ವಿಷಯದ ವಿವರಗಳಿಗೆ ದಾಟಿರಿ

ಮೇ 25, 2015

ನಾಡು-ನುಡಿ : ಮರುಚಿಂತನೆ – ನೈನಂ ದಹತಿ ಪಾವಕಃ

‍ನಿಲುಮೆ ಮೂಲಕ

– ಪ್ರೊ.ರಾಜಾರಾಮ್ ಹೆಗಡೆ
ಪ್ರಾಧ್ಯಾಪಕರು, ಇತಿಹಾಸ ಮತ್ತು ಪ್ರಾಕ್ತನಶಾಸ್ತ್ರ ವಿಭಾಗ, ಕುವೆಂಪು ವಿ.ವಿ

ಭಗವದ್ಗೀತೆಇತ್ತೀಚೆಗೆ ಕೇಂದ್ರಸಚಿವರೊಬ್ಬರು ಭಗವದ್ಗೀತೆಯನ್ನು ರಾಷ್ಟ್ರೀಯ ಗ್ರಂಥವನ್ನಾಗಿ ಮಾಡಬೇಕು ಎನ್ನುವ ಹೇಳಿಕೆ ನೀಡಿ ಸುದ್ದಿ ಮಾಡಿದ್ದರು. ಭಗವದ್ಗೀತೆಯನ್ನು ಭಾರತೀಯರಿಗೆಲ್ಲರಿಗೂ ಕಡ್ಡಾಯವಾಗಿ ಕಲಿಸಬೇಕು ಎಂಬ ಕೂಗು ಕೂಡ ಒಂದೆಡೆ ಏಳುತ್ತಿದೆ. ಆದರೆ ಇದಕ್ಕೆ ಪ್ರತಿಕ್ರಿಯೆಯಾಗಿ ಮತ್ತೊಂದೆಡೆ ಅದನ್ನು ಸುಟ್ಟುಹಾಕಬೇಕು ಎಂಬ ಹೇಳಿಕೆಗಳು ಕೂಡ ಬರತೊಡಗಿವೆ. ಭಗವದ್ಗೀತೆಯನ್ನು ರಾಷ್ಟ್ರ ಗ್ರಂಥವನ್ನಾಗಿ ಮಾಡಬೇಕೆನ್ನುವ ಅನೇಕರು ಅದನ್ನು ಓದಿ ಅರ್ಥಮಾಡಿಕೊಂಡು ಪ್ರಭಾವಿತರಾಗಿ ಅದೊಂದು ಮಹತ್ವದ ಗ್ರಂಥ ಎಂದು ಮನಗಂಡಿರುವ ಸಂಭಾವ್ಯತೆ ಇಲ್ಲ. ಅದು ಹಿಂದೂಗಳ ಪವಿತ್ರಗ್ರಂಥ, ಅದರಲ್ಲಿ ಏನೋ ಮಹತ್ವದ ಸಂಗತಿ ಇದೆ ಎಂಬುದಷ್ಟೇ ಅವರಿಗೆ ಮುಖ್ಯವಾಗಿದೆ. ಅಂದರೆ ಯಾವುದೋ ಒಂದು ಪುಸ್ತಕವನ್ನು ನಾವು ಓದದಿದ್ದರೂ ಅದರಷ್ಟಕ್ಕೇ ಅದು ಮುಖ್ಯ ಎಂದೇಕೆ ಅವರಿಗೆ ಅನ್ನಿಸುತ್ತದೆ ಎಂಬುದಕ್ಕೆ ಅವರು ಅದನ್ನು ಬೈಬಲ್ಲು, ಖುರಾನುಗಳ ಸಾಲಿನಲ್ಲಿ ಇಟ್ಟು ನೋಡುತ್ತಿದ್ದಾರೆ ಎನ್ನದೇ ಬೇರೆ ಉತ್ತರ ಹೊಳೆಯುವುದಿಲ್ಲ.

