ಬಡವ ಯಾರು ?
– ಮಹೇಶ ಹುಂಡೆಕಾರ್
ಸಹಾಯಕ ಪ್ರಾಧ್ಯಾಪಕ,ಜಿ. ಎನ್. ಡಿ. ಇಂಜಿನಿಯರಿಂಗ್ ಕಾಲೇಜ,ಬೀದರ್
ಬಡವನಾದವನು ಧನಿಕನಿಗೆ ದಿನಾ ತನ್ನ ಅಸಲಿನ ಬಡ್ಡಿ ಕೊಟ್ಟು ಬದುಕುತ್ತಾನೆ, ಹಾಗೆಯೆ ಧನಿಕನು ದಿನಾ ಬಡ್ಡಿ ಎನ್ನುತ್ತಾ ಸಾಯುತ್ತಾನೆ. ದುಡ್ಡು ಪಡೆದವನಿಗೆ ಅಸಲು ಮತ್ತು ಬಡ್ಡಿ ಹೊಂದಿಸುವುದಷ್ಟೆ ಕೆಲಸ ಆದರೆ ಧನಿಕನಿಗೆ ಬಡ್ಡಿ ಪಡೆದ ಮೇಲೆ ಅದರ ಲೆಕ್ಕದ ಕೆಲಸ ಕೂಡ. ಒಂದರ್ಥದಲ್ಲಿ ಬಾಳಿ ಬದುಕುವವನು ಬಡವನೆ ಹೊರತು ಧನಿಕನಲ್ಲ.ಇಲ್ಲದ ಚಿಂತೆ ಮಾಡಿ ಬರದ ಕಾಯಿಲೆಗಳನೆಲ್ಲಾ ಬರಮಾಡಿಕೊಂಡು,ಬಡ್ಡಿ ಪಡೆದ ಹಣವು ಗುಳಿಗೆಗಳಿಗೆ ಮೀಸಲಿಟ್ಟು, ಹಣದ ಲೆಕ್ಕ ಮಾತ್ರ ಮಾಡುತ್ತ ಹಾಸಿಗೆ ಹಿಡಿದು ಕೂತಿದ್ದಾನೆ ನಮ್ಮ ಕಥಾನಾಯಕ ತಿಮಯ್ಯಸೆಟ್ಟರು ಜೊತೆಗೆ ಜೀವದ ಗೆಳೆಯರಾದ ಗುಣಲಿಂಗ ಹಾಗೂ ಶಾಂತರೂಪರು ಆಸಿನರಾಗಿದ್ದರೆ.ನಮ್ಮ ತಿಮ್ಮಯ್ಯಸೆಟ್ಟರ ಭಾರಿ ವಿಚಾರಗಳು ಮತ್ತು ಅದಕ್ಕೆ ಪೂರಕವಾಗಿ ತನ್ನ ಸುತ್ತಲಿನ ಪರಿಸರವನ್ನು ತಾನೆ ನಿರ್ಮಿಸಿಕೊಳ್ಳುತಿದ್ದ ಏಕೆಂದರೆ ಆ ಬಡಾವಣೆಯಲ್ಲಿ ತಾನೆ ಶ್ರೀಮಂತ “ಹಣದಲ್ಲಿ” ಹಾಗೆಯೆ ಅದರ ಮಹಿಮೆಯಿಂದ ಮೆರೆಯತೊಡಗಿದ.ಅನುಕಂಪದ ಆಧಾರದ ಮೇಲೆ ಸರಕಾರಿ ಕೆಲಸ ಗಿಟ್ಟಿಸಿಕೊಂಡು ಬಹಳ ಚಿಕ್ಕ ವಯಸ್ಸಿನಲ್ಲೇ ದುಡ್ಡಿನ ಹುಚ್ಚು ಆಡರಿಸಿಬಿಟ್ಟಿತು. “ದುಡ್ಡು ಜೀವನಕ್ಕೆ ಬಹಳ ಅಗತ್ಯ, ಆದರೆ ದುಡ್ಡೆ ಜೀವನವಲ್ಲ” ನಮ್ಮ ತಿಮ್ಮಯ್ಯಸೆಟ್ಟರದು ದುಡ್ಡು ಒಂದೆ ಬೇಕು ಜೀವನಕ್ಕೆ ಎಂದು ಊರೆಲ್ಲ ಹಲಗೆ ಹೋಡಿದು ಸಾರುತ್ತಿದ್ದರು.
