ವಿಷಯದ ವಿವರಗಳಿಗೆ ದಾಟಿರಿ

ಮೇ 21, 2015

ವಸಾಹತುಶಾಹಿಯ ರಮ್ಯ ಕಥಾನಕ – ಭಾಗ ೨

‍ನಿಲುಮೆ ಮೂಲಕ

– ಡಾ.ಶ್ರೀಪಾದ ಭಟ್
ಸಹಾಯಕ ಪ್ರಾಧ್ಯಾಪಕ,ಡಾ.ಡಿ ವಿ ಗುಂಡಪ್ಪ ಕನ್ನಡ ಅಧ್ಯಯನ ಕೇಂದ್ರ
ತುಮಕೂರು ವಿಶ್ವವಿದ್ಯಾನಿಲಯ, ತುಮಕೂರು

ವಸಾಹತುಶಾಹಿವಸಾಹತುಶಾಹಿಯ ರಮ್ಯ ಕಥಾನಕ – ಭಾಗ ೧

ನೋಬಿಲಿಯ ಉಲ್ಲೇಖಗಳು ಅಸ್ಪಷ್ಟವಾಗಿದ್ದರೂ ಆತನ ವಾದದ ಕೇಂದ್ರಬಿಂದು ನೇರವಾಗಿತ್ತು. ಇವನನ್ನು ದಾರಿತಪ್ಪಿಸುವವರಂತಲ್ಲದೇ ಈತ ಭಾರತೀಯ ಸಂಸ್ಕೃತಿಯನ್ನು ಅರ್ಥಮಾಡಿಕೊಳ್ಳಲು ಮಾತ್ರವಲ್ಲದೇ ಧಾರ್ಮಿಕ ನಂಬಿಕೆಗಳ ಹಾಗೂ ಅದರ ಸಾಂಸ್ಕೃತಿಕ ಸಂಗತಿಗಳ ವೈಶಿಷ್ಟ್ಯವನ್ನು ತಿಳಿದುಕೊಳ್ಳಲು ಸಾಕಷ್ಟು ಪರಿಶ್ರಮಪಟ್ಟಿದ್ದ. ಬ್ರಾಹ್ಮಣ ಸಂಪ್ರದಾಯದ ಅನೇಕ ಸಂಗತಿಗಳನ್ನು ಸೂಕ್ಷ್ಮವಾಗಿ ಅವಲೋಕಿಸಿ ಅಳವಡಿಸಿಕೊಂಡಿದ್ದ. ಶಿಖೆ, ತಿಲಕಧಾರಣೆ ಇತ್ಯಾದಿಗಳನ್ನು ಅನುಸರಿಸುತ್ತಿದ್ದ. ಬ್ರಾಹ್ಮಣ ತಜ್ಞರನ್ನು ಭೇಟಿ ಮಾಡಿ ಅವರಿಂದ ಆಚರಣೆಗಳ ಮೂಲದ ಅರ್ಥವನ್ನು ತಿಳಿದುಕೊಂಡ. ಬಹಳಷ್ಟು ಯೂರೋಪಿಯನ್ನರು ಹಿಂದೂಗಳ ಬಹುಪಾಲು ಆಚರಣೆಗಳನ್ನು ಅರ್ಥಮಾಡಿಕೊಳ್ಳದೇ ಅಪರಿಚಿತವಾದ ಅವು ಮೂರ್ತಿಪೂಜೆಯೊಂದಿಗೆ ಸೇರಿಕೊಂಡ ಮೂಢನಂಬಿಕೆಗಳೆಂದು ಹೇಳುತ್ತಿದ್ದರೆ, ನೋಬಿಲಿ ಇವುಗಳಲ್ಲಿ ಬಹುಪಾಲು ಆಚರಣೆಗಳು ನಾಗರಿಕ ಜೀವನ ಶೈಲಿಯನ್ನು ರೂಪಿಸುವಂಥವು ಎಂದು ದೃಢಪಡಿಸಿದ. ಕೆಲವು ಆಚರಣೆಗಳಿಗೆ ಧಾರ್ಮಿಕವಾಗಿ ಯಾವುದೇ ಸಂಬಂಧವಿಲ್ಲ ಎಂಬುದನ್ನು ತೋರಿಸಿದ. ಸಾಂಪ್ರದಾಯಿಕ ಧಾರ್ಮಿಕ ಹಿಂದೂ ಆಚರಣೆಗಳನ್ನು ಮೀರಿ ನಾಗರಿಕ ವರ್ತನೆಗಳನ್ನು ಮಾತ್ರ ಉಳಿಸಿಕೊಳ್ಳುವಂತೆ ಮತಾಂತರಿಗಳಿಗೆ ಸೂಚಿಸಿರುವುದಾಗಿ ಹೆಳಿರುವುದಾಗಿ ಸ್ವತಃ ಬ್ರಾಹ್ಮಣ ಆಚರಣೆ ಮಾಡುತ್ತಿದ್ದ ನೋಬಿಲಿ ವಾದಿಸಿದ.

ನಂತರ ಆತ ಯೂರೋಪಿಯನ್ನರ ಹೆಸರು ಇಟ್ಟುಕೊಳ್ಳುವಂತೆ, ವೇಷಭೂಷಣ ತೊಡುವಂತೆ, ಭಾರತೀಯ ಸಮಾಜದಲ್ಲಿನ ಯಾವುದೇ ಕುರುಹು ಉಳಿಯದಂತೆ ವ್ಯವಸ್ಥಿತವಾಗಿ ಪ್ರಚಾರ ಮಾಡುತ್ತಿದ್ದ ತನ್ನ ಮಾರ್ಗಕ್ಕೆ ಅಡ್ಡಿಯಾಗಿರುವವರನ್ನು ತರಾಟೆಗೆ ತೆಗೆದುಕೊಂಡ. ಮತಾಂತರಗೊಂಡವರು ಅನಗತ್ಯವಾಗಿ ತಮ್ಮ ಮೂಲಸಮಾಜದ ಆಚರಣೆಯನ್ನು ಕೈಬಿಡುವಂತೆ ಹೇಳುವ ಇಂಥವರನ್ನು ನೋಬಿಲಿ ಖಂಡಿಸಿದ. ಕ್ರಿಶ್ಚಿಯನ್ನೇತರ ಭಾರತೀಯ ಸಮಾಜದವರು ಮತಾಂತರಿಗಳನ್ನು “ತಮ್ಮ ಮೂಲವನ್ನು ಕಳೆದುಕೊಂಡವರು, ಅವನತಿ ಉಂಟುಮಾಡುವವರು’’ ಎಂಬಂತೆ ಕಾಣುತ್ತಿದ್ದರು. ಕ್ರಿಶ್ಚಿಯನ್ ಆಚರಣೆಯನ್ನು ನಾವೇಕೆ ಇಷ್ಟು ಕಡ್ಡಾಯ ಮಾಡಿದ್ದೇವೆ ಎಂಬುದನ್ನು ಕ್ರಿಶ್ಚಿಯನ್ನೇತರರಿಗೆ ಅರ್ಥಮಾಡಿಕೊಳ್ಳಲು ಸಾಧ್ಯವಾಗಲಿಲ್ಲ.