ಇದಕ್ಕಿಂತಲೂ ಆಶ್ಚರ್ಯಕರವಾದ ಸಂಗತಿಯೆಂದರೆ ಭಗವದ್ಗೀತೆಯನ್ನು ಸುಡಬೇಕು ಎನ್ನುವ ಹೇಳಿಕೆಗಳು. ಇಂಥ ಹೇಳಿಕೆಗಳನ್ನು ಮಾಡುವವರು ಕೂಡ ಹಿಂದೂಯಿಸಂ ಎಂಬುದಿದೆ, ಭಗವದ್ಗೀತೆಯು ಹಿಂದೂಗಳ ಪವಿತ್ರಗ್ರಂಥ ಎಂಬುದನ್ನು ಒಪ್ಪಿಕೊಳ್ಳುತ್ತಾರೆ. ಹಾಗೂ ಬ್ರಾಹ್ಮಣರು ಅದರ ಪುರೋಹಿತಶಾಹಿ ಎಂಬುದನ್ನು ಭದ್ರವಾಗಿ ನಂಬಿದ್ದಾರೆ. ಹಾಗೂ ಆ ನಿರ್ದಿಷ್ಟ  ಕಾರಣದಿಂದಲೇ ಅದನ್ನು ಸುಡಬೇಕು ಎನ್ನುತ್ತಿದ್ದಾರೆ. ಏಕೆ ಸುಡಬೇಕೆಂದರೆ ಬ್ರಾಹ್ಮಣರು ಭಗವದ್ಗೀತೆಯ ಮೂಲಕ ವರ್ಣ ವ್ಯವಸ್ಥೆಯನ್ನು ಹಾಗೂ ಶೋಷಣೆಯ ಡಾಕ್ಟ್ರಿನ್ನುಗಳನ್ನು ಬೋಧಿಸುತ್ತಿದ್ದಾರೆ. ಅದನ್ನಾಧರಿಸಿಯೇ ಭಾರತೀಯ ಜಾತಿವ್ಯವಸ್ಥೆ, ತರತಮಗಳು, ಶೋಷಣೆಗಳು ಅಸ್ತಿತ್ವದಲ್ಲಿ ಇವೆ, ಹಾಗಾಗಿ ನಮ್ಮ ಸಮಾಜದಲ್ಲಿ ಇದನ್ನೆಲ್ಲ ತೊಡೆಯಬೇಕಾದರೆ ಭಗವದ್ಗೀತೆಯನ್ನು ಸುಡಬೇಕು ಎನ್ನುವುದು ಅವರ ವಾದ. ಇಂಥ ಹೇಳಿಕೆಗಳನ್ನು ಮಾಡುವವರೂ ಭಗವದ್ಗೀತೆಯನ್ನು ಓದಿರುವುದಿಲ್ಲ, ಓದಿದ್ದರೂ ಅರ್ಥಮಾಡಿಕೊಂಡಿಲ್ಲ.