ಸೆಟ್ಟರ ಅಪ್ಪ ನಿಷ್ಟಾವಂತ ಅಧಿಕಾರಿ ಯಾರ ಜೊತೆಯಲ್ಲೂ ಸುಮ್ಮನೆ ಮಾತಿಗೀಳಿಯುತಿರಲಿಲ್ಲ, ತನ್ನ ಸರಿಸಮಾನರನ್ನು ಹುಡುಕಿ ಅವರ ಜೊತೆ ಗಂಭಿರದ ಒಂದೆರಡು ಮಾತುಗಳು ಅವು ‘ಹು’ ‘ಹಾ’ ಗಳಲ್ಲಿ. ಅಂತಹವರ ಹೊಟ್ಟೆಯಲ್ಲಿ ಯಾವ ಜನ್ಮದ ಪಾಪವೂ ಅಥವಾ ಕರ್ಮವೋ ತಿಮ್ಮಯ್ಯಸೆಟ್ಟರು ಹುಟ್ಟಿದಾಗ, ಖುದ್ದಾಗಿ ತನ್ನ ಗಾಂಭಿರ್ಯವನ್ನು ಮರೆತು ಮಗನನ್ನು ತೊಟಿಲ್ಲಲ್ಲಿ ಹಾಕಿ ಲಾಲಿ ಹಾಡಿದರು, ಬೆಳೆಬೆಳೆಯುತ್ತ ಇದು ನನ್ನ ರಕ್ತವೇ ಅನ್ನುವಷ್ಟು ಅನುಮಾನ, ಯಾರ ಜೀವನ ಅವರಿಗೆ ಅನ್ನುತ ಒಂದು ದಿವಸ ಅಕಾಲ ಮರಣ ಹೊಂದಿದರು. ಸೆಟ್ಟರಿಗೆ ತಮ್ಮಪ್ಪ ಗಳಿಸಿದ್ದ ಅಲ್ಪ ಹಣವು ಮತ್ತು ಹೆಸರು ಧಾರೆಯೆರದು ಕೊಟ್ಟಂತಾಯಿತು. ಅಪ್ಪ ತೀರಿಕೊಂಡ ದುಃಖ ಕೆಲ ವರುಷಗಳವರೆಗೆ ಇತ್ತು, ಕಾಲಕ್ಕೆ ಎಲ್ಲವನ್ನು ಮರೆಮಾಚಿಸುವ ಶಕ್ತಿಯಿದೆ, ಅದಕ್ಕೆ ನಮ್ಮ ಹಿರಿಯರು ಸಮಯಕ್ಕೆ ಬಹಳ ಮಹತ್ವವನ್ನು ಕೊಟ್ಟಿರಬಹುದು.
ನಮ್ಮ ತಿಮ್ಮಯ್ಯಸೆಟ್ಟರ ಎತ್ತರ ಸುಮಾರು ಐದು ಅಡಿ ಆರು ಇಂಚು, ಎಣ್ಣೆಗೆಂಪು ಮೈಬಣ್ಣ, ರೇಷ್ಮೆಯಂಥ ಕರಿಗೂದಲು, ನೀಳವಾದ ಮೂಗು, ಕಣ್ಣುಗಳು ಆಕರ್ಷಕವಾಗಿದ್ದು ತುಟಿಗಳು ತನ್ನ ಆಕಾರಗಳನ್ನು ಮರೆತು ಕೊಂಚ ದಪ್ಪಗಿದ್ದವು, ಹಲ್ಲುಗಳು ಸಮವಾಗಿದ್ದು ತುಟಿಗಳ ಕಾರಣದಿಂದ ಇವನ ಹಲ್ಲುಗಳು ಸರಿಯಿಲ್ಲವೆನೊ ಅಂತ ಭ್ರಮೆಹುಟ್ಟಿಸುತಿದ್ದವು. ನಮ್ಮ ಭಾರತೀಯ ಪರಂಪರೆಯ ಪ್ರಕಾರ ನಾವೆಲ್ಲ ಚಿನ್ನ(ಬಂಗಾರ) ತೊಡುವುದು ಅದಕ್ಕಿದ್ದ ಗುಣಗಳು ನಮಗೆ ಬರಲಿ, ಅದರ ಪ್ರೇರಣೆ ಮತ್ತು ಸ್ಪೂರ್ತಿ ಪ್ರತಿ ಕ್ಷಣಕ್ಕೂ ಸಿಗಲಿ ಅಂತ. ಉದಾಹರಣೆಗೆ ಬಂಗಾರಕ್ಕೆ ಎಷ್ಟು ಕೊರೆದರು ಅದು ಮಿಂಚುತ್ತ ಹೋಗುತ್ತೆ ಹಾಗೆಯೆ ಬೆಂಕಿಯಲ್ಲಿ ಎಷ್ಟು ಬೆಂದಿಸುತ್ತಿರಿ ಅಷ್ಟು ಹೊಳಪುತ್ತೆ ಮತ್ತು ಚಿನ್ನಕ್ಕೆ ಎಂದು ತುಕ್ಕು ಹಿಡಿಯುವುದಿಲ್ಲ. ಇದಕ್ಕೆ ಇದ್ದಂತಹ ಗುಣಗಳು ಯಾವ ಲೋಹಕ್ಕು ಇಲ್ಲ, ಅದಕ್ಕೆ ನಾವೆಲ್ಲ ಚಿನ್ನ ತೊಡುವುದು. ಸೆಟ್ಟರ ಹತ್ತು ಕೈಬೆರಳುಗಳಲ್ಲಿ ಕನಿಷ್ಠ ಆರು ಬೆರಳುಗಳಿಗಾದರು ಚಿನ್ನದ ಉಂಗರುಗಳು ರಾರಜಿಸುತಿದ್ದವು. ಚಿನ್ನ ತೊಡುವುದು ತನ್ನ ಸಂಪತ್ತನ್ನು ತೋರಿಕೊಳ್ಳಲು ವಿನಹ ಯಾವುದೆ ಸಿದ್ದಾಂತ ಮೆರೆಯುವುದಕ್ಕಲ್ಲ ಅನ್ನುವ ವಿಚಾರ ಇವರದು, ಸದಾ ಶುಭ್ರವಾದ ಬಟ್ಟೆಗಳು ಹಾಗು ತರೆಹೆವಾರಿ ಚಪ್ಪಲಿಗಳನ್ನು ತೊಡುವುದು ಇವರ ಶೋಕಿಯಾಗಿತ್ತು.
ಗುಣಲಿಂಗನ ಅಪ್ಪ ಖಾಸಗಿ ವ್ಯಾಪಾರಿಯಾಗಿದ್ದರು, ನೇರ ನುಡಿ, ನುಡಿದಂತೆ ನಡೆ ಅವರ ವ್ಯಕ್ತಿತ್ವ. ಅಪ್ಪನಿಗೆ ಒಂದೆ ಪುತ್ರರತ್ನ ಅದು ಗುಣಲಿಂಗ, ತಾಯಿಯ ಅಂಧ ಮಮತೆಯಲ್ಲಿ ಬಲಿತು ಸಮಾಜಕ್ಕೆ ಕಪ್ಪು ಚುಕ್ಕೆಯಂತೆ ಬೆಳೆದುಬಿಟ್ಟ, ಮಗನ ತಪ್ಪುಗಳೆಲ್ಲ ಮುಚ್ಚಿಟ್ಟು ಅಪ್ಪನ ಕಡುಸತ್ಯದ ಬಾಗಿಲಿನ ದರ್ಶನವೇ ತೋರ್ಪಡಿಸಲಿಲ್ಲ ಮಹಾತಾಯಿ. ಗುಣಲಿಂಗನೊ ಶಾಲೆಗೆ ಹೋದರೆ ಹೋದ ಇಲ್ಲದಿದ್ದರೆ ಇಲ್ಲ. ತಾಯಿಯ ಹತ್ತಿರ ದುಡ್ಡು ಬೇಡಿ ಸಿನೇಮಾ ನೋಡುವ ಚಟ ಹಚ್ಚಿಕೊಂಡಿದ್ದ ಆದರೆ ಎಂದು ದುಡ್ಡು ಕದಿಯುತಿರಲಿಲ್ಲ. ಪ್ರತಿಭೆಗೆ ಏನು ಕಡಿಮೆಯಿರಲಿಲ್ಲ, ನೋಡಿದ್ದನ್ನು ಕೂಡಲೆ ಕಲಿತುಕೊಳ್ಳುವ ಸಾಮರ್ಥ್ಯವನ್ನು ಹೊಂದಿದ್ದ. ಆದರೆ ವಿಧಿಬರಹ, ತಿಮ್ಮಯ್ಯಸೆಟ್ಟ ಹಾಗು ಶಾಂತರೂಪನ ಗೆಳೆತನ ಇವನಿಗೆ ಅಧೋಗತಿಗೆ ಕೊಂಡೊಯ್ದಿತ್ತು.
