ವಿಷಯದ ವಿವರಗಳಿಗೆ ದಾಟಿರಿ

ಮೇ 13, 2015

ಹರಟೆ ಕಟ್ಟೆ: ಹುಣಿಸೆಕಾಯಿಗೆ ನಲ್ಲಿಕಾಯಿ ಸಾಕ್ಷಿ

‍ನಿಲುಮೆ ಮೂಲಕ

– ಸುದರ್ಶನ ರಾವ್

ಅರಳಿಕಟ್ಟೆ“ಹಾಗಲಕಾಯಿಗೆ ಬೇವಿನಕಾಯಿ ಸಾಕ್ಷೀನೋ , ಇಲ್ಲಾ… ಓತಿಕ್ಯಾಥಕ್ಕೆ ಬೇಲಿ ಸಾಕ್ಷೀನೋ ? ಇವೆರೆಡರಲ್ಲಿ ಅನಂತಮೂರ್ತಿ ಮತ್ತು ಕಲಬುರ್ಗಿ ಇಬ್ಬರ ಕಾಂಬಿನೇಷನ್ಗೆ ಚೆನ್ನಾಗಿ ಹೊಂದಿಕೆಯಾಗುವ ಗಾದೆ ಯಾವುದು?” ಎಂದು ವಿಜಯ ಕೇಳ್ದ. ಕಾಫಿ ಕುಡಿಯೋಣ ಬನ್ರೋ ಅಂತ ಕರೆದು, ಈಗ ನೋಡಿದ್ರೆ ತಲೆ ಕೆರಕೊಳ್ಳೋ ಪ್ರಶ್ನೆ ಕೇಳ್ತಾನಲ್ಲಾ ಅಂತ ಸೀನ, ಕಿಟ್ಟ, ಜಗ್ಗು, ಪುಟ್ಟ ಮತ್ತು ಸಂಜಯರಿಗೆ ಅನ್ನಿಸದೇ ಇರಲಿಲ್ಲ. ಇದೇನೋ ಮಸಲತ್ತು ಮಾಡ್ತಾ, ಯಾವ್ದೋ ಪ್ರಶ್ನೆ ಕೇಳಿ ಕಾಫಿ ದುಡ್ಡನ್ನು ಯಾರ್ದಾದ್ರೂ ತಲೆಗೆ ಕಟ್ಟೋ ಹುನ್ನಾರ ಮಾಡುತ್ತಿದ್ದಾನೆಂದು ಅವರಿಗೆ ಸಂಶಯವಾಯ್ತು. ಕೇಳೇ ಬಿಟ್ರು, “ಅದೆಲ್ಲಾ ಏನಿಲ್ಲ. ಇವತ್ತು ಕಾಫೀ ಖರ್ಚು ನನ್ನದೇ” ಅಂದ ವಿಜಯ.

ಉದ್ಧಾಮ ಸಾಹಿತಿ ಅನ್ನಿಸಿಕೊಂಡಿದ್ದ ಅನಂತಮೂರ್ತಿ ಬಾಲ್ಯದಲ್ಲೋ, ತಾರುಣ್ಯದಲ್ಲೋ ದೇವರ ಇರುವನ್ನು ಅಲ್ಲಗಳೆಯಲು, ತನಗೆ ತಾನೇ ಸತ್ಯದ ಸಾಕ್ಷಾತ್ಕಾರಕ್ಕೆ ದೇವರ ಮೂರ್ತಿಯ ಮೇಲೆ ಉಚ್ಚೆ ಮಾಡಿದ್ದು ಹಾಗೂ ಸಂಶೋಧಕ, ಪ್ರಾಧ್ಯಾಪಕ ಅನ್ನಿಸಿಕೊಂಡ ಕಲಬುರ್ಗಿ ಅದನ್ನು ಜಗಜ್ಜಾಹೀರು ಮಾಡಿದ್ದು,ಇದರಿಂದ ಹಿಂದೂ ಆಸ್ತಿಕವರ್ಗ ಕ್ರೋಧಗೊಂಡಿದ್ದು, ನಾಸ್ತಿಕ ವರ್ಗ ಪುಳಕಿತಗೊಂದಿದ್ದು, ಸಮಾಜದಲ್ಲಿ ಕೋಲಾಹಲ ಮೂಡಿದ್ದು, ಪತ್ರಿಕೆಗಳಲ್ಲಿ ಚರ್ಚೆಗೆ ಗ್ರಾಸವಾಗಿ ಪರಸ್ಪರರ ಮೇಲೆ ಕೆಸರೆರೆಚಾಟ ನಡೆದಿದ್ದು ಅವರಿಗೆ ಗೊತ್ತಿಲ್ಲದ್ದೇನಾಗಿರಲಿಲ್ಲ. ಇದನ್ನು ಚರ್ಚೆಗೆ ಎಳೆಯಲು ವಿಜಯ ಸಂಚು ನಡೆಸಿದ್ದ.

ಚರ್ಚೆಗೆ ವೇದಿಕೆ ಸಿದ್ಧಮಾಡಲು ವಿಜಯ ವಿಷಯದ ಪರಿಚಯ ಮಾಡಿದ: ಈಗ ಏನಪ್ಪಾ ಅಂದ್ರೆ,,,,

“ಅನಂತಮೂರ್ತಿ ಹುಡುಗನಾಗಿದ್ದಾಗ,ಅವರ ಮನೆಯಲ್ಲಿ ಬಹಳ ಸಂಪ್ರದಾಯ ಮಾಡುತ್ತಿದ್ದರಂತೆ. ದೇವರು-ದಿಂಡಿರು ಅಂದ್ರೆ ಭಯ ಭಕ್ತಿಯಿಂದ ನಡೆದುಕೊಳ್ಳುತ್ತಿದ್ದರಂತೆ. ಅನಂತಮೂರ್ತಿಯನ್ನ ಒಳ್ಳೆ ಹುಡುಗ ಆಗೂ ಅಂತ ಹೇಳ್ತಿದ್ರಂತೆ. ಬುದ್ಧಿವಂತನಾದ್ರೂ , ಸ್ವಭಾವತಃ ಸೋಮಾರಿಯಾದ ಹುಡುಗ ಮಡಿ-ಪಡಿ,ಪೂಜೆ-ಪುನಸ್ಕಾರ ಅಂತ ಮಾಡಕ್ಕೆ ಬೇಜಾರು ಮಾಡ್ಕೊಂಡು ಉದ್ಧಟನಾಗಿ ದೇವ್ರು ಇಲ್ಲ ಅಂತ ವಾದ ಮಾಡಿದ್ದೂ ಅಲ್ದೆ, ರಾತ್ರೋ ರಾತ್ರಿ ಊರಿನಲ್ಲಿದ್ದ ವಿಗ್ರಹದ ಮೆಲೆ ಉಚ್ಚೆ ಹುಯ್ದು ಪರೀಕ್ಷೆ ಮಾಡಿದ್ರಂತೆ. ಮೂರು ದಿನ ಅದ್ರೂ ಏನೂ ಆಗ್ದೆ ಇದ್ಮೇಲೆ, ಅದನ್ನ ತನ್ನ ಸ್ನೇಹಿತ ಕಲಬುರ್ಗಿಗೆ ಹೇಳಿಬಿಟ್ಟನಂತೆ. ತುತ್ತೂರಿಗೆ ಮುತ್ತು ಕೊಟ್ರೆ ಅದು ’ಪೀಮ್’ ಅಂತ ಶಬ್ದ ಮಾಡೊ ಥರ, ಕಲಬುರ್ಗಿ ಅದ್ನ ಜಗಜ್ಜಾಹೀರು ಮಾಡಿ ’ಸಮೂಹ ಸನ್ನಿ’ ಉಂಟು ಮಾಡಿದ್ರಂತೆ. ಇದು ವಿಚಾರ. ಇದ್ರ ಬಗ್ಗೆ ಚರ್ಚೆ ಆಗ್ಬೇಕು ಹಾಗೂ ಸಮಂಜಸ ಗಾದೆನ ಆರಿಸಬೇಕು” ಅಂತ ತಾಕೀತು ಮಾಡಿದ ವಿಜಯ.

