ವಿಷಯದ ವಿವರಗಳಿಗೆ ದಾಟಿರಿ

ಮೇ 11, 2015

6

ಮಹಾತ್ಮ ಬಸವಣ್ಣನವರು ನಮಗಿಂದು ಎಷ್ಟು ಪ್ರಸ್ತುತ?

‍ನಿಲುಮೆ ಮೂಲಕ

– ಡಾ. ಸಂಗಮೇಶ ಸವದತ್ತಿಮಠ     

Basavannaಬಸವಣ್ಣನವರೆಂಬ ಮಹಾತ್ಮರ ಬಗ್ಗೆ ಯಾರಿಗೆ ಗೊತ್ತಿಲ್ಲ?  ಬಿಜ್ಜಳನ ಆಸ್ಥಾನದಲ್ಲಿದ್ದು ರಾಜಕಾರಣಿ, ಆಡಳಿತಗಾರ; ಧರ್ಮತತ್ತ್ವಪ್ರಮೇಯಗಳನ್ನು ಹೊಸ ಆನ್ವಯಿಕತೆಯಿಂದ ಪ್ರಯೋಜನಕಾರಿಯಾಗಿಸಿದ್ದರಿಂದ ತತ್ತ್ವಜ್ಞಾನಿ; ಧರ್ಮದ ಚೌಕಟ್ಟಿನೊಳಗೆ ಭಕ್ತಿಯ ಸೋಪಾನಗಳನ್ನು ಇಟ್ಟು, ಆಧ್ಯಾತ್ಮದ ಬೆಳಸು ತೆಗೆದ ಶ್ರೇಷ್ಠ ಆಧ್ಯಾತ್ಮಸಂತ,ಆರೋಗ್ಯಪೂರ್ಣ ಸಮಾಜ ನಿರ್ಮಾಣದ ಕನಸುಗಾರ, ಧೀಮಂತ ಸಮಾಜಪುರುಷ, ಬದಲಾವಣೆಯ ಹರಿಕಾರ ಕ್ರಾಂತಿಪುರುಷ ಬಸವಣ್ಣ.

ವೇದಿಕೆ, ಸಂದರ್ಭ ಸಿಕ್ಕರೆ ಸಾಕು, “12ನೇ ಶತಮಾನದ ಶರಣರ ಜೀವನ ಮತ್ತು ಸಂದೇಶಗಳು ನಮ್ಮ ಇಂದಿನ  ಕಾಲದಲ್ಲಿಯೂ ಬಹಳ ಪ್ರಸ್ತುತ, ಮಾದರಿ, ಅನುಸರಿಸಲು ಯೋಗ್ಯ” ಎಂದೆಲ್ಲ ಒತ್ತಿ ಒತ್ತಿ ಹೇಳುತ್ತೇವೆ. ವಾಸ್ತವವಾಗಿ ಅವುಗಳ ವಿರುದ್ಧವಾಗಿ ನಡೆದುಕೊಳ್ಳುತ್ತಿದ್ದೇವೆ. ಇದು ವಿಪರ್ಯಾಸವಲ್ಲದೆ ಮತ್ತೇನು?  ಧಾರ್ಮಿಕ, ಸಾಮಾಜಿಕ, ರಾಜಕೀಯ ಯಾವುದೇ ಕ್ಷೇತ್ರವಿರಲಿ ಅಲ್ಲಿ ಬಸವಣ್ಣನವರು ಯಾವುದನ್ನು ಹೇಳಿಲ್ಲವೋ ಅದನ್ನು ನಾವು ಮಾಡುತ್ತ ಅವರಿಗೆ ದ್ರೋಹ ಬಗೆಯುತ್ತಿದ್ದೇವೆ ಅನ್ಯಾಯಮಾಡುತ್ತಿದ್ದೇವೆ. ವಚನಗಳ ಪ್ರಸ್ತುತತೆಯ ಪ್ರಸ್ತಾಪ ಮಾಡುವವರು ಸಾಮಾನ್ಯವಾಗಿ ಬಸವಣ್ಣನವರ ಸಾಮಾಜಿಕ ರಾಜಕೀಯ ವಿಷಯಗಳು ಮತ್ತು ಆಚರಣಾತ್ಮಕ ವಿಷಯಗಳನ್ನು ಒತ್ತುಕೊಟ್ಟು ಹೇಳುತ್ತಾರೆ. ಸರಿ, ಆದರೆ  ಬಸವಣ್ಣನವರು ಪರಮಾರ್ಥ,ಶಿವಯೋಗ,ಆಧ್ಯಾತ್ಮ ವಿಷಯಗಳನ್ನೂ ಕೂಡ ಅಷ್ಟೇ ಗಂಭೀರವಾಗಿಯೇ ತಗೆದುಕೊಂಡವರು.ಅಂಥ ವಿಷಯಗಳು ಈಗ ನಮಗೆ ಎಷ್ಟು ಪ್ರಸ್ತುತ? ಎಂಬುದನ್ನು ನಾವು ಬಹುತೇಕ ಬದಿಗೆ ಸರಿಸಿ ಅವರು ಲೌಕಿಕದ ಬಗ್ಗೆ ಹೇಳಿದ್ದನ್ನೇ ಪ್ರಸ್ತುತತೆಗೆ ಹೆಚ್ಚು ಬಳಸಿಕೊಳ್ಳಲಾಗುತ್ತಿದೆ. ಬಸವಣ್ಣನವರು ತೆರೆದ ಮನಸ್ಸಿನಿಂದ ಲೋಕವ್ಯವಹಾರವನ್ನು,ಪರಮಾರ್ಥವನ್ನು ಬಗಿದು ನೋಡಿದವರು. ಅವರಿಗೆ ಲೌಕಿಕ ಎನ್ನುವುದು ವರ್ಜ್ಯವಾಗಿರಲಿಲ್ಲ. ಆದರೆ ಬರೀ ಲೌಕಿಕದಲ್ಲೇ ತೊಳಲಾಡಿದರೆ ಪ್ರಾಣಿಗೂ ಮನುಷ್ಯನಿಗೂ ವ್ಯತ್ಯಾಸ ಇರುವುದಿಲ್ಲ. ಮನುಷ್ಯನ ಬದುಕಿನ ಸಾರ್ಥಕತೆ ಇರುವುದು ಲೌಕಿಕವನ್ನು ಸಾತ್ವಿಕವಾಗಿ ಅನುಭವಿಸುತ್ತಲೇ ಪರಮಾರ್ಥದ ಮೂಲಕ ವ್ಯಕ್ತಿತ್ವವನ್ನು ರೂಪಿಸಿಕೊಳ್ಳುವುದರಲ್ಲಿದೆ ಎಂಬುದನ್ನು ಅವರು ಆಚರಿಸಿ ತೋರಿಸಿಕೊಟ್ಟರು.