ಅಷ್ಟಕ್ಕೂ ನೋಬಿಲಿ “ಅಲಂಕಾರ ಹಾಗೂ ಸುಗಂಧಗಳ ಬಗ್ಗೆ (ಹಣೆಗೆ ಗಂಧ ತಿಲಕ ಧಾರಣೆ ಹಾಗೂ ಶಿಖೆ ಬಿಡುವುದು) ಹೇಳುವುದಾದರೆ ಇವುಗಳ ಬಳಕೆಯನ್ನು ಮಹಾ ಬೋಧಕನಾದ ಕ್ರಿಸ್ತನೇ ಒಪ್ಪಿದ್ದಾನೆ ಎಂದು ಸಮರ್ಥಿಸಿದ.

ವಿವಿಧ ಶಾಖೆಗಳಲ್ಲಿ ಕಲಿತ ಪಂಡಿತರಿಂದ 108 ಬ್ರಾಹ್ಮಣಗಳಲ್ಲಿ “ವಿಶೇಷವಾದ ಯಾವುದೇ ಹೆಚ್ಚಿನ ಆಚರಣೆಗಳಿಲ್ಲ ಹಾಗೂ ಮತಾಂತರಿಗಳಿಗೆ ಇವುಗಳಿಗೆ ಹೇಳಿಕೊಳ್ಳುವ ಅವಕಾಶ ನೀಡಿಲ್ಲ” ಎಂದು ಸಮರ್ಥನೆ ಪಡೆದ ನೋಬಿಲಿ “ಇದನ್ನು ನೀಡಿದವರು ಕ್ರಿಶ್ಚಿಯನ್ನರೂ ಅಲ್ಲ, ಕ್ರಿಶ್ಚಿಯನ್ ದೀಕ್ಷೆಪಡೆಯಲು ಸಿದ್ಧರಾದವರೂ ಅಲ್ಲ, ಅಲ್ಲದೇ ಇವರು ಯಾರೂ ಹಣವನ್ನಾಗಲೀ, ಯಾವುದೇ ಬಗೆಯ ಕೊಡುಗೆಯನ್ನಾಗಲೀ ಸ್ವೀಕರಿಸಿದವರಲ್ಲ’’ ಎಂದು ಕಂಪನಿಯ ಹಿರಿಯರಿಗೆ ಸಂದೇಶ ಕಳುಹಿಸಿದ. ಅಲ್ಲದೇ, ತಾಳೆಗರಿಯಲ್ಲಿ ಪಡೆದ ಈ ಎಲ್ಲ ಪಂಡಿತರ ಹಸ್ತಾಕ್ಷರವನ್ನು ತಾನು ಕಾದಿಟ್ಟಿರುವುದಾಗಿಯೂ ಯಾವಾಗ ಬೇಕಾದರೂ ಇದರ ಸತ್ಯಾಸತ್ಯತೆಯನ್ನು ಪರಿಶೀಲಿಸಬಹುದು ಎಂದು ಜೆಸ್ಯೂಟ್ ಹಿರಿಯರಿಗೆ ತಿಳಿಸಿದ.

ನೋಬಿಲಿಯನ್ನು ವಿರೋಧಿಸುತ್ತಿದ್ದ ಬಹುಶ್ರುತ ಪಂಡಿತರು 108 ಬ್ರಾಹ್ಮಣ ಪಠ್ಯವನ್ನು ತಿಳಿದಿರಲಿಲ್ಲ. ಯಾರೊಬ್ಬರಿಗೂ ಸಂಸ್ಕೃತದ ಜ್ಞಾನವಿರಲಿಲ್ಲ. ಅವರಿಗೆ ಈ ಹಿಂದೂ ಪಠ್ಯಗಳ ಅರಿವೇ ಇರಲಿಲ್ಲ. ಆದರೆ ನೋಬಿಲಿ ಎತ್ತಿದ ಪ್ರಶ್ನೆಗಳು ಸಂಕೀರ್ಣವಾಗಿದ್ದವು. ಸಾಂಸ್ಕೃತಿಕ ಆಚರಣೆ ಹಾಗೂ ಧಾರ್ಮಿಕ ಅಭಿವ್ಯಕ್ತಿಗಳನ್ನು ನೋಬಿಲಿ ತೋರಿಸಲು ಯತ್ನಿಸಿದಂತೆ ಸುಲಭವಾಗಿ ಪ್ರತ್ಯೇಕಿಸಲು ಸಾಧ್ಯವಿರಲಿಲ್ಲ. ಅಲ್ಲದೇ ಆತ ಅಳವಡಿಸಿಕೊಂಡ ದೃಷ್ಟಿಕೋನ ವಿವಾದಾತ್ಮಕ ಕಾರ್ಯತಂತ್ರ ಪರಿಗಣನೆ ಪಡೆದಿದ್ದವು. ಉದಾಹರಣೆಗೆ ಭಾರತೀಯ ಮಾನದಂಡದಂತೆ ದನದ ಮಾಂಸ ಸೇವನೆ, ಚರ್ಮದ ಚಪ್ಪಲಿ ಧರಿಸುವುದು, ಅಶುದ್ಧವಾಗಿರುವುದು ಇವೆಲ್ಲವನ್ನು ಮಾಡುವವರು ಮೇಲ್ವರ್ಗದ ಹಿಂದೂಗಳಿಂದ ಅಸ್ಪೃಶ್ಯರು ಎಂದು ಮಿಶನರಿಯಲ್ಲಿ ಈ ಹಿಂದೆ ಬಂದವರು ವ್ಯಾಖ್ಯಾನಿಸಿದ್ದರು. ನೋಬಿಲಿ ಮಾಡಿಕೊಂಡ ಬ್ರಾಹ್ಮಣ ಆಚರಣೆಯ ಅಳವಡಿಕೆ ಮೇಲ್ವರ್ಗದ ಹಿಂದೂಗಳನ್ನು ಓಲೈಸುವ ಯತ್ನವಾಗಿತ್ತು. ಆದರೆ ಈ ಕಾರ್ಯತಂತ್ರ ನೋಬಿಲಿಯನ್ನು ಇಕ್ಕಟ್ಟಿಗೆ ಸಿಲುಕಿಸಿತು. ಉದಾಹರಣೆಗೆ ಕೆಳವರ್ಗದ ವ್ಯಕ್ತಿಗೆ ಅಡುಗೆ ಮಾಡುವುದು ಅಥವಾ ಬೇರೊಬ್ಬರನ್ನು ಸ್ಪರ್ಶಿಸದಂತೆ ದೂರವಿಡುವುದು. ಕೊನೆಯದಾಗಿ, ಹದಿನೇಳನೇ ಶತಮಾನದಲ್ಲಿ ನೋಬಿಲಿಯ ಧಾರ್ಮಿಕ ಆಚರಣೆ ಎಷ್ಟರ ಮಟ್ಟಿಗೆ ಗಮನಾರ್ಹವಾಗಿತ್ತೋ ಏನೋ ಆದರೆ ಅವನ ಕೃತಿ ಮಾತ್ರ 21ನೇ ಶತಮಾನದ ಮಿಶನರಿ ತಜ್ಞರಲ್ಲಿ ಮೂಲ ಮತದ ನಂಬಿಕೆ ಹಾಗೂ ಮತಾಂತರಗಳ ನಡುವೆ ಗೆರೆಯನ್ನು ಎಲ್ಲಿ ಎಳೆಯುವುದು ಎಂಬ ಒಂದು ಪ್ರಶ್ನೆಯನ್ನು ಮಾತ್ರ ಎತ್ತಿತು.