ಕೂತಿದ್ದ ಸೀನ ಕೇಳ್ದ; ”ಅದ್ರಲ್ಲೇನು ತಪ್ಪು ಇದೂ ಒಂದು ಪ್ರಯೋಗಾತ್ಮಕ ಕೆಲಸ.ಸಾಹಿತ್ಯ ಕ್ಷೇತ್ರದಲ್ಲಿ ಮುಂದೆ ಅನಂತಮೂರ್ತಿ ತರಬಹುದಾದ ಪ್ರಯೋಗಗಳಿಗೆ ಇದೊಂದು ಮುನ್ನುಡಿ ಬರೆದಂಥ ಕಾರ್ಯ. ಬೆಳೆಯುವ ಪೈರು ಮೊಳಕೆಯಲ್ಲಿ ಎಂಬ ಗಾದೆಗೆ ಅನುಸಾರವಾಗಿಯೇ ಇದೆ. ಬಹಳ ಶ್ಲಾಘನೀಯ” ಎಂದ.

ಕಿಟ್ಟಿ ಸಿಟ್ಟು ನೆತ್ತಿಗೇರಿತು. ಜೋರು ದನಿಯಲ್ಲಿ ಹೇಳಿದ ” ಅಲ್ವೋ ಸೀನ, ದೇವ್ರು ಇದಾನೋ ಇಲ್ವೋ ನೋಡಕ್ಕೆ ಕೆಟ್ಟ ದಾರಿ ಹಿಡಿದು ಮೂರ್ತಿ ಮೇಲೆ ಉಚ್ಚೆ ಹುಯ್ಬೇಕಾ? ಒಳ್ಳೇ ದಾರೀಲಿ ತಪಸ್ಸು ಮಾಡ್ಕೊಂಡು, ಧ್ಯಾನ ಮತ್ತೊಂದು ಮಾಡಿ, ಆಗ್ಲೂ ದೇವ್ರು ಬರ್ಲಿಲ್ಲಾ ಅಂದ್ರೆ, ಆಗ ಪ್ರಪಂಚಕ್ಕೆ ಕೂಗಿ ಹೇಳ್ಬೇಕಾಗಿತ್ತು. ದರ್ದಿದ್ದೋರು ಆ ಕೆಲ್ಸ ಮಾಡ್ಬೇಕು; ಅದನ್ನ ಬಿಟ್ಟೂ…..” ಅಂತ ಅಂದ.

ಅದಕ್ಕೆ ಪುಟ್ಟ ಬಾಯಿ ಹಾಕಿ,.. ” ಅಲ್ವಲೇ, ಅನಂತಮೂರ್ತಿ ಮೊದ್ಲೇ ಸೋಮಾರಿ ಹುಡುಗ. ಹೆಚ್ಚು ಕಷ್ಟ ಪಡದೇ ತನಗೆ ಬೇಕಾದ್ದು ಹೊಡ್ಕೊಳ್ಳೊ ಬುದ್ಧಿವಂತ. ಇನ್ನು ತಪಸ್ಸು ಮಾಡೋ ಪರಿಪಾಠ ಎಲ್ಲಿಂದ ಬರಬೇಕು,.ನೀನೇ ನೋಡಿಲ್ವೆ??? ಬೆಳೆಯುವ ಪೈರು ಮೊಳಕೇಲಿ .. ಗಟ್ಟಿ  ಸಾಹಿತ್ಯ ಸೃಷ್ಟಿ ಮಾಡ್ದೇ ಇದ್ರೂ ದೊಡ್ಡ ಸಾಹಿತಿ ಅಂತ ಜೈಕಾರ ಹಾಕಿಸ್ಕೊಂಡಿಲ್ವೆ, ಪ್ರಶಸ್ತಿ ಗಿಟ್ಟಿಸ್ಕೊಂಡಿಲ್ವೆ,? ತಪಸ್ಸು, ಪರಿಶ್ರಮ, ಸಾಕ್ಷಾತ್ಕಾರ ಇವೆಲ್ಲ ಆವಯ್ಯನ ಡಿಕ್ಷನರೀಲಿ ಇಲ್ಲ. ಅದುಕ್ಕೆ ಆವಯ್ಯನ ಪುಸ್ತಕ ವ್ಯಾಪಾರನೇ ಆಗಲ್ಲ ಅಂತೀನಿ”…. ಅಂದ.

ಕಿಟ್ಟ ತನ್ನ ವಾದಕ್ಕೆ ಪುಷ್ಟಿ ಸಿಕ್ಕಿದ್ದಕ್ಕೆ ತಲೆದೂಗಿದ. ಸೀನ ಬಿದ್ರೂ ಮೀಸೆ ಮಣ್ಣಾಗ್ಲಿಲ್ಲ ಅಂತ ಹೇಳ್ದ..”ಲೋ .. ಗಾಂಪ ನನ್ನ ಮಕ್ಳ.. ಭಾರತೀಯ ತತ್ವ ಶಾಸ್ತ್ರದಲ್ಲಿ ಚಾರ್ವಾಕ ವಾದ ಅನ್ನೋ ನಾಸ್ತಿಕ ವಾದಾನೇ ಇದೆ. ದೇವರಿಲ್ಲ ಅಂತ ಹೇಳೋ ಆ ಭೌತಿಕ ವಾದಕ್ಕೆ ದರ್ಶನಗಳ ಸ್ಥಾನ ಕೊಟ್ಟು ಗೌರವಿಸಿದ್ದಾರೆ ನಮ್ಮ ಹಿರಿಯರು.”ಇಲ್ಲೆ ಸ್ವರ್ಗ ಇಲ್ಲೇ ನರಕ ಮೇಲೇನಿಲ್ಲ ಸುಳ್ಳು.. ಹುಟ್ಟು ಸಾವು ಎರಡರ ಮಧ್ಯೆ ಮೂರು ದಿನದ ಬಾಳು’ ಅಂತಾನೆ ಅವರ ಹೇಳಿರೋದು. ಅದನ್ನೇ ಅನಂತ ಮೂರ್ತಿ ಸಾಕ್ಷಾತ್ಕಾರ ಮಾಡಿಕೊಂಡಿರೋದು. ಅವರು ಮಾಡಿದ್ರಲ್ಲಿ ಏನ್ ತಪ್ಪು? ”ಸವಾಲು ಎಸೆದ.

