ವಿಷಯದ ವಿವರಗಳಿಗೆ ದಾಟಿರಿ

ಏಪ್ರಿಲ್ 30, 2015

1

ಗಟ್ಟಿದನಿಯಲ್ಲಿ ಹೇಳುತ್ತಿದ್ದೇನೆ: “ನಮಗೆ ಸಾವೇ ಇಲ್ಲ”

‍ನಿಲುಮೆ ಮೂಲಕ

– ಪ್ರೇಮಶೇಖರ

ಪ್ರಿಯ ಓದುಗರೇ,

ಆತ್ಮವಿಶ್ವದಲ್ಲಿ ಮಾನವ ಏಕಾಂಗಿಯಲ್ಲ : ಒಂದು ಜಿಜ್ಞಾಸೆ – ಭಾಗ ೧
ಬೆತ್ತಲೆ ಅಲೆಮಾರಿ ಇದ್ದಕ್ಕಿದ್ದಂತೆ ನಾಗರಿಕ ಮಾನವನಾದ! – ಭಾಗ ೨
ಮಂಗಳನ ಅಂಗಳದಿಂದ ನೆಫಿಲಿಂ ನೆಲಕ್ಕೊಂದು ಯಾನ – ಭಾಗ ೩
ಈ ಭೂಮಿಯೆಂಬ ಗ್ರಹವೊಂದು ರಿಮ್ಯಾಂಡ್ ಹೋಮ್ – ಭಾಗ ೪

ಅನ್ಯಲೋಕ ಜೀವಿಗಳ ಬಗೆಗಿನ ಲೇಖನಸರಣಿ ಮೆಚ್ಚುಗೆಗೆ ಪಾತ್ರವಾದಂತೇ ಅನೇಕ ಪ್ರಶ್ನೆಗಳನ್ನೂ ಹುಟ್ಟುಹಾಕಿದೆ.ಮೆಚ್ಚುಗೆಯ ಪತ್ರಗಳಿಗೆ ಖುಷಿಪಟ್ಟು ವೈಯುಕ್ತಿಕವಾಗಿ ಕೃತಜ್ಞತೆ ಹೇಳಿದ್ದೇನೆ, ಪ್ರಶ್ನೆಗಳಿಗೆ ಸಮಾಧಾನ ಹೇಳಲೂ ಪ್ರಯತ್ನಿಸಿದ್ದೇನೆ.  ಈ ಪ್ರಶ್ನೆಗಳು ನಿಮ್ಮವೂ ಆಗಿರಬಹುದು, ವಿವರಣೆಗಳನ್ನು ನೀವೂ ಬಯಸಿರಬಹುದು,ಎಲ್ಲ ಪ್ರಶ್ನೆಗಳಿಗೂ ಒಟ್ಟಿಗೆ ಪೂರಕ ವಿವರಗಳೊಂದಿಗೆ ಇಲ್ಲಿ ಉತ್ತರಿಸುವುದು ಈಗ ನನ್ನ ಕರ್ತವ್ಯ ಎಂದು ಭಾವಿಸುತ್ತೇನೆ.ಯಾರಿಗೆ ಗೊತ್ತು, ಇದು ಯಾವುದೋ ಜನ್ಮದ ಯಾವುದೋ ಲೆಕ್ಕದ “ಸರಿಮಾಡುವಿಕೆ”ಯಾಗಿರಲೂಬಹುದು! ನಿಮ್ಮನಿಮ್ಮ ಭಾವಕ್ಕೆ, ನಿಮ್ಮನಿಮ್ಮ ಭಕುತಿಗೆ ಅನುಗುಣವಾಗಿ ಉತ್ತರವೆಂದಾಗಲೀ, ವಿವರಣೆಯೆಂದಾಗಲೀ ಪರಿಹಾರವೆಂದಾಗಲೀ ತೆಗೆದುಕೊಳ್ಳಿ.

