ವಿಷಯದ ವಿವರಗಳಿಗೆ ದಾಟಿರಿ

ಏಪ್ರಿಲ್ 23, 2015

ವಿಶ್ವವಿದ್ಯಾಲಯಗಳಲ್ಲಿ ಜಾತಿಪ್ರೇಮ

‍ನಿಲುಮೆ ಮೂಲಕ

– ರಾಜಕುಮಾರ.ವ್ಹಿ.ಕುಲಕರ್ಣಿ,ಮುಖ್ಯಗ್ರಂಥಪಾಲಕ
ಎಸ್.ನಿಜಲಿಂಗಪ್ಪ ವೈದ್ಯಕೀಯ ಮಹಾವಿದ್ಯಾಲಯ, ಬಾಗಲಕೋಟ

ಜಾತಿ ಪ್ರೇಮಕೆಲವು ವರ್ಷಗಳ ಹಿಂದೆ ನನ್ನ ಪರಿಚಯದ ಹುಡುಗನೊಬ್ಬ ಪಿಹೆಚ್.ಡಿ ಪದವಿಗಾಗಿ ವಿಶ್ವವಿದ್ಯಾಲಯವೊಂದರಲ್ಲಿ ಹೆಸರು ನೊಂದಾಯಿಸಿದ್ದ. ಕಾಲೇಜು ವಿದ್ಯಾರ್ಥಿಯಾಗಿದ್ದ ದಿನಗಳಿಂದಲೂ ಡಾಕ್ಟರೇಟ್ ಕನಸು ಕಾಣುತ್ತಿದ್ದವನಿಗೆ ವಿಶ್ವವಿದ್ಯಾಲಯದಲ್ಲಿ ಪಿಹೆಚ್.ಡಿ ಅಧ್ಯಯನಕ್ಕೆ ಪ್ರವೇಶ ದೊರೆತದ್ದು ಸಹಜವಾಗಿಯೇ ಖುಷಿ ನೀಡಿತ್ತು. ಸಮಾಜ ವಿಜ್ಞಾನ ವಿದ್ಯಾರ್ಥಿಯಾದ ಅವನಿಗೆ ತನ್ನ ಸಂಶೋಧನೆಯಿಂದ ಸಮಾಜಕ್ಕೊಂದು ವಿಶಿಷ್ಟ ಕೊಡುಗೆ ನೀಡುವ ಆಸೆಯಿತ್ತು. ಓದಿನಲ್ಲಿ ಜಾಣ ವಿದ್ಯಾರ್ಥಿಯಾಗಿದ್ದ ಆತ ಹಲವು ಕನಸುಗಳನ್ನು ಕಟ್ಟಿಕೊಂಡು ಸಂಶೋಧನಾ ವಿದ್ಯಾರ್ಥಿಯಾಗಿ ವಿಶ್ವವಿದ್ಯಾಲಯದ ಮೆಟ್ಟಿಲು ಹತ್ತಿದ. ಹತ್ತಿರದಿಂದ ಅವನ ಏಳ್ಗೆಯನ್ನು ಗಮನಿಸುತ್ತ ಬಂದಿದ್ದ ನನಗೆ ಕೂಡಾ ಅವನಿಗೆ ದೊರೆತ ಆ ಅವಕಾಶ ಸಂತಸ ತಂದಿತ್ತು. ಅದಾದ ನಂತರ ಹಲವು ತಿಂಗಳುಗಳ ಕಾಲ ನಾನು ನನ್ನ ಕೆಲಸದ ನಡುವೆ ಆ ವಿಷಯವನ್ನು ಮರೆತು ಬಿಟ್ಟೆ. ಅವನೂ ಸಹ ತನ್ನ ಸಂಶೋಧನೆಯಲ್ಲಿ ತೊಡಗಿಸಿಕೊಂಡಿದ್ದರಿಂದ ನನ್ನನ್ನು ಅನೇಕ ತಿಂಗಳುಗಳ ಕಾಲ ಸಂಪರ್ಕಿಸಲಿಲ್ಲ.