ಇವತ್ತಿನ ಕಲುಷಿತ ಸಾಮಾಜಿಕ ಸಂದರ್ಭದಲ್ಲಿ ಆಧ್ಯಾತ್ಮ, ಪರಮಾರ್ಥ, ಧಾರ್ಮಿಕತೆ ಬಹಳಷ್ಟು ಜನರಿಗೆ ಹಿಡಿಸುವುದಿಲ್ಲ. ವೈಭವಯುತ ಲೌಕಿಕ ಸುಖಕ್ಕೆ ಹಾತೊರೆಯುವ ಜನರಿಗೆ ಬಸವಣ್ಣನವರ ಆತ್ಮೋದ್ಧಾರದ ವಿಚಾರಗಳು ಹಿಡಿಸುವುದಿಲ್ಲ. ಥಳಕು ಬೆಳಕಿನಲ್ಲಿ ಪುಟಿಯುವ ಜನರಿಗೆ ಅವರ ನೀತಿಪಾಠ ಹಿಡಿಸುವುದಿಲ್ಲ. ಹೀಗಿದ್ದಾಗ ”ಕಳಬೇಡ, ಕೊಲಬೇಡ, ಹುಸಿಯನುಡಿಯಲು ಬೇಡ, ಅನ್ಯರಿಗೆ ಅಸಹ್ಯ ಪಡಬೇಡ, ತನ್ನ ಬಣ್ಣಿಸಬೇಡ, ಇದಿರ ಹಳಿಯಲು ಬೇಡ” ಎಂಬ ಉಪದೇಶ ಕೇವಲ ವೇದಿಕೆಯ ಮೇಲೆ ಹೇಳಲು ಆಕರ್ಷಕವೆನಿಸುತ್ತಿವೆ.

