ವಿಷಯದ ವಿವರಗಳಿಗೆ ದಾಟಿರಿ

ಮಾರ್ಚ್ 28, 2015

28

ಹುತ್ತಗಟ್ಟದೆ ಚಿತ್ತ ಮತ್ತೆ ಕೆತ್ತೀತೇನು ಪುರುಷೋತ್ತಮನ ಆ ಅಂಥ ರೂಪ-ರೇಖೆ? – ಭಾಗ 2

‍ನಿಲುಮೆ ಮೂಲಕ

– ರೋಹಿತ್ ಚಕ್ರತೀರ್ಥ

ಶ್ರೀ ರಾಮನವಮಿಹುತ್ತಗಟ್ಟದೆ ಚಿತ್ತ ಮತ್ತೆ ಕೆತ್ತೀತೇನು ಪುರುಷೋತ್ತಮನ ಆ ಅಂಥ ರೂಪ-ರೇಖೆ? – ಭಾಗ 1

ಶ್ರೀ ರಾಮನವಮಿಯ ದಿವಸ ರಾಮನಾಮಾಮೃತವೆ
ಪಾನಕ, ಪನಿವಾರ, ಕೋಸಂಬರಿ;
ಕರಬೂಜ ಸಿದ್ದೋಟುಗಳ ಹೋಳು, ಸೀಕರಣೆ;
ವ್ಯಕ್ತಮಧ್ಯಕ್ಕೆ ಬಂದುರಿವ ಶಬರಿ

ಎಂದು ಶುರುವಾಗುತ್ತದೆ ಅಡಿಗರ ಕವಿತೆ. ರಾಮನ ಹುಟ್ಟುಹಬ್ಬ ಬೇಸಗೆಯಲ್ಲಿ ಬರುತ್ತದೆ ಎನ್ನುವುದನ್ನು ಹೇಳಲಿಕ್ಕೇ ಕವಿ ಎರಡು ಸಾಲುಗಳಲ್ಲಿ ಪಾನಕ, ಪನಿವಾರ, ಕೋಸಂಬರಿ, ಕರಬೂಜ ಸಿದ್ದೋಟುಗಳ ಹೋಳು, ಸೀಕರಣೆಗಳನ್ನು ಹರಡಿ ಕೂತಿದ್ದಾರೆ! ಇಲ್ಲಿ ಪಾನಕ ಎಂದರೆ ಪಾನಕ, ಪನಿವಾರ ಎಂದರೆ ಪನಿವಾರ. ಅದಕ್ಕೆ ಎರಡನೆ ಅರ್ಥ ಇರುವ ಹಾಗೇನೂ ಕಾಣುತ್ತಿಲ್ಲ. ನಾನು ಈಗಾಗಲೇ ಹೇಳಿದ ಹಾಗೆ, ಅಡಿಗರು ಚಿತ್ರಕ ಶಕ್ತಿಯ ಕವಿ. ಒಂದು ಸಂಗತಿಯನ್ನು ವಿವರಿಸಲು ಎಷ್ಟು ಮೂರ್ತ ಉದಾಹರಣೆಗಳು ಸಾಧ್ಯವೋ ಅಷ್ಟನ್ನು ಎತ್ತಿಕೊಂಡು ಬರಬಲ್ಲ ಪ್ರತಿಭಾವಂತ. “ಬೇಸಗೆ” ಅಂದಿದ್ದರೆ ಸಾಕಿತ್ತು. ರಾಮನ ಬರ್ತ್‍ಡೇ ಸಮಯದಲ್ಲಿ ಸೆಕೆ ವಿಪರೀತ ಇರುತ್ತೆ ಎಂದಿದ್ದರೂ ನಡೆಯುತ್ತಿತ್ತು. ಆದರೆ, ಅಂತಹ ಯಾವ ಮಾತನ್ನೂ ಹೇಳದೆ ಪಾನಕ-ಕೋಸಂಬರಿಗಳ ಬಗ್ಗೆ ಹೇಳುತ್ತ ಅಡಿಗರು ಒಂದು ವಿಭಿನ್ನ ವಾತಾವರಣವನ್ನು ಸೃಷ್ಟಿಸುತ್ತಾರೆ. ಅದನ್ನು ಓದುವಾಗ ನಮಗೆ ಹಬ್ಬದ ವಾತಾವರಣ ಕಂಡಂತೆ ಆಗಬೇಕು. ಆ ಸಿಹಿಭಕ್ಷ್ಯಗಳನ್ನು ತಿಂದಹಾಗನಿಸಬೇಕು. ಕಾವ್ಯದ ಉದ್ಧೇಶ ರಸೋತ್ಪತ್ತಿಯಲ್ಲವೆ?

ಅದೆಲ್ಲ ಸರಿ, ಆದರೆ ವ್ಯಕ್ತಮಧ್ಯಕ್ಕೆ ಬಂದುರಿವ ಶಬರಿ – ಎಂಬ ಸಾಲಿಗೆ ಏನರ್ಥ? ಇಷ್ಟೆಲ್ಲ ಹಬ್ಬದ ವಾತಾವರಣ ಕಟ್ಟಿಕೊಡುವಾಗ ಮಧ್ಯದಲ್ಲಿ ಶಬರಿ ಯಾಕೆ ಬರಬೇಕು? ಅವಳು ಯಾಕೆ ಉರಿಯಬೇಕು? ವ್ಯಕ್ತಮಧ್ಯ ಎಂಬ ಪದವನ್ನು ಅಡಿಗರು ಎತ್ತಿಕೊಂಡಿರುವುದು (ಇತ್ತೀಚೆಗೆ ಕೆಲವು ಬುದ್ಧಿವಂತರು ಸುಡಬೇಕು ಎಂದು ಆದೇಶಿಸಿದ) ಭಗವದ್ಗೀತೆಯಿಂದ! ಅಲ್ಲಿ ಸಾಂಖ್ಯಯೋಗದಲ್ಲಿ

ಅವ್ಯಕ್ತಾದೀನೀ ಭೂತಾನಿ ವ್ಯಕ್ತಮಧ್ಯಾನಿ ಭಾರತ
ಅವ್ಯಕ್ತನಿಧನಾನ್ಯೇವ ತತ್ರ ಕಾ ಪರಿದೇವನಾ

– ಎಂಬ ಮಾತು ಬರುತ್ತದೆ. ಬರುವಾಗ ಬೆತ್ತಲು, ಹೋಗುವಾಗ ಬೆತ್ತಲು, ನಡುವೆ ಇಡೀ ಕತ್ತಲು ಎನ್ನುವ ಹಾಗೆ, “ಹುಟ್ಟುವ ಮೊದಲಿನ ಅವಸ್ಥೆ ಗೊತ್ತಿಲ್ಲ. ಸತ್ತ ನಂತರ ಏನಾಗುತ್ತದೋ ಅದೂ ತಿಳಿದಿಲ್ಲ. ಅವೆರಡರ ನಡುವಿನ ಜೀವನದಲ್ಲಷ್ಟೇ ನಮ್ಮ ಅರಿವು, ಇರವು ಎಲ್ಲವೂ. ಹಾಗಿರುವಾಗ ಯಾಕೆ ಶೋಕಿಸುತ್ತೀ?” ಎಂದು ಕೃಷ್ಣ ಹೇಳುವ ಮಾತದು. ವ್ಯಕ್ತಮಧ್ಯ ಎಂದರೆ ಹುಟ್ಟು-ಸಾವುಗಳ ನಡುವೆ ನಮ್ಮನ್ನು ಪ್ರಕಟಪಡಿಸುವ ಜೀವನ. ಈ ಜೀವನಕ್ಕೆ ಎಲ್ಲರಂತೆ ಶಬರಿಯೂ ಜನ್ಮವೆತ್ತಿ ಬಂದಿದ್ದಾಳೆ. ತನ್ನ ಇಡೀ ಜೀವನವನ್ನು ದಂಡಕಾಷ್ಠದಂತೆ ಒಂದೇ ಒಂದು ಉದ್ಧೇಶಕ್ಕಾಗಿ ಉರಿಸಿದ್ದಾಳೆ. ಶಬರಿ ಎಂದೊಡನೆ ನಮಗೆ ರಾಮಾಯಣದಲ್ಲಿ ಹಣ್ಣುಹಣ್ಣು ಮುದುಕಿಯೊಬ್ಬಳು ರಾಮನ ಬರುವಿಕೆಗಾಗಿ ಕಾಯುತ್ತಾ ಕೂತದ್ದು, ಅವನಿಗಾಗಿ ಹಣ್ಣುಗಳನ್ನು ಶೇಖರಿಸಿಟ್ಟದ್ದು, ಅವನು ಬಂದ ಮೇಲೆ ತನ್ನ ಆಶ್ರಮಕ್ಕೆ ಕರೆದು ಉಪಚರಿಸಿದ್ದು, ಹಣ್ಣುಗಳನ್ನು ಕಚ್ಚಿ ಚೆನ್ನಾಗಿವೆಯೋ ಪರೀಕ್ಷಿಸಿ ರಾಮನಿಗೆ ತಿನ್ನಲು ಕೊಟ್ಟದ್ದು – ಎಲ್ಲ ನೆನಪಿಗೆ ಬರುತ್ತದೆ ಅಲ್ಲವೇ? ಈ ಕತೆಯನ್ನು ಈ ಹಿಂದೆ ಬಂದ ಕರಬೂಜ, ಸಿದ್ದೋಟುಗಳ ಜೊತೆ ತಳುಕು ಹಾಕಲಿಕ್ಕೆ ಕವಿ ಪ್ರಯತ್ನಿಸುತ್ತಿದ್ದಾರಾ? ಓದುಗನಿಗೆ ಸಂಶಯ ಬರಬಹುದು. ಸದ್ಯಕ್ಕೆ ಆ ಗೊಂದಲ ಹಾಗೇ ಇರಲಿ, ಮುಂದೆ ಹೋಗೋಣ.

***
ಕವಿಗೆ ಇದು ವಸಂತ ಮಾಸ ಎಂದು ಹೇಳಬೇಕಾಗಿದೆ. ಜೀವಸೃಷ್ಟಿ ವಸಂತದ ಪ್ರಮುಖ ಲಕ್ಷಣ. ಅದನ್ನು ಅಡಿಗರು ಹೇಗೆ ಹೇಳುತ್ತಾರೆ ನೋಡಿ:

ಕಾದು ಗಾರಾದ ಮಣ್ಣೊಡಲಿನೊಳಗಡೆಗೆ ಕಿಡಿ-
ಕುಳಿತ ಮೂಲಾಧಾರ ಜೀವಧಾತು
ಮೋಡದ ಸಹಸ್ರಾರದೆಡೆಗೆ ತುಡಿಯುವ ತುರುಸು:
ಮಣ್ಣೊಡೆದು ಹಸುರು ಹೂ ಹುಲ್ಲು ಮುಳ್ಳು.

ಭೂಮಿ ಕಾದಿದೆ. ರಾಮನ ಬರವಿಗಾಗಿ ಅಯೋಧ್ಯೆಯೂ ಹದಿನಾಲ್ಕು ವರ್ಷ ಕಾದಿರಲಿಲ್ಲವೇ ಹಾಗೆ! ಅಷ್ಟೇ ಅಲ್ಲ, ಬಿಸಿಯಾಗಿಯೂ ಕಾದಿದೆ. ಬೀಜವನ್ನು ಮೊಳಕೆಯೊಡೆಸಲು ಬೇಕಾದ ಸಕಲ ಸಿದ್ಧತೆಗಳನ್ನೂ ನೆಲ ಮಾಡಿಕೊಂಡಿದೆ. ಅದರ ಒಡಲಲ್ಲಿ ಕೂತ ಬೀಜ ಒಡೆದು ಹೊರಬಂದು ಹಸುರು ಹರಡುವುದು, ಹೂ-ಮುಳ್ಳು ಟಿಸಿಲೊಡೆಯುವುದು – ಇವೆಲ್ಲ ಪ್ರಕೃತಿಸಹಜ ಕ್ರಿಯೆಗಳು. ಜೀವಧಾತುವಿಗೆ ಮೂಲ ಆಧಾರವಾದ ಬೀಜಕ್ಕೆ ಈ ಗರಿಗೆದರುವ ಹಂಬಲ ಹೇಗೆ ಹುಟ್ಟಿತು? ಅದು ಹೇಗೆ ಅಷ್ಟು ಪುಟ್ಟ ಬೀಜದೊಳಗೆ ಅಡಗಿತ್ತು? ಕವಿಗೆ ಆಶ್ಚರ್ಯ. ನೆಲದೊಳಗಿನ ಬೀಜವೂ ಆಕಾಶದಲ್ಲಿ ಚಲಿಸುವ ಮೋಡವೂ ಅದು ಹೇಗೆ ಮಾತಾಡಿಕೊಳ್ಳುತ್ತವೆ? ಕೌತುಕ ಕವಿಗೆ! ಪದ್ಯದಲ್ಲಿ ಬರುವ ಮೂಲಾಧಾರ ಮತ್ತು ಸಹಸ್ರಾರ ಎಂಬ ಎರಡು ಪದಗಳನ್ನು ಗಮನಿಸಿ. ಎರಡೂ ತಂತ್ರಶಾಸ್ತ್ರಕ್ಕೆ ಸಂಬಂಧಿಸಿದ ವಿಚಾರಗಳು. ನಾಭಿಯ ಬಳಿ ಇರುವ ಮೂಲಾಧಾರದಿಂದ ಆತ್ಮಶಕ್ತಿಯನ್ನು ಜಾಗೃತಗೊಳಿಸಿ ಹಣೆಯ ನಡುವಲ್ಲಿರುವ ಸಹಸ್ರಾರಕ್ಕೆ ಕೊಂಡೊಯ್ಯುವುದೇ ಸಾಧನೆ ಎನ್ನುತ್ತಾರೆ. ಅಂದರೆ ಇಲ್ಲಿ ಊಧ್ರ್ವಮುಖೀ ಚಲನೆ ಇದೆ.
***
ಮುಂದಿನ ಸ್ಟಾಂಜಾದಲ್ಲಿ ಅಡಿಗರು ಬರೆಯುತ್ತಾರೆ:

ಮಣ್ಣುಟ್ಟ ಪುಟ್ಟ ಬಿತ್ತಕ್ಕೆ ಮಳೆ ಹನಿಸೇಕ:
ಅಶ್ವತ್ಥದ ವಿವರ್ತ ನಿತ್ಯ ಘಟನೆ;
ಗುಮ್ಮಟಗಿರಿಯ ನೆತ್ತಿಯಲ್ಲಿ ಕಲ್ಲರಳಿದ್ದು
ಕಾರ್ಯಕಾರಣದೊಂದಪೂರ್ವ ನಟನೆ.

