ವಿಷಯದ ವಿವರಗಳಿಗೆ ದಾಟಿರಿ

ಮೇ 5, 2015

5

ನಾಡು-ನುಡಿ : ಮರುಚಿಂತನೆ – ಜಾತಿಗಣತಿ ಪ್ರತಿನಿಧಿಸುವುದೇನನ್ನು?

‍ನಿಲುಮೆ ಮೂಲಕ

ಇಂಗ್ಲೀಷ್ ಮೂಲ:-ವಿವೇಕ್ ಧಾರೇಶ್ವರ್, ಸ್ಕಾಲರ್ ಇನ್ ರೆಸಿಡೆನ್ಸ್, ಸೃಸ್ಟಿ ಸ್ಕೂಲ್ ಆಫ್ ಡಿಸೈನ್, ಬೆಂಗಳೂರು
ಕನ್ನಡ ಅನುವಾದ: ಅಶ್ವಿನಿ. ಬಿ. ದೇಸಾಯಿ, ಆರೋಹಿ ಸಂಶೋಧನಾ ಸಂಸ್ಥೆ, ಬೆಂಗಳೂರು

ಜಾತಿಗಣತಿನಮ್ಮ ರಾಜ್ಯದಲ್ಲಿ ಜಾತಿಗಳನ್ನು ಲೆಕ್ಕ ಮಾಡುವ, ಕರ್ನಾಟಕ ಸರಕಾರದ ಉದ್ದೇಶದ ಸ್ವರೂಪವೇನು ಎಂಬುದು ನಮಗೆ ಅರ್ಥವಾಗದ ಸಂಗತಿ. ಈ ಗಣತಿಯು,  ಗಂಭೀರವಾದ ಬೌದ್ದಿಕ ಪ್ರಕ್ರಿಯೆಯೋ, ಸರಕಾರದ ನೀತಿಗಳನ್ನು ಸುಲಭಮಾಡುವ ಮಾಹಿತಿ ಸಂಗ್ರಹಣೆಯೋ ಅಥವಾ ರಾಜಕೀಯ ಪ್ರೇರಿತವಾದದ್ದೋ ಎಂಬುದು ಇನ್ನೂ ಸರಿಯಾಗಿ ಅರ್ಥವಾಗುತ್ತಿಲ್ಲ, ಉದಾಹರಣೆ, ಜಾತಿಗಣತಿಯವರು ಬಂದು ನಮ್ಮ ಮನೆ ಬಾಗಿಲು ಬಡಿದರೆ, ಈ ಪ್ರಕ್ರಿಯೆ ಬಗ್ಗೆ, ಹಾಗೂ ಜಾತಿವ್ಯವಸ್ಥೆ ಬಗ್ಗೆ, ಅನುಮಾನವಿರುವ ನಮ್ಮಂಥವರು ಏನು ಹೇಳಬೇಕೆಂಬುದು ಒಂದು ದೊಡ್ದ ಪ್ರಶ್ನೆಯಾಗಿದೆ.

ಜಾತಿ ಗಣತಿಯವರು ನನ್ನ ಜಾತಿ ಯಾವುದೆಂದು ಕೇಳಿದಾಗ ನಾನು “ಕಂಪ್ಯೂಟರ್ ವಿಜ್ಞಾನಿ” ಅಥವಾ ‘ಲಿಬರಲ್’ ಅಥವಾ ಮಾರ್ಕಿಸ್ಟ್ ಎಂದು ಹೇಳಿದರೆ ಏನಾಗಬಹುದು? ‘ಬಡಗಿ’, ‘ಮಾಧ್ವ’ ಮತ್ತು ‘ಅಯ್ಯಂಗಾರ್’ ಸರಿಯಾದ ಉತ್ತರಗಳಾದರೆ, ನನ್ನ ಉತ್ತರಗಳೇಕೆ ಸರಿಯಲ್ಲ? ಮೇಲೆ ಹೇಳಿದ ಇಂಗ್ಲಿಷ್ ಪದಗಳನ್ನು, ಕನ್ನಡೀಕರಿಸಿದರೆ ‘ಗಣಕಿ’, ‘ಉದಾರಿ’, ‘ಎಡಪಂಥಿ’ ಎಂದಾಗುತ್ತವೆ. ಇವನ್ನು ನಾವೇಕೆ ಜಾತಿಗಣತಿಯ ಪಟ್ಟಿಗೆ ಸೇರಿಸಬಾರದು? ಮೇಲ್ಕಂಡ ಪ್ರಶ್ನೆಗಳು ನಮಗೆ ಈ ವಿಷಯದ ಬಗ್ಗೆ ಇರುವ ಅಸ್ಪಷ್ಟತೆ ಗೆ ಸ್ಪಷ್ಟ ಉದಾಹರಣೆ.