ಇವತ್ತು ರಾಜಕಾರಣ ಹದಗೆಟ್ಟಿದೆ. ಮನುಷ್ಯ ಮನುಷ್ಯರಲ್ಲಿ ಪ್ರೀತಿ ವಿಶ್ವಾಸ, ನಂಬಿಕೆಗಳು ಮಾಯವಾಗುತ್ತಿವೆ. ಹೇಗಾದರೂ ಇರು ಎಂತಾದರೂ ಇರು ಹಣಗಳಿಸು ಎಂಬ ತತ್ವ ಆದರ್ಶವಾಗಿಬಿಟ್ಟಿದೆ. ನೈತಿಕತೆ, ಪ್ರಾಮಾಣಿಕತೆ ಯಾವ ಕ್ಷೇತ್ರದಲ್ಲೂ ಉಳಿದಿಲ್ಲ. ಬೇಲಿಯೇ ಎದ್ದು ಹೊಲ ಮೇಯ್ದಂತೆ ಆಳುವವರು ಆಳಾಗದೆ ಅರಸಾಗಿ ಪ್ರಜೆಗಳನ್ನು ಸುಲಿಯುತ್ತಿದ್ದಾರೆ. ಹಾಗಾಗಿ ವಚನಗಳ ವಿಚಾರಗಳು ಇಂದಿಗೂ ಪ್ರಸ್ತುತ ಎಂದು ಬಾಯಿ ಮಾತಲ್ಲಿ ಹೇಳಿದರೆ ಏನು ಪ್ರಯೋಜನ? ಬಸವಣ್ಣನವರು ಲೋಕದ ಡೊಂಕ ನೀವೇಕೆ ತಿದ್ದುವಿರಿ? ನಿಮ್ಮ ನಿಮ್ಮ ತನುವ ಸಂತೈಸಿಕೊಳ್ಳಿ, ನಿಮ್ಮ ನಿಮ್ಮ ಮನವ ಸಂತೈಸಿಕೊಳ್ಳಿ, ನೆರೆಮನೆಯ ದುಃಖಕ್ಕೆ ಅಳುವವರ ಮೆಚ್ಚ ನಮ್ಮ ಕೂಡಲಸಂಗಮದೇವ ಎಂದಿದ್ದಾರೆ. ಅಂದರೆ ಮೊದಲು ನಮ್ಮ ಅಂತರಂಗ ಬಹಿರಂಗ ಶುದ್ಧಿ, ಸದ್ಗುಣ ಸದಾಚಾರ ಸದುವಿನಯ ಇತ್ಯಾದಿ ನಂತರ ತ್ರಿಕರಣಪೂರ್ವಕ ಗುರುಲಿಂಗಜಂಗಮ ಸೇವೆ, ಸಾಮಾಜಿಕ ಕಾರ್ಯ ನಂತರ ಲಿಂಗಪೂಜೆ ಶಿವಧ್ಯಾನ- ಆತ್ಮೋದ್ಧಾರ, ಆಧ್ಯಾತ್ಮ ಹೀಗೆ ವ್ಯಕ್ತಿಯ ವೈಯಕ್ತಿಕ, ಸಾಮಾಜಿಕ, ಆತ್ಮಿಕ ಪೂಜೆಗೆ ಇಲ್ಲಿ ಮಹತ್ವ ಪ್ರಸ್ತುತತೆಯ ವಿಚಾರ ಬಂದಾಗಲೆಲ್ಲ ಇವುಗಳನ್ನು ಸಮಕಾಲೀನ ವ್ಯಕ್ತಿ ಸಮಾಜದೊಂದಿಗೆ ನಾವು ಮುಖಾಮುಖಿ ಆಗಿಸಿಕೊಂಡು ನೋಡಬೇಕಾಗುತ್ತದೆ.

ಇಂದು ವ್ಯಕ್ತಿಗಳಲ್ಲಿ ಬಹಿರಂಗದಲ್ಲಿ – ವ್ಯಕ್ತಿಗೌರವ, ಶ್ರದ್ಧೆ, ಪ್ರಾಮಾಣಿಕತೆ, ನಿಷ್ಠೆ, ಸತ್ಯವಂತಿಕೆ, ಸದಾಚಾರ ಇತ್ಯಾದಿ ಕಡಿಮೆಯಾಗಿವೆ. ವ್ಯಕ್ತಿ ಅಂತರಂಗದಲ್ಲಿ ಆಧ್ಯಾತ್ಮಿಕತೆ, ಆತ್ಮಯೋಗ, ಶಿವಯೋಗ ಸಾಧನೆ ಕಡಿಮೆ ಆಗಿದೆ. ಸಾಮಾಜಿಕದೆಡೆ – ಕಾಯಕದ ಪಾವಿತ್ರ್ಯ ಹಾಳಾಗಿಹೋಗಿದೆ. ಯಾವ ಕೆಲಸಕ್ಕೂ ದುಡ್ಡು, ಅಧಿಕಾರ, ಲಂಚಗುಳಿತನ, ಜಾತಿಯತೆ, ಸ್ವಜನ ಪಕ್ಷಪಾತ ಹೆಚ್ಚಾಗಿವೆ. ಲೌಕಿಕದ ಗೀಳು, ಪ್ರಚಾರಪ್ರಿಯತೆ, ಜಾತಿ, ಹಣ, ಅಧಿಕಾರದ ವ್ಯಾಮೋಹ ಹೆಚ್ಚಾಗಿವೆ.ವಚನಗಳಾಗಲಿ, ಮಹಾತ್ಮರ ಚರಿತ್ರೆಗಳಾಗಲಿ ಶೋಕೇಸ್ ವಸ್ತುಗಳಾಗಿಬಿಟ್ಟಿವೆ.ಮಹಾತಾಯಿಯೊಬ್ಬರು ಮಹಾತ್ಮಾ ಬಸವಣ್ಣನವರ ಅಂಕಿತವನ್ನೇ ಕಿತ್ತುಹಾಕಿದರೂ ಕಣ್ಣು ಮುಚ್ಚಿ ಕುಳಿತಿರುವ ನಮ್ಮಿಂದ ಬಸವಣ್ಣನವರ ವಚನಗಳನ್ನು ಓದಿ ಸನ್ಮಾರ್ಗದಲ್ಲಿ ನಡೆಯುತ್ತವೆಂಬ ಭರವಸೆ ಹುಸಿಯಾಗಿದೆ. ಎಲ್ಲಿಯವರೆಗೆ ಸದ್ವರ್ತನೆ, ಸದ್ವಿಚಾರ, ಸದ್ಭಾವನೆ, ಆತ್ಮಾವಲೋಕನ, ಪರರನೋವು ನಮ್ಮ ನೋವೆಂದು ಭಾವಿಸುವ ಆಚರಣೆಗಳು ಬರುವುದಿಲ್ಲವೋ ಅಲ್ಲಿಯವರೆಗೆ ವಚನಗಳನ್ನು ಓದಿದವರು ಗಿಳಿಯೋದಿಗಳಾಗಿರುತ್ತಾರೆ.

