ವಿಷಯದ ವಿವರಗಳಿಗೆ ದಾಟಿರಿ

ಏಪ್ರಿಲ್ 21, 2015

12

ನಾವು, ನಮ್ಮ ಹರಕೆ, ನಮ್ಮ ಸೇವೆ!

‍ನಿಲುಮೆ ಮೂಲಕ

– ಡಾ. ಶ್ರೀಪಾದ ಭಟ್,ಸಹಾಯಕ ಪ್ರಾಧ್ಯಾಪಕ
ಡಾ. ಡಿ ವಿ ಗುಂಡಪ್ಪ ಕನ್ನಡ ಅಧ್ಯಯನ ಕೇಂದ್ರ,ತುಮಕೂರು ವಿಶ್ವವಿದ್ಯಾನಿಲಯ, ತುಮಕೂರು
ಆಚರಣೆದಿನಾಂಕ 19-04-2015 ರಂದು ವಿಜಯ ಕರ್ನಾಟಕ ಪತ್ರಿಕೆಯಲ್ಲಿ “ಮಾದಪ್ಪನ ಸನ್ನಿಧಿಯಲ್ಲಿ ಸಣ್ಣ ಸ್ವಚ್ಛಭಾರತ್” ಲೇಖನ ಪ್ರಕಟವಾಯಿತು. ಇದರಲ್ಲಿ ಜಾಗದ ಮಿತಿಯಿಂದಲೋ ಸೈದ್ಧಾಂತಿಕ ಮಿತಿಯಿಂದಲೋ ಲೇಖನದ ಬಹುತೇಕ ಭಾಗಗಳಿಗೆ ಕತ್ತರಿ ಪ್ರಯೋಗವಾಗಿತ್ತು. ಅದರ ಪೂರ್ಣಪಾಠ ಇಲ್ಲಿದೆ.

ಮಲೆ ಮಹದೇಶ್ವರ ಬೆಟ್ಟ. ಬೆಳಿಗ್ಗೆ ಆರು ಗಂಟೆಯ ಸಮಯ. ದೇವಾಲಯದ ಮುಂಭಾಗ ರಾತ್ರಿ ಬಂದ ಯಾತ್ರಿಗಳು ಅನುದ್ದೇಶಪೂರ್ವಕ ಚೆಲ್ಲಿದ ಕಸಕಡ್ಡಿಗಳು ಅಲ್ಲಲ್ಲಿ ಹರಡಿದ್ದವು. ಹರಕೆ ತೀರಿಸಲು ಬಂದ ಭಕ್ತಾದಿಗಳಿಂದ ಬಗೆಬಗೆಯ ಆಚರಣೆಗಳು ಸುತ್ತಲೂ ನಡೆಯುತ್ತಿದ್ದವು. ಮುಖ್ಯ ದೇಗುಲದ ಮುಂಭಾಗದಲ್ಲಿರುವ ಕಲ್ಯಾಣಿ ಪಕ್ಕದ ಜಡೆ ಮಾದೇಶ್ವರ ಗುಡಿಯ ಮುಂದೆ ಹತ್ತಾರು ಹೆಂಗಸರು ಮಕ್ಕಳು ಸೇರಿಕೊಂಡಿದ್ದರು. ಒಬ್ಬ ಹುಡುಗ “ಹಾಲುಮಲೆ ಏಳುಮಲೆ, ಜೇನುಮಲೆ, ಎಪ್ಪತ್ತೇಳುಮಲೆ ನಮ್ಮ ಮುದ್ದು ಮಾದೇಶ್ವರನಿಗೆ ಉಘೇ ಅನ್ರಪ್ಪಾ” ಅನ್ನುತ್ತಿದ್ದಂತೆ ಸುತ್ತ ನೆರೆದಿದ್ದವರು ಒಕ್ಕೊರಲಲ್ಲಿ “ಉಘೇ ಉಘೇ” ಅನ್ನುತ್ತಿದ್ದರು. ಗುಡಿಯ ಮುಂದೆ ಕತ್ತೆಯೊಂದು ತರಬೇತಿ ನೀಡಿದ್ದಾರೇನೋ ಎಂಬಂತೆ ಸ್ತಬ್ದವಾಗಿ ನಿಂತಿತ್ತು. ಕೆಲವು ಹೆಂಗಸರು ಅದರ ಕಾಲು ತೊಳೆದರು. ಮತ್ತೆ ಕೆಲವರು ಅದಕ್ಕೆ ಮಲ್ಲಿಗೆ ಹಾರ ತೊಡಿಸಿದರು. ಮತ್ತೆ ಹಲವರು ಅರಿಶಿಣ ಕುಂಕುಮ ಹಾಕಿ ಅದರ ಕಾಲಿಗೆ ಅಡ್ಡ ಬಿದ್ದರು. ಇನ್ನು ಕೆಲವರು ಆರತಿ ಬೆಳಗಿದರು.