ಹದಿನೇಳನೇ ಶತಮಾನದ ಡೆ ನೋಬಿಲಿ ಟೀಕಾಕಾರರು ಇಂಥ ಸೂಕ್ಷ್ಮ ಸಂಗತಿಗಳನ್ನು ಎದುರಿಸಿರಲಿಲ್ಲ ಎಂದು ಹೇಳುವುದು ಕ್ಷೇಮ. ಬದಲಾಗಿ ಅವರು ನೋಬಿಲಿಯ ಹಾಗೂ ಏಷ್ಯಾದ ಇತರ ಜೆಸ್ಯೂಟರ ಮೇಲೆ ಹರಿಹಾಯ್ದರು. ಉದಾಹರಣೆಗೆ ಚೀನಾದ ಜೆಸ್ಯೂಟೇತರ ಮಿಶನರಿಯೊಂದು ಜೆಸ್ಯೂಟರು ಪ್ರದರ್ಶಿಸಿದ ಕ್ರಿಸ್ತನ ಕೊನೆಯ ಭೋಜನ ಚಿತ್ರದಲ್ಲಿ ಕ್ರಿಸ್ತ ಪಾದರಕ್ಷೆ ಧರಿಸಿದ್ದಾನೆ ಎಂದು ರೋಮ್‍ಗೆ ವರದಿ ನೀಡಿತು. ಇದನ್ನು ಗಂಭೀರವಾಗಿ ಪರಿಗಣಿಸಲಾಯಿತು. ಇದಕ್ಕೆ ಪ್ರತಿಕ್ರಿಯೆ ನೀಡಲು ಜೆಸ್ಯೂಟರು ಕಾಲಹರಣ ಮಾಡಬೇಕಾಯಿತು. ಇವರ ಉತ್ತರ ಅತ್ಯಂತ ಸರಳವಾಗಿತ್ತು. ಬರಿಗಾಲಲ್ಲಿ ಓಡಾಡುವುದು ಸಂತನ ಲಕ್ಷಣವಲ್ಲ ಎಂದು ಚೀನೀಯರ ನಂಬಿಕೆ. ಇಂಥ ಪ್ರಾಥಮಿಕ ಸಂಗತಿಯನ್ನು ಅಲಕ್ಷಿಸಿದರೆ ದೇವಪುತ್ರನನ್ನು ಅವರು ನಂಬುವುದಾದರೂ ಹೇಗೆ?

ಚೀನಾದಲ್ಲಿರುವ ಇತರ ಮಿಶನರಿಗಳೂ ಚರ್ಚಿನಲ್ಲಿ ದೀಕ್ಷಾಸ್ನಾನವನ್ನು ಔಪಚಾರಿಕವಾಗಿ ನಡೆಸದ ಬಗ್ಗೆ ಜೆಸ್ಯೂಟರ ಮೇಲೆ ದಾಳಿ ಮಾಡಿದರು. ಫಾದರ್‍ಗಳು (ಅಂದರೆ, ಜೆಸ್ಯೂಟರು) ಮಹಿಳೆಯರಿಗೆ ದೀಕ್ಷಾಸ್ನಾನ ಮಾಡಿಸುವಾಗ ಅವರ ಕಿವಿಗೆ ಎಂಜಲನ್ನು, ಬಾಯಿಗೆ ಉಪ್ಪನ್ನು, ಎದೆ ಹಾಗೂ ತಲೆಗೆ ಎಣ್ಣೆಯನ್ನು ಹಚ್ಚಲು ವಿಫಲರಾಗುತ್ತಿದ್ದಾರೆ ಎಂದು ಆರೋಪಿಸಲಾಯಿತು. ಇದೊಂದು ಅಪರಾಧ. ಚೀನಾದಲ್ಲಿದ್ದ ಜೆಸ್ಯೂಟ್ ಹಿರಿಯ ಉತ್ತರಿಸಿದ: “ಚೀನಾದಲ್ಲಿ ಮಹಿಳೆ ತನ್ನ ಎದೆಯನ್ನು ಪ್ರದರ್ಶಿಸುವುದು, ಅವಳ ಕೈ ಮುಟ್ಟುವುದು ಹಾಗೂ ಬಾಯಿಯನ್ನು ಸ್ಪರ್ಶಿಸುವುದು ತೀರಾ ಅನುಚಿತ. ಬೇರೆಡೆ ದೀಕ್ಷಾಸ್ನಾನಕ್ಕೆ ಇದು ಎಷ್ಟು ಅಗತ್ಯವೋ ಚೀನಾದಲ್ಲಿ ಹೀಗೆ ಮಾಡದಿರುವುದೂ ಅಷ್ಟೇ ಅಗತ್ಯ.’’ ದೀಕ್ಷಾಸ್ನಾನದ ಆಚರಣೆಯಲ್ಲಿ ಯೂರೋಪಿನ ಅಸಂಗತ ಆಚರಣೆಗಳನ್ನು ಕೈಬಿಟ್ಟು ಚೀನಾದ ಸಾಂಸ್ಕೃತಿಕ ಅಂಶಗಳಿಗೆ ಜೆಸ್ಯೂಟರು ಮಹತ್ವ ನೀಡಿದರು.

