ವಿಷಯದ ವಿವರಗಳಿಗೆ ದಾಟಿರಿ

ಏಪ್ರಿಲ್ 19, 2015

ನಿಜಗನ್ನಡ ವ್ಯಾಕರಣ – ಭಾಗ ೨

‍ನಿಲುಮೆ ಮೂಲಕ

– ಹರೀಶ್ ಆತ್ರೇಯ

ನಿಜಗನ್ನಡ ವ್ಯಾಕರಣನಿಜಗನ್ನಡ ವ್ಯಾಕರಣ – ಭಾಗ ೧

ಅವರ್ಗೀಯ ವ್ಯಂಜನಗಳ ಬಗ್ಗೆ ಮಾತನಾಡುತ್ತಿದೆವು, ಹಳೆಗನ್ನಡಾಭ್ಯಾಸಿಗಳ ಗಮನಕ್ಕೆ ತಂದ ಱ ೞ ಗಳನ್ನು ’ರಳ’ ಗಳೆಂದೂ ಕರೆಯುತ್ತಾರೆ. ಹೆಚ್ಚುವರಿಯಾಗಿ ಕನ್ನಡ ದೇಸೀ ಶಬ್ದಗಳಲ್ಲಿ ಬಳಕೆಯಾಗುವ ’ಳ’ (ಈಗ ಹೆಚ್ಚಾಗಿ ಬಳಕೆಯಲ್ಲಿರುವ ಅವರ್ಗೀಯ ವ್ಯಂಜನ)ವನ್ನು ’ಕುಳ’ ಗಳೆಂದು ಕರೆಯುತ್ತಾರೆ. ಸಂಸ್ಕೃತ ಶಬ್ದಗಳಲ್ಲಿ ಪ್ರಯೋಗವಾಗುವ ’ಲ’ ಕ್ಕೆ ಪ್ರತಿಯಾಗಿ ಬಳಕೆಯಾಗುವ ’ಳ’ ವನ್ನು ’ಕ್ಷಳ’ಗಳೆಂದು ಕರೆಯುತ್ತಾರೆ. ಹೀಗಾಗಿ ’ಳ’ ಕಾರವು ಪ್ರಯೋಗಗಳಲ್ಲಿ ರಳ,ಕುಳ,ಕ್ಷಳ ಎಂಬುದಾಗಿ ಗುರುತಿಸಬಹುದು. ಹಿಂದಿನ ಲೇಖನದಲ್ಲಿ ಕೊಟ್ಟ ಅರ್ಥ ವ್ಯತ್ಯಾಸದ ಉದಾಹರಣೆಯ ಜೊತೆಗೆ ಇನ್ನೂ ಕೆಲವು ಉದಾಹರಣೆಗಳನ್ನೀಗ ನೋಡೋಣ

ರಳ                                             ಕುಳ

ಹಳೆಗನ್ನಡ (ೞ್)                            ಅಚ್ಚಗನ್ನಡದ ಳ

ಪೊೞೆ = ನದಿ                                ಪೊಳೆ = ಪ್ರಕಾಶಿಸು

ಆೞ್ = ಮುಳುಗು                          ಆಳ್ = ಸೇವಕ, ಮನುಷ್ಯ

ಬಾೞ್ = ಜೀವನ                            ಬಾಳ್=ಕತ್ತಿ

ಬಾೞೆ= ಒಂದು ಜಾತಿಯ ಮೀನು       ಬಾಳೆ = ಒಂದು ಜಾತಿಯ ಹಣ್ಣು

ತೞೆ= ಛತ್ರಿ                                    ತಳೆ =ಹೊಂದು

ಇಂತಹ ಅರ್ಥ ವ್ಯತ್ಯಾಸಗಳು ಅನೇಕವಿದೆ, ಅರ್ಥ ಮಾಡಿಕೊಳ್ಳುವುದು ಕಷ್ಟವೆನಿಸಿ ಹಳೆಗನ್ನಡವನ್ನೇ ತಿರಸ್ಕರಿಸಿ ಮತ್ತೊಂದು ಕನ್ನಡವನ್ನು ಕಟ್ಟುವೆಂದು ಹೊರಡುವುದು ಮೂರ್ಖತನದ ಪರಮಾವಧಿ. ಇರಲಿ ರಳ,ಕುಳ,ಕ್ಷಳ ಗಳ ಉತ್ಪತ್ತಿ ಸ್ಥಾನವನ್ನು ತಿಳಿದು ಉಚ್ಚರಿಸುವ ಮತ್ತು ಆಲಿಸುವಲ್ಲಿ ಸ್ಪಷ್ಟತೆ ಮೂಡಿದಾಗ ಇದು ಕಷ್ಟವೆನಿಸುವುದಿಲ್ಲ ಇದಕ್ಕೆ ದರ್ಪಣಕಾರನ ವಿವರಣೆ ಹೀಗಿದೆ