ಕತ್ತೆಯ ಪಕ್ಕದಲ್ಲಿ ಹೊಚ್ಚ ಹೊಸ ತೆಂಗಿನ ಗರಿಯಿಂದ ತಯಾರಿಸಿದ ಒಂದಿಷ್ಟು ಪೊರಕೆಗಳನ್ನು ಸಾಲಾಗಿ ಜೋಡಿಸಿದ್ದರು. ಈ ಪೊರಕೆಗಳಿಗೆ ಅರಿಶಿನ ಕುಂಕುಮ ಹಾಕಿ, ಹೂವು ಏರಿಸಿ ಎಲ್ಲರೂ ಕೈ ಮುಗಿದರು. ಒಬ್ಬೊಬ್ಬರೂ ಒಂದೊಂದು ಪೊರಕೆಯನ್ನು ಕೈಗೆತ್ತಿಕೊಂಡರು. ಹುಡುಗ “ಹಾಲುಮಲೆ ಏಳುಮಲೆ, ಜೇನುಮಲೆ, ಎಪ್ಪತ್ತೇಳುಮಲೆ ನಮ್ಮ ಮುದ್ದು ಮಾದೇಶ್ವರನಿಗೆ ಉಘೇ ಅನ್ರಪ್ಪಾ” ಅನ್ನುತ್ತಿದ್ದ. ಉಳಿದವರು “ಉಘೇ ಉಘೇ” ಅನ್ನುತ್ತ ಸುತ್ತಲ ಕಸ ಕಡ್ಡಿಗಳನ್ನು ಗುಡಿಸಿ ಸ್ವಚ್ಛಮಾಡತೊಡಗಿದರು. ಅರ್ಧಗಂಟೆಯಲ್ಲಿ ಸುತ್ತಲ ಪರಿಸರ ತೊಳೆದಿಟ್ಟಂತೆ ಕಂಗೊಳಿಸತೊಡಗಿತು.

ತಮ್ಮ ಕೆಲಸ ಮುಗಿಯಿತು ಎಂಬಂತೆ “ಮಾದೇಶ್ವರ ಕಾಪಾಡಪ್ಪ” ಅನ್ನುತ್ತ ಸದ್ದಿಲ್ಲದೇ ಒಬ್ಬೊಬ್ಬರು ಒಂದೊಂದು ಕಡೆ ಸರಿದುಹೋದರು. ಇಷ್ಟೆಲ್ಲ ಆಗುವಾಗ ಪಂಜಿನ ಆರತಿಯವರು, ತೊಟ್ಟಿಲ ಸೇವೆಯವರು, ಕೋರಣ್ಯದವರು ಅವರಿವರೆಲ್ಲ ತಮ್ಮ ತಮ್ಮ ಪಾಡಿಗೆ ತಮ್ಮ ತಮ್ಮ ಕೆಲಸದಲ್ಲಿ ಮಗ್ನರಾಗಿದ್ದರು. ಭಕ್ತಾದಿಗಳು, ಯಾತ್ರಿಕರು ಓಡಾಡುತ್ತಿದ್ದರು. ಇವರ ಕೆಲಸ ನೋಡುವ ಪತ್ರಕರ್ತರಿಲ್ಲ, ಹೊಗಳುವ ರಾಜಕಾರಣಿಗಳಿಲ್ಲ, ಛಾಯಾಚಿತ್ರಗ್ರಾಹಕರಿಲ್ಲ.

ಈ ಕೆಲಸ ಮಾಡಿಹೊರಟಿದ್ದ ಪುಟ್ಟಮಾದಮ್ಮ, ಜಯಮ್ಮ ಮತ್ತು ಲಚ್ಚಮ್ಮರನ್ನು ಮಾತನಾಡಿಸತೊಡಗಿದೆ. ಇವರೆಲ್ಲ ಮಳವಳ್ಳಿಯವರಂತೆ. ಅವರು ಮಾಡಿದ ಈ ಕೆಲಸಕ್ಕೆ “ರಜ ಸೇವೆ” ಎಂದು ಹೆಸರಂತೆ. ಮನೆಯಲ್ಲಿ ಶುಭಕಾರ್ಯವಾಗಲಿ ಎಂದೋ ತಲೆನೋವು ವಾಸಿಯಾಗಲಿ ಎಂದೋ ದನಕರುಗಳಿಗೆ ಒಳಿತಾಗಲೆಂದೋ ಹುಟ್ಟಿದ ಕೂಸಿಗೆ ದೃಷ್ಟಿತಾಗದಿರಲೆಂದೋ ಹತ್ತಾರು ಕಾರಣಕ್ಕೆ ಈ ಹರಕೆ ಹೊರುತ್ತಾರಂತೆ. ನಮ್ಮ ಎಲ್ಲ ಸಮಸ್ಯೆಗಳೂ ಮಾದಪ್ಪನಿಂದ ನಿವಾರಣೆಯಾಗಿವೆ. ನಮ್ಮ ಇಷ್ಟಾರ್ಥ ಈಡೇರಿದೆ. ಅದಕ್ಕೆ ಹರಕೆ ತೀರಿಸಲು ಬಂದಿದ್ದೇವೆ ಅಂದರು. ಮೂವರಿಗೂ ಇದ್ದುದು ಬೇರೆ ಬೇರೆ ಸಮಸ್ಯೆ. ಹೀಗೆ ಸಮಸ್ಯೆ ಇರುವವರು ಬೆಳಿಗ್ಗೆ ಆರು ಗಂಟೆಗೆ ಸಂಜೆ ಮತ್ತೆ ಆರು ಗಂಟೆಗೆ ಹೀಗೆ ದಿನಕ್ಕೆ ಎರಡುಬಾರಿ ಈ ಸೇವೆ ಮಾಡುತ್ತಾರೆ. ಮೂರು, ಐದು, ಏಳು, ಒಂಬತ್ತು ಅಥವಾ ತಿಂಗಳು… ಹೀಗೆ ಸೇವೆಯ ಅವಧಿಗಳಿರುತ್ತವೆಯಂತೆ. ಇವರು ಇಷ್ಟು ಕೆಲಸ ಮಾಡಿ ಮತ್ತೆ ಊರಿಗೆ ಹೋಗಿ ಸಂಜೆ ಮತ್ತೆ ಸೇವೆಗೆ ಹಾಜರಾಗುತ್ತಾರೆ! ಉಳಿದ ಸಮಯ ತಮ್ಮ ಮನೆಕೆಲಸ, ಕೃಷಿ ಕೆಲಸದಲ್ಲಿ ತೊಡಗುತ್ತಾರೆ.