ಪ್ರಶ್ನೆಗಳಲ್ಲಿ ಮುಖ್ಯವಾದುವನ್ನು ಆಯ್ದು ಸ್ಥೂಲವಾಗಿ ಎರಡು ಗುಂಪುಗಳನ್ನಾಗಿಸಿಕೊಳ್ಳುತ್ತೇನೆ.
1.‘ಸತ್ತ’ ನಂತರ ಏನಾಗುತ್ತದೆ? ಎಲ್ಲಿಗೆ ಹೋಗುತ್ತೇವೆ?
2. ಕೌಟುಂಬಿಕ ಸಂಬಂಧಗಳ ತೊಡಕುಗಳು, ಅವೇಕೆ ಅಸಹನೀಯವಾಗುತ್ತವೆ, ಅವುಗಳಿಗೆ ಪರಿಹಾರವೇ ಇಲ್ಲವೇ?  ಇವುಗಳನ್ನು ಒಂದೊಂದಾಗಿ ವಿಶ್ಲೇಷಣೆಗೆತ್ತಿಕೊಳ್ಳೋಣ.
1.ಸಾವಿನ ನಂತರದ ಬದುಕು

ನಾನು ಗಟ್ಟಿದನಿಯಲ್ಲಿ ಹೇಳುತ್ತಿದ್ದೇನೆ- ಸಾವು ಎನ್ನುವುದು ಇಲ್ಲವೇ ಇಲ್ಲ.ನಮಗೆ ಸಾವೇ ಇಲ್ಲ.ಆದಿಅಂತ್ಯಗಳಿರುವುದು ದೇಹಕ್ಕೆ ಮಾತ್ರ.ನಾವೆಂದರೆ ದೇಹ ಮಾತ್ರವಲ್ಲ.ದೇಹದ ಹುಟ್ಟಿನೊಂದಿಗೆ ಎಲ್ಲವೂ ಆರಂಭವಾಗಿ ಅದರ ಅಂತ್ಯದೊಂದಿಗೆ ಎಲ್ಲವೂ ಮುಗಿದುಹೋಗುವುದಿಲ್ಲ.ಆತ್ಮ ಅಂದರೆ ನಿಜವಾದ “ನಾವು” ಹೊಸಹೊಸ ದೇಹಗಳಲ್ಲಿ ಮತ್ತೆಮತ್ತೆ ಜನ್ಮವೆತ್ತುತ್ತಲೇ ಇದ್ದೇವೆ.  ಪ್ರತಿಯೊಂದು ಜನ್ಮವೂ ಪಾಪಪರಿಹಾರಕ್ಕಾಗಿ ಮತ್ತೊಂದು ಅವಕಾಶ.ದೇಹ ನಿಷ್ಕ್ರಿಯವಾದ ನಂತರ ಏನಾಗುತ್ತದೆ ಎನ್ನುವುದನ್ನು ಹಿಂದಿನ ಲೇಖನದಲ್ಲಿ ಪುರ್ನರ್ಜನ್ಮಗಳ ಅಧ್ಯಯನ ಮಾಡಿರುವ ವಿದ್ವಾಂಸರ ಮಾತುಗಳ ಆಧಾರದ ಮೇಲೆ ತಕ್ಕಮಟ್ಟಿಗೆ ವಿವರಿಸಿದ್ದೇನೆ.ಆ ವಿವರಣೆಗೆ ಪೂರಕವಾಗಿ ಈಗ ಮತ್ತಷ್ಟು ವಿವರಗಳನ್ನು ನಿಮ್ಮ ಮುಂದಿಡುತ್ತೇನೆ.

