–
ರಾಘವೇಂದ್ರ ಸುಬ್ರಹ್ಮಣ್ಯ
ಜಗತ್ತಿನಲ್ಲಿ ಎಷ್ಟು ರಾಜಕಾರಣಿಗಳನ್ನು ನೀವು ನೋಡಿಲ್ಲ!? ಬೆಳಗೆದ್ದರೆ ಮನೆಯೆದುರು ಕಟ್ಟಿಹೋದ ಚರಂಡಿಯನ್ನು ಸರಿಪಡಿಸುತ್ತೇನೆಂದು ಆಶ್ವಾಸನೆ ಕೊಡುವ ಕಾರ್ಪೋರೇಟರನಿಂದ ಹಿಡಿದು, ವಿದೇಶದಿಂದ ಕಪ್ಪುಹಣ ಹಿಂದೆತರೆತ್ತೇನೆಂಬ ಭರವಸೆ ನೋಡುವ ಪ್ರಧಾನಿಯವರೆಗೆ, ಎಲ್ಲರನ್ನೂ ನೀವು ನೋಡಿದ್ದೀರ. ಎಲ್ಲರನ್ನೂ ಕೆಲಕಾಲದವರೆಗೆ ನಂಬಿದ್ದೀರ. ಎಲ್ಲರಿಂದಲೂ ಒಂದಲ್ಲ ಒಂದು ಬಾರಿ ಮೋಸ ಹೋಗಿದ್ದೀರ. ಅವರ ಆಶ್ವಾಸನೆಗಳನ್ನು ಕೇಳಿ ಕೇಳಿ ರೋಸಿ ಹೋಗಿದ್ದೀರ. ‘ಯಾರೂ ಆಶ್ವಾಸನೆಗಳನ್ನು ಪೂರ್ತಿ ಮಾಡಲ್ಲ. ಮತ್ಯಾವ ಸುಖಕ್ಕೆ ಅವನ್ನು ಕೊಡ್ತಾರೋ ಏನೋ’ ಅಂತಾ ಬೈದುಕೊಂಡೂ ಇದ್ದೀರಿ. ‘ಜಗತ್ತಿನಲ್ಲಿ ಯಾವ ರಾಜಕಾರಣಿಯೂ ತಾನು ಕೊಟ್ಟ ಆಶ್ವಾಸನೆಗಳನ್ನು ನೂರಕ್ಕೆ ನೂರು ಈಡೇರಿಸಿಲ್ಲ, ಇವನದ್ದೇನು ಬಿಡಿ, ಕೊಟ್ಟ ಇಪ್ಪತ್ತು ಆಶ್ವಾಸನೆಗಳಲ್ಲಿ ಎರಡನ್ನಾದರೂ ಈಡೇರಿಸಿದ್ದಾನೆ’ ಅಂತಾ ಕೆಲವೊಮ್ಮೆ ಸಮಾಧಾನವವೂ ಮಾಡಿಕೊಂಡಿದ್ದೀರಿ.
ಆದರೆ ಜಗತ್ತಿನಲ್ಲಿ ಕನಿಷ್ಟ ಒಬ್ಬ ರಾಜಕಾರಣಿ, ತಾನು ಕೊಟ್ಟ ಆಶ್ವಾಸನೆಗಳನೆಲ್ಲಾ ನೂರಕ್ಕೆ ನೂರು ಈಡೇರಿಸಿದ್ದಾನೆಂದರೆ ನಂಬುತ್ತೀರಾ? ಹೌದು ನೀವು ಓದಿದ್ದು ಸರಿಯಾಗಿದೆ. ರಾಜಕಾರಣಿಯೊಬ್ಬ ತಾನು ಚುನಾವಣೆಗೆ ಮೊದಲು ಕೊಟ್ಟ ಎಲ್ಲಾ ಆಶ್ವಾಸನೆಗಳನ್ನು, ಆಡಳಿತಕ್ಕೆ ಬಂದಮೇಲೆ ಈಡೇರಿಸಿದ್ದಾನೆ!! ಅದೂ ಕೂಡ ಒಂದೇ ಒಂದು ಆಡಳಿತ ಕಾಲಾವಧಿಯಲ್ಲಿ!! ಒಬ್ಬ ರಾಜಕಾರಣಿ ಇದನ್ನು ಸಾಧಿಸಬೇಕಾದರೆ ಅವನಿಗೆ ಅದೆಂತಾ ದೂರದೃಷ್ಟಿಯಿರಬೇಕು ಮತ್ತು ತನ್ನಮೇಲೆ ಹಾಗೂ ತನ್ನ ತಂಡದ ಮೇಲೆ ಅದೆಷ್ಟು ವಿಶ್ವಾಸವಿರಬೇಕು, ಒಮ್ಮೆ ಯೋಚಿಸಿ.
