ವಿಷಯದ ವಿವರಗಳಿಗೆ ದಾಟಿರಿ

ಏಪ್ರಿಲ್ 13, 2015

12

ಆ ಮುದ್ದು ಕಂದ ತೀರಿಕೊಂಡು ಈಗ 50 ವರ್ಷ

‍ನಿಲುಮೆ ಮೂಲಕ

– ರೋಹಿತ್ ಚಕ್ರತೀರ್ಥ

ಡೆನ್ನಿಸ್ ಕ್ರೇಗ್ಸಾವಿನ ಸುದ್ದಿಯಲ್ಲಿದ್ದ ಒಂದು ವಾಕ್ಯ ಇಡೀ ಪ್ರಕರಣದ ಹಾದಿಯನ್ನು ಬದಲಿಸಿಬಿಟ್ಟಿತು!

ಈ ಕತೆ ನನ್ನೊಳಗೆ ಎಬ್ಬಿಸಿರುವ ಬಿರುಗಾಳಿಗೆ ಗಿರಗಿರ ತಿರುಗುವ ತರಗೆಲೆಯಾಗಿದ್ದೇನೆ. ಬರೆಯಬೇಕೆಂದರೂ ಕೈ ಏಳುತ್ತಿಲ್ಲ. ಏನೆಂದು ಬರೆಯಲಿ? ಎಲ್ಲಿಂದ ಶುರುಮಾಡಲಿ? ಈ ಕತೆಯನ್ನು ಹೇಳಿಕೊಂಡು ನಾನು ಸಾಧಿಸಲು ಬಯಸುತ್ತಿರುವುದಾದರೂ ಏನನ್ನು? ಆದರೂ.. ಇಷ್ಟೊಂದು ಖಾಲಿತನ ಮೈಯನ್ನು ಉರಿಸಿ ಬೂದಿ ಮಾಡುತ್ತಿರುವಾಗ ಸುಮ್ಮನಿರುವುದು ಸರಿಯಲ್ಲ. ನಿಮಗಿದನ್ನು ಹೇಳಿ ಹಗುರಾಗುವುದು, ಅಥವಾ ಇನ್ನಷ್ಟು ಭಾರವಾಗುವುದಷ್ಟೇ ನನಗೀಗ ಉಳಿದಿರುವ ದಾರಿ. ಈ ಕತೆಯ ಅರ್ಥ-ವ್ಯಾಖ್ಯಾನ ಮಾಡುವುದೆಲ್ಲ ನಿಮ್ಮ ಬುದ್ಧಿ-ಭಾವ-ಯೋಚನೆಗಳಿಗೆ ಬಿಟ್ಟ ವಿಷಯ.

ಲೊಯಿಸ್ ಎಂಬ ಆ ಹುಡುಗಿಗೆ ಆಗಲೇ 35 ವರ್ಷ ವಯಸ್ಸು. ಹಾಗಾಗಿ ಅವಳನ್ನು ಹೆಂಗಸು ಎನ್ನುವುದೇ ಹೆಚ್ಚು ಸೂಕ್ತ. ಹದಿನೈದು ಜನ ಸೋದರ-ಸೋದರಿಯರಿದ್ದ ದೊಡ್ಡ ಕುಟುಂಬದಿಂದ ಬಂದಿದ್ದ ಲೊಯಿಸ್, ಹೆರಾಲ್ಡ್ ಜರ್ಗಿನ್ಸ್ ಎಂಬವನನ್ನು ಮದುವೆಯಾದಳು. ವಿಪರ್ಯಾಸವೆಂದರೆ, ಆ ದಂಪತಿಗೆ ಮಾತ್ರ ಹಲವು ವರ್ಷಗಳು ಕಳೆದರೂ ಸಂತಾನಭಾಗ್ಯ ಲಭಿಸಲಿಲ್ಲ. ಹದಿನಾರು ವರ್ಷ ಹೀಗೆ ಕಾದು ಬೇಸರ ಬಂದ ಮೇಲೆ ಇಬ್ಬರೂ ಹೊರಗಿನಿಂದ ಮಗುವನ್ನು ದತ್ತು ಪಡೆಯುವ ನಿರ್ಧಾರ ಮಾಡಿದರು. ಆಗಷ್ಟೇ ಹುಟ್ಟಿ ಕೆಲ ತಿಂಗಳು ಕಳೆದಿದ್ದ ಮಗುವೊಂದನ್ನು ದತ್ತುಪಡೆದು ರಾಬರ್ಟ್ ಎಂದು ಹೆಸರಿಟ್ಟರು. ಒಂದೆರಡು ವರ್ಷವಾದ ಮೇಲೆ, ಆಕೆಗೆ ಮತ್ತೊಂದು ಮಗುವನ್ನೂ ಎತ್ತಿ ಆಡಿಸಬೇಕೆಂಬ ಬಯಕೆಯಾಗಿರಬೇಕು; ಒಂದು ವರ್ಷ ಕಳೆದಿದ್ದ ಮತ್ತೊಂದು ಗಂಡುಮಗುವನ್ನು ದತ್ತು ಪಡೆದರು. ಡೆನ್ನಿಸ್ ಎಂದು ನಾಮಕರಣ ಮಾಡಿದರು. ರಾಬರ್ಟ್ ಮತ್ತು ಡೆನ್ನಿಸ್‍ರಿಗೆ ಒಂದೂವರೆ ವರ್ಷದ ಅಂತರವಷ್ಟೇ. ಇಬ್ಬರೂ ಒಬ್ಬರಿಗೊಬ್ಬರು ಜೀವ ಕೊಡಬಲ್ಲ, ಜೀವ ಬಿಡಬಲ್ಲ ಆತ್ಮೀಯ ಸೋದರರಾದರು. ಸುಖವಾದ ಸಂಸಾರ ಎನ್ನುವುದಕ್ಕೆ ಏನೇನೂ ಕೊರತೆ ಇರಲಿಲ್ಲ.

ಅದು 1965ರ ಮಳೆಗಾಲ. ಸರಿಯಾಗಿ ಹೇಳಬೇಕೆಂದರೆ ಏಪ್ರಿಲ್ 9ರ ರಾತ್ರಿ. ಕತ್ತಲೆ, ಮಿಂಚು-ಗುಡುಗುಗಳ ಆರ್ಭಟ ಜೋರಾಗಿದ್ದ ಹೊತ್ತು. ಬಿಡದೆ ಸುರಿಯುತ್ತಿರುವ ಧಾರಾಕಾರ ಮಳೆ. ಹತ್ತಿರದಲ್ಲಿ ಹರಿಯುವ ಮಿಸ್ಸಿಸಿಪ್ಪಿ ನದಿ, ಅಜಗರದ ಗೊರಕೆಯಂತೆ ಮೊರೆಯುತ್ತಿದ್ದ ಸಮಯ. ನಡುರಾತ್ರಿಯ ಹೊತ್ತಲ್ಲಿ ಐದು ವರ್ಷದ ರಾಬರ್ಟ್‍ನಿಗೆ ತಟ್ಟನೆ ಎಚ್ಚರವಾಯಿತು. ಎದ್ದು ಕೂತರೆ ತನ್ನ ಮನೆಯೇ ಸ್ಮಶಾನವಾಗಿದೆಯೋ ಅನ್ನಿಸುವಂತಹ ಗವ್ವೆನ್ನುವ ಕತ್ತಲೆ ಸುತ್ತಲೂ ಮುತ್ತಿದೆ. ಆ ಕಾಳಕತ್ತಲನ್ನು ಸೀಳಿಕೊಂಡು ಒಂದು ಆಕ್ರಂದನ ಬಂದು ಎದೆಯನ್ನು ಅಮುಕಿ ಹಿಡಿಯುತ್ತಿದೆ. ಆ ಪುಟ್ಟಹುಡುಗ ಧಡ್ಡನೆ ಎದ್ದುಕೂತ. ಸದ್ದು ಬರುತ್ತಿರುವಲ್ಲಿಗೆ ಸದ್ದುಮಾಡದೆ ನಡೆದ. ತಮ್ಮ ಡೆನ್ನಿಸ್‍ನ ಬೆಡ್‍ರೂಮಿನ ಬಾಗಿಲು ಅರೆತೆರೆದಿತ್ತು. ಒಳಗೆ ಮಂದ ಬೆಳಕು. ಅಲ್ಲಿ, ತಾಯಿ ಲೊಯಿಸ್, ಮಗುವನ್ನು ಎತ್ತಿಕೊಂಡು ಡೆನ್ನಿಸ್, ಡೆನ್ನಿಸ್ ಎಂದು ಕೂಗಾಡುತ್ತಿದ್ದಾಳೆ. ತಮ್ಮ ಡೆನ್ನಿಸ್‍ನ ಕೈ ಗಾಳಿಗೆ ಸಿಕ್ಕ ದೋಣಿಯ ಹಾಯಿಯಂತೆ ನಿಶ್ಚೇಷ್ಟಿತವಾಗಿ ಗಾಳಿಯಲ್ಲಿ ಬೀಸಿಕೊಳ್ಳುತ್ತಿದೆ. ಕಾಲು ಸೆಟೆದುಕೊಂಡಿದೆ. ತಲೆ ಹಿಂದಕ್ಕೂಮುಂದಕ್ಕೂ ಒಂದೇ ಸವನೆ ಓಲಾಡುತ್ತಿದೆ. ನಾಲಗೆ ಹೊರಬಿದ್ದಿದೆ. ರಾಬರ್ಟ್‍ಗೆ ಭಯದಿಂದ ಕೈಕಾಲುಗಳು ಮರಗಟ್ಟಿದವು. ಅಲ್ಲೇ ಶಿಲೆಯಾಗಿ ಹೋದ. ಅದಾಗಿ, ಎರಡು ದಿನಗಳ ನಂತರ, ಏಪ್ರಿಲ್ 11ರಂದು ಅವನ ಪ್ರೀತಿಯ ಸೋದರ ಡೆನ್ನಿಸ್ ಇಹಲೋಕದ ಯಾತ್ರೆ ಮುಗಿಸಿ ಚಿರನಿದ್ರೆಗೆ ಜಾರಿದ. ಮಿಸ್ಸಿಸ್ಸಿಪ್ಪಿ ನದಿ ಜಗತ್ತನ್ನೇ ಮುಳುಗಿಸಿಹಾಕುತ್ತೇನೆಂದು ಗುಟುರು ಹಾಕುತ್ತಾ ಅಬ್ಬರಿಸುತ್ತಿತ್ತು. ನಿಂತಿದ್ದದ್ದು ಡೆನ್ನಿಸ್‍ನ ಉಸಿರು ಮಾತ್ರ; ಮಳೆಯ ಹೊಯ್ಯಾಟ ನಡೆದೇ ಇತ್ತು.

