ವಿಷಯದ ವಿವರಗಳಿಗೆ ದಾಟಿರಿ

ಏಪ್ರಿಲ್ 22, 2015

2

ಸೆಮೆಟಿಕ್ ರಿಲಿಜನ್ನಿನ ಪವಿತ್ರ ಗ್ರಂಥಗಳೂ ಮತ್ತು ಹಿಂದೂ ಧರ್ಮದ ವೇದಗಳೂ

‍ನಿಲುಮೆ ಮೂಲಕ

– ವಿನಾಯಕ ಹಂಪಿಹೊಳಿ

Pustakaಸೆಮೆಟಿಕ್ ರಿಲಿಜನ್ನಿನ ಅನುಯಾಯಿಗಳು ತಮ್ಮ ಪವಿತ್ರ ಗ್ರಂಥಗಳ ರಚನೆಯನ್ನು ಕಾಲದ ಪರಿಧಿಯೊಳಗೇ ಕಾಣುತ್ತಾರೆ.ಸೃಷ್ಟಿಯ ನಂತರವೇ,ಆಡಮ್,ಮೋಸಸ್ ಬರುವದರಿಂದ ಸೃಷ್ಟಿ ಮೊದಲು, ಹಳೆ ಒಡಂಬಡಿಕೆ ನಂತರ ಎಂಬುದು ಅವರ ನಂಬಿಕೆ ಮತ್ತು ಅದು ತರ್ಕಕ್ಕೆ ಒಪ್ಪತಕ್ಕದ್ದೂ ಆಗಿದೆ. ಜೀಸಸ್ ನಂತರವೇ ಹೊಸ ಒಡಂಬಡಿಕೆ, ಪೈಗಂಬರರ ನಂತರವೇ ಖುರಾನ್ ಆವೃತ್ತಿ ಎಂಬುದನ್ನೂ ಒಪ್ಪುತ್ತಾರೆ. ಇವರೆಲ್ಲರಿಗೂ ಸೃಷ್ಟಿ ಒಂದೇ ಆಗಿರುತ್ತದೆ. ಕೇವಲ ಒಮ್ಮೆ ಮಾತ್ರ ಸೃಷ್ಟಿಯಾಗಿರುವ ಇಲ್ಲಿ ಪ್ರಳಯದ ನಂತರ ಇನ್ನೊಂದು ಸೃಷ್ಟಿ, ನಂತರ ಮತ್ತೊಂದು ಸೃಷ್ಟಿ, ಈ ಸೃಷ್ಟಿಯ ಹಿಂದಿನ ಇನ್ನೊಂದು ಸೃಷ್ಟಿ ಇವುಗಳ ಬಗ್ಗೆ ಅವರು ನಂಬುವದೇ ಇಲ್ಲವಾದ್ದರಿಂದ, ಅವರ ಪವಿತ್ರ ಗ್ರಂಥಗಳಿಗೆ ಕಾಲದ ಎಲ್ಲೆಕಟ್ಟುಗಳು ಇರುವದು ಯುಕ್ತವೇ ಆಗಿದೆ ಎಂದರೂ ತಪ್ಪಿಲ್ಲ.