ಗುಣಲಿಂಗ ನೋಡಲು ಯಾವ ಸಿನೇಮಾ ಹಿರೋಗಿಂತ ಕಡಿಮೆಯಿರಲಿಲ್ಲ, ಅಗಲವಾದ ಹಣೆ, ಕಟೆದಂತಹ ದಟ್ಟ ಹುಬ್ಬುಗಳು, ಅವುಗಳ ಕೆಳಗೆ ಸದಾ ನಗುತ್ತಿರುವ ಈಷ್ಟಗಲ ಕಣ್ಣುಗಳು, ಮೂಗು ಸ್ವಲ್ಪ ಮಂಡಾಗಿದ್ದರು ಕಣ್ಣುಗಳಿಗೆ ವೀಷೆಶವಾದ ಕಳೆ ತಂದುಕೊಟ್ಟಿತ್ತು, ಮೂಗಿನ ಸೊಳ್ಳೆಗಳು ಯಾವುದೊ ಸ್ವಾದವನ್ನು ಆಘ್ರಾಣಿಸುತ್ತಿರುವ ಹಾಗೆ ತೆರೆದಿಟ್ಟಂತೆ ಕಾಣಿಸುತ್ತಿದ್ದವು. ತುಟಿಗಳು ಗುಲಾಬಿ ಹೂವುಗಳು ನಾಚಿಕೊಳ್ಳಬೇಕು ಹಾಗೆಯೆ, ಗುಣಲಿಂಗನು ನಕ್ಕರೆ ಯಾವ ಸಿಟ್ಟಿನ ಮನ್ನುಷ್ಯನು ಕಣ್ಣಗಲ ಮಾಡಿ ನೋಡಬೇಕು. ಅವನ ಬಿಳಿಯ ದಂತಪಂಕ್ತಿ ಮತ್ತು ಗಲ್ಲದ ಮೇಲಿನ ಗುಳಿಗಳು ಎಂತವರನ್ನಾದರೂ ಮೋಹಗೊಳಿಸುತ್ತಿದ್ದವು, ಇವೆಲ್ಲಕ್ಕೂ ಮೀರಿ ಹುಟ್ಟುಗುಣದ ಹಾಗೆ ಚಾಣಕ್ಷ್ಯತನವು ಮೈಗೊಡಿಸಿಕೊಂಡು ಸದಾ ಆತ್ಮವಿಶ್ವಾಸದ ನಡುಗೆ ಹೊಂದಿರುತ್ತಿದ್ದ. ದೇಶಕ್ಕೆ ದೊಡ್ಡ ಪ್ರಜೆಯಾಗಿ ಬೆಳೆಯಬೇಕಾದವನು ಮಂಗಗಳ ಕೈ ಸೇರಿ ಅಪ್ರಯೋಜಕನಾಗಿ ತಿಮ್ಮಯ್ಯಸೆಟ್ಟರ ಮುಂದೆ ಮುಂಗೈ ಒರೆಸಿಕೊಳ್ಳುತ್ತಾ ಹುಸಿನಗೆ ಬೀರಿ ನಿಂತಿದ್ದಾನೆ.