ಡೆನ್ನಿಸ್‍ನ ಶವಪರೀಕ್ಷೆ ನಡೆಸಲಾಯಿತು. ವೈದ್ಯರು “ಈ ಹುಡುಗ ಕೆಳಗೆ ಬಿದ್ದು ಪೆಟ್ಟು ಮಾಡಿಕೊಂಡು, ನಂತರ ಕಿಬ್ಬೊಟ್ಟೆಯಲ್ಲಿ ಕೀವಾಗಿ ಸಾವಿಗೀಡಾಗಿದ್ದಾನೆ.” ಎಂದು ಟಿಪ್ಪಣಿ ಬರೆದರು. ಡೆನ್ನಿಸ್‍ನ ಅಂತ್ಯಸಂಸ್ಕಾರಕ್ಕೆ ಮನೆಯ ಒಂದಷ್ಟು ಜನ ಮಾತ್ರ ಹಾಜರಿ ಹಾಕಿದರು. ಹೀಗೆ ಆ ಹುಡುಗ ಕೇವಲ ಎರಡೂವರೆ ವರ್ಷಗಳಷ್ಟೇ ಜರ್ಗಿನ್ಸ್ ಕುಟುಂಬದಲ್ಲಿ ಇದ್ದು, ಒಂದು ರಾತ್ರಿಯಲ್ಲಿ ಬಿದ್ದು ಮರೆಯಾದ ಕನಸಿನಂತೆ ಹೋಗಿಬಿಟ್ಟ. ಕೇವಲ ನೆನಪಾಗಿ ಉಳಿದುಬಿಟ್ಟ.

**

ಡೆನ್ನಿಸ್ ತೀರಿಕೊಂಡು ಹದಿನೈದು ವರ್ಷಗಳೇ ಉರುಳಿಹೋದವು. ಆತನನ್ನು ಹಡೆದು ಜರ್ಗಿನ್ಸ್ ಕುಟುಂಬಕ್ಕೆ ದತ್ತುಕೊಟ್ಟಿದ್ದ ನಿಜತಾಯಿಗೆ ಮಾತ್ರ ತನ್ನ ಮಗನ ನೆನಪು ಕಾಡುತ್ತಲೇ ಇತ್ತು; ಕುಂತಿಯೊಳಗೆ ಕರ್ಣನ ನೆನಪು ಉಳಿದಿತ್ತಲ್ಲ ಹಾಗೆ. ಜೆರ್ರಿ ಶೆರ್‍ವುಡ್ ಎಂಬ ಹೆಸರಿನ ಆ ಹುಡುಗಿ ಡೆನ್ನಿಸ್‍ನನ್ನು ಹೆತ್ತಾಗ ಇದ್ದ ಪರಿಸ್ಥಿತಿಯೇ ಬೇರೆ. ಡೆನ್ನಿಸ್, ಅವಳ ಹದಿಹರೆಯದಲ್ಲಿ ಚಿಗುರಿದ್ದ ಮೊದಲ ಪ್ರೇಮದ ಅಮೃತಫಲ. ಸಮಾಜ ಮಾತ್ರ ಅದನ್ನು ಅನೈತಿಕ ಸಂಬಂಧದ ಅಕ್ರಮಸಂತಾನ ಎಂದು ಕರೆದಿತ್ತಷ್ಟೆ. ಹೀಗೆ ಹುಟ್ಟಿದ ಮಕ್ಕಳನ್ನು ತಾಯಿ ಕಡ್ಡಾಯವಾಗಿ ಅನಾಥಾಶ್ರಮಕ್ಕೆ ಒಪ್ಪಿಸಬೇಕು; ಆ ಮಗುವನ್ನು ಕಡ್ಡಾಯವಾಗಿ ದತ್ತು ಕೊಡಬೇಕು ಎಂದು ಸರಕಾರ ಕಾನೂನು ಮಾಡಿದ್ದರಿಂದ, ಅನಿವಾರ್ಯವಾಗಿ ಆಕೆ ತನ್ನ ಕಂದಮ್ಮನನ್ನು ಬೇರೆಯವರ ಉಡಿಗೆ ಹಾಕಬೇಕಾಗಿತ್ತು. ಆ ಪ್ರಕರಣ ಕಾಲಗರ್ಭಕ್ಕೆ ಸರಿದು, ಯೌವನದ ಹುಚ್ಚುಹೊಳೆಯ ಅಬ್ಬರ ಇಳಿದ ಮೇಲೆ, ಆಕೆಯೂ ಮದುವೆಯಾಗಿ, ಸಂಸಾರಸ್ಥಳಾಗಿದ್ದಳು. ನಾಲ್ಕು ಮಕ್ಕಳ ತಾಯಿಯೂ ಆಗಿದ್ದಳು. ಮದುವೆ, ಗಂಡ, ಮಕ್ಕಳು, ಮನೆ ಎಂದು ಎಲ್ಲ ಸುಖಸುಪ್ಪತ್ತಿಗೆ ಇದ್ದರೂ ಜೆರ್ರಿ ಇನ್ನೂ ತನ್ನ ಮೊದಲ ಮಗುವನ್ನು ಹೃದಯದಲ್ಲಿ ಬೆಚ್ಚಗೆ ಬಚ್ಚಿಟ್ಟುಕೊಂಡಿದ್ದಳು. ಅವನನ್ನು ನೋಡಬೇಕೆಂದು ಕೆಲವು ಸಲ ಅವಳಿಗೆ ತೀವ್ರವಾಗಿ ಅನ್ನಿಸುತ್ತಿತ್ತು. ಕೊನೆಗೊಂದು ದಿನ ದೃಢನಿರ್ಧಾರ ಮಾಡಿ ಅನಾಥಾಶ್ರಮಕ್ಕೆ ಪತ್ರ ಬರೆದು, “ನನ್ನ ಮಗ ಈಗ ಹದಿನೆಂಟು ದಾಟಿ, ಚಿಗುರು ಮೀಸೆ ಬೆಳೆಸಿಕೊಂಡಿರುತ್ತಾನೆ. ಅವನನ್ನೊಮ್ಮೆ ನೋಡಬೇಕೆಂದು ಬಲವಾಗಿ ಅನ್ನಿಸುತ್ತಿದೆ. ದಯವಿಟ್ಟು ವ್ಯವಸ್ಥೆ ಮಾಡಿ. ಇಲ್ಲ ಅನ್ನಬೇಡಿ” ಎಂದು ಬೇಡಿಕೊಂಡಳು. ಎರಡು ವಾರದ ಮೇಲೆ ಆಕೆಗೆ ಮಾರೋಲೆ ಬಂತು. ಡೆನ್ನಿಸ್ ಹದಿನೈದು ವರ್ಷದ ಹಿಂದೆಯೇ ತೀರಿಕೊಂಡಿರುವ ವಿಷಯವನ್ನು ಅದರಲ್ಲಿ ಪ್ರಸ್ತಾಪಿಸಲಾಗಿತ್ತು. ಅದನ್ನು ಓದಿ ಜೆರ್ರಿಗೆ ತನ್ನ ದೇಹದ ಒಂದಂಶವೇ ಆವಿಯಾಗಿ ಹಾರಿಹೋದಂತೆ ಅನ್ನಿಸಿತು. ಕುಸಿದುಬಿಟ್ಟಳು.

