ವಿಷಯದ ವಿವರಗಳಿಗೆ ದಾಟಿರಿ

ಏಪ್ರಿಲ್ 24, 2015

ರಾಜ್ ಕುಮಾರ್: ನಾಡಿನ ಸೃಜನಶೀಲ ಆಯಾಮ

‍ನಿಲುಮೆ ಮೂಲಕ

– ರಾಜಕುಮಾರ.ವ್ಹಿ.ಕುಲಕರ್ಣಿ,ಮುಖ್ಯಗ್ರಂಥಪಾಲಕ
 ಎಸ್.ನಿಜಲಿಂಗಪ್ಪ ವೈದ್ಯಕೀಯ ಮಹಾವಿದ್ಯಾಲಯ, ಬಾಗಲಕೋಟ

Dr Raj‘ಐದು ಕೋಟಿ ಕನ್ನಡಿಗರನ್ನು ಜಾಗೃತಗೊಳಿಸಲು ಇಡೀ ಕನ್ನಡ ಸಾಹಿತ್ಯ ವಲಯಕ್ಕೆ ಸಾಧ್ಯವಾಗದೇ ಇದ್ದಾಗ,ಕಲಾವಿದನಾಗಿ ರಾಜ್ ಕುಮಾರ್ ಪ್ರತಿಯೊಬ್ಬ ಕನ್ನಡಿಗನ ಮನೆ ಮತ್ತು ಮನಸ್ಸನ್ನು ತಲುಪಿದರು’ ಕನ್ನಡದ ವರನಟ ರಾಜ್ ಕುಮಾರ್ ಕುರಿತು ಡಾ.ಯು.ಆರ್.ಅನಂತಮೂರ್ತಿ ಅವರು ಹೇಳಿದ ಮಾತಿದು.ಈ ಮಾತಿನಲ್ಲಿ ಯಾವುದೇ ಅತಿಶಯೋಕ್ತಿ ಇಲ್ಲ ಮತ್ತು ಇದು ಮುಖಸ್ತುತಿಯೂ ಅಲ್ಲ.

ನಿಜ.ಯಾರಿಗೂ ಸಾಧ್ಯವಾಗದೇ ಇರುವುದನ್ನು ರಾಜ್ ಕುಮಾರ್ ಒಬ್ಬ ಕಲಾವಿದನಾಗಿ ಸಾಧಿಸಿದರು.ರಾಜ್ ಕುಮಾರ್ ಎಂದರೆ ಕನ್ನಡ ಸಿನಿಮಾ ಎನ್ನುವಷ್ಟರ ಮಟ್ಟಿಗೆ ಅವರು ಅನಿವಾರ್ಯವಾದರು.ಕನ್ನಡ ಚಿತ್ರರಂಗದ ಇತಿಹಾಸದಲ್ಲಿ ರಾಜ್ ಕುಮಾರ್ ಪೂರ್ವದಲ್ಲಿ ಮತ್ತು ರಾಜ್ ಕುಮಾರ್ ನಂತರ ಎನ್ನುವ ರೀತಿ ಕನ್ನಡ ಸಿನಿಮಾ ಪ್ರಪಂಚದ ಅವಿಭಾಜ್ಯ ಅಂಗವಾದರು.ಕನ್ನಡ ಚಿತ್ರರಂಗದ ಈ ಮೇರುನಟ ಎಪ್ರಿಲ್ ೧೨ ರಂದು ತೀವ್ರ ಹೃದಯಾಘಾತದಿಂದ ನಿಧನರಾದಾಗ ಸಿನಿಮಾ ಲೋಕ ಮಾತ್ರವಲ್ಲ ಇಡೀ ಕನ್ನಡ ನಾಡು ಆಘಾತದಿಂದ ತತ್ತರಿಸಿ ಹೋಯಿತು.ಬದುಕಿದ್ದರೆ ಈ ದಿನ (ಏಪ್ರಿಲ್ ೨೪) ತಮ್ಮ ೮೬ನೇ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದರು.ಆದರೆ ಸಾವಿನ ರೂಪದಲ್ಲಿ ಬಂದ ವಿಧಿ ಅದಕ್ಕೆ ಅವಕಾಶವನ್ನೇ ಕೊಡಲಿಲ್ಲ.

