ನೆಹರೂ ಎಂಬ ಸ್ವಾರ್ಥ ರಾಜಕಾರಣಿ ಮತ್ತು ನೇತಾಜಿ ಎಂಬ ಸ್ವಾತಂತ್ರ್ಯ ಸೇನಾನಿ
– ರಾಕೇಶ್ ಶೆಟ್ಟಿ
“ಸುಭಾಷ್ ಸೈನ್ಯವೇನಾದರೂ ಭಾರತಕ್ಕೆ ಬಂದರೆ ನಾನು ಕತ್ತಿ ಹಿಡಿದು ಹೋರಾಡುತ್ತೇನೆ”. ಹೀಗೆ ಹೇಳಿದ ಕಠಾರಿವೀರ ಯಾವುದೋ ಬ್ರಿಟಿಷನಲ್ಲ.ಗಾಂಧಿ ಪಕ್ಷದೊಳಗಿನ ಬ್ರಿಟಿಷ್ ಶ್ರೀಮಾನ್ ಚಾಚಾ ನೆಹರೂ.ಅಷ್ಟಕ್ಕೂ ನೆಹರೂವನ್ನು “ಗಾಂಧಿ ಪಕ್ಷದೊಳಗಿನ ಬ್ರಿಟಿಷ್” ಎಂದು ನಾನು ಕರೆಯುತ್ತಿಲ್ಲ.ಖುದ್ದು ನೆಹರೂ ಅವರ ಅಮೇರಿಕಾದ ಗೆಳೆಯನಾಗಿದ್ದ ಜಾನ್ ಕೆನೆತ್ ಗಾಲ್ಬ್ರೈತ್ ಬಳಿ “ಭಾರತವನ್ನು ಆಳುವ ಕಡೆಯ ಬ್ರಿಟಿಷ್ ನಾನೇ” ಎಂದು ಹೇಳಿಕೊಂಡಿದ್ದರು. (ಈ ಜಾನ್ ಎಂತ ಮಹಾನುಭಾವನೆಂದರೆ, ಭಾರತವು ಬ್ರಿಟಿಷ್ ಆಳ್ವಿಕೆಗೆ ಒಳಪಟ್ಟಿದ್ದು ಪುಣ್ಯ ಎನ್ನುವಂತ ಮನಸ್ಥಿತಿಯವ)
ಗಾಂಧಿ ಪಕ್ಷದೊಳಗಿನ ಬ್ರಿಟಿಷ್ ಎನ್ನಲಿಕ್ಕೆ ಇನ್ನೊಂದು ಸತ್ಯವೂ ಈಗ ಬಹಿರಂಗವಾಗಿದೆ.ಭಾರತವು ಸ್ವತಂತ್ರವಾಗಿ, ಸುಮಾರು ೨೦ ವರ್ಷಗಳ ಕಾಲ ನೇತಾಜಿ ಕುಟುಂಬದ ಮೇಲೆ ಶ್ರೀಮಾನ್ ನೆಹರೂ ಅವರ ಘನ ಸರ್ಕಾರ “ಗೂಢಚಾರಿಕೆ”ಯನ್ನು ಮಾಡಿದೇ ಎಂಬುದೇ ಆ ಸತ್ಯ.ಅದೂ ಬ್ರಿಟಿಷರ MI15 ಎಂಬ ಗೂಢಚಾರ ಸಂಸ್ಥೆಯೊಂದಿಗೆ ಸೇರಿಕೊಂಡು! ಹೀಗಿರುವಾಗ ನೆಹರೂ ತನ್ನನ್ನು ತಾನು “I am the last Englishman to rule in India.” ಎಂದಿದ್ದು ಸರಿಯಾಗಿಯೇ ಇದೆ ಅಲ್ಲವೇ? ಅಷ್ಟಕ್ಕೂ ಬ್ರಿಟಿಷರಿಗೆ ನೇತಾಜಿಯವರ ಮೇಲೆ ಗೂಢಚಾರಿಕೆ ಮಾಡಲಿಕ್ಕೆ ಕಾರಣಗಳಿದ್ದವು.ಆದರೆ ನೆಹರೂ ಮಹಾಶಯರಿಗೇನಿತ್ತು ಅಂತ ಕಾರಣ? “ಅಭದ್ರತೆ” ಭಾವವೇ?ನೇತಾಜಿಯವರು ತೈಪೆಯ ವಿಮಾನಾಪಘಾತದಲ್ಲಿ ಮರಣಹೊಂದಿದರು ಎಂದು ಸೃಷ್ಟಿಸಲಾಗಿದ್ದ ಸುದ್ದಿಯನ್ನು ಇತರರಂತೆ ನೆಹರೂ ಸಹ ನಂಬಿರಲಿಲ್ಲ.