ವಿಷಯದ ವಿವರಗಳಿಗೆ ದಾಟಿರಿ

ಏಪ್ರಿಲ್ 20, 2015

1

‘ಯಾನ’ ದಲ್ಲಿ ಒಂದು ಸುತ್ತು

‍ನಿಲುಮೆ ಮೂಲಕ

– ಡಾ.ಸಂತೋಷ್ ಕುಮಾರ್ ಪಿ.ಕೆ

ಯಾನ‘ಯಾನ’ ಇತ್ತೀಚೆಗಷ್ಟೆ ಬಿಡುಗಡೆಯಾದ ಭೈರಪ್ಪನವರ ಕಾದಂಬರಿಯಾಗಿದೆ.ಹಾಟ್ ಕೇಕ್ ರೀತಿಯಲ್ಲಿ ಮಾರಾಟವಾದ ಪುಸ್ತಕ ಅವರ ಕಿರೀಟಕ್ಕೆ ದಕ್ಕಿದ ಮತ್ತೊಂದು ಗರಿ ಎಂದರೂ ತಪ್ಪಾಗಲಾರದು.ಮಾನವೀಯ ಸಂಬಂಧಗಳ ತಾಕಲಾಟವನ್ನು ಬಿಂಬಿಸುವ ಭೈರಪ್ಪನವರ ಹಲವಾರು ಕಾದಂಬರಿಗಳಲ್ಲಿ ಇದೂ ಸಹ ಒಂದಾಗಿದೆ. ಇಡೀ ಕಾದಂಬರಿ ಉತ್ತರಾ ಮತ್ತು ಸುದರ್ಶನ್ ಎಂಬ ಇಬ್ಬರು ಪ್ರಾಯೋಗಿಕ ಅಥವಾ ಎಕ್ಸ್ಪೆರಿಮೆಂಟ್ ದಂಪತಿಗಳ ಸಂಬಂಧದೊಳಗಿನ ತೊಳಲಾಟವನ್ನು ಅಂದವಾಗಿ ಚಿತ್ರಿಸುತ್ತದೆ. ಬೇರೊಂದು ಗ್ರಹಕ್ಕೆ (ಪ್ರಾಕ್ಸಿಮಾ ಸೆಂಟರ್) ಚಲಿಸುವ ಮತ್ತು ಎಂದೆಂದಿಗೂ ಭೂಮಿಗೆ ಹಿಂದಿರುಗದ ರಾಕೆಟ್ ಒಳಗೆ ಒಂದು ಲೋಕವನ್ನು ಸೃಷ್ಟಿಸಿ ಆಕಾಶ್ ಮತ್ತು ಮೇದಿನಿಯರ ಮೂಲಕ ಅವರ ಪೋಷಕರ ಜೀವನಗಾಥೆಯನ್ನು ಎಳೆಎಳೆಯಾಗಿ ಬಿಡಿಸುವ ಕಾರ್ಯವನ್ನು ಲೇಖಕರು ಮಾಡುತ್ತಾರೆ.

ಯಾನವು ವೈಜ್ಞಾನಿಕ ಪ್ರಯೋಗಕ್ಕಾಗಿ ಭೂಮಿಯಿಂದ ರಾಕೆಟ್ ಮೂಲಕ ಬೇರೊಂದು ನಕ್ಷತ್ರ/ಗ್ರಹಕ್ಕೆ ಪ್ರಯಾಣಿಸುವ ಕತೆಯಾಗಿದೆ. ಯಾನ ಎಂಬುದು ಇಲ್ಲಿ ಎರಡು ಅರ್ಥಗಳನ್ನು ಒಳಗೊಳ್ಳಬಹುದು, ಒಂದು, ಬೇರೆ ಗ್ರಹಕ್ಕೆ ಮಾಡುವ ಪ್ರಯಾಣ ಮತ್ತೊಂದು ಜೀವನದಲ್ಲಿ ಒಂದು ಹಂತದಿಂದ ಮತ್ತೊಂದು ಹಂತಕ್ಕೆ ಮಾಡುವ ಪ್ರಯಾಣ. ವಿಜ್ಞಾನದ ಕುರಿತು ಕೆಲವೊಂದು ಉಪಯುಕ್ತ ಮಾಹಿತಿಗಳನ್ನೂ ಸಹ ಈ ಕಾದಂಬರಿ ಒದಗಿಸುತ್ತದೆ. ಅದರ ಜೊತೆಗೆ ಮನುಷ್ಯರ ಜೀವನದಲ್ಲಿ ಸಹಜವಾಗಿ ನಡೆಯುವ ಸರಸ ಸಲ್ಲಾಪ, ಅನ್ವೇಷಣಾ ಗುಣ, ವಿರಸ, ಆಧ್ಯಾತ್ಮ, ಶರಣಾಗುವಿಕೆ, ಅಹಂ ಇನ್ನೂ ಮುಂತಾದ ಸೂಕ್ಷ್ಮ ಸಂಗತಿಗಳನ್ನು ಹಲವಾರು ಘಟನೆಗಳ ಮೂಲಕ ಕಾದಂಬರಿ ಹೊರಗೆಡಹುತ್ತದೆ. ಒಟ್ಟಿನಲ್ಲಿ ಓದುಗಾಸಕ್ತರಿಗೆ ಎಲ್ಲಿಯೂ ಬೋರ್ ಮಾಡದ ರೀತಿಯಲ್ಲಿ ತನ್ನೊಂದಿಗೆ ಕೊಂಡ್ಯೊಯ್ಯುವ ಗುಣ ಯಾನದ ವೈಶಿಷ್ಟ್ಯವಾಗಿದೆ.