ರಾಜ್ ಕುಮಾರ್ ಮೂಲತ: ರಂಗಭೂಮಿ ಕಲಾವಿದ. ಅನೇಕ ನಾಟಕಗಳಲ್ಲಿ ನಟಿಸಿ ಪಳಗಿದ ನಟ. ರಂಗಭೂಮಿಯ ನಂಟು ಇದ್ದುದ್ದರಿಂದಲೇ ಸಂಭಾಷಣೆ ಹಾಗೂ ಭಾವನೆಗಳನ್ನು ಅಭಿವ್ಯಕ್ತ ಪಡಿಸುವುದರ ಮೇಲೆ ಅವರಿಗೆ ಹಿಡಿತವಿತ್ತು.೧೯೫೦ರ ದಶಕದಲ್ಲಿ ‘ಬೇಡರ ಕಣ್ಣಪ್ಪ’ ಚಿತ್ರದ ಮೂಲಕ ಸಿನಿಮಾ ರಂಗವನ್ನು ಪ್ರವೇಶಿಸಿದಾಗ ಆಗ ಕನ್ನಡ ಭಾಷೆಯಲ್ಲಿ ತಯಾರಾದ ಚಿತ್ರಗಳ ಸಂಖ್ಯೆ ಕೇವಲ ೪೬.ಆಗಿನ್ನೂ ಕನ್ನಡ ಸಿನಿಮಾ ಇಂಡಸ್ಟ್ರಿ ಬೆಳೆದಿರಲಿಲ್ಲ. ತೆಲುಗು, ತಮಿಳು, ಹಿಂದಿ ಸಿನಿಮಾಗಳ ಪ್ರಭಾವ ಸಾಕಷ್ಟಿತ್ತು. ಕರ್ನಾಟಕದಲ್ಲಿ ಸಿನಿಮಾಗಳ ಚಿತ್ರೀಕರಣಕ್ಕೆ ಯಾವುದೇ ಅನುಕೂಲಗಳಿರಲಿಲ್ಲ. ಕನ್ನಡ ಸಿನಿಮಾ ಇಂಡಸ್ಟ್ರಿ ಆಗ ಮದರಾಸಿನಲ್ಲಿ ನೆಲೆಯೂರಿತ್ತು. ಕನ್ನಡ ಸಿನಿಮಾರಂಗ ಇನ್ನೂ ಬಾಲ್ಯಾವಸ್ಥೆಯಲ್ಲಿದ್ದ ದಿನಗಳಲ್ಲಿ ರಾಜ್ ಕುಮಾರ್ ಚಿತ್ರರಂಗ ಪ್ರವೇಶಿಸಿದರು. ಪ್ರಥಮ ಪ್ರಯತ್ನದಲ್ಲೇ ಯಶಸ್ವಿಯಾದ ಅವರು ನಂತರ ಹಿಂತಿರುಗಿ ನೋಡುವ ಸಂದರ್ಭವೇ ಬರಲಿಲ್ಲ. ಚಿತ್ರದಿಂದ ಚಿತ್ರಕ್ಕೆ ರಾಜ್ ಕುಮಾರ್ ತಾವು ಮಾತ್ರ ಬೆಳೆಯಲಿಲ್ಲ ಅವರ ಜೊತೆಗೆ ಅನೇಕ ಕಲಾವಿದರು, ತಂತ್ರಜ್ಞರನ್ನು ಬೆಳೆದರು. ಮದರಾಸಿನಲ್ಲಿ ನೆಲೆಯೂರಿದ್ದ ಕನ್ನಡ ಸಿನಿಮಾ ಇಂಡಸ್ಟ್ರಿಯನ್ನು ಬೆಂಗಳೂರಿಗೆ ಕರೆತರುವಲ್ಲಿ ರಾಜ್ ಕುಮಾರ್ ಪಾತ್ರ ಅತ್ಯಂತ ಮಹತ್ವದ್ದು. ಕನ್ನಡ ಸಿನಿಮಾ ಉದ್ಯಮ ಸಂಕಷ್ಟದಲ್ಲಿದ್ದಾಗ ಅದರ ಪುನಶ್ಚೇತನಕ್ಕಾಗಿ ‘ರಣಧೀರ ಕಂಠೀರವ’ ಚಿತ್ರ ತಯಾರಿಸಿದ್ದು ರಾಜ್ ಕುಮಾರ್ ಸಿನಿಮಾವನ್ನು ಅದೆಷ್ಟು ಗಾಢವಾಗಿ ಪ್ರೀತಿಸುತ್ತಿದ್ದರು ಎನ್ನುವುದಕ್ಕೊಂದು ಉದಾಹರಣೆ. ಚಿತ್ರ ನಿರ್ಮಾಣ ಸಂಸ್ಥೆಯನ್ನು ಸ್ಥಾಪಿಸಿ ಆ ಸಂಸ್ಥೆಯ ಮೂಲಕ ಅನೇಕ ಕಲಾವಿದರನ್ನು, ನಿರ್ದೇಶಕರನ್ನು ಪರಿಚಯಿಸಿದರು. ಒಂದರ್ಥದಲ್ಲಿ ರಾಜ್ ಕುಮಾರ್ ಎಂದರೆ ದೊಡ್ಡ ಆಲದ ಮರವಿದ್ದಂತೆ ಆ ಮರದ ಕೆಳಗೆ ನೆರಳು ಪಡೆದು ಬೆಳೆದ ಕಲಾವಿದರ ಸಂಖ್ಯೆ ಅದೆಷ್ಟೋ…