ಈ ನಡುವೆ ವೈಯಕ್ತಿಕ ಕೆಲಸಕ್ಕೆಂದು ನನ್ನೂರಿಗೆ ಹೋಗುತ್ತಿದ್ದ ಸಮಯ ಬಸ್ ನಿಲ್ದಾಣದಲ್ಲಿ ಚಹಾ ಕುಡಿಯಲೆಂದು ಇಳಿದಾಗ ಇದ್ದಕ್ಕಿದ್ದಂತೆ ಅನೀರಿಕ್ಷಿತವಾಗಿ ಅವನ ಭೇಟಿಯಾಯಿತು. ದೈಹಿಕವಾಗಿ ತುಂಬಾ ಬಳಲಿದವನಂತೆ ಕಾಣುತ್ತಿದ್ದ. ಮಾತಿನ ನಡುವೆ ಅವನ ಸಂಶೋಧನಾ ವಿಷಯ ಚರ್ಚೆಗೆ ಬಂದಿತು. ಎಲ್ಲಿಯವರೆಗೆ ಬಂದಿದೆ ನಿನ್ನ ಸಂಶೋಧನಾ ಕಾರ್ಯ ಎಂದು ಕೇಳಿದ ನನ್ನ ಪ್ರಶ್ನೆಗೆ ಅಳುವೇ ಅವನ ಉತ್ತರವಾಗಿತ್ತು. ಮಾರ್ಗದರ್ಶಕರು ಸಹಕರಿಸುತ್ತಿಲ್ಲವೆಂದು ತಾನು ಸಂಶೋಧನಾ ಅಧ್ಯಯನವನ್ನು ಅರ್ಧಕ್ಕೇ ಬಿಟ್ಟು ಬಿಡಲು ನಿರ್ಧರಿಸಿರುವುದಾಗಿ ಹೇಳಿದ. ಜೊತೆಗೆ ವಿಶ್ವವಿದ್ಯಾಲಯದಲ್ಲಿ ಜಾತಿಯತೆಯ ಲಾಬಿ ಬಹಳಷ್ಟಿದೆ ಎಂದು ಮತ್ತು ಆ ವಾತಾವರಣದಲ್ಲಿ ಅಧ್ಯಯನ ಮಾಡಲು ಸಾಧ್ಯವಾಗುತ್ತಿಲ್ಲವೆಂದು ತನ್ನ ಅಸಹಾಯಕತೆಯನ್ನು ತೋಡಿಕೊಂಡ. ನಿರುತ್ಸಾಹಗೊಳ್ಳದಿರೆಂದು ಧೈರ್ಯ ಹೇಳಿ ಅವನನ್ನು ಬಿಳ್ಕೊಟ್ಟು ನಾನು ಹೋಗಬೇಕಿದ್ದ ಬಸ್ ಹತ್ತಿದೆ.

ಇತ್ತೀಚಿನ ದಿನಗಳಲ್ಲಿ ಇಂಥದ್ದೊಂದು ಸಮಸ್ಯೆ ವ್ಯಾಪಕವಾಗಿ ವಿಸ್ತರಿಸುತ್ತ ಹೋಗುತ್ತಿದೆ. ಜ್ಞಾನವನ್ನು ವೃದ್ಧಿಸಬೇಕಾದ ವಿಶ್ವವಿದ್ಯಾಲಯಗಳು ಜಾತಿ ಕೇಂದ್ರಗಳಾಗಿ ರೂಪಾಂತರಗೊಳ್ಳುತ್ತಿವೆ. ಪ್ರತಿಯೊಂದು ವಿಶ್ವವಿದ್ಯಾಲಯಗಳಲ್ಲಿ ಜಾತಿ ಆಧರಿಸಿ ಗುಂಪುಗಾರಿಕೆ ಬೆಳೆಯುತ್ತಿದೆ. ಈ ಜಾತಿ ವ್ಯವಸ್ಥೆ ಎನ್ನುವುದು ಎಷ್ಟೊಂದು ವ್ಯವಸ್ಥಿತವಾಗಿ ಜಾತಿ, ಉಪಜಾತಿಗಳಾಗಿ ವಿಭಿನ್ನ ಸ್ತರಗಳಲ್ಲಿ ಬೆಳೆಯುತ್ತಿದೆ ಎನ್ನುವುದನ್ನು ನೋಡಲು ನಾವು ಬೇರೆಲ್ಲೂ ಹೋಗಬೇಕಿಲ್ಲ. ಈ ವಿಶ್ವವಿದ್ಯಾಲಯಗಳೇ ಅಂಥದ್ದೊಂದು ಮಾಹಿತಿಯನ್ನು ಪ್ರಾಯೋಗಿಕವಾಗಿ ತೋರಿಸಿಕೊಡುತ್ತಿವೆ. ಒಟ್ಟಿನಲ್ಲಿ ಈ ವಿಜ್ಞಾನ ಮತ್ತು ತಂತ್ರಜ್ಞಾನದ ಯುಗದಲ್ಲೂ ಜಾತಿವ್ಯವಸ್ಥೆಯನ್ನು ಅತ್ಯಂತ ಜೋಪಾನವಾಗಿ ಕಾಯ್ದಿಟ್ಟುಕೊಂಡು ಬರುತ್ತಿರುವ ಸಂಪೂರ್ಣ ಶ್ರೇಯಸ್ಸು ನಮ್ಮ ಈ ವಿಶ್ವವಿದ್ಯಾಲಯಗಳಿಗೆ ಸಲ್ಲಬೇಕು.