ಅದಕ್ಕೆ ಕಿಟ್ಟ, “ಒಂದು ಚಾರ್ವಾಕವಾದದ ಎದುರು ಉಳಿದ ಅಷ್ಟಾದಶ ದರ್ಶನಗಳಿಲ್ವ. ಆವುಗಳಲ್ಲಿ ಆಸ್ತಿಕತೆ ಹೇಳಿಲ್ವ. ದೇವರಿದ್ದಾನೆ ಎಂದು ಅವು ಸಾರುತ್ತಿರುವಾಗ , ಒಂದೇ ಒಂದು ಪಂಥದಿಂದ ಅವರನ್ನೆಲ್ಲ ನೀವಾಳಿಸೊಕ್ಕಾಗುತ್ತ. ನಿನ್ನ ಮೂಗಿನ ನೇರಕ್ಕೆ ಮಾತಾಡ್ಬೇಡ” ದನಿ ಯೇರಿಸಿದ.

ಮತ್ತೆ ಅದೇ ಮೂರ್ಖರ ಸಾವಾಸ ಆಯ್ತು ನೋಡು!! ಅದುಕ್ಕೇ ಸರ್ವಜ್ಞ ಮೂರ್ಖಂಗೆ ಬುದ್ಧಿಯನು ಅಂತ ಹೇಳಿದ್ದು. ಬೌದ್ಧ ಜೈನ ದರ್ಶನಗಳು ದೇವರ ಅಸ್ತಿತ್ವ ನಿರಾಕರಿಸಿದ ದರ್ಶನಗಳೇ. ಚಾರ್ವಾಕ ವಾದದ ಜೊತೆಗೆ ಅವೂ ಇವೆ” ಶೀನ ಖಂಡಿಸಿದ.

ಇವರೆಲ್ಲರ ತಲೆಯೊಳಗೆ ಹುಳ ಬಿಟ್ಟ ವಿಜಯ ಕಾಫೀ ಖರ್ಚಿನ ಮಜ ಪಡೆಯುತ್ತಿದ್ದ!!!

ಹಾಗಾದ್ರೆ ಹೋಗಿ ನೋಡು!! ಬೌದ್ಧರೂ ಜೈನರೂ ತಂತಮ್ಮ ಮತಗಳಿಗೆ ದೇವಾಲಯಗಳನ್ನು ಕಟ್ಟಿದ್ದಾರೋ ಇಲ್ಲವೋ ಅಂತ. ಅವರಲ್ಲೂ ಈಗ ಹಿಂದೂ ಧರ್ಮದಂತೆಯೆ ದೇವರಗಳಿದ್ದಾರೆ.ಬೌದ್ಧರು ಪಗೋಡಾಗಳನ್ನೂ, ಜೈನರು ಬಸದಿಗಳನ್ನೂ ಕಟ್ಟೀ, ಶಿಲ್ಪಕಲೆ ಬೆಳೆಸಿದ್ದಲ್ಲದೆ ಮೂರ್ತಿ ರೂಪದಲ್ಲಿ ಪೂಜಿಸಿ ಧನ್ಯತೆ ಕಾಣುತ್ತಿದ್ದಾರೆ. ನಾವಲ್ಲ ಮೂರ್ಖರು ,ನೀನು!!! ಪುಟ್ಟ ವಾದಿಸಿದ.

ವಿಷಯಾಂತರ ಆದರೆ ತನಗೆ ಸಿಗುವ ಮಜಾ ಕಡಿಮೆಯಾಗುವುದೆಂದು ಮಧ್ಯ ಬಂದ ವಿಜಯ, “ಅಲ್ಲ,, ವೇದಗಳಲ್ಲೂ ಮೂರ್ತಿ ಪೂಜೆ ಹೇಳಿಲ್ವಂತೆ. ಇದು ಹೇಗೆ ಶುರು ಆಯ್ತು? ವೇದಗಳು ದೇವರ ಬಾಯಿಯ ಮೂಲಕವೇ ಬಂದಿದ್ದರಿಂದ, ಮೂರ್ತಿ ಪೂಜೆ ಬಗ್ಗೆ ಅಲ್ಲಿ ಹೇಳಿಲ್ಲದ್ದರಿಂದ ಅನಂತಮೂರ್ತಿ, ದೇವರ ಮೂರ್ತಿಯ ಮೇಲೆ ಉಚ್ಚೆ ಮಾಡಿ ವೇದಗಳ ಪಾರಮ್ಯವನ್ನು ಸಾರಿರಬಹುದೇ???? ಕಿಚಾಯಿಸಿದ!!

ಚರ್ಚೆಯ ವಿಷಯ ವಿಷಮಸ್ಥಿತಿಗೆ ಹೋಗುತ್ತಿರುವುದನ್ನು ಗಮನಿಸಿದ, ಅಲ್ಲಿಯವರೆಗೂ ಸುಮ್ಮನೆ ಕುಳಿತಿದ್ದ ಸಂಜಯ ತನ್ನ ಮೌನಮುರಿದು ಮಾತನಾಡಿದ. ಯಾವಾಗಲೂ ,ಅಳೆದೂ-ಸುರಿದೂ, ತೂಕದ ಮಾತನಾಡುವ ಸಂಜಯನೆಂದರೆ ಆ ಗುಂಪಿನಲ್ಲಿ ಆದರ, ಪ್ರೀತಿ ಎಲ್ಲಾ ಇದ್ದವು. ತಕ್ಷಣವೇ ತಮ್ಮ ವಾದಗಳನ್ನು ನಿಲ್ಲಿಸಿ ಅವನೆಡೆಗೆ ತಿರುಗಿದರು.

ಸಂಜಯ ಹೇಳಿದ ” ನೋಡಿ, ನೀವೆಲ್ಲಾ ವಿಷ್ಯಾಂತರ ಮಾಡುತ್ತಿದ್ದೀರಿ. ಅನಂತಮೂರ್ತಿ ಮಾಡಿದ ಮೂತ್ರ, ಅದರ ಬಹಿರಂಗ ಪ್ರಚಾರದ ಔಚಿತ್ಯ ಕುರಿತು ಚರ್ಚೆ ನಡೆಯುತ್ತಿರುವುದು.ಅದನ್ನು ಬಿಟ್ಟು ನಿಮ್ಮ ವಾದ ವಿವಾದ ಎಲ್ಲೆಲ್ಲೋ ಹೋಗುತ್ತಿದೆ. ಆದ್ರೂ ಅದನ್ನೂ ಪರಿಗಣಿಸಿ ನನಗೆ ತಿಳಿದಿದ್ದು ಹೇಳ್ತೀನಿ ಪರವಾಗಿಲ್ವಾ?? ಕೇಳಿದ.