ರಾಜ್ ಜನಪ್ರಿಯತೆಗೆ ಕಾರಣಗಳು

ರಾಜ್ ಅವರ ಜನಪ್ರಿಯತೆಗೆ ನಿರ್ಧಿಷ್ಟ ಕಾರಣಗಳನ್ನು ಕೊಡಲು ಸಾಧ್ಯವಿಲ್ಲ.ಅನೇಕ ಕಾರಣಗಳಿಂದ ಅವರೊಬ್ಬ ಜನಪ್ರಿಯ ನಟರಾದರು.ಅಭಿನಯ,ಸಂಭಾಷಣೆ ಹೇಳುವ ರೀತಿ, ಕಥಾವಸ್ತು, ಗಾಯನ, ಸಾಹಿತ್ಯ ಹೀಗೆ ಹೇಳುತ್ತ ಹೋದರೆ ಅನೇಕ ಕಾರಣಗಳು ಕಾಣಸಿಗುತ್ತವೆ. ರಾಜ್ ಕುಮಾರ್ ಅವರ ಜನಪ್ರಿಯತೆಗೆ ಸಂಬಂಧಿಸಿದಂತೆ ಯು.ಆರ್.ಅನಂತಮೂರ್ತಿ ಅವರು ‘ರಾಜ್ ಕುಮಾರ್ ಅಭಿನಯದ ಅನೇಕ ಚಿತ್ರಗಳು ಮಧ್ಯಮ ವರ್ಗದ ಜನರ ಆಶೋತ್ತರಗಳು ಹಾಗೂ ಸಂದರ್ಭಗಳನ್ನು ಪ್ರತಿನಿಧಿಸುತ್ತಿದ್ದವು. ಆದ್ದರಿಂದಲೇ ಅವರು ಅನೇಕ ಜನರನ್ನು ತಲುಪಲು ಸಾಧ್ಯವಾಯಿತು’ ಎಂದಿರುವರು. ಹೌದು ರಾಜ್ ಕುಮಾರ್ ಅವರ ಚಿತ್ರಗಳಲ್ಲಿ ವಿಲಾಸಿ ಬದುಕಿನ ಕಥೆಗಳಿರುತ್ತಿರಲಿಲ್ಲ. ಮಧ್ಯಮ ವರ್ಗದ ಜನರ ಬದುಕಿನ ಹೋರಾಟವೇ ಅವರ ಅತೀ ಹೆಚ್ಚಿನ ಚಿತ್ರಗಳ ಕಥಾವಸ್ತುವಾಗಿದೆ. ತಾಯಿ, ತಂದೆ, ಸಹೋದರ, ಸಹೋದರಿ, ಪತಿ, ಪತ್ನಿ, ಮಕ್ಕಳ ನಡುವಣ ಅನ್ಯೋನ್ಯ ಸಂಬಂಧ ಅವರ ಚಿತ್ರಗಳಲ್ಲಿ ಹಾಸುಹೊಕ್ಕಾಗಿರುತ್ತಿತ್ತು. ಹೀಗಾಗಿ ಪ್ರೇಕ್ಷಕ ಕೇವಲ ಸಿನಿಮಾ ಎನ್ನುವ ದೃಷ್ಟಿಯಿಂದ ರಾಜ್ ಕುಮಾರ್ ಚಿತ್ರಗಳನ್ನು ನೋಡುತ್ತಿರಲಿಲ್ಲ. ಸಿನಿಮಾ ನೋಡುತ್ತ ಹೋದಂತೆ ಅದು ತನ್ನದೇ ಬದುಕಿನ ಕಥೆ ಎನ್ನುವಂತೆ ತಲ್ಲೀನನಾಗುತ್ತಿದ್ದ. ಒಂದು ಕುಟುಂಬದ ಸದಸ್ಯರೆಲ್ಲರೂ ಯಾವುದೇ ಮುಜುಗರವಿಲ್ಲದೆ ಒಟ್ಟಾಗಿ ಕುಳಿತು ನೋಡುವಂತಹ ಚಿತ್ರಗಳಿರುತ್ತಿದ್ದವು. ರಾಜ್ ಕುಮಾರ್ ಸಿನಿಮಾಗಳಲ್ಲಿ ಕನ್ನಡ ನಾಡಿನ ಮಣ್ಣಿನ ವಾಸನೆ ಇದೆ. ರೈತರ ಸಂಕಷ್ಟಗಳಿವೆ, ಸಮಸ್ಯೆಗಳಿವೆ. ರೈತರ ಸಮಸ್ಯೆಗಳನ್ನು ಕೇಂದ್ರವಾಗಿಟ್ಟುಕೊಂಡು ತಯಾರಾದ ‘ಮಣ್ಣಿನ ಮಗ’ ಮತ್ತು ‘ಚೆಂದವಳ್ಳಿಯ ತೋಟ’ ಹಾಗೂ ರೈತನ ಶ್ರಮ ಮತ್ತು ಶ್ರೀಮಂತಿಕೆಯನ್ನು ಬಿಂಬಿಸುವ ‘ಬಂಗಾರದ ಮನುಷ್ಯ’ ಈ ಎಲ್ಲ ಚಿತ್ರಗಳು ಕನ್ನಡ ಚಿತ್ರರಂಗದ ಮೈಲಿಗಲ್ಲುಗಳಾಗಿವೆ. ಈ ಕಾರಣದಿಂದಲೇ ಕನ್ನಡದ ಜನರನ್ನು ರಾಜ್ ಕುಮಾರ್ ಗಾಢವಾಗಿ ಆವರಿಸಿಕೊಂಡಷ್ಟು ಬೇರೆ ಕಲಾವಿದರಿಂದ ಇದುವರೆಗೂ ಸಾಧ್ಯವಾಗಿಲ್ಲ.

