ವಿಷಯದ ವಿವರಗಳಿಗೆ ದಾಟಿರಿ

ಏಪ್ರಿಲ್ 18, 2015

ಇಲಾನ್ ಮಸ್ಕ್

‍ನಿಲುಮೆ ಮೂಲಕ

– ರಂಜನ್ ಕೇಶವ್ 

ಇಲನ್ ಮಸ್ಕ್ಒಬ್ಬ ಮನುಷ್ಯ ತನ್ನ ನಲವತ್ತನೆಯ ವಯಸ್ಸಿನಲ್ಲಿ ಎಷ್ಟು ಸಾಧನೆ ಮಾಡಲು ಸಾಧ್ಯ ? ಹೆಚ್ಚೆಂದರೆ ಒಂದು ಕಂಪನಿ ಹುಟ್ಟುಹಾಕಿ ಅದನ್ನ ನಡೆಸುವುದು ಹೆಚ್ಚು. ಅದೂ ಯಾವುದೋ ಒಂದು ಸಣ್ಣ ಪ್ರಮಾಣದ ಐಟಿ ಕಂಪನಿಯೋ, ಅದರಲ್ಲಿ ಜಾಗತಿಕ ಸ್ಪರ್ಧೆಯನ್ನು ಎದುರಿಸಿ ಒಂದು ಮಟ್ಟಕ್ಕೆ ನಿಲ್ಲುವುದೇ ಕಷ್ಟ ಇಂದಿನ ತಂತ್ರಜ್ಞಾನ ಯುಗದಲ್ಲಿ.

ಇನ್ನು ವರ್ತಮಾನವನ್ನು ಮೀರಿ ಭವಿಷ್ಯದ ಮೇಲೆ ದೃಷ್ಟಿಯಿಟ್ಟು ತಂತ್ರಜ್ಞಾನದಲ್ಲಿ ಆವಿಷ್ಕಾರವನ್ನೂ ಮಾಡುತ್ತಾ ಹಾಗೆಯೇ ನಾಲ್ಕೈದು ಕಂಪನಿಗಳನ್ನು ಹುಟ್ಟುಹಾಕಿ ನಡೆಸಿಕೊಂಡು ಹೋಗುವುದು ಸಾಮಾನ್ಯವೇ ?

ಬಾಲ್ಯದಿಂದಲೂ ಚುರುಕಿನ ಸ್ವಭಾವದ ಇಲಾನ್ ತನ್ನ ಹನ್ನೆರಡನೆಯ ವಯಸ್ಸಿನಲ್ಲಿಯೇ ಸ್ವತಃ ಕಂಪ್ಯೂಟರ್ ಪ್ರೋಗ್ರಾಂ ಬರೆಯುವುದನ್ನು ಕಲಿತು ಬ್ಲಾಸ್ಟೆರ್ ವಿಡಿಯೋ ಗೇಮ್ ರಚಿಸಿ ಐನೂರು ಡಾಲರಗಳಿಗೆ ಮಾರಿ ದುಡ್ಡು ಮಾಡಿದ್ದ. ಆಗಿನ್ನೂ 1988ರ ಇಸವಿ. ಗೇಮಿಂಗ್ ತಂತ್ರಜ್ಞಾನವಷ್ಟೇನು ಬೆಳೆದಿರಲಿಲ್ಲ. ಇಲಾನನಿಗೆ ತಂತ್ರಜ್ಞಾನ ಬೆಳೆಯುತ್ತುರುವ ಸಮಕಾಲದಲ್ಲೇ ಅದನ್ನು ಬೇಕಾಗುವ ರೀತಿಯಲ್ಲಿ ಬಳಸಿಕೊಳ್ಳುವ ಜಾಣತನವಿತ್ತು.