ಒಂದು ವೇಳೆ ಸ್ವತಂತ್ರ ಭಾರತಕ್ಕೆ ನೇತಾಜಿ ಕಾಲಿಟ್ಟರೆ,ಗಾಂಧೀಜಿಯ ಮರಣದ ನಂತರ ಏಕಮೇವಾದ್ವೀತಿಯನಂತಿರುವ ತನ್ನ ಕುರ್ಚಿ ಉಳಿಯುವುದಿಲ್ಲವೆಂಬ ಘೋರ ಸತ್ಯ ತಿಳಿದಿದ್ದರಿಂದಲೇ? ನೆಹರೂವಿಗೆ,ನೇತಾಜಿಯವರ ಮೇಲೆ ಅಂತದ್ದೊಂದು ಅಭದ್ರತೆ,ಈರ್ಷ್ಯೆ ಇರಲಿಲ್ಲವೆಂದಾದರೇ, ಬ್ರಿಟನ್ ಪ್ರಧಾನಿಯಾಗಿದ್ದ ಕ್ಲೆಮೆಂಟ್ ಆಟ್ಲಿಯವರಿಗೆ,ಸುಭಾಷ್ ರಷ್ಯಾದಲ್ಲಿ ಇರುವ ಬಗ್ಗೆ ಮತ್ತು ರಷ್ಯಾ ಮಿತ್ರಪಡೆಗಳಿಗೆ ನಂಬಿಕೆ ದ್ರೋಹ ಮಾಡಿದಂತೆ ಎಂಬಂತ ಸಾಲುಗಳಿರುವ ಪತ್ರವೊಂದನ್ನು ಬರೆದಿದ್ದರು ಎನ್ನುವುದು ಸುಳ್ಳೇ? ಅದೆಲ್ಲಾ ಬಿಡಿ.ಸ್ವಾತಂತ್ರ್ಯ ಸಿಕ್ಕ ನಂತರ ಐ.ಎನ್.ಎ ಸೈನಿಕರನ್ನು ನೆಹರೂ ನಡೆಸಿಕೊಂಡ ರೀತಿ ನೋಡಿ.ಆ ಸೈನಿಕರಿಗೆ ಭಾರತೀಯ ಸೈನ್ಯದಲ್ಲಿ ಕಾಲಿಡಲು ಬಿಡಲಿಲ್ಲ.ಪಿಂಚಣಿಗಾಗಿ ಆ ಸೈನಿಕರು ೧೯೭೭ರವರೆಗೂ ಕಾಯಬೇಕಾಯಿತು! ಆಜಾದ್ ಹಿಂದ್ ಸೈನಿಕರು ಭಾರತೀಯ ಸೇನೆ ಸೇರಿಕೊಂಡ ಮೇಲೆ ನೇತಾಜಿ ಪ್ರತ್ಯಕ್ಷವಾದರೇ,ಸೈನ್ಯ ಅವರ ಪರ ನಿಂತೀತೂ ಎಂಬ ಭಯವಿತ್ತೇ? ನೆಹರೂ ಅವರ ಈ ನಡೆಗಳನ್ನೆಲ್ಲ ಹೇಗೆ ಅರ್ಥೈಸಿಕೊಳ್ಳಬೇಕು?
ಅಪ್ಪ ಮೋತಿಲಾಲ್ ನೆಹರೂ ಮತ್ತು ಗಾಂಧೀಜಿ ಕೃಪಾ ಕಟಾಕ್ಷದಿಂದಾಗಿ ಕಾಂಗ್ರೆಸ್ಸಿನಲ್ಲಿ ಮುಂಚೂಣಿಗೆ ಬಂದ ನೆಹರೂವಿಗೆ ತನಗಿಂತ ವಯಸ್ಸಿನಲ್ಲಿ ೮ ವರ್ಷ ಕಿರಿಯನಾದರೂ,ಜನಪ್ರಿಯತೆಯಲ್ಲಿ ಮುಂಚೂಣಿಯಲ್ಲಿದ್ದ ಸುಭಾಷರ ಮೇಲೆ ಈರ್ಷ್ಯೆ ಇದ್ದಿದ್ದು ಗುಟ್ಟೇನಲ್ಲ.ಗಾಂಧೀಜಿ ಪಟಾಲಂ ನೀಡಿದ ಹಿಂಸೆಯಿಂದ ಬೇಸತ್ತು ಕಾಂಗ್ರೆಸ್ಸ್ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿ ಪಕ್ಷದಿಂದ ಹೊರಬರುವಾಗ ಬರೆದ ಪತ್ರದಲ್ಲಿ ಖುದ್ದು ನೇತಾಜಿಯವರೇ, ತಾವು ಹೊರಹೋಗುವಲ್ಲಿ ಬಹುಮುಖ್ಯ ಭೂಮಿಕೆ ನಿಭಾಯಿಸಿದವರಲ್ಲಿ ನೆಹರೂವನ್ನೇ ಮೊದಲಿಗರನ್ನಾಗಿಸುತ್ತಾರೆ.