ಪೌರಾಣಿಕ ಮತ್ತು ಐತಿಹಾಸಿಕ ಚಿತ್ರಗಳೂ ಸಹ ರಾಜ್ ಕುಮಾರ್ ಅವರ ಜನಪ್ರಿಯತೆಗೆ ಕಾರಣಗಳಾದವು. ರಾಜ್ ಕುಮಾರ್ ರಂಗಭೂಮಿಯ ನಟರಾಗಿದ್ದರಿಂದ ಅವರಿಗೆ ಪರಕಾಯ ಪ್ರವೇಶ ಸುಲಭವಾಯಿತು. ಅವರ ಪೌರಾಣಿಕ ಮತ್ತು ಐತಿಹಾಸಿಕ ಪಾತ್ರಗಳು ಇಂದಿಗೂ ಕನ್ನಡ ಪ್ರೇಕ್ಷಕರ ನೆನಪಿನಲ್ಲಿ ಅಚ್ಚಳಿಯದೆ ನಿಂತಿವೆ. ರಾಜ್ ಕುಮಾರ್ ಅವರನ್ನು ಹೊರತು ಪಡಿಸಿ ಬೇರೆ ಯಾವುದೇ ಕಲಾವಿದರನ್ನು ರಾಮ, ಕೃಷ್ಣ, ಅರ್ಜುನ, ಕೃಷ್ಣದೇವರಾಯ, ಭಕ್ತ ಕುಂಬಾರ, ಕಾಳಿದಾಸ ಇತ್ಯಾದಿ ಪಾತ್ರಗಳಲ್ಲಿ ಊಹಿಸಿಕೊಳ್ಳಲೂ ಸಾಧ್ಯವಿಲ್ಲ ಎನ್ನುವಷ್ಟರ ಮಟ್ಟಿಗೆ ಅವರು ಐತಿಹಾಸಿಕ ಮತ್ತು ಪೌರಾಣಿಕ ಪಾತ್ರಗಳಿಗೆ ಅನಿವಾರ್ಯವಾಗಿದ್ದರು. ರಾಜ್ ಕುಮಾರ್ ಅವರ ಶರೀರ ಮತ್ತು ಶಾರೀರ ಈ ಪಾತ್ರಗಳಿಗೆ ಸೂಕ್ತವಾಗಿ ಹೊಂದಿಕೊಳ್ಳುತ್ತಿತ್ತು ಎನ್ನುವುದೂ ಒಂದು ಪ್ರಬಲ ಕಾರಣವಾಗಿತ್ತು. ರಾಜ್ ಕುಮಾರ್ ಸಮಕಾಲೀನ ನಾಯಕ ನಟರುಗಳೆಲ್ಲ ತಮ್ಮ ದೇಹ ತೂಕವನ್ನು ಹೆಚ್ಚಿಸಿಕೊಂಡು ಪೋಷಕ ಪಾತ್ರಗಳೆಡೆ ಹೊರಳಬೇಕಾದ ಪರಿಸ್ಥಿತಿ ನಿರ್ಮಾಣವಾಯಿತು. ಆದರೆ ಯೋಗದ ಮೂಲಕ ತಮ್ಮ ಅಂಗಸೌಷ್ಟವವನ್ನು ಕಾಪಾಡಿಕೊಂಡ ರಾಜ್ ಕುಮಾರ್ ೨೦೦ಕ್ಕೂ ಹೆಚ್ಚು ಚಿತ್ರಗಳಲ್ಲಿ ನಾಯಕನಟನಾಗಿ ಅಭಿನಯಿಸಿದರು. ಕನ್ನಡ ಚಿತ್ರರಂಗದಲ್ಲಿ ಅತಿ ಹೆಚ್ಚಿನ ಚಿತ್ರಗಳಲ್ಲಿ ನಾಯಕನಟನಾಗಿ ಅಭಿನಯಿಸಿದ ಹೆಗ್ಗಳಿಕೆ ಅವರದು. ಅಭಿನಯದ ಜೊತೆಗೆ ದೈಹಿಕ ಸೌಂದರ್ಯವೂ ಅವರ ಜನಪ್ರಿಯತೆಗೆ ಕಾರಣವಾಯಿತು. ಯಾವುದೇ ಒಂದು ಪಾತ್ರಕ್ಕೆ ತಮ್ಮನ್ನು ಸೀಮಿತಗೊಳಿಸಿಕೊಳ್ಳದೆ ಪೌರಾಣಿಕ, ಐತಿಹಾಸಿಕ, ಭಕ್ತಿ ಪ್ರಧಾನ, ಸಾಮಾಜಿಕ ವಿವಿಧ ಬಗೆಯ ಪಾತ್ರಗಳಲ್ಲಿ ಅಭಿನಯಿಸಿದರು. ವೈವಿಧ್ಯಮಯ ಪಾತ್ರಗಳಲ್ಲಿ ಅಭಿನಯಿಸಿದ್ದರಿಂದಲೇ ರಾಜ್ ಕುಮಾರ್ ಎಲ್ಲ ವರ್ಗದ ಪ್ರೇಕ್ಷಕರು ಮೆಚ್ಚುವಂತಹ ನಟನಾಗಿ ರೂಪಗೊಂಡರು.