ನಮ್ಮಲ್ಲಿ ಅನೇಕರಿಗೆ ನಿಮ್ಮ ರಿಲಿಜನ್ ಯಾವುದು ಎಂದಾಗ, ಹಿಂದೂ ಎಂದು ಹೇಳುವುದು ಅಸಹಜವೆನಿಸುತ್ತದೆ. ಇಂತಹ ಪ್ರತಿಕ್ರಿಯೆ ಜಾತಿ ಎಂಬ ಪ್ರಭೇದಕ್ಕೂ ಅನ್ವಯಿಸುತ್ತದೆ. ನಮ್ಮ ದೈನಂದಿನ ಬದುಕಿನಲ್ಲಿ ಚರ್ಚೆ ಮಾಡುವಾಗ ತಾವು ಯಾವ ಮತದವರು? ಅಥವಾ ಯಾವ ಸಂಪ್ರದಾಯದವರು? ಎಂಬ ಪ್ರಶ್ನೆ ಎದುರಾಗುವುದುಸರ್ವೇಸಾಮಾನ್ಯ. ಇಂತಹ ಪ್ರಶ್ನೆಗಳಿಗೆ ಪಶ್ಚಿಮದಲ್ಲಿರುವುದು “ಎತ್ನಿಕ್” ಎಂಬ ಉತ್ತರಮಾತ್ರ. ಅದನ್ನು ವಿವರಿಸಲು ನಮ್ಮ ಬಳಿ ಶಬ್ದಗಳಿಲ್ಲ. ಜಾತಿ ಮತ್ತು ಮತ (ರಿಲಿಜನ್) ಈ ಅರ್ಥಕೊಡುವ ಶಬ್ದಗಳಾಗಿ ಮಾರ್ಪಟ್ಟಿವೆ. ಕಾರಣ, ಎತ್ನಿಕ್‍ಗೆ ಹೊಂದುವ ಶಬ್ದಗಳು ಇಲ್ಲಿಲ್ಲ.