ಅಂದಹಾಗೆ ಆ ರಾಜಕಾರಣಿ ಇವತ್ತು ನಿನ್ನೆಯವನಲ್ಲ. ಆತನ ಆಡಳಿತ ನಡೆದದ್ದು 1845 ಮತ್ತು 1849ರ ಮಧ್ಯೆ. ಅಮೇರಿಕಾ ಸಂಯುಕ್ತ ಸಂಸ್ಥಾನದ 11ನೇ ಅದ್ಜ್ಯಕ್ಷನಾಗಿ ಚುನಾಯಿತನಾದ ಜೇಮ್ಸ್.ಕೆ.ಪೋಲ್ಕ್ ಎಂಬ ರಾಜಕಾರಣಿಯ ಬಗ್ಗೆ ನಾವು ಮಾತನಾಡುತ್ತಿರುವುದು. 1795ರಲ್ಲಿ ಜನಿಸಿದ ಜೇಮ್ಸ್, ಹತ್ತುಮಕ್ಕಳಿದ್ದ ದೊಡ್ಡ ಕುಟುಂಬದ ಹಿರಿಮಗನಾಗಿ, ರೈತನಾಗಿ ಬೆಳೆದವ. ಕಷ್ಟಗಳನ್ನು ಅರಿತವ. ಇವನ ಬಗೆಗಿನ ಒಂದು ಕಥೆಯ ಪ್ರಕಾರ (ದಂತಕಥೆಯಲ್ಲ, ನಿಜವಾದ ಕಥೆ) 1812ರಲ್ಲಿ ಈತನಿಗೆ ಮೂತ್ರಕೋಶದ ಕಲ್ಲುಗಳಿಗಾಗಿ ಶಸ್ತ್ರಚಿಕಿತ್ಸೆ ಮಾಡುವಾಗ, ಈ ಪುಣ್ಯಾತ್ಮ ಇಡೀ ಶಸ್ತ್ರಚಿಕಿತ್ಸೆಯುದ್ದಕ್ಕೂ ಎಚ್ಚರವೇ ಇದ್ದನಂತೆ!! ಅಂದು ಆಸ್ಪತ್ರೆಯಲ್ಲಿ ಅರವಳಿಕಾಗಿ ಲಭ್ಯವಿದ್ದದ್ದು ಬ್ರಾಂಡಿ ಮಾತ್ರ. ಅಂತಾ ಗಟ್ಟಿಪಿಂಡ ಇವನು.