ಅಂದಿಗೆ ಇಡೀ ಭಾರತದ ರಾಜಕೀಯ ಆಗಸದಲ್ಲಿ ಏಕಮೇವಾದ್ವೀತಿಯರಂತೆ ಆವರಿಸಿಕೊಂಡಿದ್ದಂತ ಗಾಂಧೀಜಿಯಂತ ಗಾಂಧೀಜಿಯನ್ನೇ ಎದುರು ಹಾಕಿಕೊಂಡು ಗೆಲ್ಲಬಲ್ಲಷ್ಟು ಜನಪ್ರಿಯರಾಗಿದ್ದರು ನೇತಾಜಿ ಸುಭಾಷ್.ತಮ್ಮ ರಾಜಕೀಯ ಗಾಡ್ ಫಾದರ್ ಎದುರೇ ನಿಲ್ಲಬಲ್ಲವನು ಮುಂದೆ ತನ್ನ ಪ್ರಧಾನಿ ಗಾದಿಯ ಕನಸಿಗೆ ಮಗ್ಗಲ ಮುಳ್ಳಗಾದಿರುತ್ತಾನೆಯೇ ಎಂಬುದು ನೆಹರೂ ಒಳಗಿನ ರಾಜಕಾರಣಿಗೆ ತಿಳಿಯದ ವಿಷಯವೇ.ಹಾಗಾಗಿಯೇ ನೆಹರೂ ಅವರಿಗೆ ನೇತಾಜಿಯ ಮೇಲೊಂದು ನಿಗಾ ಇದ್ದೇ ಇತ್ತು. ನೇತಾಜಿಯವರಿಗಿಂತ ಸರಿ ಸುಮಾರು ಹತ್ತು ವರ್ಷಗಳಷ್ಟು ಮೊದಲೇ ಕಾಂಗ್ರೆಸ್ಸ್ ಅಧ್ಯಕ್ಷ ಹುದ್ದೆಯಲ್ಲಿದ್ದ ಅಂದಿನ ಯುವನಾಯಕ ನೆಹರೂ ಅವರು ನೇತಾಜಿಯವರ ಪ್ರಭೆಯ ಮುಂದೆ ಮಂಕಾಗಿದ್ದರು.ತನ್ನ ಕುರ್ಚಿಯ ಮೇಲಿನ ಮುಳ್ಳನ್ನು ಬದಿಗೆ ಸರಿಸಲು ೧೯೩೯ರ ಕಾಂಗ್ರೆಸ್ಸ್ ಅಧ್ಯಕ್ಷೀಯ ಚುನಾವಣೆ ಎಂಬುದು ಸುಸಂದರ್ಭವಾಗಿ ಒದಗಿಬಂದಿತ್ತು.
