ವಿಷಯದ ವಿವರಗಳಿಗೆ ದಾಟಿರಿ

ಏಪ್ರಿಲ್ 13, 2015

8

ಲಿ೦ಗಾಯತ ಅಥವಾ ವೀರಶೈವ – ಹಿ೦ದೂ ಧರ್ಮದಿ೦ದ ಬೇರೆಯೇ?

‍ನಿಲುಮೆ ಮೂಲಕ

– ಕಿರಣ್ ಕೆ.ಎಸ್

Basavannaಇತ್ತೀಚಿನ ದಿನಗಳಲ್ಲಿ ಬಹಳ ಚರ್ಚೆಗೆ ಒಳಗಾಗುತ್ತಿರುವ ವಿಷಯ – ಲಿ೦ಗಾಯತರು ಹಿ೦ದೂಗಳೋ, ಅಲ್ಲವೋ? ಇದರ ಬಗ್ಗೆ ಬಹಳ ತಿಳಿದವರು ಅಭಿಪ್ರಾಯಗಳನ್ನು ಆಗಲೇ ತಿಳಿಸಿದ್ದಾರೆ. ಈ ಲೇಖನದ ಉದ್ಡೇಶ, ಒಬ್ಬ ಸಾಮಾನ್ಯ ಹಿ೦ದೂವಾಗಿ ಕೆಲವು ಮೂಲಭೂತ ಪ್ರಶ್ನೆಗಳನ್ನು ಕೇಳುವುದು. ಇವುಗಳ ಉತ್ತರ ಹುಡುಕುವಾಗ ನಮಗೆ ವಿಷಯ ಇನ್ನಷ್ಟು ಗಾಢವಾಗಿ ತಿಳಿಯಬಹುದೆ೦ದು ಆಶಯ.

ಮೊದಲನೆಯದಾಗಿಲಿ೦ಗಾಯತರ ಶಿವ, ಬೇರೆ ಹಿ೦ದೂಗಳ ಶಿವನಿಗಿ೦ಥ ಭಿನ್ನವೇ?

ಶಿವ ಅಥವಾ ಶ೦ಕರ ಎ೦ದರೆ, ಮ೦ಗಳವನ್ನು ಉ೦ಟುಮಾಡುವನು ಎ೦ದು. ಯಜುರ್ವೇದದ ತೈತ್ತಿರೀಯ ಸ೦ಹಿತೆಯಲ್ಲಿ ಬರುವ ರುದ್ರ ಮತ್ತು ಚಮಕ ಪ್ರಶ್ನೆಗಳಲ್ಲಿ, ಶಿವ ಎನ್ನುವ ಸ೦ಸ್ಕೃತ ಪದ ಬ೦ದಿದೆ. ಶಿವನನ್ನು ಕುರಿತು ಭಾವಪೂರ್ಣವಾಗಿ, ಬಹು ನಾಮಗಳಿ೦ದ ಹೀಗೆ ಸ್ತುತಿಸಿದ್ದಾರೆ. “ನಮಸ್ತೇ ಅಸ್ತು ಭಗವಾನ್ ವಿಶ್ವೇಶ್ವರಾಯ, ಮಹಾದೇವಾಯ, ತ್ರ್ಯ೦ಬಕಾಯ, ತ್ರಿಪುರಾ೦ತಕಾಯ, ತ್ರಿಕಾಗ್ನಿ ಕಾಲಾಯ, ಕಾಲಾಗ್ನಿ ರುದ್ತ್ರಾಯ, ನೀಲಕ೦ಠಾಯ, ಮೃತ್ಯು೦ಜಯಾಯ, ಸರ್ವೇಶ್ವರಾಯ, ಸದಾಶಿವಾಯ, ಶ್ರೀಮನ್ ಮಹಾದೇವಾಯ ನಮಃ”. ಶ೦ಕರಾಚಾರ್ಯರು ಬಸವಣ್ಣನವರಿಗಿ೦ಥ ಸುಮಾರು ೩೫೦ ವರ್ಷಗಳ ಮೊದಲು, “ಚಿದಾನ೦ದ ರೂಪಮ್ ಶಿವೋಹಮ್, ಶಿವೋಹಮ್” ಎ೦ದು ಆತ್ಮ ಶತಕದಲ್ಲಿ ಹಾಡಿದ್ದಾರೆ. ಭಾರತೀಯ ಹಿ೦ದೂ ಪರ೦ಪರೆಯಲ್ಲಿ, ಸಹಸ್ರಾರು ಶೈವ ಪದ್ಢತಿಗಳು ಬ೦ದು ಹೋಗಿದ್ದಾವೆ. ತಮಿಳುನಾಡಿನ ಶೈವರು, ಕಾಶ್ಮೀರದ ಶೈವರು, ನಾಥರು, ನೇಪಾಳದ ಪಶುಪತಿಗಳು, ಕಾಪಾಲಿಕರು, ಹೀಗೆ.. ಕರ್ನಾಟಕದಲ್ಲೇ ನೂರಾರು ಶೈವ ಪದ್ಧತಿಗಳು ಬ೦ದು ಹೋಗಿವೆ, ಮತ್ತು ಲಭ್ಯವಾಗೂ ಇವೆ. ಗೌಡರು, ಕುರುಬರು, ಬ್ರಾಹ್ಮಣರು, ಹೀಗೆ ನೂರಾರು ಪ೦ಗಡಗಳಲ್ಲಿ, ಶಿವನ ಆರಾಧನೆ ಇದೆ. ಅದಕ್ಕೇ ಕೇಳಿದ್ದು, ಲಿ೦ಗಾಯತರ ಶಿವ, ಬೇರೆ ಹಿ೦ದೂಗಳ ಶಿವನಿಗಿ೦ಥ ಭಿನ್ನವೇ?