ಇರಲಿ ಬಿಡಿ ವಿಷಯ ಅದಲ್ಲ. ಜೇಮ್ಸ್ ಜೀವನದಲ್ಲಿ ಮುಂದುವರೆದು 1835ರಿಂದ 1839ರವರೆಗೆ ಅಮೇರಿಕಾದ ಪಾರ್ಲಿಮೆಂಟಾದ ‘ಹೌಸ್ ಆಫ್ ರೆಪ್ರೆಸಂಟೇಟಿವ್’ನ ಸ್ಪೀಕರ್ ಆಗಿ, ಮತ್ತು 1839ರಿಂದ 1841ರವರೆಗೆ ಟೆನ್ನೆಸ್ಸೀ ರಾಜ್ಯದ ಗವರ್ನರ್ ಆಗಿ ಕಾರ್ಯನಿರ್ವಹಿಸಿದ. 1845ರ ಚುನಾವಣೆಯಲ್ಲಿ ‘ಜಾಕ್ಸೋನಿಯನ್ ಡೆಮಾಕ್ರಸಿ’ ಪಾರ್ಟಿಯಿಂದ (ಹೌದು ಆಗ ಅಮೇರಿಕದಲ್ಲಿ ಈಗಿನಂತೆ ಕೇವಲ ಎರಡೇ ಪಕ್ಷಗಳಿರಲಿಲ್ಲ, ಬಹಳಷ್ಟಿದ್ದವು) ಅಧ್ಯಕ್ಷೀಯ ಅಭ್ಯರ್ಥಿಯಾಗಿ ನಾಮಕರಣಗೊಂಡು, ಅತ್ಯಂತ ಕಡಿಮೆ ಗೆಲ್ಲುವ ಅವಕಾಶವಿದ್ದನೆಂದು ಕರೆಸಿಕೊಂಡೂ, ನಿಚ್ಚಳ ಬಹುಮತದಿಂದ ಗೆದ್ದುಬಂದ. ಜೇಮ್ಸ್ ತನ್ನ ಮೊದಲ ಭಾಷಣದಲ್ಲೇ ‘ನಾನು ಒಂದೇ ಕಾಲಾವಧಿಯ ಅವಕಾಶ ನಿಮ್ಮಿಂದ ಕೇಳುತ್ತಿದ್ದೇನೆ. ನಾನು ಕೊಡುವ ಪ್ರತಿಯೊಂದು ಮಾತನ್ನೂ ಈಡೇರಿಸುತ್ತೇನೆ, ಹಾಗೂ ಇನ್ನೊಮ್ಮೆ ನಿಮ್ಮ ಮುಂದೆ ಮತ ಕೇಳಲು ಬರುವುದಿಲ್ಲ’ ಎಂದಿದ್ದ ಹಾಗೂ ಆ ಮಾತನ್ನು ಉಳಿಸಿಕೊಂಡ ಕೂಡಾ!
ತನ್ನ ಅಧ್ಯಕ್ಷೀಯ ಕಾಲಾವಧಿಯಲ್ಲಿ ಜೇಮ್ಸ್ ತಾನು ಚುನಾವಣೆಯಲ್ಲಿ ನೀಡಿದ ಸೈನ್ಯಬಲವೃದ್ಧಿಯ ಅಶ್ವಾಸನೆಗನುಗುಣವಾಗಿ ‘ಯು.