ಬಡಗಿಗೂ ಮಾಧ್ವನಿನೂ ಯಾವ ರೀತಿಯ ಸಂಬಂಧವಿದೆ? ಹೆಚ್ಚೆಂದರೆ ಬಡಗಿಯೊಬ್ಬ ಮಾಧ್ವನೊಬ್ಬನಿಗೆ ಕುಳಿತುಕೊಳ್ಳಲು ಕುರ್ಚಿಯನ್ನು ಮಾಡಿಕೊಡಬಹುದಷ್ಟೆ. ಇಷ್ಟನ್ನು ಬಿಟ್ಟು ಅವರಿಬ್ಬರ ನಡುವಿನ ಸಂಬಂಧಕ್ಕೆ ಬೇರೆ ಯಾವ ಕಾರಣವೂ ಇಲ್ಲ. ಹಾಗಾದರೂ ಬಡಗಿ, ಮಾಧ್ವ, ಅಯ್ಯಂಗಾರ್, ಬೌದ್ಧ, ಜೈನ ಇವುಗಳನ್ನು ಒಂದೇ ವ್ಯವಸ್ಥೆಯಲ್ಲಿ ಯಾಕೆ ತರಬೇಕು? ಈ ಹೋಲಿಕೆಗಳನ್ನು ಅವರ ವ್ಯವಹಾರಕ್ಕೆ ಅನುಗುಣವಾಗಿ ಮಾಡಬಹುದು. ಹೀಗಾದರೂ ಅದು ಅವರ ನಡುವಿನಲ್ಲಿ ಯಾವರೀತಿಯ ಹೋಲಿಕೆ ಅಥವಾ ವ್ಯತ್ಯಾಸವನ್ನು ತೋರ್ಪಡಿಸುತ್ತದೆ ಎಂಬುದು ಅರ್ಥವಾಗುವುದಿಲ್ಲ. ಬಡಗಿ ಮತ್ತು ಶೆಟ್ಟಿ ಎಂಬುದು ಅವರವರ ವೃತ್ತಿ ಎಂದು ತೋರಿಬರುತ್ತದೆ ಎಂದೂ ಉಳಿದೆಲ್ಲವೂ ಸಂಪ್ರದಾಯಗಳು ಎಂದೂ ಹೇಳಬಹುದು.
ಒಂದಕ್ಕೊಂದು ಸಂಬಂಧ ಇರದ ವಿಭಿನ್ನ ಗುಂಪುಗಳನ್ನು ಒಟ್ಟುಗೂಡಿಸಿ, ‘ಜಾತಿವ್ಯವಸ್ಥೆ’ ಎಂದು ಹೇಗೆ ಕರೆದರು? ಇದಕ್ಕೂ ಮಿಗಿಲಾಗಿ, ಜೈನಿಸಮ್ ಹಾಗೂ ಬುದ್ಧಿಸಂ ರಿಲಿಜನ್ ಹೇಗಾದವು? ‘ಮಾಧ್ವ’‘ಐಯ್ಯಂಗಾರ್’ ಜಾತಿಗಳು ಹೇಗಾದವು? ಹಾಗಾದರೆ, ಜಾತಿ ಎಂದರೇನು? ರಿಲಿಜನ್ ಎಂದರೇನು? ಈ ರೀತಿ ಅತ್ಯಂತ ವಿಭಿನ್ನವಾದ ಗುಂಪುಗಳನ್ನು ಜಾತಿ ವ್ಯವಸ್ಥೆಯ ಒಂದು ಘಟಕವಾಗಿ ಯಾಕೆ ವಿವರಿಸಬೇಕು? ಇದರಾಚೆಗೆ ಯಾವ ಕಾರಣಕ್ಕಾಗಿ ಬುದ್ಧಿಸಂ ಮತ್ತು ಜೈನಿಸಂಗಳು ರಿಲೀಜನ್‍ಗಳು ಹಾಗೂ ಮಾಧ್ವ ಮತ್ತು ಐಯ್ಯಂಗಾರ್ ಗುಂಪುಗಳು ಜಾತಿಗಳು? ಯಾವುದು ಜಾತಿ ಹಾಗೂ ಯಾವುದು ರಿಲಿಜನ್/ಧರ್ಮ ಎಂಬ ಪ್ರಶ್ನೆಗಳು ಬಗೆಹರಿಯದೆ ಉಳಿದುಬಿಡುತ್ತವೆ.