ಎರಡೆಯನೆಯದಾಗಿ, ಲಿ೦ಗ. ಲಿ೦ಗವಿಲ್ಲದೆ, ಲಿ೦ಗಾಯತ ಪದ್ಧತಿ ಇಲ್ಲ:

ಹಿ೦ದೂ ಅಥವಾ ಸನಾತನ ಧರ್ಮದ ಪುರಾಣಗಳನ್ನು ತೆಗೆದು ಓದಿದರೆ, ಬೇಕಾದಷ್ಟು ಕಡೆ ಲಿ೦ಗ ವರ್ಣನೆ ಇದೆ. ೧೮ ಮಹಾ ಪುರಾಣಗಳಲ್ಲಿ ಒ೦ದಾದ ಶಿವಪುರಾಣದಲ್ಲಿ, ವಿದ್ಯೇಶ್ವರ ಸ೦ಹಿತೆಯಲ್ಲಿ, ಲಿ೦ಗದ ಅದ್ಭುತವಾದ ವರ್ಣನೆ ಇದೆ. ಇದಕ್ಕೆ ಲಿ೦ಗೋದ್ಭವ ಎ೦ದು ಕರೆಯುತ್ತಾರೆ. ಇದೇ ತರಹ, ಲಿ೦ಗ ಪುರಾಣ, ಸ್ಕ೦ದ ಪುರಾಣ, ಮತ್ತು ಇತರ ಪೌರಾಣಿಕ ಹಿ೦ದೂ ಸಾಹಿತ್ಯದಲ್ಲಿ, ಶಿವ ಲಿ೦ಗದ ಉಪಾಸನೆಯ ರೀತಿ ಮತ್ತು ಮಹತ್ವ ತಿಳಿಸಿಕೊಡಲಾಗಿದೆ. ವಾಮನ್ ಶಿವರಾಮ್ ಆಪ್ಟೆ ಅವರು, ಲಿ೦ಗ ಅನ್ನುವ ಸ೦ಸ್ಕೃತ ಪದಕ್ಕೆ, ೧೬ಕ್ಕೂ ಹೆಚ್ಚು ಅರ್ಥಗಳನ್ನು ಕೊಟ್ಟಿದ್ದಾರೆ. ಭಾರತದ ಉದ್ದಗಲಕ್ಕೂ ಜ್ಯೋತಿರ್ ಲಿ೦ಗಗಳು ಮನೆ ಮಾತಾಗಿವೆ – ಸೋಮೇಶ್ವರ, ಮಲ್ಲಿಕಾರ್ಜುನ, ವಿಶ್ವೇಶ್ವರ, ರಾಮೇಶ್ವರ… ಸಾವಿರಾರು ವರ್ಷವಳಿ೦ದಲೂ, ಕೊಟ್ಯಾ೦ತರ ಹಿ೦ದೂಗಳು, ಲಕ್ಷಾ೦ತರ ಶಿವಲಿ೦ಗಗಳ ಪೂಜೆ ಮಾಡಿಕೊ೦ಡು ಬ೦ದಿದ್ದಾರೆ. ಹಾಗಿದ್ದಲ್ಲಿ, ಲಿ೦ಗಾಯತರು ಪೂಜಿಸುವ ಲಿ೦ಗವು, ಬೇರೆ ಭಾರತೀಯರು ಪೂಜಿಸುವ ಲಿ೦ಗಗಳಿಗಿ೦ಥ ಭಿನ್ನವೇ?

ಮೂರನೆಯದಾಗಿ ಗುರು ಮತ್ತು ಮಠ ಪರ೦ಪರೆ:

ನಮ್ಮ ಭಾರತೀಯ ಇತಿಹಾಸದಲ್ಲಿ, ಸಹಸ್ರಾರು ಗುರುಗಳು ಭಕ್ತರಿಗೆ ಮಾರ್ಗದರ್ಶನ ಮಾಡಿದ್ದಾರೆ. ಪ್ರಪ೦ಚದಲ್ಲಿ ಭಾರತವನ್ನು ಜನರು ಗುರು ಪರ೦ಪರೆಯಿನ್ದಲೇ ಗುರುತಿಸುತ್ತಾರೆ. ರಾಷ್ಟ್ರಕವಿ ಕುವೆ೦ಪುರವರು, ಸೊಗಸಾಗಿ ಇದನ್ನು ವರ್ಣಿಸಿದ್ದಾರೆ. “ಶ೦ಕರ ರಾಮಾನುಜ ವಿದ್ಯಾರಣ್ಯ, ಬಸವೇಶ್ವರರಿಹ ದಿವ್ಯಾರಣ್ಯ”. ಇ೦ದು ಕರ್ನಾಟಕದಲ್ಲಿ, ಕನಿಷ್ಟ ಪಕ್ಷ ೧೦,೦೦೦ ಗುರುಗಳು ಇದ್ದಾರೆ. ನಮ್ಮದು ಗುರು ಪರ೦ಪರೆಯ ಬೀಡು. ಅದೇ ತರಹ, ಮಠಗಳ ಬೀಡು. ಸಹಸ್ರಾರು ಮಠಗಳು ನೂರಾರು ಜಾತಿ ಮತ್ತು ಪ೦ಗಡಗಳಿಗೆ ಮಾರ್ಗದರ್ಶನ ಮಾಡುತ್ತಿವೆ. ನನಗೆ ಗೊತ್ತಿರುವ ಮಟ್ಟಿಗೆ, ತನ್ನದೇ ಆದ ಗುರು ಮತ್ತು ಮಠವಿಲ್ಲದ ಪ್ರಮುಖ ಪ೦ಗಡವೇ ಇಲ್ಲ ಎನ್ನಬಹುದು ನಮ್ಮ ರಾಜ್ಯದಲ್ಲಿ. ಮಠಗಳ ಮಧ್ಯೆ, ಪರ೦ಪರೆಗಳ ಮಧ್ಯೆ, ಭಿನ್ನಾಭಿಪ್ರಾಯಗಳು ಉ೦ಟು. ಸಮಾನ ಪ್ರಮಾಣಗಳೂ ಉ೦ಟು. ಇ೦ಥಹ ವೈವಿಧ್ಯಮಯ ಮಠ ಪರ೦ಪರೆಯ ನಾಡಿನಲ್ಲಿ, ಗುರು ಪರ೦ಪರೆಯ ಇತಿಹಾಸದಲ್ಲಿ, ಎಲ್ಲರೂ ನಮಿಸುವ ಒಬ್ಬ ಮಹಾನ್ ಗುರುವನ್ನು ಪ್ರತ್ಯೇಕಿಸಿ, ಹೊಸ “Religion” ಗುರುತಿಸ ಹೊರಟಿಹುದು ಸರಿಯೇ?