ಯಾನವು ಒಂದು ರೋಚಕ ಕತೆಯಾಗಿದೆ. ಏಕೆಂದರೆ ಓದುಗರಿಗೆ ಎರಡು ಪ್ರಶ್ನೆಗಳನ್ನು ಹಾಕಿಕೊಳ್ಳುವಂತೆ ಮಾಡುವ ಮೂಲಕ ಕೊನೆಯವರೆಗೂ ಉತ್ತರದ ರಹಸ್ಯವನ್ನು ಕಾಪಾಡಿಕೊಳ್ಳುತ್ತದೆ. ಆ ಪ್ರಶ್ನೆಗಳೆಂದರೆ, 1.ಆಕಾಶ್ ಮತ್ತು ಮೇದಿನಿ ಎಂಬ ಸಹೋದರ ಸಹೋದರಿಯರು ವಿವಾಹವಾಗಲು ಹೇಗೆ ಸಾಧ್ಯ? ಹಾಗೂ 2. ಆಕಾಶ್ನ ತಂದೆ ಯಾರು? ಈ ಪ್ರಶ್ನೆಗಳಿಗೆ ಉತ್ತರ ನೀಡುವಲ್ಲಿಯೇ ಕಾದಂಬರಿ ಕೊನೆಯವರೆಗೂ ಕುತೂಹಲವನ್ನು ಉಳಿಸುತ್ತದೆ. ಕಾದಂಬರಿಯನ್ನು ಓದಲು ಪ್ರಾರಂಭಿಸಿದಾಗ, ಮುಂದೆ ಏನಾಗಬಹುದು ಎಂಬ ನಿರೀಕ್ಷೆಗಳೂ ಸಹ ಓದುಗರಿಗೆ ಹುಟ್ಟದೆ ಇರಲಾರದು. ಇದಿಷ್ಟು ಕಾದಂಬರಿಯ ಮೇಲ್ನೋಟದ ವೈಶಿಷ್ಟ್ಯಗಳು. ಈ ಕಾದಂಬರಿಯಲ್ಲಿ ಇನ್ನೊಂದು ವಿಶೇಷವಿದೆ ಅದು ಈ ಕೆಳಗಿನಂತಿದೆ.