ರಾಜ್ ಕುಮಾರ್ ಮತ್ತು ಕನ್ನಡ ಪ್ರೇಮ

ಕರ್ನಾಟಕ ರಾಜ್ಯ ತನ್ನ ಸುವರ್ಣಮಹೋತ್ಸವವನ್ನು ಆಚರಿಸಿಕೊಳ್ಳುತ್ತಿರುವ ಸಂದರ್ಭದಲ್ಲೇ ರಾಜ್ ಕುಮಾರ್ ಚಿತ್ರರಂಗವನ್ನು ಪ್ರವೇಶಿಸಿದ ಐವತ್ತು ವರ್ಷಗಳ ಸವಿನೆನಪಿಗಾಗಿ ಸಾರ್ಥಕ ಸುವರ್ಣವನ್ನು ಆಚರಿಸಲಾಯಿತು. ೫೦ ವರ್ಷಗಳವರೆಗೆ ರಾಜ್ ಕುಮಾರ್ ತಮ್ಮ ಸಿನಿಮಾಗಳ ಮೂಲಕ ಕನ್ನಡ ಭಾಷೆಯನ್ನು ಮನೆ ಮನೆಗೂ ಕೊಂಡೊಯ್ದರು. ಒಂದರ್ಥದಲ್ಲಿ ಅವರ ಚಿತ್ರಗಳು ಅನಕ್ಷರಸ್ಥರನ್ನೂ ಅಕ್ಷರಸ್ಥರನ್ನಾಗಿಸಿದವು ಎನ್ನುವ ಮಾತಿನಲ್ಲಿ ಸತ್ಯವಿದೆ. ತಮ್ಮ ಐವತ್ತು ವರ್ಷಗಳ ಚಿತ್ರಜೀವನದಲ್ಲಿ ಕನ್ನಡ ಭಾಷೆ ಮತ್ತು ಸಂಸ್ಕೃತಿಗೆ ಅಪಚಾರವಾಗದಂತೆ ಅಭಿನಯಿಸಿದರು. ಅವರ ಪ್ರತಿಯೊಂದು ಚಿತ್ರದಲ್ಲಿ ಕನ್ನಡ ಭಾಷೆಯ ಪ್ರೇಮ ಹಾಡು ಇಲ್ಲವೆ ಸಂಭಾಷಣೆ ರೂಪದಲ್ಲಿ ಬೆಳ್ಳಿತೆರೆಯ ಮೇಲೆ ವಿಜೃಂಭಿಸುತ್ತಿತ್ತು. ಜೊತೆಗೆ ರಾಜ್ ಕುಮಾರ್ ರೀಮೇಕ್ ಚಿತ್ರಗಳ ಪ್ರಬಲ ವಿರೋಧಿಯಾಗಿದ್ದರು. ಕನ್ನಡ ಭಾಷೆಯಲ್ಲೇ ಅನೇಕ ಉತ್ತಮ ಕತೆಗಾರರಿರುವಾಗ ಬೇರೆ ಭಾಷೆಗಳ ಸಿನಿಮಾ ಕಥೆಯನ್ನು ತಂದು ಚಿತ್ರ ತಯಾರಿಸುವುದು ಅವರಿಗೆ ಇಷ್ಟವಿರಲಿಲ್ಲ. ಅನೇಕ ಕಾದಂಬರಿ ಆಧಾರಿತ ಚಿತ್ರಗಳಲ್ಲಿ ನಟಿಸಿ ಬೆಳ್ಳಿತೆರೆಯ ಮೂಲಕ ಕಾದಂಬರಿಗಳನ್ನು ಸಾಮಾನ್ಯ ಪ್ರೇಕ್ಷಕ ವರ್ಗಕ್ಕೂ ಪರಿಚಯಿಸಿದ ಕೀರ್ತಿ ರಾಜ್ ಕುಮಾರ್ ಅವರಿಗೆ ಸಲ್ಲುತ್ತದೆ.