ಹೇಳೂ…. ರಸಿಕನಾಡಿದ ಮಾತು ಶಶಿಯುದಿಸಿ ಬಂದಂತೆ
ರಸಿಕನಲ್ಲದನ ಬರಿಮಾತು ಕಿವಿಯೊಳಗೆ
ಕೂರ್ದಸಿಯ ಬಡಿದಂತೆ ಸರ್ವಜ್ಞ್ನ …. ಅಂತಲೇ ಇದೆಯಲ್ಲ. ಇವರುಗಳ ಒಣ ಮಾತಿಗಿಂತ ಕೂರ್ದಸಿ ಬೇಕಾಗಿಯೇ ಇಲ್ಲ,,… ಕಿಟ್ಟು ಹೇಳಿದ.

ಸಂಜಯ ಶುರು ಮಾಡಿದ,,”ಮೂರ್ತಿ ಪೂಜೆ ಹಿಂದೂ ಧರ್ಮದಲ್ಲಿ ಮಾತ್ರವಲ್ಲ, ಗ್ರೀಕ್ ಮತದಲ್ಲೂ, ದಕ್ಷಿಣ ಅಮೇರಿಕಾದ ಬುಡಕಟ್ಟುಗಲಲ್ಲೂ, ಈಜಿಪ್ಟಿನ ನಾಗರೀಕತೆಯಲ್ಲೂ ಇತ್ತು. ಅವುಗಳಿಗಿಂತ ಹಳೆಯದಾಗಿರಬಹುದಾದ ಹಿಂದೂ ಧರ್ಮವೊಂದೇ ಈಗ ಉಳಿದಿರುವುದು. ಕಾಲಾಂತರದಲ್ಲಿ ಅವುಗಳೆಲ್ಲಾ ಉಳಿದ ಧರ್ಮಗಳ ಆಕ್ರಮಣದಿಂದಲೋ, ಧರ್ಮಶ್ರದ್ಧೆ ನಶಿಸಿದ್ದರಿಂದಲೋ, ರಾಜಕೀಯ, ನೈಸರ್ಗಿಕ, ಕಾರಣಗಳಿಂದಲೋ ಅಳಿದು ಹೋಗಿವೆ. ಕಾಲಕ್ಕೂ ಹೊರಗಿನವರ ದೌರ್ಜನ್ಯ, ಅಕ್ರಮ, ಆಕ್ರಮಣ ಎದುರಿಸಿದರೂ, ಸಮರ್ಥವಾಗಿ ತನ್ನ ಅಸ್ತಿತ್ವ ಉಳಿಸಿಕೊಂದು ಬಂದಿರುವ ಹಿಂದೂ ಧರ್ಮದ ಬಗೆಗೆ , ಅದರ ಪರಂಪರೆಯ ಬಗೆಗೆ, ಮತ್ತೆ ಮತ್ತೆ ಪುಟಿದೆದ್ದು ವಿಶಾಲ ಭಾರತದ ಜನಸ್ತೋಮವನ್ನು ಒಂದು ನಂಬಿಕೆ,ಆಚರಣೆ, ಭಾವನಾತ್ಮಕವಾಗಿ ಒಗ್ಗೂಡಿಸಿಟ್ಟಿರುವುದರ ಬಗೆಗೆ ನಮಗೆ ಹೆಮ್ಮೆ ಇರಬೇಕು. ಇದು ನಮ್ಮ ಮೊದಲ ಆದ್ಯತೆಯಾಗಬೇಕು. ಇಂದು ಕನ್ಯಾಕುಮಾರಿಯಿಂದ ಕಾಶ್ಮೀರದಲ್ಲಿ, ಗುಜರಾತಿನಿಂದ, ಮಣಿಪುರ, ತ್ರಿಪುರಾಗಳಂಥ, ದೂರದ ರಾಜ್ಯಗಳಲ್ಲಿ ಜನರು ಅದೇ ದೇವರುಗಳನ್ನು, ನಂಬಿ ಪೂಜಿಸುತ್ತಿದ್ದಾರೆ. ಇದು ಅವರವರ ಭಾವ-ಭಕ್ತಿಗೆ ಅನುಸಾರವಾಗಿ ನಡೆದರೂ, ಅಂತರ್ಗಾಮಿಯಾಗಿರುವ ಈ ಭಾವನೆಗಳನ್ನು ಒಣ ವೈಚಾರಿಕತೆಯ ಮೂಲಕ ಭೇದಿಸಿ ಘಾಸಿಗೊಳಿಸಬಾರದೆಂದು ನನ್ನ ನಂಬಿಕೆ; ನಿಮಗೆ ಬೇಕಾದಂತೆ ನೀವು ತಿಳಿದುಕೊಳ್ಳಬಹುದು” ಎಂದಂದು, ಅವ್ರುಗಳ ಮುಖ ನೋಡಿದ. ಆಸಕ್ತಿಯಿಂದ ಕೇಳುತ್ತಿದ್ದರು.