ನಂತರ ಕ್ವೀನ್ಸ್ ವಿಶ್ವವಿದ್ಯಾಲಯದಲ್ಲಿ ಪದವಿಪೂರ್ವ ಶಿಕ್ಷಣ ಪಡೆದು ತದನಂತರ ಪೆನೆಂಸುವಿಲ ವಿಶ್ವವಿದ್ಯಾಲಯದಲ್ಲಿ ಪದವಿ ಪಡೆದು ಮತ್ತೆ ಎರಡನೆಯ ಪದವಿಗಾಗಿ ವಾರ್ಟನ್ ಸ್ಕೂಲ್ ನಲ್ಲಿ ಓದುತ್ತಾನೆ. ಕೊನೆಯದಾಗಿ ಸ್ಟಾಂನ್ಫರ್ಡ್ ನಲ್ಲಿ ಅಪ್ಲೈಡ್ ಫಿಸಿಕ್ಸ್ ನಲ್ಲಿ ಪಿ.ಎಚ್.ಡಿ ಗಾಗಿ ಅಧ್ಯಯನ ಶುರುಮಾಡಿದನಾದರೂ ಅಷ್ಟರಲ್ಲಿ ಉದ್ಯಮಿ (Entrepreneur) ಆಗಬೇಕೆಂಬ ಹೆಬ್ಬಯಕೆ ಬೆಳೆದು ಪಿ.ಎಚ್.ಡಿ ಯನ್ನು ಅಲ್ಲೇ ಬಿಡಿತ್ತಾನೆ.

ಅದು 1995 ನ ಇಸವಿ. ಆಗ ತಾನೆ ಅಂತರ್ಜಾಲ ಬಳಕೆಯಲ್ಲಿ  ಬಂದಿತ್ತು. ಆಗಿನ್ನೂ ಅಂತರ್ಜಾಲದಲ್ಲಿ ವ್ಯವಹರಿಸಲು ಸ್ಥಳೀಯ ಉದ್ಯಮಗಳ ಸಂಪರ್ಕವಿವರಗಳಿರಲಿಲ್ಲ. ಇದನ್ನು ಮನಗಂಡು ಇಲಾನ್ ಮತ್ತು ಅವನ ತಮ್ಮ ಕಿಂಬಲ್ Zip2 ಎಂಬ ಕಂಪನಿ ಆರಂಭಿಸಿ ‘ಸಿಟಿ ಗೈಡ್ ‘ ಎಂಬ ಡಿಜಿಟಲ್ ವೃತ್ತ ಪತ್ರಿಕೆ ಯಲ್ಲಿ ಎಲ್ಲಾ ಮಾಹಿತಿಗಳು ದೊರಕುವಂತೆ ಮಾಡಿದ. ಇದು ಬಹಳ ಯಶಸ್ವಿ ಕಂಡು ಕಾಂಪ್ಯಾಕ್ Zip2 ವನ್ನು 307 ದಶಲಕ್ಷ ಡಾಲರ್ ಗಳಿಗೆ ಖರೀದಿಸಿ ಇಲಾನನಿಗೆ ಈ ಮಾರಾಟದಿಂದ 22 ದಶಲಕ್ಷ ಡಾಲರ್ ದೊರಕಿತು. ಆಗಿನ್ನೂ ಇಲಾನನಿಕೆ ಇಪ್ಪತ್ನಾಲ್ಕು ವಯಸ್ಸು !

ಇದು ಕೇವಲ ಪ್ರಾರಂಭ. ಮಾರ್ಚ್ 1999ರಲ್ಲಿ ಇಲಾನ್ X.com ಎಂಬ ಇನ್ನೊಂದು ಆನ್ಲೈನ್ ಆರ್ಥಿಕ ಸೇವಾ ಕಂಪನಿಯನ್ನು ಪ್ರಾರಂಭಿಸಿದ. ಒಂದು ವರ್ಷದಲ್ಲಿ Confinity ಎಂಬ PayPal ಸೇವೆಯಲ್ಲಿ ವಿಲೀನಗೊಂಡಿತು. ಕೊನೆಗೆ eBay ಕಂಪನಿ PayPal  ಅನ್ನು ಕೊಂಡುಕೊಳ್ಳುವಾಗ ಇಲಾನ್ PayPal  ನ ಶೇ 11ರಷ್ಟು ಷೇರು ಹೊಂದಿದ್ದ.

