ವಿಷಯದ ವಿವರಗಳಿಗೆ ದಾಟಿರಿ

ಮಾರ್ಚ್ 23, 2015

5

ಸರ್ವಾಧಿಕಾರಿಗಳನ್ನೂ ಜನಶಕ್ತಿ ಮುಗಿಸಿಹಾಕಿದೆ, ನೆನಪಿರಲಿ!

‍ನಿಲುಮೆ ಮೂಲಕ

– ರೋಹಿತ್ ಚಕ್ರತೀರ್ಥ

ಡಿ.ಕೆ ರವಿಮಹಾಭಾರತದಲ್ಲಿ ಬರುವ ಪ್ರಸಂಗ ಇದು. ಭೀಷ್ಮರ ಸೇನಾಧಿಪತ್ಯವನ್ನು ಕೊನೆಗಾಣಿಸಿ ಅವರನ್ನು ಪಾಂಡವರು ಶರತಲ್ಪದಲ್ಲಿ ಮಲಗುವಂತೆ ಮಾಡಿದ ಮೇಲೆ, ದುರ್ಯೋಧನ, ದ್ರೋಣನಿಗೆ ಸೇನೆಯ ಅಧಿಪತ್ಯ ವಹಿಸುತ್ತಾನೆ. ದ್ರೋಣ ಆದದ್ದಾಗಲಿ, ದೊಡ್ಡ ಮಿಕವನ್ನೇ ಬಲೆಗೆ ಕೆಡವಬೇಕು ಎಂದು ಯೋಚಿಸಿ ಚಕ್ರವ್ಯೂಹದ ರಚನೆ ಮಾಡುತ್ತಾನೆ. ಈ ವ್ಯೂಹಕ್ಕೆ ಅರ್ಜುನನಲ್ಲದೆ ಮತ್ಯಾರೂ ಎಂಟೆದೆಯಿಂದ ನುಗ್ಗುವುದಿಲ್ಲ; ಅವನೊಮ್ಮೆ ಒಳಬಂದರೆ ಸಾಕು ಒಂದೆರಡು ದಿನದ ಮಟ್ಟಿಗೆ ಅವನನ್ನು ಓಡಾಡಿಸಿ ಸುಸ್ತುಹೊಡೆಸಬಹುದು ಎನ್ನುವುದು ದ್ರೋಣನ ಲೆಕ್ಕಾಚಾರ. ಆದರೆ, ಅರ್ಜುನ ಸಂಶಪ್ತಕರೊಂದಿಗೆ ಹೋರಾಡಲು ಹೋದದ್ದರಿಂದ ಅವನ ಮಗ ಅಭಿಮನ್ಯು ಈ ಚಕ್ರವ್ಯೂಹದೊಳಕ್ಕೆ ನುಗ್ಗುತ್ತಾನೆ. ಆಗ ಅವನಿಗಿನ್ನೂ ಹದಿನಾರರ ಹರೆಯ. ವ್ಯೂಹವನ್ನು ಭೇದಿಸುವುದು ಹೇಗೆಂದು ತಿಳಿದಿದೆಯೇ ಹೊರತು ಹೊರಬರುವ ತಂತ್ರ ಅವನ ಕೈಯಲ್ಲಿಲ್ಲ. ಆದರೂ ಒಂದು ಕೈ ನೋಡೇಬಿಡಬೇಕು ಎಂಬ ಭಂಡಧೈರ್ಯದಲ್ಲಿ ನುಗ್ಗಿದ ಕೂಸು ಅದು. ಚಕ್ರವ್ಯೂಹವನ್ನು ಹೊಕ್ಕಮೇಲೆಯೇ ಅವನಿಗೆ ನಿಜಸ್ಥಿತಿಯ ಅರಿವಾಗುವುದು. ವ್ಯೂಹದ ರಚನೆ ಹೇಗಿರುತ್ತದೆಂದರೆ, ಎಷ್ಟೇ ಹೊತ್ತು ಕಾದಾಡಿದರೂ ಆ ಸೈನಿಕರು ವೃತ್ತಾಕಾರದಲ್ಲಿ ಸುತ್ತುತ್ತಿರುವುದರಿಂದ ಯುದ್ಧ ನಿಲ್ಲುವ ಪ್ರಶ್ನೆಯೇ ಇಲ್ಲ! ಅಭಿಮನ್ಯು ಎಲ್ಲರನ್ನೂ ಕೊಂದು ಹೊರಬರುವ ಯೋಚನೆಯನ್ನು ಬಿಟ್ಟೇಬಿಡಬೇಕು!