ಬ್ರಾಹ್ಮಣ ಪ್ರಾಧ್ಯಾಪಕರಿಗೆ ಸಂಶೋಧನಾ ವಿದ್ಯಾರ್ಥಿ ಬ್ರಾಹ್ಮಣನೇ ಆಗಿರಬೇಕು. ಅದೇರೀತಿ ಲಿಂಗಾಯತ, ಜಂಗಮ, ಕುರುಬ, ಕುಂಬಾರ, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹೀಗೆ ವಿಶ್ವವಿದ್ಯಾಲಯಗಳ ಪ್ರಾಧ್ಯಾಪಕ ಮತ್ತು ವಿದ್ಯಾರ್ಥಿ ಗಣ ಹತ್ತು ಹಲವು ಜಾತಿ, ಉಪಜಾತಿಗಳಾಗಿ ವಿಂಗಡಣೆಗೊಂಡಿವೆ. ಇಲ್ಲಿ ಅರ್ಹತೆಗೆ ಮಾನದಂಡ ಜಾತಿ ಮತ್ತು ಉಪಜಾತಿಯೇ ಹೊರತು ವಿದ್ಯಾರ್ಥಿಯ ಬದ್ದಿಮತ್ತೆಯಲ್ಲ. ಒಂದು ಕೋಮಿಗೆ ಸೇರಿದ ಪ್ರಾಧ್ಯಾಪಕ ಇನ್ನೊಂದು ಕೋಮಿಗೆ ಸೇರಿದ ವಿದ್ಯಾರ್ಥಿಯ ಸಂಶೋಧನೆಗೆ ಮಾರ್ಗದರ್ಶಕನಾಗಲು ಸುತಾರಾಂ ಇಷ್ಟಪಡುವುದಿಲ್ಲ. ತನ್ನ ಜಾತಿಗೆ ಸೇರಿದ ವಿದ್ಯಾರ್ಥಿ ಅದೆಷ್ಟೇ ಅಯೋಗ್ಯನಾದರೂ ಸರಿ ಅಂಥವರನ್ನು ಹಿಡಿದು ತಂದು ಸಂಶೋಧನೆಗೆ ಹಚ್ಚುವ ಪ್ರಭೃತಿಗಳ ಸಂಖ್ಯೆಯೇನೂ ನಮ್ಮ ವಿಶ್ವವಿದ್ಯಾಲಯಗಳಲ್ಲಿ ಕಡಿಮೆ ಇಲ್ಲ. ಜಾತಿಯೊಂದನ್ನು ಅತ್ಯಂತ ವ್ಯವಸ್ಥಿತವಾಗಿ ಸೀಳಿ ಅದನ್ನು ಅನೇಕ ಉಪಜಾತಿಗಳಲ್ಲಿ ವರ್ಗೀಕರಿಸಿ ನೋಡುವ ವಿಶ್ವವಿದ್ಯಾಲಯಗಳಲ್ಲಿನ ಪ್ರಾಧ್ಯಾಪಕರುಗಳ ಜಾತಿ ಪ್ರೀತಿ ನಿಜಕ್ಕೂ ಕುತೂಹಲಕರ ಸಂಗತಿಗಳಲ್ಲೊಂದು.