ಕಾಂಗ್ರೆಸ್ಸ್ ತೊರೆದ ನೇತಾಜಿ ಇನ್ನುಳಿದ ಕ್ರಾಂತಿಕಾರಿಗಳಂತೆ ಆದಾರು ಎಂದುಕೊಂಡಿದ್ದವರಿದ್ದರೇನೋ! ಆದರೆ,ನೇತಾಜಿಯಂತ ಸ್ವಯಂ ಪ್ರಭೆಗೆ ಗಾಂಧೀಜಿಯವರ ಅಗತ್ಯವಿತ್ತೇ? ಅವರ ಲಕ್ಷ್ಯವಿದ್ದಿದ್ದು ಈ ದೇಶಕ್ಕೆ ಬ್ರಿಟಿಷರ ದಾಸ್ಯದಿಂದ ಮುಕ್ತಿಕೊಡಿಸುವುದಷ್ಟೇ.ಅದನ್ನವರು ತಮ್ಮ ಪಕ್ಷವಾದ ಫಾರ್ವರ್ಡ್ ಬ್ಲಾಕ್ನ ಮೂಲಕವೇ ಹೋರಾಟ ಮುಂದುವರೆಸುವ ಮೂಲಕ ಮಾಡಿ ತೋರಿಸಿದ್ದರು.ಕಡೆಗೆ ಬ್ರಿಟಿಷರ ಬಂಧನದಿಂದ ತಪ್ಪಿಸಿಕೊಂಡು ಜರ್ಮನಿ ತಲುಪಿಕೊಂಡು ಅಲ್ಲಿನ ಸರ್ಕಾರದ ಸಹಾಯದಿಂದ ‘ಆಜಾದ್ ಹಿಂದ್ ರೇಡಿಯೋ’ ಸ್ಥಾಪಿಸಿ, ಅಲ್ಲಿಂದ ಭಾಷಣ ಮಾಡಿ “ನಾನು ಸುಭಾಷ್ ಮಾತಾಡುತಿದ್ದೇನೆ,ಇನ್ನು ಬದುಕಿದ್ದೇನೆ!” ಅಂದಾಗಲೇ ಭಾರತದಲ್ಲಿ ಬ್ರಿಟಿಷರು ಬೆಚ್ಚಿ ಬಿದ್ದಿದ್ದರು.ಬಹುಷಃ ಗಾಂಧಿ ಪಕ್ಷದೊಳಗಿನ ಬ್ರಿಟಿಷರ ನಿದ್ದೆಯೂ ಕೆಟ್ಟಿರಬೇಕು!
ಜಪಾನ್ ನೆರವಿನಿಂದ ಸ್ವತಂತ್ರ ಭಾರತದ ‘ಹಂಗಾಮಿ ಸರ್ಕಾರ’ವನ್ನು ಸ್ಥಾಪಿಸಿ ‘ಮೊದಲ ಪ್ರಧಾನ ಮಂತ್ರಿ’ಯಾದ ಸುಭಾಷ್ ಕೆಲ ದಿನಗಳಲ್ಲೇ ಅಧಿಕೃತವಾಗಿ ‘ಮಿತ್ರ ಕೂಟ’ಗಳ ಮೇಲೆ ಯುದ್ಧ ಘೋಷಿಸಿದರು.ಆಗ ಶುರುವಾಗಿದ್ದೆ “ಚಲೋ ದಿಲ್ಲಿ” ಎಂಬ ಘೋಷಣೆಯ ‘ಐ.ಎನ್.ಎ’ ಅಭಿಯಾನ.ಯುದ್ಧ ಶುರುವಾದ ಕೆಲ ದಿನಗಳಲ್ಲೇ ಜಪಾನಿ ಪಡೆ ‘ಅಂಡಮಾನ್ ಹಾಗೂ ನಿಕೋಬಾರ್’ ದ್ವೀಪಗಳನ್ನು ವಶಪಡಿಸಿಕೊಂಡಿತು.ಸುಭಾಷರು,ಟೋಜೋನೊಂದಿಗೆ ಮಾತಾಡಿ ಅವೆರಡನ್ನು ‘ಐ.ಎನ್.ಎ’ ಸುಪರ್ದಿಗೆ ತೆಗೆದುಕೊಂಡು ‘ಸ್ವರಾಜ್ ಹಾಗೂ ಶಹೀದ್’ ಎಂದು ನಾಮಕರಣ ಮಾಡಿದರು.ಅತ್ತ ಸುಭಾಷರು ಮುಟ್ಟಿಸಿದ ಬಿಸಿಗೆ,ಇತ್ತ ಗಾಂಧೀಜಿ ‘ಭಾರತ ಬಿಟ್ಟು ತೊಲಗಿ’ ಚಳುವಳಿಗೆ ಕರೆ ನೀಡಬೇಕಾಗಿ ಬಂತು.ನಮಗೆ ಶಾಲೆಯಲ್ಲಿ ಓದಿಸಲಾದ ಇತಿಹಾಸದಲ್ಲಿ ಬ್ರಿಟಿಷರು ಇಲ್ಲಿಂದ ಹೊರಟಿದ್ದು “ಭಾರತ ಬಿಟ್ಟು ತೊಲಗಿ” ಚಳುವಳಿಯಿಂದ ಎಂದು ಕಲಿಸಿದ್ದರು.ಆದರೆ ಖುದ್ದು ಆಗಿನ ಬ್ರಿಟನ್ ಪ್ರಧಾನಿ ಕ್ಲೆಮೆಂಟ್ ಆಟ್ಲಿ ಹೇಳಿದ್ದು “ನೇತಾಜಿ ಸುಭಾಷ್ ಎಂಬ ಭೂತ ನರ್ತನ” ಮುಖ್ಯ ಕಾರಣಗಳಲ್ಲೊಂದು ಎಂದು.ಐ.ಎನ್.ಎ ಅಭಿಯಾನದಿಂದ ನಡೆದ ನೌಕ ದಳದ ಬಂಡಾಯ ಬ್ರಿಟಿಷ್ ಸಾಮ್ರಾಜ್ಯಶಾಹಿಯ ಶವದ ಪೆಟ್ಟಿಗೆ ಸುಭಾಷ್ ಹೊಡೆದ ಕೊನೆಯ ಮೊಳೆಯಾಗಿತ್ತು.