ಸಾವಿರ ಸೈನಿಕರು ನೆಲಕ್ಕುರುಳಿದರೆ, ಅವನಿಗೆ ಗೊತ್ತೇ ಆಗದಂತೆ ಆ ಜಾಗದಲ್ಲಿ ಮತ್ತೆ ಸಾವಿರ ಸೈನಿಕರು ಜಮೆಯಾಗುತ್ತಿದ್ದಾರೆ. ಇಂತಹ ಕುಟಿಲತಂತ್ರ ತನ್ನ ಮೇಲೆ ಪ್ರಯೋಗವಾದರೂ ಅಭಿಮನ್ಯು ಯುದ್ಧ ನಿಲ್ಲಿಸುವವನಲ್ಲ. ಎಡಬಲ ತಿರುಗುತ್ತ ಅವನು ಒಂದೇ ಸವನೆ ಬಾಣ ಪ್ರಯೋಗ ಮಾಡುತ್ತಾ ಕಾದಾಡುತ್ತಿದ್ದಾನೆ. ಕೊನೆಗೆ, ಇದು ಮುಗಿಯುವ ಸೂಚನೆ ಕಾಣದಾಗ ದ್ರೋಣ ಕರ್ಣನತ್ತ ತಿರುಗಿ ಕೈ ಕಡಿದು ಹಾಕು ಎಂದು ಸನ್ನೆ ಮಾಡುತ್ತಾನೆ. ಕರ್ಣ ಅಭಿಮನ್ಯುವಿನ ಮೇಲೆ ಮುಗಿಬಿದ್ದು ಕೈಗಳನ್ನು ಕತ್ತರಿಸಿದಾಗ ಇಡೀ ಕೌರವ ಸೇನೆ ಮುಖಮೂತಿ ನೋಡದೆ ಆ ವೀರಸೇನಾನಿಯ ಮೇಲೆ ಮುಗಿಬೀಳುತ್ತದೆ. ಸಾಯುತ್ತಿರುವ ಹುಲಿಯನ್ನು ನೂರು ರಣಹದ್ದುಗಳು ಎಳೆದು ಚೆಲ್ಲಾಡಿದಂತೆ ಅಭಿಮನ್ಯುವಿನ ವಜ್ರದೇಹದ ಮೇಲೆ ಹೇಡಿಗಳು ದಾಂಧಲೆ ನಡೆಸಿ ಹರಿದುಮುಕ್ಕುತ್ತವೆ. ರಣರಂಗದಲ್ಲಿ ಸಾಯಲಿಕ್ಕೆಂದೇ ಹುಟ್ಟಿಬಂದಂತಿದ್ದ ಅಭಿಮನ್ಯು, ಕೇವಲ ಹದಿನಾರರ ಹರೆಯದಲ್ಲಿ ಸಾವಿರಾರು ಹೇಡಿಗಳನ್ನು ಕೊಚ್ಚಿಹಾಕಿ ಇಹ ತ್ಯಜಿಸಿದ ಅಭಿಮನ್ಯು, ಕೌರವರ ಅಭೇದ್ಯ ಕೋಟೆಗೆ ನುಗ್ಗಿ ದ್ರೋಣನಂತಹ ಸೇನಾಪತಿಗೂ ಅಭೇದ್ಯನಾಗಿ ಉಳಿಯುವ ಅಭಿಮನ್ಯು – ಸತ್ತ. ಆದರೆ, ಕೌರವರ ಆತ್ಮಸಾಕ್ಷಿಗೆ ಚುಚ್ಚಿದ ಮುಳ್ಳಾಗಿ ಉಳಿದ. ಅಮರನಾದ.

