ನಾಡು-ನುಡಿ : ಮರುಚಿಂತನೆ – ನೆಹರು ಸೆಕ್ಯುಲರಿಸಂ ಯಾರ ವಾರಸುದಾರ?
– ಪ್ರೊ.ರಾಜಾರಾಮ್ ಹೆಗಡೆ
ಪ್ರಾಧ್ಯಾಪಕರು, ಇತಿಹಾಸ ಮತ್ತು ಪ್ರಾಕ್ತನಶಾಸ್ತ್ರ ವಿಭಾಗ, ಕುವೆಂಪು ವಿ.ವಿ
ನೆಹರು ಅವರು ಮಹಾತ್ಮಾ ಗಾಂಧಿಯವರ ಪಟ್ಟದ ಶಿಷ್ಯ. ಅಷ್ಟಾಗಿಯೂ ನೆಹರೂ ಅವರ ನೀತಿಗಳು ಹಾಗೂ ಕಾರ್ಯಕ್ರಮಗಳು ದೇಶವನ್ನು ಗಾಂಧಿವಾದದ ವಿರುದ್ಧ ದಿಶೆಗೆ ಒಯ್ದವು ಎಂಬುದಾಗಿ ವಿದ್ವಾಂಸರ ಅಂಬೋಣ. ಉದಾಹರಣೆಗೆ ಗಾಂಧಿಯವರ ಗ್ರಾಮ ಸ್ವರಾಜ್ಯ ಕಲ್ಪನೆ, ಆಧುನೀಕರಣದ ಕುರಿತ ವಿರೋಧ, ಇವೆಲ್ಲವೂ ನೆಹರೂ ಯುಗದ ನಂತರ ರಾಜಕಾರಣದ ಕಸದ ಬುಟ್ಟಿ ಸೇರಿದ್ದು ಈಗ ಇತಿಹಾಸವಾಗಿದೆ. ಹಾಗಾಗಿ ಯಾರೂ ಈ ವಿಷಯದಲ್ಲಿ ನೆಹರೂ ಅವರು ಗಾಂಧಿಯವರ ಶಿಷ್ಯತ್ವವನ್ನು ಪೂರೈಸಿದರು ಎನ್ನುವ ಸಾಹಸಕ್ಕೆ ಹೋಗಲಾರರು. ಆದರೆ ಅಷ್ಟಾಗಿಯೂ ಕೂಡ ನೆಹರೂ ಅವರು ಗಾಂಧಿಯವರ ಶಿಷ್ಯರಾಗಿ ಉಳಿದುಕೊಳ್ಳುವುದು ಸೆಕ್ಯುಲರ್ ನೀತಿಯಲ್ಲಿ ಎಂಬುದು ನೆಹರೂ ಅವರ ಪರ ವಿರೋಧಿಗಳಿಬ್ಬರಲ್ಲೂ ಮನೆಮಾಡಿರುವ ಅನ್ನಿಸಿಕೆ. ಭಾರತದಲ್ಲಿ ಹಿಂದುತ್ವವಾದಿಗಳನ್ನು ನಿಯಂತ್ರಿಸುವ ಹಾಗೂ ಅಲ್ಪಸಂಖ್ಯಾತರ ಹಿತವನ್ನು ರಕ್ಷಿಸುವ ಕುರಿತಂತೆ ತಮ್ಮ ಗುರುವಿನ ಆಲೋಚನೆಗಳನ್ನು ನೆಹರೂ ಕಾರ್ಯರೂಪಕ್ಕೆ ಸಮರ್ಥವಾಗಿ ಇಳಿಸಿದವರು ಎಂಬುದರಲ್ಲಿ ಇಂದು ಯಾರಿಗಾದರೂ ಸಂದೇಹವಿದೆ ಎನ್ನಿಸುವುದಿಲ್ಲ. ಈ ಮೇಲಿನ ಕೊನೆಯ ಅಂಶವನ್ನು ಮಾತ್ರ ಕಾಂಗ್ರೆಸ್ಸು ಒತ್ತಿ ಹೇಳಿ ತಾನು ಗಾಂಧೀಜಿಯವರ ನಿಜವಾದ ವಾರಸುದಾರ ಎನ್ನುತ್ತ ಬಂದಿದೆ. ಆದರೆ ನೆಹರು ಸೆಕ್ಯುಲರಿಸಂಗೆ ಗಾಂಧಿಯವರ ವಾರಸುದಾರಿಕೆ ಎಷ್ಟಿದೆ?
