ಮೂಲೆ ಸೇರಲು ಮುಂದಾಗಿರುವ ಕರ್ನಾಟಕದ ಮತ್ತೊಂದು ವರದಿ
– ಕೆ.ಎಂ.ವಿಶ್ವನಾಥ ಮರತೂರ
ಜೈ ಭಾರತ ಜನನಿಯ ತನುಜಾತೆ, ಜಯ ಹೇ ಕರ್ನಾಟಕ ಮಾತೆ, ಎಂದು ಕವಿ ಕುವೆಂಪು ಹಾಡಿದ್ದಾರೆ. ಸಮೃದ್ಧಭರಿತವಾದ ಕರ್ನಾಟಕವು ಅನೇಕ ಅನೇಕ ವರದಿಗಳನ್ನು ಬಿತ್ತರಿಸಿದೆ ಅವುಗಳಲ್ಲಿ ಕೆಲವು ಪಟ್ಟಿ ಮಾಡುವುದಾದರೆ ನಂಜುಂಡಪ್ಪ ವರದಿ, ಸರೋಜಿನಿ ಮಹಿಶಿ ವರದಿ, ಗೋಕಾಕ್ ವರದಿ ಇತ್ಯಾದಿಗಳಲ್ಲಿ ಕೆಲವು ಅನುಷ್ಠಾನವಾದರೆ ಇನ್ನು ಕೆಲವು ಹೋರಾಟ ಚೀರಾಟದ ಹಾದಿಯಲ್ಲಿಯೇ ಆಮೆಗತಿಯಲ್ಲಿಯೇ ಮೂಲೆ ಸೇರಿವೆ. ಈ ಸಂಧರ್ಭದಲ್ಲಿಯೇ ರಾಷ್ಟ್ರೀಯ ಯೋಜನಾ ಇಲಾಖೆಯ ಮಹತ್ವ ಯೋಜನೆಯಾದ ಮಾನವ ಅಭಿವೃದ್ಧಿ ಸೂಚ್ಯಂಕ ವರದಿಯೂ ಇದೀಗ ಕರ್ನಾಟಕ ರಾಜ್ಯದ ಎಲ್ಲಾ ಜಿಲ್ಲೆಗಳು ಬಹುತೇಕ ಮುಗಿಸಿದ್ದು ಇನ್ನೇನು ರಾಜ್ಯ ಮಾನವ ಅಭಿವೃದ್ಧಿ ವರದಿಯು ಮುಗಿಯುವ ಹಂತ ತಲುಪಿದೆ.
ಜಿಲ್ಲಾ ಮಾನವ ಅಭಿವೃದ್ಧಿ ವರದಿಯು (ಡಿಹೆಚ್ಡಿಆರ್) ಕೇವಲ ತಾಲ್ಲೂಕು ಮಟ್ಟದ ಮಾನವ ಅಭಿವೃದ್ಧಿ ಸ್ಥಿತಿಗತಿಗಳನ್ನು ನಿರ್ಣಯಿಸುವ ಪ್ರಯತ್ನವಷ್ಟೇ ಅಲ್ಲದೆ, ನಗರ ಸ್ಥಳೀಯ ಸಂಸ್ಥೆಗಳ ಮಟ್ಟದಲ್ಲಿಯೂ ನಗರಾಭಿವೃದ್ಧಿಯನ್ನು ಅಂದಾಜಿಸಲು ಪ್ರಯತ್ನಿಸಿದೆ. ಇದನ್ನು 126 ಸೂಚಕಗಳನ್ನು ಆಧರಿಸಿದ 7 ಅಭಿವೃದ್ಧಿ ಸೂಚ್ಯಂಕಗಳನ್ನು ಲೆಕ್ಕ ಹಾಕುವುದರ ಮೂಲಕ ಪಡೆಯಲಾಗುತ್ತದೆ. ಈ ಸೂಚಕಗಳು ಮುಖ್ಯವಾಗಿ ಶೇಕಡವಾರು, ಅನುಪಾತ ಹಾಗೂ ಏಕ ವ್ಯಕ್ತಿ ಮೌಲ್ಯಗಳಿಂದ ಕೂಡಿರುತ್ತದೆ.