ಎಸ್ ನೌಕಾ ಅಕಾಡೆಮಿ’ಯನ್ನೂ, ಅಮೇರಿಕಾದ ಇತಿಹಾಸವನ್ನು ಕಾಪಿಟ್ಟು ಮುಂದಿನ ತಲೆಮಾರಿಗೆ ಸಾಗಿಸುವ ಧ್ಯೇಯದಿಂದ ಹಾಗೂ ಅಮೇರಿಕಾದ ಮಕ್ಕಳಿಗೆ ಜಗತ್ತಿನೆಲ್ಲೆಡಿಯಿಂದ ಜ್ಞಾನಹರಿದುಬರುವಂತೆ ನೋಡಿಕೊಳ್ಳುತ್ತೇನೆಂದು ನೀಡಿದ ಮಾತಿಗನುಗುಣವಾಗಿ ‘ಸ್ಮಿತ್-ಸೋನಿಯನ್ ಪ್ರತಿಷ್ಠಾನ’ವನ್ನು ಸ್ಥಾಪಿಸಿದ. ‘ನಮಗಾಗಿ ಪ್ರಾಣತೆತ್ತ ಹಿರಿಯರನ್ನು ಗೌರವಿಸುವುದಕ್ಕೆ ಹೊಸರೂಪ ಕೊಡುತ್ತೇನೆ’ ಎಂಬ ಮಾತಿಗನುಸಾರವಾಗಿ ಅಮೇರಿಕಾದ ಪ್ರಸಿದ್ಧ ಶಿಲಾಕೃತಿ ಹಾಗೂ (ಇಂದಿಗೂ) ಜಗತ್ತಿನ ಅತೀ ಎತ್ತರದ ಸಂಪೂರ್ಣ ಕಲ್ಲಿನಿಂದ ಕಟ್ಟಲ್ಪಟ್ಟ ಆಕೃತಿಯಾದ ‘ವಾಷಿಂಗ್ಟನ್ ಸ್ಮಾರಕ’ದ ಶಂಕುಸ್ಥಾಪನೆ ಮಾಡಿದ. ದೇಶದ ಅವಿಛ್ಛಿನತೆಯನ್ನು ಕಾಪಾಡುತ್ತೇನೆಂದು ಮಾತು ಕೊಟ್ಟಿದ್ದ ಜೇಮ್ಸ್, ಅಮೇರಿಕಾದ ಮೊದಲಿನ ಗಡಿಗಳನ್ನು ಉಳಿಸಿದ್ದಲ್ಲದೆ, ಗಡಿ ವಿಚಾರದಲ್ಲಿ ಸದಾ ಕಿರಿಕಿರಿ ಮಾಡುತ್ತಿದ್ದ ಮೆಕ್ಸಿಕೋದ ಮೇಲೆ ಯುದ್ಧಸಾರಿ ಟೆಕ್ಸಾಸನ್ನು ಅಮೆರಿಕೆಯ ತೆಕ್ಕೆಗೆ ತಂದ. ಟೆಕ್ಸಾಸಿನ ನಂತರ ಕ್ಯಾಲಿಫೋರ್ನಿಯಾ ಕಡೆಗೆ ತನ್ನ ಗಮನ ಹರಿಸಿ ಅದನ್ನೂ ಮೆಕ್ಸಿಕೋದ ಹಿಡಿತದಿಂದ ಬೇರ್ಪಡಿಸಿ ಅಮೇರಿಕೆಗೆ ಸೇರಿಸಿದ. ಇಷ್ಟೇ ಅಲ್ಲದೆ ಆಗಿನ್ನೂ ಬ್ರಿಟೀಷರ ಮತ್ತು ಅ.ಸಂ.ಸಂದ ಜಂಟಿ ಸ್ವತ್ತಾಗಿದ್ದ ಉತ್ತರ-ಪಶ್ಚಿಮದಲ್ಲಿದ್ದ ಓರೆಗಾಂವ್ ಭೂಪ್ರದೇಶದ ಗಡಿ ತಗಾದೆಗೂ ಕೊನೆ ಹಾಡಿದ ಜೇಮ್ಸ್, ಕೊನೆಗೂ ಅದನ್ನೂ ತನ್ನ ದೇಶದ ನಕಾಶೆಗೆ ಸೇರಿಸಿ ಒರೆಗಾಂವ್, ವಾಶಿಂಗ್ಟನ್, ಐಡಾಹೋ, ವ್ಯೋಮಿಂಗ್ ಮತ್ತು ಮೊಂಟಾನ ರಾಜ್ಯಗಳ ಹುಟ್ಟಿಗೆ ಕಾರಣನಾದ. (ಹೌದು, ನಾವಿಂದು ನೋಡುತ್ತಿರುವ ಅಮೇರಿಕಾ ಸಂಯುಕ್ತ ಸಂಸ್ಥಾನ, ಆಗಿನ್ನೂ ಈ ರೀತಿಯಿರಲಿಲ್ಲ. ಅ.