ವಿಷಯದ ವಿವರಗಳಿಗೆ ದಾಟಿರಿ

ಏಪ್ರಿಲ್ 28, 2015

24

ಮಾನ ಕಳೆದುಕೊಂಡ ಸನ್ಮಾನಗಳು

‍ನಿಲುಮೆ ಮೂಲಕ

– ರೋಹಿತ್ ಚಕ್ರತೀರ್ಥ

ಪ್ರಶಸ್ತಿನಾನು ಮಾಡಿದ ಕೆಲಸ ಸರಿಯಿದೆ ಎಂದು ಒಪ್ಪಿದರೆ ಸಾಕು. ಅದೇ ನನಗೆ ಬಹುದೊಡ್ಡ ಪ್ರಶಸ್ತಿ. ಬೇರೆ ಬಹುಮಾನ ಏಕೆ? – ಎಂದ ಗ್ರೆಗೊರಿ ಪೆರೆಲ್ಮನ್. ಅವನ ಕೆಲಸದ ಔನ್ನತ್ಯವನ್ನು ಮೆಚ್ಚಿ ಒಂದು ಮಿಲಿಯ ಡಾಲರ್‍ಗಳನ್ನು (ಅಂದರೆ, ಆರು ಕೋಟಿ ರುಪಾಯಿ!) ಹಿಡಿದು ನಿಂತಿದ್ದವರಿಗೆ ಬಾಗಿಲು ಕೂಡ ತೆರೆಯಲಿಲ್ಲ ಆ ಮಹರಾಯ! ನಿಮ್ಮನ್ನು ಒಳಬಿಟ್ಟೆನೆಂದರೆ, ಹಿಂದೆಯೇ ಪತ್ರಕರ್ತರು ತೂರಿಕೊಂಡು ಒಳಸೇರುತ್ತಾರೆ. ನೂರೆಂಟು ಪ್ರಶ್ನೆ ಕೇಳಿ ತಲೆ ತಿನ್ನುತ್ತಾರೆ. ಇನ್ನು ಪತ್ರಿಕೆಗಳಲ್ಲಿ, ಟಿವಿಯಲ್ಲಿ ನನ್ನ ಮುಖ ಕಂಡರೆ ಸಾಕು, ಬೀದಿಯಲ್ಲಿ ಆರಾಮಾಗಿ ನಡೆದುಹೋಗಲಿಕ್ಕೂ ತೊಂದರೆ. ಪ್ರಶಸ್ತಿ ಬಂತು ಅಂತ ಕೈಗೊಂದು-ಕಾಲಿಗೊಂದು ಗೆಳೆಯರು, ನೆಂಟರು ಹುಟ್ಟಿಕೊಳ್ಳುತ್ತಾರೆ. ಇದೆಲ್ಲ ಬೇಕಾ? ಪ್ರಶಸ್ತಿಯೂ ಬೇಡ, ಅದು ತರುವ ನೂರೆಂಟು ತಾಪತ್ರಯಗಳೂ ಬೇಡ ಎಂದು ಎಲ್ಲರನ್ನೂ ಗೇಟ್‍ಪಾಸ್ ಮಾಡಿದ್ದ ಜಗತ್ತಿನ ಶ್ರೇಷ್ಠ ಗಣಿತಜ್ಞರಲ್ಲಿ ಒಬ್ಬನಾದ ಪೆರೆಲ್ಮನ್.

“ದುಡ್ಡೇ ಎಲ್ಲ ತೊಂದರೆಗಳಿಗೆ ಬೇರು” ಎಂದು ಸ್ವಾಮೀಜಿಗಳು ಹೇಳಿದಾಗ ಭಕ್ತರೆಲ್ಲ ಒಂದೇ ಧ್ವನಿಯಲ್ಲಿ “ನಮಗೆ ಆ ಬೇರು ಬೇಕು!” ಎಂದು ಕೂಗಿದ್ದರಂತೆ. ಬಹುಶಃ ಈಗ, “ಪ್ರಶಸ್ತಿಯೇ ಎಲ್ಲ ತಾಪತ್ರಯಗಳಿಗೂ ಮೂಲ” ಎಂದು ಹೇಳಿದರೆ, ಸರಕಾರ ಕೊಟ್ಟ ಗೆಡ್ಡೆಗೆಣಸುಗಳಲ್ಲೇ ಉಸಿರು ಹಿಡಿದುಕೊಂಡಿರುವ ಬುದ್ಧಿಜೀವಿಗಳು ನಮಗೂ ಆ ಕಂದಮೂಲ ಬೇಕು ಎಂದು ಪಟ್ಟುಹಿಡಿದಾರು. ಅರ್ಹರನ್ನು ಅನ್ಯರು ಗುರುತಿಸಿ ಪ್ರಶಸ್ತಿಯ ಕಿರೀಟ ತೊಡಿಸಿ ಶಾಲುಹೊದಿಸಿ ಒಂದಷ್ಟು ದುಡ್ಡೋ ಸ್ಮರಣಿಕೆಯೋ ಕೈಯಲ್ಲಿಟ್ಟು ಕೃತಾರ್ಥರಾಗುವ ಕಾಲ ಒಂದಿತ್ತು. ಆದರೆ, ಈಗ ಪ್ರಶಸ್ತಿಗಳನ್ನು ಕೂಡ ಬಿಕರಿಗಿಡಲಾಗಿದೆ. ರಾಜ್ಯ ಅಥವಾ ಕೇಂದ್ರದಲ್ಲಿ ಸರಕಾರ ಬದಲಾದ ಕೂಡಲೇ, ಆಯಾಯಾ ಪಕ್ಷಗಳನ್ನು ಬೆಂಬಲಿಸುವ ಪ್ರತಿಭಾವಂತರು ಚುರುಕಾಗುತ್ತಾರೆ. ಇಷ್ಟು ವರ್ಷ ಆಗದೇ ನೆನೆಗುದಿಗೆ ಬಿದ್ದ ಕೆಲಸವನ್ನು ಈಗ ಹೇಗಾದರೂ ಮಾಡಿಸಿಕೊಳ್ಳಬೇಕು ಎಂದು ಸರಕಾರವೆಂಬ ವೃಂದಾವನಕ್ಕೆ ಸುತ್ತುಬರುತ್ತಾರೆ. ಕಾಯಿ ಒಡೆಯುತ್ತಾರೆ. ಹಣ್ಣು ನೈವೇದ್ಯ ಸಮರ್ಪಣೆ ಮಾಡುತ್ತಾರೆ. ಅಷ್ಟಶತೋತ್ತರ ನಾಮಾವಳಿಯೂ ನಡೆಯುತ್ತದೆ. ಇಷ್ಟೆಲ್ಲ ಪಾಡುಪಟ್ಟ ಭಕ್ತನನ್ನು ಸಂಪ್ರೀತಗೊಳಿಸಲು ಸರಕಾರ ಅವನಲ್ಲಿ ಯಾವ ಪ್ರಶಸ್ತಿ ಬೇಕು ವತ್ಸಾ ಎಂದು ಕೇಳಲೇಬೇಕಾದ ಪರಿಸ್ಥಿತಿ ಬರುತ್ತದೆ. ಪೂಸಿ ಹೊಡೆದು ಗಾಳಿ ಖಾಲಿಯಾದವರು ಯಾವುದಾದರೂ ನಡೆದೀತು ಎಂಬ ಹಂತಕ್ಕೆ ಬಂದಿರುತ್ತಾರೆ. ಆದರೆ, ಕೆಲವು ಜಗಜಟ್ಟಿಗಳು ಇಂಥದ್ದೇ ಬೇಕು, ಅದು ಕೊಡೋದಿಲ್ಲವಾದರೆ ಯಾವುದೂ ಬೇಡ ಎಂದು ರಚ್ಚೆ ಹಿಡಿಯುತ್ತಾರೆ. ಇಂತಹ ಕಂದಮ್ಮಗಳನ್ನು ರಮಿಸಿ ಮುದ್ದಿಸಿ ಹಾಲುಕೊಟ್ಟು ತಣ್ಣಗಾಗಿಸುವ ಹೊತ್ತಿಗೆ ಕೆಲವು ಸಲ ಸರಕಾರಕ್ಕೆ ಹೆಣ ಬಿತ್ತೆನ್ನಿಸುವಷ್ಟು ಸುಸ್ತು ಹೊಡೆಯುವುದೂ ಉಂಟು. ಆದರೇನು ಮಾಡೋಣ? ಸರಕಾರಕ್ಕೆ ತನ್ನ ಪರಾಕುಪಂಪು ಒತ್ತಿಸಿಕೊಳ್ಳಲು ಈ ವಂಧಿಮಾಗಧರ ಗಡಣ ಬೇಕು. ಮತ್ತು ಈ ಗಡಣಕ್ಕೆ ತನ್ನಗಂಟಲನ್ನು ಸದಾ ತೇವವಾಗಿಟ್ಟುಕೊಳ್ಳಲು ನೆರವು ನೀಡುವ ರಾಜಾಶ್ರಯ ಬೇಕು. ಇದು ಸಾರ್ವಜನಿಕ ತೆರಿಗೆ ದುಡ್ಡಿನ ಕೃಪಾಪೋಷಿತ ಪರಸ್ಪರ ಸಹಕಾರ ಸಂಘ.