ಮನುಷ್ಯ ಸಂಬಂಧಗಳ ತೊಳಲಾಟದ ಕುರಿತು ಆಳವಾಗಿ ಆಲೋಚಿಸುವಂತೆ ಈ ಕಾದಂಬರಿಯು ಪ್ರೇರೇಪಿಸುತ್ತದೆ. ಮನುಷ್ಯನಾದವನು ಹಲವಾರು ಸಂಗತಿಗಳನ್ನು ಒಟ್ಟಿಗೆ ಇಟ್ಟುಕೊಂಡು ಬದುಕುತ್ತಿರುತ್ತಾನೆ. ಸಂಸಾರ, ಕೆಲಸ, ಬಾಹ್ಯ ಜಂಜಾಟ, ಆಂತರಿಕ ತೊಳಲಾಟ, ಹಟ, ಚಟ ಇನ್ನೂ ಮುಂತಾದ ಅಂಶಗಳು ಮನುಷ್ಯನಿಗೆ ಖುಷಿ ದುಃಖಗಳನ್ನು ನೀಡುತ್ತಿರುತ್ತವೆ. ಆದರೆ, ವ್ಯಕ್ತಿಗೆ ಯಾವುದಾದರೂ ಒಂದು ಗುರಿ ಮುಟ್ಟಬೇಕೆಂಬ ಛಲ ಬಂದರೆ ತನ್ನ ಮುಂದಿರುವ ಸಂಗತಿಗಳಲ್ಲಿ ಕೆಲವೇ ಕೆಲವನ್ನು ಮಾತ್ರ ಆಯ್ದುಕೊಳ್ಳಬೇಕಾಗುತ್ತದೆ. ನಾವು ಆಯ್ಕೆ ಮಾಡಿಕೊಂಡ ಸಂಗತಿಗಳು ನಮ್ಮ ಗುರಿಯನ್ನು ಮುಟ್ಟಲು ಪೂರಕವಾಗಿರುತ್ತವೆ. ನಮ್ಮ ಆಯ್ಕೆಗಳಿಂದ ಹೊರತಾಗಿ ಹೊರಗೆ ಉಳಿದ ಸಂಗತಿಗಳೂ ಸಹ ನಮ್ಮನ್ನು ಆಗಾಗ ಭಾದಿಸುತ್ತಿರುತ್ತವೆ. ಆಗ ನಿಜವಾದ ತೊಳಲಾಟ ಪ್ರಾರಂಭವಾಗುತ್ತದೆ. ನಾವು ಆಯ್ಕೆ ಮಾಡಿಕೊಂಡ ಸಂಗತಿಗಳು ಹಾಗೂ ಆಯ್ಕೆ ಮಾಡದೆ ಬಿಟ್ಟಂತಹ ಸಂಗತಿಗಳೆರಡೂ ಒಟ್ಟೊಟ್ಟಿಗೆ ನಮ್ಮದೊಂದಿಗೆ ಬರುತ್ತಿರುತ್ತವೆ, ಆಗ ನಮ್ಮ ಆಯ್ಕೆ ಸರಿ ಇಲ್ಲವೆನೋ, ಬೇರೆ ಯಾವುದನ್ನೋ ಆಯ್ದುಕೊಳ್ಳಬಹುದಿತ್ತೇನೋ, ಅಥವಾ ಇದಕ್ಕಿಂದ ಮತ್ತೊಂದು ಉತ್ತಮವಾದ ಆಯ್ಕೆಯಾಗಿತ್ತೇನೋ ಎಂಬಂತಹ ಮಾನಸಿಕ ಗೊಂದಲಗಳು ಏಳಲು ಪ್ರಾರಂಭಿಸುತ್ತವೆ. ಉದಾಹರಣೆಗೆ ಹಣ ಮಾಡಿ ಶ್ರೀಮಂತನಾಗುವುದೇ ಗುರಿ ಎಂದಾದರೆ ಹಣ ಮಾಡುವುದೇ ಆಯ್ಕೆಯಾಗುತ್ತದೆ, ಅದಕ್ಕೋಸ್ಕರ ಹಣ ಗಳಿಸಬಹುದಾದ ವ್ಯಾಪಾರ ಉದ್ಯೋಗ ಹಾಗೂ ಸಂಬಂಧಗಳನ್ನು ಮಾತ್ರ ಒಬ್ಬ ವ್ಯಕ್ತಿ ಆಯ್ಕೆ ಮಾಡುತ್ತಾನೆ. ಆದರೆ ಅವನ ಆಯ್ಕೆಗಳ ಜೊತೆ ಜೊತೆಗೆ ಹಣ ಗಳಿಸದ ಕೆಲವು ಸಂಗತಿಗಳೂ ಇರುತ್ತವೆ, ಪೋಷಕರು ಮಕ್ಕಳು ಇಂತಹ ಸಂಬಂಧಗಳೂ ಇರುತ್ತವೆ, ಇವರು ಮುಖ್ಯವೋ ಅಥವಾ ಹಣ ಗಳಿಸಲು ಬೇಕಿರುವ ಸಂಬಂಧ ಮುಖ್ಯವೋ ಎಂಬ ಗೊಂದಲ ಒಂದು ಹಂತಕ್ಕೆ ಹೋದ ಮೇಲೆ ಪ್ರಾರಂಭವಾಗುತ್ತದೆ. ಇದನ್ನೇ ತೊಳಲಾಟ ಅಥವಾ ಆಯ್ಕೆಯ ಗೊಂದಲ ಎಂದು ಕರೆಯಬಹುದು. ಇಂತಹ ಮಾನಸಿಕ ಸ್ಥಿತಿಯನ್ನು ಉತ್ತರಾ ಎಂಬ ಪಾತ್ರದ ಮೂಲಕ ಭೈರಪ್ಪನವರು ಸೊಗಸಾಗಿ ದಾಖಲಿಸುತ್ತಾ ಹೋಗುತ್ತಾರೆ.