ಗೋಕಾಕ ಚಳುವಳಿಯ ಯಶಸ್ಸು ರಾಜ್ ಕುಮಾರ್ ಅವರ ಕನ್ನಡ ಪ್ರೇಮಕ್ಕೊಂದು ಅತ್ಯುತ್ತಮ ಉದಾಹರಣೆ. ಕನ್ನಡ ಭಾಷೆಗೆ ಸಂಬಂಧಿಸಿದಂತೆ ಗೋಕಾಕ ಸಮಿತಿಯ ಶಿಫಾರಸ್ಸುಗಳನ್ನು ಅನುಷ್ಠಾನಕ್ಕೆ ತರುವಂತೆ ಸರ್ಕಾರವನ್ನು ಒತ್ತಾಯಿಸಲು ಕನ್ನಡ ಸಾಹಿತೆಗಳೆಲ್ಲ ಚಳುವಳಿಗೆ ಮುಂದಾದರು. ಆದರೆ ಅವರ ಮುಂದಿದ್ದ ಪ್ರಶ್ನೆ ಜನರನ್ನು ಹೇಗೆ ಒಂದುಗೂಡಿಸುವುದು ಎನ್ನುವುದಾಗಿತ್ತು. ಆಗ ಕನ್ನಡ ಸಾಹಿತ್ಯ ಲೋಕಕ್ಕೆ ಗೋಚರಿಸಿದ್ದು ರಾಜ್ ಕುಮಾರ್ ಅವರ ಹೆಸರು. ಏಕೆಂದರೆ ಅವರಿಗೆ ಜನರನ್ನು ಆಕರ್ಷಿಸುವ ಶಕ್ತಿ ಇತ್ತು. ಸಾಹಿತಿಗಳ ಕರೆಗೆ ಓಗೊಟ್ಟ ರಾಜ್ ಕುಮಾರ್ ಚಳುವಳಿಗೆ ಧುಮುಕಿದರು. ನ ಭೂತೋ ನ ಭವಿಷ್ಯತಿ ಎನ್ನುವಂತೆ ಚಳುವಳಿ ಯಶಸ್ವಿಯಾಯಿತು. ರಾಜ್ ಕುಮಾರ್ ಹೋದಲ್ಲೆಲ್ಲ ಲಕ್ಷಾಂತರ ಜನ ಕೂಡಿದರು. ನಾಡಿನ ಮೂಲೆ ಮೂಲೆಗೂ ಹೋದ ಚಳುವಳಿಗಾರರು ಕನ್ನಡ ಪ್ರೇಮವನ್ನು ಜಾಗೃತಗೊಳಿಸಿದರು. ರಾಜ್ ಕುಮಾರ್ ಅವರ ಹಿಂದೆ ಇಡೀ ಚಿತ್ರರಂಗವೇ ಬೆಂಗಾವಲಾಗಿ ನಿಂತಿತ್ತು. ಚಳುವಳಿಯ ತೀವ್ರತೆಗೆ ಮಣಿದ ಸರ್ಕಾರ ಗೋಕಾಕ ಸಮಿತಿಯಲ್ಲಿನ ಎಲ್ಲ ಶಿಫಾರಸುಗಳನ್ನು ಅನುಷ್ಠಾನಕ್ಕೆ ತರುವ ಭರವಸೆ ನೀಡಿತು. ಇದು ನಡೆದದ್ದು ೧೯೮೨ರಲ್ಲಿ. ಆಗ ರಾಜ್ ಕುಮಾರ್ ಸಿನಿಮಾರಂಗ ಪ್ರವೇಶಿಸಿ ಇಪ್ಪತ್ತೈದು ವರ್ಷಗಳಾಗಿದ್ದವು. ಈಗ (೨೦೦೬ರಲ್ಲಿ) ಗೋಕಾಕ ಚಳುವಳಿ ತನ್ನ ರಜತ ಮಹೋತ್ಸವವನ್ನು ಆಚರಿಸಿಕೊಳ್ಳುವ ಸಂಭ್ರಮದಲ್ಲಿದೆ. ಆದರೆ ಚಳುವಳಿಯ ಯಶಸ್ಸಿಗೆ ಕಾರಣರಾದ ಆ ಮಹಾನಾಯಕ ನಮ್ಮೊಡನೆ ಇಲ್ಲದಿರುವುದು ವಿಷಾದದ ಸಂಗತಿ.