ಅಭಿಮನ್ಯುವಿನ ಕತೆ ಮತ್ತೆ ನೆನಪಾಗುತ್ತದೆ. ಇಂತಹ ಕೌರವರು ಮತ್ತೆಮತ್ತೆ ಹುಟ್ಟಿಬರುತ್ತಿದ್ದಾರೆ. ಇಂತಹ ಅಭಿಮನ್ಯುಗಳೂ ಕೂಡ. ಈ ಕಲಿಯುಗದ ಅಭಿಮನ್ಯುಗಳಿಗೂ ಅಷ್ಟೆ, ಚಕ್ರವ್ಯೂಹದ ಒಳಗೆ ನುಗ್ಗುವುದು ಮಾತ್ರ ಗೊತ್ತು. ಅದರಿಂದ ಹೊರಬರುವ ತಂತ್ರ ಗೊತ್ತಿಲ್ಲ. ಹಾಗೆ ಪಾರಾಗಿ ಹೊರಬರುವುದು ಸಾಧ್ಯವಿದ್ದರೆ ಅವರು ಅಭಿಮನ್ಯುಗಳೇ ಆಗುತ್ತಿರಲಿಲ್ಲ. ಇದನ್ನು ವಿಧಿಯ ವ್ಯಂಗ್ಯ ಎನ್ನಬೇಕೆ?

ಕಳೆದ ಒಂದು ವಾರದಲ್ಲಿ ನಮ್ಮಲ್ಲಿ ನಡೆದಿರುವ ಬೆಳವಣಿಗೆಗಳನ್ನು ನೋಡಿ. ಈ ರಾಜ್ಯದಲ್ಲಿ ಆಡಳಿತ ನಡೆಸಿದ ಯಾವುದೇ ಸರಕಾರ ಇಷ್ಟೊಂದು ರಣಹೇಡಿ, ಷಂಡ, ಲಜ್ಜೆಗೇಡಿಯಾಗಿರಲಿಲ್ಲ. ಪ್ರಾಮಾಣಿಕ, ನಿಷ್ಠಾವಂತ, ಖಡಕ್ ಅಧಿಕಾರಿಯಾಗಿದ್ದವನು ನೆಲಕ್ಕೆ ಬಿದ್ದಿದ್ದಾನೆ. ಅವನ ಸಾವನ್ನು ಆತ್ಮಹತ್ಯೆ ಎಂದು ಮುಗಿಸಿಹಾಕಿದರೆ, ಅದೇ ಸುಳ್ಳನ್ನು ನೂರು ಸಲ ಮಾಧ್ಯಮಗಳಿಗೆ ಹೇಳಿದರೆ, ಅಲ್ಲಿಗೆ ಚಾಪ್ಟರ್ ಕ್ಲೋಸ್ ಆಗುತ್ತದೆ; ತಮ್ಮ ಸರಕಾರ ಆಮೇಲೆ ಅಬಾಧಿತವಾಗಿ ಮುಂದುವರಿಯಬಹುದು ಎಂದು ಈ ಸರಕಾರದ ಮುಖ್ಯಮಂತ್ರಿ ತಿಳಿದಿದ್ದಾರೆ. ಅವರ ಮುಖದಲ್ಲಿ ಕಳೆದೊಂದು ವಾರದಲ್ಲಿ ವಿಷಾದವನ್ನಾಗಲೀ ಸಂತಾಪವನ್ನಾಗಲೀ ಯಾರೂ ಕಂಡಿಲ್ಲ. ದುಃಖವನ್ನಂತೂ ಮೊದಲೇ ಇಲ್ಲ. ಎಂದಿನಂತೆ ಈ ಮನುಷ್ಯ ಹುಳ್‍ಹುಳ್ಳಗೆ ನಗುತ್ತ ಸೀಮೆಕೋಣದಂತೆ ಎದೆಯುಬ್ಬಿಸಿ ನಡೆಯುತ್ತ ಎಲ್ಲರಿಗೆ ಮಂಕುಬೂದಿ ಎರಚಿ, ಬೇಕಾದವರಿಗೆ ಪ್ರಸಾದ ಹಂಚಿ ಸುಖನಿದ್ದೆ ಹೊಡೆಯುತ್ತಿದ್ದಾರೆ. ಇವರು ನಮ್ಮ ಪ್ರತಿನಿಧಿಯಾ? ಇವರನ್ನೇ ನಾವು ಎರಡು ವರ್ಷದ ಹಿಂದೆ ವಿಧಾನಸೌಧಕ್ಕೆ ಆರಿಸಿಕಳಿಸಿದ್ದಾ? ಜನರ ಪ್ರತಿನಿಧಿ ಅಂತ ಹೇಳಿಕೊಳ್ಳುವವನು ಇಷ್ಟೊಂದು ನಿರ್ಭಾವುಕ, ಸಂವೇದನಾರಹಿತನಾಗುವುದು ಸಾಧ್ಯವಿದೆಯಾ? ಈ ದಟ್ಟದರಿದ್ರ ಹೆಂಬೇಡಿಗಳನ್ನು ಆರಿಸಿ ಕಳಿಸುವಾಗ ನಮ್ಮ ಬುದ್ಧಿಗೆ ಮಂಕು ಕವಿದಿತ್ತಾ? ಎಂದು ಈಗ ಕನ್ನಡಿಗರು ಕೇಳಿಕೊಳ್ಳುತ್ತಿದ್ದಾರೆ.