ವಸಾಹತುಶಾಹಿಯ ಮಿಷನರಿಗಳಿರಬಹುದು, ಅದರ ಆಡಳಿತಗಾರರಿಬಹುದು, ಇಂಡಾಲಜಿಸ್ಟ್‍ಗಳು ಇರಬಹುದು ಅಥವಾ ಲಂಡನ್, ಕೇಂಬ್ರಿಜ್, ಆಕ್ಸ್‍ಫರ್ಡ್, ಪ್ಯಾರಿಸ್, ಹೀಡೆಲ್¨ರ್ಗ್, ಷಿಕಾಗೋನಲ್ಲಿರುವ ವಿದ್ವಾಂಸರು, ಅಲ್ಲಿರುವ ಭಾರತೀಯ ವಿದ್ವಾಂಸರು ಹಾಗೂ ಭಾರತದಲ್ಲಿರುವ ಅವರ ಶಿಷ್ಯರು ಇವರೆಲ್ಲರ ಬಳಿ ಇದಕ್ಕೆ ಉತ್ತರ ದೊರಕದು. ಜ್ಞಾನದ ಪ್ರಸರಣೆಯ ನೆಪದಲ್ಲಿ ನಿಮಗೆ ಸಿಗುವುದೆಲ್ಲಾ ಶ್ರೇಣೀಕೃತ ಸಾಮಾಜಿಕ ವ್ಯವಸ್ಥೆ ಕುರಿತ ಅಥವಾ ಸಂಸ್ಕೃತಕರಣ ಕುರಿತ ವರ್ಣನೆಯೇ ವಿನಾ ಈ ಪ್ರಭೇದಗಳ ಬಗೆಗೆ ಯಾವುದೇ ಸುಸಂಬದ್ಧವಾದ, ವಿದ್ವತ್‍ಪೂರ್ಣವಾದ ಹೇಳಿಕೆಗಳಾಗಲಿ ಅಥವಾ ಸಿದ್ಧಾಂತಗಳಾಗಲಿ ಸಿಗುವುದಿಲ್ಲ. ಯುರೋಪಿಯನ್ನರ ಅನುಭವವಾದ ಸಾಮಾಜಿಕ ವ್ಯವಸ್ಥೆ ಮತ್ತದರ ಮಧ್ಯಕಾಲೀನ  ಥಿಯಾಲಜಿಯಲ್ಲಿ ಮಾತ್ರ ಶ್ರೇಣೀಕರಣ ಮೂಲತತ್ವವಾಗಿದೆಯೇ ಹೊರತು ಭಾರತದಲ್ಲಿ ಇದು ಎಲ್ಲಿಯೂ ಕಾಣಸಿಗುವುದಿಲ್ಲ ಎಂಬುದನ್ನು ಯಾವ ವಿದ್ವಾಂಸರೂ ಗಣನೆಗೆ ತೆಗೆದುಕೊಳ್ಳುವುದೇ ಇಲ್ಲ. ಈ ಸಂಸ್ಕೃತಕರಣ ಯಾವ ರೀತಿಯ ಸಾಮಾಜಿಕ ಪ್ರಕ್ರಿಯೆ ಮತ್ತು ಇದು ಏನನ್ನು ಸೂಚಿಸುತ್ತದೆ (ಮರೆತುಹೋದ ಹಳ್ಳಿಯ ಕಥೆಯನ್ನೋ) ಎಂಬದನ್ನು ಯಾರೂ ಸ್ಪಷ್ಟಪಡಿಸಿಲ್ಲ. ಇತ್ತೀಚಿನ ಕೆಲ ವಿದ್ವಾಂಸರು “ಕ್ವಾಕ್ರ್ಸ್” ಮತ್ತು ಕ್ಷಿಯರ್ಸ್” ನಂತಹ ಪರಿಕಲ್ಪನೆಗಳನ್ನು ಹೇಗೆ ಅರ್ಥ ವಿನ್ಯಾಸ ಮಾಡುತ್ತಾರೋ ಹಾಗೆಯೇ ಈ ಜಾತಿ ಅಥವಾ ಮತವನ್ನು (ರಿಲಿಜನ್) ಅರ್ಥ ಮಾಡಿಕೊಳ್ಳಬಹುದು ಎಂದುಕೊಂಡಿದ್ದಾರೆ. ಹಾಗಾಗಿ ನಿಮಗೆ ಹೇಗೆ ಬೇಕೋ ಏನು ಬೇಕೋ ಹಾಗೆ ಜಾತಿಯನ್ನು ಅರ್ಥೈಸಿಕೊಳ್ಳಬಹುದು ಎಂದೇ ತಿಳಿದುಕೊಂಡಿದ್ದಾರೆ (ಹಿಂದುಯಿಸಂ ಕೂಡ ಹೀಗೆಯೇ 18 ನೇ ಶತಮಾನದ ಮೊದಲು ಇರದಿದ್ದ ಈ ಪರಿಕಲ್ಪನೆ ಈಗ ರಿಲಿಜನ್ ಆಗಿಬಿಟ್ಟಿದೆ) ಮತ್ತೆ ಕೆಲವರಿಗೆ `ಬ್ರಾಹ್ಮಿನಿಸಂ’ (ಹಾಗೆಂದರೇನು?) ಎಂಬುದು ಜಾತಿ ವ್ಯವಸ್ಥೆಯಾಗಿದೆ.

