ವಿಷಯದ ವಿವರಗಳಿಗೆ ದಾಟಿರಿ

ಏಪ್ರಿಲ್ 29, 2015

3

ನಾಡು-ನುಡಿ : ಮರುಚಿಂತನೆ – ಹಿಂದೂ ಶಬ್ದಕ್ಕೆ ನಕಾರಾತ್ಮಕ ಅರ್ಥವೇಕೆ?

‍ನಿಲುಮೆ ಮೂಲಕ

– ಪ್ರೊ.ರಾಜಾರಾಮ್ ಹೆಗಡೆ
ಪ್ರಾಧ್ಯಾಪಕರು, ಇತಿಹಾಸ ಮತ್ತು ಪ್ರಾಕ್ತನಶಾಸ್ತ್ರ ವಿಭಾಗ, ಕುವೆಂಪು ವಿ.ವಿ

ಹಿಂದೂದಲಿತರನ್ನು ಹಿಂದೂ ಸಮಾಜದ ಒಳಗೆ ತರಬೇಕೆಂಬ ಪ್ರತಿಪಾದನೆ ಕಳೆದ ನೂರಾರು ವರ್ಷಗಳಿಂದ ನಡೆದು ಬಂದಿದೆ. ಹಿಂದೂ ಸಮಾಜದ ಐಕ್ಯತೆಯನ್ನು ಸಾಧಿಸಬೇಕೆನ್ನುವ ರಾಷ್ಟ್ರೀಯ ನಾಯಕರೆಲ್ಲರೂ ಇಂಥ ಕಾರ್ಯಕ್ರಮಗಳ ಮಹತ್ವವನ್ನು ಒಪ್ಪಿದ್ದಾರೆ. ಮತ್ತೊಂದೆಡೆ ಈ ಕಾರ್ಯಕ್ರಮವನ್ನು ಒಂದು ಹುನ್ನಾರವೆಂಬಂತೆ ನೋಡುವ ಹಾಗೂ ಆ ಕಾರಣದಿಂದ ಅದನ್ನು ತಿರಸ್ಕರಿಸುವ ಪ್ರಯತ್ನಗಳೂ ನೂರಾರು ವರ್ಷಗಳಿಂದ ನಡೆದಿವೆ. ಹುನ್ನಾರವೇಕೆಂದರೆ, ಜಾತಿ ವ್ಯವಸ್ಥೆಯ ಹಿಂದೂ ಸಮಾಜದೊಳಗೆ ದಲಿತರನ್ನು ಮತ್ತೆ ಸೇರಿಸಿ ಶೋಷಿಸುವ ಉದ್ದೇಶದಿಂದ ಸಂಪ್ರದಾಯಸ್ಥ ಹಿಂದೂಗಳು ಈ ಕಾರ್ಯಕ್ರಮವನ್ನು ಹಾಕಿಕೊಂಡಿದ್ದಾರೆ ಎಂಬ ಆರೋಪ. ಆದರೆ ಜಾತಿ ವ್ಯವಸ್ಥೆಯು ಹಿಂದೂ ಸಮಾಜದ ಲಕ್ಷಣವಾದರೆ, ಹಾಗೂ ದಲಿತರು ಹಿಂದೂ ಸಮಾಜದೊಳಗೆ ಇಲ್ಲ ಅಂತಾದರೆ ಅವರು ಇದುವರೆಗೆ ಜಾತಿ ವ್ಯವಸ್ಥೆಗೆ ಒಳಪಟ್ಟಿಲ್ಲ ಎಂದು ಇಂಗಿತವೆ? ಅಥವಾ ಜಾತಿವ್ಯವಸ್ಥೆಯ ಹೊರಗಿದ್ದೂ ಅವರನ್ನು ಸಾವಿರಾರು ವರ್ಷಗಳ ವರೆಗೆ ಶೋಷಿಸಲು ಹಿಂದೂಗಳಿಗೆ ಸಾಧ್ಯವಾಗಿದ್ದೇ ಹೌದಾದಲ್ಲಿ ಆ ಕೆಲಸವನ್ನೇ ಮಾಡಲು ಹಿಂದೂ ಸಮಾಜದೊಳಗೆ ಅವರನ್ನು ಹೊಸತಾಗಿ ಸೇರಿಸಿಕೊಳ್ಳುವ ಅಗತ್ಯವೇಕೆ? ಒಟ್ಟಿನಲ್ಲಿ ಇದು ಒಂದು ಒಗಟಾಗಿ ಬಿಡುತ್ತದೆ.