ಈ ದೇಶದಲ್ಲಿ ಪ್ರಶಸ್ತಿಗಳಿಗಾಗಿ ಬುದ್ಧಿಜೀವಿಗಳು ಯಾವ ಉಪ್ಪಿಲ್ಲದ ರಾಗಿಮುದ್ದೆ ಬೇಕಾದರೂ ಮುರಿಯುತ್ತಾರೆ ಎನ್ನುವುದಕ್ಕೆ ಕಳೆದ ವರ್ಷದ ಬಸವ ಪ್ರಶಸ್ತಿಯೇ ಸಾಕ್ಷಿಯಾಗಿತ್ತು. ಪ್ರಶಸ್ತಿ ಹೊಡೆದುಕೊಳ್ಳಲು ಸಾಕಷ್ಟು ಲಾಬಿ ಮಾಡಿ, ಕೊನೆಗೂ ಪುರಸ್ಕಾರವನ್ನೂ ಅದರ ಜೊತೆ ಬರುವ ಹತ್ತುಲಕ್ಷದ ಇಡುಗಂಟನ್ನೂ ಇಸಿದುಕೊಂಡ ಮೇಲೆ ಡಾ. ಎಂ. ಎಂ. ಕಲಬುರ್ಗಿಯವರು ಮಾಧ್ಯಮಗಳಿಗೆ ಹೇಳಿದ ಮಾತು – “ಈ ಪ್ರಶಸ್ತಿಗೆ ಮೊದಲು ನನ್ನನ್ನು ಆಯ್ಕೆ ಮಾಡಲಾಗಿತ್ತು. ಆದರೆ ಬೇರೆಯವರಿಗೆ ನೀಡುವ ಕಾರಣದಿಂದ ನನ್ನ ಹೆಸರನ್ನು ತೆಗೆದುಹಾಕಲಾಯಿತು. ನನ್ನ ಹೆಸರನ್ನು ತೆಗೆದು ಬೇರೊಬ್ಬರಿಗೆ (ಅನಂತಮೂರ್ತಿ) ನೀಡಿದ್ದು ಸರಿಯಲ್ಲ ಎಂದು ನಾನು ಪ್ರಶಸ್ತಿ ಪ್ರದಾನ ಕಾರ್ಯಕ್ರಮದ ನಂತರ ಅಂದು ಮಾಧ್ಯಮಗಳಿಗೆ ಹೇಳಿಕೆ ಬಿಡುಗಡೆ ಮಾಡಿದೆ. ಸರಕಾರದ ಕ್ರಮದಲ್ಲಿ ತಪ್ಪಿರುವುದರಿಂದ ಅದನ್ನು ಸರಿಪಡಿಸಿಕೊಳ್ಳಬೇಕೆಂದು ಹೇಳಿದೆ. ಅನಂತಮೂರ್ತಿಯವರಿಗೆ ಆ ಪ್ರಶಸ್ತಿ ಕೊಟ್ಟದ್ದು ನನಗೆ ಬಹಳ ಬೇಜಾರಾಯಿತು”. ಅಂದರೆ, ಇಲ್ಲಿ ಕಲಬುರ್ಗಿಯವರು ಇಷ್ಟಾರ್ಥಸಿದ್ಧಿಗಾಗಿ ಯಾವ್ಯಾವ ದೇವತೆಗಳಿಗೆ ಹರಕೆ ಹೊತ್ತಿದ್ದಾರೆ, ಗಂಧಚಂದನ ಲೇಪಿಸಿ ಪೂಜೆ ಮಾಡಿದ್ದಾರೆ ಎನ್ನುವುದು ಸ್ಪಷ್ಟವಾಗಿದೆ. ಒಂದು ಪ್ರಶಸ್ತಿ ಪಡೆಯಲು ಇಷ್ಟೊಂದು ಹಪಹಪಿಯನ್ನು ಸಾರ್ವಜನಿಕವಾಗಿ ತೋಡಿಕೊಳ್ಳುವ, ಆ ಮೂಲಕ ತಾನೆಷ್ಟು ಹಗುರ, ಟೊಳ್ಳು ಎನ್ನುವುದನ್ನು ಪ್ರದರ್ಶಿಸಿಕೊಳ್ಳುವ ದರ್ದು ಬೇಕೆ? ಇನ್ನೂ ಮುಂದುವರಿದು ಕಲಬುರ್ಗಿ ಹೇಳಿದ ಮಾತು ನೋಡಿ – “ಪ್ರಶಸ್ತಿಗಳು ಬಂದಾಗ ಸಂತೋಷವಾಗುವುದು ಸಹಜ. ಅದರ ಹಿಂದೆ ಅಪಾರ ನೋವು ಮತ್ತು ಅವಮಾನದ ಕತೆಗಳಿರುತ್ತವೆ. ರಾಜ್ಯ ಸರಕಾರ ನನಗೆ ನೀಡಿದ ರಾಷ್ಟ್ರೀಯ ಬಸವ ಪುರಸ್ಕಾರವೂ ಇದರಿಂದ ಹೊರತಲ್ಲ. ಪ್ರಶಸ್ತಿ ಕೊಡುವವರಿಗೆ ಬುದ್ಧಿ ಇರಬೇಕು. ಇಲ್ಲದಿದ್ದರೆ ಪ್ರಶಸ್ತಿ ತೆಗೆದುಕೊಳ್ಳುವವರಿಗಾದರೂ ಬುದ್ಧಿ ಇರಬೇಕು. ನನಗೆ ತಪ್ಪಿಸಿ ಅನಂತಮೂರ್ತಿಗೆ ಪ್ರಶಸ್ತಿ ಕೊಟ್ಟಾಗ ಇವೆರಡೂ ಇರಲಿಲ್ಲ”. ಒಟ್ಟಲ್ಲಿ, ಪಂಚರಂಗಿಯನ್ನು ಮೈಮೇಲೆ ಬಿಟ್ಟುಕೊಂಡು ಪರಪರ ಪರಚಿಕೊಂಡಂತಿದೆ ಇದು! ಅನಂತಮೂರ್ತಿಗಳಿಗೆ ಬಸವ ಪ್ರಶಸ್ತಿ ಸಿಕ್ಕಿತು, ತನಗೆ ತಪ್ಪಿಹೋಯಿತು ಎನ್ನುವುದು ಗೊತ್ತಾದ ಮೇಲೆ ಕಲಬುರ್ಗಿ “ಉಚ್ಚೆ ಪ್ರಕರಣ”ದ ರಾದ್ಧಾಂತ ಎಬ್ಬಿಸಿ, ಕೊನೆಯ ಬ್ರಹ್ಮಾಸ್ತ್ರ ಪ್ರಯೋಗಿಸಿ ಮೂರ್ತಿಗಳಿಗೆ ಪ್ರಶಸ್ತಿ ತಪ್ಪಿಸಲು ನೋಡಿದ್ದು ಈಗೇನೂ ಗುಟ್ಟಾಗಿ ಉಳಿದಿಲ್ಲ. “ತನ್ನ ಬಣ್ಣಿಸಬೇಡ, ಇದಿರ ಹಳಿಯಲುಬೇಡ, ಇದೇ ಅಂತರಂಗಶುದ್ಧಿ, ಇದೇ ಬಹಿರಂಗಶುದ್ಧಿ” ಎಂದು ಹೇಳಿದ ಬಸವಣ್ಣ ಎಲ್ಲಿ, ಆ ಮಹಾಪುರುಷನ ಹೆಸರಲ್ಲಿ ಕೆಸರೆರಚಿಕೊಂಡು ಎಂಜಾಯ್ ಮಾಡುತ್ತಿರುವ ಈ ವಿವಾದಪುರುಷರುಗಳೆಲ್ಲಿ!