ಇಂದು ಗಾಂಧೀ ಸೆಕ್ಯುಲರಿಸಂ ಅಂತ ಪ್ರತ್ಯೇಕವಾಗಿ ಯಾವುದೂ ಕಣ್ಣಿಗೆ ಕಾಣುವುದಿಲ್ಲ. ನೆಹರು ಸೆಕ್ಯುಲರಿಸಮ್ಮಿನ ಇಂದಿನ ವಾರಸುದಾರರ ಚಿಂತನೆಗೂ ಗಾಂಧೀ ಚಿಂತನೆಗೂ ಇರುವ ಬಿರುಕುಗಳನ್ನು ಗಮನಿಸಿದರೆ ಈ ವಾರಸುದಾರಿಕೆಯ ಸ್ವರೂಪವು ಸ್ಪಷ್ಟವಾಗಬಹುದು. ನೆಹರೂ ಕಾಲದಲ್ಲಿ ಪ್ರಚಲಿತದಲ್ಲಿ ಬಂದ ಸೆಕ್ಯುಲರಿಸಂಗೆ ಅಲ್ಪಸಂಖ್ಯಾತರ ಓಲೈಕೆಯ ರಾಜಕೀಯವನ್ನು ಬಿಟ್ಟರೆ ಅದರಲ್ಲಿ ಸೆಕ್ಯುಲರ್ ಆದದ್ದು ಏನೂ ಕಾಣಿಸುವುದಿಲ್ಲ. ಹಾಗೂ ಹಿಂದೂ ಸಂಪ್ರದಾಯಗಳ ಕುರಿತು ಜಿಗುಪ್ಸೆ, ಅವಹೇಳನವೂ ಕೂಡ ಈ ಸೆಕ್ಯುಲರಿಸಂನ ಒಂದು ಲಕ್ಷಣ. ಅಂದರೆ ಹಿಂದೂ ಪರಂಪರೆಯು ಅನೈತಿಕ ಸಮಾಜ ವ್ಯವಸ್ಥೆಯನ್ನು, ಅರ್ಥಾತ್ ಜಾತಿವ್ಯವಸ್ಥೆಯನ್ನು ಎತ್ತಿ ಹಿಡಿಯುತ್ತದೆ, ಸಮಸ್ತ ಸಂಸ್ಕೃತ ಗ್ರಂಥಗಳೆಲ್ಲವೂ ಬ್ರಾಹ್ಮಣೇತರರ ಶೋಷಣೆಗಾಗಿಯೇ ರಚನೆಯಾಗಿವೆ, ಈ ಸಮಾಜವನ್ನು ಆದಷ್ಟೂ ಹಿಂದೂ ಸಂಪ್ರದಾಯಗಳ ಹಿಡಿತದಿಂದ ಹೊರತಂದ ಹೊರತೂ ಅದರ ಉದ್ಧಾರ ಸಾಧ್ಯವಿಲ್ಲ ಎನ್ನುವುದೇ ಇಂದಿನ ಸೆಕ್ಯುಲರಿಸಂ ಆಗಿದೆ. ಈ ಸೆಕ್ಯುಲರಿಸಂ ಪ್ರಕಾರ ಹಿಂದೂ ಸಂಪ್ರದಾಯಗಳಲ್ಲಿನ ಮೌಢ್ಯದ ನಿರ್ಮೂಲನೆಗಾಗಿ ಕಾನೂನುಗಳನ್ನು ಮಾಡುವುದೇ ಮುಖ್ಯ ಕಾರ್ಯಕ್ರಮ.