ಕಾವೇರಿ ನದಿ ನೀರಿನ ವಿಷಯದಲ್ಲಿ ರೈತರಿಗೆ ಅನ್ಯಾಯವಾದಾಗ, ಪರಭಾಷಾ ಚಿತ್ರಗಳ ಹಾವಳಿ ತಡೆಗಟ್ಟಲು, ಸಿನಿಮಾ ಕಾರ್ಮಿಕರ ಹಿತಾಸಕ್ತಿಯನ್ನು ಕಾಪಾಡಲು, ಅನ್ಯ ಭಾಷೆಯ ಚಿತ್ರಗಳನ್ನು ಪ್ರದರ್ಶಿಸುವ ಸಿನಿಮಾ ಮಂದಿರಗಳ ಮಾಲೀಕರ ವಿರುದ್ಧ ಹೀಗೆ ಅನೇಕ ಹೋರಾಟಗಳಲ್ಲಿ ರಾಜ್ ಕುಮಾರ್ ಮುಂದಾಳತ್ವ ವಹಿಸಿದ್ದರು. ಕನ್ನಡಕ್ಕೆ ಅನ್ಯಾಯವಾದಾಗಲೆಲ್ಲ ಕನ್ನಡ ಪರ ಧ್ವನಿ ಎತ್ತಿದ್ದಾರೆ.

ಅಸಾಮಾನ್ಯನಾಗಿಯೂ ಸಾಮಾನ್ಯ

ರಾಜ್ ಅವರದು ಅಸಾಮಾನ್ಯ ವ್ಯಕ್ತಿತ್ವ. ಕನ್ನಡ ಚಿತ್ರರಂಗ ಕಂಡ ಅದ್ಭುತ ಪ್ರತಿಭೆ. ಒಂದರ್ಥದಲ್ಲಿ ಅವರದು ದೈತ್ಯ ಪ್ರತಿಭೆ. ರಾಷ್ಟ್ರಮಟ್ಟದ ಪ್ರಶಸ್ತಿ ಪುರಸ್ಕಾರಗಳನ್ನು ಪಡೆದ ಅಭಿಜಾತ ಕಲಾವಿದ. ಆದರೆ ರಾಜ್ ಕುಮಾರ್ ಎಂದೂ ತಾನೊಬ್ಬ ಸೂಪರ್ ಸ್ಟಾರ್ ಎಂದು ವರ್ತಿಸಲಿಲ್ಲ. ಅಸಾಮಾನ್ಯನಾಗಿಯೂ ಒಬ್ಬ ಸಾಮಾನ್ಯನಂತೆ ಬದುಕಿದರು. ಸಿನಿಮಾ ಬದುಕಿನ ಥಳುಕು ಬಳುಕಿನ ನಡುವೆ ಇದ್ದೂ ತೀರ ಸರಳವಾಗಿ ಬದುಕಿದ ಅಪರೂಪದ ಕಲಾವಿದ. ಒಂದೆರಡು ಸಿನಿಮಾಗಳಲ್ಲಿ ನಟಿಸಿದ ಮಾತ್ರಕ್ಕೆ ತಾನೊಬ್ಬ ಮಹಾನ್ ಕಲಾವಿದ ಎಂದು ವರ್ತಿಸುವವರಿಗೆ ರಾಜ್ ಕುಮಾರ್ ಬದುಕು ಒಂದು ಆದರ್ಶ. ಅದೊಂದು ನೀತಿಪಾಠ. ಯಾವತ್ತೂ ವಿಲಾಸಿ ಜೀವನಕ್ಕೆ ಮಾರು ಹೋದವರಲ್ಲ. ತೀರ ಸರಳ ಜೀವನ ನಡೆಸಿದ್ದರಿಂದಲೇ ೧೦೮ ದಿನಗಳವರೆಗೆ ನರರಾಕ್ಷಸ ವೀರಪ್ಪನ್‍ನ ಸೆರೆಯಲ್ಲಿದ್ದು ನಾಡಿಗೆ ಹಿಂತಿರುಗಿ ಬರಲು ಸಾಧ್ಯವಾಯಿತು.

