ವಿಷಯದ ವಿವರಗಳಿಗೆ ದಾಟಿರಿ

ಏಪ್ರಿಲ್ 24, 2015

16

ಈ ಭೂಮಿಯೆಂಬ ಗ್ರಹವೊಂದು ರಿಮ್ಯಾಂಡ್ ಹೋಮ್

‍ನಿಲುಮೆ ಮೂಲಕ

– ಪ್ರೇಮಶೇಖರ

ಆತ್ಮವಿಶ್ವದಲ್ಲಿ ಮಾನವ ಏಕಾಂಗಿಯಲ್ಲ : ಒಂದು ಜಿಜ್ಞಾಸೆ – ಭಾಗ ೧
ಬೆತ್ತಲೆ ಅಲೆಮಾರಿ ಇದ್ದಕ್ಕಿದ್ದಂತೆ ನಾಗರಿಕ ಮಾನವನಾದ! – ಭಾಗ ೨
ಮಂಗಳನ ಅಂಗಳದಿಂದ ನೆಫಿಲಿಂ ನೆಲಕ್ಕೊಂದು ಯಾನ – ಭಾಗ ೩

ನಾನೊಬ್ಬ ಪ್ರವಾದಿಯಲ್ಲ.ನನಗೆ ಏಕಾಏಕಿ ಯಾವ ಜ್ಞಾನೋದಯವೂ ಆಗಿಲ್ಲ.ವೈಜ್ಞಾನಿಕವಾಗಿ ಸಾಬೀತಾದ ಸತ್ಯಗಳ ಅಧ್ಯಯನದ ಆಧಾರದ ಮೇಲೆ, ಹಲವು ವರ್ಷಗಳ ಚಿಂತನೆಯ ಮೂಲಕ ಮಾನವಜನ್ಮದ ಉದ್ದೇಶದ ಬಗ್ಗೆ ನನ್ನದೇ ಆದ ಕೆಲವೊಂದು ವಿಚಾರಗಳನ್ನು ರೂಪಿಸಿಕೊಂಡಿದ್ದೇನೆ.ಅವುಗಳನ್ನಿಲ್ಲಿ ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೇನೆ.ಸತ್ಕರ್ಮ ಹಾಗೂ ಕುಕರ್ಮಗಳಿಗನುಗುಣವಾಗಿ ಮರುಜನ್ಮವೆತ್ತುವ ಬಗ್ಗೆ ಹಿಂದೂಗಳು, ಬೌದ್ಧರು, ಜೈನರು ನಂಬಿಕೆಯನ್ನಿಟ್ಟಿದ್ದಾರೆ.ಈ ಮೂರು ಧರ್ಮಗಳ ತಳಹದಿಯೇ ಕರ್ಮ ಮತ್ತು ಕರ್ಮಕ್ಕನುಗುಣವಾಗಿ ಮರುಜನ್ಮ.  ಕ್ರಿಶ್ಚಿಯಾನಿಟಿ ಮತ್ತು ಇಸ್ಲಾಮ್ ಪುನರ್ಜನ್ಮವನ್ನು ತಿರಸ್ಕರಿಸುತ್ತವೆ.ಇರುವುದೊಂದೇ ಜನ್ಮ,ನಂತರದ್ದು ಅಂತಿಮ ತೀರ್ಪು, ಅದಕ್ಕನುಗುಣವಾಗಿ ಸ್ವರ್ಗ ಅಥವಾ ನರಕ ಎಂದು ಅವು ಹೇಳುತ್ತವೆ.ಆದರೆ ಬೈಬಲ್‍ನ ಎರಡೂ ಒಡಂಬಡಿಕೆಗಳಲ್ಲಿ ಪುನರ್ಜನ್ಮದ ಬಗ್ಗೆ ಉಲ್ಲೇಖಗಳಿದ್ದುವೆಂದೂ, ಅವುಗಳನ್ನು ಕ್ರಿ.ಶ. ನಾಲ್ಕನೆಯ ಶತಮಾನದಲ್ಲಿ ರೋಮನ್ ಚಕ್ರವರ್ತಿ ಕಾನ್‍ಸ್ಟಾಂಟೈನ್ ಮತ್ತವನ ತಾಯಿ ಉದ್ದೇಶಪೂರ್ವಕವಾಗಿ ತೆಗೆದುಹಾಕಿದರು ಎಂದು ಹೇಳಲಾಗುತ್ತದೆ.ಅವರದನ್ನು ಮಾಡಿದ್ದು ಸದುದ್ದೇಶದಿಂದಲೇ.ಈ ಜನ್ಮದ ತಪ್ಪುಗಳನ್ನು ಸರಿಪಡಿಸಿಕೊಳ್ಳಲು ಮುಂದಿನ ಜನ್ಮದಲ್ಲಿ ಅವಕಾಶವಿದೆ ಎಂದು ನಂಬಿದ ಜನರು ತಪ್ಪುಗಳನ್ನೆಸಗುವುದಕ್ಕೆ ಹಿಂಜರಿಯದಿರಬಹುದು, ಅದಕ್ಕೆ ಬದಲಾಗಿ ಇರುವೊಂದೇ ಜನ್ಮ, ತಪ್ಪೆಸಗಿದರೆ ತಿದ್ದಿಕೊಳ್ಳಲು ಅವಕಾಶವೇ ಇಲ್ಲ, ಅದಕ್ಕನುಗುಣವಾಗಿ ಶಿಕ್ಷೆಯೂ ಶತಸಿದ್ಧ ಎಂದು ನಂಬಿಸಿದರೆ ಜನರು ತಪ್ಪುಗಳನ್ನೆಸಗಲು ಹಿಂಜರಿದು ಸದ್ಗುಣಿಗಳಾತ್ತಾರೆಂದು ಕಾನ್‍ಸ್ಟಾಂಟೈನ್ ಮತ್ತವನ ತಾಯಿ ಆಶಿಸಿದ್ದರು.(ಇಷ್ಟಾಗಿಯೂ ಆವರ ಕಣ್ಣುತಪ್ಪಿಸಿ ಪುನರ್ಜನ್ಮದ ಬಗ್ಗೆ ಕೆಲ ಉಲ್ಲೇಖಗಳು ಬೈಬಲ್‍ನಲ್ಲಿ ಉಳಿದುಕೊಂಡಿವೆ.  ನೋಡಿ: ಮ್ಯಾಥ್ಯೂ 11:13-14, 17:10-13)