ಮಣ್ಣನ್ನುಟ್ಟು ನಿಂತ ಬೀಜಕ್ಕೆ ಮಳೆನೀರು ಬಿದ್ದು, ಅದು ತನ್ನ ಸುತ್ತಲಿನ ತೇವ-ಪೋಷಕಾಂಶಗಳನ್ನು ಹೀರಿಕೊಂಡು ಗಿಡವಾಗಿ ಬೆಳೆದು ಮರವಾಗಿ ನಿಲ್ಲುವುದು ನಿತ್ಯ ಘಟನೆ.Gopala Krishna Adiga ಸುತ್ತ ಆಗುವಂಥಾದ್ದೇ, ನಿತ್ಯ ನೋಡುವಂಥಾದ್ದೇ. ಆದರೆ, ಗುಮ್ಮಟಗಿರಿಯಲ್ಲಿ ನಿಂತ ಕಲ್ಲು ನೂರಾರು ಉಳಿಯೇಟು ತಿಂದು ಬಾಹುಬಲಿಯಾಗಿ ಅರಳಿ ನಿಲ್ಲುವುದಿದೆಯಲ್ಲ? ಅದು ಸಹಸ್ರವರ್ಷಗಳಿಗೊಮ್ಮೆ ನಡೆಯುವ ವಿಶೇಷ ಘಟನೆ. ಎಲ್ಲ ಕಲ್ಲುಗಳಿಗೂ ಆ ಭಾಗ್ಯ ಇಲ್ಲ! ಎಲ್ಲೋ ಅಲ್ಲೊಂದು ಇಲ್ಲೊಂದು, ಪುಣ್ಯ ಹೊತ್ತು ಬಂದ ಕಲ್ಲುಗಳಿಗೆ ಹೀಗೆ ಹೂವಾಗಿ ಅರಳುವ ಯೋಗ ಸಿದ್ಧಿಸುತ್ತದೆ. ಅಡಿಗರು ಬಳಸುವ “ಕಾರ್ಯಕಾರಣದೊಂದಪೂರ್ವ ನಟನೆ” ಎಂಬ ಸಾಲು ವಿಶೇಷವಾಗಿದೆ, ನಾಟಕೀಯವಾಗಿದೆ. ಅಯೋಧ್ಯೆಯ ಅರಸುಕುಮಾರ ಶ್ರೀರಾಮ ಮಿಥಿಲೆಯ ರಾಜಕುಮಾರಿಯಾದ ಸೀತೆಯನ್ನು ವರಿಸಿ, ಕೊನೆಗೆ ತನ್ನ ಚಿಕ್ಕಮ್ಮನ ಮತ್ಸರಕ್ಕೆ ಬಲಿಯಾಗಿ ಹದಿನಾಲ್ಕು ವರ್ಷ ವನವಾಸ ಮಾಡಬೇಕಾಗಿ ಬರುವುದು ರಾಮಾಯಣದ ವಸ್ತು. ಇದಕ್ಕೆ ಟರ್ನಿಂಗ್ ಪಾಯಿಂಟ್ ಆಗಿ ಒದಗಿ ಬರುವುದು ಸೀತೆಯ ಅಪಹರಣದ ಪ್ರಸಂಗ. ಬಹುಶಃ ಇದೊಂದು ಘಟನೆ ನಡೆಯದೇ ಹೋಗಿದ್ದರೆ, ರಾಮಾಯಣದ ಮುಕ್ಕಾಲುಪಾಲು ಕತೆ, ಪ್ರಸಂಗ, ಸನ್ನಿವೇಶಗಳು ನಡೆಯುತ್ತಲೇ ಇರಲಿಲ್ಲ! ರಾವಣ, ವಿಭೀಷಣ, ವಾಲಿ, ಸುಗ್ರೀವ, ಜಾಂಬವಂತ, ಹನುಮಂತ, ಜಟಾಯು, ಶಬರಿ – ಇತ್ಯಾದಿ ಯಾವ ಪಾತ್ರಗಳೂ ರಾಮಾಯಣದಲ್ಲಿ ಬಂದುಹೋಗುತ್ತಿರಲಿಲ್ಲ. ಅಲ್ಲದೆ, ರಾಮನಿಗೆ ತನ್ನ ಹೆಂಡತಿಯನ್ನು ಅಗ್ನಿಪರೀಕ್ಷೆ ಮಾಡಿಸುವುದಾಗಲೀ ವಾಲ್ಮೀಕಿಗಳ ಆಶ್ರಮದ ಪಕ್ಕ ಬಿಟ್ಟುಬರುವುದಾಗಲೀ ಅಗತ್ಯವೇ ಬೀಳುತ್ತಿರಲಿಲ್ಲ. ಅದರರ್ಥ ವಾಲ್ಮೀಕಿಗಳಿಗೂ ರಾಮಾಯಣ ಕಥಾನಕವನ್ನು ಬರೆಯುವ ಆಸೆಯೂ ಚಿಗುರುತ್ತಿರಲಿಲ್ಲ! ರಾವಣನ ಸಂಹಾರವೆಂಬ ಏಕೈಕ ಉದ್ಧೇಶದಿಂದ ನಡೆಯುವ ಎಲ್ಲ ಘಟನಾವಳಿಗಳು ಹೇಗೆ ಸುಸಂಬದ್ಧವಾಗಿ ಒಂದಕ್ಕೊಂದು ಸೇರಿಕೊಂಡುಹೋಗುತ್ತವಲ್ಲ ಎಂದು ಅಡಿಗರು ಯೋಚಿಸುತ್ತಿದ್ದಾರೆ. ಹಾಗಾದರೆ, ಇವೆಲ್ಲವನ್ನೂ ಮೊದಲೇ ಯೋಚಿಸಿಕೊಂಡು ಬಂದಿರುವ ವಿಷ್ಣುವಿನ ಅವತಾರ ಎನ್ನುವುದೂ ಆಳದಲ್ಲಿ ಒಂದು ನಟನೆಯೇ ಅಲ್ಲವೆ!

ಸರಿ, ಅದು ಈ ಸಾಲುಗಳ ಒಂದು ಅರ್ಥವಾಯಿತು. ಆದರೆ, ಅಡಿಗರು ಇಲ್ಲಿ ರಾಮನ ಬಗ್ಗೆ ಯೋಚಿಸುತ್ತಲೇ ಇಲ್ಲ; ಕೇವಲ ವಾಲ್ಮೀಕಿಯ ರಚನಾಕೌಶಲದ ಬಗ್ಗೆ ಮಾತಾಡುತ್ತಿದ್ದಾರೆ ಎಂದು ಅರ್ಥ ಮಾಡಿಕೊಂಡರೆ, ಇದುವರೆಗಿನ ಎಲ್ಲ ಸಾಲುಗಳಿಗೂ ಹೊಸ ಅರ್ಥ ಸಿಗಬಹುದು. ಸಾಮಾನ್ಯ ಕವಿಗಳು ತಮ್ಮೊಳಗಿನ ಕವಿತಾಬೀಜಕ್ಕೆ ಪೋಷಕಾಂಶ ದೊರಕಿಸಿಕೊಂಡು ಯಥಾನುಶಕ್ತಿ ಕವಿತೆಯ ಬಿಳಲೋ ಗಿಡವೋ ಮರವೋ ಹುಟ್ಟುವುದಕ್ಕೆ ಕಾರಣರಾಗಬಹುದು. ಆದರೆ, ವಾಲ್ಮೀಕಿಯ ಪ್ರತಿಭೆ ಕಲ್ಲನ್ನೇ ಚಿಗುರಿಸುವಂಥಾದ್ದು. ಇಂತಹ ಕವಿಗಳು ಹುಟ್ಟುವುದು ದುರ್ಲಭದಲ್ಲಿ ದುರ್ಲಭ!
***
ಇದು ಸಾವಿರಾರು ವರ್ಷಗಳ ಹಿಂದೆ ಮನುಷ್ಯಪ್ರತಿಭೆ ಮುಟ್ಟಿದ ಔನ್ನತ್ಯದ ಮಾತಾಯಿತು. ಈಗ ಏನಾಗಿದೆ? ಕವಿಗೆ ನಿರಾಶೆ ಕವಿದಿದೆ. ಹೇಳುತ್ತಾರೆ:

ನೆಲಕ್ಕಂಟಿ ಬಿದ್ದ ಆಕಾಶಯಾನದ ಕನಸು
ಜೆಟ್ ವಿಮಾನವೇರಿ ಕೊಂಚ ದೂರ
ತೇಲಿ ಮಣ್ಣಿಗೆ ಮರಳಿ, ರಾಕೆಟ್ಟು ಜಗಿದುಗುಳಿ
ತಿಂಗಳಿಗೆ ಬಡಿವಾಧುನಿಕ ವಿಕಾರ.

ರಾಮನ ಕತೆಯಲ್ಲಿ ಜೆಟ್ ವಿಮಾನ ಯಾಕೆ ಬಂತು? ಅಂತ ಮೊದಲ ಸಲ ಓದುವಾಗ ಗೊಂದಲ ಆಗಬಹುದು! ಮನುಷ್ಯನ ಆಸೆಗಳು, ಕನಸುಗಳು ಸದಾ ಊಧ್ರ್ವಮುಖಿ. ಅದಕ್ಕೆ ಮೇಲೇರಬೇಕು ಎನ್ನುವುದೇ ಮುಖ್ಯ ಹವಣಿಕೆ. (ಆದರೂ, ನಿದ್ರೆಯಲ್ಲಿ ಕನಸು “ಬಿತ್ತು” ಎಂದೇ ಹೇಳುತ್ತೇವೆ!) ಆಧುನಿಕ ಮನುಷ್ಯ ಆಕಾಶಯಾನದ ಕನಸು ಕಂಡ. ತಾನು ನೆಲಕ್ಕಂಟಿದ್ದರೂ ಪರವಾಯಿಲ್ಲ, ಒಂದಲ್ಲಾ ಒಂದು ದಿನ ಆಕಾಶಕ್ಕೂ ನೆಗೆಯಬೇಕು ಎಂದು ಹಂಬಲಿಸಿದ. ಆದರೆ, ಅವನ ಆಸೆ ಕೈಗೂಡಿತೆ? ಆಧುನಿಕ ವಿಜ್ಞಾನ ಸೃಷ್ಟಿಸಿದ ಜೆಟ್ ವಿಮಾನ ಕೊಂಚ ದೂರ ತೇಲಿ ಮತ್ತೆ ಮಣ್ಣಿಗೇ ಮರಳುತ್ತದೆ! ಇನ್ನು ರಾಕೆಟ್ಟಿನ ಇಂಧನ ಬಳಸಿಕೊಂಡು ಗಗನಕ್ಕೆ ಚಿಮ್ಮಿದ ಉಪಗ್ರಹಗಳು ಕೂಡ ಚಂದ್ರನವರೆಗೆ ಹೋಗಿ ಅವನ ಮುಖಕ್ಕೆ ಅಪ್ಪಳಿಸಿ ಚೂರಾಗಿಬಿಟ್ಟಿವೆ. ಅಡಿಗರು ಇದನ್ನು “ಆಧುನಿಕ ವಿಕಾರ” ಎನ್ನುತ್ತಾರೆ. ಕವಿತೆಯನ್ನು ಬರೆದ ಕಾಲಘಟ್ಟವೂ ಅವರು ಈ ಪ್ರತಿಮೆಯನ್ನು ಬಳಸುವುದಕ್ಕೆ ಕಾರಣವಾಗಿರಬಹುದು. ಕಳಿಸಿ ತಿಂಗಳಾಗುವ ಮೊದಲೆ ವಾಪಸು ಬಂದು ನೆಲಕ್ಕೋ ಸಮುದ್ರಕ್ಕೋ ಬಿದ್ದು ಚೂರಾಗುತ್ತಿದ್ದ ಸ್ಪುಟ್ನಿಕ್ ಯುಗ ಅದು. ಹಾಗಾಗಿ ಮನುಷ್ಯನ ಆಧುನಿಕಸೌಲಭ್ಯಗಳ ನಿರರ್ಥಕತೆ ಮತ್ತು ಅಸಾರ್ಥಕತೆಯನ್ನು ಬಿಂಬಿಸಲು ಅಡಿಗರು ರಾಕೆಟ್ಟಿನ ಪ್ರತಿಮೆಯನ್ನು ಬಳಸಿಕೊಂಡಿರಬಹುದು. (ತಿಂಗಳು ಎನ್ನುವುದಕ್ಕೆ ಮೂವತ್ತು ದಿನಗಳ ಅವಧಿ ಎನ್ನುವಂತೆಯೇ “ಚಂದ್ರ” ಎಂಬ ಅರ್ಥವೂ ಇದೆ)
***
ಮುಂದೆ,