ಗಮನಿಸಬೇಕಾದ ಅಂಶವೆಂದರೆ, ನಂತರ ಬಂದ ಸೆಮೆಟಿಕ್ ರಿಲಿಜನ್ ಹಿಂದಿನಿಂದ ಬಂದ ರಿಲಿಜನ್ ಅನ್ನು ತಿರಸ್ಕರಿಸದೇ, ಕೇವಲ ಅದರ ಪರಿಷ್ಕೃತ ಆವೃತ್ತಿ ಎಂಬುದಾಗಿ ಮಾತ್ರ ಪರಿಗಣಿಸಲ್ಪಡುತ್ತದೆ. ಉದಾಹರಣೆಗೆ, ಹಳೇ ಒಡಂಬಡಿಕೆಯಲ್ಲಿ ಪ್ರಕ್ಷೇಪಗಳಾಗಿರುವದರಿಂದ ಜೀಸಸ್ ಮುಖಾಂತರ ಮೂಲ ಬೋಧನೆಗಳನ್ನು ಹೊಸ ಒಡಂಬಡಿಕೆಯಲ್ಲಿ ನೀಡಲಾಗಿದೆ ಎಂದು ಕ್ಯಾಥೋಲಿಕ್ ಜನರೂ,ಎರಡೂ ಒಡಂಬಡಿಕೆಯಲ್ಲಿ ಪ್ರಕ್ಷೇಪಗಳಾಗಿರುವದರಿಂದ ಖುರಾನಿನಲ್ಲಿ ಇನ್ನೊಮ್ಮೆ ಮೂಲ ಬೋಧನೆಗಳನ್ನು ನೀಡಲಾಗಿದೆ ಎಂದು ಮುಸ್ಲಿಮ್ ಜನರೂ ಭಾವಿಸುತ್ತಾರೆ. ವಿಶೇಷವೆಂದರೆ ಖುರಾನು ತನ್ನ ಹಿಂದಿನ ಗ್ರಂಥಗಳಂತೆ ಭವಿಷ್ಯದಲ್ಲಿ ಇನ್ನೊಬ್ಬ ದೇವದೂತನ ಆಗಮನವನ್ನು ಅಲ್ಲಗಳೆದು ಅದೇ ಅಂತಿಮ ಎಂದು ಹೇಳಿಕೊಂಡಿದೆ.

ಇನ್ನು ವೇದಗಳ ವಿಚಾರವಾಗಿ ಹೇಳುವದಾರೆ, ವೇದ ಸಂಹಿತೆಗಳು ಋಷಿಗಳಿಂದ ರಚಿಸಲ್ಪಟ್ಟವು.ಹಿಂದೂಗಳ ನಂಬಿಕೆ ಪ್ರಕಾರ ಇವರು ಮಂತ್ರದ್ರಷ್ಟಾರರೇ ಹೊರತು, ಮಂತ್ರಕರ್ತಾರರಲ್ಲ. ಇವು ಸಾಹಿತ್ಯಿಕ ರಚನೆಗಳಲ್ಲ ಏಕೆಂದರೆ ವೇದಗಳ ವಾಕ್ಯಗಳನ್ನು ವಿರೋಧಾಭಾಸಗಳಿಲ್ಲದಂತೆ ಅರ್ಥೈಸಬಹುದು ಎಂಬುದು ಸಿದ್ಧಿಸಲ್ಪಟ್ಟಿದೆ. ಸ್ವತಃ ಅನುಭವಿಸಿದ ಸತ್ಯದಲ್ಲಿ ಎಂದಿಗೂ ವಿರೋಧವಿರುವದಿಲ್ಲ. ಜಗತ್ತಿನಲ್ಲಿ ಅನೇಕ ಜನರು ತಮ್ಮ ತಮ್ಮ ಅನುಭವಗಳಿಂದಲೇ ತಮ್ಮದೇ ಸಂಗೀತ ಶಾಸ್ತ್ರವನ್ನು ಕಂಡುಹಿಡಿದರು. ಆದರೆ ಆ ಎಲ್ಲ ಸಂಗೀತಗಳು ಬೇರೆ ಬೇರೆ ಪ್ರಕಾರಗಳಾಗಿದ್ದರೂ ಎಲ್ಲವುಗಳಲ್ಲಿ ೭ ಸ್ವರಗಳೇ ಇದ್ದವು. ಏಕೆಂದರೆ ಅನುಭವದಿಂದ ಕಂಡುಕೊಂಡ ಸತ್ಯದಲ್ಲಿ ವಿವಿಧತೆಗಳಿದ್ದರೂ, ವೈರುಧ್ಯತೆಗಳು ಇರುವದಿಲ್ಲ. ಎರಡು ಸಂಗೀತ ಶಾಸ್ತ್ರಗಳು ಸೇರಿದಾಗ ಉತ್ತಮ ಜುಗಲ್ ಬಂದಿಯಾಗುತ್ತದೆಯೇ ಹೊರತು ಎರಡು ಮತಾನುಯಾಯಿಗಳ ನಡುವಿನ ಜಗಳಬಂದಿಯಾಗುವದಿಲ್ಲ. ಪ್ರಾಮಾಣಿಕ ಅನುಭವವು ಏಕರೀತಿಯಾಗಿರುವದು ಎಂಬುದನ್ನು ಸೆಮೆಟಿಕ್ ರಿಲಿಜನ್ನುಗಳು ಒಪ್ಪಿಕೊಂಡಿದ್ದರೆ, ತಮ್ಮ ರಿಲಿಜನ್ನೇ ಶ್ರೇಯಸ್ಕರ ಉಳಿದವು ನರಕದ್ವಾರ ಎಂದು ಎಲ್ಲಿಯೂ ಹೇಳಿಕೊಳ್ಳುತ್ತಿರಲಿಲ್ಲ.

