ವಿಷಯದ ವಿವರಗಳಿಗೆ ದಾಟಿರಿ

ಮಾರ್ಚ್ 27, 2015

1

ಶಿಕ್ಷಣ ಮತ್ತು ಧರ್ಮ: ಪರಸ್ಪರ ಪೂರಕ ಅಂಶಗಳು

‍ನಿಲುಮೆ ಮೂಲಕ

– ಎಸ್.ಎನ್.ಭಾಸ್ಕರ್‍

right-to-education_3ಶಿಕ್ಷಣದ ಮೂಲ ಉದ್ದೇಶ ವ್ಯಕ್ತಿಯ ಪರಿಪೂರ್ಣ ವಿಕಾಸ. ಸಂಸ್ಕಾರ, ತಿಳುವಳಿಕೆ, ಜ್ಞಾನ, ಕೌಶಲ್ಯ ಇವು ಶಿಕ್ಷಣದ ಮೂಲಭೂತ ಅಂಶಗಳು. ಉತ್ತಮ ಮಟ್ಟದ ಶಿಕ್ಷಣ ವ್ಯವಸ್ಥೆಯು ಈ ಎಲ್ಲಾ ಅಂಶಗಳಲ್ಲೂ ವ್ಯಕ್ತಿಯನ್ನು ಶಿಕ್ಷಿತನನ್ನಾಗಿಸುತ್ತದೆ. ಪ್ರಾರಂಭಿಕ ಹಂತದಿಂದಲೇ ಮಕ್ಕಳಿಗೆ ಈ ಎಲ್ಲಾ ಪ್ರಕಾರಗಳಲ್ಲಿ ಶಿಕ್ಷಣವನ್ನು ಒದಗಿಸುವುದು ಶೈಕ್ಷಣಿಕ ವ್ಯವಸ್ಥೆಯೊಂದರ ಆದ್ಯತೆ – ಯಾಗಬೇಕಾಗುತ್ತದೆ. ಆದರೆ ಇಂದಿನ ಪರಿಸ್ಥಿತಿ ಬಿನ್ನವಾಗಿದೆ. ಪಾಶ್ಚಾತ್ಯ ಕ್ರಮಗಳ, ವಿಧಿ-ವಿಧಾನಗಳ ಅನುಕರಣೆಯಲ್ಲಿ ನಾ ಮುಂದು ತಾ ಮುಂದು ಎಂದು ಶಿಕ್ಷಣ ಸಂಸ್ಥೆಗಳು ಪೈಪೋಟಿಗೆ ಬಿದ್ದಿವೆ. ಕೇವಲ ಆಂಗ್ಲ ಭಾಷೆಯ ಕಲಿಕೆಯಿಂದ ಮಕ್ಕಳು ಸುಶಿಕ್ಷಿತರಾಗುತ್ತಾರೆ ಎಂಬುದು ಬಹುತೇಕ ಪೋಷಕರ ಅನಿಸಿಕೆಯಾಗಿದೆ, ಇದನ್ನು ಮನಗಂಡ ಹಲವಾರು ಖಾಸಗಿ ಶಾಲೆಗಳು ಅಂಗ್ಲ ಭಾಷೆಯನ್ನು ಮಕ್ಕಳ ಮೇಲೆ ಹೇರುವುದರ ಮೂಲಕ ಜನಪ್ರಿಯವಾಗುತ್ತಿವೆ. ತನ್ನದೇ ಮಾತೃಭಾಷೆಯಲ್ಲಿ ಉನ್ನತ ಮಟ್ಟದ ಪ್ರೌಢಿಮೆ ಗಳಿಸದೇ ಇರುವ ವ್ಯಕ್ತಿಯ ಶಿಕ್ಷಣವು ಪರಿಪೂರ್ಣವಾಗುವುದಾದರೂ ಹೇಗೆ..? ಮೇಲೆ ತಿಳಿಸಿದ ನಾಲ್ಕೂ ಅಂಶಗಳೂ ಶಿಕ್ಷಣದ ಆಧಾರ ಸ್ಥಂಭಗಳಿದ್ದಂತೆ. ಯಾವುದೇ ಒಂದು ಸ್ಥಂಭ ಕುಸಿದರೂ ವ್ಯಕ್ತಿಯ ಕಲಿಕೆ, ಶಿಕ್ಷಣ ಪರಿಪೂರ್ಣತೆಯನ್ನು ಪಡೆಯುವುದಿಲ್ಲ. ಹಾಗೆಯೇ ನಮ್ಮ ಧರ್ಮ, ಸಂಸ್ಕೃತಿಯ ಬಗ್ಗೆ ಸೂಕ್ತ ಅರಿವು ಅಧ್ಯಯನವಿಲ್ಲದೇ ಜ್ಞಾನಾರ್ಜನೆ ವಿಕಾಸವಾಗುವುದಿಲ್ಲ,  ನಮ್ಮ ಸಂಸ್ಕೃತಿಯ ಹಿನ್ನೆಲೆ ವ್ಯಾಪ್ತಿಗಳನ್ನು ಅರಿಯದೆಯೇ ಇದ್ದರೆ ಹೇಗೆ ತಾನೆ ಕಲಿಕೆ ಪೂರ್ಣತೆಯನ್ನು ಮುಟ್ಟಲು ಸಾಧ್ಯ..? ನಮ್ಮ ಸಂಸ್ಕೃತಿಯು ನಮ್ಮ ಬೇರುಗಳಿದ್ದ ಹಾಗೆ  ಮೂಡುವ ಪ್ರತೀ ಚಿಗುರಿಗೂ ಸತ್ವ ಬೇರುಗಳಿಂದಲೇ ಒದಗ ಬೇಕಾಗುತ್ತದೆ. ನಮ್ಮದೇ ಬೇರುಗಳ ಬಗ್ಗೆ ನಮ್ಮ ಮಕ್ಕಳು ಶಿಕ್ಷಿತರಾಗದಿದ್ದರೆ ಅವರ ಜ್ಞಾನ ಅರ್ಧ ಬೆಂದ ಮಡಿಕೆಯಾಗುವುದರಲ್ಲಿ ಸಂಶಯವೇ ಇಲ್ಲ.