ಬಸವಣ್ಣನವರಿಗೆ ಜಾತಿ ನಿರ್ಮೂಲನೆಯೇ ಶ್ರೇಷ್ಠ ಕಾರ್ಯವಾಗಿತ್ತು.ಈಗ ನಾವು ಭಾರತವೆಂಬ ಜ್ಯಾತ್ಯಾತೀತ ರಾಷ್ಟ್ರದಲ್ಲಿ ಜಾತಿಗಳಿಗೆ ಎಲ್ಲಿಲ್ಲದ ಮಹತ್ವವನ್ನು ನೀಡುತ್ತಿದ್ದೇವೆ. ಅಷ್ಟೇ ಅಲ್ಲ ಜಾತಿಗೊಂದು ಮಠ ಪೀಠ ಕಟ್ಟುತ್ತಿದ್ದೇವೆ.  ಬಸವಣ್ಣನವರು ಅನುಭಾವ ಮಂಟಪ ಕಟ್ಟಿದರೆ ಹೊರತು ಜಾತಿಗೊಂದು ಪೀಠ, ಮಠಗಳನ್ನು ಕಟ್ಟಲಿಲ್ಲ. ಬಸವಣ್ಣನವರು ಏಕದೇವೋಪಾಸನೆಯೊಂದೇ ತಾರಕ ಮಂತ್ರವೆಂದರು. ನಾವು ಈಹೊತ್ತು ಒಂದೆ ಎರಡೆ ? ಹತ್ತು ಹಲವು ದೈವಗಳಲ್ಲಿ ನಂಬಿಕೆ ಇಡುತ್ತಿದ್ದೇವೆ. ಹೊಸ ಹೊಸ ದೇವರುಗಳ ಸುಂದರ ದೇವಾಲಯಗಳನ್ನು ಕಟ್ಟಿಸಿ ಆನಂದಪಡುತ್ತಿದ್ದೇವೆ. ಎಲ್ಲಿಗೆ ಬಂತು ನಮ್ಮ ಬಸವಣ್ಣನವರ ಸಂದೇಶ? ಎಂತಹ ಬಡವನಾದರೂ ಸರಿಯೆ, ಕಾಯಕ ಮಾಡಿ ಹೆಮ್ಮೆಯಿಂದ ಬದುಕು ಸಾಗಿಸಬೇಕೆಂಬುದು ಬಸವಣ್ಣನವರ ಕಟ್ಟಪ್ಪಣೆಯಾಗಿತ್ತು ಇದು ಶ್ರಮಸಂಸ್ಕೃತಿಯ ಮಹತ್ವದ ಅಂಶವಾಗಿತ್ತು. ಯಾರೂ ಪುಕ್ಕಟೆ ಬಂದುದನ್ನು ಸ್ವೀಕರಿಸುವಂತಿರಲಿಲ್ಲ. ಬಸವಪ್ರಶಸ್ತಿಯನ್ನು ಕೊಡುವ ಸರ್ಕಾರವೇ ಈಗ ದುಡಿಮೆಯ ಕಾಯಕಸಂಸ್ಕೃತಿಯೇ ಹಾಳಾಗಿಹೋಗುವಂತೆ ಮಾಡುತ್ತಿರುವುದು ಶೋಚನೀಯವಾಗಿದೆ.ಇಂದಿನ ಕಾಲಮಾನದಲ್ಲಿ ಬುದ್ಧಿಜೀವಿಗಳಾಗಲಿ ಇತರರಾಗಲಿ ಬಸವಣ್ಣನವರು ಹೇಳಿದ ಉಪದೇಶಗಳನ್ನಾಗಲಿ, ಮೌಲ್ಯಗಳನ್ನಾಗಲಿ, ಶುದ್ಧಚಾರಿತ್ರ್ಯವನ್ನಾಗಲಿ, ಪೂಜಾದಿ ಆಚರಣೆಗಳನ್ನಾಗಲಿ, ಕಾಯಕ ದಾಸೋಹ ತತ್ತ್ವಗಳನ್ನಾಗಲಿ ತಮ್ಮ ನಿಜ ಜೀವನದಲ್ಲಿ ಅನುಸರಿಸುವುದಿಲ್ಲ. ಅರ್ಥಾತ್ ಬಸವಣ್ಣನವರ ಸಾಮಾಜಿಕ ಧಾರ್ಮಿಕ ಚಿಂತನೆಗಳು ಇಂದು ಕೇವಲ ಹೇಳುವುದಕ್ಕೆ ಮಾತ್ರ ಆಚರಿಸುವುದಕ್ಕೆ ಅಲ್ಲ ಎಂಬಂತಾಗಿದೆ.