ಇನ್ನೂ ಆಶ್ಚರ್ಯದ ಸಂಗತಿ ಎಂದರೆ ಕೆಲವೊಮ್ಮೆ ವಿಶ್ವವಿದ್ಯಾಲಯಗಳ ಉಪಕುಲಪತಿಗಳೇ ಈ ಜಾತಿವ್ಯವಸ್ಥೆಗೆ ಕುಮ್ಮಕ್ಕು ಕೊಡುವುದುಂಟು. ಅಂಥ ಸಂದರ್ಭಗಳಲ್ಲೆಲ್ಲ ಉಪಕುಲಪತಿಗಳ ಜಾತಿಗೆ ಸೇರಿದ ಪ್ರಾಧ್ಯಾಪಕರು ಮತ್ತು ವಿದ್ಯಾರ್ಥಿಗಳು ಇಡೀ ವಿಶ್ವವಿದ್ಯಾಲಯವನ್ನೇ ತಮ್ಮ ಹತೋಟಿಗೆ ತೆಗೆದುಕೊಂಡು ಆಡಳಿತ ವ್ಯವಸ್ಥೆಯಲ್ಲಿ ಹಸ್ತಕ್ಷೇಪ ಮಾಡುವುದೂ ಇದೆ. ನಾನು ಸ್ನಾತಕೋತ್ತರ ಶಿಕ್ಷಣದ ವಿದ್ಯಾರ್ಥಿಯಾಗಿದ್ದ ಸಂದರ್ಭ ಒಂದು ನಿರ್ಧಿಷ್ಟ ಜಾತಿಗೆ ಸೇರಿದ್ದ ವಿದ್ಯಾರ್ಥಿಗಳು ಸ್ನಾತಕೋತ್ತರ ಶಿಕ್ಷಣ ಪೂರೈಸಿದ ನಂತರವೂ ಅನೇಕ ವರ್ಷಗಳಿಂದ ವಿಶ್ವವಿದ್ಯಾಲಯದ ವಸತಿಗೃಹದಲ್ಲೇ ಉಳಿದು ಕೊಂಡಿದ್ದರು. ವಸತಿ ಜೊತೆಗೆ ಊಟವೂ ಸಹ ಅವರಿಗೆ ಪುಕ್ಕಟ್ಟೆಯಾಗಿ ಕೊಡುತ್ತಿದ್ದ ಸಂಗತಿ ನಮಗೆಲ್ಲ ಅಚ್ಚರಿಯನ್ನುಂಟು ಮಾಡುತ್ತಿತ್ತು. ಅನಂತರ ತಿಳಿದು ಬಂದಂತೆ ಅವರಿಗೆಲ್ಲ ಹಿಂದೆ ಅಲ್ಲಿದ್ದ ಉಪಕುಲಪತಿಗಳ ಬೆಂಬಲವಿತ್ತು. ಅದಕ್ಕೆ ಕಾರಣ ಅವರೆಲ್ಲ ಒಂದೇ ಜಾತಿಗೆ ಸೇರಿದವರಾಗಿದ್ದರು. ನಂತರ ಬಂದ ಉಪಕುಲಪತಿಗಳು ಅವರನ್ನೆಲ್ಲ ವಿಶ್ವವಿದ್ಯಾಲಯದಿಂದ ಹೊರಹಾಕಲು ಹರಸಾಹಸ ಪಡಬೇಕಾಯಿತು.

