ಹಿಂದೂ ಸಂಸ್ಕೃತಿಯ ಕುರಿತು ವಿವೇಕಾನಂದರ ವಿಚಾರಗಳು
– ಪ್ರೊ.ರಾಜಾರಾಮ ಹೆಗಡೆ,
ಇತಿಹಾಸ ಮತ್ತು ಪ್ರಾಕ್ತನ ಶಾಸ್ತ್ರ ವಿಭಾಗ, ಕುವೆಂಪು ವಿಶ್ವವಿದ್ಯಾನಿಲಯ
೧.ವಿವೇಕಾನಂದರ ವಿಚಾರಗಳು: ಜಾತಿ ಪದ್ಧತಿ
೨.ವಿವೇಕಾನಂದರ ವಿಚಾರಗಳು: ಸಮಾಜ ಸುಧಾರಣೆ
೩.ವಿವೇಕಾನಂದರ ವಿಚಾರಗಳ ಐತಿಹಾಸಿಕ ಸಂದರ್ಭ
ವಿವೇಕಾನಂದರ ಗುರಿಯನ್ನು ಒಂದೇ ಸಾಲಿನಲ್ಲಿ ಹೇಳಬಹುದಾದರೆ ‘ಹಿಂದೂ ಸಂಸ್ಕೃತಿಯ ಉದಾತ್ತ ಧ್ಯೇಯಗಳ ಕುರಿತು ಜಾಗೃತಿ ಮೂಡಿಸುವುದು’ ಎನ್ನಬಹುದು. ಆದರೆ ಈ ಒಂದು ಸಾಲೇ ನಮಗಿಂದು ಅರ್ಥವಾಗದ ಸ್ಥಿತಿಗೆ ಬಂದಿದ್ದೇವೆ ಎಂಬುದೊಂದು ವಿಪರ್ಯಾಸ. ಅದಕ್ಕೆ ಕಾರಣ ಕಳೆದ ನೂರು ವರ್ಷಗಳಲ್ಲಿ ಭಾರತೀಯ ರಾಜಕೀಯದಲ್ಲಿ ನಡೆದಿರುವ ಬೆಳವಣಿಗೆಗಳು. ಹಿಂದೂ ಎಂಬ ಶಬ್ದವನ್ನು ಇಂದು ನಿರ್ವಿಕಾರವಾಗಿ, ವಸ್ತುನಿಷ್ಠವಾಗಿ ನೋಡುವುದೇ ನಮಗೆ ಸಾಧ್ಯವಿಲ್ಲದಂತಾಗಿದೆ. ಒಂದೆಡೆ ಹಿಂದುತ್ವದ ರಾಜಕೀಯದಿಂದಾಗಿ ಅದನ್ನು ಭಾವನಾತ್ಮಕವಾಗಿ ಕ್ರೈಸ್ತ, ಇಸ್ಲಾಂ ಎಂಬ ಪ್ರಭೇದಗಳಿಗೆ ಪ್ರತಿಯಾಗಿ ನಮ್ಮೊಂದು ಅಹಂ ಎಂಬಂತೇ ನೋಡುವುದನ್ನು ಕಲಿತಿದ್ದೇವೆ,ಅಥವಾ ಪ್ರಗತಿಪರ ಚಳವಳಿಗಳ ರಾಜಕೀಯದಿಂದಾಗಿ ಅದಕ್ಕೆ ಇಲ್ಲದ ಹಲ್ಲು ಉಗುರುಗಳನ್ನು ಆರೋಪಿಸಿ ಅದರ ಕುರಿತು ಸಂದೇಹ ಹಾಗೂ ಭಯಗಳ ಮೂಲಕ ಪ್ರತಿಕ್ರಿಯಿಸುವುದನ್ನು ಕಲಿತಿದ್ದೇವೆ. ಎರಡೂ ಪಕ್ಷಗಳೂ ಈ ಶಬ್ದಕ್ಕೆ ನಿರ್ದಿಷ್ಟ ರಾಜಕೀಯ ಅರ್ಥಗಳನ್ನು ರೂಢಿಸಿಬಿಟ್ಟಿವೆ. ವಿವೇಕಾನಂದರ ಕುರಿತು ನಮ್ಮ ತಲೆಮಾರಿನವರ ಪ್ರತಿಕ್ರಿಯೆಗಳು ಈ ಅರ್ಥಗಳಿಂದ ಪ್ರಭಾವಿತವಾಗಿವೆ ಎಂಬುದು ಸ್ಪಷ್ಟ.