ಇನ್ನು ಹಿಂದೂ ಧರ್ಮದಲ್ಲಿ ಮೂರ್ತಿಪೂಜೆ ಹೇಗೆ, ಯಾವಾಗ ಬಂತೆಂದು ಯಾರಿಗೂ ತಿಳಿಯದು,. ನಮಗೆ ಈಗ ಸಿಕ್ಕಿರುವ ವೇದಗಳು ಪೂರ್ಣಪ್ರಮಾಣದಲ್ಲಿದೆಯೆಂದು ನಮ್ಮ ನಂಬಿಕೆ. ಶೃತಿ-ಸ್ಮೃತಿಗಳ ಮೂಲಕ ಸಾವಿರಾರು ವರ್ಷಗಳಿಂದ ಬಂದಿರುವ ಇವುಗಳಲ್ಲಿ ಎಲ್ಲಿ ಹೇಗೆ ಬದಲಾವಣೆಗಳಾಗಿರಬಹುದೆಂಬುದು ನಮಗೆ ತಿಳಿಯದಾದರೂ, ವೇದಗಳು ವಿಶಿಷ್ಟ ಲಯ, ಛಂದಸ್ಸು, ವ್ಯಾಕರಣಗಳ ನಿಯಮಗಳ ಮೇಲೆ ಇರುವುದರಿಂದ ಅವು ಬದಲಾಗದೆ ಉಳಿದುಬಂದ ನಿಗಮ ಪಾಠಗಳೆನಿಸಿಕೊಂಡಿವೆ. ಅಮೂರ್ತ, ಶಕ್ತಿ-ದೇವ ದೇವತೆಗಳ ಮಂತ್ರಗಳು, ಪೂಜಾವಿಧಾನಗಳು ಇಲ್ಲಿವೆ. ಅವುಗಳಲ್ಲಿ ಆಯಾ ದೇವರುಗಳ ವರ್ಣನೆಯೂ ಇರಬಹುದು; ಅದನ್ನು ಅನುಸರಿಸಿ ಶಿಲ್ಪಕಲೆ ಬೆಳೆದಿರಬಹುದಾದರೂ, ಇದಕ್ಕೆ ಮಾನವನ ಪರಿಮಿತಿಯಲ್ಲಿ ಅನಧಿಕೃತ ವಿಶ್ಲೇಷಣೆ ನೀಡಿ ಅದನ್ನೇ ಸತ್ಯವೆಂದು ಸಾಧಿಸುವುದು ಸಾಧುವಲ್ಲ. ಮೂರ್ತಿಪೂಜೆಯ ಪ್ರಕ್ರಿಯೆ, ನಮಗೆ ತಿಳಿದಂತೆ ಸಾವಿರಾರು ವರ್ಷಗಳಿಂದ ನಡೆದುಬಂದಿದೆ. ವೇದಗಳ ಕಾಲದಲ್ಲೂ ಇದ್ದಿರಬಹುದು. ಜನರ, ಸಮಾಜದ,ಸಂಸ್ಕೃತಿಯ ಪ್ರತೀಕವಾಗಿ ಉಳಿದೂ ಬಂದಿದೆ. ಈ ಆಚರಣೆ ಕಾಲನ ಪರೀಕ್ಷೆಯನ್ನು ಗೆದ್ದು ಬಂದಿದೆ ಹಾಗೂ ಜನರಿಂದ ಮನ್ನಣೆ ದೊರೆತಿದೆ. ಹಾಗಾಗಿ ಪ್ರಜಾಪ್ರಭುತ್ವದ ದೃಷ್ಟಿಯಲ್ಲಿ ನೋಡಿದರೂ, ಬಹುಮತದ ಪ್ರಕಾರ ಗೌರವಿಸಬೇಕಾದ ಆಚರಣೆ. ಈ ಮೂರ್ತಿಗಳ ಕೆತ್ತನೆಯ ಕಲೆ ಇಂದು ನಮ್ಮ ಸಂಸ್ಕೃತಿಗೆ ಮೆರುಗೂ ತಂದು ಕೊಟ್ಟಿದೆ.ಈ ಅದ್ಭುತ ಸಾಹಿತ್ಯಿಕ ಹಾಗೂ ಮನೋವೈಚಾರಿಕ, ಕೃತಿಗಳ ಹಿಂದಿನ ಆಶಯ, ಭವ್ಯತೆಯನ್ನು ಪರಿಗಣಿಸಿದರೆ ಅವುಗಳ ಮಹತ್ವ ಅರಿವಾಗುತ್ತದೆ. ಒಂದು ದೇವತಾ ವಿಗ್ರಹದ ಮೇಲೆ ಮೂತ್ರ ಮಾಡಿದರೆ ಶಿಲ್ಪಿಯಿಂದ ಮೊದಲುಗೊಂಡು ಆಗಮಕರ್ತರ ಅವಮಾನ, ಅವಹೇಳನ ಮಾಡಿದಂತೆ. ಇದು ದೇವರ ಕುರಿತ ನಂಬಿಕೆಯ ಸತ್ಯಾಸತ್ಯತೆ ಪ್ರಶ್ನಿಸುವ ಕೇವಲ ಸಾಂಕೇತಿಕ ಕಾರ್ಯವಲ್ಲ; ಇದರ ವ್ಯಾಪ್ತಿ ದೊಡ್ಡದು’’ ಎಂದು ಹೇಳಿದ. ಈ ಮೂರ್ತಿಗಳ ಗುಣ ಲಕ್ಷಣಗಳ ಬಣ್ಣನೆ ಆಗಮಗಳಲ್ಲಿ- ಅದರಲ್ಲೂ “ಪಂಚರಾತ್ರ” ಆಗಮಗಳಲ್ಲಿ ಅತಿ ಸೂಕ್ಷ್ಮ, ದೀರ್ಘ ಹಾಗೂ ಸವಿವರವಾಗಿ ಹೇಳಲ್ಪಟ್ಟಿದೆ. ಇದನ್ನು ದೇವರು ಐದು ರಾತ್ರಿಗಳಲ್ಲಿ ವಿವರಿಸಿದ ಎಂದು ನಂಬಲಾಗಿದೆ.ಈ ಮೂರ್ತಿ ಪೂಜೆಯ ಪ್ರಕ್ರಿಯೆಯು ಆಗಮಗಳ ರೂಪದಲ್ಲಿ ವಿವರಿಸಲ್ಪಟ್ಟು, ಯಜ್ಞಪ್ರಧಾನ ವೈದಿಕ (ವೇದ) ಆಚರಣೆಗೆ ಭಿನ್ನವಾಗಿ ಮೊದಲು ಅವೈದಿಕ ಸಂಪ್ರದಾಯದಂತೆ ಪ್ರಾರಂಭವಾದರೂ ಕಾಲಾಂತರದಲ್ಲಿ ವೈದಿಕ ಆಚರಣೆಗೆ ವಿಲೀನವಾಗಿದೆ ಎಂದೂ ನಂಬಲಾಗಿದೆ. ಅದೇನೇ ಇದ್ದರೂ ಕೋಟ್ಯಾಂತರ ಭಾರತೀಯ ಮನಸ್ಸುಗಳು ದೇವರ ,ಶಾಂತಿಯ ಸಾಕ್ಷಾತ್ಕಾರವನ್ನು ಮೂರ್ತರೂಪದಲ್ಲಿ ಪಡೆಯಲು ಮನಃಪೂರ್ವಕವಾಗಿ ಅಂಗೀಕರಿದ್ದರಿಂದಲೇ ಇದು ಇನ್ನೂ ಮುಂದುವರಿದಿದೆ ಎಂದು ನನ್ನ ಭಾವನೆ. ಇದಕ್ಕೆ ಸೌಜನ್ಯದಿಂದ ಗೌರವಕೊಟ್ಟರೆ ನಮ್ಮನ್ನು ಸಜ್ಜನ ಎಂದೆನ್ನಬಹುದು” ಎಂದು ದೀರ್ಘವಾಗಿ ಉಸಿರೆಳೆದ. ಉಳಿದವರು ನಿಶ್ಯಬ್ದವಾಗಿ ಆಲಿಸುತ್ತಿದ್ದರು.

ಮೂರ್ತಿ ಪೂಜೆ ಧಿಕ್ಕರಿಸಿದ ಜೈನ ಮತಗಳು, ಬೌದ್ಧ ಮತಗಳು ಕಾಲಾಂತರದಲ್ಲಿ ಅದನ್ನು ಅಂಗಿಕರಿಸಿ, ಬಸದಿಗಳನ್ನು, ಪಗೋಡಾಗಳನ್ನು ನಿರ್ಮಿಸಿ ಪೂಜೆ ಕೈ ಕೊಂಡಿವೆ.ಭಾರತೀಯ ಧರ್ಮಗಳೇ ಅದ ಇವುಗಳು ಮೊದಲಲ್ಲಿ ಮೂರ್ತಿಪೂಜೆ/ವೇದಗಳನ್ನು ನಿರಾಕರಿಸಿ ಉದಯಿಸಿದರೂ, ಮೂರ್ತಿಪೂಜೆಯನ್ನು ಅಳವಡಿಸ್ಕೊಂಡದ್ದು, ಮೂರ್ತಿ ಪೂಜೆಯನ್ನು ಕುರಿತಾಗಿ ಭಾರತೀಯರ ಮನದಲ್ಲಿನ ಭಾವನಾತ್ಮಕ ಬೆಸುಗೆಯನ್ನು ತಿಳಿಸುತ್ತದೆ.