ಸಿಐಡಿ ಅಧಿಕಾರಿಗಳಿಗೆ ಕನ್ನಡದ ಶ್ರೀಸಾಮಾನ್ಯ ಬೋರೇಗೌಡ ಕೇಳಿದ ಪ್ರಶ್ನೆಗಳು ಇವು: ಹುಲಿ ಯಾವತ್ತಾದರೂ ಆತ್ಮಹತ್ಯೆ ಮಾಡಿಕೊಳ್ಳುತ್ತದಾ? ಒಂದುವೇಳೆ, ಹೌದು ಅಂತಲೇ ಇಟ್ಟುಕೊಳ್ಳಿ. ಹಾಗಾದರೆ ಅದು ಆತ್ಮಹತ್ಯೆ ಮಾಡಿಕೊಳ್ಳುವ ದಿನ ಆಫೀಸಿಗೆ ಹೋದದ್ದು ಯಾಕೆ? ಎರಡು ಗಂಟೆ ಕೆಲಸ ಮಾಡಿ ಆಮೇಲೆ ಮನೆಗೆ ಹೋಗಿ ನೇಣು ಹಾಕಿಕೊಳ್ಳೋಣ ಎಂದು ಅದು ಭಾವಿಸಿತ್ತೆ? ಆತ್ಮಹತ್ಯೆ ಮಾಡಿಕೊಳ್ಳಹೋಗಿದ್ದ ಹುಲಿ ಮನೆಯಲ್ಲಿ ಒಳಗಿನಿಂದ ಅಗುಳಿ ಹಾಕಿಕೊಳ್ಳದೆ ಬೀಗ ಹಾಕಿದ್ದು ಯಾಕೆ? ಮಂಚ ಎರಡೂವರೆ ಅಡಿ, ಫ್ಯಾನಿನ ಉದ್ದ 2 ಅಡಿ, ಹಗ್ಗ 2 ಅಡಿ, ಮತ್ತು ಹುಲಿಯ ಉದ್ದವೇ 5.10 ಅಡಿ ಇರುವಾಗ, 11 ಅಡಿಯ ಆ ಕೋಣೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಳ್ಳುವುದು ಸಾಧ್ಯವಿತ್ತೆ? ಇನ್ನು ಆ ದೇಹದಲ್ಲಿ, ಆತ್ಮಹತ್ಯೆ ಮಾಡಿಕೊಂಡಾಗ ದೇಹದಲ್ಲಿ ಆಗುವ ಯಾವ ಬದಲಾವಣೆಗಳೂ ಕಂಡುಬರದೆ ಇರಲು ಕಾರಣವೇನು? ಕೊಲೆ ಮಾಡುವುದು ಎಂದರೆ ದೇಹದ ಮೇಲೆ ಗಾಯದ ಗುರುತು ಇರಲೇಬೇಕೆಂಬ ನಿಯಮ ಇದೆಯೇ? ಮೂಗಿಗೆ ರಾಸಾಯನಿಕ ಹಿಡಿದು ಯಾವ ಗುರುತೂ ಸಿಗದಂತೆ ಕೊಲೆ ಮಾಡಿರಲು ಯಾಕೆ ಸಾಧ್ಯವಿಲ್ಲ? ಕೊರಳಿಗೆ ಸುತ್ತಿಕೊಳ್ಳಲಿಕ್ಕೆಂದೇ ಹುಲಿ ದುಬೈಗೆ ಹೋಗಿ ವಿಶೇಷ ವಸ್ತ್ರವನ್ನು ಖರೀದಿಸಿಕೊಂಡು ಬಂದಿತ್ತೆ? ಆ ದಿನ ಆತ್ಮಹತ್ಯೆ ಮಾಡಿಕೊಳ್ಳುವ ಇರಾದೆ ಇದ್ದರೆ ಮಧ್ಯಾಹ್ನ ಊಟ ಕಳಿಸು ಎಂದು ಹೆಂಡತಿಗೆ ಯಾವ ಹುಲಿಯಾದರೂ ಹೇಳುತ್ತಾ? “ಇವಳೇ, ಇವೊತ್ತು ನಾನು ಬರೋದು ಲೇಟಾಗಬಹುದು. ನೀವು ಯಾವುದಕ್ಕೂ ಕಾಯಬೇಡಿ. ಊಟ ಮಾಡಿ ಮಲಗಿ” ಅಂತ ಹೇಳುತ್ತಿರಲಿಲ್ಲವಾ? ಹತ್ತು ಗಂಟೆವರೆಗೆ ಮಾವನ ಜೊತೆಗಿದ್ದ, ಆಮೇಲೆ ಆಫೀಸಿನಲ್ಲಿ ಕಡತಗಳ ನಡುವೆ ಮುಳುಗಿಹೋಗಿದ್ದ ಈ ಅಧಿಕಾರಿಹುಲಿಗೆ ನಡುವೆ ತನ್ನ ಪ್ರೇಯಸಿಗೆ ನಲವತ್ತನಾಲ್ಕು ಸಲ ಕರೆಮಾಡಲು ಎಲ್ಲಿ ಪುರುಸೊತ್ತು ಸಿಕ್ಕಿತು?