ಈ ಒಗಟು ಏಕೆ ಹುಟ್ಟುತ್ತದೆಯೆಂದರೆ ನಮ್ಮ ಸಂಸ್ಕೃತಿಯ ಇತಿಹಾಸವನ್ನು ಕಟ್ಟುವಾಗ ಪರಸ್ಪರ ಸುಸಂಬದ್ಧವಲ್ಲದ ಅನೇಕ ವಿವರಗಳನ್ನು ಒಟ್ಟಿಗೆ ತರಲಾಗಿದೆ.  ಅವುಗಳಲ್ಲಿ ಒಂದು ಹಿಂದೂಯಿಸಂ ಎಂಬ ರಿಲಿಜನ್ನಿನ ಕಲ್ಪನೆ, ಮತ್ತೊಂದು ಆರ್ಯರ ಆಕ್ರಮಣದ ಕಥೆ. ಭಾರತದಲ್ಲಿ ಹಿಂದೂಯಿಸಂ ಎಂಬ ರಿಲಿಜನ್ನಿದೆ, ಅದಕ್ಕೆ ಬ್ರಾಹ್ಮಣರು ಪುರೋಹಿತಶಾಹಿಗಳು, ಇದರಲ್ಲಿ ಮೂರ್ತಿಪೂಜೆ ಜಾತಿ ವ್ಯವಸ್ಥೆಗಳಂಥ ಅನಿಷ್ಟ ಆಚರಣೆಗಳಿವೆ ಎಂಬ ಕಥೆ 19ನೆಯ ಶತಮಾನದಲ್ಲೇ ಗಟ್ಟಿಯಾಯಿತು. ಪಾಶ್ಚಾತ್ಯರು ಕ್ಯಾಥೋಲಿಕ್ ಚರ್ಚಿನಂತೇ ಇದೊಂದು ಭ್ರಷ್ಟವಾದ ರಿಲಿಜನ್ನು ಎಂದು ಭಾವಿಸಿದ್ದರು. ಆ ಸಂದರ್ಭದಲ್ಲಿ ರಾಜಾ ರಾಮಮೋಹನರಾಯರಂಥವರು ಹಿಂದೂಯಿಸಂ ಮೂಲತಃ ಉದಾತ್ತವಾದ ರಿಲಿಜನ್ನಾಗಿದೆ ಎಂಬ ನಿರೂಪಣೆಯನ್ನು ಗಟ್ಟಿಮಾಡತೊಡಗಿದರು.ಈ ನಿರೂಪಣೆಗೆ ಪ್ರೊಟೆಸ್ಟಾಂಟ್ ಕ್ರಿಶ್ಚಿಯಾನಿಟಿಯ ಏಕದೇವತಾ ತತ್ವವೇ ಆಧಾರವಾಯಿತು.ಅಂದರೆ ಹಿಂದೂಯಿಸಂನ ಶುದ್ಧ ರೂಪವು ವೇದಾಂತದಲ್ಲಿ ಇದೆ ಎಂದಾಯಿತು.

ಹತ್ತೊಂಭತ್ತನೆಯ ಶತಮಾನದಲ್ಲಿ ಆರ್ಯರ ಆಕ್ರಮಣದ ಕಥೆಗಳೂ ಗಟ್ಟಿಯಾದವು. ಆರ್ಯರೆಂಬ ಜನಾಂಗವು ಪ್ರಾಚೀನ ಕಾಲದಲ್ಲೇ ಭಾರತಕ್ಕೆ ಹೊರಗಿನಿಂದ ಬಂದಿದೆ, ಅವರೂ ಐರೋಪ್ಯರೂ ಒಂದೇ ಮೂಲದವರು, ಅವರು ಸಂಸ್ಕೃತವನ್ನು ಮಾತನಾಡುತ್ತಿದ್ದರು, ವೇದಗಳು ಆರ್ಯರ ರಿಲಿಜನ್ನಿನ ಪವಿತ್ರ ಗ್ರಂಥಗಳು, ಆರ್ಯರೇ ಭಾರತಕ್ಕೆ ಏಕದೇವೋಪಾಸನೆಯಂಥ ಉನ್ನತ ರಿಲಿಜನ್ನನ್ನು ತಂದವರು, ವರ್ಣವ್ಯವಸ್ಥೆಯಂಥ ಉನ್ನತ ಸಮಾಜ ಕಲ್ಪನೆಯನ್ನು ರೂಢಿಸಿದವರು, ಇಲ್ಲಿನ ಮೂಲನಿವಾಸಿಗಳಿಗೆ ನಾಗರೀಕತೆಯನ್ನು ಕೊಟ್ಟವರು, ಇತ್ಯಾದಿ ಕಥೆಗಳು ಇತಿಹಾಸದ ರೂಪದಲ್ಲಿ ಪ್ರಚಲಿತದಲ್ಲಿ ಬಂದವು. ಈ ಆರ್ಯರ ರಿಲಿಜನ್ನು ನಂತರ ಬ್ರಾಹ್ಮಣ ಪುರೋಹಿತರಿಂದಾಗಿ ಭ್ರಷ್ಟಗೊಂಡು ಮೂರ್ತಿಪೂಜೆ, ಮೂಢಾಚಾರಗಳು ಬೆಳೆದು ಇಂದಿನ ಹಿಂದೂಯಿಸಂ ಅಸ್ತಿತ್ವಕ್ಕೆ ಬಂದಿದೆ ಎಂಬ ನಿರೂಪಣೆಯು ಜನಪ್ರಿಯವಾಯಿತು. ಒಟ್ಟಿನಲ್ಲಿ ಹಿಂದೂಯಿಸಂ ಎಂಬುದು ಆರ್ಯರಿಗೆ, ಬ್ರಾಹ್ಮಣರಿಗೆ ಹಾಗೂ ಸಂಸ್ಕೃತಕ್ಕೆ ಸಮೀಕರಣವಾಯಿತು. ಹತ್ತೊಂಭತ್ತನೆಯ ಶತಮಾನದ ಎಲ್ಲಾ ಧಾರ್ಮಿಕ ಸುಧಾರಣಾವಾದಿಗಳೂ ಈ ಕಥೆಯನ್ನು ನಂಬಿದ್ದರು. ವಿದ್ಯಾವಂತ ಬ್ರಾಹ್ಮಣರು ಹೆಮ್ಮೆಯಿಂದ ಈ ಕಥೆಯನ್ನು ಹೇಳಿಕೊಂಡು ತಿರುಗಿದರು.
ಆದರೆ ಈ ಕಥೆಗಳ ಜೊತೆಗೇ ಆರ್ಯಪೂರ್ವ ಮೂಲನಿವಾಸಿಗಳ ಹಾಗೂ ದ್ರಾವಿಡ ಜನಾಂಗದ ಕಲ್ಪನೆ ಕೂಡ ಮೊಳಕೆಯೊಡೆದು ಹೆಮ್ಮರವಾಯಿತು.ಅಂದರೆ ಆರ್ಯರು ಭಾರತಕ್ಕೆ ಬರುವ ಕಾಲದಲ್ಲಿ ಇಲ್ಲಿ ಮೂಲನಿವಾಸಿಗಳು ಇದ್ದರು, ಆರ್ಯರು ಮೂಲನಿವಾಸಿಗಳನ್ನು ಸೋಲಿಸಿ ಅವರನ್ನು ಜಾತಿವ್ಯವಸ್ಥೆಗೆ ಒಳಪಡಿಸಿದರು. ಆರ್ಯರ ಪುರೋಹಿತರಾದ ಬ್ರಾಹ್ಮಣರು ಈ ವ್ಯವಸ್ಥೆಯನ್ನು ರೂಪಿಸಿ ಕಾನೂನುಗಳನ್ನು ರಚಿಸಿದವರು. ಇಂಥ ಮೂಲನಿವಾಸಿಗಳಲ್ಲಿ ದ್ರಾವಿಡರು ಪ್ರಮುಖರು. ಅವರ ಭಾಷೆ ಹಾಗೂ ಜನಾಂಗ ಇಂದಿಗೂ ದಕ್ಷಿಣ ಭಾರತದಲ್ಲಿ ಉಳಿದುಕೊಂಡು ಬಂದಿದೆ ಎಂಬುವೆಲ್ಲ ಈ ದ್ರಾವಿಡ ಜನಾಂಗದ ಕಥೆಯ ವಿಭಿನ್ನ ಎಳೆಗಳಾಗಿವೆ.