ವಿವೇಕಾನಂದರ ಬರಹಗಳೆಲ್ಲ ಹೆಚ್ಚಿನದಾಗಿ ಇಂಗ್ಲೀಷಿನಲ್ಲೇ ಇವೆ ಹಾಗೂ ಅವುಗಳಲ್ಲಿ ಹಿಂದೂಯಿಸಂ, ಅಥವಾ ಹಿಂದೂ ರಿಲಿಜನ್, ಹಿಂದೂ ನೇಶನ್ ಎಂಬ ಪರಿಭಾಷೆಗಳನ್ನು ಬಳಸುತ್ತಾರೆ. ಈ ಶಬ್ದಗಳನ್ನು ನಾವು ಕ್ರಮವಾಗಿ ಹಿಂದುತ್ವ, ಹಿಂದೂ ಧರ್ಮ, ಹಿಂದೂ ರಾಷ್ಟ್ರ ಎಂದೆಲ್ಲ ಭಾಷಾಂತರಿಸಿಕೊಂಡಿದ್ದೇವೆ.ಆದರೆ ಹಿಂದೂಯಿಸಂ ಎಂದರೂ ಹಿಂದೂ ರಿಲಿಜನ್ ಎಂದೇ ಅರ್ಥ. ಅದು ಮೂಲತಃ ವೇದಾಂತ ಸಂಪ್ರದಾಯ ಎಂಬುದು ಅವರ ವಾದ. ಹಿಂದೂಯಿಸಂ ಕ್ರೈಸ್ತ, ಇಸ್ಲಾಂ ರಿಲಿಜನ್ನುಗಳಂತಿಲ್ಲ ಎಂಬುದನ್ನು ಅವರು ಸ್ಪಷ್ಟವಾಗಿ ಗುರುತಿಸಿದ್ದರು. ಏಕೆಂದರೆ ಹಿಂದೂ ಎಂಬುದೊಂದು ಪ್ರದೇಶವೇ ಹೊರತೂ ರಿಲಿಜನ್ನಲ್ಲ ಎನ್ನುತ್ತಾರೆ. ಈ ಪ್ರದೇಶದಲ್ಲಿರುವ ಕ್ರೈಸ್ತ, ಮುಸ್ಲಿಮರೆಲ್ಲ ಹಿಂದೂ ಶಬ್ದದಲ್ಲಿ ಸೇರಿಕೊಳ್ಳುತ್ತಾರೆಯಾದರೂ ರಿಲಿಜನ್ನು ಎಂಬರ್ಥದಲ್ಲಿ ಕ್ರೈಸ್ತ ಮುಸ್ಲಿಮರನ್ನು ಹಿಂದೂಗಳೆಂದು ಕರೆಯುವಂತಿಲ್ಲ. ಆದರೆ ಹಿಂದೂಗಳೆನಿಸಿಕೊಂಡವರ ರಿಲಿಜನ್ನಿಗೆ ಒಂದು ಹೆಸರಿಲ್ಲ, ಅದು ಅನೇಕ ರಿಲಿಜನ್ನುಗಳ, ದರ್ಶನಗಳ, ಪರಂಪರೆ ಹಾಗೂ ಆಚರಣೆಗಳ ಸಂಗಮ ಎನ್ನುತ್ತಾರೆ. ಈ ಎಲ್ಲಾ ವೈವಿಧ್ಯಪೂರ್ಣ ಪರಂಪರೆಗಳಿಗೂ ಸಾಮಾನ್ಯವಾದ ಬುನಾದಿಯೆಂದರೆ ವೇದಾಂತ. ವೇದಾಂತವು ಕೆಲವು ಜೀವನಾದರ್ಶಗಳನ್ನು, ಧ್ಯೇಯಗಳನ್ನು ಪ್ರತಿಪಾದಿಸುತ್ತದೆ. ಹಿಂದೂಗಳೆನಿಸಿಕೊಂಡವರು ಅವುಗಳ ಸಾಧನೆಯನ್ನು ಮಾಡಬೇಕು.