ಡೆ ನೋಬಿಲಿಯ ವಿಧಾನದ ವಿವಾದ ಬಗೆಹರಿಯುವ ವರ್ಷಗಳ ಮುನ್ನವೇ ಅಕ್ವಾವಿಯಾ ನಿಧನನಾದ. ಜೆಸ್ಯೂಟ್ ಮಹಾನಾಯಕ ನೋಬಿಲಿಯ ಮೂಲಭೂತ ದೃಷ್ಟಿಕೋನವನ್ನು ಬೆಂಬಲಿಸಿದ್ದರೂ ಅದರ ಅನುಮೋದನೆ ನೀಡದಂತೆ ಅವನ ಕೈಗಳನ್ನು ಕಟ್ಟಲಾಗಿತ್ತು. ದಕ್ಷಿಣ ಭಾರತದಲ್ಲಿ ನೋಬಿಲಿ ಒಂದು ಗುಡಿಸಲು ಕಟ್ಟಿಕೊಂಡು ಮಾಡುತ್ತಿರುವ ಕೆಲಸ ಜೆಸ್ಯೂಟ್ ಮಹಾನಾಯಕನಿಗಿಂತಲೂ ಕ್ರಿಶ್ಚಿಯನ್ ಸಮುದಾಯದ ಉನ್ನತ ಅಧಿಕಾರದವರ ಗಮನ ಸೆಳೆಯಿತು. ಸ್ವತಃ ವ್ಯಾಟಿಕನ್ ಇದರಲ್ಲಿ ಒಳಗೊಂಡಿತ್ತು. ಸಮಗ್ರ ತನಿಖೆಗಾಗಿ ಧಾರ್ಮಿಕ ಮುಖಂಡರನ್ನೊಳಗೊಂಡ ಒಂದು ಆಯೋಗವನ್ನು ರಚಿಸಿತು. ಚೀನಾದಲ್ಲಿರುವ ಸಹೋದ್ಯೋಗಿಗಳಿಗೂ ಇದರಿಂದ ತೊಂದರೆಯಾಗಬಹುದೆಂದು ಡೆ ನೋಬಿಲಿಗೆ ಚಿಂತೆಯಾಯಿತು. ತನ್ನ ವಿಧಾನದ ಬಗ್ಗೆ ತನಿಖೆಯಾಗುತ್ತಿದ್ದ ಕಾರಣ ತಾನು ಯಾರನ್ನೂ ಮತಾಂತರ ಮಾಡದಿರುವಂತೆ ನಿಷೇಧ ಹೇರಲಾಗಿದೆ ಎಂಬುದು ಇಟಲಿಯ ಸನ್ಯಾಸಿಯ ಚಿಂತೆಯಾಗಿತ್ತು. ತನಿಖೆ ಡೆ ನೋಬಿಲಿ ಕಡೆ ತಿರುಗಿದ್ದರೂ ಪರಿಸ್ಥಿತಿ ಇನ್ನೂ ಹೀನಾಯವಾಗುತ್ತಿತ್ತು. ಗೋವಾದಲ್ಲಿದ್ದ ಪೋರ್ಚುಗೀಸ್ ಮುಖ್ಯ ಪಾದ್ರಿ ಡೆ ಸ ಎ ಲಿಸ್ಬೋವಾ ಭಾರತದಲ್ಲಿದ್ದ ಎಲ್ಲರಿಗೂ ಹಿರಿಯನಾಗಿದ್ದ. ಇಟಲಿಯ ಜೆಸ್ಯೂಟ್ ನೋಬಿಲಿ ದೊಡ್ಡ ತೊಂದರೆ ಉಂಟುಮಾಡುತ್ತಿದ್ದಾನೆ ಎಂದು ಇವನ ತಲೆ ತುಂಬಲಾಯಿತು. ನೋಬಿಲಿಯ ತನಿಖೆಗೆ ಈತ ಪೋರ್ಚುಗೀಸಿನ ತನಿಖಾಧಿಕಾರಿಯನ್ನು ಆಹ್ವಾನಿಸಿದ. ಆದರೆ ತನಿಖಾಧಿಕಾರಿಗಳು ವ್ಯಾಟಿಕನ್ ಅಧಿಕಾರದಡಿ ಬರುವ ಯಾವುದೇ ವ್ಯವಸ್ಥೆಯಲ್ಲಿ ತಾವು ಮಧ್ಯಪ್ರವೇಶ ಮಾಡುವಂತಿಲ್ಲ ಎಂದು ಹೇಳಿದರು. ನೋಬಿಲಿಗೆ ಅದೃಷ್ಟ ಒಲಿಯಿತು.

ಆದರೆ ಆತ ಸಂಪೂರ್ಣ ಅದೃಷ್ಟವಂತನಾಗಿರಲಿಲ್ಲ. ನೋಬಿಲಿಯ ಮಾದರಿಯ ಬಗ್ಗೆ ತನಿಖೆ ಮಾಡುತ್ತಿದ್ದ ಧಾರ್ಮಿಕ ಆಯೋಗದ ಅಧ್ಯಕ್ಷ 70 ವರ್ಷದ ವೃದ್ಧ ಹಿರಿಯ ಪಾದ್ರಿ ಪೀಟರ್ ಲೊಂಬಾರ್ಡ್‍ನಾಗಿದ್ದ. ಇಟಲಿಯ ಮತ್ತೊಬ್ಬ ವ್ಯಕ್ತಿ ಗೆಲಿಲಿಯೋಗೆ ಸಂಬಂಧಿಸಿದ ವಿವಾದದ ತನಿಖೆಯಲ್ಲಿ ಈತ ಹಿಂದಿನ ಪಾದ್ರಿಯ ಜೊತೆ ಪಾಲ್ಗೊಂಡಿದ್ದ. ಇವನು ಮಾಡಿದ ತನಿಖೆ ಸಮರ್ಪಕವೇನೂ ಆಗಿರಲಿಲ್ಲ. ಕನಿಷ್ಠಪಕ್ಷ ಗೆಲಿಲಿಯೋಗಾದರೂ ತನಿಖೆಯಲ್ಲಿ ಭಾಗವಹಿಸುವ ಅವಕಾಶಕೊಡಲಾಗಿತ್ತು. ಆದರೆ ಡೆ ನೋಬಿಲಿ ದೂರದ ಭಾರತದಲ್ಲಿದ್ದ. ಇವನನ್ನು ಆಯೋಗ ಸಂದರ್ಶನ ಮಾಡಲಿಲ್ಲ. ಅವನ ಪ್ರತಿಕ್ರಿಯೆ ಕೇಳಿತು, ಅಥವಾ ವರದಿಯಲ್ಲಿ ಬಾಧ್ಯಸ್ಥನಾಗಿಸಿತು.