19ನೆಯ ಶತಮಾನದ ಮಧ್ಯಭಾಗದಲ್ಲಿ ಈ ಆರ್ಯ/ದ್ರಾವಿಡ ಜನಾಂಗಗಳ ಕಥೆಯನ್ನು ಆಧರಿಸಿ ಸಾಮಾಜಿಕ ಸಿದ್ಧಾಂತಗಳೂ, ಚಳವಳಿಗಳೂ, ಸಮುದಾಯಗಳ ಗುರುತುಗಳೂ ರೂಹುತಳೆದವು. ಜಾತಿ ವ್ಯವಸ್ಥೆಯ ಉಗಮದ ಕುರಿತು ಈ ಸಿದ್ಧಾಂತವೇ ಗಟ್ಟಿಯಾಯಿತು. ಅಂದರೆ ಆರ್ಯರ ವರ್ಣವ್ಯವಸ್ಥೆಯ ಮೂಲಕ ದಾಸ್ಯಕ್ಕೊಳಗಾದ ಮೂಲನಿವಾಸಿಗಳೇ ಶೂದ್ರರು ಎಂಬುದು. ವಸಾಹತುಕಾಲದ ಜನಗಣತಿಗಳಲ್ಲಿ ಇಲ್ಲಿನ ಸ್ಪೃಶ್ಯ ಜಾತಿಗಳನ್ನು ಬ್ರಾಹ್ಮಣ, ಕ್ಷತ್ರಿಯ, ವೈಶ್ಯ, ಶೂದ್ರ ಇತ್ಯಾದಿಯಾಗಿ ನೋಂದಾಯಿಸಲಾಯಿತು. ಈ ಪ್ರಕ್ರಿಯೆಯಲ್ಲಿ ಶೂದ್ರರೆಂಬುದಾಗಿ ಗುರುತನ್ನು ಪಡೆದವರು ಆರ್ಯರು ತಮ್ಮನ್ನು ಹಿಂದೂಯಿಸಂ ಹೆಸರಿನಲ್ಲಿ ದಾಸ್ಯಕ್ಕೊಳಪಡಿಸಿದ್ದಾರೆ, ಹಾಗಾಗಿ ಅದು ತಮ್ಮನ್ನು ಶೋಷಣೆಮಾಡುವ ರಿಲಿಜನ್ನು ಎಂಬುದಾಗಿ ಗ್ರಹಿಸಿದರು. ಹಿಂದೂಯಿಸಂನ ಸಂಸ್ಕೃತ ಗ್ರಂಥಗಳು ತಮ್ಮನ್ನು ದಾಸ್ಯಕ್ಕೊಳಪಡಿಸುವ ವರ್ಣ ವ್ಯವಸ್ಥೆಯನ್ನು ಪ್ರತಿಪಾದಿಸುತ್ತವೆ ಎಂದು ತಿಳಿದರು. ಆ ಕಾಲದಲ್ಲಿ ಶೂದ್ರ ಚಳವಳಿಯ ಹರಿಕಾರರಾದ ಫುಲೆಯವರ ಚಿಂತನೆಗಳಿಗೆ ಈ ನಿರೂಪಣೆಯೇ ಬುನಾದಿಯಾಗಿದೆ. ಅಸ್ಪೃಶ್ಯ ಜಾತಿಗಳು ವರ್ಣಸಮಾಜದಲ್ಲಿ ಒಳಗೊಳ್ಳದ, ಅಥವಾ ವರ್ಣಸಮಾಜದಿಂದ ಹೊರಹಾಕಿದ ಜಾತಿಗಳಾಗಿವೆ ಎಂಬ ನಿರೂಪಣೆ ಕೂಡ ಬೆಳೆಯಿತು. ಇಂಥ ಜಾತಿಗಳು ಈ ನೆಲದ ನಿಜವಾದ ಮೂಲನಿವಾಸಿಗಳಾಗಿದ್ದರು ಹಾಗೂ ಅವರು ಆರ್ಯ ಆಕ್ರಮಣದ ನಂತರ ಈ ಬಹಿಷ್ಕೃತ ಸ್ಥಿತಿಗೆ ಬಂದಿದ್ದಾರೆ ಎಂಬ ವಿವರಣೆಗಳು ಹುಟ್ಟಿಕೊಂಡವು. ಆದಿ ದ್ರಾವಿಡ, ಆದಿ ಕರ್ನಾಟಕ ಇತ್ಯಾದಿ ಹೆಸರುಗಳು ಉದಿಸಿದ್ದು ಹೀಗೆ.ಒಟ್ಟಿನಲ್ಲಿ ತಾವು ಆರ್ಯರಿಂದ ಹಾಗೂ ಅವರ ಹಿಂದೂ ಧರ್ಮದಿಂದ ಶೋಷಣೆಗೆ ಒಳಗಾಗಿರುವುದರಿಂದ ಈಗ ಹೀನಾಯ ಸ್ಥಿತಿಯಲ್ಲಿದ್ದೇವೆ ಎಂಬ ಐತಿಹಾಸಿಕ ವಿವರಣೆಯೇ ಸತ್ಯದ ಸ್ಥಾನವನ್ನು ಅಲಂಕರಿಸಿತು.