ಮಹಾಯುದ್ಧದಲ್ಲಿ ಜಪಾನ್ ಸೋತು ಶರಣಾಗುವ ಹಂತದಲ್ಲಿ ಸುಭಾಷರು ೧೯೪೫ ರ ಆಗಸ್ಟ್ ತಿಂಗಳಿನಲ್ಲಿ ತೈಪೆಯಲ್ಲಿ ನಡೆದ ವಿಮಾನಾಪಘಾತದಲ್ಲಿ ಮಡಿದರು (!) ಎನ್ನುವ ಸುದ್ದಿ ಹುಟ್ಟಿಕೊಂಡಿತು.ಎಷ್ಟಾದರೂ ತನ್ನ ಕುರ್ಚಿಯ ಮೇಲಿನ ಮುಳ್ಳಲ್ಲವೇ,ಅದೇ ಕಾರಣದಿಂದಾಗಿಯೋ ಏನೋ ಸ್ವತಂತ್ರ ಬಂದು ಹತ್ತು ವರ್ಷಗಳ ನಂತರ ನಮ್ಮ ಮೊದಲ ಪ್ರಧಾನಿ ನೆಹರೂ ಮಹಾಶಯರಿಗೆ ಜ್ಞಾನೋದಯವಾಗಿ ಸುಭಾಷರ ಸಾವಿನ ಕುರಿತ ರಹಸ್ಯ ಬೇಧಿಸಲು ‘ಷಾ ನವಾಜ್ ಸಮಿತಿ’ ರಚಿಸಿದರು.ಆ ಸಮಿತಿಯವರಿಗೆ ಅದೇನು ಬೇರೆ ಕೆಲಸವಿತ್ತೋ,ದಿಢೀರ್ ಅಂತ ವರದಿ ಒಪ್ಪಿಸಿಯೇ ಬಿಟ್ಟರು.ಮುಂದೆ ‘ಖೊಸ್ಲಾ ಸಮಿತಿ’ ಎಲ್ಲ ಹೇಳಿದ್ದು ಒಂದೇ,ಅವರು ವಿಮಾನಪಾಘತದಲ್ಲಿ ಮಡಿದರು ಅಂತ.ಖುದ್ದು ತೈಪೆ ಸರ್ಕಾರವೇ ಆ ದಿನ ಯಾವ ವಿಮಾನವು ಹಾರಿಲ್ಲ ಅಂದರೆ ಕೇಳಿಸಿಕೊಳ್ಳುವವರು ಯಾರು ಇರಲಿಲ್ಲ.ವಾಜಪೇಯಿಯವರ ಸರ್ಕಾರದ ಸಮಯದಲ್ಲಿ ರಚನೆಯಾದ ‘ಮುಖರ್ಜಿ ಸಮಿತಿ’ ಮಾತ್ರ ಹೇಳಿದ್ದು ವಿಮಾನಪಾಘತದಲ್ಲಿ ಅವರು ಸಾವಿಗೀಡಾಗಿಲ್ಲ ಅಂತ.ಆದರೆ ಯು.ಪಿ.ಎ ಸರ್ಕಾರಕ್ಕೆ ಅದು ಹಿಡಿಸಲಿಲ್ಲ.ಹಾಗಾಗಿ ಆ ವರದಿಯನ್ನೇ ತಿರಸ್ಕರಿಸಿದರು.ಆದರೆ,ಈಗ ನೆಹರೂ ಬಣ್ಣ ಬಯಲಾಗಿರುವ ಸಂದರ್ಭದಲ್ಲಿ “ನೇತಾಜಿಯವ ಕುರಿತ ಎಲ್ಲಾ ಸಿಕ್ರೇಟ್ ಫೈಲ್”ಗಳು ಹೊರಬರಲಿ ಎನ್ನುತ್ತಿದೆ ಕಾಂಗ್ರೆಸ್ಸ್.ಆದರೆ ಇಷ್ಟು ವರ್ಷಗಳ ಕಾಲ ಅಧಿಕಾರದಲ್ಲಿದ್ದ ಇವರು ಮಾಡಿದ್ದೇನು?