ತದನಂತರ ಇಲಾನ್ ಕಣ್ಣು ಹಾಯಿಸಿದ್ದು ನೇರ ಅಂತರಿಕ್ಷಕ್ಕೇ! ಇಲ್ಲಿಯತನಕ ಗಳಿಸಿದ ಹಣದಿಂದ ಇಲಾನ್ ಮೂರನೆಯ ಕಂಪನಿ SpaceX ಎಂಬ ಅತ್ಯಾಧುನಿಕ ರಾಕೆಟ್ ಗಳನ್ನು ತಯಾರಿಸುವ ಸಂಸ್ಥೆಯನ್ನು ತೆರೆದ. ಇಲ್ಲಿಯತನಕವೂ ನಾವು ಅದೇ 60ರ ದಶಕದ ನಾಸಾ ತಂತ್ರಜ್ಞಾನವನ್ನು ಬಳಸುತ್ತಿದ್ದು, ಅದಕ್ಕೆ ಇಲಾನ್ ಕಡಿಮೆ ಖರ್ಚಿನಲ್ಲಿ ರಾಕೆಟ್ ನಿರ್ಮಿಸುವುದು ಮತ್ತು ರಾಕೆಟ್ ನ ಉಡಾವಣಾ ಸಮಯದಲ್ಲಿ ಕಳಚಿಬೀಳುವ ವಿವಿಧ ಹಂತಗಳನ್ನು ಪುನಃ ಬಳಸುವುದರ ಸಲುವಾಗಿ ಹೊಸ ವಿಧಾನಗಳನ್ನು ಕಡುಹಿಡಿಯುವುದೇ ಮೂಲ ಉದ್ದೇಶ. ಸೆಪ್ಟೆಂಬರ್ 2009 ರಲ್ಲಿ SpaceX ವಿಶ್ವದ ಮೊದಲ ಉಪಗ್ರಹವನ್ನು ಹೊತ್ತೊಯ್ದ ಖಾಸಗಿ ರಾಕೆಟ್ ಎಂಬ ಹೆಗ್ಗಳಿಕೆಯೂ ಬಂತು. ಇಷ್ಟೇ ಅಲ್ಲದೇ ಮೇ 2012ರಲ್ಲಿ SpaceX Dragon vehicle ಅಂತರಾಷ್ಟ್ರೀಯ ಬಾಹ್ಯಾಕಾಶ ಸಂಸ್ಥೆಗೆ ಸರಕನ್ನು ಸಾಗಿಸಿದ ಮೊದಲ ಆರ್ಥಿಕ ಕಂಪನಿ ಎಂದು ಇತಿಹಾಸ ಬರೆಯಿತು.

ಇಲಾನನಿಗೆ ಮಂಗಳ ಗ್ರಹವನ್ನು ವಸಾಹತನ್ನಾಗಿಸಿ ಒಂದು ದಶಲಕ್ಷ ಜನರನ್ನು ಸಾಗಿಸಲು ಅನುಕೂಲವಾಗುವಂತೆ ತಂತ್ರಜ್ಞಾನವನ್ನು ಬೆಳೆಸಬೇಕೆಂಬ ಮೀರಿದ ಬಯಕೆಯೂ ಇದೆ.

ಇನ್ನೂ ಎರಡು ಕಂಪನಿಗಳಾದ Tesla Motors ಮತ್ತು SolarCity ಎಂಬ ಕಂಪನಿಗಳನ್ನೂ ಜಾಗತಿಕ ತಾಪಮಾನವನ್ನು ಇಳಿಸಲೆಂದು ಪ್ರಾರಂಭಿಸಿದ್ದ. Tesla Motors ನಲ್ಲಿ ವಿದ್ಯುತ್ ಚಾಲಿತ ಸ್ಪೋರ್ಟ್ಸ್ ಕಾರುಗಳನ್ನು ತಯಾರುಮಾಡಲಾಗುತ್ತದೆ. ಭವಿಷ್ಯದಲ್ಲಿ ಪೆಟ್ರೋಲ್ ಇಂಧನಗಳ ಅಭಾವ ಮತ್ತು ಮಾಲಿನ್ಯವನ್ನು ತಡೆಯಲೆಂದು ಸೌರ ತಂತ್ರಜ್ಞಾನವನ್ನು ಇನ್ನಷ್ಟು ಉತ್ತೇಜಿಸುವುದು ಇವನ ಉದ್ದೇಶ. SolarCity ಕಂಪನಿ ಈಗ ಅಮೇರಿಕದ ಎರಡನೇ ಅತಿ ದೊಡ್ಡ ಸೌರ ವಿದ್ಯುತ್ ತಯಾರಿಕಾ ಕಂಪನಿಯೆಂದು ಹೆಸರಿದೆ.