ಇನ್ನೂ ಒಂದು ಗಮನಿಸಬೇಕಾದ ಅಂಶವೇನೆಂದರೆ, ಋಷಿಗಳು ಮಂತ್ರದ್ರಷ್ಟಾರರಾಗಿದ್ದು ಅವರ ಸ್ವಪ್ರಯತ್ನ ಮತ್ತು ಸಾಧನೆ, ತಪಸ್ಸುಗಳಿಂದಲೇ ಹೊರತು ಅದು ಕೇವಲ ಭಗವಂತನ ಆಯ್ಕೆಯೊಂದೇ ಅಲ್ಲ. ಭಗವಂತನಿಗೂ ಭಕ್ತನಿಗೂ ಇರುವ ಭೇದ ಸಾರ್ವಕಾಲಿಕ ಸತ್ಯ ಎಂಬ ಮಧ್ವಾಚಾರ್ಯರ ಸಿದ್ಧಾಂತವೊಂದನ್ನು ಹೊರತು ಪಡಿಸಿದರೆ, ಹಿಂದೂ ಧರ್ಮದ ಉಳಿದ ಎಲ್ಲ ಮತ ಸಿದ್ಧಾಂತಗಳೂ ಬ್ರಹ್ಮವನ್ನು ತಿಳಿದವನು ಬ್ರಹ್ಮವೇ ಆಗುತ್ತಾನೆ ಎಂಬುದನ್ನು ಒಪ್ಪುವದರಿಂದ ಋಷಿಗಳು ಸೆಮೆಟಿಕ್ ರಿಲಿಜನ್ನಿನ ದೇವದೂತರಂತಲ್ಲ ಎಂಬುದು ಸಿದ್ಧವಾಗುತ್ತದೆ.

ಇನ್ನು ವೇದಗಳು ಕಾಲಾತೀತವೇ ಎಂಬುದು ಇಲ್ಲಿ ಶತಮಾನಗಳಿಂದ ಚರ್ಚಿಸಲ್ಪಡುತ್ತಿವೆ. “ಎಲೈ ಅಗ್ನಿಯೇ, ಈ ಹಿಂದೆಯೂ ನಿನ್ನನ್ನು ಹಲವರು ಸ್ತುತಿಸಿದ್ದಾರೆ”, “ಎಲೈ ಅಗ್ನಿಯೇ! ಸಂಪೂರ್ಣವಾಗಿ ಹೊಸದಾಗಿರುವ ಋಕ್ಕುಗಳಿಂದ ಈಗ ನಿನ್ನನ್ನು ಸ್ತುತಿಸುತ್ತೇವೆ” ಎಂಬ ಮೊದಲಾದ ಋಗ್ವೇದದ ಪಂಕ್ತಿಗಳು ವೇದಗಳಿಗೆ ಇರುವ ಕಾಲದ ಎಲ್ಲೆಕಟ್ಟುಗಳನ್ನು ತೋರಿಸುತ್ತವೆ ಎಂಬುದು ಒಂದು ವಾದ. ಅಲ್ಲದೇ ವೇದಗಳಲ್ಲಿ ಕಥೆಗಳು ಹೇರಳವಾಗಿವೆ. ಇಂದ್ರ-ತ್ವಷ್ಟೃ ಯುದ್ಧಗಳು ಅನೇಕ ಬಾರಿ ವರ್ಣಿತವಾಗಿವೆ. ಹೀಗಾಗಿ ಘಟನೆ ನಡೆದ ಮೇಲಲ್ಲವೇ ಕಥೆ ಹುಟ್ಟುವುದು. ಹೀಗಾಗಿ ವೇದಗಳು ಸೃಷ್ಟಿಯ ನಂತರವೇ ಬಂದಿವೆ ಎಂಬುದು ಅನೇಕ ತಾರ್ಕಿಕರ ವಾದ.