ಎಲ್ಲೆಲ್ಲೂ ಭ್ರಷ್ಟರಿಂದ ತುಂಬಿದ ಇಂದಿನ ದಿನಗಳಲ್ಲಿ ನಮಗೆ ಮತ್ತು ಮುಂದಿನ ಪೀಳಿಗೆಗೆ ತುರ್ತಾಗಿ ಬೇಕಾಗಿರುವುದು ವಿಚಾರವಾದಿಗಳ ಕಬ್ಬಿನ ಸಿಪ್ಪೆಯಲ್ಲ, ಮನಸ್ಸನ್ನರಳಿಸುವ ಆತ್ಮೋನ್ನತಿಯ ಆನಂದವನ್ನು ನೀಡುವ, ನೈತಿಕತೆಯ ನೆಲೆಗಟ್ಟಿನಲ್ಲಿ ಮೂಡುವ ಸಾಮಾಜಿಕ ಸೌಹಾರ್ದ ಶಾಂತಿಯಿಂದ ಕೂಡಿದ ಬದುಕು ರೂಪಿಸುವ ಬಸವಣ್ಣನವರ ಆಧ್ಯಾತ್ಮದ ಸಿಹಿಯುಳ್ಳ ಸಾಮಾಜಿಕ ಧಾರ್ಮಿಕ ವಚನಗಳ ತನಿರಸ.ಬಸವಣ್ಣನವರ ಸಾಮಾಜಿಕ ತತ್ತ್ವಗಳನ್ನು ಆಕರ್ಷಕವಾಗಿ ಹೇಳುವ ಬಹಳಷ್ಟು ಪ್ರತಿಷ್ಠಿತರಲ್ಲಿಯೂ ಜಾತಿ, ಭೇದಬುದ್ಧಿ, ಕುಹಕ, ಅನ್ಯರಿಗೆ ಅಸಹ್ಯಪಡುವುದು, ಗುಂಪುಗಾರಿಕೆ ಇಂಥ ಸಾಮಾಜಿಕ ಅನಿಷ್ಟಗಳು ಮನೆಮಾಡಿಕೊಂಡಿವೆ. ಆದರೆ ತಾವೇ ಸ್ವತಃ ಆ ವಚನಗಳಂತೆ ಕಿಂಚಿತ್ತೂ ನಡೆದುಕೊಳ್ಳುವುದಿಲ್ಲ. ವೀರಶೈವ ಎಂಬ ವಿಶಾಲ ಧರ್ಮವನ್ನು ಎತ್ತಿಹಿಡಿದ ಬಸವಣ್ಣನವರನ್ನು ಹೊರಗೆ ವಿಶ್ವಗುರು ಎಂದು ಕರೆಯುತ್ತ ಒಳಗೆ ಅವರನ್ನು ವೀರಶೈವದಿಂದ ಹೊರಗೆ ಹಾಕಿ ಕೇವಲ ಒಂದು ಗುಂಪಿಗೆ ಸೀಮಿತಮಾಡುವ ಚಟುವಟಿಕೆಗಳು ನಡೆಯುತ್ತಿವೆ. ಬಸವಣ್ಣನವರ ವಿಚಾರಗಳನ್ನು ಸರಿಯಾಗಿ ಅರ್ಥಮಾಡದೆ ತಪ್ಪುಕಲ್ಪನೆಗಳನ್ನು ಬಿತ್ತಲಾಗುತ್ತಿದೆ. ಉದಾಹರಣೆಗೆ ಬಸವಣ್ಣನವರು ವೇದಾಗಮಗಳ ವಿರೋಧಿ ಎಂದು ಬಿಂಬಿಸಲಾಗುತ್ತಿದೆ. ಕಣ್ಣಿಟ್ಟು ನೋಡಿದರೆ ಅವರು ವೇದ ವಿರೋಧಿಗಳಲ್ಲ, ವಿಮರ್ಶಕರು. ಮೇಲ್ನೋಟಕ್ಕೆ ಬಹಳ ಸರಳ ಎನಿಸಿದರೂ ಬಸವಣ್ಣನವರ ಶಬ್ದಾರ್ಥ ಪರಿಕಲ್ಪನೆ ಅದ್ಭುತವಾಗಿದೆ. ಸಂಕೀರ್ಣವಾಗಿದೆ. ಒಂದು ಸಣ್ಣ ಉದಾಹರಣೆ – “ವೇದಪುರಾಣ ಹೋತಿಂಗೆ ಮಾರಿ” ಎಂಬ ಮಾತು ಬಸವಣ್ಣನವರ ಒಂದು ವಚನದಲ್ಲಿ ಬರುತ್ತದೆ. ಬಹಳ ಜನ ವೇದ ಮತ್ತು ಪುರಾಣಗಳನ್ನು ವಿರೋಧ ಮಾಡುವ ಮಾತಿದು ಎಂದು ಅರ್ಥೈಸುತ್ತಾರೆ. ಆದರೆ ಅದು ಹಾಗಲ್ಲ. “ವೇದಪುರಾಣ” ಅಂದರೆ ವಿಷ್ಣುಪುರಾಣ. ಆ ವಚನದಲ್ಲಿ ಪುರಾಣಗಳ ಹೆಸರುಗಳನ್ನು ಬಸವಣ್ಣನವರು ಪಟ್ಟಿಮಾಡುತ್ತಾರೆ. “ವೇದ ಪುರಾಣ’’ ಎಂದು ಬಿಡಿ ಬಿಡಿಯಾಗಿ ಹೇಳಿದರೆ ಅಲ್ಲಿ ಅರ್ಥವೇ ಹೊಂದುವುದಿಲ್ಲ, ತಪ್ಪಾಗುತ್ತದೆ. ವೇದಗಳಲ್ಲಿನ ಉತ್ತಮ ವಿಚಾರಗಳನ್ನು ಅಂದರೆ ಒಪ್ಪಬಹುದಾದ ವಿಚಾರಗಳನ್ನು ಬಸವಣ್ಣನವರು ಮುಕ್ತಮನಸ್ಸಿನಿಂದ ಸ್ವೀಕರಿಸಿದ್ದಾರೆ. ಅದೇ ಕಾಲಕ್ಕೆ ವೇದ ವಿರುದ್ಧ ಆಚರಣೆಯಲ್ಲಿ ತೊಡಗಿದ ಬ್ರಾಹ್ಮಣರನ್ನು ತೀಕ್ಷ್ಣವಾಗಿ ತರಾಟೆಗೆ ತೆಗೆದುಕೊಳ್ಳುತ್ತಾರೆ. ವೇದಕ್ಕೆ ಒರೆಯನಿಕ್ಕುವೆ ಎಂದರೆ ಒರೆಗೆ ಹಚ್ಚಿ ತಿಕ್ಕಿ ನೋಡುವೆ ಎಂದರ್ಥ. ಸರಾಗಟಾಗಿ ತಿರಸ್ಕರಿಸುವುದಕ್ಕೂ ಒರೆಗೆಹಚ್ಚಿ ನೋಡುವುದಕ್ಕೂ ವ್ಯಾತ್ಯಾಸವಿದೆ. ಅವರೇ ಬೇರೆ ವಚನಗಳಲ್ಲಿ ವೇದ ಹೇಳಿದಹಾಂಗೆ ನಡೆಯುವುದೂ ಎನ್ನುತ್ತಾರೆ, ವೇದಗಳ ಆಧಾರಗಳನ್ನೂ ನೀಡುತ್ತಾರೆ, ಎಲ್ಲೆಲ್ಲಿ ಭೇದಭಾವವಿದೆಯೋ ಅಲ್ಲಲ್ಲಿ ತೀಕ್ಷ್ಣವಾಗಿ ಚುಚ್ಚಿನುಡಿಯುತ್ತಾರೆ. ಆದ್ದರಿಂದ ನಾವು ತಟ್ಟನೆ ಬಸವಣ್ಣನವರಿಗೆ ವೇದ ವಿರೋಧಿಗಳೆಂದಾಗಲಿ ವೇದ ಸಮರ್ಥಕರೆಂದಾಗಲಿ ಹಣೆಪಟ್ಟಿಕಟ್ಟುವುದು ಸರಿಯಲ್ಲ.