ಸಂ.ಸಂ ಕ್ಕೆ ಇಂದಿನ ‘ಕರಾವಳಿಯಿಂದ ಕರಾವಳಿಯ ದೇಶ’ದ ರೂಪು ಕೊಟ್ಟಿದ್ದು ಜೇಮ್ಸ್ ಪೋಲ್ಕನೇ). ತನ್ನ ಕಾಲಾವಧಿ ಮುಗಿದ ಕೊನೆಯ ದಿನ ನೀಡಿದ ಭಾಷಣದಲ್ಲಿ, ತನ್ನ ರಿಪೋರ್ಟ್ ಕಾರ್ಡನ್ನು ಜನರ ಮುಂದಿಟ್ಟು, ಎಲ್ಲರಿಗೂ ಧನ್ಯವಾದ ತಿಳಿಸಿ, ಶ್ವೇತಭವನಕ್ಕೆ ಟೋಪಿತೆಗೆದು ಸಲಾಂ ಹೊಡೆದು ನಿರ್ಗಮಿಸಿದ. ತಾನು ಚುನಾವಣೆಯಲ್ಲಿ ಕೊಟ್ಟ ಪ್ರತಿಯೊಂದು ಭರವಸೆಯನ್ನೂ ಕಾರ್ಯರೂಪಕ್ಕಿಳಿಸಿದ ಜಗತ್ತಿನ ಬಹುಷಃ ಏಕೈಕ ರಾಜಕಾರಣಿಯೆಂದರೆ ಅದು ಜೇಮ್ಸ್.ಕೆ.ಪೋಲ್ಕ್ ಮಾತ್ರವೇ.
ಇತಿಹಾಸಜ್ಞರು ಜೇಮ್ಸ್ ಪೋಲ್ಕನಿಗೆ ‘ಕಾರ್ಯಸೂಚಿಯನ್ನು ನಿರ್ಧರಿಸಿ, ಅದನ್ನು ಸಂಪೂರ್ಣಪ್ರಮಾಣದಲ್ಲಿ ಕಾರ್ಯರೂಪಕ್ಕೆ ತಂದ’ ಅಧ್ಯಕ್ಷರ ಪಟ್ಟಿಯಲ್ಲಿ, ಯಾವಾಗಲೂ ಮೇಲ್ದರ್ಜೆಯನ್ನು ನೀಡಿದ್ದಾರೆ ಹಾಗೂ ಅವನನ್ನು ‘ಜನರಿಂದ ಅತೀ ಕಡಿಮೆ ತಿಳಿಯಲ್ಪಟ್ಟ, ಅತ್ಯಂತ ಪರಿಣಾಮಕಾರೀ ಅಧ್ಯಕ್ಷ’ನೆಂದೇ ಕರೆಯುತ್ತಾರೆ.
ಅಗಾಧ ದೂರದೃಷ್ಟಿಯುಳ್ಳ ಹಾಗೂ ದುಂದುವೆಚ್ಚದ ಪ್ರಬಲ ವಿರೋಧಿಯಾಗಿದ್ದ ಜೇಮ್ಸ್. ಇವನ ಗಟ್ಟಿಮನಸ್ಸಿನ ಆಡಳಿತಕ್ಕೆ ಉದಾಹರಣೆಯಾಗಿ ಇತಿಹಾಸಜ್ಞರು ‘ರ್ರಿವರ್ಸ್ ಅಂಡ್ ಹಾರ್ಬರ್ಸ್ ಬಿಲ್’ ಅನ್ನು ಉಲ್ಲೇಖಿಸುತ್ತಾರೆ. 