ಆದರೂ ವೇದಗಳು ಕಾಲಾತೀತ ಎಂಬುದು ಹಿಂದೂಗಳ ಭಾವನೆ. ಏಕೆಂದರೆ ಅಪೌರುಷೇಯವಾದದ್ದು ದೇಶಕಾಲಗಳ ಸೀಮಿತತೆಗೆ ಒಳಗಾಗಬಾರದು. ಅದಕ್ಕೇ ನಮ್ಮಲ್ಲಿ ಶ್ರುತಿಯಾಧಾರಿತ ಸ್ಮೃತಿಗಳು ಹೇರಳವಾಗಿವೆ. ಈ ಏಕ ಶ್ರುತಿ ಅದನ್ನು ಅನುಸರಿಸುವ ಅನೇಕ ಸ್ಮೃತಿಗಳೇ ನಮ್ಮ ಧರ್ಮದಲ್ಲಿನ ವೈವಿಧ್ಯತೆಗಳಿಗೆ ಮೂಲಕಾರಣ. ಉದಾಹರಣೆಗೆ ಅತಿಥಿ ದೇವೋ ಭವ ಎಂಬುದು ಶ್ರುತಿ. ಆದರೆ ಬಂದ ಅತಿಥಿಗೆ, ನೀರು ಕೊಡಿ, ಊಟಕ್ಕೆ ಹಾಕಿ ಇತ್ಯಾದಿಗಳು ಸ್ಮೃತಿಗಳು. ಅತಿಥಿಗೆ ಸತ್ಕಾರ ಮಾಡುವದು ಮುಖ್ಯ. ಹೇಗೆ ಮಾಡಬೇಕೆಂಬುದಕ್ಕೆ ಶ್ರುತಿಗಳ ನಿರ್ಬಂಧವಿಲ್ಲ. ಪ್ರತಿಯೊಬ್ಬರೂ ತಮ್ಮ ಅನೂಕೂಲಕ್ಕೆ ತಕ್ಕಂತೆ ಸ್ಮೃತಿಗಳನ್ನು ನಿರ್ಮಿಸಿ ಅದನ್ನು ಅನುಸರಿಸುತ್ತಾರೆ. ಹೀಗಾಗಿ ಆಚರಣೆಗಳಲ್ಲಿ ವೈವಿಧ್ಯತೆ ಇದ್ದರೂ ಮೂಲ ಆಶಯ ಒಂದೇ. ಇದು ವೇದಗಳಲ್ಲಿ ಕಂಡು ಬರುವ, ಸೆಮೆಟಿಕ್ ಗ್ರಂಥಗಳಲ್ಲಿ ಕಾಣದಿರುವ ಮುಖ್ಯ ಅಂಶ ಎನ್ನಬಹುದು.