ಅತಿಪೀಡನದಿಂ ರೇಫಾ

ಶ್ರಿತಮಾದ ಱ ಕಾರಮುಂ ಸಮಂತು ಡಕಾರಾ

ಶ್ರಿತಮಾದ ಱೞನುಮಂಗೀ

ಕೃತಪದಲತ್ವಕ್ಕೆ ಸನೇಮ ಸಲ್ಲದ ಕುಳನುಂ

ಹಳೆಗನ್ನಡದ ’ರ’ ಕಾರ ಹುಟ್ಟುವ ಸ್ಥಾನವನ್ನು (ಅಂದರೆ ದಂತ ಮೂಲೀಯ ಸ್ಥಾನವನ್ನು) ಒತ್ತಿ ಉಚ್ಚರಿಸಿದಾಗ ’ಱ’ ಕಾರವು ಹುಟ್ಟುವುದು. ’ಡ’ ಎಂಬ ವ್ಯಂಜನವು ಹುಟ್ಟುವ ಸ್ಥಾನವನ್ನು ಒತ್ತಾಗಿ ’ಳ’ ಕಾರವಾಗಿ ಉಚ್ಚರಿಸಿದಾಗ ಹಳೆಗನ್ನಡದ ’ೞ’ ಕಾರವು ಹುಟ್ಟುತ್ತದೆ. ವರ್ಣೋತ್ಪತ್ತಿಗಳ ವಿಚಾರವನ್ನು ಮುಂದಿನ ಅಧ್ಯಾಯದಲ್ಲಿ ನೋಡೋಣ.

ಮಹಾಪ್ರಾಣಗಳು : ಮಹಾಪ್ರಾಣಗಳು ಕನ್ನಡದ ಸಮರೂಪಿ ಭಾಷೆಗಳ (ಇದನ್ನು ದ್ರಾವಿಡ ಭಾಷೆಗಳು ಎಂಬುದಾಗಿ ತಪ್ಪಾಗಿ ಹೇಳಲಾಗುತ್ತದೆ, ದ್ರಾವಿಡ ಎಂಬ ಅಸ್ಮಿತೆಯನ್ನು ಹುಟ್ಟು ಹಾಕಿದ ಮತ್ತು ದ್ರಾವಿಡ ಜನಾಂಗವೆಂಬ ಕೃತ್ರಿಮವನ್ನು ನಿರ್ಮಿಸಿದ ಬ್ರಿಟಿಷ್ ವಿದ್ವಾಂಸರುಗಳ ಮಹಾಪರಾಧದ ಫಲ ಈ ದ್ರಾವಿಡ ಭಾಷೆ ಎಂಬುದು) ಜಾಯಮಾನಕ್ಕೆ ಹೊಂದಿಕೊಂಡು ಬಂದಿಲ್ಲವೆಂದು ಹಲವಾರು ಭಾಷಾ ಪರಿಣಿತರ (ಶಾಸ್ತ್ರಜ್ಞರಲ್ಲ) ಅಭಿಪ್ರಾಯ. ಆದರೂ ಭಾಷಾತಜ್ಞರು ಮಹಾಪ್ರಾಣಗಳ ಅಸ್ತಿತ್ವ ಕನ್ನಡಕ್ಕೆ ಬೇಕೆಂದು ಅಭಿಪ್ರಾಯಪಡುತ್ತಾರೆ. ಮಹಾಪ್ರಾಣಗಳು ಬೇಕೇ? ಬೇಡವೇ? ಎಂಬ ಜಿಜ್ಞಾಸೆ ಇಂದು ನಿನ್ನೆಯದಲ್ಲ. ದರ್ಪಣಕಾರನೇ ಹೇಳುವಂತೆ