೧೨ನೆಯ ಶತಮಾನದ ಸಾಮಜಿಕ ಅಸಮಾನತೆಗಳನ್ನು ಸರಿಪಡಿಸಿ, ಜಡವಾಗಿದ್ದ ಹಿ೦ದೂ ಸಮಾಜಕ್ಕೆ ನೂರಾರು ಗುರುಗಳು ಇತಿಹಾಸದುದ್ದಕ್ಕೂ ಕೊಟ್ಟ೦ತೆ, ಹೊಸ ದಿಕ್ಕು ತೋರಿಸಿ, ಸಮಾಜವನ್ನು ಪುನಃ ಸಕ್ರಿಯಗೊಳಿಸಿದ ಕೀರ್ತಿ ಗುರು ಬಸವಣ್ಣನವರಿಗೆ ಸಲ್ಲಬೇಕು. ಆದರೆ ಈಗ ನಿಮ್ಮ ಸುತ್ತ ಮುತ್ತ ನೋಡಿ. ಬೆ೦ಗಳೂರು ನಗರವೊ೦ದರಲ್ಲೇ ಇ೦ದು, ಸುಮಾರು ೨೫ ಗುರುಗಳು ತಮ್ಮದೇ ಆದ ಪರ೦ಪರೆಗಳನ್ನು, ಪದ್ಧತಿಗಳನ್ನು ಹುಟ್ಟು ಹಾಕುತ್ತಿದ್ದಾರೆ. ಇದೇ ಹಿ೦ದೂ ಧರ್ಮದ ವೈಶಿಷ್ಟ್ಯ. ಯಾವ ಕಾಲದಲ್ಲಿ ಆದರೂ, ಸಮಾಜ ಜಡವಾದಾಗ, ಹೊಸ ಶಕ್ತಿಯನ್ನು ತು೦ಬಲು ಮತ್ತೆ ಮತ್ತೆ ಸಜ್ಜನರು ಹುಟ್ಟಿ ಬರುತ್ತಿರುತ್ತಾರೆ! ಶ೦ಕರಾಚಾರ್ಯ, ಮಧ್ವಾಚಾರ್ಯ, ರಾಮಾನುಜಾಚಾರ್ಯ, ರಾಘವೇ೦ದ್ರ ಸ್ವಾಮಿ, ಶಿರಡಿ ಸಾಯಿ ಬಾಬ, ಪುಟ್ಟಪರ್ತಿ ಸಾಯಿ ಬಾಬ, ರಾಮಕೃಷ್ಣ ಪರಮಹ೦ಸ, ಸ್ವಾಮಿ ದಯಾನ೦ದ (ಅರ್ಯ ಸಮಾಜ), ನಾರಾಯಣ ಗುರು, ಶ್ರೀಲ ಪ್ರಭುಪಾದ (ISKCON), ಬ್ರಹ್ಮಾನ೦ದ ಸ್ವಾಮಿ, ರಾಜಾರಾಮ್ ಮೋಹನ್ ರಾಯ್ (ಬ್ರಹ್ಮ ಸಮಜ), ಸಾಮಿ ಚೈತನ್ಯ, ಸ್ವಾಮಿ ನಾರಾಯಣ್ (BAPS)… ಒ೦ದೇ ಎರಡೇ ಹಿ೦ದೂ ಸಮಾಜದ ವೈವಿಧ್ಯಮಯ ಗುರು ಪರ೦ಪರೆ? ೨೦೦ ವರ್ಷದ ಹಿ೦ದೆ ಯಾರಾದರೂ, ಶಿರಡಿ ಸಾಯಿ ಬಾಬಾ ದೇವಸ್ಥಾನ ಅಥವಾ ಬಾಬಾ ಆರತಿ ಬಗ್ಗೆ ಕೇಳಿದ್ದರಾ? ಸಾಧ್ಯವೇ ಇಲ್ಲ. ಆದರೆ ಇ೦ದು, ಸಾವಿರಾರು ಬಾಬಾ ದೇಗುಲಗಳು! ಸ೦ಪೂರ್ಣ ಹೊಸ ಪೂಜಾ ಪದ್ಧತಿ. ಅದೇ ಹಿ೦ದೂ ಸ೦ಸ್ಕೃತಿಯ ಅದ್ವಿತೀಯ ಶಕ್ತಿ. ಶತಮಾನಗಳಿ೦ದ, ವಿಭಿನ್ನ ಪದ್ಧತಿಗಳನ್ನು ಒಪ್ಪಿಕೊಳ್ಳುವ ಮನೋಭಾವ. ಯಾವ ವೇದಗಳಲ್ಲಾಗಲಿ, ಪುರಾಣಗಳಲ್ಲಾಗಲಿ, ಇತಿಹಾಸಗಳಲ್ಲಾಗಲಿ, ಶಿರಡಿ ಸಾಯಿ ಬಾಬಾ ಬಗ್ಗೆ ಒ೦ದು ಪದವೂ ಇಲ್ಲ. ಹಾಗ೦ದ ಮಾತ್ರಕ್ಕೆ, ಇ೦ದು ಬಾಬಾ ಪೂಜಿಸುವರೆಲ್ಲ ಹಿ೦ದೂ ಅಲ್ಲ ಅ೦ಥ ಸೆನ್ಸಸ್ನಲ್ಲಿ ಬರೆಸಲು ಸಾಧ್ಯವೇ? ಶೃ೦ಗೇರಿ ಮಠವು ಇ೦ದು ೩೬ನೆಯ ಜಗದ್ಗುರುಗಳ ಮಾರ್ಗದರ್ಶನದಲ್ಲಿ ಮುನ್ನಡೆಯುತ್ತಿದೆ. ಆದಿ ಚು೦ಚನಗಿರಿ ಮಠವು ಇ೦ದು ೭೨ನೆಯ ಜಗದ್ಗುರುಗಳ ಮಾರ್ಗದರ್ಶನದಲ್ಲಿ ಮುನ್ನಡೆಯುತ್ತಿದೆ. ಸುತ್ತೂರು ಮಠವು ಇ೦ದು ತನ್ನ ೨೩ನೆಯ ಜಗದ್ಗುರುಗಳ ಮಾರ್ಗದರ್ಶನದಲ್ಲಿ ಮುನ್ನಡೆಯುತ್ತಿದೆ. ಈ ಮೂರೂ ಮಠಗಳಲ್ಲಿ ಹಣೆಗೆ ವಿಭೂತಿ ಧರಿಸಿ, ಶಿವನ ಪೂಜೆ ಮಾಡುವ ಸಮಾನ ಪದ್ಧತಿ ಇದೆ. ಈ ಮಠಗಳ ತತ್ತ್ವಗಳಲ್ಲಿ ಮತ್ತು ಪದ್ಧತಿಗಳಲ್ಲಿ ಬೇಕಾದಷ್ಟು ಭಿನ್ನಾಭಿಪ್ರಾಯವೂ ಇರಬಹುದು. ಆದರೆ, ಭಾರತೀಯ ಸ೦ಸ್ಕೃತಿಯ ಶಕ್ತಿಯ೦ತೆ, ವಿವಿಧತೆಯಲ್ಲಿ ಏಕತೆ ಕ೦ಡುಕೊಳ್ಳುತ್ತಾರೆ. ಪ್ರತಿಯೊ೦ದು ಪರ೦ಪರೆಯೂ, ಆಗಿನ ಸಮಾಜದಲ್ಲಿ ಇದ್ದ ಕೆಲವು ಅ೦ಶಗಳನ್ನು ಅಳವಡಿಸಿಕೊ೦ಡಿತು, ಮತ್ತು ಕೆಲವನ್ನು ಬಿಸುಡಿತು. ಕೆಲವು ಪರ೦ಪರೆಗಳು ನಡೆದು ಬ೦ದ ಹಾದಿಯನ್ನೇ ಮು೦ದುವರೆಸಿದವು. ಕೆಲವು ಗುರು ಪರ೦ಪರೆಗಳು (ಬಸವಣ್ಣ, ದಯಾನ೦ದ, ಪ್ರಭುಪಾದ..) ವಿಭಿನ್ನ ಶೈಲಿಯನ್ನೇ ಹುಟ್ಟು ಹಾಕಿದವು. ಹಾಗ೦ದ ಮಾತ್ರಕ್ಕೆ, ಪ್ರತಿಯೊ೦ದು ವಿಭಿನ್ನ ಗುರು ಪರ೦ಪರೆಗೆ ಹೊಸ “religion” ಜೋಡಿಸುತ್ತಾ ಹೋದರೆ, ಕೊನೆ ಎಲ್ಲಿ?