ಅದು ಹೋದವರ್ಷದ ಕಥೆ. ಈ ವರ್ಷದ ಬಸವ ಪ್ರಶಸ್ತಿಯನ್ನು ನಮ್ಮ ಘನ ಸರಕಾರ ವಿವಾದಸ್ವಾಮೀಜಿ ಎಂದೇ (ಕು)ಖ್ಯಾತರಾಗಿರುವ ನಿಡುಮಾಮಿಡಿ ಜಗದ್ಗುರುಗಳಿಗೆ ನೀಡಿದೆ. ಅದಕ್ಕಾಗಿ ನಿಡುಮಾಮಿಡಿ ಸಾಕಷ್ಟು ಸಮಯದಿಂದ ಭರ್ಜರಿಯಾಗಿ ತಾಲೀಮು ನಡೆಸುತ್ತಿದ್ದರು ಎನ್ನುವುದು ಯಾರಿಗಾದರೂ ಗೊತ್ತಾಗುವ ಸಂಗತಿ. ಹಿಂದೂ ಸ್ವಾಮೀಜಿಗಳನ್ನು, ಬ್ರಾಹ್ಮಣರನ್ನು ಜರೆಯುವುದನ್ನೇ ತನ್ನ ಒಂದಂಶದ ಕಾರ್ಯಕ್ರಮ ಮಾಡಿಕೊಂಡು ದಿನದೂಡುತ್ತಿರುವ ಸ್ವಾಮೀಜಿಗಳಿಗೆ ಅವರ ಈ ಮಹತ್ಕಾರ್ಯಕ್ಕಾಗಿ ರಾಜಕೃಪೆ ಬೀಳಲೇಬೇಕಾಗಿತ್ತಲ್ಲ? ಹಿಂದೂ ಸಮಾಜವನ್ನು ನೆಮ್ಮದಿಯಾಗಿ ಬದುಕಲಿಕ್ಕೆ ಬಿಡಬಾರದು, ಆಗಾಗ ಹುಳಿಹಿಂಡುತ್ತಲೇ ಇರಬೇಕೆಂದು ಬಸವಣ್ಣ ಹೇಳಿದ್ದು ಎಲ್ಲೂ ದಾಖಲಾಗಿಲ್ಲ. ಆದರೆ, ನಮ್ಮ ನಡುವೆ ಅಣಬೆಗಳಂತೆ ಬೆಳೆಯುತ್ತಿರುವ ಪ್ರಗತಿಪರರು, ಸೌಹಾರ್ದ ವೇದಿಕೆಗಳ ಗೆಳೆಯರು ಅದೇಕೋ ಸಮಾಜದ ಒಂದು ವರ್ಗವನ್ನು ಹಳಿಯುತ್ತಿರುವುದೇ ನಿಜವಾದ ಜಾತ್ಯತೀತತೆ ಎಂದು ಬಗೆದಂತಿದೆ. ಬಹುಸಂಖ್ಯಾತ ಹಿಂದೂಗಳ ನೀತಿಗ್ರಂಥಗಳನ್ನು ಸುಟ್ಟರೆ, ಸರಕಾರದ ಪ್ರಶಸ್ತಿ ಹೊಡೆಯಬಹುದು; ದಲಿತರನ್ನು ದಾರಿತಪ್ಪಿಸಿ ಗೋಮಾಂಸ ತಿನ್ನಿಸಿದರೆ ಇತಿಹಾಸದ ಸುವರ್ಣಪುಟಗಳಲ್ಲಿ ದಾಖಲಾಗಬಹುದು; ಹಿಂದೂ ದೇವತೆಗಳ ಮೇಲೆ ಉಚ್ಚೆ ಹೊಯ್ದರೆ ಬಸವ ಪ್ರಶಸ್ತಿ ಎಗರಿಸಬಹುದು ಎನ್ನುವ ಸಂದೇಶ ಸರಕಾರದಿಂದಲೇ ಈ ಪ್ರತಿಭಾನ್ವಿತರಿಗೆ ಹೋಗುತ್ತಿದೆ. ರಾಜ್ಯದ ಜನತೆ ಕಟ್ಟಿದ ತೆರಿಗೆಯ ದುಡ್ಡಲ್ಲಿ ಬರೋಬ್ಬರಿ ಹತ್ತುಲಕ್ಷದಷ್ಟು ದೊಡ್ಡ ಮೊತ್ತವನ್ನು ಈ ಸಮಾಜವಿರೋಧಿಗಳಿಗೆ ಕೊಡುವ ಔಚಿತ್ಯವೇನು ಎನ್ನುವುದನ್ನು ಮಾನ್ಯ ಸರಕಾರವೇ ವಿವರಿಸಬೇಕು. ಇಷ್ಟಕ್ಕೂ ಬಸವ ಪ್ರಶಸ್ತಿಗೆ ಇರಬೇಕಾದ ಮಾನದಂಡಗಳೇನು? ಯಾರನ್ನು ಈ ಪ್ರಶಸ್ತಿಗೆ ಆಯ್ಕೆ ಮಾಡಬೇಕು? ಅಂತಹ ಪ್ರತಿಭಾನ್ವಿತರನ್ನು ಆಯ್ಕೆ ಮಾಡಲು ರಚಿಸುವ ಸಮಿತಿ ಹೇಗಿರಬೇಕು? ಸಮಿತಿಯ ಅಧ್ಯಕ್ಷರೇ ಕೊನೆಗೆ, ಈ ವರ್ಷ ಯಾರೂ ಸಿಗಲಿಲ್ಲ; ಹಾಗಾಗಿ ನಾನೇ ಪ್ರಶಸ್ತಿಗೆ ಅರ್ಹ ಎಂದು ಘೋಷಿಸಿಕೊಳ್ಳಬಹುದೆ? ಇದನ್ನು ರಾಷ್ಟ್ರೀಯ ಪ್ರಶಸ್ತಿ ಎಂದು ಘೋಷಿಸಿದ ಮೇಲೆ ಇದಕ್ಕೆ ಅಂತಹ ದೊಡ್ಡ ಮೌಲ್ಯ ಇರಬೇಕಲ್ಲ? ಸರಕಾರ ತನ್ನ ಪರವಾಗಿ ಗಂಟಲು ಹರಿದುಕೊಂಡು, ಸಮಾಜದಲ್ಲಿ ಅಶಾಂತಿ ತಂದವರಿಗೆ ಬಸವಣ್ಣನ ಹೆಸರಿನ ಪ್ರಶಸ್ತಿನ್ನು ಬೇಕಾಬಿಟ್ಟಿಯಾಗಿ ಕೊಡಬಹುದೆ?