ಹಿಂದೂ ಧರ್ಮದಲ್ಲಿ ಜನ್ಮ-ಮೃತ್ಯುಗಳೂ, ಸೃಷ್ಟಿ-ಲಯಗಳೂ ಚಕ್ರದಂತೆ. ಈ ಬ್ರಹ್ಮಾಂಡಕ್ಕೆ ಕಾರಣವಾದ ಮಹಾಸ್ಫೋಟವನ್ನು ವಿವರಿಸುವ ವಿಜ್ಞಾನವೂ ಕೂಡ, ಒಂದೇ ಮಹಾಸ್ಫೋಟವಾಗಿರುವದು, ಒಂದೇ ಬ್ರಹ್ಮಾಂಡವಿರುವದು ಅಂತ ಒಪ್ಪಿಕೊಳ್ಳಲು ಸಿದ್ಧವಿಲ್ಲ. ಇಷ್ಟಾಗಿ ಹಿಂದೂ ಧರ್ಮವೂ ಕೂಡ ಭಗವಂತನಿಗೆ ಒಂದೇ ಬ್ರಹ್ಮಾಂಡವನ್ನು ಮಾತ್ರ ಸೃಷ್ಟಿಸುವ ಶಕ್ತಿಯಿದೆಯೇ? ಎಂದು ತನ್ನ ಶ್ರೌತ ತರ್ಕವನ್ನು ಒಡ್ಡಿದೆ. ಹೀಗಾಗಿ ದೇಶಕಾಲಾದಿಯಾಗಿ ಎಲ್ಲರೀತಿಯಿಂದಲೂ ಪರಿಚ್ಛಿನ್ನವಾಗಿರುವ ಇನ್ನೂ ಹಲವಾರು ಬ್ರಹ್ಮಾಂಡಗಳೇ ಇರಬಹುದು. ಆದರೆ ಅದನ್ನು ಅರಿಯಲಾಗುವದಿಲ್ಲ. ಏಕೆಂದರೆ ಹಾಗಿರುವ ಎರಡು ಬ್ರಹ್ಮಾಂಡಗಳ ನಡುವೆ ಏನೂ ಇರುವದಿಲ್ಲ, ಅವಕಾಶವೂ ಕೂಡ ಇರುವದಿಲ್ಲ. ಹೀಗಾಗಿ ಅಲ್ಲಿಂದ ಯಾವ ಕಿರಣಗಳೂ ಇಲ್ಲಿ ಬರುವದಿಲ್ಲ. ಒಂದು ರೀತಿ ಎರಡು ಬೇರೆ ಬೇರೆ ಕನಸಿನ ಪ್ರಪಂಚಗಳಿದ್ದಂತೆ. ಆದರೆ ಅದರ ಅಸ್ತಿತ್ವ ನಮಗೆ ಗೊತ್ತಾಗುವದಿಲ್ಲ ಎಂಬ ಮಾತ್ರಕ್ಕೆ ಇದೊಂದೇ ಬ್ರಹ್ಮಾಂಡ ಎನ್ನುವದೂ ಒಪ್ಪಬಾರದಲ್ಲವೇ?

ಹಾಗಿದ್ದರೆ ಬೇರೆ ಬೇರೆ ಕಾಲದಲ್ಲಿ ರಚಿತವಾಗಿರುವಂತೆ ಕಂಡು ಬರುವ ಸಂಹಿತೆಯ ಋಕ್ಕುಗಳಿಗೂ, “ಹ” ಪ್ರತ್ಯಯ ಉಪಯೋಗಿಸಿ ಭೂತಕಾಲದ ಕಥೆಗಳನ್ನು ತಿಳಿಸುವ ಉಪನಿಷತ್ತುಗಳಿಗೂ ಕಾಲದ ಚೌಕಟ್ಟು ಇಲ್ಲ ಅಂತ ಹೇಳಲು ಹೇಗೆ ಸಾಧ್ಯ ಎಂಬುದು ಎಲ್ಲ ವೈದಿಕರಿಗೂ ಕಾಡುವ ಪ್ರಶ್ನೆಯೇ. ಅದಕ್ಕೆ ಶಂಕರಾಚಾರ್ಯರು ಒಂದು ಸರಳವಾದ ಉತ್ತರ ಕೊಟ್ಟಿದ್ದಾರೆ. ಕೆಲವು ವಾಕ್ಯಗಳು ನಮಗೆ ಅರ್ಥವಾಗಲು ಸುಲಭವಾಗಲೆಂದೇ ಭೂತಕಾಲದಲ್ಲಿವೆ. ಉದಾಹರಣೆಗೆ ಆತ್ಮನಿಂದ ಆಕಾಶವು ಹುಟ್ಟಿತು, ಆಕಾಶದಿಂದ ವಾಯುವು ಹುಟ್ಟಿತು. ಇತ್ಯಾದಿ. ಸೃಷ್ಟಿಗಳು ಪುನಃ ಪುನಃ ಆಗುತ್ತಲೇ ಇರುವದರಿಂದ ಹುಟ್ಟಿತು ಎಂಬ ಭೂತಕಾಲದ ವಾಕ್ಯ ಮುಂದಿನ ಸೃಷ್ಟಿಯ ಪಾಲಿಗೆ ಭವಿಷ್ಯವಾಗಿರುತ್ತದೆ. ಹೀಗಾಗಿ ಭೂತಕಾಲದ ವಾಕ್ಯವು ಕೇವಲ ನಮ್ಮ ಅರಿವಿಗಾಗಿಯೇ ಹೊರತು ಸೃಷ್ಟಿಯಾದ ಮೇಲೆ ವೇದಗಳು ಹುಟ್ಟಿವೆ ಎಂದಲ್ಲ. ತ್ವಷ್ಟಾ ಎಂದರೆ ಮೇಘಗಳು ಎಂಬ ಅರ್ಥವಿರುವದರಿಂದ ಇಂದ್ರ ಮಳೆಯ ದೇವತೆಯಾಗಿರುವದರಿಂದ, ಇಂದ್ರ-ತ್ವಷ್ಟೃ ಯುದ್ಧವು ಮೇಘಗಳನ್ನು ಮಣಿಸಿ ಮಳೆಯನ್ನು ಸುರಿಸುವ ಪ್ರಕೃತಿಯ ಶಕ್ತಿಯನ್ನು ವರ್ಣಿಸುವ ಕಾಲ್ಪನಿಕ ಕಥೆಯಾಗಿದೆ.