ಕ್ರಿಶ್ಚಿಯನ್ ಮತ್ತು ಯೆಹೂದೀ ಧರ್ಮಾನುಯಿಗಳೇ ಅಗಿರುವ ಹಲವಾರು ವಿಶ್ವಾಸಾರ್ಹ ಮನೋವೈದ್ಯರು ಮತ್ತು ಮನಃಶಾಸ್ತ್ರಜ್ಞರು ಪುನರ್ಜನ್ಮವನ್ನು ವೈಜ್ಞಾನಿಕ ವಿಧಾನಗಳ ಮೂಲಕ ಈಗ ಸಾಬೀತುಪಡಿಸಿದ್ದಾರೆ.ಡಾ. ಬ್ರಿಯಾನ್ ವೇಸ್ ಈಗ ಬದುಕಿರುವ ಸ್ತ್ರೀಯೊಬ್ಬಳು ಕಳೆದ ಮೂರೂವರೆ ಸಾವಿರ ವರ್ಷಗಳಿಂದಲೂ ಮತ್ತೆಮತ್ತೆ ಜನ್ಮಗಳನ್ನೆತ್ತಿ ಬರುತ್ತಿದ್ದಾಳೆಂದೂ, ಇದುವರೆಗೆ ಎಂಬತ್ತೆಂಟು ಬಾರಿ ಪುನರ್ಜನ್ಮವೆತ್ತಿದ್ದಾಳೆಂದೂ ದಾಖಲಿಸಿದ್ದಾರೆ.ಈ ಕಾಲದಲ್ಲಿ ಬದುಕಿರುವ ವ್ಯಕ್ತಿಯೊಬ್ಬನ ಪುನರ್ಜನ್ಮಗಳನ್ನು ಶೋಧಿಸುತ್ತಾ ಹಿಂದೆ ಹಿಂದೆ ಹೋದ ಜಗದ್ವಿಖ್ಯಾತ ಮನಃಶಾಸ್ತ್ರಜ್ಞ ರೋಜರ್ ವೂಲ್ಜರ್ ಆ ವ್ಯಕ್ತಿ ಎರಡು ಸಾವಿರ ವರ್ಷಗಳ ಹಿಂದೆ ಕ್ರಿಸ್ತನನ್ನು ಶಿಲುಬೆಗೇರಿಸಿದ್ದಕ್ಕೆ ಸಾಕ್ಷಿಯಾಗಿದ್ದನ್ನು ಪತ್ತೆಹಚ್ಚಿದ್ದಾರೆ.ಇವರೆಲ್ಲರ ಅಧ್ಯಯನ ಮತ್ತು ಸಂಶೋಧನೆಗಳ ಪ್ರಕಾರ ನಮ್ಮ ಪುನರ್ಜನ್ಮಗಳು ಒಂದು ನಿರ್ದಿಷ್ಟ ಕ್ರಮದಲ್ಲಿ ಜರುಗುತ್ತವೆ.ಆತ್ಮ ಅಂದರೆ ನಿಜವಾದ ನಾವು ದೇಹವನ್ನು ತೊರೆದ ನಂತರ ಇಡೀ ಬದುಕನ್ನು ಅವಲೋಕಿಸಲು ನಮಗೆ (ಆತ್ಮಕ್ಕೆ) ಅವಕಾಶ, ಅನುಕೂಲ, ಪ್ರಚೋದನೆ ಮತ್ತು ಸಹಕಾರ ದೊರೆಯುತ್ತದೆ.ನಮ್ಮಿಂದ ಹಾನಿಗೊಳಗಾದ ಪ್ರತಿಯೊಂದು ಆತ್ಮದ ಜತೆಗೂ ನಮ್ಮ ಆತ್ಮ ಸಂವಾದಿಸುತ್ತದೆ.ನಮ್ಮ ಸುಳ್ಳಿನಿಂದ, ವಂಚನೆಯಿಂದ, ಕುಟಿಲತನದಿಂದ, ಕುಕೃತ್ಯದಿಂದ, ಎಲ್ಲ ಬಗೆಯ ಹಿಂಸೆ ಹಾಗೂ ಕ್ರೌರ್ಯದಿಂದ ಮತ್ತೊಂದು ಆತ್ಮ ಭೌತಿಕ ಶರೀರದಲ್ಲಿ ಅನುಭವಿಸಿದ ನೋವನ್ನು ಅಷ್ಟೇ ಗಾಢವಾಗಿ ನಮ್ಮ ಆತ್ಮವೂ ಅನುಭವಿಸುತ್ತದೆ.ತಪ್ಪನ್ನು ಸರಿಪಡಿಸಿಕೊಳ್ಳಲು ಆತ್ಮಗಳ ನಡುವೆ ಒಪ್ಪಂದವೇರ್ಪಡುತ್ತದೆ.ನಂತರ ವಾಗ್ದಾನ ಪೂರೈಕೆಗಾಗಿ ನಮ್ಮ ಆತ್ಮಗಳು ಮರುಜನ್ಮವೆತ್ತಿ ಭೂಮಿಗೆ ಭೌತಿಕ ಶರೀರದೊಂದಿಗೆ ಹಿಂತಿರುಗುತ್ತದೆ.ದುರದೃಷ್ಟವಶಾತ್ ನಾವು ಮಾಡಿಕೊಂಡ ಒಪ್ಪಂದಗಳು ನಮ್ಮ ಜಾಗೃತ ಮನಸ್ಸಿನಿಂದ ಮರೆಯಾಗಿರುತ್ತವೆ.(ಆದರೆ ಸುಪ್ತ ಮನಸ್ಸಿನಲ್ಲಿ ಸ್ಪಷ್ಟವಾಗಿ ದಾಖಲಾಗಿರುತ್ತವೆ).ನಾವು ಆತ್ಮರೂಪದಲ್ಲಿ ಒಪ್ಪಂದ ಮಾಡಿಕೊಂಡ ಆತ್ಮಗಳೂ ಸಹಾ ಭೌತಿಕ ಶರೀರದೊಂದಿಗೆ ಭೂಮಿಗೆ ಹಿಂತಿರುಗುತ್ತವೆ ಮತ್ತು ಇಲ್ಲಿ ನಮ್ಮ ಬದುಕಿನ ಒಂದಲ್ಲ ಒಂದು ಹಂತದಲ್ಲಿ ಆ ವ್ಯಕ್ತಿಗಳು ನಮಗೆ ಯಾವುದಾದರೂ ಸಂಬಂಧದ ರೂಪದಲ್ಲಿ ಎದುರಾಗುತ್ತಾರೆ.ಈ ಸಂಬಂಧಗಳು ದೀರ್ಘಕಾಲದವರೆಗೆ ಸಾಗುವ ಅತ್ಯಂತ ಹತ್ತಿರದ್ದಾಗಿರಬಹುದು ಅಥವಾ ಕಡಿಮೆ ಸಮಯದ ಕೇವಲ ಪರಿಚಯದ್ದಾದರೂ ಆಗಿರಬಹುದು.ಹೀಗೆ ಭೇಟಿಯಾದಾಗ ನಮ್ಮೆದುರು ಎರಡು ದಾರಿಗಳು ತೆರೆದುಕೊಳ್ಳುತ್ತವೆ.