ವೇದೋಪನಿಷದಗಳ ಭೂತಗನ್ನಡಿಯೊಳಗೆ
ಪಡಿಮೂಡಿದಾಕೃತಿಗೆ ತಾನೆ ಮುಗ್ಧ
ಮತ್ಸ್ಯಕೂರ್ಮವರಾಹ ಮೆಟ್ಟಿಲುಗಳೇರುತ್ತ
ಹುತ್ತಗಟ್ಟಿದ್ದ ಕೈ ಕಡೆದ ನೋಟ

ಎನ್ನುವಾಗ ಮತ್ತೆ ಆರೋಹಣದ ಚಿತ್ರ ಬರುತ್ತದೆ. ವೇದ-ಉಪನಿಷತ್ತುಗಳನ್ನು ಜರಡಿ ಹಿಡಿದು ಓದಿ ಅಧ್ಯಯನ ಮಾಡಿ ವಾಲ್ಮೀಕಿ ಅಪಾರ ಜ್ಞಾನವನ್ನು ಸಂಪಾದಿಸಿದ್ದಾನೆ. ಅವೆಲ್ಲ ಸಂಚಿತಾನುಭವವನ್ನು ಇಟ್ಟುಕೊಂಡು ರಾಮನ ಕತೆ ಹೆಣೆಯಲು ಕೂತವನು ತನ್ನ ಪ್ರತಿಭೆಗೆ ತಾನೇ ಬೆರಗಾಗಿಹೋಗಿದ್ದಾನೆ! ಅವನು ಬರೆಯಲು ಕೂತಿರುವುದು ರಾಮನ ಕತೆಯನ್ನು. ಅವತಾರಗಳ ಪಟ್ಟಿಯಲ್ಲಿ ಇದು ಏಳನೆಯದು. ಒಂದೊಂದು ಅವತಾರಗಳನ್ನು ದಾಟುತ್ತ ಬರುವಾಗಲೂ, ಕಥಾವಸ್ತು ಹೆಚ್ಚು ಸಾಂದ್ರ, ಸಂಕೀರ್ಣವಾಗುತ್ತಿರುವುದನ್ನು ನಾವು ಗಮನಿಸಬಹುದು. ಜಲಚರವಾದ ಮೀನಾಗಿ ಹುಟ್ಟಿದ ದೇವರು ಜೀವವಿಕಾಸದ ಒಂದೊಂದೇ ಹಂತಗಳನ್ನು ಪ್ರತಿನಿಧಿಸುತ್ತ ಕೊನೆಗೆ ಪೂರ್ಣ ಮನುಷ್ಯನಾಗಿ ಆವಿರ್ಭವಿಸುವುದು ರಾಮಾವತಾರದಲ್ಲೇ. ಹಾಗಾಗಿ ಅದನ್ನು ಕಥಿಸಲು ಕೂತಿರುವ ವಾಲ್ಮೀಕಿಯ ಜವಾಬ್ದಾರಿ ದೊಡ್ಡದು!

ಇಲ್ಲಿ ಬರುವ “ಭೂತಗನ್ನಡಿ” ಎಂಬ ಪದ ಹುಟ್ಟಿಸುವ ಅರ್ಥಗಳು ವಿಶೇಷವಾಗಿವೆ. ಭೂತ – ಎಂದರೆ ಹಳೆಯದ್ದು, ಪಾಸ್ಟ್ ಎನ್ನುವುದು ಒಂದರ್ಥ. ಹಾಗಾಗಿ, ಕವಿ ಕಾವ್ಯ ರಚಿಸುವ ಮೊದಲು ಹಳೆಯದನ್ನು ಅಭ್ಯಾಸ ಮಾಡಿದ್ದಾನೆ ಎನ್ನುವುದು ಒಂದರ್ಥ. ಭೂತಗನ್ನಡಿಯ ಮೂಲಕ ನೋಡುವಾಗ ವಸ್ತುಗಳು ದೊಡ್ಡದಾಗಿ ಹೆಚ್ಚು ಸ್ಪಷ್ಟವಾಗಿ ಕಾಣುತ್ತವೆ ತಾನೆ? ಹಾಗೆಯೇ, ವಾಲ್ಮೀಕಿ ವೇದಪುರಾಣಗಳನ್ನು ಕೇವಲ ಮೇಲುಮೇಲಿಂದ ಓದಿನೋಡಿದ್ದಲ್ಲ; ಸೂಕ್ಷ್ಮವಾಗಿ ಅವಲೋಕಿಸಿದ್ದಾನೆ ಎಂದೂ ಅರ್ಥ ಮಾಡಿಕೊಳ್ಳಬಹುದು. ನಾರದರು ಅವನಿಗೆ ರಾಮ ಮಂತ್ರವನ್ನು ಬೋಧಿಸಿದ ಮೇಲೆ, ಅದನ್ನೇ ಧ್ಯಾನಿಸುತ್ತ ವರ್ಷಗಟ್ಟಲೆ ಕಳೆದ ಆ ಮನುಷ್ಯನ ಸುತ್ತ ಹುತ್ತ ಬೆಳೆಯಿತು ಎನ್ನುವುದು ಒಂದು ಐತಿಹ್ಯ. “ಹುತ್ತಗಟ್ಟಿದ ಕೈ” ಎಂಬ ಸಾಲಲ್ಲಿ ಆ ಕತೆಯ ವಾಸನೆ ಇದ್ದರೂ, ಇಲ್ಲಿ ಅದು ಹೊಳೆಯಿಸುವ ಅರ್ಥ ಬಹಳ ಮೇಲ್ಮಟ್ಟದ್ದು.
***

ಹಿಂದೊಮ್ಮೆ ರಾಕೆಟ್ಟಿನ ವಿಚಾರ ಬಂದಿತ್ತು. ಅಲ್ಲಿ ಮನುಷ್ಯನ ಪ್ರಯತ್ನದಿಂದ ಅಲ್ಪಸ್ವಲ್ಪ ಮೇಲೇರಿ ಕೊನೆಗೆ ಮಣ್ಣಿಗೆ ಮರಳಿದ್ದನ್ನು ಪ್ರಸ್ತಾಪಿಸಲಾಗಿತ್ತು. ಭೂಮಿಯಿಂದ ನಾವು ಮೇಲಕ್ಕೆ ಕಳಿಸಿದ ರಾಕೆಟ್ಟು ಹಾಗೆ ನಷ್ಟವಾದರೆ, ಪ್ರಕೃತಿಯಲ್ಲಿ ನಡೆದ ಇನ್ನೊಂದು ವಿಸ್ಮಯದಲ್ಲಿ ಮೇಲಿಂದ ರಾಕೆಟ್ಟಿನಂತಹ ತೇಜಸ್ಸೊಂದು ಕೆಳಮುಖವಾಗಿ ಬಂದು ಭೂಮಿಗೆ ಸೇರಿದ ವೈಚಿತ್ರ್ಯವನ್ನು ಅಡಿಗರು ಮುಂದೆ ಹೇಳುತ್ತಾರೆ.

ಕೌಸಲ್ಯೆದಶರಥರ ಪುತ್ರಕಾಮೇಷ್ಟಿಗೆರೆ
ಹಠಾತ್ತಾಗಿ ತಾಗಿರೆ ತ್ರಿಕಾಲ ಚಕ್ರ,
ಆಸ್ಫೋಟಿಸಿತ್ತು ಸಿಡಿತಲೆ: ಗರಿಷ್ಠ ತೇಜದ ಮೊನೆ
ಕೆಳಪಟ್ಟು ಮಣ್ಣುಟ್ಟು ನಿಂತ ಘಟನೆ

ಅಡಿಗರ ಕಾವ್ಯದಲ್ಲಿ ಈ ಮೇಲೆ-ಕೆಳಗೆ ತುಯ್ದಾಡುವ ಸಂಕೇತಗಳು ಆಗಾಗ ಬರುವುದು ಒಂದು ವಿಶೇಷ.
***
ಅಡಿಗರು ಸಮಾಜವಾದಿಯಾದರೂ ವ್ಯಕ್ತಿವಿಶಿಷ್ಟತೆಯಲ್ಲಿ ನಂಬಿಕೆ ಇಟ್ಟಿದ್ದರು. ಸಮಾಜವಾದ ಅಥವಾ ಸೋಷಲಿಸಮ್ ಎಂದರೆ “ಎಲ್ಲರೂ ಸಮಾನರು; ಯಾರೂ ಮೇಲಲ್ಲ ಯಾರೂ ಕೀಳಲ್ಲ; ಎಲ್ಲರನ್ನೂ ಫ್ಯಾಕ್ಟರಿಯಿಂದ ಬಂದ ಬೆಂಕಿಪೆಟ್ಟಿಗೆಗಳಂತೆ ಸಮಾನ ಎಂದೇ ಪರಿಗಣಿಸಬೇಕು” ಎನ್ನುವ ಸಮಾನದೃಷ್ಟಿ – ಹಾಗೆಂದು ಭಾರತದ ಬುದ್ಧಿಜೀವಿಗಳು ತಿಳಿದುಕೊಂಡಿದ್ದರು. ಆದರೆ, ಅಡಿಗರ ದೃಷ್ಟಿಕೋನ ಬೇರೆ ಇತ್ತು. “ಸಮಾನತೆ ಎಂದರೆ ಬುದ್ಧಿ, ಸಾಮರ್ಥ್ಯ, ಸಾಧನೆ ಎಲ್ಲದರಲ್ಲೂ ಸಮಾನತೆಯೆಂದು ತಿಳಿಯಬಾರದು. ಸಮಾನತೆಯಲ್ಲಿ ನಂಬಿಕೆಯೆಂದರೆ ಬುದ್ಧಿ, ಸಾಮರ್ಥ್ಯ, ಸಾಧನೆ ಎಲ್ಲ ವರ್ಗದ, ಎಲ್ಲ ಜಾತಿಯ ಎಲ್ಲ ದೇಶದ ಪ್ರತಿಯೊಬ್ಬನಿಗೂ ಸಾಧ್ಯವೆನ್ನುವ ನಂಬಿಕೆ. ಇದು ಪ್ರತಿಯೊಬ್ಬನಲ್ಲೂ ದೇವರಿದ್ದಾನೆ ಎನ್ನುವ ನಂಬಿಕೆಯ ಹಾಗೆ. ಆದ್ದರಿಂದಲೇ ಪ್ರತಿಯೊಬ್ಬ ವ್ಯಕ್ತಿಯನ್ನೂ ಗೌರವಿಸಬೇಕು. ಮನುಷ್ಯನ ಬುದ್ಧಿ, ಸಾಮರ್ಥ್ಯ, ಸಾಧನೆಗಳ ಸಾಧ್ಯತೆಗಳು ಸಂಪೂರ್ಣವಾಗಿ ರೂಪುಗೊಳ್ಳುವ ವ್ಯಕ್ತಿಗಳೇ ಶ್ರೇಷ್ಠವ್ಯಕ್ತಿಗಳು” ಎನ್ನುವ ಅಭಿಪ್ರಾಯ ಅಡಿಗರದಾಗಿತ್ತು. ಹಾಗಾಗಿ, ರಾಮಾಯಣವೂ ಅಂತರಂಗದ ಶೋಧನೆಯ ಮಾರ್ಗವಾಗುತ್ತದೆ. “ಅಂತರಂಗದ ಸುರಳಿ ಬಿಚ್ಚಿ ಸರ್ಚ್‍ಲೈಟಲ್ಲಿ ಹೆದ್ದಾರಿ ಹಾಸಿದ್ದ ರಾಮಚರಿತ” ಎನ್ನುವ ಸಾಲು, ನಾವು ವೈಯಕ್ತಿಕ ನೆಲೆಯಲ್ಲಿ ಅಂತರಂಗದೊಳಗೆ ಬೆಳಕು ಹಾಯಿಸಿಕೊಂಡರೆ ಅಲ್ಲೂ ಒಂದು ರಾಮಚರಿತೆ ನಡೆದುಬಿಡಲು ಬೇಕಾದ ಹೆದ್ದಾರಿ ಕ್ರಿಯೇಟ್ ಆಗಬಹುದು ಎಂಬ ಸೂಚನೆ ಕೊಡುತ್ತದೆ.
***
ಬುದ್ಧಿ, ಸಾಮರ್ಥ್ಯ, ಸಾಧನೆ – ಎಲ್ಲದರಲ್ಲೂ ಉನ್ನತವಾದ ಯಶಸ್ಸು ಪಡೆಯಬೇಕಾದರೆ ಅದಕ್ಕೆ ಗಟ್ಟಿನಿರ್ಧಾರ, ಸಂಕಲ್ಪ ಇರಬೇಕಾಗುತ್ತದೆ. ಇಂತಹ ಶ್ರೇಷ್ಠತೆಯ ವ್ಯಸನ ಅಂಟಿಸಿಕೊಂಡ ವ್ಯಕ್ತಿಯ ಜೀವನ ಸುಲಭದ್ದಲ್ಲ. ಯಾಕೆಂದರೆ ಯಾವುದನ್ನೂ ಅವನು ಸುಲಭದಲ್ಲಿ ಒಪ್ಪಿಕೊಳ್ಳುವವನಲ್ಲ. ಮುಂದಿನ ಚರಣ ನೋಡಿ:

ಸಂಕಲ್ಪ ಬಲದ ಜಾಗರಣೆ: ಕತ್ತಲಿನೆದೆಗೆ
ಕಣೆ; ದಂಡಕಾರಣ್ಯಕ್ಕೆ ಹಗಲ ದೊಣ್ಣೆ;
ಮಣ್ಣಿನಣುಗಿಯ ಸೆಳವಿನಲ್ಲಿ ಲಂಕೆಗೆ ಬೆಂಕಿ;
ಸುಟ್ಟಲ್ಲದೇ ಮುಟ್ಟೆನೆಂಬುಡಾಫೆ.

ಶ್ರೀರಾಮ ಸಂಕಲ್ಪಶಕ್ತಿಗೆ ಹೆಸರುವಾಸಿ. ಒಮ್ಮೆ ತಾನು ಕೈಗೊಂಡ ನಿರ್ಣಯವನ್ನು ಅವನೆಂದೂ ಯಾರ ಮುಲಾಜು-ವಶೀಲಿಗಳಿಗೂ ಬಗ್ಗಿ ಬದಲಾಯಿಸಿದ ಉದಾಹರಣೆ ಇಲ್ಲ. ತನ್ನ ಚಿಕ್ಕಮ್ಮನೇ ತನ್ನ ತಂದೆಯ ಮೂಲಕ ವನವಾಸದ ಆಜ್ಞೆ ಹೊರಡಿಸಿದಾಗ ರಾಮ ಅದನ್ನು ಶಿರಸಾವಹಿಸಿ ಪಾಲಿಸುತ್ತಾನೆ. ಇಡೀ ರಾಜ್ಯವೇ ಅವನ ಕಾಲಿಗೆ ಬಿದ್ದು ಹೊರಳಾಡಿದರೂ ಆ ಸಂಕಲ್ಪ ಬದಲಾಗುವುದಿಲ್ಲ. ಮಣ್ಣಿನಣುಗಿಯಾದ ಸೀತೆಯನ್ನು ಮರಳಿ ಪಡೆಯಬೇಕೆಂಬ ಸಂಕಲ್ಪ ಮಾಡಿದ ಮೇಲೆ ಲಂಕೆಗೆ ಲಂಕೆಯೇ ಸುಟ್ಟುಹೋಗುತ್ತದೆ. “ನಾವು ಗುಟ್ಟಾಗಿ ಹೋಗಿ ಸೀತೆಯನ್ನು ಕರೆತಂದುಬಿಡುತ್ತೇವೆ” ಎಂದು ವಾನರ ಸೇನೆ ಹೇಳಿದಾಗ ರಾಮ ಕೇಳುವುದಿಲ್ಲ. ಸೀತೆಯ ಯೋಗಕ್ಷೇಮ ನೋಡಿಕೊಂಡು ಬರಲು ಹೋದ ಹನುಮಂತನಿಗೆ ಸಂಜೀವಿನೀ ಪರ್ವತವನ್ನೇ ಎತ್ತಿ ತರುವ ಸಾಮರ್ಥ್ಯ ಇರುವಾಗ ಹೂವಿನಂತಹ ಸೀತೆಯನ್ನು ಹಾರಿಸಿಕೊಂಡು ಬರುವುದು ದೂರದ ಮಾತಾಗಿತ್ತೆ? ಆದರೂ ರಾವಣನನ್ನು ಕೊಂದು ಅವನ ರಾಜ್ಯಕ್ಕೆ ಅಗ್ನಿಸ್ಪರ್ಶ ಮಾಡದೆ ತನ್ನ ಹೆಂಡತಿಯನ್ನು ಮರಳಿಪಡೆಯಲಾರೆ ಎಂಬ ಸಂಕಲ್ಪ ರಾಮನದ್ದು. ಅಲ್ಲದೆ, ಯುದ್ಧ ಮುಗಿದು ಆಕೆಯನ್ನು ಪಡೆದ ಮೇಲೆ ಆಕೆಯನ್ನೂ ಅಗ್ನಿಪ್ರವೇಶ ಮಾಡಿಸಿ ಪರಿಶುದ್ಧೆ ಎಂದು ಜಗತ್ತಿಗೆ ತಿಳಿಸಿ ನಂತರ ಕೈಹಿಡಿಯುವ ಅವನ ಸಂಕಲ್ಪ ಉಡಾಫೆಯೂ ಹೌದು ಎಂದು ಅಡಿಗರಿಗೆ ಅನ್ನಿಸಿದೆ. ಶ್ರೇಷ್ಠತೆಯ ವ್ಯಸನ ಹತ್ತಿಸಿಕೊಂಡವರ ಅನೇಕ ನಡೆಗಳು ಹೀಗೆ ವಿವೇಕದ ಗಡಿ ದಾಟಿ ಉಡಾಫೆ ಅನ್ನಿಸುವುದುಂಟು. (ಪದ್ಯ ಬರೆಯುತ್ತಿದ್ದ ಸಮಯದಲ್ಲಿ ಅಡಿಗರಿಗೆ ಎಷ್ಟು ದಿನ ಯೋಚಿಸಿದರೂ ಸರಿಯಾದ ಪದ ಸಿಗದೆ ಈ ಕೊನೆಯ ಸಾಲು ಬರೆಯಲು ಆಗಿರಲಿಲ್ಲವಂತೆ. ಕೊನೆಗೊಮ್ಮೆ ಉಡಾಫೆ ಎಂಬ ಪದ ಹಾಕಿದ ಮೇಲೆ ಸಮಾಧಾನವಾಯಿತಂತೆ! “ಎಲ್ಲ ಸರಿಯಿದೆ, ಆದರೆ ಈ ಪದ ಯಾಕೋ ನಮಗೆ ಒಪ್ಪಿಗೆಯಾಗುವುದಿಲ್ಲ” ಎಂದು ಓದಿದವರು ಹೇಳಿದಾಗ ಅಡಿಗರು ಒಪ್ಪಲಿಲ್ಲ. “ಇಲ್ಲ, ಇದೇ ಸರಿ” ಎಂದು ಸಾಧಿಸಿದರು. ರಾಮನಂತೆ ಅಡಿಗರೂ ಶ್ರೇಷ್ಠತೆಯ ವ್ಯಸನಿಯಲ್ಲವೇ!)
***
ಈ ಪದ್ಯದ ತುಂಬ ಭಾಷಣಗಳಲ್ಲಿ ಹೇಳಲು ಅನುಕೂಲವಾಗುವಂತಹ “ಕೊಟೇಬಲ್ ಕೋಟ್ಸ್” ಇವೆ. ಅಂಥವುಗಳಲ್ಲಿ ಒಂದು ಈ ಮುಂದಿನ ಚರಣದಲ್ಲಿ ಬರುತ್ತದೆ:

ವಿಜೃಂಭಿಸಿತು ರಾಮಬಾಣ; ನಿಜ. ಕತ್ತಲಿಗೆ
ಹತ್ತೆ ತಲೆ? ನೂರಾರೆ? ಅದು ಅಸಂಖ್ಯ:
ಕತ್ತರಿಸಿದರೆ ಬೆಳೆವ, ಬೆಳೆದು ಕತ್ತಿಗೆ ಬರುವ
ಅನಾದಿ; ಕೋದಂಡದಂಡವೂ ಹೀಗೆ ದಂಡ.

ರಾಮಬಾಣ ವಿಜೃಂಭಿಸಿತು ಸರಿ. ಆದರೆ ಅಲ್ಲಿಗೇ ರಾಮಾಯಣದ ಕತೆ ಮುಗಿಯಿತೇ? ಇಲ್ಲ! ದಶಮುಖ ರಾವಣ ಮತ್ತೆಮತ್ತೆ ಹುಟ್ಟಿಬರುತ್ತಲೇ ಇದ್ದಾನೆ. ತ್ರೇತಾಯುಗದ ರಾವಣನಿಗೆ ಇದ್ದದ್ದು ಹತ್ತೇ ತಲೆ; ಆದರೆ ಕಲಿಯುಗದ ರಾವಣನಿಗೆ ಅಸಂಖ್ಯ ಮುಖಗಳು! ಇವನನ್ನು ಎಷ್ಟೂ ಅಂತ ಸವರಿಹಾಕುತ್ತೀರಿ? ಎಷ್ಟು ಸಲ ರಾಮನ ಅವತಾರ ಆಗಲಿ ಎಂದು ಕಾಯುತ್ತೀರಿ? ಕತ್ತರಿಸಿದಷ್ಟೂ ಅದು ಬೆಳೆಯುತ್ತದೆ. ಬೆಳೆದು ನಿಮ್ಮ ಕತ್ತಿಗೇ ಬರುತ್ತದೆ. (ಬೆಳೆದು ಕತ್ತಿಗೆ ಬರುವ – ಎಂಬಲ್ಲಿ ಅದು ‘ಕೊರಳಿಗೆ’ ಎಂದೂ ಆಗಬಹುದು, ‘ಖಡ್ಗಕ್ಕೆ’ ಎಂದೂ ಆಗಬಹುದು!) ಇದು ಅನಾದಿಯಿಂದ ನಡೆದುಬಂದಿರುವ ಯುದ್ಧ. ಈ ತಾಕಲಾಟದಲ್ಲಿ ಕೋದಂಡದಂಡವೇ ದಂಡವಾಗಿಬಿಟ್ಟಿದೆ! ರಾಮನ ಗುಣಗಾನ ಮಾಡಿ, ಅವನು ಶ್ರೇಷ್ಠರಲ್ಲಿ ಶ್ರೇಷ್ಠ ಎಂದೆಲ್ಲ ಹೇಳಿ ಕೊನೆಗೆ, “ಕೊಹಿನೂರು ವಜ್ರವೂ ಇದ್ದಿಲಗಟ್ಟಿ” ಎನ್ನುವ ಹಾಗೆ ಅವನು ಕೈಯಲ್ಲಿ ಹಿಡಿದಿದ್ದ ಕೋದಂಡದಂಡವೂ ಅಪ್ರಯೋಜಕವಾಗಿದೆ ಎಂದು ಕವಿ ನಿಟ್ಟುಸಿರುಗರೆಯಬೇಕಾದರೆ, ಅವರಿಗಾದ ಭ್ರಮನಿರಸನ ಯಾವ ಬಗೆಯದ್ದು, ಯೋಚಿಸುವ ಹಾಗಾಗುತ್ತದೆ. “ಕೋದಂಡದಂಡವೂ” ಎಂಬಲ್ಲಿ ಉಸಿರು ಎಳೆದುಕೊಂಡಂತಾಗಿ “ಹೀಗೆ ದಂಡ” ಎನ್ನುವಾಗ ಉಸಿರನ್ನು ಹೊರಬಿಟ್ಟು ಖಾಲಿಯಾದಂತೆ ಅನಿಸುವ ಪರಿಣಾಮವನ್ನು ಅಡಿಗರು ಸಾಧಿಸಿದ್ದಾರೆ.
***
ಈ ನಿಟ್ಟುಸಿರು, ಬೇಗುದಿ, ದುಃಖ, ಖಾಲಿತನಗಳು ಮುಂದಿನ ಪದ್ಯದಲ್ಲೂ ಮುಂದುವರಿದಿವೆ.

ಅಥವಾ ಚಕ್ರಾರಪಂಕ್ತಿ: ಚಕಮಕಿ ಕಲ್ಲನುಜ್ಜುತ್ತ
ಕೂತುಕೊಂಡಿದ್ದೇನೆ ಕತ್ತಲೊಳಗೆ,
ಪನಿವಾರ ತಿಂದು ಪಾನಕ ಕುಡಿದು ನೋನುತ್ತ
ಸ್ಫೋಟಕ್ಕೆ ಕಾದು ಕಿವಿ ಕಂಪಿಸುತ್ತ.