ಇಲ್ಲಿ ನಾವು ಗಮನಿಸಬೇಕಾದ ಎರಡು ಸಂಗತಿಗಳಿವೆ. ಮೊದಲನೆಯದು ಭಗವದ್ಗೀತೆ ಎಂಬ ಗ್ರಂಥಕ್ಕೂ ನಮ್ಮ ಸಮಾಜ ವ್ಯವಸ್ಥೆಗೂ ಸಂಬಂಧವಿದೆ ಎಂಬ ನಂಬಿಕೆ ಹಾಗೂ ಭಗವದ್ಗೀತೆಯನ್ನು ಸುಟ್ಟರೆ ನಮ್ಮ ಸಮಾಜಕ್ಕೆ ಒಳ್ಳೆಯದಾಗುತ್ತದೆ ಎಂಬ ನಂಬಿಕೆ. ಅಂದರೆ ಹಿಂದೂ ಎಂಬ ಮೂಲತಃ ಭ್ರಷ್ಟ ರಿಲಿಜನ್ನಿನ ಆಚರಣೆಗೆ ಈ ಗ್ರಂಥವೇ ನಿರ್ದೇಶನ ನೀಡುತ್ತಿದೆ ಎಂಬ ತರ್ಕವೇ ಮೊದಲನೆಯ ನಿರ್ಣಯಕ್ಕೆ ಎಡೆ ಮಾಡಿಕೊಟ್ಟಿದೆ ಎಂಬುದು ಸ್ಪಷ್ಟ. ಆದರೆ ಎರಡನೆಯ ನಿರ್ಣಯದ ತರ್ಕಬದ್ಧತೆ ಅಷ್ಟು ಸ್ಪಷ್ಟವಿಲ್ಲ. ಭಾರತವು ಮೌಖಿಕ ಪರಂಪರೆಯ ದೇಶ.  ಭಗವದ್ಗೀತೆಯನ್ನು ಕಂಠಗತಮಾಡಿಕೊಂಡವರೂ ಬಹಳ ಜನರಿದ್ದಾರೆ. ಅದಲ್ಲದೇ ಅದು ಬೋಧಿಸಬಹುದಾದ ನಿಯಮಗಳು ಆ ಪುಸ್ತಕದ ಪ್ರತಿಯನ್ನು ಸುಟ್ಟರೆ ಹೇಗೆ ನಾಶವಾಗುತ್ತವೆ?  ಈ ಎಲ್ಲಾ ಕಾರಣಗಳಿಂದಾಗಿ ಭಗವದ್ಗೀತೆಯನ್ನು ಸುಟ್ಟರೆ ಅದು ಹೇಗೆ ನಮ್ಮ ಸಮಾಜಕ್ಕೆ ಒಳ್ಳೆಯದಾಗುತ್ತದೆ? ಭಗವದ್ಗೀತೆಯನ್ನು ಸುಡುವುದೆಂದರೆ ಅದರ ಒಂದಿಲ್ಲೊಂದು ಪ್ರತಿಗಳನ್ನು ಸುಡುವುದು ಅಂತಲೇ ಅರ್ಥ. ಹಾಗೆ ಪ್ರತೀ ಬಾರಿ ಸುಟ್ಟಾಗಲೂ ಅದರ ಒಂದು ಪ್ರತಿ ಕಡಿಮೆಯಾಗುತ್ತದೆ ಅಷ್ಟೆ. ಕೆಲವರು ವಾದಿಸಬಹುದು, ಸುಡುವುದು ಸಾಂಕೇತಿಕ, ಅದರರ್ಥ ಅದನ್ನು ಧಿಕ್ಕರಿಸುವುದು.