1. ಒಪ್ಪಂದದ ಹಾದಿ: ಇದು ನಾವು ಆತ್ಮರೂಪದಲ್ಲಿ ಮಾಡಿಕೊಂಡಿರುವ ಒಪ್ಪಂದದ ಅನುಷ್ಟಾನದ ದಾರಿ ಅಂದರೆ ಸದ್ಗುಣಿಯಾಗಿ ನಡೆದುಕೊಂಡು ಒಪ್ಪಂದವನ್ನು ಪೂರೈಸುವುದು ಮತ್ತು ಯಾವ ಹೊಸ ಹಾನಿಯನ್ನೂ ಎಸಗದಿರುವುದು.
2. ಸ್ವತಂತ್ರ ಆಯ್ಕೆ: ಆ ಗಳಿಗೆಯಲ್ಲಿ ನಮಗೆ ಬೇಕೆನಿಸುವ ಐಹಿಕ ಸುಖಭೋಗಗಳಿಗೆ, ಅನುಕೂಲಗಳಿಗೆ ಮನಸೋತು ಒಪ್ಪಂದವನ್ನು ಮರೆಯುವುದು, ಪರಿಣಾಮವಾಗಿ ಹೊಸ ಹಾನಿಯನ್ನೆಸಗುವುದು.ಒಪ್ಪಂದಕ್ಕೆ ಅನುಗುಣವಾಗಿ ನಡೆದುಕೊಂಡರೆ ಲೆಕ್ಕ ಸರಿಹೋಗಿ ಆತ್ಮಗಳ ನಡುವೆ ಶಾಶ್ವತ ಪ್ರೀತಿ ಹಾಗೂ ಮೈತ್ರಿ ಏರ್ಪಡುತ್ತದೆ.ಒಪ್ಪಂದಗಳಿಗೆ ವಿಮುಖವಾಗಿ ನಡೆದುಕೊಂಡರೆ ಮತ್ತೊಮ್ಮೆ ಆತ್ಮಗಳ ನಡುವೆ ಒಪ್ಪಂದ,ಭೌತಿಕ ಶರೀರದೊಡನೆ ಭೂಮಿಗೆ ಪುನರಾಗಮನ…ಜನ್ಮಜನ್ಮಗಳ ಸರಪಳಿ…

ನಮಗೆ ಸಂಬಂಧಿಸಿದ ಎಲ್ಲ ಆತ್ಮಗಳ ಜತೆ “ಲೆಕ್ಕ ಸರಿಮಾಡಿಕೊಳ್ಳಲು” ಹಲವಾರು ಜನ್ಮಗಳು ಬೇಕಾಗುತ್ತವೆ.ಬುದ್ಧನಿಗೆ ಐನೂರೈವತ್ತಕ್ಕಿಂತಲೂ ಹೆಚ್ಚಿನ ಜನ್ಮಗಳು ಬೇಕಾದದ್ದು ಬೌದ್ಧಸಾಹಿತ್ಯದಲ್ಲಿದೆ.ಹೀಗೆ ಜನ್ಮದಿಂದ ಜನ್ಮಕ್ಕೆ ನಾವು ಸದ್ಗುಣಿಗಳಾಗಿ,ಪಾಪದ ಹೊರೆಯನ್ನು ಇಳಿಸಿಕೊಳ್ಳುತ್ತಾ ಸಾಗಿದರೆ ಒಂದುದಿನ ಎಲ್ಲ ಲೆಕ್ಕವೂ ಸರಿಹೋಗಿ ಮರುಜನ್ಮದ ಸುಳಿಯಿಂದ ಹೊರಬರುತ್ತೇವೆ.ಆಗ ಶಾಶ್ವತವಾಗಿ ಎಲ್ಲಿಗೆ ಹೋಗುತ್ತೇವೆ? ಈ ಪ್ರಶ್ನೆಗೆ ಉತ್ತರಿಸಬೇಕಾದರೆ ಮೊದಲು ನಾವು ಬಂದದ್ದೆಲ್ಲಿಂದ ಎನ್ನುವುದನ್ನು ಗುರುತಿಸಬೇಕು.

‘ಎಂದೋ, ಎಲ್ಲಿಂದಲೋ’ ಬಂದ ಅನ್ಯಲೋಕ ಜೀವಿಗಳು ಭೂಮಿಯಲ್ಲಿ ಮಾನವ ವಿಕಾಸಕ್ಕೆ ನಾಂದಿಹಾಡಿದರು ಎಂದು ವಿವರವಾಗಿ ಹೇಳಿದ್ದೇನೆ.ಕಳೆದ ಮೂವತ್ತೈದುಸಾವಿರ ವರ್ಷಗಳಲ್ಲಿ ಮನುಷ್ಯನನ್ನು ‘ನಾಗರಿಕ’ವಾಗಿಸಲು ಅವರು ಮೂರು ಬಾರಿ ಮಧ್ಯಪ್ರವೇಶಿಸಿದ್ದಾರೆ ಎಂದೂ ಹೇಳಿದ್ದೇನೆ.ವಾಸ್ತವವಾಗಿ ನಾಗರಿಕತೆ ಅಂದರೇನು? ಮೂಲ ಅವಶ್ಯಕತೆಗಳನ್ನು ಪೂರೈಸಿಕೊಳ್ಳುವ ಸರಳ ಬದುಕನ್ನು ತೊರೆದು, ಸುಖವೆಂಬ ಮನೋಭಾವನೆಗೆ ಇಂಬುಗೊಡುವ ‘ಎಲ್ಲ’ವನ್ನೂ ಹೆಚ್ಚಿಗೆ ಗಳಿಸಿಟ್ಟುಕೊಳ್ಳುವ, ಅದಕ್ಕಾಗಿ ಹೊಸಹೊಸ ಉಪಕರಣಗಳನ್ನೂ, ಆಯುಧಗಳನ್ನೂ ಸಂಶೋಧಿಸುತ್ತಾ, ಅವುಗಳನ್ನು ಇತರರ ಮೇಲೆ ಪ್ರಯೋಗಿಸುತ್ತಾ ನೆಲಕ್ಕಾಗಿ, ಐಹಿಕ ಸುಖಭೋಗಗಳಿಗಾಗಿ ಸದಾ ತುಡಿಯುತ್ತಾ, ಅವುಗಳನ್ನು ಗಳಿಸಲು ಕಾದಾಡುತ್ತಾ ಬದುಕುವುದು! ಅಂದರೆ ಅನ್ಯಲೋಕ ಜೀವಿಗಳು ಮಾನವನಿಗೆ ಕಲಿಸಿದ್ದು ಇದು!

ಹಸಿವಾದಾಗ ಆಹಾರ ಹುಡುಕಿ ತಿಂದು,ಹೊಟ್ಟೆ ತುಂಬಿದಾಗ ನೆಮ್ಮದಿಯಾಗಿ ತಮ್ಮ ಪಾಡಿಗೆ ತಾವಿದ್ದ ನಿಯಾಂಡರ್‍ಥಾಲ್ ಮನುಷ್ಯನನ್ನು ನಿರ್ನಾಮ ಮಾಡಿ ಅವರು ತಮ್ಮಂತಹ ಹೋಮೋ ಸೇಪಿಯನ್ ಸೇಪಿಯನ್‍ನನ್ನು ಸೃಷ್ಟಿಸಿದರು.ಈತ ಕೆಲಕಾಲ ‘ನಾಗರಿಕ’ನಾದರೂ ನಿಧಾನವಾಗಿ ತನ್ನ ಹಿಂದಿನ ಸರಳಬದುಕಿಗೇ ಹಿಂತಿರುಗಿದ.ಹನ್ನೊಂದುಸಾವಿರ ವರ್ಷಗಳ ಹಿಂದೆ ಅವನಲ್ಲಿ ಐಹಿಕ ಸುಖಭೋಗಗಳ ಆಸೆಯನ್ನು ಮತ್ತೆ ಬಿತ್ತಿ ಸುಮೇರಿಯನ್, ಸಿಂಧೂ, ಈಜಿಪ್ಷಿಯನ್ ನಾಗರಿಕತೆಗಳನ್ನು ಚಾಲನೆಗೊಳಿಸಿದರು.ಆರೂವರೆ ಸಾವಿರ ವರ್ಷಗಳ ನಂತರ ಮನುಷ್ಯ ಮತ್ತೆ ಸರಳ ಬದುಕಿನತ್ತ ಸಾಗಿದಾಗ ಅವನನ್ನು ಪುನಃ ಐಹಿಕ ಸುಖಭೋಗಗಳತ್ತ ತಿರುಗಿಸಿ ಅಕ್ಕಾಡಿಯನ್ ನಾಗರಿಕತೆಗೆ ನಾಂದಿಹಾಡಿದರು.ಪ್ರಾಪಂಚಿಕ ಸುಖಗಳನ್ನು ಗಳಿಸಲು ಕಾದಾಡುವತ್ತ, ಗಳಿಸಿದಾಗ ಸುಖಿಸುತ್ತಾ, ಕಳೆದುಕೊಂಡಾಗ ಖಿನ್ನನಾಗುವತ್ತ ಮಾನವ ಬದುಕನ್ನು ದೂಡಿದರು.ಅಂದರೆ ಅವರಿಗೆ ಬೇಕಾಗಿದ್ದದ್ದು ಸರಳ ಬದುಕಿನ, ಆ ಕ್ಷಣದ ಅವಶ್ಯಕತೆಗಳತ್ತ ಮಾತ್ರ ಗಮನ ಕೊಡುವ ಮಾನವನಲ್ಲ.ಅಂತಹ ಮಾನವನನ್ನು ಅವರು ಮತ್ತೆಮತ್ತೆ ಐಹಿಕ ಸುಖಭೋಗಗಳತ್ತ ಹೊರಳಿಸಿ ಅವುಗಳನ್ನು ಗಳಿಸಿಕೊಳ್ಳಲು ಸುಳ್ಳು, ಮೋಸ, ವಂಚನೆ, ಹಿಂಸೆಯ ಮಾರ್ಗವನ್ನು ಅವನು ಹಿಡಿಯುವಂತೆ ಮಾಡಿದರು.ಕುಕರ್ಮದ ಜತೆಯೇ ಸತ್ಕರ್ಮದ ಮಾರ್ಗವನ್ನೂ ಮುಂದಿಟ್ಟರು.ನಿನ್ನ ಆಯ್ಕೆಯ ಆಧಾರದ ಮೇಲೆ ನಿನಗೆ ಪುನರ್ಜನ್ಮ ಅಥವಾ ಮೋಕ್ಷ ಎಂದು ಮನವರಿಕೆ ಮಾಡಿಕೊಟ್ಟರು.ಅವರಿದನ್ನು ಮಾಡಿದ್ದು ಯಾಕಾಗಿ?

ಈಗ ಮುಖ್ಯ ವಿಷಯಕ್ಕೆ ಬರುತ್ತೇನೆ.