ಅನೇಕ ಸಂದರ್ಭಗಳಲ್ಲಿ ಜಾತಿಯನ್ನೇ ಆಧಾರವಾಗಿಟ್ಟುಕೊಂಡು ಸಂಶೋಧನಾ ವಿದ್ಯಾರ್ಥಿಯಾಗಿ ವಿಶ್ವವಿದ್ಯಾಲಯವನ್ನು ಪ್ರವೇಶಿಸುವ ವಿದ್ಯಾರ್ಥಿಗಳ ಸಂಖ್ಯೆಯೇನೂ ಕಡಿಮೆಯಿಲ್ಲ. ಹೀಗೆ ಒಂದು ಸಲ ವಿಶ್ವವಿದ್ಯಾಲಯವನ್ನು ಪ್ರವೇಶಿಸುವ ವಿದ್ಯಾರ್ಥಿಗಳು ಅನೇಕ ವರ್ಷಗಳ ಕಾಲ ವಿಶ್ವವಿದ್ಯಾಲಯ ಕೊಡಮಾಡುವ ಸೌಲಭ್ಯಗಳನ್ನು ಅನುಭವಿಸುತ್ತ ಇಲ್ಲವೇ ಅನೇಕ ವರ್ಷಗಳವರೆಗೆ ಸಂಶೋಧನಾ ಕೆಲಸವನ್ನು ವಿಸ್ತರಿಸುತ್ತ ಕಾಲ ತಳ್ಳುವುದುಂಟು. ಇನ್ನು ಅದೆಷ್ಟೋ ವಿಷಯ ಜ್ಞಾನವಿಲ್ಲದ ವಿದ್ಯಾರ್ಥಿಗಳು ಪ್ರಾಧ್ಯಾಪಕರ ನೆರವಿನಿಂದ ಸಂಶೋಧನೆಯನ್ನು ಪೂರ್ಣಗೊಳಿಸಿ ಡಾಕ್ಟರೇಟ್ ಪ್ರಮಾಣಪತ್ರ ಪಡೆಯುವುದುಂಟು. ಒಟ್ಟಾರೆ ಇದಕ್ಕೆಲ್ಲ ಜಾತಿ ಎನ್ನುವ ಒಂದು ಪ್ರಬಲ ಅನಿಷ್ಟ ವ್ಯವಸ್ಥೆಯ ವ್ಯಾಪಕ ಬೆಂಬಲ ನಿರಂತರವಾಗಿ ದೊರೆಯುತ್ತಿದೆ. ಹೊರಗೆ ಸಮಾಜದಲ್ಲಿ ಜಾತಿವ್ಯವಸ್ಥೆಯ ನಿರ್ಮೂಲನೆ ಕುರಿತು ಗಂಟೆಗಟ್ಟಲೆ ಭಾಷಣ ಬಿಗಿಯುವ ನಮ್ಮ ವಿಶ್ವವಿದ್ಯಾಲಯಗಳಲ್ಲಿನ ವೈಚಾರಿಕ ಪ್ರಜ್ಞೆಯ ಪ್ರಕಾಂಡ ಪಂಡಿತರು ಆಂತರ್ಯದಲ್ಲಿ ಅದನ್ನು ಅತ್ಯಂತ ಜೋಪಾನವಾಗಿ ಕಾಯ್ದುಕೊಂಡು ಬರುತ್ತಿರುವುದು ವೈಚಾರಿಕ ಕ್ರಾಂತಿಯ ನೆಲೆಯಂದೇ ನಂಬಿರುವ ವಿಶ್ವವಿದ್ಯಾಲಯಕ್ಕೆ ಮಾಡುತ್ತಿರುವ ದೊಡ್ಡ ಅಪಚಾರ.