– ಎನ್ನುವಾಗ, ನಮ್ಮ ಮನಸ್ಸಿನಲ್ಲೊಬ್ಬ ಅಸಹಾಯಕ ವ್ಯಕ್ತಿಯ ಚಿತ್ರ ಮೂಡುತ್ತದೆ ಅಲ್ಲವೆ? ಈ ಮನುಷ್ಯನಿಗೆ ಭರವಸೆಗಳೇ ಕಂತಿ ಹೋಗಿವೆ. ಅವನು ಕತ್ತಲೆಯಲ್ಲಿ ಕೂತಿದ್ದಾನೆ. ಅವನ ಸ್ಥಿತಿ ಎಷ್ಟು ಚಿಂತಾಜನಕವಾಗಿದೆ ಎಂದರೆ, ಎರಡು ಚಕಮಕಿ ಕಲ್ಲುಗಳನ್ನು ಉಜ್ಜುತ್ತ ಬೆಳಕು ಹೊತ್ತಿಸಲು ಪ್ರಯತ್ನ ಪಡುತ್ತಾ ಇದ್ದಾನೆ! ಹಿಂದಿನ ಸಾಲುಗಳಲ್ಲಿ “ಆಸ್ಫೋಟಿಸಿತ್ತು ಸಿಡಿತಲೆ, ಗರಿಷ್ಠ ತೇಜದ ಮೊನೆ” ಎಂದು ಓದಿಕೊಂಡದ್ದಕ್ಕೂ “ಚಕಮಕಿ ಕಲ್ಲನುಜ್ಜುತ್ತ ಕೂತುಕೊಂಡಿದ್ದೇನೆ ಕತ್ತಲೊಳಗೆ” ಎನ್ನುವ ಸಾಲಿಗೂ ಇರುವ ಸಂದರ್ಭಾಂತರ ದಿಗಿಲು ಹುಟ್ಟಿಸುವಂತಿದೆ. ಕತ್ತಲೆಯನ್ನು ನೆಚ್ಚಿ ಕೂತಿರುವ ಈ ವ್ಯಕ್ತಿಯ ಕೈಯಲ್ಲಿ ಸರ್ಚ್‍ಲೈಟಿಲ್ಲ. ಹೊರಬಂದು ರಾಮಚರಿತದ ಹೆದ್ದಾರಿಯಲ್ಲಿ ಎದೆ ಸೆಟೆಸಿ ನಡೆಯುವ ಉತ್ಸಾಹವಾಗಲೀ ಧೈರ್ಯವಾಗಲೀ ಇಲ್ಲ. ಇವನು ದೇವಸ್ಥಾನದಲ್ಲಿ ಕೊಡುವ ಪಾನಕ ಕುಡಿದು ಪನಿವಾರ ತಿಂದು ಬಾಯಲ್ಲಿ ಮಣಮಣ ಪ್ರಾರ್ಥನೆ ಮಾಡುತ್ತ ದೇವರ ಬರವಿಗಾಗಿ ಕಾದಿದ್ದಾನೆ. ಹಾಗೆ ಕಾಯುವಾಗಲೂ ಅವನ ಕಣ್ಣಲ್ಲಿ ಭಯ ಮಡುಗಟ್ಟಿರುವಂತಿದೆ. ಏಕೆಂದರೆ, ಅವನು ದೇವರ ಅವತಾರ ಇಳಿದು ಬರುತ್ತದೆ ಎನ್ನುವ ಆಶಾಭಾವದಿಂದ ಉಲ್ಲಸಿತನಾಗುವುದಕ್ಕೆ ಬದಲು ಸ್ಫೋಟಕ್ಕೆ ಹೆದರಿದ್ದಾನೆ! ಇನ್ನೂ ಆಗದ ಸ್ಫೋಟಕ್ಕೆ ಅವನ ಕಿವಿ ಈಗಲೇ ಕಂಪಿಸಹತ್ತಿದೆ! ಒಂದೇ ಮಾತಲ್ಲಿ ಹೇಳುವುದಾದರೆ, “ನಿನ್ನೊಳಗೆ ರಾಮ ಹುಟ್ಟಿ ಬರದಿದ್ದರೆ ಎಲ್ಲವೂ ವ್ಯರ್ಥ. ನಿನ್ನನ್ನು ಉದ್ಧರಿಸುವ ಶಕ್ತಿ ಹೊರಗಿನಿಂದ ಆವಿರ್ಭವಿಸುತ್ತದೆ ಎಂದು ನಂಬಿಕೂರುವುದು ಮೂರ್ಖತನ. ಅದಕ್ಕಿಂತ ಹೇಡಿತನ ಇನ್ನೊಂದಿಲ್ಲ” ಎನ್ನುವುದು ಇಲ್ಲಿಯ ಭಾವ ಎಂದು ಹೇಳಬಹುದು.

ಈ ಸಾಲುಗಳನ್ನು ಓದಿಕೊಳ್ಳುವಾಗ ನಮಗೆ “ವ್ಯಕ್ತಮಧ್ಯಕ್ಕೆ ಬಂದುರಿವ ಶಬರಿ” ಎಂಬ ಸಾಲು ಅಪ್ರಯತ್ನಪೂರ್ವಕವಾಗಿ ನೆನಪಾದರೆ ಒಳ್ಳೆಯದು; ನಾವು ಕಾವ್ಯದೊಳಗೆ ಪೂರ್ತಿ ಇಳಿದಿದ್ದೇವೆ ಎಂದು ಸಂತೋಷ ಪಡಬಹುದು! ಶಬರಿಯೂ ರಾಮಾಯಣದಲ್ಲಿ ಕಾಯುತ್ತ ಕೂತವಳೇ. ಹಾಗೆ ರಾಮನ ಬರವಿಗಾಗಿ ಕೂತು ಹಣ್ಣುಮುದುಕಿಯಾಗಿ ಹೋಗುತ್ತಾಳೆ. ತನ್ನ ಸುತ್ತಮುತ್ತಲಿನ ತಾಪಸಿಗಳೆಲ್ಲ ಹೊರಟುಹೋದರೂ ಅವಳೊಬ್ಬಳು ಮಾತ್ರ ರಾಮ ಬಂದೇ ಬರುತ್ತಾನೆಂಬ ದೃಢನಂಬಿಕೆಯಲ್ಲಿ ಜೀವ ಹಿಡಿದುಕೊಂಡಿರುತ್ತಾಳೆ. ಅವಳನ್ನು ಇಲ್ಲಿ ಚಕಮಕಿ ಉಜ್ಜುತ್ತ ಕೂತ ಮನುಷ್ಯನ ಜೊತೆ ಹೋಲಿಸಿನೋಡಿದಾಗ ನಮಗೆ ವ್ಯತ್ಯಾಸಗಳು ಸ್ಪಷ್ಟವಾಗುತ್ತವೆ. ಚಕಮಕಿ ಕಲ್ಲು ಹಿಡಿದವನು ಕತ್ತಲೆಯಲ್ಲಿ, ಸ್ಫೋಟಕ್ಕೆ ಹೆದರಿ ಕಂಪಿಸುತ್ತ, ಬೆಣಚು ಕಲ್ಲುಜ್ಜಿ ಬೆಂಕಿ ಮಾಡಲು ಹವಣಿಸುತ್ತ ಕೂತಿದ್ದಾನೆ. ಆದರೆ, ಶಬರಿ ತಾನಾಗಿ ಉರಿದವಳು! ಯಾವ ಕ್ಷಣದಲ್ಲಾದರೂ ಸ್ಫೋಟ ಸಂಭವಿಸಬಹುದೆಂಬ ಭಯದಲ್ಲಿ ಕತ್ತಲೆ ಸೇರುವುದು ಬೇರೆ; ದೇವರ ಸಾಕ್ಷಾತ್ಕಾರ ಆಗೇ ಆಗುತ್ತದೆ ಎಂಬ ಪರಿಪೂರ್ಣ ನಂಬಿಕೆಯಲ್ಲಿ ಸ್ಫೋಟಕ್ಕಾಗಿ ಹಂಬಲಿಸುವುದು ಬೇರೆ. ಶಬರಿ ಅಂತಹ ನಂಬಿಕೆ ಇರುವವಳು. ಒಂದೇ ಧ್ಯೇಯಕ್ಕಾಗಿ ತನ್ನ ಜೀವನ ಸವೆಸಿದವಳು. ಚಕಮಕಿ ಕಲ್ಲಿನ ಬೆಂಕಿಯ ಕಿಡಿ ನಂಬಿಕೊಂಡು ಕತ್ತಲೆಯಲ್ಲಿ ಬಾಳ್ವೆ ಮಾಡದೆ ತಾನೇ ಬೆಂಕಿಯಂತೆ ಉರಿಯುತ್ತ ಸಾರ್ಥಕವಾಗಿ ಬದುಕಿದ ತೃಪ್ತಿ ಇದೆ ಅವಳಿಗೆ.
***
ಇವೆಲ್ಲ ಆಗಿ ಕೊನೆಯ ಹಂತಕ್ಕೆ ಬರುವಾಗ, ಅಡಿಗರು ತನ್ನ ಪ್ರತಿಭೆಯ ಶಿಖರ ಮುಟ್ಟುತ್ತಾರೆ.

ಷಟ್ಚಕ್ರ ರಾಕೆಟ್ಟುಗಳ ಹಂತಹಂತಕ್ಕೆ
ಅಂಚೆ ತಲುಪೀತೇ ಸಹಸ್ರಾರಕೆ?
ಹುತ್ತಗಟ್ಟದೆ ಚಿತ್ತ ಮತ್ತೆ ಕೆತ್ತೀತೇನು
ಪುರುಷೋತ್ತಮನ ಆ ಅಂಥ ರೂಪ-ರೇಖೆ?

ಎನ್ನುವ ಆ ಕೊನೆಯ ಸಾಲುಗಳು ಅಪೂರ್ವ! ಷಟ್ಚಕ್ರ ಎಂಬ ಪದವನ್ನೇ ನೋಡಿ. ಆರು ಚಕ್ರಗಳ ಬಂಡಿ – ಎಂದರೆ ಆಧುನಿಕ ವಾಹನಗಳ ಬಗ್ಗೆ ಅಡಿಗರು ಮಾತಾಡುತ್ತಿದ್ದಾರೆ ಎಂದು ನಮಗನ್ನಿಸಬಹುದು. ಅದಕ್ಕೆ ಸರಿಯಾಗಿ ಅಲ್ಲಿ ರಾಕೆಟ್ಟು ಎಂಬ ಪದವೂ ಬಂದಿದೆ ನೋಡಿ! ಆದರೆ, ತಂತ್ರಶಾಸ್ತ್ರದಲ್ಲೂ ನಾಭಿಯಿಂದ ಹಣೆಯ ಮಧ್ಯಬಿಂದುವಿನವರೆಗೆ ಒಟ್ಟು ಆರು ಚಕ್ರಗಳ ಬಗ್ಗೆ ಹೇಳುತ್ತಾರೆ. ಆತ್ಮಶಕ್ತಿಯನ್ನು ನಾಭಿಯಿಂದ ಸಹಸ್ರಾರದವರೆಗೆ ಎತ್ತಿಕೊಂಡು ಹೋಗುವುದೇ ತಂತ್ರದ ಪ್ರಮುಖ ಉದ್ಧೇಶ. ಇದು ಒಂದು ರೀತಿಯಲ್ಲಿ ಆತ್ಮಸಾಕ್ಷಾತ್ಕಾರದ ದಾರಿ. ಶ್ರೇಷ್ಠನಾಗುವ ಕಠಿಣಸಾಧನೆಯ ದಾರಿ. ಅಧ್ಯಾತ್ಮದ ದಾರಿ. ಹೊರಗಿನ ಎಲ್ಲ ಭವಬಂಧನಗಳನ್ನೂ ಕಳಚಿಕೊಂಡು ತಾವರೆಯಂತೆ ನೀಳವಾಗಿ ಬೆಳೆದು ಕೊನೆಗೆ ಹೂಬಿಡುವ ಶ್ರಮದ ಕೆಲಸ. “ಗೊನೆ ಮಾಗಿ ಬಾಳೆ ಜೀವನ್ಮುಕ್ತ” ಎನ್ನುವ ಹಾಗಿನ ತಪಸ್ಸು. ಯಾವುದೇ ಸೃಜನಶೀಲ ಕೆಲಸ ಮಾಡಬೇಕಾದರೂ ಈ ಶ್ರಮ, ತಪಸ್ಸು, ಧ್ಯಾನ, ಏಕಾಗ್ರತೆ ಬೇಕಾಗುತ್ತದೆ. ಅದು ನನಗೂ ಒಲಿದೀತೇ? ಎಂದು ಕವಿ ಕೇಳುತ್ತಿರುವ ಹಾಗಿದೆ.