1846ರಲ್ಲಿ ಬಂದರು ಮತ್ತು ನದಿ ಅಭಿವೃದ್ಧಿಗಾಗಿ ಐದುಲಕ್ಷ ಡಾಲರುಗಳನ್ನು ಮೀಸಲಿಡುವ ‘ನದಿ ಮತ್ತು ಬಂದರು ಮಸೂದೆ’ ಸಂಸತ್ತಿನ ಮುಂದೆ ಬಂದಾಗ, ಸಂಸತ್ತು ಅದನ್ನು ಬಹುಮತದಿಂದ ಒಪ್ಪಿದರೂ, ತನ್ನ ಅಧ್ಯಕ್ಷೀಯ ವಿಟೋ ಉಪಯೋಗಿಸಿ ತಿರಸ್ಕರಿಸಿದ. ಯಾವುದೇ ವಿದೇಶೀ ವ್ಯಾಪರವಿಲ್ಲದ ಬಂದರುಗಳೂ, ಕೇವಲ ರಾಜಕೀಯ ಕಾರಣಕ್ಕಾಗಿ ಕೆಲ ನದಿಪ್ರದೇಶಗಳನ್ನು ಮಸೂದೆಯಲ್ಲಿ ಸೇರಿಸಿದ್ದನ್ನು ಮನಗಂಡಿದ್ದ ಜೇಮ್ಸ್ ಈ ನದೀಪ್ರದೇಶಗಳು ಮತ್ತು ಬಂದರುಗಳ ಅಭಿವೃದ್ಧಿ, ಸ್ಥಳೀಯ ಸಮಸ್ಯೆಗಳೇ ಹೊರತು, ರಾಷ್ಟ್ರೀಯ ಸಮಸ್ಯೆಗಳಲ್ಲ ಹಾಗೂ ಇದಕ್ಕಾಗಿ ಪೆಡರಲ್ ನಿಧಿಯ ಹಣ ವ್ಯಯಿಸುವುದು ಅಸಂವಿಧಾನಿಕ ಎಂದ. ಕೆಲ ರಾಜಕಾರಣಿಗಳ ತವರು ಕ್ಷೇತ್ರಗಳ ಅಭಿವೃದ್ಧಿಗಾಗಿ ಪೆಢರಲ್ ಮಸೂದೆಯೊಂದನ್ನು ಸಂಸತ್ತಿನ ಮುಂದಿಡುವುದು ಭ್ರಷ್ಟಾಚಾರದ ಇನ್ನೊಂದು ರೂಪವಲ್ಲದೇ ಮತ್ತೇನು ಅಲ್ಲ, ಹಾಗೂ ಈ ರೀತಿಯ ಭ್ರಷ್ಟಾಚಾರ ಸಂವಿಧಾನವನ್ನೇ ನಂಗಿಹಾಕಿ ಗಣರಾಜ್ಯವನ್ನು ಕುಸಿಯುವಂತೆ ಮಾಡುತ್ತದೆ ಎಂದು ಜೇಮ್ಸ್ ಗುಡುಗಿದ. ಒಂದೇ ಬಾರಿ ಚುನಾವಣೆಗೆ ನಿಲ್ಲುತ್ತೇನೆ ಎಂದು ವಚನವಿತ್ತಿದ್ದ ಜೇಮ್ಸ್, ಎರಡನೇ ಬಾರಿ ಅತಿ ಸುಲಭವಾಗಿ ಗೆಲ್ಲಬಹುದಾಗಿತ್ತಾದರೂ, ಕೊಟ್ಟ ಮಾತುಗಳನ್ನು ಕಾರ್ಯರೂಪಕ್ಕಿಳಿಸಿ, ಎರಡನೇ ಬಾರಿಗೆ ಸ್ಪರ್ಧಿಸುವುದಿಲ್ಲವೆಂಬ ಮಾತನ್ನು ಉಳಿಸಿಕೊಂಡ.