ನನ್ನ ಬಾಲ್ಯದ ಒಂದೆರಡು ಘಟನೆಗಳನ್ನು ಇಲ್ಲಿ ಹೇಳುವುದು ಸಮಯೋಚಿತವೆನಿಸುತ್ತದೆ. ಆಗ ನಾನು ಪ್ರಾರ್ಥಮಿಕ ಶಾಲೆಯಲ್ಲಿ ಬಹುಷಃ ಆರನೇ ತರಗತಿಯಲ್ಲಿ ಓದುತ್ತಿದ್ದ ನೆನಪು. ಶಾಲೆ ಮುಗಿದ ನಂತರ ಮನೆಗೆ ಬಂದು ಸಮವಸ್ತ್ರವನ್ನು ಬದಲಾಯಿಸಿ ಅಮ್ಮ ಕೊಟ್ಟ ಒಂದು ಲೋಟ ಹಾಲನ್ನು ಕುಡಿದು ಮನೆಯಿಂದ ಸ್ವಲ್ಪ ದೂರದಲ್ಲಿದ್ದ ಮೈದಾನಕ್ಕೆ ಹೋಗುತ್ತಿದ್ದೆ. ನನ್ನ ಈ ಧಾವಂತಕ್ಕೆ ಕಾರಣ ಅಲ್ಲಿ ಆಡಿಸಲಾಗುತ್ತಿದ್ದ ಆಟಗಳು. ಆರ್‍.ಎಸ್.ಎಸ್ ಗೆ ಸೇರಿದ ಕೆಲವರು ಖಾಕಿ ನಿಕ್ಕರ್‍ ಮತ್ತು ಬಿಳಿ ಷರ್ಟ್ ಧರಿಸಿ ಭಗವಾನ್ ದ್ವಜವನ್ನು ನೆಟ್ಟಿರುತ್ತಿದ್ದರು. ಒಂದು ಪ್ರಾರ್ಥನೆ, ರಾಷ್ಟ್ರದ ಬಗ್ಗೆ ನಮನ, ಹತ್ತಾರು ಆಟಗಳು. ಅಲ್ಲಿ ನಾವು ಸರಿ ಸುಮಾರು ಇಪ್ಪತ್ತರಿಂದ ಮೂವತ್ತರಷ್ಟು ಹುಡುಗರು ಸೇರುತ್ತಿದ್ದೆವು. ಮಧ್ಯ ವಯಸ್ಸಿನ ಒಂದಿಬ್ಬರು, ಕಾಲೇಜು ಓದುತ್ತಿದ್ದ ನಾಲ್ಕಾರು ಹುಡುಗರು ನೆರೆದಿರುತ್ತಿದ್ದರು. ನಮಗೆ ಯಾವುದೇ ರೀತಿಯ ಹೇರಿಕೆಯಾಗಲೀ ಒತ್ತಾಯವಾಗಲೀ ಇರುತ್ತಿರಲಿಲ್ಲ. ನಮ್ಮ ಹಬ್ಬಗಳ ಆಚರಣೆ, ಅವುಗಳ ಹಿನ್ನೆಲೆ ಹಾಗೂ ಮಹತ್ವ, ಆಟಗಳು ಕಸರತ್ತುಗಳ ಮೂಲಕ ದೈಹಿಕ ಆರೋಗ್ಯದ ಕಾಳಜಿ, ಎಲ್ಲಕ್ಕಿಂತ ಹೆಚ್ಚಾಗಿ ರಾಷ್ಟ್ರ ಭಕ್ತಿಯನ್ನು ಜಾಗೃತಗೊಳಿಸಲಾಗುತ್ತಿತ್ತು. ಶಾಲೆಗೆ ಹೋಗುವುದನ್ನು ತಪ್ಪಿಸಿದರು ಸರಿಯೇ ಮೈದಾನಕ್ಕೆ ಮಾತ್ರ ಪ್ರತಿ ದಿನವೂ ನಮ್ಮ ಹಾಜರಿ ತಪ್ಪದೇ ಇರುತ್ತಿತ್ತು. ಯಾವುದೇ ಒತ್ತಡವಿರದೇ ಇಂತಹ ವಾತಾವರಣದಲ್ಲಿ ಕಲಿತ ಅಂಶಗಳು ಒಟ್ಟಾರೆ ವ್ಯಕ್ತಿತ್ವ ವಿಕಾಸಕ್ಕೆ ಪೂರಕವಾದ ಪರಿಣಾಮವನ್ನೇ ಬೀರಿತು. ಈ ಶಿಕ್ಷಣವು ನಮ್ಮ ಒಟ್ಟಾರೆ ಕಲಿಕೆಯಲ್ಲಿ, ಕಲಿಕೆಯ ಹಾದಿಯಲ್ಲಿ ಧನಾತ್ಮಕವಾದ ಪ್ರಭಾವವನ್ನೇ ಬೀರಿದೆ ಎಂಬುದು ನನ್ನ ಅಭಿಪ್ರಾಯ.