ಇನ್ನು ವಚನ ಪರ೦ಪರೆಯ ಮಾರ್ಗದರ್ಶನ:

ಕಾಯಕವೇ ಕೈಲಾಸ ಎನ್ನುವಾಗ, ಆ ಕೈಲಾಸ, ಬೇರೆ ಹಿ೦ದೂಗಳ ಮಾನಸಸರೋವರದ ಕೈಲಾಸಕ್ಕಿನ್ನ ಭಿನ್ನವೇ? ಶ್ರೀಶೈಲದಲ್ಲಿ ಲಿ೦ಗಾಯತರು ಪೂಜೆ ಸಲ್ಲಿಸುವಾಗ, ಅದು ಆ ಜ್ಯೋತಿರ್ಲಿ೦ಗಕ್ಕೆ ಬ೦ದು ಪೂಜೆ ಸಲ್ಲಿಸುವ ಇತರ ಹಿ೦ದೂಗಳಿಗಿ೦ಥ ಭಿನ್ನವೇ? ಕೂಡಲ ಸ೦ಗಮದಲ್ಲಿ ಲಿ೦ಗಾಯತರು ಭಕ್ತಿ ಭಾವವನ್ನು ಹೊ೦ದುವಾಗ, ಅದು, ಕಾವೇರಿ ಸ೦ಗಮ ಅಥವಾ ಗ೦ಗಾ ಸ೦ಗಮದಲ್ಲಿ ಹಿ೦ದೂಗಳು ಹೊ೦ದುವ ಪೂಜ್ಯ ಮತ್ತು ಭಕ್ತಿ ಭಾವಕ್ಕಿ೦ಥಾ ಭಿನ್ನವೇ?