ಇವೆಲ್ಲ ನಮಗೆ ಅರ್ಥವಾಗುವ ಬಾಬ್ತುಗಳಲ್ಲ. ಏಕೆಂದರೆ ಭಗವದ್ಗೀತೆಯು ಹಿಂದೂಯಿಸಂನ ಪವಿತ್ರಗ್ರಂಥವಾಗಿರುವುದರಿಂದ  ನಮ್ಮ ಸಮಾಜಕ್ಕೆ ಸಾಮಾಜಿಕ, ನೈತಿಕ ನಿಯಮಗಳನ್ನು ನೀಡುತ್ತದೆ ಎನ್ನುವುದಾಗಲೀ, ಅದನ್ನು ಸುಡುವುದು ಅದನ್ನು ಧಿಕ್ಕರಿಸಿದಂತೆ ಅನ್ನುವುದಾಗಲೀ ನಮ್ಮ ಪರಂಪರೆಗೆ ಸೇರಿದವುಗಳೇ ಅಲ್ಲ. ಇಂಥ ನಿಲುವುಗಳು ಬೈಬಲ್ಲಿಗೆ ಸಂಬಂಧಿಸಿದಂತೆ ಆಗಾಗ ವ್ಯಕ್ತವಾಗಿವೆ. ಬೈಬಲ್ಲು ದೇವವಾಣಿ, ಹಾಗಾಗಿ ಅದು ಸತ್ಯ ಎಂಬುದಾಗಿ ನಂಬುವುದು ಹಾಗೂ ಅದನ್ನು ತಿಳಿಸಿದ ಗಾಡ್‍ನ ಮೇಲೆ ವಿಶ್ವಾಸ ಇಡುವುದು ಕ್ರಿಶ್ಚಿಯನ್ನನಾಗಲಿಕ್ಕೆ ಮೂಲಭೂತವಾದ ಅಗತ್ಯಗಳು. ಈ ನಂಬಿಕೆ ಹಾಗೂ ವಿಶ್ವಾಸಗಳಿಗೆ ಕಾಲದಿಂದ ಕಾಲಕ್ಕೆ ಅದರದೇ ಸವಾಲುಗಳು ಎದ್ದಿವೆ. ಉದಾಹರಣೆಗೆ  ಕ್ಯಾಥೋಲಿಕ್ ಚರ್ಚು ಬೈಬಲ್ಲಿನ ಲ್ಯಾಟಿನ್ ಆವೃತ್ತಿಯನ್ನು ಪ್ರಮಾಣಿತ ಎಂಬುದಾಗಿ ನಂಬಿತ್ತು. ಪ್ರೊಟೆಸ್ಟಾಂಟ್ ಚಳವಳಿಯ ನಂತರ ಅದನ್ನು ದೇಶಭಾಷೆಗಳಲ್ಲಿ ಭಾಷಾಂತರಿಸುವ ಪ್ರಯತ್ನಗಳು ನಡೆದವು. ಇವು ಭಾಷಾಂತರಗಳಷ್ಟೇ ಅಲ್ಲದೆ, ಕ್ಯಾಥೋಲಿಕ್ ಪ್ರತಿಯ ಮರುನಿರೂಪಣೆ ಕೂಡ ಆಗಿತ್ತು. ಆಗ ಕ್ಯಾಥೋಲಿಕ್ ಚರ್ಚುÀ ಅಂಥ ಭಾಷಾಂತರಗಳ ಪ್ರತಿಗಳನ್ನು ಸುಟ್ಟು ಅವನ್ನು ಧಿಕ್ಕರಿಸಿತು. ಹಾಗೇ, ಪ್ರೊಟೆಸ್ಟಾಂಟರೂ ಕೂಡ ಕ್ಯಾಥೋಲಿಕ್ ಬೈಬಲ್ ಆವೃತ್ತಿಗಳನ್ನು ಸುಟ್ಟು ಅದನ್ನು ಧಿಕ್ಕರಿಸಿದರು. ‘ನಾನು ಅದನ್ನು ದೇವವಾಣಿ ಎಂದು ನಂಬುವುದಿಲ್ಲ’ ಎನ್ನುವುದನ್ನು ಸಾರಲಿಕ್ಕೆ ಒಂದು ಪ್ರತಿಯನ್ನು ಸುಟ್ಟರೂ ಸಾಕು.ಯುರೋಪಿನ ಇತಿಹಾಸದಲ್ಲಿ ಗ್ರಂಥಗಳನ್ನು ಸುಡುವುದಕ್ಕೂ ವಿರೋಧೀ ವಿಚಾರಗಳನ್ನು ಧಿಕ್ಕರಿಸುವುದಕ್ಕೂ ನೇರವಾದ ಸಂಬಂಧ ಕಂಡುಬರುತ್ತದೆ.