ಬಾಲ್ಯದ ಮತ್ತೊಂದು ಘಟನೆ, ಅದು ನಾನು ಪ್ರೌಢಶಾಲೆಯಲ್ಲಿ ಓದುತ್ತಿದ್ದ ಸಮಯ, ಒಂಬತ್ತನೇ ತರಗತಿ ಇರಬಹುದು. ನಾನು ಓದುತ್ತಿದ್ದ ಖಾಸಗಿ ಶಾಲೆಗೆ ಹೊಸ ಪ್ರಾಂಶುಪಾಲರಾಗಿ ಒಬ್ಬರು ಬಂದರು. ಅವರ ಹೆಸರು ಇಲ್ಲಿ ಅಪ್ರಸ್ತುತ. ಆದರೆ ಅವರದ್ದು ಕ್ಷಿಶ್ಚಿಯನ್ ಧರ್ಮ ಎಂಬುದು ಅವರ ಹೆಸರಿನಿಂದಲೇ ತಿಳಿಯುತ್ತಿತ್ತು. ತದನಂತರ ಶಾಲೆಯ ಹಲವು ನಿಯಮಗಳಲ್ಲಿ ಬದಲಾವಣೆಗಳಾದವು. ನನಗೆ ನೆನಪಿನಲ್ಲಿರುವ ಎರಡು ಘಟನೆಗಳೆಂದರೆ, ಶಾಲೆಯ ಎಲ್ಲಾ ವಿದ್ಯಾರ್ಥಿಗಳಿಗೆ ಒಂದು ಪುಸ್ತಕವನ್ನು ಉಚಿತವಾಗಿ ಹಂಚಲಾಯಿತು. ಹೊಸ ಪುಸ್ತಕ ಎಂಬ ಕುತೂಹಲ ನಮಗೆಲ್ಲ. ಅದರಲ್ಲೂ ಉಚಿತವಾಗಿ ನೀಡುತ್ತಿದ್ದರಿಂದ ಎಲ್ಲರಿಗೂ ಆಶ್ಚರ್ಯ. ಹಸಿರು ಬಣ್ಣದ ಬೈಂಡ್ ಹಾಕಲಾಗಿದ್ದ ಚಂದವಾಗಿ ಮುದ್ರಿತವಾಗಿದ್ದ ಪುಸ್ತಕದ ಮೇಲೆ ದೊಡ್ಡ ಅಕ್ಷರಗಳಲ್ಲಿ ಬರೆದದ್ದು ನನಗೆ ಇಂದಿಗೂ ನೆನಪಿದೆ “ಹೊಸ ಒಡಂಬಡಿಕೆ”. ಪುಸ್ತಕವನ್ನು ಒಂದಲ್ಲಾ ಹಲವು ಬಾರಿ ತಿರುವಿ ಹಾಕಿದರೂ ಸಹಾ ಅದರಲ್ಲಿನ ಒಂದು ವಾಕ್ಯವೂ ನಮ್ಮ ಅರ್ಥಕ್ಕೆ ನಿಲುಕಲಿಲ್ಲ, ಪುಸ್ತಕವನ್ನು ಜೋಪಾನವಾಗಿ ತೆಗೆದುಕೊಂಡು ಹೋಗಿ ನಿಮ್ಮ ಮನೆಗಳಲ್ಲಿ ನೀಡಿ ಎಂದು ಎಲ್ಲರಿಗೂ ತಿಳಿಸಲಾಯಿತು. ಮನೆಗೆ ತೆಗೆದುಕೊಂಡು ಹೋಗಿ ನೀಡಿದಾಗ ಆ ಪುಸ್ತಕದ ಬಗ್ಗೆ ನನ್ನ ತಂದೆಯವರಿಂದ ನನಗೆ ತಿಳಿಯಿತು, ಬೈಬಲಿನಲ್ಲಿದ್ದ ಅಂಶಗಳು, ಮಾನವನು ತಾನು ಅನುಭವಿಸುತ್ತಿರುವ ಎಲ್ಲಾ ಕಷ್ಟ ಕಾರ್ಪಣ್ಯಗಳಿಂದ ಮುಕ್ತಿ ಹೊಂದ ಬೇಕಾದಲ್ಲಿ ಕ್ರಿಶ್ಚಿಯನ್ ಧರ್ಮ ಅನುಸರಿಸುವಂತೆ ಪುಸ್ತಕದಲ್ಲಿ ಹಲವಾರು ನಿಧರ್ಶನಗಳ ಮೂಲಕ, ಕಥೆಗಳ ಮೂಲಕ ತಿಳಿಸಲಾಗಿತ್ತು. ಮತ್ತೊಂದು ಘಟನೆ, ಅಂದು ಶನಿವಾರ ಆ ದಿನ ಶಾಲೆಯಲ್ಲಿ ಯಾವುದೇ ಪಾಠ ಪ್ರವಚನ ನಡೆಯುವುದಿಲ್ಲ, ಎಲ್ಲರಿಗೂ ಸಿನಿಮಾ ತೋರಿಸಲಾಗುತ್ತದೆ ಎಂದು ಹೇಳಲಾಗಿತ್ತು. ಈ ಬಗ್ಗೆ ಹಿಂದಿನ ದಿನವೇ ತಿಳಿಸಿದ್ದರಿಂದ ಎಲ್ಲ ವಿದ್ಯಾರ್ಥಿಗಳ ಸಂತೋಷಕ್ಕೆ ಪಾರವೇ ಇರಲಿಲ್ಲ. ಇಂದಿನಂತೆ ಅಂದು ಸಿ.ಡಿ, ಡಿ.ವಿ.ಡಿ, ಮೊಬೈಲ್‌ಗಳು ಇರಲಿಲ್ಲ. ಟಿ.ವಿ ಗಳಲ್ಲಿಯೂ ಸಹಾ  ಸಿನಿಮಾ ಎಂಬುದು ಅಪರೂಪವಾಗಿತ್ತು. ಯಾವ ಸಿನಿಮಾ ತೋರಿಸ ಬಹುದು ಎಂಬ ಬಗ್ಗೆ ನಮ್ಮ ನಮ್ಮಲ್ಲೇ ಚರ್ಚೆಗಳು ನಡೆಯತೊಡಗಿದವು. ಎಂದಿಗಿಂತಲೂ ಉತ್ಸಾಹದಿಂದ ಆ ದಿನ ಶಾಲೆಗೆ ಹೋದೆವು. ನಾಲ್ಕು ದೊಡ್ಡ ಕೊಠಡಿಗಳಲ್ಲಿ ಟಿ.ವಿ ಗಳನ್ನು ಇರಿಸಲಾಗಿತ್ತು. ಜೊತೆಗೆ ವೀಡಿಯೋ ಪ್ಲೇಯರ್‍‌ಗಳನ್ನು ಇರಿಸಲಾಗಿತ್ತು. ಎಲ್ಲರೂ ಕುಳಿತ ನಂತರ ಸಿನಿಮಾ ಆರಂಭವಾಯಿತು. ಸಿನಿಮಾ ಷುರುವಾದಂತೆಯೇ ಎಲ್ಲರ ಉತ್ಸಾಹವೂ ಠುಸ್ಸ್ ಎಂದಿತ್ತು. ಆಂಗ್ಲ ಭಾಷೆಯಲ್ಲಿದ್ದ ಸಿನಿಮಾ ಏಸು ಕ್ರಿಸ್ತನ ಜೀವನ ಚರಿತ್ರೆಯನ್ನು ಆಧರಿಸಿ ಮಾಡಿದ್ದ ಸಿನಿಮಾವಾಗಿತ್ತು. ಭಾಷೆಯೂ ತಿಳಿಯದೇ, ಚಿತ್ರವೂ ಆಸಕ್ತಿಯನ್ನು ಕೆರಳಿಸದೇ ಇದ್ದರಿಂದ ನಮ್ಮ ನಮ್ಮ ಮಾತುಗಳಲ್ಲಿ ನಾವು ನಿರತರಾದವು. ನನಗೆ ಗೊತ್ತಿದ್ದಂತೆ ಒಬ್ಬರೂ ಸಹಾ ಸಿನಿಮಾವನ್ನು ನೋಡಲಿಲ್ಲ.

