾದದ್ದು ಇಷ್ಟು: ರವಿ ತನ್ನ ಕೆಲಸದಲ್ಲಿ ಅಡ್ಡದಾರಿಗಳನ್ನು ಹಿಡಿದಿರಲಿಲ್ಲ. ಕೋಲಾರದ ಜಿಲ್ಲಾಧಿಕಾರಿಯಾಗಿ ಭ್ರಷ್ಟರಿಗೆ ನೀರಿಳಿಸಿದ್ದರು. ಬೆಂಗಳೂರಿಗೆ ತೆರಿಗೆ ಅಧಿಕಾರಿಯಾಗಿ ಬಂದ ಮೇಲೆ ದೊಡ್ಡ ತಿಮಿಂಗಲಗಳನ್ನು ಹಿಡಿಯಲು ಬಲೆ ಬೀಸಿದ್ದರು. ಒಂದೇ ತಿಂಗಳಲ್ಲಿ 67 ಭ್ರಷ್ಟರನ್ನು ಹಿಡಿದುಹಾಕಿ ಸರಕಾರಕ್ಕೆ ಬರಬೇಕಿದ್ದ 130 ಕೋಟಿ ತೆರಿಗೆ ವಸೂಲು ಮಾಡಿದ್ದರು. ಇನ್ನೂ ಒಂದಷ್ಟು ಕುಳಗಳನ್ನು ಬೀಳಿಸುವುದಿದೆ ಎಂದು ನಿರ್ಭೀತಿಯಿಂದ ಸಂದರ್ಶನದಲ್ಲಿ ಹೇಳಿಕೊಂಡಿದ್ದರು. ಕೇವಲ ಮೂವತ್ತೈದು ತುಂಬಿದ್ದ ಈ ಹರೆಯದ ತರುಣನನ್ನು ಕೋಲಾರ, ತುಮಕೂರು, ಬೆಂಗಳೂರುಗಳಲ್ಲಿ ದೇವರು ಎಂದು ಪೂಜಿಸುವ ಜನ ಇದ್ದರು! ಅಷ್ಟರಲ್ಲಿ ಮೃತ್ಯುವಿಗೆ ತುರಿಕೆ ಹೆಚ್ಚಾಗಿ ಇವರ ಕೊರಳ ಮೇಲೆ ಉರುಳು ಹಾಕಿ ಎಳೆದೇಬಿಟ್ಟಿತು.
ರವಿ ಸಾವು ಕರ್ನಾಟಕ ಮಾತ್ರವಲ್ಲ, ಇಡೀ ದೇಶದಲ್ಲಿ ಸಂಚಲನ ಎಬ್ಬಿಸಿತು. ಹುಟ್ಟೂರಿನಲ್ಲಿ ಅವರ ಶವಸಂಸ್ಕಾರ ನಡೆದಾಗ ಜಮೆಯಾದವರು ಹತ್ತುಸಾವಿರ ಮಂದಿ! ಬಹುಶಃ ಸರಕಾರಿ ಅಧಿಕಾರಿ ಒತ್ತಟ್ಟಿಗಿರಲಿ, ಯಾವ ರಾಜಕಾರಣಿ ಸತ್ತಾಗಲೂ ಇಷ್ಟೊಂದು ದೊಡ್ಡ ಸಂಖ್ಯೆಯಲ್ಲಿ ಜನ ಪಾಲ್ಗೊಂಡ ದಾಖಲೆ ಇಲ್ಲ ಎಂದು