ಇದರ ಮುಂದಿನ ಹೆಜ್ಜೆಯಾಗಿ ಹಿಂದೂಯಿಸಂನ ಕರಾಳ ವ್ಯವಸ್ಥೆಯಿಂದ ವಿಮೋಚನೆಗಾಗಿ ಹೋರಾಡಿದ ದಲಿತ ಮುಂದಾಳುಗಳು ತಾವು ಹಿಂದೂಗಳಲ್ಲ ಎಂಬುದಾಗಿ ಭಾವಿಸತೊಡಗಿದರು.ಇತಿಹಾಸ ಪುರಾಣಗಳ ನಾಯಕರು ಆರ್ಯ ಆಕ್ರಮಣಕಾರರು, ಅವರ ವೈರಿಗಳೇ ದ್ರಾವಿಡ ಮುಂದಾಳುಗಳು, ಇಂದಿನ ಬ್ರಾಹ್ಮಣರು ಆರ್ಯರ ಪ್ರತಿನಿಧಿಗಳು ಎಂಬ ಹೇಳಿಕೆಗಳು ಭಾಷಣಗಳಲ್ಲಿ, ಬರಹಗಳಲ್ಲಿ ಸಾಮಾನ್ಯವಾಗಿ ಕೇಳತೊಡಗಿದವು.ಬ್ರಾಹ್ಮಣರು, ಬ್ರಾಹ್ಮಣ ಆಚರಣೆಗಳು ಹಾಗೂ ಸಂಸ್ಕೃತ ಭಾಷೆ, ವೇದ ಪುರಾಣಾದಿಗಳು, ಇವೆಲ್ಲವೂ ಪರಕೀಯ ಜನಾಂಗವೊಂದಕ್ಕೆ ಸೇರಿವೆ. ಅವರು ಭಾರತಕ್ಕೆ ಬಂದು ಇಲ್ಲಿನ ಮೂಲನಿವಾಸಿಗಳನ್ನು ಜಾತಿ ವ್ಯವಸ್ಥೆಗೆ ಬಂಧಿಸಲು ಹಾಗೂ ಅಸ್ಪೃಶ್ಯರನ್ನಾಗಿ ಮಾಡಲು ಕಾರಣವಾಗಿವೆ ಎಂಬುದು ಈ ಎಲ್ಲಾ ಚಳವಳಿಗಳ ಸೈದ್ಧಾಂತಿಕ ತಳಹದಿ. ಇಂದಿನ ಸಾಮಾಜಿಕ ಹೋರಾಟಗಾರರು ಹಾಗೂ ಪ್ರಗತಿಪರರು ಈ ಇತಿಹಾಸವನ್ನು ಬಳುವಳಿಯಾಗಿ ಪಡೆದಿದ್ದಾರೆ.