ಜಗತ್ತಿನ ಉಳಿದೆಲ್ಲ ರಿಲಿಜನ್ನುಗಳಿಗೆ ಹೋಲಿಸಿದರೆ ಹಿಂದೂಯಿಸಂ ಹೆಚ್ಚು ಉನ್ನತಮಟ್ಟದ್ದು ಎಂಬುದಾಗಿ ವಿವೇಕಾನಂದರು ವಾದಿಸುತ್ತಾರೆ. ಅದಕ್ಕೆ ಈ ಮುಂದಿನ ಕಾರಣಗಳಿವೆ:
1. ಕ್ರೈಸ್ತ ಇಸ್ಲಾಂ ಥರದ ರಿಲಿಜನ್ನುಗಳು ತಾವೊಂದೇ ಸತ್ಯ, ಉಳಿದವು ಸುಳ್ಳು ಎಂಬುದಾಗಿ ತಿರಸ್ಕರಿಸುವುದರಿಂದ ಉಳಿದವರನ್ನು ಒಳಗೊಳ್ಳುವ ವೈಶಾಲ್ಯತೆ ಅವುಗಳಿಗಿಲ್ಲ. ಆದರೆ ಹಿಂದೂಯಿಸಂ ಮಾತ್ರವೇ ಜಗತ್ತಿನ ಎಲ್ಲಾ ರಿಲಿಜನ್ನುಗಳೂ ಸತ್ಯಕ್ಕೆ ಇರುವ ವಿಭಿನ್ನ ಮಾರ್ಗಗಳು ಎಂಬುದಾಗಿ ಸಾರುತ್ತದೆ. ಹಾಗಾಗಿ ಎಲ್ಲ ರಿಲಿಜನ್ನುಗಳನ್ನೂ ಒಪ್ಪಿಕೊಂಡು ತನ್ನೊಳಗೆ ಒಳಗೊಳ್ಳುವ ಶಕ್ತಿ ಅದಕ್ಕೊಂದೇ ಇದೆ.
2. ಹಿಂದೂಯಿಸಂ ಪ್ರಕಾರ ಪರಮಾತ್ಮನು ಒಂದು ಉದ್ದೇಶ, ಕಾರಣಗಳಿಂದ ಕೂಡಿದ ವ್ಯಕ್ತಿಯಲ್ಲ, ಅವನ ಸತ್ಯ ಸ್ವರೂಪವು ನಿರ್ಗುಣ. ಈ ಕಲ್ಪನೆಯು ಅತ್ಯಂತ ವೈಜ್ಞಾನಿಕವಾದದ್ದು. ಏಕೆಂದರೆ, ವೈವಿಧ್ಯತೆಗಳನ್ನೆಲ್ಲ ಆವರಿಸಿಕೊಂಡ ಸಾಮಾನ್ಯ ತತ್ವವನ್ನು ಕಂಡುಹಿಡಿಯುವುದೇ ನಿಸರ್ಗ ವಿಜ್ಞಾನದ ಗುರಿಯಾಗಿದೆ, ಹಾಗೇ ಪ್ರಪಂಚದ ರಿಲಿಜನ್ನುಗಳಲ್ಲಿರುವ ವೈವಿಧ್ಯತೆಗಳನ್ನೆಲ್ಲ ಈ ನಿರ್ಗುಣ ತತ್ವವು ಆವರಿಸಿಕೊಂಡಿದೆ ಎಂದು ವೇದಾಂತವು ಮಾತ್ರವೇ ವೈಜ್ಞಾನಿಕವಾಗಿ ತೋರಿಸಿದೆ. ಈ ಕಾರಣಗಳಿಂದಾಗಿ ಹಿಂದೂ ಧರ್ಮವು ಎಲ್ಲರ ವೈವಿಧ್ಯತೆಗಳನ್ನೂ ಒಳಗೊಳ್ಳುವ ಸಾಮರ್ಥ್ಯವನ್ನು ಪಡೆಯಿತು. ಈ ಕಾಣ್ಕೆಯೇ ಪ್ರಪಂಚದ ನಾಗರೀಕತೆಗೆ ಭಾರತದ ಕೊಡುಗೆ. ಹಾಗಾಗಿ ಅನ್ಯ ರಿಲಿಜನ್ನುಗಳ ಕುರಿತ ವೈರತ್ವವು ಸೆಮೆಟಿಕ್ ರಿಲಿಜನ್ನುಗಳ ಅಜ್ಞಾನ ಹಾಗೂ ಸಂಕುಚಿತತೆಯಲ್ಲದೇ ಮತ್ತೇನಲ್ಲ ಎಂದು ಅವರು ಪರಿಗಣಿಸಿದ್ದರು.
