ವಚನ ಸಾರ (ದಕ್ಕಿದಷ್ಟು) : 1
– ಡಾ.ಸಂತೋಷ್ ಕುಮಾರ್ ಪಿ.ಕೆ
ವ್ಯಾಧನೊಂದು ಮೊಲವ ತಂದರೆ,
ಸಲುವ ಹಾಗಕ್ಕೆ ಬಿಲಿವರಯ್ಯ!
ನೆಲನಾಳ್ವನನ ಹೆಣನೆಂದರೆ, ಒಂದಡಿಕೆಗೆ ಕೊಂಬುವರಿಲ್ಲ ನೋಡಯ್ಯ!
ಮೊಲನಿಂದ ಕರಕಷ್ಟ ನರನ ಬಾಳುವೆ. ಸಲೆ ನಂಬೋ ನಮ್ಮ ಕೂಡಲ ಸಂಗಮದೇವನ
ಈ ವಚನವು ಅತ್ಯಂತ ಚಿಕ್ಕದಾಗಿದ್ದರೂ ಸಹ ಆಳವಾದ ಅರ್ಥವನ್ನು ಒಳಗೊಂಡಿದೆ. ಕಟ್ಟುಬಿಚ್ಚಿದ ನಾಯಿಯು ಎಗ್ಗಿಲ್ಲದೆ ಓಡುವಾಗ ಮಧ್ಯದಲ್ಲಿ ಏನೋ ಆಯಿತೆಂಬಂತೆ ನಿಲ್ಲುವ ರೀತಿಯಲ್ಲಿ ಒಮ್ಮೆ ತನ್ನ ಕುರಿತು ನಿಂತು ಆಲೋಚಿಸುವಂತೆ ಈ ವಚನವು ಮಾಡುತ್ತದೆ.
ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಆಧುನಿಕ ತಂತ್ರಜ್ಞಾನದ ಜೊತೆಗೆ ಮಾನವನ ಬದುಕೂ ಸಹ ಮಿಳಿತಗೊಂಡಿದೆ. ತಂತ್ರಜ್ಞಾನಕ್ಕೆ ವೇಗಕ್ಕೆ ಮನುಷ್ಯನು ಹೊಂದಿಕೊಳ್ಳುವ ಭರದಲ್ಲಿ ತನ್ನನ್ನು ಮತ್ತು ತನ್ನೊಂದಿಗಿರುವ ಸಮಾಜವನ್ನು ಅರಿತುಕೊಳ್ಳುವ ಸಂಮಯ ಇಂದು ಮಾಯವಾಗುತ್ತಿದೆ. ವಿಶ್ವ ಮಟ್ಟದಲ್ಲಿ ಮನುಷ್ಯ ಏನೇನನ್ನೋ ಕಂಡುಹಿಡಿದು, ತಾನೇ ಶ್ರೇಷ್ಠ ಎಂಬ ಹಮ್ಮು ಬಿಮ್ಮುಗಳೊಂದಿಗೆ ಮೆರೆಯುತ್ತಿದ್ದಾನೆ. ಆದರೆ ಅಂತಹ ಪರಿಸ್ಥಿತಿ ತಾತ್ಕಾಲಿಕ ಮಾತ್ರ ಎಂಬುದು ಮಾತ್ರ ಅವನ/ಳ ಸ್ಮತಿಪಟಲದಿಂದ ಹೊರಹೋಗಿರುತ್ತದೆ. ವೇಗವಾಗಿ ಚಲಿಸುತ್ತಿರುವ ಮನುಷ್ಯರೇ ಒಂದು ತಾಸು ನಿಂತು ನಿಮ್ಮ ಬಗ್ಗೆ ಆಲೋಚಿಸಿ ಎಂದು ಹೇಳುವ ಕಾರ್ಯವನ್ನು ಮೇಲಿನ ವಚನವು ಒಂದು ಉಪಮಾನವನ್ನು ಬಳಸಿಕೊಂಡು ಮಾಡುತ್ತದೆ.