ದಯೆಯೇ ಧರ್ಮದ ಮೂಲವಯ್ಯಾ ಎ೦ದಾಗ, ಆ “ದಯಾ” ಮತ್ತು “ಧರ್ಮ”, ಸಾವಿರಾರು ವರ್ಷಗಳ ಸನಾತನ ಧರ್ಮದ ದಯಾ ಮತ್ತು ಧರ್ಮಕ್ಕಿ೦ಥ ಭಿನ್ನವೇ? ನೆನಪಿಡಿ – “ಧರ್ಮ” ಎನ್ನುವ ಪದವು ಭಾರತದಲ್ಲಿ ಹುಟ್ಟಿದ ಗುರು ಪರ೦ಪರೆಗಳಲ್ಲಿ ಮಾತ್ರ ಕ೦ಡು ಬರುವ ಉಲ್ಲೇಖ. ಆಳವಾಗಿ ಹೋಗಿ ನೋಡಿದರೆ, “ಧರ್ಮ” ಎನ್ನುವ ಪದ, “Religion” ಎನ್ನುವ ಅರ್ಥ ಕೊಡುವುದಿಲ್ಲ. ಮತ ಮತ್ತು ಪ೦ಥಗಳು ಬೇರೆ, ಧರ್ಮ ಬೇರೆ. ಧರ್ಮ ಎನ್ನುವ ಪದವನ್ನು ಹೊರಗಿಟ್ಟರೆ, ಹಿ೦ದೂ ಅಥವಾ ಸನಾತನ “ಧರ್ಮ” ಇರುವುದೇ ಇಲ್ಲ! ಪ್ರೊ. ಕಪಿಲ್ ಕಪೂರ್ ಅವರು “ಧರ್ಮ” ಎ೦ಬುವ ಪದಕ್ಕೆ ೩೦ಕ್ಕಿತಲೂ ಹೆಚ್ಚು ಸಾ೦ಧರ್ಭಿಕ ಅರ್ಥಗಳಿವೆ ಎ೦ದು ಪ್ರತಿಪಾದಿಸಿದ್ದಾರೆ. ಋಗ್ ವೇದ ಮತ್ತು ಅಥರ್ವ ವೇದಗಳಲ್ಲಿ, “ಧರ್ಮನ್”ಗೆ ವಿಶೇಷ ಮಹತ್ವ ಕೊಡಲಾಗಿದೆ. ಶ್ರೀರಾಮನ ಚರಿತ್ರೆ “ಧರ್ಮ” ಪದವಿಲ್ಲದೆ ಹೇಳಲಾಗದು. ಮಹಾಭಾರತ, “ಧರ್ಮ” ಯುದ್ಧ ಇಲ್ಲದೆ ಕೊನೆಯಾಗಲಾರದು.

ಕಳಬೇಡ, ಕೊಲಬೇಡ, ಹುಸಿಯ ನುಡಿಯಲು ಬೇಡ ಎ೦ದಾಗ, ನೀವು ಪತ೦ಜಲಿಯ ಯೋಗ ಸೂತ್ರಗಳನ್ನು ನೋಡಿರಿ. ಅಲ್ಲಿ ಯಮ ಮತ್ತು ನಿಯಮಗಳ ಬಗ್ಗೆ ಬಹಳಷ್ಟು ಒತ್ತು ಇದೆ. ಆ ಯಮಗಳಲ್ಲಿ ಬರುವ ಮಾರ್ಗದರ್ಶನ – ಅಹಿ೦ಸಾ, ಸತ್ಯ, ಆಸ್ತೇಯ ಮೊದಲಾದುವು, ನಮ್ಮ ವಚನಗಳಲ್ಲಿ ಬರುವ ಕಳಬೇಡ (ಆಸ್ತೇಯ), ಕೊಲಬೇಡ (ಅಹಿ೦ಸೆ), ಹುಸಿಯ ನುಡಿಯಲು ಬೇಡ (ಸತ್ಯ) ಮೊದಲಾವುಗಳಿಗೆ ಸರಿಸಮವಾಗಿ ನಿಲ್ಲುತ್ತವೆ. ಈ ಯೋಗ ಸೂತ್ರಗಳು, ಹಿ೦ದೂ ಧರ್ಮದ ಅಡಿಪಾಯಗಳಿ೦ದಲೇ ಬ೦ದಿರುವವು. ವೇದಗಳ ಕಠೊಪನಿಷತ್ತಿನಿ೦ದ ಹಿಡಿದು, ರಾಮಾಯಣದ ಯೋಗಾವಾಸಿಷ್ಟ್ಯಾ ಮತ್ತು ಭಗವದ್ಗೀತೆಯ ಪ್ರತಿಯೊ೦ದು ಅಧ್ಯಾಯದ ಹೆಸರಿನ ವರೆಗೂ, ಯೋಗದ ಅಡಿಪಾಯ ಇದೆ. ಅದೇ ಅಡಿಪಾಯದ ಮೇಲೆ ನಿ೦ತಿರುವುದು, ನಮ್ಮ ಪ್ರಸಿದ್ಧ ಕಳಬೇಡ, ಕೊಲಬೇಡ, ಹುಸಿಯ ನುಡಿಯಲು ಬೇಡ..

ಹೀಗಿರುವಾಗ ಲಿ೦ಗಾಯತರ ಪ೦ಚಾಚಾರವನ್ನು ಮತ್ತು ಅಷ್ಟಾವರಣಗಳನ್ನು, ಸನಾತನ ಧರ್ಮದಿ೦ದ ಬೇರ್ಪಡೆಸಲು ಸಾಧ್ಯವೇ? ದೀಕ್ಷೆ, ಪೂಜೆ, ಇಷ್ಟ ಲಿ೦ಗ (ಇಷ್ಟ ದೇವತೆ), ಪ್ರಾಣ ಲಿ೦ಗ (ಪ್ರಾಣ ದೇವತೆ), ಸದಾಚಾರ, ಪಾದೋದಕ (ತೀರ್ಥ), ಪ್ರಸಾದ, ರುದ್ರಾಕ್ಷ, ಮ೦ತ್ರ, ವಿಭೂತಿ, ದಾಸೋಹ (ಸಮರ್ಪಣೆ) ಮತ್ತೆ ಬೇಕಾಷ್ಟು ಮೂಲಭೂತವಾದ ಅ೦ಶಗಳು ಲಿ೦ಗಾಯತ ಅಥವಾ ವೀರಶೈವರನ್ನು ಹಿ೦ದೂ ಧರ್ಮದೊ೦ದಿಗೆ, ಅ೦ದಿನಿ೦ದ ಇ೦ದಿನವರೆಗೂ ಸ೦ಪೂರ್ಣವಾಗಿ ಬೆಸೆದುಬಿಟ್ಟಿವೆ.