ಈ ಕಾದಂಬರಿಯನ್ನು ಆಧುನಿಕ ವೈಜ್ಞಾನಿಕ ಸಮಾಜ ಮತ್ತು ನೈತಿಕ ಸಮಾಜಗಳ ನಡುವಿನ ಸಂಘರ್ಷ ಎಂಬಂತೆಯೂ ಸಹ ಮತ್ತೊಂದು ನಿಟ್ಟಿನಲ್ಲಿ ನೋಡಬಹುದು. ಉತ್ತರಾಳ ಅಂತರಿಕ್ಷ ಯಾನವು ವೈಜ್ಞಾನಿಕತೆಯ ಕಡೆಗೆ ನಡೆಯುವ ಹಾದಿಯಾದರೆ, ಅವಳು ಇದ್ದ ಭೂಮಿ ಹಾಗೂ ಯಾದವನೊಟ್ಟಿಗಿನ ಸಂಬಂಧವು ನೈತಿಕ ಸಮಾಜದ ಸಂಕೇತವಾಗಿದೆ. ಅವೆರಡು ಪರಸ್ಪರ ಸಂಧಿಸಿದಾಗ ಏಳಬಹುದಾದ ಗೊಂದಲಗಳನ್ನು ಯಾನವು ಚಿತ್ರಿಸುತ್ತದೆ ಎಂದೆನ್ನಬಹುದು. ವೈಜ್ಞಾನಿಕತೆಯ ಆಯ್ಕೆ ಮಾಡಿಕೊಂಡರೆ ನಮ್ಮ ನೈತಿಕ ನಿಯಮಗಳನ್ನು ಬದಿಗಿರಿಸಿ ಅದಕ್ಕೆ ಒಗ್ಗಿಕೊಳ್ಳಬೇಕಾಗುತ್ತದೆ, ಅಗತ್ಯವಿರುವ ಪ್ರಯೋಗಗಳಿಗೆ ತನ್ನನ್ನು ತೆರೆದುಕೊಳ್ಳಬೇಕಾಗುತ್ತದೆ. ಹಾಗೆಯೇ ನಮಗೆ ನೈತಿಕ ನಿಯಮಗಳೇ ಮುಖ್ಯವಾದರೆ, ವಿಜ್ಞಾನದ ಮನೋಭಾವವನ್ನು ಹೊಂದಲು ಕಷ್ಟವಾಗುತ್ತದೆ. ಅವೆರಡು ಅನುಸಂಧಾನಗೊಳ್ಳುವಲ್ಲಿ ಏಳುವ ತಾಕಲಾಟಗಳನ್ನು ಪರಿಹರಿಸಿಕೊಳ್ಳಲು ಸಾಧ್ಯವೇ ಅಥವಾ ಇಲ್ಲವೆ ಎಂಬ ಗೊಂದಲವನ್ನು ಓದುಗರಿಗೂ ಪ್ರಶ್ನೆ ಏಳುವಂತೆ ಕಾದಂಬರಿ ಮಾಡುತ್ತದೆ.

ವೈಜ್ಞಾನಿಕ ಮನೋಭಾವ ಹಾಗೂ ನೈತಿಕ ನಿಯಮಗಳು ಒಂದಕ್ಕೊಂದು ವಿರೋಧವಾದವುಗಳೆ? ಎಂಬ ಪ್ರಶ್ನೆ ಏಳುತ್ತದೆ. ಅವುಗಳ ನಡುವಿನ ಸಂಬಂಧವು ಅಷ್ಟಾಗಿ ಸ್ಪಷ್ಟವಾಗಿರದಿದ್ದರೂ ಕೆಲವು ಬಾರಿ ವಯಕ್ತಿಕ ನೈತಿಕತೆಗಳು ವೈಜ್ಞಾನಿಕ ಮನೋಭಾವನೆಯನ್ನು ಹತ್ತಿಕ್ಕುತ್ತವೆ ಎಂದಷ್ಟೇ ಹೇಳಬಹುದು. ಇದಕ್ಕೆ ಸಾಮಾನ್ಯವಾಗಿ ಕರ್ನಾಟಕದಲ್ಲಿ ನಡೆದ ಹಲವಾರು ಕ್ರಿಯಾವಿಧಿಗಳ ಚರ್ಚೆಯನ್ನು ಸ್ಥೂಲವಾಗಿ ಗಮನಿಸಿದರೆ ತಿಳಿದುಬರುತ್ತದೆ. ಯಾವುದೇ ಕ್ರಿಯಾವಿಧಿಯನ್ನು ವೈಜ್ಞಾನಿಕವಾಗಿಯೂ ಅರ್ಥೈಸಿಕೊಳ್ಳಬಹುದು ಎಂಬ ಸಾಧ್ಯತೆಯನ್ನೇ ಹಲವಾರು ಬುದ್ದಿಜೀವಿಗಳ ನೈತಿಕ ನಿಯಮಗಳು ತಳ್ಳಿಹಾಕಿವೆ. ಆದ್ದರಿಂದ ಮಡೆಸ್ನಾನ, ಸಿಡಿ ಮುಂತಾದ ಆಚರಣೆಗಳ ಚರ್ಚೆಯನ್ನು ಈ ಹಿನ್ನೆಲೆಯಲ್ಲಿ ಅರಿಯಲು ಪ್ರಯತ್ನಿಸಿದರೆ ಫಲಪ್ರದವಾಗಬಹುದು.

ಯಾನ ಕಾದಂಬರಿಯಲ್ಲಿ ಒಂದು ವಿವೇಚನಾಯುತವಾದ ಪ್ರಶ್ನೆಯನ್ನು ಉತ್ತರಾ ಕೇಳುತ್ತಾಳೆಂದು ಹಲವಾರು ಜನರು ಅಭಿಪ್ರಾಯ ಪಡುತ್ತಾರೆ, ಅದೆಂದರೆ ಭೂಮಿಯ ಮೇಲೆ ಮಾಡಿಕೊಂಡ ನಿಯಮ, ಒಪ್ಪಂದ ಹಾಗೂ ನೈತಿಕಗಳು ಭೂಮಿಯಿಂದಾಚೆಗೆ ಯಾವುದೇ ಮೌಲ್ಯವನ್ನು ಉಳಿಸಿಕೊಳ್ಳುವುದಿಲ್ಲ, ಆದ್ದರಿಂದ, ಉತ್ತರಾಳು ಸುದರ್ಶನನೊಂದಿಗೆ ಸೇರಲು ಇರುವುದಕ್ಕೆ ಇದೊಂದು ದೊಡ್ಡ ಸಮರ್ಥನೆ ಎಂದುಕೊಳ್ಳುತ್ತಾಳೆ. ಆದರೆ ಇದು ನಿಜವಾಗಿಯೂ ಭೈರಪ್ಪನವರ ಪ್ರಶ್ನೆಯಾಗಿದೆ, ಇಲ್ಲಿಯ ನೈತಿಕ ನಿಯಮಗಳು ಬೇರೆಡೆ ಸಲ್ಲುವ ಅಗತ್ಯವಾದರೂ ಏನು, ಅವುಗಳಿಗೆ ಏಕೆ ಕಟ್ಟುಬೀಳಬೇಕು? ಆದರೆ ಈ ಪ್ರಶ್ನೆಯೇ ಅವೈಚಾರಿಕವಾದುದು ಎಂದು ಹೇಳಬಹುದು, ಏಕೆಂದರೆ, ಮನುಷ್ಯನ ಯಾವುದೇ ಕಟ್ಟುಪಾಡು ನಿಯಮಗಳು ಭೂಮಿಗೆ ಸೀಮಿತವಲ್ಲ, ಕಾರಣ, ಕಟ್ಟುಪಾಡು ನಿಯಮ ಎಂಬುದು ಎಲ್ಲಿಯೋ ಕಟ್ಟಿಟ್ಟ ಒಂದು ವಸ್ತುವೂ ಅಲ್ಲ, ಅದಿರುವು ಮನುಷ್ಯನ ಯೋಚನೆಯಲ್ಲಿ ಅಥವಾ ಮನುಷ್ಯನಲ್ಲಿ ಅಂತರಂಗದಲ್ಲಿ, ಆದ್ದರಿಂದ ಆತ ಎಲ್ಲಿ ಹೋದರೂ ತನ್ನಲ್ಲಿರುವ ನಿಯಮಗಳನ್ನೇ ತೆಗೆದುಕೊಂಡು ಹೋಗುತ್ತಿರುತ್ತಾನೆ, ಅರ್ಥಾಥ್ ವ್ಯಕ್ತಿಯ ಜೀವನದ ಯಾನ ಎಂದರೆ ಅವುಗಳ ಜೊತೆಜೊತೆ ಎಂದು ಹೇಳಬಹುದು. ನಾವು ರೂಪಿಸಿಕೊಂಡ ನಿಯಮಗಳು ಅಂಗಡಿಯಲ್ಲಿ ಸಿಗುವ ಯಾವುದೋ ಮಿಠಾಯಿಯಂತೂ ಖಂಡಿತ ಅಲ್ಲ, ಭೂಮಿಯಿಂದ ಹೊರಹೋಗುತ್ತಿದ್ದೇವೆ, ಆದ್ದರಿಂದ ಅಂಗಡಿಯ ಮಿಠಾಯಿ ಅಲ್ಲೇ ಬಿಟ್ಟು ಹೋಗುವ, ಭೂಮಿಯಿಂದಾಚೆಗೆ ಮಿಠಾಯಿಗೂ ನಮಗೂ ಸಂಬಂಧವಿಲ್ಲ ಏಕೆಂದರೆ ಅದು ಯಾವುದೋ ಒಂದು ಅಂಗಡಿಯಲ್ಲಿ ಮಾತ್ರ ಸಿಗುವುದು ಎನ್ನುವ ಮಟ್ಟಿಗೆ ನಿಯಮಗಳ ಕುರಿತು ಮಾತನಾಡಲು ಸಾಧ್ಯವಿಲ್ಲ. ಅವೆಲ್ಲವಕ್ಕಿಂತ ಹೆಚ್ಚಾಗಿ, ಮನುಷ್ಯನ ನಿಯಮಗಳು ಭೂಮಿಯ ಗುರತ್ವಾಕರ್ಷಣೆಯಂತಹ ನಿಯಮವಂತೂ ಅಲ್ಲ. ಗುರುತ್ವಾಕರ್ಷಣೆಯಾದರೆ ಎಲ್ಲಿಯವರೆಗೆ ಅದರ ವ್ಯಾಪ್ತಿ ಇದೆ, ಎಲ್ಲಿಗೆ ಅದು ಕೊನೆಯಾಗುತ್ತದೆ ಎಂದು ನಿರ್ದಿಷ್ಟವಾಗಿ ಹೇಳಬಹುದು, ಆದರೆ ಮನುಷ್ಯನ ನಿಯಮಗಳನ್ನು ವಿವರಿಸುವ ಯಾವುದೇ ವೈಜ್ಞಾನಿಕ ಸಿದ್ಧಾಂತಗಳಂತೂ ಸದ್ಯಕ್ಕೆ ಇಲ್ಲ, ಆದ್ದರಿಂದ ಭೂಮಿಯ ಮೇಲಿನ ಮನುಷ್ಯನ ನಿಯಮಗಳು ಎಷ್ಟು ದೂರ ಬರುತ್ತವೆ, ಎಲ್ಲಿಯ ವರೆಗೆ ಇರುತ್ತವೆ ಎಂಬುದು ಒಂದು ತಪ್ಪಾದ ಪ್ರಶ್ನೆಯಾಗಿದೆ.