‘ಸತ್ತ’ವರಾರೂ ಅದೇ ದೇಹದಲ್ಲಿ ಮರಳಿಬಂದು ತಮ್ಮ ಅನುಭವವನ್ನು ನಮಗೆ ಹೇಳಿಲ್ಲ.ಆದರೆ ‘ಸಾವಿನ’ ಸನಿಹಕ್ಕೆ ಹೋಗಿ ಬಂದವರ ಅನುಭವಗಳು ನಮ್ಮ ಮುಂದಿವೆ.ಈ ಬಗ್ಗೆ ಅಧ್ಯಯನ ನಡೆಸಿರುವ ಪಾಶ್ಚಾತ್ಯ ವಿದ್ವಾಂಸರು ಇಂಗ್ಲೀಷಿನಲ್ಲಿ “Near Death Experience” ಅಂದರೆ “NDE” (NDA ಅಲ್ಲ ಮಾರಾಯ್ರೇ!) ಎಂದು ಕರೆಯುವುದನ್ನು ನಾನು ಕನ್ನಡದಲ್ಲಿ “ಮೃತ್ಯುಸನಿಹಾನುಭವ” ಎಂದು ಕರೆಯುತ್ತೇನೆ.ತೀವ್ರ ಕಾಯಿಲೆಗೊಳಗಾದವರು, ಅಫಘಾತಕ್ಕೀಡಾದವರು ಮತ್ತು, ಹೆಚ್ಚಿನ ಸಂದರ್ಭಗಳಲ್ಲಿ, ಹೆರಿಗೆಯಲ್ಲಿ ತೀವ್ರ ತೊಡಕುಂಟಾಗಿ ಅತೀವ ವೇದನೆ ಅನುಭವಿಸುವ ಮಹಿಳೆಯರು ಮೃತ್ಯುವಿನ ಸನಿಹ ಹೋಗಿ ಹಿಂತಿರುಗಿ ಬಂದ ಅದೆಷ್ಟೋ ಉದಾಹರಣೆಗಳಿವೆ.ಆ ಸ್ಥಿತಿಯಲ್ಲಿ ಅವರು ‘ಕಂಡ’ದ್ದನ್ನು ಮನೋವೈದ್ಯರು, ವೈದ್ಯಕೀಯ ವಿದ್ವಾಂಸರು ವಿಶ್ಲೇಷಿಸಿ ದಾಖಲಿಸಿದ್ದಾರೆ.ಡಾ. ರೇಮಾಂಡ್ ಮೂಡಿ ನಾಲ್ಕು ದಶಕಗಳ ಹಿಂದೆಯೇ ಮಹತ್ವದ ಸಂಶೋಧನೆ ನಡೆಸಿದಾಗಿನಿಂದಲೂ ಈ ಬಗ್ಗೆ ವ್ಯಾಪಕ ಅಧ್ಯಯನಗಳು ನಿರಂತರವಾಗಿ ನಡೆಯುತ್ತಲೇ ಇವೆ.  ಇವೆಲ್ಲವುಗಳು ತಿಳಿಸುವ ಪ್ರಕಾರ ‘ಸತ್ತ ಸ್ಥಿತಿ’ಗೇ ತಲುಪಿದವರು ದೇಹದಿಂದ ಹೊರಬಂದು ಮೇಲೆ ತೇಲುತ್ತಾರೆ.ತಮ್ಮ ದೇಹವನ್ನೂ, ಸುತ್ತಲಿರುವ ವಸ್ತುಗಳನ್ನೂ, ಜನರನ್ನೂ ನೋಡುತ್ತಾರೆ.“ಎಲ್ಲ ಮುಗಿಯಿತು, ಇನ್ನೇನೂ ಮಾಡಲಾಗದು” ಎಂಬರ್ಥದಲ್ಲಿ ವೈದ್ಯರೋ ಇನ್ನಾರೋ ಹೇಳುವುದನ್ನೂ ಕೇಳಿಸಿಕೊಳ್ಳುತ್ತಾರೆ.ದೇಹಕ್ಕಿರುವ ಯಾವ ನೋವುಗಳಾಗಲೀ,ಕುಂದುಗಳಾಗಲೀ (ದೃಷ್ಟಿದೋಷ, ಶ್ರವಣದೋಷ, ಅಂಗವಿಕಲತೆ ಇತ್ಯಾದಿ) ಇಲ್ಲದ ಅತ್ಯಂತ ನಿರಾಳ, ಹಗುರ, ಸಂತಸದಾಯಕ ಸ್ಥಿತಿಯನ್ನು ಅನುಭವಿಸುತ್ತಾರೆ. ಈಗಾಗಲೇ ‘ಮೃತ’ರಾಗಿರುವ ತಮ್ಮ ಪ್ರೀತಿಪಾತ್ರರು ಅವರಿಗೆದುರಾಗುತ್ತಾರೆ.ರೂಪ ಆಕಾರಗಳು ಹೀಗೆಯೇ ಎಂದು ಅರಿಯಲಾಗದ ವ್ಯಕ್ತಿಯೊಬ್ಬ ತಮ್ಮ ಜತೆಯಿರುವುದೂ ಅವರ ಅನುಭವಕ್ಕೆ ಬರುತ್ತದೆ.  ನಮಗೆಲ್ಲರಿಗೂ ಇರುವ “ಆಧ್ಯಾತ್ಮಿಕ ಮಾರ್ಗದರ್ಶಿ” ಆತ.ಆತ ಅವರನ್ನು ಮುನ್ನಡೆಸುತ್ತಾನೆ.ಮುಂದೆ ಅವರಿಗೆದುರಾಗುವುದು ಒಂದು ನದಿ ಅಥವಾ ಬೇಲಿ ಅಥವಾ ಒಂದು ಗೆರೆ ಅಥವಾ “ಪ್ರತ್ಯೇಕಿಸುವ” ಏನೋ ಒಂದು ಗುರುತು.ಅದನ್ನು ದಾಟಿದರೆ ಅವರು ಮತ್ತೆ ದೇಹಕ್ಕೆ ಹಿಂತಿರುಗಲಾಗುವುದಿಲ್ಲ ಅಂದರೆ ನಮ್ಮ ಅರ್ಥದಲ್ಲಿ ‘ಸತ್ತು’ಹೋಗುತ್ತಾರೆ.ಆದರೆ ಗೆರೆಯ ಸನಿಹದಲ್ಲಿ ಅವರಿಗೆ ಮತ್ತೊಬ್ಬ ಕಾಣಿಸಿಕೊಳ್ಳುತ್ತಾನೆ.ಹಲವರು ಹೇಳಿರುವ ಪ್ರಕಾರ ಆತ ಟಿಬೆಟನ್ ಸಂನ್ಯಾಸಿಗಳು ಧರಿಸುವಂತಹ ಕಂದುಬಣ್ಣದ ಉಡುಗೆ ಧರಿಸಿರುತ್ತಾನೆ.“ಪಾಪಪರಿಹಾರಕ್ಕೆ ನಿನಗೆ ನೀಡಲಾಗಿರುವ ಆವಧಿ ಇನ್ನೂ ಪೂರ್ಣವಾಗಿಲ್ಲ” ಎಂದು ಹೇಳಿ ಹಿಂದಕ್ಕೆ ಕಳಿಸುತ್ತಾನೆ.ಆತ್ಮ ಹಿಂದಕ್ಕೆ ಬಂದು ದೇಹದಲ್ಲಿ ಸೇರಿಕೊಳ್ಳುತ್ತದೆ.ಸತ್ತವನು ಮತ್ತೆ ಬದುಕಿದ ಎಂದು ನೆಂಟರಿಷ್ಟರು ಸಂಭ್ರಮಿಸುತ್ತಾರೆ.