ಹಾಗೆಯೇ, ಆತ್ಮತತ್ವವನ್ನು ತಿಳಿಸುವಲ್ಲಿಯೂ ಕೂಡ ಯಮ-ನಚಿಕೇತ, ಸೋಮ್ಯನ ಕಥೆ, ಯಾಜ್ಞವಲ್ಕ್ಯ-ಮೈತ್ರೇಯಿ ಸಂವಾದ, ಇಂದ್ರಿಯಗಳ ಸಂವಾದ ಇತ್ಯಾದಿ ಕಥೆಗಳಿವೆ. ಇವೆಲ್ಲ ಯಾವುದೋ ತತ್ತ್ವ ತಿಳಿಸಲು ಶ್ರುತಿಯೇ ಕಲ್ಪಿಸಿದ ಕಥೆಯೇ ಹೊರತು ಯಾವಾಗಲೋ ಸತ್ಯವಾಗಿ ನಡೆದು ನಂತರ ಶ್ರುತಿಯಲ್ಲಿ ಸೇರಿಸಲಾಗಿದೆ ಎಂಬುದು ಸುಳ್ಳು ಎಂದು ಶಂಕರಾಚಾರ್ಯರು ವಿವರಿಸಿದ್ದಾರೆ. ಏಕೆಂದರೆ ಶ್ರುತಿ ಎಂದಿಗೂ ಬದಲಾಗದಿದ್ದದು ಎಂಬುದೇ ಹಿಂದೂವಿನ ಭಾವನೆಯಲ್ಲವೇ? ಇದೊಂದು ರೀತಿ ಯಾವಾಗಿಂದಲೋ ಇರುವ ಗುರುತ್ವಾಕರ್ಷಣೆಗೆ ಇತ್ತೀಚೆಗೆ ಹುಟ್ಟಿರುವ ನ್ಯೂಟನ್ನಿನ ಹೆಸರಿಟ್ಟಂತೆ. ಋಷಿಗಳು ಸಂಸ್ಕೃತ ಬಲ್ಲವರಾಗಿದ್ದರಿಂದ ವೇದಗಳು ಸಂಸ್ಕೃತಮಯವಾದವು. ಆದರೆ ಅನುಭವದಲ್ಲಿ ಕಂಡಿದ್ದ ತತ್ತ್ವ ಮಾತ್ರ ಭಾಷಾತೀತ ಮತ್ತು ಕಾಲಾತೀತ. ಹೀಗಾಗಿ ಕಾಲಾತೀತತೆಯಿಂದಾಗಿ ವೇದಗಳು ಸೆಮೆಟಿಕ್ ಮತಗಳ ಗ್ರಂಥಗಳಿಂದ ಭಿನ್ನವಾಗಿವೆ.