ಕಠಿಣ ದಾರಿ ಸರಿ, ಅದು ಅಸಾಧ್ಯವೇನಲ್ಲ. ಯಾಕೆಂದರೆ ಅದನ್ನು ಸಾಧ್ಯಮಾಡಿಕೊಂಡು ಮಾದರಿ ಉದಾಹರಣೆಯಾಗಿ ನಿಂತಿರುವ ಮಹಾಕವಿ ವಾಲ್ಮೀಕಿಯೇ ಇದ್ದಾನಲ್ಲ! ಪುರುಷರಲ್ಲಿ ಪುರುಷೋತ್ತಮನಾದ ರಾಮನ ವ್ಯಕ್ತಿತ್ವವನ್ನು ಕಡೆದು ನಿಲ್ಲಿಸಲು ಹೊರಟ ವಾಲ್ಮೀಕಿಯ ತಯಾರಿಯಾದರೂ ಹೇಗಿದ್ದಿರಬಹುದು! ಅವನು ರಾಮಾಯಣವನ್ನು ಬರೆಯಲು ಎಷ್ಟೆಲ್ಲ ಸಿದ್ಧತೆ ಮಾಡಿಕೊಂಡಿರಬಹುದು! ಚಿತ್ತವೇ ಹುತ್ತಗಟ್ಟದೆ ಹೋದರೆ ಅಂಥದೊಂದು ಅದ್ಭುತ ಕೃತಿಯನ್ನು ಕೊಡುವುದಕ್ಕೆ ಸಾಧ್ಯವೆ? ಆ ಅಂಥ ರೂಪ-ರೇಖೆಗಳನ್ನು ಕಡೆಯಲು ಆದೀತೆ? ಅಂತಹ ಆ ಸಾಧನೆಯನ್ನು ಯಾರಿಗಾದರೂ (ಅಥವಾ ನನಗೇ ಆದರೂ) ಮತ್ತೆ ಮಾಡುವುದು ಆಗುವ ಮಾತೆ?

ಹುತ್ತಗಟ್ಟದೆ ಚಿತ್ತ ಮತ್ತೆ ಕೆತ್ತೀತೇನು ಪುರುಷೋತ್ತಮನ ಆ ಅಂಥ ರೂಪ-ರೇಖೆ? ಇದು ನಮ್ಮ ಪ್ರಶ್ನೆಯೂ ಆಗಿದೆ, ಆಗಬೇಕು. ಶ್ರೀರಾಮ, ವಾಲ್ಮೀಕಿ, ಅಡಿಗ – ಇವೆಲ್ಲ ಯುಗಕ್ಕೊಮ್ಮೆ ಆಗಿಹೋಗುವ ಅದ್ಭುತಗಳು.

28 ಟಿಪ್ಪಣಿಗಳು Post a comment
 1. ಮಾರ್ಚ್ 28 2015

  Excellent. ಇದು ಅಡಿಗರ ಶ್ರೀರಾವನಮಿಯದಿವಸ ಕವನದ ಬಗೆಗೆ ಬರೆದ ಒಂದೊಳ್ಳೆಯ ವಿವರಣೆ ಆಗಿದೆ. ಹಿಂದೆಯೂ ಬಹಳಷ್ಟು ಬಂದಿದೆ. ಸಾರ್ವತ್ರಿಕವಾಗಿ ಚರ್ಚೆಯಾಗುವ, ತೂಕದ ಕವನಗಳನ್ನು ಕೊಟ್ಟವರು ಅಡಿಗರೇ. ಅತಿಶಯೋಕ್ತಿಯಲ್ಲ.

  ಅದೊಂದು ಸತ್ಯ, ಸಮಾನತೆ ಲಿಂಗದಲ್ಲಿ, ಬುದ್ಧಿಯಲ್ಲಿ, ಬಣ್ಣದಲ್ಲಿ, ವೃತ್ತಿಯಲ್ಲಿ ಸಾಧ್ಯವೇ ಇಲ್ಲ. ಸಾಧ್ಯವಿದ್ದರೆ ಆಧ್ಯಾತ್ಮದಲ್ಲಿ ಮಾತ್ರ.

  ಧನ್ಯವಾದ, ರಾಮನವಮಿಯ ಶುಭಾಶಯಗಳು,

  ಉತ್ತರ
  • rohithmath
   ಮಾರ್ಚ್ 29 2015

   ಸಾರ್ವತ್ರಿಕವಾಗಿ ಚರ್ಚೆಯಾಗುವ, ತೂಕದ ಕವನಗಳನ್ನು ಕೊಟ್ಟವರು ಅಡಿಗರೇ. ಹೌದು, ಸಂಶಯವೇ ಇಲ್ಲ. ಇಷ್ಟು ವರ್ಷಗಳು ಕಳೆದರೂ, ಇಷ್ಟು ಚಳುವಳಿಗಳು ಮುಗಿದರೂ ನಾವು ಮತ್ತೆ ಅಡಿಗರ ಕವಿತೆಗಳತ್ತಲೇ ವಾಲುತ್ತಿರುವುದೇ ಅದಕ್ಕೆ ಸಾಕ್ಷಿ.

   ಉತ್ತರ
 2. mahima
  ಮಾರ್ಚ್ 28 2015

  hmmm… S divakar avaru idara paatha maadidaaga naanu ADIGArannu mattashtu prItisilaarambhiside…!! hats off….

  ಉತ್ತರ
  • rohithmath
   ಮಾರ್ಚ್ 29 2015

   ಧನ್ಯವಾದಗಳು.

   ಉತ್ತರ
 3. Umesh
  ಮಾರ್ಚ್ 28 2015

  ಅಡಿಗರಿಗೆ ಅಡಿಗರೇ ಸಾಟಿ. ಬಹಳ ಚೆನ್ನಾಗಿ ವಿವರಿಸಿದ್ದೀರಿ. “ವ್ಯಕ್ತಮಧ್ಯಕ್ಕೆ ಬಂದುರಿವ ಶಬರಿ” ಈ ವಾಕ್ಯಕ್ಕೆ ನಾನು ಕಂಡುಕೊಂಡಿದ್ದ ಅರ್ಥ, ಹಚ್ಚಿಟ್ಟ ಸೀಬೆ ಹಣ್ಣು ಕೆಂಪಾಗಿ ಕಾಣುತ್ತಿತ್ತು ಎಲ್ಲ ಹಣ್ಣುಗಳ ಮಧ್ಯೆ. ಯಾಕೆಂದರೆ ಶಬರಿಗೂ ಸೀಬೆ ಹಣ್ಣಿಗೂ ಇರುವ ಸಂದರ್ಭ ರಾಮಾಯಣದಲ್ಲಿ ನೋಡಿದ್ದೇವೆ. ಇಲ್ಲಿ ಒಂದು ಅಧ್ಯಾತ್ಮಿಕ ಅರ್ಥವನ್ನು ಕೊಟ್ಟು ಹೊಸ ಆಯಾಮ ತೋರಿಸಿದ್ದೀರಿ. ಧನ್ಯವಾದಗಳು. ನಿಮ್ಮಿಂದ ಇನ್ನಷ್ಟು ಅಡಿಗರ ಕಾವ್ಯ ವಿವರಣೆ ಬರಲಿ ಅಂತ ಆಶಿಸುತ್ತೇನೆ.

  ಉತ್ತರ
  • rohithmath
   ಮಾರ್ಚ್ 30 2015

   ನಿಮ್ಮ ಅಭಿಪ್ರಾಯಕ್ಕೆ ಧನ್ಯವಾದಗಳು. ಹೊಸ ಅರ್ಥ ಬರೆದರೂ ಉರಿವ ಶಬರಿ ಇನ್ನೂ ನನಗೆ ನಿಗೂಢಳಾಗಿಯೇ ಉಳಿದಿದ್ದಾಳೆ. 🙂

   ಉತ್ತರ
   • ಏಪ್ರಿಲ್ 2 2015

    ಉರಿಯುವುದಕ್ಕೆ ‘ಸುಲಿಯುವುದು, ಬಿಚ್ಚಿಕೊಳ್ಳುವುದು, ಅರಳುವುದು’ ಎಂಬ ಲಕ್ಷಣಾರ್ಥಗಳೂ ಇವೆ !

    ಉತ್ತರ
 4. Geetanjali
  ಮಾರ್ಚ್ 28 2015

  Great article..I read another one few years back by Vikram Hathwar. Loved your analysis..
  My favorite lines are , ವ್ಯಕ್ತಮಧ್ಯಕ್ಕೆ ಬಂದುರಿವ ಶಬರಿ, ಸುಟ್ಟಲ್ಲದೇ ಮುಟ್ಟೆನೆಂಬುಡಾಫೆ and ಹುತ್ತಗಟ್ಟದೆ ಚಿತ್ತ ಮತ್ತೆ ಕೆತ್ತೀತೇನು ಪುರುಷೋತ್ತಮನ ಆ ಅಂಥ ರೂಪ…

  ಉತ್ತರ
  • rohithmath
   ಮಾರ್ಚ್ 30 2015

   ಈ ಮೂರು ಸಾಲುಗಳು ನಿಮ್ಮ ಹಾಗೆಯೇ ನನಗೂ ತುಂಬಾ ಆಪ್ತವಾದವು. “ಹುತ್ತಗಟ್ಟದೆ ಚಿತ್ತ..” ಎಂಬ ಸಾಲನ್ನು ಅಡಿಗರಲ್ಲದೆ ಯಾರೂ ಬರೆಯಲಾರರು ಎಂದು ಹಲವು ಸಲ ಅನ್ನಿಸಿದೆ.

   ಉತ್ತರ
 5. ಮಾರ್ಚ್ 28 2015

  ತುಂಬಾ ಚೆನ್ನಾಗಿದೆ ರೋಹಿತ್ ಚಕ್ರತೀರ್ಥ ಸರ್ , ವಂದನೆಗಳು. ಬೆಳಿಗ್ಗೆ ಪೂರ್ತಿಯಾಗಿ ಓದಲಾಗಿರಲಿಲ್ಲ

  ಉತ್ತರ
  • rohithmath
   ಮಾರ್ಚ್ 30 2015

   ಧನ್ಯವಾದಗಳು ಕಿರಣ್. ಬೆಳಿಗ್ಗೆ ನೋಡಿದ್ದನ್ನು ಮತ್ತೆ ಬಂದು ಓದಿದ್ದಕ್ಕೆ; ಹಾಗೂ ಖುಷಿಯಿಂದ ಪ್ರತಿಕ್ರಯಿಸಿದ್ದಕ್ಕೆ 🙂

   ಉತ್ತರ
 6. ಕಿರಣ್
  ಮಾರ್ಚ್ 29 2015

  ಚಕ್ರಾರಪಂಕ್ತಿ ಅನ್ನುವ ಪದವನ್ನು ಇನ್ನೂ ಹೆಚ್ಚು ವಿಶ್ಲೇಷಣೆ ಮಾಡುತ್ತೀರಿ ಅಂದುಕೊಂಡಿದ್ದೆ (ನೀವು ಚಕ್ರತೀರ್ಥ ಅಂತ!). ಆ ಪದವನ್ನು ಅಡಿಗರು ಪ್ರಾಯಶಃ ಆಯ್ದುಕೊಂಡದ್ದು ಭಾಸನಿಂದ. ಪ್ರತಿಮಾ ನಾಟಕದಲ್ಲಿ “ಚಕ್ರಾರಪಂಕ್ತಿರಿವ ಮನುಷ್ಯಾಯ ಭಾಗ್ಯಂ” ಎಂಬ ಸಾಲು ಬರುತ್ತದೆ. ಚಕ್ರದ ಕಡ್ಡಿಗಳ ಚಲನೆಯ ಸಂಕೇತ. ನಮ್ಮ ಉಮೇದುಗಳ ಚಲನೆಯೂ ಹೌದು! ಒಂದು ಕೈಲಿ ಸಾಹಿತ್ಯ; ಇನ್ನೊದು ಕೈಲಿ ವಿಜ್ಞಾನ! ಎರಡನ್ನೂ ಹೇಗೆ ನಿಭಾಯಿಸುತ್ತೀರಪ್ಪಾ?! ದೊಡ್ಡ ನಮಸ್ಕಾರ ನಿಮಗೆ!!