‘ಕತ್ತೆಪೂಜೆ ಮಾಡಿದ್ರಲ್ಲಾ ಯಾಕೆ’ ಎಂದು ನನ್ನ ವಿದ್ಯಾರ್ಥಿಯೊಬ್ಬ ಕೇಳಿದ. “ಅದು ಲಕ್ಷ್ಮಿ ಕನಪ್ಪಾ. ಎಲ್ಲಾರ್ಗೂ ಒಳ್ಳೇದಾಗ್ಲಿ ಅಂತವಾ” ಅಂದಳು ಪುಟ್ಟಮಾದಮ್ಮ. ಇವರ ಗುಂಪಿನಲ್ಲಿದ್ದವರು ಇವರ ಪರಿಚಿತರೇನಲ್ಲವಂತೆ, ಬೇರೆ ಬೇರೆ ಊರಿನವರು. ಆದರೆ ಇವರು ನಡೆಸಿದ ಪೂಜೆ, ಸೇವೆ ಎಲ್ಲ ಒಂದೇ ಗುಂಪಿನವರು ಒಟ್ಟಿಗೇ ನಡೆಸಿದಂತೆ ಇತ್ತು. ಆಯಾ ಊರಿನವರು ತಮ್ಮ ತಮ್ಮ ಗುಂಪು ಮಾಡಿಕೊಂಡು ಚೆದುರಿಹೋಗಿದ್ದರು. ಅವರೆಲ್ಲ ಮತ್ತೆ ಸೇರುವುದು ಇನ್ನೇನಿದ್ದರೂ ಸಂಜೆ ಸೇವೆಗೆ. ಕೆಲವರ ಹರಕೆ ಅವಧಿ ಮುಗಿದಿದ್ದರೆ ಮತ್ತೆ ಒಬ್ಬರಿಗೊಬ್ಬರ ಭೇಟಿ ಖಾತರಿ ಇಲ್ಲ. ನಿನ್ನೆ ಬೆಳಿಗ್ಗೆ-ಸಂಜೆ, ಇಂದು ಬೆಳಿಗ್ಗೆ-ಸಂಜೆ ಹೀಗೆ ಒಟ್ಟಿಗೇ ಸೇರಿ ಹರಕೆ ತೀರಿಸಿದವರು ಪರಸ್ಪರ ಮಾತುಕತೆ ಮಾಡಿಕೊಂಡುಬಿಡುತ್ತಾರೆಂದೇನೂ ಇಲ್ಲ. ಹಾಗಂತ ಪರಸ್ಪರ ಸಂಬಂಧ ಇಲ್ಲದಂತೆಯೂ ಇರುವುದಿಲ್ಲ. ಒಬ್ಬರು ಸೇವಾ ಕ್ರಮ ತಪ್ಪಿದರೆ ಅದು ಗೊತ್ತಿರುವ, ಅದೇ ಆಚರಣೆಯಲ್ಲಿ ತೊಡಗಿರುವವರೊಬ್ಬರು ಮಧ್ಯಪ್ರವೇಶಿಸಿ ಸರಿ ಪಡಿಸುತ್ತಿದ್ದರು. ನೀನ್ಯಾರು ಎಂದು ಅವರು ಕೇಳುವುದೂ ಇಲ್ಲ, ಇವರು ಹೇಳುವುದೂ ಇಲ್ಲ! ಒಬ್ಬರಿಗೊಬ್ಬರ ಒಪ್ಪಿಗೆ ಬಿಟ್ಟರೆ ಬೇರೆ ಪ್ರಶ್ನೆಯೇ ಇಲ್ಲ! ಇವರೆಲ್ಲ ಒಂದು ನಿರ್ದಿಷ್ಟ ಸಮುದಾಯಕ್ಕೆ ಸೇರಿದವರೂ ಅಲ್ಲ. ಈ ಆಚರಣೆಗೆ ಜಾತಿಯ ಹಂಗೇ ಇಲ್ಲ. ಇದೊಂದು ಬಗೆಯ ವಿಚಿತ್ರ ಮಾನವ ಸಂಬಂಧ!!

ಈ ಪೊರಕೆಗಳನ್ನು ಯಾರೂ ಮನೆಗೆ ಒಯ್ಯುವುದಿಲ್ಲ. ದೇವಸ್ಥಾನದ ಆವರಣದ ಮೂಲೆಯಲ್ಲಿ ಇಟ್ಟು ಹೋಗುತ್ತಾರೆ. ಹರಕೆ ತೀರಿಸುವವರು ತಾವು ಬರುವಾಗ ಮಾಡಿಕೊಂಡು ತಂದ ಪೊರಕೆ ಯಾವುದೋ, ಈಗ ಗುಡಿಸಲು ಬಳಸುತ್ತಿರುವ ಪೊರಕೆ ಯಾವುದೋ ಸಂಬಂಧವಿಲ್ಲ. ಯಾರೋ ತಮ್ಮಂತೆ ಹರಕೆ ಹೊತ್ತವರು ತಂದ ಹೊಸ ಪೊರಕೆ ಅದು ಅಷ್ಟೆ.ಈ ಸೇವೆಯಲ್ಲಿ ಏಳೆಂಟು ವರ್ಷದ ಮಕ್ಕಳಿಂದ ಹಿಡಿದು ಎಪ್ಪತ್ತು ವರ್ಷದ ಮುದುಕಿಯರವರೆಗೆ ಎಲ್ಲ ವಯೋಮಾನದವರೂ ಇದ್ದರು. ಹದಿನಾರರ ಮೇಲ್ಪಟ್ಟ ಗಂಡು ಮಕ್ಕಳಾಗಲೀ ಪುರುಷರಾಗಲೀ ಈ ಹರಕೆ ಹೊರುವುದಿಲ್ಲ, ಯಾವುದೇ ವಯಸ್ಸಿನ ಮಹಿಳೆಯರು ಈ ಹರಕೆ ಹೊರುತ್ತಾರೆ.