ವಿಷಾದದ ಸಂಗತಿ ಎಂದರೆ ಈ ಎಲ್ಲ ಪರಿಕಲ್ಪನೆಗಳು, ಪ್ರಭೇದಗಳು ಶತಶತಮಾನಗಳಿಂದ ಅಸ್ತಿತ್ವದಲ್ಲಿದ್ದು, ಬುದ್ಧ, ಅಲ್ಲಮರಿಂದ ಹಿಡಿದು ಇತ್ತೀಚಿನ ಮಿಶನರಿಗಳು, ಉದಾರವಾದಿಗಳು ಹಾಗೂ ಮಾಕ್ರ್ಸ್‍ವಾದಿಗಳವರೆಗೆ ಎಲ್ಲರೂ ಈ ಜಾತಿ ಮತಗಳ ವಿರುದ್ಧ ಹೋರಾಡುತ್ತಲೇ ಬಂದಿದ್ದಾರೆ ಎಂಬಂತೆ ವಾದ ಮಾಡುತ್ತಾರೆ. ಆದರೆ ಶತಶತಮಾನಗಳಷ್ಟು ಹಳೆಯದು ಎಂದು ಬಿಂಬಿಸಲ್ಪಟ್ಟ ಈ ವಿಷಯವನ್ನು ವಿವರಿಸಲು ಮಾತ್ರ ಯಾರಿಗೂ ಸಾಧ್ಯವಾಗಿಲ್ಲ. ಬುದ್ಧಿಜೀವಿಗಳ ಪ್ರಕಾರ ಬುದ್ಧ, ಅಲ್ಲಮರಂತಹ ಮೇರು ವ್ಯಕ್ತಿಗಳಿಗೇ (ಇವರು ಹೇಳಿದ ವಿಚಾರ, ಬರಹಗಳ ಸರಿಯಾಗಿ ಸಂಶೋಧನೆ ಆಗಿದೆಯೇ ಎಂಬ ಪ್ರಶ್ನೆಯನ್ನು ಸದ್ಯ ಒತ್ತಟ್ಟಿಗಿಡೋಣ) ಈ ಜಾತಿವ್ಯವಸ್ಥೆಯನ್ನು ತೊಡೆದುಹಾಕಲು ಸಾಧ್ಯವಾಗಿಲ್ಲ. ಅಂದಿನಿಂದ ಈಗಿನವರೆಗಿನ ಎಲ್ಲ ವಿದ್ವಾಂಸರಿಗೆ ಇದು ಸವಾಲಾಗಿ ನಿಂತಿದೆ. ಇಷ್ಟಾದರೂ ಇದೇನು ಎಂಬುದನ್ನು ನಮಗೆ ಗುರುತಿಸಲು ಹಾಗೂ ಅರ್ಥೈಸಲು ಸಾಧ್ಯವಾಗುತ್ತಿಲ್ಲ ಎಂಬುದು ಈಗಿನ ಅಕಡೆಮಿಕ್ ವಲಯದ ವಾದವಾಗಿದೆ. ಈ ಎಲ್ಲಾ ವಿಫಲ ಯತ್ನಗಳೂ ರಾಜ್ಯ (ಸ್ಟೇಟ್), ರಾಜಕಾರಣಿಗಳ ಮತ್ತು ಬೌದ್ಧಿಕ ವರ್ಗದ ಜಾತಿ ನಿರ್ಮೂಲನೆಯ ಆಶಯವನ್ನು ಮತ್ತೂ ಗಟ್ಟಿಗೊಳಿಸಿದೆ.