ಈ ಲೇಖನದ ವ್ಯಾಪ್ತಿಯ ಹಿನ್ನೆಲೆಯಲ್ಲಿ ಮೇಲ್ಕಂಡ ಎರಡು ನಿದರ್ಶನಗಳನ್ನು ನೀಡಿರುತ್ತೇನೆ. ಮಕ್ಕಳ ಮೇಲೆ ಹೇರಿಕೆಯ ಕಲಿಕೆ ಸರ್ವಥಾ ಸರಿಯಲ್ಲ. ಧರ್ಮ ಅಥವಾ ಸಂಸ್ಕೃತಿಯ ಬಗ್ಗೆ ಅರಿವು ಮೂಡಿಸುವಾಗಲೂ ಸಹಾ ಇದು ಅನ್ವಯಿಸುತ್ತದೆ. ಹೀಗೆಂದ ಮಾತ್ರಕ್ಕೆ ನಮ್ಮ ಧರ್ಮ ಅಥವಾ ಸಂಸ್ಕೃತಿಯನ್ನು ಕಲಿಕೆಯಿಂದ ಹೊರಗಿಡಬೇಕು ಎಂಬುದು ಸಹಾ ಒಪ್ಪತಕ್ಕ ಮಾತಲ್ಲ. ಈ ರೀತಿಯ ಅಭಿಪ್ರಾಯವನ್ನು ಸಾರುವ ಲೇಖನವೊಂದು ಇತ್ತೀಚೆಗೆ ಕನ್ನಡದ ಆನ್‌ಲೈನ್ ವಾರಪತ್ರಿಕೆಯೊಂದರಲ್ಲಿ ಓದಿದ್ದೆ. ನಮ್ಮ ಸಂಸ್ಕೃತಿ ಮತ್ತು ಧರ್ಮವು ಮಕ್ಕಳ ವ್ಯಕ್ತಿತ್ವ ವಿಕಾಸಕ್ಕೆ ಪೂರಕವಾಗುವಂತೆ ಕಲಿಸಬೇಕಾದದ್ದು ಶಿಕ್ಷಕರ ಮತ್ತು ಪೋಷಕರ ಜವಾಬ್ದಾರಿಯಾಗುತ್ತದೆ.ಮೇಲೆ ನಮೂದಿಸಿದ ನಿದರ್ಶನಗಳ ಬಗ್ಗೆಯೇ ಹೇಳುವುದಾದರೆ ಮೊದಲನೆಯ ನಿಧರ್ಶನದಲ್ಲಿ ಮಕ್ಕಳು ಸ್ವಯಂಪ್ರೇರಣೆಯಿಂದ ಉತ್ತೇಜಿತರಾಗಿ ಕಲಿಕೆಯಲ್ಲಿ ಪಾಲ್ಗೊಳ್ಳುವಂತಿದ್ದರೆ, ಎರಡನೆಯದು ಹೇರಿಕೆಯ ಪ್ರಯತ್ನವಾಗಿತ್ತು.