ಕಾಣುತ್ತದೆ. ಅಷ್ಟು ದೊಡ್ಡ ಸಂಖ್ಯೆಯಲ್ಲಿ ಸೇರಿದ್ದರೂ ಜನರು ಯಾವ ಅಹಿತಕರ ಘಟನೆಗಳಿಗೂ ಕಾರಣವಾಗಲಿಲ್ಲ. ಆದರೆ, ಸರಕಾರ ಈ ಪ್ರಕರಣವನ್ನು ಸಿಐಡಿಗೆ ವಹಿಸಿದಾಗ ಮಾತ್ರ ಅವರ ಸಹನೆಯ ಕಟ್ಟೆ ಒಡೆಯಿತು. ಸಿಐಡಿ ಇರುವುದು ಗೃಹಸಚಿವರ ಕೈಕೆಳಗೆ. ಅದರ ಪ್ರತಿಚಲನೆಯನ್ನೂ ನಿಯಂತ್ರಿಸುವ ಅಧಿಕಾರ ಇರುವುದು ಗೃಹಸಚಿವರಿಗೆ. ಅಂತಹ ಗೃಹಸಚಿವರೇ ಛೇರ್‍ಮನ್ ಆಗಿರುವ ಕಂಪೆನಿ ನೂರಾರು ಕೋಟಿ ರುಪಾಯಿಗಳ ತೆರಿಗೆ ಉಳಿಸಿಕೊಂಡಿದೆ ಎಂದು ರವಿ ಧಾಳಿಯ ಯೋಜನೆ ರೂಪಿಸಿದ್ದರು. ಹಾಗಿರುವಾಗ, ಇಲ್ಲಿ ನಿಷ್ಪಕ್ಷಪಾತ ತನಿಖೆ ಎಂಬುದಕ್ಕೆ ಏನಾದರೂ ಅರ್ಥ ಉಳಿಯುತ್ತದೆಯೇ? ಇದು ಬೆಕ್ಕು ಸನ್ಯಾಸಿಯಾಗಿ ಇಲಿಗಳನ್ನು ಕಾಪಾಡುತ್ತೇನೆ ಎಂದ ಕತೆ ಆಗುವುದಿಲ್ಲವೇ? ಅಲ್ಲದೆ ಮೂರುವರ್ಷ ಕಳೆದಿರುವ ರಾಜ್ಯಸರಕಾರದಲ್ಲಿ ಗೃಹಸಚಿವರು ಇದುವರೆಗೆ ಮಾಡಿರುವ ಸಾಧನೆ ಏನು ಎನ್ನುವುದು ಸರಕಾರಕ್ಕಾಗಲೀ, ಮುಖ್ಯಮಂತ್ರಿಗಳಿಗಾಗಲೀ, ರಾಜ್ಯದ ಜನತೆಗಾಗಲೀ ಗೊತ್ತಿಲ್ಲ. ಒಂದರ ಮೇಲೊಂದು ಹಗರಣಗಳನ್ನು ಮೈಮೇಲೆ ಎಳೆದುಹಾಕಿಕೊಳ್ಳುವುದೇ ಸಾಧನೆ ಎಂದು ಅವರು ತಿಳಿದಂತಿದೆ.ಇಂತಹ ಭಂಡ ಪುಢಾರಿಯ ಕೈಯಡಿಯಲ್ಲಿ ವಿಚಾರಣೆ ನಡೆಸಬೇಕೆ ಎಂದು ಜನ ಪ್ರಶ್ನಿಸಿದರು.
ರವಿ ಸತ್ತು ಇವೊತ್ತಿಗೆ ಐದು ದಿನ. ಇದುವರೆಗೂ ಸರಕಾರ ಸಿಬಿಐಗೆ ತನಿಖೆಯ ಜವಾಬ್ದಾರಿಯನ್ನು ಹಸ್ತಾಂತರಿಸಿಲ್ಲ. ಸಾಕ್ಷ್ಯಗಳನ್ನು ತಿರುಚಲಿಕ್ಕೆ, ಹೊಸ ಸಾಕ್ಷ್ಯಗಳನ್ನು ಹುಟ್ಟಿಸಲಿಕ್ಕೆ ಐದು ದಿನಗಳು ಧಾರಾಳ ಸಾಕು! ಅಷ್ಟರಲ್ಲಿ ರವಿಗೆ ಪತ್ನಿಯಲ್ಲದೆ ಇನ್ನೊಬ್ಬಾಕೆಯ ಜೊತೆ ಗೆಳೆತನ ಇತ್ತು ಎನ್ನುವ ಹೊಸ ಸಿದ್ಧಾಂತ ಹುಟ್ಟಿದೆ. ಮಂಡ್ಯದಲ್ಲಿ ಸರಕಾರೀ ಅಧಿಕಾರಿಯಾಗಿ ಕೆಲಸ ಮಾಡುತ್ತಿರುವ ಆ ಹೆಂಗಸು ಬೆಂಗಳೂರಿಗೆ ಬಂದು ತನ್ನ-ರವಿಯ ನಡುವೆ ನಡೆದ ಮಾತುಕತೆಗಳ ಬಗ್ಗೆ ಸಿಐಡಿಗೆ ವಿವರಗಳನ್ನು ಕೊಟ್ಟಿದ್ದಾರಂತೆ. ಪೂರ್ತಿ ವಿಚಾರಣೆ ನಡೆಯುವವರೆಗೂ ರಹಸ್ಯವಾಗಿರಬೇಕಿದ್ದ, ಮುಂದೆ ಸಿಬಿಐ ಈ ವಿಚಾರಣೆ ಕೈಗೆತ್ತಿಕೊಂಡರೆ ಇಲ್ಲಿಂದ ಅಲ್ಲಿಗೆ ಹೋಗಬೇಕಿದ್ದ, ನಡುವೆ ಎಲ್ಲೂ ಯಾರ ಕೈಗೂ ಸೋರದೆ ಇರಬೇಕಿದ್ದ ಈ ವಿಚಾರಣೆಯ ಎಲ್ಲ ಮಾಹಿತಿಗಳನ್ನೂ ಕನ್ನಡದ ಒಂದು ಹೆಣ್ಣು ಬುದ್ದುಜೀವಿ ಎಗರಿಸಿದೆ! ಅಜ್ಜಿಗೆ ಅರಿವೆ ಚಿಂತೆಯಾದರೆ, ಇನ್ನಾರಿಗೋ ಇನ್ನಾವುದೋ ಚಿಂತೆಯಂತೆ! ಹಾಗೆ, ಈ ಬುದ್ದುಜೀವಿಗೆ ತನ್ನ ಪತ್ರಿಕೆ ಮಾರಿ ನಾಲ್ಕು ಕಾಸು ಹುಟ್ಟಿದರೆ ಸಾಕು ಎಂಬ ಚಿಂತೆ! ಯಾರದ್ದೋ ಮನೆ ಹೊತ್ತಿ ಉರಿಯುವಾಗ, ಆ ಬೆಂಕಿಯಲ್ಲಿ ಬೀಡಿ ಹೊತ್ತಿಸಿಕೊಳ್ಳುವವರನ್ನು ಬುದ್ದುಜೀವಿಗಳು ಎಂದು ಕರೆಯುತ್ತಾರೆ ಅಂತ ಅನರ್ಥಕೋಶದಲ್ಲಿ ಬರೆದಿದ್ದಾರಂತೆ.