ವಸಾಹತುಶಾಹಿ ಪ್ರಾರಂಭಿಸಿದ ಈ ರೀತಿಯ ಪ್ರತಿನಿಧ್ಯಾತ್ಮಕ ತಂತ್ರ ಈ ಬಾರಿ ಪರಿಪೂರ್ಣ ಸಾಫಲ್ಯವನ್ನು ಕಂಡುಕೊಂಡಂತಿದೆ. ಬೌದ್ಧಿಕವಾಗಿ ಈ ಜಾತಿ ವ್ಯವಸ್ಥೆ ಏನು ಎಂಬುದನ್ನು ನಾವು ಕಂಡುಕೊಳ್ಳದೇ ಇದ್ದರೂ ಕೂಡ ಅದರ ಸಂಪೂರ್ಣ ಪ್ರಾತಿನಿಧ್ಯವನ್ನು ಮಾತ್ರ ಈಗ ನೋಡಬಹುದಾಗಿದೆ. ಈ ರೀತಿಯ ಪ್ರತಿನಿಧ್ಯಾತ್ಮಕ ಕಲ್ಪನೆಗೆ ಇಂಬು ಕೊಡುವ ಮೂಲಕ ಪಾಶ್ಚಿಮಾತ್ಯ ರಾಜಕೀಯ ಸಿದ್ಧಾಂತಗಳಿಗೆ ಒಂದಾದರೂ ಅಪರೂಪದ ಕಾಣಿಕೆಯನ್ನು ಭಾರತ ಸಲ್ಲಿಸಬಹುದು.