ನಾವು ಮನುಷ್ಯರಲ್ಲ! ನಮ್ಮ ಮನುಷ್ಯದೇಹ ಮಾತ್ರ ಭೂಮಿಯದು.ಅದರ ಆದಿ ಅಂತ್ಯ ಭೂಮಿಗೆ ಸೀಮಿತವಾದದ್ದು.ಆದರೆ ನಿಜವಾದ ನಾವು ಅಂದರೆ ನಮ್ಮ ಆತ್ಮ ಬೇರೊಂದು ಲೋಕದಿಂದ ಬಂದದ್ದು.ಅದು ಮಂಗಳ ಆಗಿರಬಹುದು,ನೆಫಿಲಿಂ ಆಗಿರಬಹುದು ಅಥವಾ ಇನ್ನಾವುದೇ ಆಗಿರಬಹುದು.ಅಂದರೆ,ಇದುವರೆಗೆ ಹೇಳಿದ ಅನ್ಯಲೋಕ ಜೀವಿಗಳಿಗೆ ಸೇರಿದವರು ನಾವು! ಅವರಲ್ಲಿ ತಪ್ಪು ಮಾಡಿದವರಿಗೆ ಶಿಕ್ಷೆ ನೀಡಲು ಈ ಭೂಮಿ ಆಯ್ಕೆಯಾಗಿದೆ! ಅಲ್ಲಿನ ತಪ್ಪಿತಸ್ಥರು ಆತ್ಮದ ರೂಪದಲ್ಲಿ ಬಂದು ಇಲ್ಲಿ ಭೌತಿಕ ದೇಹ ಪಡೆದು ಪಾಪಗಳನ್ನು ಪರಿಹರಿಸಿಕೊಳ್ಳುವ ಅವಕಾಶ ಪಡೆಯುತ್ತಾರೆ.ಇದಕ್ಕೆ ಅಗತ್ಯವಾದ ದೇಹವನ್ನು, ಮನಸ್ಸನ್ನು ಸೃಷ್ಟಿಸುವುದೇ ಅನ್ಯಲೋಕ ಜೀವಿಗಳು ಮಾನವವಿಕಾಸದಲ್ಲಿ ಮಧ್ಯಪ್ರವೇಶಿಸಿದುದರ ಉದ್ದೇಶ.

ಅಂದರೆ, ಭೂಮಿ ಒಂದು ರಿಮ್ಯಾಂಡ್ ಹೋಮ್ ಇದ್ದಂತೆ.ನಮ್ಮ ಮೂಲನೆಲೆ ಇದಲ್ಲ.ಭೂಮಿ ನಮ್ಮದಲ್ಲವಾದರೆ ಇಲ್ಲಿನ ಯಾವುದೂ ನಮ್ಮದಲ್ಲ.ಇಲ್ಲಿನ ಜಾತಿಮತ,ಭಾಷೆ,ಸಿದ್ಧಾಂತ,ದೇಶ ಪ್ರಾಂತ್ಯಗಳಂತಹ ರಾಜಕೀಯ ವ್ಯವಸ್ಥೆಗಳು, ರಾಜಕೀಯ ಪಕ್ಷಗಳು, ಸಮೂಹ ಮಾಧ್ಯಮಗಳು ಯಾವುವೂ ನಮ್ಮವಲ್ಲ.ಮುಖ್ಯವಾಗಿ, ನಾಗರಿಕತೆಯ ಸೃಷ್ಟಿಯಾದ ಹಣ ನಮ್ಮದಲ್ಲ! ಪ್ರಶಸ್ತಿಪುರಸ್ಕಾರಗಳಂತೂ ನಮ್ಮವಲ್ಲವೇ ಅಲ್ಲ.ಇವೆಲ್ಲವೂ ತಪ್ಪು ಮಾಡಲು ನಮ್ಮನ್ನು ಪ್ರೇರೇಪಿಸುವಂತಹ ಅನಿಷ್ಟಗಳು.  ಇವುಗಳನ್ನು ನಮ್ಮದೆಂದು ನಂಬಿ ಅವುಗಳಿಗಾಗಿ ಇತರರನ್ನು (ನಮ್ಮಂತೇ ಪಾಪ ಪರಿಹಾರಕ್ಕೆಂದು ಬಂದಿರುವವರನ್ನು) ದ್ವೇಷಿಸಿ ನೋಯಿಸಿದರೆ ನಮ್ಮ ಪಾಪಗಳು ಹೆಚ್ಚಾಗುತ್ತಲೇ ಹೋಗುತ್ತದೆ, ನಾವು ಈ ರಿಮ್ಯಾಂಡ್ ಹೋಂನಲ್ಲೇ ಮತ್ತೆಮತ್ತೆ ಬದುಕು ಕಳೆಯುವಂತಾಗುತ್ತದೆ, ನಮ್ಮ ನಿಜವಾದ ಮನೆ ನಮ್ಮಿಂದ ದೂರವಾಗಿಯೇ ಉಳಿದುಹೋಗುತ್ತದೆ.

ಭೂಮಿಯಲ್ಲಿ ನಾವು ಸೃಷ್ಟಿಸಿಕೊಂಡಿರುವ ನಮ್ಮದಲ್ಲದವು ಯಾವುವೂ ಶಾಶ್ವತವಲ್ಲ, ಅವು ನಶಿಸುತ್ತವೆ ಎನ್ನುವುದನ್ನು ಇತಿಹಾಸ ಮತ್ತೆಮತ್ತೆ ಹೇಳಿದೆ.ಆದರೆ ನಾವು ಅಂಥವನ್ನು ಪುನಃ ಸೃಷ್ಟಿಸಿ ಅವಕ್ಕಾಗಿ ಹೋರಾಡುತ್ತಾ ಕುಕರ್ಮಗಳನ್ನು ಎಸಗುತ್ತಲೇ ಇದ್ದೇವೆ ಎನ್ನುದನ್ನೂ ಇತಿಹಾಸ ದಾಖಲಿಸಿದೆ, ದಾಖಲಿಸುತ್ತಿದೆ.ಇದರಿಂದ ನಾವು ಕಲಿಯಬೇಕಾದ ಪಾಠವೆಂದರೆ ನಮ್ಮದಲ್ಲದ್ದನ್ನು ಮತ್ತೆಮತ್ತೆ ಸೃಷ್ಟಿಸಿ, ಅದಕ್ಕಾಗಿ ಹೋರಾಡುವ ಬದಲು ಅವೆಲ್ಲವನ್ನೂ ದೂರವಿಟ್ಟು ಯಾರಿಗೂ ಯಾವ ಹಾನಿಯನ್ನೂ ಎಸಗದಂತೆ ಸರಳ ಬದುಕನ್ನು ಬದುಕಿಬಿಡುವುದು,ಆ ಮೂಲಕ ಯಾವ ತಪ್ಪುಗಳಿಂದಾಗಿ ನಾವು ಈ ರಿಮ್ಯಾಂಡ್ ಹೋಮ್‍ಗೆ ಬಂದಿದ್ದೇವೆಯೋ ಆ ತಪ್ಪುಗಳನ್ನು ತಿದ್ದಿಕೊಂಡು ಅಂದರೆ ಸುಧಾರಣೆಗೊಂಡು ನಮ್ಮ ಮನೆಗೆ ಅಂದರೆ ನಮ್ಮ ಮೂಲನೆಲೆಗೆ ಹಿಂತಿರುಗಿಬಿಡುವುದು.