ಎಲ್ಲವನ್ನೂ ಬಿಟ್ಟು ಜಗತ್ತಿನ ಅನ್ಯ ದೇಶಗಳ ಶಿಕ್ಷಣಾ ಪದ್ದತಿಯನ್ನು ಅನುಸರಿಸಬೇಕು, ಇದರಿಂದ ನಮ್ಮ ಶಿಕ್ಷಣ ವ್ಯವಸ್ಥೆ ಸುದಾರಣೆಯಾಗುತ್ತದೆ ಎಂಬುದು ನಿಸ್ಸಂಶಯವಾಗಿ ಭ್ರಮೆಯೇ ಸರಿ. ಹೀಗೆ ಹೇಳುವ ಮುನ್ನ ಅನ್ಯ ದೇಶಗಳ ಪರಿಸ್ಥಿತಿಯನ್ನು ಸ್ವಲ್ಪ ಅಧ್ಯಯನ ಮಾಡಿದರೆ ಒಳಿತಾಗುತ್ತದೆ. ಮೊದಲಿಗೆ ಆಸ್ಟ್ರೇಲಿಯಾ ದೇಶದ ಬಗ್ಗೆಯೇ ಹೇಳುವುದಾದರೆ, ೨೦೧೩-೧೪ ನೇ ಸಾಲಿನಲ್ಲಿ ಈ ದೇಶದಲ್ಲಿ ಹಿಂದಿನ ಸಾಲಿಗೆ ಹೋಲಿಸಿದರೆ ಲೈಂಗಿಕ ದೌರ್ಜನ್ಯಗಳ ಅಪರಾಧಗಳು ಶೇ.೧೯ ರಷ್ಟು ಏರಿಕೆಯಾಗಿದೆ. ಪ್ರಸಕ್ತ ಸಾಲಿನಲ್ಲಿ ಸುಮಾರು ೩,೩೯೧ ಬಾಲಾಪರಾಧಿಗಳು (೧೦-೧೯ ವಯಸ್ಸಿನ ನಡುವಿನ ) ವಿವಿಧ ಅಪರಾಧಗಳಲ್ಲಿ ಬಾಗಿಯಾಗಿದ್ದಾರೆ. ಅಲ್ಲದೇ ಲೈಂಗಿಕ ದೌರ್ಜನ್ಯ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿರುವ ಬಾಲಾಪರಾಧಿಗಳ ಸಂಖ್ಯೆಯಲ್ಲಿ ಹಿಂದಿನ ಸಾಲಿಗೆ ಹೋಲಿಸಿದರೆ ಗಣನೀಯವಾಗಿ ಅಂದರೆ ಶೇ.೩೬ ರಷ್ಟು ಏರಿಕೆಯಾಗಿದೆ. ಇದೇ ರೀತಿ ಮಾದಕ ವಸ್ತುಗಳ ಬಳಕೆಗೆ ಸಂಬಂಧಿಸಿದ ಅಪರಾಧಗಳಲ್ಲಿ ಬಾಗಿಯಾಗಿರುವ ಬಾಲಾಪರಾಧಿಗಳ ಸಂಖ್ಯೆಯೂ ಸಹಾ ಗಣನೀಯವಾಗಿ ಏರಿಕೆಯಾಗುತ್ತಿದೆ. ಮತ್ತೊಂದು ಆಘಾತಕಾರಿ ಅಂಶವೆಂದರೆ UNICEF ಸಂಸ್ಥೆಯ ಸರ್ವೆ ಪ್ರಕಾರ ಮುಂದುವರಿದ ದೇಶಗಳ ಅಪ್ರಾಪ್ತ ವಯಸ್ಸಿನ ಮೂರನೇ ಎರಡರಷ್ಟು ಹುಡುಗ ಹುಡುಗಿಯರು ತಮ್ಮ ಅಪ್ರಾಪ್ತ ವಯಸ್ಸಿನಲ್ಲೇ ಲೈಂಗಿಕ ಅನುಭವವನ್ನು ಪಡೆದಿರುತ್ತಾರೆ..!! ಅದರಲ್ಲೂ ಆಸ್ಟ್ರೇಲಿಯಾ, ಯು.ಕೆ, ಮತ್ತು ಅಮೇರಿಕಾ ದೇಶಗಳಲ್ಲಿ ೧೫ ವರ್ಷ ವಯಸ್ಸಿನ ಶೇ.೨೫ ರಷ್ಟು ಹಾಗೂ ೧೭ ವರ್ಷದ ಶೇ.೫೦ ರಷ್ಟು ಅಪ್ರಾಪ್ತರು ಆ ವಯಸ್ಸಿಗೇ ಲೈಂಗಿಕ ಅನುಭವವನ್ನು ಹೊಂದಿರುತ್ತಾರೆ.!! ಅಮೇರಿಕಾ ದೇಶದಲ್ಲಿ ಪ್ರತೀ ಹತ್ತು ಪ್ರಸವಗಳಲ್ಲಿ ಒಬ್ಬರು ೧೮-೧೯ ವರ್ಷ ವಯಸ್ಸಿನವರಾಗಿರುತ್ತಾರೆ. ಈ ದೇಶದಲ್ಲಿ ಕಾನೂನುಬದ್ದವಾಗಿ ಒಳಗಾಗುವ ಗರ್ಭಪಾತ ಪ್ರಕರಣಗಳ ಪೈಕಿ ಶೇ.೧೭ ರಷ್ಟು ಅಪ್ರಾಪ್ತರು ಇರುತ್ತಾರೆ. ಈ ದೆಸೆಯಲ್ಲಿ ಸಾಗುತ್ತಿರುವ ದೇಶಗಳಿಂದ ಶಿಕ್ಷಣ ಪದ್ದತಿಯನ್ನು ನಾವು ಅನುಸರಿಸಬೇಕೇ..? ನೀವೇ ತೀರ್ಮಾನಿಸಿ.