ಆ ವರದಿಯನ್ನೂ ಆತ ಓದಲು ಅವಕಾಶ ಲಭಿಸದಿದ್ದುದು ಮಹಾ ದೌರ್ಭಾಗ್ಯ. ಅಂಥ ಅವಕಾಶವೇನಾದರೂ ಆತನಿಗೆ ದೊರೆತಿದ್ದರೆ ಸಂತ ಆಗಸ್ಟೀನನ “ಸಿಟಿ ಆಫ್ ಗಾಡ್’’ ಕೃತಿಯನ್ನು ಲೊಂಬಾರ್ಡ್ ಉಲೇಖಿಸಿದ್ದನ್ನು ಕಂಡು ಆಶ್ಚರ್ಯಪಡುತ್ತಿದ್ದ. “ದೇವರ ರಾಜ್ಯದಲ್ಲಿ ದೇವರ ಬಳಿ ಕರೆದೊಯ್ಯುವಂಥ ನಂಬಿಕೆಯನ್ನು ವ್ಯಕ್ತಿ ಅಳವಡಿಸಿಕೊಂಡಿದ್ದಾನೋ ವೇಷದಲ್ಲಿ, ಜೀವನ ಶೈಲಿಯಲ್ಲಿ ಅದನ್ನು ಅಳವಡಿಸಿಕೊಳ್ಳುತ್ತಾನೋ ಎಂಬುದು ಮುಖ್ಯವಲ್ಲ. ಜೀವನ ಪರ್ಯಂತ ದೇವರ ಆಜ್ಞೆಯಯಲ್ಲಿ ದೃಢವಾಗಿರುವುದು ಮುಖ್ಯ’’ ಎಂಬ ಮಾತನ್ನು ಆತ ಉಲೇಖಿಸಿದ್ದ. ಆಯೋಗದ ವರದಿ ರಹಸ್ಯವಾದ ಕಾರಣ 1623ರಲ್ಲಿ 15ನೆಯ ಪೋಪ್ ಗ್ರೆಗರಿಯವರ ಆಜ್ಞೆ ಹೊರಬಿತ್ತು. ಲಿಸ್ಬನ್‍ನಿಂದ ನಿಧಾನ ಹಡಗಿನಲ್ಲಿ ಗೋವಾ ತಲುಪಲು ಇನ್ನೂ ವಿಳಂಬವಾಯಿತು. “ಈ ಪತ್ರದ ಮೂಲಕ ನಾವು ಚರ್ಚ್ ಅಧಿಕಾರದ ಹಿನ್ನೆಲೆಯಲ್ಲಿ ಮತಾಂತರ ಆಗಿರುವ ಹಾಗೂ ಆಗುವ ಬ್ರಾಹ್ಮಣ ಹಾಗೂ ಇತರರಿಗೆ ತಮ್ಮ ಸಾಮಾಜಿಕ ಪ್ರತಿಷ್ಠೆಯ ಸಂಕೇತವಾಗಿ ಪವಿತ್ರ ದಾರ ಧರಿಸಲು ಹಾಗೂ ಶಿಖೆ ಬಿಡಲು ಅನುಮತಿ ಕೊಡುತ್ತಿದ್ದೇವೆ’’ ಎಂದು ಅದರಲ್ಲಿ ಹೇಳಲಾಗಿತ್ತು.

ನಿರ್ದೋಷಿ ಎನಿಸಿದ ನೋಬಿಲಿ ಕೆಲಸಕ್ಕೆ ಮರಳಿದ. ವರ್ಷಗಳ ನಂತರ ಸ್ವಲ್ಪ ಕುರುಡುತನ ಬಂದಿದ್ದ, 68 ವರ್ಷದ ನೋಬಿಲಿಗೆ ಅದು ನಿವೃತ್ತಿಯ ವಯಸ್ಸಾಗಿತ್ತು. ಬಹಳಷ್ಟು ಜನರಿಗೆ ಅದು ನಿವೃತ್ತಿಯ ವಯಸ್ಸೇ. ಆದರೆ ನೋಬಿಲಿ ಪಾಲಿಗೆ ಅದು ಇನ್ನೊಂದು ವೃತ್ತಿ ಆರಂಭಿಸುವ ಕಾಲವಾಗಿತ್ತು. ಪಾಕ್ ಜಲಸಂಧಿಯ ಮೂಲಕ ಆತ ಸಿಲೋನಿನ ಜಾಫ್ನಾ ಪ್ರದೇಶಕ್ಕೆ ಹಡಗಿನಲ್ಲಿ ಹೊರಟ. ತನ್ನ ತಮಿಳು ಧರ್ಮಗ್ರಂಥದ ಮೂಲಕ ಬ್ರಾಹ್ಮಣರನ್ನು ಕಕ್ಕಾಬಿಕ್ಕಿಗೊಳಿಸಿ, ಲ್ಯಾಟಿನ್ ಚರ್ಚೆಯಲ್ಲಿ ಪಾದ್ರಿ ವರ್ಗವನ್ನು ಚಕಿತಗೊಳಿಸಿದ ನೋಬಿಲಿ ತನ್ನ ಸಾಹಿತ್ಯಕ ಪ್ರತಿಭೆಯನ್ನು ಮಕ್ಕಳಿಗೆ ಕಥೆ ಬರೆಯಲು ಬಳಸಿಕೊಂಡ.

ತಾನು ಭಾರತಕ್ಕೆ ಬಂದ ಐವತ್ತನೆಯ ವರ್ಷಾಚರಣೆ ನಡೆದ ಸ್ವಲ್ಪ ಕಾಲದಲ್ಲೇ ತನ್ನ 79ನೆಯ ವರ್ಷದಲ್ಲಿ ನೋಬಿಲಿ ಮದ್ರಾಸಿನಲ್ಲಿ ನಿಧನನಾದ.

ಇಂಥ ಹತ್ತಾರು ಸ್ವಾರಸ್ಯಕರ ಸಂಗತಿಗಳನ್ನು ದಾಖಲಿಸುವ ಈ ಕೃತಿ ಚೀನ, ಭಾರತಗಳಲ್ಲಿ ಕ್ರಿಶ್ಚಿಯನ್ ರಿಲಿಜನ್ನನ್ನು ಹರಡಲು ಮಿಶನರಿಗಳು ಪಟ್ಟ ಪರಿಪಾಟಲನ್ನು ಮನಮುಟ್ಟುವಂತೆ ಚಿತ್ರಿಸುತ್ತದೆ. ವಿಷಯ ಅದಲ್ಲ. ಮಿಶನರಿಗಳು ಇಷ್ಟೆಲ್ಲ ಕಷ್ಟಬಿದ್ದಾಗಲೂ ಶತಮಾನಗಳವರೆಗೆ ಆಡಳಿತವನ್ನು ಬಂದೂಕಿನ ಮೊನೆಯಲ್ಲಿ ಇಟ್ಟುಕೊಂಡಿದ್ದರೂ ಭಾರತವನ್ನು ಅವರು ಇಡಿಯಾಗಿ ಮತಾಂತರಿಸಲು ಸಾಧ್ಯವೇ ಆಗಲಿಲ್ಲ. ಇದಕ್ಕೆ ಕಾರಣ ಭಾಷೆ, ದೇವರು, ಆಚರಣೆ, ನಂಬಿಕೆ ಹೀಗೆ ಯಾವುದೂ ಒಂದಿಲ್ಲದೇ ಇರುವುದು. ಇದನ್ನೆಲ್ಲ ಹೇಗಾದರೂ ಮಾಡಿ ಒಂದೇ ಇರುವಂತೆ ಮಾಡಿದರೆ (ಅಂದರೆ ಭಾಷೆ ಇಂಗ್ಲಿಷ್ ಒಂದೇ, ಗಾಡ್ ಒಬ್ಬನೇ, ರಿಲಿಜಿಯಸ್ ಸ್ಕ್ರಿಪ್ಚರ್ ಒಂದೇ ಇತ್ಯಾದಿ) ಈ ಜನರನ್ನು ಆಳುವುದು ಸುಲಭ ಎಂದು ಬಗೆದೇ ಜೋನ್ಸ್, ವಿಲ್ಕಿನ್ಸ್, ಮಕಾಲೆಯಂಥ ವಿದ್ವಾಂಸರು ಯೂರೋಪ್ ಮಾದರಿಯ ಶಿಕ್ಷಣವನ್ನು ಭಾರತದಲ್ಲಿ ಹೇರಲು ನೆಲೆಗಟ್ಟು ರೂಪಿಸಿದ್ದು. ಶೈಕ್ಷಣಿಕ ದೃಷ್ಟಿಯಿಂದ ತಕ್ಕಮಟ್ಟಿಗೆ ಯಶಕಂಡ ವಸಾಹತುಗಳ ಈ ಚಿಂತನೆ ಇಂದಿಗೂ ಬೌದ್ಧಿಕ ದಾಸ್ಯ ಉಳಿಯುವಂತೆ ಮಾಡಿದೆ. ಎಷ್ಟರಮಟ್ಟಿಗೆ ಅಂದರೆ ನಮ್ಮ ಚಿಂತನೆಯ ದಾಟಿ ದಾಸ್ಯದಲ್ಲಿದೆ ಎಂಬುದನ್ನು ಅರ್ಥಮಾಡಿಕೊಳ್ಳುವ ಸ್ಥಿತಿಯೇ ಉಳಿದಿಲ್ಲ!