ತೀರಿಕೊಂಡ ಮಗನಿಗೆ ಅಂತಿಮ ನಮನ ಸಲ್ಲಿಸಬೇಕೆಂದು ಜೆರ್ರಿ ತನ್ನ ಮಕ್ಕಳೊಡನೆ ಅಂತಿಮ ಸಂಸ್ಕಾರ ನಡೆದ ಸ್ಥಳಕ್ಕೆ ಹೋದಳು. ಅಲ್ಲಿ, ತನ್ನ ಮಗನ ಮರಣದ ದಾಖಲೆಗಳನ್ನು ಪರಿಶೀಲಿಸಿದಳು. ಸಮಾಧಿಯ ಕಛೇರಿಯಲ್ಲಿ, ಡೆನ್ನಿಸ್ ಮರಣಪತ್ರದ ಜೊತೆಗೆ, ಮರುದಿನ ಪ್ರಕಟವಾಗಿದ್ದ ಒಂದಷ್ಟು ಪತ್ರಿಕಾಸುದ್ದಿಯ ತುಣುಕುಗಳನ್ನೂ ಕತ್ತರಿಸಿ ಅದೇ ಫೈಲಿನಲ್ಲಿ ಇಟ್ಟಿದ್ದರು. ಹದಿನೈದು ವರ್ಷಗಳ ಪ್ರಾಯ ಆ ಪತ್ರಿಕಾ ತುಂಡುಗಳ ಮೇಲೆಯೂ ಸವಾರಿ ಮಾಡಿದ್ದುದರಿಂದ, ಅವುಗಳ ಕೆಲ ಸಾಲು-ಅಕ್ಷರಗಳು ಮಾಸಿಹೋಗಿದ್ದವು. ಎಲ್ಲೋ ಅಲ್ಲಿಲ್ಲಿ ಒಂದೆರಡು ಸಾಲುಗಳಷ್ಟೇ ಇನ್ನೂ ಅಚ್ಚಳಿಯದೆ ಉಳಿದಿದ್ದವು. ಅಲ್ಲಿ ಕಂಡ ಒಂದು ತುಣುಕಿನಲ್ಲಿ ಬಂದ ಸುದ್ದಿಯ ಒಂದು ಸಾಲು ಜೆರ್ರಿಯ ಕಣ್ಣನ್ನು ಗಕ್ಕನೆ ಹಿಡಿದು ನಿಲ್ಲಿಸಿತು. “ದೇಹದಲ್ಲಿ ಹಲವಾರು ಗೀರು ಮತ್ತು ಜಜ್ಜುಗಾಯಗಳಿವೆ ಎಂದು ವೈದ್ಯರು ಹೇಳಿದ್ದಾರೆ” ಎಂಬ ವಾಕ್ಯ ಓದಿದ ಜೆರ್ರಿಗೆ ಇಲ್ಲೇನೋ ಇದೆ, ಇದ್ಯಾವುದೋ ಬೇರೆ ಕತೆ ಹೇಳುತ್ತಿದೆ ಎಂದು ಅನ್ನಿಸಹತ್ತಿತು. ಅಲ್ಲದೆ “ಪೋಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ” ಎಂಬ ಸಾಲೂ ಇತ್ತು. ಕೂಡಲೇ ಜೆರ್ರಿ ತನ್ನ ಮಕ್ಕಳಿಗೆ, ಲೈಬ್ರರಿಗೆ ಹೋಗಿ ಹಳೆಯ ಪತ್ರಿಕೆಗಳ ಕಡತ ತೆಗೆದು ಏನಾಗಿದೆ ನೋಡಿ ಎಂದು ದುಂಬಾಲು ಬಿದ್ದಳು. ಅಷ್ಟು ವರ್ಷಗಳ ಹಿಂದಿನ ಪತ್ರಿಕೆಗಳನ್ನು ಲೈಬ್ರರಿಗಳಲ್ಲಿ ಕಷ್ಟಪಟ್ಟು ಹುಡುಕಿ ತೆಗೆದರೂ ಡೆನ್ನಿಸ್‍ನ ಸುದ್ದಿ ಮಾತ್ರ ಎಲ್ಲೂ ಕಾಣಲಿಲ್ಲ. “ಪೋಲೀಸರು ತನಿಖೆ ಎತ್ತಿಕೊಳ್ಳೋದಷ್ಟೇ. ಅದನ್ನು ಕೊನೆವರೆಗೆ ಕೆಳಹಾಕದೆ ದಡಮುಟ್ಟಿಸಿದ ಪ್ರಕರಣ ಯಾವುದಾದ್ರೂ ಇದೆಯಾ?” ಎಂದು ಈ ಪ್ರಯತ್ನ ನೋಡಿ, ಗ್ರಂಥಾಲಯದ ಜವಾನ ನಕ್ಕ.
ಈ ಸಾವು ರಾಮ್ಸೇ ಕೌಂಟಿ ಎಂಬ ಪ್ರದೇಶದಲ್ಲಿ ಆಗಿದ್ದರಿಂದ, ಜೆರ್ರಿ, ಆ ಕೌಂಟಿಯ ವೈದ್ಯಕೀಯ ಪರೀಕ್ಷಕರ ಆಫೀಸಿಗೆ ಫೋನ್ ಮಾಡಿ ತನ್ನ ಪ್ರವರ ಹೇಳಿಕೊಂಡು, ಹದಿನೈದು ವರ್ಷದ ಹಿಂದಿನ ಕೇಸನ್ನು ಮರುಪರಿಶೀಲಿಸಬೇಕು ಎಂದು ಕೇಳಿಕೊಂಡಳು. ಅಲ್ಲಿ ವೈದ್ಯಾಧಿಕಾರಿಯಾಗಿದ್ದ ಡಾ. ಮೈಕೆಲ್ ಮೆಕ್‍ಗೀ ಸ್ವಲ್ಪ ಖಡಕ್ ಮನುಷ್ಯ. ಆಲಸ್ಯ, ಅನಾಸಕ್ತಿಗಳನ್ನೆಲ್ಲ ಸಹಿಸುವವರಲ್ಲ. ಫೋನ್‍ನಲ್ಲಿ ಮಾತಾಡುತ್ತಿದ್ದ ಜೆರ್ರಿಯ ಅಂತಃಕರಣದ ನೋವು ಮೆಕ್‍ಗೀಯವರಿಗೆ ತಟ್ಟಿರಬೇಕು. ಮಾತು ಮುಗಿಸಿದವರೇ ತಾನಾಗಿ ಆ ಕೇಸನ್ನು ಮತ್ತೆ ತೆರೆಯುವ ಕಾಳಜಿ ತೋರಿಸಿದರು. ಡೆನ್ನಿಸ್‍ನ ಶವಪರೀಕ್ಷೆಯ ವರದಿಯನ್ನು ಹುಡುಕಿ ತೆಗೆದರು. ಆ ವರಿದಯನ್ನಿಟ್ಟಿದ್ದ ಫೈಲಿನೊಳಗೆ, ಅವನ ಶವದ ಮೂರ್ನಾಲ್ಕು ಫೋಟೋಗಳನ್ನೂ ಇಡಲಾಗಿತ್ತು. ಫೋಟೋ ನೋಡಿದ ವೈದ್ಯರು ಸ್ತಂಭೀಭೂತರಾದರು. ಯಾಕೆಂದರೆ, ಡೆನ್ನಿಸ್‍ನ ಹಣೆಯ ಮೇಲೆ ನಟ್ಟನಡುವಿನಲ್ಲಿ ಸುತ್ತಿಗೆಯಿಂದಲೋ ಮೊಳೆಯಿಂದಲೋ ಹೊಡೆದಂತಹ ಜಜ್ಜುಗಾಯ ಇತ್ತು. ಅವನ ಇಡೀ ದೇಹ ನೋಡಿದಾಗ, ಹುಡುಗ ನಾಲ್ಕೈದು ದಿನ ಅನ್ನನೀರು ಬಿಟ್ಟು ಉಪವಾಸ ಕೂತಂತೆ ಕಾಣುತ್ತಿದ್ದ. ಅವನ ಹೊಟ್ಟೆ ಒಂದೆಡೆಗೆ ವಾಲಿದಂತಿತ್ತು. ಹಣೆ, ಮುಖ, ಕೆನ್ನೆ, ಕಿವಿಗಳ ಪಕ್ಕದಲ್ಲಿ ಸ್ಪಷ್ಟವಾಗಿ ಏನೆಂದು ಹೇಳಲಾಗದ ಗಾಯದ ಗುರುತುಗಳಿದ್ದವು. ಶವದ ಇಡೀ ಚಹರೆಯನ್ನು ನೋಡಿದ ವೈದ್ಯ ಮೆಕ್‍ಗೀ ಹೇಳಿದ್ದೊಂದೇ ಮಾತು – ಇದು ಸಹಜಸಾವಲ್ಲ; ಕೊಲೆ!