ಇದರಲ್ಲೊಂದು ಸಣ್ಣ ತೊಡಕಿದೆ-ನಮ್ಮ ವಸಾಹತು ಪ್ರಭುಗಳು ಜಾತಿಗಣತಿಯನ್ನು ಮಾಡಲಾರಂಭಿಸಿದಾಗ, ಭಾರತದ ಸಾಮಾಜಿಕ ಜಗತ್ತಿನ ವಿವರಣೆ ಕೊಡುವ ಗೋಜಿಗೇ ಹೋಗಲಿಲ್ಲ. ಅವರಿಗೆ ಈ ಜಾತಿಗಣತಿ, ಭಾರತದ ಅಪ್ರತಿಮ ವಿವಿಧತೆಯನ್ನು ಅರ್ಥಮಾಡಿಕೊಳ್ಳಲು, ಆಡಳಿತ ಮಾಡಲು ಸೂಚಿಸಿರುವ ಕ್ರಿಯೆಯಾಗಿತ್ತೇ ಹೊರತು ವಿವರಣೆಯಾಗಿರಲಿಲ್ಲ. ಇಲ್ಲಿಯ ಆಚರಣೆಗಳು ಅವರ ಚಿಂತನಾ ಕ್ರಮದಿಂದ ನೋಡಿದರೆ ನೈತಿಕತೆಯ ಉಲ್ಲಂಘನೆಗಳಾಗಿದ್ದವು. ಆತ್ಮಸಾಕ್ಷಿಯಳ್ಳ ಆಡಳಿತಗಾರರು ಹಾಗೂ ಸಹಾನುಭೂತಿಯುಳ್ಳ ಮಿಷನರಿಗಳು ನೀಡಿದ ಭಾರತೀಯ ಸಾಮಾಜಿಕ ವಿವರಣೆಗಳಾಗಿ ವಸಾಹತು ದಾಖಲೆಗಳನ್ನು ನೋಡುವುದು ದೋಷ ಪೂರಿತ ತಿಳಿವಳಿಕೆಯಾಗುತ್ತದೆ. ಬದಲಾಗಿ ಅವನ್ನು ಭಾರತದಂತಹ ಸಮಾಜದಲ್ಲಿ ಆಡಳಿತ ನಡೆಸಲು, ವ್ಯವಹರಿಸಲು ಬೇಕಾದಂತಹ ಕ್ರಿಯಾಶೀಲ ಕ್ರಿಯೆಗಳನ್ನಾಗಿ ನೋಡುವುದು ಸದ್ಯದ ತುರ್ತಾಗಿದೆ. ಈಗಿನ ಜಾತಿಗಣತಿ ಅಂಥ ಕ್ರಿಯೆಗಳ ಪುನಾರಾವರ್ತನೆಯಾಗಿದೆ. ಆದರೆ ಈ ಬಗೆಯ ಯಥಾವತ್ತಾದ ಪುನರಾವರ್ತನೆ ನಮ್ಮ  ಆಡಳಿತಾತ್ಮಕ ವಿಚಾರಗಳ ದೊಡ್ಡ ದುರಂತವಲ್ಲದೇ ಮತ್ತೇನು? ನಮ್ಮ ಎಲ್ಲ ಸೋ-ಕಾಲ್ಡ್ ಸಮಾಜ ವಿಜ್ಞಾನಿಗಳಿಗೆ ವಸಾಹತುಗಾರರು ಪ್ರಾರಂಭಿಸಿದ ಸುಧಾರಣಾಕ್ರಮಗಳ ಪುನರಾವರ್ತನೆ ಮಾಡುವುದೇ ಆದ್ಯತೆಯಾಗಿತ್ತೇನೋ ಎನಿಸುತ್ತದೆ. ಭಾರತದ ಸಮಾಜ ವಿಜ್ಞಾನಿಗಳಿಗೆ ಬೌದ್ಧಿಕವಾಗಿ ಜಾತಿವ್ಯವಸ್ಥೆಯನ್ನು ಅರ್ಥೈಸಿಕೊಳ್ಳುವುದಕ್ಕಿಂತ ಕುಯುಕ್ತಿಗಳನ್ನು ಬಳಸಿ ನಮ್ಮ ಸಾಮಾಜಿಕ ಜಗತ್ತನ್ನು ಕಟ್ಟುವುದು ಸುಲಭಸಾಧ್ಯ ಎನಿಸಿದೆ.

ರಾಜಕಾರಣಿಗಳ ಮತ್ತು ಬೌದ್ಧಿಕ ವರ್ಗದ ಒಳ ಒಪ್ಪಂದ (holy alliance) ನಮ್ಮ ದೇಶವನ್ನು ಬಹಳ ಸರಳೀಕರಿಸಿ ವಿರೂಪಗೊಳಿಸಲು ಸಜ್ಜಾಗಿದೆ. ಇಂತಹ ಗಳಿಗೆಯಲ್ಲಿ ನಮ್ಮತನವನ್ನು ನಾವು ಹೊಸದಾಗಿ ಕಂಡುಕೊಳ್ಳಬೇಕಾದ ಗಂಭೀರ ಪ್ರಯತ್ನ ಮಾಡಬೇಕಿದೆ. ಈ ಸಮಯದಲ್ಲಿ ಅಂತಿಮ ನಿರ್ಣಯದಾರನಾಗಿರುವ-ಎಲ್ಲದರ ಬಗ್ಗೂ ತೀರ್ಪನ್ನು ಕೊಡುವ (ಅದು ರಿಲೀಜಿಯಸ್ ಚಿಹ್ನೆಗೆ ಸಂಬಂಧಿಸಿದ ಪ್ರಶ್ನೆ ಇರಬಹುದು ಅಥವಾ ಯಾವುದೇ ಜಾತಿ ಸಂಬಂಧಿ ಪ್ರಭೇದವಿದ್ದಿರಬಹುದು) ಸರ್ವೋಚ್ಚ ನ್ಯಾಯಾಲಯ ಮಧ್ಯಪ್ರವೇಶ ಮಾಡಿ ಜಾತಿಗಣತಿಯ ಬಗ್ಗೂ ತನ್ನ ತೀರ್ಪನ್ನು ನೀಡಬಹುದೇನೋ!