ವಿವೇಕಾನಂದರ ಹಿಂದೂ ನೇಶನ್ ಎಂಬ ಕಲ್ಪನೆಗೆ ಅದರದೇ ಆದ ವೈಶಿಷ್ಟ್ಯತೆಯಿದೆ. ವಿವೇಕಾನಂದರು ಜನ, ಜಾತಿ ಎಂಬ ಅರ್ಥದಲ್ಲೇ ನೇಶನ್ ಶಬ್ದವನ್ನು ಬಳಸುತ್ತಾರೆ. ಅದು ನಾವೆಲ್ಲ ಒಂದು ಎಂಬ ಭಾವನೆಗೆ ಅಥವಾ ನಮ್ಮ ಪರಂಪರೆಯ ಕುರಿತ ಜಾಗೃತಿಗೆ ಸಂಬಂಧಪಟ್ಟಿದೆ. ರಾಷ್ಟ್ರ ಎಂದಲ್ಲ. ರಾಷ್ಟ್ರೀಯತೆಯ ಕಲ್ಪನೆಗೆ ರಾಜಕೀಯ ಪ್ರಭುತ್ವ ಎಂಬುದು ಬೆನ್ನೆಲುಬಾಗಿದೆ. ವಿವೇಕಾನಂದರು ಹಿಂದೂ ರಾಜಕೀಯ ಪ್ರಭುತ್ವದ ಕುರಿತು ಮಾತನಾಡುವುದಿಲ್ಲ. ಭಾರತೀಯ ರಾಷ್ಟ್ರೀಯ ಹೋರಾಟವು ಅವರ ಕಾಲದಲ್ಲಿ ಈ ಮಜಲನ್ನು ಮುಟ್ಟಿಯೇ ಇರಲಿಲ್ಲ. ಬದಲಾಗಿ ಇಂದು ವೈವಿಧ್ಯಪೂರ್ಣ ಸಮುದಾಯಗಳಾಗಿ ಒಡೆದುಕೊಂಡಿರುವ ಹಿಂದೂಗಳೆಲ್ಲರೂ ವೇದಾಂತದ ಆದರ್ಶಗಳ ಕುರಿತು ಜಾಗೃತರಾಗಿ ತಮ್ಮ ಏಕತೆಯನ್ನು ಕಂಡುಕೊಳ್ಳಬೇಕೆಂಬುದು ಅವರ ಆಶಯವಾಗಿತ್ತು. ಅವರ ‘ಏಳಿ, ಎದ್ದೇಳಿ’ ಎನ್ನುವ ಮಾತುಗಳಾಗಲೀ, ‘ಧೈರ್ಯವಂತರಾಗಿ’ ಎಂಬ ಕರೆಗಳಾಗಲೀ ಈ ಆತ್ಮಜಾಗೃತಿಗೆ ಸಂಬಂಧಿಸಿವೆಯೇ ವಿನಃ ಯಾವುದೇ ಶತ್ರುಗಳ ವಿರುದ್ಧ ಯುದ್ಧಕ್ಕಾಗಿ ಅಲ್ಲ ಅಥವಾ ರಿಲಿಜನ್ನುಗಳ ವಿರುದ್ಧವಲ್ಲ. ಅವರು ಅನ್ಯ ರಿಲಿಜನ್ನುಗಳಿಂದ ಹಿಂದೂ ಸಂಸ್ಕೃತಿಗೆ ಅಪಾಯವಾಗಿದೆ ಎನ್ನುವುದಕ್ಕಿಂತ ನಮ್ಮ ಅಜ್ಞಾನದಿಂದಲೇ ಹಿಂದೂ ಸಂಸ್ಕೃತಿ ಅವನತಿ ಹೊಂದಿದೆ ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸುತ್ತಾರೆ.