ಕೆಲವರ ಅನುಭವದಲ್ಲಿ ಪ್ರತ್ಯೇಕಿಸುವ ಗೆರೆಯನ್ನು ದಾಟಿ ‘ಅತ್ತ’ ಹೊರಟುಹೋಗಬೇಕೆಂಬ ಸೆಳೆತ, ಪ್ರೇರಣೆ ಅತ್ಯಧಿಕವಾಗಿದ್ದರೂ ಇವರು ಮಾತ್ರ ಹಿಂದಕ್ಕೆ ಬರಲು ಅಂದರೆ ದೇಹಕ್ಕೆ ಹಿಂತಿರುಗಲು ಅತೀವ ತುಡಿತ ಪಡುತ್ತಾರೆ.ಅಧ್ಯಯನಗಳು ಹೇಳುವ ಪ್ರಕಾರ ಇಂಥವರಲ್ಲಿ ಹೆಚ್ಚಿನವರು ಎಳೆಮಕ್ಕಳನ್ನು ಹೊಂದಿರುವ, ತಾವಿಲ್ಲದೇ ತಮ್ಮ ಕಂದಮ್ಮಗಳು ತಬ್ಬಲಿಯಾಗಿ ದುರವಸ್ಥೆಗೀಡಾಗುತ್ತವೆಂದು ಮರುಗುವ ತಾಯಂದಿರು.(ಇದಕ್ಕೇ ಹೇಳುವುದು ಅಮ್ಮ ಅಂದರೆ ದೇವರು ಅಂತ). ನಾವೆಂದರೆ ನಮ್ಮ ದೇಹ ಮಾತ್ರವಲ್ಲ ಅದರೀಚೆಗೂ, ಅದರಾಚೆಗೂ ನಮಗೆ ಅಸ್ತಿತ್ವವಿದೆ ಎಂದು ಮನಗಾಣಿಸಲು ಮತ್ತಿನ್ನೇನು ಹೇಳಲಿ? ನಿಮ್ಮಲ್ಲಿ ಯಾರಿಗಾದರೂ ಇಂತಹ ಅನುಭವಗಳಾಗಿದ್ದರೆ ನನ್ನೊಡನೆ, ಓದುಗರೊಡನೆ ಹಂಚಿಕೊಳ್ಳಿ.ಮಾನವ ಜನ್ಮದ ಉದ್ದೇಶದ ಬಗ್ಗೆ ನಮ್ಮ ಅರಿವು ವಿಸ್ತಾರವಾಗಲು ಸಹಕರಿಸಿ.