2 ಟಿಪ್ಪಣಿಗಳು Post a comment
 1. ವಾಸು.
  ಏಪ್ರಿಲ್ 22 2015

  ವೇದಗಳು ಸಾರ್ವಕಾಲಿಕ, ಸಾರ್ವದೇಶಿಕ ಮತ್ತು ಸಾರ್ವಬೌಮ ಸಾಹಿತ್ಯ ಸಂಪತ್ತು. ಜಗತ್ತಿನ ಉಗಮದೊಂದಿಗೆ ವೇದಗಳ ಸೃಷ್ಟಿಯಾಗಿದೆ. ವೇದಗಳ ಸೃಷ್ಟಿ ಸ್ವತಃ ಭಗವಂತನಿಂದ ಆಗಿದೆ ಎನ್ನುವುದನ್ನು ಮನುಸ್ಮೃತಿಯಿಂದ ಹಿಡಿದು, ಗೀತೆ, ಮಹಾಭಾರತ ರಾಮಾಯಣ, ಉಪನಿಷತ್ತುಗಳು ಒಪ್ಪಿವೆ. ವೇದಗಳ ಉತ್ಪತ್ತಿ ಮತ್ತು ಅದು ಅಪೌರುಷೇಯ ಹೇಗೆ ಎನ್ನುವುದನ್ನು ತರ್ಕಬದ್ಧವಾಗಿ ಸ್ವಾಮಿ ದಯಾನಂದ ಸರಸ್ವತಿಯವರು ತಮ್ಮ ಻ಅಮೂಲ್ಯ ಕ್ರಾಂತಿ ಗ್ರಂಥ ” ಸತ್ಯಾರ್ಥ ಪ್ರಕಾಶ” ದಲ್ಲಿ ತಿಳಿಯ ಪಡಿಸಿದ್ದಾರೆ. ವೇದಗಳ ಬಗ್ಗೆ ಇರುವ ಅನೇಕ ಭ್ರಾಂತಿಗಳನ್ನು ದೂರಮಾಡಲು ಈ ಪುಸ್ತಕ ಬಹು ಸಹಾಯಕಾರಿಯಾಗಿದೆ. ಆರ್ಯಸಮಾಜದವರ ದೃಷ್ಟಿಯಲ್ಲಿ ಇದೊಂದು ರತ್ನ. ವೇದಗಳಲ್ಲಿ ಕಥೆಗಳಿವೆ, ದೇಶ ಕಾಲಗಳ ಉಲ್ಲೇಖವಿದೆ. ಇತಿಹಾಸವಿದೆ. ಎಂಬುದನ್ನು ಸಾಧಾರವಾಗಿ ನಿರಾಕರಿಸಿ ವೇದಗಳ ಸಾರ್ವಭೌಮತ್ವ ಮತ್ತು ಸಾರ್ವಕಾಲಿಕತ್ವ ವನ್ನು ಈ ಗ್ರಂಥ ಎತ್ತಿ ಹಿಡಿದಿದೆ. ವೇದಗಳ ಬಗ್ಗೆ ಅನೇಕ ಭಾಷ್ಯಗಳು ಬಂದಿವೆಯಾದರೂ ದಯಾನಂದರ ತರ್ಕ, ಮಾನವೀಯತೆ ವಿಚಾರಗಳ ಮುಂದೆ ಅನ್ಯ ಭಾಷ್ಯಕಾರರ ಭಾಷ್ಯ ಮಂಕಾಗುತ್ತದೆ. ವೇದಾಸಕ್ತರೆಲ್ಲರೂ ಸತ್ಯಾರ್ಥ ಪ್ರಕಾಶ ಮತ್ತು ಋಗ್ವೇದಾದಿ ಭಾಷ್ಯ ಭೂಮಿಕಾ ಪುಸ್ತಕಗಳನ್ನು ಓದಿ ವೇದದ ನಿಜ ಸ್ವರೂಪವನ್ನು ಅರ್ಥೈಸಿಕೊಳ್ಳಬಹುದಾಗಿದೆ.

  ಉತ್ತರ
 2. ಏಪ್ರಿಲ್ 22 2015

  ಉತ್ತಮ ವಿವರಣೆ.

  ಉತ್ತರ

ನಿಮ್ಮ ಅನಿಸಿಕೆ...

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Note: HTML is allowed. Your email address will never be published.

Subscribe to comments