**
ರಾಮ್ಸೇ ಕೌಂಟಿಯ ವೈದ್ಯಾಧಿಕಾರಿ ಮೆಕ್‍ಗೀ, ಮುಂದಿನ ತನಿಖೆಗಾಗಿ ತನಗೆ ಶವವನ್ನು ಕಣ್ಣಾರೆ ನೋಡಬೇಕಾಗಿದೆ, ಮರುಪರೀಕ್ಷೆಗೆ ಒಳಪಡಿಸಬೇಕಾಗಿದೆ ಎಂದು ಆದೇಶ ಹೊರಡಿಸಿದರು. ಅವರ ಆಣತಿಯಂತೆ, ಸಮಾಧಿಯಲ್ಲಿ ತಣ್ಣಗೆ ಮಲಗಿದ್ದ ಡೆನ್ನಿಸ್‍ನ ಶವಪೆಟ್ಟಿಗೆಯನ್ನು ಹೊರತೆಗೆಯಲಾಯಿತು. ಅದನ್ನು ತೆರೆದು ನೋಡಿದಾಗ, ವೈದ್ಯರು ಮಾತ್ರವಲ್ಲ ಅಲ್ಲಿದ್ದ ಎಲ್ಲರಿಗೂ ಆಶ್ಚರ್ಯವಾಗುವಂತಹ ದೃಶ್ಯ ಕಂಡಿತು. ಅದೇನೆಂದರೆ, ಅಷ್ಟು ವರ್ಷದ ಸಮಯದಲ್ಲಿ ಸಂಪೂರ್ಣ ಕೊಳೆತು ಮೂಳೆಯಷ್ಟೇ ಉಳಿಯಬೇಕಾಗಿದ್ದ ಡೆನ್ನಿಸ್‍ನ ಶವ ಈಜಿಪ್ಟಿನ ಮಮ್ಮಿಗಳಂತೆ ಇನ್ನೂ ಕೊಳೆಯದೆ ಉಳಿದಿತ್ತು! ಅವನಿಗೆ ತೊಡಿಸಿದ್ದ ಬಟ್ಟೆಗಳು, ಕೈಕಾಲಿನ ಮಾಂಸ, ಎದೆಯ ನೆಣ, ತಲೆಮೇಲಿನ ಕೂದಲು, ಮುಖಚರ್ಯೆ – ಎಲ್ಲವೂ ಹಾಗೇ ಉಳಿದುಬಿಟ್ಟಿದ್ದವು! ಹೆಚ್ಚೆಂದರೆ, ಈ ದೇಹ ಪ್ರಾಣ ತ್ಯಜಿಸಿ ಒಂದೆರಡು ದಿನ ಆಗಿದೆ ಅಷ್ಟೆ ಎನ್ನುವಷ್ಟು ತಾಜಾಸ್ಥಿತಿಯಲ್ಲಿ ಡೆನ್ನಿಸ್ ಅಲ್ಲಿ ಮಲಗಿದ್ದ! ಪೆಟ್ಟಿಗೆ ತೆರೆದವರು ಉಗುಳು ನುಂಗಿಕೊಂಡರು. ಆ ಶವದ ಕಿವಿಯ ಬಳಿ ಉಗುರಿನ ಕಲೆಗಳನ್ನು ಇನ್ನೂ ಸ್ಪಷ್ಟವಾಗಿ ಗುರುತಿಸಬಹುದಾಗಿತ್ತು. ಮುಖ, ಮೂಗು, ಹಣೆ, ಕತ್ತು, ಎದೆ, ಹೊಟ್ಟೆಗಳಲ್ಲಿ ಯಾವುದೋ ಬಲವಾದ ವಸ್ತುವಿನಿಂದ ಜಜ್ಜಿದ ಗುರುತುಗಳಿದ್ದವು. ಮರ್ಮಾಂಗದ ತುದಿಯಲ್ಲಿ ಕಚ್ಚಿದ ಗುರುತುಗಳಿದ್ದವು. ವೃಷಣಗಳನ್ನು ಉದ್ದದ ಉಗುರುಗಳಿಂದ ಗೀರಿತೆಗೆದ ಗಾಯ ಇನ್ನೂ ಸ್ಪಷ್ಟವಾಗಿ ಕಾಣುತ್ತಿತ್ತು. ಬೆನ್ನು, ಪೃಷ್ಟಗಳ ಭಾಗದಲ್ಲೂ ಟಗರು ಅಥವಾ ಕಾಡುಕೋಣ ಗುದ್ದಿದಾಗ ಏಳುವಂತಹ ಮಾಯದ ಕಲೆಗಳು ಇನ್ನೂ ಇದ್ದವು. ಈ ಹುಡುಗನನ್ನು ನಾಲ್ಕಾರು ದೈತ್ಯರು ಪುಟ್‍ಬಾಲಿನಂತೆ ಕಲ್ಲಿನ ಗೋಡೆಗೆ ಎತ್ತೆತ್ತಿ ಒಗೆದಿದ್ದಾರೆ ಎಂದು ಮೇಲುಮೇಲಕ್ಕೆ ಯಾರೂ ಹೇಳಬಹುದಾದಂತಹ ಸನ್ನಿವೇಶ ಅದು.

ಮೆಕ್‍ಗೀ ಆ ರಾತ್ರಿಯಿಡೀ ಡೆನ್ನಿಸ್‍ನ ಶವಪರೀಕ್ಷೆ ಮಾಡಿದರು. ಇದರಿಂದ ಅವರಿಗೆ ತಿಳಿದುಬಂದ ಸತ್ಯ ಬೇರೆಯೇ ಇತ್ತು. ಈ ಮಗು ತಾನಾಗಿ ಕೆಳಗೆ ಬಿದ್ದು ಗಾಯ ಮಾಡಿಕೊಂಡು ಸಾವಿಗೀಡಾಗಿದೆ ಎಂಬ ವರದಿ ಸುಳ್ಳು. ಮಗುವನ್ನು ನೆಲಕ್ಕೋ ಗೋಡೆಗೋ ಒತ್ತಿಹಿಡಿದು ಬಲವಾಗಿ ಗುದ್ದಲಾಗಿದೆ. ಆ ಹೊಡೆತಕ್ಕೆ ಮಗುವಿನ ದೇಹದೊಳಗೆ ಆಘಾತದಲೆ ಸೃಷ್ಟಿಯಾಗಿದೆ. ಸಾಯುವ ಹೊತ್ತಿಗೆ ಮಗುವಿನ ಇಡೀ ಮೈ ನೀಲಿಗಟ್ಟಿಹೋಗಿತ್ತು. ಕೈಕಾಲುಗಳಲ್ಲಿ ಯಾವುದೇ ಬಲ ಇರಲಿಲ್ಲ. ಬಲವಾದ ಗುದ್ದಾಟಗಳಿಂದ ಒಳಗಿನ ಕರುಳು ಕಿವುಚಿಕೊಂಡು ಕಿಬ್ಬೊಟ್ಟೆ ಒಡೆದು ಮಗು ಪ್ರಾಣ ಬಿಟ್ಟಿದೆ ಎಂದು ಮೆಕ್‍ಗೀ ಹೊಸದಾಗಿ ವರದಿ ಬರೆದರು. ಹದಿನೈದು ವರ್ಷದ ಹಿಂದೆ ಮುಚ್ಚಿಹೋಗಿದ್ದ ಕೇಸಿನ ಎಲ್ಲ ಫೈಲುಗಳೂ ಮತ್ತೆ ತೆರೆಯಲ್ಪಟ್ಟವು.

**
ಡೆನ್ನಿಸ್‍ಗೆ ಒದಗಿದ ಅವಸ್ಥೆಗೆ ಕಾರಣ ಏನು ಎಂದು ಹೇಳಬಹುದಾಗಿದ್ದ ವ್ಯಕ್ತಿಗಳು ಮೂರೇ ಜನ. ಅವನ ತಂದೆತಾಯಿಯರು ಮತ್ತು ಅಣ್ಣ ರಾಬರ್ಟ್. ಬಹುಶಃ ಇಷ್ಟೆಲ್ಲ ಆಗುವ ಹೊತ್ತಿಗೆ ರಾಬರ್ಟ್‍ಗೂ ಇದೆಲ್ಲ ಸಾಕು ಅಂತ ಅನ್ನಿಸಿರಬೇಕು. ಅವನು, ಡೆನ್ನಿಸ್‍ನ ಸಾವಿಗೆ ತನ್ನ ತಾಯಿ ಲೊಯಿಸ್‍ಳೇ ಕಾರಣ ಎಂದು ನೇರವಾಗಿ ಹೇಳಿಕೆ ಕೊಟ್ಟ. ವಿಚಾರಣೆಗಾಗಿ ಲೊಯಿಸ್‍ಳನ್ನು ಬಂಧಿಸಿ ಕೋರ್ಟಿಗೆ ಹಾಜರುಪಡಿಸಲಾಯಿತು. ಅಲ್ಲಿ ರಾಬರ್ಟ್ ಹೇಳಿದ್ದಿಷ್ಟು: ಲೊಯಿಸ್‍ಳನ್ನು ತಾಯಿ ಎನ್ನುವುದು ಬಿಡಿ, ಮನುಷ್ಯಜಾತಿಗೆ ಸೇರಿದವಳು ಎನ್ನುವುದೇ ದೊಡ್ಡ ಅಪರಾಧ. ಅವಳು ಡೆನ್ನಿಸ್‍ನ ಮೇಲೆ ನಡೆಸುತ್ತಿದ್ದ ಅತ್ಯಾಚಾರಗಳನ್ನು ಮನುಷ್ಯನಾದ ಬೇರೆ ಯಾವ ವ್ಯಕ್ತಿಯೂ ಮಾಡಿರಲಿಕ್ಕೆ ಸಾಧ್ಯವೇ ಇಲ್ಲ. ಡೆನ್ನಿಸ್ ಇನ್ನೂ ಎರಡು ವರ್ಷದ ಕೂಸಾಗಿದ್ದಾಗ ಲೊಯಿಸ್ ಅವನ ಬಾಯಿಗೆ ಕಾಡುಮೂಲಂಗಿ ತುರುಕಿಸುತ್ತಿದ್ದಳು. ಮಗು ಉಸಿರುಗಟ್ಟಿ ಜೋರಾಗಿ ಅತ್ತರೆ ದನಕ್ಕೆ ಹೊಡೆದಂತೆ ಬಡಿಯುತ್ತಿದ್ದಳು. ಮೂಲಂಗಿಯ ಕಹಿ ಮತ್ತು ಖಾರಕ್ಕೆ ಮಗು ಅಸಹ್ಯಪಟ್ಟು ವಾಂತಿ ಮಾಡಿಕೊಂಡರೆ, ಆ ವಾಂತಿಯನ್ನೇ ಮತ್ತೆ ಮಗುವಿಗೆ ತಿನ್ನಿಸುತ್ತಿದ್ದಳು. ಈ ಮಗು ತನ್ನ ವಯಸ್ಸಿಗೆ ಮೀರಿದ ಮಾಂಸ ತುಂಬಿಕೊಂಡು ದಪ್ಪನೆ ಕಾಣುತ್ತಿದೆ ಎಂಬ ಭ್ರಮೆಯಿಂದ, ಡೆನ್ನಿಸ್‍ನನ್ನು ಕೆಲವು ಸಲ ನಾಲ್ಕೈದು ದಿನ ಏನೂ ಕೊಡದೆ ಉಪವಾಸ ಕೆಡವುತ್ತಿದ್ದಳು. ಹೀಗಾಗಿ, ಒಂದು ವರ್ಷದ ಮಗು ಮೂರೂವರೆ ವರ್ಷವಾದಾಗ ಅದರ ತೂಕದಲ್ಲಿ ಆದ ವ್ಯತ್ಯಾಸ ಕೇವಲ ಮೂರು ಪೌಂಡು! ಲೊಯಿಸ್, ಶಿಕ್ಷೆಯ ಹೆಸರಲ್ಲಿ ಡೆನ್ನಿಸ್‍ನ ಮರ್ಮಾಂಗಕ್ಕೆ ಬರೆ ಹಾಕುತ್ತಿದ್ದಳು. ಎರಡು ವರ್ಷದ ಮಗುವಾಗಿದ್ದಾಗ, ಅವನು ಬಟ್ಟೆಯಲ್ಲಿ ಉಚ್ಚೆ ಹೊಯ್ದುಕೊಳ್ಳುತ್ತಾನೆಂದು, ಮರ್ಮಾಂಗಕ್ಕೆ ಕ್ಲಿಪ್ ಹಾಕಿಬಿಟ್ಟಿದ್ದಳು! ಒಂದೆರಡು ಸಲ ಹೊರಗೆ ಚರ್ಚಿನ ಸಮಾರಂಭದಲ್ಲಿ ಕುಟುಂಬಸಮೇತ ಪಾಲ್ಗೊಳ್ಳಬೇಕಾಗಿ ಬಂದಾಗ, ಲೊಯಿಸ್ ಡೆನ್ನಿಸ್‍ನಿಗೆ ಕಪ್ಪುಕನ್ನಡಕ ತೊಡಿಸಿದ್ದಳು. ಚಿತ್ರಹಿಂಸೆಯಿಂದ ಕಂಗಾಲಾಗಿ ಹೋಗಿರುವ ಹುಡುಗನ ಕಪ್ಪುಗಟ್ಟಿದ ಕಣ್ಣುಗಳನ್ನು ಯಾರಾದರೂ ನೋಡಿಬಿಟ್ಟರೆ ಎಂಬ ಭಯ ಅವಳನ್ನು ಕಾಡುತ್ತಿತ್ತೇನೋ.