ಇಂಥ ಪ್ರತಿಗಳನ್ನು ಸುಡುವಾಗ ಕೆಲವೊಮ್ಮೆ ಸಹಸ್ರಾರು ಪ್ರತಿಗಳನ್ನು ಕಲೆಹಾಕಿ ಸುಟ್ಟದ್ದೂ ಇದೆ. ಆದರೂ ಕೂಡ ಅಂತಹ ಪ್ರತಿಗಳನ್ನು ಭೌತಿಕವಾಗಿ ನಾಶಮಾಡುವುದು ಸಾಧ್ಯವಾಗಿರಲಿಕ್ಕಿಲ್ಲ. ಹಾಗಾಗಿ ಕೊನೆಗೂ ಅದು ಧಿಕ್ಕಾರದ ಸಂಕೇತವಷ್ಟೇ ಆಗಬಹುದಿತ್ತು. ಕ್ರಿಶ್ಚಿಯಾನಿಟಿಯು ಕೇವಲ ಬೈಬಲ್ಲಿನ ಆವೃತ್ತಿಗಳನ್ನು ಮಾತ್ರವಲ್ಲ, ಖುರಾನು ಹಾಗೂ ಪೇಗನ್ನರ ಗ್ರಂಥಗಳನ್ನು ಕೂಡ ಇದೇ ಉದ್ದೇಶದಿಂದಲೇ ಸುಟ್ಟ ಉದಾಹರಣೆಗಳೂ ಇವೆ. ಇವೆಲ್ಲ ಬೈಬಲ್ಲಿನ ಸತ್ಯ ನಿರೂಪಣೆಗಳ ಕುರಿತ ಜಗಳಗಳ ಮಾತಾಯಿತು.  ರಿಲಿಜನ್ನನ್ನೇ ಧಿಕ್ಕರಿಸಿ, ತಾವು ಗಾಡ್‍ನನ್ನು ನಂಬುವುದಿಲ್ಲ ಎಂದ ಅಥೇಯಿಸ್ಟರು ಹಾಗೂ ಆಧುನಿಕ ಚಿಂತಕರು ಕೂಡ ಈ ಪರಂಪರೆಯನ್ನು ಮುಂದುವರಿಸಿದರು. ನಾಝಿಗಳು, ಕಮ್ಯುನಿಷ್ಟರು, ಪ್ರಗತಿಪರರು, ಹೀಗೆ ಬೇರೆ ಬೇರೆ ಚಿಂತನಾ ಸಂಪ್ರದಾಯಗಳು ತಮ್ಮ ವಿರೋಧೀ ಚಿಂತನೆಗಳನ್ನು ವ್ಯಕ್ತಪಡಿಸುತ್ತಿದ್ದ ಗ್ರಂಥಗಳನ್ನು ಸುಟ್ಟಿದ್ದಾರೆ. ಹಾಗೂ ವಿಚಾರಗಳನ್ನು ಧಿಕ್ಕರಿಸಲು ಗ್ರಂಥಗಳನ್ನು ಸುಡುವುದು ಆಧುನಿಕರ ಪರಂಪರೆಯಾಗಿ ಬೆಳೆದುಕೊಂಡು ಬಂದಿದೆ. ನಮ್ಮ ಸಂಸ್ಕೃತ ಗ್ರಂಥಗಳ ಒಂದೆರಡು ಪ್ರತಿಗಳು ಈ ನೆಪದಲ್ಲಿಯೂ ಮಾರಾಟವಾದದ್ದಂತೂ ಸತ್ಯ.

ನಮ್ಮ ಸಮಾಜದ ಅನಿಷ್ಟಗಳಿಗೆಲ್ಲ ಭಗವದ್ಗೀತೆಯೇ ಕಾರಣ ಎನ್ನುವ ನಿಲುವೂ, ಅದನ್ನು ರಾಷ್ಟ್ರೀಯ ಗ್ರಂಥವನ್ನಾಗಿ ಘೋಷಿಸುವುದೇ ನಮ್ಮ ಸಮಾಜದ ಉದ್ಧಾರಕ್ಕೆ ಕಾರಣ ಎನ್ನುವ ನಿಲುವೂ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ಇಂಥ ನಿಲುವುಗಳ ಹಿಂದೆ ಈ ಮುಂದಿನ ಎರಡು ಗ್ರಹಿಕೆಗಳಂತೂ ಇವೆ:

1. ಗ್ರಂಥಗಳಲ್ಲಿ ಪ್ರತಿಪಾದಿಸಿದ ವಿಚಾರಗಳ ಸತ್ಯದ ಮೇಲಿನ ನಂಬಿಕೆ ಹಾಗೂ ವಿಶ್ವಾಸಗಳನ್ನು ಆಧರಿಸಿ ವ್ಯವಸ್ಥೆಗಳು ಬೆಳೆದುಕೊಂಡು ಬರುತ್ತವೆ.
2. ಈ ವಿಚಾರಗಳು ಪುಸ್ತಕದ ರೂಪದಲ್ಲಿ ಜನರನ್ನು ಪ್ರಭಾವಿಸುತ್ತಿರುತ್ತವೆ.