  ಉತ್ತರ
  • rohithmath
   ಮಾರ್ಚ್ 30 2015

   ಚಕ್ರಾರಪಂಕ್ತಿ ಎನ್ನುವ ಪದವನ್ನು ಅಡಿಗರು ಭಾಸನಿಂದ ಪಡೆದಿರಬಹುದು. ಅಥವಾ ಅದಕ್ಕಿಂತ ಹಿಂದೆ ಈ ಪದ ಬೇರೆಲ್ಲಾದರೂ ಬಂದಿದೆಯೇ ನನಗೆ ಗೊತ್ತಿಲ್ಲ. ಚಕ್ರಾರಪಂಕ್ತಿ – ನೀವು ಹೇಳುವ ಹಾಗೆ, ಚಕ್ರದ ಅರ ಎನ್ನುವ ಅರ್ಥ ಕೊಡುವುದರ ಜೊತೆಗೆ, “ಸುತ್ತ ಹಬ್ಬಿದ, ಮುಗಿಯದ ವೃತ್ತಗಳು” ಎಂಬರ್ಥವನ್ನೂ ಕೊಡುತ್ತದೆ. ಚಕಮಕಿ ಕಲ್ಲುಜ್ಜುತ್ತ ಕತ್ತಲೆಯಲ್ಲಿ ಕೂತಿರುವವನಿಗೆ ಈ ಸುಳಿಯಿಂದ ಬಿಡುಗಡೆ ಇಲ್ಲ. ಆ ವೃತ್ತಗಳು ಅವನ ಸುತ್ತ ಹಬ್ಬಿಕೊಂಡು ಕಂಗೆಡಿಸಿವೆ. ಕವನದ ಇನ್ನೊಂದು ಕಡೆ ಬರುವ “ಹಠಾತ್ತಾಗಿ ತಾಗಿರೆ ತ್ರಿಕಾಲ ಚಕ್ರ” – ಎಂಬ ಸಾಲಿನೊಟ್ಟಿಗೆ ಇದನ್ನು ಹೋಲಿಸಿನೋಡಿ. ಅಲ್ಲಿ ಹುಟ್ಟಿರುವ ಸಾಧಕ ಪುರುಷ ತ್ರಿಕಾಲಗಳನ್ನೂ ತನ್ನ ಅಭೀಪ್ಸೆಗೆ ತಕ್ಕಂತ ಬಗ್ಗಿಸಿಕೊಳ್ಳಬಲ್ಲವನು. ಆದರೆ ಚಕಮಕಿ ಕಲ್ಲುಜ್ಜುತ್ತ ಕೂತವನಿಗೆ ಕತ್ತಲೆ ಬಿಟ್ಟರೆ ಬೇರೆ “ಕಾಲ” ಬಂದೀತೆಂಬ ಭರವಸೆಯೇ ಇಲ್ಲ!

   ನನ್ನ ವಿಜ್ಞಾನಲೇಖನಗಳನ್ನೂ ನೀವು ಓದುವವರಾದ್ದರಿಂದ ಇಷ್ಟು ಸಾಕು, ಇನ್ನೂ ವಿವರಿಸಿ ಹೆಚ್ಚು ಶಿಕ್ಷೆ ಕೊಡಲಾರೆ 🙂

   ಉತ್ತರ
 7. ಮಲ್ಲಪ್ಪ
  ಮಾರ್ಚ್ 29 2015

  ಕವನದ ವಿಮರ್ಶೆ ತುಂಬಾ ಚನ್ನಾಗಿದೆ. ನಾನು ನಿಮ್ಮ ಲೇಖನಗಳನ್ನು ಇಷ್ಟು ದಿನ ಓದದೆ ತಪ್ಪಿ ಹೋಯಿತು ಎನಿಸುತ್ತದೆ.

  ಉತ್ತರ
  • rohithmath
   ಮಾರ್ಚ್ 30 2015

   ನಾನು ಅಲ್ಲಿಲ್ಲಿ ಒಂದೆರಡು ಲೇಖನ ಬರೆದಿದ್ದೇನೆ ಅಷ್ಟೆ. ಹಾಗಾಗಿ ನೀವು ತಪ್ಪಿಸಿಕೊಂಡದ್ದು ಬಹಳವೇನಿಲ್ಲ. ಕವಿತೆಯ ವಿಮರ್ಶೆಯನ್ನು ಮೆಚ್ಚಿದ್ದಕ್ಕೆ ಧನ್ಯವಾದಗಳು 🙂

   ಉತ್ತರ
 8. ಮಾರ್ಚ್ 30 2015

  *ರಾಮನವಮಿಯ ದಿವಸ* ಪದ್ಯವನ್ನು ವಿವರಿಸುವ ಪ್ರಯತ್ನ (ವಿಶೇಷತಃ ಬರವಣಿಗೆಯಲ್ಲಿ) ಎಲ್ಲಿ ನಡೆದರೂ ಏಳುವ ಪ್ರಶ್ನೆ: “ಹಿಂದಿನವರು ಹೇಳದ ಏನನ್ನು ಇದು ಹೇಳೀತು? ಈ ಪ್ರಯತ್ನ ಹೇಗೆ ಭಿನ್ನ?” ಅಂತ. ಉಸಿರು ಬಿಗಿ ಹಿಡಿದು ಓದುವುದಾಗುತ್ತೆ. ವಿಭಿನ್ನ ರೀತಿಯ ನಿಡುಸಿರುಗಳು ಹೊರಬೀಳತೊಡಗುತ್ತವೆ: ನಮಗೆ ಕಾಣಿಸದ ಅರ್ಥ ಇಲ್ಲಿ ಕಂಡಾಗಲೂ, ಹಿಂದಿನವರು ಕಾಣಿಸಿಕೊಟ್ಟ ಮತ್ತು ನಮಗೇ ಕಾಣಿಸಿದ ವಿವರಗಳು ಇಲ್ಲಿ ಕಾಣದಿದ್ದಾಗಲೂ. ಕೆಂಡಸಂಪಿಗೆಯಲ್ಲಿ ಈ ಹಿಂದೆ ಅಂತಹದೊಂದು ಪ್ರಯತ್ನವಾಗಿದ್ದಾಗ ಯಾರೋ ಟಿಪ್ಪಣಿಸಿದ್ದರು: ” ಈ ಅಡಿಗರ ಪದ್ಯ ಅರ್ಥವಾಗಬೇಕೆಂದರೆ ಅದರ ಬಗ್ಗೆ ಅನಂತಮೂರ್ತಿಯವರು ಹೇಳಿದ್ದನ್ನು ಓದಿ, ಅರ್ಥವಾಗಬಾರದು ಅಂತಿದ್ದರೆ ಅವರ ಶಿಷ್ಯರು ಬರೆದಿದ್ದನ್ನು ಓದಿ!” ಅಂತ. ಈ ಪ್ರಯತ್ನವನ್ನು ಓದಿದ ಮೇಲೂ ಆ ಮಾತು ಹಾಗೇ ಉಳಿಯಿತು.

  ಉತ್ತರ
  • rohithmath
   ಮಾರ್ಚ್ 30 2015

   ಹಿಂದಿನವರು ಹೇಳದ ಏನನ್ನಾದರೂ ಹೇಳಲೇಬೇಕೆನ್ನುವುದು ನನ್ನ ಉದ್ಧೇಶ ಆಗಿರಲಿಲ್ಲ. ನನ್ನ ಉದ್ಧೇಶ ಇದ್ದದ್ದು, ಈ ಕವಿತೆಯನ್ನು ನನ್ನ ಅರಿವಿನ ಮಟ್ಟಿಗೆ ಇಳಿಸಿಕೊಳ್ಳುವುದು ಮತ್ತು ಆ ಖುಷಿಯನ್ನು ಉಳಿದವರ ಜೊತೆ ಹಂಚಿಕೊಳ್ಳುವುದು – ಅಷ್ಟೆ. 🙂

   ಇನ್ನು “ಅಡಿಗರ ಪದ್ಯ ಅರ್ಥವಾಗಬೇಕಾದರೆ ಅನಂತಮೂರ್ತಿಗಳನ್ನು ಓದಿ, ಅರ್ಥವಾಗಬಾರದು ಎಂದಿದ್ದರೆ ಅವರ ಶಿಷ್ಯರು ಬರೆದದ್ದನ್ನು ಓದಿ” ಎನ್ನುವುದು ಕೇವಲ ಕುಹಕವಾಗುತ್ತದೆ. ಒಂದು ಪದ್ಯ ಅರ್ಥವಾಗಬೇಕಾದರೆ, ಮೊದಲು ಆ ಪದ್ಯವನ್ನೇ ಓದಬೇಕು. ಪದ್ಯ ಅರ್ಥವಾಗದೆ ಕೇವಲ ವಿಮರ್ಶೆಗಳನ್ನು ಓದಿದರೆ ಏನು ಪ್ರಯೋಜನ? ಭಕ್ತಿ ಹುಟ್ಟದೆ ಕುಂಕುಮಾರ್ಚನೆ ಮಾಡಿಸಿದಷ್ಟೇ ಲಾಭ.

   ಉತ್ತರ
   • ಮಾರ್ಚ್ 31 2015

    ಅಮೂ ಅವರು ಈ ಕವಿತೆಯನ್ನು ಉಡುಪಿಯಲ್ಲಿ ಉಪನ್ಯಾಸವೊಂದರಲ್ಲಿ ಅರ್ಥೈಸಿದ್ದು ಅವರ ಸಮಗ್ರದಲ್ಲೋ ಉಡುಪಿ ಗೆಳೆಯರ ಅಮೂ-ಉಪನ್ಯಾಸಗಳ ಸಂಕಲನವೊಂದರಲ್ಲೋ ಪ್ರಕಟವಾಗಿದ್ದುದ್ದು ಸ್ವತಃ ಅಮೂ ಅಭಿಮಾನಿಗಳಾದ ನಿಮ್ಮ ಕಣ್ಣನ್ನು ಅದು ಹೇಗೋ ತಪ್ಪಿಸಿಕೊಂಡಿರಬಹುದು. ಹುಡುಕಿ ಓದಿ ನೋಡಿ, ಧಾಟಿ ಕುಹಕದ್ದಾದರೂ ಮಾತಿನಲ್ಲಿ ಹುರುಳಿದೆ ಅಂತ ಅನ್ನಿಸಬಹುದು, “ಪದ್ಯ ಅರ್ಥವಾಗದೆ ಕೇವಲ ವಿಮರ್ಶೆಗಳನ್ನು ಓದಿದರೆ ಏನು ಪ್ರಯೋಜನ?” ಅನ್ನುವ ಮಾತಿನ ಅಸಂಬದ್ಧತೆ ನಿಮಗೇ ತಿಳಿಯಬಹುದು.

    ಉತ್ತರ
    • rohithmath
     ಮಾರ್ಚ್ 31 2015

     ನಾನು ಅಮೂ ಸಾಹಿತ್ಯದ ಅಭಿಮಾನಿ ಹೌದು. ಅಂದಮಾತ್ರಕ್ಕೆ ಅವರು ಬರೆದದ್ದು ಸರಿ, ಅವರ ಶಿಷ್ಯರು ಬರೆದದ್ದೆಲ್ಲ ಭೋಳೆ ಎಂಬ ಸರಳ ಸಮೀಕರಣ ಬರೆಯಲಾರೆ. ಅಮೂ ಬರೆದದ್ದನ್ನು ಓದಿದ ಮೇಲೆ ಅದೇ ಧಾಟಿಯಲ್ಲಿ ವಿಮರ್ಶೆ ಬರೆಯಲು ಹೋಗಿ ಕೆಲವರು ದಾರಿ ತಪ್ಪಿರಬಹುದು, ಇಲ್ಲ ಅನ್ನುವುದಿಲ್ಲ. ಅಂದಮಾತ್ರಕ್ಕೆ ಉಳಿದವರದ್ದೆಲ್ಲ ಕಸ ಎನ್ನುವ ಸಾರ್ವತ್ರೀಕರಣ ಅಪಾಯಕಾರಿ.

     “ನಾನು ಏನೋ ಓದಿದಾಗ ಅಸ್ಪಷ್ಟವಾಗಿ ಗ್ರಹಿಸಿದ್ದನ್ನು ಇನ್ನೊಬ್ಬ ಸ್ನೇಹಿತನ ಜೊತೆ ಸ್ಪಷ್ಟಪಡಿಸಿಕೊಳ್ಳೋದೇ ವಿಮರ್ಶೆ. ಇನ್ನೊಬ್ಬ ಸಹಓದುಗನ ಓದಿನಲ್ಲಿ ನನ್ನ ಓದು ಪೂರ್ಣವಾಗುತ್ತೆ. ಆದರೆ ನನ್ನ ಓದಿನಲ್ಲೇ ಆ ಅಂಶ ಇಲ್ಲದೇ ಹೋದರೆ ಅವನದನ್ನು ಕೊಡಲಾರ” – ಇದು ಅಮೂ ಹೇಳಿದ ಮಾತು.

     ಅಮೂ ರಾಮನವಮಿ ಪದ್ಯ ಬಗೆದ ಬಗೆಯನ್ನು ಓದಿದ್ದೇನೆ, ಓದಿ ಮೆಚ್ಚಿದ್ದೇನೆ. ಆದರೆ, ನಾನು ಬರೆಯಬಹುದಾದದ್ದು ನನ್ನ ಅರಿವಿಗೆ ಎಟುಕಿದ್ದೆಷ್ಟೋ ಅಷ್ಟೇ. ಬೇರೆಯವರ ಅನುಭವ, ಅದೆಷ್ಟೇ ಶ್ರೀಮಂತವಾಗಿದ್ದರೂ – ಅದು ನನ್ನದೂ ಆಗದೆ ಹೋದರೆ, ನನ್ನ ಬರಹದಲ್ಲಿ ಬರುವುದಿಲ್ಲ.