ಈ ಆಚರಣೆಗೆ ಅನೇಕ ಆಯಾಮಗಳಿವೆ. ಕೊನೆಯಲ್ಲಿ ಕೊಟ್ಟ ನಿರ್ಬಂಧ ನೋಡಿ “ಕಸ ಗುಡಿಸುವುದು ಮಹಿಳೆಯರ ಕೆಲಸ ಎಂದು ಪುರುಷಪ್ರಧಾನ ಸಮಾಜ ನಿಯಮ ಹೇರಿದೆ” ಎಂದು ಸ್ತ್ರೀವಾದಿಗಳೂ ಪ್ರಗತಿಪರ ಚಿಂತಕರೂ ವ್ಯಾಖ್ಯಾನಿಸಬಹುದು. ಇಂಥವರ ವ್ಯಾಖ್ಯಾನಕ್ಕೆ ಕೊನೆಮೊದಲಿಲ್ಲ. ಹರಕೆ ತೀರಿಸುವವರಿಗೂ ನಮಗೂ ಈ ವ್ಯಾಖ್ಯಾನಗಳು ಅಷ್ಟೇನೂ ಮುಖ್ಯವಲ್ಲ. ನಮಗೆ ಮುಖ್ಯವಾಗುವುದು ಮಾದಪ್ಪನ ಸೇವೆ ಹೆಸರಲ್ಲಿ ಗೊತ್ತುಪರಿಚಯವಿಲ್ಲದೆ ಎಲ್ಲಿಂದಲೋ ಬರುವ ಜನ, ಒಟ್ಟಾಗಿ ಸೇರಿ ತಾವೆಲ್ಲ ಒಂದೇ ಎಂಬಂತೆ ಸೇವೆ ಸಲ್ಲಿಸುವುದು; ಯಾರ ಮರ್ಜಿಯೂ ಇಲ್ಲದೆ ತಮ್ಮ ತಮ್ಮ ಕೆಲಸ ನಿರ್ವಹಿಸುವುದು, ತನ್ನದು, ಅವರದು ಎಂಬ ಭೇದ ಎಣಿಸದಿರುವುದು ಮೊದಲಾದವು. ಎಲ್ಲಕ್ಕಿಂತ ಮುಖ್ಯವಾಗಿ ಅವರ ನಂಬಿಕೆ ಹಾಗೂ ಅದು ಬೀರುವ ಪರಿಣಾಮದ ಫಲ.

“ಆಚರಣೆ ಎಂದರೆ ಮೂಲತಃ ಚಟುವಟಿಕೆ. ಸುವ್ಯಕ್ತ ನಿಯಮಗಳಿಂದ ನಿಯಂತ್ರಿತವಾಗುವ ಚಟುವಟಿಕೆ ಇದು. ನೀವೇನು ಮಾಡುತ್ತೀರಿ ಎಂಬುದು ಇಲ್ಲಿ ಮುಖ್ಯವೇ ವಿನಾ ನೀವೇನು ವಿಚಾರ ಮಾಡುತ್ತೀರಿ, ನಂಬುತ್ತೀರಿ ಅಥವಾ ಹೇಳುತ್ತೀರಿ ಎಂಬುದಲ್ಲ” ಎನ್ನುತ್ತಾನೆ ಸಂಸ್ಕೃತಿ ಚಿಂತಕ ಫ್ರಿಟ್ಸ್ ಸ್ಟಾಲ್. “ಆಚರಣೆಯೊಂದರಲ್ಲಿ ಮೌಲ್ಯ ಅಂತರ್ಗತವಾಗಿರುತ್ತದೆ. ಇದೊಂದು ಸಾಂಸ್ಕೃತಿಕ ಮೌಲ್ಯ. ಆಚರಣೆಯ ಮೂಲಕ ರವಾನೆಯಾಗುವ ಏಕೈಕ ಸಾಂಸ್ಕೃತಿಕ ಮೌಲ್ಯ ಎಂದರೆ ಆಚರಣೆ” ಎಂದೂ ಆತ ಹೇಳುತ್ತಾನೆ. ಈ ಆಚರಣೆಯನ್ನು ಗಮನಿಸಿದರೆ ಅವರು ಯಾಕೆ ಹೀಗೆ ಮಾಡುತ್ತಾರೆ, ಇದರ ಫಲವೇನು ಎಂಬುದಕ್ಕೆ ಅಂತಿಮವಾಗಿ ದೊರೆಯುವ ಉತ್ತರ ಇದೇ ಆಗಿರುತ್ತದೆ.