ಬುದ್ಧಿಜೀವಿಗಳ ಮಾತಿನ ವರಸೆ ನೋಡಿದರೆ, ಪ್ರಶಸ್ತಿ ಪಡೆಯುವುದು ತಮ್ಮ ಜನ್ಮಸಿದ್ಧಹಕ್ಕು ಎಂದು ಅವರು ಬಗೆದಂತಿದೆ. ಪ್ರಶಸ್ತಿ ಕೊಡುವವರಿಗೆ ಬುದ್ಧಿ ಇರಬೇಕು – ಎನ್ನುವ ಮಾತು ಎಷ್ಟೊಂದು ದಾಷ್ಟ್ರ್ಯದ್ದು ಎಂದು ಗಮನಿಸಿ. ಪ್ರಶಸ್ತಿಗಳಿಗಾಗಿಯೇ ಬದುಕುವ ಈ ಬಗೆಯ ಪರಾವಲಂಬಿಗಳಿಂದ ಇನ್ನೆಂಥ ಮಾತು ಬಂದೀತು ಎನ್ನುವುದು ಬೇರೆ ವಿಷಯ. ಈ ರೀತಿಯ ಪರಾವಲಂಬಿಗಳು ತಮ್ಮ ನಾಲಗೆ ಸಡಿಲಬಿಟ್ಟು ತಮ್ಮ ಮತ್ತು ಪ್ರಶಸ್ತಿಯ ಮಾನ ಕಳೆಯುವುದಷ್ಟೇ ಅಲ್ಲ, ಮುಂದೆ ಯಾರಾದರೂ ನಿಜವಾದ ಘನತೆಯಿಂದ ಪ್ರಶಸ್ತಿ ಸ್ವೀಕರಿಸುವುದಕ್ಕೂ ಹಿಂದೆಮುಂದೆ ನೋಡುವಂತೆ ಮಾಡುತ್ತಾರೆ. ಸದ್ಯಕ್ಕೆ ರಾಜ್ಯೋತ್ಸವ ಪ್ರಶಸ್ತಿಗಳ ಕತೆ ಹಾಗೇ ಆಗಿದೆ. ಸರಕಾರ ಯಾವಾಗ ಪ್ರಶಸ್ತಿಗಳಿಗಾಗಿ ಅರ್ಜಿ ಕರೆಯಲು ಶುರುಮಾಡಿತೋ ಆಗಲೇ ಆ ಪ್ರಶಸ್ತಿಗಳ ಬೆಲೆ ಮೂರಾಬಟ್ಟೆಯಾಯಿತು. ಇನ್ನು ಪ್ರಶಸ್ತಿಗಳ ಜೊತೆ ದೊಡ್ಡ ಮೊತ್ತದ ನಗದು, ಸೈಟುಗಳ ಉಡುಗೊರೆ ಎಲ್ಲ ಶುರುವಾದ ಮೇಲೆ ಅದು ಕೂಡ ಕುದುರೆವ್ಯಾಪಾರದ ಸ್ಥಿತಿಗೆ ಇಳಿದಿದೆ. ಪ್ರಶಸ್ತಿಗಳಿಗಾಗಿ ಲಾಬಿ ಮಾಡುವುದು, ಕೈಬಿಸಿ ಮಾಡುವುದು, ಸರಕಾರದ ಪರವಾಗಿ ಉದ್ಧಟಹೇಳಿಕೆಗಳನ್ನು ಕೊಡುವುದು, ತನ್ನ ಜಾತಿಬಲ ಪ್ರದರ್ಶಿಸುವುದು, ಮುಖ್ಯಮಂತ್ರಿಯನ್ನು ಇಂದ್ರಚಂದ್ರ ಎಂದು ಹೊಗಳುವುದು – ಇತ್ಯಾದಿಯೆಲ್ಲ ಅಸಹ್ಯ ಅನ್ನಿಸುವ ಕಾಲ ಇದಲ್ಲ. ಅಂದಿಗೆ ಅದೇ ಸುಖ, ಇಂದಿಗೆ ಇದೇ ಸುಖ ಎಂಬಂತೆ, ಅಪಮೌಲ್ಯಗಳೇ ಪರಮಶ್ರೇಷ್ಠ ತತ್ವಗಳೆಂಬ ಕಾಲ ಬಂದಿದೆ. ಬೆತ್ತಲೆರಾಜ್ಯದಲ್ಲಿ ಬಟ್ಟೆ ತೊಟ್ಟವನಿಗೆ ಪ್ರಶಸ್ತಿ ಬಂದೀತೇ?!