2.ಕೌಟುಂಬಿಕ ಹಿಂಸೆ, ನೋವುಗಳು
ಕೌಟುಂಬಿಕ ಸಂಬಂಧಗಳ ತೊಡಕುಗಳ ಬಗ್ಗೆ ಬಂದ ಪ್ರಶ್ನೆಗಳಲ್ಲಿ ಮೂರು ಆಯಾಮಗಳಿದ್ದವು – ಒಂದು: ಎರಡು ವ್ಯಕ್ತಿಗಳಲ್ಲಿ ಒಂದು ಇನ್ನೊಂದಕ್ಕೆ ಬೇಕೆಂದೇ ಹಾನಿಯೆಸೆಗುವುದೇಕೆ? ಎರಡು: ಅದು ಬಿಡಿಸಿಕೊಳ್ಳಲಾಗದ ಹತ್ತಿರದ ಸಂಬಂಧವಾಗಿದ್ದರೆ ನೋವನುಭವಿಸುತ್ತಿರುವ ವ್ಯಕ್ತಿಗೆ ಬಿಡುಗಡೆಯೇ ಇಲ್ಲವೇ?  ಮೂರು: ಒಳ್ಳೆಯತನದ ಬಗ್ಗೆ ನಂಬಿಕೆಯೇ ಹೊರಟುಹೋಗುವುದಿಲ್ಲವೇ?  ಇವುಗಳನ್ನು ಒಂದೊಂದಾಗಿ ವಿಶ್ಲೇಷಣೆಗೆತ್ತಿಕೊಳ್ಳೋಣ.

ಒಂದು:  ಸಮಸ್ಯೆಯನ್ನು ಹೀಗೆ ತೆಗೆದುಕೊಳ್ಳೋಣ. A ಹಾನಿಯೆಸಗುತ್ತಿರುವ ವ್ಯಕ್ತಿ (ಆತ್ಮ), B ಹಾನಿಗೊಳಗಾಗುತ್ತಿರುವ ವ್ಯಕ್ತಿ (ಆತ್ಮ).ಇದರ ಸಮರ್ಪಕ ವಿಶ್ಲೇಷಣೆ ಹೀಗೆ – A ಆಧ್ಯಾತ್ಮಿಕವಾಗಿ ತೀರಾ ಕೆಳಮಟ್ಟದಲ್ಲಿರುವ ಆತ್ಮ.ಅದು ತನ್ನ ಹಿಂದಿನ ಜನ್ಮಗಳಲ್ಲಿ ಆಧ್ಯಾತ್ಮಿಕ ವಿಕಾಸಕ್ಕೆ ಅಗತ್ಯ ಪ್ರಯತ್ನ ಮಾಡಿಲ್ಲ, ಈಗಿನ ಜನ್ಮದಲ್ಲೂ ಮಾಡುತ್ತಿಲ್ಲ.ಈ ಜನ್ಮ ತಪ್ಪುಗಳ ಸುಧಾರಣೆಗೆ,ಆತ್ಮವಿಕಾಸಕ್ಕೆ ಸಿಕ್ಕಿರುವ ಮತ್ತೊಂದು ಅವಕಾಶ (Another term in the remand home) ಎಂದು Aಗೆ ಅರಿವೇ ಇಲ್ಲ.  ಹಿಂದಿನ ಜನ್ಮಗಳಲ್ಲಿ ಆಧ್ಯಾತ್ಮಿಕವಾಗಿ ವಿಕಾಸ ಹೊಂದಿರದ ಪರಿಣಾಮ ಇದು.  ಈಗ ನಾವು ಮಾಡಬೇಕಾದುದೇನು?  ಜನ್ಮಜನ್ಮಾಂತರಗಳ ಬಗ್ಗೆ, ಪ್ರತಿಜನ್ಮದ ಉದ್ದೇಶದ ಬಗ್ಗೆ Aಗೆ ಮನವರಿಕೆ ಮಾಡಿಕೊಡಲು ಪ್ರಯತ್ನಿಸಬೇಕು, ಆ ಆತ್ಮದ ಉದ್ಧಾರಕ್ಕೆ ಸಹಕಾರ ನೀಡಬೇಕು.  ಮಾನವರಾಗಿ ಅದು ನಮ್ಮ ಕರ್ತವ್ಯ.  ನಮ್ಮ ಪ್ರಯತ್ನ ಯಶಸ್ವಿಯಾದರೆ ಅದು Aಗೂ ಒಳಿತಾಗುತ್ತದೆ, Bಯ ಈಗಿನ ಬದುಕೂ ಹಸನಾಗುತ್ತದೆ.  ಆದರೆ ಇದು ಎಲ್ಲ ಸಮಯದಲ್ಲೂ ಸಾಧ್ಯವಾಗುವುದಿಲ್ಲ.  (ಸಾಧ್ಯವಾಗುವುದಾಗಿದ್ದರೆ ಜಗತ್ತು ಹೀಗೇಕಿರುತ್ತಿತ್ತು!)