ಬಹಳ ಮುಖ್ಯವಾದ ಸಂಗತಿ ಏನೆಂದರೆ ಭಾರತದಂಥ ದೇಶದ ಸಾಮಾಜಿಕ ಪರಿಸ್ಥಿತಿ ಯೂರೋಪಿನ ಕ್ರಿಶ್ಚಿಯನ್ ರಿಲಿಜನ್ ಅನುಸರಿಸುವ ಸಮುದಾಯದಂತೆ ಇಲ್ಲ ಎಂಬುದು ನೋಬಿಲಿಗೆ ಸ್ಪಷ್ಟವಾಗಿ ತಿಳಿದಿತ್ತು. ಅಷ್ಟೇ ಅಲ್ಲ, ಭಾರತಕ್ಕೆ ಅಧ್ಯಯನದ ಅಥವಾ ಮತಪ್ರಚಾರದ ಉದ್ದೇಶಕ್ಕೆ ಬಂದ ಎಲ್ಲರಿಗೂ ತಿಳಿದಿತ್ತು. ಆದರೂ ಅವರು ಪ್ರೊಟೆಸ್ಟಂಟ್ ಹಿನ್ನೆಲೆಯ ಯೂರೋಪಿಯನ್ “ಸಾಮಾಜಿಕ ಹಾಗೂ ಮಾನವಶಾಸ್ತ್ರೀಯ” ದೃಷ್ಟಿಕೋನವನ್ನು ಅಳವಡಿಸಲು ಯತ್ನಿಸಿದರು ಎಂಬುದು. ಈ ನಿಟ್ಟಿನಲ್ಲಿ ಅವರು ಇಲ್ಲಿನ ಶೈಕ್ಷಣಿಕ ವ್ಯವಸ್ಥೆಯಲ್ಲೂ ಈ ದೃಷ್ಟಿಕೋನವನ್ನು ತುರುಕಿದರು. ಪರಿಣಾಮವಾಗಿ ಇಂದಿಗೂ ದೇಶದ ಜನರಾಗಲಿ, ಧರ್ಮವಾಗಲಿ, ಸಮಾಜವಾಗಲಿ ಯಾರಿಗೂ ಸರಿಯಾಗಿ ಅರ್ಥವಾಗುತ್ತಿಲ್ಲ. ವರ್ಣ, ಜಾತಿ, ವರ್ಗ ಮೊದಲಾದ ಪರಿಕಲ್ಪನೆಗಳ ಹಿನ್ನೆಲೆಯಲ್ಲಿ ಸಮಾಜ ಮತ್ತಷ್ಟು ಸಂಕೀರ್ಣವಾಗಿ ಕಾಣುತ್ತಿದೆ. ಸಾಮಾಜಿಕ ಹಾಗೂ ಮಾನವಿಕ ಅಧ್ಯಯನಗಳು ಗೊಂದಲಕಾರಿಯಾಗಿವೆ.

ಆದರೆ ಆಫ್ರಿಕದ ಮೊಜಾಂಬಿಕ, ತಾಂಜಿನಿಯಗಳ ಪರಿಸ್ಥಿತಿ ಸ್ವಲ್ಪ ಭಿನ್ನ. ಈ ಭಾಗದಲ್ಲಿ ಪ್ರಮುಖವಾಗಿರುವ ಮಾಕೊಂಡೆ ಕಲಾಕೃತಿಗೆ ವಿಶ್ವಪ್ರಸಿದ್ಧವಾಗಿರುವ ಮಾಕೊಂಡೆ ಸಮುದಾಯ ವಸಾಹತುಗಳು ಪ್ರವೇಶಿಸಿದ ಒಂದೆರಡು ಶತಮಾನಗಳಲ್ಲಿ ಅನುಭವಿಸಿದ ಇತಿಹಾಸವನ್ನು ಸ್ವಲ್ಪ ಗಮನಿಸಿದರೆ ತಥ್ಯ ಅರ್ಥವಾಗುತ್ತದೆ. ಪೂರ್ವ ಆಫ್ರಿಕದ ತಾಂಜೀನಿಯದ ಆಗ್ನೇಯ ಭಾಗದ ಮತ್ವಾರ, ನೆವಾಲ ಹಾಗೂ ಮಸಸಿ ಪ್ರಾಂತ್ಯಗಳಲ್ಲಿಯೂ ಆಗ್ನೇಯ ಆಫ್ರಿಕದ ಮೊಜಾಂಬಿಕ್‍ನ ಈಶಾನ್ಯ ಭಾಗದ ಕಾಬೊ ಡೆಲ್ಗಾಡೋ ಜಿಲ್ಲೆಯಲ್ಲಿಯೂ ವಿಶೇಷವಾಗಿ ನೆಲೆಸಿರುವ ಆಫ್ರಿಕದ ಮೂಲನಿವಾಸಿಗಳ ಗುಂಪುಗಳಲ್ಲೊಂದು ಮಾಕೊಂಡೆ. ತಾಂಜೀನಿಯ ಮತ್ತು ಮೊಜಾಂಬಿಕ್‍ಗಳನ್ನು ಬೇರ್ಪಡಿಸುವ ರುವುಮ ನದಿಯ ಇಕ್ಕೆಲಗಳಲ್ಲಿನ ಪರ್ವತ ಪ್ರದೇಶಗಳಲ್ಲಿ ಇವರು ವಾಸವಾಗಿದ್ದಾರೆ. ತಾಂಜೀನಿಯದ ಉತ್ತರಕ್ಕಿರುವ ಕೀನ್ಯದ ದಕ್ಷಿಣ ಭಾಗದಲ್ಲೂ ವಿರಳವಾಗಿ ಕಂಡುಬರುತ್ತಾರೆ. ಈ ಜನಸಮುದಾಯದ ಜನಸಂಖ್ಯೆ ತಾಂಜೀನಿಯದಲ್ಲಿ 11,40,000(2001); ಮೊಜಾಂಬಿಕದಲ್ಲಿ 2,33,358 (1997); ಕೀನ್ಯದಲ್ಲಿ 2,200 (2014). ತೀರ ವಿರಳ ಎಂಬಂತೆ ಮಯೋಟ್ಟೆಯಲ್ಲಿಯೂ ಕಾಣಸಿಗುತ್ತಾರೆ. ಈ ಜನಸಮುದಾಯ ಆಫ್ರಿಕದ ಸಬ್ ಸಹಾರ ಪಂಗಡಕ್ಕೆ ಸೇರಿದೆ. ಮಾಕೊಂಡೆ ಜನಸಮುದಾಯ ವಾಸವಾಗಿರುವ ನೆಲೆಗಳ ಸುತ್ತುಮುತ್ತ ನಿಮ, ನೊಂಡೆ, ಮಕುವ, ಯಾವೋ, ಮರಬ, ಮ್ವೆರಾ, ಮಾತಂಬ್ವೆ ಭಾಷಿಕ ಸಮುದಾಯಗಳೂ ಇವೆ.