ನಿಡುಮಾಮಿಡಿ ಸ್ವಾಮಿಗಳು, ಪ್ರಶಸ್ತಿ ಸಿಕ್ಕಿದ ಮೇಲೆ, ನನ್ನನ್ನು ಆಯ್ಕೆ ಮಾಡಿ ಕೊನೆಯ ಹಂತಕ್ಕೆ ಬಂದ ಮೇಲೆ ವಿಷಯ ಗೊತ್ತಾಯಿತು. ಹಾಗಾಗಿ ವಿನಯದಿಂದ ಅದನ್ನು ಸ್ವೀಕರಿಸಿದೆ. ನನಗಿಂತ ಹೆಚ್ಚಿನ ಅರ್ಹತೆಯವರು ಬಹಳ ಜನ ಇದ್ದರು ಎಂದು ಅಣಿಮುತ್ತು ಉದುರಿಸಿದ್ದಾರೆ. ಇದು ತಿಪ್ಪೆಸಾರಾಟ ಎಂದು ಯಾವ ಹೆಡ್ಡನಿಗೂ ಅರ್ಥವಾಗುತ್ತದೆ. ಸರಕಾರದ ಸೆರಗಿನೊಳಗೆ ಇರುವ ಬುದ್ಧಿಜೀವಿಗಳಿಗೆ, ಇಂತಹದೊಂದು ಪ್ರಶಸ್ತಿ ಬರುವುದು ಕೊನೆಯವರೆಗೂ ಗೊತ್ತಿರಲಿಲ್ಲ ಎಂದರೆ ನಂಬುವವರು ಯಾರು? ನಾಟಕ ಇಲ್ಲಿಗೇ ಮುಗಿದಿಲ್ಲ. ಸರಕಾರ ಕೊಡುವ ಪ್ರಶಸ್ತಿಗಳ ಪಟ್ಟಿಯಲ್ಲಿ ಇತ್ತೀಚೆಗೆ ಗಲಭೆ ಎಬ್ಬಿಸಿ ಗುರುತಿಸಿಕೊಂಡ ಇನ್ನೂ ಹಲವಾರು ಪ್ರತಿಭಾವಂತರಿದ್ದಾರೆ. ಅವರಿಗೆಲ್ಲ ಒಂದೊಂದು ಪ್ರಶಸ್ತಿಫಲಕ, ಚೆಕ್ಕುಗಳನ್ನು ಕೊಡದಿದ್ದರೆ ಸಿದ್ದರಾಮಯ್ಯನವರ ಸರಕಾರ ಬಿಡಿಸಿಕೊಳ್ಳಲಾರದ ಋಣಭಾರದಲ್ಲಿ ಬಿದ್ದುಹೋಗುತ್ತದೆ. ಹಾಗಾಗಿ, ಇನ್ನೂ ಎರಡುವರ್ಷ ಇರುವ ಅಧಿಕಾರದ ಬಲ ಬಳಸಿ, ಅಂತಹ ಬಹುಪರಾಕಿ ಬಡಪಾಯಿಗಳಿಗೆ ಬೇಕುಬೇಕಾದ ಪ್ರಶಸ್ತಿಗಳನ್ನು ಈ ಸರಕಾರ ದಯಪಾಲಿಸುತ್ತದೆ. ಇಂತಹ ಪ್ರಶಸ್ತಿಗಳನ್ನು ಹೊಡೆದುಕೊಳ್ಳುವ ಬುದ್ಧಿಜೀವಿಗಳಿಗೆ, ತಾವುಣ್ಣುವ ಅನ್ನದಲ್ಲಿ ಬಡಜನರ ಬೆವರಿನ ಋಣವೂ ಇದೆಯೆಂಬ ಜ್ಞಾನೋದಯವಾಗಿದ್ದರೆ ಎಷ್ಟು ಒಳ್ಳೆಯದಿತ್ತು!

24 ಟಿಪ್ಪಣಿಗಳು Post a comment
 1. ಏಪ್ರಿಲ್ 28 2015

  (Sorry, could not write in Kannada as my browser/font issues, but could not resist the temptation to comment) Conveyed the stuff in a very humorous way. Kudos to your writing skills.

  ಉತ್ತರ
  • rohithmath
   ಏಪ್ರಿಲ್ 28 2015

   ಲೇಖನ ಮೆಚ್ಚಿದ್ದಕ್ಕೆ ಧನ್ಯವಾದಗಳು, ಶ್ರೀವತ್ಸ ಅವರೇ.

   ಉತ್ತರ
 2. Nagshetty Shetkar
  ಏಪ್ರಿಲ್ 28 2015

  ಅನಂತಮೂರ್ತಿ ಅವರನ್ನು ಬಸವಶ್ರೀ ಪ್ರಶಸ್ತಿಗೆ ಆಯ್ಕೆ ಮಾಡಿದ ಕಮಿಟಿಯ ಚೇರ್ಮನ್ ಆಗಿದ್ದವರು ನಮ್ಮ ದರ್ಗಾ ಸರ್. ಅವರೂ ಬಸವಶ್ರೀ ಪ್ರಶಸ್ತಿ ವಿಜೇತರೇ ಆಗಿದ್ದಾರೆ. ಕಲ್ಬುರ್ಗಿ ಸರ್ ಅವರೂ ಕೂಡ ಪ್ರಶಸ್ತಿಗೆ ಅರ್ಹರು. ನಿಡುಮಾಮಿಡಿ ಸ್ವಾಮಿಗಳು ಸಮಾಜಮುಖಿ ಕೆಲಸ ಮಾಡಿದ್ದಾರೆ, ಉಡುಪಿ ಕೃಷ್ಣ ಮಠಗಳ ಅಧೀಶರು ನಿಡುಮಾಮಿಡಿ ಅವರಿಂದ ಕಲಿಯಬೇಕು. ಪೇಜಾವರ ಸ್ವಾಮಿಗಳಿಗೆ ಬಸವಶ್ರೀ ಪ್ರಶಸ್ತಿ ಕೊಟ್ಟಿದ್ದರೆ ನೀವುಗಳು ಅದು ನೊಬೆಲ್ ಗಿಂತ ಮೇಲುಮಟ್ಟದ್ದು ಅಂತ ಸಾಧಿಸುತ್ತಿದ್ದಿರಿ.

  ನೋಡಿ: http://goo.gl/sxTkEK

  ಉತ್ತರ
  • rohithmath
   ಏಪ್ರಿಲ್ 28 2015

   ಎಲ್ಲ ವಾದಗಳಿಗೂ ಉಡುಪಿ ಸ್ವಾಮಿಗಳನ್ನು ಎಳೆದುಕೊಂಡು ಬರುವ ಶೇಟ್ಕರ್ ಸಾಹೇಬರೇ, ಇನ್ನಾದರೂ ಆ ಸ್ವಾಮಿಗಳನ್ನು ನಿಮ್ಮ ತಲೆಯಿಂದ ಕೆಳಗಿಳಿಸಿ. ಹಾಗೆ ಸದಾ ತಲೆಯಲ್ಲಿ ಹೊತ್ತು ತಿರುಗುವುದು ನಿಮ್ಮ ಬೆನ್ನಿಗೆ ಒಳ್ಳೆಯದಲ್ಲ.

   ನಾನು “ಉಡುಪಿಯ ಸ್ವಾಮಿಗಳಿಗೆ ಆ ಪ್ರಶಸ್ತಿ ಸಿಕ್ಕಿದ್ದರೆ ಅದು ನೊಬೆಲ್ ಗಿಂತಲೂ ಮೇಲ್ಮಟ್ಟದ್ದು” ಎಂದು ಸಾಧಿಸುತ್ತಿದ್ದೆ ಎಂದು ನಿಮಗೆ ಕನಸು ಬಿದ್ದದ್ದು ಯಾವಾಗ? ಇಲ್ಲದ್ದನ್ನು ಊಹಿಸಿಕೊಂಡು ಕೊರಗುವುದೂ ಬುದ್ಧಿಜೀವಿಗಳ ಆರೋಗ್ಯಕ್ಕೆ ಒಳ್ಳೆಯದಲ್ಲ.