ವಿವೇಕಾನಂದರು ತಮ್ಮ ಕಾಲದ ವಿದ್ಯಾವಂತ ಹಿಂದೂಗಳಲ್ಲಿ ತಮ್ಮ ಪರಂಪರೆಯ ಕುರಿತು ಕೀಳರಿಮೆ, ಅವಿಶ್ವಾಸಗಳನ್ನೂ, ಅವಿದ್ಯಾವಂತರಲ್ಲಿ ವೇದಾಂತದ ಕುರಿತ ಅಜ್ಞಾನವನ್ನೂ ಗಮನಿಸಿದರು. ಭಾರತೀಯರಲ್ಲಿ ಈ ಕಾರಣದಿಂದಾಗಿ ಆತ್ಮವಿಶ್ವಾಸ ನಾಶವಾಗಿ ಅಭಿಮಾನ ಶೂನ್ಯತೆ ಮನೆಮಾಡಿದೆ ಹಾಗೂ ಪಾಶ್ಚಾತ್ಯ ಸಂಸ್ಕೃತಿಯೇ ಶ್ರೇಷ್ಟ ಎಂಬುದನ್ನು ಇವರು ಒಪ್ಪಿಕೊಂಡು ಮಾನಸಿಕ ದಾಸ್ಯಕ್ಕೆ ಒಳಗಾಗಿದ್ದಾರೆ. ಅದು ನಮ್ಮನ್ನು ಭೌತಿಕ ದಾಸ್ಯಕ್ಕೆ ನೂಕಿದೆ. ಆದರೆ ಪಾಶ್ಚಾತ್ಯ ಸಂಸ್ಕೃತಿಗಿಂತಲೂ ಉದಾತ್ತವಾದ, ಮಹತ್ತರವಾದ ವಿಚಾರಗಳನ್ನು, ಮಾರ್ಗಗಳನ್ನು ನಮ್ಮವರು ಹಾಕಿಕೊಟ್ಟಿದ್ದಾರೆ ಎಂಬುದನ್ನೂ ಇವರು ಮರೆತಿದ್ದಾರೆ. ಈ ಸಮಸ್ಯೆಯನ್ನು ಪರಿಹರಿಸುವ ನಿಟ್ಟಿನಲ್ಲಿ ಅವರು ಹಿಂದೂ ನೇಶನ್ ಎಂಬ ಅರಿವನ್ನು ಹುಟ್ಟಿಸಲು ಪ್ರಯತ್ನಿಸಿದರು. ಅವರ ಸುಧಾರಣೆಯ ಕಲ್ಪನೆಗಳೂ ಈ ನೆಲೆಯಿಂದಲೇ ಹುಟ್ಟುತ್ತವೆ.