ಶಾಂತರೂಪನದು, ತನ್ನ ಬದುಕಿನಲ್ಲಿ ಏನು ನಡಿತಾಯಿದೆ ಅನ್ನೋದಕ್ಕಿಂತ ಪರರ ಜೀವನದಲ್ಲಿ ಇಣುಕಿ ನೋಡುವುದು, ಇವನ ಜಾಯಮಾನ. ಹಾಗಂತ ನೇರವಾಗಿ ಯಾರಿಗೂ ಮೋಸಮಾಡಿದವನಲ್ಲ, ಆದರೆ ಪರೋಕ್ಷವಾಗಿ ಎಲ್ಲರಿಗು ಮೋಸ ಮಾಡಿದವನೇ ತನ್ನ ಮಡದಿಯನ್ನೂ ಸೇರಿಸಿ.ಎರಡು ನಾಲಿಗೆಯ ಸರ್ಪವೆಂದರು ಕಡಿಮೆಯೆ, ಮಾತಾಡಿದರೆ ವಿಷಕಾರುವ, ಬಾವಿಯಲ್ಲಿ ಬಿದ್ದವರಿಗೆ ಮೇಲಿಂದ ಕಲ್ಲೆಸೆಯುವ ಚರಿತ್ರೆ. ತಿಮ್ಮಯ್ಯಸೆಟ್ಟರ ಹತ್ತಿರ, ಆಸು ಪಾಸು ಜಾಗ ಗಿಟ್ಟಿಸಿಕೊಂಡವ, ಇವರ ಹೆಗಲ ಮೇಲೆ ಕೈ ಹಾಕಿ ಮಾತನಾಡುವಷ್ಟು ಸಲಿಗೆಯನ್ನು ಪಡೆದಿದ್ದ.
ಹೀಗೆಯೆ ಸುಮಾರು ವರುಷಗಳ ಕಾಲ ಈ ಮೂವರ ಸಂಸಾರದ ಬಂಡಿ ಸಾಗುತ್ತಿತ್ತು. ಮೂವರ ಮದುವೆಯಾಗಿ ಮುದ್ದುಮಕ್ಕಳಿಗೆ ಜನ್ಮ ನೀಡಿದರು. ಗುಣಲಿಂಗನ ಆಸ್ತಿ ಕೊಂಚ ಕರಗಿತ್ತು ಹಾಗೆಯೆ ಶಾಂತರೂಪನ ಕಪಿಚೇಷ್ಟೆ ಮುಗಿಲು ಮುಟ್ಟುತ್ತಿತ್ತು, ತಿಮ್ಮಯ್ಯಸೆಟ್ಟರ ಮನೆಯಲ್ಲಿ ಚಿನ್ನದ ದರ್ಬಾರು ನಡೆಯುತ್ತಿತ್ತು. ಹೀಗಿರುವಾಗ ಗುಣಲಿಂಗನ ತಾಯಿಯ ಅರೋಗ್ಯ ಕೆಟ್ಟಿ ಆಸ್ಪತ್ರೆ ಸೇರಿದರು. ತುರ್ತಾಗಿ ದುಡ್ಡಿನ ಅಗತ್ಯ, ಸೆಟ್ಟರ ಮುಂದೆ ಮುಂಗೈ ಒರೆಸಿಕೊಳ್ಳುತ್ತಾ ಇಂತಿಷ್ಟು ದುಡ್ಡು ಬೇಕು ಎಂದ.
“ಇನ್ನು ನನ್ನ ಹತ್ತಿರ ನಯಾ ಪೈಸೆ ಕೂಡ ಇಲ್ಲ”. ಅಂತ ಖಡಾಖಂಡಿತವಾಗಿ ಹೇಳಿದ, ಅದಕ್ಕೆ ಶಾಂತರೂಪನು ದನಿಗೊಡಿಸಿದ. ಗುಣಲಿಂಗ ಕಣ್ಣಲ್ಲಿ ನೀರು ತಂದು ಪರಿಪರಿಯಾಗಿ ಬೇಡಿಕೊಂಡ ಆದರು ಅವರಿಬ್ಬರ ಮನಸ್ಸುಗಳು ಕರಗಲಿಲ್ಲ, ಮನಸ್ಸು ಅಷ್ಟೊಂದು ಕಠೊರವೇಕೆ ಎಂದು ಯೋಚಿಸುತ್ತ ತನ್ನ ಮನೆಯ ದಾರಿ ಹಿಡಿದ. ಆ ಸಂಜೆ ಅವನ ತಾಯಿಯ ಸಾವಿನ ಸುದ್ದಿ. ಸುದ್ದಿಯಿಂದ ಹಿಡಿದು ಮೊಕ್ಷದವರೆಗೆ ಶಾಂತರೂಪ ಹಾಗು ತಿಮ್ಮಯ್ಯಸೆಟ್ಟರ ಮನಸಾರೆ ಸೇವೆ. ಇಂಥ ಸಮಯದಲ್ಲಿ ಸೇವೆ ಮಾಡಿದರೆ ಸಮಾಜದಲ್ಲಿ ಉನ್ನತ ಸ್ಥಾನ ಹಾಗು ಗೌರವ.