ನೆರೆಯ ರಾಜ್ಯಗಳಲ್ಲಿ ಎಮ್.ಜಿ.ರಾಮಚಂದ್ರನ್, ಎನ್.ಟಿ.ರಾಮರಾವ, ಜಯಲಲಿತಾ ಇವರೆಲ್ಲ ಸಿನಿಮಾದಿಂದ ದೊರೆತ ಯಶಸ್ಸಿನಿಂದಲೇ ರಾಜಕೀಯ ಪ್ರವೇಶಿಸಿ ಕೊನೆಗೆ ಮುಖ್ಯಮಂತ್ರಿಯೂ ಆದರು. ಕರ್ನಾಟಕದಲ್ಲಿ ರಾಜ್ ಕುಮಾರ್ ಅವರಿಗೆ ಖಂಡಿತವಾಗಿಯೂ ಈ ಅವಕಾಶವಿತ್ತು. ಮನಸ್ಸು ಮಾಡಿದ್ದರೆ ಅವರು ರಾಜ್ಯದ ಮುಖ್ಯಮಂತ್ರಿಯಾಗಬಹುದಿತ್ತು. ಆದರೆ ಅವರೆಂದೂ ರಾಜಕೀಯದ ವ್ಯಾಮೋಹಕ್ಕೆ ಸಿಲುಕಲಿಲ್ಲ. ಅಭಿನಯದಲ್ಲೇ ತೃಪ್ತಿ ಕಂಡರು. ಈ ಕಾರಣದಿಂದಲೇ ರಾಜ್ ಕುಮಾರ್ ಕನ್ನಡಿಗರಿಗೆ ಮತ್ತಷ್ಟು ಹತ್ತಿರವಾದರು.

ರಾಜ್ ಕುಮಾರ್ ಅವರ ತಾರಾಮೌಲ್ಯ ಅವರು ಅಭಿನಯಿಸುವುದನ್ನು ಬಿಟ್ಟ ನಂತರವೂ ಕಡಿಮೆಯಾಗಿರಲಿಲ್ಲ ಎನ್ನುವುದಕ್ಕೆ ಅಂತ್ಯಸಂಸ್ಕಾರದಲ್ಲಿ ಭಾಗವಹಿಸಿದ್ದ ಜನಸಮೂಹವೇ ಸಾಕ್ಷಿ. ಸರ್ಕಾರ ಕಂಠೀರವ ಸ್ಟುಡಿಯೋದ ಆವರಣದಲ್ಲಿ ಅಂತ್ಯಸಂಸ್ಕಾರಕ್ಕೆ ಸ್ಥಳ ಒದಗಿಸಿ ಮೇರು ನಟನಿಗೆ ಸಲ್ಲಬೇಕಾದ ಗೌರವವನ್ನು ಸಲ್ಲಿಸಿತು. ಏಕೆಂದರೆ ಸ್ಟುಡಿಯೋ ಕಲಾವಿದನ ಕರ್ಮಭೂಮಿ. ಆದರೆ ಸರ್ಕಾರದ ಪ್ರಯತ್ನ ಇಷ್ಟಕ್ಕೆ ನಿಲ್ಲಬಾರದು. ಅವರ ಚಿತ್ರಜೀವನವನ್ನು ಪರಿಚಯಿಸುವ ಸಿನಿಮಾ ಸಂಪುಟ ಪ್ರಕಟವಾಗಬೇಕು. ಪ್ರತಿ ವರ್ಷದ ಎಪ್ರಿಲ್ ತಿಂಗಳಲ್ಲಿ ರಾಜ್ ಕುಮಾರ್ ಚಿತ್ರಗಳ ಕುರಿತು ವಿಚಾರ ಸಂಕಿರಣ ಹಾಗೂ ಅವರ ಅಭಿನಯದ ಚಿತ್ರಗಳ ಪ್ರದರ್ಶನಕ್ಕೆ ವ್ಯವಸ್ಥೆ ಮಾಡಬೇಕು. ಸಿನಿಮಾ ರಂಗದಲ್ಲಿ ಐವತ್ತು ವರ್ಷಗಳ ಸುದೀರ್ಘ ಸೇವೆ ಸಲ್ಲಿಸಿ ಎಪ್ಪತ್ತೇಳು ವಸಂತಗಳ ಸಾರ್ಥಕ ಜೀವನ ನಡೆಸಿದ ಆ ಹಿರಿಯ ಜೀವ ಚಿರಕಾಲ ನೆನಪಿನಲ್ಲುಳಿಯಬೇಕು.

ನಿಮ್ಮ ಅನಿಸಿಕೆ...

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Note: HTML is allowed. Your email address will never be published.

Subscribe to comments