ಭಾರತೀಯ ಸಂಸ್ಕೃತಿಯಲ್ಲಿ ಇವೆರಡೂ ಅಪ್ರಸ್ತುತವಾಗುತ್ತವೆ. ಭಾರತೀಯ ಸಂಸ್ಕೃತಿಯು ಯಾವುದೋ ಗ್ರಂಥವನ್ನಾಧರಿಸಿ ಕಟ್ಟಿದ ವ್ಯವಸ್ಥೆಯಲ್ಲ. ಹಾಗಾಗಿ ಪುಸ್ತಕಗಳನ್ನು ಸುಟ್ಟರೆ ಸಿಗುವುದು ಬೂದಿ ಮಾತ್ರ. ಭಗವದ್ಗೀತೆಯು ಈ ಸಂಸ್ಕೃತಿಯಲ್ಲಿ ರೂಪುಗೊಂಡು, ಅದನ್ನು ಪ್ರತಿಬಿಂಬಿಸುವ ಒಂದು ಸಂವಾದ. ಈ ಸಂಸ್ಕೃತಿಯ ಅನೇಕ ಜನರಿಗೆ ಈ ಸಂವಾದವು ಸಹಸ್ರಾರು ವರ್ಷಗಳಿಂದ ಬೋಧಪ್ರದವಾಗಿ ಕಂಡಿದೆ. ಅದು ಕಾನೂನಿನ ಕಟ್ಟಲ್ಲ, ಅಥವಾ ನಿಯಮಾವಳಿಗಳ ನಿರ್ದೇಶನವಲ್ಲ. ಅದಕ್ಕೂ ಸಂವಿಧಾನಕ್ಕೂ ಯಾವ ನೆಲೆಯಲ್ಲಿಯೂ ಹೋಲಿಕೆಯೇ ಇಲ್ಲ. ಇತಿಹಾಸ ಕಾಲದುದ್ದಕ್ಕೂ ಅನೇಕ ಮತಪ್ರವರ್ತಕರು, ಭಕ್ತರು, ಮುಂದಾಳುಗಳು ಭಗವದ್ಗೀತೆಗೆ ತಮ್ಮದೇ ಭಾಷ್ಯವನ್ನು ಬರೆದುಕೊಂಡು ಅದರ ಜೊತೆಗೆ ಏನು ಅನುಸಂಧಾನವನ್ನು ನಡೆಸಿದರು? ಅವರ ಜೀವನಕ್ಕೆ ಅದರಿಂದ ಏನು ಪ್ರೇರಣೆ ದೊರೆಯಿತು? ಇತ್ಯಾದಿ ಪ್ರಶ್ನೆಗಳು ಮುಖ್ಯವಾಗುತ್ತವೆ. ಅವರೆಲ್ಲ ಅದರಿಂದ ಜಾತಿ ತರತಮವನ್ನು ಪ್ರತಿಪಾದಿಸಲು ಕಲಿತರೆ? ಶೋಷಣೆ ಮಾಡುವುದನ್ನು ಕಲಿತರೆ? ಇಲ್ಲ, ಮನುಷ್ಯನ ಹಿತದ ಕುರಿತು ಚಿಂತಿಸಲು ಕಲಿತರೆ?

ಈ ಮೇಲಿನ ಪ್ರಶ್ನೆಗಳಿಗೆ ಉತ್ತರವನ್ನು ಕಂಡುಕೊಳ್ಳಬೇಕಾದರೆ ಭಗವದ್ಗೀತೆಯು ಬೈಬಲ್ಲು, ಖುರಾನು ಅಥವಾ ಸಂವಿಧಾನಗಳ ಸ್ಥಾನಕ್ಕೆ ಪೈಪೋಟಿ ನಡೆಸುತ್ತಿರುವ ಒಂದು ಗ್ರಂಥ ಎಂಬ ಧೋರಣೆಯಿಂದ ಮೊದಲು ಕಳಚಿಕೊಳ್ಳಬೇಕಾಗುತ್ತದೆ.

ನಿಮ್ಮ ಅನಿಸಿಕೆ...

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Note: HTML is allowed. Your email address will never be published.

Subscribe to comments