ನಮ್ಮ ಪ್ರಾಚೀನ ಶಿಕ್ಷಣ ಪದ್ದತಿಯಾದ ಗುರುಕುಲ ಪದ್ದತಿಯ ಬಗ್ಗೆ ಈಗ ಹೇಳುವುದು ಸಮಯೋಚಿತವೆನಿಸುತ್ತದೆ. ವಿದ್ಯಾರ್ಥಿಗಳನ್ನು ಹಿಂದೆ ಒಟ್ಟು ೬೪ ವಿವಿಧ ವಿದ್ಯೆಗಳಲ್ಲಿ ಪಾರಂಗತಗೊಳಿಸಲಾಗುತ್ತಿತ್ತು. ಗುರು ಮತ್ತು ಶಿಷ್ಯರ ನಡುವೆ ಅವಿನಾಭವವಾದ ಸಂಬಂಧವಿರುತ್ತಿತ್ತು. ಪಂಚತಂತ್ರದ ನೀತಿ ಕಥೆಗಳಿಂದ ಹಿಡಿದು, ಅರ್ಥಶಾಸ್ತ್ರ, ಸಾಹಿತ್ಯ, ರಾಜ್ಯಶಾಸ್ತ್ರ, ಆಯುರ್ವೇದ, ಗಣಿತ, ಜ್ಯೋತಿಷ್ಯ, ಸಮರ ಕಲೆಗಳು, ಇಷ್ಟೇ ಅಲ್ಲದೇ ಯೋಗ, ಧ್ಯಾನಗಳು ಎಲ್ಲಕ್ಕೂ ಮೂಲವಾದ ವೇದ, ಉಪನಿಷತ್ತುಗಳು ಇಂತಹ ಸಕಲ ಶಾಸ್ತ್ರಗಳಿಂದ ಸರ್ವತೋಮುಖವಾದ ಜ್ಞಾನಾರ್ಜನೆಯನ್ನು ಒದಗಿಸಲಾಗುತ್ತಿತ್ತು. ಇದು ಅತ್ಯಂತ ಶ್ರೇಷ್ಟತಮವಾದ ಶಿಕ್ಷಣ ಪದ್ದತಿಯಾಗಿತ್ತು. ಪ್ರಸ್ತುತ ಕಾಲಕ್ಕೆ ಇದನ್ನು ಸಂಪೂರ್ಣವಾಗಿ ಅಳವಡಿಸಿಕೊಳ್ಳಲು ಸಾಧ್ಯವಿಲ್ಲದಿದ್ದರೂ ಈ ಪದ್ದತಿಯನ್ನು ಕೂಲಂಕುಷವಾಗಿ ಅಧ್ಯಯನ ಮಾಡಿದಲ್ಲಿ ಇಂದಿನ ಶಿಕ್ಷಣ ಪದ್ದತಿಯ ಶುದ್ದಿಗೆ ಪೂರಕವಾದ ಅಸಂಖ್ಯ ಉತ್ತಮ ಅಂಶಗಳು ದೊರೆಯುತ್ತದೆ. ಸುಧಾರಣೆಯ ಆರಂಭ ಮೊದಲಿಗೆ ಈ ನಿಟ್ಟಿನಲ್ಲಿ ಆಗಬೇಕಾಗಿದೆ.