ಪ್ರತಿಯೊಂದು ಜಿಲೆಯು ತಮ್ಮ ಜಿಲ್ಲಾವಾರು ರಚಿಸಲಾಗುವ 7 ಸೂಚಿಗಳೆಂದರೆ, ಮಾನವ ಅಬಿವೃದ್ಧಿ ಸೂಚ್ಯಂಕ, ಲಿಂಗ ಸಂಬಂಧಿ ಅಸಮಾನತೆ ಸೂಚ್ಯಂಕ, ಮಕ್ಕಳ ಅಭಿವೃದ್ಧಿ ಸೂಚ್ಯಂಕ, ಆಹಾರ ಭದ್ರತೆ ಸೂಚ್ಯಂಕ, ಸಮಗ್ರ ತಾಲ್ಲೂಕು ಅಭಿವೃದ್ಧಿ ಸೂಚ್ಯಂಕ, ಸಮಗ್ರ ದಲಿತ ಅಭಿವೃದ್ಧಿ ಸೂಚ್ಯಂಕ, ನಗರಾಭಿವೃದ್ಧಿ ಸೂಚ್ಯಂಕ, ಜಿಲ್ಲಾ ಹಂತದಲ್ಲಿ ವರದಿ ತಯಾರಿಸಿದ ನಂತರ ರಾಜ್ಯ ಹಂತದ ವರದಿ ಕಾರ್ಯ ಮಾಡುತ್ತಾರೆ ಒಟ್ಟಾರೆಯಾಗಿ ರಾಜ್ಯದ ಮಾನವ ಅಭಿವೃದ್ಧಿಯು ಯಾವ ಹಂತದಲ್ಲಿದೆ ಎಂಬ ಸತ್ಯ ಅರೆಯಲು ಯುಎನ್ಡಿಪಿ ಮಾಡಿರುವ ಕಾರ್ಯವು ಶ್ಲಾಘನೀಯವಾದದ್ದು.
ಈ ಎಲ್ಲಾ ಸೂಚ್ಯಂಕಗಳ ರಚನೆ, ನಾಲ್ಕೈದು ವಿವಿಧ ಹಂತಗಳಲ್ಲಿ ಮಾಡಿದ ವ್ಯವಸ್ಥಿತ ಲೆಕ್ಕಗಳನ್ನು ಆಧರಿಸಿದೆ. ಮೊದಲ ಹಂತದಲ್ಲಿ, 126 ಸೂಚಕಗಳನ್ನು ಹೊಂದುವುದಕ್ಕೋಸ್ಕರ ಸಂಪೂರ್ಣ ದತ್ತಾಂಶ ಮೌಲ್ಯಗಳನ್ನು ಸಂಗ್ರಹಿಸುವುದು ಹಾಗೂ ಮೌಲ್ಯೀಕರಿಸುವ ಪ್ರಕ್ರಿಯೆಗಳು ಒಳಗೊಂಡಿದ್ದವು. ಎರಡನೆಯ ಹಂತದಲ್ಲಿ, ಸಂಪೂರ್ಣ ದತ್ತಾಂಶಗಳನ್ನು ಬಳಸಿ ಸೂಚಕಗಳ ಮೌಲ್ಯಗಳನ್ನು ನಿರ್ಧರಿಸಲಾಯಿತು. ಮೂರನೆಯ ಹಂತದಲ್ಲಿ, ನಿರ್ಧಿಷ್ಟ ಸೂತ್ರಗಳನ್ನು ಬಳಸಿ ಪ್ರತಿ ಸೂಚಿಗೆ ಸೂಚ್ಯಂಕದ ಮೌಲ್ಯಗಳನ್ನು ಒದಗಿಸಲಾಯಿತು. ಇದಕ್ಕೆ ಬಳಸಿದ ಸೂತ್ರಗಳೂ ಸಹ, ಈ ಸೂಚಕಗಳು ಮಾನವ ಅಭಿವೃದಿಗೆ ಧನಾತ್ಮಕ ಅಥವಾ ಋಣಾತ್ಮಕ ಪರಿಣಾಮ ಬೀರುತ್ತದೆ ಎಂಬುದನ್ನು ಸೂಚಿಸುತ್ತದೆ.