ಪ್ರಶ್ನೆಗಳು ನೂರಾರಿವೆ. ಸಂಶಯಗಳು ಹೆಡೆ ಎತ್ತಿ ಕುಣಿಯುತ್ತಿವೆ. ಅಪಾರ್ಟ್‍ಮೆಂಟಿಗೆ ಬಂದುಹೋದ ಮೂವರು ಯಾರು? ಕೆಲಸದಲ್ಲಿ ನಿರತರಾಗಿದ್ದ ರವಿಯನ್ನು ಇದ್ದಕ್ಕಿದ್ದಂತೆ ಮನೆಗೆ ಕರೆಸಿದ ಆ ಸಂಗತಿ ಯಾವುದು? ಅವರು ಅಪಾರ್ಟ್‍ಮೆಂಟಿಗೆ ಬಂದ ಕೆಲವೇ ಹೊತ್ತಿನಲ್ಲಿ ಆ ವ್ಯಕ್ತಿಗಳು ಬಂದದ್ದಕ್ಕೆ ಏನು ಕಾರಣ? ಅವರನ್ನು ದಾಖಲಿಸಿದ ಸಿಸಿಟಿವಿ ಫೂಟೇಜ್ ಎಲ್ಲಿದೆ? ಅಪಾರ್ಟ್‍ಮೆಂಟಿಗೆ ಹೊರಗಿನವರು ಯಾರಾದರೂ ಬಂದರೆ ಸೆಕ್ಯುರಿಟಿ ಗಾರ್ಡ್‍ಗಳು ಆಯಾ ಮನೆಯವರಿಗೆ ಫೋನ್ ಮಾಡಿ, ಇಂತಿಂಥವರು ಬಂದಿದ್ದಾರೆ ಎಂದು ಮಾಹಿತಿ ಕೊಡುತ್ತಾರೆ. ಈ ಮೂರು ಜನರ ವಿಷಯದಲ್ಲಿ ಅಂತಹ ಮಾಹಿತಿಯನ್ನು ಸೆಕ್ಯುರಿಟಿ ಕೊಟ್ಟಿದ್ದನಾ? ಸೆಕ್ಯುರಿಟಿ ಗಾರ್ಡ್ ಬಳಿ ಇರುವ ಎಂಟ್ರಿ ಲೆಡ್ಜರ್‍ಪುಸ್ತಕ ಎಲ್ಲಿದೆ? ಆ ಮೂವರು ಹೋದಮೇಲೆ ಅಪಾರ್ಟ್‍ಮೆಂಟನ್ನು ತೊಳೆದಿಟ್ಟದ್ದು ಯಾರು? ರವಿಯದ್ದು ಆತ್ಮಹತ್ಯೆ ಎನ್ನುವುದೇ ನಿಜವಾಗಿದ್ದರೆ ಸರಕಾರಿ ಅಧಿಕಾರಿಗಳು, ಮಂತ್ರಿಮಹೋದಯರು ಎದ್ದುಬಿದ್ದು ಓಡಿಬಂದು ಪರಿಶೀಲಿಸಿದ್ದು ಯಾಕೆ? ರವಿಯ ಪ್ರಕರಣ ನಿಜವಾಗಿಯೂ ವೈಯಕ್ತಿಕವಾಗಿದ್ದರೆ ಮಾನ್ಯ ಗೃಹಮಂತ್ರಿಗಳು ರವಿ ಮನೆಯಲ್ಲಿ ಒಂದೂವರೆ ಗಂಟೆ ಯಾವ ಪ್ರಮುಖವಿಷಯ “ಸಮಾಲೋಚಿಸಿದರು”? ಮುಖ್ಯಮಂತ್ರಿ ಎಲ್ಲಾ ಬಿಟ್ಟು ಶವಪರೀಕ್ಷೆ ನಡೆಯುತ್ತಿದ್ದ ಜಾಗಕ್ಕೆ ಯಾಕೆ ಓಡಿದರು? ಸಿಐಡಿ ಅಧಿಕಾರಿಗಳು ತನಿಖೆಯ ಹೆಸರಲ್ಲಿ ರವಿಯ ಆಫೀಸಿನ ಎಲ್ಲಾ ಕಡತಗಳನ್ನು ಯಾಕೆ ಹೊತ್ತುಕೊಂಡು ಹೋದರು? ರವಿಯ ಮೊಬೈಲ್, ಲ್ಯಾಪ್‍ಟಾಪ್ ಇತ್ಯಾದಿ ವಶಪಡಿಸಿಕೊಳ್ಳುವಾಗ ಪಂಚನಾಮೆ ಮಾಡಿದರಾ? ಇವನ್ನೆಲ್ಲ ತೆಗೆದುಕೊಳ್ಳುವಾಗ ತನಿಖಾಧಿಕಾರಿ ಒಬ್ಬನೇ ಘಟನೆ ನಡೆದ ಸ್ಥಳಕ್ಕೆ ತೆರಳಬೇಕಾದ್ದು ನಿಯಮ. ಆ ನಿಯಮವನ್ನು ಗಾಳಿಗೆ ತೂರಿ ಸಂತೆಯಂತೆ ಅಧಿಕಾರಿಗಳ ಜಾತ್ರೆ ನೆರೆದದ್ದು ಯಾಕೆ?