ಇಂದು ಹಿಂದೂ ಪರಂಪರೆಯ ಶ್ರೇಷ್ಟತೆಯ ಕುರಿತು ಮಾತನಾಡಬೇಕಾದರೆ ಇಂದಿನ ಆಧುನಿಕ ತಾಂತ್ರಿಕ ಆವಿಷ್ಕಾರಗಳೆಲ್ಲವೂ ವೇದ ಕಾಲದಲ್ಲೇ ಆಗಿದ್ದವು ಎಂಬುದನ್ನು ನಿದರ್ಶಿಸಬೇಕು ಎಂಬ ಹುಚ್ಚು ಇದೆ. ಬಹುಶಃ ವಿವೇಕಾನಂದರು ಇಂಥ ಪ್ರಯತ್ನಗಳನ್ನು ನೋಡಿ ನಕ್ಕುಬಿಡುತ್ತಿದ್ದರೇನೋ? ಪಾಶ್ಚಾತ್ಯರ ಆಳ್ವಿಕೆಗೆ ಒಳಪಟ್ಟ ಭಾರತೀಯರು ಪಾಶ್ಚಾತ್ಯರ ವಿಜ್ಞಾನ ಹಾಗೂ ತಂತ್ರಜ್ಞಾನಗಳೇ ನಾಗರೀಕತೆಯ ಹೆಚ್ಚುಗಾರಿಕೆ ಎಂಬುದಾಗಿ ಭಾವಿಸಿದರು. ಅದು ತಮ್ಮ ಸಂಸ್ಕೃತಿಯ ದೋಷ ಎಂಬುದಾಗಿ ಭಾವಿಸಿ ಕೀಳರಿಮೆಯನ್ನು ಹೊಂದಿದರು. ವಿವೇಕಾನಂದರು ಏನು ಹೇಳುತ್ತಾರೆಂದರೆ ‘ಭೌತಿಕ ಸಾಧನಗಳೇ ಪರಮ ಉದ್ದೇಶಗಳು ಎಂದು ಕಟ್ಟಿಕೊಂಡ ನಾಗರೀಕತೆಗಳು ಮರಳಿನ ಮೇಲೆ ಕಟ್ಟಿದ ಮನೆಗಳಂತೆ ತಾತ್ಕಾಲಿಕ’.
ವಿವೇಕಾನಂದರು ಕೂಡ ವೇದಾಂತ ವಿಚಾರದ ವೈಜ್ಞಾನಿಕತೆಯನ್ನು ಕುರಿತು ಮಾತನಾಡುತ್ತಾರೆ. ಆದರೆ ಪಾಶ್ಚಾತ್ಯ ತಂತ್ರಸಾಧನಗಳು ಅವರಿಗೆ ಹೆಚ್ಚುಗಾರಿಕೆಯಾಗಿ ಕಂಡಿರಲಿಲ್ಲ. ನಮ್ಮ ಸಂಸ್ಕೃತಿಯ ಸಾಧನೆ ಇದಕ್ಕೂ ಹೆಚ್ಚಿನದು ಎಂಬುದನ್ನು ಕಂಡುಕೊಳ್ಳಬೇಕು. ಹಿಂದೂಗಳು ಮಾನವ ಶ್ರೇಯಸ್ಸಿನ ಹಾಗೂ ಸುಖದ ಕುರಿತು ಕಂಡುಕೊಂಡ ವಿಚಾರಗಳೇ ಹೆಚ್ಚು ವಾಸ್ತವಿಕ ಹಾಗೂ ಸೂಕ್ತವಾದವುಗಳು ಎಂಬುದು ವಿವೇಕಾನಂದರ ವಾದ. ಹಾಗಾಗಿ ವಿವೇಕಾನಂದರು ಹಿಂದೂಸಂಸ್ಕೃತಿಯ ಯಾವ ಉದಾತ್ತ ವಿಚಾರಗಳನ್ನು ನಾವೆಲ್ಲ ಕಂಡುಕೊಳ್ಳಬೇಕೆಂದು ಬಯಸಿದ್ದರೋ ಅದು ಈ ಆಧುನಿಕ ತಂತ್ರಜ್ಞಾನಗಳಂತೂ ಅಲ್ಲ. ಅದೆಲ್ಲಕ್ಕಿಂತ ಹಿಂದೂ ಸಂಸ್ಕೃತಿಯ ಕುರಿತು ಕೇವಲ ಒಣ ಅಭಿಮಾನವನ್ನು ಬೆಳೆಸಿಕೊಳ್ಳುವ ಕುರಿತಾಗಲೀ, ಕೇವಲ ರಾಜಕೀಯ ಅಧಿಕಾರವನ್ನು ಸ್ಥಾಪಿಸುವುದರ ಕುರಿತಾಗಲೀ ಅವರು ಯಾವುದೇ ಆಸಕ್ತಿಯನ್ನೂ ಹೊಂದಿರಲಿಲ್ಲ.
…ಮುಕ್ತಾಯ