   ಇನ್ನು “ದರ್ಗಾ ಸರ್” ವಿಚಾರ. ಅವರಿಗೆ ನೈತಿಕತೆ ಅನ್ನುವುದು ಇದ್ದಿದ್ದರೆ, ತನಗೆ ಸಿಕ್ಕ ಪ್ರಶಸ್ತಿಯನ್ನೂ ಹತ್ತುಲಕ್ಷ ಮೊತ್ತವನ್ನೂ, ತಾನದಕ್ಕೆ ಅರ್ಹನಲ್ಲವೆಂದು ತಿಳಿದು ವಾಪಸು ಮಾಡಬೇಕಿತ್ತು. ಅದು ಬಿಟ್ಟು, ಅನಂತಮೂರ್ತಿಗಳಿಂದ ಹತ್ತುಲಕ್ಷ ವಾಪಸು ಮಾಡಿಸುತ್ತೇನೆ ಎನ್ನುತ್ತಾರಲ್ಲ, ಎಂಥಾ ಕಿಲಾಡಿ ನಿಮ್ಮ ಗುರುಗಳು!

   ಉತ್ತರ
   • Nagshetty Shetkar
    ಏಪ್ರಿಲ್ 28 2015

    ” ಅನಂತಮೂರ್ತಿಗಳಿಂದ ಹತ್ತುಲಕ್ಷ ವಾಪಸು ಮಾಡಿಸುತ್ತೇನೆ ಎನ್ನುತ್ತಾರಲ್ಲ, ಎಂಥಾ ಕಿಲಾಡಿ ನಿಮ್ಮ ಗುರುಗಳು!”

    ತಮ್ಮ ಗ್ರಹಿಕೆ ಸರಿಯಿಲ್ಲ. ದರ್ಗಾ ಸರ್ ಅವರು ಹೇಳಿದ್ದನ್ನು ತಪ್ಪಾಗಿ ಅರ್ಥೈಕೆ ಮಾಡಿದ್ದೀರಿ. ದರ್ಗಾ ಸರ್ ಅವರು “ನನ್ನ ವಾದ ತಪ್ಪಾಗಿದ್ದರೆ, ಅನಂತಮೂರ್ತಿ ಅವರು ಪಡೆದ ಪುರಸ್ಕಾರದ ಹತ್ತು ಲಕ್ಷ ರೂಪಾಯಿ­ಗಳನ್ನು ನಾನೇ ಸರ್ಕಾರಕ್ಕೆ ಹಿಂದಿರುಗಿ­ಸುವ ವಿಚಾರಕ್ಕೆ ಬದ್ಧನಾಗಿದ್ದೇನೆ” ಅಂತ ಹೇಳಿದ್ದಾರೆ. ಅಂದರೆ ತನ್ನ ಜೇಬಿನಿಂದಲೇ ಅನಂತಮೂರ್ತಿ ಸರ್ ಅವರಿಗೆ ಸಂದ ಮೊತ್ತವನ್ನು ತುಂಬಿಸಿ ಕೊಡುತ್ತೇನೆ ಅಂತ ಹೇಳಿದ್ದಾರೆ. ಇದರಲ್ಲಿ ಕಿಲಾಡಿತನ ಎಲ್ಲಿದೆ? ತನ್ನ ಪ್ರಾಮಾಣಿಕತೆಯನ್ನು ಒರೆಗೆ ಇಟ್ಟಿದ್ದಾರೆ. ನೀವು ದರ್ಗಾ ಸರ್ ಅವರನ್ನು ಚೀಪ್ ಮಾಡಲು ನಿಮ್ಮ ಪ್ರಾಮಾಣಿಕತೆಯನ್ನು ಅಡ ಇಟ್ಟಿದ್ದೀರಿ!

    ಉತ್ತರ
 3. Ravi kashikar
  ಏಪ್ರಿಲ್ 28 2015

  ರೋಹಿತ್ ಅವರೇ ಸಮಯೋಚಿತ ಲೇಖನ.ಇನ್ನುಮೇಲೆ ಆದರೂ ಬುದ್ದಿಜೀವಿಗಳಿಗೆ ಬುದ್ದಿ ಬರಲಿ

  ಉತ್ತರ
  • rohithmath
   ಏಪ್ರಿಲ್ 28 2015

   ಬುದ್ಧಿಜೀವಿಗಳಿಗೆ ಬುದ್ಧಿ??! ಏನೇ ಇರಲಿ, ನಿಮ್ಮ ಹಾರೈಕೆಯೇ ನನ್ನದೂ ಕೂಡ. 🙂

   ಉತ್ತರ
 4. ಏಪ್ರಿಲ್ 28 2015

  @Nagshetty Shetkar avare, yaaru sir idu Darga sir, ee level marketing maadthiraa (nimma ella comment galalli avara prasthaapa, idde irutthe), swalpa avara lekhana gala kondi iddare kalisi,Vichaara Dhaare hegide antha thilidukolluva.

  ಉತ್ತರ
  • Nagshetty Shetkar
   ಏಪ್ರಿಲ್ 28 2015

   ದರ್ಗಾ ಸರ್ ಅವರು ಕನ್ನಡದ ಖ್ಯಾತ ಬಂಡಾಯ ಸಾಹಿತಿ, ಪತ್ರಕರ್ತ, ವಚನ ವಿದ್ವಾಂಸ ಹಾಗೂ ಪ್ರಜ್ಞಾವಂತ ಹೋರಾಟಗಾರ. ಬಸವಶ್ರೀ ಹಾಗೂ ರಾಜ್ಯೋತ್ಸವ ಪ್ರಶಸ್ತಿ ವಿಜೇತ ಕಾಯಕಯೋಗಿ. ಅವರ ಚಿಂತನೆಯ ಸ್ಯಾಂಪಲ್ ಅನ್ನು ಇಲ್ಲಿ ನೋಡಬಹುದು:
   http://goo.gl/5hfqfI
   http://goo.gl/34kUDa
   http://goo.gl/VuTzcW

   ಉತ್ತರ
  • rohithmath
   ಏಪ್ರಿಲ್ 28 2015

   ಅಲ್ಲಿ “ದರ್ಗಾ ಸಾರ್” ಬಳಸುವ ಭಾಷೆಗೂ ಇಲ್ಲಿ ಶೇಟ್ಕರ ಸಾಹೇಬರು ಬಳಸುವ ಭಾಷೆಗೂ ಎಷ್ಟೊಂದು ಹೋಲಿಕೆ ಎಂದರೆ, ಇಬ್ಬರೂ ಒಂದೇ ವ್ಯಕ್ತಿಯಾ ಅನ್ನುವಷ್ಟು!! ಬಹುಶಃ ಗುರುಗಳನ್ನು ಅರೆದು ಕುಡಿದದ್ದರಿಂದ ಶಿಷ್ಯನ ಭಾಷೆ ಹಾಗಿರಬಹುದು. (ಇದು complaint ಅಲ್ಲ complement, ಶೇಟ್ಕರ್ ಸಾಹೇಬರೇ!)