ಆರ್ಯ ಹಾಗೂ ದ್ರಾವಿಡ ಜನಾಂಗೀಯ ಸಿದ್ಧಾಂತಗಳು ಇಲ್ಲದಿದ್ದರೆ ಈ ಮೇಲಿನ ಯಾವ ವಾದಗಳು ಹುಟ್ಟಲಿಕ್ಕೂ ಸಾಧ್ಯವಿಲ್ಲ, ತರ್ಕಬದ್ಧತೆಯನ್ನು ಗಳಿಸಿಕೊಳ್ಳಲಿಕ್ಕೂ ಸಾಧ್ಯವಿಲ್ಲ ಎಂಬುದು ಈ ಮೇಲಿನ ಭಾಗದಲ್ಲಿ ಸ್ಪಷ್ಟವಾಗಿದೆ. ಆದರೆ ಇಂದು ಇತಿಹಾಸಕಾರರಾಗಲೀ, ಸಮಾಜ ಶಾಸ್ತ್ರಜ್ಞರಾಗಲೀ, ಆರ್ಯ/ದ್ರಾವಿಡ ಎಂಬವು ಭಾಷಾ ಗುಂಪುಗಳೇ ಹೊರತೂ ಜನಾಂಗಗಳಲ್ಲ ಎಂದು ತೀರ್ಮಾನಿಸಿದ್ದಾರೆ. ಮಾನವ ಶಾಸ್ತ್ರಜ್ಞರು ಜನಾಂಗ ಎಂಬ ಕಲ್ಪನೆಯೇ ಅವೈಜ್ಞಾನಿಕ ಎಂಬುದಾಗಿ ಮೂಲೆಗೆ ತಳ್ಳಿದ್ದಾರೆ. ಇನ್ನು ಹಿಂದೂಯಿಸಂ ಎಂಬುದೇ ಭಾರತದಲ್ಲಿ ಇಲ್ಲ ಎಂಬುದನ್ನೂ ವಿದ್ವಾಂಸರು ಮನಗಂಡಿದ್ದಾರೆ. ಅಂದರೆ ಈ ಮೇಲಿನ ನೂರಾರು ವರ್ಷಗಳ ಚರ್ಚೆಯು ಕೇವಲ ಗಾಳಿಯ ಗೋಪುರವೆಂಬುದು ಇಂದು ಅರಿವಾಗುತ್ತಿದೆ. ನಮ್ಮ ಸಾಮಾಜಿಕ ಕಳಕಳಿಗಳಿಗೆ ನಿಜದ ನೆಲೆ ತಪ್ಪಿಹೋಗಿದೆ. ನಿಜವಾದ ಸಮಸ್ಯೆಗಳ ಪರಿಹಾರವು ಮರೀಚಿಕೆಯಾಗಿದೆ. ಆದರೆ ಈ ಗಾಳಿಯು ಬಿತ್ತಿದ ವಿಷಬೀಜಗಳು ಮಾತ್ರ ಹೆಮ್ಮರವಾಗಿವೆ.

3 ಟಿಪ್ಪಣಿಗಳು Post a comment
  1. hemapathy
    ಏಪ್ರಿಲ್ 29 2015

    ಸಕಾರಾತ್ಮಕವಾಗಿ ಚಿಂತಿಸಲು ಬರೆದವರು, ನಕಾರಾತ್ಮವಾಗಿ ತೆಗೆದುಕೊಳ್ಳುವುದು/ನಡೆದುಕೊಳ್ಳುವುದು ಸಹಜ.

    ಉತ್ತರ
  2. hemapathy
    ಏಪ್ರಿಲ್ 29 2015

    ಸಕಾರಾತ್ಮಕವಾಗಿ ಚಿಂತಿಸಲು ಬರದವರಿಗೆ ಬೇರೆ ದಾರಿಯೇನಿದೆ?