ಇದನ್ನು ಇನ್ನಷ್ಟು ಮುಂದೆ ಒಯ್ಯುವ ನಮ್ಮ ನಡುವಿನ ಪ್ರಖರ ಸಂಸ್ಕೃತಿ ಚಿಂತಕರಾದ ಬಾಲಗಂಗಾಧರ ಹೀಗೆ ಹೇಳುತ್ತಾರೆ: “ಅನೇಕ ರೀತಿಯ ಕಲಿಕಾ ಪ್ರಕ್ರಿಯೆಗಳು ನಮ್ಮಲ್ಲಿವೆ. ಹಾಗೆಯೇ ಪ್ರತಿಯೊಂದು ಸಂಸ್ಕೃತಿಯೂ ಏಕಕಾಲದಲ್ಲಿ ಅನೇಕ ರೀತಿಯ ಕಲಿಕಾ ಪ್ರಕ್ರಿಯೆಯನ್ನು ಹೊಂದಿರುತ್ತದೆ. ಅವುಗಳಲ್ಲಿ ಕೆಲವು ಸಮಾಜಗಳ ನಿರ್ಮಾಣ ಮತ್ತು ಸಮುದಾಯಗಳ ನಿರ್ಮಾಣದಲ್ಲಿ ಬೇಕಾಗುತ್ತವೆ, ಇನ್ನು ಕೆಲವು ಕಾವ್ಯ, ನೃತ್ಯ, ಸಂಗೀತ ಮೊದಲಾದವುಗಳ ನಿರ್ಮಾಣದಲ್ಲಿ ಬೇಕಾಗುತ್ತವೆ. ಇನ್ನು ಕೆಲವು ಸಿದ್ಧಾಂತ ಹಾಗೂ ಊಹೆಗಳ ರಚನೆಗೆ ನೆರವಾಗುತ್ತವೆ. ಸಮಾಜದ ಸದಸ್ಯರು ಇವುಗಳನ್ನು ವಿಭಿನ್ನ ಪ್ರಕ್ರಿಯೆಗಳಾಗಿ ವಿಭಿನ್ನ ನೆಲೆಗಳಲ್ಲಿ ಹಾಗೂ ವಿಭಿನ್ನ ಸಂಯೋಜನೆಗಳಲ್ಲಿ ರೂಪಿಸಿಕೊಳ್ಳುತ್ತಾರೆ. ಒಂದು ವೇಳೆ ನಾವು ಕಲಿಯುವ ಉತ್ಪಾದನೆಯನ್ನು ‘ಜ್ಞಾನ’ ಎನ್ನುವುದಾದರೆ ಅದನ್ನು ಹೀಗೆ ಸೂತ್ರೀಕರಿಸಬಹುದು: ಜ್ಞಾನವನ್ನು ಉತ್ಪಾದನೆ ಮಾಡುವುದರ ಮೂಲಕ ಮಾನವರು ಪ್ರಪಂಚದಲ್ಲಿ ನೆಲೆಸಲು ಸಮರ್ಥರಾಗುತ್ತಾರೆ. ಪ್ರತಿಯೊಂದು ಸಂಸ್ಕೃತಿಯಲ್ಲಿಯೂ ವಿಭಿನ್ನ ರೀತಿಯ ಜ್ಞಾನಗಳಿವೆ. ಕಲಿಕೆ ಎಂದರೆ ಈ ಜ್ಞಾನ ಸಂಗ್ರಹವನ್ನು ಸಂವಹನ ಮಾಡುವುದೇ ಆಗಿರುತ್ತದೆ” (ಡು ಆಲ್ ರೋಡ್ ಲೀಡ್ ಟು ಜೆರುಸಲೇಂ? ದಿ ಮೇಕಿಂಗ್ ಆಫ್ ಇಂಡಿಯನ್ ರಿಲಿಜನ್ಸ್ (2014)). ಪಾಶ್ಚಾತ್ಯ ಅದರಲ್ಲೂ ಐರೋಪ್ಯ ಸಮಾಜ ಜ್ಞಾನದ ಬಗ್ಗೆ ಚಿಂತಿಸಿದರೆ, ಭಾರತೀಯ ಸಮಾಜದಲ್ಲಿ ಕ್ರಿಯೆಯೇ ಜ್ಞಾನವಾಗುತ್ತದೆ ಎಂದೂ ಇದನ್ನು ನಾವು ‘ಕ್ರಿಯಾಜ್ಞಾನ’ ಎಂದು ಕರೆಯಬಹುದೆಂದೂ ಅವರು ಹೇಳುತ್ತಾರೆ.

ನಮ್ಮ ಎಲ್ಲ ಆಚರಣೆಗಳೂ ಒಂದಲ್ಲ ಒಂದು ಬಗೆಯ ಜ್ಞಾನಗಳೇ ಆಗಿವೆ. ಇದರ ಫಲ ಕ್ರಿಯೆಯಲ್ಲೇ ಅಡಗಿದೆ. ಹಿಂದೂ ಎಂದು ಗುರುತಿಸಲಾಗುವ ನಮ್ಮ ದೇಶದಲ್ಲಿನ ಅನೇಕಾನೇಕ ಸಮುದಾಯಗಳಲ್ಲಿರುವ ಬಗೆಬಗೆಯ ಆಚರಣೆಗಳು ಕ್ರಿಯಾರೂಪದ ಜ್ಞಾನಗಳಾಗಿವೆ. ರಜಸೇವೆಯ ಆಚರಣೆ ಕೂಡ ಇಂಥ ಜ್ಞಾನದ ಕ್ರಿಯಾರೂಪವೇ. ಇದರ ಫಲವಾಗಿ ಹರಕೆ ಹೊತ್ತವರ ಇಷ್ಟಾರ್ಥ ಸಿದ್ಧಿ ಒಂದೆಡೆಯಾದರೆ ಸುತ್ತಲ ಪರಿಸರ ಸ್ವಚ್ಛತೆ ಮತ್ತೊಂದು. ಒಂದು ಅಮೂರ್ತ ಇನ್ನೊಂದು ಮೂರ್ತ.