ಒಳವು ಮಹಾಪ್ರಾಣಂಗಳ್

ವಿಳಸತ್ ಕರ್ಣಾಟಭಾಷೆಯೊಳ್ ಕೆಲವು ನಿಜೋ

ಜ್ವಳಮಾಗಿ ವರ್ಗದಂತ್ಯಂ

ಗಳನಱಿಯನುನಾಸಿಕಾಖ್ಯೆಯಂ ತಳೆದಿರ್ಕುಂ

ದೇಸೀ ಕನ್ನಡವೆಂಬುದರಲ್ಲಿ ಮಹಾಪ್ರಾಣವಿಲ್ಲವೆಂದರೂ ಬಳಕೆಯಲ್ಲಿರುವ ಅಥವಾ ಕಾವ್ಯಕ್ಕೆ ಬೇಕಾಗುವ, ಸೌಂದರ್ಯವನ್ನು ಹೆಚ್ಚಿಸುವ ಪದಗಳು ಸಂಸ್ಕೃತದಿಂದ ಬಂದಿರುವುದರ ಕಾರಣ ಮಹಾಪ್ರಾಣಗಳು ಕನ್ನಡಕ್ಕೆ ಅನಿವಾರ್ಯ ಮತ್ತು ಅವಶ್ಯಕ. ’ಭಯಂಕರ’ ದಲ್ಲಿ ಭಯವಿರಬೇಕಾದರೆ ’ಭ’ ಬೇಕು, ಠಕ್ಕತನ ಎನ್ನುವಲ್ಲಿ ಮೋಸ ಕಳ್ಳತನವನ್ನು ಭಾವದಲ್ಲಿ ತೋರಿಸುವಾಗ ’ಠ’’ ಕಾರ ಸಹಾಯಕಾರಿ, ಢಂ ಢಂ ಡಿಗಾ ಡಿಗಾ ಎಂದಾಗ ಢಂ ಶಬ್ದವು ಉಚ್ಚರಿಸುವಾಗ ಸಂತಸ,ಅಚ್ಚರಿ ಕಾಣಿಸುತ್ತದಲ್ಲವೇ ಅದಕ್ಕೆ ಮಹಾಪ್ರಾಣ ಬೇಕಾಗುತ್ತದೆ. ’ಯಾರು ಅರಿಯರು ನಿನ್ನ ಭುಜಬಲದ ಪರಾಕ್ರಮ?’ ಎನ್ನುವಾಗ ಭುಜ ಶಬ್ದದಲ್ಲಿ ಶಕ್ತಿ ಪ್ರದರ್ಶನ ವೀರರಸ ಕಾಣಿಸಬೇಕು ಹೆಗಲುಬಲದ/ತೋಳ್ಬಲದ/ಬಾಹುಬಲದ ಎನ್ನುವುದು ವೀರರಸವನ್ನು ಪರಿಣಾಮಕಾರಿಯಾಗಿ ತೋರಿಸಲಸಾಧ್ಯವಾದುದು. ಸಂಖ್ಯವಾಚಕಗಳಲ್ಲಿ ,ಅನುಕರಣ ಶಬ್ದಗಳಲ್ಲಿ ಮಹಾಪ್ರಾಣಗಳು ಬೇಕೇ ಬೇಕು, ಮಹಾಪ್ರಾಣಗಳು ಯಾವುವೆಂದರೆ

ವರ್ಗದ್ವಿತೀಯವರ್ಣಂ

ವರ್ಗಚತುರ್ಥಾಕ್ಷರಂ ಮಹಾಪ್ರಾನಮವಂ

ಮಾರ್ಗವಿದರ್ ಸಂಖ್ಯೆಯೊಳಂ

ಭೋರ್ಗರೆವನುಕೃತಿಯೊಳಂ ಪ್ರಯೋಗಿಸುತಿರ್ಪರ್

ಝಲ್ ಝಲ್ ನಾದಕೆ , ಘಮ ಘಮಾಡಿಸ್ತಾವ ಮಲ್ಲಿಗೆ, ಖಣಿಲ್ ಎಂದು ಕೇಳುತ್ತಿತ್ತು, ಧುಮ್ಮಿಕ್ಕಿ ಹರಿಸುವ ಜಲಧಾರೆಯಲ್ಲಿ, ಜಲಪಾತ ಭೋರ್ಗರೆಯುತ್ತಿದೆ , ಈ ವಾಕ್ಯಗಳಲ್ಲಿ ಸರಳವಾದ ದೇಸೀ ಎನ್ನುವ ಕನ್ನಡ ಶಬ್ದವನ್ನು ಬಳಸಿ ಅದೇ ಅಂದವನ್ನು ಕಟ್ಟಿಕೊಡಲು ಸಾಧ್ಯವೇ?