‘ಮೂರ್ತಿ ಪೂಜೆಯ ಹೆಸರಿನಲ್ಲಿ ಸಲಿಗೆ, ಮೂಢನಂಬಿಕೆ,ಆ ಮೂಲಕ ಶೋಷಣೆ ಇತ್ಯಾದಿಗಳು ತಪ್ಪಲವೋ?’ ಶೀನ ಕೇಳಿದ.

‘ಹೌದು, ಅದು ತಪ್ಪು ಎನ್ನುವುದು ನಿರ್ವಿವಾದ.ಇದು ಮಾನವನ ದುರಾಸೆಯ, ಸುಲಭ ಮಾರ್ಗದಲ್ಲಿ ಸಂಪತ್ತು ಗಳಿಸುವ ಮನೋಪ್ರವೃತ್ತಿಯ ಫಲವೇ ಹೊರತು, ಮೂರ್ತಿಪೂಜೆಯದ್ದಲ್ಲ. ಈ ಇಲ್ಲದಿದ್ದರೆ ಬೇರೊಂದು ನೆಪದಲ್ಲಿ ಅದು ಸಾಕಾರವಾಗುತ್ತದೆಯಷ್ಟೇ. ಮೂರ್ತಿಪೂಜೆ ಮಾಡದ ಸಂಸ್ಕೃತಿಯಲ್ಲೂ, ದೇವರ, ಧರ್ಮದ, ರಾಜಕೀಯ, ವರ್ಗ,ಸಾಮಾಜಿಕ, ನೈತಿಕ ಕಾರಣಗಳನ್ನು ಕೊಡುತ್ತಾ ಒಂದು ವರ್ಗ ಇನ್ನೊಂದನ್ನು ಶೋಷಿಸುತ್ತಲೇ ಬರುತ್ತಿದೆ. ಮಾನವರಲ್ಲಿ ಬಲಿಷ್ಟ ಹಾಗೂ ದುರ್ಬಲ ವರ್ಗಗಳು ಎಲ್ಲಾ ಕಾಲದಲ್ಲೂ ಇದ್ದೇ ಇರುತ್ತವೆ. ಶಕ್ತಿ ಇರುವವರು ಇಲ್ಲದವರನ್ನು ತುಳಿಯುವುದೇ ಮೂಲ ಕಾರಣ.. ದೇವಾಲಯಗಳು, ಧಾರ್ಮಿಕಾಚರಣೆಗಳು ಜನಪದವನ್ನು ಭಾವನಾತ್ಮಕವಾಗಿ ಸೇರಿಸುವ, ಸಾಮೂಹಿಕ ವೈಭವಾಚರಣೆಗಳ ಮೂಲಕ ಸಾಂಸ್ಕೃತಿಕವಾಗಿ ಬೆಸೆಯುವ ಮೂಲ ಆಶಯವನ್ನೇ ಹೊಂದಿವೆ . ಶಿಲ್ಪ ಕಲೆ, ಸಾಹಿತ್ಯ, ಸಂಗೀತ ಎಲ್ಲವುಗಳಲ್ಲಿ ಬರುವ ದೇವರ ವರ್ಣನೆಯನ್ನು ಸಾಕ್ಷಾತ್ಕರಿಸುವುದೇ ಈ ಪರಂಪರೆಯ ಉದ್ದೇಶ. ಇದಿಲ್ಲದಿದ್ದರೆ, ಕರ್ನಾಟಕ ಸಂಗೀತದ ಯಾವ ಹಾಡೂ ಜನರಿಗೆ ಸಾಕ್ಷಾತ್ಕಾರ ಒದಗಿಸದು.ನಮ್ಮ ಅಖಂಡ ಭಾರತವು ಭಾವನಾತ್ಮಕವಾಗಿ ಒಂದೇ ಸತ್ತೆಯ ಕೆಳಗೆ ಇಂದು ಇರುವುದೂ ಈ ಕಾರಣಕ್ಕಾಗಿಯೇ ‘

‘ಈ ದೇವಾಲಯಗಳು ದೇವದಾಸಿ ಪರಂಪರೆಯನ್ನು ಬೆಳೆಸಲಿಲ್ಲವೋ?’ ಶೀನ ಮತ್ತೆ ಸವಾಲೆಸೆದ.

‘ ಜಗತ್ತಿನ ಅತಿ ಪುರಾತನವಾದ ವೃತ್ತಿಯೇ ವೇಶ್ಯಾವಾಟಿಕೆ ಎಂದು ಬಹಳಷ್ಟು ಸಂಶೋಧನೆಗಳು ಹೇಳುತ್ತವೆ. ಇದು ಮಾನವನ ವಿಕೃತ ಮನಸ್ಸಿನ ಸೃಷ್ಟಿಯೇ ಹೊರತು ದೇವಾಲಯಗಳ ತಪ್ಪಲ್ಲ’.

ಸಂಜಯ ಮತ್ತೆ ಮುಂದುವರಿಸಿದ. ‘ನೀವೆಲ್ಲಾ ಆರು ಜನ ಕುರುಡರು ಒಂದು ಆನೆಯನ್ನು ಮುಟ್ಟಿ ಅದರ ಸ್ವರೂಪದ ವ್ಯಾಖ್ಯಾನ ಮಾಡಿದ್ದು ಕೇಳೇ ಇರುತ್ತೀರಿ ಹೌದೇ?’ ಎಂದ.

‘ಅದೇನು ಇನ್ನೂ ಒಂದ್ಸಾರಿ ಹೇಳಿ ಬಿಡು. ಈ ಗುಗ್ಗು ನನ್ಮಕ್ಕಳಿಗೆ ಎನ್ಗೊತ್ತೋ ಏನಿಲ್ಲವೋ ಯಾವೋನಿಗ್ಗೊತ್ತು ‘ ಅಂತ ಕಿಟ್ಟು ಹೇಳಿದ. ಶೀನ, ಪುಟ್ಟ, ವಿಜಯ ಎಲ್ಲರೂ ಅವನನ್ನು ದುರುಗುಟ್ಟಿಕೊಂಡು ನೋಡಿದರು. ಸಂಜಯ ನಕ್ಕ.