ಎಲ್ಲಕ್ಕಿಂತ ಕ್ರೂರವಾಗಿದ್ದ ಸಂಗತಿ ಎಂದರೆ, ಲೊಯಿಸ್ ಡೆನ್ನಿಸ್‍ನನ್ನು ಒಗೆವ ಬಟ್ಟೆಯಂತೆ ಎತ್ತೆತ್ತಿ ಒಗೆಯುತ್ತಿದ್ದಳು. ತುಂಬಿದ ನೀರಿನ ತೊಟ್ಟಿಯಲ್ಲಿ ಅವನ ಮುಖ ಮುಳುಗಿಸಿಹಾಕಿ, ಅವನು ಸಹಾಯಕ್ಕಾಗಿ ಕಿರುಚುವಂತೆ ಮಾಡುತ್ತಿದ್ದಳು. ಎರಡುವರ್ಷದ ಮಗುವಿಗೆ ಚರ್ಚಿನ ಪ್ರಾರ್ಥನೆ ಹೇಳಲು ಬರಲಿಲ್ಲ ಎಂಬ ಕಾರಣಕ್ಕೆ ಅದರ ಮೊಣಗಂಟಿಗೆ ಬರೆಹಾಕಿ, ಅದೇ ಮೊಣಗಂಟೂರಿ ಮನೆಯಲ್ಲಿ ನಡೆಯುವಂತೆ ಮಾಡಿದ್ದಳು. ಇವೆಲ್ಲವನ್ನೂ ತನ್ನ ಮಗು ಶಿಸ್ತಿನಿಂದ ಬದುಕುವಂತೆ ಮಾಡಲು ತಾನು ಕೊಡುತ್ತಿರುವ ಪಾಠ ಎಂದೇ ಲೊಯಿಸ್ ಭಾವಿಸಿದ್ದಳು. ಹೊಡೆತ, ಒದೆತ, ಕತ್ತಿಯಲ್ಲಿ ಗಾಯ, ಕಿವಿಗಳಿಂದ ಎಳೆತ, ಮರ್ಮಾಂಗದ ಮೇಲೆ ಬರೆ – ಇವೆಲ್ಲದರಿಂದ ಆ ಮಗುವಿಗೆ ನರಕದ ಮೇಲಿನ ಭಯವೇ ಹೊರಟುಹೋಗಿತ್ತೆಂದು ಕಾಣುತ್ತದೆ. ಹುಟ್ಟಿದ ಒಂದು ವರ್ಷ ದಾದಿಯರ ಮುದ್ದಿನ ಮಗುವಾಗಿ ಬೆಳೆದಿದ್ದ ಆ ಕಂದಮ್ಮನಿಗೆ, ಜರ್ಗಿನ್ಸ್ ಮನೆಯಲ್ಲಿ ಕಳೆದ ಎರಡೂವರೆ ವರ್ಷಗಳೇ ನೂರುವರ್ಷಗಳ ನರಕಯಾತನೆ ದಯಪಾಲಿಸಿದವು. ರಾಬರ್ಟ್‍ನ ವಿವರಣೆ ಕೇಳಿ, ವೈದ್ಯರು ತೋರಿಸಿದ ಶವದ ಚಿತ್ರಗಳನ್ನು ನೋಡಿದವರಿಗೆ ಕೋರ್ಟಿನೊಳಗೆ ಶವಾಗಾರದ ಹಳಸುಗಾಳಿ ಸುಳಿದುಹೋದಂತೆ ಅನ್ನಿಸಿ ವಾಕರಿಕೆ ಬಂತು. ಮಿನ್ನೆಸೋಟದ ಸುಪ್ರೀಂಕೋರ್ಟು, ಲೊಯಿಸ್‍ಗೆ ಗರಿಷ್ಠ 25 ವರ್ಷಗಳ ಜೈಲುಶಿಕ್ಷೆ ವಿಧಿಸಿತು. ಸನ್ನಡತೆಯ ಆಧಾರದ ಮೇಲೆ ಎಂಟು ವರ್ಷಗಳ ನಂತರ ಲೊಯಿಸ್ ಬಿಡುಗಡೆಯಾಗಿ ಹೊರಗೆ ಬಂದಳು.

**

ಲೊಯಿಸ್ ಮೊದಲಿಂದಲೂ ಮಾನಸಿಕ ಅಸ್ವಸ್ಥ ರೋಗಿಯಾಗಿದ್ದಳು ಎಂದು ಅವಳ ಮೆಡಿಕಲ್ ರಿಪೋರ್ಟ್‍ಗಳು ಹೇಳುತ್ತಿದ್ದವು. “ಈ ಹೆಂಗಸು ಮಗುವನ್ನು ಹೆರುವ ಅಥವಾ ದತ್ತುಪಡೆಯುವ ಸ್ಥಿತಿಯಲ್ಲಿಲ್ಲ. ಹಾಗಾಗಿ, ಇವೆರಡಕ್ಕೂ ಅವಕಾಶ ಕೊಡಬಾರದು” ಎಂದು ವೈದ್ಯರ ನೋಟೀಸು ಸ್ಪಷ್ಟವಾಗಿ ಹೇಳುತ್ತಿತ್ತು. ತಾನೊಬ್ಬ ಆದರ್ಶ ಗೃಹಿಣಿ ಎಂದೇ ಬಿಂಬಿಸಿಕೊಳ್ಳುತ್ತಿದ್ದ ಲೊಯಿಸ್‍ಗೆ, ಮಕ್ಕಳನ್ನು ಹೊಂದುವಂತಿಲ್ಲ ಎನ್ನುವುದು ಆಘಾತಕಾರಿ ಸಂಗತಿಯಾಗಿತ್ತು. ಮಕ್ಕಳಿಲ್ಲವೆಂದರೆ ತನ್ನ ಆದರ್ಶದ ಇಮೇಜಿಗೆ ದಕ್ಕೆ ಎಂದು ಭಾವಿಸಿದವಳು, ಹತ್ತಿರದ ಅನಾಥಾಶ್ರಮದ ಅಧಿಕಾರಿಗಳನ್ನು ಹೇಗುಹೇಗೋ ಪುಸಲಾಯಿಸಿ ರಾಬರ್ಟ್‍ನನ್ನು ದತ್ತುಪಡೆಯುವಲ್ಲಿ ಯಶಸ್ವಿಯಾಗಿದ್ದಳು. ಅವನನ್ನು ಎರಡುವರ್ಷ ತುಂಬಾ ಚೆನ್ನಾಗಿ ನೋಡಿಕೊಂಡದ್ದನ್ನು ಗಮನಿಸಿದ ಅಧಿಕಾರಿಗಳು, ನಿಬಂಧನೆ ಸಡಿಲಿಸಿ, ಈಕೆಗೆ ದತ್ತುಪಡೆಯುವ ಅವಕಾಶ ಕಲ್ಪಿಸಿದರು. ಹಾಗೆ ಜರ್ಗಿನ್ಸ್ ಎಂಬ ನರಕಕೂಪಕ್ಕೆ ಡೆನ್ನಿಸ್ ಸೇರುವಂತಾಯಿತು.