ಪ್ರಕೃತಿ ದಿನಾ ರಾತ್ರಿ ಒಂದಿಷ್ಟು ಅರಿವಿನ ಕಿಡಿ ತಿಮ್ಮಯ್ಯಸೆಟ್ಟರ ಮನಸ್ಸಿನಲ್ಲಿ ಹೊತ್ತಿಸುತ್ತಿತ್ತು. “ಚಿನ್ನ ಭದ್ರತೆಯ ಸಂಕೇತ ಆದರೆ ಸಮಾಧಾನದ ಸಂಕೇತವಲ್ಲ” ಇದನ್ನ ತಿಳಿಯೋದಕ್ಕೆ ವೃದ್ದರಾಗಿಹೋಗಿದ್ದರು.ತಿಮ್ಮಯ್ಯಸೆಟ್ಟ ಹಾಗು ಶಾಂತರೂಪರಿಗೆ ಆರೋಗ್ಯ ಕೈ ಕೊಡತೊಡಗಿದಾಗ ಭ್ರಮೆಲೋಕದಿಂದ ನಿಜಲೋಕದ ದರ್ಶನವಾಗತೊಡಗಿತು. ಶಾಂತರೂಪನಿಗೆ ತನ್ನ ಮನೆಯಲ್ಲೆ ಮರ್ಯಾದೆ ಇಲ್ಲ, ತಾಯಿ ಧಿಮಂತ ವ್ಯಕ್ತಿತ್ವವುಳ್ಳವಳಾಗಿದ್ದಳು,ಅವಳದೇ ಆದ ಸಿದ್ದಾಂತಗಳಿದ್ದವು. ಆ ಸಿದ್ದಾಂತಗಳಲ್ಲಿ ಮಗನಿಗೆ ಯಾವ ಪಾತ್ರವು, ಹೊಣೆಯು ಇಲ್ಲ. ಅದಕ್ಕೆ ಆ ತಾಯಿ ಅವನಿಗೆ ಹೊರಹಾಕಿದ್ದಳು, ಮನೆಯಿಂದಲ್ಲ ಮನಸ್ಸಿನಿಂದ, ತಾಯಿ ಪ್ರೀತಿಯ ವಂಚನೆ ಪಾಪದ ಕರ್ಮವಾಗಿ ಅಂತರಂಗದಲ್ಲೆ ಕೊರೆಯುತ್ತಿತ್ತು. ಹಾಗೆಯೆ ಇವನು ಕೂಡ ರಾತ್ರಿಯೆಲ್ಲಾ ಗೂಬೆಯ ಹಾಗೆ ಕಣ್ಣುಬಿಟ್ಟಿ ಕೂರುತ್ತಿದ್ದ. ಮನುಷ್ಯನಿಗೆ ದಿನಾ ರಾತ್ರಿ ನಿದ್ದೆ ಬರಬೇಕಾದರೆ ಸಮಾಧಾನ ಅನ್ನೋದು ಒಂದು ಬೇಕಲ್ಲ, ಅದು ಸುಳ್ಳು ಸಮಾಧಾನವೊ ಕಳ್ಳ ಸಮಾಧಾನವೊ ಬೇಕೆ ಬೇಕು. ಇವರಿಬ್ಬರಿಗೆ ಇವೆರಡು ಕೆಲಸಮಾಡುತ್ತಿರಲ್ಲಿಲ್ಲ.
ತಿಮ್ಮಯ್ಯಸೆಟ್ಟ ಸ್ನಾನ ಮುಗಿಸಿ, ಪಂಚೆ ತೊಟ್ಟು, ದೇವರ ಪೂಜೆ, ಧ್ಯಾನ ಮಾಡಿ ಕರ್ಪೂರದ ಆರತಿ ಬೆಳಗುತ್ತಾ ಇದ್ದಾಗ, ಇದ್ದಕಿದ್ದ ಹಾಗೆ ಆರತಿ ಹಾಡು ಬಿಟ್ಟು, ‘ದುಡ್ಡು ದುಡ್ಡು ದುಡ್ಡು, ಚಿನ್ನ ಚಿನ್ನ ಚಿನ್ನ” ವಟಗುಟ್ಟತೊಡಗಿದರು, ಅಲ್ಲಿಗೆ ಅವರ ಬುದ್ದಿ ಅವರ ಹಿಡಿತದಲ್ಲಿರಲಿಲ್ಲ, ತನ್ನ ಕಪಾಟಿನಲ್ಲಿರುವ ೧೦೦, ೫೦೦, ೧೦೦೦ ಮುಖಬೆಲೆಯಿರುವ ನೋಟಗಳನ್ನು ತೆಗೆದು ಹರಿದು ಹಾಕುತ್ತ ವಿಕಾರವಾಗಿ ಕಿರುಚುತ್ತ ಕುಣಿಯತೊಡಗಿದರು. ಬಹುಷಃ ಅವರು ಮನಸಾರೆ ಬದುಕಿದ್ದು ಆವಾಗೆ ಇರಬಹುದು.