ಒಂದೂರಿನಲ್ಲಿ ಆರು ಜನ ಕುರುಡು ಸ್ನೇಹಿತರಿರುತ್ತಾರೆ. ಆನೆಯ ಹೆಸರು ಕೇಳಿರುತ್ತಾರೆಯೇ ವಿನಃ ಅದರ ನೈಜ ಅರಿವು ಅವರಿಗಿರುವುದಿಲ್ಲ. ಒಮ್ಮೆ ಅವರ ಊರಿಗೆ ಅನೆಯೊಂದು ಬರುತ್ತದೆ. ಎಲ್ಲರೂ ತರಾತುರಿಯಿಂದ ಅದರ ಸ್ಪರ್ಶಾನುಭವ ಪಡೆಯಲು ಹೋಗ್ತಾರೆ. ಸೊಂಡಿಲನ್ನು ಮುಟ್ಟಿದವ ಅದನ್ನು ಹಾವಿನಂತೆಯೆಂದೂ, ಕಿವಿಯನ್ನು ಮುಟ್ಟಿದವ, ಬಾಳೆ ಎಲೆಯಂತೆಯೆಂದೂ, ಕಾಲನ್ನು ಮುಟ್ಟಿದವ ಕಂಬದಂತಿರುವುದೆಂದೂ, ಹೊಟ್ಟೆಯನ್ನು ಮುಟ್ಟಿದವನಿದೆ ಅದು ಗೋಡೆಯೆಂದೂ, ಬಾಲವನ್ನು ಮುಟ್ಟಿ ಹಗ್ಗವೆಂದೂ ಹೇಳುತ್ತಾರೆ. ಅವರಾರಿಗೂ ಅದರ ನಿಜದ ಸ್ವರೂಪ ತಿಳಿಯುವುದೇ ಇಲ್ಲ. ಹೇಳಿದ್ದ ಮಾತನ್ನೂ ಕೇಳದೆ ತಮ್ಮ ತಮ್ಮಲೇ ಕಿತ್ತಾಡುತ್ತಾರೆ. ಇದೂ ಹಾಗೆಯೇ ;ದೇವರು, ಧರ್ಮ ನಂಬಿಕೆಗಳು ಅವರವರ ಭಾವಕ್ಕೆ, ಭಕುತಿಗೆ, ಸಂಸ್ಕಾರಕ್ಕೆ, ಪರಿಸರಕ್ಕೆ, ಅನುಗುಣವಾಗಿರುತ್ತವೆ. ಈ ಕಥೆಯಲ್ಲಿನ ಆರು ಜನ ಕುರುಡರು, ಪೂರ್ವ ಮತ್ತು ಉತ್ತರ ಮೀಮಾಂಸಾ ದರ್ಶನದಲ್ಲಿ ಜ್ಞ್ನಾನದ ಸಾಕ್ಷಾತ್ಕಾರಕ್ಕೆ ವಿವರಿಸುವ ಆರು ಪರೀಕ್ಷಕ ಗುಣಗಳ ಪ್ರತಿನಿಧಿಗಳು. ಪ್ರತಿ ಪರೀಕ್ಷಕ ಗುಣವೂ ತನ್ನಿಂತಾನೇ ಅಪೂರ್ಣ. ಯಾವುದೇ ವಿಚಾರವನ್ನು ಈ ಆರೂ ಪರೀಕ್ಷೆಗಳ ಮೂಲಕ ಸಮಗ್ರವಾಗಿ ವಿಶ್ಲೇಷಿಸಿದರಷ್ಟೇ ಸತ್ಯದ ಅರಿವಾಗುವುದು.ಹೀಗೆ ಪರೀಕ್ಷೆಗೊಳಪಟ್ಟು ಸಿದ್ಧವಾದ ಸತ್ಯವನ್ನು ”ಪ್ರಮಾಣ” ಎನ್ನುವರು. ಪ್ರತ್ಯಕ್ಷ, ಅನುಮಾನ, ಉಪಮಾನ, ಶಬ್ದ, ಅರ್ಥಾಪತ್ತಿ ಮತ್ತು ಅನುಪಲಬ್ಧಿ ಎಂಬ ಈ ಆರೂ ಪ್ರಮಾಣಗಳನ್ನು ಬಳಸಿ ಸತ್ಯಾರ್ಥ ಶೋಧನೆ ನಡೆಸಬೇಕು.(ಭ್ರಮೆ ಎಂಬ ಪದಕ್ಕೆ ವಿರುದ್ಧಾರ್ಥ ಪ್ರಮೆ ಎಂಬುದು, ಇದು ಪ್ರಮಾಣ ಎನ್ನುವ ಪದದ ಮೂಲ). ಇದ್ಯಾವುದನ್ನು ಮಾಡದೆ ಇತರರು ನಂಬಿದ್ದೆಲ್ಲಾ ಸುಳ್ಳು ಎಂದು ಧಿಕ್ಕರಿಸಿ ಉದ್ಧಟತನ ತೋರಿದರೆ ಅದು ವಿತಂಡವಾದವೇ ಹೊರತು ವೈಜ್ಞಾನಿಕ ವಾದವಲ್ಲ. ತಮ್ಮ ವೈಯಕ್ತಿಕ ಮನೋಧೋರಣೆಯನ್ನು ಸಮಾಜದ ಮೇಲೆ ಆರೋಪಿಸಿ ಒಂದು ವರ್ಗದ ಮನ ನೋಯಿಸಿದರೆ ಅದು ಸರ್ವ ಹಿತಕಾರಿ ಕೆಲಸ ಅಲ್ಲ. ಇಂತಹ ಕಾರ್ಯಗಳು ಒಂದು ಬಗೆಯಾ ಬೌದ್ಧಿಕ ಭಯೋತ್ಪಾದನೆ ಎಂದೆನ್ನಲ್ಲಡ್ಡಿಯಿಲ್ಲ.

ಇದು ಸಮಾಜದಲ್ಲಿ ಕೋಲಾಹಲ ಮೂಡಿಸಿ ವರ್ಗಗಳ ನಡುವೆ ವೈಷಮ್ಯದ ಬೀಜ ಬಿತ್ತುವುದಲ್ಲದೆ ತಾರತಮ್ಯ ಭಾವವನ್ನೂ ಉಂಟುಮಾಡುತ್ತದೆ. ದೇವರ ಕಲ್ಪನೆಯ ಮೂಲಕ ’ಸರಕಾರೀ ಕೆಲಸ ದೇವರ ಕೆಲಸ’ ಎಂದೆನ್ನುತ್ತೇವೆ. ಹಾಗಾದರೆ ವಿಧಾನ ಸೌಧದ ನಡುವೆ ಉಚ್ಚೆ ಮಾಡಲಾಗುವುದೇ?”ದೇಹವೇ ದೇಗುಲ’ ಎಂದು ಕರೆಯುತ್ತೇವೆ ಹಾಗೆಂದು ನಮ್ಮ ಮೇಲೆ ನಾವೇ ಉಚ್ಚೆ ಮಾಡಿ ಕೊಳ್ಳಬಹುದೇ?