ಹಾಗಂಥ ಇಲಾನನ ಈ ಹಾದಿ ತುಂಬಾ ಸುಗಮವಾಗಿತ್ತೆಂದಲ್ಲ. ಬಹಳ ಏಳು ಬೀಳಿನ ದಾರಿಯನ್ನು ಸವೆದಿದ್ದ್ದಾನೆ. 2008ರಲ್ಲಿ BBCಯ Top Gear ಶೋನಲ್ಲಿ Tesla ನ ಕಾರು 200 ಕಿ ಮೀ ಒಡಬೇಕಾಗಿದ್ದು ಕೇವಲ 88 ಕಿ ಮೀ ಗೆ ನಿಂತುಬಿಟ್ಟಿತ್ತು. ಇದರಿಂದ ಕಂಪನಿಯ ಮೇಲಿನ ವಿಶ್ವಾಸಕ್ಕೆ ಹೊಡೆತ ಬಿದ್ದಿತ್ತು. ಮತ್ತು ಅದೇ ವರ್ಷದ ಆರ್ಥಿಕ ಕುಸಿತದಲ್ಲಿ ಇಲಾನ್ ತನ್ನ ಮೂರು ಕಂಪನಿಗಳನ್ನು ಮುಚ್ಚಬೇಕಾದ ಪರಿಸ್ಥಿತಿಯೂ ಬಂದಿತ್ತು. ಮತ್ತು ಇತ್ತೀಚಿಗಷ್ಟೇ ತನ್ನ ಪ್ರಾಯೋಗಿಕ ನೇರವಾಗಿ ತೂಗಾಡುತ್ತಾ ಇಳಿಯುವ (Hovering)  Falkon ರಾಕೆಟ್ ಯಶಸ್ಸು ಕಾಣಲಿಲ್ಲ. ಆದರೂ ಎಲ್ಲಾ ಅಡೆತಡೆಗಳನ್ನು ಸಹಿಸಿ ತಮ್ಮ ಕನಸುಗಳ ಬೆನ್ನೇರಿ ಬಾನಿಗೇರುತ್ತಾ ವಿಜ್ಞಾನ/ತಂತ್ರಜ್ಞಾನಗಳಲ್ಲಿ ಉನ್ನತ ಸಾಧನೆ ಗೈಯುವ ಇಲಾನ್ ನಂಥವರು ಸ್ಪೂರ್ತಿದಾಯಕರೆನ್ನುವುದರಲ್ಲಿ ಸಂಶಯವೇ ಇಲ್ಲ.

ಇಲಾನ್ ನಂಥೆಯೇ ಅಮೇರಿಕಾದಲ್ಲಿ ಮೊದಲಿನಿಂದಲೂ ಹೊವಾರ್ಡ್ ಹ್ಯೂಗ್ಸ್, ಫೋರ್ಡ್ , ಸ್ಟೀವ್ ಜಾಬ್ಸ್ , ಬಿಲ್ ಗೇಟ್ಸ್ ನಂತವರು ಉದ್ಯಮೆಯನ್ನು ಬೆಳೆಸಿ ದೇಶವನ್ನು ಸೂಪರ್ ಪಾವರ್ ಮಾಡಿದ್ದಾರೆ. ಇನ್ನೂ ಉದ್ಯಮೆ/ ತಂತ್ರಜ್ಞಾನಗಳಲ್ಲಿ ಮೇಲೆ ಬೆಳೆಯುತ್ತಲೇ ಇದ್ದಾರೆ.

ಸುಮಾರು 1895ರ ಇಸವಿಯಲ್ಲಿ ವಿವೇಕಾನ6ದರು ಲಾ ಏಂಜಲೀಸ್ ನಲ್ಲಿ “Hints on Practical Spirituality “ ರ ಬಗ್ಗೆ ಉಪನ್ಯಾಸ ನೀಡುವಾಗ ಹೇಳುತ್ತಾರೇನೆಂದರೆ ಪಾಶ್ಚಾತ್ಯರು ತುಂಬಾ ಪ್ರಾಯೋಗಿಕ ಮನೋಭಾವದವರು. ಕೇವಲ ಐದು ಜನ ಒಟ್ಟಿಗೆ ಸೇರಿ ಐದು ಘಂಟೆ ಚರ್ಚೆ ಮಾಡಿದರೆ ಸಾಕು ಒಂದು ಜಾಯಿಂಟ್ ಸ್ಟಾಕ್ ಕಂಪನಿಯನ್ನು ತೆರೆಯುತ್ತಾರೆ. ಆದರೆ ನಮ್ಮ ದೇಶದಲ್ಲಿ ಐವತ್ತು ವರ್ಷಗಳಾದರೂ ಇನ್ನೂ ಮಾಡಲಿಕ್ಕಾಗಲಿಲ್ಲ. ಆಶ್ಚರ್ಯಕರವೇನೆಂದರೆ ಈ ಮಾತನ್ನು ಸ್ವಾಮೀಜಿ ಆಗಲೇ ನುಡಿದಿದ್ದರು !

ನಮ್ಮ ದೇಶದ ಏರುತ್ತಿರುವ ಜನಸಂಖ್ಯೆಗೆ ಪ್ರತಿವರ್ಷ ಕನಿಷ್ಠ ಎರಡು ಕೋಟಿ ಉದ್ಯೋಗ ಸೃಷ್ಟಿ ಮಾಡಬೇಕಿದೆ. ಆದ್ದರಿಂದ ನಮ್ಮಲ್ಲಿ ಉದ್ದಿಮೆ ಇನ್ನೂ ಹೆಚ್ಚು ಬೆಳೆಯಬೇಕಿದೆ. ಅದಿಲ್ಲವಾದ್ದರಿಂದ ನಾವುಗಳು ವಿದೇಶೀ ಬಂಡವಾಳಕ್ಕೇ ಅವಲಂಬಿತರಾಗಬೇಕಾಗುತ್ತದೆ. ನಮ್ಮಲ್ಲನೇಕರು ಇಂಜಿನಿಯರಿಂಗ್ ಪದವಿ ನಂತರ ಯಾವುದಾದರೂ ಕಂಪನಿಯಲ್ಲು ಉದ್ಯೋಗ ಪಡೆದು ತಣ್ಣಗಿರುತ್ತೇವೆ. ಆಂಡ್ರಾಯ್ಡ್ ಫೋನ್ ಗಳನ್ನು ಖರೀದಿಸುತ್ತೇವೆ ಆದರೆ ಉತ್ಪಾದನೆ ಮಾಡಲು ಯೋಚನೆ ಮಾಡುವುದಿಲ್ಲ. ಈ ಜಡತ್ವವನ್ನು ಮೀರದೇ ಹೋದರೆ ನಮ್ಮ ಪ್ರಧಾನ ಮಂತ್ರಿಗಳಿಗೆ ಪ್ರತೀ ಪಾಶ್ಚ್ಯಾತ್ಯ ದೇಶಗಳನ್ನು ಭೇಟಿ ಮಾಡಿ ಹೂಡಿಕೆ ಮಾಡಿ ಎಂದು ಬೇಡಿಕೊಳ್ಳುವುದು ತಪ್ಪುವುದಿಲ್ಲ.

Read more from ಲೇಖನಗಳು

ನಿಮ್ಮ ಅನಿಸಿಕೆ...

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Note: HTML is allowed. Your email address will never be published.

Subscribe to comments