ಪರಿಸ್ಥಿತಿ ಹೀಗಿರುವಾಗ ನಮ್ಮ ವಿಶ್ವವಿದ್ಯಾಲಯಗಳಲ್ಲಿನ ಸಂಶೋಧನಾ ಫಲಿತಾಂಶದ ಕುರಿತು ಮಾತನಾಡದಿರುವುದೇ ಲೇಸು.ವಿಶೇಷವಾಗಿ ಸಮಾಜ ವಿಜ್ಞಾನ ವಿಷಯಗಳಲ್ಲಿನ ಸಂಶೋಧನಾ ಚಟುವಟಿಕೆಗಳಿಂದ ಉತ್ತಮ ಮತ್ತು ಪರಿಣಾಮಕಾರಿಯಾದ ಫಲಿತಾಂಶ ಹೊರಬರುತ್ತಿಲ್ಲ ಎನ್ನುವುದು ಸತ್ಯಕ್ಕೆ ಹತ್ತಿರವಾದ ಮಾತು. ಜನಿವಾರ, ಶಿವದಾರ, ಸಂಧ್ಯಾವಂದನೆ, ಶಿವಪೂಜೆ, ರುದ್ರಾಕ್ಷಿ ಮಾಲೆ, ಕಳಸಮ್ಮ, ದುರ್ಗಮ್ಮ ಇಂಥ ನಿರುಪಯುಕ್ತ ವಿಷಯಗಳ ಮೇಲೆ ಸಂಶೋಧನಾ ಪ್ರಬಂಧಗಳು ಪ್ರಕಟಗೊಳ್ಳುತ್ತಿವೆ. ಸಾಹಿತ್ಯ, ಸಂಗೀತ, ಸಮಾಜಸೇವೆ ಇತ್ಯಾದಿ ಕ್ಷೇತ್ರಗಳನ್ನು ಜಾತಿಯ ಚೌಕಟ್ಟಿಗೆ ಸೀಮಿತಗೊಳಿಸಿ ಸಂಶೋಧನೆ ಮಾಡುತ್ತಿರುವರು. ಕುವೆಂಪು ಒಕ್ಕಲಿಗ ವಿದ್ಯಾರ್ಥಿಗಳಿಗಾದರೆ, ಬೇಂದ್ರೆ ಬ್ರಾಹ್ಮಣರಿಗೆ, ಶಿವರುದ್ರಪ್ಪ ಲಿಂಗಾಯಿತರಿಗೆ, ಕುಂವೀ ಕುಂಬಾರರಿಗೆ, ದೇವನೂರು ಪರಿಶಿಷ್ಟರಿಗೆ ಈ ರೀತಿಯಾದ ಅಚ್ಚುಕಟ್ಟಾದ ವಿಂಗಡಣೆಯನ್ನು ನಮ್ಮ ವಿಶ್ವವಿದ್ಯಾಲಯಗಳಲ್ಲಿನ ಸಂಶೋಧನಾ ವಿದ್ಯಾರ್ಥಿಗಳು ಮತ್ತು ಪ್ರಾಧ್ಯಾಪಕರು ಮಾಡುತ್ತಿರುವರು. ಈ ಜಾತಿ ಪ್ರೀತಿ ಎನ್ನುವುದು ನಮ್ಮ ವಿಶ್ವವಿದ್ಯಾಲಯಗಳಲ್ಲಿನ ಪ್ರಾಧ್ಯಾಪಕರುಗಳನ್ನು ಮತ್ತು ಸಂಶೋಧನಾ ವಿದ್ಯಾರ್ಥಿಗಳನ್ನು ಅದು ಹೇಗೆ ಕುರುಡರನ್ನಾಗಿಸಿದೆ ಎನ್ನುವುದಕ್ಕೆ ಒಂದು ಉದಾಹರಣೆ ಹೀಗಿದೆ. ಕೆಲವು ವರ್ಷಗಳ ಹಿಂದೆ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆಂದು ಹೋದ ಸಂದರ್ಭ ಒಬ್ಬ ಸಂಶೋಧನಾ ವಿದ್ಯಾರ್ಥಿಯ ಪರಿಚಯವಾಯಿತು. ಕನ್ನಡ ಸಾಹಿತ್ಯದ ಕುರಿತು ಒಂದಿಷ್ಟು ಆಸಕ್ತಿ ಇರುವ ನಾನು ಕನ್ನಡ ಸಾಹಿತ್ಯದ ಮೇಲೆ ಸಂಶೋಧನೆ ಮಾಡುತ್ತಿರುವ ಆತನನ್ನು ಮಾತಿಗೆಳೆದು ಆಯ್ದುಕೊಂಡ ವಿಷಯ ಯಾವುದೆಂದು ವಿಚಾರಿಸಿದೆ. ಹೀಗೆ ಒಂದು ನಿರ್ಧಿಷ್ಟಕ್ಕೆ ಜಾತಿಗೆ ಸೇರಿದ ಕಥೆಗಾರರ ಕುರಿತು ಸಂಶೋಧನೆ ಮಾಡುತ್ತಿರುವುದಾಗಿ ಹೇಳಿದನಲ್ಲದೆ ವಿಷಯ ವ್ಯಾಪ್ತಿ ಬಹಳ ಸೀಮಿತವಾಗಿರುವುದಾಗಿ ತನ್ನ ಅಳಲನ್ನು ತೋಡಿಕೊಂಡ. ಹಾಗಾದರೆ ಜಾತಿ ಬದಲು ಒಂದು ನಿರ್ಧಿಷ್ಟ ಭೌಗೋಳಿಕ ವ್ಯಾಪ್ತಿಯನ್ನು ಆಧಾರವಾಗಿಟ್ಟುಕೊಳ್ಳಬಹುದಲ್ಲ ಎಂದು ಸಲಹೆ ನೀಡಿದೆ. ಮಾರ್ಗದರ್ಶಕರಿಗೆ ತಮ್ಮ ಜಾತಿ ಕುರಿತು (ಸಂಶೋಧನಾ ವಿದ್ಯಾರ್ಥಿಯೂ ಅದೇ ಜಾತಿಗೆ ಸೇರಿದವನು) ಅತ್ಯಂತ ಅಭಿಮಾನ ಮತ್ತು ಪ್ರೀತಿ ಇರುವುದರಿಂದ ವಿಷಯ ಬದಲಾವಣೆಗೆ ಸಮ್ಮತಿಸುತ್ತಿಲ್ಲವೆಂದು ಹೇಳಿದನಲ್ಲದೆ ಬೇರೆ ಜಾತಿಗೆ ಸೇರಿದ ಬರಹಗಾರರನ್ನು ಸಂಶೋಧನೆಗೆ ಪರಿಗಣಿಸುವುದಿರಲಿ ಅವರ ಪುಸ್ತಕಗಳನ್ನೂ ಓದದಂತೆ ಎಚ್ಚರಿಸಿರುವರೆಂದು ನುಡಿದ. ಒಟ್ಟಿನಲ್ಲಿ ಜಾತಿ ವ್ಯವಸ್ಥೆಯ ವಿರುದ್ಧ ವೈಚಾರಿಕ ಪ್ರತಿಭಟನೆಗಿಳಿಯಬೇಕಿದ್ದ ವಿಶ್ವವಿದ್ಯಾಲಯಗಳೇ ಆ ವ್ಯವಸ್ಥೆಯನ್ನು ರಕ್ಷಿಸಿಕೊಂಡು ಬರುತ್ತಿವೆ. ಜಾತಿ, ಉಪಜಾತಿ, ಉಪಪಂಗಡಗಳ ಒಂದು ಶ್ರೇಣಿಕೃತ ವ್ಯವಸ್ಥೆಯನ್ನು ಈ ಜಾಗತೀಕರಣದ ದಿನಗಳಲ್ಲೂ ಅತ್ಯಂತ ಅಚ್ಚುಕಟ್ಟಾಗಿ ಕಟ್ಟಿ ಕೊಡುತ್ತಿರುವ ವಿಶ್ವವಿದ್ಯಾಲಯಗಳು ಮುಂದಿನ ದಿನಗಳಲ್ಲಿ ಜಾತಿ, ಉಪಜಾತಿಗೊಂದರಂತೆ ಪ್ರತ್ಯೇಕಗೊಂಡರೂ ಆಶ್ಚರ್ಯವಿಲ್ಲ.