ರವಿ ಸಾವು ಕಗ್ಗಂಟಾಗುತ್ತಿದೆ. ಅವರು ಸತ್ತ ದಿನ ಪೋಲೀಸ್ ಅಧಿಕಾರಿಗಳು ಅಪಾರ್ಟ್‍ಮೆಂಟನ್ನು ಜಾಲಾಡಿ ಏನೇನು ಬೇಕೋ ಎಲ್ಲವನ್ನೂ ಎತ್ತಿ ಒಯ್ದಿದ್ದಾರೆ. ಅಪಾರ್ಟ್‍ಮೆಂಟಿನ ಆಯಕಟ್ಟಿನ ಜಾಗಗಳನ್ನು ಯಾವ ಬೆರಳಚ್ಚೂ ಸಿಗದಂತೆ ತೊಳೆಯಲಾಗಿದೆ ಎಂದು ರಾಷ್ಟ್ರೀಯ ಸುದ್ದಿವಾಹಿನಿಯೊಂದು ಮತ್ತೆ ಮತ್ತೆ ಹೇಳುತ್ತಿದೆ. ಸತ್ತ ಅಧಿಕಾರಿಯ ಸಂಸ್ಕಾರಕ್ಕೆ ಹೋಗಬೇಕಿದ್ದ, ಸಾಧ್ಯವಾದರೆ ಆ ಹೆತ್ತಕರುಳಿಗೆ ಸಾಂತ್ವನ ಹೇಳಬೇಕಿದ್ದ ನಮ್ಮ ಘನ ಮುಖ್ಯಮಂತ್ರಿಗಳು ಎಲ್ಲಾ ಬಿಟ್ಟು ಆಸ್ಪತ್ರೆಯಲ್ಲಿ ಶವಪರೀಕ್ಷೆ ನಡೆಯುತ್ತಿದ್ದ ಕೋಣೆಗೆ ಹೋಗಿ ಬಂದಿದ್ದಾರೆ! ರವಿ ಮನೆಗೆ ಹೋಗಿದ್ದ ಗೃಹಸಚಿವರು ಅಲ್ಲಿ ಒಂದೂವರೆ ತಾಸಿಗೂ ಹೆಚ್ಚು ಸಮಯ ಕಳೆದರು! ಜಗತ್ತೇ ತನ್ನ ಮುಂದೆ ಮಂಡಿಯೂರಿದರೂ ಸಿಬಿಐಗೆ ತನಿಖೆಯನ್ನು ಹಸ್ತಾಂತರಿಸುವುದಿಲ್ಲ ಎಂದು ಸರಕಾರ ಮೊಂಡು ಹಠಕ್ಕೆ ಬಿದ್ದಿದೆ. ರವಿಯ ಜೀವದ ಹಿಂದೆಯೇ, ಐದು ದಿನದಿಂದ ಅನ್ನನೀರು ಬಿಟ್ಟಿದ್ದ ಅವರ ಸೋದರತ್ತೆಯ ಜೀವವೂ ಹೋಗಿದೆ. ಇನ್ನೆಷ್ಟು ಜೀವಗಳನ್ನು ಈ ಸರಕಾರವೆಂಬ ದೈತ್ಯ ತನ್ನ ಹೊಟ್ಟೆಗೆ ಹಾಕಿಕೊಳ್ಳುವುದಿದೆಯೋ?
ಇದು ಕೊಲೆಯಲ್ಲ ಆತ್ಮಹತ್ಯೆ ಎಂದು ನಂಬಿಸಲು ನಮ್ಮ ಪೋಲೀಸ್ ಕಮೀಷನರ್ ಸಾಹೇಬರು ಪಟ್ಟ ಪಡಿಪಾಟಲು ಅಷ್ಟಿಷ್ಟಲ್ಲ. ಮರಣೋತ್ತರ ಪರೀಕ್ಷೆಯ ವರದಿ ಬರುವ ಮುನ್ನವೇ ಈ ಕಮೀಷನರ್, ಗೃಹಸಚಿವ, ಮುಖ್ಯಮಂತ್ರಿ – ಎಲ್ಲರೂ ಇದೊಂದು ಆತ್ಮಹತ್ಯೆ ಎಂಬ ಮಂತ್ರವನ್ನು ನೂರೆಂಟು ಸಲ ಜಪಿಸಿಯಾಗಿತ್ತು. ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರರು ರವಿ ಕುಟುಂಬದ ಜೊತೆ ಬಹಳ ಹೊತ್ತು ಚರ್ಚಿಸಿ “ಮನ ಒಲಿಸುವ” ಕೆಲಸ ಮಾಡುತ್ತಿದ್ದರಂತೆ. ರವಿಯ ವಿರುದ್ಧ ಮಾತಾಡಲು ಏನೊಂದೂ ವಿಷಯ ಸಿಗದೆ ಕರ್ನಾಟಕದ ಬುದ್ದುಜೀವಿ ಸಂಘ ನಿರ್ಜೀವವಾಗಿತ್ತು. ಅಷ್ಟುಹೊತ್ತಿನಲ್ಲಿ ಬಂದ “ಪರಹೆಣ್ಣಿನ ಸೆಳೆತ” ಎಂಬ ಹೊಸ ಆಯಾಮವನ್ನು ಕಂಡು ಈ ಸಂಘದ ಸದಸ್ಯರು ಚೇತರಿಸಿಕೊಂಡಿದ್ದಾರೆ. ಈ ಹೊಸ ಸಿದ್ಧಾಂತದ ಮೇಲೆ ತಮಗಿಷ್ಟ ಬಂದ ವಿಚಾರಧಾರೆಯನ್ನು ಲೀಟರ್‍ಗಟ್ಟಲೆ ಹರಿಸಲಿದ್ದೇವೆ ಎಂಬ ಸೂಚನೆಯನ್ನು ಈಗಾಗಲೇ ಕೊಟ್ಟಿದ್ದಾರೆ. ಇವರೆಲ್ಲ ನಿಜವಾಗಿಯೂ ಮನುಷ್ಯರಾ ಎಂಬ ಅನುಮಾನ ಇಷ್ಟು ದಿನ ನಮ್ಮಂತಹ ಸಾಮಾನ್ಯರಿಗಿತ್ತು. ಅದನ್ನು ಸಂಪೂರ್ಣವಾಗಿ ಪರಿಹರಿಸುವಂತೆ, ರವಿ ಸಾವಿನ ಪ್ರಕರಣ ತಿರುವುಗಳನ್ನು ಪಡೆದುಕೊಳ್ಳುತ್ತಿದೆ.
ಸರಿ, ರವಿಯ ಕೊಲೆ ಆಗಲಿಲ್ಲ, ಆತ್ಮಹತ್ಯೆ ಮಾಡಿಕೊಂಡರು ಎಂದೇ ಇಟ್ಟುಕೊಳ್ಳೋಣ. ಅವರು ಹಿಡಿದುಹಾಕಿದ ತಿಮಿಂಗಲಗಳ ತಪ್ಪು ಮುಚ್ಚಿಹೋಗುತ್ತದಾ? ಸರಕಾರದ ಕೃಪೆಯಿರುವ ಬಕಾಸುರ ಕಂಪೆನಿಗಳು ಮಾಡಿರುವುದು ಸರಿ ಎಂದಾಗುತ್ತದಾ? ರವಿ ಸಾವಿಗೆ ರಾಜಕೀಯ ಪ್ರೇರಣೆ ಇರಲಿಲ್ಲ; ವೈಯಕ್ತಿಕ ಕಾರಣಗಳು ಇದ್ದವು ಎಂದೇ ಇಟ್ಟುಕೊಳ್ಳೋಣ. ಆಗಲೂ, ಅವರು ಇದುವರೆಗೆ ಹಿಡಿದುಹಾಕಿದ್ದ ರಾಕ್ಷಸರು ಏಕ್‍ಧಂ ಸಾಚಾಗಳಾಗುತ್ತಾರಾ? ರವಿ ಭೇದಿಸಿದ ಕಪ್ಪುಪ್ರಕರಣಗಳೆಲ್ಲ ಬೆಳ್ಳಂಬಿಳಿ ಆಗಿಬಿಡುತ್ತವಾ? ರವಿ ವೈಯಕ್ತಿಕ ಸಮಸ್ಯೆಗಳಿಗೆ ಸಿಕ್ಕಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದ ಮಾತ್ರಕ್ಕೆ ನಮ್ಮ ರಾಜ್ಯದ ಗೃಹಮಂತ್ರಿಯ ಬಟ್ಟೆ ಶುಭ್ರವಾಗಿಬಿಡುತ್ತದಾ? ಅದಕ್ಕೆ ಈ ಸಾವಿನ ಕಲೆ ಅಂಟುವುದೇ ಇಲ್ಲವಾ? ಡಂಕನ್‍ನನ್ನು ಕೊಲ್ಲಿಸಿದ ತಪ್ಪಿಗೆ ಪ್ರಾಯಶ್ಚಿತ್ತವಾಗಿ ಮ್ಯಾಕ್‍ಬೆತ್‍ನ ಹೆಂಡತಿ ಜೀವನಪೂರ್ತಿ ಕೈತೊಳೆಯುತ್ತಾಳಲ್ಲ, ಅಂತಹ ಪಾಪದ ಕೊಳೆ ಈ ಮಂತ್ರಿಗಳಿಗೆ ಮೆತ್ತಿಕೊಳ್ಳುವುದಿಲ್ಲವಾ? ಅಥವಾ ಅದನ್ನು ಕೊಳೆಯೆಂದು ಭಾವಿಸದೆ ರಕ್ತಮೆತ್ತಿದ ಕೈಯಲ್ಲೇ ಊಟ ಮಾಡುವುದನ್ನು ಈ ರಾಜಕಾರಣಿಗಳು ರೂಢಿಸಿಕೊಂಡಿದ್ದಾರಾ? ನಾವೆಂಥಾ ಪ್ರೇತಗಳ ರಾಜ್ಯದಲ್ಲಿ ಬದುಕುತ್ತಿದ್ದೇವೆ ಎಂದು ನೆನೆಸಿಕೊಂಡರೇ ಭಯವಾಗುತ್ತದೆ, ಹೇಸಿಗೆಯಾಗುತ್ತದೆ, ದಿಗ್ಭ್ರಮೆಯಾಗುತ್ತದೆ.
ಒಂದು ಹೆಣ ಅಲ್ಲಿ ಸತ್ತು ಬಿದ್ದಿದೆ. ಅದರ ಕೂದಲು ಬೋಳಿಸಿ ರಗ್ಗು ಮಾಡುವುದು ಹೇಗೆಂದು ಒಬ್ಬ ಯೋಚಿಸುತ್ತಿದ್ದಾನೆ. ಅದರ ಚರ್ಮ ಸುಲಿದು ಚಪ್ಪಲಿ ಹೊಲಿದುಕೊಳ್ಳುವುದು ಹೇಗೆಂದು ಇನ್ನೊಬ್ಬ ಚಿಂತಿಸುತ್ತಿದ್ದಾನೆ. ಅದರ ಕರುಳನ್ನು ಹಾರದಂತೆ ಕೊರಳಿಗೆ ಸುತ್ತಿಕೊಂಡು ಮತ್ತೊಬ್ಬ ಸಂಭ್ರಮಿಸುತ್ತಿದ್ದಾನೆ. ಅದರ ರಕ್ತವನ್ನು ಬಗೆದು ಪಾಯಸದಂತೆ ಮಗದೊಬ್ಬ ಹೀರುತ್ತಿದ್ದಾನೆ. ಈ ಹೆಣದ ಮೇಲೆ ಕೂತು ಸಿದ್ಧಿ ಗಳಿಸುತ್ತೇನೆಂದು ಮತ್ತೊಬ್ಬ ಅಘೋರಿ ಕಾಯುತ್ತಿದ್ದಾನೆ. ಇವರೆಲ್ಲರಿಂದ ದೂರದಲ್ಲಿ ಕೂತು ಆ ಮನುಷ್ಯನ ನಿಯತ್ತಿನ ನಾಯಿ ಅನ್ನ-ಬಿಸ್ಕೆಟ್ಟು ಬಿಟ್ಟು ಕಣ್ಮುಚ್ಚಿ ರೋದಿಸುತ್ತಿದೆ. ಕೂತಲ್ಲೇ ಕಲ್ಲಾಗಿದೆ. ಕಲ್ಲಾಗಿಯೂ ಮೇಣದಂತೆ ಕರಗುತ್ತಿದೆ.