ನಾನು ಅಂತವನು, ಇಂತವನು, ಶೂರಾಧಿಶೂರ, ಪರಾಕ್ರಮಿ, ಕೋಪಿಷ್ಟ, ಸಿಡುಕ, ಸೌಮ್ಯ, ಹೀಗೆ ಹತ್ತು ಹಲವು ವಿಶೇಷಣಗಳನ್ನು ಬಳಸಿಕೊಂಡು ನಮ್ಮ ಕುರಿತು ಒಂದು ರೀತಿಯ ಇಮೇಜ್ ನ್ನು ಬೆಳೆಸಿಕೊಂಡಿರುತ್ತೇವೆ. ಕಾಲಾಂತರದಲ್ಲಿ ಆ ಇಮೇಜು ನಮ್ಮಲ್ಲಿ ಅಹಂ ಬೆಳೆಯಲು ದಾರಿಯಾಗುತ್ತದೆ. ತಾನು ಶ್ರೇಷ್ಠ ಎಂಬ ಮೇಲರಿಮೆ ಅಥವಾ ಕನಿಷ್ಠ ಎಂಬ ಕೀಳರಿಮೆ ಬೆಳೆಯಲು ಇಂತಹ ಇಮೇಜುಗಳು ಮೆಟ್ಟಿಲುಗಳಾಗುತ್ತವೆ. ಆ ಇಮೇಜುಗಳೆಂಬ ಕಲ್ಪನಾ ಲೋಕದಲ್ಲೇ ತೇಲುತ್ತಾ ನಮ್ಮ ದೇಹಕ್ಕೆ ಇಲ್ಲಸಲ್ಲದ ಬೆಲೆಯನ್ನು ಕಟ್ಟುತ್ತಾ ಹೋಗುತ್ತೇವೆ. ಆದರೆ, ಹೀಗೆ ಬದುಕಿದ್ದಾಗ ತುಂಬಾ ಮೌಲ್ಯಯುತ ಎಂದು ಇದ್ದ ಭಾವನೆ ಮರಣದಲ್ಲಿ ಮಣ್ಣಾಗಿ ಹೋಗುತ್ತದೆ. ಸತ್ತ ವ್ಯಕ್ತಿ ರಾಜನೇ ಆಗಿದ್ದರೂ ಸಹ ಆತ ಕೇವಲ ಒಂದು ಹೆಣವಷ್ಟೇ. ತಿನ್ನಲು ಯೋಗ್ಯವಾದ ಯಾವುದೇ ಪ್ರಾಣಿ ಸತ್ತರೂ ಸಹ, ಅದನ್ನು ಮಾರುಕಟ್ಟೆಯಲ್ಲಿ ಮಾರಬಹುದಾದ ವ್ಯಾಪಾರಿ ವಸ್ತುವಾಗುತ್ತದೆ. ಆದರೆ ಮನುಷ್ಯನ ದೇಹವೊಂದು ನಿರುಪಯುಕ್ತ ನಿರ್ಜೀವ ವಸ್ತುವಾಗುತ್ತದೆ. (ಇತ್ತೀಚೆಗೆ ನೇತ್ರದಾನ ಇದ್ದರೂ ಸಹ ಅದು ಒಂದು ಅಂಗಕ್ಕೆ ಮಾತ್ರ ಸೀಮಿತ). ಇಂತಹ ನಿರುಪಯುಕ್ತ ದೇಹಕ್ಕೆ ಅತಿಯಾದ ಮಹತ್ವ ನೀಡುವುದು ಸಲ್ಲ ಎಂಬುದು ವಚನದ ಅರ್ಥವಾಗಿದೆ.
ಮಾನವ ದೇಹವು ಮೂಳೆ ಮಾಂಸದ ತಡಿಕೆ..ಎಂಬ ಪುರಂದರದಾಸರ ಕೀರ್ತನೆಯು ಮೇಲಿನ ವಚನಕ್ಕೆ ಹೆಚ್ಚು ಆಪ್ತವಾಗಿ ಅನ್ವಯವಾಗುತ್ತದೆ. ಸಾಮಾನ್ಯವಾಗಿ, ದೇಹವೆಂಬ ಚರ್ಮದ ಹೊದಿಕೆಯೊಳಗಿರುವ ಬಯಕೆಗಳಿಗೆ ಮಾತ್ರ ಹೆಚ್ಚಿನ ಆದ್ಯತೆ ನೀಡುತ್ತೇವೆ. ಅವುಗಳೇ ಅತ್ಯಂತಿಕ ಎಂದು ಭಾವಿಸುತ್ತೇವೆ. ಆಸೆ ಆಮಿಷಗಳಿಗೆ ಮಾರುಹೋಗುವ ಭರದಲ್ಲಿ ಒಂದು ಮೂಲಭೂತ ಅಂಶವನ್ನು ಮರೆಯುತ್ತಿದ್ದೇವೆ. ಅದೆಂದರೆ, ಈ ದೇಹವು ನಶ್ವರ ಎಂದು ಅರಿಯದೆ ಎಲ್ಲಾ ಕೆಲಸ ಕಾರ್ಯಗಳನ್ನು ಮಾಡುತ್ತಿರುತ್ತೇವೆ. ಹಾಗೆಂದು ಮನುಷ್ಯ ದೇಹವು ನಶ್ವರ ಎಂದು ಯಾರಿಗೂ ತಿಳಿದೇ ಇಲ್ಲ ಎಂದು ಅರ್ಥವಲ್ಲ. ಬಹುತೇಕರಿಗೆ ಅದು ಮಾಮೂಲಾಗಿ ತಿಳಿದಿರುವ ಸಂಗತಿ, ಆದರೆ ಅದು ಯಾವುದೋ ಒಂದು ಅಥವಾ ಹಲವಾರು ಸಂದರ್ಭಗಳಲ್ಲಿ ತಲೆಯಲ್ಲಿ ಹಾದುಹೋಗುತ್ತದೆ ಅಷ್ಟೆ. ಇದಕ್ಕೆ ಉತ್ತಮ ಉದಾಹರಣೆಯೆಂದರೆ, ಪರಿಚಿತರು, ನೆಂಟರಿಸ್ಟರು ತೀರಿ ಹೋದಾಗ, ಅವರ ಶವದ ಮುಂದೆ ನಿಂತು ದೊಡ್ಡ ದಾರ್ಶನಿಕರೇ ಆಗಿಬಿಡುತ್ತೇವೆ, ಏನಿದೆ ಈ ಬದುಕಿನಲ್ಲಿ, ಹೋಗುವಾಗ ಏನು ಕೊಂಡೊಯ್ಯುವುದಿಲ್ಲ, ಸುಮ್ಮನೆ ಒದ್ದಾಡುತ್ತೇವೆ, ಇನ್ನೂ ಮುಂತಾಗಿ ಶವದ ಮುಂದೆ ವೈರಾಗ್ಯದ ಮಾತುಗಳನ್ನು ನಿರರ್ಗಳವಾಗಿ ಆಡುತ್ತೇವೆ. ಆದರೆ ಆ ಸನ್ನಿವೇಶವು ತಿಳಿಯಾದ ನಂತರ ಯಥಾಸ್ಥಿತಿಯ ಜೀವನದ ಜಂಜಾಟದಲ್ಲಿ ಮುಳುಗಿಹೋಗುತ್ತೇವೆ. ಶವದ ಮುಂದರೆ ಉದುರಿಸಿದ ಆಣಿಮುತ್ತುಗಳು ಮತ್ತೊಂದು ಮರಣದವರೆಗೂ ಚಿಪ್ಪಿನಲ್ಲಿ ಭದ್ರವಾಗಿರುತ್ತದೆಯೇ ಹೊರತು ಅದು ನಮ್ಮ ಬದುಕಿನ ದೈನಂದಿನ ಚಟುವಟಿಕೆಗೆ ಯಾವುದೇ ಪ್ರಭಾವ ಬೀರುವುದಿಲ್ಲ.
ಮೇಲಿನ ವಚನವು ಅಂತಹ ವಿಷಯವನ್ನು ತೀಕ್ಷ್ಣವಾಗಿ ಮನಮುಟ್ಟುವಂತೆ ಆಡುಮಾತಿನಲ್ಲಿ ಹೇಳುವ ಪ್ರಯತ್ನವನ್ನು ಮಾಡುತ್ತದೆ.
ಭಾರತೀಯ ತತ್ವಶಾಸ್ತ್ರದ ಮೂಲವೇ ಲೌಕಿಕವಾದ ಸಂಸಾರದಲ್ಲಿದ್ದು ಪಾರಮಾರ್ಥಿಕ ಜೀವನ ನಡೆಸುವುದು.ಲೌಕಿಕ ಬೇಕಾದಲ್ಲಿ ಲೌಕಿಕ ಪಾರಮಾರ್ಥಿಕ ಬೇಕಾದಲ್ಲಿ ಪಾರಮಾರ್ಥಿಕ ಎರಡೂ ಬೇಕು.ದೇಹ, ದೇಹದ ವ್ಯಾಪಾರ ನಶ್ವರ ಎಂದು ಗೊತ್ತು.ಆದರೂ ಅಳುತ್ತ ಕೂಡುವುದು ಸಲ್ಲ. ಎಲ್ಲಾ ಲೌಕಿಕ ವ್ಯಾಪಾರದ ಹಿಂದೆ ಪಾರಲೌಕಿಕದ ಬೆನ್ನೆಲುಬು ಕೇಳುತ್ತದೆ ನಮ್ಮದು. ಪಶ್ಚಿಮದ ಹಾಗೆ ಪಾರಲೌಕಿಕ ಚರ್ಚಲ್ಲಿ. ಲೌಕಿಕಕ್ಕೂ ಪಾರಲೌಕಿಕಕ್ಕಕು ಸಂಬಂಧವಿಲ್ಲ ಎನ್ನುವುದಿಲ್ಲ ನಾವು.ಇದೇ ನಮ್ಮ ಹಿರಿಮೆ.