ಭೈರಪ್ಪನವರ ಯಾನದ ಜೊತೆಗೆ ಇನ್ನೂ ಹಲವಾರು ಕಾದಂಬರಿಗಳು ಒಂದು ವಿಶೇಷತೆಯನ್ನು ಹೊಂದಿವೆ ಎಂದು ಹಲವಾರು ಜನ ಹೇಳುವುದುಂಟು. ಅದೆಂದರೆ, ಅವರು ಕೆಲವು ಕಾದಂಬರಿಗಳನ್ನು ಬರೆಯುವಾಗ ಪೂರ್ವತಯಾರಿಯಾಗಿ ಕೆಲವು ಅಧ್ಯಯನಗಳನ್ನು ನಡೆಸಿ ಬರೆಯುತ್ತಾರೆ ಎಂಬುದೇ ಆ ವಿಶೇಷತೆ. ಆವರಣ ಕಾದಂಬರಿಯನ್ನು ಬರೆಯುವಾಗ ಇತಿಹಾಸದ ಪುಸ್ತಕಗಳನ್ನು, ಯಾನ ಬರೆಯುವಾಗ ಇಸ್ರೋದಲ್ಲಿ ವಿಜ್ಞಾನಿಗಳೊಂದಿಗೆ ಚರ್ಚಿಸಿ, ವಿಜ್ಞಾನಕ್ಕೆ ಸಂಬಂಧಿಸಿದ ಹಲವಾರು ಪುಸ್ತಕಗಳನ್ನು ಓದಿರುವುದಾಗಿ ಭೈರಪ್ಪನವರೇ ದಾಖಲಿಸುತ್ತಾರೆ. ಅದುವೇ ಬಹುದೊಡ್ಡ ವಿಶೇಷವೆಂದು ಕೆಲವರು ಕೊಂಡಾವುದೂ ಇದೆ, ಆದರೆ ಕಾದಂಬರಿ ಬರೆಯುವಾಗ ನಡೆಸುವ ಈ ಅಧ್ಯಯನಗಳ ಮಹಾತ್ಮೆ ಏನು? ಯಾವುದೇ ವಿಷಯದ ಕುರಿತು ಅಧ್ಯಯನ ನಡೆಸುವುದು ಖಾತರಿಯಾದ ಮೇಲೆ ಕಾದಂಬರಿಯನ್ನು ಬರೆಯುವು ಅಗತ್ಯವಾದರೂ ಏನು? ಅಧ್ಯಯನ ನಡೆಸಿದ ವಿಷಯದ ಕುರಿತು ಲೇಖನವನ್ನೋ ಪುಸ್ತಕವನ್ನೋ ಬರೆದರೆ ಆ ವಿಷಯದ ಕುರಿತ ಜ್ಞಾನವಾಗಿಯಾದರೂ ಅದು ಉಳಿದುಕೊಳ್ಳುತ್ತದೆ. ಆದರೆ ಕಾದಂಬರಿಗಳು ಇತಿಹಾಸ ಪಠ್ಯವೆಂದಾಗಲಿ, ಇಸ್ರೋದ ರಾಕೆಟ್ ನ ಕೈಪಿಡಿ ಎಂದಾಗಲಿ ಪರಿಗಣಿಸಲ್ಪಡುವುದಿಲ್ಲ. ಕಾದಂಬರಿಗಳಿಗೂ ಅಧ್ಯಯನ ನಡೆಸಿ ಬರೆಯುವ ವೈಜ್ಞಾನಿಕ ಬರಹಗಳಿಗೂ ಬಹಳಷ್ಟು ವ್ಯತ್ಯಾಸಗಳಿವೆ. ಅವುಗಳಲ್ಲಿ ಮುಖ್ಯವಾದುದು, ಅಧ್ಯಯನ ನಡೆಸಿ ಬರೆಯುವ ಬರಹಗಳು ಒಂದು ವಿಷಯದ ಕುರಿತ ಜ್ಞಾನವಾಗಿ ಮಾರ್ಪಡುತ್ತವೆ, ಆದರೆ ಕಾದಂಬರಿಗಳು ಲೇಖಕರ ಕಲ್ಪನಾ ಸಾಮಥ್ರ್ಯವನ್ನು ತೋರಿಸುತ್ತದೆಯೇ ಹೊರತು ಯಾವುದೇ ಜ್ಞಾನವನ್ನಲ್ಲ.