ಸರಿ, ರವಿಗೆ ತನ್ನ ಸಹಪಾಠಿಯ ಮೇಲೆ ಪ್ರೇಮ ಇತ್ತೆಂದೇ ಹೇಳೋಣ. ಮದುವೆಯಾಗಿ ಗೃಹಸ್ಥನಾಗಿರುವ ಒಬ್ಬ ಸರಕಾರಿ ಅಧಿಕಾರಿ, ಕೇವಲ ಪ್ರೇಮವೇ ಕಾರಣವಾಗಿ, ಮದುವೆಯಾಗಿ ಸಂಸಾರ ನಡೆಸುತ್ತಿರುವ ಹೆಣ್ಣಿಗೆ “ನಾವಿಬ್ಬರೂ ಮದುವೆಯಾಗೋಣ” ಎನ್ನುತ್ತಾನಾ? ಅವನಿಗೆ ಅಷ್ಟೂ ಕಾನೂನಿನ ಪರಿಜ್ಞಾನ ಇರುವುದಿಲ್ಲವಾ? “ನಾನು ಕೊಟ್ಟಕೊನೆಯ ಮೆಟ್ಟಿಲು ಹತ್ತುತ್ತಿದ್ದೇನೆ” ಎಂದು ಅವನು ಹೇಳಿದಾಗ, ಅದೇ ದಿನ 44 ಸಲ ಕರೆ ಮಾಡಿದಾಗ, ಇನ್ನೋರ್ವ ಐಎಎಸ್ ಅಧಿಕಾರಿಯಾಗಿರುವ ಆಕೆಗೆ “ದೊಡ್ಡ ಅವಘಡ ನಡೆದೇಹೋಗಬಹುದು” ಎಂಬ ಸಣ್ಣ ಸಂಶಯವೂ ಹುಟ್ಟಲಾರದೆ? ಆಮೇಲೆ ಅವನ ಕರೆ ತಟ್ಟನೆ ನಿಂತುಹೋದಾಗ ಅನುಮಾನ ಬರಲಾರದೆ? ಆಕೆ ಮತ್ತೆ ಅವನ ಫೋನಿಗೆ ಕರೆ ಮಾಡಿ ವಿಚಾರಿಸಲಾರಳೆ? ಅಥವಾ ತನ್ನಂತೆಯೇ ಹೆಣ್ಣಾಗಿರುವ ಅವನ ಹೆಂಡತಿಗಾದರೂ ಫೋನ್ ಮಾಡಿ, ಏನಾಯ್ತು ಎಂದು ಕೇಳಲಾರಳೆ? ಅಥವಾ ಅವಳೂ ಅಭಿಮನ್ಯುವನ್ನು ಮುಗಿಸುವ ಕೌರವರ ಪಾಳೆಯಕ್ಕೆ ಸೇರಿದ್ದವಳೇ?