ಎರಡು:  ಬಿಡಿಸಿಕೊಳ್ಳಲಾಗದಂಥ ಹತ್ತಿರದ ಸಂಬಂಧ ಅಂದರೆ, ನಮ್ಮ ವಿಶ್ಲೇಷಣೆಯ ಅನುಕೂಲಕ್ಕಾಗಿ  ಭಾರತೀಯ ಸಂದರ್ಭದಲ್ಲಿ A ಪತಿ, B ಪತ್ನಿ ಅಂದುಕೊಳ್ಳೋಣ.(ಅದು ಉಲ್ಟಾ ಆಗಿರುವುದೂ ಉಂಟು.ನಿಮ್ಮನಿಮ್ಮ ಸ್ಥಾನ, ಪರಿಸ್ಥಿತಿಗನುಗುಣವಾಗಿ ಅರ್ಥೈಸಿಕೊಳ್ಳಿ) Aಯನ್ನು ಸುಧಾರಿಸಲು B ಪ್ರಾಮಾಣಿಕವಾಗಿ ಪ್ರಯತ್ನಿಸಬೇಕು.ತನ್ನನ್ನು ಹಿಂಸಿಸುವುದರಿಂದ ಅಂತಿಮವಾಗಿ ಹಾನಿಯಾಗುವುದು ನಿನಗೇ ಎಂದು Aಗೆ ಮನದಟ್ಟು ಮಾಡಿಕೊಡಬೇಕು.ಯಶಸ್ವಿಯಾದರೆ ಅದೊಂದು ಚಂದಮಾಮ ಕಥೆಯಂತೆ “…ಮುಂದೆ ಅವರು ಬಹುಕಾಲ ಸುಖವಾಗಿ ಬಾಳಿದರು” ಎಂದಂತಾಗುತ್ತದೆ.ಆದರೆ ಬದುಕು ಚಂದಮಾಮ ಕಥೆಯಲ್ಲವಲ್ಲ.  ಆಗ Bಯ ಮುಂದಿರುವ ಆಯ್ಕೆಗಳು ಎರಡು:  ಅ-  A ಕೊಡುತ್ತಿರುವ ನೋವನ್ನೆಲ್ಲಾ ತನ್ನ ಆತ್ಮದ ವಿಕಾಸಕ್ಕೇ ಸಹಕಾರಿಯಂತೆ ಪರಿಗಣಿಸಿ ಅನುಭವಿಸುತ್ತಾ, Aಯನ್ನು ಕ್ಷಮಿಸುತ್ತಾ, ಪ್ರೀತಿಸುತ್ತಾ, A ಬಗ್ಗೆ ಯಾವುದೇ ಕೆಟ್ಟಭಾವನೆ ಇಲ್ಲದೇ ಬದುಕು ಕಳೆದುಬಿಡುವುದು.  ಹೀಗಾದಾಗ B ಆತ್ಮವಿಕಾಸದ ಮತ್ತೊಂದು ಮಜಲಿಗೇರುತ್ತದೆ.  ಆದರೆ ತನ್ನೆಲ್ಲಾ ಪ್ರಯತ್ನಗಳು ವ್ಯರ್ಥವಾಗುತ್ತಿದ್ದರೆ, ಬದುಕು ಬೇಡವೇಬೇಡ ಎನ್ನುವಷ್ಟು ಅಸಹನೀಯವಾಗಿಬಿಟ್ಟರೆ Bಯ ಮುಂದೆ ಎರಡನೆಯ ಹಾದಿ ತೆರೆದುಕೊಳ್ಳುತ್ತದೆ.  ಆ- ನಮಗೆ ಇನ್ನೂ ಜನ್ಮಗಳಿದ್ದೇ ಇವೆ, ಆ ಜನ್ಮಗಳಲ್ಲಿ ಒಬ್ಬರನ್ನೊಬ್ಬರು ಭೇಟಿಯಾಗೇ ಆಗುತ್ತೇವೆ ಎಂದು B ಅರಿಯಬೇಕು.  ಈ ಜನ್ಮಕ್ಕೆ ಇಷ್ಟು ಸಾಕು, ಮುಂದಿನ ಯಾವುದಾದರೂ ಜನ್ಮದಲ್ಲಿ Aಯನ್ನು ಸುಧಾರಿಸುವ ಪ್ರಯತ್ನವನ್ನು ಮುಂದುವರಿಸುತ್ತೇನೆ (ಅಲ್ಲಿಯವರೆಗೆ A ಆಧ್ಯಾತ್ಮಿಕವಾಗಿ ಸ್ವಲ್ಪ ಉನ್ನತಿಗೇರಿದ್ದರೂ ಇರಬಹುದು) ಎಂದು ನಿರ್ಧಾರ ಮಾಡಿಕೊಂಡು Aಯಿಂದ ದೂರವಾಗಿಬಿಡುವುದು.ದೂರವಾಗಿಬಿಡುವುದು ಅಂದರೆ ಲಭ್ಯವಿರುವ ಸಾಮಾಜಿಕ, ನ್ಯಾಯಿಕ ಅವಕಾಶಗಳನ್ನು ಉಪಯೋಗಿಸಿಕೊಂಡು Aಯಿಂದ ವಿಚ್ಚೇದನ ಪಡೆದು ಸ್ವತಂತ್ರ ಬದುಕು ಸಾಗಿಸುವುದು ಅಥವಾ ತನ್ನಷ್ಟೇ ವಿಕಾಸ ಹೊಂದಿರುವ ಆತ್ಮವೊಂದು ಪುರುಷರೂಪದಲ್ಲಿ (ಅಥವಾ ಸ್ತ್ರೀರೂಪದಲ್ಲಿ, ನಿಮ್ಮ ಸ್ಥಾನಕ್ಕನುಗುಣವಾಗಿ) ದೊರೆತರೆ ಅದರೊಂದಿಗೆ ನೆಮ್ಮದಿಯಾಗಿ ಬದುಕುವುದು. ಆದರೆ, Aಯಿಂದ ದೂರಹೋಗಲು B ಯಾವ ಕಾರಣಕ್ಕೂ ಆತ್ಮಹತ್ಯೆಯ ಮಾರ್ಗ ಹಿಡಿಯಕೂಡದು.ಆತ್ಮಹತ್ಯೆ ಮಾಡಿಕೊಂಡರೆ B ಇದುವರೆಗೆ ತಾನು ಸಾಧಿಸಿರುವ ಆಧ್ಯಾತ್ಮಿಕ ವಿಕಾಸದ ಬಹುಪಾಲನ್ನು ಕಳೆದುಕೊಳ್ಳುತ್ತಾಳೆ/ನೆ.  ಇದೊಂದು ಬಗೆಯಲ್ಲಿ ಕುಂಟೋಬಿಲ್ಲೆ ಆಟದಲ್ಲಿ ಮೊದಲ ಮನೆಗೇ ಹಿಂತಿರುಗಿದಂತೆ!  ಎಲ್ಲವನ್ನೂ ಮೊದಲಿನಿಂದ ಆರಂಭಿಸಬೇಕು.ಪರಿಣಾಮವಾಗಿ ಆಧ್ಯಾತಿಕ ವಿಕಾಸಕ್ಕಾಗಿ ಹೆಣಗಾಡುವಂತಾಗಿ ಮುಂದಿನ ಜನ್ಮಗಳು ಕಷ್ಟಕರವಾಗಿಬಿಡುತ್ತದೆ.