ಗಾಂಧಿಯವರ ಸುಧಾರಣೆಗಳನ್ನು ಎತ್ತಿ ಹೇಳುವ ಈ ಸೆಕ್ಯುಲರ್ ವಾದಿಗಳು ಗಾಂಧಿಯವರ ದೈವಭಕ್ತಿ, ಸಂತಜೀವನ ಶೈಲಿ, ಭಗವದ್ಗೀತೆಯಿಂದ ಪ್ರೇರಣೆ, ಆಧುನಿಕತೆಯ ವಿರೋಧ ಇವುಗಳನ್ನು ರೂಢಿಸಿಕೊಳ್ಳುವ ಕುರಿತು ಯಾವುದೇ ಆಸಕ್ತಿಯನ್ನು ಹೊಂದಿಲ್ಲ. ಯಾವ ಸೆಕ್ಯುಲರ್ವಾದಿಗಳು ಅಥವಾ ಕಾಂಗ್ರೆಸ್ ಮುಖಂಡರು ಬೆಳಿಗ್ಗೆ ಸಂಜೆ ಗಾಂಧಿಯವರ ಹಾಗೆ ಭಜನೆಯಲ್ಲಿ ತೊಡಗಿಕೊಂಡಿದ್ದಾರೆ? ಆದರೆ ಈ ಅಂಶಗಳನ್ನು ಬಿಟ್ಟು ಗಾಂಧಿಯವರು ಅಲ್ಪಸಂಖ್ಯಾತರ ಕುರಿತಾಗಲೀ, ಹಿಂದೂ ಸಂಪ್ರದಾಯಗಳ ಕುರಿತಾಗಲೀ ಏನು ಹೇಳಿದರೆಂಬುದಕ್ಕೆ ಅರ್ಥವಿಲ್ಲ. ಬದಲಾಗಿ ನೆಹರೂ ಸೆಕ್ಯುಲರಿಸಂ ಪ್ರಕಾರ ಇಂಥ ಚಟುವಟಿಕೆಗಳು ಸೆಕ್ಯುಲರಿಸಂನ ನಿಯಮಗಳಿಗೆ ಅಪಾಯಕಾರಿ. ಅದೊಂದೇ ಅಲ್ಲ, ಇಂದಿನ ಸೆಕ್ಯುಲರ್ ಚಿಂತನೆಗೆ ಗಾಂಧಿಯವರ ಈ ಜೀವನ ಶೈಲಿಯೇ ಇರುಸುಮುರುಸಾಗಿದೆ. ನೆಹರೂ ಸೆಕ್ಯುಲರಿಸಂ ನಿರ್ದಿಷ್ಟವಾಗಿ ಗಾಂಧಿಯವರ ವಿಚಾರಗಳನ್ನು ಅವರ ಜೀವನದ ಸಮಗ್ರ ಸಂದರ್ಭದಿಂದ ಕಿತ್ತು ಐರೋಪ್ಯ ಚಿಂತನಾ ಸಂಪ್ರದಾಯಗಳಿಗೆ ಅನುಕೂಲವಾಗುವಂತೆ ನಿರೂಪಿಸಿಕೊಂಡದ್ದು ಸ್ಪಷ್ಟವಾಗಿದೆ.
ಗಾಂಧಿಯವರು ಹಿಂದೂ ಆಚರಣೆಗಳಲ್ಲಿ ಕೆಲವು ವಿಷಯಗಳಿಗೆ ಸಂಬಂಧಿಸಿದಂತೇ ಸುಧಾರಣೆಯನ್ನು ತರಬಯಸಿದರು, ಉದಾಹರಣೆಗೆ ಅಸ್ಪೃಶ್ಯತೆಯ ನಿವಾರಣೆ. ಅಷ್ಟಾಗಿಯೂ ಅವರೊಬ್ಬ ಶೃದ್ಧಾವಂತ ಹಿಂದೂ ಆಗಿದ್ದರು. ಶೃದ್ಧಾವಂತ ಹಿಂದೂ ಆಗಿದ್ದ ಕಾರಣದಿಂದಲೇ ಅವರಿಗೆ ಅನ್ಯ ಸಂಪ್ರದಾಯಗಳು ಹಾಗೂ ಮುಸ್ಲಿಂ, ಕ್ರೈಸ್ತರಂಥ ರಿಲಿಜನ್ನುಗಳು ಒಂದೇ ರೀತಿ ಕಾಣಿಸಿದವು. ಗಾಂಧಿಯವರು ಹಿಂದುತ್ವ ಅಥವಾ ಅಲ್ಪಸಂಖ್ಯಾತರ ಕುರಿತು ತಳೆದ ನಿಲುವುಗಳನ್ನು ಅವರನ್ನು ಒಬ್ಬ ಸಾಂಪ್ರದಾಯಿಕ ಹಿಂದೂವಾಗಿ ಗ್ರಹಿಸಿ ಅರ್ಥೈಸಬೇಕೇ ವಿನಃ ಅವರಿಗೆ ಸೆಕ್ಯುಲರಿಸಂ ಎಂಬ ಪಾಶ್ಚಾತ್ಯ ನೀತಿಯ ಪ್ರಭಾವವಾಗಿತ್ತು ಎಂಬುದಾಗಿ ಅರ್ಥೈಸುವುದು ಸರಿಯಲ್ಲ. ಗಾಂಧಿಯವರು ರಾಜಕೀಯದಿಂದ ಧರ್ಮವನ್ನು ಬೇರ್ಪಡಿಸುವುದು ಸರಿ ಎಂದು ನಂಬಿರಲಿಲ್ಲ. ಆದರೆ ನೆಹರೂ ಸೆಕ್ಯುಲರಿಸಂ ಎಂಬುದು ಶುದ್ಧಾಂಗ ಪಾಶ್ಚಾತ್ಯ ನೀತಿಯಾಗಿದೆ. ಹಾಗಾಗಿಯೇ ಇದು ಭಾರತೀಯ ಸಂಸ್ಕೃತಿಯ ಹಾಗೂ ಸಂಪ್ರದಾಯಗಳ ಕುರಿತು ಒಂದು ನಕಾರಾತ್ಮಕ ಧೋರಣೆಯನ್ನೂ ಹುಟ್ಟುಹಾಕುತ್ತದೆ. ಏಕೆ ಎಂಬುದನ್ನು ಮುಂದೆ ನೋಡೋಣ:
ವಸಾಹತು ಕಾಲದಲ್ಲಿ ಬ್ರಿಟಿಷರು ಪ್ರಪ್ರಥಮ ಬಾರಿಗೆ ಇಲ್ಲಿ ಸೆಕ್ಯುಲರ್ ನೀತಿಯನ್ನು ಅಳವಡಿಸಿದರು. ಆದರೆ ಈ ಸೆಕ್ಯುಲರಿಸಂನ ಫಲಾನುಭವಿಗಳಾಗಬೇಕಾದರೆ ಹಿಂದೂಗಳು ಕ್ರಿಶ್ಚಿಯಾನಿಟಿ, ಇಸ್ಲಾಂ ರಿಲಿಜನ್ನುಗಳ ಮಾನದಂಡವನ್ನು ಅಳವಡಿಸಿಕೊಳ್ಳುವ ಅನಿವಾರ್ಯತೆ ಉಂಟಾಯಿತು. ಆದರೆ ಭಾರತೀಯ ಸಂಸ್ಕೃತಿ ಈ ರಿಲಿಜನ್ನುಗಳಂತೆ ಇರಲಿಲ್ಲ. ಹಾಗಾಗಿ ಭಾರತೀಯ ಸಮಾಜ ಹಾಗೂ ಸಂಸ್ಕೃತಿಯೇ ಮೌಢ್ಯದ ಮೇಲೆ ನಿಂತಿದೆ ಎಂಬುದಾಗಿ ಬ್ರಿಟಿಷರು ಅರ್ಥೈಸಿದರು. ಈ ಅಪವಾದದಿಂದ ಭಾರತೀಯರ ಘನತೆಯನ್ನು ರಕ್ಷಿಸಲು ರಾಮಮೋಹನರಾಯರ ಕಾಲದಿಂದಲೂ ಇಸ್ಲಾಂ ಹಾಗೂ ಕ್ರಿಶ್ಚಿಯಾನಿಟಿಯ ಮಾದರಿಯನ್ನು ಇಟ್ಟುಕೊಂಡು ಹಿಂದೂ ಸಂಪ್ರದಾಯಗಳನ್ನು ಸುಧಾರಿಸುವ ಪ್ರಯತ್ನ ನಡೆಯಿತು. 