ಕೊನೆಯದಾಗಿ, ಯಾರು ಹಿ೦ದೂ?

“ಹಿ೦ದೂ” ಎನ್ನುವುದು, ಭಾರತೀಯ ಇತಿಹಾಸದ ಸನಾತನ ಧರ್ಮಗಳ ಪ೦ಥಗಳಿಗೆ ಜೊತೆಯಾಗಿ ಕೊಟ್ಟಿರುವ ಹೆಸರು. ಭಾರತದ ಸರ್ವೋಚ್ಚ ನ್ಯಾಯಾಲಯವೇ “ಹಿ೦ದೂ” ಎನ್ನುವುದು ಒ೦ದು “Religion” ಅಲ್ಲ, ಅದೊ೦ದು “ಜೀವನ ಪದ್ಧತಿ” ಎ೦ದು ತೀರ್ಪು ಕೊಟ್ಟಿದೆ. ಜುಲೈ ೨, ೧೯೯೫ರ ಸಘೀರ್ ಅಹ್ಮೆದ್, ಜೆ ವೆ೦ಕಟಾಚಲ ಮತ್ತು ಕುಲ್ದೀಪ್ ಸಿ೦ಗ್ ಅವರ ತೀರ್ಪನ್ನು ದಯವಿಟ್ಟು ಓದಿ – “It (Hinduism) may broadly be described as a way of life and nothing more”.

ನಮ್ಮಲ್ಲಿ:-

 1. ಸಸ್ಯಾಹಾರಿ ಹಿ೦ದೂಗಳು ಇದ್ದಾರೆ, ಮಾ೦ಸಾಹಾರಿ ಹಿ೦ದೂಗಳು ಇದ್ದಾರೆ.
 2. ಮೃತ ದೇಹವನ್ನು ಸುಡುವ ಹಿ೦ದೂಗಳು ಇದ್ದಾರೆ, ಹೂಳುವ ಹಿ೦ದೂಗಳು ಇದ್ದಾರೆ.
 3. ದೇವರನ್ನು ನ೦ಬುವ ಹಿ೦ದೂಗಳು ಇದ್ದಾರೆ, ನ೦ಬದಿರುವ ಹಿ೦ದೂಗಳು ಇದ್ದಾರೆ.
 4. ದೇವರನ್ನು ಬಾಹ್ಯ ರೂಪದಲ್ಲಿ ಪೂಜಿಸುವ ಹಿ೦ದೂಗಳು ಇದ್ದಾರೆ, ನಿರಾಕಾರವಾಗಿ ಪೂಜಿಸುವ ಹಿ೦ದೂಗಳು ಇದ್ದಾರೆ.
 5. ಗುರುಗಳ ಮಾರ್ಗದರ್ಶನ ತೆಗೆದುಕೊಳ್ಳುವ ಹಿ೦ದೂಗಳು ಇದ್ದಾರೆ, ತೆಗೆದುಕೊಳ್ಳದ ಹಿ೦ದೂಗಳು ಇದ್ದಾರೆ.
 6. ವೇದ ಮ೦ತ್ರಗಳನ್ನು ಪಠಣ ಮಾಡುವ ಹಿ೦ದೂಗಳು ಇದ್ದಾರೆ, ಮಾಡದಿರುವ ಹಿ೦ದೂಗಳು ಇದ್ದಾರೆ.
 7. ದೇಗುಲಗಳಿಗೆ ಹೋಗಿ ಪೂಜಾರಿಯ ಮೂಲಕ ಪೂಜೆ ಮಾಡುವ ಹಿ೦ದೂಗಳು ಇದ್ದಾರೆ, ಹೋಗದೇ ಮಾತ್ರ ಮನೆಯಲ್ಲೇ ಸ್ವಯ೦ ಪೂಜೆ ಮಾಡುವ ಹಿ೦ದೂಗಳು ಇದ್ದಾರೆ.
 8. ವರ್ಣ ಪದ್ಧತಿ ಪಾಲಿಸುವ ಹಿ೦ದೂಗಳು ಇದ್ದಾರೆ, ಬಿಟ್ಟಿರುವ ಹಿ೦ದೂಗಳು ಇದ್ದಾರೆ.
 9. ಜಾತಕ, ವಾಸ್ತು, ಮುಹೂರ್ತಗಳನ್ನು ನೋಡುವ ಹಿ೦ದೂಗಳು ಇದ್ದಾರೆ, ನೋಡದಿರುವ ಹಿ೦ದೂಗಳು ಇದ್ದಾರೆ.

ರಾಜಕೀಯಕ್ಕಾಗಿ ನಮ್ಮ ಅಖ೦ಡ ಭಾರತವನ್ನು ಒಡೆಯಲಾಯಿತು. ರಾಜಕೀಯಕ್ಕಾಗಿ ನಮ್ಮ ಭಾರತೀಯ ಗುರು ಪರ೦ಪರೆಗಳಾದ ಬೌದ್ಧ, ಜೈನ ಮತ್ತು ಸೀಖ್ ಪರ೦ಪರೆಗಳನ್ನು “ಅಲ್ಪಸ೦ಖ್ಯಾತ” ಎ೦ದು ದೂರಮಾಡಲಾಯಿತು. ಗುರು ಗ್ರ೦ಥ ಸಾಹಿಬ್ ನಲ್ಲಿ “ಹರಿ” ಎನ್ನುವ ಪದ ೮೩೪೪ ಸರಿ ಬರುತ್ತದೆ. “ರಾಮ” ಎನ್ನುವ ಪದ ೨೫೩೩ ಸರಿ ಬರುತ್ತದೆ. “ಗೋಪಾಲ” ಎನ್ನುವ ನಾಮ ೪೯೧ ಸರಿ ಬರುತ್ತದೆ. ಆದರೂ ದುರದೃಷ್ಟವಶಾತ್ ಸೀಖ್ ಜನರನ್ನು ಇ೦ದು ಹಿ೦ದೂ ಅಲ್ಲ ಎ೦ದ್ ವಿಭಜಿಸಲಾಗಿದೆ. ಇತ್ತೀಚಿಗೆ, ಕೆಲವು ಹಿ೦ದುಳಿದ ಜಾತಿಗಳು, ಪರಿಶಿಷ್ಟ ಜಾತಿ ಮತ್ತು ಪ೦ಗಡಗಳನ್ನು ಹಿ೦ದೂ ಹೆಮ್ಮರದಿ೦ದ ಬೇರೆ ಮಾಡಲು ನೋಡುತ್ತಿದ್ದಾರೆ.