ಮೂರು:  ಒಳ್ಳೆಯತನದ ಬಗ್ಗೆ ಎಂದಿಗೂ ವಿಶ್ವಾಸ ಕಳೆದುಕೊಳ್ಳಬಾರದು.ಅಂತಿಮವಾಗಿ ನಮ್ಮನ್ನು ಕಾಪಾಡುವುದು ಒಳ್ಳೆಯತನವೇ ಎನ್ನುವುದು ನೆನಪಿರಲಿ.ಆದರೆ ಒಳ್ಳೆಯತನ ನಿರಂತರ ನೋವನ್ನೇ ಕೊಡುತ್ತಿದ್ದರೆ, ಆ ನೋವು ಅಸಹನೀಯವಾಗಿಬಿಟ್ಟರೆ (ಮೇಲೆ ಎರಡನೆಯ ಪ್ರಶ್ನೆಯ ಉತ್ತರದಲ್ಲಿರುವಂತೆ) ನೋವು ನೀಡುತ್ತಿರುವ ವ್ಯಕ್ತಿಯಿಂದ (ಅದು ಯಾವುದೇ ಸಂಬಂಧವಾಗಿರಲಿ) ದೂರವಾಗಿಬಿಡುವುದು ಸರಿಯಾದ ಮಾರ್ಗ. ಮುಂದೊಮ್ಮೆ ಯಾವುದಾದರೊಂದು ಜನ್ಮದಲ್ಲಿ ಅವರು ಆಧ್ಯಾತ್ಮಿಕವಾಗಿ ವಿಕಾಸ ಹೊಂದಿ ನಮಗೆದುರಾಗಬಹುದು.ಆಗ ಅವರ ಜತೆ ಸಹನೀಯ ಬದುಕು ಸಾಗಿಸುವ ಸಾಧ್ಯತೆ ಇದ್ದೇ ಇರುತ್ತದೆ.ಈ ಜನ್ಮವೇ ಕೊನೆಯದಲ್ಲವಲ್ಲ? ನಮಗಿನ್ನೂ ಅನೇಕ ಜನ್ಮಗಳಿವೆ.ಬುದ್ಧನೇ ಐನೂರ ಐವತ್ತಕ್ಕಿಂತಲೂ ಹೆಚ್ಚಿನ ಜನ್ಮವೆತ್ತಿದ್ದಾನೆಂದರೆ ನಮ್ಮಂತಹ ‘ಆರ್ಡಿನರಿ’ ಆತ್ಮಗಳ ಪಾಡೇನು?