19ನೆಯ ಶತಮಾನದ ಅಂತ್ಯಭಾಗದಲ್ಲಿ ಇಂಥ ಪ್ರಯೋಗಗಳು ವಿದ್ಯಾವಂತ ಹಿಂದೂಗಳಿಗೆ ತಮ್ಮ ಪರಂಪರೆಯ ಬಗೆಗೇ ಕೀಳರಿಮೆ ಹುಟ್ಟುವಂತೆ ಮಾಡಿದವು ಹಾಗೂ ಪಾಶ್ಚಾತ್ಯರ ಆಳ್ವಿಕೆಗೆ ಸಮರ್ಥನೆಯನ್ನು ಒದಗಿಸಿದವು. ಏಕೆಂದರೆ ಸೆಕ್ಯುಲರಿಸಂನ ತರ್ಕವನ್ನು ಒಪ್ಪಿಕೊಂಡರೆ ನಮ್ಮ ಸಂಪ್ರದಾಯಗಳ ಮೂರ್ತಿಪೂಜೆ, ವಿಧಿ ಆಚರಣೆ, ಜೀವನಕ್ರಮ, ಇತ್ಯಾದಿಗಳು ಅವು ಇರುವ ರೀತಿಯಲ್ಲಿ ಮೌಢ್ಯವಾಗುತ್ತವೆ. ಇದು ವಿದ್ಯಾವಂತ ಹಿಂದೂಗಳಲ್ಲಿ ವೈಚಾರಿಕ ಸಂದಿಗ್ಧತೆಯನ್ನು ಹಾಗೂ ನೈತಿಕ ಸಮಸ್ಯೆಯನ್ನು ಹುಟ್ಟುಹಾಕಿತು.
ಈ ಸಂದಿಗ್ಧ ಪರಿಸ್ಥಿತಿಯಲ್ಲಿ ಸ್ವಾಮಿ ವಿವೇಕಾನಂದರಂಥ ದಾರ್ಶನಿಕರು ಹಿಂದೂ ಸಂಪ್ರದಾಯಗಳ ಮಹತ್ವವನ್ನು ಪಾಶ್ಚಾತ್ಯರ ಪರಿಭಾಷೆಯಲ್ಲಿಯೇ ನಿರೂಪಿಸಿ ಹಿಂದೂ ವಿದ್ಯಾವಂತರಿಗೆ ತಮ್ಮ ಪರಂಪರೆಯ ಬಗೆಗೆ ಹೆಮ್ಮೆ ಮೂಡುವಂತೆ ಮಾಡುವುದರಲ್ಲಿ ಯಶಸ್ವಿಯಾದರು. ಅವರಿಗೆ ರಾಮಕೃಷ್ಣ ಪರಮಹಂಸರಂಥ ಜ್ಞಾನಿಗಳ ಅನುಭವದ ಹಿನ್ನೆಲೆಯಿತ್ತು. ವಿವೇಕಾನಂದರು ಹಿಂದೂ ಆಚರಣೆಗಳನ್ನು ಸುಧಾರಣೆಗೊಳಪಡಿಸುವ ಅಗತ್ಯವನ್ನು ಪ್ರತಿಪಾದಿಸಿದರೂ ಕೂಡ ನಮ್ಮ ಸಂಪ್ರದಾಯಗಳಲ್ಲಿ ಮೂರ್ತಿಪೂಜೆಯಾಗಲೀ, ಸಾಮಾಜಿಕ ಆಚರಣೆಗಳಾಗಲೀ ಮೂಲತಃ ಮೌಢ್ಯಗಳಲ್ಲ, ಅವು ಹಿಂದೂ ಸಂಸ್ಕೃತಿಯ ಹೆಚ್ಚುಗಾರಿಕೆಗಳು ಎಂಬುದನ್ನು ನಿದರ್ಶಿಸಿದರು. ಭಾರತೀಯ ರಾಷ್ಟ್ರೀಯತೆಯು ಉಗಮಿಸಿದ್ದು ಇಂಥ ಚಿಂತನೆಗಳ ತಳಹದಿಯ ಮೇಲೆ. ಗಾಂಧೀಜಿಯವರು ಈ ಆಲೋಚನೆಗಳನ್ನು