ಯಾವುದೇ ವಿಷಯದ ಕುರಿತು ಎರಡು ರೀತಿಯಲ್ಲಿ ಬರೆಯಲು ಸಾಧ್ಯವಿದೆ. ಒಂದು ಶಿಸ್ತುಬದ್ಧವಾಗಿ ಅಧ್ಯಯನ ನಡೆಸಿ ಆ ವಿಷಯದ ಕುರಿತು ತಿಳುವಳಿಕೆಯನ್ನು ಹೆಚ್ಚಿಸುವುದು, ಹಾಗೂ ಎರಡನೆಯದು, ಒಂದು ವಿಷಯವನ್ನು ತಮ್ಮ ಮಿತಿಯೊಳಗೆ ಕಲ್ಪಿಸಿ ಕತೆಗಳನ್ನು ಹೆಣೆಯುವುದು. ಎರಡನೇ ವಿಧಾನವು ಕತೆ ಕಾದಂಬರಿಗೆ ಸೂಕ್ತವಾದರೆ, ಮೊದಲನೆಯದು ವೈಜ್ಞಾನಿಕ ಲೇಖನ ಪುಸ್ತಕಗಳಿಗೆ ಸಂಬಂಧಿಸಿರುವುದಾಗಿದೆ. ಆದರೆ ಅವೆರಡನ್ನೂ ಮಿಶ್ರಣ ಮಾಡುವಂತೆ, ಅಧ್ಯಯನ ನಡೆಸಿ ಕಾದಂಬರಿಯನ್ನು ಬರೆಯುವುದು ಅತ್ಯಂತ ಅಸಮಂಜಸವಾದುದು, ಏಕೆಂದರೆ ಅವೆರಡೂ ಒಂದಕ್ಕೊಂದು ವಿರುದ್ಧವಾದ ಕ್ರಿಯೆ ಮತ್ತು ವಿಧಾನಗಳಾಗಿವೆ. ಹಾಗೆಂದು ಹ್ಯಾರಿ ಪಾಟರ್ ನಂತಹ ವೈಜ್ಞಾನಿಕ ಕಟ್ಟುಕತೆಗಳು (ಸೈಂಟಿಫಿಕ್ ಫಿಕ್ಷನ್) ಇಲ್ಲವೆ ಎಂಬ ಪ್ರಶ್ನೆ ಏಳಬಹುದು, ಆದರೆ ಅದು ವೈಜ್ಞಾನಿಕ ಕಟ್ಟುಕತೆಯೇ ಹೊರತು ಆ ಕತೆಯು ವೈಜ್ಞಾನಿಕವಂತೂ ಖಂಡಿತವಲ್ಲ, ವಿಜ್ಞಾನದ ಅನ್ವೇಶಣೆಗಳನ್ನು ಆಧರಿಸಿ ಲೇಖಕರು ತಮ್ಮ ಕಲ್ಪನೆಯ ಮೂಲಕ ಕತೆಯನ್ನು ಹೆಣೆಯುವುದು ಮಾತ್ರವಾಗಿರುತ್ತದೆ. ಆದ್ದರಿಂದ ವೈಜ್ಞಾನಿಕ ಬರಹಗಳನ್ನು ಬರೆಯುವುದು ಕಾದಂಬರಿಗಳನ್ನು ಬರೆದಂತೆ ಆಗುವುದಿಲ್ಲ, ಹಾಗೆಯೇ ಕಾದಂಬರಿಗಳಿಗೆ ವೈಜ್ಞಾನಿಕತೆಯ ಬಣ್ಣ ಹಚ್ಚುವುದಕ್ಕೂ ಸಾಧ್ಯವಿಲ್ಲ. ಇನ್ನೂ ಒರಟಾಗಿ ಹೇಳುವುದಾದರೆ, ಯಾನ ಕಾದಂಬರಿ ವೈಜ್ಞಾನಿಕ ಎಂದು ನಂಬಿ ಇಸ್ರೋದ ಯಾವ ವಿಜ್ಞಾನಿಯೂ ಅದನ್ನು ತಮ್ಮ ಪ್ರಯೋಗದ ಕೈಪಿಡಿಯನ್ನಾಗಿ ಬಳಸಿಕೊಳ್ಳುವುದಿಲ್ಲ. ಹಾಗೆಯೇ ಇಡೀ ಕಾದಂಬರಿಯಲ್ಲಿ ತಂತ್ರಜ್ಞಾನದ ಕುರಿತ ಮಾಹಿತಿಗಳನ್ನು ಒಟ್ಟಿಗೆ ಸೇರಿಸಿದರೆ ಅದು 15 ಪುಟಗಳನ್ನು ದಾಟುವುದೂ ಇಲ್ಲ, ಇನ್ನುಳಿದ ಪುಟಗಳಲ್ಲಿರುವುದು ಲೇಖಕರ ಕಲ್ಪನೆಯಲ್ಲದೆ ಬೇರೇನೂ ಅಲ್ಲ ಎಂಬುದು ಸ್ಪಷ್ಟ. ಆದ್ದರಿಂದ ಇದನ್ನೊಂದು ವೈಜ್ಞಾನಿಕತೆ ಮತ್ತು ಅಧ್ಯಯನದ ಆಧಾರದ ಮೇಲೆ ಬರೆದಿರುವ ಕಾದಂಬರಿ ಎಂದು ವಾದಿಸುವವರು ವಿಜ್ಞಾನದ ಕುರಿತು ಅಜ್ಞಾನವನ್ನು ಹೊಂದಿದ್ದಾರೆಂದೇ ಅರ್ಥ.