ಚಿತ್ರ ಕೃಪೆ :http://www.udayavani.com

5 ಟಿಪ್ಪಣಿಗಳು Post a comment
  1. hemapathy
    ಮೇ 6 2015

    ಸಾಂಧರ್ಭಿಕ ಲೇಖನ. ಜಾತ್ಯಾತೀತ ದೇಶದಲ್ಲಿ ಜಾತಿಗಣತಿಯೆಂಬುದು ಒಂದು ಅವೈಚಾರಿಕ ವಿಷಯವಾಗಿದ್ದು, ನಾನು ಇದನ್ನು ವಿರೋಧಿಸುತ್ತೇನೆ.

    ಉತ್ತರ
  2. Shripad
    ಮೇ 6 2015

    ಜಾತ್ಯತೀತರಾಗಲು ಜಾತಿ ಲೆಕ್ಕ ಬೇಕು!
    ಇದೊಂದು ಪ್ರಗತಿಪರ ಧೋರಣೆ ಹುಟ್ಟಿಹಾಕಿದ ಕೆಟ್ಟ ನಂಬಿಕೆಯ ಫಲ. ಎಲ್ಲರಿಗೂ ಆರೋಗ್ಯ ಶಿಕ್ಷಣ ಉದ್ಯೋಗ ನೀಡುವ ಶುದ್ಧ ಆರ್ಥಿಕ ಸಮೀಕ್ಷೆ ನಡೆಸಿದರೆ ಓಟಿನ ಲೆಕ್ಕಾಚಾರಕ್ಕೆ ಉಪಯುಕ್ತವಾಗುವುದಿಲ್ಲವಲ್ಲ. ಹಾಗಾಗಿ ಇಂಥ ಸಮೀಕ್ಷೆ. ಯಾವ ಪ್ರಗತಿಪರ, ಬುದ್ಧಿಜೀವಿಯೂ ಈ ಗಣತಿಯನ್ನು ವಿರೋಧಿಸುತ್ತಿಲ್ಲ. ಇಂಥ ಕಾರಣಕ್ಕೇ ಹೇಳುವುದು ಸೋ ಕಾಲ್ಡ್ ಬುದ್ಧಿಜೀವಿಗಳು ಗಂಜಿ ಗಿರಾಕಿಗಳು ಎಂದು. ಅವರಿಗೆ ಜಾತ್ಯತೀತತೆ ಬಗ್ಗೆ ಮಾತನಾಡುವ ನೈತಿಕತೆಯೇ ಇಲ್ಲ.

    ಉತ್ತರ
    • Nagshetty Shetkar
      ಮೇ 11 2015

      “ಯಾವ ಪ್ರಗತಿಪರ, ಬುದ್ಧಿಜೀವಿಯೂ ಈ ಗಣತಿಯನ್ನು ವಿರೋಧಿಸುತ್ತಿಲ್ಲ.”

      Census is done with good intentions to identify social groups needing government benefits. This will help deserving social groups and they can move up in the ladder. So we don’t oppose.

      ಉತ್ತರ
      • shripad
        ಮೇ 12 2015

        Why do worry about social groups? As so called self proclaimed intellectuals like you say that there are only have’s and have not’s?

        ಉತ್ತರ
        • Nagshetty Shetkar
          ಮೇ 13 2015

          ಏಕೆ ಅಂದರೆ ಸಮಾಜದ ಎಲ್ಲಾ ಸಮುದಾಯಗಳು ಮುಂದೆ ಬರತಕ್ಕದ್ದು ಅಂತ ನಾವು ಪ್ರಗತಿಪರರು ಪಣತೊಟ್ಟಿದ್ದೇವೆ.

          ಉತ್ತರ

ನಿಮ್ಮ ಅನಿಸಿಕೆ...

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Note: HTML is allowed. Your email address will never be published.

Subscribe to comments