ಹುಚ್ಚಾಸ್ಪತ್ರೆಯಲ್ಲಿ ಗುಣಲಿಂಗ ಯಾವುದೊಂದು ವಿಚಾರದಲ್ಲಿ ಮಗ್ನನಾಗಿ ತಿಮ್ಮಯ್ಯಸೆಟ್ಟರ ಬಗಲ್ಲಲ್ಲಿ ಕೂತಿದ್ದಾನೆ ತಿಮ್ಮಯ್ಯಸೆಟ್ಟರು ಕೊಂಚ ಗುಣಮುಖರಾಗುತ್ತಿದ್ದಾರೆ “ನನಗಿಲ್ಲಿಂದ, ಮನೆಗೆ ಕರ್ಕೊಂಡು ಹೊಗ್ಬೆಡೋ ಗುಣಲಿಂಗ ನಾನಿಲ್ಲಿ ಆರಾಮವಾಗಿದ್ದೀನಿ” ಎಂದು ಗುಣಲಿಂಗನ ಮುಂದೆ ಗೊಗರೆಯುತ್ತಿದ್ದಾರೆ. ಶಾಂತರೂಪನು ಗೆಳೆಯ ತಿಮ್ಮಯ್ಯಸೆಟ್ಟರ ಭೇಟಿಗೆಂದು ಬಂದಿದ್ದಾನೆ, ಒಂದಿಷ್ಟು ಮಾತನಾಡಿ ತನ್ನ ಬುದ್ದಿಗೆ ಕೆಲಸ ಕೊಟ್ಟು ಇವನ ದುಡ್ಡಿನ ಅಧಿಪತಿ ಹೇಗಯ್ಯ ಆಗೋದು ಅಂತ ಲೆಕ್ಕಾಚಾರ.
ಗುಣಲಿಂಗನು ಜೋರಾಗಿ ನಕ್ಕಿ “ಯಾಕಪ್ಪ ಶಾಂತರೂಪನೆ ನೀನೂ ಇವನ ಹಾಗೆ ಹುಚ್ಚೆದ್ದು ಕುಣಿಯಬೇಕೇನು” ಎಂದು ಶಿವನೇ ಅನ್ನುತ್ತ ಆಕಾಶದ ಕಡೆಗೆ ನೋಡಿದನು.ಸಂಸ್ಕಾರ ಒಂದೇ ಸಾಕು ಜೀವನಕ್ಕೆ, ನಮ್ಮ ಭಾರತ ದೇಶದ ಮಣ್ಣಿನ ಗುಣಗಳು ಸಂಸ್ಕಾರವಂಥವರಿಗೆ ಮಾತ್ರ ಬದುಕಲು ಅವಕಾಶ ಮಾಡಿ ಕೊಡುತ್ತೆ. “ಸಂಸ್ಕಾರ ಎಲ್ಲಿ ಮಾಯವಾಗುತ್ತಾ ಹೋಗ್ತಾಯಿದೆ ಅನ್ನೋದೆ ಇವತ್ತಿನ ಯಕ್ಷ ಪ್ರಶ್ನೆ. ಅದಕ್ಕೆ ಇರಬೇಕು ಜಗವೆಲ್ಲ ಹುಚ್ಚೆದ್ದು ಕುಣಿತಾಯಿದೆ”.
ಚಿತ್ರಕೃಪೆ : http://www.clipartpanda.com
ವಿಷಯ ಚೆನ್ನಾಗಿದೆ. ನಿರೂಪಣೆಯನ್ನು ಇನ್ನೊಂದು ಸ್ವಲ್ಪ ಚೆನ್ನಾಗಿ ಮಾಡಬಹುಇತ್ತು ಅಂತ ಅನಿಸಿತು.