ಕೊನೆಯ ಮಾತು
ಮೊನ್ನೆ ಸಂಗೀತಗೋಷ್ಟಿಯೊಂದಕ್ಕೆ ಹೋಗಿದ್ದೆ. ಸಂಗೀತಗಾರರಲ್ಲಿ ಬಹುತೇಕರು ಗದುಗಿನ ಪಂಡಿತ ಪುಟ್ಟರಾಜ ಗವಾಯಿಗಳಲ್ಲಿ ಕಲಿತು ಬಂದವರಾಗಿದ್ದರು. ಕೆಲವರನ್ನು ಪರಿಚಯಿಸಿಕೊಂಡು ಮಾತಿಗಿಳಿದೆ. ಎಲ್ಲರಿಗೂ ‘ವೀರೇಶ್ವರ ಪುಣ್ಯಾಶ್ರಮ’ದಲ್ಲಿ ಕಲಿತು ಬಂದ ಅಭಿಮಾನವಿತ್ತು. ಮಾತಿನ ನಡುವೆ ಆ ಸಂಗೀತಗಾರರು ತಮ್ಮ ಗುರುಗಳ ಕುರಿತು ಅನೇಕ ವಿಷಯಗಳನ್ನು ಹೇಳಿದರು. ಅವರುಗಳು ಹೇಳಿದ ವಿಷಯಗಳಲ್ಲಿ ನನ್ನನ್ನು ಆ ಕ್ಷಣಕ್ಕೆ ಮತ್ತು ಅನಂತರದ ಅನೇಕ ದಿನಗಳವರೆಗೆ ಕಾಡಿದ ಸಂಗತಿ ಎಂದರೆ ಆ ಆಶ್ರಮದಲ್ಲಿ (ಸಂಗೀತ ಶಾಲೆ) ಜಾತಿಯ ಪ್ರಶ್ನೆಯೇ ಇರಲಿಲ್ಲ. ಗುರುಗಳು ಪ್ರತಿಯೊಬ್ಬ ಶಿಕ್ಷಣಾರ್ಥಿಯನ್ನು ಆತನ ಊರಿನ ಹೆಸರಿನಿಂದ ಕರೆಯುತ್ತಿದ್ದರಂತೆ. ವಿದ್ಯಾರ್ಥಿಯ ಮನೆತನದ ಹೆಸರನ್ನು ತಪ್ಪಿಯೂ ಕೂಡ ಬಳಸುತ್ತಿರಲಿಲ್ಲವಂತೆ. ಅದೇಕೆ ಹೀಗೆ ಎಂದು ಪ್ರಶ್ನಿಸಿದಾಗ ಮನೆತನದ ಹೆಸರು ಜಾತಿಸೂಚಕವಾಗಿರುವುದರಿಂದ ಆಶ್ರಮದಲ್ಲಿ ಜಾತಿವ್ಯವಸ್ಥೆಯೊಂದು ಅನಾವರಣಗೊಳ್ಳುವುದು ಗುರುಗಳಿಗೆ ಇಷ್ಟವಿರಲಿಲ್ಲವಂತೆ. ನಿಜಕ್ಕೂ ಜ್ಯಾತ್ಯಾತೀತ ಕಲ್ಪನೆ ಎಂದರೆ ಇದು. ಜಾತಿ ವ್ಯವಸ್ಥೆಯಿಂದ ದೂರವಿರುವ ಕಾರಣದಿಂದಲೇ ಇವತ್ತಿಗೂ ಗದುಗಿನ ‘ವೀರೇಶ್ವರ ಪುಣ್ಯಾಶ್ರಮ’ ರಾಜ್ಯದ ರಾಜಕೀಯ ಸ್ಥಿತಿಗತಿಯನ್ನು ನಿರ್ಧರಿಸುವ ಮಟ್ಟಕ್ಕೆ ಪ್ರಾಮುಖ್ಯತೆ ಪಡೆದಿಲ್ಲ. ಲೇ ಹಾರವ, ಜಂಗಮ, ಕುಂಬಾರ ಎಂದು ಜಾತಿ ಹೆಸರಿನಿಂದ ವಿದ್ಯಾರ್ಥಿಗಳನ್ನು ಕೂಗಿ ಕರೆಯುವ ನಮ್ಮ ವಿಶ್ವವಿದ್ಯಾಲಯಗಳಲ್ಲಿನ ಬುದ್ಧಿವಂತ ಪ್ರಾಧ್ಯಾಪಕರುಗಳು ಪಂಡಿತ ಪುಟ್ಟರಾಜ ಗವಾಯಿಗಳಂಥ ವಿಶಾಲ ಮನೋಭಾವದ ವ್ಯಕ್ತಿತ್ವದಿಂದ ಕಲಿಯುವುದು ಬಹಳಷ್ಟಿದೆ.

ನಿಮ್ಮ ಅನಿಸಿಕೆ...

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Note: HTML is allowed. Your email address will never be published.

Subscribe to comments