ಡೆನ್ನಿಸ್‍ನ ಮರಣಾನಂತರವೂ ಲೊಯಿಸ್‍ಳ ಸ್ವಭಾವದಲ್ಲಿ ಯಾವ ಬದಲಾವಣೆಯೂ ಆಗಲಿಲ್ಲ. ತನ್ನ ಮಗನನ್ನು ಕಳೆದುಕೊಂಡ ಪಶ್ಚಾತ್ತಾಪ ಎಳ್ಳಿನ ಏಳುಭಾಗದಷ್ಟೂ ಅವಳ ಮುಖದಲ್ಲಿ ಕಾಣಿಸಲಿಲ್ಲ. ಡೆನ್ನಿಸ್ ತೀರಿಕೊಂಡ ಮೇಲೆ ಇನ್ನೊಂದು ಕುಟುಂಬದ ನಾಲ್ಕು ಮಕ್ಕಳನ್ನು ಒಂದೇ ಬಾರಿಗೆ ಜರ್ಗಿನ್ಸ್ ಕುಟುಂಬ ದತ್ತು ತೆಗೆದುಕೊಂಡಿತ್ತು. ಡೆನ್ನಿಸ್‍ಗೆ ಕೊಟ್ಟ ಎಲ್ಲ ಯಮಯಾತನೆಗಳನ್ನೂ ಆಕೆ ಆ ನಾಲ್ಕು ಹುಡುಗರಿಗೂ ಕೊಟ್ಟಿದ್ದಳು. ಕೊನೆಗೊಂದು ದಿನ ಸಮಯಸಾಧಿಸಿ, ಆ ನಾಲ್ವರೂ ಮನೆಬಿಟ್ಟು ಪರಾರಿಯಾಗಿ ಬದುಕುಳಿದರು. ಆದರೆ, ಲೊಯಿಸ್ ಮೇಲೆ ಯಾವ ಸೆಕ್ಷನ್‍ನಡಿಯಲ್ಲಿ ಪ್ರಕರಣ ದಾಖಲಿಸಬೇಕೆಂದೇ ಪೋಲೀಸರಿಗೆ ಗೊತ್ತಿರಲಿಲ್ಲ. ಯಾಕೆಂದರೆ, ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ಎಂಬ ಸೆಕ್ಷನ್ ಆಗ ಕಾನೂನಿನಲ್ಲಿ ಇನ್ನೂ ಸೇರ್ಪಡೆಯಾಗಿರಲಿಲ್ಲ!

ಡೆನ್ನಿಸ್‍ನ ಸಾವಿನಲ್ಲಿ ಲೊಯಿಸ್‍ಳ ಕೈವಾಡ ಇದೆ ಎನ್ನುವುದಕ್ಕೆ ಯಾವ ಪುರಾವೆ ಸಿಕ್ಕದಂತೆ ಮಾಡುವುದರಲ್ಲಿ ಅವಳ ಅಣ್ಣನ ಪಾಲು ಯಥೇಚ್ಛವಾಗಿತ್ತು ಎಂದು ಹೇಳಬಹುದು. ಡೆನ್ನಿಸ್‍ನ ಸಾವಿನ ಪ್ರಕರಣವನ್ನು ಕೈಗೆತ್ತಿಕೊಂಡದ್ದು ಹತ್ತಿರದ “ವೈಟ್ ಬೇರ್ ಲೇಕ್” ಪೋಲೀಸ್‍ಠಾಣೆ. ಅದರ ಮುಖ್ಯ ಅಧೀಕ್ಷಕನಾಗಿದ್ದವನು ಜೆರೋಮ್, ಲೊಯಿಸ್‍ನ ಖಾಸಾ ಅಣ್ಣ! ಪ್ರಕರಣ ಹಳ್ಳ ಹಿಡಿಯುವುದಕ್ಕೆ ಇಷ್ಟು ಸಾಕಾಗಿತ್ತು. ಆದರೂ ಸ್ಥಳೀಯರಿಗೆ ಈ ರುದ್ರಹೆಂಗಸಿನ ಅವತಾರಗಳ ಪರಿಚಯ ಇದ್ದದ್ದರಿಂದ, ಮೊದಲ ಮಗ ರಾಬರ್ಟ್‍ನನ್ನು ಬಲವಂತವಾಗಿ ಆಕೆಯಿಂದ ಬೇರ್ಪಡಿಸಿ, ಅವಳ ಅತ್ತೆಯ ಮನೆಯಲ್ಲಿ ಬಿಟ್ಟರು. ಇದರಿಂದ ಕುದ್ದು ಹೋದ ಲೊಯಿಸ್, ಅತ್ತೆ ಒಬ್ಬಳೇ ಮನೆಯಲ್ಲಿದ್ದಾಗ, ಇಡೀ ಮನೆಯನ್ನು – ಅತ್ತೆಯನ್ನೂ ಸೇರಿಸಿ – ಬೆಂಕಿಯಿಂದ ಬೂದಿಮಾಡಿಬಿಟ್ಟಳು! ಯಥಾಪ್ರಕಾರ, ಈ ಪ್ರಕರಣದಲ್ಲೂ ಲೊಯಿಸ್‍ನ ಕೈವಾಡ ಪೋಲೀಸ್ ಕಡತಗಳಲ್ಲಿ ದಾಖಲಾಗಲೇ ಇಲ್ಲ!

ಪ್ರಭಾವ ಬಳಸಿ, ಒಂದು ಕೊಲೆಯನ್ನು ಸಹಜಸಾವು ಎನ್ನುವಂತೆ ತಿರುಚಲು ಎಷ್ಟು ಶಕ್ತಿಗಳು ಜೊತೆಗೂಡಬಹುದು; ನ್ಯಾಯದಾನಕ್ಕೆ ಎಷ್ಟು ವರ್ಷ ಕಾಯಬೇಕಾಗಬಹುದು; ದುಷ್ಟರು ಕಾನೂನಿನ ಬಲಹೀನತೆಗಳನ್ನು ಹೇಗೆ ತಮ್ಮ ಅನುಕೂಲಕ್ಕೆ ಬಳಸಿಕೊಳ್ಳಬಹುದು; ಮರಣದ ಸುದ್ದಿಯಲ್ಲಿ ಬರುವ ಒಂದೆರಡು ಸಾಲುಗಳೇ ಹೇಗೆ ಪ್ರಕರಣದ ದಿಕ್ಕನ್ನು ಸಂಪೂರ್ಣವಾಗಿ ಬದಲಿಸಿಬಿಡಬಹುದು ಎನ್ನುವುದಕ್ಕೆ ಈ ಪ್ರಕರಣ ಜ್ವಲಂತಸಾಕ್ಷಿ ಎನ್ನಬಹುದು. ಡೆನ್ನಿಸ್ ಅವೊತ್ತು ಸಾಯದೆ ಇದ್ದರೆ ಏನಾಗುತ್ತಿತ್ತು? ಅವನು ಇನ್ನೂ ಆರೇಳು ವರ್ಷ ಈ ರಾಕ್ಷಸಿಯ ಕೈಯಲ್ಲಿ ಚಿತ್ರವಿಚಿತ್ರ ಶಿಕ್ಷೆಗಳನ್ನು ಅನುಭವಿಸಬೇಕಾಗುತ್ತಿತ್ತು. ಇದರಿಂದ ಸಂಪೂರ್ಣವಾಗಿ ಮಾನಸಿಕರೋಗಿಯಾದ ಡೆನ್ನಿಸ್ ಸೈಕೋಪಾತ್ ಆಗಿ ಬದಲಾಗುವ; ಮುಂದೆ ನೂರಾರು ಹೆಂಗಸರನ್ನು ಬರ್ಬರವಾಗಿ ಕೊಂದುಹಾಕುವ ಸಾಧ್ಯತೆಯೂ ಇತ್ತು. ಆದರೆ, ಅವೆಲ್ಲ ಸಂಭಾವ್ಯತೆಗಳನ್ನು ಅಳಿಸಿಹಾಕಿ ಅವನು ಐವತ್ತುವರ್ಷಗಳ ಹಿಂದೆಯೇ ಕಣ್ಣುಮುಚ್ಚಿ ತನ್ನ ಜೀವನಕ್ಕೆ ಮಂಗಳ ಹಾಡಿದ. ವಿಪರ್ಯಾಸ ನೋಡಿ – ಅವನನ್ನು ಯಮರೂಪಿಯಾಗಿ ಕಾಡಿದ ಲೊಯಿಸ್ 88 ವರ್ಷಗಳ ತುಂಬು ಜೀವನ ನಡೆಸಿ ಎರಡುವರ್ಷದ ಹಿಂದೆಯಷ್ಟೇ ತೀರಿಕೊಂಡಳು. ಪಾಪಿ ಚಿರಾಯು ಎಂಬ ಮಾತು ಕೊನೆಗೂ ಸುಳ್ಳಾಗಲಿಲ್ಲ!