ಛಾಯಾಗ್ರಹಣ ತಂತ್ರಜ್ಞಾನಕ್ಕೂ ಜೇಮ್ಸ್ ಪೋಲ್ಕ್ ಗೂ ಒಂದು ನಂಟಿದೆ. ಅದೇನೆಂದರೆ ಆಗಷ್ಟೇ ಬೆಳಕಿಗೆ ಬರುತ್ತಿದ್ದ ಛಾಯಾಗ್ರಹಣ ತಂತ್ರದಿಂದಾಗಿ, ಮೊತ್ತಮೊದಲನೆಯದಾಗಿ ಛಾಯಾಚಿತ್ರದಲ್ಲಿ ಸಿರೆಹಿಡಿಯಲ್ಪಟ್ಟ ಅಮೇರಿಕಾದ ಮೊತ್ತಮೊದಲ ಅಧ್ಯಕ್ಷನೂ ಜೇಮ್ಸ್ ಪೋಲ್ಕ್. ಇಂತಹ ಅಪರೂಪದ ವ್ಯಕ್ತಿತ್ವವನ್ನು ಛಾಯಾಗ್ರಹಣದ ‘ಮೊದಲುಗಳಲ್ಲಿ’ ಸೇರಿಸಿದರೆ ತಪ್ಪೇನೂ ಇಲ್ಲ, ಅಲ್ಲವೇ? ಅವನದಕ್ಕೆ ಖಂಡಿತಾ ಅರ್ಹ ಬಿಡಿ 🙂
ಜೇಮ್ಸ್ ಬಗೆಗಿನ ದುಃಖದ ಸುದ್ದಿಯೆಂದರೆ ಯಾವ ಕೆಲಸವನ್ನು ಮಾಡಲು ಆತ ನೇಮಕಗೊಂಡನೋ, ಅದೇ ಅವನನ್ನು ನಿತ್ರಾಣಗೊಳಿಸಿತು. ಯಾವ ಶ್ವೇತಭವನವನ್ನು ಉತ್ಸಾಹದಿಂದ ಪ್ರವೇಷಿಸಿದ್ದನೋ, ನಾಲ್ಕುವರ್ಷಗಳ ಬಳಿಕ ಅಲ್ಲಿಂದ ಹೊರಹೋಗುವಾಗ ಜೇಮ್ಸ್ ಸಂಪೂರ್ಣ ಕಳೆಗುಂದಿದ್ದ. ಮುಖದಲ್ಲಿ ಸಾಲುಗಳು ಮೂಡಿದ್ದವು, ಕಣ್ಣುಗಳ ಕೆಳಗೆ ಕಪ್ಪುಪಟ್ಟಿಗಳು ಮೂಡಿದ್ದವು. ಸಾರ್ವಜನಿಕ ಸೇವೆ ಅವನನ್ನು ಸಂಪೂರ್ಣ ನಿಶ್ಶಕ್ತನನ್ನಾಗಿಸಿತ್ತು. ಅಧ್ಯಕ್ಷ ಪದವಿಯಿಂದ ಕೆಳಗಿಳಿದ ಮೂರೇ ತಿಂಗಳಲ್ಲಿ ಕಾಲರಾಕ್ಕೆ ತುತ್ತಾಗಿ ಜೇಮ್ಸ್ ಮರಣಿಸಿದ.
ಚುನಾವಣೆಗೆ ಮುನ್ನ ಸೂರ್ಯಚಂದ್ರರನ್ನೇ ಧರೆಗಿಳಿಸಿ, ನಮ್ಮನ್ನು ದೇವಲೋಕವಾಸಿಗಳ ಸಮಾನರನ್ನಾಗಿ ಮಾಡುತ್ತೇವೆಂದು ಮಾತುಕೊಟ್ಟು, ಗಾದಿಯೇರಿದ ನಂತರ ನಮ್ಮದೇ ದುಡ್ಡು ನುಂಗುವ ಭರದಲ್ಲಿ ನಮ್ಮನ್ನೇ ‘ನೀನ್ಯಾರಪ್ಪಾ’ ಎಂದು ಕೇಳುವ ರಾಜಕಾರಣಿಗಳ ನಡುವೆ, ಜೇಮ್ಪ್ ಪೋಲ್ಕನಂತಹ ವ್ಯಕ್ತಿಗಳು ನೆನೆಯಲು ಖಂಡಿತಾ ಯೋಗ್ಯರು.
ಚಿತ್ರಕೃಪೆ : ವಿಕಿಪೀಡಿಯಾ
Like this:
Like ಲೋಡ್ ಆಗುತ್ತಿದೆ...
Related