    ಉತ್ತರ
  3. ವಾಸು.
    ಏಪ್ರಿಲ್ 29 2015

    ಮೊದಲನೆಯದಾಗಿ, ಆರ್ಯ ಎಂಬ ಶಬ್ಧದ ಮೂಲ ಏನು? ಋ ಗತೌ ಎಂಬ ಧಾತುವಿನಿಂದ ಅರ್ಯ ಶಬ್ಧದ ನಿರ್ಮಾಣವಾಗಿದೆ. ಇದರ ಅರ್ಥ ಪ್ರಗತಿ ಶೀಲ,ಎಂದು. ವೇದಗಳಲ್ಲಿ ಆರ್ಯಶಬ್ಧ ಸುಮಾರು 60 ಕ್ಕೂ ಹೆಚ್ಚು ಕಡೆ ಬಂದಿದೆ. ಎಲ್ಲೂ ಅದು ಜನಾಂಗೀಯ ಻ಅರ್ಥಕ್ಕೆ ಒಳಪಡದೆ, ಸಭ್ಯ, ಶ್ರೇಷ್ಟ, ಎಂಬ ಅರ್ಥಗಳೇ ಬಂದಿವೆ.
    ಬ್ರಿಟಿಷರು ಬರುವವರೆಗೂ ಆರ್ಯ -ದ್ರಾವಿಡ ವಿವಾದಗಳಿರಲಿಲ್ಲ. ಹಿಂದೂ ಸಮಾಜವನ್ನು ಒಡೆಯಲೆಂದೇ ರೂಪಿಸಿದ ಕಟ್ಟು ಕಥೆ ಇದು.. ಅಂದಹಾಗೆ ಭಾರತದ ಯಾವುದೇ ಸಾಹಿತ್ಯದಲ್ಲೂ ಆರ್ಯ ಎಂಬ ಶಬ್ಧಕ್ಕೆ ಶ್ರೇಷ್ಠ ಎನ್ನುವ ಅರ್ಥವೇ ಇದೆ. ಬಸವಣ್ಣನವರು ಅಯ್ಯಾ ಎಂದರೆ ಸ್ವರ್ಗ, ಎಲವೋ ಎಂದರೆ ನರಕ ಎಂದಿದ್ದಾರೆ. ಈ ಅಯ್ಯ ಶಬ್ಧವು ಆರ್ಯ ಶಬ್ಧದ ಕನ್ನಡ ರೂಪವಷ್ಟೇ.
    ಆರ್ಯರ ಅಕ್ರಮಣ ಸಿದ್ಧಾಂತವನ್ನು ಮೊದಲಬಾರಿ ತಿರಸ್ಕರಿಸಿದವರು ಆರ್ಯಸಮಾಜದ ಸಂಸ್ಥಾಪಕರಾದ ಸ್ವಾಮಿ ದಯಾನಂದರು. ಅವರೇನೂ ಇತಿಹಾಸಕಾರರಲ್ಲ. ಆದರೆ ವೇದಗಳ ಅಪರಿಮಿತ ಜ್ಞಾನ ಅವರದಾಗಿತ್ತು, ವೇದ ಮತ್ತು ವೇದಾದಿ ಸತ್ಯ ಸಾಹಿತ್ಯಗಳ ಅಧಾರದ ಮೇಲೆಯೇ ಈ ಆರ್ಯ ಅಕ್ರಮಣ ಸಿದ್ಧಾಂತವನ್ನು ತಮ್ಮ ಻ ಅಮೋಘ ಕ್ರಾಂತಿ ಗ್ರಂಥ ‘ ಸತ್ಯಾರ್ಥ ಪ್ರಕಾಶ” ದಲ್ಲಿ ಖಂಡಿಸಿದ್ದಾರೆ. ಅದನ್ನು ಎಲ್ಲರೂ ಓದಬೇಕು. ಈಗಂತೂ, ಈ ಆರ್ಯ ಆಕ್ರಮಣ ಸಿದ್ದಾಂತವನ್ನು ಯಾರೂ ಒಪ್ಪುತ್ತಿಲ್ಲ. ಸ್ವತಃ ಡಾ| ಅಂಬೇಡ್ಕರ್ ಇದನ್ನು ಒಪ್ಪಿರಲಿಲ್ಲ ಎನ್ನುವುದು ಇಲ್ಲಿ ಗಮನಿಸಬೇಕಾದ ಅಂಶ.
    ಹಿಂದೂ ಧರ್ಮದ ಮತ್ತೊಂದು ಹೆಸರು ಸನಾತನ ಧರ್ಮ, ಹಿಂದೂ ಎಂಬ ಪದ ಸಂಸ್ಕೃತ ಪದವಲ್ಲ. ಆ ಪದಕ್ಕೆ ಅರ್ಥವೂ ಇಲ್ಲ. ಯಾವುದೇ ಭಾರತೀಯ ಇತಿಹಾಸ ಗ್ರಂಥಗಳಲ್ಲಿ ಹಿಂದೂ ಶಬ್ಧದ ಉಲ್ಲೇಖವಿಲ್ಲ