ಆದರೆ ಈ ಭೂಮಿಯನ್ನೇ, ಈ ಬದುಕನ್ನೇ, ಇಲ್ಲಿನ ಧನಕನಕ ಸ್ಥಾನಮಾನ ಪ್ರಶಸ್ತಿಪುರಸ್ಕಾರಗಳನ್ನೇ ಶಾಶ್ವತವೆಂದು ನಂಬುವ ಹಾದಿಯಲ್ಲಿ ನಾವು ಬಹುದೂರ ಸಾಗಿಬಂದಿದ್ದೇವೆ.ಹಿಂತಿರುಗಿ ‘ಸರಿ’ಯಾದ ಮಾರ್ಗ ಹಿಡಿಯುವುದು ನಮಗೆಲ್ಲರಿಗೂ ಕಷ್ಟವೆನಿಸುತ್ತಿದೆ.ಆತ್ಮರೂಪದಲ್ಲಿ ನಾವು ಮಾಡಿಕೊಂಡ ಒಪ್ಪಂದಗಳು ನಮ್ಮ ಜಾಗೃತ ಮನಸ್ಸಿನಿಂದ ಮರೆಯಾಗಿರುವ ಕಾರಣದಿಂದಾಗಿ ನಾವು “ಒಪ್ಪಂದದ ಹಾದಿ”ಯನ್ನು ಮರೆತು “ಸ್ವತಂತ್ರ ಆಯ್ಕೆ”ಯ ಹಾದಿ ಹಿಡಿಯುತ್ತೇವೆ, ಮತ್ತೆ ಪಾಪವೆಸಗುತ್ತೇವೆ.ಇದರಿಂದ ಹೊರಬರುವ ವಿಧಾನವೇನು?ಯಾವುದೇ ವ್ಯಕ್ತಿಯೊಂದಿಗಿನ ಯಾವುದೇ ಸಂಬಂಧದಲ್ಲಿ ನಮ್ಮ ಅನುಕೂಲಕ್ಕಾಗಿ ಅವರನ್ನು ದುರುಪಯೋಗಪಡಿಸಿಕೊಳ್ಳದಿರುವುದು, ನಮ್ಮ ಸುಖಕ್ಕಾಗಿ ಅವರಿಗೆ ಹಾನಿಯೆಸಗದಿರುವುದು.  ಇದು ನಮಗಿರುವ ಏಕೈಕ ಧರ್ಮ.  ಇದನ್ನು ಪಾಲಿಸಿದರೆ ಸಾಕು, ನಾವು ಮತ್ತೆ ಈ ಭೂಮಿಯೆಂಬ ರಿಮ್ಯಾಂಡ್ ಹೋಮ್‍ಗೆ ಹಿಂತಿರುಗುವ ದುರವಸ್ಥೆಯಿಂದ ಮುಕ್ತವಾಗಬಹುದು, ನಮ್ಮ ಮನೆಗೆ ಹಿಂತಿರುಗಬಹುದು.  ಅಲ್ಲಿ ನಮ್ಮದಲ್ಲದ ರಾಜಕೀಯ ವ್ಯವಸ್ಥೆ, ಆರ್ಥಿಕ ವ್ಯವಸ್ಥೆಗಳಿಲ್ಲ.  ಬದಲಾಗಿ, ಭೂಮಿಯಲ್ಲಿ ಸುಖಮಯ ಬದುಕಿಗಾಗಿ ಅಗತ್ಯವೆಂದು ನಂಬಿ ಸೃಷ್ಟಿಸಲು ನಾವು ಹೆಣಗುತ್ತಿರುವ ಎಲ್ಲ ವೈಜ್ಞಾನಿಕ ಅವಿಷ್ಕಾರಗಳೂ ಅಲ್ಲಿ ಈಗಾಗಲೇ ಇವೆ ಮತ್ತು ಅವು ಶಾಶ್ವತವಾಗಿ ನಮ್ಮವಾಗಿರುತ್ತವೆ.

ಚಿತ್ರಕೃಪೆ :http://theawakenedstate.tumblr.com

ಕೃಪೆ : ವಿಜಯವಾಣಿ ದೈನಿಕ

16 ಟಿಪ್ಪಣಿಗಳು Post a comment
  1. hemapathy
    ಏಪ್ರಿಲ್ 24 2015

    ಬೇಡದ ಜನ್ಮ – ಅರ್ಥವಿಲ್ಲದ ಜೀವನ – ಬಿಡದ ಸಾವು. ಇಷ್ಟೇ ಈ ಲೋಕದ ಜೀವನ ರಹಸ್ಯ. ಪುನರ್ಜನ್ಮ. ದೇವರು, ದೆವ್ವಗಳು ಇವೆಲ್ಲಾ ಮಾನವನ ಊಹೆಯಿಂದ ಉದ್ಭವಿಸಿರುವ ಕಥೆಗಳು. ಇಂತಹ ಅರ್ಥವಿಲ್ಲದ ಕಥೆಗಳನ್ನು ಓದುತ್ತಾ ಸಮಯ ಹಾಳು ಮಾಡಿಕೊಳ್ಳುವುದರ ಬದಲು, ಬದುಕಿರುವಷ್ಟು ಕಾಲ ನಾವೂ ಸಂತೋಷವಾಗಿದ್ದು, ಬೇರೆಯವರನ್ನೂ ಸಂತೋಷವಾಗಿರಲು ಬಿಡೋಣ. ಇಷ್ಟು ಮಾಡಿದರೆ ನಮ್ಮ ಜನ್ಮ ಸಾರ್ಥಕ.

    ಉತ್ತರ
  2. T.M.Krishna
    ಏಪ್ರಿಲ್ 25 2015

    ಬಹುಜನಕ್ಕೆ ತಲುಪುವ ಇಂಥ ಮಾಧ್ಯಮಗಳಲ್ಲಿ ಬರೆಯುವಾಗ ಊಹಾಪೋಹಗಳನ್ನವಲಂಭಿಸಿಯಾಗಲೀ, ಭ್ರಮಿಸಿಯಾಗಲೀ ಬರೆಯಬಾರದು. ನಾವು ಹೇಳಲು ಹೊರಟಿರುವುದಕ್ಕೆ ನಂಬಲರ್ಹವಾದ, ನಿಖರವಾದ ಆಧಾರಗಳಿರಬೇಕು.

    ನಮಗೆ ನೆಲೆ ಕೊಟ್ಟ ಪವಿತ್ರ ಭೂಮಿಯನ್ನು ಪವಿತ್ರವಾಗಿ ಕಂಡು ಪವಿತ್ರವಾಗಿ ಬದುಕಿದರೆ ನೀವು ಊಹಿಸಿರುವ ಸ್ವರ್ಗ ಸಿಗಬಹುದೇನೋ… ಮಹಾ ಮಾತೆಯಂತಿರುವ ಭೂಮಿಯನ್ನು ರಿಮ್ಯಾಂಡ್ ಹೋಂ ಎಂದು ಭಾವಿಸುವುದಾದರೆ ಅದಕ್ಕಿಂತ ’ಮಹಾಪಾಪ” ಮತ್ತೊಂದಿರಲಾರದು.

    “ಅಲ್ಲಿ ನಮ್ಮದಲ್ಲದ ರಾಜಕೀಯ ವ್ಯವಸ್ಥೆ, ಆರ್ಥಿಕ ವ್ಯವಸ್ಥೆಗಳಿಲ್ಲ. ಬದಲಾಗಿ, ಭೂಮಿಯಲ್ಲಿ ಸುಖಮಯ ಬದುಕಿಗಾಗಿ ಅಗತ್ಯವೆಂದು ನಂಬಿ ಸೃಷ್ಟಿಸಲು ನಾವು ಹೆಣಗುತ್ತಿರುವ ಎಲ್ಲ ವೈಜ್ಞಾನಿಕ ಅವಿಷ್ಕಾರಗಳೂ ಅಲ್ಲಿ ಈಗಾಗಲೇ ಇವೆ ಮತ್ತು ಅವು ಶಾಶ್ವತವಾಗಿ ನಮ್ಮವಾಗಿರುತ್ತವೆ” ಎಂದು ಹೇಳುತ್ತಿರುವ ತಾವು, ಇದನ್ನು ಅಲ್ಲಿ ನೋಡಿಕೊಂಡು ಬಂದಿದ್ದಕ್ಕೆ ಆಧಾರವಾಗಿ ಪ್ರಯಾಣದ ಟಿಕೆಟ್ಟನ್ನು ಜೋಪಾನವಾಗಿರಿಸಿಕೊಳ್ಳಿ; ಯಾರಾದರೂ ಕೇಳಿದರೆ ತೋರಿಸಬೇಕಾಗುತ್ತದೆ!

    ಉತ್ತರ
    • AOL
      ಏಪ್ರಿಲ್ 25 2015

      ಮೆಚ್ಚತಕ್ಕ ಪ್ರತಿಕ್ರಿಯೆ! ನಿಮ್ಮ ಅನಿಸಿಕೆಗಳಿಗೆ ನನ್ನ ಅನುಮೋದನೆಯಿದೆ.

      ಉತ್ತರ
    • Nagshetty Shetkar
      ಏಪ್ರಿಲ್ 25 2015

      “ನಾವು ಹೆಣಗುತ್ತಿರುವ ಎಲ್ಲ ವೈಜ್ಞಾನಿಕ ಅವಿಷ್ಕಾರಗಳೂ ಅಲ್ಲಿ ಈಗಾಗಲೇ ಇವೆ”

      ಹಹ! ಆ ಇನ್ನೊಂದು ಲೋಕದಲ್ಲಿ ಜಾತಿ ವ್ಯವಸ್ಥೆ ಮನುಸ್ಮೃತಿ ಅಸ್ಪ್ರುಶ್ಯತೆ ಸತಿ ದಹನ ಕೂಡ ಇರಬೇಕಲ್ಲ!

      ಉತ್ತರ
      • ಮಾರ್ಕ್ಸ್ ಮಂಜು
        ಏಪ್ರಿಲ್ 27 2015

        in that case our ಮಹರ್ಷಿ ಮಾರ್ಕ್ಸ್ ಈಗಾಗಲೇ ಅಲ್ಲಿ ತಲುಪಿಕೊಂಡು ಸರ್ವ ಸಮಾನತೆಯ ಸಹೋದರತ್ವ ಸಮಾಜವನ್ನು ಸಾಧಿಸಿರುತ್ತಾರೆ Mr.Nagshetty Shetkar
        Dont worry about ಮನುವಾದಿ’s

        ಉತ್ತರ
        • Nagshetty Shetkar
          ಏಪ್ರಿಲ್ 28 2015

          “ಸರ್ವ ಸಮಾನತೆಯ ಸಹೋದರತ್ವ ಸಮಾಜ”

          +1

          ಮಾರ್ಕ್ಸ್ುವಾದ

          +1

          ಉತ್ತರ
          • ರಂಜನಾ ರಾಮ್ ದುರ್ಗಾ
            ಏಪ್ರಿಲ್ 28 2015

            ಸಹೋದರರೇ ನೀವು,ನಿಮ್ಮ ಗುರುಗಳು ಆ ಪರಲೋಕಕ್ಕೆ ಈಗಲೇ ಧಾವಿಸಿ ಅಲ್ಲಿ ಶರಣ ತತ್ವವನ್ನು ಹರಡುವ ಬಗ್ಗೆ ಯೋಚಿಸಿರಿ