ಈ ರಚನೆಗಳು ಗರಿಷ್ಠ ಹಾಗೂ ಕನಿಷ್ಠ ಸೂಚಕ ಮೌಲ್ಯಗಳನ್ನು ಆಧರಿಸಿವೆ. ನಾಲ್ಕನೆಯ ಹಂತದಲ್ಲಿ, ಹೆಚ್ಡಿಐ, ಜಿಐಐ ಹಾಗೂ ಎಫ್ಎಸ್ಐ ಸೂಚ್ಯಂಕಗಳ ರಚನೆಯಲ್ಲಿ, ಆಯಾಮಗಳ ಸೂಚ್ಯಂಕ ಮೌಲ್ಯಗಳನ್ನು ಲೆಕ್ಕ ಹಾಕಲಾಯಿತು. ಅಂತಿಮ ಲೆಕ್ಕಾಚಾರಗಳ ಪ್ರಕ್ರಿಯೆಯು ನಿರೀಕ್ಷಿತ ಅಂತಿಮ ಸೂಚ್ಯಂಕಗಳ ಮೌಲ್ಯಗಳನ್ನು ನಿರ್ಧರಿಸುವಲ್ಲಿ ನೆರವಾಗುತ್ತವೆ. ಈ ಲೆಕ್ಕಾಚಾರಗಳನ್ನು ಮುಖ್ಯವಾಗಿ ರೇಖಾಗಣಿತದ ಸರಾಸರಿ ಅಥವಾ ಹಿಂದಿನ ಸೂಚ್ಯಂಕ ಮೌಲ್ಯಗಳು ಆಯಾಮದ ಸೂಚ್ಯಂಕ ಮೌಲ್ಯಗಳನ್ನು ಆಧರಿಸಿ ಮಾಡುತ್ತಾರೆ.
ಈ ವರದಿಯು ತನ್ನ ಮೌಲ್ಯ ಕಳೆದುಕೊಂಡು ಮೂಲೆ ಸೇರುವುದೆ ಎಂಬ ಭಯ ಕಾಡತೊಡಗಿದೆ. ಎಲ್ಲವು ರಾಜಕೀಯದಾಟ ಪ್ರಾರಂಭವಾದ ರಾಜ್ಯ ಸರಕಾರ ಇದನ್ನು ದುರುಪಯೋಗ ಪಡಿಸಿಕೊಂಡರೆ ಜನತೆಗೆ ಮೋಸ ಮಾಡಿದಂತೆ ಈ ವರದಿಯು ಹಳ್ಳಿಮಟ್ಟದಿಂದ ಕೆಲಸ ಮಾಡಲು ಸೂಚಿಸುತ್ತದೆ. ಹಳ್ಳಿಗಳಲ್ಲಿರುವ ಪ್ರತಿ ಮನೆಯ ಅಭಿವೃದ್ಧಿಯನ್ನು ಆಪೇಕ್ಷಿಸುತ್ತದೆ. ಪ್ರತಿ ವ್ಯಕ್ತಿಯ ಅಭಿವೃದ್ಧಿ ಆಪೇಕ್ಷಿಸುತ್ತದೆ. ಈ ವರದಿಯನ್ನು ಆಧಾರವಾಗಿಟ್ಟುಕೊಂಡು ಪ್ರತಿ ಜಿಲ್ಲೆಯ ಆಡಳಿತ ಅಧಿಕಾರಿಗಳು ಕೆಲಸಕ್ಕಿಳಿಯಬೇಕಾದ ಅತೀ ಅವಶ್ಯಕತೆಯಿದೆ. ಈ ವರದಿಯು ಕೂಡ ಹಳೆಯ ಅದೆಷ್ಟೊ ವರದಿಗಳು ಎಂಬ ಮಾತು ಮನಸ್ಸಿನಲ್ಲಿ ಮಾಡಿದರೆ ನಿಜಕ್ಕೂ ಆಪತ್ತು ತಪ್ಪಿದ್ದಲ್ಲ.