ವರ್ಣೋತ್ಪತ್ತಿ ಸ್ಥಾನಗಳ ವಿಚಾರ

ಸಂಧಿ ಸಮಾಸಗಳನ್ನು ತಪ್ಪಿಲ್ಲದೆ ಉಚ್ಚರಿಸುವುದಕ್ಕೆ ವರ್ಣೋತ್ಪತ್ತಿ ಸ್ಥಾನಗಳ ಅರಿವು ಅವಶ್ಯಕವಾಗಿದೆ. ಅಕ್ಷರಗಳು ಹುಟ್ಟುವ ಸ್ಥಳ ಮತ್ತು ಅವುಗಳ ಬಗೆಯನ್ನು ತಿಳಿದುಕೊಳ್ಳೋಣ.ಧ್ವನಿಯನ್ನು ಹೊರಡಿಸುವ ಅಂಗಗಳನ್ನು ದ್ವನ್ಯಂಗವೆಂದು ಕರೆಯುತ್ತಾರೆ. ತುಟಿಗಳು(ಓಷ್ಠ) , ನಾಲಗೆ(ಜಿಹ್ವಾ) , ಹಲ್ಲುಗಳು(ದಂತ), ಬಾಯಿಯ ಅಂಗಳ(ತಾಲು),ಮೂಗು(ನಾಸಿಕ/ನಾಸಾಕುಹರ), ಗಂಟಲು(ಕಂಠ) ಗಳು ಧ್ವನ್ಯಂಗಗಳಾಗಿವೆ. ಇವೆಲ್ಲವುಗಳಿಂದ ಧ್ವನಿಯು ಹುಟ್ಟಿದರೂ ನಾಭಿಯೇ ಇದರ ಮೂಲವಾಗಿದೆ. ಗಾಳಿಯನ್ನು ಬಂಧಿಸಿ ಮತ್ತು ಬಿಡುವ ಕಾರ್ಯದಲ್ಲಿ ಧ್ವನಿಗಳು ಹುಟ್ಟುತ್ತವೆ. ಅವುಗಳ ಪ್ರಮಾಣ ಮತ್ತು ರೂಪಗಳನ್ನು ತಿಳಿಯೋಣ.

ದರ್ಪಣಕಾರನು ಹೇಳುವಂತೆ

ಕೊರಲುಂ ಜಿಹ್ವಾಮೂಲಮು

ಮುರಮುಂ ತಾಲಗೆಯುಮೋಷ್ಠಮುಂ ನಾಸಿಕೆಯುಂ

ಶಿರಮುಂ ದಂತಮುಮೆಂದ

ಕ್ಕರದಮುದಯಿಪ ತಾಣಮಾದುವೀ ಪೇೞೆಂಟುಂ

ಇದನ್ನು ಅನುಮೋದಿಸುವಂತೆ ಶಾಸನಕಾರನ ಸೂತ್ರವು ಹೀಗಿದೆ

ಅಷ್ಟೌ ಸ್ಥಾನಾನಿ ವರ್ಣಾನಾಮುರಃ ಕಂಠಃಶಿರಸ್ಥಥಾ

ಜಿಹ್ವಾಮೂಲಂ ಚ ದಂತಾಶ್ಚ ನಾಸಿಕೋಷ್ಟೌ ಚ ತಾಲು ಚ

ಸ್ವರಗಳ ಉಚ್ಚಾರದಲ್ಲಿ ನಾಲಗೆಯು ಮತ್ತು ತುಟಿಗಳು ಮುಖ್ಯವಾಗಿವೆ. ಹೀಗಾಗಿ ಸ್ವರಗಳನ್ನು ವಿಸೃತೋಷ್ಟ, ವೃತ್ತೋಷ್ಠ,ಸಂವೃತ,ವಿವೃತ ಎಂದು ವಿಂಗಡಿಸಲಾಗಿದೆ

ಸ್ವರಗಳಾದ –   ’ಇ’ ಮತ್ತು ’ಎ’ ಗಳನ್ನು ವಿಸೃತೋಷ್ಠ ಎನ್ನುತ್ತಾರೆ, ಇ ಮತ್ತು ಎ ಗಳನ್ನು ಉಚ್ಚರಿಸುವಾಗ ಓಷ್ಠ(ತುಟಿ)ಗಳು ಸೇರವು, ವಿಸೃತವಾಗಿರುತ್ತವೆ. ತುಟಿಗಳು ಸ್ವಲ್ಪ ಅಗಲವಾಗಿಯು ದಂತಗಳು ಕಾಣುವಂತೆಯೂ ಇರುತ್ತವೆ. ಬಹುಮುಖ್ಯವಾಗಿ ನಾಲಗೆಯ ತುದಿಯು ಬಹು ಮೇಲಕ್ಕೆ ಎದ್ದಿರುತ್ತದೆ.

’ಉ’ ಮತ್ತು ’ಒ’ ಗಳನ್ನು ವೃತ್ತೋಷ್ಠ ಎನ್ನುತ್ತಾರೆ. ಉ ಮತ್ತು ಒ ಗಳನ್ನು ಉಚ್ಚರಿಸುವಾಗ ತುಟಿಗಳು ವೃತ್ತಾಕಾರದಲ್ಲಿ ಇರುತ್ತವೆ ಗಾಳಿಯು ಕಂಠದ ಮೂಲಕ ಹಾದು ವೃತ್ತಾಕಾರದ ತುಟಿಗಳ ಮಧ್ಯೆ ಹಾದು ಧ್ವನಿಯನ್ನು ಹೊರಡಿಸುತ್ತದೆ. ’ಉ’ ಉಚ್ಚರಿಸುವಾಗ ನಾಲಗೆಯ ಪಶ್ಚ ಭಾಗವು ಅಂದರೆ ನಾಲಗೆಯ ಹಿಂದಿನ ಭಾಗವು ಮೇಲೆದ್ದಿರುತ್ತದೆ ಮತ್ತು ನಾಲಗೆಯ ತುದಿಯು ಕೆಳಹಲ್ಲುಗಳ ತುದಿಯಲ್ಲಿ ನಿಂತಿರುತ್ತದೆ. ’ಒ’ ಉಚ್ಚರಿಸಬೇಕಾದರೆ ನಾಲಗೆಯ ಹಿಂಭಾಗವು ಇನ್ನೂ ಮೇಲಕ್ಕೆ ಎದ್ದಿರುತ್ತದೆ ಮತ್ತು ನಾಲಗೆಯ ತುದಿಯು ಕೆಳಹಲ್ಲುಗಳ ತುದಿಯಲ್ಲಿ ಮತ್ತೂ ಹಿಂದಕ್ಕೆ ಸರಿದಿರುತ್ತದೆ.ಮೇಲಿನ ಮತ್ತು ಕೆಳಗಿನ ದಂತಪಂಕ್ತಿಗಳು ತಮ್ಮ ನಡುವಿನ ಅಂತರವನ್ನು ಹೆಚ್ಚಿಸಿಕೊಂಡಿರುತ್ತದೆ.

’ಈ’ ಮತ್ತು ’ಊ’ ಗಳನ್ನು ಸಂವೃತ ಎನ್ನುತ್ತಾರೆ, ಸಂವೃತ ಎಂದರೆ ಆವರಿಸಿಕೊಂಡದ್ದು, ಮುಚ್ಚಿಕೊಂಡದ್ದು, Closed , ’ಈ’ ಉಚ್ಚರಿಸುವಾಗ ದಂತಗಳು ಒಂದಕ್ಕೊಂದು ಮುಚ್ಚಿಕೊಂಡಿರುತ್ತದೆ, ತುಟಿಗಳು ಬಹು ಅಗಲವಾಗಿರುತ್ತದೆ, ನಾಲಗೆಯು ಮೇಲಕ್ಕೆದ್ದಿರುತ್ತದೆ. ’ಊ’ ಉಚ್ಚರಿಸುವಾಗ ತುಟಿಗಳು ವೃತ್ತದಲ್ಲಿಯೂ ದಂತಗಳು ಮುಚ್ಚಿದಂತೆಯೂ ನಾಲಗೆಯ ತುದಿಯು ಕೆಳಗಿನ ದಂತಪಂಕ್ತಿಯ ಮೂಲದಲ್ಲಿ ಮಡಚಿಕೊಂಡಂತೆ ಇರುತ್ತಾ , ಪಶ್ಚಭಾಗವು ಮೇಲಕ್ಕೆದ್ದಿರುತ್ತದೆ ಮತ್ತು ಧ್ವನಿಯು ಬಾಯನ್ನು ತುಂಬಿಕೊಳ್ಳುತ್ತದೆ.