ಪ್ರಶ್ನೆಗಳು ನೂರಾರಿವೆ. ಆದರೆ ಉತ್ತರಿಸುವವರು ಯಾರು? ಕೌರವರು ಅಭಿಮನ್ಯುವನ್ನು ಹರಿದು ಮುಕ್ಕಿದ್ದಾಗಿದೆ. ಅದರ ಮೇಲೆ ಶವಪರೀಕ್ಷೆ ಎಂಬ ಅಣಕುಪ್ರದರ್ಶನವೂ ನಡೆದುಹೋಗಿದೆ. ಈಗ ಅವನೆಂಥಾ ಕೆಟ್ಟವನಾಗಿದ್ದ, ಹೆಣ್ಣುಗಳಿಗಾಗಿ ಹೇಗೆ ಬಾಯಿಬಾಯಿ ಬಿಡುತ್ತಿದ್ದ, ಪ್ರೇಮಕ್ಕಾಗಿ ಹೇಗೆ ಹಂಬಲಿಸುತ್ತಿದ್ದ ಎಂಬ ರಂಜನೆ-ಪ್ರಚೋದನೆಯ ಕತೆಗಳು ಹುಟ್ಟಿಕೊಂಡು ಶವದ ಸುತ್ತ ಕುಣಿಯುತ್ತಿವೆ. ಇಂತಹ ಕತೆಗಳನ್ನು ಹುಟ್ಟಿಸಿ ಗೆದ್ದೆವು ಎಂದು ಬೀಗುತ್ತಿರುವ ಕೆಲವು ರಣಹೇಡಿ ಪತ್ರಕರ್ತರುಗಳಿಗೆ ಕೃತಜ್ಞತೆಗಳ ಕಾಣಿಕೆ ಅರ್ಪಿಸಿರಬಹುದು. ಕಾರು ಬೇಕಾದವರಿಗೆ ಕಾರು, ಮನೆ ಬೇಕಾದವರಿಗೆ ಮನೆ, ಸೂಟ್‍ಕೇಸ್ ಬೇಕಾದವರಿಗೆ ಸೂಟ್‍ಕೇಸ್ ಮುಟ್ಟಿರಬಹುದು. ನೆನಪಿರಲಿ, 1960ರ ಜಮಾನದಂತೆ ಕಾಲ ನಾವು ಹೇಳಿದಂತೆ ನಡೆಯುತ್ತದೆ, ಜನ ನಾವು ಹೇಳಿದ್ದನ್ನು ವೇದ ಎನ್ನುವಂತೆ ನಂಬುತ್ತಾರೆ ಎಂದು ಸರಕಾರದ ಕೌರವರು ಇನ್ನೂ ತಿಳಿದಿದ್ದರೆ ಅದು ಅವರ ಮುಟ್ಟಾಳತನ. ಅಧಿಕಾರವೇ ಸರ್ವವೂ ಅಲ್ಲ. ಸುತ್ತ ರಂಭೆಊರ್ವಶಿಯರ ಪಡೆ ಕಟ್ಟಿಕೊಂಡು ಚಿನ್ನದ ಕಮೋಡಿನಲ್ಲಿ ಉಚ್ಚೆ ಹುಯ್ಯುತ್ತಿದ್ದ ಸರ್ವಾಧಿಕಾರಿಗಳನ್ನೇ ಜನ ಎಳೆದಾಡಿ ಬೀದಿಯಲ್ಲಿ ಹುಚ್ಚುನಾಯಿಯನ್ನು ಹೊಡೆದುಹಾಕುವಂತೆ ಕೊಂದರು. ನಮ್ಮ ರಾಜ್ಯದ ಪ್ರಜಾಪ್ರತಿನಿಧಿಗಳನ್ನು ಕಂಡರೆ ಆ ಸರ್ವಾಧಿಕಾರಿ ದುರುಳರೇ ಎಷ್ಟೋ ವಾಸಿ ಎನಿಸುತ್ತದೆ. ನಾವೇ ಆರಿಸಿ ಕಳಿಸಿದ ಈ ಜನನಾಯಕರು ಸರ್ವಾಧಿಕಾರಿಗಳಿಗಿಂತಲೂ ಬಿಗಿಯಾಗಿದ್ದಾರೆ. ಏಳು ಕೋಟಿ ಜನ ಒಕ್ಕೊರಲಿನಿಂದ ಹೇಳಿದರೂ, ಸ್ವತಃ ಅವರ ಇಟಲಿಯಮ್ಮ ಆದೇಶಿಸಿದರೂ ಕೇಳದ ಈ ಭಂಡರ ಪೊಗರು ಯಾವ ಮಟ್ಟದ್ದಿರಬೇಕು!