   ಉಳಿದವರು Read between the lines ಮಾಡಬಹುದು. 🙂

   ಉತ್ತರ
   • Nagshetty Shetkar
    ಏಪ್ರಿಲ್ 28 2015

    Admit you twisted Darga Sir’s words and ask apologies. Tactic of changing topic not working my friend.

    ಉತ್ತರ
    • rohithmath
     ಏಪ್ರಿಲ್ 29 2015

     ಹಾಗೆಯೇ ಮಿಸ್ಟರ್ ಶೇಟ್ಕರ, ನಿಮ್ಮ ಪ್ರತಿಕ್ರಿಯೆಯಲ್ಲಿ ಉಡುಪಿ ಮಠಾಧೀಶರನ್ನು ಎಳೆದು ತಂದು “ಅವರಿಗೆ ಪ್ರಶಸ್ತಿ ಹೋಗಿದ್ದರೆ ಅದನ್ನು ನೊಬೆಲ್ ಗಿಂತಲೂ ದೊಡ್ಡ ಪ್ರಶಸ್ತಿ ಎಂದು ಸಂಭ್ರಮಿಸುತ್ತಿದ್ದಿರಿ” ಎಂದು ನಾನು ಹೇಳದ, ಮಾಡದ ಕೆಲಸವನ್ನೂ ಊಹಿಸಿ ನನ್ನ ತಲೆಗೆ ಕಟ್ಟಿರುವ ತಾವೂ ತಮ್ಮ ತಿರುಚಿದ ಬುದ್ಧಿವಂತಿಕೆಗೆ ಕ್ಷಮೆ ಕೇಳಬೇಕು ಎಂಬ ಬುದ್ಧಿ ಇದ್ದರೆ ಒಳ್ಳೆಯದು. ಬೇರೆಯವರ ತಪ್ಪು ಹುಡುಕಿ ತೆಗೆದು ಕ್ಷಮೆ ಸಂಗ್ರಹಿಸುವ ತಮಗೆ ಆ ರೂಲ್ಸು ಅಪ್ಲೈ ಆಗೋದಿಲ್ಲವಾ? ಅಥವಾ ನೀವು ಎಲ್ಲ ನಿಯಮಗಳಿಗೆ ಅತೀತರಾದ ಜಗದ್ಗುರು ಎಂದು ಭಾವಿಸಿದ್ದೀರೋ?

     ಉತ್ತರ
  • ವಿಜಯ್ ಪೈ
   ಏಪ್ರಿಲ್ 29 2015

   @ಶ್ರೀವತ್ಸ
   [ಅವರ ಚಿಂತನೆಯ ಸ್ಯಾಂಪಲ್ ಅನ್ನು ಇಲ್ಲಿ ನೋಡಬಹುದು:]
   ಪ್ರಯಾಣ ಭತ್ಯೆ, ಊಟ-ವಸತಿ, ಸಣ್ಣದೊಂದು ಸನ್ಮಾನ ಮಾಡಿದರೆ ಕಾಯಕಯೋಗಿಗಳು ನಿಮ್ಮ ಊರಿಗೂ ಬಂದು ಫುಲ್ ವರ್ಶನ್ ಪ್ರವಚನ ಪ್ರಸಾದಿಸುತ್ತಾರೆ.

   ಉತ್ತರ
 5. WITIAN
  ಏಪ್ರಿಲ್ 29 2015

  ನನಗೆ ರಂಜಾನ್ ದರ್ಗಾ ಅವರ ಬಗ್ಗೆ ನಾಗಶೆಟ್ಟಿ ಶೇತ್ಕರ್ ಗೆ ಇರುವ ಅಂಧ ಭಕ್ತಿಯಿಲ್ಲ, ಬದಲಿಗೆ ವಚನಗಳನ್ನು ತಮ್ಮ ಮಾರ್ಕ್ಸ್ ವಾದದ ಮೂಗಿನ ನೇರಕ್ಕೇ ನೋಡುವ ಅವರ ದೃಷ್ಟಿಕೋಣಕ್ಕೆ ಕಿರಿಕಿರಿ ಅನ್ನಿಸುತ್ತದೆ. ಇದನ್ನು ನನ್ನ, ಮಾಡರೇಟರ್ ರ ವಜ್ರಾಘಾತಕ್ಕೆ ತುತ್ತಾಗಿ ಡಿಲೀಟ್ ಆದವುಗಳನ್ನೂ ಒಳಗೊಂಡ, ಹಲವು ಪ್ರತಿಕ್ರಿಯೆಗಳಲ್ಲಿ ನೋಡಿರಬಹುದು. ಆದರೆ, ರೋಹಿತ್ ಅವರೆ, ನಿಮ್ಮ ಪ್ರತಿಕ್ರಿಯೆಯಲ್ಲಿ ನೀವು ಮರೆತೋ, ಅಥವಾ ಉದ್ದೇಶಪೂರ್ವಕವಾಗಿಯೋ, ರಂಜಾನ್ ದರ್ಗಾ ಅವರ ಹೇಳಿಕೆಯನ್ನು ತಿರುಚಿದ್ದೀರಿ. ಇದಕ್ಕೆ ಒಂದು ಕ್ಷಮೆ ಕೇಳಿದರೆ ನೀವು ಸಣ್ಣವರಾಗುವುದಿಲ್ಲ. ಜ್ಞಾನಿಯಾಗಲು ಇಚ್ಛಿಸಿದವನು ಸತ್ಯಸಂಧನೂ ಆಗಿರಬೇಕು.

  ಉತ್ತರ
  • rohithmath
   ಏಪ್ರಿಲ್ 29 2015

   ರಂಜಾನ್ ದರ್ಗಾ ಅವರ ಬಗ್ಗೆ ನನಗೆ ಪ್ರೀತಿ-ದ್ವೇಷ ಎರಡೂ ಇರಲಿಲ್ಲ. ಆದರೆ ಈ ಶೇಟ್ಕರ ಎಂಬ ಅಭಿಮಾನಿಯ ನಡವಳಿಕೆಯಿಂದಾಗಿ ಸದ್ಯಕ್ಕೆ ಹೇವರಿಕೆ ಹುಟ್ಟಿದೆ. ಇನ್ನು ಬಸವ ಪ್ರಶಸ್ತಿಯ ವಿಚಾರದಲ್ಲಿ – ದರ್ಗಾಗೆ ಬಸವ ಪ್ರಶಸ್ತಿ ಹೋದದ್ದು – ತಪ್ಪು ಎಂಬ ನನ್ನ ಮಾತಿಗೆ ನಾನು ಈಗಲೂ ಬದ್ಧ. ಅದೊಂದು ಅಪಾತ್ರದಾನ. ಕೇವಲ ಒಂದು ಸಿದ್ಧಾಂತ, ತತ್ವವನ್ನೇ ಹಿಡಿದುಕೊಂಡು ಇಡೀ ಜಗತ್ತು ಅದರ ಸುತ್ತಲೇ ತಿರುಗುತ್ತದೆ ಎಂಬ ಭ್ರಮೆ ಬೆಳೆಸಿಕೊಂಡ ಈ ಬುದ್ಧಿಜೀವಿಗಳ ಬಗ್ಗೆ ನನಗೆ ಮರುಕ ಇದೆ.