ಪ್ರಸ್ತುತ ಸನ್ನಿವೇಶದಲ್ಲಿ ಇಂಜನೀಯರಿಂಗ್, ಡಿಪ್ಲೋಮೋ, ಈ ರೀತಿ ಉನ್ನತ ಶಿಕ್ಷಣ ಪೂರ್ಣಗೊಳಿಸಿ ಬಂದ ವಿದ್ಯಾರ್ಥಿಗಳು ತಮ್ಮ ಅಧ್ಯಯನ ಕ್ಷೇತ್ರದಲ್ಲಿ ಅತ್ಯುತ್ತಮ ಮಟ್ಟದ ಕೌಶಲ್ಯವನ್ನು ಪಡೆದಿರುತ್ತಾರೆ ಎಂಬುದರಲ್ಲಿ ಯಾವುದೇ ಸಂದೇಹವಿಲ್ಲ. ಆದರೆ ಕೌಶಲ್ಯ ಮತ್ತು ಜ್ಞಾನ ಇವೆರಡೂ ಒಂದೇ ಎನ್ನಲು ಆಗುವುದಿಲ್ಲ. ಕೌಶಲ್ಯ ಮತ್ತು ಜ್ಞಾನ (Skill and Knowledge) ಬೇರೆಯದೇ ಆದ ಅರ್ಥ ಹೊಂದಿರುವ ಪರಿಕಲ್ಪನೆಗಳಾಗಿದೆ. ಜ್ಞಾನ ಅತ್ಯಂತ ಆಳ ಮತ್ತು ವಿಸ್ತಾರವಾದುದು. ಕೌಶಲ್ಯ ಸೃಜನಶೀಲತೆಯ ಮೇಲೆ ಆಧಾರವಾಗಿರುತ್ತದೆ. ಸರ್ವತೋಮುಖವಾದ ಜ್ಞಾನದ ತಳಹದಿಯ ಮೇಲೆ ಕೌಶಲ್ಯವನ್ನು ಹೊಂದಿದ ಕಲಿಕೆಯು ಪರಿಪೂರ್ಣವಾದ ಕಲಿಕೆಯಾಗಿರುತ್ತದೆ. ಆದರೆ ಇಂದಿನ ಶಿಕ್ಷಣ ಪದ್ದತಿಯಲ್ಲಿ ಇದು ಮರೀಚಿಕೆಯಾಗಿದೆ. ವಿದ್ಯಾ ಸಂಸ್ಥೆಗಳಿಂದ ಹೊರ ಬರುವ ವಿದ್ಯಾರ್ಥಿಗಳು ತಿಂಗಳಿಗಿಷ್ಟು ಎಂದು ಸಂಪಾದಿಸುವ ಪ್ರಾಡಕ್ಟ್ ಗಳಾಗಿ ಹೊರಬರುತ್ತಿದ್ದಾರೆ. ತಿಂಗಳಿಗೆ ಲಕ್ಷಾಂತರ ರೂಪಾಯಿ ಸಂಬಳ  ಪಡೆಯುವ ಉದ್ಯೋಗಿಯೊಬ್ಬ ತಾನು ಅದ್ಯಯನ ಮಾಡಿದ ಕ್ಷೇತ್ರವನ್ನು ಹೊರತುಪಡಿಸಿ ಉಳಿದೆಲ್ಲಾ ಸಂಗತಿಗಳ ಬಗ್ಗೆ ತೀರಾ ಅಜ್ಞಾನಿಯಾಗಿರುವಂತಹ ಉದಾಹರಣೆಗಳನ್ನು ನಾನು ನೋಡಿದ್ದೇನೆ. ತನ್ನ ಆಲೋಚನೆಗಳನ್ನು ಕೋಡ್‌ಗಳಾಗಿ ಪರಿವರ್ತಿಸುವಲ್ಲಿ ಅಪಾರ ಕೌಶಲ್ಯ ಹೊಂದಿರುವ ಸಾಫ್ಟ್‌ವೇರ್‍ಇಂಜನೀಯರ್‍ಒಬ್ಬ ತನ್ನದೇ ವೈಯಕ್ತಿಕ ಜೀವನದಲ್ಲಿ ಒಂದು ಸಣ್ಣ ನಿರ್ಧಾರವನ್ನು ಸಹಾ ತೆಗೆದುಕೊಳ್ಳಲು ಅಸಮರ್ಥನಾಗಿರುತ್ತಾನೆ. ಪ್ರತೀ ಸೆಮೆಸ್ಟರಿನಲ್ಲೂ ಇಡೀ ಯೂನಿವರ್ಸಿಟಿಗೇ  ಪ್ರಥಮ ಶ್ರೇಣಿ ಪಡೆಯುತ್ತಿದ್ದ ಮೆಡಿಕಲ್ ಸ್ಟೂಡೆಂಟ್ ಒಬ್ಬ ತನ್ನ ಮೈಮೇಲೆ ಅಕ್ಷರಶಃ ಆಸಿಡ್ ಸುರಿದುಕೊಂಡು ಬೆಂಕಿ ಹಚ್ಚಿಕೊಂಡು ಸತ್ತುಹೋಗಿದ್ದ ಇತ್ತೀಚಿಗಿನ ಘಟನೆ ನನ್ನನ್ನು ಬಹುವಾಗಿ ಕಾಡಿತ್ತು.