ಇನ್ನು ಈ ಆಚರಣೆಯನ್ನು ವೈಚಾರಿಕವಾಗಿ ನೋಡುವವರು ಇದರಲ್ಲಿ ಮಹಿಳಾ ಶೋಷಣೆ, ತಳಸಮುದಾಯದ ಮೇಲೆ ಪುರೋಹಿತಶಾಹಿಯ ದಬ್ಬಾಳಿಕೆಯೂ ಸೇರಿದಂತೆ ಎಷ್ಟು ಬಗೆಯ ಹುಳುಕುಗಳನ್ನು ಹುಡುಕಬಲ್ಲರೋ ತಿಳಿಯದು. ಮೂಲತಃ ಈ ಆಚರಣಾ ಕ್ರಿಯೆಯ ಹಿಂದಿನ ನಂಬಿಕೆಯೇ ಅವರಿಗೆ ಮೌಢ್ಯವಾಗಿ ಕಾಣಬಹುದು. ಇದೇನೇ ಇರಲಿ, ಹರಕೆಯ ನೆಪದಲ್ಲಿ ಪರಿಸರ ಸ್ವಚ್ಛವಾಗಿಸುವ ನಿಃಸ್ವಾರ್ಥದ, ಪ್ರಚಾರದ ಹಂಗೇ ಇಲ್ಲದ ಇಂಥ ಆಚರಣೆಗಳೆಲ್ಲಿ? ಇಂಥದ್ದೇ ಆಶಯ ಹೊತ್ತ ‘ಸ್ವಚ್ಛ ಭಾರತ್’ ಅಭಿಯಾನದ ಹೆಸರಲ್ಲಿ ಹಣ, ಹೆಸರು, ಪ್ರಚಾರ ಪಡೆಯುವ ಅಧಿಕಾರಿಗಳು, ಪುಢಾರಿಗಳೆಲ್ಲಿ?

12 ಟಿಪ್ಪಣಿಗಳು Post a comment
 1. hemapathy
  ಏಪ್ರಿಲ್ 21 2015

  ಮೂಢ ನಂಬಿಕೆಗಳಿಗೆ ಇದಕ್ಕಿಂತ ಉದಾಹರಣೆ ಬೇಕೆ? ನಮ್ಮೆಲ್ಲಾ ಸಮಸ್ಯೆಗಳೂ ಆ ಕಣ್ಣಿಗೆ ಕಾಣದ, ಕೈಗೆ ಸಿಕ್ಕದ, ಜೀವರಹಿತ ದೇವರಿಂದಲೇ ಪರಿಹಾರವಾಗುವುದಾಗಿದ್ದರೆ ಇಸ್ಲಾಮಿಕ್ ಭಯೋತ್ಪಾದಕರಿಂದಾಗುತ್ತಿರುವ ಅಮಾನವೀಯ ಕೃತ್ಯಗಳು ನಡೆಯುತ್ತಲೇ ಇರಲಿಲ್ಲ.

  ಉತ್ತರ
  • shripad
   ಏಪ್ರಿಲ್ 21 2015

   ತಮ್ಮ ಗ್ರಹಿಕೆಯಲ್ಲಿ “ದೇವರು” ಅಂದರೆ ನಮ್ಮಂತೆಯೇ ಒಬ್ಬ ವ್ಯಕ್ತಿ, ಆದರೆ ಅಸಾಧಾರಣ ಶಕ್ತಿಯವ. ನಂಬಿದವರ ಸೇವೆಗೆ ಜೀ ಹುಜೂರ್ ಅಂತ ನಿಂತುಬಿಟ್ಟಿರಬೇಕು…ಹಾಗಾಗಿಲ್ಲ ಅಂದರೆ ದೇವರಿಲ್ಲ…ಎನ್ನುವ ಮೌಢ್ಯವಿದ್ದಂತಿದೆ. ಅನ್ಯ ಮೌಢ್ಯಗಳ ಬಗ್ಗೆ ಹೇಳುವ ಮೊದಲು ತಮ್ಮಲ್ಲಿರುವ ಮೌಢ್ಯವನ್ನು ಗುರುತಿಸಿಕೊಳ್ಳಿ. ಮಾದಪ್ಪನನ್ನು ನಂಬುವ ಜನಪದರು ತಮ್ಮಂತೆ ದೇವರನ್ನು ಕಾಣುವುದಿಲ್ಲ. ಇದು ನಿಮಗೆ ಅರ್ಥವೂ ಆಗುವುದಿಲ್ಲ.