     ಉತ್ತರ
 9. ಮಾರ್ಚ್ 30 2015

  ಕೆಲವೊಂದು ಸಾಧ್ಯತೆಗಳ ಪಾಯಿಂಟರ್ಗಳು :

  ‘ರಾಮನಾಮಾಮೃತವೆ’ ಯಾಕೆ, ‘ರಾಮನಾಮಾಮೃತವೇ’ ಯಾಕಲ್ಲ?

  ಕಾಮಕಾಮಮಧ್ಯಮಧ್ಯೇ ಸೆಮಿಕೋಲನ್ ಯಾಕಲ್ಲಿ?

  ಬಂದುರಿವ = ಬಂದ+ಉರಿವ, ಬಂದು+ಉರಿವ ಇತ್ಯಾದಿಯಾಗಿ ಯಾವ ನಿಷ್ಪತ್ತಿಯೂ ವ್ಯಾಕರಣಸಿಂಧು ಅಲ್ಲದಿದ್ದರೂ ‘ಬಂದುರಿವ’ ಹಟವೇಕೆ? ‘ಬಂದುರಿವ’ ಎನ್ನುವುದರ ‘ಧ್ವನಿಸಾಮ್ಯತೆ’, ‘ಶಬ್ಧಸಾಮ್ಯತೆ’ ಗಳ ಪರಿಧಿಯಲ್ಲಿನ ಪದಗಳು? ಇರಿ, ಊರಿ, ಅರಿ…?

  ಹಾಗಾದರೆ ‘ವ್ಯಕ್ತಮಧ್ಯಕ್ಕೆ ಬಂದುರಿವ’ ಯಾಕೆ? “ವ್ಯಕ್ತಮಧ್ಯದಲ್ಲಿ ಬಂದುರಿವ” ಯಾ ‘ವ್ಯಕ್ತಮಧ್ಯೇ ಬಂದುರಿವ’ ಯಾಕಲ್ಲ?

  ಉತ್ತರ
 10. ಮಾರ್ಚ್ 30 2015

  …ಸಾಧ್ಯತೆಗಳ ಪಾಯಿಂಟರ್ಗಳು :

  ‘ಮಣ್ಣೊಡಲಿನೊಳಗಡೆಗೆ’ ಯಾಕೆ, ‘ಮಣ್ಣೊಡಲಿನೊಳಗಡೆ’ ಯಾಕಲ್ಲ?

  ‘ಅಶ್ವತ್ಥ’ ಏನು ಮಾಡುತ್ತಿದೆ ಅಲ್ಲಿ?

  ಅಂಚೆ = ಹಂಸ, ಅಂಚು+ಏ

  ಕಲ್ಲರಳಿದ್ದು ಬಾಹುಬಲಿ ಎಂಬ ವ್ಯಕ್ತಿಯ ನೆತ್ತಿಯಲ್ಲೂ ಇರಬಹುದಲ್ಲ್ಲವೇ?

  ‘ನೆಲಕ್ಕಂಟಿ ಬಿದ್ದ’, ‘ವಿಕಾರ’ ಇತ್ಯಾದಿಗಳನ್ನು ಋಣಾತ್ಮಕವಾಗಿಯೇ ಅರ್ಥೈಸಬೇಕು ಅಂತೇನೂ ಇಲ್ಲವಲ್ಲವೇ? ಕೆಲವೊಮ್ಮೆ ಬರೀ ನಿಘಂಟು ತೆರೆದು ನೋಡಿದರೂ ಋಣಾತ್ಮಕವಲ್ಲದ ಹಲವು ಅರ್ಥಗಳು ದೊರೆಯುತ್ತವೆ.

  ಅಂದಹಾಗೆ ಅಡಿಗರ ‘ತಿಂಗಳಿಗೆ ಬಡಿವಾಧುನಿಕ ವಿಕಾರ’ದಲ್ಲಿ ‘ಚಂದ್ರಯಾನ’ದ ‘hammering the moon’ನ ‘ಸೂಚನೆ’ ನನಗೆ ಮಾತ್ರ ಕಾಣುತ್ತಿರುವುದೋ!?

  ಉತ್ತರ
  • rohithmath
   ಮಾರ್ಚ್ 30 2015

   ನೆಲಕ್ಕಂಟಿ ಬಿದ್ದ – ಎನ್ನುವುದರಲ್ಲಿ ನೆಗೆಟಿವ್ ಭಾವ ಹುಡುಕಬೇಕಿಲ್ಲ. “ಮನುಷ್ಯ ಏನೇನು ಮಾಡಿದರೂ ನೆಲಕ್ಕಂಟಿರುವ ಪ್ರಾಣಿ. ಅವನ ಆಕಾಶ ಸಾಹಸಗಳಿಗೆ ಮಿತಿಯಿದೆ” ಎನ್ನುವ ಅರ್ಥ ಮಾಡಿಕೊಳ್ಳಬಹುದು. ಇದೇನೂ ದುಃಖದ ಸಂಗತಿಯಲ್ಲ. ಮಣ್ಣಿನ ಮಕ್ಕಳು ಅಂತ ಹೆಮ್ಮೆಯಿಂದಲೇ ಹೇಳಿಕೊಳ್ಳುತ್ತೇವಲ್ಲ?

   ಉತ್ತರ
 11. ಮಾರ್ಚ್ 30 2015

  …ಸಾಧ್ಯತೆಗಳ ಪಾಯಿಂಟರ್ಗಳು :

  ‘ತಾನೆ ಮುಗ್ಧ’ನಾಗಿದ್ದು ಬಂದ product(ಪಡಿಮೂಡಿದಾಕೃತಿ)ಗೇ ಹೊರತೂ ತನ್ನದೇ agency(ಪ್ರತಿಭೆ)ಗಲ್ಲ: ಮತ್ತೊಮ್ಮೆ ಬಿಡಿಸಿ ಓದಿ ತಿಳಿಯಬಹುದು.

  ‘ಮತ್ಸ್ಯಕೂರ್ಮವರಾಹ’ ಗಳನ್ನು ವಾಲ್ಮೀಕಿ ಬರೆದದ್ದೇ? “ಮೆಟ್ಟಿಲುಗಳೇರುತ್ತ ಹುತ್ತಗಟ್ಟಿದ್ದ ಕೈ” ಎಂಬ ಪ್ರಯೋಗ “ಇಡೀ ರಾಮಾಯಣವೇ ಕೇವಲ ಓರ್ವ ವಾಲ್ಮೀಕಿ ಎಂಬ ಒಂದು ಪ್ರತಿಭೆಯ ರಚನೆಯಾಗಿರದೆ ಒಂದು ಇಡೀ ಜನಪದದಲ್ಲಿ ಮೂಡಿದ ಕೃತಿ(ಗುಚ್ಛ)” ಎನ್ನುವ ಮಾತಿನತ್ತ ಕೈತೋರಿಸುತ್ತಿರಬಹುದಲ್ಲವೇ?

  ಪುತ್ರಕಾಮೇಷ್ಟಿ-‘ಗೆರೆ’, ‘ತಾಗಿರೆ’, ‘ಕೆಳಪಟ್ಟು’, ‘ಮಣ್ಣಿನಣುಗಿ’ ‘ನೋನುತ್ತ’ … ಇತ್ಯಾದಿ ಪದ-ಪ್ರಯೋಗ-ವೈಚಿತ್ರ್ಯಗಳು ಸಾಧಿಸುತ್ತಿರುವುದೇನು?

  “ಕೋದಂಡದಂಡವೂ ಹೀಗೆ ದಂಡ” ಎನ್ನುವುದಕ್ಕೆ, “ಹಾಗೆ ಕತ್ತಲೆ ಅನಾದಿಯಾಗಿರುವುದರಿಂದಲೇ ‘ಕೋದಂದದಂಡ’ಕ್ಕೆ ದಂಡನೆಯ ಉಪಕರಣದ, ಮಟ್ಟಗೋಲಿನ ಸ್ಥಾನಮಾನ ಬಂದದ್ದು” ಅಂತಲೂ ಅರ್ಥೈಸಿರುವುದಿದೆ.

  ಉತ್ತರ
  • rohithmath
   ಮಾರ್ಚ್ 30 2015

   ‘ತಾನೆ ಮುಗ್ಧ’ನಾಗಿದ್ದು ಬಂದ product(ಪಡಿಮೂಡಿದಾಕೃತಿ)ಗೇ ಹೊರತೂ ತನ್ನದೇ agency(ಪ್ರತಿಭೆ)ಗಲ್ಲ: ಮತ್ತೊಮ್ಮೆ ಬಿಡಿಸಿ ಓದಿ ತಿಳಿಯಬಹುದು.
   ‘ಮತ್ಸ್ಯಕೂರ್ಮವರಾಹ’ ಗಳನ್ನು ವಾಲ್ಮೀಕಿ ಬರೆದದ್ದೇ? “ಮೆಟ್ಟಿಲುಗಳೇರುತ್ತ ಹುತ್ತಗಟ್ಟಿದ್ದ ಕೈ” ಎಂಬ ಪ್ರಯೋಗ “ಇಡೀ ರಾಮಾಯಣವೇ ಕೇವಲ ಓರ್ವ ವಾಲ್ಮೀಕಿ ಎಂಬ ಒಂದು ಪ್ರತಿಭೆಯ ರಚನೆಯಾಗಿರದೆ ಒಂದು ಇಡೀ ಜನಪದದಲ್ಲಿ ಮೂಡಿದ ಕೃತಿ(ಗುಚ್ಛ)” ಎನ್ನುವ ಮಾತಿನತ್ತ ಕೈತೋರಿಸುತ್ತಿರಬಹುದಲ್ಲವೇ?

   – ಈ ಎರಡಕ್ಕೂ ನನ್ನ ಸಹಮತ ಇದೆ.

   ಉತ್ತರ
 12. ಮಾರ್ಚ್ 30 2015

  ‘ಸ್ಫೋಟ’ ಎನ್ನುವುದು ಅಂತಃಸ್ಫೋಟ, ಮಹಾಸ್ಫೋಟ, ಅರ್ಥಸ್ಫೋಟ, getting into “the zone”.. ಏನೆಲ್ಲ ಆಗಬಹುದು! ಆದರೆ ಅದು ನಮ್ಮ ಕೈಲಿಲ್ಲದ ಸ್ವಾಯತ್ತ random iid ಎನ್ನುವುದನ್ನ ಮಾತ್ರ ಮರೆಯಕೂಡದು (ಅದು ನೆನಪಿದ್ದರೆ ಕಾದು ಕೂತದ್ದರಲ್ಲಿ ದೈನ್ಯತೆ ಕಾಣುವುದು ಕಡಿಮೆಯಾಗುತ್ತದೆ). ಹಾಗೆ ಯಾಧೃಚ್ಚಿಕವಾಗಿ ಸ್ಫೋಟ ಸಂಭವಿಸಿದ ಪ್ರತಿಯೊಂದು ಬಾರಿಯೂ ಸೃಷ್ಟಿಶೀಲತೆಯ ಒಂದು ‘ಚಕ್ರಾರಪಂಕ್ತಿ’ ಶುರುವಾಗುತ್ತದೆ; ಅದರ ಒಂದು ಸುತ್ತು ಮುಗಿಯುವುದರೊಂದಿಗೆ ಪುನಃ ಮುಂದಿನ ಸ್ಫೋಟಕ್ಕೆ ‘ನೋನುತ್ತ’, ಅರ್ಥಾತ್ ‘relegious ಆಗಿ ಆಚರಣೆಗಳನ್ನು ಮಾಡುತ್ತ’, ‘ವ್ಯಕ್ತಮಧ್ಯದಲ್ಲಿನ ವೈಚಿತ್ರ್ಯಗಳ ರುಚಿನೋಡುತ್ತ’ ಕಾದು ಕೂರೋಣವಾಗುತ್ತದೆ.

  ಉತ್ತರ
 13. ಮಾರ್ಚ್ 30 2015

  …ಸಾಧ್ಯತೆಗಳ ಪಾಯಿಂಟರ್ಗಳು :

  ‘ಸ್ಫೋಟ’ = opening-up of a “‘portal’ to the otherwise in-accessible elsewhere”

  ಉತ್ತರ
 14. ಮಾರ್ಚ್ 30 2015

  ನಾನೂ ಸಹ ಅಡಿಗರ ಅಭಿಮಾನಿ. ನಿಮ್ಮ ‘ರಾಮನವಮಿ’ ವಿವರಣೆಯನ್ನು ಓದಿ, ಪಾನಕ, ಕೋಸಂಬರಿ, ಪನಿವಾರದ ಸವಿ ಸವಿದಷ್ಟು ಸಂತುಷ್ಟಿಯಾಯಿತು.

  ಉತ್ತರ
  • rohithmath
   ಮಾರ್ಚ್ 30 2015

   ಧನ್ಯವಾದಗಳು. ರಾಮನವಮಿಯ ಶುಭಾಶಯಗಳು.

   ಉತ್ತರ

ನಿಮ್ಮ ಅನಿಸಿಕೆ...

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Note: HTML is allowed. Your email address will never be published.

Subscribe to comments