ಸರ್ವತೋಮುಖ ವ್ಯಕ್ತಿತ್ವ ವಿಕಾಸವು ಪ್ರಾರಂಭಿಕ ಹಂತದಿಂದ ಹಿಡಿದು ಉನ್ನತ ಹಂತದವರೆಗೂ ನಮ್ಮ ಶಿಕ್ಷಣ ವ್ಯವಸ್ಥೆಯ ಆದ್ಯತೆಯಾಗಬೇಕಾಗಿದೆ. ನಮ್ಮ ಧರ್ಮದ ತಳಹದಿಯ ನೈತಿಕ ಶಿಕ್ಷಣ ಇದಕ್ಕೆ ಬಹುವಾಗಿ ನೆರವಾಗುತ್ತದೆ. ನೀತಿ-ಅನೀತಿಗಳ ನಡುವೆ, ಅಕ್ರಮ-ಸಕ್ರಮಗಳ ನಡುವೆ, ಧರ್ಮ-ಅಧರ್ಮಗಳ ನಡುವೆ ತೂಗಿ ನೋಡಿ ಸೂಕ್ತವಾದ ಸ್ವಯಂ ನಿರ್ಧಾರ ಕೈಗೊಳ್ಳುವಂತಹ ಸಾಮರ್ಥ್ಯವನ್ನು ಇಂತಹ ಪರಿಪೂರ್ಣ ಶಿಕ್ಷಣ ನೀಡುತ್ತದೆ. ಎಲ್ಲೂ ಹೇರಿಕೆಯಾಗದಂತೆ ಪೂರಕವಾದ ರೀತಿ ಶಿಕ್ಷಣ ನೀಡುವ ಹೊಣೆ ಶಿಕ್ಷಕರದ್ದು, ಪೋಷಕರದ್ದು ಮತ್ತು ಈ ಸಮಾಜದ್ದಾಗಬೇಕಿದೆ.

Read more from ಲೇಖನಗಳು
1 ಟಿಪ್ಪಣಿ Post a comment
  1. ಚಾ ಶಿ ಜಯಕುಮಾರ್ ಕೃಷ್ಣರಾಜಪೇಟೆ ಮಂಡ್ಯ ಜಿಲ್ಲೆ
    jayakumarcsj@gmail.com

    ಉತ್ತರ

ನಿಮ್ಮ ಅನಿಸಿಕೆ...

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Note: HTML is allowed. Your email address will never be published.

Subscribe to comments