’ಅ’ ಸ್ವರವು ಕಂಠದ ಮಧ್ಯಭಾಗದಲ್ಲಿ ಅಲ್ಪಕಾಲದಲ್ಲಿ ನಿಲ್ಲುತ್ತದೆ, ನಾಲಗೆಯ ಮೇಲಂಗಳದ ಮಧ್ಯದಲ್ಲಿ ನೆಲೆನಿಲ್ಲುತ್ತದೆ, ತುಟಿಗಳು ಸ್ವಲ್ಪ ಅಂತರವನ್ನು ಕಾಯ್ದುಕೊಳ್ಳುತ್ತವೆ.

’ಆ’ ಸ್ವರವು ವಿವೃತವಾಗಿದೆ ಎಂದರೆ ತೆರೆದ ಸ್ಥಿತಿಯಲ್ಲಿರುವಂಥದು, ತುಟಿಗಳು ,ದಂತಗಳು ಅಗಲವಾಗಿಯೂ ನಾಲಗೆಯು ಸಮಸ್ಥಾನದಲ್ಲಿ ನಿಂತಿರುತ್ತದೆ.

ವ್ಯಂಜನಗಳು – ’ಕ’ವರ್ಗವು – ’ಕ’ವರ್ಗವು ಕಂಠದಲ್ಲಿ ಉತ್ಪತ್ತಿಯಾಗುತ್ತದೆಯಾದ್ದರಿಂದ ಕಂಠ್ಯವೆಂದು ಕರೆಯುತ್ತಾರೆ. ಕೆಳಬಾಯಿಯ ಚಲನೆಯು ಸಮಸ್ಥಿತಿಯಿಂದ ಕೆಳಕ್ಕೆ ಚಲಿಸುತ್ತಾ ತುಟಿಗಳು ಸ್ವಲ್ಪ ತೆರೆದುಕೊಳ್ಳುತ್ತವೆ, ನಾಲಗೆಯ ಹಿಂಭಾಗವು ಮೇಲ್ಭಾಗದ ಅಂಗಳಕ್ಕೆ(ಮೃದು ತಾಲುವಿಗೆ) ತಾಕಿ ಕೆಳಗಿಳಿಯುತ್ತದೆ. ಮಹಾಪ್ರಾಣಾಕ್ಷರಗಳು ಇದೇ ರೀತಿಯಲ್ಲಿ ಉತ್ಪತ್ತಿಗೊಂಡು, ಅಕ್ಷರವನ್ನು ಒತ್ತಿ ಉಚ್ಚರಿಸುತ್ತಾ ಬಾಯಿಂದ ಗಾಳಿಯನ್ನು ಹೊರಚೆಲ್ಲುತ್ತದೆ.

’ಚ’ವರ್ಗವು , ಬಾಯಿಯ ಅಂಗಳದಲ್ಲಿ ಉತ್ಪತ್ತಿಯಾಗುವ ಅಕ್ಷರವಾದ್ದರಿಂದ ತಾಲವ್ಯವೆಂದು ಕರೆಯುತ್ತಾರೆ. ಚ’ ಅಕ್ಷರವನ್ನು ಉಚ್ಚರಿಸುವಾಗ ನಾಲಗೆಯ ತುದಿಯು ಹಲ್ಲಿನ ಹಿಂಭಾಗದ ಒರಟು ತಾಲು ಸ್ಥಾನವನ್ನು ತಾಕಿ ಕೆಳಗಿಳಿಯುತ್ತದೆ, ಮಹಾಪ್ರಾಣವು ಅದೇ ಅಕ್ಷರವನ್ನು ಬೆಟ್ಟಿತ್ತಾಗುಚ್ಚರಿಸಿ ಗಾಳಿಯನ್ನು ಹೊರಚೆಲ್ಲುತ್ತದೆ