ಸಮಾಜಕ್ಕೆ, ಅದರ ಮೂಲಕ ವ್ಯಕ್ತಿಗಳಿಗೆ, ಭಾವನಾತ್ಮಕ, ಧಾರ್ಮಿಕ, ಸಾಂಸ್ಕೃತಿಕ,ನೈತಿಕ, ಕೌಟುಂಬಿಕ, ಸಂವೇದನಾಶೀಲ ಚೌಕಟ್ಟು ಅತೀ ಅವಶ್ಯಕ. ಏಕೆಂದರೆ ಎಲ್ಲರ ಮನೋರುಚಿ, ಮನೋನಿಗ್ರಹ, ಬೌದ್ಧಿಕ ಮತ್ತ ಒಂದೇರೀತಿ ಇರುವುದಿಲ್ಲ . ಎಲ್ಲರೂ ವಿಚಾರವಾದಿಗಳಾಗಿ ಆದರ್ಶ ಪರರಾಗಿ ಯೋಚಿಸುವುದಿಲ್ಲ. ಸಾಮಾನ್ಯವಾಗಿ ಒಪ್ಪುವಂತಹ , ಅಂಗೀಕರಿಸಿದಂತಹ ನಿಯಮಗಳಿಂದಲೇ ಸಮಾಜಕ್ಕೆ ಸುಸ್ಥಿ ತಿ ಇರುತ್ತದೆ. ಇದನ್ನು ಕಲಕುವ ಮುನ್ನ ಯೋಚನೆ ಮಾಡಬೇಕು. ವಿದ್ಯಾರ್ಥಿಗಳು ಒಂದೇ ಮಾದರಿಯಲ್ಲಿ ಕಲಿಯುವುದಿಲ್ಲ. ಅವರ ಕಲಿಕೆಯ ವಿಧಾನದಲ್ಲಿ ವೈವಿಧ್ಯತೆ ಸಹಜ. ಸಮಾಜವು ಹಾಗೆಯೇ ನಂಬಿಕೆಗಳ ವೈವಿಧ್ಯತೆಗಳ ಗೂಡು. ಇದು ಪ್ರಾಧ್ಯಾಪಕರಾದ ಇಬ್ಬರಿಗೂ ಗೊತ್ತಿರಬೇಕಾಗಿತ್ತು. ಆದರೆ ಅದನ್ನು ಅವರು ಮರೆತರು. ಕತ್ತೆ ಉಚ್ಚೆ ಹುಯ್ದಂತೆ ಗೊತ್ತು ಗುರಿ ಇಲ್ಲದೆ ಮಾತನಾಡಿದರು’ ಎಂದ.

’ಹಾಗಾದರೆ ಬದಲಾವಣೆಗೆ ನಿನ್ನ ವಿರೋಧವೋ ” ವಿಜಯ ಕೇಳಿದ.

’ಹಾಗೇನಿಲ್ಲ. ಬದಲಾವಣೆ ಕೆಲವೊಮ್ಮೆ ಧಿಢೀರ್ ಎಂತಲೂ, ಕೆಲವೊಮ್ಮೆ ಸಾವಧಾನವಾಗಿಯೂ ತರಬೇಕಾಗುತದೆ. ಯಾವುದು ಎಂಬುವುದು ಸಮಸ್ಯೆಯ ಗಹನತೆ, ಪ್ರಾಮುಖ್ಯತೆಯನ್ನು ಅವಲಂಬಿಸಿರುತ್ತದೆ. ಧನಾತ್ಮಕ ಪ್ರಕ್ರಿಯೆಗಳ ಮೂಲಕ ತರುವ ಬದಲಾವಣೆಗಳು ದೀರ್ಘಕಾಲಿಕ ಹಾಗೂ ಸಾರ್ವತ್ರಿಕ ಹಟ ಉಂಟುಮಾಡುತ್ತವೆ. ಋಣಾತ್ಮಕ ಕ್ರಿಯೆಗಳು ಅಪೇಕ್ಷಿಸಿದ ಬದಲಾವಣೆಯ ಬದಲು ವಿಧ್ವಂಸಕ ಪರಿಣಾಮಗಳನ್ನು ತರಬಹುದು’’.

‘’ಸತ್ಯಂ ಬ್ರೂಯಾತ, ಪ್ರಿಯಂ ಬ್ರೂಯಾತ್ ’’ ಎಂದು ಸಂಸ್ಕೃತದಲ್ಲೂ, ’ನುಡಿದರೆ ಮುತ್ತಿನ ಹಾರದಂತಿರಬೇಕು’ ಎಂದೂ ಬಸವಣ್ಣನವರು ಹೇಳಿದ್ದಾರೆ. ಅದನ್ನು ಬಿಟ್ಟು ‘ನುಡಿದರೆ ಕೊಚ್ಚೆಯ ಗಟಾರದಂತಿರ’ ಬಾರದು !! ನುಡಿಯೊಳಗಾಗಿ ನಡೆಯದ ಅನಂತಮೂರ್ತಿಯವರೂ,ಅದನ್ನು ಜಗಜ್ಜಾಹೀರು ಮಾಡಿದ ಕಲಬುರ್ಗಿಯವರೂ ‘’ಸಾಹಿತಿ’’ಗಳ ಮೂಲಭೂತ ಕರ್ತವ್ಯವನ್ನೇ ಮರೆತರು.ಭಾಷೆಯ ಮಾಧ್ಯಮದ ಮೂಲಕ ಸಾರ್ವತ್ರಿಕ ಹಿತದ ಪರಿಕಲ್ಪನೆಯೇ ಸಾಹಿತ್ಯ. ಇಬ್ಬರೂ ವಯೋ ವೃದ್ಧರಾದರೂ ಬುದ್ಧಿತಿಳಿದು ವರ್ತಿಸಲಿಲ್ಲವೆಂಬುದೇ ಖೇದದ ವಿಷಯ’ ಎಂದು ಹೇಳಿ ನಿಲ್ಲಿಸಿದ.

‘’ಸರಿ ಬಿಡ್ರಪ್ಪ, ಸಮಾಜದಲ್ಲಿ ಹುಳಿಹಿಂಡಿದ್ದರಿಂದ ಹಾಗೂ ವಯಸ್ಸಾದರೂ ಬುದ್ಧಿ ಬರಲಿಲ್ಲವಾದ್ದರಿಂದ ‘’ಹುಣಿಸೆಕಾಯಿಗೆ ನಲ್ಲಿಕಾಯಿ ಸಾಕ್ಷಿ ‘’ ಮತ್ತು ‘’ಹುಣಿಸೆ ಮುಪ್ಪಾದರೂ ಹುಳಿಗೆ ಮುಪ್ಪಿಲ್ಲ’’ ಎಂಬ ಗಾದೆಗಳನ್ನು ಅಂಗೀಕರಿಸೋಣ ಏನಂತೀರಾ” ಎಂದ ವಿಜಯನ “ನುಡಿದರೆ ಲಿಂಗ ಮೆಚ್ಚಿ ಅಹುದಹುದೆನಬೇಕು” ಮಾತಿಗೆ ಎಲ್ಲರೂ ತಲೆದೂಗಿ ಜಾಗ ಖಾಲಿ ಮಾಡಿದರು.

ಚಿತ್ರಕೃಪೆ : kn.wikipedia.org

Read more from ಲೇಖನಗಳು

ನಿಮ್ಮ ಅನಿಸಿಕೆ...

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Note: HTML is allowed. Your email address will never be published.

Subscribe to comments