            ಉತ್ತರ
            • Nagshetty Shetkar
              ಏಪ್ರಿಲ್ 28 2015

              ದರ್ಗಾ ಸರ್ ಅವರಿಗೆ ಈ ಭೂಮಿಯಲ್ಲೇ ಒಳ್ಳೆಯ ಹೆಸರಿದೆ, ಅವರ ಸಾಧನೆ ಬಗ್ಗೆ ಗೌರವವಿದೆ, ಅವರ ಮಾತಿಗೆ ಬೆಲೆ ಇದೆ. ಕನ್ನಡ ನಾಡಿನಲ್ಲಿ ಅಷ್ಟೇ ಅಲ್ಲ ಬೇರೆ ಬೇರೆ ದೇಶಗಳಲ್ಲಿ ನೆಲಸಿರುವ ಬಸವಧರ್ಮಿಗಳಿಂದ ಅವರಿಗೆ ಆಹ್ವಾನ ಬರುತ್ತಿರುತ್ತದೆ. ದರ್ಗಾ ಸರ್ ಅವರಿಗೆ ಈ ಭೂಮಿಯಲ್ಲೇ ಮಾಡಲು ಪುರುಸೊತ್ತಿಲ್ಲದಷ್ಟು ಕೆಲಸವಿದೆ, ಅವರು ಮಾಡುತ್ತಲೂ ಇದ್ದಾರೆ. ಮೇಲಾಗಿ ಬಸವಧರ್ಮವು ಪರಲೋಕದಲ್ಲಿ ನಂಬಿಕೆ ಇಟ್ಟಿಲ್ಲ.

              ಉತ್ತರ
            • Nagshetty Shetkar
              ಏಪ್ರಿಲ್ 28 2015

              You can go to paraloka Durga sister. Take Bhyrappaji and Infosys Murthy with you. He he!

              ಉತ್ತರ
            • ವಿಜಯ್ ಪೈ
              ಏಪ್ರಿಲ್ 29 2015

              ತಂಗಿ ರಂಜನಾ.. ಪರಲೋಕದಲ್ಲಿ ಗಂಜಿಕೇಂದ್ರವಿಲ್ಲ..ಪ್ರಶಸ್ತಿ ಸಿಗುವುದಿಲ್ಲ..ಸನ್ಮಾನ ಮಾಡುವವರಿಲ್ಲ.. ತಿಪ್ಪೆಯ ಮೇಲೆ ಕುಳಿತು ಸುಗಂಧದ ಬಗ್ಗೆ ಮಾತನಾಡಲು ಆಗುವುದಿಲ್ಲ!

              ಉತ್ತರ
              • ರಂಜನಾ ರಾಮ್ ದುರ್ಗಾ
                ಏಪ್ರಿಲ್ 29 2015

                ವಿಜಯಣ್ಣಯ್ಯ,ನೀವು ಹೇಳುವುದರಲ್ಲಿ ಸತ್ಯವಿದೆಯಂದು ಗೋಚರವಾಗುತ್ತಿದೆ.

                ಶೆಟ್ಕರ್ ಸಹೋದರರೇ ನಿಮ್ಮ ಗುರು ಪರಲೋಕಕ್ಕೆ ಧಾವಿಸದೇ ಇಲ್ಲೇ ಇದ್ದರೆ ಅಲ್ಲಿ ಮನುವಾದಿಗಳು ಅತಿಕ್ರಮಿಸಿಕೊಂಡಾರು ಎಂದು ಸಜ ಆತಂಕದಲ್ಲಿ ಹೇಳಿದೆನಷ್ಟೇ.ಸಹೋದರಿಯ ಪ್ರಶ್ನೆಯನ್ನು ಅನುಮಾನದಿಂದ ನೋದುವ ನೀವು ಮನುವಾದಿಯೇ ಇರಬೇಕು.

                ಉತ್ತರ
                • Nagshetty Shetkar
                  ಏಪ್ರಿಲ್ 29 2015

                  Bogus sister, stop acting behind fake id. Show your real face.

                  ಉತ್ತರ
                • ವಿಜಯ್ ಪೈ
                  ಏಪ್ರಿಲ್ 29 2015

                  ತಂಗಿ ರಂಜನಾ..ನಿಮ್ಮದು ಬೊಗಸ್ ಐಡಿಯೆ? ಟಿ.ಎಮ್ ಕೃಷ್ಣಪ್ಪನವರು ಹಾಗೇಕೆ ಹೇಳುತ್ತಿದ್ದಾರೆ?

                  ಉತ್ತರ
                  • Nagshetty Shetkar
                    ಏಪ್ರಿಲ್ 30 2015

                    ಮಿ. ವಿಜಯ್, ನಿಮ್ಮ ವಿಚಾರಗಳ ಬಗ್ಗೆ ಸಹಮತವಿಲ್ಲದಿದ್ದರೂ ನಿಮ್ಮ ಬಗ್ಗೆ ಗೌರವವಿದೆ. ಅದನ್ನು ಉಳಿಸಿಕೊಳ್ಳುವುದು ನಿಮ್ಮ ಜವಾಬ್ದಾರಿ. ಬೋಗಸ್ ಸಹೋದರಿ ಜೊತೆ ಸೇರಿ ನೀವೂ ಬೋಗಸ್ ಆಗಬೇಡಿ.

                    ಉತ್ತರ
                    • ರಂಜನಾ ರಾಮ್ ದುರ್ಗಾ
                      ಮೇ 8 2015

                      ನಾಗಶೆಟ್ಟಿ ಶೆಟ್ಕರ್ ಹೆಸರಿನಲ್ಲಿ ಬರೆಯುತ್ತಿರುವುದು ಅಸಲಿಯಾಗಿದ್ದರೆ,ನಾನು ಸಹ ಅಸಲಿಯೇ.ಸಹೋದರರಾದ ಶೇಟ್ಕರರು ಮಾನವಪರ ಶರಣರು ಎಂದುಕೊಂಡಿದ್ದೆನು.ಆದರೆ ಹೆಣ್ಣುಮಗಳು ಅನುಮಾನಿಸುವ ಮೂಲಕ ಅವರ ಮನುವಾದಿಯೆಂಬುದಾಗಿ ಅನುಮಾನಪಡುತ್ತಿರುವೆನು

Trackbacks & Pingbacks

  1. ಗಟ್ಟಿದನಿಯಲ್ಲಿ ಹೇಳುತ್ತಿದ್ದೇನೆ: “ನಮಗೆ ಸಾವೇ ಇಲ್ಲ” | ನಿಲುಮೆ

Leave a reply to Nagshetty Shetkar ಪ್ರತ್ಯುತ್ತರವನ್ನು ರದ್ದುಮಾಡಿ

Note: HTML is allowed. Your email address will never be published.

Subscribe to comments