ನೇತಾಜಿ ನಿಗೂಡ ಅಂತ್ಯವನ್ನು ಖಾಸಗಿಯಾಗಿ ತನಿಖೆ ಮಾಡ ಹೋರಾಟ ಪುರಬಿ ರಾಯ್ ಹಾಗೂ ಇನ್ನು ಹಲವರು ತಮಗೆ ಜೀವ ಬೆದರಿಕೆ ಬಂದಿತ್ತು ಅಂತ ಹೇಳುತ್ತಾರೆ, ಪುರಬಿ ರಾಯ್ ಅವರಿಗೆ ರಷ್ಯದ ಏಜೆಂಟ್ ಒಬ್ಬ ಸ್ಟಾಲಿನ್ ಅವರಿಗೆ ಭಾರತದ ಧೀಮಂತ(!) ನಾಯಕರೊಬ್ಬರಿಂದ ಬಂದ ಪತ್ರದ ಬಗ್ಗೆ ಹೇಳಿದ್ದರು ಎಂಬ ಮಾಹಿತಿಯಿದೆ.ನೇತಾಜಿಯವರು ರಷ್ಯಾದಿಂದ ಭಾರತದ ಆ ಧೀಮಂತ ನಾಯಕನಿಗೆ ತಾನು ದೇಶಕ್ಕೆ ಮರಳಲಿಚ್ಚಿಸುವುದಾಗಿ ಪತ್ರ ಬರೆದಿದ್ದರು ಎನ್ನುತ್ತಾರೆ.ಪುರಬಿ ರಾಯ್ ಅವರು ಹೆಚ್ಚಿನ ಮಾಹಿತಿ ಕಲೆ ಹಾಕಲು ಆಸಕ್ತಿ ತೋರುತಿದ್ದಂತೆ ಅವರು ಮಾಡುತಿದ್ದ ಕೆಲಸವನ್ನು ಕಳೆದುಕೊಂಡರು.
ಸುಭಾಷರ ಅಂತ್ಯದ ಕುರಿತು ಬಹಳಷ್ಟು ಸುದ್ದಿಗಳಿವೆ.ಅವುಗಳಲ್ಲಿ ಪ್ರಮುಖವಾದದ್ದು,ಹಿಂದುಸ್ತಾನ್ ಟೈಮ್ಸ್.ಕಾಂ ನಡೆಸಿದ ತನಿಖೆಯಲ್ಲಿ ಹೇಳುವಂತೆ,ನೇತಾಜಿ ಅಂದು ತೈಪೆಯಲ್ಲಿ ನಡೆದ ವಿಮಾನಾಪಘಾತದಲ್ಲಿ ಸಾಯಲಿಲ್ಲ.ಮರಳಿ ಭಾರತಕ್ಕೆ ಬಂದು ‘ಭಗವಾನ್ ಜಿ’ ಯಾಗಿ ಉತ್ತರ ಭಾರತದಲ್ಲಿ ಅಜ್ಞಾತರಾಗಿ ಬದುಕಿ ೧೯೮೦ರ ದಶಕದಲ್ಲಿ ಮಡಿದರು ಅಂತ.ಇದು ನಿಜವಾದರೆ ಹಾಗೆ ಅವರು ಅಜ್ಞಾತವಾಸ ಮಾಡಬೇಕಾಗಿ ಬಂದಿದ್ದರು ಹೇಗೆ? ಭಗವಾನ್ ಜಿ ಎಂಬುವವರು “ತನ್ನವರೇ ತನಗೇ ಮೋಸ ಮಾಡಿದರು.ಹಿಂದೆ ಕೆಲ ಜನಗಳಿಂದಾದ ಅನುಭವದಿಂದ ಪಾಠ ಕಲಿತಿದ್ದೇನೆ” ಎನ್ನುವ ಅರ್ಥ ಬರುವಂತೆ ಮಾತಡಿದ್ದಾದರೂ ಯಾಕೆ? ಆ ದ್ರೋಹಿಗಳು ಯಾರಿದ್ದಿರಬಹುದು?