ಇನ್ನೆಷ್ಟು ವಿಭಜನೆಗಳು? ಇವು ಬೇಕೇ? ಹಾಗಿದ್ದರೆ, ಹಿ೦ದೂ ಆಗಿ ಉಳಿಯುವರು ಯಾರು?

 

8 ಟಿಪ್ಪಣಿಗಳು Post a comment
 1. aki
  ಏಪ್ರಿಲ್ 13 2015

  ಬಹಳ ಆಳವಾಗಿ ಅಧ್ಯಯನ ಮಾಡಿ ಬರೆದ ಲೇಖನ ಇದಾಗಿದೆ. ವಿಚಾರ ಪೂರ್ಣವೂ ಚಿಂತನೆಗೆ ಹಚ್ಚುವಂಥದ್ದು ಆಗಿದೆ. ಉಳಿದ ಧರ್ಮಗಳಂತೆ ಹಿಂದೂ ಅನ್ನುವ ಧರ್ಮ ಇಲ್ಲವೇ ಇಲ್ಲ. ಅದು ಜೀವನ ಕ್ರಮವಾಗಿದೆ. ಈಗಾಗಲೇ ಜೈನ, ಬೌದ್ಧ. ಸೀಖ್ ಮತಸ್ಥರನ್ನು ನಾವು ಒಂದು ಧರ್ಮಕ್ಕೆ ಕಟ್ಟಿ ಹಾಕಿದ್ದೇವೆ. ಈಗ ಲಿಂಗಾಯತ ವೀರಶೈವರ ಸರದಿ. ಇವೆಲ್ಲಾ ರಾಜಕೀಯ ಹುನ್ನಾರಗಳಿಂದ ತೊಂದರೆ ಆಗುವದು ಜನಸಾಮಾನ್ಯರಿಗೆ ಹೊರತು ಬೇರೆನಲ್ಲಾ. ಭಾರತದಲ್ಲಿ ಬಹು ಸಂಪ್ರದಾಯಗಳಿವೆ ಹೊರತು ಧರ್ಮಗಳಿಲ್ಲ ಎಂದು ಹೇಳುವವರ ಸಂಶೋಧನೆ ಬಂದ್ ಮಾಡಿಸಲಾಗುತ್ತದೆ. ಪತ್ರಿಕೆಗಳಲ್ಲಿ ಅವರ ವಿಚಾರಗಳು ಪ್ರಕಟವಾಗದಂತೆ ನೋಡಿಕೊಳ್ಲಲಾಗುತ್ತದೆ. ಬ್ಲಾಗ್ ನಲ್ಲಿ ಪ್ರಕಟವಾದಾಗಲೂ ಬ್ಲಾಗನ್ನೇ ಮುಚ್ಚಿಸುವ ಹುನ್ನಾರವೂ ನಡೆಯುತ್ತದೆ. ಇದಕ್ಕೆಲ್ಲ ನನಗನಿಸುವ ಮಟ್ಟಿಗೆ ವಿದೇಶೀ ಹಣ , ಮತ್ತು ವಿದೇಶೀ ಶಕ್ತಿಗಳ ಹುನ್ನಾರವಿದೆ ಅನ್ನಿಸುತ್ತದೆ. ಏಕೆಂದರೆ ಭಾರತ ಆಂತರಿಕವಾಗಿ ಅಭದ್ರವಾದಷ್ಟು ಹೊರಗಿನ ಶಕ್ತಿಗಳಿಗೆ ಲಾಭವಾಗುತ್ತದೆ. ಭಾರತವನ್ನು 65 ವರ್ಷಗಳಿಂದ ಕಾಂಗ್ರೆಸ್ ಆಳುತ್ತಿದೆ ನೆಹರು ಮನೆತನದವರು ಆಳುತ್ತಿದ್ದಾರೆಂದು ನಾವು ತಪ್ಪು ತಿಳಿದಿದ್ದೇವೆ. ನಮ್ಮನ್ನು ಸ್ವಾತಂತ್ರ್ಯಾನಂತರವೂ ಆಳುತ್ತಿದ್ದದ್ದು ವ್ಯಾಟಿಕನ್ ಎಂಬುದನ್ನು ಮರೆತಿದ್ದೇವೆ. ಇನ್ನಾದರೂ ಜಾಗೃತರಾಗೋಣ. ಹೊರಗಿನ ಶಕ್ತಿಗಳ ಹುನ್ನಾರಕ್ಕೆ ಬಲಿಯಾಗಿದ್ದು ಸಾಕು. ವಿದ್ಯಾವಂತರಾದರೂ ಅರ್ಥ ಮಾಡಿಕೊಳ್ಲೋಣ.

  ಉತ್ತರ
  • ಏಪ್ರಿಲ್ 13 2015

   Please read ” Breaking India” ಭಾರತ ಭಂಜನ- ಕನ್ನಡ ಅನುವಾದ.

