ಆಚಾರವಿಲ್ಲದ ನಾಲಿಗೆ…
– ಎಸ್.ಎನ್.ಭಾಸ್ಕರ್,ಬಂಗಾರಪೇಟೆ
“ಆಚಾರವಿಲ್ಲದ ನಾಲಿಗೆ ನಿನ್ನ ನೀಚ ಬುದ್ದಿಯ ಬಿಡು ನಾಲಿಗೆ” – ಪುರಂದರದಾಸರ ಈ ಪದ ನೆನಪಾಗುತ್ತಿದೆ. ಇತ್ತೀಚೆಗಷ್ಟೇ ಭಗವದ್ಗೀತೆಯನ್ನು ಸುಡುತ್ತೇನೆ ಎಂದು ಹೇಳಿ ಸುದ್ದಿ ಮಾಡಿದ್ದ ದೇವನಾಮಾಂಕಿತ ಬುದ್ದಿಜೀವಿಯೊಂದು ಮತ್ತೊಮ್ಮೆ ತನ್ನ ಎಲುಬಿಲ್ಲದ ನಾಲಿಗೆಯನ್ನು ಹರಿಬಿಟ್ಟು ಸುದ್ದಿ ಮಾಡಿದೆ. ನಿಜಕ್ಕೂ ಖೇದವೆನಿಸುತ್ತದೆ. ಒಂದಿಡೀ ಜನಾಂಗದ ಆರಾಧ್ಯ ದೈವವಾಗಿರುವ, ಮರ್ಯಾದ ಪುರುಷೋತ್ತಮ, ಆದರ್ಶ ಪುರುಷನಾಗಿ ದೈವಸ್ಥಾನದಲ್ಲಿ ಪ್ರತಿಷ್ಟಾಪಿಸಿ ಪೂಜಿಸಲಾಗುತ್ತಿರುವ ಶ್ರೀ ರಾಮನನ್ನು ಕುರಿತು ಈ ರೀತಿ ಅನಗತ್ಯವಾದ ಹೇಳಿಕೆಗಳನ್ನು ನೀಡುವುದರಿಂದ ಅವರಿಗೆ ಆಗುವ ಲಾಭವಾದರೂ ಏನೋ? ಆಗಸದೆಡೆ ಮುಖಮಾಡಿ ಉಗುಳಿದರೆ ನಷ್ಟ ಯಾರಿಗೆ?
ಅಲ್ಲಾ ಸ್ವಾಮಿ… ಈ ರೀತಿ ಜನರ ಧಾರ್ಮಿಕ ಭಾವನೆಗಳಿಗೆ ನೋವುಂಟು ಮಾಡುವಂತಹ ಹೇಳಿಕೆಗಳನ್ನು ನೀಡುವುದರ ಮೂಲಕ ಸ್ವಸ್ಥ ಸಮಾಜದಲ್ಲಿ ವಿಷ ಬೀಜ ಬಿತ್ತುತ್ತಿದ್ದೇನೆ ಎಂಬ ಅರಿವಾದರೂ ನಿಮಗುಂಟೆ ? ಅಥವಾ ಸೋ ಕಾಲ್ಡ್ ’ಸೆ(ಸಿ)ಕ್ಯುಲರ್” ಸಿದ್ದಾಂದತದೆಡೆಗೆ ತಮ್ಮ ಅತೀವ ಬದ್ದತೆಯನ್ನು ಈ ರೀತಿ ಸಮಾಜಕ್ಕೆ ತೋರ್ಪಡಿಸುತ್ತಿರುವಿರೇ? ವೇದಿಕೆಗಳ ಮೇಲೆ ನಿಂತು ಈ ರೀತಿ ಭಾಷಣ ಮಾಡಿ ಸುತ್ತ ನೆರೆದಿರುವ ಭಟ್ಟಂಗಿಗಳ ಚಪ್ಪಾಳಿ ಗಿಟ್ಟಿಸುತ್ತಾ ಸುದ್ದಿಯಾಗುವುದು ಯಾರನ್ನು ಓಲೈಸಲು? ಈ ರೀತಿ ಹೇಳಿಕೆ ನೀಡಿದವರ ವಿರುದ್ದ ಸರ್ಕಾರವೂ ಮೌನವಾಗಿರುವುದು ನಿಜಕ್ಕೂ ಸೋಜಿಗವೇ ಸರಿ. ಕ್ರಮ ಕೈಗೊಳ್ಳಲು ಯಾರಾದರೂ ದೂರು ನೀಡುವವರೆಗೆ ಕಾಯಬೇಕೆಂಬ ನಿಯಮವೇನೂ ಇಲ್ಲವಲ್ಲ. ಬಹು ಸಂಖ್ಯಾತ ಜನ ಸಮೂಹದ ಧಾರ್ಮಿಕ ಭಾವನೆಗಳಿಗೆ ನೋವುಂಟು ಮಾಡಿರುವ ಬಗ್ಗೆ ಸ್ವಯಂ ದೂರು ದಾಖಲಿಸಿ ಕ್ರಮ ಕೈಗೊಳ್ಳುವ ಕಾರ್ಯ ಏಕೆ ಸರ್ಕಾರದಿಂದ ಆಗುತ್ತಿಲ್ಲ. ಪ್ರಮೋದ್ ಮುತಾಲಿಕ್ ರವರ ಭಾಷಣಕ್ಕೆ ನಿಷೇಧ ಹೇರುವ ಸರ್ಕಾರ ಇವರಿಗೂ ಏಕೆ ನಿಷೇಧ ಹೇರಬಾರದು? ಜನರ ಧಾರ್ಮಿಕ ನಂಬಿಕೆಗಳಿಗೆ ಚ್ಯುತಿ ಬರದ ಹಾಗೆ ನೋಡಿಕೊಳ್ಳುವುದು ಸರ್ಕಾರದ ಹಾಗೂ ಕಾನೂನಿನ ವ್ಯಾಪ್ತಿಗೆ ಬರುತ್ತದೆ ಅಲ್ಲವೇ..? ಮತ್ತೇಕೆ ಈ ಮೌನ. ಯಾರ ಓಲೈಕೆಗಾಗಿ..?
ತನ್ನ ಶ್ರೀ ರಾಮಾಯಣ ಮಹಾಕಾವ್ಯದಲ್ಲಿ ವಾಲ್ಮೀಕಿ ಮಹರ್ಷಿ ಧರ್ಮಕ್ಕೆ ಹೆಚ್ಚಿನ ಮನ್ನಣೆಯನ್ನು ನೀಡಿದ್ದಾನೆ. ಇಲ್ಲಿ ’ಧರ್ಮ’ ವನ್ನು ’ಮತ’ ಎಂಬ ಸಂಕುಚಿತ ಅರ್ಥದಿಂದ ಪರಿಗಣಿಸಬಾರದು. ರಾಜನ ಧರ್ಮ, ಕ್ಷತ್ರಿಯನ ಧರ್ಮ, ತಂದೆಯ ಧರ್ಮ, ಪುತ್ರನ ಧರ್ಮ, ಪತ್ನಿಯ ಧರ್ಮ ಈ ರೀತಿ ಧರ್ಮ-ಅಧರ್ಮಗಳ ಪರಮಾರ್ಥವನ್ನು ವರ್ಣಿಸಲಾಗಿದೆ. ಧರ್ಮಪಾಲನೆಯನ್ನು ಎತ್ತಿಹಿಡಿಯಲಾಗಿದೆ. ಇನ್ನು ಈ ಬುದ್ದಿಜೀವಿಗಳು ಮಾಡಿರುವ ಆರೋಪಗಳ ಬಗ್ಗೆ ನೋಡೋಣ. ವಾಲ್ಮೀಕಿ ರಾಮಾಯಣದಲ್ಲಿ ಶ್ರೀ ರಾಮ ತನ್ನ ತಂದೆಗೆ ನೀಡಿದ ಭಾಷೆಯನ್ನು ಅನುಸರಿಸಿ ೧೪ ವರ್ಷಗಳ ಕಾಲ ವನವಾಸಕ್ಕಾಗಿ ಅರಣ್ಯಕ್ಕೆ ತೆರಳುತ್ತಾನೆ. ಅರಣ್ಯಕ್ಕೆ ಪ್ರವೇಶಿಸುವ ಸಂದರ್ಭದ ವರ್ಣನೆ ಇರುವುದು ರಾಮಾಯಣದ ಅಯೋಧ್ಯ ಕಾಂಡದಲ್ಲಿ. ಅಯೋಧ್ಯ ಕಾಂಡದ ೫೨ ನೇ ಅಧ್ಯಾಯದಲ್ಲಿ ಶ್ರೀ ರಾಮನ ಆದೇಶದ ಮೇರೆಗೆ ನಿಷಧ ದೊರೆ ಗುಹ ದೋಣಿಯನ್ನು ತಯಾರು ಮಾಡಿಕೊಡುತ್ತಾನೆ. ರಥ ಸಾರಥಿ ಸುಮಾಂತ್ರನನ್ನು ಬೀಳ್ಕೊಟ್ಟ ನಂತರ ರಾಮ, ಸೀತೆ ಹಾಗೂ ಲಕ್ಷ್ಮಣ ದೋಣಿಯ ಮೂಲಕ ಗಂಗಾ ನದಿಯನ್ನು ದಾಟಿ ಆಚೆಯ ದಡ ಸೇರುತ್ತಾರೆ. ಅಲ್ಲಿಂದ ಹೊರಟ ನಂತರ ಭೇಟೆಯ ಪ್ರಸಂಗ ಬರುತ್ತದೆ. ವರಹ, ರಿಶ್ಯ, ಪ್ರಿಸಾತ ಮತ್ತು ಮಹಾರುರು ಎಂಬ ನಾಲ್ಕು ಜಿಂಕೆಗಳನ್ನು ಭೇಟಿ ಮಾಡಿ ಭುಂಜಿಸಿ ಮರದ ಬುಡದಲ್ಲಿ ಎಲ್ಲರೂ ವಿರಮಿಸುತ್ತಾರೆ. ಇದು ಅಯೋಧ್ಯ ಕಾಂಡದ ೫೨ ನೇ ಅಧ್ಯಾಯದ ಕೊನೆಯ ಅಂದರೆ ೧೦೨ ನೇ ಶ್ಲೋಕ.ಮತ್ತೊಂದು, ರಾಮಾಯಣದ ಸುಂದರ ಕಾಂಡದ ಪ್ರಸಂಗ. ಸುಂದರ ಕಾಂಡದ ೩೬ ನೇ ಅಧ್ಯಾಯದ ೪೧ ನೇ ಶ್ಲೋಕ. ರಾಮ ನೀಡಿದ ಉಂಗುರವನ್ನು ಲಂಕೆಯಲ್ಲಿದ್ದ ಸೀತೆಗೆ ಕೊಡಲು ಹನುಮಂತ ಬಂದಾಗ ಹನುಮಂತ ಸೀತೆಯನ್ನು ಕುರಿತು ಈ ರೀತಿ ಹೇಳುತ್ತಾನೆ. “ಸೀತಾ ಮಾತೆ, ನಿನ್ನನ್ನು ತೊರೆದಾಗಿನಿಂದ ಶ್ರೀ ರಾಮ ಅನ್ಯ ಮನಸ್ಕರಾಗಿದ್ದಾರೆ, ಮಾಂಸಾಹಾರ ತಿನ್ನುತ್ತಿಲ್ಲ, ಮಧುಸೇವನೆ ಮಾಡುತ್ತಿಲ್ಲ, ನಿಮ್ಮದೇ ನೆನಪಿನಿಂದ ಚಿಂತಿತರಾಗಿದ್ದಾರೆ”.
ವಾಲ್ಮೀಕಿ ರಾಮಾಯಣವು ಒಟ್ಟು ೬ ವಿವಿಧ ಕಾಂಡಗಳಲ್ಲಿ ವರ್ಣಿತವಾಗಿದೆ, ಒಟ್ಟು ೨೪,೦೦೦ ಶ್ಲೋಕಗಳಿವೆ, ೫೩೪ ಅಧ್ಯಾಯಗಳಿವೆ. ಇಂತಹ ಬೃಹತ್ ಮಹಾಕಾವ್ಯವನ್ನು ಕುರಿತು ಕೇವಲ ಮೇಲಿನ ಎರಡು ಶ್ಲೋಕಗಳ ಆಧಾರದ ಮೇರೆಗೆ ಶ್ರೀರಾಮ ಮದ್ಯ ವ್ಯಸನಿಯಾಗಿದ್ದ ವೇಶ್ಯೆಯರ ಸಹವಾಸದಲ್ಲಿದ್ದ ಎಂದೆಲ್ಲಾ ಅನರ್ಥವಾದ, ಅಸಹಜವಾದ, ಅಸತ್ಯವಾದ ಹೇಳಿಕೆಯನ್ನು ನೀಡುವುದು ಕುಚೋದ್ಯವಲ್ಲದೇ ಮತ್ತೇನೂ ಅಲ್ಲ. ಶ್ರೀ ರಾಮ ಮೂಲತಃ ಕ್ಷತ್ರಿಯ ವರ್ಣಕ್ಕೆ ಸೇರಿರುವುದರಿಂದ ವನವಾಸದ ಸಮಯದಲ್ಲಿ ಈ ಪ್ರಸ್ಥಾವನೆಯನ್ನು ತರಲಾಗಿದೆಯಷ್ಟೆ. ಇದು ಇದುವರೆಗೂ ಗೊತ್ತಿರದ ಸಂಗತಿಯೇನೂ ಅಲ್ಲ. ಇದರಿಂದ ಶ್ರೀ ರಾಮಚಂದ್ರನ ಬಗ್ಗೆ ಹಿಂದೂಗಳಿಗೆ ಇರುವ ನಂಬಿಗೆಕಾಗಲೀ, ಭಕ್ತಿಗಾಗಲೀ, ಪೂಜ್ಯಭಾವನೆಗಾಗಲೀ ಯಾವುದೇ ತೊಡಕು ಉಂಟಾಗುವುದೆಂದೂ ಸಹಾ ನನಗೆ ಅನ್ನಿಸುವುದಿಲ್ಲ. ಇನ್ನು ಸುಂದರಕಾಂಡದ ಬಗ್ಗೆ ಹೇಳುವುದಾದರೆ ಹನುಮಂತ ಶ್ರೀ ರಾಮನ ಸ್ಥಿತಿಯನ್ನು ಕುರಿತು ಸೀತಾದೇವಿಯ ಬಳಿ ಹೇಳುವಾಗ ’ನ ಸೇವತೆ ಮಧುಚಾಪಿ’ ಎಂದು ಹೇಳುತ್ತಾನೆ. ಮಧುಚಾಪಿ ಅಂದರೆ ಜೇನಿನ ರಸ ಮತ್ತು ನೀರಿನಿಂದ ತಯಾರಿಸಲಾದ ಒಂದು ಬಗೆಯ ಪಾನೀಯ ಎಂಬುದಾಗಿ ಅರ್ಥ ಬರುತ್ತದೆ. ಇದನ್ನು ತಿರುಚಿ ಅನಗತ್ಯವಾಗಿ ವೈಭವೀಕರಿಸಿ ಹಿಂದೂ ಜನರ ಭಾವನೆಗಳಿಗೆ ಚ್ಯುತಿ ತರುವಂತ ಹೇಳಿಕೆಯನ್ನು ನಮ್ಮ ವಿಚಾರವಾದಿಗಳು ನೀಡಿದ್ದಾರೆ.
ಇಷ್ಟಕ್ಕೂ ಒಂದು ಜನಾಂಗದ ನಂಬಿಕೆಗಳ ಬಗ್ಗೆ ಮಾತನಾಡುವಾಗ ತರ್ಕದ ಔಚಿತ್ಯವಿರುವುದಿಲ್ಲ. ನಂಬಿಕೆಗಳಿಗೆ, ಭಾವನೆಗಳಿಗೆ ಬೆಲೆ ಕೊಡುವುದು ಮಾನವೀಯತೆ ಎನಿಸುತ್ತದೆ. ಅಸಲಿಗೆ ತಮ್ಮನ್ನು ನಂಬಿ ಎಂದೂ ಯಾರೂ ಇಲ್ಲಿ ಅವಲತ್ತುಕೊಳ್ಳುತ್ತಿಲ್ಲವಲ್ಲ. ಮತ್ತೇಕೆ ಪದೇ ಪದೇ ವ್ಯರ್ಥ ಹೇಳಿಕೆಗಳನ್ನು ನೀಡುವ ಉಸಾಬರಿ. ವಾಸ್ತವದಲ್ಲಿ ದೇವರೇ ಇಲ್ಲ ಎನ್ನುವ ನೀವು ನಿಮ್ಮ ಸಂಶೋಧನೆ (?) ಯನ್ನು ಮುಸ್ಲಿಂ ಅಥವಾ ಕ್ರೈಸ್ತ ಮತದ ಬಗ್ಗೆಯೂ ವಿಸ್ತರಿಸಿ ಅವರಿಗೂ ನಿಮ್ಮ ವಿಚಾರಗಳ ಜ್ಞಾನಬೋಧೆ ಮಾಡಬಾರದೇಕೇ ? ಇಲ್ಲಿ ಎಲ್ಲವೂ ಸಲ್ಲುತ್ತದೆ ಎಂಬ ಅನಿಸಿಕೆಯೇ ? ಮಾತೆತ್ತಿದರೆ ವರ್ಣ ವ್ಯವಸ್ಥೆ, ವರ್ಣ ವ್ಯವಸ್ಥೆ ಎಂದು ಅರಚಿಕೊಳ್ಳುವ ಬದಲಿಗೆ ಅದರ ಬಗ್ಗೆ ಕೂಲಂಕುಷ ಚಿಂತನೆಯನ್ನು ನಡೆಸಬೇಕಿದೆಯಲ್ಲವೇ ? ವರ್ಣ ವ್ಯವಸ್ಥೆ ಎಂಬುದು ಜಾತಿ ಪದ್ದತಿ ಅಲ್ಲವೇ ಅಲ್ಲ. ವರ್ಣ ವ್ಯವಸ್ಥೆಯು ಕಸುಬಿನ ಆಧಾರವಾಗಿ ರಚಿತವಾಗಿರುವಂತಹುದು. ವರ್ಣವೆಂಬುದು ವ್ಯಕ್ತಿಯೊಬ್ಬನ ವೃತ್ತಿಯ ಆಧಾರದ ಮೇಲೆ ರಚಿತವಾಗಿರುವ ಅನೇಕ ಜಾತಿಗಳ ವರ್ಗ. ಸುವ್ಯವಸ್ಥಿವಾಗಿ ರಚಿತವಾಗಿದ್ದ ವರ್ಣ ವ್ಯವಸ್ಥೆಗೆ ಜಾತಿಯ ಬಣ್ಣವನ್ನು ಬಳೆಯುತ್ತಾ ಮೂಲ ಪರಿಕಲ್ಪನೆಯನ್ನೇ ತಿರುಚಿ ’ಸೆಕ್ಯುಲರ್’ ಸಿದ್ದಾಂತದ ಅಸ್ತ್ರವಾಗಿಸಿಕೊಳ್ಳಲಾಗಿರುವುದು ದುರ್ಧೈವವೇ ಸರಿ. ಪ್ರಸ್ತುತ ಭಾರತದ ಸೆಕ್ಯುಲರ್ಸಿದ್ದಾಂತದ ಅರ್ಥ “ಹಿಂದೂ ನಂಬಿಕೆಗಳ ಅವಹೇಳನ, ಬ್ರಾಹ್ಮಣ ವಿರೋಧಿ ಮನೋಭಾವ, ವೇದ ಪುರಾಣಗಳ ಬಗ್ಗೆ ಅಪನಂಬಿಕೆಯ ಸೃಷ್ಟಿ” ಇಷ್ಟಕ್ಕೆ ಸೀಮಿತವಾಗಿರುವುದು ವಿಪರ್ಯಾಸವಾಗಿದೆ. ನಮ್ಮ ಬಹುತೇಕ ನಾಯಕರನ್ನು, ಇಂತಹ ಬುದ್ದಿಜೀವಿಗಳನ್ನು ಆವರಿಸಿರುವ ಈ ’ಸೆಕ್ಯುಲರಿಸಂ’ ಎಂಬ ವ್ಯಾದಿಗೆ ಲಸಿಕೆಯನ್ನು ಕಂಡುಹಿಡಿಯುವ ಕಾರ್ಯ ತ್ವರಿತವಾಗಿ ಆಗಬೇಕಿದೆ. ರಾಷ್ಟ್ರದ ಹಿತದೃಷ್ಟಿಯಿಂದ ಇದು ಇಂದಿನ ಅಗತ್ಯವಾಗಿದೆ.
ರಾಮ ಮದ್ಯ ಸೇವಿಸುತ್ತಿದ್ದ, ಆತ ಪತ್ನಿಪೀಡಕ, ಅನೇಕ ಹೆಂಗಳೆಯರ ಸಹವಾಸ ಆತನಿಗಿತ್ತು…ಇತ್ಯಾದಿ ಇತ್ಯಾದಿ ಮಹಾನ್ ಸಂಶೋಧನೆ ಮಾಡಿ ಜನರ ಜನರಲ್ ನಾಲೆಜ್ ಹೆಚ್ಚಿಸುತ್ತಿರುವ ಭಗವಾನರು ಇವನ್ನೆಲ್ಲ ಮಾಡದ, ಯಾವ ಹೆಣ್ಣಿನಿಂದಲೂ ಛೀ ಥೂ ಅನಿಸಿಕೊಳ್ಳದ ಧೀರೋದಾತ್ತರು ಎಂದೇ ಇಟ್ಟುಕೊಳ್ಳೋಣ. ದುರಂತ ನೋಡಿ: ಇಷ್ಟಾಗಿಯೂ ಈ ಜನ ಭಗವಂತನನ್ನೇ ಇನ್ನೂ ಆರಾಧಿಸುತ್ತಾರೆಯೇ ವಿನಾ ಭಗವಾನರನ್ನಲ್ಲ!? ಯಾಕೆ ಹೀಗೆ? ಇದೂ ಪುರೋಹಿತಶಾಹಿ ಹುನ್ನಾರವೇ? ಅಯ್ಯೋ ವಿಧಿಯೇ!