ಹೇಡಿ ಜನನಾಯಕರೇ, ಇನ್ನೂ ಎಷ್ಟು ಕಡಿದು ಕಟ್ಟೆಹಾಕಲು ಸಾಧ್ಯವೋ ಅವೆಲ್ಲವನ್ನೂ ಮಾಡಿ. ಇನ್ನೂ ಯಾರ್ಯಾರನ್ನು ಮುಗಿಸಿ ನಿಮ್ಮ ಪಾಪದ ಕೊಡ ತುಂಬಿಸಿಕೊಳ್ಳಬೇಕೋ ಅದನ್ನೂ ನಿಯತ್ತಿಂದ ಮಾಡಿಕೊಳ್ಳಿ. ಅಣೆಕಟ್ಟೆ ಒಡೆದು ನೀರು ನುಗ್ಗುವಾಗ ಯಾವ ಮರಳಕಂಬವನ್ನೂ ಉಳಿಸುವುದಿಲ್ಲ ಎನ್ನುವುದನ್ನು ಮರೆಯಬೇಡಿ. ಒಬ್ಬ ಅಭಿಮನ್ಯುವನ್ನು ಮಟ್ಟ ಹಾಕಿದ್ದೇ ಸಾಧನೆ ಎಂದು ನೀವು ತಿಳಿದಿದ್ದರೆ, ಅದರಷ್ಟು ದಡ್ಡತನ ಬೇರೆ ಇಲ್ಲ. ಅಭಿಮನ್ಯುಗಳು ಹುಟ್ಟಿ ಬರುತ್ತಲೇ ಇರುತ್ತಾರೆ; ಕೌರವ ಸಂತತಿ ಇರುವವರೆಗೆ.

5 ಟಿಪ್ಪಣಿಗಳು Post a comment
 1. ವಿಜಯ್ ಪೈ
  ಮಾರ್ಚ್ 23 2015

  ಉತ್ತಮ ಲೇಖನ..ಈ ಜನ ತಮ್ಮ ಕಾಗೆ-ಗುಬ್ಬಿ ಕಥೆಯನ್ನು ಉಳಿದವರು ನಂಬಬಹುದು ಎಂದು ತಿಳಿದುಕೊಂಡಿದ್ದಾರಲ್ಲ..ಇವರ ಭಂಡತನ ಮೆಚ್ಚಬೇಕು!

  ಉತ್ತರ
 2. ಮಾರ್ಚ್ 23 2015

  please remember people did not elect these leaders, in the last election a dirty lot was to be thrown out of power and the present lot mistook that they have been elected, what a paradox?

  ಉತ್ತರ
 3. sahana
  ಮಾರ್ಚ್ 23 2015

  Idu kadu sathya nam jagatinali nyaya nithi ge bele ila .Janara manavi kelada intha adikarigalanu navu munde aarisabaradu

  ಉತ್ತರ
  • ಮಾರ್ಚ್ 24 2015

   A VERY GOOD ARTICLE & GOOD QUSTIONING LET THEM ANSWERE FOR ALL THIESE QUSTIONS IF THEY HAVE GUTS ………

   ಉತ್ತರ
 4. ಏಪ್ರಿಲ್ 1 2015

  ತುಂಬ ಒಳ್ಳೆಯ ವಿಶ್ಲೇಷಣೆ. ಈ ಕುರುಕ್ಷೇತ್ರದ ಯುದ್ಧ ಎಂದೂ ನಡೆಯುತ್ತಲೇ ಇರುವುದು!

  ಉತ್ತರ

ನಿಮ್ಮ ಅನಿಸಿಕೆ...

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Note: HTML is allowed. Your email address will never be published.

Subscribe to comments