ಇನ್ನೊಂದು ಸುದ್ದಿ,ಕ್ರೂರತನದಲ್ಲಿ ಹಿಟ್ಲರನನ್ನು ಒಂದು ಕೈ ಮೀರಿಸುವಂತಿದ್ದ ಕಾಮ್ರೇಡ್ ಸ್ಟಾಲಿನ್,ಸುಭಾಷರನ್ನು ಸೈಬೀರಿಯಾದ ಜೈಲೊಂದರಲ್ಲಿ ಯುದ್ಧ ಖೈದಿಯಾಗಿ ಬಂಧನದಲ್ಲಿರಿಸಿದ್ದ ಹಾಗೂ ಅಲ್ಲಿಯೇ ಅವರನ್ನು ಹತ್ಯೆಗಯ್ಯಲಾಯಿತು ಎಂಬುದು. ಬಹುಷಃ “ನೇತಾಜಿ ಸಾವಿನ ರಹಸ್ಯ ಬಯಲಾದರೇ ಅಂತರಾಷ್ಟ್ರೀಯ ಸಂಬಂಧಗಳಿಗೆ ಧಕ್ಕೆಯಾಗುತ್ತದೆ ಎನ್ನಲಿಕ್ಕಿರುವ ಕಾರಣ ಇದೇ ಇರಬಹುದೇ? ಒಂದು ವೇಳೆ ಇದೇ ಕಾರಣ ಎನ್ನುವುದಾದರೇ,ಇತಿಹಾಸದ ಘಟನೆಗಳಿಂದಲೇ ವರ್ತಮಾನದ ಸ್ನೇಹ ಸಂಬಂಧಗಳು ರೂಪು ತಳೆಯುತ್ತವೆ ಎನ್ನುವುದಾದರೇ, ಜಪಾನ್ ಮತ್ತು ಅಮೇರಿಕಾ ಇವತ್ತಿಗೂ ಬದ್ಧ ಶತ್ರುಗಳಾಗಿರಬೇಕಾಗಿತ್ತು.ಜರ್ಮನಿ ಇಂದಿಗೂ ಬ್ರಿಟನ್ ವಿರುದ್ಧವಾಗಿಯೇ ಇರಬೇಕಿತ್ತಲ್ಲವೇ?
ನೇತಾಜಿಯವರ ಸಾವಿನ ರಹಸ್ಯದ ಕುರಿತು ಸುಧೀರ್ಘ ಕಾಲದಿಂದ ಸಂಶೋಧನೆ ಮಾಡುತ್ತ “Back from Dead, India’s Biggest Cover Up, No Secrets” ಎಂಬ ಮೂರು ಪುಸ್ತಕಗಳನ್ನು ಬರೆದಿರುವ ಮತ್ತು ಪ್ರಸಕ್ತ ಸ್ಫೋಟಕ ಮಾಹಿತಿಯನ್ನು ಬಹಿರಂಗಪಡಿಸುವಲ್ಲಿ ಬಹುಮುಖ್ಯ ಪಾತ್ರವಹಿಸಿರುವ ಪತ್ರಕರ್ತ ಅನುಜ್ ಧರ್ ಅವರು ಹೇಳುವಂತೆ “ಕೇಂದ್ರ ಸರ್ಕಾರದ ಸುಪರ್ದಿಯಲ್ಲಿರುವ ರಹಸ್ಯ ಪತ್ರಗಳಲ್ಲಿರುವ ಮಾಹಿತಿಗೆ ಹೋಲಿಸಿದರೆ,ಈಗ ಬಯಲಾಗಿರುವ ಸುದ್ದಿ ಏನೇನು ಅಲ್ಲ” ಹಾಗಾಗಿ ಕೇಂದ್ರ ಸರ್ಕಾರ ಈ ರಹಸ್ಯ ಪತ್ರಗಳನ್ನು ಬಹಿರಂಗಪಡಿಸಬೇಕು. ಎಂಬುದು.ಅನುಜ್ ಧರ್ ಅವರ ಈ ಕೂಗಿಗೆ ಈಗ ನೇತಾಜಿ ಕುಟುಂಬದವರ ಬೆಂಬಲವೂ ಇದೆ.