Read more from ಲೇಖನಗಳು
12 ಟಿಪ್ಪಣಿಗಳು Post a comment
  1. anupavvanje
    ಏಪ್ರಿಲ್ 13 2015

    ಓದಲು ಸಾಧ್ಯವಾಗಲಿಲ್ಲ……………. ಕೆಲವು ತಿ೦ಗಳ ಹಿ೦ದೆಯಷ್ಟೇ ಈ ಘಟನೆಯ ಸಿನೆಮಾ ( A Child lost forever ) ನೋಡಿದ್ದೆ…………ಅತ್ಯ೦ತ ಕಷ್ಟ ಪಟ್ಟು…..ಎದೆಯನ್ನ ಕಲ್ಲು ಮಾಡಿಕೊಳ್ಳುತ್ತಾ….ಆದರೂ ಅಳುತ್ತಾ ಅಳುತ್ತಾ ನೋಡಿದೆ…..ಭಯಾನಕವೆನಿಸಿತ್ತು……ಉತ್ತರವೇ ಸಿಗದ…….ವಿವರಿಸಲೇ ಆಗದ ಹುಚ್ಚು ಮನಸ್ಸಿನ ಅವತಾರಗಳು ಹೊಟ್ಟೆ ತೊಳೆಸುತ್ತೆ…..ಅತ್ಯ೦ತ ಭಯ ಹುಟ್ಟಿಸುತ್ತೆ….. 😦 😦 😦

    ಉತ್ತರ
    • rohithmath
      ಏಪ್ರಿಲ್ 13 2015

      ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು. ನಾನು ಆ ಸಿನೆಮ ನೋಡಿಲ್ಲ. ನೋಡಬೇಕು.

      ಉತ್ತರ
  2. BNS
    ಏಪ್ರಿಲ್ 13 2015

    ಗೋಪಾಲಕೃಷ್ಣ ಅಡಿಗರ ಕವನ, ಗಣಿತ ಇಂತಹ ಸಂಕೀರ್ಣ ವಿಷಯಗಳ ಬಗ್ಗೆ ಬರೆಯುತ್ತಿದ್ದ ಶ್ರೀ ರೋಹಿತ್ ಚಕ್ರತೀರ್ಥ ಅವರ ಆಸಕ್ತಿ ಮತ್ತೊಂದು ಸಂಕೀರ್ಣ ವಿಷಯದತ್ತ ಹೊರಳಿದ್ದು ಕುತೂಹಲಕಾರಿಯಾಗಿದೆ. ನಿಮ್ಮ ಲೇಖನ ಓದಿದ ನಂತರ ವಿಕಿಪೀಡಿಯದಲ್ಲಿ Lois Jurgens ಬಗ್ಗೆ ಓದಿದಾಗ ವಿಷಯ ತಿಳಿಯಿತು.

    Child abuse ಬಗ್ಗೆ ಇರುವ ಅಧಿಕೃತ ನಿಲುವು ವಿಭಿನ್ನ ಸಮಾಜಗಳಲ್ಲಿ, ದೇಶಗಳಲ್ಲಿ ಬೇರೆ ಬೇರೆ ಮಿತಿಗಳನ್ನು ತಲುಪಿದರೂ ಸ್ಕ್ಯಾಂಡಿನೇವಿಯನ್ ದೇಶಗಳಾದ ನಾರ್ವೆ, ಮತ್ತು ಸ್ವೀಡನ್ ದೇಶಗಳಲ್ಲಿ ಸರ್ಕಾರಗಳು ಬಹಳ ನಿಷ್ಠುರ ರೂಪದಲ್ಲಿ ಇವೆ. ಮಕ್ಕಳಿಗೆ ಯಾವುದೇ ದೈಹಿಕ/ ಮಾನಸಿಕ ಹಿಂಸೆ ಮಾಡದಂತೆ ತಂದೆ ತಾಯಂದಿರಿಗೆ ಅತ್ಯಂತ ಕಟ್ಟುನಿಟ್ಟಿನ ನೀತಿಸಂಹಿತೆ ಈ ದೇಶಗಳಲ್ಲಿದೆ. ಇತ್ತೀಚಿನ ದಿನಗಳಲ್ಲಿ ಭಾರತೀಯ ಮೂಲದ ದಂಪತಿಗಳನ್ನು (ಆ ದಂಪತಿಗಳು ನಾರ್ವೇ ದೇಶದ ಪ್ರಜೆಗಳಲ್ಲ!) ಜೈಲಿಗೆ ದೂಡಿದ ಘಟನೆ ನೆನಪಿರಬಹುದು. ಈ ಪ್ರಸಂಗದಲ್ಲಿ ಆರೋಪಿಸಲಾದ ಹಿಂಸೆ ಎಂದರೆ ೭ ವರ್ಷದ ಬಾಲಕನಿಗೆ ತಂದೆ “ಭಾರತಕ್ಕೆ ವಾಪಸ್ ಕಳಿಸಿ ಬಿಡುತ್ತೇನೆ” ಎಂದು ಬೆದರಿಸಿದ್ದು!

    ಲೋಯಿಸ್ ಜರ್ಗೆನ್ಸ್ (Lois Jurgens) ಡೆನ್ನಿಸ್ ನನ್ನು ನಡೆಸಿಕೊಂಡ ರೀತಿ ಪೈಶಾಚಿಕ ಎನ್ನುವುದರಲ್ಲಿ ಸಂದೇಹವೇ ಇಲ್ಲ. ಆದರೆ ಸರಣಿ ಬಾಲ ದೂಷಣೆ (serial child abuse) ನಂತಹ ಗುರುತರ ಅಪರಾಧ – ೬ ಮಕ್ಕಳನ್ನು ಹೀಗೇ ಲೋಯಿಸ್ ಗೋಳುಹುಯ್ದುಕೊಂಡಿದ್ದು ನೆನಪಿಗೆ ಬರುತ್ತದೆ – ಸಂಬಂಧ ಪಟ್ಟ ಅಧಿಕಾರಿಗಳ ಗಮನದಿಂದ ತಪ್ಪಿಸಿಕೊಂಡಿದ್ದು ಸೋಜಿಗವೆನ್ನಿಸುತ್ತದೆ.

    ಉತ್ತರ
    • rohithmath
      ಏಪ್ರಿಲ್ 13 2015

      ಸೈಕಾಲಜಿ ನನ್ನ ಇನ್ನೊಂದು ಆಸಕ್ತಿಯ ಕ್ಷೇತ್ರ. ಮನಸ್ಸಿನ ಆಟಗಳ ಬಗ್ಗೆ, the dark side of human mind ಬಗ್ಗೆ ಆಗಾಗ ಬರೆಯುತ್ತಿರುತ್ತೇನೆ. ಕೆಲವು ವಿಷಯಗಳು ಬರೆಯಲಿಕ್ಕೇ ಆಗದಷ್ಟು ಭೀಕರವಾಗಿರುತ್ತವೆ.

      ಉತ್ತರ
  3. ಏಪ್ರಿಲ್ 13 2015

    ಯಬ್ಬ! ಈ ಉದ್ಗಾರವೊಂದೇ!

    ಉತ್ತರ
  4. aki
    ಏಪ್ರಿಲ್ 13 2015

    ನಿಮ್ಮ ಕಥೆಯಲ್ಲಿ ಒಂದೆರಡು ಅಂಶಗಳು ನನ್ನ ಗಮನ ಸೆಳೆದಿವೆ. ವಿದೇಶಗಳಲ್ಲೂ ಭಾರತದವರಂತೆ ಮದುವೆಯ ಮೊದಲ ಸಂತಾನವನ್ನು ಅನೈತಿಕ ಎಂದು ಪರಿಗಣಿಸುತ್ತಾರೆನ್ನುವದು. ವಿದೇಶಗಳಲ್ಲೂ ಭಾರತದಂತೆ ಕೆಲವು ಪ್ರಭಾವಿಗಳಿಂದ ಕೆಲವಂದು ಭಯಾನಕ ಹತ್ಯೆಗಳನ್ನು ನಡೆಸಿಯೂ ಕಾನೂನಿಂದ ನುಣುಚಿಕೊಳ್ಲಬಹುದೆಂದು. ವಿದೇಶಗಳಲ್ಲೂ ಮಕ್ಕಳಾಗದ ಹೆಣ್ನನ್ನು ಕಡೆಗಣಿಸಿ ಅವಳು ರಾಕ್ಷಸ ರೀತಿಯಂತೆ ವರ್ತಿಸುವದಕ್ಕೆ ಸಮಾಜ ಕಾರಣವಾಗುತ್ತದೆಂದು. ಒಟ್ಟಿನಲ್ಲಿ ಜಗತ್ತಿನ ಎಲ್ಲಾ ಕಡೆಗಳಲ್ಲೂ ಮಾನವ ಸ್ವಭಾವ ಒಂದೇ ತೆರನಾಗಿದೆ. ಕೇವಲ ಹೇಳಿಕೊಳ್ಲಲಷ್ಟೇ ತಾವು ಮುಂದುವರಿದವರೆಂಬ ಅಹಂಕಾರ ಅವರಿಗಿದೆ ಅಷ್ಟೇ ಅನ್ನಬಹುದು. ಇರಲಿ ಇಲ್ಲಿ ರಾಬರ್ಟ್ ಮತ್ತು ಡೆನ್ನಿಸ್ ಇಬ್ಬರೂ ಸಾಕು ಮಕ್ಕಳೇ ಇದ್ದರೂ ಆ ತಾಯಿ ಕೇವಲ ಡೆನ್ನಿಸ್ ನನ್ನು ವಿಪರೀತವಾಗಿ ಏಕೆ ನಡೆಸಿಕೊಂಡಳು? ಮತ್ತು ಕಥೆಯಲ್ಲಿ ಹೇಳುವಂತೆ ರಾಬರ್ಟ್ ಕೇವಲ ಐದು ವರ್ಷದ ಹಸುಳೆ ಮಾತ್ರವಿದ್ದರೂ ಅದು ಹೇಗೆ ಧೈರ್ಯದಿಂದ ಲೂಯಿಸ್ ಳ ಕ್ರೂರತೆಯನ್ನು ತೆರೆದಿಟ್ಟ? ಇದು ಸ್ವಲ್ಪ ನಂಬಲಸಾಧ್ಯವಾದರೂ ನಡೆಯಲಾರದ್ದೇನಲ್ಲ.