ಜುಲುಲೆಂಡಿನ ನೋನಿ ಜನ ಪದೇ ಪದೇ ಯುದ್ಧ ಹೂಡಿ ಮಾಕೊಂಡೆ ಜನರನ್ನು ಸೆರೆಹಿಡಿದು ಗುಲಾಮರನ್ನಾಗಿ ಮಾಡಿಕೊಳ್ಳುತ್ತಿದ್ದರು. ನೋನಿ ಜನ ಮಾಕೊಂಡೆ ಗುಂಪನ್ನು ಗೆಲ್ಲುವುದು ಸಾಧ್ಯವಾಗಲಿಲ್ಲ. ಆ ಅವಧಿಯಲ್ಲಿ ಮಾಕೊಂಡೆ ಜನರ ನೆಲೆ ಕೋಟೆಯಂತೆ ರೂಪಿತವಾದ ದಟ್ಟವಾದ ಪೊದೆಗಳಿಂದ, ಮರದ ದಿಮ್ಮಿಗಳಿಂದಸುರಕ್ಷಿತವಾಗಿತ್ತು. ಯಾರೊಂದಿಗೂ ಬೆರೆಯದೇ ಇರುವ ಮಾಕೊಂಡೆ ಜನರ ಬಗ್ಗೆ ಜೊಸೆಫ್ ಥಾಂಸನ್ ಎಂಬಾತ 1882ರಲ್ಲಿ ಹೀಗೆ ಬರೆದಿದ್ದಾನೆ: “ ಪೂರ್ವ ಆಫ್ರಿಕದಲ್ಲಿ ಅತ್ಯಂತ ಪ್ರತ್ಯೇಕವಾಗಿರುವ ಜನರೆಂದರೆ ಮಾಕೊಂಡೆ. ಇವರ ವಾಸಸ್ಥಾನದಿಂದ ಅರಬ್ಬರೂ ಹೊರಗೇ ಇದ್ದಾರೆ”. ಮಾಕೊಂಡೆ ಜನರನ್ನು ಗುಲಾಮರನ್ನಾಗಿಸಿಕೊಳ್ಳಲು ಹೋರಾಟ ನಡೆಯುತ್ತಿತ್ತು. ಮಾಕೊಂಡೆ ಮುಖ್ಯಸ್ಥ “ಮೊಪೊಕ” ತನ್ನ ಗುಂಪಿನ ಅನೇಕರನ್ನು ಗುಲಾಮರನ್ನಾಗಿ ನೀಡಿದ್ದರ ವಿರುದ್ಧ ಮಾಕೊಂಡೆ ಜನ ಅವನ ವಿರುದ್ಧ ತಿರುಗಿಬಿದ್ದಿದ್ದರೆಂದು ಓನೀಲ್ ಎಂಬಾತ 1885ರಲ್ಲಿ ದಾಖಲಿಸಿದ್ದಾನೆ.

ಅನೇಕ ಯೂರೋಪಿಯನ್ನರು ಮಾಕೊಂಡೆ ಜನರ ಜೊತೆ ಸಂಪರ್ಕ ಬೆಳೆಸಲು ಮಾಡಿದ ಯತ್ನ ವಿಫಲವಾಗಿತ್ತು. 1890ರ ದಶಕದಲ್ಲಿ ಅವರು ಮೊದಲ ಬಾರಿ ಜರ್ಮನ್ನರ ಪ್ರಭಾವಕ್ಕೊಳಗಾದರು. ತೆರಿಗೆ ಸಂಗ್ರಹಕ್ಕಾಗಿ ಆಗ ಜರ್ಮನ್ನರ ಪ್ರವೇಶವಾಗಿತ್ತೆಂದು ತಿಳಿದುಬರುತ್ತದೆ. ಜರ್ಮನ್ ಆಳ್ವಿಕೆಯನ್ನು ವಿರೋಧಿಸಿ 1905ರಲ್ಲಿ ನಡೆದ ಮಜಿ-ಮಜಿ ದಂಗೆಯಲ್ಲಿ (ಈ ದಂಗೆ ಕೂಡ ಮಹತ್ವವಾದುದು, “ಮಜಿ ಮಜಿ ರಿವಾಲ್ಟ್” ಎಂದೇ ಖ್ಯಾತವಾಗಿದೆ) ಮಾಕೊಂಡೆ ಜನ ಪಾಲ್ಗೊಂಡಿದ್ದರು. ಈ ದಂಗೆಯಲ್ಲಿ ಅವರು ಲುಕುಲೇಡಿ ಕಣಿವೆಯ ಕ್ರಿಶ್ಚಿಯನ್ ಮಿಶಿನರಿ ಕೇಂದ್ರಗಳ ಮೇಲೆ ದಾಳಿ ಮಾಡಿದ್ದರು. 1906ರಲ್ಲಿ ಈ ದಂಗೆಯನ್ನು ಹತ್ತಿಕ್ಕಲಾಯಿತು.