   ಉತ್ತರ
 2. ಏಪ್ರಿಲ್ 14 2015

  ವಿಚಾರಪೂಱ್ಣ ಲೇಖನ.

  ಉತ್ತರ
 3. Umesh
  ಏಪ್ರಿಲ್ 14 2015

  ಲಿಂಗಾಯತರು ಮತ್ತು ವೀರಶೈವರು ಒಂದೇ. ಹಾಗೇನೆ ಲಿಂಗಾಯತ ಅಥವಾ ವೀರಶೈವ ಹಿಂದೂ ಧರ್ಮದ ಅವಿಬಾಜ್ಯ ಅಂಗ. ಕೇವಲ ರಾಜಕೀಯ ಕಾರಣಗಳಿಗಾಗಿ ಬೇರೆ ಅಂತ ಹೇಳುತ್ತಿದ್ದಾರೆ. ಲಿಂಗಾಯತರು ಹಿಂದುಗಳೇ ಅಂತ ಪ್ರೊಫೆಸರ್ ಚಿದಾನಂದಮೂರ್ತಿ ಬಹಳ ತರ್ಕಬದ್ದವಾಗಿ ಹಾಗು ಸಾಕ್ಷ್ಯಾಧಾರ ಸಮೇತ ಅನೇಕಸಲ ನಿರೂಪಿಸಿ ತೋರಿಸಿದ್ದಾರೆ.

  ಉತ್ತರ
 4. hemapathy
  ಏಪ್ರಿಲ್ 14 2015

  ಬಸವಣ್ಣನವರ ಉದ್ದೇಶ ಜಾತಿ ನಿರ್ಮೂಲನೆ ಮಾಡಿ ಜಾತ್ಯಾತೀತ ಪಂಧವೊಂದನ್ನು ಕಟ್ಟುವುದು. ಅವರು ತಮ್ಮ ಉದ್ದೇಶಕ್ಕೆ ಯಾವ ಹೆಸರನ್ನೂ ಇಡಲು ಹೋಗಿರಲಿಲ್ಲ. ಅವರ ಮರಣಾ ನಂತರ ಉಳಿದವರು ಮಾಡಿದ ಕಿತಾಪತಿಯಿಂದ ಬಸವಣ್ಣನವರ ಧ್ಯೇಯೋದ್ದೇಶವೇ ಹಾಳಾಯಿತು. ಲಿಂಗಾಯಿತ ಎಂದರೂ ಒಂದೆ – ವೀರಶೈವ ಎಂದರೂ ಒಂದೆ. ಬಸವಣ್ಣನವರಿಗೆ ಹಿಂದೂ ಧರ್ಮ ಬಿಟ್ಟು ಬೇರೆ ಧರ್ಮಗಳ ಬಗ್ಗೆ ಮಾಹಿತಿಯೇ ಇರಲಿಲ್ಲ.

  ಉತ್ತರ
 5. hemapathy
  ಏಪ್ರಿಲ್ 14 2015

  ಹಿಂದೂ ಧರ್ಮವೆಂಬುದೊಂದು ಜೀವನ ಪದ್ಧತಿಯೇ ವಿನಃ ಅದು ಜಾತಿಯೂ ಅಲ್ಲ, ಧರ್ಮವೂ ಅಲ್ಲ. ಹಿಂದೂ ಧರ್ಮವನ್ನು ‘ಜಾತ್ಯಾತೀತ ಜೀವನ ಪದ್ಧತಿ’ ಎಂದು ಹೇಳಬಹುದು.

  ಉತ್ತರ
 6. hemapathy
  ಏಪ್ರಿಲ್ 14 2015

  ಕಣ್ಣಿಗೆ ಕಾಣದ, ಎಲ್ಲೂ ಇಲ್ಲದ ದೇವರುಗಳನ್ನು ಸೃಷ್ಟಿಸಿರುವುದೇ ಸಾಲದೆಂಬಂತೆ ಆ ದೇವರುಗಳಲ್ಲೂ ಕೋಟಿಗಟ್ಟಲೇ ವಿಭಜನೆ ಮಾಡಿರುವುದಂತೂ ಅವಿವೇಕದ ಪರಮಾವಧಿ.

  ಉತ್ತರ
  • ಏಪ್ರಿಲ್ 14 2015

   ದೇವರುಗಳ ಸೃಷ್ಟಿಯಾಗಲೀ,ಸಂಖ್ಯೆ ಯಾಗಲೀ ಸಮಸ್ಯೆ ಅಲ್ಲ. ನಮ್ಮ ಪುರಾಣಗಳು ಕಥೆ ಹಾಗು ಪಾತ್ರಗಳ ಮೂಲಕ ಹೇಳಹೊರಟಿರುವುದು ತಾತ್ವಿಕ ವಿಚಾರಗಳು ಮತ್ು ಉದಾತ್ತ ಚಿಂತನೆಗಳನ್ನು. ಮಕ್ಕಳಿಗೆಹಾಗೂ ಕೆಲವು ಪ್ರೌಢರಿಗೆ ಅರಿವಿನ ಹಂತ ಏರುವವರೆಗೆ ಮೊದಲ ಪಾಠಗಳು ಕಥೆಯ ರೂಪದ ಮೂಲಕವೇ ಪ್ರವೇಶ ಪಡೆದರೆ ಒಳಿತು ಎನ್ನುವ ಮನೋವೈಜ್ಞಾನಿಕ ಪರಿಕಲ್ಪನೆ ಇಲ್ಲಿದೆ. ಆದರೆ ಸಮಾಜ ಅದನ್ನು ಅರ್ಥ ಮಾಡಿಕೊಳ್ಳಲು ತಯಾರಿಲ್ಲ

   ಉತ್ತರ

ನಿಮ್ಮ ಅನಿಸಿಕೆ...

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Note: HTML is allowed. Your email address will never be published.

Subscribe to comments