    ಉತ್ತರ
    • rohithmath
      ಏಪ್ರಿಲ್ 14 2015

      ಅಮೆರಿಕದ ಪೋಲೀಸ್ ವ್ಯವಸ್ಥೆಯಲ್ಲಿಯೂ ಬೇರೆ ದೇಶಗಳಲ್ಲಿ ಇರುವಷ್ಟೇ ಲೋಪದೋಷಗಳು ಇವೆ ಎನ್ನುವುದಕ್ಕೆ ನೂರಾರು ಉದಾಹರಣೆಗಳಿವೆ. ಕೆಲವೊಂದು ಸರಣಿ ಹತ್ಯೆಯ ಕೇಸುಗಳಲ್ಲಂತೂ ಪೋಲೀಸ್ ವ್ಯವಸ್ಥೆಯ ಬೇಜವಾಬ್ದಾರಿತನ ಜಗಜ್ಜಾಹೀರಾಗಿದೆ. (ಉದಾಹರಣೆಗೆ, ಗೇಸಿ ಎಂಬ ಸರಣಿ ಹಂತಕನ ಕೇಸಿನಲ್ಲಿ, ಒಟ್ಟು ೩೨ ಕೊಲೆ/ನಾಪತ್ತೆ ಪ್ರಕರಣಗಳನ್ನು ಪೋಲೀಸರು ನಿರ್ಲಕ್ಷ್ಯ ಮಾಡಿದ್ದರು.) ಇಲ್ಲೂ ಅಷ್ಟೆ, ಲೊಯಿಸ್-ಳ ಅಣ್ಣನೇ ಪೋಲೀಸ್ ಅಧಿಕಾರಿಯಾಗಿದ್ದರಿಂದ, ತನ್ನ ತಂಗಿಯ ಕೃತ್ಯವನ್ನು ಮುಚ್ಚಿಹಾಕಿ ಕೇಸ್ ಕ್ಲೋಸ್ ಮಾಡಿಸುವಲ್ಲಿ ಯಶಸ್ವಿಯಾದ. ಹದಿನೈದು ವರ್ಷಗಳ ಕಾಲ, ಕೊಲೆಯ ರಹಸ್ಯ ಮಣ್ಣಿನಲ್ಲಿ ಹೂತುಹೋಗಿತ್ತು.

      ಲೊಯಿಸ್-ಳಿಗೆ ಮಾನಸಿಕ ಸ್ತಿಮಿತ ಇಲ್ಲದೆ ಇದ್ದದ್ದು ಆಕೆಯ ಮನೆಯವರಿಗೆ ಗೊತ್ತಿದ್ದ ಸಂಗತಿಯೇ. ಆಕೆ ಮಗುವನ್ನು ಹಡೆಯುವುದು ಅಥವಾ ದತ್ತು ಪಡೆಯುವುದು ಅಪಾಯ ಎಂದು ವೈದ್ಯರು ಎಚ್ಚರಿಕೆಪತ್ರ ಕೊಟ್ಟಿದ್ದರು. ತಾನೂ ಉತ್ತಮ ತಾಯಿಯಾಗಬಲ್ಲೆ ಎಂದು ನಂಬಿಸಿ (ವೈದ್ಯರ ಪತ್ರಕ್ಕೆ ಬೆಲೆಕೊಡದೆ) ಆಕೆ ರಾಬರ್ಟ್-ನನ್ನು ದತ್ತು ಪಡೆದಳು. ಆತನನ್ನು ಚೆನ್ನಾಗಿ ನೋಡಿಕೊಂಡರಷ್ಟೇ ತನಗೆ ಮುಂದಿನ ದಾರಿ ಸುಗಮವಾಗುತ್ತದೆನ್ನುವುದು ಆಕೆಗೆ ಗೊತ್ತಿತ್ತು. ರಾಬರ್ಟ್-ನನ್ನು ಚೆನ್ನಾಗಿ ನೋಡಿಕೊಂಡದ್ದನ್ನು ನೋಡಿದ ವೈದ್ಯರೇ ತಮ್ಮ ಬಿಗಿಪಟ್ಟನ್ನು ಸಡಿಲಿಸಿ, ಆಕೆಗೆ ದತ್ತು ತೆಗೆದುಕೊಳ್ಳಲು ಅನುಮತಿ ಕೊಟ್ಟರು. ಹಾಗಾಗಿ, ಆಕೆ ತನ್ನ ಮೊದಲ ಮಗನನ್ನು ಗುರಾಣಿಯಂತೆ ಬಳಸಿಕೊಂಡಳು ಎನ್ನಬಹುದು.

      ಡೆನ್ನಿಸ್ ಮರಣಾನಂತರ, ರಾಬರ್ಟ್-ನನ್ನು ಆತನ ಅಜ್ಜಿಮನೆಗೆ ಸಾಗಿಸಲಾಯಿತು. (ಐದು ವರ್ಷ ಅವನು ಅಲ್ಲೇ ಇದ್ದ) ಅವನನ್ನು ಮರಳಿ ಪಡೆಯಲು ಲೊಯಿಸ್ ಬಹಳ ಪ್ರಯತ್ನ ಪಟ್ಟಳು. ಎಲ್ಲ ಯತ್ನಗಳೂ ನಿಷ್ಫಲವಾದಾಗ, ತನ್ನ ಅತ್ತೆಯನ್ನು – ಮನೆ ಸಮೇತ – ಸುಟ್ಟುಹಾಕಿದಳು!

      ರಾಬರ್ಟ್, ತನ್ನ ತಾಯಿಯ ಕ್ರೂರತೆಯನ್ನು ಪೋಲೀಸರು ಮತ್ತು ನ್ಯಾಯಾಲಯದೆದುರು ಬಿಚ್ಚಿಟ್ಟದ್ದು – ತನ್ನ ೨೭ನೇ ವಯಸ್ಸಿನಲ್ಲಿ. (ಡೆನ್ನಿಸ್-ನ ಕೊಲೆಯಾಗಿ ೨೨ ವರ್ಷಗಳ ನಂತರ)

      ಉತ್ತರ
  5. ಏಪ್ರಿಲ್ 14 2015

    ಭಯಾನಕ!

    ಉತ್ತರ
  6. sowmya
    ಏಪ್ರಿಲ್ 14 2015

    ಕ್ರೂರತೆಯ ಪರಮಾವಧಿ.

    ಉತ್ತರ
  7. ಮಲ್ಲಪ್ಪ
    ಏಪ್ರಿಲ್ 15 2015

    ರೋಹಿತ ಸರ್,
    ಮನುಷ್ಯನ ಜೀವನಕ್ಕೆ hardware ದೇಹವಾದರೆ software ಮನಸ್ಸು. ಜೀವನದ results ಈ ಎರಡರ combination. ಯಾವುದಾದರೂ ಒಂದು ಊನ total failure. ದೇಹದ ಕಾಯಿಲೆಯಂತೆ ಮನಸ್ಸಿಗೆ ಕಾಯಿಲೆಗಳು ಬರುತ್ತವೆ ಎನ್ನುವುದು ಅನೇಕರು ಇತ್ತೀಚೆಗೆ ಒಪ್ಪುತ್ತಿದ್ದಾರೆ.ದೇಹದ ಕಾಯಿಲೆಗಿಂತಲುೂ ಮಾನಸಿಕ ಕಾಯಿಲೆಯ effect ಗಂಭೀರವಾದದ್ದು. ಏಕೆಂದರೆ ಹೊರಗಡೆ ಏನೂ ಗೊತ್ತಾಗುವದಿಲ್ಲ.
    ಸರ್ ನಮ್ಮ ಅನುಭವದಾಳದಿಂದ ಇನ್ನಷ್ಟು ವಿಷಯಳು ಬರಲಿ. ಒಂದು request, ಜೊತೆಗೆ ವಿಷಯದ analysis ಮಾಡಿದರೆ ಒಳ್ಳೆಯದು.

    ಉತ್ತರ
  8. ಏಪ್ರಿಲ್ 16 2015

    ಓಹ್ !!! ಕೆಟ್ಟ ಮಕ್ಕಳು ಇರಬಹುದು, ಆದ್ರೆ ಕೆಟ್ಟ ತಾಯಿ ಎಂದಿಗೂ ಇರಲು ಸಾಧ್ಯವಿಲ್ಲ ಅಂತಾರೆ. ಆದ್ರೆ ಇಲ್ಲಿ ಸ್ವತಃ ಮಾನಸಿಕ ಸ್ವಾಸ್ಥ್ಯವಿಲ್ಲದ ಮಹಿಳೆಗೆ, ವ್ಯವಸ್ಥೆಯ ಭಾಗವಾಗಿರೋ ಅಣ್ಣನೂ ಸಿಕ್ಕು ಎಷ್ಟೆಲ್ಲಾ ಅವಾಂತರಗಳಿಗೆ ಕಾರಣವಾಯ್ತು ಅಂತ ಓದಿ ಬೇಜಾರಾಯ್ತು 😦

    ಉತ್ತರ
  9. timmanna bhat
    ಏಪ್ರಿಲ್ 21 2015

    ಚೆನ್ನಾಗಿ ಮೂಡಿ ಬರುತ್ತಿದೆ ನನ್ನ ಗೆಳೆಯರೆಲ್ಲರಿಗೆ ಓದಲು ಪ್ರೇರೇಪಿಸುತ್ತಿರುವೆ.

    ಉತ್ತರ

ನಿಮ್ಮ ಅನಿಸಿಕೆ...

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Note: HTML is allowed. Your email address will never be published.

Subscribe to comments