ಹಾಗೆಯೆ ಸ್ಥಾವರ-ಜಂಗಮ ತೆಗೆದುಕೊಂಡರೆ “ಸ್ಥಾವರ ಜಂಗಮವೆಂಬ ಉಭಯಪಕ್ಷ ಒಂದೇ; ಆವ ಮುಖದಲಿ ಬಂದಡೂ ತೃಪ್ತಿ ಒಂದೇ ಕೂಡಲಸಂಗಮದೇವರ ಆಪ್ಯಾಯನ ಒಂದೇ” “ದ್ವೈತಾದ್ವೈತವನೋದಿ ಏನ ಮಾಡುವಿರಯ್ಯಾ, ನಮ್ಮ ಶರಣರಿಗುರಿಯರಗಾಗಿ ಕರಗದನ್ನಕ್ಕ, ಸ್ಥಾವರ ಜಂಗಮವೊಂದೆ ಎಂದು ನಂಬದನ್ನಕ್ಕ. ಕೂಡಲಸಂಗಮದೇವಾ, ಬರಿಯ ಮಾತಿನ ಮಾಲೆಯಲೇನಹುದು?” ಬಸವಣ್ಣನವರ ಇಂಥ ಎಷ್ಟೋ ವಚನಗಳಿವೆ. ನಮ್ಮನ್ನು ದಿಗಿಲುಗೊಳಿಸುವ ದ್ವಂದ್ವಗಳೂ ಇಲ್ಲಿವೆ. ಬಸವಣ್ಣನವರು ಕೂಡಲಸಂಗಮಕ್ಕೇ ಯಾಕೆ ಬಂದರು? ಸರ್ವವ್ಯಾಪಿ ಈಶ್ವರನೇ ಇಷ್ಟಲಿಂಗರೂಪದಲ್ಲಿ ಕೈಯಲ್ಲಿರುತ್ತಿರಲು ಮರಳಿ ಕೂಡಲಸಂಗಮಕ್ಕೆ ಬರುವ ಅವಶ್ಯಕತೆ ಇದ್ದಿಲ್ಲ ಅಲ್ಲವೆ? ಕೂಡಲಸಂಗಮಕ್ಕೆ ಮರಳಿಬಂದಮೇಲೆ ಬಸವಣ್ಣನವರು ಸ್ಥಾವರ ಸಂಗಮೇಶ್ವರಲಿಂಗಕ್ಕೆ ಅಪವಿತ್ರವಾಯಿತೆಂದು ಸಂಪ್ರೋಕ್ಷಣೆ ಮಾಡಿರುತ್ತಾರೆ. ಈ ಘಟನೆಯನ್ನು ಮೋಳಿಗೆಯ ಮಾರಯ್ಯನು ಸ್ಮರಿಸಿಕೊಂಡು ಹೀಗೇಕಾಯಿತು? ಎಂದು ಮರುಗಿ ನುಡಿದ ವಚನವೊಂದಿದೆ. ಹಾಗೆಯೆ ವೈಚಾರಿಕ ನಿಲುವಿನ ನೀಲಾಂಬಿಕೆಯು ಕೂಡಲಸಂಗಮದ ಹತ್ತಿರವೇ ಇದ್ದರೂ, ಬಸವಣ್ಣನವರು ಕರೆಕಳಿಸಿದರೂ ಕೂಡಲಸಂಗಮಕ್ಕೆ ಬರುವುದಿಲ್ಲ. ಬಸವಣ್ಣನವರ  ವಿಚಾರಗಳಲ್ಲಿ ತಮಗೆ ಬೇಕಾದವುಗಳನ್ನು ಮಾತ್ರ ಮುಂದುಮಾಡಿಕೊಂಡು ಇಂದಿನ ವಿಚಾರವಾದಿಗಳು ಬಸವಣ್ಣನವರನ್ನು ಒಮ್ಮುಖದಲ್ಲಿ ನೋಡುವಂತೆ ಮಾಡಿ ಅವರ ವಿಶಾಲತತ್ತ್ವಗಳಿಗೆ ಕುಂದುಂಟುಮಾಡುತ್ತಿದ್ದಾರೆ.  ಅಷ್ಟೇ ಅಲ್ಲ, ಬಸವಣ್ಣನವರು ವೀರಶೈವ ವಿರೋಧಿಗಳು ಎಂಬರ್ಥಬರುವಂತೆ ಅಪಪ್ರಚಾರಮಾಡುತ್ತಿದ್ದಾರೆ. ತಮ್ಮ ಆಲೋಚನೆಗೆ ಒಗ್ಗದ ವಚನಗಳು ಬಸವಣ್ಣನವರವು ಅಲ್ಲ, ವೀರಶೈವರು ಸೇರಿಸಿದವುಗಳು ಎಂಬ ಫರ್ಮಾನನ್ನೂ ಹೊರಡಿಸುತ್ತಾರೆ.

`ಕಾಗೆ ವಿಷ್ಟಿಸುವ ಹೊನ್ನಕಳಸವಹುದರಿಂದ ಒಡೆಯರು ಜೋಗೈಸುವ ಚಮ್ಮಾವುಗೆಯ ಮಾಡಯ್ಯಾ’ ಎಂದರು  ಬಸವಣ್ಣನವರು. ಕೋಟಿ ಕೋಟಿ ಖರ್ಚುಮಾಡಿ ನಾವಿಂದು ಬಸವಣ್ಣನವರ ಬೃಹತ್‍ಮೂರ್ತಿಗಳನ್ನು ಸ್ಥಾಪಿಸಿ ಅವರ ಮಾತನ್ನು ಅಣಕಿಸುತ್ತಿದ್ದೇವೆ. ಇದನ್ನೆಲ್ಲಾ ನೋಡಿ ಬಸವಣ್ಣನವರ ಆತ್ಮಕ್ಕೆ ಎಷ್ಟು ನೋವಾಗಿದೆಯೋ! ಅವರು ಬಯಸಿದ್ದೇ ಬೇರೆ ನಾವು ಮಾಡುತ್ತಿರುವುದೇ ಬೇರೆ ಅಲ್ಲವೆ?

ನೂರನೋದಿ ನೂರ ಕೇಳಿ ಏನು? ಆಸೆ ಬಿಡದು,
ರೋಷ ಪರಿಯದು. ಮಜ್ಜನಕ್ಕೆರೆದು ಫಲವೇನು
ಮಾತಿನಂತೆ ಮನವಿಲ್ಲದ ಜಾತಿ ಡಂಬರ ನೋಡಿ
ನಗುವ ನಮ್ಮ ಕೂಡಲಸಂಗಮದೇವ
ಎಂಬ ವಚನವನ್ನು ಪ್ರಾಯಃ ಈಹೊತ್ತಿನ ಡಂಬಕರನ್ನು ಊಹಿಸಿಯೇ ಬಸವಣ್ಣನವರು ಹೇಳಿದರೇನೋ! ಎನಿಸುತ್ತಿದೆ.

(ಈ ಲೇಖನವು ಬಸವಜಯಂತಿ ದಿನಾಂಕ 21-4-2015 ರಂದು ವಿಜಯವಾಣಿ ದಿನಪತ್ರಿಕೆಯಲ್ಲಿ ಮಂಥನ ವಿಭಾಗದಲ್ಲಿ ಮಾತಿನಂತೆ ಮನವಿರಲಿ ಎಂಬ ಶೀರ್ಷಿಕೆಯಲ್ಲಿ ಸಂಕ್ಷೇಪವಾಗಿ ಪ್ರಕಟವಾಗಿತ್ತು)

6 ಟಿಪ್ಪಣಿಗಳು Post a comment
 1. manjanna
  ಮೇ 11 2015

  ಈ ಲೇಖನ ನನ್ನ ಮನಸ್ಸಿನ ಮೇಲೆ ತುಂಬಾ ಪರಿಣಾಮ ಬೀರಿತು. ಬಸವಣ್ಣನವರ. ಅನುಯಾಯಿ ಆಗುವಂತೆ ಮಾಡಿದೆ.

  ಉತ್ತರ
 2. Nagshetty Shetkar
  ಮೇ 11 2015

  Author has good intentions but he is misconceived. Please go study Darga Sir’s works on Basavadvaita to get enlightenment. Basavadvaita is very profound and futuristic. It has solutions for all human problems of all times.

  ಉತ್ತರ
 3. ಮೇ 11 2015

  ಬಸವಣ್ಣ ಒಬ್ಬ ಮಹಾತ್ಮ. ಮಹಾತ್ಮರ ವಚನಗಳು ಯಾವಾಗಲೂ ಪ್ರಸ್ತುತವೇ. ಒಳ್ಳೆಯ ಲೇಖನ; ಅಭಿನಂದನೆಗಳು.

  ಉತ್ತರ
 4. Umesh
  ಮೇ 11 2015

  ಮಹಾತ್ಮ ಬಸವಣ್ಣನವರು ಕೇವಲ ಲೌಕಿಕಕ್ಕೆ ಒತ್ತುಕೊಡಲಿಲ್ಲ. ಆಧ್ಯಾತ್ಮ ಹಾಗು ಶಿವನ ಆರಾಧನೆ ಅವರಿಗೆ ಮುಖ್ಯ ಗುರಿಯಾಗಿತ್ತು. ಕೂಡಲಸಂಗಮದೇವನ ಸಾಕ್ಷಾತ್ಕಾರ ಅವರ ಧ್ಯೇಯವಾಗಿತ್ತು. ನಮ್ಮ ಉಪನಿಷತ್ ತತ್ತ್ವಗಳನ್ನು ಸರಳ ಕನ್ನಡದಲ್ಲಿ ಮಂಡಿಸಿ ಸಾಮಾನ್ಯ ಜನರಿಗೆ ದಾರಿ ತೋರಿದ ಬೆಳಕು ಅವರು.

  ಉತ್ತರ
 5. Mandagadde Srinivasaiah
  ಮೇ 12 2015

  All our Vedas ,Puranas, darshanas have undergone changes as the time passes. Several hundred darshanika’s commented, criticised on these issues in their own way. This article now published by you is one such instance. Human values are in existance from the date of development of normal understanding and civilisation and all other literatures are supporting these values, that’ all!,

  ಉತ್ತರ
 6. ಮೇ 12 2015

  Beautifully written. Exquisite use of language and build up. Pleasure to read this treasure

  ಉತ್ತರ

ನಿಮ್ಮ ಅನಿಸಿಕೆ...

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Note: HTML is allowed. Your email address will never be published.

Subscribe to comments