   ಉತ್ತರ
   • ಏಪ್ರಿಲ್ 30 2015

    ಅಣ್ಣಾ, ತಾವು ಹೀಗೆ ಕೋಪ ಮಾಡಿಕೊಳ್ಳುವ ಅಗತ್ಯವೇನು? ಎಷ್ಟೇ ಆಗಲಿ ತಾವು ಸಹಾಯಕ ಪ್ರಾಧ್ಯಾಪಕರು. ತಮ್ಮ ಶಿಷ್ಯರು ಯಾರೂ ತಮ್ಮ ಪ್ರವಚನದ ನಂತರ ತಮ್ಮ ಅನುಮಾನ ಪರಿಹಾರಕ್ಕಾಗಿ ಪ್ರಶ್ನೆ ಕೇಳುವುದಿಲ್ಲವೇ? ಮಾದಪ್ಪನನ್ನು ನಂಬುವ ಜನಪದರು ದೇವರನ್ನು ಹೇಗೆ ಕಾಣುತ್ತಾರೆ ಎಂಬುದನ್ನು ಮತ್ತು ಅದು ತಮ್ಮ ಅರಿವಿಗೆ ಬಂದ ಬಗೆ ಹೇಗೆ ಎಂಬುದನ್ನು ಸ್ವಲ್ಪ ವಿವರಿಸಿದರೆ ಸಾಕಲ್ಲವೇ. ತಮ್ಮ ಉತ್ತರದ ನಿರೀಕ್ಷೆಯಲ್ಲಿ, ಸಾದರಪೂರ್ವಕ ಸಾಷ್ಟಾಂಗ ಪ್ರಣಾಮಗಳೊಂದಿಗೆ

    ಉತ್ತರ
 2. ಏಪ್ರಿಲ್ 21 2015

  Beautifully scripted article.
  ಅಭಿನಂದನೀಯ,ಸುಂದರವಾದ ಲೇಖನ ಹಾಗೂ ಆಚರಣೆಯ ವ್ಯಾಖ್ಯಾನ

  ಉತ್ತರ
 3. aki
  ಏಪ್ರಿಲ್ 22 2015

  ಅಯ್ಯಾ ಮನುವಾದಿ ಪುರೋಹಿತ ಶಾಯಿ ಭಟ್ಟನೇ ನಿನ್ನ ಗುಪ್ತ ಅಜಂಡಾ ಬಲ್ಲೆನಯ್ಯಾ. ನೀವೆಲ್ಲಾ ಪುರೋಹಿತ ವರ್ಗದವರು ಆ ನಮ್ಮ ಮುಗ್ಧ ಗ್ರಾಮೀಣ ಜನರ ಮುಗ್ಧತೆಯನ್ನು ಬಂಡವಾಳ ಮಾಡಿಕೊಂಡು ನಿಮ್ಮ ಗುಡಿಗೋಪುರಗಳನ್ನು ಸ್ವಚ್ಛಗೊಳಿಸಿಕೊಳ್ಳುತ್ತಿರುವದು ನಮಗೆ ಗೊತ್ತಿಲ್ಲ ಎಂದುಕೊಳ್ಳಬೇಡಿ. ನಮ್ಮ ಪೌರ ಕರ್ಮಚಾರಿಗಳಿಗೆ ಕೆಲಸ ಇಲ್ಲದಂತೆ ಮಾಡಿ ಪುಕ್ಕಟೆ ನಿಮ್ಮ ಜಾಗಾ ಸ್ವಚ್ಛಗೊಳಿಸಿಕೊಳ್ಳುತ್ತಿರುವ ಮನುವಾದಿಗಳ ಹುನ್ನಾರವಿದು. ಅದನ್ನು ಬ್ಲಾಗಿನಲ್ಲಿ ಪೇಪರಿನಲ್ಲಿ ಪ್ರಚಾರಕೊಟ್ಟು ನಮ್ಮ ಗ್ರಾಮೀಣಿಗರು ಇನ್ನು ಹುರುಪಿನಿಂದ ಹರಕೆಯ ಹೆಸರಲ್ಲಿ ಪುಕ್ಕಟೆ ನಿಮ್ಮ ಸೇವೆ ಮಾಡಲಿ ಎಂಬ ನಿಮ್ಮ ಹಿಡನ್ ಅಜಂಡಾ ನಮಗೆ ತಿಳಿಯುವದಿಲ್ಲವೆ? ಸ್ವಲ್ಪ ದಿನಗಳಾದ ಮೇಲೆ ಮೋದಿಜಿಯ ಸ್ವಚ್ಛ ಭಾರತಕ್ಕೆ ಅದ್ಭುತ ಸ್ಪಂದನೆ ಅಂತಾ ಟೀವಿಲಿ ತೋರಿಸಿ ಮೋದಿ ಪ್ರಚಾರ ಮಾಡುವ ಕುತ್ಸಿತ ಮತಿ ನಮಗೆಲ್ಲಾ ಗೊತ್ತಿದೆ. ನಾವೇನು ಕಿವಿಯಲ್ಲಿ ಹೂ ಇಟ್ಟಿಲ್ಲಾ ತಿಳೀರಿ ಬಾಲುಕರೇ . (ಇದು ವ್ಯಂಗ್ಯ ಕಮೆಂಟಪ್ಪಾ ಸೀರಿಯಸ್ ತಗೋಬೇಡೀ ಮತ್ತೆ)

  ಉತ್ತರ
  • Shripad
   ಏಪ್ರಿಲ್ 22 2015

   ಹೌದು, ಹೌದು. ಪ್ರಪಂಚದಲ್ಲಿ ಆಗುತ್ತಿರುವುದೆಲ್ಲ ಪುರೋಇತಸಾಯಿ ಹುನ್ನಾರವೇ!

   ಉತ್ತರ
 4. Nagshetty Shetkar
  ಏಪ್ರಿಲ್ 25 2015

  ಕ್ರಿಯಾಜ್ಞಾನ ಅಂತೆ ಬದನೇಕಾಯಿ! ಮಡೆಸ್ನಾನ ಆಚರಣೆ ಮಾಡುವುದರಿಂದ ಅದ್ಯಾವ ಕ್ರಿಯಾಜ್ಞಾನ ತಮಗೆ ಲಭಿಸಿದೆ ಅಂತ ದಯವಿಟ್ಟು ಹೇಳಿ.