ಪ್ರಪಂಚದ ಮೊದಲ ಮಹಾಯುದ್ಧದಲ್ಲಿ ತಾಂಜೀನಿಯವನ್ನು ವಶಪಡಿಸಿಕೊಂಡ ಬ್ರಿಟಿಷರು ಜರ್ಮನ್ನರಿದ್ದ ಪೂರ್ವ ಆಫ್ರಿಕ ಪ್ರದೇಶಕ್ಕೆ ತಾಂಜನಿಕ ಎಂದು ಮರುನಾಮಕರಣ ಮಾಡಿದರು. ತೆರಿಗೆ ಕಟ್ಟದೇ ಕಾನೂನು ಅನುಸರಿಸದೇ ಬ್ರಿಟಿಷರ ವಿರುದ್ಧವೂ ಮಾಕೊಂಡೆ ಜನ ತಿರುಗಿಬಿದ್ದರು.ಯುದ್ಧ ಸಮಯದ 1915ರಲ್ಲಿ ಬರಗಾಲ ಅಪ್ಪಳಿಸಿತು. ಸಿಡುಬು ಹಾಗೂ ಸ್ಪಾನಿಷ್ ಫ್ಲೂ ಕಾಹಿಲೆಯಿಂದ ಅನೇಕ ಮಾಕೊಂಡೆ ಜನ ಮರಣಹೊಂದಿದರು. ಬ್ರಿಟನ್ನಿನ ತೈಲ ಕಂಪನಿಗಳಿಗೆ ಸರಬರಾಜು ಮಾಡಲು ತಾಂಜೀನಿಯದಲ್ಲಿ ಬೃಹತ್ ಪ್ರಮಾಣದಲ್ಲಿ ಶೇಂಗಾ ಉತ್ಪಾದನೆಗಾಗಿ ಜಾರಿಗೆ ತಂದ 1947ರ “ಶೇಂಗಾ ಯೋಜನೆ”ಯಲ್ಲಿಯೂ ಮಾಕೊಂಡೆ ಜನರನ್ನು ತೊಡಗಿಸಿಕೊಳ್ಳಲಾಗಿತ್ತು. ಕೂಲಿಯನ್ನು ಸರಿಯಾಗಿ ಕೊಡದ ಕಾರಣ ಮಾಕೊಂಡೆ ಜನ ಅಹಿಂಸಾತ್ಮಕ ಪ್ರತಿಭಟನೆಯನ್ನು ಮುಂದುವರೆಸಿದ್ದರು.

ಗ್ರೇಟ್ ಬ್ರಿಟನ್, ಫ್ರಾನ್ಸ್, ಬೆಲ್ಜಿಯಂ, ಪೋರ್ಚುಗಲ್ ಮತ್ತು ಸ್ಪೇನಿನ ಯೂರೋಪ್ ವಸಾಹತುಶಾಹಿಗಳು ಆಫ್ರಿಕವನ್ನು 70 ವರ್ಷಗಳ ಕಾಲ ಆಳಿವೆ. ಇವರಲ್ಲಿ ಗ್ರೇಟ್ ಬ್ರಿಟನ್ ಮತ್ತು ಪೋರ್ಚುಗಲ್ ವಸಾಹತುಗಳು ಹೆಚ್ಚು ಕಾಲ ನೆಲೆ ನಿಂತಿದ್ದವು. 1920ರಲ್ಲಿ ಪೋರ್ಚುಗೀಸರ ಆಗಮನ ಆಗುವವರೆಗೂ ಮಾಕೊಂಡೆ ಜನ ಯೂರೋಪಿನ ವಶಕ್ಕೆ ಬಂದಿರಲಿಲ್ಲ. 1960ರ ವೇಳೆಗೆ ಮೆಡ ಪ್ರಸ್ಥಭೂಮಿಯಲ್ಲಿ ಮಾಕೊಂಡೆ ಜನ ತಮ್ಮ ಮರದ ಕೆತ್ತನೆಯ ಕಲೆಯಿಂದ ಬಂದ ಹಣವನ್ನು ಕೂಡಿಸಿ “ಫ್ರೆಲಿಮೊ”ಎಂಬ ಕ್ರಾಂತಿಯನ್ನೇ ಹೂಡಿ ಪೋರ್ಚುಗೀಸರ ವಿರುದ್ಧ ತಿರುಗಿಬಿದ್ದು ಅವರನ್ನು ಹೊರದಬ್ಬಿದರು. 1964ರಲ್ಲಿ ತಾಂಜೀನಿಯ ಸ್ವತಂತ್ರವಾಗುವವರೆಗೂ ವಸಾಹತುಶಾಹಿಗಳ ವಿರುದ್ಧ ಇವರ ಪ್ರತಿಭಟನೆ ಮುಂದುವರೆದೇ ಇತ್ತು.

ಮಾಕೊಂಡೆ ಮಾತ್ರವಲ್ಲದೇ ಆಫ್ರಿಕದ ಲುಂಡ, ಲುಂಗ, ಲವೊಲೆ ಮೊದಲಾದ ಸಮುದಾಯಗಳು ಮೂಲತಃ ಪಿತೃ ಆರಾಧಕರು. ಇವರನ್ನು ಬಲಪ್ರಯೋಗದ ಮೂಲಕ ಶಕ್ತ್ಯಾನುಸಾರ ಕ್ರಿಶ್ಚಿಯನ್‍ಗೆ ಮತಾಂತರಿಸುವ ಕೆಲಸ ಮಾಡಲಾಯಿತಾದರೂ ಇಂದಿಗೂ ಮೂಲ ಆಚರಣೆಗಳನ್ನು ಅವರು ಕೈಬಿಟ್ಟಿಲ್ಲ. ಹೀಗಾಗಿ ಇವರ ಜನಸಂಖ್ಯೆ ಮತ್ತು ರಿಲಿಜನ್ನುಗಳನ್ನು ಗುರುತಿಸುವ ಸಂದರ್ಭದಲ್ಲಿ ಇಂದಿನ ವಿದ್ವಾಂಸರು “ಇವರು ಪಿತೃ ಆರಾಧಕರು. ಇವರಲ್ಲಿ ಕೆಲವರು ಇಸ್ಲಾಂ, ಕೆಲವರು ಕ್ರಿಶ್ಚಿಯನ್ ಆಗಿದ್ದಾರೆ. ಇವರ ಖಚಿತ ಸಂಖ್ಯೆಯನ್ನು ಗುರುತಿಸಲಾಗುವುದಿಲ್ಲ” ಎನ್ನುತ್ತಾರೆ!

ನಿಜವಾಗಿ ಒಂದು ಗಾಡ್, ಒಂದು ಡಾಕ್ಟ್ರಿನ್ನು, ಒಂದು ಸ್ಕ್ರಿಪ್ಚರ್ ಹೀಗೆ ಒಂದನ್ನು ಮಾತ್ರ ಕಂಡು ಅನುಭವಿಸಿ ಅರ್ಥವಾದ ವಸಾಹತುಗಳಿಗೆ ಭಾರತ ಅಥವಾ ಆಫ್ರಿಕಗಳ ವೈವಿಧ್ಯ ಇಂದಿಗೂ ಅರ್ಥವಾಗಿಲ್ಲ. ಆದರೆ ತಮ್ಮ ನಂಬಿಕೆಯನ್ನು ಇವರೆಲ್ಲರ ಮೇಲೆ ಬಲವಂತವಾಗಿ ಹೇರುವ ಅವರ ಯತ್ನ ಉಂಟುಮಾಡಿದ ಘಾಸಿ ಅಗಾಧವಾದುದು. ಇದರ ಪರಿಣಾಮವನ್ನು ಭಾರತ ಮತ್ತು ಆಫ್ರಿಕಗಳು ಇಂದಿಗೂ ಅನುಭವಿಸುತ್ತಲೇ ಇವೆ.

ಚಿತ್ರಕೃಪೆ : http://www.ridingthetiger.org

ನಿಮ್ಮ ಅನಿಸಿಕೆ...

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Note: HTML is allowed. Your email address will never be published.

Subscribe to comments