   ಇನ್ನು ಶೇಟ್ಕರ ಸಾಹೇಬರು ಕ್ಷಮೆ ಬೇಕು ಎಂದು ಒತ್ತಾಯಿಸಿದ್ದಾರೆ. ಅವರಿಗಾಗಿ “Sorry”. ಬೇಕಾದರೆ ಇನ್ನೊಂದು “Sorry” – ದರ್ಗಾ ಅವರಿಗೂ ಕಳಿಸಿ.

   ಉತ್ತರ
   • Nagshetty Shetkar
    ಏಪ್ರಿಲ್ 29 2015

    Apology noted.

    ಉತ್ತರ
 6. ಏಪ್ರಿಲ್ 29 2015

  ಬಸವ ಪ್ರಶಸ್ತಿಯ ಕುರಿತಾದ ಬುಜೀಗಳ ಮತ್ತು ವಿರೋಧೀ ಸನಾತನಿಗಳ ನಡುವಣ ಭೀಕರ ವಾಕ್ಸಮರಕ್ಕೆ ಮೂಲವಾದ ಹತ್ತು ಲಕ್ಷದ ಇಡುಗಂಟೇ ನಿನಗೆ ಲಕ್ಷ ಲಕ್ಷ ನಮನ ! ನಿನಗಾಗಿ ಹೋರಾಡುವ ಎರಡೂ ಕೋ(ಬ)ಣಗಳ ಮಧ್ಯೆ “ಮಿತ್ತು”ವಿಗಾಹಾರವಾಗುತ್ತಿರುವ ಬಡ ತೆರಿಗೆದಾರನೆಂಬ “ಗಿಡ”ದ ಬವಣೆ ಉಲ್ಬಣಿಸುವ ಮತ್ತೂ ಹಲವು ಇಂಥದೇ ಯೋಜನೆಗಳು ಜಾರಿಯಾದರೆ ಕೈಲಾಸ ಬಿನ್ನಾಣಮಕ್ಕು!!!

  ಉತ್ತರ
  • rohithmath
   ಏಪ್ರಿಲ್ 29 2015

   ಹತ್ತು ಲಕ್ಷದ ಇಡುಗಂಟಿಗಾಗಿ ಹೋರಾಡಿದ ಒಂದು “ಸನಾತನಿ ಕೋಣ”ದ ಹೆಸರನ್ನಾದರೂ ಹೇಳುತ್ತೀರಾ? ತಿಳಿಯುವ ಕುತೂಹಲ ಅಷ್ಟೆ.

   ಉತ್ತರ
 7. ಏಪ್ರಿಲ್ 29 2015

  @Nagashetty Shetkar, nannadondu prashne, dayavitty Darga sir ge muttisibidi. Basavannanavara samaajika kranthi bagge eradu maathilla, ellaroo oppalebekaaduddu. Adare ee kraanthige yashassu siktha? ilva? Yashassu Sikkide andre innu ishtu dalitaru yaake ulukondiddare, avaranna mukhya vaahinige tharakke enaadroo ade-thade itta? matthe Lingayatharanna upper caste yaake maadi ittiddare? yaake ellarannu Lingayatha pangadakke thandu kranthi munduvarasalilla. Idarartha Basanvannanavara chinthane chennagidroo, marketing strategy fail aytha?

  ಉತ್ತರ
 8. ವಿಜಯ್ ಪೈ
  ಏಪ್ರಿಲ್ 29 2015

  ಮೆಚ್ಚುವಂತಹ ಲೇಖನ. ಸರಕಾರಿ ಗಂಜಿ ಗಿರಾಕಿಗಳ, ಬಕೆಟ್ ವೀರರ ಬಟ್ಟೆ ಬಿಚ್ಚಿದ್ದೀರಿ!.. ಈ ವೀರರು ಯಾವ ಪ್ರಶಸ್ತಿಯನ್ನೂ ಬೇಡ ಅನ್ನುವುದಿಲ್ಲ.. ‘ಕಾಯಕಜೀವಿ’ಗಳಾದ ಇವರು ಕಂಬ ಸುತ್ತಿ, ಬೆನ್ನು ಕೆರೆದು, ಬೆನ್ನು ತಟ್ಟಿ ಬೆವರು ಸುರಿಸಿ ಪ್ರಶಸ್ತಿ ಗಳಿಸುತ್ತಾರೆ. ಅನವರತ ಶ್ರಮವಿದೆ ಇದರ ಹಿಂದೆ!

  ಉತ್ತರ
 9. T.M.Krishna
  ಮೇ 4 2015

  ಬುದ್ಧಿಜೀವಿಗಳು, ಪ್ರಗತಿಪರರು ಮುಂತಾದ, ಲೇಖಕರ ಮನೋಧರ್ಮಕ್ಕೆ ಸರಿಕಾಣದವರನ್ನೆಲ್ಲಾ ಪಟ್ಟಿಮಾಡಿ “ಸಮಾಜದಲ್ಲಿ ಅಶಾಂತಿ ಉಂಟುಮಾಡುವವರು, ಪ್ರಶಸ್ತಿಗಳಿಗಾಗಿಯೇ ಬಾಯಿತೆರೆದುಕೊಂಡು ಕುಳಿತಿರುವವರು, ಅದಕ್ಕಾಗಿಯೇ ಲಾಬಿ ಮಾಡುವವರು ಇತ್ಯಾದಿಯಾದ ಈ ಲೇಖನದ ಏಕಪಕ್ಷೀಯ ತೀರ್ಪಿನಿಂದ “ಕೆಲವರಿಗೆ” ಮೈ ಕೆರೆತದ ಪರಮಾನಂದವಾಗಿರಬಹುದೇ ಹೊರತು, ಹಳದಿ ಕನ್ನಡಕ ಧರಿಸಿಯೇ ಸಮಾಜವನ್ನು ನೋಡಲು ಸಾಧ್ಯವಾಗಿರುವ ಲೇಖಕರ ಕಣ್ಣಿನ ಸ್ಥಿತಿಯ ಬಗ್ಗೆ ಬಹುಜನರು ಮರುಗುವ ಸಂಭವವಿದೆ.

  ಉತ್ತರ
 10. Devu Hanehalli
  ಮೇ 15 2015

  Dear Rohit, Namaskara. I know u as a wonderful and excellent science-maths writer. (I am an ardent follower of your articles.) This is quite a big revelation. Nice and `educative’ write-up. Unfortunately, it is always `provocative’ for the so-called-pragatipara perverts! May that non-existent god help them!! But beware of one thing, they are dangerous. Worse than street goondas and underworld dons. This one article may put u & your family in jeopardy. Take care.

  Devu Hanehalli

  ಉತ್ತರ
  • rohithmath
   ಮೇ 15 2015

   ದೇವು ಹನೇಹಳ್ಳಿಯವರೆ, ನೀವು ಇಲ್ಲಿ ಸಿಕ್ಕಿದ್ದು ತುಂಬಾ ಸಂತೋಷ. ನಿಮ್ಮ ಹಾರೈಕೆ ನನ್ನ ರಕ್ಷೆಗಿರಲಿ.
   – ರೋಹಿತ್.

   ಉತ್ತರ

ನಿಮ್ಮ ಅನಿಸಿಕೆ...

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Note: HTML is allowed. Your email address will never be published.

Subscribe to comments