  ಉತ್ತರ
  • shripad
   ಮೇ 1 2015

   ನಿಮ್ಮಂಥ ಡಬ್ಬಗಳ ಪ್ರಶ್ನೆ ಏನಿರಬಹುದೆಂದು ಲೇಖನದಲ್ಲೇ ಹೇಳಿಯಾಗಿದೆ. ಮಡೆಸ್ನಾನದ ಬಗ್ಗೆ ಅದನ್ನು ಮಾಡುವವರನ್ನು ಕೇಳಿ. ನಾಲ್ಕು ಗೋಡೆ ಮಧ್ಯೆ ಕೂತು ಶರಣ ವಚನ, ದರ್ಗಾ ವಚನ ಅಂತ ಉದುರಿಸುವುದು, ಪೇಪರ್ ಸುದ್ದಿ ಓದಿ ಪ್ರತಿಕ್ರಿಯಿಸುತ್ತ ಕೂರುವುದಲ್ಲ. ಕ್ಷೇತ್ರಕಾರ್ಯ ಮಾಡಿ, ಜನರಿಂದಲೇ ಉತ್ತರ ಪಡೆದುಕೊಳ್ಳಿ.

   ಉತ್ತರ
   • Nagshetty Shetkar
    ಮೇ 1 2015

    ಒಂದು ಸರಳ ಪ್ರಶ್ನೆಗೆ ನೇರವಾಗಿ ಉತ್ತರ ಕೊಡಲಾಗದೆ ತೊಣಚಿ ಮುಟ್ಟಿದವರ ಹಾಗೆ ಕುಣಿಯುವುದು ಏತಕ್ಕೆ? ನರ್ತನವನ್ನು ನಿಲ್ಲಿಸಿ ಅದ್ಯಾವ ಕ್ರಿಯಾಜ್ಞಾನ ತಮಗೆ ಲಭಿಸಿದೆ ಅಂತ ದಯವಿಟ್ಟು ಹೇಳಿ.

    ಉತ್ತರ
  • Shripad
   ಮೇ 2 2015

   “ಕ್ರಿಯಾಜ್ಞಾನ ಅಂತೆ ಬದನೇಕಾಯಿ! ಮಡೆಸ್ನಾನ ಆಚರಣೆ ಮಾಡುವುದರಿಂದ ಅದ್ಯಾವ ಕ್ರಿಯಾಜ್ಞಾನ ತಮಗೆ ಲಭಿಸಿದೆ ಅಂತ ದಯವಿಟ್ಟು ಹೇಳಿ”
   ಸರಳವಾಗಿ ಹೇಳುತ್ತೇನೆ: ಕ್ರಿಯೆಯ ಮೂಲಕ ಪಡೆದುಕೊಳ್ಳುವ ಅರಿವು ಅಥವಾ ಜ್ಞಾನ ಅಥವಾ ಅನುಭವ. ಧಾನ್ಯ, ಹಣ್ಣು-ತರಕಾರಿಗಳನ್ನು ಮನುಷ್ಯ ತಿನ್ನುತ್ತ, ಯಾವುದು ಸರಿ, ಯಾವುದು ತಪ್ಪು ಎಂದು ಕಾಲಾಂತರದಲ್ಲಿ ಕಂಡುಕೊಂಡಿದ್ದು-ಅನುಭವದ ಮೂಲಕ ಅಳವಡಿಸಿಕೊಂಡಿದ್ದು ಕ್ರಿಯಾ ಜ್ಞಾನ ಅನಿಸಿಕೊಳ್ಳುತ್ತದೆ. ಆಹಾರ ಸ್ವೀಕರಿಸಿದಾಗ ಅದರಲ್ಲಿನ ಪ್ರೋಟೀನ್ ವಿಟಮಿನ್ ಇತ್ಯಾದಿಗಳು ಕಣ್ಣಿಗೆ ಕಾಣಿಸದಿದ್ದರೂ (ಅಮೂರ್ತ) ದೈಹಿಕ ಮಾನಸಿಕ ಶಕ್ತಿ ನೀಡುವವು ಅವೇ. ಆದರೆ ಅದರ ಎಂಡ್ ಪ್ರಾಡಕ್ಟ್ ಕಣ್ಣಿಗೆ ಕಾಣುತ್ತದೆ (ಮೂರ್ತ). ನಿಮಗೆ ಇದು ಮುಖ್ಯ ಅಥವಾ ನೀವು ಅದೇ ಆಗಿದ್ದೀರಿ. ಹಾಗಾಗಿ ಅದಕ್ಕಿಂತ ಹಿಂದಿನ ಪ್ರಕ್ರಿಯೆಗಳು ನಿಮಗೆ ಅರ್ಥವಾಗಲಾರವು! ಇನ್ನೇನೂ ಹೇಳಲಾಗದು.

   ಉತ್ತರ
   • Nagshetty Shetkar
    ಮೇ 2 2015

    ಕ್ರಿಯಾಜ್ಞಾನ = trial and error method then. Big deal!

    ಉತ್ತರ

ನಿಮ್ಮದೊಂದು ಉತ್ತರ charles ಗಾಗಿ ಪ್ರತ್ಯುತ್ತರವನ್ನು ರದ್ದುಮಾಡಿ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Note: HTML is allowed. Your email address will never be published.

Subscribe to comments