ಈಗಾಗಲೇ ಈ ವರದಿಯು 2011 ರ ಜನಗಣತಿಯನ್ನು ತನ್ನ ಆಧಾರವಾಗಿ ಬಳಸಿಕೊಂಡಿದ್ದು ಅಲ್ಲಿಂದ ಇಲ್ಲಿಯವರೆಗೂ ಸಾಕಷ್ಟು ರೀತಿಯಲ್ಲಿ ಬದಲಾವಣೆಗಳು ಆಗಿವೆ ಇದೀಗ ಆದಷ್ಟು ಬೇಗ ಈ ವರದಿಯನ್ನು ಆಧರಿಸಿ ಯೋಜನೆಗಳನ್ನು ರೂಪಿಸಿ ಉತ್ತಮವಾದ ಮಾನವ ಅಭಿವೃದ್ಧಿಪಡಿಸಲು ಜಿಲ್ಲಾಡಳಿತಗಳು ರಾಜ್ಯ ಸರಕಾರ ನಿಗಾವಹಿಸಬೇಕು ಇಲ್ಲವಾದಲ್ಲಿ ಈ ವರದಿಯು ಕೂಡ ಮೂಲೆ ಸೇರಿ ರಾಜಕೀಯ ಲಾಭ ಪಡೆಯುವ ಸಾಧ್ಯಗಳು ಹೆಚ್ಚು ಇಲ್ಲವೆ ನಮ್ಮ ಅಧಿಕಾರದ ಅವಧಿಯಲ್ಲಿ ಇಂತಹದೊಂದು ವರದಿಯನ್ನು ಹೊರ ತಂದೇವು ಎನ್ನುವ ಇತಿಹಾಸ ಮಾತ್ರ ಸರಕಾರದ್ದಾಗುತ್ತದೆ ಇದರಿಂದ ಯಾವುದೇ ಲಾಭವಾಗುವುದಿಲ್ಲ.
ಈ ವರದಿಯ ಸೂಕ್ತವಾದ ಲಾಭ ಪಡೆಯಲು ಜಿಲ್ಲಾ ಮಟ್ಟದ ಅಧಿಕಾರಿಗಳು ಜನಪ್ರತಿನಿಧಿಗಳು ವೈಯಕ್ತಿಕ ಫಲಾಪೇಕ್ಷವಿಲ್ಲದೆ ದುಡಿಯಬೇಕಾದ ಅಗತ್ಯವಿದೆ. ಪ್ರತಿ ಸೂಚ್ಯಂಕದ ಬಗ್ಗೆ ವಿಚಾರಿಸಿ ಅದನ್ನು ಬಲಪಡಿಸಲು ಇರುವ ಯೋಜನೆಗಳನ್ನು ಬಲಪಡಿಸುವ ನಿಟ್ಟಿನಲ್ಲಿ ಅಗತ್ಯಕ್ರಮ ತೆಗೆದುಕೊಳ್ಳಬೇಕು. ಎಲ್ಲಾ ಹಂತದಲ್ಲಿಯೂ ಪ್ರಮಾಣಿಕ ಕೆಲಸಗಳಾದರೆ ಮಾತ್ರ ಈ ವರದಿಗೆ ಮೌಲ್ಯ ಸಿಗುತ್ತದೆ. ಇನ್ನಾದರು ಜಿಲ್ಲಾಡಳಿತದ ಅಧಿಕಾರಿಗಳು ಜನಪ್ರತಿನನಿಧಿಗಳ ಕೈಗೊಂಬೆಯಾಗದೆ ಜನಪ್ರತಿನಿಧಿಗಳು ಬೊಗಳೆ ಮಾತುಗಳನ್ನು ಬಿಟ್ಟು ಹಳ್ಳಿಮಟ್ಟದಿಂದ ಕೆಲಸ ಮಾಡಲಿ ಎನ್ನವುದೇ ಆಶಯ.
ಚಿತ್ರಕೃಪೆ : ವಿಜಯವಾಣಿ