ಯಾನ ಕಾದಂಬರಿಯನ್ನು ಆಂತರಿಕವಾಗಿ ನೋಡಿದರೆ, ಅದೊಂದು ಅದ್ಭುತ ಕತೆ ಅಥವಾ ಬರಹ ಎಂಬುದರಲ್ಲಿ ಯಾವುದೇ ಅನುಮಾನವಿಲ್ಲ. ಆದರೆ ಬಾಹ್ಯವಾಗಿ ನೋಡಿದರೆ, ಮತ್ತು ಅದಕ್ಕೆ ಹಚ್ಚುವ ಅನೇಕ ವಿಶೇಷಣಗಳು ನೋಡಿದರೆ ಅದು ಸರಿಯಲ್ಲ ಎಂಬುದು ಕಂಡುಬರುತ್ತದೆ. ಒಟ್ಟಾರೆಯಾಗಿ, ಭೈರಪ್ಪನವರ ಇಳಿ ವಯಸ್ಸಿನಲ್ಲಿಯೂ ಇಂತಹ ಅದ್ಭುತ ಬರವಣಿಗೆಗಳನ್ನು ನೀಡುತ್ತಿರುವುದು ಅಭಿನಂದನಾರ್ಹ ಎಂದೇ ಹೇಳಬಹುದು.

1 ಟಿಪ್ಪಣಿ Post a comment
  1. ಮೇ 5 2015

    nimma vimarshe sariyagide…

    ಉತ್ತರ

ನಿಮ್ಮ ಅನಿಸಿಕೆ...

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Note: HTML is allowed. Your email address will never be published.

Subscribe to comments