ಅಧಿಕಾರ ದಕ್ಕಿಸಿಕೊಳ್ಳುವ ಮುನ್ನ ಈಗಿನ ಗೃಹ ಸಚಿವ ರಾಜನಾಥ್ ಸಿಂಗ್ ನೇತಾಜಿಯವ ಸಾವಿನ ರಹಸ್ಯ ಬಯಲಾಗಬೇಕು ಎಂದಿದ್ದರು.ಈಗ ಕಾಂಗ್ರೆಸ್ಸಿನಂತೆಯೇ “ರಹಸ್ಯ ಬಯಲಾದರೇ,ನೇತಾಜಿಯವರ ವ್ಯಕ್ತಿತ್ವಕ್ಕೆ ಧಕ್ಕೆಯಾಗುತ್ತದೆ” ಎಂಬ ಹಳೇ ರಾಗವನ್ನು ಹಾಡಲಾಗುತ್ತಿದೆ ಅವರ ಸರ್ಕಾರ.ಧಕ್ಕೆಯಾಗುವುದು,ದೇಶಕ್ಕಾಗಿ ಹೆತ್ತವರನ್ನು,ಹೆಂಡತಿ ಎಮಿಲಿ ಶೆಂಕೆಲ್ ರನ್ನು,ಪುಟ್ಟಕಂದಮ್ಮಳಾಗಿದ್ದ ಅನಿತ ಬೋಸರನ್ನು,ಸರ್ವಸ್ವವನ್ನು ತ್ಯಾಗ ಮಾಡಿದ ನೇತಾಜಿಯವರ ವ್ಯಕ್ತಿತ್ವಕ್ಕೋ ಅಥವಾ ನೆಹರೂ ವ್ಯಕ್ತಿತ್ವಕ್ಕೋ ಎಂಬುದು ಸತ್ಯ ಬಯಲಾದರೇ ತಿಳಿದೀತು.ಹಾಗಾಗಲು ಸತ್ಯವೆಂಬುದು ಹೊರಬರಲೇಬೇಕು.ಅಂತ ದಿಟ್ಟತನವನ್ನು ಮೋದಿ ಸರ್ಕಾರ ತೋರಿತೇ?
ನೆಹರೂ ಮತ್ತು ಇಂದಿರಾ ಗಾಂಧಿಯವರ ಮದೋನ್ಮತ್ತ ದುರಾಡಳಿತದಿಂದ, ನಮ್ಮವರೇ ನಮಗೆ ಶತ್ರುಗಳು ಎಂಬುದು ಎಲ್ಲರಿಗೂ ತಿಳಿದಿದೆ. ನೇತಾಜಿಯವರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಬಿ.ಜೆ.ಪಿ. ಸರ್ಕಾರ ಕೂಡಲೇ ಕೊಡಬೇಕು.
Super article.I have suggested my friends to this.
ಈಗಿನ ಸರ್ಕಾರ ಆ ಎಲ್ಲಾ ದಾಖಲೆಗಳನ್ನು ಹೊರತರಬಹುದಿತ್ತಲ್ಲವೇ? ಅಥವಾ ಚುನಾವಣೆಗಾಗಿ ಕಾಯುತ್ತಿದೆಯೇ? ಯಾಕೆ ಈಗಿನ ಸರ್ಕಾರವೂ ಮೌನವಾಗಿದೆ? ಒಂದು ವೇಳೆ ನಾನೇನಾದರೂ ಈ ರೀತಿ ಪ್ರಶ್ನಿಸಿದರೆ ನಿಮ್ಮಿಂದ ಬರುವ ಉತ್ತರ ಒಂದೇ, “ಇಷ್ಟು ವರ್ಷಗಳ ಕಾಲ ಈ ದೇಶದಲ್ಲಿ ಅಧಿಕಾರದಲ್ಲಿದ್ದವರು ಏನು ಮಾಡುತ್ತಿದ್ದರು?”ಎಂದು…
ಏನಾದರೂ ಆಗಲಿ ನೇತಾಜಿಯವರ ಸಾವಿಗೆ ಸಂಬಂಧಿಸಿದ ಸತ್ಯಗಳು ಹೊರಬರಲಿ.
ಸುರೇಶ್
ಇದು ೨೦೧೫ರಲ್ಲಿ ಬರೆದ ಲೇಖನ, ೨೦೧೬ರ ನೇತಾಜಿ ಹುಟ್ಟು ಹಬ್ಬದ ದಿನದಂದೇ, ಪ್ರಧಾನಿ ಮೋದಿಯವರ ಸರ್ಕಾರ ಈ ಹಿಂದೆ ಯಾವ ಸರ್ಕಾರವೂ ತೆಗೆದುಕೊಳ್ಳದ ಗಟ್ಟಿ ನಿರ್ಧಾರ ತೆಗೆದುಕೊಂಡು, ನೇತಾಜಿಯವರ ಕುರಿತು ಭಾರತದಲ್ಲಿರುವ ಹಾಗೂ ವಿದೇಶದಲ್ಲಿ ಇದ್ದಿರಬಹುದಾದ ರಹಸ್ಯ ಪತ್ರಗಳೆಲ್ಲವನ್ನೂ ಸಾರ್ವಜನಿಕರಿಗೆ ಬಿಡುಗಡೆ ಮಾಡುತ್ತಿದೆ . ಈ ವೆಬ್ ತಾಣವಿರುವುದೇ ಅದಕ್ಕಾಗಿ
http://www.netajipapers.gov.in/