ಚಿತ್ರಕೃಪೆ :http://theawakenedstate.tumblr.com

ಕೃಪೆ : ವಿಜಯವಾಣಿ ದೈನಿಕ

1 ಟಿಪ್ಪಣಿ Post a comment
  1. Kiran Kumar m g
    ಜೂನ್ 13 2015

    ಬಹಳ ಚೆನ್ನಾಗಿ ಬರೆದಿದ್ದೀರ ನಿಜ ಈ ವಿಶ್ವಕ್ಕೆ ಹೇಗೆ ಆದಿಅಂತ್ಯವಿಲ್ಲವೊ ಹಾಗೆಹೇ ನಮಗೂ ಕೂಡ ಇರುವುದಿಲ್ಲ. ಈ ದೇಹ ಸೋಲಲೆಂದೆ ಸೃಷ್ಠಿಯಾದದ್ದು ಆದರೆ ಆತ್ಮ ಅಮರನಾದವನು ಅವನಿಗೆ ಹುಟ್ಟು ಸಾವು ಇಲ್ಲಾ.ಜನನ ಮರಣ ಚಕ್ರಗಳಿಂದ ಬಿಡುಗಡೆ ಹೊಂದುವುದೆ ಮೋಕ್ಷ. ಹಾಗೆಯೇ ಇಸ್ಲಾಂ ಹೇಳುತ್ತದೆ ಸತ್ಯವಿಶ್ವಾಸಿಗಳು ಸ್ವರ್ಗದಲ್ಲಿ ಸದಾಕಾಲ ವಾಸಿಸುತ್ತಾರೆ ಮತ್ತು ಸತ್ಯನಿಷೇದಿಗಳು ನರಕದಲ್ಲಿ ಸದಾಕಾಲ ವಾಸಿಸುತ್ತಾರೆ ಇದರ ಬಗ್ಗೆ ನಿಮ್ಮ ಅಭಿಪ್ರಾಯವೇನು?

    ಉತ್ತರ

ನಿಮ್ಮ ಅನಿಸಿಕೆ...

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Note: HTML is allowed. Your email address will never be published.

Subscribe to comments