’ಟ’ ವರ್ಗವು ನಾಲಗೆಯನ್ನು ಸೊಟ್ಟಗೆ ಮಾಡುಕೊಂಡು ಉಚ್ಚರಿಸುವುದರಿಂದ ಉತ್ಪತ್ತಿಯಾಗುತ್ತದೆ ಇದನ್ನು ಮೂರ್ಧನ್ಯವೆನ್ನುತ್ತಾರೆ. ನಾಲಗೆಯನ್ನು ಮೇಲಕ್ಕೇರಿಸುತ್ತಾ, ನಾಲಗೆಯ ಮಧ್ಯಭಾಗಕ್ಕೆ ತಾಕುವಂತೆ ಮಡಚಿ ತಾಲುವಿಗೆ (ಅಂಗಳಕ್ಕೆ) ಒತ್ತಿ ಬಿಟ್ಟಾಗ ಟ ಕಾರವು ಉತ್ಪತ್ತಿಯಾಗುತ್ತದೆ. ಮಹಾಪ್ರಾಣವು ಅದೇ ಅಕ್ಷರವನ್ನು ಬೆಟ್ಟಿತ್ತಾಗುಚ್ಚರಿಸಿ ಗಾಳಿಯನ್ನು ಹೊರಚೆಲ್ಲುತ್ತದೆ.

’ತ’ ವರ್ಗವು, ನಾಲಗೆಯ ತುದಿಯನ್ನು ದಂತಗಳತ್ತ ಚಾಚಿ ಉಚ್ಚರಿಸುವುದರಿಂದ ಉತ್ಪತ್ತಿಯಾಗುತ್ತದೆ, ಮಹಾಪ್ರಾಣವು ಅದೇ ಅಕ್ಷರವನ್ನು ಬೆಟ್ಟಿತ್ತಾಗುಚ್ಚರಿಸಿ ಗಾಳಿಯನ್ನು ಹೊರಚೆಲ್ಲುತ್ತದೆ.

’ಪ’ವರ್ಗವು ಎರಡು ಓಷ್ಠ್ಯಗಳಿಂದ (ತುಟಿಗಳಿಂದ) ಉಂಟಾಗುತ್ತದೆ. ಎರಡು ತುಟಿಗಳು ಒಂದಕ್ಕೊಂದು ತಾಕಿ, ಬಾಯೊಳಗಿನ ಗಾಳಿಯಿಂದ ತುಟಿಗಳನ್ನು ಬೇರ್ಪಡಿಸಲೊಸುಗ ಬಿಟ್ಟಾಗ ಪ ವರ್ಗವು ಬರುತ್ತದೆ. ಮಹಾಪ್ರಾಣವು ಅದೇ ಅಕ್ಷರವನ್ನು ಬೆಟ್ಟಿತ್ತಾಗುಚ್ಚರಿಸಿ ಗಾಳಿಯನ್ನು ಹೊರಚೆಲ್ಲುತ್ತದೆ.

ಅವರ್ಗೀಯ ವ್ಯಂಜನಗಳಾದ ’ಹ’ ಕಾರವು ಕಂಠ್ಯದಲ್ಲಿಯೂ (ನಾಲಗೆಯು ಎಲ್ಲೂ ತಾಕದಂತೆ), ’ಯ’,’ಶ’ ಗಳು ತಾಲವ್ಯದಲ್ಲಿಯೂ, ’ರ’,ಷ’,’ಳ’, ಗಳು ಮೂರ್ಧನ್ಯದಲ್ಲಿಯೂ ’ಲ’,’ಸ’ ಗಳು ದಂತ್ಯದಲ್ಲಿಯೂ ’ವ’ವು ಓಷ್ಠ್ಯದಲ್ಲಿಯೂ ಉತ್ಪತ್ತಿಯಾಗುತ್ತದೆ.

ಹಳೆಗನ್ನಡದ ಱ ವನ್ನು ವರ್ತ್ಯ (ದಂತಮೂಲದಲ್ಲಿ) ವೆಂದು ಕರೆಯುತ್ತಾರೆ. ೞ ವನ್ನು ಮೂರ್ಧನ್ಯಕ್ಕೆ ಸೇರಿಸುತ್ತಾರೆ.

ಮುಂದುವರೆಯುವುದು…

ನಿಮ್ಮ ಅನಿಸಿಕೆ...

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Note: HTML is allowed. Your email address will never be published.

Subscribe to comments