    ನಮ್ಮ ಸನಾತನ ಧರ್ಮದ ತಿರುಳು ಇರುವುದು ವೇದಗಳಲ್ಲಿ. ವೇದಾಂತವೆಂದರೆ ಉಪನಿಷತ್ತುಗಳು. ಇವು ವೇದಗಳಲ್ಲಿನ ಆಧ್ಯಾತ್ಮಿಕ ಅರ್ಥದ ವಿಚಾರಗಳನ್ನು ವಿವರವಾಗಿ ಪ್ರತಿಪಾದಿಸುತ್ತದೆ. ಆದರೆ ಜೀವನದಲ್ಲಿ ಕೇವಲ ಆದ್ಯಾತ್ಮ ಮುಖ್ಯವಲ್ಲ. ಬದುಕು ಮುಖ್ಯವಾದುದು. ಬದುಕಿಗೆ ಅಗ್ರ ಪಾಶಸ್ತ್ಯ ನೀಡುವುದು ವೇದಗಳು ಮಾತ್ರ. ವೈಕ್ತಿಯ , ಸಮಾಜದ, ರಾಷ್ಟ್ರದ ಎಲ್ಲಾ ಮುಖಗಳನ್ನು ಆದರ್ಶರೀತಿಯಲ್ಲಿ ಚಿತ್ರಿಸುವುದು ಕೇವಲ ವೇದಗಳು ಮಾತ್ರ.
    ಎಲ್ಲಾ ನೀತಿವಂತರೂ ಅವರು ಯಾರೇ ಇರಲಿ ಅವರು ಆರ್ಯರು. ಭ್ರಷ್ಟರು, ಅಯೋಗ್ಯರು ಯಾರೇ ಇರಲಿ ಅವರು ಅನಾರ್ಯರು. ಇಂತಹ ಒಂದು ವಾದ ವಿಟ್ಟಾಗ ಬ್ರಾಹ್ಮಣ, ದಲಿತ ಎಂಬ ಶಬ್ಧಗಳು ಗೌಣವಾಗುತ್ತವೆ. ಅಂದ ಹಾಗೆ ವರ್ಣವ್ಯವಸ್ಥೆಯ ಮೂಲ ಸರಿಯಾಗಿಯೇ ಇದೆ. ಸ್ವಾರ್ಥಿಗಳು ಇದನ್ನು ಜಾತಿಯನ್ನಾಗಿ ಪರಿವರ್ತಿಸಿದ್ದಾರೆ. ಆದರೆ ಮನುಷ್ಯರೆಲ್ಲರೂ ಒಂದೇ ಜಾತಿ ಎಂದು ಒಪ್ಪಿದ್ದಲ್ಲಿ ಇಂದಿನ ಪ್ರಚಲಿತ ಜಾತಿ ಪದ್ಧತಿ ಮನುಷ್ಯ ಮಾತ್ರರಿಗೆ ಸೀಮಿತವಾದದ್ದು. ಬ್ರಾಹ್ಮಣ, ಶೂದ್ರ ಇತ್ಯಾದಿ ವರ್ಣಗಳು, ಜಾತಿಗಳಲ್ಲ. ವರ್ಣಗಳು ಬದಲಾಯಿಸಬಹುದು. ಜಾತಿ ಬದಲಾಯಿಸಲು ಸಾಧ್ಯವಿಲ್ಲ. ಮನುಷ್ಯ ಮನುಷ್ಯನಾಗಿಯೇ ಇರುತ್ತಾನೆಯೇ ಹೊರತು ಅವನು ಜಾತಿಯಲ್ಲಿ ಬದಲಾಗಲು ಸಾಧ್ಯವಿಲ್ಲ

    ಉತ್ತರ

ನಿಮ್ಮ ಅನಿಸಿಕೆ...

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Note: HTML is allowed. Your email address will never be published.

Subscribe to comments