ಮತ್ತೂ ಮುಂದಕ್ಕೆ ಒತ್ತಿದರು. ಪಾಶ್ಚಾತ್ಯ ನಾಗರೀಕತೆಯೇ ಒಂದು ವ್ಯಾಧಿಯಾಗಿದೆ, ಅದು ನಾವು ಹಾಗೂ ಪಾಶ್ಚಾತ್ಯರು ನಿವಾರಿಸಿಕೊಳ್ಳಬೇಕಾದ ಒಂದು ರೋಗ ಎಂಬುದಾಗಿ ಅವರು ತಮ್ಮ ಹಿಂದ್ ಸ್ವರಾಜ್ ಗ್ರಂಥದಲ್ಲಿ ವಾದಿಸುತ್ತಾರೆ. ರಾಷ್ಟ್ರೀಯತಾಯುಗದ ಅನೇಕ ದಾರ್ಶನಿಕರು ಹಾಗೂ ಚಿಂತಕರು ಇಂದಿನ ಜಗತ್ತಿನ ಅನೇಕ ಸಮಸ್ಯೆಗಳಿಗೆ ಭಾರತೀಯ ಸಂಸ್ಕೃತಿಯು ಮಾತ್ರವೇ ಉತ್ತರವಾಗಬಲ್ಲದು ಎಂಬುದಾಗಿ ಧೃಡವಾಗಿ ನಂಬಿದ್ದರು.
ವಸಾಹತುಶಾಹಿ ನಿರೂಪಣೆಗಳು ಭಾರತೀಯರಲ್ಲಿ ಸಾಂಸ್ಕೃತಿಕ ಕೀಳರಿಮೆಯನ್ನು ಹುಟ್ಟುಹಾಕುವ ಕೆಲಸವನ್ನು ಮಾಡುತ್ತಿವೆ ಎಂಬುದನ್ನು ಗಮನಿಸಿದ ನಮ್ಮ ಪೂರ್ವಜರು ನೂರಾರು ವರ್ಷಗಳ ವರೆಗೆ ಪರಿಹಾರಕ್ಕಾಗಿ ತಡಕಾಡಿದರು. ನಮ್ಮ ಸಂಸ್ಕೃತಿ, ಸಂಪ್ರದಾಯದ ಕುರಿತು ನಾವು ಯಾವ ಧೋರಣೆಯನ್ನು ರೂಢಿಸಿಕೊಳ್ಳುವುದು ಸೂಕ್ತ ಎಂಬುದನ್ನು ಗಾಂಧಿಯವರ ಕಾಲದ ವರೆಗೆ ಶೋಧಿಸುತ್ತ ಬಂದರು. ಇಂದಿನ ಚಿಂತಕರು ನಿಜವಾಗಿಯೂ ಮಾಡಬೇಕಾಗಿರುವುದು ನಮಗೆ ಬಳುವಳಿಯಾಗಿ ಬಂದ ಈ ತಿಳುವಳಿಕೆಯನ್ನು ಮತ್ತೂ ಪರಿಷ್ಕರಿಸುವುದು. ಆದರೆ ನೆಹರು ಸೆಕ್ಯುಲರಿಸಂನ ಕೃಪೆಯಿಂದಾಗಿ ನಮ್ಮ ಚಿಂತನೆಯನ್ನು ಮತ್ತೊಮ್ಮೆ ನೂರು ವರ್ಷಗಳಷ್ಟು ಹಿಂದಿನ ಪಾಶ್ಚಾತ್ಯೀಕರಣದಿಂದ ಪ್ರಾರಂಭಿಸುವ ಕಾಯಕವು ಬುದ್ಧಿಜೀವಿಗಳಿಗೆ ಪ್ರಾಪ್ತವಾಗಿದೆ. ಶತಮಾನಗಳ ತಿಳುವಳಿಕೆಯ ಜೊತೆಗೆ ಅದಕ್ಕೆ ಸಂಬಂಧವೇ ಇದ್ದಂತಿಲ್ಲ. ರಾತ್ರಿಕಂಡ ಭಾವಿಗೆ ಹಗಲು ಬೀಳುವುದೆಂದರೆ ಇದೇ ಇರಬಹುದೆ?